Thursday 30 September 2021

tandesripati vittalaru dasaru pushya shukla dwiteeya 1890 harapanahalli pushya shukla dwiteeya ತಂದೆ ಶ್ರೀಪತಿ ವಿಠ್ಠಲರು

 ಶ್ರೀ ತಂದೆ ಶ್ರೀಪತಿ - 1

" ದಿನಾಂಕ : 15.01.2021 ಪುಷ್ಯ ಶುದ್ಧ ದ್ವಿತೀಯಾ ಶುಕ್ರವಾರ - ಶ್ರೀ ರಾಯರ ಕಾರುಣ್ಯಪಾತ್ರರು ಶ್ರೀ ತಂದೆ ಶ್ರೀಪತಿ ವಿಠ್ಠಲರು"

" ಪ್ರಾಸ್ತಾವಿಕ "

ಕನ್ನಡ ಸಾಹಿತ್ಯದ 2000 ವರ್ಷಗಳ ಸುದೀರ್ಘ ಇತಿಹಾಸದಲ್ಲಿ " ಹರಿದಾಸ ಸಾಹಿತ್ಯ " ಒಂದು ಪ್ರಮುಖ ಘಟ್ಟ. 

ಹೆಚ್ಚು ಕಡಿಮೆ 8 ಶತಮಾನಗಳ ವ್ಯಾಪ್ತಿಯ ಈ ಭಕ್ತಿ ಸಾಹಿತ್ಯ ಪ್ರಕಾರವನ್ನು ಸುಮಾರು 6500 ಜನ ಹರಿದಾಸರು ತಮ್ಮ ಬಗೆ ಬಗೆಯ ರಚನೆಯಿಂದ ಮುಖ್ಯವಾಗಿ ಕೀರ್ತನೆಗಳಿಂದ ಸಮೃದ್ಧವಾಗಿಸಿದ್ದಾರೆ. 

ಈ ಕೀರ್ತನೆಗಳು ಇಂದಿಗೂ ಜನಪ್ರಿಯವಾಗಿ ಪ್ರಚಾರದಲ್ಲಿವೆ. 

ಕೆಲವು ಮುಖ್ಯ ಹರಿದಾಸರುಗಳ ಹೆಸರುಗಳು ಮನೆ ಮಾತಾಗಿದೆ. 

ಸಾಹಿತ್ಯಕ ಶ್ರೀಮಂತಿಕೆಯಿಂದ ಮಾತ್ರವಲ್ಲದೆ ದ್ವೈತ ಸಿದ್ಧಾಂತವನ್ನು ಅಧ್ಯಯನ ಮಾಡುವ ದೃಷ್ಟಿಯಿಂದಲೂ " ಹರಿದಾಸ ಸಾಹಿತ್ಯ " ಮಹತ್ವದ್ದಾಗಿದೆ. 

ಕರ್ನಾಟಕ ಸಂಗೀತಕ್ಕೆ ಹರಿದಾಸರ ಕೀರ್ತನೆಗಳ ಕೊಡುಗೆಯಂತೂ ಅಸಾಧಾರಣವಾದುದು. 

" ಶ್ರೀ ತಂದೆ ಶ್ರೀಪತಿ ವಿಠ್ಠಲರ ಸಂಕ್ಷಿಪ್ತ ಚರಿತ್ರೆ "

ಹೆಸರು : ಶ್ರೀ ವೆಂಕಟದಾಸರು 

ಉಪದೇಶ ಗುರುಗಳು : ಶ್ರೀ ಶ್ರೀಪತಿವಿಠ್ಠಲರು

ಜನ್ಮ ಸ್ಥಳ : ಹರಪನಹಳ್ಳಿ 

ಕಾಲ : ಕ್ರಿ ಶ 1800 - 1890 

ಅಂಕಿತ : ಶ್ರೀ ತಂದೆ ಶ್ರೀಪತಿ ವಿಠ್ಠಲ

" ಶ್ರೀ ಶ್ರೀಪತಿ ವಿಠ್ಠಲರ ಸ್ತುತಿ " .... 

ರಾಗ : ಪಂತುವರಾಳಿ    ತಾಳ : ಅಟ್ಟ 

ನಂಬೆಲೋ ಪಾದ ಪೊಂದಲೋ । ಮನದ ।

ಹಂಬಲ ನೀಡುವ ಶ್ರೀಪತಿದಾಸರ ।। ಪಲ್ಲವಿ ।।

ಶ್ರೀನಿಕೇತನ ಧಾರುಣೀಪತಿ ದಶರಥ । 

ಕ್ಷೋಣಿಪ ಜಾತ ವಿಠ್ಠಲ ದಾಸರ ।

ಮೇಣು ಕಾರುಣ್ಯವ ಪಡೆದು ಧರೆಯೊಳು । ಮ ।

ದ್ದಾನೆಯಂತೆ ಸಂಚಾರ ಮಾಡುವರನ್ನ ।। ಚರಣ ।।

ವೇದಗಿರೀ೦ದ್ರ ಧಾರುಣಿ ಪಾಲಕ ಬಾಲಾ ।

ಮೇದಿನಿ ಬೇಡಿದ ಬುಧ ರಾಮ ।

ಯಾದವ ಸರ್ವಜ್ಞ ಹಯಮೊಗನಾದ ।

ಅನಾದಿ ಮೂರುತಿಯ ಸಂತತ ಧೇನಿಪರನ್ನ ।। ಚರಣ ।।

ಇಂದ್ರ ವಿಜಯ ಗೋಪಾಲ ಮೋಹನ ।

ವೇಣು ಚಂದದಿ ಶ್ರೀ ವೇದವ್ಯಾಸ । ರಾಘ ।

ವೇಂದ್ರದಾಸಾಚಾರ್ಯರಿಂದ ಪಾಲಿತ ಎನ್ನ ।

ತಂದೆ ಶ್ರೀಪತಿ ವಿಠ್ಠನ ದಾಸಾರ್ಯರ ನಂಬಿರೋ ।। ಚರಣ ।।

ಈ ಮೇಲ್ಕಂಡ ಪದ್ಯದಲ್ಲಿ ತಮ್ಮ ಗುರುಗಳಾದ ಶ್ರೀ ಶ್ರೀಪತಿವಿಠ್ಠಲರನ್ನು ಸ್ತುತಿಸಿದ್ದಾರೆ. 

ಇದರಲ್ಲಿ " ಇಂದ್ರ " ಯೆಂದರೆ " ಶ್ರೀ ನಾರದಾಂಶ ಶ್ರೀ ಪುರಂದರದಾಸರು  ಮತ್ತು ಶ್ರೀ ಭೃಗು ಮಹರ್ಷಿಗ ಅವತಾರರಾದ ವಿಜಯದಾಸರು, ಶ್ರೀ ವಿಘ್ನೇಶ್ವರ ಅಂಶ ಸಂಭೂತರಾದ ಶ್ರೀ ಗೋಪಾಲದಾಸರು, ಶ್ರೀ ಮಾಂಡವ್ಯ ಮಹರ್ಷಿಗಳ ಅಂಶಜರಾದ ಶ್ರೀ ಮೋಹನದಾಸರು!!

" ವೇಣು " ಯೆಂದರೆ " ಶ್ರೀ ಪಂಗನಾಮದ ತಿಮ್ಮಣ್ಣದಾಸರು!!!

ಶ್ರೀ ವೇದವ್ಯಾಸರದೇವರು ಮತ್ತು ಶ್ರೀ ರಾಘವೇಂದ್ರತೀರ್ಥರು!!!!

" ದಾಸಾಚಾರ್ಯ " ಯೆಂದರೆ " ಶ್ರೀ ಭೂವರಾಹವಿಠ್ಠಲರು ". 

ಮುಂತಾದವರಿಂದ ತಮ್ಮ ತಂದೆಯವರಾದ ಶ್ರೀ ಶ್ರೀಪತಿವಿಠ್ಠಲರುಪಾಲಿತರಾಗಿದ್ದರೆಂದು ಖಚಿತ ಪಡಿಸಿದ್ದಾರೆ. 

" ಶ್ರೀ ರಾಯರ ಸ್ತುತಿ "

ಶ್ರೀ ತಂದೆ ಶ್ರೀಪತಿ ವಿಠ್ಠಲರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಮಿಂದು ಆಹ್ನೀಕ ಮುಗಿಸಿಕೊಂಡು ಶ್ರೀ ರಾಯರ ದರ್ಶನಕ್ಕೆ ಬಂದು ಶ್ರೀ ರಾಯರ ಮೂಲ ಬೃಂದಾವನದ ಮುಂದೆ ನಿಂತು ಆನಂದ ಭಾಷ್ಪ ಸುರಿಸುತ್ತಾ ಶ್ರೀ ರಾಯರ ಮಹಿಮೆಯನ್ನು ಹೃದಯ ತುಂಬಿ... 

ರಾಗ : ಮೋಹನ ತಾಳ : ರೂಪಕ 

ವೃಂದಾವನದಲಿ ರಾಜಿಪ 

ಯತಿವರನ್ಯಾರೇ ಪೇಳಮ್ಮಯ್ಯಾ ।। ಪಲ್ಲವಿ ।।

ಇಂದಿರೆಯರಸನ ಚಂದದಿ ಭಜಿಸುವ ।

ಕುಂದು ರಹಿತ ರಾಘವೇಂದ್ರ ಕಾಣಮ್ಮಾ ।। ಅ ಪ ।।

ಮಂತ್ರಾಲಯ ಕೃತ ಮಂದಿರ-

ನೆನಿಸುವನ್ಯಾರೆ ಪೇಳಮ್ಮಯ್ಯಾ ।

ತಂತ್ರದೀಪಿಕಾ ಮುಖ ಗ್ರಂಥಕರ್ತ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ಕಂತುಪಿತನ ಸತ್ಪಂಥದಿ 

ಭಜಿಸುವನ್ಯಾರೆ ಪೇಳಮ್ಮಯ್ಯಾ ।

ಚಿಂತಿತ ಫಲದ ದುರಂತಶಕ್ತ 

ಜಯವಂತನೀತ 

ಅಘಶಾಂತ ಕಾಣಮ್ಮಾ ।। ಚರಣ ।।

ಶ್ರೀ ಸುಧೀಂದ್ರ ಕರಕಮಲಜ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ತಾ ಸ್ವಪ್ನದಿ ಮಂತ್ರಾಕ್ಷತೆ 

ಕೊಡುತಿಹನ್ಯಾರೇ ಪೇಳಮ್ಮಯ್ಯಾ ।

ಆಶುಗಮನಮತ ಸ್ಥಾಪಕ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ಭಾಸುರಜ್ಞಾನಿ ವಿಶೇಷವಾಗಿ ಹರಿ 

ದಾಸ್ಯವ ಪಡೆದ 

ಯತೀಶ ಕಾಣಮ್ಮಾ ।। ಚರಣ ।।

ಧಾರುಣಿಪತಿಸುತೆ ತೀರದಿ 

ನೆಲೆಸಿಹನ್ಯಾರೆ ಪೇಳಮ್ಮಯ್ಯಾ ।

ಸಾರಿದ ಭಾಜಕರ ಬಾರಿಬಾರಿಗೆ 

ಪೊರೆಯುವನ್ಯಾರೆ ಪೇಳಮ್ಮಯ್ಯಾ ।

ಕಾರುಣ್ಯನಿಧಿ ಅಪಾರ 

ಮಹಿಮ ನಿವನ್ಯಾರೆ ಪೇಳಮ್ಮಯ್ಯಾ ।

ನಾರಾಯಣ ತಂದೆ ಶ್ರೀಪತಿ -

ವಿಠ್ಠಲನ ಆರಾಧಿಪ 

ರಾಘವೇಂದ್ರ ಕಾಣಮ್ಮಾ ।। ಚರಣ ।।


ಮತ್ತೊಂದು ಕೃತಿ ಹೀಗಿದೆ.... 

ರಾಗ : ಮಾರವಿ  ತಾಳ : ಅಟ್ಟ 

ಗುರುವೇ ಸ್ವಾಶ್ರಿತ 

ಸುರತರುವೆ ನಿಮ್ಮ ।

ಚರಣಕ್ಕೆ ನಮಿಸುವೆನೋ ।

ಕರುಣದಿ೦ದೊಲಿದ್ಯೆ೦ನ 

ದುರಿತ ನಿಚಯ ।

ಪರಿಹರಿಸಿ ಕೈವಿಡಿದು ಉ-

ದ್ಧರಿಸೋ ರಾಘವೇಂದ್ರಾ ।। ಪಲ್ಲವಿ ।।

ಮೂಢನಾದರೂ ಸೇವೆ 

ಮಾಡಲವನಭೀಷ್ಟ ।

ನೀಡುವ ಗುರುಗಳೆಂದು 

ಬೇಡಿಕೊಂಬೆ ದಯ ।

ಮಾಡಿ ನೀ ನೋಡು ಮಾ-

ತಾಡು ಬೇಡಿದದು ।

ನೀಡು ರಾಘವೇಂದ್ರ 

ಗುರುವೇ ।। ಚರಣ ।।

ಶ್ರೀ ಸುಧೀಂದ್ರ ಕರ-

ಕಮಲಜಾ ಸತತ । ರ ।

ಮೇಶ ಪದರಾರಾಧಕ 

ಲೇಸಾಗಿ ಎನಗೆ ।

ಶ್ರೀ ಹರಿ ಸಂರಕ್ಷ-

ಕನೆಂಬ  ಈ । ಸು ।

ನಿಶ್ಚಯ ಮತಿಕೊಟ್ಟು 

ಪಾಲಿಸು ಜಗದ್ಗುರುವೇ ।। ಚರಣ ।।

ಇಂದಿಗೆ ಎನಗೆ ಐದನೇ 

ಬೃಹಸ್ಪತಿಯು ತಾ । 

ಬಂದದರಿದೆ ಫಲವೋ ।

ಸಂದೇಹ್ಯವು ಇಲ್ಲ 

ನಿಮ್ಮಯ ಶ್ರೀ ಪದಾಬ್ಜ ।

ಸಂದರುಶನ ಯೆನ-

ಗಾಯ್ತು ಧನ್ಯನಾದೆ ।। ಚರಣ ।।

ಯತಿಕುಲ ರತುನ 

ಭಾರತಿಪತಿ ನುತ । ರಘು ।

ಪತಿ ಸೇವಾರತ 

ಚಿತ್ತನೊ ಸತತ ಎನಗೆ । ಶ್ರೀ ।

ಪತಿ ತದ್ದಾಸರ ಪದ 

ಸ್ಮೃತಿ ಮಾಡುವಂತೆ । ಸ ।

ನ್ಮತಿಯ ಪಾಲಿಸು 

ಜಗದ್ಗುರುವೇ ।। ಚರಣ ।।

ಕುಂದದೆ ವರ ತುಂಗ 

ತೀರದಲ್ಲಿರುವ । ಬ ।

ಲ್ಛಂದ ಮಂತ್ರಾಲಯದಿ ।

ವೃಂದಾವನದಲ್ಲಿ 

ಶೋಭಿಪೆ ಯತಿವರ । ಕೇ ।

ಳ್ತಂದೆ ಶ್ರೀಪತಿ ವಿಠ್ಠಲನ್ನ 

ತೋರೆನಗೆ ಮದ್ಗುರುವೇ ।। ಚರಣ ।।

***

ಶ್ರೀ ತಂದೆ ಶ್ರೀಪತಿ - 2

ಶ್ರೀ ಕ್ಷೇತ್ರ ಮಂತ್ರಾಲಯದಿಂದ ಶ್ರೀ ತಂದೆ ಶ್ರೀಪತಿ ವಿಠ್ಠಲರು ಗಾನ ಬ್ರಹ್ಮನಾದ ಶ್ರೀ ಪಾಂಡುರಂಗನ ದರ್ಶಾನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರಕ್ಕೆ ದಿಗ್ವಿಜಯ ಮಾಡಿ ಶ್ರೀ ಪಾಂಡುರಂಗನ ದರ್ಶನ ಮಾಡಿ ಸ್ತೋತ್ರ ಮಾಡಿದ್ದಾರೆ.

ರಾಗ : ಸಂದಡಿ    ತಾಳ : ಆದಿ

ಪಾಂಡುರಂಗ ತ್ವತ್ಪಾದ

ತೋರಿಸಯ್ಯಾ ।

ಕರುಣದಿ ಪಿಡಿಯಯ್ಯಾ ।

ಪುಂಡರೀಕ ಮುನಿ

ವರದ ನಮಿಪೆ ನಿನಗೇ ।

ನೀ ತ್ವರಿತದಿಲೆನಗೇ ।। ಪಲ್ಲವಿ ।।

ವನಜ ಭವಾದಿ

ಸಮಸ್ತ ಸುರವ್ರಾತಾ ।

ವಂದಿತ ಶ್ರೀನಾಥಾ ।

ಪ್ರಣತಾರ್ತಿಹರನೆ

ಕಾಮಿತ ಫಲದಾತಾ ।

ಮುನಿಗಣ ಸಂಧ್ಯಾತಾ ।।

ನೆನೆವ ಜನರ ಮನ-

ದೊಳಗಿಹ್ಯ ವಿಖ್ಯಾತ ।

ಭುವನಾಧಿ ನಾಥಾ ।

ಘನ ಮಹಿಮ ಒಲಿದು

ಲಾಲಿಸೆನ್ನ ಮಾತಾ ।

ದಯಮಾಡಿ ತ್ವರಿತಾ ।। ಚರಣ ।।

ಸುರಚಿರ ಮಹಿಮನೆ

ಭಜ ಕಾಮಧೇನೂ ।

ವಸುದೇವ ಸೂನೂ ।

ಧರಣಿಯೊಳಗೆ ನಮ್ಮ

ಹಿರಿಯರ ಉದ್ಧಾರ ।

ಮಾಡಿದ ಘಂಭೀರಾ ।।

ಧೊರೆ ನಿಮ್ಹೊರತು

ಅನ್ಯರನ ನಾನರಿಯೆ ।

ಕೇಳೆಲೊ ನರಹರಿಯೇ ।

ಕರಕರಿ ಭವದೊಳು

ಬಿದ್ದು ಬಾಯಿ ಬಿಡುವೆ ।

ಪೊರಿಯೆಂದು

ನುಡಿವವೇ ।। ಚರಣ ।।

ಬಂದ ಜನರ

ಭವಸಾಗರ ಪರಿಮಿತೀ ।

ತೋರಿಸುತಿಹ್ಯ ರೀತೀ ।

ಛಂದದಿಂದ

ಕರವಿಟ್ಟು ಕಟಿಗಳಲ್ಲಿ ।

ಈ ಸುಕ್ಷೇತ್ರದಲ್ಲಿ ।।

ನಿಂದಿಹ್ಯ ಭೀಮಾ

ತೀರ ಚಂದ್ರಭಾಗಾ ।

ದಲ್ಲಿಹ್ಯ ವೈಭೋಗಾ ।

ತಂದೆ ಶ್ರೀಪತಿ -

ವಿಠ್ಠಲಸುಖ ಸಿಂಧೋ ।

ಅನಾಥ ಬಂಧೋ ।। ಚರಣ ।।

ಎಂದು ಶ್ರೀ ಪಾಂಡುರಂಗನನ್ನು ಸ್ತುತಿಸಿ ಅಲ್ಲಿಂದ ಶ್ರೀ ತಿರುಮಲ ಚೆಲುವ ದರ್ಶನಕ್ಕಾಗಿ ಸಪ್ತಗಿರಿಗೆ ದಿಗ್ವಿಜಯ ಮಾಡಿಸಿದರು.

ಶ್ರೀ ಶ್ರೀನಿವಾಸನನ್ನು ಕಂಡರೆ ಹರಿದಾಸರಿಗೆ ಎಲ್ಲಿಲ್ಲದ ಪ್ರೀತಿ. ಅಂತೆಯೇ ಶ್ರೀ ಶ್ರೀನಿವಾಸನನ್ನು ನೋಡಿದ ಶ್ರೀ ತಂದೆ ಶ್ರೀಪತಿ ವಿಠ್ಠಲರು....

ರಾಗ : ಕಾಂಬೋಧಿ  ತಾಳ : ಆದಿ

ವೆಂಕಟೇಶ ಭವ

ಸಂಕಟ ಪರಿಹರಿಸೋ ।

ನಿನ್ನವರವನೆನಿಸೋ ।

ಪಂಕಜಾಕ್ಷ ಅಕಳಂಕ

ಮಹಿಮ ಹರಿಯೇ ।

ಆಶ್ರಿತರಿಗೆ ಧೊರಿಯೇ ।। ಪಲ್ಲವಿ ।।

ನಾನಾ ಜನುಮಗಳಲಿ

ತೊಳಲಿ ಬಂದೆ ।

ನೀನೆ ಗತಿಯಂದೇ ।

ಜ್ಞಾನಾಜ್ಞಾನ ಕೃತಾ-

ಖಿಳ ದುಷ್ಕರ್ಮ ।

ಅದರಂತೆ ಸುಕರ್ಮಾ ।।

ನಾನಾ ಪರಿಯಲ್ಲಿರು

ತಿರಲನುಭವಿಸೀ ।

ದುರ್ವಿಷಯವ ಬಯಸೀ ।

ಹೀನ ವೃತ್ತಿಯಲಿ ಚರಿಸಿ

ದಿನವು ಕಳದೆ ।

ಈ ಪರಿಯಿಂದುಳದೇ ।। ಚರಣ ।।

ಧಾರುಣಿ ಧನ ವನಿತಾದಿ

ವಿಷಯಗಳಲ್ಲಿ ।

ಕಾಮುಕ ತನದಲ್ಲೀ ।

ಚಾಲುವರಿದೆ ನೀತಿ

ಮಾರ್ಗ ಕಾಣದೆ ನಾನು ।

ಉಪಾಯವಿನ್ನೇನೂ ।।

ದಾರಿಗೆ ಪೇಳೆಲೊ

ಎನ್ನ ವರ್ತಮಾನ ।

ನೀನಿನಿದಾನಾ ।

ತೋರಿಸಿ ಎನ್ನನು

ಬಿಡದೆ ಪಾಲಿಸಪ್ಪಾ ।ಎ

ಣಿಸಾದಿರು ತಪ್ಪಾ ।। ಚರಣ ।।

ಪಾಪಾತ್ಮಕ ನಾನಾ-

ದರೇನೋ ಪೇಳೋ ।

ಪಾವನ ನೀ ಕೇಳೋ ।

ಶ್ರೀ ಪದ್ಮಜ ಭವ

ಪ್ರಮುಖ ನಿರ್ಜರೇಶಾ ।

ನಾ ನಿನ್ನಗೆ ದಾಸಾ ।।

ನೀ ಪಾಲಿಸದಿರೆ ಗತಿ-

ಯಾರೆಲೋ ಮುಂದೆ ।

ಕಾರುಣ್ಯದಿ ತಂದೇ ।

ಶ್ರೀಪತಿ ವಿಠ್ಠಲಕರವ

ಪಿಡಿಯೋ ವೇಗಾ ।

ನೀನುದ್ಧರಿಸೀಗಾ ।। ಚರಣ ।।

ಮತ್ತೊಂದು ಪದದಲ್ಲಿ ಶ್ರೀ ತಂದೆ ಶ್ರೀಪತಿ ವಿಠ್ಠ ರು....

ರಾಗ : ಮೋಹನ  ತಾಳ : ಅಟ್ಟ

ಶ್ರೀಶಾ ಉದ್ಧರಿಸುವ

ಅಶೇಷ ಪಾಲಕ । ಕರು ।

ಣಾ ಸಮುದ್ರನೇ

ಶ್ರೀನಿವಾಸಾ ಕೃಷ್ಣಾ ।

ದೋಷ ದೂರನೇ

ನಿಜ ದಾಸರ ಸನ್ಮನ ।

ತೋಷಕ ಕಲಿ

ಕೃತ ದೋಷ ।

ನಾಶಕ ಸದ್ಗುಣ

ಸುವನಧೀ ।।

ವೀಶಗಮನ ಫ-

ಣೀಶಶಾಯಿ । ಸು ।

ರೇಶ ಭಕುತರ

ಪೋಷಕನೆ । ತ ।

ದ್ದಾಸ ಜನ ಸಹ-

ವಾಸ ಕೊಡು । ಮಹಿ ।

ದಾಸ ಈ ಭವ

ಕ್ಲೇಶ ಕಳೆದು ।। ಪಲ್ಲವಿ ।।

ಕಮಲಾ ರಮಣನೇ

ಹೃತ್ಕಮಲಸ್ಥ ತವ ಪಾದ ।

ಕಮಲ ನಂಬಿದೆ ಯೆನ್ನ

ಶಮಲಾ ಕಳೆದೂ ।

ಕಮಲಜ ಪಿತ ನಿನ್ನ

ವಿಮಲ ಗುಣವನಿತ್ಯಾ ।

ದಮದಿಂದ ಸಂಯುಕ್ತವಾದ ।

ಶಮದಿಂದ ಗ್ರಂಥೋಕ್ತ

ದಿವ್ಯ ಕ್ರಮದಿಂದಾ ।

ಮಾನಸದಿ ಧ್ಯೇನಿಪ

ವಿಪುಲ ಸಂಪದಾ ।

ಯನಗೆ ಕೊಡು ಯಂದು

ಪ್ರಾರ್ಥಿಸುವೆ ನಿನಗೆ ।

ನಮಿಪ ಜನರಿಗೆ ಬದಿಗ-

ನ್ಯೆಂತೆಂದೂ ಈ ಪರಿಯ ತಿಳಿದು ।

ನಮಿಸುವೆನು ನೀ

ಯನಗೆ ನಿಜ ಬಂಧು ।

ಆನಂದ ಸಿಂಧು ಸುಮನಸರ

ಹೃತ್ಕುಮುದವೆನಿಸಿ ।

ಅಮಿತ ಕ್ರಿಯವನು

ಮಾಡಿಸುವಿ ಸಂಯಮಿ ಜನ ವರ ।

ಅಮರ ರಿಪುಕುಲ ದಮನ

ಯನಗೆ ಸುಮನವಿತ್ತು ।। ಚರಣ ।।

ಸಾರ ಹೃದಯರ ಉದ್ಧಾರ

ಮಾಡುವಿ ನೀ । ಉ ।

ದಾರ ಯಾದವ

ಕುಲ ವೀರಾ ಧೀರಾ ।

ಚಾರು ಸನ್ಮಹಿಮಾನೇ

ಮಾರ ಜನಕನೇ

ಸೃಷ್ಟಿ ಕಾರಣ । ಸಂ ।

ಸಾರ ವನಧಿಗೆ ತಾರಣ ।

ಕರಿರಾಜ ರಿಪು ನಿವಾರಣಾ

ನಾ ನಿನ್ನ ಚರಣಕೆ ।

ಸಾರಿದೆನು ಮುರವೈರಿ

ನರಹರಿಯೇ ಉದ್ಧವ ।

ವರದ ಸುಕುಮಾರ

ಅನುಪಮ ಅಮಿತ ಮಹ ।

ಸಿರಿಯೇ ಇಂದ್ರಾತ್ಮಜಗೆ

ನೀ ಸಾರಥಿ ವಿಬುಧೇಶರಿಗೆ ।

ಧೊರಿಯೇ ರಜನೀಶ ಕುಲಜನೆ ।

ವಾರಿಚರ ಕಿಟ

ಮನುಜ ಮೃಗ ಬಲಿ ।

ವೈರಿ ಸ್ವರ್ಗದ ವನ್ಹಿಗನೇ ನಿಜ ।

ವೀರ ಪಾರ್ಥ

ಪಸುಗತ ಕಲ್ಕಿಯೇ ।

ಸಾರ ತತ್ತ್ವ ವಿಚಾರ

ಮತಿ ಕೊಡು ।। ಚರಣ ।\

ಮಂದಜಾನಸ ವಾಯು

ನಂದಿವಾಹನ । ವಿಹ ।

ಗೇಂದ್ರ ಪ್ರಮುಖ ಸುರ

ವೃಂದ ವಂದ್ಯಾ ।

ಇಂದಿರೆ ರಮಣನೇ

ಮಂದಾಕಿನಿಯ ಪಿತ ।

ಯಿಂದೆನ್ನ ಬಿನ್ನಪವ ಕೇಳಿ ।

ಮಂದನ್ನ ದುಷ್ಕಾರ್ಯ ಕಾರಣ ।

ನಿಂದೆನ್ನ ದೂರಿ ಕೃತನ್ನಾ ।

ಚಂದದಿಂದಲೀ ಮಾಡುವನೆ

ನೀನೆ ನಿನ್ಹೊರತು ಇನ್ನು ।

ಪೊಂದಿದವರನು ಪೊರೆವವರನಾ

ಕಾಣೆ ಅಜಾಮಿಳ ಪ್ರಮುಖ ।

ರಾನಂದ ಬಡಿಸಿದ ಪರಮ

ಪ್ರಭು ನೀನೆ । ಅರ ।

ವಿಂದ ನೇತ್ರನೇ ಹಿಂದೆ ಮುಂದೆ

ಇಂದು ನೀ ಗತಿಯೆಂದು ।

ನಂಬಿದೆ ಕರವ ಪಿಡಿಯೋ

ತಂದೆ ಶ್ರೀಪತಿ ವಿಠ್ಠಲಈ ಭವ ।

ಸಿಂಧುವಿನ ಗತಿಯೆಂದು

ಶೀಘ್ರದಿ ।। ಚರಣ ।।

ಶ್ರೀ ತಂದೆ ಶ್ರೀಪತಿ ವಿಠ್ಠಲರು, ನಾವು ಪಡುವ ಈ ಬವಣೆಗೆ ಯಾವುದೋ ಜನ್ಮದ ಅಪರಾಧ ಕಾರಣವಾಗಿರಬೇಕು ಎಂಬುದನ್ನು ಸೂಚಿಸುತ್ತಾ ನಮ್ಮ ಪರವಾಗಿ ಶ್ರೀ ದಾಸಾರ್ಯರು ತಿರುಮಲೆಯ ಚೆಲುವನಾದ ಶ್ರೀ ಶ್ರೀನಿವಾಸನಲ್ಲಿ ಮೊರೆ ಹೋಗುತ್ತಾರೆ.

***

ಶ್ರೀ ತಂದೆ ಶ್ರೀಪತಿ - 3

ಉದರ ಪೋಷಣೆಗಾಗಿ ಕಂಡ ಕಂಡವರನ್ನು ಯಾಚಿಸುತ್ತಾ - ಬಣ್ಣಿಸುತ್ತಾ ಸಾಗಿದ ಅಪರಾಧವನ್ನು ಮನ್ನಿಸಲು ನಮ್ಮ ಪರವಾಗಿ ಹೀಗೆ ಪ್ರಾರ್ಥಿಸಿದ್ದಾರೆ.

ರಾಗ : ಅರಬಿ   ತಾಳ : ಆದಿ

ನಾನಪರಾಧಿ ಖರೆ ಪರಂತು ।

ನೀನುದ್ಧರಿಸೋ ದಯಾಳೋ ।। ಪಲ್ಲವಿ ।।

ಧನದಾಕಾಂಕ್ಷಿಯಲಿಂದ

ನಾ ದುರ್ಜನರ ।

ಮನಿ ಮನಿಗೆ ಪೋಗಿ ।

ಘನತರ ಸ್ತೋತ್ರವ

ಮಾಡಿ ನಾ ಬಲು ।

ವಿನಯದಿಂದ ಚೆನ್ನಾಗಿ ।।

ಜನ ಮೆಚ್ಚುವ ಪರಿಯಲ್ಲಿ

ಕಥಾದಿಗಳನು ।

ದಿನದಲಿ ಅನುವಾಗಿ ।

ಇನಿತು ಮಾಡೆ

ಅವ ಕೊಟ್ಟದಕೆನ್ನಯ ।

ಮನಸಿಗೆ ಹರುಷವು

ಪುಟ್ಟಿದ ಪ್ರಯುಕ್ತ ।। ಚರಣ ।।

ವರಸ್ತ್ರೀ ನೋಟದ

ಪರಸ್ತ್ರೀಯರ ।

ಸುರಚಿರ ಕಚ

ಕುಚ ನೋಡಿ ।

ಮರುಳಾಗೆವರಂಗ

ಸಂಗ ಬಯಸೀ ।

ಪರಿಪರಿ

ಸೊನ್ನಿಯ ಮಾಡಿ ।।

ಕರ ವಶವಾಗಲು

ಅವರೊಳಗೆ ಬೆರೆತು ।

ಹರುಷದಿ ಸವಿ ಮಾತಾಡೀ ।

ಸ್ಮರನಾಟದಿ ಮೈ-

ಮರೆದುನಾ ತ್ವಚ್ಚರಣ ।

ಸ್ಮರಣೆ ಮಾಡದ

ಪ್ರಯುಕ್ತ ।। ಚರಣ ।।

ಪರಲೋಕಕೆ ಪೋದರು

ನಮ್ಹಿರಿಯರು ।

ಹಿರಿಯತನವೆನಗೆ ಬಂತೂ ।

ಹಿರಿಯರೆಲ್ಲೆನಗೆ

ಕಿರಿಯರಾದರು ।

ಅರುಹುವರೆನಗೆನ್ನಿ೦ತೋ ।।

ಅರುಹಿದ ಕಾಲಕು

ಚಿತ್ತೈಸದೆ । ಧಿ ।

ಕ್ಕರಿಸುವೆ ನಾ

ನಿನ್ನೆಂತೋ ।

ಸರಿ ಇಲ್ಲನಗೆಂದರಿತು

ಗರ್ವದಲಿ ।

ದುರುಳರ ಸಂಗದಲ್ಲಿದ್ದ

ಪ್ರಯುಕ್ತ ।। ಚರಣ ।\

ಸದ್ವಿದ್ವಾಂಸರ

ಕಂಡರೆ ನಾ ಬಲು ।

ಬದ್ಧ ಮತ್ಸರನು ಜೀಯ್ಯಾ ।

ಮಧ್ವಶಾಸ್ತ್ರ

ಪ್ರವಚನವೆಂಬೋ ।

ಸುದ್ಧಿಯು ಎನಗಿಲ್ಲವಯ್ಯಾ ।।

ಇದ್ದರೇನು ಸಾರ್ಥ

ಕವೋ ಈ । ದು ।

ರ್ಬುದ್ಧಿ ಪೋಗಲಿಲ್ಲಯ್ಯಾ ।

ಶುದ್ಧ ಭಾವದಲಿ

ಮೋಕ್ಷಪ್ರದ । ಅನಿ ।

ರುದ್ಧ ನಿನ್ನ ಮೊರೆ ಹೋಗದ

ಪ್ರಯುಕ್ತ ।। ಚರಣ ।।

ಕೊಟ್ಟದ್ದಕ್ಕೆ ಸಂತುಷ್ಟನಾಗದೇ ।

ಸಿಟ್ಟಿಲಿ ಬೈವೆನೂ ನಾನೂ ।

ಭ್ರಷ್ಟನು ಪಾಪಿಷ್ಟನೋ ಬಲ್ಕೇ ।

ಳ್ದುಷ್ಟ ಬುದ್ಧಿ ಇನ್ನೇನೋ ।।

ಕೃಷ್ಣನೇ ಸರ್ವೋತ್ಕೃಷ್ಟನೇ ನಮ್ಮಾ ।

ರ್ಯಿಷ್ಟ ಫಲಪ್ರದ ನೀನೂ ।

ಶಿಷ್ಟ ಜನೇಪ್ಸೀತಾ ।

ತಂದೆ ಶ್ರೀಪತಿ ।ವಿಠ್ಠಲ

ಕೇಳ್ ಬುದ್ಹಿ ಪರಾಕು ।। ಚರಣ ।।

ತಿರುಪತಿಯಿಂದ ಶ್ರೀ ದಾಸಾರ್ಯರು ಘಟಿಕಾಚಲಕ್ಕೆ ಬಂದು ಶ್ರೀ ನೃಸಿಂಹನನ್ನು ಮತ್ತು ಶ್ರೀ ಮುಖ್ಯಪ್ರಾಣದೇವರನ್ನೂ ಸ್ತುತಿಸಿದ್ದಾರೆ.

ಭಾರತೀಶ ಮದ್ಭಾರ ನಿನ್ನದೈಯ್ಯಾ ।

ಕರುಣದಿ ಪಿಡಿ ಕೈಯ್ಯಾ ।। ಪಲ್ಲವಿ ।।

ಪೂರೈಸೆನ್ನ ಮನೋಭಿಲಾಷ ಗುರುವೇ ।

ಆಶ್ರಿತ ಸುರತರುವೇ ।। ಅ ಪ ।।

.... ನಡುಮನೆಯೆಂಬ

ದ್ವಿಜನಾ ಗೃಹದಲ್ಲೀ ।

ಅವತರಿಸಿದಿ ಅಲ್ಲೀ ।

ಮೃಡ ಸರ್ವೋತ್ತಮ

ಹರಿಯೇ ತಾನೆಂದು ।

ವಿಶ್ವ ಮಿಥ್ಯವೆಂದೂ ।।

ನುಡಿದ ಜನರ

ಮತಗಳನೆ ನಿರಾಕರಿಸೀ ।

ಸಚ್ಛಾಸ್ತ್ರವ ರಚಿಸೀ ।

ಪೊಡವಿಗೊಡೆಯ ತಂದೆ-

ಶ್ರೀಪತಿ ವಿಠ್ಠಲನ ।

ಪೂಜಿಪರೋ ಘಾನ್ನಾ ।। ಚರಣ ।।

" ಶಿಷ್ಯರು "

ಶ್ರೀ ಶ್ರೀನಿಧಿ ವಿಠಲರು

" ಉಪ ಸಂಹಾರ "

ಶ್ರೀ ಶ್ರೀಪತಿ ವಿಠಲ ದಾಸರಿಂದ " ತಂದೆ ಶ್ರೀಪತಿ ವಿಠ್ಠಲ " ಎಂಬ ಅಂಕಿತವನ್ನು ಪಡೆದು ಪದ - ಸುಳಾದಿ - ಪದ್ಯಗಳನ್ನು ರಚಿಸಿದರು.

ಶ್ರೀ ತಂದೆ ಶ್ರೀಪತಿ ವಿಠ್ಠಲರ ಕವಿತೆಗಳಲ್ಲಿ ಗುರುಗಳಾದ ಶ್ರೀ ಶ್ರೀಪತಿ ವಿಠಲ ದಾಸರ ಜಾಡು, ಜಾಣ್ಮೆಗಳು ಮೈದೋರಿದೆ.

ಸಂಸ್ಕೃತದ ಉದ್ಧಾಮ ಪಂಡಿತರಾಗಿದ್ದರೂ, ತಿರುಳುಗನ್ನಡ ಶೈಲಿಯಲ್ಲಿ ಮನೋಜ್ಞ ಕೀರ್ತನೆಗಳನ್ನು ಕಟ್ಟುವುದು ಶ್ರೀ ತಂದೆ ಶ್ರೀಪತಿ ವಿಠ್ಠಲರ ವೈಶಿಷ್ಟ್ಯವಾಗಿದೆ.

ದ್ರಾಕ್ಷಾ ಪಾಕದಲ್ಲಿ ಸಂಸ್ಕೃತದ ಪುರಾಣ, ಉಪನಿಷತ್ತುಗಳ ಸಾರವನ್ನೆಲ್ಲಾ ಕನ್ನಡೀಕರಿಸುವ ಹದ ಹವಣಗಳು ಶ್ರೀ ತಂದೆ ಶ್ರೀಪತಿ ವಿಠ್ಠಲರಲ್ಲಿ ಅನ್ಯಾದೃಶ್ಯವಾಗಿದೆ.

ಹರಿಯ ಸ್ಮರಣೆ ಮಾಡೋ

ನಿರಂತರ ।। ಪಲ್ಲವಿ ।।

ಪರಗತಿಗಿದು ನಿರ್ಧಾರವೋ ।। ಅ ಪ ।।

... ಬಂಧಕ ಮೋಚಕ

ತಂದೆ ಶ್ರೀಪತಿ । ವಿಠ್ಠ ।

ಲೆಂದು ಸುದೃಢ ಭಾವದಲಿ

ನಿರಂತರ ।। ಚರಣ ।।

ಹೀಗೆ ಶ್ರೀ ತಂದೆ ಶ್ರೀಪತಿ ವಿಠ್ಠರು ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ತಮ್ಮ ಅತ್ಯಮೂಲ್ಯವಾದ ಕೊಡುಗೆಯನ್ನು ಕೊಟ್ಟು ಕ್ರಿ ಶ 1890 ರ ಪುಷ್ಯ ಶುದ್ಧ ದ್ವಿತೀಯಾ ವೈಕುಂಠ ಯಾತ್ರೆ ಮಾಡಿದರು.

ಹರಪನ್ಹಳ್ಳಿ ನಿವಾಸಸ್ಥ೦

ದಾಸ ವೆಂಕಟ ಸಂಜ್ಞಕಂ ।

ಶ್ರೀಪತ್ಯಾರ್ಯ ಪಾದಾಬ್ಜಾಲಿಂ

ವಂದೇಹಂ ತಂದೆ ಶ್ರೀಪತಿಂ ।।

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

****

year 2021

ಹರಪನಹಳ್ಳಿ ನಿವಾಸಸ್ಥಂ

ದಾಸ ವೆಂಕಟ ಸಂಜ್ಞಕಮ್/

ಶ್ರೀಪತ್ಯಾರ್ಯ ಪಾದಾಬ್ಜಾಲಿಮ್

ವಂದೇಹಮ್

ತಂದೆ ಶ್ರೀಪತಿಮ್//


ಹರಪನಹಳ್ಳಿ ವಾಸ್ತವ್ಯರು, 19ನೇ ಶತಮಾನದವರು, ಗದ್ವಾಲದಾಸರಾದ ಶ್ರೀಪತಿವಿಠಲರ ಶಿಷ್ಯರು, ದೀಪದ ಅಣ್ಣಯಾಚಾರ್ಯರ (ಶ್ರೀನಿಧಿವಿಠಲ) ಗುರುಗಳು, ಶ್ರೀ  ರಾಯರ ಪರಮಭಕ್ತರು, ವೃಂದಾವನದಲಿ ರಾಜಿಪ ಯತಿವರನ್ಯಾರೆ ಪೇಳಮ್ಮಯ್ಯಾ, ಶ್ರೀಶಾ ಉದ್ಧರಿಸೊ ಅಶೇಷಪಾಲಕ, ಪಾಂಡುರಂಗ ತ್ವತ್ಪಾದ ಪಾಲಿಸಯ್ಯಾ ಕರುಣದಿ ಪಿಡಿಕೈಯಾ ಇತ್ಯಾದಿ ಸೊಗಸಾದ ಕೃತಿಗಳನ್ನು ನಮಗೆ ನೀಡಿದ, 90 ವರ್ಷಗಳ ಪೂರ್ಣ ಜೀವನವನ್ನು ಪರಮಾತ್ಮನ, ಮತ್ತು  ದಾಸ ಸಾಹಿತ್ಯದ ಸೇವೆಗೆ ಸಲ್ಲಿಸಿದ ಶ್ರೀ ಹರಪನಹಳ್ಳಿ  ವೆಂಕಟದಾಸರ ಅರ್ಥಾತ್ ಶ್ರೀ ತಂದೆಶ್ರೀಪತಿವಿಠಲರ  ರಾಧನಾ  ಮಹೋತ್ಸವವೂ ಇಂದು

***

No comments:

Post a Comment