by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
" ಶ್ರೀ ನಾರಾಯಣ - 1 "
" ದಿನಾಂಕ : 27.02.2021 ಶನಿವಾರ - ಮಾಘ ಶುದ್ಧ ಪೌರ್ಣಿಮಾ " ಶ್ರೀಮದಾಚಾರ್ಯರ ಅಧೀಕೃತ ಇತಿಹಾಸವನ್ನು ಬರೆದ ಶ್ರೀ ನಾರಾಯಣ ಪಂಡಿತಾಚಾರ್ಯರ ಆರಾಧನಾ ಮಹೋತ್ಸವ., ಕಾಪು ಮಠ., "
ಶ್ರೀ ಸರ್ವಜ್ಞ ಮುನಿಗಳ ಅಧೀಕೃತ ಚರಿತ್ರೆಯನ್ನು ಮೊದಲು ನಾಡಿಗೆ ನೀಡಿದ ಮಹಾನುಭಾವರೆಂದರೆ ಶ್ರೀ ನಾರಾಯಣ ಪಂಡಿತಾಚಾರ್ಯರು.
ಇವರು ಶ್ರೀ ಸರ್ವಜ್ಞಾಚಾರ್ಯರ ಪ್ರೀತಿಯ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ನಿಜವಾದ ಪಂಡಿತ ಪುತ್ರರು.
ಮೂಲತಃ ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡದ ಹತ್ತಿರದ " ಕಾಪು ಅಥವಾ ಕಾವುಗೋಳಿ " ಯೆಂಬ ಗ್ರಾಮದವರು.
ಇದೆ ಈ ಮನೆತನದ ಮೂಲಸ್ಥಳ.
ಯೆಂದಿನಿಂದಲೂ ಇದೊಂದು ಪಂಡಿತ ಕುಟುಂಬ.
ಇವರ ಗೋತ್ರ ಆಂಗೀರಸ.
ಇವರು ಹಸೀ ಸ್ಮಾರ್ತರು.
ಅದ್ವೈತ ಮತದ ಅಭಿಮಾನ - ಮೋಹ - ಮೆಚ್ಚು - ಮಮತೆ - ಕೆಚ್ಚುಗಳ ಹುಚ್ಚು ಎನ್ನುವಷ್ಟರ ಮಟ್ಟಿಗೆ ಅವರ ಮುತ್ತಾತ - ಮೂರು ತಲೆಗಳಿಂದ ಮೈಗೂಡಿ ಬಂದಿದ್ದವು.
ಶ್ರೀಸರ್ವಜ್ಞಾಚಾರ್ಯರ ಸಂಪರ್ಕದಲ್ಲಿ ಬಂದ ಬಳಿಕ ಎಷ್ಟೋದಿನ ಕಳೆದರ - ಶ್ರೀಮನ್ಮಧ್ವಾಚಾರ್ಯರ ಗ್ರಂಥಗಳನ್ನು ನೋಡಿ.....
" ತಮ್ಮ ಅದ್ವೈತ ತತ್ತ್ವವು ಸರ್ವಾಪದ್ಧ - ವೇದ ವಿರುದ್ಧ - ಪ್ರಮಾಣ ವಿಸಂಗತ " ಯೆಂದು [ಪಂಡಿತ ಪ್ರಕಾಂಡರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರಿಗೆ ] ತಿಳಿದರೂ ತಮ್ಮ ಮತದ ಮೇಲಿನ ಮೋಹವು ಬಿಟ್ಟಿರಲಿಲ್ಲ.
ಶ್ರೀ ತ್ರಿವಿಕ್ರಮರ ತಮ್ಮಂದಿರಾದ ಶ್ರೀ ಶಂಕರಾಚಾರ್ಯರು ಶ್ರೀಮನ್ಮಧ್ವಾಚಾರ್ಯರ ತಪಃಪೂತವಾದ ವಿದ್ವತ್ತನ್ನು ಕಂಡು ಅವರ ಶಿಷ್ಯತ್ವವನ್ನು ಅಂಗೀಕರಿಸಿದ್ದರೂ - ಶ್ರೀ ತ್ರಿವಿಕ್ರಮ ಪಂಡಿತರು ಮಾತ್ರ ತಮ್ಮ ಅದ್ವೈತ ಮತವನ್ನು ತ್ಯಜಿಸಲಿಲ್ಲ.
ಕೊನೆಗೆ " ಪಾಡಿಕುಡೆಲ್ " ಯೆಂಬ ಗ್ರಾಮದಲ್ಲಿ ಶ್ರೀ ಸರ್ವಜ್ಞಾಚಾರ್ಯರನ್ನು ಕಂಡಾಗ ಅವರೊಡನೆ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು 15 ದಿನಗಳು ವಾದಿಸಿದರು.
ಅದ್ವೈತ ಮತವೇ ಸರ್ವ ಶ್ರೇಷ್ಠವೆಂದು ಸಾಧಿಸಿದರು.
ಆದರೆ,
ಶ್ರೀ ಸರ್ವಜ್ಞಾಚಾರ್ಯರ ಅತಿ ಮಾನವ ಪ್ರಜ್ಞೆ - ಪಾಂಡಿತ್ಯ - ಪ್ರತಿಭೆ - ಪ್ರವಚನ ಪಟುತ್ವ ಮುಂತಾದ ದೈವಿಕ ಗುಣಗಳಿಂದ ಪ್ರಭಾವಿತರಾಗಿ ಪರಾಜಿತರಾಗಿ ಅವರ ಶಿಷ್ಯತ್ವವನ್ನೂ - ವೈಷ್ಣವ ಮತದ ದೀಕ್ಷೆಯನ್ನೂ ಪಡೆದು " ಜಗತ್ತಿನ ಅತಿ ಶ್ರೇಷ್ಠವೂ, ಮೋಕ್ಷಪ್ರದವೂ ದ್ವೈತ ಮತ " ವೆಂದು ಘಂಟಾ ಘೋಷವಾಗಿ ಒಪ್ಪಿಕೊಂಡರು.
ಬಹು ವರ್ಷ ವಿಚಾರ ವಿಮರ್ಶೆ ಮಾಡಿ ಇದೆ ಅಂದರೆ....
" ದ್ವೈತ ಮತವೇ ಸರ್ವ ಶ್ರೇಷ್ಠವಾದ ಮತ " ಎಂಬ ವಿವೇಕವು ಉದಯವಾಗಿ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ವೈಷ್ಣವ ಮತವನ್ನು ಅಂಗೀಕರಿಸಿದ ಬಳಿಕ ಮಾತ್ರ ಅವರಲ್ಲಿ ಅದ್ವೈತ ಮತದ ವಾಸನೆಯು ಸ್ವಲ್ಪವೂ ಉಳಿಯಲಿಲ್ಲ.
ಶ್ರೀ ತ್ರಿವಿಕ್ರಮರು ಅಪ್ಪಟ ಮಾಧ್ವರಾಗಿ ಅನೇಕ ಗ್ರಂಥಗಳನ್ನು ಬರೆದು ಅದ್ವೈತ ಮತವನ್ನು ಖಂಡಿಸಿದರು.
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರರೇ ಶ್ರೀ ನಾರಾಯಣ ಪಂಡಿತಾಚಾರ್ಯರು.
ಶ್ರೀ ನಾರಾಯಣ ಪಂಡಿತಾಚಾರ್ಯರು ತಂದೆಯಂತೆ ಸಾಹಿತ್ಯದಲ್ಲಿ ಸಿದ್ಧ ಹಸ್ತ - ವೇದಾಂತದಲ್ಲಿ ವಾಚಸ್ಪತಿ - ಪ್ರೌಢ ಗ್ರಂಥ ಲೇಖನದಲ್ಲಿಯೂ ಅವರಿಗೆ ಪ್ರಗಲ್ಭ ಪಾಂಡಿತ್ಯ.
" ಪಂಡಿತಾಚಾರ್ಯ " ಯೆಂಬುವದು ಈ ಮನೆತನದ ಅನುವಂಶಿಕ ವಿದ್ವತ್ತಿಗೆ ಒಲಿದು ಬಂದ ಬಿರುದು ಆಗಿರಬಹುದು.
ಆದರೆ ಶ್ರೀ ನಾರಾಯಣಾಚಾರ್ಯರು ತಮ್ಮ ಜನಮ ಜಾತ ಕವಿತ್ವ - ಪ್ರಯತ್ನ ಸಂಪಾದಿತ ಪಾಂಡಿತ್ಯಗಳಿಂದ ಅದನ್ನು ಸಾರ್ಥಕ ಮಾಡಿಕೊಂಡಿದ್ದರು.
ಸಾಂಪ್ರದಾಯಿಕ ಐತಿಹ್ಯದಂತೆ ಶ್ರೀ ನಾರಾಯಣ ಪಂಡಿತಾಚಾರ್ಯರು ತಮ್ಮ ಬಾಲ್ಯದಲ್ಲಿ ತಮ್ಮ ಮನೆಯಲ್ಲಿಯೇ ಶ್ರೀ ಮಧ್ವ ಮುನಿಗಳನ್ನು ಕಂಡು ತಮ್ಮ ಗ್ರಂಥವನ್ನು ಅವರ ಪಾದಾರವಿಂದಗಳಿಗೆ ಒಪ್ಪಿಸಿದ್ದರಂತೆ.
ಶ್ರೀ ಪೂರ್ಣಪ್ರಜ್ಞರು ಬದರಿಕಾಶ್ರಮಕ್ಕೆ ಹೋಗುವುದಕ್ಕೂ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಚಾರ ಕೈಕೊಂಡಾಗ ತಮ್ಮ ನೆಚ್ಚಿನ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಮನೆಗೆ ದಯ ಮಾಡಿಸಿದರು.
ತಮ್ಮ ಸ್ವರೂಪೋದ್ಧಾರಕರಾದ ಶ್ರೀ ಮಧ್ವ ಗುರುಗಳು ತಮ್ಮ ಮನೆಗೆ ಚಿತ್ತೈಸಿದಾಗ ಆ ಪಂಡಿತ ಕುಟುಂಬವು ಹರ್ಷೋದ್ರೇಕದಿಂದ ಹಿಗ್ಗಿ ಹಿಗ್ಗಿ ಕುಣಿಯಿತು.
ಎಲ್ಲರೂ ಭಕ್ತಿ ಭರಿತರಾಗಿ ಶ್ರೀ ಸರ್ವಜ್ಞಾಚಾರ್ಯರ ಪಾದ ಪಯೋಜಗಳಿಗೆ ಮಣಿದರು - ಅವರ ಮುಖದಿಂದ ಹರಿದು ಬಂದ ಉಪದೇಶಾಮೃತದ ದಿವ್ಯ ಧಾರೆಯಲ್ಲಿ ಮಿಂದು ಧನ್ಯಂ ಮಾನ್ಯರಾದರು.
ಆಗ ಶ್ರೀಮದಾಚಾರ್ಯರು ಪಂಡಿತರ ಮನೆಯವರಿಗೆಲ್ಲ ಆಶೀರ್ವಾದ ಮಾಡಿದ ಬಳಿಕ ಅವರ ಮಗನಾದ ಬಾಲಕ ನಾರಾಯಣ ಪಂಡಿತರು ಶ್ರೀ ಶ್ರೀಗಳವರ ಪಾದದಡಿಯಲ್ಲಿ ಒಂದು ಹೊತ್ತಿಗೆಯನ್ನು ತಂದಿಟ್ಟು ದೀರ್ಘ ದಂಡ ನಮಸ್ಕಾರ ಹಾಕಿದರು.
ಶ್ರೀಮದಾಚಾರ್ಯರು - ಇದು ಏನು ಎಂದು ಕೇಳಿದರು?
ಆಗ ಆ ಪುಟ್ಟ ಬಾಲಕನು ದಿಟ್ಟತನದಿಂದ....
" ತಮ್ಮ ತಾತ್ಪರ್ಯ ನಿರ್ಣಯದಲ್ಲಿಯ ಶ್ರೀ ರಾಮ ಕಥೆಯನ್ನು ಕೇಳಿ ಏನೋ ಪ್ರೇರಣೆ, ಸ್ಫೂರ್ತಿ ಬಂದಂತಾಗಿ ಅದನ್ನೇ ಕಾವ್ಯ ಧರ್ಮಕ್ಕೆ ಒಗ್ಗುವಂತೆ ತುಸು ಹಿಗ್ಗಿಸಿ " ಸಂಗ್ರಹ ರಾಮಾಯಣ " ವೆಂಬ ಒಂದು " ಚಿಕ್ಕ ಪ್ರಬಂಧ " ವನ್ನು ಬರೆದಿದ್ದೇನೆ.
ಶ್ರೀ ಚರಣರು ಇದನ್ನು ಕರುಣೆಯಿಂದ ತುಸು ಅವಲೋಕಿಸಿದರೆ ನಾನು ಕೃತಾರ್ಥ " ಎಂದು ಕರ ಜೋಡಿಸಿ ಬಿನ್ನವಿಸಿದರು.
ಶ್ರೀ ಆನಂದತೀರ್ಥ ಭಗವತ್ಪಾದರು ಅಭಿಮಾನದಿಂದಲೂ, ಅಂತಃಕರಣದಿಂದಲೂ ಆ ಬಾಲ ಕವಿಯ ಪ್ರೌಢ ಕೃತಿಯನ್ನು ಆಮೂಲಾಗ್ರ ಓದಿ ಆನಂದ ಪಟ್ಟರು.
ಮೆಚ್ಚಿಕೆಯನ್ನು ವ್ಯಕ್ತ ಪಡಿಸಿದರು.
ಆ ಪಂಡಿತ ಕುಮಾರನಲ್ಲಿ ಸುಪ್ತವಾದ ಕಾವ್ಯ ಕಲಾಂಕುರಕ್ಕೆ ಪ್ರೋತ್ಸಾಹನೆಯ ದುಗ್ಧ ಧಾರೆಯೆರೆದು, ಅದು ಮುಂದೆ ಕುಡಿಯೊಡೆದು ಪಲ್ಲವಿಸಿ, ಚಲ್ಲುವರೆಯುವಂತೆ ಅನುಗ್ರಹಿಸಿದರು.
** ಶ್ರೀಮದಾಚಾರ್ಯರ ಪ್ರೋತ್ಸಾಹನೆಯೇ ಶ್ರೀ ಸುಮಧ್ವ ವಿಜಯವನ್ನು ಬರೆಯಲು ಪ್ರೋತ್ಸಾಹಕ ಪ್ರೇರಣಾ ಕಾರಣವಾಗಿದೆಯೆಂದು...
" ಶ್ರೀ ಸು. ರಾ. ಯಕ್ಕುಂಡಿಯವರು ತಮ್ಮ " ಮಿಂಚಿನ ಬಳ್ಳಿಯ ಮಧ್ವ ಮುನಿ ವಿಜಯ " ದ 191 ನೇ ಪುಟದಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.
ಆದರೆ ಈ ಘಟನೆಯು ತಿಳಿದು ಬಂದ ಮೂಲವನ್ನು ಮಾತ್ರ ಕಾಣಿಸಲಿಲ್ಲ.
ಶ್ರೀಮದಾಚಾರ್ಯರ ಕಾಲ ಹಾಗೂ ಶ್ರೀ ನಾರಾಯಣ ಪಂಡಿತಾಚಾರ್ಯರ " ಸುಮಧ್ವ ವಿಜಯದ ಸ್ವಯಂಕೃತ ಟೀಕೆಯಾದ ಭಾವ ಪ್ರಕಾಶಿಕೆಯ ಕೆಲವು ಪದ್ಯಗಳನ್ನು ಪರಿಶೀಲಿಸಿದರೆ.....
ಶ್ರೀ ನಾರಾಯಣಾಚಾರ್ಯರು " ಚರಿತ್ರ ನಾಯಕರನ್ನು ( ಶ್ರೀ ಸರ್ವಜ್ಞಾಚಾರ್ಯರನ್ನು ) ನೋಡಿರಲಿಲ್ಲವೇನೋ ಎಂದು ಅನಿಸುತ್ತದೆ.
" ಭಾವ ಪ್ರಕಾಶಿಕೆ " ಯ ಅನೇಕ ಪದ್ಯಗಳಲ್ಲಿ ಗ್ರಂಥಕಾರರು ಶ್ರೀಮದಾಚಾರ್ಯರ ಚರಿತ್ರವನ್ನು ಅನೇಕ ಜನರ ಮುಖದಿಂದ ಕೇಳಿ ಬರೆದದ್ದು ಎಂದು ಒಪ್ಪಿ ಕೊಂಡಿದ್ದಾರೆ.
ಪ್ರಾಯೇಣ ನೈಕ ಮಾತ್ರೋಕ್ತಾ:
ಕಥಿತಾ ಇಹ ಸರ್ವಶಃ ।
ಮಯಾ ದೃಷ್ಟಾ ಧ್ರುವಮಿತಿ
ಪ್ರೋಕ್ತಾ: ಪ್ರಾಯೇಣ ಪೂರುಶೈ ।।
ದ್ವಯೋ: ವಕ್ತ್ರೋ: ವಿರುಧೇ
ತು ಸ್ವೀಕೃತಾ ಪ್ರಬಲಸ್ಯಗೀ: ।
ಕಾವ್ಯಾಶ್ರಯೇ ವಾ ಗುರು-
ಕೀರ್ತಯೇ ವಾ ಪ್ರೋಕ್ತ೦
ಸ್ವಯೈವಾಪಿ ಮನೀಷಯಾವಾ ।।
ತಸ್ಮಾನ್ನ ಶಂಕ್ಯೇತಿ ಮಹಾ
ಜನೇನ ಪುಂಸಾ ಕುಶಾಗ್ರಿಯೇ
ಧಿಯಾಪ್ಯವಶ್ಯಂ ।।
ಇಲ್ಲಿ ಶ್ರೀ ನಾರಾಯಣ ಪಂಡಿತಾಚಾರ್ಯರು " ಶ್ರೀ ಸುಮಧ್ವ ವಿಜಯ " ವನ್ನು ತಾವು ಬರೆಯುವಾಗ ಯಾವ ಕ್ರಮವನ್ನು ಅನುಸರಿಸಿದ್ದು ಮತ್ತು ಯಾವ ಮೂಲವನ್ನು ಆಧರಿಸಿದ್ದು ಎಂಬುವದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
****
" ಶ್ರೀ ನಾರಾಯಣ - 2 "
" ಶ್ರೀ ನಾರಾಯಣ ಪಂಡಿತಾಚಾರ್ಯರು "
ಆಚಾರ್ಯರ ಜೀವನದ ಬೇರೆ ಬೇರೆ ಘಟನೆ ಸಂದರ್ಭ ಸನ್ನಿವೇಶಗಳನ್ನು ಬಲ್ಲಂಥ - ನೋಡಿದಂಥ ಅಥವಾ ಅದರಲ್ಲಿ ಭಾಗವಹಿಸಿದಂತ ಅನೇಕ ಗುರು ಹಿರಿಯರ ಬಾಯಿಂದ ಕೇಳಿದ್ದೇನೆ ಮತ್ತು ಒಂದೊಂದು ಘಟನೆಯನ್ನು ಅನೇಕ ಜನರ ಬಾಯಿಂದ ಕೇಳಿ ಅದನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ ನೋಡಿ ಅದು ಅತ್ಯಂತ ಪ್ರಾಮಾಣಿಕ ಎಂದು ನನ್ನ ಬುದ್ಧಿಗೆ ಸ್ಪಷ್ಟವಾಗಿ ತಿಳಿದ ಬಳಿಕವೇ ಆ ವಿಷಯವನ್ನು ಈ ಗ್ರಂಥದಲ್ಲಿ ನಾನು ಕಾಣಿಸಿದ್ದೇನೆ.
ಹೇಳುವವರಲ್ಲಿಯೇ ಭಿನಾಭ್ಪ್ರಾಯವಾದರೆ ಅವುಗಳಲ್ಲಿ ಪ್ರಬಲ - ದುರ್ಬಲ ವಿಚಾರಿಸಿ ಎರಡನ್ನೂ ತೂಗಿ ನೋಡಿ ಬಹು ಜನ ಸಂವಾದದಿಂದ " ಸತ್ಯಸ್ಯ ಸತ್ಯಂ " ಎಂದು ತೋರಿದ ವೃತ್ತಗಳನ್ನೇ ನಾನು ಇಲ್ಲಿ ಬಿತ್ತರಿಸಿದ್ದೇನೆ.
ಇದು ಬರೀ ಕಾವ್ಯವೆಂದು ಅಥವಾ ಗುರುಗಳ ಕೀರ್ತಿಯನ್ನು ಸಾರುವ ಪ್ರಬಂಧವೆಂದು ಅಥವಾ ಕಲ್ಪನೆಯಿಂದ ಏನಾದರೂ ಸರಸ ಸುಂದರವಾಗಿ ಹೇಳ ಬಹುದಾದ ಕಥಾನಕವೆ ಎಂದುಯಾರೂ ಶಂಕಿಸಕೂಡದು.
ಇದರಲ್ಲಿ ಹೇಳಿದ್ದು ಅಪ್ಪಟ ಸತ್ಯ.
ವಸ್ತುತಸ್ತು ನಡೆದ " ಇತ್ಥ೦ಭೂತ " ಸಂಗತಿಯನ್ನೇ ನಾನು ಹತ್ತು ಮೂಲಗಳಿಂದ ಸಂಗ್ರಹಿಸಿ, ವಿಚಾರಿಸಿ, ಪ್ರಾಮಾಣಿಕತೆಯ ನಿಕಷದಲ್ಲಿ ಪರಿಕಿಸಿ ಹದಿನಾರಾಣೆ ಸತ್ಯವೆಂದು ಖಾತರಿಯಾದ ಬಳಿಕವೇ ಅಂಥಾ ವಾಸ್ತವಿಕ ವಿಷಯಗಳನ್ನು ಮಾತ್ರ ಇಲ್ಲಿ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಶ್ರೀಮದಾನಂದತೀರ್ಥ ಭಾಗವತ್ಪಾದರಂಥ ವಿಶ್ವತೋಮುಖ ಜೀವನವುಳ್ಳ ಮಹಾ ವ್ಯಕ್ತಿಗಳ ಸಮಗ್ರ ಬಾಳಿನ ಚಾರು ಚರಿತ್ರೆಯನ್ನು ಇಡಿಯಾದ ಯಾವುದೇ ಒಬ್ಬ ಸಮಕಾಲೀನ ವ್ಯಕ್ತಿಗೆ ನೋಡಿ ತಿಳಿದುಕೊಳ್ಳುವುದು ಶಕ್ಯವಿಲ್ಲ.
ಆದುದರಿಂದ ಆ ಆ ಘಟನೆಗಳು ನಡೆದ ಸ್ಥಳದಲ್ಲಿ - ಆ ಸಮಯದಲ್ಲಿ ಅಲ್ಲಿ ಇದ್ದ ಪ್ರತ್ಯಕ್ಷ ದರ್ಶಿಗಳ ಹೇಳಿಕೆ - ಕೇಳಿಕೆಗಳಿಂದಲೇ ಆ ವಿಷಯಗಳನ್ನು ತಿಳಿದುಕೊಂಡು ಎಂಥಾ ಸಮಕಾಲೀನನಾದರೂ ಬರೆಯಬೇಕಾಗುತ್ತದೆ.
ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸರ್ವಜ್ಞರ ಸಮಕಾಲೀನರಾದ ತಮಗೆ ದೂರ ದೂರ ದೇಶಗಳಲ್ಲಿ - ಬೇರೆ ಬೇರೆ ಕಾಲಗಳಲ್ಲಿ ನಡೆದ ಘಟನೆಗಳೆಲ್ಲವೂ ಸಾಮಾನ್ಯವಾಗಿ ಗೊತ್ತಿದ್ದರೂ ಅಷ್ಟರ ಮೆಲಿಯೇ ಅವಲಂಬಿಸದೆ ಆ ಸ್ಥಳಗಳಿಗೆ ಹೋಗಿ ಅಲ್ಲಿದ್ದ ಪ್ರತ್ಯಕ್ಷ ದರ್ಶಿಗಳನ್ನು ಕಂಡು ಅವರನ್ನು ವಿಚಾರಿಸಿ....
ಮಯಾ ದೃಷ್ಟಾ ಧ್ರುವಮಿತಿ
ಪ್ರೋಕ್ತಾ: ಪ್ರಾಯೇಣ ಪುರುಶೈ: ।।
ಸುಮಧ್ವ ವಿಜಯ ಕಾವ್ಯವನ್ನು ಅವರು ತಾವು ನೋಡಿದ್ದಕ್ಕಿಂತ ಹೆಚ್ಚಾಗಿ ತಮ್ಮ ತಂದೆಯಿಂದಲೂ ಅಧೀಕೃತವಾದ ಸತ್ಯ ಸಂಗತಿಗಳನ್ನೆಲ್ಲ ತಿಳಿದುಕೊಂಡು " ಸುಮಧ್ವವಿಜಯ " ವನ್ನು ಬರೆದಿದ್ದಾರೆ.
ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸುಮಧ್ವವಿಜಯವಲ್ಲದೆ ಅನೇಕ ಕಾವ್ಯ ಶಾಸ್ತ್ರ ಪ್ರಬಂಧಗಳನ್ನು ರಚಿಸಿದ್ದಾರೆ. ಅವುಗಳಲ್ಲಿ...
" ಶ್ರೀ ನಾರಾಯಣ ಪಂಡಿತಾಚಾರ್ಯ ಕೃತ ಗ್ರಂಥ ರತ್ನಗಳು "
1. ಸುಮಧ್ವ ವಿಜಯ [ 16 ಸರ್ಗಗಳು ]
2. ಸುಮಧ್ವ ವಿಜಯ ಭಾವ ಪ್ರಕಾಶಿಕಾ
3. ಅಣು ಮಧ್ವ ವಿಜಯ
[ ಪ್ರಮೇಯ ನವ ಮಾಲಿಕಾ - 32 ಶ್ಲೋಕಗಳು ]
4. ಮಣಿಮಂಜರೀ
5. ನಯಚಂದ್ರಿಕಾ [ ಅನುವ್ಯಾಖ್ಯಾನ ಟೀಕಾ ]
6. ತತ್ತ್ವಮಂಜರೀ [ ವಿಷ್ಣುತತ್ತ್ವ ನಿರ್ಣಯ ಟೀಕಾ ]
7. ಯಮಕಭಾರತ ಟೀಕಾ
8. ಅಣುಭಾಷ್ಯ ಟೀಕಾ
9. ಕೃಷ್ಣಾಮೃತ ಮಹಾರ್ಣವ ಟೀಕಾ
10. ಮಿಥ್ಯಾತ್ವಾನುಮಾನ ಖಂಡನ ಟೀಕಾ
11. ಸಂಗ್ರಹ ರಾಮಾಯಣ [ 3000 ಶ್ಲೋಕಗಳು ]
12. ಶುಭೋದಯ ಕಾವ್ಯ [ 503 ಶ್ಲೋಕಗಳು ]
13. ಪಾರಿಜಾತ ಹರಣಂ [ 3 ಸರ್ಗಗಳು ]
14. ಯೋಗದೀಪಿಕಾ [ ಸದಾಚಾರ ಗ್ರಂಥ - 10 ಪಟಲಗಳಲ್ಲಿ ]
15. ನರಸಿಂಹ ಸ್ತುತಿ [ 21 ಶ್ಲೋಕಗಳು ]
16. ರಾಮಗೀತಾಷ್ಟಕ
17. ದಾಶರಥ್ಯಷ್ಟಕ
18. ಕೃಷ್ಣಮಾಲಾ ಸ್ತೋತ್ರ
19. ಮಧ್ವ ಕವಚ
20. ಅಣು ವಾಯುಸ್ತುತಿ
21. ಶಿವ ಸ್ತುತಿ [ 13 ಶ್ಲೋಕಗಳು ]
22. ತಾರತಮ್ಯ ಸ್ತೋತ್ರ [ ದೇವತಾ ತಾರತಮ್ಯ ]
23. ಮಧ್ವಾಮೃತ ಮಹಾರ್ಣವ
24. ಅಂಶಾವತಾರ
[ ದೇವತೆಗಳ ಮತ್ತು ದೈತ್ಯ / ಅಸುರರ ಅಂಶ - ಆವೇಶ - ಅವತಾರಗಳ ವಿವರ ]
25. ತಿಥಿತ್ರಯ ನಿರ್ಣಯ
ಮೊದಲಾದವುಗಳು ಪ್ರಮುಖವಾಗಿವೆ.
ಅವರ " ಭಾವ ಪ್ರಕಾಶಿಕಾ ಟಿಪ್ಪಣಿ " ಯಿಂದ ಸುಮಧ್ವ ವಿಜಯದಲ್ಲಿ ನಿರ್ದೇಶಿಸಿದ ಶ್ರೀಮದಾಚಾರ್ಯರ ಜೀವನ ಚರಿತ್ರದಲ್ಲಿಯ ಅನೇಕ ಘಟನೆಗಳ ಸ್ಥಾನಗಳನ್ನು - ಭೌಗೋಲಿಕ ಸನ್ನಿವೇಶಗಳನ್ನೂ ಮತ್ತು ಸಂಸ್ಕೃತ ಶಬ್ದಗಳಿಗೆ ಸಮಾನಾರ್ಥಕ ತುಳು ಭಾಷೆಯ ಶಬ್ದಗಳನ್ನು ತಿಳಿಯಲಿಕ್ಕೂ - ಅವುಗಳ ಸಹಾಯದಿಂದ ಇಂದು ಅವುಗಳ ವಿಶಿಷ್ಟ ಸ್ಥಿತಿ ಗತಿಯನ್ನು ಗುರುತಿಸಲಿಕ್ಕೂ ಬಹಳ ಉಪಯೋಗವಾಗಿದೆ.
ಶ್ರೀ ನಾರಾಯಣ ಪಂಡಿತಾಚಾರ್ಯರು ಜಗತ್ತಿಗೆಲ್ಲ ಶ್ರೀಮದಾಚಾರ್ಯರ ದಿವ್ಯ ಜೀವನದ ದಿಗ್ದರ್ಶನ ಮಾಡಿಸಿದ ಪುಣ್ಯಾತ್ಮರು.
ಅವರು " ಸುಮಧ್ವ ವಿಜಯ " ಗ್ರಂಥವನ್ನು ಬರೆಯದೆ ಇದ್ದಿದ್ದರೆ ಗುರುಗಳ ಜೀವನದ ಪಾವನ ಚರಿತ್ರೆಯು ಯಾರಿಗೂ ಗೊತ್ತಾಗದೆ...
ಇದಮಂಧ೦ ಜಗತ್ ಕೃತ್ಸ್ನ೦
ಜಾಯೇತ ಭುವನ ತ್ರಯಂ ।।
ಎಂಬ ವಚನದಂತೆ ಜಗತ್ತೆಲ್ಲವೂ ಕತ್ತಲೆಯಲ್ಲಿಯೇ ಕೊಳೆಯಬೇಕಾಗುತ್ತಿತ್ತು.
ಶ್ರೀ ಸರ್ವಜ್ಞರ ವಿರಾಡ್ ಜೀವನದ ದಿವ್ಯ ದರ್ಶನವನ್ನು ಹದಿನಾರು ಸರ್ಗದ ಈ ಮಹಾ ಕಾವ್ಯದಲ್ಲಿ ಮೂಡಿಸಿದ - ಜನರಿಗೆಲ್ಲ ಮಾಡಿಸಿದ - ಶ್ರೀ ನಾರಾಯಣ ಪಂಡಿತಾಚಾರ್ಯರ ಉಪಕಾರವು ಮಾಧ್ವರಿಗೆಲ್ಲ ಚಿರ ಸ್ಮರಣೀಯವಾಗಿದೆ.
ಶ್ರೀ ನಾರಾಯಣ ಪಂಡಿತಾಚಾರ್ಯರ ಕಾವ್ಯ ಕೌಶಲವು ಅನ್ಯಾದೃಶವಾಗಿದೆ.
ಚತುರನಾದ ಚಿತ್ರಕಾರನು ಚಿಕ್ಕ ಕಾಗದದ ತುಂಡಿನಲ್ಲಿ ಉನ್ನತೋನ್ನತವಾದ ಹೈಮಾಚಲದ ಶೈಲಾ ಶ್ರೇಣಿಗಳನ್ನೆಲ್ಲ ಚಿತ್ರಿಸಿ ತೋರಿಸುವಂತೆ ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸರ್ವಜ್ಞಾಚಾರ್ಯರ ಬಾನಗಲವಾದ ಬದುಕಿನ ವಿರಾಡ್ ದರ್ಶನವನ್ನು 16 ಸರ್ಗದ ಈ ಮಹಾಕಾವ್ಯದಲ್ಲಿ ವೈವಿಧ್ಯಮಯವಾಗಿ ಮೂಡಿಸಿದ್ದು ಅವರ ಕವಿತ್ವ ಸಿದ್ಧಿಯ ಕೌಶಲದ ಕಳಸವಾಗಿದೆ.
ಶ್ರೀ ನಾರಾಯಣ ಪಂಡಿತಾಚಾರ್ಯರ ಈ " ಸುಮಧ್ವ ವಿಜಯ ಮಹಾಕಾವ್ಯ " ವು ಪ್ರಾಮಾಣಿಕತೆಯ ಒರೆಗಲ್ಲಿಗೂ ಇಳಿಯ ಬಹುದಾದ ಚೊಕ್ಕ ಚಿನ್ನದಂಥ ಸತ್ಯ ಶುದ್ಧವಾದ - ಪ್ರಮಾಣ ಬದ್ಧವಾದ ರಸವತ್ ಕೃತಿಯಾಗಿದೆ.
ಇಂಥಾ ಮಹಾ ವಿಭೂತಿಯ ಬೃಹಜ್ಜೀವನದ ದೇದೀಪ್ಯಮಾನವಾದ ದಿವ್ಯ ದರ್ಶನವನ್ನು ಮಧುರ ಕೋಮಲ ಕಾಂತ ಪದಾವಲಿಗಳಲ್ಲಿ ಪ್ರಸನ್ನ ವರ್ಣ ಪುಂಜಗಳಿಂದ ರಸ ರಂಜಿನಿಯಾಗಿ ಸುಂದರ ಶೈಲಿಯಲ್ಲಿ ಮೂಡಿಸಿದ್ದಕ್ಕಾಗಿ ಶ್ರೀ ನಾರಾಯಣ ಪಂಡಿತಾಚಾರ್ಯರಿಗೆ ಸಹೃದಯ ಪ್ರಪಂಚವೆಲ್ಲವೂ ಋಣಿಯಾಗಿ ಇರಬೇಕಾಗಿದೆ.
ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀಮದಾಚಾರ್ಯರ ಹಾಗೂ ತಮ್ಮ ತಂದೆಯವರ ಅನಂತರ ಮಂಗಳೂರಿನ ದಕ್ಷಿಣಕ್ಕೆ ಕುಂಬಳೆ ಗ್ರಾಮದ ಹತ್ತಿರ ಇರುವ ತಮ್ಮ ಕಾವು ಮಠದಲ್ಲಿಯೇ ಇದ್ದು ಶ್ರೀ ಸರ್ವಜ್ಞಾಚಾರ್ಯರ ಗ್ರಂಥಗಳ ಪಾಠ ಪ್ರವಚನ - ಟೀಕಾ ಲೇಖನ - ಗ್ರಂಥ ರಚನೆ - ಪೂಜೆ ಪುರಸ್ಕಾರಗಳನ್ನು ಮಾಡಿಕೊಂಡು ವಾಸವಾಗಿದ್ದರು.
ತಮ್ಮ ತಂದೆ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರಿಗೆ ಶ್ರೀಮದಾಚಾರ್ಯರು ದಯಪಾಲಿಸಿದ ಶ್ರೀ ಶ್ರೀಕರ ವಿಗ್ರಹವನ್ನು ಅನುದಿನವೂ ಭಕ್ತಿಯಿಂದ ಪೂಜೆ ಮಾಡುತ್ತಿದ್ದರು.
ಶ್ರೀ ಸರ್ವಜ್ಞರ ಸಾಕ್ಷಾದ್ದರ್ಶನದ ಸೌಭಾಗ್ಯವನ್ನು ಪಡೆದು ಅವರ ಸಾಕ್ಷಾತ್ ಶಿಷ್ಯರಾದ ತಮ್ಮ ತಂದೆಯವರಿಂದ ಶ್ರೀ ಮಧ್ವ ದರ್ಶನದ ದಿವ್ಯ ಜ್ಞಾನವನ್ನು ಪಡೆದು ಧನ್ಯರಾದ ಶ್ರೀ ನಾರಾಯಣ ಪಂಡಿತಾಚಾರ್ಯರಿಗೆ ವಯಸ್ಸು ಆದಂತೆ...
ಮನವು ಮಾಗಿತು.
ವೈರಾಗ್ಯದೆಡೆಗೆ ಬಾಗಿತು.
ಸಂಸಾರದಲ್ಲಿ ಜಿಗುಪ್ಸೆ ಮೂಡಿತು.
ಅವರ ತಂದೆಯವರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರೂ ವಾರ್ಧಕ್ಯದಲ್ಲಿ ವಿರಕ್ತರಾಗಿ ಯತ್ಯಾಶ್ರಮವನ್ನು ಸ್ವೀಕರಿಸಿದ್ದರು.
ಅದರಂತೆ - ಶ್ರೀ ನಾರಾಯಣ ಪಂಡಿತಾಚಾರ್ಯರೂ ವಯಸ್ಸಾದಂತೆ....
ಭವ ಬಂಧನದ ಬೇಡಿಗಳನ್ನೆಲ್ಲ ಕಳಚಿದರು.
ಸಾಂಸಾರಿಕ ಸ್ನೇಹ ಎಳೆ - ತೊಳೆಗಳನ್ನೆಲ್ಲ ಹರಿದು ಹಾಕಿದರು.
ಧನ - ಕನಕಗಳನ್ನು ತೊರೆದರು.
ಮಡದಿ ಮಕ್ಕಳನ್ನು ಮರೆತರು.
ಸರ್ವಸಂಗವನ್ನು ಪರಿತ್ಯಾಗ ಮಾಡಿ ಸಂನ್ಯಾಸಿಗಳಾಗಿ ಶ್ರೀ ನಾರಾಯಣ ತೀರ್ಥರಾದರು.
ಈ ಪರಮ ಹಂಸಾಶ್ರಮದಿಂದಲೇ ಪರಮಾತ್ಮನ ಸೇವೆ ಮಾಡಿ ಕೃತಾರ್ಥರಾದರು.
ಈ ಕಾವು ಮಠದಲ್ಲಿಯೇ ಯತ್ಯಾಶ್ರಮವನ್ನು ಸ್ವೀಕರಿಸಿ ಸ್ವಾಮಿಗಳಾದ ಈ ತಂದೆ [ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ] - ಮಕ್ಕಳ [ ಶ್ರೀ ನಾರಾಯಣ ಪಂಡಿತಾಚಾರ್ಯರು ] ಇಬ್ಬರ ವೃಂದಾವನಗಳು ಇವೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ಶಿವಸ್ತುತಿ - ೧
ಕಾರ್ತಿಕ ಮಾಸದ ಸೋಮವಾರ ಪರ್ವಕಾಲ. ಶ್ರೀರುದ್ರದೇವರು ಪ್ರಸನ್ನರಾಗಿರುತ್ತಾರೆ. ಬೇಡಿದಿಷ್ಟಾರ್ಥಗಳನ್ನು ಕರುಣಿಸುತ್ತಾರೆ.
ಅವರನ್ನು ಸ್ತುತಿಸೋಣ. ಅವರ ಅನುಗ್ರಹವನ್ನು ಪಡೆಯೋಣ.
ಹೆಚ್ಚಿನವರು, ವೈಷ್ಣವರು ಶಿವದ್ವೇಷಿಗಳೆಂದು ತಪ್ಪಾಗಿ ತಿಳಿದಿರುತ್ತಾರೆ. ಅಂತಹ ಭ್ರಾಂತಿಯನ್ನು ಹೋಗಲಾಡಿಸುವ ಅದ್ಭುತವಾದ ಒಂದು ಕೃತಿ ಶಿವಸ್ತುತಿ.
ವೈಷ್ಣವರು ಶಿವನಲ್ಲಿ ಮಾಡುವ ಭಕ್ತಿ, ವೈಷ್ಣವರಿಗೆ ಶಿವನು ಕೊಡುವ ಅನುಗ್ರಹ ಎಲ್ಲವೂ ತುಂಬಾ ಸೊಗಸಾಗಿ ವರ್ಣಿತವಾಗಿದೆ.
ಮಣಿಮಂಜರೀ ಮೊದಲಾದ ಗ್ರಂಥಗಳನ್ನು ರಚಿಸಿದ ಶ್ರೀನಾರಾಯಣ ಪಂಡಿತಾಚಾರ್ಯರೇ ಈ ಶಿವಸ್ತುತಿಯನ್ನು ಬರೆದದ್ದು.
ಈ ಸ್ತೋತ್ರದ ರಚನೆ ಯ ಹಿಂದೆ ಒಂದು ಕಥೆ ಇದೆ.
ನಾರಾಯಣ ಪಂಡಿತಾಚಾರ್ಯರು ವೈಷ್ಣವರು. ವೇದಾದಿಶಾಸ್ತ್ರವನ್ನು ಕಲಿತ ವೈದಿಕ ಪಂಡಿತರು. ಸದಾಚಾರಸಂಪನ್ನರಾಗಿ ಅನೇಕ ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ವಿಷ್ಣೂಪಾಸಕರು. ಶಿವನನ್ನೂ ಭಕ್ತಿಯಿಂದ ಪೂಜಿಸುತ್ತಿದ್ದರು. ಸ್ತುತಿಸುತ್ತಿದ್ದರು. ಪಂಡಿತರಾದ್ದರಿಂದ ತಾವು ಶಿಷ್ಯರ ಜೊತೆಗೆ ಬೇರೆ ಬೇರೆ ತೀರ್ಥ ಕ್ಷೇತ್ರಗಳಿಗೆ ಪ್ರಯಾಣ ಮಾಡುತ್ತಿದ್ದರು.
ಒಂದು ಬಾರಿ ಒಂದು ಶಿವನ ಪವಿತ್ರ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದರು. ಜೊತೆಗೆ ಶಿಷ್ಯರೂ ಇದ್ದರು. ಪವಿತ್ರವಾದ ಆ ಕ್ಷೇತ್ರದಲ್ಲಿ ಭವ್ಯವಾದ ಶಿವನ ಬೃಹತ್ತಾದ ದೇವಾಲಯವಿತ್ತು. ಆ ದೇವಾಲಯದಲ್ಲಿರುವ ಶಿವನನ್ನು ಶೈವರು ಪೂಜೆ ಮಾಡುತ್ತಿದ್ದರು. ಸಹಜವಾಗಿ ಶಿವನ ಭಕ್ತರಾದ ಪಂಡಿತಾಚಾರ್ಯರು, ಆ ಶಿವನ ದೇವಾಲಯವನ್ನು ಪ್ರವೇಶ ಮಾಡಲು ಹೊರಟರು. ಆಗ ಆ ಶೈವರು ತಡೆದರು.
ನೀವು ವೈಷ್ಣವರು. ನಿಮ್ಮಲ್ಲಿ ಸ್ಪಷ್ಟವಾಗಿ ವಿಷ್ಣುಲಾಂಛನವು ಕಾಣುತ್ತಿದೆ. ನೀವು ಪಾಶುಪತಮತವನ್ನು ಒಪ್ಪುವುದಿಲ್ಲ. ಹಾಗಾಗಿ ನೀವು ಶಿವನ ಮಂದಿರದೊಳಗೆ ಪ್ರವೇಶ ಮಾಡುವಂತಿಲ್ಲ. ಎಂದು ತಡೆದರು. ದೇವಾಲಯದ ಬಾಗಿಲನ್ನೂ ಮುಚ್ಚಿದರು. ಬೀಗವನ್ನು ಹಾಕಿದರು.
ಜೊತೆಗೆ ವೈಷ್ಣವಮತವನ್ನೂ ನಿಂದಿಸಿ, ಪಾಶುಪತ ಮತದ ಆಧಾರದಲ್ಲಿ ಶಿವನನ್ನು ಸರ್ವೋತ್ತಮ ಎಂದು ವಾದ ಮಾಡಲು ಆರಂಭಿಸಿದರು. ಪಂಡಿತಾಚಾರ್ಯರು ಅವರ ಜೊತೆ ವಾದ ಮಾಡಿದರು. ಶೈವ ವೈಷ್ಣವ ವಾದ ನಡೆಯಿತು. ಕೊನೆಯಲ್ಲಿ ಪಂಡಿತಾಚಾರ್ಯರು ಪ್ರಮಾಣ ಸಹಿತವಾಗಿ ಶೈವರನ್ನು ಗೆದ್ದರು.
ಶೈವರನ್ನು ಕುರಿತು ಹೇಳಿದರು. ನಾನೊಬ್ಬ ವೈಷ್ಣವ. ಶಿವನ ಭಕ್ತ. ನಾನು ಯಾವತ್ತೂ ಶಿವನನ್ನು ನಿಂದಿಸುವುದಿಲ್ಲ. ಶಿವನಿಗೆ ಯಾವುದೇ ಅಪಚಾರವಾಗದಂತೆ, ಶಿವನಿಗೆ ಪ್ರಿಯವಾಗುವಂತೆಯೇ ನಾನು ವಾದ ಮಾಡಿದ್ದೇನೆ.
ನನ್ನ ವಾದವು ಶಿವನಿಗೂ ಸಮ್ಮತವಾಗಿದ್ದಲ್ಲಿ, ಒಳಗಿರುವ ಶಿವನು ನನ್ನ ದೃಷ್ಟಿಗೆ ಗೋಚರನಾಗುತ್ತಾನೆ. ಎಂದು ಹೇಳಿದರು.
ಎಲ್ಲರಿಗೂ ಆಶ್ಚರ್ಯ. ಬಾಗಿಲು ಮುಚ್ಚಿದೆ. ಬೀಗವನ್ನೂ ಹಾಕಿದ್ದಾರೆ. ಪಂಡಿತರು ಬಾಗಿಲಿನ ಮುಂದೆ ಬಂದರು. ಎರಡೂ ಕೈಗಳನ್ನು ಮೇಲೆತ್ತಿದರು. ಗಟ್ಟಿಯಾಗಿ ಶಿವನನ್ನು ಸ್ತೋತ್ರ ಮಾಡಲು ಆರಂಭ ಮಾಡಿದರು.
೧೩ ಶ್ಲೋಕಗಳಲ್ಲಿ ಸ್ತೋತ್ರವನ್ನು ಮಾಡುತ್ತಾರೆ.
ಸ್ತೋತ್ರ ಮುಗಿಯುವಾಗ ಶಿವನ ದೇವಾಲಯದ ಬಾಗಿಲಿನ ಬೀಗವು ಕಳಚುತ್ತದೆ, ಬಾಗಿಲು ತೆರದು, ಶಿವನ ದರ್ಶನವಾಗುತ್ತದೆ. ಪಂಡಿತರು ಶಿವನನ್ನು ನಮಸ್ಕರಿಸಿದರು. ಅರ್ಚಿಸಿದರು. ಸ್ತುತಿಸಿದರು.
ಇದಿಷ್ಟು ಕತೆ.
ಆಗ ಅವರು ಮಾಡಿದ ಸ್ತುತಿಯೇ ಶಿವಸ್ತುತಿ. ಮಾಧ್ವರು ಪ್ರತಿನಿತ್ಯ ಪಠಿಸುವ ಅಪೂರ್ವ ಕೃತಿ.
ಇದರಲ್ಲಿ ಬರುವ ರುದ್ರ ದೇವರ ಮಹಿಮೆಯನ್ನು ತಿಳಿಯೋಣ.
ರುದ್ರದೇವರು ವಿಷವನ್ನು ಪಾನ ಮಾಡಿದಾಗ ಕಂಠದಲ್ಲಿ ನೀಲವರ್ಣವು ಉಂಟಾಯಿತು. ಅಂದಿನಿಂದ ಅವರು ನೀಲಕಂಠ ಎಂದು ಪ್ರಸಿದ್ಧರಾಗಿದ್ದಾರೆ. ಅವರ ಶರೀರವು ಸ್ಫಟಿಕ ದಂತೆ ಅತ್ಯಂತ ಸ್ವಚ್ಛ ವಾಗಿದೆ.
ಅವರ ತಲೆಯಲ್ಲಿ ಫಳಫಳ ಹೊಳೆಯುವ ಬಂಗಾರದಂತಹ ಜಟೆಯನ್ನು ಹೊಂದಿದ್ದಾರೆ. ಅದರ ಜೊತೆಗೆ ಚಂದ್ರನ ಕಲೆಯನ್ನು ಧಾರಣೆ ಮಾಡಿದ್ದಾರೆ. ಅರಳಿದ ಸುಂದರವಾದ ಕಪಿಲವರ್ಣದ ಮೂರು ಕಣ್ಣುಗಳನ್ನು ಹೊಂದಿದ್ದಾರೆ.
ಶರೀರದಲ್ಲಿ ವ್ಯಾಘ್ರದ ಚರ್ಮವನ್ನು ಧಾರಣೆ ಮಾಡಿದ್ದಾರೆ. ನಾಗಗಳನ್ನು ಆಭರಣವನ್ನಾಗಿ ಮಾಡಿಕೊಂಡಿದ್ದಾರೆ. ಅಣಿಮಾದಿ ಅಷ್ಟೈಶ್ವರ್ಯಗಳನ್ನು ಹೊಂದಿದ್ದಾರೆ.
ಹೀಗೆ ಪಾರ್ವತಿ ದೇವಿಯ ಪತಿಯಾದ ಶ್ರೀಮಹಾರುದ್ರದೇವರು ಅತ್ಯಂತ ಸುಂದರವಾದ ರೂಪವನ್ನು ಹೊಂದಿದ್ದಾರೆ.
ಇಂತಹ ರುದ್ರದೇವರ ರೂಪವನ್ನು ನೋಡಬೇಕು. ಹಾಗಾಗಿ ಪಂಡಿತಾಚಾರ್ಯರು ಪ್ರಾರ್ಥನೆಯನ್ನು ಮಾಡುತ್ತಾರೆ.
ಹೇ ನೀಲಕಂಠನಾದ ಶಿವನೇ! ಯಾವಾಗ ನಿನ್ನನ್ನು ನೋಡುತ್ತೇನೆ? ನನ್ನ ಕಣ್ಣುಗಳು ನಿನ್ನ ರೂಪವನ್ನು ನೋಡಿ ಪಾವನವಾಗುವುದು ಯಾವಾಗ? ಎಂದು.
ನಾವೂ ರುದ್ರ ದೇವರನ್ನು ಪ್ರಾರ್ಥನೆ ಮಾಡಬೇಕು. ಅವರ ದರ್ಶನ ಪಡೆಯಬೇಕು.
ಶಾಸ್ತ್ರಗಳು ತಿಳಿಸುವಂತೆ "ಜ್ಞಾನಂ ಸದಾಶಿವಾದಿಚ್ಛೇತ್" ಎಂಬಂತೆ, ನಮಗೆ ಉತ್ತಮ ಜ್ಞಾನ ಬೇಕಾದರೆ ರುದ್ರ ದೇವರನ್ನು ಪ್ರಾರ್ಥನೆ ಮಾಡಬೇಕು. ಅವರು ಅನುಗ್ರಹ ಮಾಡಿದರೆ ಉತ್ತಮ ವಾದ ಶುದ್ಧ ವಾದ ಜ್ಞಾನ ಬರಲು ಸಾಧ್ಯ.
ಜ್ಞಾನದಿಂದ ಮುಂದೆ ಮೋಕ್ಷವನ್ನು ಹೊಂದಲು ಸಾಧ್ಯ. ಹಾಗಾಗಿ ನಮಗೆ ಜ್ಞಾನ ಅತ್ಯಂತ ಆವಶ್ಯಕ. ಅದನ್ನು ಕೊಡುವಲ್ಲಿ ರುದ್ರದೇವರು ಪ್ರಧಾನ. ಆದ್ದರಿಂದ ನಮಗೆ ರುದ್ರದೇವರು ಜ್ಞಾನ ಕೊಡುವ ದೊಡ್ಡ ಗುರುಗಳು.
ಹಾಗಾಗಿಯೇ ಮಾಧ್ವ ಪರಂಪರೆಯ ಮಹಾಜ್ಞಾನಿಗಳಾದ ಶ್ರೀ ವಾದಿರಾಜ ಗುರುಸಾರ್ವಭೌಮರು ರುದ್ರ ದೇವರನ್ನು ಸ್ತುತಿ ಮಾಡುವಾಗ "ಗುರುವೆಂಬೆ ನಿನ್ನ" ಎಂದು ಹಾಡಿ ಹೊಗಳಿದ್ದಾರೆ.
ಇಂತಹ ಜ್ಞಾನಪ್ರದರಾದ ಮಹಾ ರುದ್ರದೇವರನ್ನು ಸ್ತುತಿಸೋಣ. ಅವರ ಅನುಗ್ರಹಕ್ಕೆ ಪಾತ್ರರಾಗೋಣ.
ಹೃಷೀಕೇಶ ಮಠದ
॥ श्रीश्रीशभक्तो जयति मध्वो विध्वस्तसाध्वसः ॥
****
No comments:
Post a Comment