Sunday, 14 March 2021

raghavendra swamy raghavendra teertha vardhanti jayanit ರಾಘವೇಂದ್ರತೀರ್ಥ ವರ್ಧಂತೀ

 


*****

"ವರ್ಧಂತೀ  - 2 "

" ದಿನಾಂಕ : 15.03.2021ಸೋಮವಾರದಿಂದ 20.03.2021 ಶನಿವಾರದ ವರೆಗೂ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ ಮತ್ತು ವರ್ಧಂತಿ ಉತ್ಸವ "

" ಶ್ರೀ ಸತ್ಯಲೋಕವಾಸಿಗಳಾದ ಶ್ರೀ ಶಂಖುಕರ್ಣರೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು "

ಶಂಖುಕರ್ಣಾಖ್ಯ ದೇವಸ್ತು 

ಬ್ರಹ್ಮ ಶಾಪಾಶ್ಚ ಭೋತಲೇ ।

ಪ್ರಹ್ಲಾದ ಇತಿ ವಿಖ್ಯಾತೋ 

ಭೂಭಾರ ಕ್ಷಪಣೇ ರತಃ ।।

ಸ ಏವ ರಾಘವೇಂದ್ರಾಖ್ಯ 

ಯತಿ ರೂಪೇಣ ಸರ್ವದಾ ।

ಕಲೌಯುಗೇ ರಾಮಸೇವಾಂ 

ಕುರ್ವನ್ ಮಂತ್ರಾಲಯೇ ಭವೇತ್ ।।

ಮೇಲ್ಕಂಡ "  ನರಸಿಂಹ ಪುರಾಣ " ದ ವಚನದಂತೆ.... 

 ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ವಿಜಯರಾಯರು - " ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕ - ವ್ಯಾಸರಾಜ - ರಾಘವೇಂದ್ರರು " - ಶ್ರೀ ಶಂಖುಕರ್ಣರ ಅವತಾರೆಯೆಂದು...  

ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಕುರಿತು...... 

ವ್ಯಾಸರಾಯರ ಸೇವೆ ।

ಲೇಸಾಗಿ ಮಾಡಲು ।

ದಾಸನೆನಿಸಿಕೊಂಬ ।। ಪಲ್ಲವಿ ।।

ಸಾಸಿರಾ ನಾಮದ ।

ವಾಸುದೇವನ ಭಕ್ತ ।

ಕಾಷಾಯ ವಸ್ತ್ರ ಧಾರಾ ।। ಅ ಪ ।।

ಯೆಂಬ ಕೃತಿಯಲ್ಲಿ..... 

ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರರ ಮೂಲ ರೂಪ ಯಾವುದು? ಯೆನ್ನುವುದಕ್ಕೆ ..... 

ಆ ಶಂಖುಕರ್ಣನೇ ಶೇಷಾವೇಷದಲ್ಲಿ ।

ಈಶನ ಸ್ತಂಭದಿ ತೋರಿಸಿದಾತನು ।

ತಾ ಸುಮ್ಮನದಿ ನಾರಸಿಂಹನ ಪೂಜೆಗೆ ।।

ತಾಸು ಬಿಡದೆ ಅರ್ಚಿಸಿದಾತನು ।

ಈ ಸುಮಹಿಮಗೆ -

ವ್ಯಾಸ ನಾಮಕರನು ।

ಅಸುಮನೋಯತಿ -

ಆಶೀರ್ವಾದವು ಮಾಡೇ ।। 

ಮುಂದುವರೆದು.... 

ಅಸುರ ನಂದನನಾಗಿ -

ನರಹರಿಯನೆ ಕಂಡ ।

ಮಸ್ಕರಿ ವರ ಸಿರಿ -

ಗುರು ರಾಘವೇಂದ್ರ ।।

" ಹರಿಕಥಾಮೃತಸಾರದ - ಬೃಹತ್ತಾರತಮ್ಯಸಂಧಿ " ಯಲ್ಲಿ....

ತರಣಿಗಿಂತಲಿ ಪಾದ ಪಾದರೆ ।

ವರುಣ ನೀಚನು -

ಮಹಾಭಿಷಕು । ದು ।

ರ್ದರ ಸುಶೇಷಣನು ಶಾಂತನೂ -

ನಾಲ್ವರು ವರುಣ ರೂಪ ।।

ಸುರಮುನಿ ನಾರದನು -

ಕಿಂಚಿತ್ ಕೊರತೆ ।

ವರುಣಗೆ ಅಗ್ನಿ -

ಭೃಗು ಅಜ ।

ಗೊರಳ ಪತ್ನಿ ಪ್ರಸೂತಿ 

ಮೂವರು ನಾರದನಿಗೆ 

ಅಧಮರು ।। 20 ।।

ನೀಲ ದೃಷ್ಟದ್ಯುಮ್ನ ಲವ ಈ ।

ಲೇಲಿಹಾಸನ ರೂಪಗಳು ಭೃಗು ।

ಕಾಲಿಲಿ ಒದ್ದಿದ್ದರಿಂದ ಹರಿಯ -

ವ್ಯಾಧನು ಎನಿಸಿದನು ।।

ಏಳು ಋಷಿಗಳಿಗೆ -

ಉತ್ತಮರು ಮುನಿ ।

ಮೌಳಿ ನಾರದಾಗೆ -

ಅಧಮ ಮೂವರು ।

ಘಾಳಿಯುತ ಪ್ರಹ್ಲಾದ -

ಬಾಹ್ಲೀಕರಾಯನು -

ಎನಿಸಿದನು ।। 21 ।।

ಜನಪ ಕರ್ಮಜರೊಳಗೆ ನಾರದ ।

ಮುನಿ ಅನುಗ್ರಹ ಬಲದಿ ಪ್ರಹ್ಲಾದ ।

ಅನಲ ಭೃಗು ದಾಕ್ಷಾಯಣಿಯರಿಗೆ -

ಸಮನು ಎನಿಸಿಕೊಂಬ ।।

ಮನು ವಿವಸ್ವಾನ್ ಗಾಧಿಜ ಈರ್ವರು ।

ಅನಳಗಿಂತ ಅಧಮರು ಮೂವರು ।

ಎಣೆ ಎನಿಸುವರು ಸಪ್ತ -

ಋಷಿಗಳಿಗೆ ಎಲ್ಲ ಕಾಲದಲಿ ।। 22 ।।

ನೀಲ, ದುಷ್ಟದ್ಯುಮ್ನ ಮತ್ತು ಲವ - ಈ ಮೂವರು ಶ್ರೀ ಅಗ್ನಿದೇವರ ರೂಪಗಳು.ಭೃಗು ಮಹರ್ಷಿ ಶ್ರೀ ಹರಿಯನ್ನು ಕಾಲಿಂದ ಒದ್ದದ್ದರಿಂದ ಬೇಡನಾಗಿ ಜನಿಸಿದರು.

ಅಗ್ನಿ, ಭೃಗು ಮತ್ತು ಪ್ರಸೂತಿ - ಈ ಮೂವರು ಸಪ್ತ ಋಷಿಗಳಿಗಿಂತ ಉತ್ತಮರು. 

ನಾರದಮುನಿಗಿಂತ ಕಡಿಮೆ.

ಶ್ರೀ ಶಂಖುಕರ್ಣರು 14ನೇ ಕಕ್ಷೆಗೆ ಸೇರಿದ ಶ್ರೀ ನಾರದ ಮಹರ್ಷಿಗಳ ಶಿಷ್ಯರಾದ್ದರಿಂದ 15ನೇ ಕಕ್ಷೆಯಲ್ಲಿ ಬರುವ ಅಷ್ಟ ವಸುಗಳಲ್ಲಿ....

ಶ್ರೀ ಅಗ್ನಿದೇವರು  - ಶ್ರೀ ದಕ್ಷ ಪ್ರಜಾಪತಿ ಹೆಂಡತಿಯಾದ ಪ್ರಸೂತಿ -  ಶ್ರೀ ಭೃಗು ಮಹರ್ಷಿಗಳು -  ಈ ಮೂರು ಮಂದಿಯೂ ಸಮಾನರು.

ಶ್ರೀ ನಾರದರಿಗಿಂತ ಸ್ವಲ್ಪ ಅಧಮರೂ ಮತ್ತು ಶ್ರೀ ವರುಣದೇವರಿಗಿಂತ 1/4 ಗುಣ ಅಧಮರು. 

ಅನಂತರ ಕರ್ಮಜ ದೇವತೆಗಳ ಮಧ್ಯದಲ್ಲಿ ಪರಿಣಿತರಾದ ಶ್ರೀ ಪ್ರಹ್ಲಾದರಾಜರು ಶ್ರೀ ಭೃಗು ಮಹರ್ಷಿಗಳಿಗಿಂತ ಸ್ವಲ್ಪ ಅಧಮರು.

" ಶ್ರೀ ಮಹಾಲಕ್ಷ್ಮೀದೇವಿಯರ ಸೃಷ್ಟಿ - ಶ್ರೀ ಶಂಖುಕರ್ಣರು "

ನಿತ್ಯ ವಿಯೋಗಿನೀ - ಅಪ್ರಾಕೃತಳೂ - ಶ್ರೀಮನ್ನಾರಾಯಣನ ಸೇವೆಯಲ್ಲಿ ನಿರುತಳೂ ಆಗಿದ್ದ ಶ್ರೀ ಮಹಾಲಕ್ಷ್ಮೀದೇವಿಯರ ಸಂಕಲ್ಪದಂತೆ...

ಶಂಖುವಿನಂತೆ ನಿರ್ಮಲನಾಗಿದ್ದ ಮುಗ್ಧ ಬಾಲಕನೊಬ್ಬನು ಅವಳ ಕಿವಿನಿಯಿಂದ ಹುಟ್ಟಿದನು. 

ಶ್ರೀ ಮಹಾಲಕ್ಷ್ಮೀದೇವಿಯರ ಆಜ್ಞೆಯಂತೆ ಶ್ರೀ ಪರಮಾತ್ಮನ ಸೇವೆಗೆ ಹೂಗಳನ್ನು ತಂದೊಪ್ಪಿಸುವ ಕಾರ್ಯವನ್ನು ಈ ಬಾಲಕನು ಭಕ್ತಿ ಶ್ರದ್ಧೆಗಳಿಂದ ಮಾಡುತ್ತಾ ಶ್ರೀ ಹರಿಯ ಪರಮಾನುಗ್ರಹಕ್ಕೆ ಪಾತ್ರನಾಗಿದ್ದನು.

ಮುಂದೆ ಶ್ರೀ ಲಕ್ಷ್ಮೀ ನಾರಾಯಣರ ಆಜ್ಞೆಯಂತೆ ಶ್ರೀ ಶಂಖುಕರ್ಣರು ಸತ್ಯಲೋಕಾಧಿಪತಿಗಳಾದ ಶ್ರೀ ಚತುರ್ಮುಖ ಬ್ರಹ್ಮದೇವರ ಸನ್ನಿಧಾನಕ್ಕೆ ಬಂದು ತಮ್ಮ ಸೇವಾ ಕೈಂಕರ್ಯವನ್ನು ಮುಂದುವರೆಸಿದರು.

" ಶ್ರೀ ಕೃಷ್ಣ ವಿಠ್ಠಲರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ರಾಘವೇಂದ್ರತೀರ್ಥ ಸ್ತುತಿ "

ಹೆಸರು : 

ಶ್ರೀ ಭೀಮರಾಯರು., ಹೊಳೇ ನರಸೀಪುರ

ಕಾಲ : 

ಕ್ರಿ ಶ 1902 - 1963

ಉಪದೇಶ ಗುರುಗಳು : 

ಶ್ರೀ ಉರಗಾದ್ರಿವಾಸ ವಿಠ್ಠಲರು

ಅಂಕಿತ : 

ಶ್ರೀ ಕೃಷ್ಣ ವಿಠ್ಠಲ

ಕೃತಿ :

ಶ್ರೀ ಕೃಷ್ಣ ವಿಠ್ಠಲರು....... 

" ಭಾಷ್ಯಾನುಸಾರಿ ದಶೋಪನಿಷತ್ತುಗಳನ್ನು ಭಾಮಿನೀ ಷಟ್ಪದಿಯಲ್ಲಿ  ಪ್ರಮೇಯಭರಿತವಾದ " ಕೃತಿಗಳನ್ನು-  ಎಲ್ಲರಿಗೂ ಅರ್ಥವಾಗುವ ಶೈಲಿಯಲ್ಲಿ ಸರಳ ಸುಂದರವಾಗಿ ಅಚ್ಛ ಕನ್ನಡದಲ್ಲಿ ರಚಿಸುವುದರ ಜೊತೆಯಲ್ಲಿ ಅನೇಕ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ!!

ರಾಗ : ಶಂಕರಾಭರಣ  ತಾಳ : ಆದಿ

ಯಾವ ಗುರುಗಳಿಗುಂಟು -

ಈ ವೈಭವವು ।

ಪವನನೊಡೆಯನ ಭಕ್ತ ರಾ-

ಘವೇಂದ್ರರಿಗಲ್ಲದಲೆ ।। ಪಲ್ಲವಿ ।।

ವರ ತುಂಗಾ ತೀರದಲಿ ।

ಮೆರೆವ ಮಂತ್ರಾಲಯದಿ ।

ತರಣಿಯಂದದಿ ಮೆರೆದು । ಭ ।

ಕ್ತರನು ಪೋಷಿಸುವ ।

ಶರಣ ರಕ್ಷಕನೆಂಬ ।

ಬಿರುದಿಂದ ತಾ ಮೆರೆವ ।

ವರ ಮಧ್ವ ಕುಲಚಂದ್ರ ।

ಗುರುರಾಜಗಲ್ಲದೆ ।। ಚರಣ ।।

ಸಂತರೆಲ್ಲರೂ ಬಂದು ।

ಶಾಂತಿಯಿಂದಲಿ ನಿಂದು ।

ಕಂತುಪಿತನ ಭಕ್ತ । 

ಚಿಂತೆಯನ್ನು ಹರಿಸೆಂದು ।

ಸಂತತವು ಬೇಡುತಿಹ ।

ಶಾಂತರಾಗಿಹ ಜನರ ।

ಸಂತೋಷದಲಿ ಕಾಯ್ವ -

ಗುರುರಾಜಗಲ್ಲದೆ ।। ಚರಣ ।।

ಕಾವಿ ವಸ್ತ್ರವನು ಧರಿಸಿ ।

ಕವಿದ ಭ್ರಮೆಯನು ಬಿಡಿಸಿ ।

ಭುವಿಜ ರಮಣನ ಭಜಿಪ ।

ಕವಿ ಕುಲೋತ್ತಮ ನಮ್ಮ ।

ಸೇವಕರ ಸುರಧೇನು ।

ಪಾವನಾತ್ಮನು ಆದ ।

ಕೃಷ್ಣ ವಿಠ್ಠಲನ ಭಕ್ತ -

ಗುರುರಾಜಗಲ್ಲದೆ ।। ಚರಣ ।।

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

***


ಶ್ರೀಂ ಶ್ರೀ ಕಂ ಕಪಿಲಾಯ ನಮಃ


     ಫಾಲ್ಗುಣ ಶುದ್ಧ ದ್ವಿತೀಯಾ


ಶ್ರೀಮನ್ಮಂತ್ರಾಲಯ ಪ್ರಭುಗಳು ವೇದಾಂತಸಾಮ್ರಾಜ್ಯದ ಪೀಠವನ್ನು ಅಧಿರೋಹಿಸಿದ ಪರಮ ಪವಿತ್ರವಾದ ಪರ್ವಕಾಲ


ವರಹಜ ತೀರದಲಿದ್ದ ಸುಪ್ರಸಿದ್ಧ

ಮರುತಮತಾಂಬುಧಿಸೋಮ ನಿಸ್ಸೀಮ

ಸರಸಿಜಪತಿ ನಮ್ಮ ವಿಜಯವಿಠಲ ನಂಘ್ರಿ

ಸ್ಮರಿಸುವ ಸುಧೀಂದ್ರಸುತ ರಾಘವೇಂದ್ರ

ಶ್ರೀ ವಿಜಯಪ್ರಭುಗಳು.


ಮಂದಜನರನು ಪೊರೆಯಲ್ಲಿನ್ನು

ಒಂದು ರೂಪದಿ ಬಂದು ಹರಿಯು ತಾನಿಲ್ಲಿ ನಿಂದು

ಒಂದುರೂಪದಿ ಸುಂದರಾಂಗ ಗೋಪಾಲವಿಠ್ಠಲ

ತಂದು ಫಲವನೀವುತಿಪ್ಪ


ಶ್ರೀ ಗೋಪಾಲದಾಸಾರ್ಯರು.


ಗುರುಸುಧೀಂದ್ರರ ಕರಸರಸೀರುಹಜಾತ ಕೇವಲಪ್ರಖ್ಯಾತ

ಧರೆಯೊಳು ಜಯಮುನಿವೊರೆದ ಶಾಸ್ತ್ರವ ಮಥಿಸಿ ಗ್ರಂಥವ ರಚಿಸಿ

ಪರಮಶಿಷ್ಯರಿಗುಪದೇಶವನು ಮಾಡಿ ಸಂಶಯ ಈಡ್ಯಾಡಿ

ನರಹರಿಸರ್ವೋತ್ತಮನೆಂದು ಮೆರೆವ ಭಕುತರ ಪೊರೆವ

ಶ್ರೀ ಗುರುಗೋಪಾಲವಿಠಲರು


ಏನು ಕರುಣೀಯೋ ಏನು ದಾತನೊ|ಏನು‌ ಮಹಿಮೆಯೊ ಏನಯ ಶಕುತಿಯೊ|ಏನು ಇವರಲಿ ಹರಿಯ ಕರುಣವೊ ಏನು ತಪೋಬಲವೋ|ಏನು ಕೀರ್ತಿಯೊ ಜಗದಿ ಮೆರೆವದು|ಏನು‌ ಪುಣ್ಯದ ಫಲವೋ ಇವರನ|ಏನು ವರ್ಣಿಪೆ ಇವರ ಚರಿಯಾವ ಬಲ್ಲವನು| 


ವಿಧಿಯು ಬರದಿಹ ಲಿಪಿಯ ಕಾರ್ಯವ| ಬದಲಿಮಾಡುವ ಶಕುತಿ‌ ನಿನಗೇ|ಪದುಮನಾಭನು ದಯದಿ ತಾನೇಯಿತ್ತ ಕಾರಣದಿ|ಸದಯ ನಿನ್ನಯ ಪಾದಪದುಮವ|ಹೃದಯ ಮಧ್ಯದಿ ಭಜಿಪ ಶಕುತಿಯ|ಒದಗಿಸೂವದುಯೆಂದು ನಿನ್ನನು ನಮಿಸಿ ಬೇಡುವೆನು


( ಶ್ರೀಗುರುಜಗನ್ನಾಥ ದಾಸರು)


ಶ್ರೀಮದಾಚಾರ್ಯರಿಂದ ಪರಂಪರಾಗತವಾಗಿ ಶ್ರೀಸುಧೀಂದ್ರತೀರ್ಥರವರೆಗೆ   ಬಂದ ಜ್ಞಾನಗಂಗೆಯ ಹರಿವನ್ನು ಪಡೆಯಲು ಗುರುಗಳ ಬಳಿ ಬಂದಿದ್ದ ಶ್ರೀ ವೀಣಾ ವೆಂಕಟನಾಥರು ಹೇಳಿದ ಮೊದಲ ಮಾತು ನಾನು ಮಠಕ್ಕೆ ಬರುವುದು ಕೇವಲ‌ ಪಾಠಕ್ಕಾಗಿ, ಊಟಕ್ಕಾಗಿ ಅಲ್ಲ ಎನ್ನುವ ಪ್ರಾರ್ಥನೆ. 

ಹಾಗೆಯೇ ಇದ್ದರೂ‌ ಕೂಡ.  ಈಗಾಗಲೇ ತಮಗಿರುವ ವೇದದ ಸಿದ್ಧಿಯನ್ನು ಜಗತ್ತಿಗೆ ತೋರಿಸಿ, ಆ ಸಿದ್ಧಿಯ ಪ್ರಸಿದ್ಧಿಯ ಹಿಂದೆ ಹೋಗದೇ ಜ್ಞಾ‌ನಕ್ಕಾಗಿ ಬಂದಿದ್ದರು. ಇವರ ವಂಶದವರು ಶ್ರೀಮಠಕ್ಕೆ ಸಲ್ಲಿಸಿದ  ಅನೇಕ ಸೇವೆಗಳು ಈಗಾಗಲೇ ಶ್ರೀಸುಧೀಂದ್ರ ತೀರ್ಥರಿಗೆ ತಿಳಿದೇ ಇದ್ದು, ವೆಂಕಟನಾಥನಲ್ಲಿರುವ ಶ್ರದ್ಧೆ, ಭಕ್ತಿ, ವಿನಯಾದಿ ಗುಣಗಳಿಗೆ ಮಾರು ಹೋಗಿ, ಶ್ರೀಮಠದಲ್ಲೇ ಇರಿಸಿಕೊಳ್ಳುವ ಆಸೆ ಇದ್ದರೂ, ಹಾಗೆ ಹೇಳಿದರೆ ಎಲ್ಲಿ ಇವರು ಮಠ ಬಿಟ್ಟು ಹೋಗುತ್ತಾರೋ ಎಂದು ಆ ಯಾವ ಒತ್ತಾಯಗಳನ್ನೂ ಮಾಡುತ್ತಿರಲಿಲ್ಲ.ಪ್ರೀತಿಯಿಂದ ವೇದಾಂತ  ಪಾಠಗಳನ್ನು ಹೇಳುತ್ತಿದ್ದರು. 

ಜೊತೆಗೆ ತಮ್ಮ ಉಪಾಸ್ಯ ಮೂರ್ತಿಗಳಾದ ಶ್ರೀಮನ್ಮೂಲ- ದಿಗ್ವಿಜಯ-ಜಯರಾಮದೇವರಲ್ಲಿ, ಶ್ರೀಮದಾಚಾರ್ಯರಲ್ಲಿ, ಶ್ರೀಮಟ್ಟೀಕಾಕೃತ್ಪಾದರಲ್ಲಿ,ಯೋಗಿಗಳಾದ ಶ್ರೀವಿಬುಧೇಂದ್ರತೀರ್ಥಾದಿ ಅನೇಕ ಗುರುಗಳಲ್ಲಿ ತಮಗೆ ಯೋಗ್ಯ ಶಿಷ್ಯರನ್ನು ಕರುಣಿಸಲು ನಿರಂತರ ಪ್ರಾರ್ಥಿಸುತ್ತಿದ್ದರು. ಒಮ್ಮೆ ಅವರಿಗೆ ತಮ್ಮ ಮುಂದಿನ ಯೋಗ್ಯ ಶಿಷ್ಯರೆಂದರೆ ತಮ್ಮಲ್ಲೇ ಓದುತ್ತಿರುವ ವೆಂಕಟನಾಥರು,ಅವರಿಗೆ ಸನ್ಯಾಸ ಆಶ್ರಮ ಪಟ್ಟಾಭಿಷೇಕ ಮಾಡಬೇಕೆಂದು ಸೂಚನೆ ಆಯಿತು.ಎಲ್ಲಾ ರೀತಿಯಲ್ಲೂ ಯೋಗ್ಯನಾದ ಶಿಷ್ಯರ‌ನ್ನು ಸೂಚಿಸಿದ್ದಕ್ಕೆ ಹರಿವಾಯುಗುರುಗಳಲ್ಲಿ ಭಕ್ತಿಯಿಂದ ನಮಿಸುತ್ತಾ, ಸರಿಯಾದ ಸೂಕ್ತ ಕಾಲವನ್ನು‌ ನೋಡಿ ಶ್ರೀ ವೆಂಕಟನಾಥರನ್ನು ಕರೆದು ವಿಷಯ ಪ್ರಸ್ತಾಪಿಸಿದರು. ವಿಷಯ ಕೇಳಿದೊಡನೆಯೇ ಹಾವು ಮೆಟ್ಟಿದಂತೆ ಹೌಹಾರಿದ ಶ್ರೀ ವೆಂಕಟನಾಥರು, ಗುರುಗಳೇ!, ಎಲ್ಲಿ ಶ್ರೀಮದಾಚಾರ್ಯರ ಪರಂಪರೆ ಎಲ್ಲಿ ನಾನು, ಯಾವ ರೀತಿಯ ಯೋಗ್ಯತೆಯೂ ನನ್ನಲಿಲ್ಲ.ಯಾವುದೇ ಕಾರಣಕ್ಕೂ ನಾನು ಶ್ರೀ ಆಚಾರ್ಯರಿಂದ ಮೊದಲುಗೊಂಡು ಅನೇಕ‌ ಮಹನೀಯರಿಂದ ನಿಮ್ಮವರೆಗೂ ಕೂತ ಪೀಠದಲ್ಲಿ ಕೂಡುವ ಯೋಚನೆ ಕನಸಿನಲ್ಲಿಯೂ ಸಹ ಮಾಡುವವನಲ್ಲ. ದಯವಿಟ್ಟು ಈ ವಿಷಯ ಮತ್ತೊಮ್ಮೆ ಪ್ರಸ್ತಾಪಿಸಬೇಡಿ ಎಂದು ವಿನಯ ಭಕ್ತಿಪೂರ್ವಕ ಪ್ರಾರ್ಥಿಸಿದರು. ಎಲ್ಲಾ ರೀತಿಯ ಯೋಗ್ಯತೆ ಇದ್ದು,ಹರಿವಾಯುಗಳು ಸೂಚಿಸಿದರೂ ಅಂತಹ ದಿವ್ಯಭವ್ಯವಾದ ಪರಂಪರೆಗೆ ತಾನು ಯೋಗ್ಯ‌ನಲ್ಲ ಎನ್ನುವ ವಿನಯಾದಿ ಸದ್ಗುಣಗಳ ಕುರಿತು ಶ್ರೀಸುಧೀಂದ್ರತೀರ್ಥರಿಗೆ ಮತ್ತಷ್ಟೂ ಪ್ರೀತಿ ಅಭಿಮಾನಗಳು ಹೆಚ್ಚಾದವು. ಜಾಸ್ತಿ ಒತ್ತಾಯ ಮಾಡಿದರೆ ಎಲ್ಲಿ ಈ ಶಿಷ್ಯನನ್ನೂ‌ ಕಳೆದುಕೊಳ್ಳುತ್ತೀನೋ ಎಂದು ಯೋಚಿಸಿ ಎಲ್ಲವನ್ನೂ ಹರಿವಾಯುಗುರುಗಳಿಗೆ ಒಪ್ಪಿಸಿ ತಾವು ಎಂದಿನಂತೆ ಪಾಠ ಹೇಳುತ್ತಿದ್ದರು.  


       ಒಂದು  ದಿನ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಶ್ರೀ ವೆಂಕಟನಾಥರಿಗೆ  ಸಾಕ್ಷಾತ್  ವಿದ್ಯಾದೇವತೆಯಾದ ಶ್ರೀಸರಸ್ವತಿದೇವಿಯರೇ ಸ್ವಪ್ನದಲ್ಲಿ‌ ಬಂದು  ವೆಂಕಟನಾಥಾ! ಎಂದು ಕರೆದಾಗ,  ಕೈ ಮುಗಿದು, ಯಾರಮ್ಮಾ ನೀವು, ದೇವಿಯಂತಿರುವಿರಿ ಎಂದಾಗ, ಹೌದು, ನಾನು ಸರಸ್ವತೀದೇವಿ ಎಂದು ತಿಳಿಸಿ, ನಿಮ್ಮ ಗುರುಗಳು ಪ್ರಸ್ತಾಪಿಸಿದ ವಿಷಯವನ್ನು ಮನ್ನಿಸಿ ತಾವು ಪೀಠದಲ್ಲಿ ಬರಬೇಕು, ಇದು ಅವರದ್ದೊಂದೇ ಅಲ್ಲ,ನನ್ನ ನನ್ನ ಯಜಮಾನರ ಮತ್ತು ನಮ್ಮೆಲ್ಲರ ಸ್ವಾಮಿಯಾದ ಭಗವಂತನ ಇಚ್ಛೆಯೂ ಇದೆ.ನನ್ನ ಯಜಮಾನರ ಪೀಠವಾದ ಶ್ರೀಮದಾಚಾರ್ಯರ ಈ  ಪೀಠದ ಮೇಲೆ ನಿನ್ನನ್ನು ಬಿಟ್ಟು ಬೇರೆಯವರನ್ನು ಊಹಿಸಿಕೊಳ್ಳಲೂ ಅಶಕ್ಯ, ನಿಮ್ಮಿಂದ ಲೋಕಕ್ಕೆ ಅನೇಕ ರೀತಿಯಿಂದ ಜ್ಞಾನ ಕಾರ್ಯಗಳು ಆಗಬೇಕಾಗಿವೆ. ನಮ್ಮ ಮತವನ್ನು ಉನ್ನತ ಮಟ್ಟಕ್ಕೆ ಉದ್ಧರಿಸುವ ಯೋಗ್ಯತೆಯು ನಿಮಗೊಬ್ಬರಿಗೇ ಮಾತ್ರ ಇರುವುದು, ಜೊತೆಗೆ ಅಸಂಖ್ಯಾತ ಭಕ್ತರನ್ನು ಉದ್ಧರಿಸುವುದುೂ ನಿಮ್ಮ ಹೊಣೆಯಾಗಿದೆ. ಹೀಗಾಗಿ ನೀವು ಈ‌ ಪೀಠಕ್ಕೆ ಬರಲೇಬೇಕು ಎಂದಾಗ, ಏನು ಮಾತಾಡಲೂ ತೋಚದೇ, ಆದರೆ ತಮ್ಮಿಂದ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸುವುದಿದೆ ಎಂದು ತಿಳಿದು, ತಾಯೀ! ಅಲ್ಪ ಯೋಗ್ಯತೆಯವನು‌ ನಾನು,ನಿನ್ನ ಆಜ್ಞೆಯಂತೆಯೇ ಪೀಠದಲ್ಲಿ ಕೂಡುತ್ತೇನೆ, ಆದರೆ ಸದಾಕಾಲ ನಿನ್ನ ಅನುಗ್ರಹ ನನಗೆ ಇರಲಿ ಮತ್ತು  ನನ್ನಲ್ಲಿ ಇದ್ದು ನೀನು ಜ್ಞಾನಾದಿ ಸಕಲ ಕಾರ್ಯಗಳೂ ಮಾಡಿಸಬೇಕು ಎಂದು‌ ಪ್ರಾರ್ಥಿಸಿದಾಗ, ಕಂದಾ! ,ಸಾಕ್ಷಾತ್ ನಮ್ಮ ಸ್ವಾಮಿಯಾದ  ಪರಮಾತ್ಮನ, ಹಾಗೂ ಮುಖ್ಯಪ್ರಾಣದೇವರ ಅನುಗ್ರಹ ಸದಾ ನಿನ್ನ ಮೇಲಿದೆ. ಅವರಿದ್ದಲ್ಲಿ ನಾನು ಇರುವುದು ಸಹಜವೇ.  ಜೊತೆಗೆ ನಿನ್ನ ನಾಲಿಗೆಯಲ್ಲಿ ಸದಾ ನಾನಿದ್ದು ನೀನು‌ ನುಡಿದದ್ದೆಲ್ಲಾ ವೇದವಾಗುವಂತೆ ಮಾಡುತ್ತೇನೆ, ಸತ್ಯವನ್ನಾಗಿಸುತ್ತೇನೆ ಎಂದು ಅನುಗ್ರಹಿಸಿದರು.ತಾವು ಹುಟ್ಟಿಬಂದ ಕಾರಣ, ಮಾಡಬೇಕಾದ ಕಾರ್ಯಗಳು, ತಮ್ಮ ಸ್ವರೂಪ ತಿಳಿದು ಸನ್ಯಾಸಕ್ಕೆ ಮುಂದಾಗಿ ಎಂದು ಹೇಳಿ ಸರಸ್ವತೀದೇವಿಯರು ಅಂತರ್ಹಿತರಾದರು.


ನಂತರ ಶ್ರೀ ವೆಂಕಟನಾಥರು ಹೋಗಿ ತಮಗಾದ ಈ ಸ್ವಪ್ನ ಸೂಚನೆಯನ್ನು ಗುರುಗಳಾದ ಶ್ರೀಸುಧೀಂದ್ರ ತೀರ್ಥರಲ್ಲಿ ಹೇಳಿ, ನಾವು ಆಶ್ರಮಕ್ಕೆ ಒಪ್ಪಿದ್ದೇವೇ ಎಂದು ಹೇಳಿದಾಗ ಗುರುಗಳಿಗೆಷ್ಟು ಆನಂದವಾಗಿರಲಿಕ್ಕಿಲ್ಲ !!


      ತಮ್ಮ ಅಣ್ಣ ಅತ್ತಿಗೆ ಅಕ್ಕ ಭಾವ ಮತ್ತು ಬಂಧುಗಳಿಂದ ಒಡಗೂಡಿ ಮಗನ ಉಪನಯನ ನೆರವೇರಿಸಿ, ಒಮ್ಮೆ ಏಕಾಂತದಲ್ಲಿ ಹೆಂಡತಿಗೆ ತಮ್ಮ ಸನ್ಯಾಸಾಶ್ರಮದ ವಿಷಯ ತಿಳಿಸಿದಾಗ, ಆಕೆಗೆ ವಜ್ರಾಘಾತವಾದಂತಾಗಿ, ಪಾದಗಳನ್ನು ಹಿಡಿದು ತಮ್ಮನ್ನು ಅನಾಥಳನ್ನಾಗಿ ಮಾಡಬಾರದೆಂದು ಅತ್ತಾಗ, ಸಮಾಧಾನ ಪಡಿಸಿ, ಎಲ್ಲಾ ವಿಷಯಗಳನ್ನೂ ವಿವಿರಿಸಿ, ಸಾಂತ್ವನಗೊಳಿಸಿ ಸನ್ಯಾಸಕ್ಕೆ ಒಪ್ಪಿಗೆ ಪಡೆದು ಅಣ್ಣ ಅತ್ತಿಗೆ ಅಕ್ಕ ಭಾವ ಇವರಿಗೆ ವಿಷಹ ತಿಳಿಸಿ ಅವರಿಗೆ ನಮಸ್ಕರಿಸಿ ತಮ್ಮ‌ ಪತ್ನೀ  ಮತ್ತು ಮಗನ ಜವಾಬ್ದಾರಿ ಅಣ್ಣ ಅತ್ತಿಗೆಗೆ ಒಪ್ಪಿಸಿ ಶ್ರೀಸುಧೀಂದ್ರ ತೀರ್ಥರೊಂದಿಗೆ  ತಂಜಾವೂರಿಗೆ ದಯಮಾಡಿಸಿದರು. 


ಶ್ರೀಸುಧೀಂದ್ರ ತೀರ್ಥರು ಸನ್ಯಾಸಾಶ್ರಮ ಕೊಡುವ ವಿಚಾರ ಎಲ್ಲೆಡೆಯೂ ಹಬ್ಬಿ ಸಹಸ್ರಾರು ಭಕ್ತರು ತಂಜಾವೂರಿಗೆ ಬಂದು ಸೇರಿದರು. ಆ ಊರಿ‌ನ ರಾಜ ಈ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕಕ್ಕೆ ಸಮಸ್ತ ವ್ಯವಸ್ಥೆಗಳನ್ನು ಮಾಡಿಸಿದ್ದ. 

ಸನ್ಯಾಸ ಪೂರ್ವದ ಎಲ್ಲಾ ಸಂಸ್ಕಾರಗಳನ್ನೂ, ದಾನಾದಿಗಳನ್ನೂ‌ ವಿಧಿವತ್ತಾಗಿ  ಮುಗಿಸಿದ ನಂತರ, 

ಶ್ರೀಶಾಲೀವಾಹನ ಶಕ 1543ನೇ ದುರ್ಮತಿ ಸಂವತ್ಸರದ ಫಾಲ್ಗುಣ ಶುಕ್ಲ ದ್ವಿತೀಯಾ ( ಶಕ- 1621)ದ ಶುಭದಿನದಂದು ಶ್ರೀವೆಂಕಟನಾಥರು ಸನ್ಯಾಸ ಸ್ವೀಕರಿಸಿ ಅರಮನೆಗೆ ವೇದೋಕ್ತ ಮಂತ್ರಗಳಿಂದ ಆಗಮಿಸಿ ,ಶ್ರೀಸುಧೀಂದ್ರ ತೀರ್ಥರಿಗೆ ಪಾದಪೂಜೆ ಮಾಡಿ‌ ನಮಸ್ಕರಿಸಿದರು. ಶಿಷ್ಯರಿಗೆ ಮುಧ್ರಾಧಾರಣೆ , ಗುರೂಪದೇಶ,ಪ್ರಣವ ಮೊದಲಾದ ಅನೇಕ ಮಂತ್ರೋಪದೇಶ, ಅರವತ್ನಾಲ್ಕು ವಿದ್ಯೆಗಳ ಉಪದೇಶಗಳನ್ನು ನೀಡಿ ರಾಜದರ್ಬಾರಿಗೆ ಕರೆತಂದು ಕೂಡಿಸಿ, ತಲೆಯ ಮೇಲೆ ವೇದವ್ಯಾಸದೇವರ ಮತ್ತು ಸಾಲಿಗ್ರಾಮಗಳಿಟ್ಟು ಶ್ರೀಮದಾಚಾರ್ಯರಿಂದ ಪ್ರಾರಂಭಿಸಿ  ತಮ್ಮವರೆಗೂ ಇರುವ ಪೀಠದಲ್ಲಿ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ ನೆರವೇರಿಸಿ ಶಿಷ್ಯರಿಗೆ ಶ್ರೀರಾಘವೇಂದ್ರ ತೀರ್ಥರು ಎಂದು ನಾಮಕರಣ ಮಾಡಿ, 

ನಮ್ಮ ಶಿಷ್ಯರು ಕುಬೇರನಂತೆ ಸಂಪದ್ಭರಿತರಾಗಿ, ಶ್ರೀರಾಮಚಂದ್ರದೇವರಂತೆ ಮಂಗಳಕರರಾಗಿ,ಶ್ರೀರಾಮಭದ್ರನ ಕಾರುಣ್ಯದಂತೆ ಜಗತ್ತಿನ ಹಿತದಲ್ಲಿ ಆಸಕ್ತರಾಗಿ,ಶ್ರೀಸುರೇಂದ್ರತೀರ್ಥರಂತೆ ಮಹಾತಪಸ್ವಿಗಳಾಗಿ, ನಮ್ಮ ಗುರುಗಳಾದ ಶ್ರೀವಿಜಯೀಂದ್ರ ತೀರ್ಥರಂತೆ ಅಸದೃಶ ಕೀರ್ತಿಸಂಪನ್ನರಾಗಿ,  ಲೋಕವಿಖ್ಯಾತ ವಾದವಿದ್ಯಾವಿಶಾರರಾದ ನಮ್ಮಂತೆ ವಾದಮಲ್ಲರಾಗಿ ಸಕಲ ಸಜ್ಜನರ ಕಷ್ಟ, ದುಃಖ‌ಪರಿಹಾರ ಪೂರ್ವಕ ಸುಖಸಂತೋಷ ಇಷ್ಟಾರ್ಥಗಳನ್ನು ನೀಡುವರು ಎಂಬರ್ಥದ ಶ್ರೀರಾಘವೇಂದ್ರತೀರ್ಥರೆಂಬ ಅನ್ವರ್ಥಕ‌ನಾಮದಿಂದ ಅಭಿವೃದ್ಧಿಸಲಿ ಎಂದು ಆಶೀರ್ವದಿಸಿದರು. 

ಮುಂದೆ ಈ ಹೆಸರ ಕುರಿತು

ರಾಘವೇಂದ್ರನಾಮಕನಾಗಿ ಇಪ್ಪ ಇವರಲಿ ಗೋಪಾಲವಿಠಲ ಎಂದು 

ರಾ ಎನ್ನೆ ರಾಶಿ ದೋಷಗಳೆಲ್ಲಾ ದಹಿಸುವ

ಘ ಎನ್ನೆ ಘನಜ್ಞಾನ ಭಕುತಿಯೀವ

ವೇಂ ಎನ್ನೆ ವೇಗಾದಿ ಜನನಮರಣ ದೂರ

ದ್ರ ಎನ್ನೇ ದ್ರವಿಣಾರ್ಥ ಶೃತಿಪಾದ್ಯನ ಕಾಂಬ ಎಂದು 

ಶ್ರೀಗೋಪಾಲದಾಸರು ತಮ್ಮ‌ಕೃತಿಗಳಲ್ಲಿ ತಿಳಿಸಿದ್ದಾರೆ. ಇಂತಹ ಶ್ರೀರಾಘವೇಂದ್ರ ತೀರ್ಥರ ಮಹಿಮೆಗಳನ್ನು ಅಪರೋಕ್ಷ ಜ್ಞಾನಿಗಳಿಂದ ಪ್ರಾರಂಭಿಸಿ ಇಂದಿನವರೆಗೂ ಇರುವ ಭಕ್ತರು ಕೊಂಡಾಡುತ್ತಲೇ ಇದ್ದಾರೆ. 

ಶ್ರೀರಾಯರ ಪಟ್ಟಾಭಿಷೇಕದ ದಿನದ ಈ ಪರ್ವಕಾಲದಲ್ಲಿ ರಾಯರು ನಮ್ಮೆಲ್ಲರಿಗೂ ಜ್ಞಾನ ಭಕ್ತಿ‌ವೈರಾಗ್ಯಗಳ‌ನ್ನು ಅನುಗ್ರಹಿಸಲೆಂದು ಜೀವದ ಭಕ್ತಿಯಿಂದ ಪ್ರಾರ್ಥಿಸೋಣ. 


ಹಾಗೆಯೇ 


ಹರಿಕಥಾಮೃತ ಸಾರಜ್ಞಂ

ಹರಿಪಾದ ಸೇವಾಸಕ್ತಮ್/

ಹರಿದಾಸ ಜನಪ್ರಿಯಮ್

ಹರಿನರಾಖ್ಯ ಗುರುಮ್ ಭಜೇ//


ಕೋವಿದವರ ನೀಕಾವಲಿ ಇರಲು ಕುಜೀವಿಗಳಿಂದಲಿ ಹಾವಳಿಯಾಗದು

ನೀಮರೆದರೆ ಸುಕ್ಷೇಮವಾಗದು ಶ್ಯಾಮಸುಂದರನ ಪ್ರೇಮದ ಪೋತ


ಎಷ್ಟು ಹೇಳಲಿ ಇವರ ನಿತ್ಯ ಕೃಷ್ಣತಟದಲಿ ನಿಂದು 

ಉತ್ಕೃಷ್ಟ ಭಕುತಿಲಿ ದೃಷ್ಟಿ ನಾಸಿಕಾಗ್ರದಲ್ಲಿ

ಇಟ್ಟ ಬಿಂಬಮೂರ್ತಿಯಮನ 

ಮುಟ್ಟಿಪಾಡಿ ನೋಡಿ ಶುಭವ ದಟ್ಟುಳಿಗಳ ಅಟ್ಟಿದವರು 


ಶ್ರೀ ಶ್ಯಾಮಸುಂದರದಾಸಾರ್ಯರು.


ಕೃಷ್ಣತಟದಿ ನಿಂತ ವೈಷ್ಣವಾಗ್ರಗಣ್ಯನೆ

ಕೃಷ್ಣಾಭಿನವ ಪ್ರಾಣೇಶವಿಠಲನ ದೂತ


ಶ್ರೀ ಅಭಿನವ ಪ್ರಾಣೇಶದಾಸಾರ್ಯರು.

 

ಹರಿಪದದಲಿ ಮನವಿರಿಸಿ ದುರ್ವಿಷಯ ಧಿಕ್ಕರಿಸಿ ಧಿಕ್ಕರಿಸಿ 

ಪಿತ್ರಾಜ್ಞವನ್ನುಸರಿಸಿ ಧರಣಿಯೊಳು 

ಗುರುಕರುಣದಿಂದಲಿ ಮರುತಶಾಸ್ತ್ರವನಂತು 

ಕರುಣದಿ ಸರಸದಲಿ ಸಚ್ಛಾಸ್ತ್ರ ಮರ್ಮವನರುಹಿ 

ಜನರನುದ್ಧರಿಸಿದವರನು

ಶ್ರೀ ಕೊಪ್ರಗಿರಿಯಾಚಾರ್ಯರು


ಮನವನಿಲ್ಲಿಸಿ ನಡೆದ ಕರ್ಮಫಲವೆಲ್ಲವ

ಆನಶನಗರ್ಪಿಸುವ ಬಟ್ಟಿಯನೆದೋರಿ

ಸೂನಯದಿ ಶಾಸ್ತ್ರಾರ್ಥ ಜ್ಞಾನವನುಗ್ರಹಿಸಿ

ಮನುಜನ ಮಾಡಿದ ನರಹರಿದಾಸನೋ


-ಶ್ರೀ ನರಹರಿದಾಸರು


ಒಂದೂರು ನರಸಿಂಹಾಚಾರ್ಯರಂಘ್ರಿಗಳನು

ಒಂದೇ ಮನದಿ ಭಜಿಸೋ


ತಾಮಸಗುಣಗಳ ನೇಮದಿಕಳೆಯುತ

ಕಾಮಿತ ಫಲಗಳ ನಿತ್ತು

ಆಮಹಾಮಹಿಮನ ಧಾಮದಪರಿಚಯ

ಪಾಮರ ನರರಿಗೆ ಇತ್ತು

ಶ್ರೀ ಗುಡೆಬಲ್ಲೂರು ರಾಘವೇಂದ್ರಾಚಾರ್ಯ ಜೋಷಿಯವರು(ಶ್ರೀಶವೇಂಕಟ ಅಂಕಿತಸ್ಥರು)

ಹೀಗೆ ದಾಸಶ್ರೇಷ್ಠರಿಂದ ಗೇಗೀಯಮಾನರಾದವರು, ೧೯ನೆಯ ಶತಮಾನದಲ್ಲಿ ಹುಟ್ಟಿಬಂದ ಪರಮ ವೈರಾಗ್ಯಶಾಲಿಗಳು, ಸದಾ ಹರಿನಾಮಾಮೃತವನ್ನು ಪಾನಮಾಡುವವರು, ಶ್ರೀಮದ್ಹರಿಕಥಾಮೃತಸಾರವನ್ನು ರಕ್ತಗತವಾಗಿಸಿಕೊಂಡವರು, ಶ್ರೀಮದ್ಭಾಗವತ ಪ್ರವಚನಾ ಸರಳಿಯಲ್ಲಿ ದಿಟ್ಟರು, ಸ್ವತಃ ರಚನೆಗಳನ್ನು ಮಾಡದಿದ್ದರೂ ದಾಸ ಸಾಹಿತ್ಯದ ಸೇವೆಯನ್ನು ಜೀವದ ಭಕ್ತಿಯಿಂದ ಮಾಡಿದವರು, ಪ್ರತಿನಿತ್ಯ ಸತ್ಯನಾರಾಯಣಕಥೆಯನ್ನು ಹೇಳುತ್ತಿದ್ದವರು, ಶ್ರೀಮದ್ಭಾಗವತ ಪ್ರವಚನದಲ್ಲಿ ಶಾಸ್ತ್ರ ಪ್ರಮೇಯಗಳಿಗೆ ಎಷ್ಟು ಮಹತ್ವವನ್ನು ನೀಡುತ್ತಿದ್ದರೋ ಅದರಂತೆಯೇ ಅಪರೋಕ್ಷಜ್ಞಾನಿಗಳಾದ ದಾಸರ ಪದಗಳನ್ನೂ ಉದಾಹರಣೆಯಾಗಿ ತೋರಿಸಿ ತತ್ವಗಳನ್ನು ಅರ್ಥಮಾಡಿಸುವುದರಲ್ಲಿ ದಿಟ್ಟರಾಗಿದ್ದಂತಹ ಜ್ಞಾನಿಮೂರ್ಧನ್ಯರಾದ ಶ್ರೀ ಐಕೂರು ನರಸಿಂಹಾಚಾರ್ಯರನ್ನು ಸದಾ ಭಕ್ತಿಯಿಂದ ಸ್ಮರಿಸೋಣ.


ಶ್ರೀ ಐಕೂರಾರ್ಯರ, ಶ್ರೀ ರಾಘವೇಂದ್ರಗುರುಸಾರ್ವಭೌಮರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನಾರಸಿಂಹಾಭಿನ್ನ ಶ್ರೀಮನ್ಮೂಲರಾಮಚಂದ್ರನು ಸದಾ ಅನುಗ್ರಹಿಸಲೀ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

Smt. Padma Sirish

ಜೈ ವಿಜಯರಾಯ

ನಾದನೀರಾಜನದಿಂ ದಾಸಸುರಭಿ 🙏🏾

***


No comments:

Post a Comment