Name: Lakumeesha Dasaru
Period: 1851 - 1929
Ankita: lakumeesha
ಶ್ರೀ ಲಕುಮೀಶ ದಾಸರು ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು )
"ಸಂಕ್ಷಿಪ್ತ ಮಾಹಿತಿ "
" ಶ್ರೀ ಶ್ಯಾಮಸುಂದರದಾಸರ - ಶ್ರೀ ರಾಯರ ಕಾರುಣ್ಯ ಪಾತ್ರರು ಶ್ರೀ ಲಕುಮೀಶ ದಾಸರು "
ಹೆಸರು : ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಜೋಷಿ
ತಂದೆ : ಶ್ರೀ ಬಂಡಾಚಾರ್ಯ ಜೋಷಿ
ತಾಯಿ : ಸಾಧ್ವಿ ನರಸಮ್ಮ
ದೊಡ್ಡಪ್ಪ : ಶ್ರೀ ಮಾನವೀ ಗುಂಡಾಚಾರ್ಯರು ಜೋಷಿ ( ಶ್ರೀ ಶ್ಯಾಮಸುಂದರದಾಸರು )
ಜನನ : ಶಾಲಿವಾಹನ ಶಕೆ 1851 ಕ್ರಿ ಶ 1929
ಸಂವತ್ಸರ ; ಶ್ರೀ ವಿಭವ
ಮಾಸ : ಶ್ರಾವಣ
ತಿಥಿ : ಶುದ್ಧ ದಶಮೀ
ನಕ್ಷತ್ರ : ಆರಿದ್ರಾ
ರಾಶಿ : ಮಿಥುನ
ಜನ್ಮ ಸ್ಥಳ : ಕುರುಡಿ
ವಿದ್ಯೆ : ಜ್ಯೋತಿಷ್ಯ ಮತ್ತು ಪೌರೋಹಿತ್ಯ
ವಿದ್ಯಾ ಗುರುಗಳು : ಶ್ರೀ ಗುಂಜಳ್ಳಿ ವಾದೀಂದ್ರಾಚಾರ್ಯ
ಕಲೆ :
ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ಮೈಸೂರು ಶ್ರೀ ವಾಸುದೇವಾಚಾರ್ಯರಲ್ಲಿ ವಿಗ್ರಹ ಮಾಡುವ ಕುಸುರಿ ಕೆಲಸವನ್ನು ಕಲಿತರು. ಇವರು ಕೈಯಲ್ಲಿ ತಯಾರಾದ ವಿಗ್ರಹಗಳ ವಿವರ ಹೀಗಿದೆ....
೧. ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಕೈಯಿಂದ ಲಿಂಗಸೂಗೂರಿನ ಶ್ರೀ ವರದೇಂದ್ರತೀರ್ಥರ ವೃಂದಾವನಕ್ಕೆ ಶ್ರೀ ಗೋರೆಬಾಳ ಹನುಮಂತರಾಯರು ( ಶ್ರೀ ಸುಂದರವಿಠಲರು ) ಬೆಳ್ಳಿ ಕವಚ ನಿರ್ಮಾಣ ಮಾಡಿಸಿದರು.
೨. ನಂದ್ಯಾಲ ಶ್ರೀ ರಾಯರ ಮಠಕ್ಕೆ ಪಂಚಲೋಹದ ಶ್ರೀ ಪ್ರಹ್ಲಾದರಾಜರ ವಿಗ್ರಹ
೩. ಯಾದಗಿರಿ ಶ್ರೀ ರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ಬೆಳ್ಳಿ ಕವಚ ನಿರ್ಮಾಣ
೪. ಗೋನವಟ್ಲ ಶ್ರೀ ಗೋಪಾಲಕೃಷ್ಣನಿಗೆ ಬೆಳ್ಳಿ ಕವಚ ನಿರ್ಮಾಣ
೫. ಶ್ರೀ ಭೂ ಸಹಿತ ಶ್ರೀನಿವಾಸ ದೇವರುಗಳ ವಿಗ್ರಹಗಳನ್ನೂ, ಆ ವಿಗ್ರಹಕ್ಕೆ ಬೆಳ್ಳಿ ಕವಚವನ್ನೂ ನಿರ್ಮಾಣ ಮಾಡಿದ್ದಾರೆ. ಈ ವಿಗ್ರಹಗಳು ಶ್ರೀ ಅರ್ಚಕ ರಾಘವೇಂದ್ರಾಚಾರ್ಯರ ಮನೆಯಲ್ಲಿವೆ.
ಜೊತೆಯಲ್ಲಿ ದೇವರ ಪೆಟ್ಟಿಗೆ, ಬಾಳೆಕಂಭ, ತೋರಣ ಶಿಲಾ ನಾಮ ಪಲಕಗಳು, ಶಿಲಾ ನಾಗಗಳು ( ಕಲ್ಲಿನ ನಾಗಪ್ಪ ) ಮುಂತಾದವುಗಳನ್ನು ತಯಾರು ಮಾಡುತ್ತಿದ್ದರು. ಹಾಗೆಯೆ ಚಿತ್ರ ಕಲೆಯೂ ಶ್ರೀ ಆಚಾರ್ಯರಿಗೆ ಕರಗತವಾಗಿತ್ತು.
" ಶ್ರೀ ಶ್ಯಾಮಾಸುಂದರ ದಾಸಾರ್ಯರ ಸಂಪರ್ಕ "
ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಮಾತಲ್ಲಿ....
ಸುಮಾರು ಶ್ರೀ ಆಚಾರ್ಯರಿಗೆ ೧೯ ವರ್ಷ ವಯಸ್ಸು. ನನ್ನ ( ಶ್ರೀ ಆಚಾರ್ಯರು ) ದೊಡ್ಡಪ್ಪನವರಾದ ಶ್ರೀ ಮಾನವಿ ಗುಂಡಾಚಾರ್ಯರ ಸಹವಾಸದಲ್ಲಿ ಪ್ರತಿ ವರ್ಷ ಸುಗ್ಗಿಗೆ ಕುರುಡಿಯಲ್ಲಿ ಕೂಡಿ ಇರುವ ಸನ್ನಿವೇಶವು. ನಮ್ಮ ಕಕ್ಕ ಪೂಜ್ಯ ಶ್ರೀ ಕೃಷ್ಣಾಚಾರ್ಯ ಜೋಷಿ ಇವರಲ್ಲಿ ಇರುವ ಸನ್ನಿವೇಶವು ದೇವರ ದಯೆಯಿಂದ ಒದಗುತ್ತಿತ್ತು.
ಒಂದುಸಲ ಶ್ರೀ ಶ್ಯಾಮಸುಂದರದಾಸರ ಅಪೇಕ್ಷೆ ಮೇರೆಗೆ ನಮ್ಮ ಕಕ್ಕ ಶ್ರೀ ಕೃಷ್ಣಾಚಾರ್ಯರು ಶ್ರೀ ಶ್ಯಾಮಸುಂದರ ದಾಸರ ಜೊತೆಯಲ್ಲಿ ನನ್ನನ್ನು ಬಲ್ಲಟಗಿಗೆ ಕಳುಹಿಸಿಕೊಟ್ಟರು.
ಮಾರ್ಗ ಮಧ್ಯದಲ್ಲಿ ಮಾನವಿ ಮುನಿಪುಂಗವರಾದ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ದರ್ಶನ ಮಾಡಿಸಿ ಬಲ್ಲಟಗಿಗೆ ಕರೆದೊಯ್ದರು. ಅಲ್ಲಿ ಅವರ ಮನೆಯಲ್ಲಿದ್ದ " ಶ್ರೀ ಹರಿಕಥಾಮೃತಸಾರ " ಪುಸ್ತಕ ನೋಡುವ ಕಾಲದಲ್ಲಿ ನನ್ನನ್ನು ಕರೆದು " ಫಲಶ್ರುತಿ ಪದ್ಯ " ವನ್ನು ತೋರಿಸಿ ನೀನು ಪ್ರತಿದಿನ " ಮಂಗಳಾಚರಣ ಸಂಧಿ, ಕಕ್ಷಾ ತಾರತಮ್ಯ ಸಂಧಿ " ಗಳನ್ನೂ ಭಕ್ತಿಯಿಂದ ಪಾರಾಯಣ ಮಾಡು. ಅದರಿಂದ ನಿನಗೆ ಉಂಟಾಗುವ ಫಲ ಈಗ ತಿಳಿಸಲಾರೆ. ನಿನ್ನ ಸ್ವಾನುಭವಕ್ಕೆ ಬರುತ್ತದೆಂದು ತಿಳಿಸಿದರು. ಅದರಂತೆ ನಾನು ಪ್ರತಿದಿನ " ಶ್ರೀ ಹರಿಕಥಾಮೃತಸಾರ " ಪಾರಾಯಣ ಮಾಡುತ್ತಿದೆ.
" ಶ್ರೀ ಗಣಧಾಳ ಪಂಚಮುಖಿ ಪ್ರಾಣದೇವರ ಪರಮಾನುಗ್ರಹ "
ಒಂದುಸಲ ಗಣಧಾಳದಲ್ಲಿ ನನ್ನ ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ) ಸೋದರ ಮಾವಂದಿರೂ, ಶ್ರೀ ಪಂಚಮುಖಿ ಪ್ರಾಣದೇವರ ಅರ್ಚಕರೂ ಆದ ಶ್ರೀ ಶ್ಯಾಮಾಚಾರ್ಯರ ಮನೆಯಲ್ಲಿ ನಾನು ದೇವರ ನಾಮಗಳನ್ನು ಹಾಡಿದೆ.
ಆಗ ನನ್ನ ಕೊನೆಯ ತಮ್ಮನಾದ ಚಿ ।। ಪ್ರಹ್ಲಾದನು....
ಅಣ್ಣಾ! ನೀನೇ ಹಾಡುಗಳನ್ನು ರಚನೆ ಮಾಡಿ ಹಾಡಬಹುದು. ರಚನೆ ಮಾಡು ಎಂದು ಹೇಳಿದ!
ನನ್ನ ಅಲ್ಪಮತಿಗೆ ಶಾಸ್ತ್ರಾಧ್ಯಯನ ಮಾಡದ ನನಗೆ ಸಾಧ್ಯವೇ ಎಂದಾಗ, ಪ್ರಯತ್ನ ಮಾಡು ಎಂದು ತಿಳಿಸಿದ.
ಶ್ರೀ ಕ್ಷೇತ್ರ ಗಣಧಾಳ ಪಂಚಮುಖಿ ಪ್ರಾಣದೇವರ ಸನ್ನಿಧಾನದಲ್ಲೇ ಇಷ್ಟ ದೈವವಾದ " ಶ್ರೀ ಲಕ್ಷ್ಮೀಪತಿ ಮ್ಯಾಲೆ ಪ್ರಪ್ರಥಮ ಕೃತಿ ರಚನೆ ಮಾಡಿದೆ. ಶ್ರೀ ಪ್ರಾಣದೇವರಿಂದ " ಲಕುಮೀಶ " ಎಂಬ ಅಂಕಿತದಿಂದ ಸ್ಫೂರಣಗೊಂಡು ರಚಿತವಾದ ಆ ಕೃತಿ ಹೀಗಿದೆ........
ರಾಗ : ರಾಗಮಾಲಿಕ ತಾಳ : ಆದಿ
ಶ್ರೀ ಲಕುಮಿಯರಸನೇ ಪಾಲಿಸೋ ಹರಿಯೇ ।। ಪಲ್ಲವಿ ।।
ನೀಲಮೇಘ ಶ್ಯಾಮಲದೆಲೆಯ ।
ಮೇಲೆ ಮಲಗಿದ ಕೃಷ್ಣನೇ ।। ಅ ಪ ।।
ತರುಳ ಪ್ರಹ್ಲಾದನ ಮೊರೆಯ ಕೇಳಿ ನೀನು ।
ದುರುಳ ರಕ್ಕಸನ ಕರುಳ ಸೀಳಿ ।
ಪರಿಪರಿ ನುತಿಸಿದ ವರ ಬಾಲಕನ ।
ಕರವ ಪಿಡಿದು ಕಾಯ್ದ ನರಹರಿ ರೂಪನೇ ।। ಚರಣ ।।
ಕರಿಯರಸನು ಸರೋವರದಿ ನಕ್ರಗೆ ಸಿಕ್ಕಿ ।
ಭರಿತ ಭಕ್ತಿಯೊಳು ಹರಿಯ ಕೂಗಲು ।
ಕರದ ಧ್ವನಿ ಕೇಳಿ ಭರದಿ ಗರುಡನೇರಿ ।
ತ್ವರಿತದಿ ಓಡಿ ಬಂದು ಶರಣನ ಕಾಯ್ದವ ಪಾಲಿಸೋ ಎನ್ನ ।। ಚರಣ ।।
ದುರುಳ ದುಶ್ಶಾಸನ ತರುಣಿ ದ್ರೌಪದಿಯ ।
ಶರಗ ಪಿಡಿದು ಮತ್ತೆ ಹರುಷದಿ ಬಾಧಿಸಲು ಮರಿಯದೆ ।
ಹರಿ ನಿನ್ನ ಚರಣವ ಸ್ತುತಿಸಲು ಕರುಣದಿ ಅಕ್ಷಯಂ ।
ಬರವಿತ್ತ ಕೃಷ್ಣನೇ ಪಾಲಿಸೋ ಹರಿಯೇ ।। ಚರಣ ।।
ಹಸು ಮಗು ಧ್ರುವನು ನಿಶಿ ಹಗಲೆನ್ನದೆ ।
ಬಿಸಜನಾಭ ನಿನ್ನ ಭಜಿಸುತಿರೆ ।
ಕುಸುಮ ಶರನ ಪಿತ ಶಿಶುವಿಗೆ ಒಲಿಯುತ ।
ಎಸೆವ ಪದವನಿತ್ತ ಅಸುರಾರಿ ಪಾಲಿಸೋ ಎನ್ನ ।। ಚರಣ ।।
ಮಡದಿಯ ಮಾತಿಗೆ ಬಡುವ ಕುಚೇಲನು ।
ಹಿಡಿ ಅವಲಕ್ಕಿಯ ಕೊಡಲು ನಿನಗೆ ಹರಿಯೇ ।
ಒಡೆಯನೆ ತಡೆಯದೆ ದೃಢತರ ಶಿರಕೊಟ್ಟ ।
ಕಡು ಕೃಪಾನಿಧಿ ಶ್ರೀ ಲಕುಮೀಶ ದೇವಾ ಪಾಲಿಸೋ ದೇವಾ ।। ಚರಣ ।।
ಶ್ರೀ ಲಕುಮೀಶ ದಾಸರು ರಚಿಸಿದ ಕೃತಿಗಳು ವಸ್ತುವಿನ ದೃಷ್ಟಿಯಿಂದ ವೈವಿಧ್ಯಮಯವಾಗಿವೆ.
ಸಂಪ್ರದಾಯದಂತೆ ದಾಸ ಕಕ್ಷೆ, ಯತಿ ಕಕ್ಷೆ, ದೇವತಾ ಕಕ್ಷೆ, ಕ್ಷೇತ್ರ ಮಹಿಮೆ, ಪ್ರಾರ್ಥನಾ ಪರವಾದ ಪದ್ಯಗಳನ್ನಲ್ಲದೆ ಇತರ ಪದ್ಯಗಳನ್ನೂ ರಚಿಸಿದ್ದಾರೆ.
ಮಾನವನಿಗೆ ಬಂದೊದಗುವ ಮೂಲವ್ಯಾಧಿ - ಜ್ವರ - ತಲೆಭಾರ ಮೊದಲಾದ ರೋಗಗಳ ಬಗ್ಗೆ ಹೇಳಹೇಳುತ್ತಾ ಪ್ರತಿಮೆಗಳನ್ನು ಸೃಷ್ಟಿಸಿ ಬಿಡುತ್ತಾರೆ.
ಒಳ್ಳೆಯ ಭಾವ ಸೌಷ್ಠವ, ಸಂಸ್ಕೃತ ಕನ್ನಡ ಮಿಶ್ರಿತ ಶೈಲಿ ಇವರದ್ದು.
ಇವರ ರಚನೆಗಳು ಶ್ರೀ ಶ್ಯಾಮಸುಂದರದಾಸರ ಶೈಲಿಯನ್ನೇ ಹೆಚ್ಚು ಹೆಚ್ಚಾಗಿ ಹೋಲುತ್ತದೆ.
ಶ್ರೀ ಜಗನ್ನಾಥದಾಸರ " ಹರಿಕಾಥಾಮೃತಸಾರ " ಗ್ರಂಥದ ಪಠಣವನ್ನೂ, ಗಮಕ ಕಲೆಯನ್ನೂ " ಶ್ರೀ ಲಕುಮೀಶದಾಸರು ಶ್ರೀ ಶ್ಯಾಮಸುಂದರ ದಾಸರಿಂದಲೇ ಅರಿತವರು.
" ಕೃತಿಗಳು "
ಶ್ರೀ ಲಕುಮೀಶ ಕಾವ್ಯದಲ್ಲಿ ಅರ್ಥಾನುಗುಣವಾದ ಪ್ರಾಸದ ಕಿಂಕಿಣಿ ನಾದವು ಹಿತಮಿತವಾಗಿ ಕಂಡು ಬರುತ್ತವೆ. ಕಥಾ ವಸ್ತು ಹಳೇದಾದರೂ ಕವಿ ಪ್ರಜ್ಞೆಯು ಕಲ್ಪನೆಯ ವೈಚಿತ್ರ್ಯದಿಂದ ಹೊಸತನವನ್ನು ಸಾಧಿಸಿ ತೋರಿಸಿದೆ.
ಈ ಪುರಾಣ ಕಥೆಗಳ ಕಲ್ಪನಾ ಕುಶಾಲವಾದ ಕವಿ ಪ್ರತಿಭೆಯು ಸ್ವಂತಿಕೆಯ ಧೀಮಂತಿಕೆಯಿಂದ ತನ್ನ ತನವನ್ನು ಮೆರೆದಿದೆ.
ಕುಮಾರವ್ಯಾಸ, ಲಕ್ಷ್ಮೀಶರ ಶೈಲಿಯ ಬಿಣ್ಪು, ಕಾವ್ಯದ ಕೆಚ್ಚು ಎರಡೂ ಇವರ ಶಬ್ದ ಶೈಲಿಯಲ್ಲಿ ಜೀವನಾಡಿಗಳಾಗಿ ಮೂಡಿ ಮಿಂಚಿವೆ. ಇವರ ಶೈಲಿಯ ಶ್ರೀಮಂತಿಕೆಯನ್ನು ಅವರ ಕೃತಿಗಳಲ್ಲಿ ಕಾಣಬಹುದು.
ಶ್ರೀ ಲಕುಮೀಶದಾಸರು ತಿಳಿಸಿದಂತೆ ತಮ್ಮ ತಂದೆಯಿಂದ ವೃತ್ತ - ಛಂದೋ ಬಂಧಗಳ ಬಗೆಗೆ ಕಲಿತವರು.
" ಸ್ತೋತ್ರ ಪದಗಳು "
೧. ಶ್ರೀ ಶ್ಯಾಮಸುಂದರದಾಸರ - ೨
೨. ಶ್ರೀ ಕೌತಾಳ ರಂಗಯ್ಯನವರ - ೩
೩. ಶ್ರೀ ಶೇಷದಾಸರ - ೧
೪. ಶ್ರೀ ಜಗನ್ನಾಥದಾಸರ - ೫
೫. ಶ್ರೀ ಮೋಹನದಾಸರ - ೧
೬. ಶ್ರೀ ಗೋಪಾಲದಾಸರ - ೧
೭. ಶ್ರೀ ಪ್ರಸನ್ನ ವೆಂಕಟದಾಸರ - ೧
೮. ಶ್ರೀ ವಿಜಯರಾಯರ - ೩
೯. ಶ್ರೀ ಮಹಿಪತಿದಾಸರು - ೧
೯ ಶ್ರೀ ಪುರಂದರದಾಸರ - ೨
೧೦. ಶ್ರೀ ರಘುಪ್ರೇಮತೀರ್ಥರು - ೧
೧೧. ಶ್ರೀ ರಾಯರ ಮಠದ ಯತಿ ಪರಂಪರೆ
೧೨. ಹರಿದಾಸ ಪರಂಪರೆ ( ಸುಮಾರು ೪೦ ದಾಸರ ಸ್ತೋತ್ರ ಪದಗಳು )
೧೩. ದೇವತಾ ತಾರತಮ್ಯ ಸ್ತೋತ್ರ ಪದಗಳು
ಶ್ರೀ ಲಕುಮೀಶದಾಸರ ಪದ - ಪದ್ಯಗಳಲ್ಲಿ ರಸವು ಮಡುವುಗಟ್ಟಿದೆ. ಭಕ್ತಿಯು ಕೋಡಿಗಟ್ಟಿ ಹರಿದಿದೆ. ತಿಳಿಯಾದ ಭಾಷೆ, ನಯವಾದ ಭಾವ, ಸವಿಯಾದ ಬಂಧದಿಂದ ಚಂದ ಚಲುವನಾಂತು ಶ್ರೀ ಲಕುಮೀಶದಾಸರ ಪದ ಪದ್ಯಗಳು ಚೇತೋಹಾರಿಯಾಗಿವೆ. ಉದಾಹರಣೆಗೆ ಶ್ರೀ ಲಕುಮೀಶದಾಸರ ಕೃತ ಶ್ರೀ ವಾಯುದೇವರ ಅವತಾರ ಸ್ತೋತ್ರ.....
ರಾಗ : ಶಂಕರಾಭರಣ ತಾಳ : ಆದಿ
ರಥವನೇರಿ ತಾ ಬಂದ ಆನಂದದಿಂದ ।। ಪಲ್ಲವಿ ।।
ಕ್ಷಿತಿಯೊಳು ಭಕುತರ ವ್ಯಥೆ ತತಿ ಕಳಿಯುತ ।
ಕ್ಷಿತಿಸುತೆ ಪತಿ ಧ್ಯಾನ ಸುಜನಕೆ ನೀಡುತ ।। ಅ ಪ ।।
ಬಾಲ ಪಂಚಾನನ ಕಾಳಿ ವದನಾಬ್ಜ ಇನ ।
ಖೂಳ ದೈತ್ಯನ ಪುರ ಬಾಲದಿ ಸುಟ್ಟಿದ ।
ಕೆಳಗೆ ಮಗನಿಗೆ ಶಿಲದಿ ನಿರ್ಮಿಸೆ ನಾ ।
ಪೇಳಿ ಸ್ವಪ್ನದಿ ನಮ್ಮ ಧಾಮದಿ ನಿಂತವನೇ ।। ಚರಣ ।।
ಬಂಡಿ ಅನ್ನವನುಂಡ ಬಕನ ಪ್ರಾಣವಗೊಂಡ ।
ಹಿಂಡು ದೈತ್ಯರ ಗಂಡ ಕೀಚಕನ್ಹಿಂಡ ಮುಂಡ ।
ಚಂಡ ತೇಜದಿ ಸತಿಗೆ ತೋರಿಸಿ ತಾ ಕಂಡ ।
ಭಂಡ ಕುರುಪರನೆಲ್ಲ ರುಂಡ ಮುರಿದುದ್ಧ೦ಡ ।। ಚರಣ ।।
ಪಾಜಕದಲಿ ಪುಟ್ಟಿ ಕುಜನ ಮತಗಳ ಮೆಟ್ಟಿ ।
ತೇಜ ನಿತ್ಯದ ಗ್ರಂಥ ರಾಜಗಳ್ಪರದೊಟ್ಟಿ ।
ಮೋಜಿಲಿ ಲಕುಮೀಶನ ಸ್ಥಾಪಿಸಿ ಉಡುಪಿಲಿಟ್ಟಿ ।
ಮಾಜದೆ ಭಕುತರ ಪೊರೆವ ಶ್ರೀ ಮಧ್ವ ದಿಟ್ಟ ।। ಚರಣ ।।
" ಉಪಸಂಹಾರ "
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ " ಕುರುಡಿ " ಗ್ರಾಮವು ಶ್ರೀ ಲಕುಮೀಶ ದಾಸರ ಜನ್ಮಸ್ಥಳ. ಇವರು ಶ್ರೀ ಶ್ಯಾಮಸುಂದರದಾಸರ - ಮಾನವಿ ಮುನಿಪುಂಗವರಾದ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಮತ್ತು ಶ್ರೀ ಪ್ರಹ್ಲಾದಾಂಶ ಶ್ರೀ ರಾಘವೇಂದ್ರತೀರ್ಥರ ಅಂತರಂಗ ಭಕ್ತರೂ ಹಾಗೂ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾದವರು.
ಶ್ರೀ ಲಕುಮೀಶ ದಾಸರ ಕೃತಿಗಳು ಭಕ್ತಿಭಾವದಿಂದ ತುಂಬಿ ತುಳುಕುತ್ತಿರುವ ಇವರ ರಚನಾ ಶೈಲಿ ಗುರುಗಳಾದ ಶ್ರೀ ಶ್ರೀ ಶ್ಯಾಮಸುಂದರ ದಾಸರ ಶೈಲಿಗೆ ತಕ್ಕಂತೆ ಸುಂದರವಾದ ಪದ ಸಮುಚ್ಛಯಗಳಿಂದ ಕೂಡಿ ಅರ್ಥಗರ್ಭಿತವಾಗಿವೆ.
ಶ್ಲೇಷಾರ್ಥಗಳನ್ನು ಒಳಗೊಂಡ ಅನೇಕ ಪದ ಪ್ರಯೋಗಗಳಿಂದ ಕೂಡಿದ ಇವರ ಪದಗಳನ್ನು ಅರ್ಥಾನುವಾದ ಮಾಡಲು ಶಾಸ್ತ್ರ ಮತ್ತು ಪುರಾಣ ಜ್ಞಾನವು ಅತ್ಯವಶ್ಯಕವಾಗಿದೆ.
ಪೂರ್ಣವಾದ ಹರಿದಾಸ ಸಾಹಿತ್ಯದ ಭಾಂಡಾಗಾರವನ್ನು ತಮ್ಮ ಕೃತಿ ರತ್ನಗಳಿಂದ ಪೂರ್ಣ ಮಾಡಿದ ಮಹನೀಯರು. ನಿಗೂಢವಾದ ಸಾಧನೆಯನ್ನು ಮಾಡಿ ಕಾರಣ ಜನ್ಮರಾದ ಶ್ರೀ ಲಕುಮೀಶದಾಸರು ವ್ಯಯ ನಾಮ ಸಂವತ್ಸರದ ಕಾರ್ತೀಕ ಬಹುಳ ದ್ವಾದಶೀ ( 17.11.2006 ) ವೈಕುಂಠಕ್ಕೆ ತೆರಳಿದರು.
ಲಕುಮೀಶ ದಾಸರ ನೋಡಿರೋ ।
ಲಕುಮೀಧವನ ಅಂಕಿತ ಪೊತ್ತವನಾ ।। ಪಲ್ಲವಿ ।।
ನರಸಮ್ಮ ಬಂಡಾರ್ಯರ ಪ್ರೀತಿಯ ಸುತನ ।
ನರಹರಿ ಪ್ರಿಯ ರಾಯರ ಕಾರುಣ್ಯ ಪಾತ್ರನಾ ।। ಚರಣ ।।
ಶೌರಿ ಕಥಾಮೃತವನು ಮುದದಿ ।
ಧೀರ ಶ್ಯಾಮಸುಂದರರಿಂದ ತಿಳಿದ ।। ಚರಣ ।।
ವ್ಯಯ ನಾಮ ವತ್ಸರ ಕಾರ್ತೀಕ ವದ್ಯ ದ್ವಾದಶೀಯಂದು ।
ವಯನಗಮ್ಯ ಶ್ರೀ ಹರಿ ಪುರಕೆ ನಡೆದ ಧೀಮಂತ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ....
-ಗುರು ವಿಜಯ ಪ್ರತಿಷ್ಠಾನ - ನಾಗರಾಜ ಹಾವೇರಿ
*******
Shri gurubyO namaha, hari Om...
Karthika bahuLa dwAdashi is the puNya dina of shri lakumIsha dAsaru. His original name was shri kuruDi rAghavEndra Acharya purohit.
He has composed several dEvaranAmAs on shri raghuprEma tIrtharu...
Shri krishNArpaNamastu.
20 ನೆಯ ಶತಮಾನದವರು, ಮಹಾನ್ ಜ್ಞಾನಿಗಳು ಆದ ಶ್ರೀ ಶ್ಯಾಮಸುಂದರ ದಾಸಾರ್ಯರ ಪರಮ ಪ್ರೀತಿಪಾತ್ರರಾದವರು, ಶ್ರೀ ಗಾಣಧಾಳ ಪಂಚಮುಖಿ ಪ್ರಾಣದೇವರ ಅನುಗ್ರಹಪಾತ್ರರೂ, 700 ಕ್ಕಿಂತ ಹೆಚ್ಚು ಕೃತಿಗಳು ರಚನೆ ಮಾಡಿದವರು, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿಗಳಲ್ಲಿ ನೈಪುಣ್ಯತೆ ಇದ್ದವರು,ಜ್ಞಾನ ಭಂಡಾರವಾದರೂ ಸೌಮ್ಯ ವ್ಯಕ್ತಿತ್ವ ಉಳ್ಳವರು ಆದ ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಅರ್ಥಾತ್ ಶ್ರೀ ಲಕುಮೀಶ ದಾಸರ ಆರಾಧನೆಯೂ ಇಂದು.
****
" ಶ್ರೀ ಲಕುಮೀಶ - 1 "
" ದಿನಾಂಕ : 12.12..2020 - ಕಾರ್ತೀಕ ಬಹುಳ ದ್ವಾದಶೀ ಶನಿವಾರ - ಶ್ರೀ ಲಕುಮೀಶ ದಾಸರ ಆರಾಧನಾ ಮಹೋತ್ಸವ - ಶ್ರೀ ಕ್ಷೇತ್ರ ಮಂತ್ರಾಲಯ "
" ನಮ್ಮ ಗುರುಗಳೂ - ಶ್ರೀ ಶ್ಯಾಮಸುಂದರ ದಾಸರ - ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ಲಕುಮೀಶಾಂಕಿತ ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಪುರೋಹಿತ್ "
" ಪ್ರಸ್ತಾವನೆ "
" ತತ್ತ್ವಜ್ಞಾನ್ ಮುಕ್ತಿಭಾಜ: "
ಕೇವಲ ನೈಜ ತತ್ತ್ವಜ್ಞಾನಾನುಸಂಧಾನದಿಂದ ಮೋಕ್ಷಾದಿ ಫಲ ಪುರುಷಾರ್ಥ ಸಿದ್ಧಿಯೇ ಹೊರತು - ಬರೀ ಭಾಷಾ ಜ್ಞಾನ ಒಂದರಿಂದ ಗುರಿ ಸಾಧಿಸಲಸಾಧ್ಯವಾದಗ - ಶ್ರೀಮದಾನಂದತೀರ್ಥ ಭಗವತ್ಪಾದರು ತಿಳಿಸಿದ ನೈಜ ತತ್ತ್ವಜ್ಞಾನ ಒಂದೇ ಮೋಕ್ಷ ಎಂದಿರುವಾಗ...
ಒಂದು ವ್ಯಾಸ ಸಾಹಿತ್ಯವಾದ ಸಂಸ್ಕೃತ - ಮತ್ತೊಂದು ದಾಸ ಸಾಹಿತ್ಯವಾದ ನಾಡ ಭಾಷೆಯಲ್ಲಿ ಒಂದೇ ತತ್ತ್ವವನ್ನು ಹೋಲುವ - ವೇದೋಕ್ತವಾದ ಗುರುಗಳ ಸಿದ್ಧಾಂತ ಎರಡು ವಿಧವಾಗಿ ನಮಗೆ ದೊರಕಿದ್ದು - ಈ ಕಲಿಯುಗದಲ್ಲಿ ವೇದಾಧ್ಯಯನ - ಯಾಗಗಳು - ದೇವತಾರಾಧನೆ - ಗುರುಕುಲ ವಾಸ - ಜಪ ತಪಾದಿ ಸೌಲಭ್ಯಗಳಿಲ್ಲದ ಈ ಘೋರ ಕಾಲದಲ್ಲಿ ನಮಗಿರುವ " ಕುರುಡನ ಊರುಗೋಲೆಂದರೆ "...
ನಮ್ಮ ಮಾತೃ ಭಾಷೆಯಲ್ಲಿ ಮೋಕ್ಷಪ್ರದವಾದ ನೈಜ ತತ್ತ್ವಾದಿಗಳನ್ನು ಅರಿತವರಿಂದ ತಿಳಿದು - ನಮ್ಮ ಯೋಗ್ಯತಾನುಸಾರ ಔಪಾಸನಾದಿಗಳನ್ನು ಮಾಡಿಕೊಂಡು ಉದ್ಧಾರವಾಗಬೇಕಾದಂತೆ -
ಶ್ರೀ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರು...
ಧ್ಯಾನವು ಕೃತ ಯುಗದಲ್ಲಿ ।
ಯಜನ ಯಜ್ಞವು
ತ್ರೇತಾ ಯುಗದಲ್ಲಿ ।
ದಾನವಾಂತಕನ
ದೇವತಾರ್ಚನೆಯು
ದ್ವಾಪರದಲ್ಲಿ ।
ಈ ಕಲಿಯುಗದಲ್ಲಿ
ಗಾಯನದಲಿ ಕೇಶವಾ-
ಯೆಂದೊಡೆ
ಕೈಗೊಟ್ಟು ಸಲಹುವ
ನಮ್ಮ ರಂಗವಿಠಲ ।।
" ಶ್ರೀ ಲಕುಮೀಶರ ಸಂಕ್ಷಿಪ್ತ ಮಾಹಿತಿ "
ಹೆಸರು :
ಶ್ರೀ ಕುರುಡಿ ರಾಘವೇಂದ್ರಾಚಾರ್ಯರು
ತಂದೆ :
ಶ್ರೀ ಕುರುಡಿ ಬಂಡ್ಯಾಚಾರ್ಯರು
ತಾಯಿ :
ಸಾಧ್ವೀ ನರಸಮ್ಮ
ಜನನ :
ಕ್ರಿ ಶ 1928
ಗೋತ್ರ :
ಗೌತಮ
ದೊಡ್ಡಪ್ಪ :
ಶ್ರೀ ಶ್ಯಾಮಸುಂದರ ದಾಸರು
ಪರಮಪೂಜ್ಯ ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಪುರೋಹಿತ್ ಅವರು....
ಚಿತ್ರಕಲೆ - ಶಿಲ್ಪಕಲೆ - ಸರಳತೆ - ಸಜ್ಜನಿಕೆ - ಸೌಜನ್ಯತೆ - ಸಹೃದಯತೆ ತುಂಬಿದ ಶ್ರೇಷ್ಠ ವ್ಯಕ್ತಿತ್ವದ ಪೂತಾತ್ಮರು.
ಪರಮಪೂಜ್ಯ ಶ್ರೀ ಆಚಾರ್ಯರನ್ನು - ಶ್ರೀ ಸೂರ್ಯದೇವರ ರಥ ಸಾರಥಿಯಾದ ಶ್ರೀ ಅರುಣದೇವನ ಅವತಾರವೆಂದು ಬಲ್ಲ ಜ್ಞಾನಿಗಳು ಹೇಳುತ್ತಾರೆ - ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ - ಸಂಶೋಧನೆ ಅಗತ್ಯವಿದೆ.
ಪರಮಪೂಜ್ಯ ಶ್ರೀ ಆಚಾರ್ಯರು ಉಪನಯನ ನಂತರ ಶ್ರೀ ರಾಯರ ಮಠದ ಪೀಠಾಧಿಪತಿಗಳಾದ ಪ್ರಾತಃ ಸ್ಮರಾಮಿ ಪರಮಪೂಜ್ಯ ಶ್ರೀ ಸುಯಮೀ೦ದ್ರತೀರ್ಥರಿಂದ ಉಪದೇಶ ಪಡೆದ ಮಹನೀಯರು.
ವಿದ್ಯಾ ಗುರುಗಳು :
ಶ್ರೀ ಗುಂಜಳ್ಳಿ ವಾದೀಂದ್ರಾಚಾರ್ಯರು
ಪರಮಪೂಜ್ಯ ಶ್ರೀ ಆಚಾರ್ಯರು ಶ್ರೀ ಹರಿದಾಸ ಸಾಹಿತ್ಯದಲ್ಲಿ ಬಹಳ ಆಸಕ್ತಿ - ಭಕ್ತಿ - ಶ್ರದ್ಧೆಗಳಿದ್ದು - " ಶ್ರೀ ಹರಿಕಥಾಮೃತಸಾರ " ಯಿವರ ಉಸಿರಾಗಿದ್ದು - ಇವರ ದೊಡ್ಡಪ್ಪಂದಿರಾದ ಶ್ರೀ ಶ್ಯಾಮಸುಂದರಲ್ಲಿ ಭಕ್ತಿ - ಅಚಲ ವಿಶ್ವಾಸಗಳಿದ್ದು - ಇವರ ಸಮಕ್ಷಮದಲ್ಲಿ ಸಾಹಿತ್ಯ ರಚನೆ ಪ್ರಾರಂಭವಾಗಿ - ರಾಘಣ್ಣ ಮುಂದೆ ಕವಿಯಾಗುವನೆಂದು ತಿಳಿದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
ಅಂಕಿತ :
ಶ್ರೀ ಕ್ಷೇತ್ರ ಗಾಣಧಾಳ ಶ್ರೀ ಪಂಚಮುಖಿ ಪ್ರಾಣದೇವರ ವರ ಪ್ರಸಾದಾಂಕಿತ " ಲಕುಮೀಶ "
ಉಪದೇಶ ಗುರುಗಳು :
ಶ್ರೀ ಪಂಚಮುಖಿ ಪ್ರಾಣದೇವರಿಂದ ಪ್ರದಾನವಾದ " ಲಕುಮೀಶ " ಅಂಕಿತದಲ್ಲಿ ಕೃತಿಗಳನ್ನು ರಚಿಸಿ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಪ್ರೀತಿಯ ಕಂದ ಶ್ರೀ ಶ್ಯಾಮಸುಂದರದಾಸರಿಗೆ ತೋರಿಸಿದಾಗ ಶ್ರೀ ದಾಸಾರ್ಯರು ಬಹಳ ಸಂತೋಷ ಪಟ್ಟು ಶ್ರೀ ಮುಖ್ಯಪ್ರಾಣದೇವರ ವರ ಪ್ರಸಾದಾಂಕಿತ ಅತ್ಯಂತ ಶ್ರೇಷ್ಠವಾಗಿದೆ.
ಇದೆ ಅಂಕಿತದಲ್ಲಿ ಕೃತಿಗಳನ್ನು ರಚಿಸು ಎಂದು ಆಜ್ಞಾಪಿಸಿದರು.
ಅಂದಿನಿಂದ ಪರಮಪೂಜ್ಯ ಶ್ರೀ ಆಚಾರ್ಯರು " ಲಕುಮೀಶ " ಅಂಕಿತದಲ್ಲಿ ಸುಮಾರು 700 ಪದ ಪದ್ಯಗಳನ್ನು ರಚಿಸಿ ಶ್ರೀ ಹರಿ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಕೊಟ್ಟ ಮಹಾನುಭಾವರು!!
ಇವರ ಕೃತಿಗಳೆಲ್ಲವೂ ಪ್ರಮೇಯಭರಿತವೂ, ರಸಪೂರಿತವೂ ಆಗಿವೆ!!
ಬಾಲ ಭಾಷೆಯಲ್ಲಿ - ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ಗುರುಗಳ ಸ್ತೋತ್ರ ....
ಮಂತ್ರ ಸಿದ್ಧಿ ಕ್ಷೇತ್ರ
ಮಂತ್ರಾಲಯದಿ ಜನಿಸಿ ।
ಮಂತ್ರಾಲಯ ಪುರಾಧೀಶ್ವರ -
ಪೆಸರಿಂದ ಶೋಭಿಪ ।
ಮಂತ್ರವೇದ್ಯ ಲಕುಮೀಶಾಂ-
ಕಿತದಿ ಪದಗಳ ರಚಿಸಿ ।
ಮಂತ್ರಜ್ಞ ವೇಂಕಟನಾಥನ
ಕುಣಿಸಿದ ಧೀರಾ ಲಕುಮೀಶ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಲಕುಮೀಶ - 2 "
ಶ್ರೀ ಲಕುಮೀಶದಾಸರ ಕಾವ್ಯ ವೈಭವ.....
" ಪೂರ್ವ ಜನ್ಮದ ಕರ್ಮವೇ ವ್ಯಾಧಿ ರೂಪದಲ್ಲಿ ಬಾಧಿಸುತ್ತದೆ "
ಶ್ರೀ ಲಕುಮೀಶರು ಒಮ್ಮೆ ಶೀತ ಜ್ವರದಿಂದ ಬಳಲುತ್ತಿದ್ದಾಗ ರಚಿತವಾದ ಪದ್ಯ ಹೀಗಿದೆ....
ರಾಗ : ಶಿವರಂಜನಿ ತಾಳ : ಆದಿ
ಬರಬಾರದೇ ಅಚ್ಯುತ
ಸಿರಿವರ ಧನ್ವಂತ್ರೀ ।
ಬರಬಾರದೇ ಅಚ್ಯುತ
ಇಲ್ಲಿಗೆ ಓಡಿ ।
ಬರಬಾರದೇ ಅಚ್ಯುತ
ಎನ್ನನು ಪೊರೆಯೆ ।। ಪಲ್ಲವಿ ।।
ಕೀರ್ತನೆಯ ಆರಂಭದಲ್ಲಿ ಈ ಸಾಲುಗಳಲ್ಲಿ ಮತ್ತೆ ಮತ್ತೆ ಪುನರಾವರ್ತಿಕವಾಗುವ " ಬರಬಾರದೇ ಅಚ್ಯುತ " ಎನ್ನುವ " ಕರೆ " ಭಕ್ತನ ತೀವ್ರವಾದ ಆರ್ತ ಸ್ವರವನ್ನು ಕೇಳಿಸುತ್ತದೆ.
ಕೀರ್ತನೆಯು ಮುಂದುವರೆದಂತೆ ಲೌಕಿಕದ " ಜ್ವರ ತಾಪದ ಅನುಭವ ಅಲೌಕಿಕ ಮಟ್ಟಕ್ಕೇರುವುದನ್ನು ಜ್ವರ ಬಾಧೆ - ಭವ ಬಾಧೆಗೆ ಪ್ರತಿಮೆಯಾಗುವುದನ್ನು ಗುರುತಿಸುತ್ತೇವೆ.
ಕರಿಕರ ಭವ ಜ್ವರಕೆ
ಥರಥರ ನಡುಗುವೆ ।
ಜ್ವರ ಬಾಧೆಯನು ಬೇಗ
ಪರಿಹರಿಸಲು ಈಗ ।
ಸರ್ವಜ್ಞ ಶಾಸ್ತ್ರದ
ಸ್ಮೃತಿಗೆ ತಲೆ ಭಾರ ।
ಸರ್ವದ ಕಣ್ಣುರಿ
ಸರ್ವದಾ ಬಳಲುವೆ ।
ದುಷ್ಟ ಸಂಗದ ವಾತ
ಕೆಟ್ಟ ಮೈ ಬೇನಿಯು ।
ಅಷ್ಟಿಷ್ಟು ಭವಣೆಯೆ ಬಟ್ಟೆ
ಉಡಲು ಬರದು ।।
ಇಂಥಾ ಜ್ವರಕ್ಕೆ ಶ್ರೀ ಲಕುಮೀಶದಾಸರು ಇಚ್ಛಿಸುವ ಗುಳಿಗೆ, ಔಷಧ ಪಥ್ಯ ಹೀಗಿದೆ...
ಅಂಗಾಂಗದ ರೋಗ-
ವನಂಗಾದಿ ಬಾಧೆಗೆ ।
ರಂಗಾಖ್ಯ ಗುಳಿಗೆ ಸ-
ತ್ಸಂಗ ಪಥ್ಯದಿ ಕೊಡೆ ।।
ಪ್ರಾರಬ್ಧ ಕರ್ಮಗಳೇ ರೋಗಗಳ ರೂಪದಿಂದ ಆವರಿಸುವುದೆಂಬ ನಂಬುಗೆಯನ್ನು ರಂಗನ ಸ್ಮರಣೆಯೇ ಪರಿಹಾರವೆಂಬ ವಿಶ್ವಾಸವನ್ನು ಇಲ್ಲಿ ಕಾಣುತ್ತೇವೆ.
ಇದೇ ಭಾವವನ್ನು ಪೋಲುವ ಕಾಮ, ಕ್ರೋಧ, ಲೋಭ, ಮೋಹಗಳೇ ಬಾಳಿನಲ್ಲಿ ಗೋಳಿನ ರೂಪದ ಉರಿಯಾಗಿ, ಕಾಯದ ಆಲಯದಲ್ಲಿ ತಾಪಗೊಳಿಸುತ್ತದೆ ಎಂಬುವ ಚಿತ್ರಣದಿಂದ ಕೂಡಿದ ಇನ್ನೊಂದು ವಿಚಾರ ಹೀಗಿದೆ...
ಮೂಲವ್ಯಾಧಿ ಮೂಲವ್ಯಾಧಿ ।
ಬಾಳಿನೊಳಗೆ ಅತಿ
ಗೋಳಿನ ಉರಿ ರೂಪಿ ।
ಹೇಳದೆ ಕಾಯದ
ಆಲಯದೊಳು ಸೇರಿ ।
ಧಾಳಿ ಮಾಡುತ ಯಮ-
ಶೂಲಕ್ಕೆ ನೂಕುವ ।
ನೇಮ ನಿಷ್ಠೆಯ ಬಿಟ್ಟು
ಕಾಮಿನಿಯರ ಕಂಡು ।
ಕಾಮಿಪ ದುರ್ಮತಿ
ತಾಮಸ ಕಾಮವೇ ।।
ಹೀಗೆ ಸಾಗುವ ಈ ಪದ " ಮೂಲವ್ಯಾಧಿ " ಯ ಸ್ವರೂಪವನ್ನು ಬಣ್ಣಿಸುತ್ತಾ ಹೋಗುತ್ತದೆ. ಒಂದು ರೋಗವಾದ " ಮೂಲವ್ಯಾಧಿ " ಯ ಅರ್ಥ ವಿಸ್ತಾರ, ಅದು ಒಂದು ಪ್ರತಿಮೆಯಾಗಿ ಇಲ್ಲಿನ ಕಾವ್ಯತ್ವವನ್ನು ತೋರುತ್ತದೆ.
ಮಧ್ವ ತತ್ತ್ವದ ಅನುಷ್ಠಾನದಲ್ಲಿ, ಸಾಧನೆಯಲ್ಲಿ " ಸ್ತ್ರೀಯೂ " ಅರ್ಹಳು ಎಂಬ ಶ್ರೀ ದಾಸಾರ್ಯರ ಕಳಕಳಿಯು ಈ ಪದದಲ್ಲಿ ಅಭಿವ್ಯಕ್ತಗೊಂಡು....
ತಾಳಿದ್ದ ಸ್ತ್ರೀ ಭವದಿ
ತಾಳಿಗ ಗುಣರತ್ನ ।
ಶೀಲೆ ಎಂದೆನಿಸದೆ
ಕೀಳು ಮಾರ್ಗದಿ ನಡೆಯೇ ।।
ಅನುರಾಗದಲಿ ನಿತ್ಯ
ಮನಿಯ ಕಾರ್ಯವ ಮಾಡಿ ।
ಇನಿಯನ ಒಲಿಸಲು
ಮನ ಬರದೆ ಸ್ತ್ರೀ ನಡತೆ ।।
ಸಿರಿ ತುಳಸಿ ಪೂಜಿಸದೆ
ಹರಿವ್ರತ ಚರಿಸದೆ ।
ಪರರ ನೋವಿಗೆ ಬಲು ಹರುಷಿತ
ಪೆಣ್ ಗುಣ ಮೂಲವ್ಯಾಧಿ ।।
ಇಂಥಾ ಮೂಲವ್ಯಾಧಿಯ ನಿರ್ಮೂಲನಕ್ಕೆ ಶ್ರೀ ದಾಸಾರ್ಯರು ಸೂಚಿಸುವುದು.....
ಲಕುಮೀಶನೇ ಜ್ಞಾನ
ಸುಖಪೂರ್ಣನೆಂತೆಂದು ।
ಸಕಲ ವಸ್ಥೆಯಲ್ಲಿ ಭಕುತಿಯಲಿ
ತಿಳಿಯೆ ನಿರ್ ಮೂಲವ್ಯಾಧಿ ।।
ಶ್ರೀ ದಾಸಾರ್ಯರ ಲೋಕಾನುಭವ, ಸಾಮಾನ್ಯ ಮಾನವನ ಬಾಳುವೆಯ ದಿಶೆಯನ್ನು ಕಂಡ ಪರಿ ಹೀಗಿದೆ...
ತಲೆ ಭಾರ ತಲೆ ಭಾರ ।
ಜಲಜಾಕ್ಷ ಪೇಳಿ ಕೊಟ್ಟ
ಚಲುವ ಮಾರ್ಗಗಳ ।
ತಿಳಿಯದೆ ನಾರಾ ಜನ್ಮ
ಕಳಕೊಂಬರ ನೋಡಿ ।।
ಎಲರುಣಿ ಶಯ್ಯನ
ಒಲಿಸಿ ನಲಿಸಿ ತಮ್ಮ ।
ಪೊಳೆವ ಹೃತ್ಕಮಲದಿ
ನಿಲಿಸದವರ ನೋಡಿ ।
ಸುಖಮುನಿ । ಮತ ।
ದಲಿ ಭಕುತಿ ಪೂರ್ವಕವಾಗಿ
ಲಕುಮೀಶನ ಕಂಡು
ಸುಖಿಸದವರ ನೋಡಿ ।।
***
" ಶ್ರೀ ಲಕುಮೀಶ - 3 "
" ಶ್ರೀ ಪ್ರಹ್ಲಾದ - ವ್ಯಾಸ ಮುನಿಯೇ ಗುರು ರಾಘವೇಂದ್ರ "
" ಸುಧಾ ಓದು - ಪದ ಮಾಡು " ಎಂಬಂತೆ ದಾಸ ಸಾಹಿತ್ಯವನ್ನು ಬರೆಯಬೇಕಾದರೆ ಶಾಸ್ತ್ರ ಜ್ಞಾನ ಅತ್ಯವಶ್ಯ ಮತ್ತು ಪುರಾಣ - ಇತಿಹಾಸ ತಿಳಿದವರಿಗೆ ಮಾತ್ರ ದಾಸ ಸಾಹಿತ್ಯ ರಚನೆ ಅತ್ಯಂತ ಸುಲಭ. ಈ ಕೃತಿಯನ್ನು ವ್ಯಾಸ ದಾಸ ಸಾಹಿತ್ಯದ ಹಿನ್ನೆಲೆಯಲ್ಲಿ ವಿವೇಚಿಸೋಣ....
ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು
ಅಂಕಿತ : ಶ್ರೀ ಲಕುಮೀಶ
ರಾಗ : ಹಂಸಾನಂದಿ ತಾಳ : ಆದಿ
ಬಂದು ನೆಲೆಸಿಹ ನೋಡಿ
ಶ್ರೀ ರಾಘವೆಂದ್ರನು ।। ಪಲ್ಲವಿ ।।
ಅಂದು ಭೂಮಿಯ
ಕದ್ದ ದೈತ್ಯನ ।
ಕೊಂದ ವರಹ ಗೋವಿಂದನ
ಛಂದದ । ಕೋರೆ ।
ಯಿಂದ ಜನಿಸಿದ ಸುಂದರ
ತುಂಗಾ ನದಿಯ ತೀರದಿ ।। ಅ ಪ ।।
ಪ್ರಥಮ ಯುಗದೊಳು
ಈತ ಜಾತ ರೂಪ ಕಶ್ಯಪ ।
ಜಾತ ನೆನಿಸಿ ಮೆರೆದಾತ
ಮತಿಗೆಟ್ಟ ಪಿತನ ।
ಅತುಳ ಬಾಧೆಗಳ್ ಗೆದ್ದಾತ
ಕೃತಿ ಪತಿಗೆ ಪ್ರೀತ ।।
ವೀತ ಹೋತ್ರನ
ಪುತ್ರನ ಜನಕನ
ಸತತ ನಲಿಯುತ
ನಗುತ । ಭಜಿ ।
ಸುತ ರತುನ ಸ್ತಂಭದಿ
ಪಿತಗೆ ನರಮೃಗ ।
ತತಿಯ ಪತಿಯನು
ಜಿತದಿ ತೋರುತ ।। ಚರಣ ।।
ಬ್ರಹ್ಮನಯ್ಯ ಸರ್ವೇಶಾ
ಎಂದರುಹಿದಾ । ಭಾವಿ ।
ಬ್ರಹ್ಮದೇವನ ಆವೇಶಾ
ಯಿಂದ ಪುಟ್ಟಿ ಈ ।
ಬ್ರಹ್ಮಾಂಡದೊಳಗೆ
ವ್ಯಾಸರಾಜ
ಯತಿಯ ರವಿಭಾಸ ।।
ಬ್ರಹ್ಮಣ್ಯತೀರ್ಥರ ಕುವರ
ನೆನಿಸುತ ಬ್ರಹ್ಮಜಾ೦ಶಗೆ
ಗುರುವು ಎನಿಸುತ ।
ಬ್ರಹ್ಮ ತಾನೆಂಬ
ಕುಮತಿಗಳ । ಮ ।
ನ ಹಮ್ಮು ಮುರಿಯುತ
ದುಂದುಭಿ ಹೊಡೆಸುತ ।। ಚರಣ ।।
ನಾಗಾದ್ರೀಶನ ದಯದಿ
ತಿಮ್ಮಣ್ಣಭಟ್ಟರ ।
ಮಗನೆನಿಸೀ ಜಗದಿ
ವೇಂಕಟೇಶ ನಾಮದಿ ।
ನಿಗಮಾಗಮಗಳೋದಿ
ವೀಣೆ ಗಾನ । ವಿದ್ಯಾದಿ ।।
ಮಿಗೆ ಪ್ರವೀಣನು ಯೆನಿಸೆ
ಹರುಷದಿ ಸುಗುಣ ನಿಧಿ ।
ಶ್ರೀ ಗುರು ಸುಧೀಂದ್ರರು
ರಾಘವೇಂದ್ರನೆಂದು
ನಾಮ ನೀಡಲು ।
ನಗಧರ ಲಕುಮೀಶ
ನೊಲಿಸುತ ।। ಚರಣ ।।
ಪರಮಪೂಜ್ಯ ಶ್ರೀ ಲಕುಮೀಶದಾಸರು ಮೂರು ನುಡಿಗಳಲ್ಲಿ ಶ್ರೀ ರಾಯರ ಅವತಾರ - ಮಹಿಮೆಗಳನ್ನು ಪದ್ಯ ರೂಪದಲ್ಲಿ ರಚಿಸಿದ್ದು - ಆ ಕೃತಿಯ ಮೂರು ನುಡಿಗಳೂ ಈ ಕೆಳಕಂಡ ಪ್ರಮಾಣಗಳಿಂದ ಶ್ರೀ ಹರಿವಾಯು ಶ್ರೀ ರಾಯರ - ಶ್ರೀ ವಿಜಯರಾಯರ ಪರಮಾನುಗ್ರಹದಿಂದ ಸಪ್ರಮಾಣಗಳಿಂದ ಕೃತಿಯ ಸಾರವನ್ನು ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.
ಪ್ರಮಾಣ :
ರಂಗೋತ್ತುಂಗತರಂಗಮಂಗಲ-
ಕರಶ್ರೀತುಂಗಭದ್ರಾತಟ
ಪ್ರತ್ಯಸ್ಥದ್ವಿಜಪುಂಗವಾಲಯಲಸನ್
ಮಂತ್ರಾಲಯಾಖ್ಯೆ ಪುರೇ ।
ನವ್ಯೋ೦ದ್ರೋಪಲನೀಲಭವ್ಯಕರ
ಸದ್ಬೃಂದಾವನಾ೦ತರ್ಗತ:
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್
ಕುರ್ಯಾಧ್ರುವಂ ಮಂಗಲಮ್ ।।
ಶಂಖುಕರ್ಣಾಖ್ಯ ದೇವಸ್ತು ಬ್ರಹ್ಮ
ಶಾಪಾಶ್ಚ ಭೋತಲೇ ।
ಪ್ರಹ್ಲಾದ ಇತಿ ವಿಖ್ಯಾತೋ
ಭೂಭಾರ ಕ್ಷಪಣೇ ರತಃ ।।
ಸ ಏವ ರಾಘವೇಂದ್ರಾಖ್ಯ ಯತಿ
ರೂಪೇಣ ಸರ್ವದಾ ।
ಕಲೌಯುಗೇ ರಾಮಸೇವಾಂ
ಕುರ್ವನ್ ಮಂತ್ರಾಲಯೇ ಭವೇತ್ ।।
ಪ್ರಹ್ಲಾದೋ ಜನ್ಮ ವೈಷ್ಣವಃ ।
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
ವಾಸುದೇವೇ ಭಗವತಿ
ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ
ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ
ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ
ನಿರ್ವೈರಾಯ ಪ್ರಿಯ ಸುಹೃತ್ತಮಃ ।
ಮಾನಸ್ತಂಭ ವಿವರ್ಜಿತಃ
ಯಥಾ ಭಗವತೀಶ್ವರೇ ।।
ಪ್ರಹ್ಲಾದೋಪಿ ಮಹಾಭಾಗಃ
ಕರ್ಮದೇವ ಸಮಃ ಸ್ಮೃತಃ ।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್
ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ
ಪೃಥುವ್ಯಾಂ ಖಗಸತ್ತಮಃ ।।
ದೇವಾಃ ಶಾಪ ಬಲದೇವ
ಪ್ರಹ್ಲಾದಾದಿತ್ವಮಾಗತಾಃ ।
ದೇವಾಃ ಶಾಪಾಭಿಭೂತತ್ವಾತ್
ಪ್ರಹ್ಲಾದಾದ್ಯ ಬಭೂವಿರೇ ।।
ಪ್ರಹ್ಲಾದೋ ಕಯಾಧವಃ
ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।
ಋತೇತು ತಾತ್ವಿರ್ಕಾ
ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು
ವಿಷ್ಣು ಭಕ್ತೌ ಜಗತ್ತ್ರಯೇ ।।
" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ!! "
ವತ್ಸ! ಯದ್ಯದಭೀಷ್ಟಂತೇ
ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ
ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ
ಕರ್ಮಬಂಧಾತ್ಪ್ರಮುಚ್ಯತೇ ।।
ವಾಯೂನಾ ಚ ಸಮಾವಿಷ್ಟಂ
ಹರೇಃ ಪಾದಾಬ್ಜ ಸಂಶಯಂ ।
ವಾಯೂನಾ ಚ ಸಮಾವಿಷ್ಟಃ
ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು
ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ.......
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।
ವಾಯೂನಾ ಚ ಸಮಾವಿಷ್ಟಃ
ಮಹಾಬಲ ಸಮನ್ವಿತಃ ।
ಎಂದರೆ....
ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
" ನಿತ್ಯ " ಪದಕ್ಕೆ ಅರ್ಥವೇನೆಂದರೆ..
ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!
ಶ್ರೀ ಪುರಂದರದಾಸರು....
ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।
ಶ್ರೀ ವಿಜಯೀ೦ದ್ರತೀರ್ಥರು....
ಪ್ರಹ್ಲಾದಸ್ಯಾವತಾರೋ ಸಾ-
ವೀಂದ್ರಸ್ಯಾನುಪ್ರವೇಶನಾತ್ ।
ತೇನೆ ಸತ್ಸೇವಿನಾಂ ನೃಣಾಂ
ಸರ್ವಮೇತದ್ಭವೇ ಧ್ರುವಮ್ ।।
ಶ್ರೀ ವಿದ್ಯಾರತ್ನಾಕರತೀರ್ಥರು....
ಬ್ರಹ್ಮಣ್ಯತೀರ್ಥಸ್ತ೦ ಕೃತ್ವಾ
ಯತಿ೦ ಮಂತ್ರಂಮಪಾದಿತತ್ ।
ಶ್ರೀ ವ್ಯಾಸತೀರ್ಥ ನಾಮಾನಾ೦
ಚಕ್ರೇ ಶಾಸ್ತ್ರಸ್ಯ ವಿಸ್ತೃತಃ ।।
ಸದ್ವಿಷ್ಟ೦ ಸುತಂ ದ್ವಿಜೇಂದ್ರಪತ್ನೀ
ಶುಭಲಗ್ನೇ ಪರಿಪೂರ್ಣ ದೃಷ್ಟಿಭಾಜಿ ।
ಅಖಿಲ ದ್ವಿಜರಾಜ ವಂದನೀಯಂ
ದ್ವಿಜರಾಜಂ ದಿಗಿವಾಮರಾಧಿಪಸ್ಯ ।।
ಉದಯಾಸ್ತಪಟರಹೇಮಪೃಥ್ವೀಧರ-
ಪರ್ಯಂತಧರಾಚರೈರ್ಜನೌಗ್ಹೈ: ।
ಅಭಿವಂದ್ಯ ಇತೀವ ಬಾಲಕಸ್ಯ
ವೃತನೋದ್ವೇ೦ಕಟನಾಥನಾಮ ತಾತಃ ।।
ಉಪಾಸದತ್ತಂ ಕುತುಕೇನ ಶೇಮುಷೀನಿಧಿ:
ಸ ಲಕ್ಷ್ಮೀ ನರಸಿಂಹ ದೇಶಿಕಮ್ ।
ತಪೋಧಿ ಸಾಂದೀಪಿನಿ ಭೂಸುರೋತ್ತಮಂ
ಯತಾ ಯಶೋದಾತನಯಸ್ತ್ರಯೀಮಯಃ ।।
ದ್ವಿಪಂಚಕೃತ್ವ: ಶ್ರುತಿಮಾತ್ರತಃ ಶ್ರುತಿ
ತ್ರಿವಿಷ್ಟಪೋದ್ಯಾವನನೀಮಹೀರುವ ।
ವಟುರ್ದ್ವಿತೀಯಾ೦ ಪಟುಭಿರ್ವಯಸ್ಸ-
ಮೈರಧತ್ತ ಶಾಖಾ೦ ಧರಣೀ ಸುರೇಶ್ವರಃ ।।
ತಸ್ಯ ನಾಮ ಸ ದದೇ ಸದಾಶಿಷಾ
ರಾಜರಾಜ ಇವ ರಾಜಿತಃ ಶ್ರಿಯಾ ।
ರಾಮಭದ್ರ ಇವ ಭದ್ರಭಾಜನಂ
ತತ್ಕೃಪೇವ ಜಗತಾಂ ಹಿತೇ ರತಃ ।।
ಶ್ರೀ ಸುರೇಂದ್ರವದಾಯಂ ತಪಸ್ಯಯಾ
ಶ್ರೀ ಜಯೀ೦ದ್ರ ಇವ ಕೀರ್ತಿ ಸಂಪದಾ ।
ವಿಶ್ರುತೋಹಮಿಹ ವಾದಸಂಗರೇ
ರಾಘವೇಂದ್ರ ಯತಿರಾಟ್ ಸುಮೇಧಾತಾಮ್ ।।
ಮಂತ್ರೈ: ಪೂತೈರ್ವಾರಿಜಾದ್ಯೈ: ಪ್ರಸೂನೈ
ರ್ಮುಕ್ತಾಮುಖೈರತ್ನಜಾಲೈರುಪೇತೈ: ।
ವಾರ್ಭಿ: ಶಂಖಾಪೂರಿತೈ: ಸೋಭಿಷಿಚ್ಯ
ಪ್ರಾಜ್ಞ೦ ವಿದ್ಯಾರಾಜ್ಯರಾಜಂ ವಿತೇನೇ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
20 ನೆಯ ಶತಮಾನದವರು, ನಮಗೆ ಅತ್ಯಂತ ಹತ್ರದವರೂ, ಮಹಾನ್ ಜ್ಞಾನಿಗಳು ಆದ ಶ್ರೀ ಶ್ಯಾಮಸುಂದರ ದಾಸಾರ್ಯರ ಪರಮ ಪ್ರೀತಿಪಾತ್ರರಾದವರು, ಶ್ರೀ ಗಾಣಧಾಳ ಪಂಚಮುಖಿ ಪ್ರಾಣದೇವರ ಅನುಗ್ರಹಪಾತ್ರರೂ, 700 ಕ್ಕಿಂತ ಹೆಚ್ಚು ಕೃತಿಗಳು ರಚನೆ ಮಾಡಿದವರು, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿಗಳಲ್ಲಿ ನೈಪುಣ್ಯತೆ ಇದ್ದವರು,ಜ್ಞಾನ ಭಂಡಾರವಾದರೂ ಸೌಮ್ಯ ವ್ಯಕ್ತಿತ್ವ ಉಳ್ಳವರು ಆದ ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಅರ್ಥಾತ್ ಶ್ರೀ ಲಕುಮೀಶ ದಾಸru.
***