" ಅಧಿಕ ಮಾಸ - 1 "
" ಶ್ರೀ ಕೃಷ್ಣಾನುಗ್ರಹ "
ಶ್ರೀ ರಾಘವೇಂದ್ರತೀರ್ಥ ವಿರಚಿತ " ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ ಭಾವಸಂಗ್ರಹಃ " ದಲ್ಲಿ...
ಸ್ಮೃತ್ವಾ ಯಂ ದ್ಯುಸರಿತ್ಸುತೋವಸುರ-
ಭೂದ್ರಾಜಾ ಯದಾಶ್ವಾಸಿತಃ
ನಿರ್ದುಃಖೋsಸಿ ಜುಗೋಪ ಧರ್ಮ
ನಿರತೋ ಜಿತ್ವಾ ಸ್ವರಾಜ್ಯ೦ ಕಲಿಮ್ ।
ಯಃ ಪಾರ್ಥಂ ಸಮಬೋಧಯನ್
ಮೃತಶಿಶು೦ ಯೋ ಜೀವಯತ್ಪಾ೦ಡವೈ:
ಯೋ ಯಜ್ಞ೦ ಸಮಕಾರಯದ್ಬಹುಧನೈ:
ಧ್ಯಾಯಾಮಿ ತಂ ಕೇಶವಮ್ ।।
" ದ್ಯುಸರಿತ್ಸುತೋ "
ಗಂಗಾದೇವಿ ಪುತ್ರರಾದ ಶ್ರೀ ಭೀಷ್ಮಾಚಾರ್ಯರು
" ವಸುರಭೂಯಾತ್ "
ಉತ್ತರಾಯಣವು ಬಂದೊಡನೆ ಸ್ವತಃ ಇಚ್ಛೆಯಿಂದ ದೇಹ ತ್ಯಾಗ ಮಾಡಿ ತಮ್ಮ ಮೂಲ ರೂಪವಾದ ದ್ಯುನಾಮಕ ವಸುಗಳಾದರು.
ರಾಜಾ = ಧರ್ಮರಾಜನು
" ಯಂ "
ಯಾವ ಶ್ರೀ ಭೀಷ್ಮಾಚಾಚಾರ್ಯರು ಸ್ವರ್ಗಸ್ಥರಾದುದನ್ನು
" ಸ್ಮರನ್ "
ಸ್ಮರಿಸಿಕೊಂಡು ಶ್ರೀ ಭೀಷ್ಮಾಚಾರ್ಯರ ವಿಯೋಗ ದುಃಖದಿಂದ ಬಹಳ ದುಃಖಿತನಾಗಲು
" ಯದಶ್ವಾಸಿತಃ "
ಶ್ರೀ ಕೃಷ್ಣನಿಂದ ಸಮಾಧಾನಗೊಳಿಸಲ್ಪಟ್ಟವನಾಗಿ
ಸಮಾಹಿತಃ ಸನ್ = ಸಮಾಧಾನ ಹೊಂದಿದವನಾಗಿ
ನಿರ್ದುಃಖಸ್ಸನ್ = ದುಃಖವಿಲ್ಲದವನಾಗಿ
ಅಪಿ = ಮತ್ತು
" ಕಲಿಮ್ "
ತನ್ನ ರಾಜ್ಯದಲ್ಲಿ ಗೊಂದಲವನ್ನುಂಟ್ಟು ಮಾಡುತ್ತಿದ್ದ ಕಲಿಯನ್ನು
ಜಿತ್ವಾ = ಜಯಿಸಿ
ಸ್ವರಾಜ್ಯಮ್ = ಸಾಮ್ರಾಜ್ಯವನ್ನು
ಧರ್ಮನಿರತೋ = ಧರ್ಮಿಷ್ಠನಾಗಿ
" ಸಾಮ್ರಾಜ್ಯ೦ ಜುಗೋಪ "
ಕುರು ಸಾಮ್ರಾಜ್ಯವನ್ನು ರಕ್ಷಿಸಿದನು ಅಂದರೆ ಆಳಿದನು!
ಯಃ = ಯಾವ ಶ್ರೀ ಕೃಷ್ಣನು
ಪಾರ್ಥಂ = ಅರ್ಜುನನಿಗೆ
" ಸಮಬೋಧಯನ್ "
ಸತ್ತತ್ತ್ವ ಧರ್ಮಗಳನ್ನು ಬೋಧಿಸಿ ಸಾಂತ್ವನಗೊಳಿಸಿದನೋ
ಮೃತಶಿಶುಮ್ = ಅಭಿಮನ್ಯುವಿನ ಮೃತವಾದ ಶಿಶುವನ್ನು
ಅಜೀವಯತ್ = ಪುನರುಜ್ಜೀವನಗೊಳಿಸಿದನೋ
ಪಾಂಡವೈ: = ಪಾಂಡವರಿಂದ
ಬಹುಧನೈ: = ಅಪಾರ ಧನಗಳಿಂದ
ಯಜ್ಞ೦ = ಅಶ್ವಮೇಧ ಯಾಗವನ್ನು
ಸಮಕಾರಯತ್ = ಚೆನ್ನಾಗಿ ಮಾಡಿಸಿದನೋ
ತಂ = ಅಂಥಾ
" ಕೇಶವಂ "
ಶ್ರೀ ಚತುರ್ಮುಖ ಬ್ರಹ್ಮ ರುದ್ರಾದಿಗಳಿಗೆ ನಿಯಾಮಕನಾದ ಶ್ರೀ ಕೃಷ್ಣನನ್ನು
ಧ್ಯಾಯಾಮಿ = ಧ್ಯಾನಿಸುತ್ತೇನೆ!!
ಶರಪಂಜರದಲ್ಲಿ ಮಲಗಿದ್ದ ಪಿತಾಮಹ ಶ್ರೀ ಭೀಷ್ಮಾಚಾಚಾರ್ಯರು ಇಚ್ಚಾ ಮರಣ ವರವನ್ನು ಪಡೆದವರಾದ್ದರಿಂದ ಉತ್ತರಾಯಣ ಪರ್ವಕಾಲವನ್ನು ನಿರೀಕ್ಷಿಸುತ್ತಿದ್ದು - ಶ್ರೀ ಕೃಷ್ಣ ಪರಮಾತ್ಮನ ಆದೇಶದಂತೆ ಧರ್ಮಾನಂದನನಿಗೆ ಅನೇಕ ತತ್ತ್ವ - ಧರ್ಮಗಳನ್ನು ಉಪದೇಶ ಮಾಡಿ - ಸ್ವಇಚ್ಛೆಯಿಂದ ದೇಹ ತ್ಯಾಗ ಮಾಡಿ ತಮ್ಮ ಮೂಲ ರೂಪವಾದ " ದ್ಯು ನಾಮಕ " ವಸುವಿನಲ್ಲಿ ಐಕ್ಯವಾದರು.
ಪಿತಾಮಹರ ಮರಣದಿಂದ ಧರ್ಮರಾಜನು ಬಹು ದುಃಖಿತನಾದನು.
ಆಗ ಶ್ರೀ ಕೃಷ್ಣ ಪರಮಾತ್ಮನು ಸ್ವಾ೦ತನಗೊಳಿಸಿದನು.
ಅದರಿಂದ ಯುಧಿಷ್ಠಿರನು ಸಮಾಧಾನಗೊಂಡು ದುಃಖವನ್ನು ಬಿಟ್ಟು ರಾಜ್ಯಭಾರ ಮಾಡಿದನು.
ಅನಂತರ ಕಲಿಯು ತನ್ನ ಗುಣಗಳಿಂದ ಸಹಿತನಾಗಿ ಧರ್ಮರಾಜನ ರಾಜ್ಯದಲ್ಲಿ ಧರ್ಮಕಂಟಕ ಕಾರ್ಯಾಸಕ್ತನಾಗಿ ಬಹುವಾಗಿ ಗೊಂದಲ ಮಾಡಲಾರಂಭಿಸಿದನು.
ಅದರಿಂದ ಕುಪಿತನಾದ ಯುಧಿಷ್ಠಿರನು ಶ್ರೀ ಕೃಷ್ಣನ ಅನುಗ್ರಹದಿಂದ ಕಲಿಯನ್ನು ಜಯಿಸಿದನು.
ಶ್ರೀ ಕೃಷ್ಣ ಪರಮಾತ್ಮನು ಭಾರತಾವನಿಯಲ್ಲಿ ಪಾಂಡವರ ಸಂತತಿಯವರು ಆಳುತ್ತಿರುವ ವರೆಗೂ ಭೂಮಂಡಲದಲ್ಲಿ ಕಾಲಿಡಬಾರದೆಂದು ಶಾಸನ ಮಾಡಿದನು.
ಆ ತರುವಾಯ ಧರ್ಮರಾಜನು ಧರ್ಮದಿಂದ ರಾಜ್ಯಭಾರವನ್ನು ಮಾಡಹತ್ತಿದನು.
ಅರ್ಜುನನು ಪುತ್ರನಾದ ಅಭಿಮನ್ಯುವಿನ ಮರಣದಿಂದ ಅತ್ಯಂತ ವ್ಯಾಕುಲವುಳ್ಳವನಾಗಿ, ಪುತ್ರ ವಿಯೋಗ ದುಃಖದಿಂದ ಬಳಲುತ್ತಿರಲು ಶ್ರೀ ಕೃಷ್ಣ ಪರಮಾತ್ಮನು ತಾನು ಉಪದೇಶಿಸಿದ ಗೀತಾ ಉಪದೇಶವನ್ನು ಮರೆತಿರುವನೆಂದು ತಿಳಿದು ಅವನಿಗೆ ಮತ್ತೆ ಅದನ್ನು ವಿಸ್ತಾರವಾಗಿ ಬೋಧಿಸಿ ಅನೇಕ ಧರ್ಮ ರಹಸ್ಯಗಳನ್ನು ತಿಳಿಸಿ ಸಮಾಧಾನ ಪಡಿಸಿದನು.
ಅದೇ ಸಮಯದಲ್ಲಿ ಶ್ರೀ ಅಶ್ವತ್ಥಾಮಾಚಾರ್ಯರ ಶಾಸ್ತ್ರದಿಂದ ದಗ್ಧವಾದ ಅಭಿಮನ್ಯುವಿನ ಶಿಶುವನ್ನು ಶ್ರೀ ಕೃಷ್ಣ ಪರಮಾತ್ಮನು ಪುನಃ ಜೀವಂತಗೊಳಿಸಿ ಎಲ್ಲರನ್ನೂ ಮುದಗೊಳಿಸಿದನು.
ಮತ್ತು ಶ್ರೀ ಕೃಷ್ಣದ್ವೈಪಾಯನರ ಸಲಹೆಯಂತೆ ಶ್ರೀ ಕೃಷ್ಣ ಪರಮಾತ್ಮನು ಪಾಂಡವರಿಂದ ಅಪಾರ ಧನ ವ್ಯಯದಿಂದ ಅಶ್ವಮೇಧ ಯಾಗವನ್ನು ಮಾಡಿಸಿದನು!
ಇಂಥಾ ಶ್ರೀ ಚತುರ್ಮುಖ ಬ್ರಹ್ಮ - ಶ್ರೀ ರುದ್ರಾದಿ ದೇವತೆಗಳಿಗೆ ನಿಯಾಮಕನಾದ್ದರಿಂದ " ಕೇಶವ " ನೆಂಬ ಹೆಸರಿನಿಂದ ಪೂಜ್ಯನಾದ ಶ್ರೀ ಕೃಷ್ಣ ಪರಮಾತ್ಮನನ್ನು ಧ್ಯಾನಿಸುತ್ತೇನೆ!!
ಎಂದು ಕಲಿಯುಗದ ಕಲ್ಪವೃಕ್ಷ ಕಾಮಧೇನು ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೀ ಕೃಷ್ಣ ಪರಮಾತ್ಮನ ಕಾರುಣ್ಯವನ್ನು ಸ್ಮರಿಸಿದ್ದಾರೆ!!
******
" ಅಧಿಕ ಮಾಸ - 2 "
" ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಜಗನ್ನಾಥದಾಸ ಕೃತ ಶ್ರೀ ನೃಸಿಂಹ ಸ್ತುತಿ "
ರಾಗ : ಸಾವೇರಿ ತಾಳ : ಆದಿ
ನಮೋ ನಮಸ್ತೇ ನರಸಿಂಹದೇವಾ
ಸ್ಮರಿಸುವವರ ಕಾವಾ ।। ಪಲ್ಲವಿ ।।
ಸುಮಹಾತ್ಮ ನಿನಗೆಣೆ
ಲೋಕದೊಳಾವಾ
ತ್ರಿಭುವನ ಸಂಜೀವಾ ।
ಉಮೆಯರಸನ ಹೃತ್ಕಮಲ
ದ್ಯುಮಣಿ । ಮಾ ।
ರಮಣ ಕನಕ ಸಂಯಮಿ
ವರವರದಾ ।। ಅ. ಪ ।।
ಕ್ಷೇತ್ರಜ್ಞ ಕ್ಷೇಮ ಧಾಮ
ಭೂಮಾ ದಾನವ ಕುಲಭೀಮಾ ।
ಗಾತ್ರ ಸನ್ನುತ ಬ್ರಹ್ಮಾದಿ
ಸ್ತೋಮ ಸನ್ಮಂಗಳ ನಾಮಾ ।
ಚಿತ್ರ ಮಹಿಮ ನಕ್ಷತ್ರ
ನೇಮಿ । ಸ ।
ರ್ವತ್ರ ಮಿತ್ರ ಸುಚರಿತ್ರ
ಪವಿತ್ರ ।। ಚರಣ ।।
ಅಪರಾಜಿತ ಅನಘ
ಅನಿರ್ವಿಣ್ಣ ಲೋಕೈಕ ಶರಣ್ಯ ।
ಶಫರಕೇತು ಕೋಟಿಲಾವಣ್ಯ
ದೈತ್ಯೇಂದ್ರ । ಹಿರಣ್ಯಕ ।
ಶಿಪು ಸುತನ ಕಾಯ್ದ-
ಪೆನೆನುತಲಿ । ನಿ ।
ಷ್ಕಪಟ ,ಮನುಜ ಹರಿ
ವಪುಷ ನೀನಾದೆ ।। ಚಹರಣ ।।
ತಪನ ಕೊಟಿ ಪ್ರಭಾವ
ಶರೀರಾ ದುರಿತೌಘ ವಿದೂರಾ ।
ಪ್ರಪಿತಾಮಹ ಮಂದಾರ
ಖಳವಿಪಿನ ಕುಠಾರಾ ।
ಕೃಪಣ ಬಂಧು ತವ
ನಿಪುಣ ತನಕೆ । ನಾ ।
ನುಪಮೆಗಾಣೆ ಕಶ್ಯಪಿ
ವರವಾಹನಾ ।। ಚರಣ ।।
ವೇದ ವೇದಾಂಗ ವೇದ್ಯಾ
ಸಾಧ್ಯಾ ಅಸಾಧ್ಯಾ ।
ಶ್ರೀದ ಮುಕ್ತಾಮುಕರಾರಾಧ್ಯಾ
ಅನುಪಮ । ಅನ ।
ವದ್ಯ ಮೋದಮಯನೆ
ಪ್ರಹ್ಲಾದವರದ । । ನಿ ।
ತ್ಯೋದಯ ಮಂಗಳ
ಪಾದ ಕಮಲಕೆ ।। ಚರಣ ।।
ಅನಿಮಿತ್ತ ಬಂಧು
ಜಗನ್ನಾಥವಿಠ್ಠಲ ಸಾಂಪ್ರತ ।
ನಿನಗೆ ಬಿನ್ನೈಸುವ ಎನ್ನಯ
ಮಾತಾ ಲಾಲಿಸುವುದು ತಾತಾ ।
ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ ।
ಕ್ಷಣಕೆ ಕಥಾಮೃತ ಉಣಿಸು
ಕರುಣದಿ ।। ಚರಣ॥
ವಿವರಣೆ :
ಶ್ರೀ ಜಗನ್ನಾಥದಾಸರು ಕನಕಗಿರಿಯ ಶ್ರೀ ನೃಸಿಂಹನ ಸನ್ನಿಧಾನದಲ್ಲಿ " ಹರಿಕಥಾಮೃತಸಾರ " ರಚಿಸುವ ಶುಭ ಸಂದರ್ಭದಲ್ಲಿ ಅನೇಕ ದಿನಗಳು " ಕನಕಗಿರಿ " ಯಲ್ಲಿಯೇ ವಾಸ ಮಾಡಿದ್ದರು.
ಆ ಸಂದರ್ಭದಲ್ಲಿ ಶ್ರೀ ನೃಸಿಂಹನನ್ನು ಅತ್ಯಂತ ಭಕ್ತಿಯಿಂದ ನೋಡುತ್ತಿದ್ದಾರೆ.
ಕಣ್ಣಿನಲ್ಲಿ ಆನಂದಾಶ್ರು ಸುರಿಯುತ್ತಿದೆ.
ಆ ಕರುಣಾಕರನಾದ ಶ್ರೀ ನೃಸಿಂಹನು ಶ್ರೀ ಪ್ರಹ್ಲಾದರಾಜರನ್ನು ಅನುಗ್ರಹಿಸಿದ ಮತ್ತು ತನ್ನನ್ನು ನಂಬಿದ ಭಕ್ತರನ್ನು ಅನುಗ್ರಹಿಸುತ್ತಿರುವ ಪರಿಯು ಸ್ಮರಣೆಗೆ ಬಂದು ಅತ್ಯದ್ಭುತ ಪದ ಪ್ರಯೋಗದೊಂದಿಗೆ ಪರಮಾದ್ಭುತವಾದ ಕೃತಿಯೊಂದನ್ನು ರಚಿಸಿದರು.
ಅದುವೇ ಈ ಮೇಲ್ಕಂಡ ಕೃತಿ. ಶ್ರೀ ಜಗನ್ನಾಥದಾಸರು ಸಹ್ಲಾದರಾಜರಿದ್ದಾಗ ಶ್ರೀ ನೃಸಿಂಹದೇವರ ಪ್ರಾದುರ್ಭಾವವನ್ನು ಪ್ರತ್ಯಕ್ಷ ಕಂಡವರು.
ಆ ಸುಯೋಗ ಬಂದಿದ್ದು ಶ್ರೀ ಪ್ರಹ್ಲಾದರಾಜರ ( ಶ್ರೀ ರಾಯರ ) ತಮ್ಮನಾಗಿದ್ದರ ಫಲ!!
ಅಂಥಾ ಲೋಕ ವಿಲಕ್ಷಣವಾದ - ಅಚಿಂತ್ಯಾದ್ಭುತ ಶಕ್ತಿ ಸಂಪನ್ನನಾದ - ಸರ್ವೋತ್ತಮನಾದ ಶ್ರೀ ಹರಿಯ ನರಹರಿಯ ರೂಪವನ್ನು ಅತಿ ಮನೋಜ್ಞವಾಗಿ ವರ್ಣಿಸಿದ್ದಾರೆ.
ಸುಮಹಾತ್ಮ = ಶ್ರೇಷ್ಠ ಮಹಿಮಾ ಸಂಪನ್ನನು
ಕ್ಷೇತ್ರ = ಸ್ಥೂಲದೇಹ
ಕ್ಷೇತ್ರಜ್ಞ = ಆ ಸ್ಥೂಲ ದೇಹದಲ್ಲಿರುವ ಬಿಂಬ ರೂಪಿ ಪರಮಾತ್ಮ
ಕ್ಷೇಮಧಾಮ = ಮುಕ್ತಿಧಾಮ ( ವೈಕುಂಠ )
ಭೂಮಾ = ಕಲ್ಯಾಣ ಗುಣಪೂರ್ಣನು
ದಾನವ ಕುಲಭೀಮಾ = ದೈತ್ಯ ಕುಲಕ್ಕೆ ಅತಿ ಭಯಂಕರ ರೂಪ
ಚಿತ್ರ ಮಹಿಮಾ = ಆಶ್ಚರ್ಯಕರವಾದ ಮಹಿಮಾನ್ವಿತನು
" ಶ್ರೀ ವಿಷ್ಣು ಸಹಸ್ರ ನಾಮ " ದಲ್ಲಿ....
ಪೂತಾತ್ಮ ಪರಮಾತ್ಮಾ ಚ
ಮುಕ್ತಾನಾಂ ಪರಮಾಗತಿಃ ।
ಅವ್ಯಯಃ ಪುರುಷಃ ಸಾಕ್ಷೀ
ಕ್ಷೇತ್ರಜ್ಞೋsಕ್ಷರ ಏವ ಚ ।।
ಯಜ್ಞಭೃದ್ಯಜ್ಞಕೃದ್ಯಜ್ಞೀ
ಯಜ್ಞಭುಗ್ಯಜ್ಞಸಾಧನಃ ।
ಯಜ್ಞಾಂತಕೃದ್ಯಜ್ಞಗುಹ್ಯ-
ಮನ್ನಮನ್ನಾದ ಏವ ಚ ।।
ಶ್ರೀಮದಾಚಾರ್ಯರು " ನ್ಯಾಯ ವಿವರಣ " ದಲ್ಲಿ...
ಚೇತನಾಚೇತನಜಗನ್ನಿ-
ಯಂತ್ರೇsಶೇಷಸಂವಿದೇ ।
ನಮೋ ನಾರಾಯಣಾಯಾ-
ಜಶರ್ವಶಕ್ರಾದಿವಂದಿತ ।।
ಶ್ರೀ ವ್ಯಾಸರಾಜರು " ಭೇದೋಜ್ಜೀವನಮ್ " ನಲ್ಲಿ...
ಸ್ವಭಾವತಃ ಸ್ವತಂತ್ರತ್ವ
ಪ್ರಮುಖೈರ್ನಿಖಿಲೈರ್ಗುಣೈಃ ।
ವಿಭಿನ್ನೋ ವಿಶ್ವತೋ
ವಿಷ್ಣುರ್ಜಯತಾಜ್ಜಗದೀಶ್ವರಃ ।।
ರಮಾನಥಾಯ ಹರಯೇ
ಪೂರ್ಣಾನಂದ ಶರೀರಿಣೇ ।
ನಿರ್ದೋಷಗುಣಪೂರ್ಣಾಯ
ಸರ್ವಯಜ್ಞಭುಜೇ ನಮಃ ।।
ಸುಚರಿತ್ರ = ನಿರ್ದೋಷವಾದ ಚರಿತ್ರೆಯುಳ್ಳವನು
ಶ್ರೀ ರಾಯರು " ತತ್ತ್ವಮಂಜರೀ " ಯಲ್ಲಿ...
ಪೂರ್ಣ ಚಿತ್ಸುಖದೇಹಾಯ
ದೋಷದೂರಾಯ ವಿಷ್ಣವೇ ।
ನಮಃ ಶ್ರೀಪ್ರಾಣನಾಥಾಯ
ಭುಕ್ತಿಮುಕ್ತಿಪ್ರದಾಯಿನೇ ।।
ಸರ್ವತ್ರ ಮಿತ್ರ = ಆಪ್ತ ಬಂಧು
ಪವಿತ್ರ = ಅತ್ಯಂತ ಪವಿತ್ರವಾದವನು!!
ಅಪರಾಜಿತ = ಅಜೇಯನು
ಅನಘ = ನಿರ್ದೋಷ, ಪಾಪಲೇಪವಿಲ್ಲದ ಶ್ರೀ ಹರಿ
ಅನಿರ್ವಿಣ್ಣ = ಮಹಾ ಪರಾಕ್ರಮಿ
" ಶಾಫರಕೇತು ಕೋಟಿ ಲಾವಣ್ಯ "
ಕೋಟಿ ಮನ್ಮಥ ಲಾವಣ್ಯವನ್ನು ಮೀರಿಸುವಂಥಾ ಲಾವಣ್ಯ!!
ದೈತ್ಯೇಂದ್ರ = ಹಿರಣ್ಯಕಶಿಪು
ಸುತನ = ಶ್ರೀ ಪ್ರಹ್ಲಾದರಾಜರ
ಕಾಯ್ದೆ = ಸಂರಕ್ಷಿಸಿದ
ನಿಷ್ಕಪಟ = ನಿರ್ದೋಷ
ಶ್ರೀ ರಾಯರು " ಕಾಠಕೋಪನಿಷತ್ " ನಲ್ಲಿ...
ನಿರ್ದೋಷಗುಣಪೂರ್ಣಾಯ
ದೋಷದೂರಾಯ ವಿಷ್ಣವೇ ।
ನಮಃ ಶ್ರೀಪ್ರಾಣನಾಥಾಯ
ಭಕ್ತಾಭೀಷ್ಟಪ್ರದಾಯಿನೇ ।।
ಮನುಜ ಹರಿ = ಶ್ರೀ ನೃಸಿಂಹ ರೂಪೀ
ವಪುಷ = ರಮಣೀಯವಾದ ದೇಹ ( ಅವತಾರ ) ವನ್ನು
ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಯರು...
ತಾವಕಂ ನರಹರೇತಿ ವಿರುದ್ಧಂ
ವೇಷಧಾರಣಮಿದಂ ತನುತೇ ನಃ ।
ಅತ್ಯಸಂಘಟಿತ ಕರ್ಮ ಚ ಕೃತ್ವಾ
ಪಾಲಯೇ ಪ್ರಣತಮಿತ್ಯುಪದೇಶಮ್ ।।
" ತಪನ ಕೋಟಿ ಪ್ರಭಾವ ಶರೀರಾ "
ಕೋಟಿ ಸೂರ್ಯರ ಕಾಂತಿಯುಳ್ಳ ದೇಹ
ಪ್ರಮಾಣ :
ಧ್ಯಾಯೇನೃಸಿಂಹಮುರು-
ವೃತ್ತರವಿತ್ರಿನೇತ್ರಂ
ಜಾನುಪ್ರಸಕ್ತಕರಯುಗ್ಮ-
ಮಥಾಪರಾಭ್ಯಾಮ್ ।
ಚಕ್ರಂ ಧರಂ ಚ ದಧತಂ
ಪ್ರಿಯಯಾ ಸಮೇತಂ
ತಿಗ್ಮಾಂಶುಕೋಟ್ಯಧಿಕ
ತೇಜಸಮಗ್ರ್ಯ ಶಕ್ತಿಮ್ ।।
ದುರಿತೌಘ = ಪಾಪ ಸಮೂಹ
ಪ್ರಮಾಣ :
ಕ್ರೂರಂ ವೀರಂ ಬೃಹದ್ವಿಷ್ಣು೦
ದೀಪ್ಯಂತಂ ವಿಶ್ವತೋಮುಖಮ್ \
ಪುಂ ಮೃಗೇಂದ್ರ ಭಯಕರಂ
ಶುಭಂ ಮೃತ್ಯೋಶ್ಚಮಾರಕಮ್ ।
ನಮಾಮಿ ಸ್ವಯಮಿತ್ಯೇಷ
ದ್ವಾಂತ್ರಿಂಶಾರ್ಣೋಮನುರ್ಹರೇ ।।
ಮಂದಾರ = ಕಲ್ಪವೃಕ್ಷ
ಖಳವಿಪಿನ ಕುಠಾರಾ = ದೈತ್ಯರೆಂಬ ಅರಣ್ಯಕ್ಕೆ ಗಂಡುಗೊಡಲಿ
ಕೃಪಣ ಬಂಧು = ದೀನ ಜನರ ಬಂಧು
ನಿಪುಣತನಕೆ = ಕೌಶಲ್ಯಕ್ಕೆ
ಉಪಮೆ = ಸರಿಸಮಾನವಾಗಿರುವುದು
" ಕಾಶ್ಯಪಿವರವಾಹನ "
ಶ್ರೀ ಕಶ್ಯಪ ಮುನಿಗಳಿನ್ದ ವಿನುತೆಯಲ್ಲಿ ಜನಿಸಿದ ಗರುಡದೇವರು
ವರ = ಶ್ರೇಷ್ಠ
ವಾಹನ = ವಾಹನ ( ಶ್ರೀ ಗರುಡಾರೂಢ ಶ್ರೀ ಹರಿ )
ಸಾಧ್ಯ = ಭಕ್ತರಿಗೆ ಲಭ್ಯನು
ಅಸಾಧ್ಯ = ದ್ವೇಷಿಗಳಿಗೆ ಅಲಭ್ಯನು
ಶ್ರೀ = ಮಂಗಳಪ್ರದನು
ಶ್ರೀದ = ಶ್ರೀ ಮಹಾಲಕ್ಷ್ಮೀದೇವಿಯನ್ನು ವಕ್ಷಸ್ಥಳದಲ್ಲಿ ಧರಿಸಿದವನು
ಅನುಪಮ = ಅಸದೃಶ
ಅನವದ್ಯ = ದೋಷವಿದೂರ
ಮೋದಮಯನೆ = ಆನಂದಮಯನು
ಪ್ರಹ್ಲಾದವರದ = ಶ್ರೀ ನರಸಿಂಹ
ಪ್ರಮಾಣ :
ಶ್ರೀ ರಾಯರು " ಮಂತ್ರಾರ್ಥ ಮಂಜರೀ " ಯಲ್ಲಿ...
ಅಶೇಷಗುಣಸಂಪೂರ್ಣ೦
ಸರ್ವದೋಷವಿವರ್ಜಿತಮ್ ।
ಅನಂತಾಮ್ನಾಯಸಂವೇದ್ಯಂ
ವಂದೇsಹಂ ಕಮಲಾಪತಿಮ್ ।।
ಅನಿಮಿತ್ತ ಬಂಧು = ಪರಮಾಪ್ತ ಬಂಧುವಾದ ಬಿಂಬಮೂರ್ತಿ
" ಜಗನ್ನಾಥವಿಠ್ಠಲ "
ಯೆನ್ನ ಬಿಂಬ ರೂಪಿಯಾದ ಶ್ರೀ ಜಗನ್ನಾಥವಿಠ್ಠಲೋsಭಿನ್ನ ಶ್ರೀ ಹರಿ
ತಾತಾ = ಜಗನ್ನಾಥ
ಗಣನೆಯಿಲ್ಲದವ = ಅಪ್ರಮೇಯ
ಕಥಾಮೃತ = ಹರಿಕಥೆಯೆಂಬ ಸುಧೆಯನ್ನು
ಉಣಿಸು = ಪಾನ ಮಾಡಿಸು!!
ಉಗ್ರೋsಪಿ ಅನುಗ್ರಏವಾಯಂ
ಸ್ವಪೋತಾನಾಂ ನೃಕೇಸರೀ ।
ಕೇಸರಿವ ಸ್ವಪೋತಾನಾಂ
ಅನ್ಯೇಷಾಮುಗ್ರವಿಗ್ರಹಃ ।।
ಉಗ್ರವಾದ ಸಿಂಹವು ತನ್ನ ಮಕ್ಕಳಲ್ಲಿ ಸದಾ ಕಾಲ ಸ್ನೇಹಮಯಿಯಾಗಿರುವಂತೆ; ಶ್ರೀ ನೃಸಿಂಹ ರೂಪೀ ಶ್ರೀ ಹರಿಯು ತನ್ನ ಮಕ್ಕಳೇ ಆದ ಭಕ್ತರಲ್ಲಿ ಸದಾ ಸ್ನೇಹಮಯಿಯೇ!! ಉಗ್ರನಲ್ಲ !
****
" ಅಧಿಕ ಮಾಸ - 3 "
" ಶ್ರೀ ಆಹ್ಲಾದಾಂಶ ಗುರುಜಗನ್ನಾಥದಾಸರ ಕೃತ ಶ್ರೀ ಶ್ರೀನಿವಾಸ ಸ್ತುತಿ "
ಶ್ರೀ ರಾಘವೇಂದ್ರತೀರ್ಥ ಕೃತ " ತತ್ತ್ವ ಮಂಜರೀ " ಯಲ್ಲಿ...
ಸಮಸ್ತ ಗುಣ ಸಂಪೂರ್ಣ೦
ಸರ್ವದೋಷ ವಿವರ್ಜಿತಮ್ ।
ಲಕ್ಷ್ಮೀ ನಾರಾಯಣಂ ವಂದೇ
ಭಕ್ತಾಭೀಷ್ಟ ಫಲಪ್ರದಮ್ ।।
ರಾಗ : ಮೋಹನ ತಾಳ : ಆದಿ
ಬಾರಯ್ಯಾ ವೇಂಕಟ ಮನ್ಮನಕೆ ।
ತ್ವರಿತದಿ ನಿಜನಾರೀ
ಸಹಿತದಿ ಈ ಸಮಯಕೆ ।
ಶರಣೆಂಬೆನೊ ನಿನ್ನ
ಪದಯುಗಕೆ ।। ಪಲ್ಲವಿ ।।
ಸಾರಿದ ನಿಜ ಶರಣನ
ಈ ಭವ ಭವ ।
ಘೋರ ಭಯವ
ಪರಿಹರಿಸುವುದಕ್ಕೆ ।। ಅ ಪ ।।
ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ
ದೋಷ ನಿರ್ಲಿಪ್ತಾ ।
ಮುಕ್ತಾಮುಕ್ತ
ಜೀವರಗಣದಾಪ್ತಾ
ನೀ ಸರ್ವತ್ರದಿ ವ್ಯಾಪ್ತಾ ।
ಭಕ್ತನ ಹೃದಯದಿ
ವ್ಯಕ್ತನಾಗಿ ನಿಜ ।
ಮುಕ್ತಿ ಪಥವ ಬಾರೋ
ಭಕ್ತಿಯನಿತ್ತು ।। ಚರಣ ।।
ಆನಂದ ನಿಲಯಾ
ನಿರ್ಮಲಕಾಯಾ
ಕವಿಜನಗೇಯಾ ।
ಆನಂದದಾಯಕ
ನಿರ್ಜಿತಮಾಯಾ
ಕಾಯಯ್ಯ ಜೀಯಾ ।
ಆನತ ಜನ
ಸನ್ಮಾನದ ಮನ್ಮನ ।
ವನಜದಿ ನೀ ಸಂನಿಹಿ-
ತಾಗುವುದಕೆ ।। ಚರಣ ।।
ಸೋಮಾಸುರನಾಮಕ
ದೈತ್ಯನ ಕೊಂದೂ
ವೇದವ ತಂದೂ ।
ಕೂರ್ಮ ಕಿಟಿ ನರಹರಿ
ರೂಪದಿ ನಿಂದೂ
ವಾಮನನೆಂದೂ ।
ರಾಮ ಭಾರ್ಗವ
ಯದುಕುಲಸಾಗರ ।
ಸೋಮ ಬೌದ್ಧ ಕಲ್ಕಿ
ಪ್ರೇಮದಿ ಮನಕೆ ।। ಚರಣ ।।
ನಿಗಮಗೋಚರ
ನಿತ್ಯಾನಂದಾ
ಸುಗಮ ನಿನ್ನಿಂದಾ ।
ಬಗೆ ಬಗೆ ಜನ್ಮವನೈದಿದೆ
ಮುಕುಂದಾ
ಮುಗಿವೆನೋ ಕರದಿಂದಾ ।
ಅಗಣಿತ ಗುಣನಿಧಿ
ಸುಗಮದಿ ಭವದ ।
ಬಗೆಯನು ತಿಳಿಸೋ
ನಗೆಮೊಗದಿ ಬಾ ।। ಚರಣ ।।
ಸಾಸಿರನಾಮ ನತಜನ
ಪ್ರೇಮಾ ಪೊರೆಯೋ ಶ್ರೀರಾಮ ।
ಆಶೇ ಪೂರ್ತಿಸಿ ಮಾಡೆನ್ನಲಿ
ಪ್ರೇಮಾ ಸುರ ಸಾರ್ವಭೌಮಾ ।
ವಾಸ ಮಾಡಿ
ಅಭಿಲಾಷೆಯ ಪೂರ್ತಿಸೋ ।
ವಾಸುದೇವ ವಾರಾಸಿಜ
ರಮಣಾ ।। ಚರಣ ।।
ವಿಧಿ ಶಂಭು ವಂದಿತ
ಪದಯುಗ ಕಮಲಾ
ನಿತ್ಯ ನಿರ್ಮಲಾ ।
ಆಧಿಭೂತಾಧ್ಯಾತ್ಮಿಕ
ತಾಪದ ಶಮಲಾ ನೀ
ಮಾಡೆನ್ನನು ವಿಮಲಾ ।
ಸದಯ ಸುಧಾಕರ
ಹೃದಯದಿ ತವ ಪದ ।
ಪದುಮ ಭಜಿಪೆ ನೀ
ಮುದದಲಿ ಮನಕೆ ।। ಚರಣ ।।
ಶರಣಾಗತ ಜನ
ಪರಿಪಾಲಾ
ಕರುಣಾಲವಾಲಾ ।
ಕರುಣಿಸೆನ್ನನು ಹೇ
ಸಿರಿಲೋಲಾ ನಮಿತ
ಜನ ಸುರಪಾಲಾ ।
ಸಿರಿ ಅಜ ಭವ ಸುರ-
ನಿಕರಾರ್ಚಿತ ಪದ ।
ಸರಸಿಜಯುತ ನೀ
ಸುರವರ ದೇವಾ ।। ಚರಣ ।।
ಪನ್ನಗಗಿರಿ ಕೃತ ವಾಸಾ
ಪೊರೆ ಎನ್ನನು ಶ್ರೀಶಾ ।
ಬಿನ್ನಪ ಮಾಳ್ಪೆನು ಹೇ
ಶ್ರೀನಿವಾಸಾ ಕೊಡು
ಎನಗೆ ಲೇಸಾ ।
ಎನ್ನ ಸಲಹೋದಕೆ
ಅನ್ಯರ ಕಾಣೆನೊ ।
ಮನ್ನಿಸು ನಿನಾಪನ್ನಜನ
ಸುಖದ ।। ಚರಣ ।।
ಲಕ್ಷ್ಮೀನಾಯಕ ವರ
ಪಕ್ಷಿ ಗಮನಾ
ಅಕ್ಷಯ ಫಲವನ್ನಾ ।
ರಕ್ಷಿಸಿ ಕಾಯ್ವದೋ ನೀ
ಎನ್ನಾ ಲಕ್ಷ್ಮಣನಣ್ಣಾ ।
ಅಕ್ಷರಾಕ್ಷರ ವಿಲಕ್ಷಣ
ಕರುಣ । ಕ ।
ಟಾಕ್ಷದಿ ಎನ್ನ ವೀಕ್ಷಿಸು
ಕ್ಷಣ ಕ್ಷಣ ।। ಚರಣ ।।
ಧರ್ಮಾರ್ಥಮೋಕ್ಷವ
ನಾನೊಲ್ಲೇ ಕರ್ಮದ
ಸುಳಿಯಲ್ಲೇ ।
ಮರ್ಮವ ತಿಳಿಯದೆ
ಬೀಳುವೆ ನಾನಿಲ್ಲೇ ।
ಕರ್ಮ ಭವದ ಮಹಾ
ಮರ್ಮವ ತಿಳಿಸೀ ।
ದುರ್ಮನ ಬಿಡಿಸೆಲೋ
ಬೊಮ್ಮನ ತಾತಾ ।। ಚರಣ ।।
ದಿಟ್ಟ ಗುರುಜಗನ್ನಾಥವಿಠ್ಠಲಾ
ನಾನನಾಥಾ ।
ಥಟ್ಟನೆ ನೀ
ಎನ್ನನು ಕಾಯೋ
ಶ್ರೀನಾಥಾ ಇಷ್ಟೇ
ಎನಮನದರ್ಥ ।
ಸೃಷ್ಟಿಯೊಳಗೆ ಬಹು
ಭ್ರಷ್ಟರ ಸ್ತುತಿಸಿ । ನಿ ।
ಕೃಷ್ಟನಾದೆನೋ
ಶ್ರೇಷ್ಠ ಮೂರುತೀ ।। ಚರಣ ।।
ವಿವರಣೆ :
" ವೇಂಕಟ "
ವೇಂ - ಪಾಪವನ್ನೂ
ಕಟತೇ = ಸುಡುವುದರಿಂದ
" ವೇಂಕಟ " ಎಂಬ ಹೆಸರನ್ನು ಪಡೆದಿರುವ ಶ್ರೀ ಹರಿ!
ಮನ್ಮ೦ದಿರಕೆ = ಹೃದಯ ಮಂದಿರಕೆನಿ
ಜ ನಾರೀ ಸಹಿತಾದಿ = ಶ್ರೀ ಮಹಾಲಕ್ಷ್ಮೀಯಿಂದೊಡಗೂಡಿ
ಈ ಸಮಯಕೆ = ನಾನು ಧ್ಯಾನದಲ್ಲಿರುವ ಕಾಲದಲ್ಲಿ
ಸಾರಿದ = ನಿನ್ನನ್ನು ಮೊರೆ ಹೊಕ್ಕ
ವ್ಯಕ್ತಾವ್ಯಕ್ತ = ಜ್ಞಾನಿಗಳಿಗೆ ಗೋಚರನು; ಪಾಮರರಿಗೆ ಕಾಣದವನು
ತ್ರಿಜಗದ್ವ್ಯಾಪ್ತಾ = ಬ್ರಹ್ಮಾಂಡಗತ ತ್ರಿಲೋಕಗಳಲ್ಲಿ ಸರ್ವತ್ರ ವ್ಯಾಪ್ತನಾದವನು
ದೋಷ ನಿರ್ಲಿಪ್ತಾ = ದೋಷ ಸ್ಪರ್ಶವಿಲ್ಲದವನು
ಗುಣದಾಪ್ತಾ = ಮುಕ್ತ ಜೀವರ ಸಮೂಹಕ್ಕೆ ಪರಮಾಪ್ತ ಬಂಧು
ನಿರ್ಮಲಕಾಯಾ = ಪರಿಶುದ್ಧವಾದ ಜ್ಞಾನಾನಂದಾತ್ಮಕ ಶರೀರ ಉಳ್ಳವನು
ಕವಿಗಳಗೇಯಾ = ಜ್ಞಾನಿಗಳಿಂದ ಗೇಗೀಯಮಾನನು
ನಿರ್ಜಿತಮಾಯಾ = ಮಾಯಾ ಬಂಧ ರಹಿತನು
ಮನ್ಮನ ವನಜದಿ = ನನ್ನ ಮನಸ್ಸೆಂಬ ಕಮಲ ಮಂದಿರಕೆ
" ಸೋಮಾಸುರನಾಮಕ ದೈತ್ಯನನ ಕೊಂದೂ "
ಸೋಮಕನೆಂಬ ದೈತ್ಯನು ಬ್ರಹ್ಮನಿಂದ ವೇದಗಳನ್ನು ಅಪಹರಿಸಿ ಸಮುದ್ರ ಗರ್ಭವನ್ನು ಸೇರಿದ ಅವನನ್ನು ಶ್ರೀ ಹರಿಯು ಮತ್ಸ್ಯಾವತಾರ ತಾಳಿ ಅವನನ್ನು ಕೊಂದು ವೇದವನ್ನು ಸಂರಕ್ಷಿಸಿದನು.
ಕಿಟ = ವರಾಹ
" ಯದುಕುಲಸಾಗರ ಸೋಮ "
ಯಾದವ ವಂಶವೆಂಬ ಸಮುದ್ರಕ್ಕೆ ಚಂದ್ರ ಸದೃಶನಾದ ಶ್ರೀ ಕೃಷ್ಣ ಪರಮಾತ್ಮ
ನಿಗಮ ಗೋಚರಾ = ವೇದ ಪ್ರತಿಪಾದ್ಯ
ನಿತ್ಯಾನಂದಾ = ಸದಾ ಆನಂದ ಸ್ವರೂಪನು
ಅಗಣಿತ ಗುಣನಿಧಿ = ಅಪಾರವಾದ ಅನಂತ ಕಲ್ಯಾಣ ಗುಣಗಣ ಪರಿಪೂರ್ಣನು
ಭವದ ಬಗೆಯನು = ಸಂಸಾರದಿಂದ ಪಾರಾಗುವ ಹಾದಿಯನ್ನು
ನಿತ್ಯ = ಸದಾ
ನಿರ್ಮಲಾ = ಮಂಗಳ ಸ್ವರೂಪನೇ
ಸುಧಾಕರ = ತಾಪತ್ರಯಗಳನ್ನು ದೂರಗೈಸುವ ಚಂದ್ರನಂತಿರುವವನು
ವಾರಾಸಿಜ ರಮಣಾ = ಕ್ಷೀರ ಸಮುದ್ರನ ಮಗಳಾದ ಶ್ರೀ ಮಹಾಲಕ್ಷ್ಮೀಯ ಪತಿ
" ಸಿರಿ ಅಜ ಭವ ಸುರನಿಕರಾರ್ಚಿತ "
ಶ್ರೀ ಮಹಾಲಕ್ಷ್ಮೀ, ಶ್ರೀ ಚತುರ್ಮುಖ ಬ್ರಹ್ಮದೇವರು, ಶ್ರೀ ಮಹಾರುದ್ರದೇವರೇ ಮೊದಲಾದ ಸಕಲ ದೇವತಾ ಗಣದಿಂದ ಪೂಜಿತವಾದ
ಪದ ಸರಸಿಜಯುಗ = ಪಾದಾರವಿಂದಗುಳ್ಳವನು
ಸುರವರದೇವಾ = ಸರ್ವೋತ್ತಮನಾದ ಶ್ರೀ ಹರಿ
ಪನ್ನಗಗಿರಿ ನಿಜಕೃತ ವಾಸಾ = ಶೇಷಾಚಲ ನಿವಾಸಿಯಾದ ಶ್ರೀ ಶ್ರೀನಿವಾಸ
ನಿನ್ನಾಪನ್ನ ಜನ = ನಿನ್ನ ಮೊರೆಹೊಕ್ಕ ಶರಣಾಗತ ಜನರಿಗೆ
ಸುಖದಾ = ಸುಖಪ್ರದನು
ಅಕ್ಷರ = ಅಕ್ಷರನಾಮಕ ಶ್ರೀ ಮಹಾಲಕ್ಷ್ಮೀ
ಕ್ಷರ = ಕ್ಷರ ನಾಮಕ ಬ್ರಹ್ಮಾದಿ ಸಕಲ ಜೀವ ವರ್ಗದಿಂದ
ವಿಲಕ್ಷಣ = ಅತ್ಯಂತ ಭಿನ್ನನು
" ಮರ್ಮವ ತಿಳಿಯದೇ "
ಜ್ಞಾನ ಪ್ರಾಪ್ತಿಗೆ ಕಾರಣವಾದ ಕರ್ಮದ ರಹಸ್ಯವನ್ನು ತಿಳಿಯದೇ
ಬೀಳುವೆ ನಾನಿಲ್ಲೇ = ಅದೇ ಕರ್ಮ ಕೂಪದಲ್ಲಿಯೇ ನಾನು ಬೀಳುತ್ತಿದ್ದೇನೆ
ಬೊಮ್ಮನ ತಾತಾ = ಶ್ರೀ ಬ್ರಹ್ಮದೇವರ ಜನಕ
ಶ್ರೀನಾಥಾ = ಶ್ರೀ ಮಹಾಲಕ್ಷ್ಮೀ ರಮಣ
" ಗುರು ಜಗನ್ನಾಥ ವಿಠಲನ "
ಎನ್ನ ಬಿಂಬ ಮೂರ್ತಿ ಗುರು ಜಗನ್ನಾಥ ವಿಠಲೋ sಭಿನ್ನ ಶ್ರೀ ಹರಿ
ಶ್ರೀ ರಾಘವೇಂದ್ರತೀರ್ಥ ಕೃತ " ಶ್ರೀಮನ್ನ್ಯಾಯಸುಧಾ ಪರಿಮಳ " ದಲ್ಲಿ...
ಸರ್ವೇ೦ದ್ರಿಯ ಪ್ರೇರಕೇಣ
ಶ್ರೀ ಪ್ರಾಣಪತಿನೇರಿತಃ ।
ಯಾದವೋಚಮಹಂ ತೇನ
ಪ್ರೀಯತಾಂ ಕಮಲಾಲಯಃ ।।
****
" ಅಧಿಕ ಮಾಸ - 4 "
" ಶ್ರೀ ಇಂದ್ರದೇವರ ಅಂಶ ಸಂಭೂತರು ಶ್ರೀ ವೈಕುಂಠದಾಸರು "
ಭಾರತ ಭೂಮಿ ಹಲವು ಸಂಸ್ಕೃತಿಗಳ ತವರಾಗಿದೆ.
ಹಲವು ಧರ್ಮಗಳ ಆಗರವಾಗಿದೆ.
ಅದರಲ್ಲೂ ಕರ್ನಾಟಕವಂತೂ ವಿವಿಧ ಭಕ್ತಿ ಪಂಥಗಳ ನೆಲೆಯಾಗಿದೆ.
ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರು 13ನೇ ಶತಮಾನದಲ್ಲಿ ಶ್ರೀ ಹರಿಯ ಆಜ್ಞೆಯಂತೆ ಧರೆಗಿಳಿದು ಬಂದ ಶ್ರೀ ವಾಯುದೇವರ ಅವತಾರಿಗಳಾದ ಶ್ರೀಮನ್ಮಧ್ವಾಚಾರ್ಯರು.
ಅವರಿಂದ ಪ್ರಾರಂಭಗೊಂಡ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ನಾಂದಿ ಹಾಡಿದವರು ಶ್ರೀ ನರಹರಿತೀರ್ಥರು.
ಶ್ರೀ ನರಹರಿತೀರ್ಥರ ನಂತರ ದಾಸ ಸಾಹಿತ್ಯಕ್ಕೆ ಮೆರಗು ಕೊಟ್ಟವರು ಶ್ರೀ ಧ್ರುವಾಂಶ ಶ್ರೀಪಾದರಾಜರು.
ಶ್ರೀ ಶ್ರೀಪಾದರಾಜರಿಂದ ಮುಂದುವರೆದ ಈ ಸಾಹಿತ್ಯದ ಉಜ್ವಲ ಪರಂಪರೆಯನ್ನು ಬೆಳೆಸಿದವರು
ಶ್ರೀ ಶಂಖುಕರ್ಣಾವತಾರಿಗಳಾದ ಶ್ರೀ ಪ್ರಹ್ಲಾದರೇ ವ್ಯಾಸರಾಜ ಗುರುಸಾರ್ವಭೌಮರು.
ಶ್ರೀ ವ್ಯಾಸರಾಜರ ನೇತೃತ್ವದಲ್ಲಿ ದಾಸಕೂಟ ಪ್ರಾರಂಭವಾಯಿತು.
ಶ್ರೀ ಭಾವಿಸಮೀರ ವಾದಿರಾಜರು - ಶ್ರೀ ಯಮಾಂಶ ಕನಕದಾಸರು ಮತ್ತು ಶ್ರೀ ನಾರದಾಂಶ ಪುರಂದರದಾಸರು ಈ ದಾಸ ಕೂಟಕ್ಕೆ ಸೇರಿದವರು.
ಶ್ರೀ ಪುರಂದರದಾಸರ ಕಾಲವಂತೂ ಹರಿದಾಸ ಸಾಹಿತ್ಯದ " ಸುವರ್ಣ ಕಾಲ " ವೆನ್ನುತ್ತಿದ್ದರು.
ಇವರು ಸಾಮಾಜಿಕ ಮತ್ತು ಲೋಕ ನೀತಿಯ ಕುರಿತು ಖಡಾ ಖಂಡಿತವಾಗಿ ಆಡು ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ.
ಶ್ರೀ ಪುರಂದರದಾಸರ ಜಾಡಿನಲ್ಲಿಯೇ ಸಾಗಿದ ಮತ್ತೊಬ್ಬ ದಾಸ ಶ್ರೇಷ್ಠರೆಂದರೆ ಕವಿಸಾರ್ವಭೌಮ ಶ್ರೀ ಕನಕದಾಸರು.
ಹೀಗೆ ಹರಿದಾಸರುಗಳಿಂದ ಬೆಳೆದು ಹೆಮ್ಮರವಾಗಿ ದಾಸ ಸಾಹಿತ್ಯವು ಫಲವೀಯ್ಯುತ್ತಾ ಪ್ರಥಮ ಘಟ್ಟದ ಬೆಳವಣಿಗೆಗೆ ಸಾಧನವಾಯಿತು.
ದಾಸ ಸಾಹಿತ್ಯ ಎನ್ನುವುದು ವ್ಯಾಸ ಸಾಹಿತ್ಯದ ಇನ್ನೊಂದು ರೂಪ.
ವ್ಯಾಸ ಸಾಹಿತ್ಯ ಎನ್ನುವುದು ಹಣ್ಣಿನಂತೆ.
ದಾಸ ಸಾಹಿತ್ಯ ಎನ್ನುವುದು ಹಣ್ಣಿನ ರಸದಂತೆ.
ಹಣ್ಣು ತಿನ್ನಲಾಗದಿದ್ದವರು ರಸವನ್ನು ಸುಲಭವಾಗಿ ಕುಡಿಯುವಂತೆ; ಸಂಸ್ಕೃತ ಬಾರದೇ ಇರುವ ಪಾಮರರಿಗೆ ದಾಸ ಸಾಹಿತ್ಯ ಒಂದು ವರದಂತೆ.
" ಸುಧಾ ಓದು ಪದ ಮಾಡು " ಎನ್ನುವ ವಾಕ್ಯದಂತೆ ಪಂಡಿತರಿಗೂ ಕೂಡಾ ದಾಸ ಸಾಹಿತ್ಯ ಕ್ಲಿಷ್ಟವಾಗಬಹುದು.
ಅಲ್ಲದೇ ಅವರವರ ಯೋಗ್ಯತೆಗೆ ತಕ್ಕಂತೆ ದಾಸ ಸಾಹಿತ್ಯ ಅರ್ಥವಾಗಬಹುದು.
" ಶ್ರೀ ವೈಕುಂಠ ದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಕೇಶವಚಾರ್ಯ ಅಯ್ಯಂಗಾರ್
ತಂದೆ :ಶ್ರೀ ತಿರುಮಲಾಚಾರ್ಯ ಅಯ್ಯಂಗಾರ್
ಕಾಲ : ಕ್ರಿ ಶ 1480 - 1550
ಅಂಶ : ಶ್ರೀ ಇಂದ್ರದೇವರು
ಕ್ಷಕೆ : 08
" ಸಮಕಾಲೀನ ಯತಿಗಳು "
ಶ್ರೀ ವ್ಯಾಸರಾಜರು - ಶ್ರೀ ವಾದಿರಾಜರು - ಶ್ರೀ ಗೋವಿಂದ ಒಡೆಯರು - ಶ್ರೀ ವಿಜಯೀ೦ದ್ರರು
" ಸಮಕಾಲೀನ ಹರಿದಾಸರು "
ಶ್ರೀ ಪುರಂದರ ದಾಸರು - ಶ್ರೀ ಕನಕ ದಾಸರು - ಶ್ರೀ ನವಸಾಲ್ಪುರಿ ತಿಪ್ಪಣ್ಣಾರ್ಯರು
" ಕೃತಿಗಳು "
ಗಜೇಂದ್ರ ಮೋಕ್ಷ - ಶ್ರೀ ಶನೈಶ್ಚರ ದಂಡಕಮ್
ಪದ 14 - ಸುಳಾದಿ 3
ಶ್ರೀ ವಾದಿರಾಜ ಗುರುಸಾರ್ವಭೌಮರು ಸಂಚಾರ ಕ್ರಮದಲ್ಲಿ ಬೇಲೂರಿಗೆ ಬಂದಾಗ - ಶ್ರೀ ಕೇಶವ ಅಯ್ಯಂಗಾರ್ ಅವರು ಶ್ರೀ ವಾದಿರಾಜರ ಸನ್ನಿಧಿಗೆ ಬಂದು ವಿಶೇಷವಾಗಿ ಸೇವೆ ಸಲ್ಲಿಸಿದರು.
ಅವರ ಸೇವೆಗೆ ಮೆಚ್ಚಿದ - ಶ್ರೀ ವಾದಿರಾಜ ಗುರುಸಾರ್ವಭೌಮರು ಶ್ರೀ ಹಯಗ್ರೀವ ಸಾಲಿಗ್ರಾಮ ಕೊಟ್ಟು ನಿತ್ಯ ಪೂಜಿಸಿ ಶ್ರೀ ಹಯಗ್ರೀವ ಪರಮಾನುಗ್ರಹ ಮಾಡುತ್ತಾನೆ ಎಂದು ಹೇಳಿ ಕೊಟ್ಟರು.
ಶ್ರೀ ಬೇಳೂರು ಕೇಶವ ದಾಸರು ಪ್ರತಿನಿತ್ಯ ಶ್ರೀ ಹಯಗ್ರೀವ ಸಾಲಿಗ್ರಾಮವನ್ನು ಭಕ್ತಿ ಶ್ರದ್ಧೆಗಳಿಂದ ಪೂಜಿಸಿ ಶ್ರೀ ಹಯವದನನ್ನು ಸಾಕ್ಷಾತ್ಕಾರ ಪಡೆದು ಅವನಿಂದಲೇ " ವೈಕುಂಠ ವಿಠಲ " ಯೆಂಬ ಅಂಕಿತವನ್ನು ಸ್ವೀಕರಿಸಿ ಪದ - ಸುಳಾದಿಗಳನ್ನು ರಚಿಸಿದರು.
" ಶಿಷ್ಯರು "
ಶ್ರೀ ಅಚ್ಯುತ ವಿಠಲ - ಶ್ರೀ ವರದ ಕೇಶವ - ಶ್ರೀ ಚೆನ್ನ ಕೇಶವ ಮತ್ತು ಬೈಲಾಪುರಿ ಕೇಶವ
ಶ್ರೀ ಬೈಲಾಪುರಿ ಕೇಶವಾಂಕಿತ ಶ್ರೀ ನಂಜುಂಡ ಶ್ರೀ ವೈಕಂಠ ದಾಸರಿಗೆ ಅಚ್ಚುಮೆಚ್ಚಿನ ಪ್ರೀತಿಯ ಶಿಷ್ಯ.
ಶ್ರೀ ವೈಕುಂಠದಾಸರು ತಮ್ಮ ಪ್ರೀತಿಯ ಶಿಷ್ಯನಾದ ಶ್ರೀ ನಂಜುಂಡನನ್ನು... ...
ರಾಗ : ತೋಡಿ ತಾಳ : ಆದಿ
ಬದುಕೋ ಬದುಕೋ
ನಂಜುಂಡಾ । ಮ ।
ತ್ತೊದಗಿ ನೂರು ವರುಷ
ಪರಿಯಂತ ।। ಪಲ್ಲವಿ ।।
ಜನನಿಯಾ ಮಾತು
ಮೀರಾದೆ । ಪರ ।
ವನಿತೆಯರಿಗೆ ಮನ
ಸೋಲಾದೆ ನಂಜಾ ।
ಬಿನುಗು ದೈವಂಗಳಿಗೆರಗದೆ
ದುರ್ಜನರ ಸಂಗವನು
ಮಾಡಾದೆ ನಂಜಾ ।। ಚರಣ ।।
ತಪ್ಪು ದಾರಿಯಲ್ಲಿ
ನಡಿಯಾದೆ ಆರು ।
ವಪ್ಪಾದೆ ಕರ್ಮವು
ಮಾಡಾದೆ ನಂಜಾ ।
ತಪ್ಪು ಕಥೆಗಳ ನೀ ಕೇಳಾದೆ ।
ಅಪಸವ್ಯ ವಾಕ್ಕ್ಯಾಗಳಾ-
ನಾಡಾದೆ ನಂಜಾ ।। ಚರಣ ।।
ಹರಿಗೆರಗೂತಲಿರು
ಶರಣರ್ಗೆ ನಿರುತಾದಿ ।
ಹರಿಯ ಪೂಜೆಯನು
ನೀ ಮಾಡುತಾ ನಂಜಾ ।
ಹರಿ ಸರ್ವೋತ್ತಮನೆಂತೆಂದು
ಇರು ಕಂಡ್ಯಾ ।
ಹರಿ ಶ್ರೀ ವೈಕುಂಠ ವಿಠಲ
ರಕ್ಷಿಸುವನು ನಿನ್ನಾ ।। ಚರಣ ।।
ಮುಂದೆ ಶ್ರೀ ವೈಕುಂಠ ದಾಸರು " ಶ್ರೀ ಪಂಗನಾಮದ ತಿಮ್ಮಣ್ಣದಾಸರಾಗಿಯೂ - ಶ್ರೀ ಮೊದಲಕಲ್ಲು ಶ್ರೀ ಶೇಷದಾಸರಾಗಿಯೂ ದಾಸ ರೂಪದಲ್ಲಿ ಅವತಾರ ಮಾಡಿದರು.
ಈ ಶ್ರೀ ನಂಜುಂಡನೇ ಮುಂದೆ " ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಾಗಿ [ ಶ್ರೀ ವ್ಯಾಸ ವಿಠಲ ] ಅವತಾರ ಮಾಡಿದ ಪೂತಾತ್ಮರು.
ಶ್ರೀ ವೈಕುಂಠದಾಸರ ರಚನೆಗಳು...
೧. ಏಳಿ ಸುನಂದನಾ ನೀ ಬ್ಯಾಗದಿ
೨. ಮದಕರಿಯೇ ವದನಕವಳವನಾದೆಲೊ ದೇವ
೩. ಪಾಪಾತ್ಮ ನಾನಲ್ಲ ಪಾಪ ಎನಗಿನಿತಿಲ್ಲ
೪. ನೀನೆ ಶ್ರಾದ್ಧದನ್ನವನುಂಡವಾ ನಾನರಿಯದಂತೆ
೫. ಕೊಡುವದಿಲ್ಲವೆ ಪೋದ ಕಂಣು ನಾಲಿಗೆಯಾ
೬. ಪಾಲಿಪೆದು ನಯನಗಳ ನಾಲಿಗೆಯ ನೀನು
೭.ಶ್ರೀರಂಗ ಯಾತ್ತ್ರಿಯನು ಮಾಡಿ ಬಾರೆಂದೆನ್ನ
೮. ನೋಡಾಲ ಬೇಕೇ ಎನ್ನೊಡೆಯನ
೯. ಅಕಟಕಟ ಬಹಳ ಬಡತನವಡಸಿತೆ ನಿನಗೆ
೧೦. ಮಗುವು ಕಾಣೆಯ್ಯಾ ಮಾಯದ ಮಗುವು ಕಾಣೆಯ್ಯಾ
೧೧. ಏನು ಕಾರಣ ಎನಗ ತಿಳಿಯದಿದಕೋ
೧೨. ಕೊಂಡಾಡಬಹುದೇ ಯತೀಂದ್ರ ಎನ್ನಾ ಪಾಂಡವ ಪ್ರಿಯನಾ ಪೂಜಕ ವಾದಿರಾಜ ಯತೀ
೧೩. ಎಂಥಾ ಗಾಡಿಕಾರನೇ ಕೃಷ್ಣಯ್ಯ
" ಸುಳಾದಿ "
೧. ಲಕ್ಷುಮೀಯ ಮಸ್ತಕಕೆ ಮಣಿ ಮೌಳಿಯಾದ
೨. ಎಲ್ಲಿಹ ಮಧುರಾ ಪುರ ಇನ್ನೆಲ್ಲಿಹ ಕಂಸಾಸುರನೆ
೩. ನೋಡಲೇ ಮನವೇ ಜಗದೀಶನ
****
" ಅಧಿಕ ಮಾಸ - 5 "
" ಶ್ರೀ ವಿಜಯ ಪುರಂದರ "
ಮನ್ಮನೋಭೀಷ್ಟ೦ವರದಂ
ಸರ್ವಾಭೀಷ್ಟ ಫಲಪ್ರದಂ ।
ಪುರಂದರ ಗುರು೦ ವಂದೇ
ದಾಸಶ್ರೇಷ್ಠ೦ ದಯಾನಿಧಿಮ್ ।।
ಸುಮಾರು 2000 ವರ್ಷಗಳ ಇತಿಹಾಸ ಉಳ್ಳ - ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಶೀಲಿಸಿದರೆ ಒಂದೊಂದು ಪ್ರಕಾರಕ್ಕೂ ಒಬ್ಬೊಬ್ಬ ಪ್ರತಿನಿಧಿಗಳು ಕಂಡು ಬರುತ್ತಾರೆ.
ಚಂಪೂ ಪ್ರಕಾರಕ್ಕೆ - ಪಂಪಾ
ರಗಳೆಯ ಪ್ರಕಾರಕ್ಕೆ - ಹರಿಹರ
ಷಟ್ಪದಿಯ ಪ್ರಕಾರಕ್ಕೆ - ಕುಮಾರ ವ್ಯಾಸ
ಸಾಂಗತ್ಯ ಪ್ರಕಾರಕ್ಕೆ - ರತ್ನಾಕರ
ತ್ರಿಪದಿಯ ಪ್ರಕಾರಕ್ಕೆ - ಸರ್ವಜ್ಞ
ಮೊದಲಾದವರು ಹೇಗೆ ಪ್ರಮುಖರಾಗಿರುವರೋ -
ವಚನ ಪ್ರಪಂಚಕ್ಕೆ - ಬಸವಣ್ಣನವರು
ಕೀರ್ತನ ಕ್ಷೇತ್ರಕ್ಕೆ ಶ್ರೀ ಪುರಂದರದಾಸರು ಮುಖ್ಯ ಪ್ರತಿನಿಧಿಗಳಾಗಿ ಪರಿಗಣಿತರಾಗಿದ್ದಾರೆ.
ಈ ಸಾಂಟಾ ಸಾಹಿತ್ಯ ವರ್ಗಕ್ಕೆ ಸೇರಿದ ಯಾರೂ ತಾವಾಗಿ ಸಾಹಿತಿಗಳೆಂದು ಹೇಳಿಕೊಂಡಿಲ್ಲ.
ಈ ಸಮುದಾಯದವರು ಪ್ರಥಮತಃ ದೈವ ಭಕ್ತರು.
ಅವರು ತಮ್ಮ ಇಷ್ಟ ದೇವತೆಯನು ಕೊಂಡಾಡಿದ ಮಾತುಗಳು ಭಾವಾವೇಶದಿಂದಲೂ - ಹೃದಯಾಂತರಾಳದಿಂದಲೂ ಹೊರಹೊಮ್ಮಿದ ಭಕ್ತಿ ರಚನೆಗಳಾಗಿರುವುದರಿಂದ ಅವುಗಳಲ್ಲಿ ಸಾಹಿತ್ಯದ ಸತ್ವ ಇರುವುದನ್ನು ಕಂಡ ಸಹೃದಯಿಗಳು ಅವರ ರಚನೆಗಳನ್ನು ಒಂದು ಪ್ರಕಾರವಾಗಿ ಭಾವಿಸುವುದು ರೂಢಿಯಾಗಿದೆ.
ಪ್ರೌಢ ಕವಿಗಳಂತೆ ಅವರು ಬಳಪ ಹಲಿಗೆ ಹಿಡಿದು ಕಾವ್ಯ ರಚನೆ ಮಾಡಿದವರಲ್ಲ !
ಆದರೆ ಈ ಒಂದೊಂದು ವಿಶಿಷ್ಟ ವಿಧಾನವೂ ಆಯಾ ಕ್ಷೇತ್ರದ ಪ್ರಭಾವಶಾಲಿಯೊಬ್ಬನ ಪರಿಶ್ರಮದಿಂದ ಪುಷ್ಟಿಗೊಂಡ ಬಳಿಕ ಇತರರೂ ಅವರನ್ನು ಅನುಸರಿಸಿ ಅದನ್ನು ಬೆಳೆಸಿದರು.
ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ " ಶ್ರೀ ಹರಿದಾಸ ಸಾಹಿತ್ಯ " ವೆಂದ ಕೂಡಲೇ ನಮಗೆ " ಶ್ರೀ ಪುರಂದದಾಸರ " ನೆನಪಾಗುತ್ತದೆ.
ಅವರ ಕೃತಿ ಸಮುದಾಯವನ್ನು ಪರಿಶೀಲಿಸಿದಾಗ ಆ ಮಾಧ್ಯಮದ ಉತ್ತಮೋತ್ತಮ ನಿದರ್ಶನಗಳೆಲ್ಲಾ ನಮಗೆ ಮನವರಿಕೆಯಾಗುತ್ತದೆ ಮತ್ತು ನಮ್ಮ ಜೀವನಕ್ಕೆ ಅನ್ವಯವಾಗುತ್ತವೆ.
ಶ್ರೀ ನಾರದಾಂಶ ಪುರುಂದರದಾಸರಿಗೆ ಹರಿದಾಸ ದೀಕ್ಷೆಯನ್ನೂ - ಅಂಕಿತವನ್ನೂ ನೀಡಿದ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ತಮ್ಮ ಶಿಷ್ಯರ ಸಿದ್ಧಿಯನ್ನು ಮೆಚ್ಚಿಕೊಂಡು...
" ದಾಸರೆಂದರೆ ಪುರಂದರದಾಸರಯ್ಯ "ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.
ಈ ಹೊಗಳಿಕೆಯ ದಾಟಿಯೂ ಸಹ ಗಮನಾರ್ಹವಾದುದು.
ಹರಿದಾಸರೆಂಬ ವೇಷ ತೊಟ್ಟು ನಟಿಸುತ್ತಿದ್ದವರ ದುರ್ಗುಣಗಳೆನ್ನೆಲ್ಲ ಮೊದಲು ಪಟ್ಟಿ ಮಾಡಿ ಹೇಳುವರು.
ಕಾಡಿ ಬೇಡಿ ಬಳಲಿಸುತ ಕಾಸು ಗಳಿಸುವ ಪುರುಷ ಹರಿದಾಸನೇ?
ಅಂಬುಜೋದ್ಭವನ ಪಿತನ ಆಗಮಗಳರಿಯದೆ ತಂಬೂರಿ ಮೀಟಲವ ಹರಿದಾಸನೇ?
ಮಾಯಾ ಸಂಸಾರದಲ್ಲಿ ಮಮತೆ ಹೆಚ್ಚಾಗಿಟ್ಟು ಗಾಯನವ ಮಾಡದವ ಹರಿದಾಸನೇ?
ಗೂಟ ನಾಮವ ನಿಟ್ಟು ಕೊಟ್ಟರಿಯೇ ತಾನೆನುತ ಭೂಟಕವ ಮಾಡಿದವ ಹರಿದಾಸನೇ?
ಎಂದು ಕಟುವಾಗಿ ಖಂಡಿಸಿಯುವರು.
ಶ್ರೀ ನಾರದಂಶ ಪುರಂದರದಾಸರು ಬಾಳಿ ಬದುಕಿದ ಅವಧಿಯಲ್ಲಿ ಈಗ ನಮಗೆ ತಿಳಿದು ಬರುವಂತೆ ಶ್ರೀ ಕನಕದಾಸರು ಮತ್ತೂ ಬೇಲೂರಿನ ಶ್ರೀ ವೈಕುಂಠ ದಾಸರೆನ್ನುವವರು ಇದ್ದರು.
ಶ್ರೀ ಕನಕದಾಸರಂತೂ ಶ್ರೀ ವ್ಯಾಸರಾಜರ ಅನುಗ್ರಹಕ್ಕೆ ಪಾತ್ರರಾದವರು.
ಶ್ರೀ ವೈಕುಂಠ ದಾಸರಿಗೆ ಜಗದೊಡೆಯನಾದ ಶ್ರೀ ಕೃಷ್ಣ ಪರಮಾತ್ಮ ಒಲಿದಿದ್ದನೆಂದೂ - ಆತನ ಬಾಲ ಲೀಲೆಯನ್ನು ಕಂಡು ಕೃತಾರ್ಥರಾಗಿದ್ದರೆಂದು ತಿಳಿಯುತ್ತದೆ.
ಶ್ರೀ ವಾದಿರಾಜರು ಶ್ರೀ ವೈಕುಂಠ ದಾಸರನ್ನು ನೋಡಲು ಬೇಲೂರಿಗೆ ಹೋಗಿ ಅವರನ್ನು ಅನುಗ್ರಹಿಸಿ ಶ್ರೀ ಹಯಗ್ರೀವ ಸಾಲಿಗ್ರಾಮ ಕೊಟ್ಟು ಬಂದಿದ್ದರು.
ಹರಿದಾಸ ಸಾಹಿತ್ಯದ ಈ ಸುವರ್ಣ ಯುಗದಲ್ಲಿ ಶ್ರೀ ಶ್ರೀಪಾದರಾಜರೂ - ಶ್ರೀ ವ್ಯಾಸರಾಜರೂ - ಶ್ರೀ ವಾದಿರಾಜರೂ ಯತಿಗಳಾಗಿದ್ದರೂ - ಹರಿದಾಸ ಸಾಹಿತ್ಯದ ಮೇಲ್ಮೆಗೆ ಮುಖ್ಯ ಆಧಾರಪ್ರಾಯರಾಗಿದ್ದರು.
ಶ್ರೀ ವ್ಯಾಸರಾಯರು ಮಾಡಿರುವ ಆಕ್ಷೇಪಣೆಗಳನ್ನು ಗಮನಿಸಿದರೆ ಈಗಲೂ ಇನ್ನೂ ಕೆಲವರು ಇದ್ದಿರಬಹುದೆಂದು ತೋರುತ್ತದೆ.
ಹರಿದಾಸ ಸಾಹಿತ್ಯದ ಈ ಸುವರ್ಣ ಯುಗದ ಬಳಿಕ ಸುಮಾರು 118 ವರ್ಷಗಳ ತರುವಾಯ ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯರಾಯರ ನೇತೃತ್ವದಲ್ಲಿ ಈ ಹರಿದಾಸ ಸಾಹಿತ್ಯದ ಪುನರುಜ್ಜೀವನವಾಯಿತು.
ಆಗ ಹರಿದಾಸ ದೀಕ್ಷೆಯನ್ನು ತಾಳಿದ ಹರಿದಾಸರಲ್ಲಿ ಬಹುಮಟ್ಟಿಗೆ ಎಲ್ಲರೂ ಶ್ರೀ ಪುರಂದರದಾಸರನ್ನು ಸ್ತುತಿಸಿದ್ದಾರೆ ಎಂದ ಮೇಲೆ - ಶ್ರೀ ಪುರಂದರದಾಸರ ಹಿರಿಮೆ ಹೇಗೆ ಶತಮಾನಗಳು ಕಳೆದರೂ ಸ್ವಲ್ಪವೂ ಕುಗ್ಗಲಿಲ್ಲವೆನ್ನುವದು ಸ್ಪಷ್ಟವಾಗುವುದು.
ಶ್ರೀ ಪುರಂದರದಾಸರಿಂದ " ಶ್ರೀ ವಿಜಯವಿಠಲ " ಎಂಬ ಸ್ಪಪ್ನಾಂಕಿತವನ್ನು ಪಡೆದ ಶ್ರೀ ವಿಜಯದಾಸರೊಬ್ಬರೇ ಈಗ ತಿಳಿದು ಬಂದಿರುವ ಮತ್ತೂ ಶ್ರೀ ಪುರಂದರದಾಸರನ್ನು ಕುರಿತು ೨೩ ಕೃತಿಗಳನ್ನು ರಚಿಸಿರುವರು.
ಆ ವೇಳೆಗಾಗಲೇ ಒಂದು ನೂರು ವರ್ಷಗಳು ಕಳೆದಿದ್ದರಿಂದಲೂ - ಶ್ರೀ ವಿಜಯದಾಸರಿಗೆ ಶ್ರೀ ಪುರಂದರದಾಸರಲ್ಲಿ ಅಪಾರವಾದ ಗುರುಭಕ್ತಿ ಇದ್ದುದರಿಂದಲೂ - ಶ್ರೀ ಪುರಂದರದಾಸರ ಜೀವನ ವೃತ್ತಾಂತದಲ್ಲಿ ಇತಿಹಾಸಕ್ಕಿಂತಲೂ ಐತಿಹ್ಯದ ಅಂಶ ಕಂಡು ಬಂದರೆ ಆಶ್ಚರ್ಯವೇನಿಲ್ಲ.
ಶ್ರೀ ವಿಜಯರಾಯರು....
ಇಂಥಾ ಹರಿದಾಸರು ಮಿಗಿಸಿದ್ದ ಪ್ರಸಾದ । ಇಂತು ಯೆನಗೆ ಬಂದು ಪ್ರಾಪುತವಾದ ಮೇಲೆ । ಚಿಂತೆ ಯಾತಕೆ ಮನವೇ ಆನಂದತೀರ್ಥರ । ಗ್ರಂಥದಲ್ಲಿಗೆ ಸಮ್ಮತವಾಗಿಪ್ಪುದು । ಪಂಥವಾಡುವ ಜನರು ಆಡಿಕೊಳ್ಳಲಿ ಅವರ । ಪಂಥ ಪೋಗದಲಿರು ಕಂಡರೆ ಕೆಲಸಾರು । ಕಂತು ಜನಕ ರಂಗ ವಿಜಯವಿಠಲ ತಾನೇ । ಚಿಂತೆ ಮಾಡುವ ತನ್ನ ನೆನಸಿದ ಭಕ್ತನಿಗೆ ।।
ಹರಿಪ್ರಸಾದಾದವಗೆ ಯಾವದಾದರೂ ಕಡಿಮೆ । ನರರಿಗೆ ಆಗುವದೇ ವಿಜಯವಿಠಲ ಪೊಳೆವ ।
\ಅಜ್ಞಾನತಿಮಿರಚ್ಛೇದ೦
ಬುದ್ಧಿಸಂಪತ್ಪ್ರದಾಯಕಮ್ ।
ವಿಜ್ಞಾನ ವಿಮಲಂ ಶಾಂತಂ
ವಿಜಯಾಖ್ಯ ಗುರು೦ಭಜೇ ।।
****
" ಅಧಿಕ ಮಾಸ - 6 "
" ಹರಿದಾಸರ ಮೇಲ್ಮೆ "
ಶ್ರೀ ಹರಿದಾಸರ ಮೇಲ್ಮೆಯನ್ನು ಹೇಳಲಳವಲ್ಲ.
ದುಡ್ಡು ಅಧಿಕಾರಗಳಿಂದ ದೊಡ್ಡವರೆನ್ನಿಸುವುದಿಲ್ಲ.
ಲೌಕಿಕ ಮೌಲ್ಯಗಳಿಂದ ಸಾಮಾನ್ಯ ಜನಗಳು ಸಮಾಜದಲ್ಲಿ ಹೇಗೆ ಶ್ರೇಷ್ಠರೆನ್ನಿಸುವರೋ ಅದನ್ನು ಮಿಗಿಲಾಗಿ ಶ್ರೀ ಹರಿದಾಸರು ತಮ್ಮ ಪಾಲಿನ ಐಶ್ವರ್ಯ ಮತ್ತು ತಮ್ಮ ವಿಶೇಷಾಧಿಕಾರಗಳಿಂದ ಒಟ್ಟು ಲೋಕಕ್ಕೆ ಕಲ್ಯಾಣಪ್ರದರೆನ್ನಿಸುವರು.
ಇದಕ್ಕೆ ಶ್ರೀ ನಾರದಾಂಶ ಪುರಂದರದಾಸರು ಕೊಟ್ಟಿರುವ ಉತ್ತರವನ್ನು ನೋಡಿ....
ದರಿದ್ರರೆನ್ನಬಹುದೇ ಹರಿದಾಸರ ।
ಸಿರಿವಂತರೆನ್ನಬಹುದೇ ಹರಿದ್ರೋಹಿಗಳ ।
ಹರಿದಾಸರ ಮೇಲಿದ್ದ ಕರುಣವು ।।
ಸಿರಿದೇವಿ ಮೇಲಿಲ್ಲವೋ ।
ಪುರಂದರವಿಠಲನ ಆಳುಗಳಿಗೆ ।
ಎಲ್ಲಿಹದೊ ಮಾನಾಭಿಮಾನ ಜಗದಿ ।।
ಆದ್ದರಿಂದ ಶ್ರೀ ಹರಿಯ ಕರುಣವೇ ಶ್ರೀ ಹರಿದಾಸರಿಗೆ ಅಷ್ಟೈಶ್ವರ್ಯ.
ಇಲ್ಲಿ ಶ್ರೀ ಹರಿ ಕರುಣೆ ಎನ್ನುವುದು ಎಷ್ಟು ದೊಡ್ಡದು ಎಂದು ಹೇಳುವ ಉದ್ಧೇಶದಿಂದ ಶ್ರೀ ಮಹಾಲಕ್ಷ್ಮಿಯ ಪಾಲಿಗೂ ಮಿಗಿಲೆಂನತೆ ಶ್ರೀಮನ್ನಾರಾಯಣನ ಕರುಣೆ ಶ್ರೀ ಹರಿದಾಸರಿಗೆ ಮೀಸಲಾಗಿದೆ ಎನ್ನುವ ಮಾತು ಬಹಳ ರಸವತ್ತಾಗಿದೆ.
ಇನ್ನು ಈ ಶ್ರೀ ಹರಿಯ ದಾಸರ ಅಧಿಕಾರವಾದರೂ ಏನು ಎಂದು ಕೇಳಬಹುದು...
ಮಾರಿಯ ಕೈಯಿಂದ
ನೀರು ತರಿಸುವರು ।
ಮಸಣಿಯ ಕೈಯಿಂದ
ಕಸವ ಬಲಿಸುವರು ।
ಮೃತ್ಯುವ ಕೈಯಿಂದ
ಬತ್ತವ ಕುಟ್ಟಿಸುವರು ।।
ಜಬ್ವನವರ ಕೈಯಿಂದ
ಜಂಗಿಲಿಯ ಕಾಯಿಸುವರು ।
ಪುರಂದರವಿಠಲನ ದಾಸರು
ಸರಿಬಂದ ಹಾಗಿಹರು
ಭೂಮಿಯ ಮೇಲೆ ।।
ಜನ ಸಾಮಾನ್ಯರ ದರ್ಪ, ದಬ್ಬಾಳಿಕೆಗಳು ಬಡ ಜೀವಿಗಳ ಮೇಲಾದರೇ, ಶ್ರೀ ಹರಿದಾಸರ ಅಧಿಕಾರ ಅನಿಷ್ಟ ದೇವತೆಗಳ ಮೇಲೆ. ಇವುಗಳನ್ನೆಲ್ಲಾ ನೋಡಿದರೆ ಶ್ರೀ ಹರಿದಾಸರು ಎಂಥಾ ಸ್ಥಾನ ಮಾನಗಳನ್ನು ಗಳಿಸಿಕೊಂಡಿರುತ್ತಾರೆ ಎನ್ನಿಸುವುದು.
ನಿಜ!
ಶ್ರೀ ಹರಿದಾಸರಾಗಬೇಕಾದರೆ ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿ ಹುಟ್ಟಿರಬೇಕು.
ಆ ಧ್ಯಾನ, ಆ ಜ್ಞಾನ, ಆ ವೈರಾಗ್ಯ ಮೊದಲಾದವುಗಳನ್ನು ತಮ್ಮ ಸ್ವತ್ತನ್ನಾಗಿ ಮಾಡಿ ಕೊಳ್ಳಬೇಕಾದರೆ ಸುಲಭ ಸಾಧ್ಯವಲ್ಲ.
ತಂಬೂರಿ ಮೀಟಿದವ
ಭವಾಬ್ಧಿ ದಾಟಿದವ ।
ತಾಳವ ತಟ್ಟಿದವ
ಸುರರೊಳು ಸೇರಿದವ ।
ಗೆಜ್ಜೆಯ ಕಟ್ಟಿದವ
ಖಳರೆದೆ ಮೆಟ್ಟಿದವ ।।
ಗಾಯನ ಪಾಡಿದವ
ಹರಿಮೂರ್ತಿ ನೋಡಿದವ ।
ಪುರಂದರವಿಠಲನ ನೋಡಿದವ
ವೈಕುಂಠಕೋಡಿದವ ।।
ಶ್ರೀ ಹರಿದಾಸರ ಈ ಜೀವನ ವೈಭವವನ್ನು ಎಷ್ಟು ಹೇಳಿದರೂ ಮುಗಿಯಲೊಲ್ಲದು.
ತಾಳ - ತಂಬೂರಿ - ಗೆಜ್ಜೆಗಳ ದನಿಯೊಂದಿಗೆ ತಮ್ಮ ಕೊರಲ ಸ್ವರವನ್ನೂ ಜೊತೆಗೂಡಿಸಿ ಹಾಡುವ ಭಾಗ್ಯ ಸಾಮಾನ್ಯವಾದುದಲ್ಲ.
ಇಂಥಾ ಸದಾಚಾರ, ಸದ್ವರ್ತನೆಗಳಲ್ಲಿಯೇ ಬದುಕನ್ನು ಹಸನಾಗಿ ಕಳೆಯುವ ಶ್ರೀ ಹರಿಯ ದಾಸರಿಗೆ ಹುಟ್ಟು ಸಾವುಗಳ ಭಯವಿಲ್ಲ!
ಆ ದಾಸರ ಹರಿ ಸ್ಮರಣೆಯನ್ನು ಕೇಳಿ ಯಾವ ಭಯ ಭೀತಿಗಳೂ ಪೀಡಿಸಲಾರವು....
ಹುಟ್ಟುವ ಭೀತಿ ಹೊಂದುವ ಭೀತಿ ।
ವಿಠಲನಂಘ್ರಿಯ ನೆನೆಯದವರಿಗೆ ।
ಕಾಲದ ಭೀತಿ ಕರ್ಮದ ಭೀತಿ । ಗೋ ।
ಪಾಲನ ದಾಸನಾಗದವನಿಗೆ ।
ಹರಿಷಡ್ವರ್ಗದ ಮಹಾ ಭೀತಿ । ಶ್ರೀ ।
ಹರಿ ನಾಮನುಚ್ಛರಿಸದವನಿಗೆ ।
ಚೆಲುವ ಪುರಂದರವಿಠಲನ್ನ
ಪೂಜಿಸದವನಿಗೆ ।।
ಇಂಥವರು ಸುಗ್ಗಿಯಲ್ಲಿ ಹಿಗ್ಗುವುದಿಲ್ಲ - ಬರದಲ್ಲಿ ಕುಗ್ಗುವುದಿಲ್ಲ.
ಒಂದು ಕಾಲದಲ್ಲಿ ಆನೆ
ಕುದುರೆ ಮೇಲ್ಮೆರೆಸುವೆ ।
ಒಂದು ಕಾಲದಲ್ಲಿ
ಬರಿಗಾಲ ನಡಿಸುವೆ ।
ಒಂದು ಕಾಲದಲ್ಲಿ
ಮೃಷ್ಟಾನ್ನ ಉಣಿಸುವೆ ।
ಒಂದು ಕಾಲದಲ್ಲಿ
ಉಪವಾಸವಿರಿಸುವೆ ।
ಪನ್ನಂಗಶಯನ
ಶ್ರೀ ಪುರಂದರವಿಠಲ ।
ನಿನ್ನ ಮಹಿಮೆನು
ನೀನೆ ಬಲ್ಲವ ದೇವಾ ।।
ಎಂದು ಸುಖ ದುಃಖಗಳೆರಡಕ್ಕೂ ಶ್ರೀ ಪರಮಾತ್ಮನೇ ಕಾರಣವೆಂದು ತಿಳಿದು, ಒಂದೇ ಸಮನಾಗಿ ನಡೆದು ಕೊಳ್ಳುವರು.
ಆದರೆ ಹರಿದಾಸರಾದವರೂ ಸಹ ಒಂದು ವಿಷಯಕ್ಕೆ ಮಾತ್ರ ಅಂಜುವುದುಂಟು.
ಉರಿಗಾಗಲಿ, ಸಿರಿಗಾಗಲಿ, ಶರೀರದ ಭಯಕ್ಕಾಗಲೀ ಅಳುಕದ ಹೃದಯ, ಪರಧನ - ಪರಸತಿ ಎಂದರೆ ತತ್ತರಿಸುವುದು.
ಹರಿದಾಸರಾದವರು " ದಾಸೋಹಂ " ಎಂಬ ಭಾವವನ್ನು ಕ್ಷಣ ಕಾಲವೂ ಮರೆಯುವವರಲ್ಲ!
" ವಿನಯವೇ ಅವರ ಆಸ್ತಿ - ಆಭರಣಗಳು "
****
" ಅಧಿಕ ಮಾಸ - 7 "
" ಸ್ತ್ರೀ ಧರ್ಮಾಃ "
ಶ್ರೀ ವೇದವ್ಯಾಸದೇವರ ಮಾತಿನನ್ವಯ ಸ್ತ್ರೀ ಧರ್ಮ ನಿರೂಪಣೆ ಮಾಡುವುದಕ್ಕೂ ಮುಂಚೆ, ಶ್ರೀ ವೇದವ್ಯಾಸದೇವರು ಹೇಳಿದ ಪುರುಷ ಧರ್ಮ ಏನೆಂಬುದನ್ನು ವಿಚಾರ ಮಾಡೋಣ...
" ಪುರುಷ ಧರ್ಮ "
ಹೆಣ್ಣಿಗೆ ಹೇಗೆಲ್ಲಾ ಉಪದೇಶಿಸಿದ ಸ್ಮೃತಿಕಾರರು ಗಂಡನ್ನೂ ಅಲಕ್ಷಿಸಿಲ್ಲ.
ಅವನು..
ಹೆಣ್ಣನ್ನು ಲಕ್ಷ್ಮೀಯ ಸನ್ನಿಧಾನ ಪಾತ್ರಳೆಂದು ತಿಳಿದು ಮರ್ಯಾದೆಯಿಂದ ನಡೆಸಿಕೊಳ್ಳಬೇಕು.
ಏಕ ಪತ್ನೀ ವ್ರತಸ್ಥನಾಗಿರಬೇಕು.
ಪರನಾರಿ ಸೋದರನಾಗಿರಬೇಕು.
ಅತ್ಯಂತ ಗೌರವದಿಂದ ಕಾಣಬೇಕು.
ಹೆಣ್ಣಿನಲ್ಲಿ ತಾಯಿ ರೂಪ ಇರುತ್ತದೆ ಯೆಂದು ಪೂಜ್ಯನೀಯ ಸಾತ್ವಿಕ ಮನಸ್ಸುಳ್ಳವರಾಗಿರಬೇಕು.
ಹೆಂಡತಿಯ ವಿಯೋಗ ಉಂಟಾದರೆ ಎರಡನೆಯ ಮದುವೆಯಾಗುವುದು ಅತ್ಯಂತ ಗೌಣ ಪಕ್ಷವೆಂದೂ ಬಹಳವಾಗಿ ಎಚ್ಚರಿಸಿದ್ದಾರೆ.
ಜ್ಞಾನ ಮಾರ್ಗದಿಂದ ನಾನು ಶ್ರೀ ಹರಿಯನ್ನು ಒಲಿಸಿಕೊಳ್ಳುತ್ತೇನೆಂಬ ಧೈರ್ಯವನ್ನು ತಾಳಿ ಪುರುಷನು ಒಮ್ಮೆ ಕೈ ಹಿಡಿದ ಸತಿಯು ಅಗಲಿದರೆ ಶ್ರೀ ರಾಮನಂತೆ ಏಕ ಪತ್ನೀ ವ್ರತಸ್ಥನಾಗಿ ಆಯುಶ್ಯೇಷವನ್ನು ಕಳೆಯಬೇಕು ಎಂದು ಸೂತ್ರಕಾರರೂ, ಸ್ಮೃತಿಕಾರರೂ, ಪ್ರಾಚೀನ ಸಮಾಜ ಸುಧಾರಕರು ಸ್ಪಷ್ಟ ಪಡಿಸಿದ್ದಾರೆ.
" ಸ್ತ್ರೀ ಧರ್ಮ "
ಮೂಲ : ವ್ಯಾಸಃ -
ಕುರೂಪೋ ವಾ ಕುವೃತ್ತೋ ವಾ
ದುಃ ಸ್ವಭಾವೋಥವಾ ಪತಿಃ ।
ರೋಗಾನ್ವಿತಃ ಪಿಶಾ ಚೋ ವಾ
ಮದ್ಯಪಃ ಕ್ರೋಧನೋಥವಾ ।।
ವೃದ್ಧೋ ವಾಥ ವಿದಗ್ಧೋ ವಾ
ಮೂಕೋ೦ಧೋ ಬಧಿರಪಿ ವಾ ।
ರೌದ್ರೋ ವಾಥ ದರಿದ್ರೋ ವಾ ಕ
ದರ್ಯಃ ಕುತ್ಸಿತೋಥವಾ ।।
ಕಾತರಃ ಕಿತವೋ ವಾಪಿ
ಲಲನಾಲಂಪಟೋಪಿ ವಾ ।
ಸತತಂ ದೇವವತ್ ಪೂಜ್ಯೋ
ಮನೋವಾಕ್ಕಾಯಕರ್ಮಭಿಃ ।।
ಅಹಂಕಾರಂ ವಿಹಾಯಾಥ
ಕಾಮಕ್ರೋಧ ಚ ಸರ್ವದಾ ।
ಮನಸೋ ರಂಜನಂ ಪತ್ಯುಃ
ಕಾರ್ಯಮನ್ಯಸ್ಯ ವರ್ಜನಂ ।। ಇತಿ ।।
ಶ್ರೀ ವ್ಯಾಸರು ಹೇಳುತ್ತಾರೆ..
ಕುರೂಪಿಯಾದರೂ - ಕೆಟ್ಟ ನಡತೆಯವನಾದರೂ - ಕೆಟ್ಟ ಸ್ವಭಾವನಾದವನಾದರೂ - ಪತಿಯು ಅಪರಿಹಾರ್ಯವಾದ ರೋಗ ಪೀಡಿತನಾಗಿದ್ದರೂ - ಸರ್ವದಾ ರೋಗಗ್ರಸ್ತನಾಗಿದ್ದರೂ - ಮದ್ಯಪಾನ ಮಾಡುವವನೇ ಆದರೂ - ಯಾವಾಗಲೂ ಸಿಡಿಮಿಡಿಗೊಳ್ಳುವವನೇ ಆದರೂ - ತುಂಬಾ ಸಿಟ್ಟುಗಾರನೇ ಆದರೂ - ವೃದ್ಧನನ್ನು ಮದುವೆಯಾದರೂ ಅಥವಾ ಮದುವೆ ಆದ ಮೇಲೆ ವೃದ್ಧನಂತೆ ಕಂಡರೂ ಕೈ ಹಿಡಿದ ಸ್ತ್ರೀಯು ಅವನನ್ನು ತಿರಸ್ಕರಿಸಬಾರದು.
ಪತಿಯು ಪಂಡಿತನೇ ಆಗುರಲಿ ಅಥವಾ ಮೂರ್ಖನಾಗಿರಲಿ - ಮೂಕ ಅಥವಾ ವಾಚಾಳನೇ ಆಗಿರಲಿ - ಕುರುಡನೇ ಆಗಿರಲಿ ಅಥವಾ ಕಿವುಡನೇ ಆಗಿರಲಿ ಅವನನ್ನು ಗೌರವಿಸಬೇಕು.
ಪತಿಯು ಭಯಂಕರವಾದ ಆಕಾರವುಳ್ಳವನಾಗಿರಲಿ ಅಥವಾ ಸೌಮ್ಯಾಕೃತಿಯಾವನೇ ಆಗಿರಲಿ ಅವನನ್ನು ತನ್ನ ಪಾಲಿನ ಮನ್ಮಥನೆಂದೂ - ಸುಂದರ ಸೌಮ್ಯಾಕೃತಿಯವನೆಂದು ಭಾವಿಸಿ ಅವನನ್ನು ಸಂತೋಷದಿಂದ ಉಪಚರಿಸಬೇಕು.
ಪತಿಯು ಬಡವನೇ ಆಗಿರಲಿ ಅಥವಾ ಶ್ರೀಮಂತನೇ ಆಗಿರಲಿ - ಶ್ರೀಮಂತನೆಂದು ಪತಿಯನ್ನು ಅಧಿಕವಾಗಿ ಓಲೈಸುವುದೂ - ಬಡವನೆಂದು ಹೀನೈಸುವುದೂ ಸಲ್ಲ.
ಪತಿಯು ಪತ್ನಿಗೆ ಒಂದು ಅಮಿತೈಶ್ವರ್ಯ ಸಮಾನನು.
ಅವನ ಸಿರಿತನ ಬಡತನಗಳ ಬಗ್ಗೆ ಕೈ ಹಿಡಿದ ಗೃಹಣಿಯು ತಲೆ ಕೆಡಸಿಕೊಳ್ಳಬೇಕಾಗಿಲ್ಲ.
ಭಾಗ್ಯವು ಭಗವಂತ ಅಧೀನ.
ಅದನ್ನು ಬಯಸಿದರೆ ಬರುವುದಿಲ್ಲ.
ಬಯಸದಿದ್ದರೂ ಬರುವುದು ಎಂದೂ ತಪ್ಪುವುದಿಲ್ಲ.
ಜಿಪುಣನಾಗಿರಲಿ - ಉದಾರಿಯಾಗಿರಲಿ - ಜಿಗುಪ್ಸಾದಾಯಕವಾದ ಸ್ವಭಾವ ವುಳ್ಳವನಾಗಿರಲಿ - ಹೊಲಸು ಮಾತಾಡುವವನೂ ಹೇಗಿದ್ದರೂ ಅವನನ್ನು ಪತ್ನಿಯಾದವಳು ನಿಂದಿಸಬಾರದು.
ಪತಿಯು ಹೇಡಿಯಾಗಿರಲಿ - ಶೂರನಾಗಿರಲಿ - ಜೂಜುಕೊರನಾಗಿರಲಿ - ಪರನಾರಿಯಲ್ಲಿ ಆಸಕ್ತನಾಗಿರಲಿ ಸ್ತ್ರೀಯು ಗಂಡನನ್ನು ಮನಸ್ಸು ಮಾತು ಕೃತಿಗಳಿಂದ ಏಕರೀತಿಯಿಂದ ಗೌರವಿಸಬೇಕು.
ಸ್ತ್ರೀಯು ಅಹಂಕಾರವನ್ನೂ - ಕಾಮ ಕ್ರೋಧಗಳನ್ನೂ ಬಿಟ್ಟು ಯಾವಾಗಲೂ ಗಂಡನ ಮನಸ್ಸನ್ನು ಸಂತೋಷ ಪಡಿಸಬೇಕು.
ಪತಿಗೆ ಅಸಂತೊಷವಾದರೆ ಬೇರೇ ಯಾವ ಕಾರ್ಯವನ್ನೂ ಮಾಡಬಾರದು.
ಗಂಡನ ಮನಸ್ಸಿಗೆ ಒಲ್ಲದ ಯಾವ ಕಾರ್ಯವನ್ನೂ ಮಾಡಬಾರದು ಎಂದು ಶ್ರೀ ವ್ಯಾಸರು ವಿಸ್ತಾರವಾಗಿ ಸ್ತ್ರೀ ಧರ್ಮವನ್ನು ಹೇಳಿದ್ದಾರೆ.
ಇಲ್ಲಿ ಹೇಳಿರುವ ಸ್ತ್ರೀ ಧರ್ಮಗಳ ಬಗ್ಗೆ ಒಂದು ವಿಷಯವನ್ನು ವಿವೇಚಿಸಬೇಕಿದೆ....
ಸ್ತ್ರೀ ಪುರುಷರು ಸೇರಿ ಬಾಳುವ ಕುಟುಂಬಗಳೇ ಸಮಾಜದ ಇಡೀ ರಾಷ್ಟ್ರದ ಅಡಿಗಲ್ಲು.
ಈ ಕುಟುಂಬ ಸಂಸ್ಥೆಯು ಭದ್ರವಾಗಿರಬೇಕೆಂಬ ದೃಷ್ಟಿಯಿಂದ ಪ್ರಾಚೀನರು ಮನೆಯ ಪೂರ್ತಿ ಹೊಣೆಗಾರಿಕೆಯನ್ನು ಹೆಣ್ಣಿಗೆ ಒಪ್ಪಿಸಿ..
" ಗೃಹಣೀ ಗೃಹ ಮುಚ್ಯತೇ " ಎಂದರು.
ಹೆಣ್ಣೇ ಮನೆಯ ಸರ್ವಸ್ವವೆಂದೂ - ಅವಳಿಂದಲೇ ಸಮಾಜ ವ್ಯವಸ್ಥೆಯು ಭದ್ರವಾಗಿರುತ್ತದೆಯೆಂದೂ ತಿಳಿದು ಸ್ತ್ರೀಯು ತನ್ನ ಸ್ವಾರ್ಥವನ್ನು ಸಂಪೂರ್ಣವಾಗಿ ಬದಿಗೊತ್ತಿ ಗಂಡನನ್ನು ಗೌರವಿಸಿ ಸಂಸಾರವನ್ನು ಸಾರಯುಕ್ತವನ್ನಾಗಿ ಮಾಡಬೇಕೆಂದು ಹಿಂದಿನ ಋಷಿಗಳೂ, ಮುನಿಗಳೂ, ಸ್ಮೃತಿಕಾರರೂ; ಸಮಾಜ ಸುಧಾರಕರೂ ಚಿಂತಿಸಿದರು.
ಇದರಿಂದ ಹೆಣ್ಣು ಮುದಕನನ್ನೂ - ಕುರೂಪಿಯನ್ನೂ - ಹೆಂಡ ಕುಡುಕನನ್ನೂ ಮದುವೆಯಾಗಬೇಕೆಂದು ಅರ್ಥವಲ್ಲ.
ಹಿರಿಯರ ಆಯ್ಕೆಯಿಂದಲೋ - ತನ್ನದೇ ಆಯ್ಕೆಯಿಂದಲೋ ಒಮ್ಮೆ ಮದುವೆಯಾದ ಗಂಡನನ್ನು ತಿರಸ್ಕರಿಸದೆ ಪಾಲಿಗೆ ಬಂದದ್ದು ಪಂಚಾಮೃತವೆಂದು ಭಾವಿಸಬೇಕು.
ಭಾಗ್ಯವನ್ನು ನಾವು ತೆಗೆದುಕೊಂಡು ಬಂದಿರುವುದಿಲ್ಲ.
ಸಮಾಜದ - ಕುಟುಂಬದ - ದೇಶದ ಒಳಿತಿಗಾಗಿ ತನ್ನ ಸ್ವಾರ್ಥವನ್ನು ಅಲಕ್ಷಿಸಿ - ಪತಿಯ ಮತ್ತು ಸಮಗ್ರ ಕುಟುಂಬ ವ್ಯವಸ್ಥೆಯ ರಾಷ್ಟ್ರದ ಹಿತವನ್ನು ಲಕ್ಷಿಸಬೇಕು.
ಪಾರಲೌಕಿಕವಾದ ಪ್ರಯೋಜನಗಳನ್ನು ಗಮನಿಸಬೇಕು.
" ಪತಿಯ ಸೇವೆಯೇ ಉತ್ತಮ ಗತಿಗೆ ಸೋಪಾನ "
ಈ ಸ್ತ್ರೀಯರಿಗೆ ಜಾತಕರ್ಮಾದಿ ಸಂಸ್ಕಾರಗಳು ವೇದೋಕ್ತ ಮಂತ್ರಗಳಿಂದ ಆಗಬೇಕಾಗಿಲ್ಲ.
ಇದು ಧರ್ಮ ಶಾಸ್ತ್ರದ ಮರ್ಯಾದೆಯು. ಶ್ರುತಿ ಸ್ಮೃತಿಗಳೆಂಬ ಧರ್ಮ ಪ್ರಮಾಣಗಳನ್ನು ಸ್ತ್ರೀಯರು ಅಧ್ಯಯನ ಮಾಡಬೇಕಾಗಿಲ್ಲ.
ಅವರಿಗೆ ಪಾಪ ನಾಶಕವಾದ ವೇದೋಕ್ತ ಮಂತ್ರಗಳ ಮತ್ತು ಸೂಕ್ತಗಳ ಜಪವಿಲ್ಲ.
ಪುರುಷರಂತೆ ಅವರು ಅಘಮರ್ಷಣ ಸೂಕ್ತವನ್ನು ಜಪಿಸಿಯೇ ಪಾಪ ನಿವೃತ್ತಿಯನ್ನು ಮಾಡಿಕೊಳ್ಳಬೇಕಾಗಿಲ್ಲ.
ಅವರು ಪತಿಯ ಶುಶ್ರೂಷೆಯ ಹೊರತು ಬೇರೇ ಯಜ್ನವನ್ನು ಮಾಡಬೇಕಾಗಿಲ್ಲ.
ಪತಿಯ ಆಜ್ಞೆ ಇಲ್ಲದೆ ಅವರು ವ್ರತ ಉಪವಾಸಾದಿಗಳನ್ನು ಮಾಡಬೇಕಾಗಿಲ್ಲ.
ಪತಿಯ ಸೇವೆಯೊಂದರಿಂದಲೇ ಸ್ತ್ರೀಯು ಇಷ್ಟವಾದ ಉತ್ತಮ ಲೋಕವನ್ನು ಪಡೆಯುತ್ತಾಳೆ.
" ಸ್ತ್ರೀಗೆ ಪತಿ ಸೇವೆಯೇ ಸರ್ವಸ್ವವೂ " ಎಂದು ಮನು ವಚನದ ಅಭಿಪ್ರಾಯ.
ನಾಸ್ತಿ ಸ್ತ್ರೀಣಾಂ ಪೃಥಗ್ ಯಜ್ಞೋ ನ
ವ್ರತಂ ನಾಪ್ಯುಪೋಷಣಮ್ ।
ಪತಿಂ ಶುಶ್ರೂಷತೇ ಯತ್ತು
ತೇನ ಸ್ವರ್ಗೇ ಮಹೀಯತೇ ।।
ಹೆಣ್ಣು ಸಹನೆಯ ಪ್ರತೀಕ.
ಆದ್ದರಿಂದಲೇ ಹೆಣ್ಣನ್ನು ಧಾತ್ರಿ ( ಭೂಮಿ ) ಗೆ ಹೋಲಿಸಿರುವುದು.
ವಿ ಸೂ :
ಪ್ರತಿ ನಿತ್ಯದ ಸ್ತ್ರೀ ಧರ್ಮದ ಕುರಿತು ಪ್ರತಿಯೊಬ್ಬ ಮಹಿಳಿಗೆ ತಿಳಿದಿದೆ. ಆದ್ದರಿಂದ ಆ ವಿವರಗಳನ್ನು ಇಲ್ಲಿ ಕೊಟ್ಟಿರುವುದಿಲ್ಲ.
ಸಾತ್ವಿಕ ಹೆಣ್ಣಿನಿಂದಲೇ ಉತ್ತಮ ಪುರುಷನ ಅಭಿವೃದ್ಧಿ.
ಆದ್ದರಿಂದ ಹೆಣ್ಣನು ಗೌರವಿಸುವುದು ಪ್ರತಿಯೊಬ್ಬ ಪುರುಷನ ಲಕ್ಷಣ - ಹಾಗಯೇ ಪತಿಯ ಸೇವೆಯೇ ಉತ್ತಮ ಸ್ತ್ರೀಯ ಲಕ್ಷಣ.
ಮಂಗಳ ಸೂತ್ರ - ಅರಿಶಿನ ಕುಂಕುಮ - ಬಳೆ - ಕಾಲುಂಗರ - ಮೂಗುತಿ - ಕಿವಿಯೋಲೆಗಳ ಧಾರಣೆ ಮತ್ತು ಹಿತ ಮಿತವಾಗಿ ನಗುಮೊಗದಿಂದ ಮಾತಾಡುವುದೇ ಪರಿಪೂರ್ಣ ಸ್ತ್ರೀಯ ಲಕ್ಷಣವೆಂದು ಶ್ರೀ ವೇದವ್ಯಾಸರ ವಚನ.
****
" ಅಧಿಕ ಮಾಸ - 8 "
ಶ್ರೀ ಪುರಂದರದಾಸರು ಶ್ರೀ ಹರಿಯ ಕಾರುಣ್ಯದ ಅದ್ಭುತ ಮಹಿಮೆಯನ್ನು ಸೆರೆ ಹಿಡಿದಿದ್ದಾರೆ.
ಶ್ರೀ ಪುರಂದರ ದಾಸರು....
ಗಜೇಂದ್ರ ಮೋಕ್ಷ - ಪ್ರಹ್ಲಾದ ಚರಿತ್ರೆ - ಧ್ರುವ ಚರಿತ್ರೆ - ರಾವಣ ಸಂಹಾರ - ವಿಭೀಷಣಗೆ ಪಟ್ಟ - ಅಹಲ್ಯೋದ್ಧಾರ - ಅಂಬರೀಷನಿಗೆ ಅನುಗ್ರಹ -ದುರ್ವಾಸ ಮುನಿಗಳ ಉದ್ಧಾರ ಅಜಾಮಿಳಗೆ ಮೋಕ್ಷ ಕೊಟ್ಟ ವಿಚಾರ ಮೊದಲಾದವು ಈ ಪುಟ್ಟ ಕೃತಿಯಲ್ಲಿ ಅಡಗಿದೆ.
ರಾಗ : ನೀಲಾಂಬರಿ ತಾಳ : ಅಟ್ಟ
ನಿನ್ನ ನಂಬಿದೆ ನೀರಜ ನಯನ ।
ಯನ್ನ ಪಾಲಿಸೊ ಇಂದಿರಾ ರಮಣ ।
ಮುನ್ನೆ ಪಾಂಚಾಲಿಯ
ಮೊರೆಯ ಲಾಲಿಸಿ ಕಾಯ್ದೆ ।
ಪನ್ನಗಶಯಣನೆ
ಪರಮ ಪುರುಷ ಹರೇ ।। ಪಲ್ಲವಿ ।।
ಪಾದವ ಪಿಡಿದೆಳೆಯಲು ಅ ನಕ್ರನು ।
ಬಾಧಿಗಾರದೆ ಕರಿ
ಮೊರೆಯಿಡಲು ।
ಆದಿದೇವತಿ ಚಕ್ರದಿಂದ
ನಕ್ರನ ಕೊಂದೆ ।
ವೇದಾಂತ ವೇದ್ಯ
ಅನಾಥ ರಕ್ಷಕನೆಂದು ।। ಚರಣ ।।
ಹರಿ ಸರ್ವೋತ್ತಮನ-
ಹುದೆಂಬೊ ಬಾಲಕನ ।
ಹಿರಣ್ಯಕಶ್ಯಪ
ಬಹು ಬಾಧಿಸಲು ।
ನರಹರಿ ರೂಪದಿಂದವನ
ಪೊಟ್ಟೆಯ ಸೀಳ್ದೆ ।
ಹರಿ ವಿಶ್ವವ್ಯಾಪಕ-
ನಹುದೆಂದು ಮನಗಂಡು ।। ಚರಣ ।।
ಇಳಿ ನಡಿ ತೊಡಿ
ನಿನಗ್ಯಾತಕೆ ಯೆಂದು ।
ಯೆಳೆದು ಬಿಟ್ಟಳು
ಚಿಕ್ಕ ಧ್ರುವರಾಯನೂ ।
ಛಲದಿಂದ ತಪವ
ಮಾಡಲು ಮೆಚ್ಚಿ ।
ವಲಿದು ನಿಶ್ಚಲ ಪಟ್ಟ
ಧ್ರುವಗೆ ಕೊಟ್ಟದು ಕಂಡು ।। ಚರಣ ।।
ಸುರರ ಬಾಧಿಸುತಿಪ್ಪ
ದುರಳ ರಾವಣನಿಂದ ।
ಹೊರಡಿಸಿಕೊಂಡು ವಿಭೀಷಣನು ।
ಶರಣು ಬಂದಾಕ್ಷಣ
ಲಂಕಾ ಪಟ್ಟಣವನ್ನು ।
ಸ್ಥಿರ ಪಟ್ಟವನ್ನು ಕೊಟ್ಟ
ಪರದೈವ ನೀನೆಂದು ।। ಚರಣ ।।
ವಿಧಿ ಮೀರಿ ನಡೆದೆಂದು
ಪತಿ ಶಪಿಸಲೈ । ಪ ।
ಥದಿ ಪಾಷಾಣಳಾಗಿ ಬಿದ್ದಿರಲು ।
ಮುದದಿಂದ ತುಳಿದಬ್ಧ
ಮುಖಿಯ ಮಾಡಿದ ಯೋಗಿ ।
ಹೃದಯ ಭೂಷಣ ನಿನ್ನ
ಪಾದ ವೈಭವ ಕಂಡು ।। ಚರಣ ।।
ಅಂಬರೀಷನೆಂಬ
ಮಹಿಪ ದ್ವಾದಶಿ ವ್ರತ ।
ಸಂಭ್ರಮದಿಂದ ಸಾಧಿಸುತಿರಲು ।
ಶಂಭುವಿನಂಶ
ದುರ್ವಾಸ ಶಾಪಿಸಲು ।
ಬೆಂಬಿಡದಾಲೆ ಚಕ್ರದಿಂದವನ
ಕಾಯ್ದದು ಕಂಡು ।। ಚರಣ ।।
ಧರಿಯೊಳು ನಿನ್ನ
ಮಹಿಮಿಯನ್ನು ಪೊಗಳಲು ।
ಸರಸಿಜಾಸನ ಶಿವ ಫಣಿಗರಿದು ।
ಸ್ಮರಣೆ ಮಾತ್ರಕ್ಕೆ ಅಜಮಿಳಗೆ
ಮುಕ್ತಿಯ ಕೊಟ್ಟೆ ।
ಪುರಂದರವಿಠ್ಠಲ ಪರನೆಂದು
ಮನಗಂಡು ।। ಚರಣ ।।
****
" ಅಧಿಕ ಮಾಸ - 9 "
" ಶ್ರೀ ರಾಯರ ಅಂತರಂಗ ಭಕ್ತರು ಶ್ರೀ ಶ್ರೀವತ್ಸಾ೦ಕಿತ ಶ್ರೀ ಚಿಕ್ಕೋಡಿ ಆಚಾರ್ಯರು "
ಹೆಸರು : ಶ್ರೀ ಚಿಕ್ಕೋಡಿ ಆಚಾರ್ಯರು
ವಿದ್ಯಾ ಗುರುಗಳು : ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ಕೃಷ್ಣಾಪುರ ಮಠ, ಉಡುಪಿ
ಸಮಕಾಲೀನ ಯತಿಗಳು :
ಶ್ರೀ ಸುಗುಣೇಂದ್ರತೀರ್ಥರು - ಶ್ರೀ ರಾಯರ ಮಠ
ಶ್ರೀ ವಿದ್ಯಾಸಿಂಧುತೀರ್ಥರು - ಶ್ರೀ ವ್ಯಾಸರಾಜ ಮಠ
ಶ್ರೀ ಚಿಕ್ಕೋಡಿ ಆಚಾರ್ಯರೆಂದೇ ಪ್ರಸಿದ್ಧರಾದ ಇವರು ಉಡುಪಿಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಧೀಶ ತೀರ್ಥರಲ್ಲಿ ದ್ವೈತ ಶಾಸ್ತ್ರಾಧ್ಯಯನ ಮಾಡಿದ್ದಾರೆ.
ಶ್ರೀ ದಾಸಾರ್ಯರು ಶ್ರೀ ರಾಯರ ದರ್ಶನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಸ್ನಾನಾಹ್ನೀಕ ಮುಗಿಸಿ ಶ್ರೀ ರಾಯರ ದರ್ಶನ ಮಾಡಿ ಶ್ರೀ ಸುಗುಣೇಂದ್ರತೀರ್ಥರು ಮಾಡುತ್ತಿರುವ ಶ್ರೀ ಮೂಲರಾಮಚಂದ್ರದೇವರ ಪೂಜೆಯನ್ನು ನೋಡುತ್ತಾ ಆನಂದ ಭಾಷ್ಪ ಸುರಿಸುತ್ತಾ...
ಅಗಣಿತ ಮಹಿಮನು
ತ್ರಿಗುಣ ವರ್ಜಿತನು ।
ಸುಗುಣೇಂದ್ರತೀರ್ಥರಿಂದ
ಬಗೆ ಬಗೆಯ ಪೂಜೆಗೊಂಬ ।। ಪಲ್ಲವಿ ।।
ನೋಡಿರಯ್ಯ ಶ್ರೀ ಮೂಲ-
ರಾಮನ ಮೂರ್ತಿಯ ।
ಪಾಡಿರೋ ಮಹಿಮೆಯನು ।। ಅ.ಪ ।।
ಎಂದು ಸುಧೀರ್ಘವಾದ ಕೃತಿಯನ್ನು ರಚಿಸಿ ಶ್ರೀ ಸುಗುಣೇ೦ದ್ರಾ೦ತರ್ಗತ ಶ್ರೀ ರಾಘವೇಂದ್ರ - ಶ್ರೀ ಭಾರತೀ ರಮಣ ಮುಖ್ಯ ಪ್ರಾಣಾ೦ತರ್ಗತ ಶ್ರೀ ಮೂಲರಾಮನ ಚರಣಕ್ಕೆ ಸಮರ್ಪಿಸಿದರು.
ಅಲ್ಲಿಂದ ಹೊರಟು ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಸಿಂಧುತೀರ್ಥರ ಬಳಿಗೆ ಬಂದು ಶ್ರೀ ಶ್ರೀಗಳವನ್ನು ಭಕ್ತಿಯಿಂದ...
ವಿದ್ಯಾಸಿಂಧುತೀರ್ಥ
ಶುದ್ಧ ಪದ್ಧತಿಯಿಂದ ।
ಶ್ರದ್ಧಾ ಪೂರ್ವಕ ನಿನ್ನ
ಭಜಿಪೆನು ಅನುದಿನ ।।
ಎಂದು ಸ್ತುತಿಸಿದರು.
ಇವರ ಪದ್ಯಗಳಲ್ಲಿ ಕಾವ್ಯದ ಗುಣಗಳೆನ್ನೆಲ್ಲ ಸಾಂಪ್ರದಾಯಿಕತೆಯು ಮರೆಮಾಡಿದೆ.
ಬಳಿಸದ ಉಪಮೆ, ಸರ್ವ ಸಾಧಾರಣವಾದ ಹಳೆಯ ಪ್ರಾಸಗಳು, ಅಂಥ ಭಾವದಕಾವನ್ನಾಗಲೀ, ಬೇರಾವ ರಸವನ್ನಾಗಲೀ ಹುಟ್ಟಿಸದೆ ಭಕ್ತಿ ಜನನದಲ್ಲಿ ಕೃತಕೃತ್ಯತೆಯನ್ನು ಕಂಡಿದೆ.
ಆದರೂ ಅಲ್ಲಲ್ಲಿ ಪ್ರತಿಭೆ ಮಿಂಚಾಡದೆ ಇಲ್ಲ.
ಶ್ರೀ ಜಗನ್ನಾಥದಾಸರ ಮೇಲೆ...
ಮಂದ ಮತಿಯು ನಾನು ।
ಮಂದೋದ್ಧಾರಕನು ನೀನು ।
ಹಿಂದೆ ಪಾಲಿಸಿದಂತೆ ।
ಮುಂದೂ ಸಲಹು ನೀನು ।।
ಹಿರಿಯರು ಪೊರೆದಂತೆ ।
ಮರೆಯದೆ ನನ್ನನ್ನು ।
ಕರುಣದಿಂದುದ್ಧರಿಸಯ್ಯ ।
ಗುರು ಜಗನ್ನಾಥರಾಯ ನಿನ್ನ ।
ಚರಣ ಕಮಲವನು
ಎನಗೆ ತೋರಯ್ಯಾ ।।
ಶ್ರೀ ಹರಿಯ ಮೇಲೆ...
ಸ್ಮರಿಸುವೆ ಹರಿಯನು ।
ದುರಿತವ ಕಳೆವನು ।। ಪಲ್ಲವಿ ।।
... ಕರುಣಾಳು ಈತನು ।
ಸುರರೊಳು ।
ಮರಿಯಾನು ನಮ್ಮನು ಶ್ರೀವತ್ಸಾ೦ಕಿತನು ।।
****
" ಅಧಿಕ ಮಾಸ - 10 "
" ಶ್ರೀ ರಾಯರ - ಶ್ರೀ ವಿಜಯದಾಸರ ಪರಮ ಭಕ್ತರು ಶ್ರೀ ರಘುಪತಿ ವಿಠ್ಠಲಾ೦ಕಿತ ಶ್ರೀ ರಾಘವೇಂದ್ರಾಚಾರ್ಯರು / ಪರಮ ವೈರಾಗ್ಯಶಾಲಿ ಶ್ರೀ ತಮ್ಮಣ್ಣದಾಸರು "
ವಿಜಯರ ಭಾಗ್ಯವಿದು ।
ತ್ಯಜಿಸದೆ ನಮ್ಮನು
ಬಿಡದೆ ಪೊರೆವದು ।।
" ಶ್ರೀ ವ್ಯಾಸವಿಠಲರ ಶಿಷ್ಯರಾದ ಶ್ರೀ ರಘುಪತಿ ವಿಠಲರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ರಾಘವೇಂದ್ರಾಚಾರ್ಯರು
ತಂದೆ : ಶ್ರೀ ದೇವರಾಚಾರ್ಯರು ( ಶ್ರೀ ಶ್ರೀಕರ ವಿಠ್ಠಲರು )
ಕಾಲ : ಕ್ರಿ ಶ 1730 - 1830
ಜನ್ಮ ಸ್ಥಳ : ಕಲ್ಲೂರು
ಕಲ್ಲೂರಿನ ಶ್ರೀ ಲಕ್ಷ್ಮೀಕಾಂತಾಚಾರ್ಯರಿಗೆ ಸ್ವಪ್ನ ಸೂಚನೆ ಮೂಲಕ ಶ್ರೀ ಮಹಾಲಕ್ಷ್ಮೀದೇವಿಯರ ವಿಗ್ರಹ ದೊರೆತ ಬಗ್ಗೆ ಐತಿಹ್ಯವಿದೆ.
ಶ್ರೀ ಲಕ್ಷ್ಮೀಕಾಂತಾಚಾರ್ಯರ ಮಕ್ಕಳಾದ ಶ್ರೀ ದೇವರಾಚಾರ್ಯರಿಗೆ ಸ್ವಪ್ನ ಮೂಲಕ ಮಹಮ್ಮದಪುರ ಗ್ರಾಮದ ಹೊಲದಲ್ಲಿ ಶ್ರೀ ವೇಂಕಟೇಶದೇವರ ವಿಗ್ರಹ ದೊರೆತಿದ್ದು ಇದೆ.
ಈ ವಿಗ್ರಹಗಳ ಎದುರಿನ ಬಂಡೆಯ ಮೇಲೆ ಶ್ರೀ ಪ್ರಾಣದೇವರ ಉದ್ಭವ ಮೂರ್ತಿ ಇರೋದು ಮತ್ತೊಂದು ವಿಶೇಷ.
ಭಾಸ್ಕರ ಕ್ಷೇತ್ರವೆಂದೇ ಪ್ರಸಿದ್ಧವಾದ ಕಲ್ಲೂರಿನ ಗುಡ್ಡದ ಮೇಲೆ ಶ್ರೀ ಗರುಡಾಂತರ್ಗತ ಶ್ರೀ ವಾಯುದೇವರು ನೆಲೆ ನಿಂತಿದ್ದಾರೆ.
ವ್ಯವಹಾರ ನಾಮ : ಶ್ರೀ ವೈರಾಗ್ಯಶಾಲಿ ತಮ್ಮಣ್ಣ ದಾಸರು
ಪ್ರೀತಿಯಿಂದ ಎಲ್ಲರೂ ಶ್ರೀ ರಾಘವೇಂದ್ರಾಚಾರ್ಯರನ್ನು " ತಮ್ಮಣ್ಣ - ತಮ್ಮಣ್ಣ " ಎಂದು ಕರೆಯ ತೊಡಗಿದ್ದರಿಂದ " ಶ್ರೀ ರಾಘವೇಂದ್ರಾಚಾರ್ಯ ಹೆಸರು ಮರೆತು ಹೋಗಿ ಶ್ರೀ ತಮ್ಮಣ್ಣದಾಸರೆಂದೇ ಪ್ರಸಿದ್ಧಿಯಾದರು!
ಶ್ರೀ ರಾಘವೇಂದ್ರಾಚಾರ್ಯರು ತಮ್ಮ 22ನೇ ವಯಸ್ಸಿನಲ್ಲಿಯೇ ಶ್ರೀ ವ್ಯಾಸ ವಿಠ್ಠಲರಿಂದ ಪಡೆದು ವೈರಾಗ್ಯಶಾಲಿಗಳಾಗಿ ಪ್ರಕಾಶಸಿದ್ದರಿಂದ " ವೈರಾಗ್ಯಶಾಲಿ ಶ್ರೀ ತಮ್ಮಣ್ಣದಾಸರೆಂದೇ ಮನೆ ಮಾತಾದರು!
ಅಂಕೀತೋಪದೇಶ :
ಶ್ರೀ ವ್ಯಾಸ ವಿಠ್ಠಲರು ( ಶ್ರೀ ಕಲ್ಲೂರು ಸುಬ್ಬಣ್ಣದಾಸರು )
ಅಂಕಿತ : ಶ್ರೀ ರಘುಪತಿವಿಠ್ಠಲ
" ಅಂಕಿತ ಪ್ರದಾನ ಪದ "
ರಾಗ : ಕಾಂಭೋಧಿ ತಾಳ : ಝ೦ಪೆ
ಅತಿ ದಯಾಪರಮೂರ್ತಿ । ಅನಿ ।
ಮಿತ್ತ ಬಂಧು । ರಘು ।
ಪತಿ ವಿಠ್ಠಲ ಸಲಹೋ
ಇವನಾ ।। ಪಲ್ಲವಿ ।।
ಪತಿತ ಪಾವನ ನಿನ್ನ
ಪರಮ ಮಂಗಳ ನಾಮ ।
ಸತತ ಪೊಗಳುವಂತೆ
ಸಾನುಕೂಲನಾಗಿ ।। ಅ ಪ ।।
ಜನನಿ ಗರ್ಭದಲಿಂದ
ಜನಿಸಿದ ಮೊದಲು ಮಾಡಿ ।
ಗುಣವಂತ ನೆನೆಸಿದವನೋ ।
ಕನಸಿನೊಳಗಾದರೂ ಧನ
ವನಿತೆ ತನು ಭೋಗ ।
ನೆನಸದಿಹ ನಿಪುಣನಿವನೋ ।।
ಕ್ಷಣಕ್ಷಣಕೆ ನಿನ್ನನೇ
ಧ್ಯೇನಿಸುತ ಪರಮ ಸುಖ ।
ವನಧಿಯೊಳಗಾಡುವನೋ ।
ಪ್ರಣತ ಜನ ಮಂದಾರ
ಪ್ರಾಣನಂತರ್ಯಾಮಿ ।
ನಿನಗೆ ಸಮ್ಮತವಾದ ನಿಜ
ದಾಸನ ಮ್ಯಾಲೆ ।। ಚರಣ ।।
ಶೀತೋಷ್ಣ ಸುಖ ದುಃಖ
ಮಾನಾಪಮಾನಗಳು ।
ಮಾತು ಮನಸಿಗೆ ತಾರನೋ ।
ಧಾತುಗೆಡದಲೆ ತಿಳಿದು
ದಯಾ ಪಯೋನಿಧಿ ನಿನ್ನ ।
ಪ್ರೀತಿಯೆಂದಾಡುವವನೋ ।।
ವಾತಜನ ಮತದವರ
ಪ್ರೀತಿಯಲಿ ಸೇವಿಸಿ । ಕೃ ।
ಪಾತಿಶಯ ಪಡದಣುಗನೋ ।
ಈ ತೆರದಿ ಭಕ್ತನ್ನ ರೀತಿ
ನೀ ಬಲ್ಲವನೇ ।
ನಾ ತುತಿಸಿ ಪೇಳ್ವ
ಪೊಸಮಾತು ಮತ್ತುಂಟೆ ।। ಚರಣ ।।
ನಿನ್ನ ಕರುಣದಳತಿ
ಇನ್ನಿವನಮ್ಯಾಲಿರಲು ।
ಚನ್ನಿಗನೆ ನಿನಗೆ ನಾನೂ ।
ಬಿನ್ನೈಸಿದೆನೋ ಸ್ವಾಮಿ
ಎನ್ನ ಗುರುಗಳ ಆಜ್ಞ ।
ಚನ್ನಾಗಿ ಶಿರದಿವೊಹಿಸಿ ।।
ಸಣ್ಣವಗೆ ಅಂಕಿತವ
ಕೊಟ್ಟನಲ್ಲದೆ ಲೇಶ ।
ಎನ್ನ ಸ್ವತಂತ್ರವಿಲ್ಲ ।
ಚನ್ನಾಗಿ ಕಾಪಾಡಿ ಬೆಳಸಿ
ಫಲವನೇ ತೋರೋ ।
ಸನ್ನುತಾಂಗಿಯರಮಣ
ವ್ಯಾಸವಿಠ್ಠಲ ವಿಭುವೇ ।। ಚರಣ ।।
ಎಂಬ ಅಂಕಿತದೊಂದಿಗೆ ಶ್ರೀ ರಘುಪತಿವಿಠ್ಠಲರು ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಶ್ರೀ ರಘುಪತಿವಿಠ್ಠರ ವೈರಾಗ್ಯ ವೈಭವವು ಶ್ರೀ ವ್ಯಾಸವಿಠಲರು ಅಂಕಿತ ಪದದಲ್ಲಿ ವಿವರಿಸಿದ್ದಾರೆ.
ಶ್ರೀ ರಘುಪತಿವಿಠ್ಠಲರು ಶ್ರೀ ರಾಯರ ದರ್ಶನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ಮುಗಿಸಿಕೊಂಡು ಶ್ರೀ ಗುರುಸಾರ್ವಭೌಮರ ಮೂಲ ಬೃಂದಾವನ ಸನ್ನಿಧಾನಕ್ಕೆ ಬಂದು ಶ್ರೀ ಗುರುಸಾರ್ವಭೌಮರನ್ನು ತದೇಕ ಚಿತ್ತದಿಂದ ನೋಡುತ್ತಾ ಎದೆ ತುಂಬಿ....
ರಾಗ : ಹಂಸಾನಂದೀ ತಾಳ : ಆದಿ
ನೆರೆ ನಂಬಿದೆ ಗುರು ಮನ ಮಂದಿರದೊಳು ।
ಪರಿತೋಷಿಸು ಗುರು ರಾಘವೇಂದ್ರ ।। ಪಲ್ಲವಿ ।।
ವರ ತುಂಗಾ ತೀರದಿ ಮಂತ್ರಾಲಯದಿ ।
ನಿರುತ ನೆಲೆಸಿದ ಮಂಗಳ ಮಹಿಮನೆ ರಾಘವೇಂದ್ರ ।। ಅ ಪ ।।
ಮುದವಾದರು ಬಲು ಖೇದವಾದರೂ ।
ಭೇದವ ಮಾಡದಿರು ರಾಘವೇಂದ್ರ ।
ಮುದಮುನಿ ಶಾಸ್ತ್ರಾರ್ಥ ಸದಮಲ ಹೃದಯದಿ ।
ಭೋಧಿಸುತಿರು ನೀ ರಾಘವೇಂದ್ರ ।। ಚರಣ ।।
ಶರಣೆಂದವರಘ ತ್ವರಿತದಿ ನೀಗುವ ।
ಶರಣರ ಸುರಧೇನು ರಾಘವೇಂದ್ರ ।
ಪರಿಪರಿ ಮೋದವ ಭರದಲಿ ಬೀರುತ ।
ಪರಮ ಕರುಣಿ ಜಯ ರಾಘವೇಂದ್ರ ।। ಚರಣ ।।
ಭವ ರೋಗಂಗಳ ಜವದಲಿ ನೀಗುವ ।
ಭವರೋಗ ವೈದ್ಯನೇ ರಾಘವೇಂದ್ರ ।
ರವಿ ಶತ ತೇಜ ಶ್ರೀ ರಾಮನ ಪೂಜಿಪ ।
ಕವಿಯಗ್ರೇಸರ ರಾಘವೇಂದ್ರ ।। ಚರಣ ।।
ಕುಷ್ಠ ಕುಬ್ಜ ಬದಿರಾದಿ ವ್ಯಾಧಿಗಳ ।
ನಷ್ಟವ ಗೊಳಿಸುವ ರಾಘವೇಂದ್ರ ।
ನಿಷ್ಠೆಯಿಂದ ಅಷ್ಟೋತ್ತರ ಪಠಿಸಲು ।
ಇಷ್ಟವ ಗರೆಯುವ ರಾಘವೇಂದ್ರ ।। ಚರಣ ।।
ವರ ಸುಧಾ ಗ್ರಂಥಕೆ ಪರಿಮಳ ಟೀಕೆಯ ।
ಸರಸದಿ ರಚಿಸಿದ ರಾಘವೇಂದ್ರ ।
ಹರಿಮತ ಶರಧಿಗೆ ಚೆಂದಿರ ನೆನೆಪನೆ ।
ಹರಿ ಗುಣ ನಾಯಕ ರಾಘವೇಂದ್ರ ।। ಚರಣ ।।
ಪ್ರತಿ ಗುರುವಾರದಿ ಅಂದಣವೇರುವ ।
ಯತಿ ಕುಲ ತಿಲಕನೆ ರಾಘವೇಂದ್ರ ।
ಅತಿಶಯ ಭಕುತಿಲಿ ಸ್ತುತಿಸುವ ಜನರಿಗೆ ।
ಮತಿ ಶುಭವೀಯುವ ರಾಘವೇಂದ್ರ ।। ಚರಣ ।।
ಭಕುತರ ಮೊರೆ ಕೇಳಿ ಯುಕುತಿಯಿಂದಲಿ ।
ಮುಕುತಿ ಪಥವ ತೋರೋ ರಾಘವೇಂದ್ರ ।
ಅಕಳಂಕ ಮಹಿಮ ಶ್ರೀ ರಘುಪತಿವಿಠ್ಠನ ।
ಸುಖ ಸಂತಸ ನೀಡೋ ರಾಘವೇಂದ್ರ ।। ಚರಣ ।।
ಶ್ರೀ ರಘುಪತಿವಿಠ್ಠಲರು ತಮ್ಮ ಇಷ್ಟಪ್ರದರಾದ ಶ್ರೀ ವಿಜಯದಾಸರ ಕುರಿತು....
ರಾಗ : ಆರಭಿ ತಾಳ : ಆದಿ
ವಿಜಯರಾಜಗುರು
ರಾಜಾಧಿರಾಜ । ಮಹ ।
ರಾಜ ಶಿರೋರತುನ ।। ಪಲ್ಲವಿ ।।
ತ್ಯಜಿಸದೆ ನಿಮ್ಮ
ಪದಾಬ್ಜವ ಬಿಡೆನೆಂಬೋ ।
ಸುಜನರ ಪಾಲಿಸಯ್ಯ ।। ಅ ಪ ।।
ಜ್ಞಾನ ಭಕುತಿ ಕೊಡು
ಗಾನ ಶೀಲನ ಮಾಡು ।
ಹೀನ ಮನವ ಕೆಡಿಸೋ ।
ಆನೆಂಬೋ ಅಹಂ-
ಕಾರವನ್ನೇ ತೊಲಗಿಸೋ ।
ನಿನ್ನವರವ ನೆನಿಸೋ ।।
ಧೇನಿಸುವಂದದಿ
ಹರಿಯ ಪಾದಾಂಬುಜ ।
ಮಾನಸದಲಿ ಸರ್ವದ ।
ಕಾಣಿಸಿ ಕೊಡುವನು
ಜೀವನು ನಿಜವೆಂಬ ।
ಧ್ಯಾನ ಮನಕೆ ಬರಲಿ ।। ಚರಣ ।।
ಮೌನಿಯಾಗಿರಲಾರು
ಹೀನತೆ ನುಡಿಯಲು ।
ಪ್ರಾಣ ಪ್ರೇರಕರಿಂದಲಿ ।
ಆನೇನಾಡುವನಲ್ಲ ಆನೆನೆ-
ನಿಪನಲ್ಲ ಆನೆ ಸ್ವತಂತ್ರನಲ್ಲ ।
ದೀನನಾಗೆರಗಿ
ಸಜ್ಜನರ ಪಾದಾಬ್ಜಕೆ ।।
ರೇಣುನಾಗಿ ನಡೆದು ।
ನೀನೇವೆ ಗತಿಯೆಂದು ।
ನಿನ್ನನೇ ಮೊರೆ ಹೊಕ್ಕೆ ।
ಕ್ಷೋಣಿಯೊಳಗೆ ಬಳಲಿ ।। ಚರಣ ।।
ನಿಮ್ಮ ಕೊಂಡಾಡುವ
ಬುಧರ ನೋಡಲು ಅವ ।
ರೆಮ್ಮಾಪ್ತರೆಂದೆನಲಿ ।
ನಿಮ್ಮ ಪುಣ್ಯದ ಪುತ್ರ
ಗೋಪಾಲದಾಸರು ।
ಎಮ್ಮ ರಕ್ಷಕರಾಗಿರಲಿ ।।
ಇಮ್ಮಹೀಯೊಳಗೇಸು
ಕಾಲವಾದರು ಪುಣ್ಯ ।
ಸಮ್ಮಂದ ಕೆಡದಿರಲಿ ।
ಸುಮ್ಮನಸರೀಶ-
ರಘುಪತಿವಿಠ್ಠಲನು ।
ನಮ್ಮ ಸ್ವಾಮಿಯಾಗಲಿ ।।
ಎಂದು ಸ್ತುತಿಸುವುದರ ಜೊತೆಗೆ ಶ್ರೀ ವಿಜಯದಾಸರ ಮೇಲೆ....
ವಿಜಯರಾಯರ ಭಾಗ್ಯವಿದು ।
ತ್ಯಜಿಸದೆ ನಮ್ಮನು
ಬಿಡದೆ ಪೊರೆವುದು ।।
..... ಅಂದಣ ಕುಂದಣ
ಮಂದಿರ ಬಯಸದೆ ।
ನಿಂದಿರದೊಬ್ಬರ ಹಂಗಿನಲಿ ।
ಇಂದಿರಾಪತಿ
ರಘುಪತಿವಿಠ್ಠಲಗುಣ ।
ವೃಂದ ಪರಿಪೂರ್ಣ-
ನೆಂದು ಬಾಳುವದೆಲ್ಲ ।।
ಎಂದು ಶ್ರೀ ವಿಜಯರಾಯರ ವಾತ್ಸಲ್ಯವನ್ನು ಮನತುಂಬಿ ಹಾಡಿ ಹೊಗಳಿದ್ದಾರೆ.
ಕಲ್ಲೂರು ಪುರವಾಸಸ್ಥ೦
ವ್ಯಾಸವಿಠ್ಠಲ ಶಿಷ್ಯಕಂ ।
ರಾಘುಪತ್ಯಾಖ್ಯಾ ದಾಸಾರ್ಯ೦
ವಂದೇ ವೈರಾಗ್ಯ ಶಾಲಿನಂ ।।
****
" ಅಧಿಕ ಮಾಸ - 11 "
" ಶ್ರೀ ರಾಯರ ಕಾರುಣ್ಯ ಪಾತ್ರರು ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲರು "
ಹೆಸರು : ಶ್ರೀ ದಾಸಾಚಾರ್ಯರು
ಜನನ : ಕ್ರಿ ಶ 1780
ಜನ್ಮಸ್ಥಳ : ಕೆಂಭಾವಿ
ಬಾಲ್ಯದಿಂದಲೇ ಪ್ರತಿಭಾವಂತರಾಗಿ ಬೆಳೆದ ಶ್ರೀ ದಾಸಾಚಾರ್ಯರು ದ್ವೈತ ಶಾಸ್ತ್ರ ಪಾರಂಗತರಾಗುತ್ತಾರೆ.
ಎಲ್ಲಾ ಸಂಪತ್ತನ್ನು ಹೊಂದಿ ಶ್ರೀ ಹರಿಯ ದಯದಿಂದ ಸುಖೀ ಜೀವನವನ್ನು ಸಾಗಿಸುತ್ತಿದ್ದರು.
ವಿದ್ವಾಂಸರನ್ನು ಆದರಿಸಿ ಆತಿಥ್ಯ ನೀಡಿ ತಮ್ಮ ನಿವಾಸವು ಸಜ್ಜನರ ನೆಲೆಯಾಗುವಂತೆ ನೋಡಿಕೊಂಡಿದ್ದಲ್ಲದೆ; ಊರಿನ ಕೆರೆಗೆ ಮೆಟ್ಟಲುಗಳನ್ನು ಕಟ್ಟಿಸಿ ಕೊಟ್ಟು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡು - ಧಾರ್ಮಿಕ ಕ್ಷೇತ್ರದಲ್ಲೂ ಆಚಾರ್ಯರೆಂದೇ ಖ್ಯಾತರಾಗಿದ್ದರು.
ಶ್ರೀಮಂತಿಕೆಗೆ ತಕ್ಕಂತೆ ಶ್ರೀ ದಾಸಾಚಾರ್ಯರ ಮನಸ್ಸು ದೊಡ್ಡದಾಗಿತ್ತು.
ನಿಷ್ಕಾಮ ಕರ್ಮವೇ " ಅಪರೋಕ್ಷ ಜ್ಞಾನ " ಕ್ಕೆ ಸಾಧನೆ ಎಂಬುದನ್ನು ಅರಿತು ಅದೇ ರೀತಿ ಬದುಕನ್ನು ಸಾಗಿಸುತ್ತಿದ್ದರು.
" ಶ್ರೀ ರಘುಪತಿ ವಿಠ್ಠಲರ ಅಂತಃಕರಣ "
ಶ್ರೀ ವ್ಯಾಸ ವಿಠ್ಠಲಾಂಕಿತ ಕಲ್ಲೂರು ಸುಬ್ಬಣ್ಣಾಚಾರ್ಯರ ಶಿಷ್ಯರಾದ ಶ್ರೀ ವೈರಾಗ್ಯಶಾಲಿ ತಮ್ಮಣ್ಣದಾಸರ ವ್ಯಕ್ತಿತ್ವದಿಂದ ಪ್ರಭಾವಿತರಾದರು.
ಶ್ರೀ ದಾಸಾಚಾರ್ಯರು. ಅವರನ್ನು ಅರಸಿಕೊಂಡು ಕೆಂಭಾವಿಯಿಂದ ಕಲ್ಲೂರಿಗೆ ಕಾಲ್ನಡಿಗೆಯಲ್ಲೇ ಬರುತ್ತಾರೆ.
ಸಾಧಿಸುವ ಛಲವಿದ್ದಲ್ಲಿ ಯಾವುದೂ ಕಷ್ಟ ಎನಿಸದು ಎಂಬುದಕ್ಕೆ ಇವರೇ ಉದಾಹರಣೆ.
ಹಣ್ಣು ಹಂಪಲು ತಂದು ಶ್ರೀ ರಘುಪತಿ ವಿಠ್ಠಲರ ಮುಂದೆ ಇಟ್ಟು ಮನಸ್ಕರಿಸುತ್ತಾರೆ.
ಅಪರೋಕ್ಷ ಜ್ಞಾನಿಗಳಾದ ಶ್ರೀ ರಘುಪತಿ ವಿಠ್ಠಲರು ಇವರ ಆಗಮನವನ್ನು ಮುಂಚೆಯೇ ಅರಿತಿರುತ್ತಾರೆ.
ಮನೆಯವರಿಗೆ ಈ ಬಗ್ಗೆ ಸೂಚನೆ ಕೂಡಾ ನೀಡಿರುತ್ತಾರೆ.
ಎಷ್ಟೊಂದು ಶ್ರಮಪಟ್ಟು ಬಂದೆಯಪ್ಪ ಎಂದು ಅಂತಃಕರಣದಿಂದ ಕೇಳುತ್ತಾರೆ.
ಸಾಧನಾ ಜೀವಿಯಾಗಿ ಬಯಸಿ ಶ್ರೀ ರಘುಪತಿ ವಿಠ್ಠಲರಶಿಷ್ಯತ್ವವನ್ನು ಅಪೇಕ್ಷಿಸಿ ಬಂದಿರುವುದಾಗಿ ಶ್ರೀ ದಾಸಾಚಾರ್ಯರು ನಿವೇದಿಸಿಕೊಳ್ಳುತ್ತಾರೆ.
" ಅಂಕಿತ ಪ್ರದಾನ "
ಸ್ನಾನಾಹ್ನೀಕ ಮುಗಿಸಿ ಶ್ರೀ ದಾಸಾಚಾರ್ಯರು ಶ್ರೀ ರಘುಪತಿ ವಿಠ್ಠಲರಸನ್ನಿಧಾನಕ್ಕೆ ಬಂದು ವಿನಮ್ರರಾಗಿ ನಮಸ್ಕರಿಸಿ ನಿಂತಿದ್ದಾರೆ.
ಆಗ್ಗೆ ಶ್ರೀ ರಘುಪತಿ ವಿಠ್ಠಲರು " ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲ " ಎಂದು ಅಂಕೀತೋಪದೇಶ ಮಾಡಿ, ದಾಸದೀಕ್ಷೆಗೆ ಬೇಕಾದ ಸಂಸ್ಕಾರ ಮತ್ತು ಶ್ರೀ ಹರಿ ಸಾಕ್ಷಾತ್ಕಾರದ ವಿಧಾನಗಳನ್ನು ಉಪದೇಶಿಸಿ, ದಾಸ ಪರಂಪರೆಯನ್ನು ಮುಂದೆವರೆಸಿಕೊಂಡು ಹೋಗಿ ಎಂದು ಆಶೀರ್ವದಿಸಿ ಕಳುಹಿಸಿ ಕೊಡುತ್ತಾರೆ.
" ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲ "
ಅಂಕಿತದಲ್ಲಿ ಪದ ಪದ್ಯಗಳನ್ನು ರಚಿಸಿ ಶ್ರೀ ಹರಿ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
" ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲರ ಕೃತಿಗಳ ವೈಶಿಷ್ಟ್ಯ "
ಸಂಸಾರದಲ್ಲಿ ಜೀವಿಗಳನ್ನು ತೊಡಗಿಸುವವನೂ, ಸಿಲುಕಿಸುವವನೂ, ಬಿಡಿಸುವವನೂ ಶ್ರೀ ಹರಿಯೇ ಎಂದು ತಮ್ಮ ಕೃತಿಗಳಲ್ಲಿ ನಿರೂಪಿಸಿದ ಶ್ರೀ ದಾಸಾರ್ಯರು, ಈ ದೇಹ ಎರವಲು ಪಡೆದ ವಸ್ತ್ರ, ಅದು ಹೋದರೆ ದುಃಖವೇಕೆ ಎನ್ನುತ್ತಾರೆ.
ಸಂಸಾರಕ್ಕೆ ಅಂಟಿಕೊಂಡು ಬದುಕುವುದು ಅಂದರೆ...
" ಕಲ್ಲಿನ ಹಸುವಿನಿಂದ ಹಾಲನ್ನು ಬಯಸಿದಂತೆ "
ಎಂಬಂಥ ಅಪರೂಪದ ದೃಷ್ಟಾಂತಗಳನ್ನು ಕೊಡುತ್ತಾರೆ.
" ದಾಸ್ಯಮೇವ ಪರೋಧರ್ಮ:
ದಾಸಮೇವ ಪರಂತಪಃ "
ಎಂಬಂತೆ " ಹರಿದಾಸನಾಗುವುದಕ್ಕಿಂತ ಧರ್ಮ - ತಪಸ್ಸುಗಳು " ಬೇರಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ರಾಗ : ಮುಖಾರಿ ತಾಳ : ಅಟ್ಟ
ಎಂಥಾದೀ ಸಂಸಾರ ಎಲೋ ಹರಿ ।
ಎಂಥಾದೀ ಸಂಸಾರ ।। ಪಲ್ಲವಿ ।।
ಎಂಥಾದೀ ಸಂಸಾರ-
ದಂಥ ತಿಳಿಯಲಿಲ್ಲ ।
ಕಂತೇಗೆ ಹತ್ತಿದ
ತೊಂತಾನ ಜಿಗಟೀದು ।। ಅ ಪ ।।
ವಂದಾರ ಹಿಂದೆ ಒಂದೂ ।
ಬಂದು ಕಾಲಿಗೆ ಸುತ್ತಿ ।
ಎಂದೆಂದು ಬಿಡದೆ ।
ಹಿಂದಟ್ಟಿ ಬರುವುದು ।।1 ।।
ಎರವೀನ ವಸ್ತ್ರಕ್ಕೆ ಯಾ-
ತರ ಸಂತಾಪ ।
ಯಾರಾದರ್ಯೋದರೆ ಹಾ-
ರ್ಯಾರಿ ಅಳುವುದು ।। 2 ।।
ಬೆಂಗಾಡು ಒಳಗಿನ ಬೆಳ-
ದಿಂಗಳಂದದಿ ।
ನುಂಗಾದರೂ ನೋಡಿ
ಹಿಗ್ಗುವರಿದಕ್ಕಿಲ್ಲ ।। 3 ।।
ಕರೆದುಂಬ ಕಾಮಧೇನು
ಕಳ್ಳರಿಗೇ ಬಿಟ್ಟು ।
ಬರಡೆಮ್ಮೆ ಹಾಲಿಗೆ
ಬಾಯಾನೇ ತೆರೆಯೋದು ।। 4 ।।
ಕಂಬಳಿಯ ಮ್ಯಾಲೆ
ಕಣಕವ ನಾದಿಟ್ಟು ।
ಉಂಬುವ ಸಮಯಕ್ಕೆ
ಉಣಲಾರದಳುವುದು ।। 5 ।।
ಕೊರಳಾನೆ ಕೊಯ್ವಾಗೇ
ಕುರಿಮೇಯು ವಂದದಿ ।
ದುರುಳ ಪರಿವಾರವು
ದೈನ್ಯದಲ್ಲಿರುವೋದು ।। 6 ।।
ಎತ್ತಿನ ಪರಿಯಲ್ಲಿ
ಹೊತ್ಹೊತ್ತು ಸತ್ತರೆ ।
ಎತ್ತ ಹೋದರೆ ಯಮನ
ಲತ್ತೇಗೆ ಒಳಗಾದೆ ।। 7 ।।
ಉಂಟಾದ ಕಾಲಕ್ಕೆ
ನೆಂಟರಿಷ್ಟರು ತಿಂದು ।
ಕುಂಟೀಸಿದಾಗಾ ಗಂಟು
ಮೋರೇಲಿ ನಡೆವರು ।। 8 ।।
ಹಾದಿ ಹೋಕರುಗಳ
ಹಂಬಾಲು ಹಚ್ಚಿಸಿ ।
ಆದ್ಯಂತವಿಲ್ಲದೆ
ಹೋದಷ್ಟು ಕಾಲಕೆ ।। 9 ।।
ಸಂತೇಯ ಕೂಟ ತನ್ನ
ಪಂಥಕ್ಕೆ ನಿಲುವಾದೆ ।
ಅಂಥಾದ್ದನ್ನೇ ನೋಡಿ-
ದಂಥಾವ ವಿರಳಾ ।। 10 ।।
ಹಾನಿಯೊಳಗೆ ಹಾನಿ
ಮಾಣಾದೆ ಮರೆಸೋದು ।
ಶ್ರೀನಿವಾಸ ಭೂವರಾಹ -
ರಘುಪತಿ ವಿಠ್ಠಲನ್ನಾ ।। 11 ।।
ಮೇಲ್ಕಂಡ ಕೃತಿಯಲ್ಲಿ ಸಂಸಾರದ ಅನಿತ್ಯತೆ, ಮರುಭೂಮಿಯ ಬೆಳದಿಂಗಳಂತೆ ಅದರ ಅರ್ಥ ಹೀನತೆಯಲ್ಲೇ ಮುಳುಗಿದವರನ್ನು ಕರೆದುಂಬ ಕಾಮಧೇನುವ ಕಳ್ಳರಿಗೆ ಬಿಟ್ಟು ಬರಡೆಮ್ಮೆ ಹಾಲಿಗೆ ಬಾಯಾನೆ ತೆರೆಯೋದು ಎನ್ನುವ ಮೂಲಕ ಎಚ್ಚರಿಸಿದ್ದಾರೆ.
" ದಶಾವತಾರ ವರ್ಣನೆ "
ರಾಗ : ಅಸಾವೇರಿ ತಾಳ : ದೀಪಚಂದ
ಬಂದಾ ನೋಡೆ ಲಕ್ಷ್ಮೀರಮಣ ।
ಬಂದಾ ನೋಡೆ ।। ಪಲ್ಲವಿ ।।
ಬಂದಾ ಯಶೋದೆಯ ಕಂದಾ । ಮು ।
ಕುಂದ ಅರವಿಂದ ನಯನ । ಶ್ಯಾಮ ।
ಸುಂದರ ಮೋಹನ ।। ಆ. ಪ ।।
ನೀರ ಪೊಕ್ಕಾಡಿ ಬಂದ ।
ಬೆನ್ನಿಲಿ ಬಹು ।
ಭಾರ ಪೊತ್ತು ತಾ ನಿಂದಾ ।
ಕೋರದಾಡಿಯ ಮಸಿದಾ
ಧಾರೂಣಿ ಚೋರನ ।
ತೀರಿಸಿ ತಾ ಬಂದ
ನಾರಸಿಂಹನಾಗಿ ।। ಚರಣ ।।
ವಟುವು ತಾನಾಗಿ
ಬಂದ ಗೋವಿಂದ । ಆ ।
ರ್ಭಟದಿ ಬಲಿಯ ತುಳಿದಾ ।
ದಿಟ ತಾಯಕೊಂದು । ಧೂ ।
ರ್ಜಟಿ ಬಿಲ್ಲ ಮುರಿದು ದಧಿ ।
ಕಟವ ಕೋಲನು ಪಿಡಿದು ।
ನಟನೆ ಮಾಡುತ ಸ್ವಾಮಿ ।। ಚರಣ ।।
ಭಾಮೆಯ ವ್ರತವ ಕೆಡಿಸಿದಂಥ ।
ಸ್ವಾಮಿಯೊಡೋಡಿ ಬಂದ ।
ಸ್ವಾಮಿ ಭೂವರಾಹ ರಘುಪತಿ ವಿಠ್ಠಲ।
ಕ್ಷೇಮದಿ ಹಯವೇರಿ ಕಾಮಿತವೀಯುತ ।। ಚರಣ ।।
ಹೀಗೆ ಶ್ರೀ ಭೂವರಾಹ ರಘುಪತಿ ವಿಠ್ಠಲ ದಾಸರು ಶ್ರವಣ ರಮಣೀಯವಾದ ತಮ್ಮ ಪದ ಪದ್ಯಗಳ ಪ್ರಖರತೆ ಹಾಗೂ ನಾದ ಮುಖರತೆಗಳಿಂದ ಸಹೃದಯರ ಮನಃ ಪ್ರೀಣನವನ್ನು ಮಾಡುತ್ತಾರೆ.
" ಶಿಷ್ಯರು "
ಶ್ರೀ ಶ್ರೀಪತಿ ವಿಠಲರು
" ನಿರ್ಯಾಣ "
ಗುರುಗಳ ( " ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲ ") ದಾರಿಯಲ್ಲೇ ನಡೆದು ತೀರ್ಥಯಾತ್ರೆ, ಮಧ್ವಮತ ಪ್ರಚಾರಗಳೊಂದಿಗೆ ಬದುಕನ್ನು ಮುನ್ನಡೆಸುತ್ತಾರೆ.
" ಹರಿ ಸರ್ವೋತ್ತಮ - ವಾಯು ಜೀವೋತ್ತಮ " ತತ್ತ್ವವನ್ನು ತಮ್ಮ ಕೀರ್ತನೆಗಳ ಮೂಲಕ ಪ್ರಚುರ ಪಡಿಸುತ್ತಾ ಜೀವನ ನಡೆಸಿ ಕ್ರಿ ಶ 1865 ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ಕಾಲನ ಕರೆಗೆ ಓಗೊಟ್ಟು ಇಹಲೋಕ ವ್ಯಾಪಾರವನ್ನು ಮುಗಿಸಿ ಶ್ರೀ ಹರಿಯ ಪುರಕ್ಕೆ ಪೊರಟರು.
ಕೆಂಭಾವಿಪುರವಾಸಸ್ಥ೦
ದಾಸಾಚಾರ್ಯೇತಿ ನಾಮಕಂ ।
ಶಿಷ್ಯಕಂ ರಘುಪತ್ಯಾಕ್ಯ ಸ್ಯ
ತಾಪಸೋತ್ತಮ ವಿಖ್ಯಾತಂ ।
ಭೂವರಾಹ ರಘುಪತ್ಯಾಖ್ಯ
ದಾಸಾಂಕಿತ ಮಹಾಂಭಜೇ ।।
" ಶ್ರೀ ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲರ ಇತರ ಕೃತಿಗಳು "
1. ನಿನ್ನ ತೊಂಡಾನಂತೆ ತಿಳಿದೆನ್ನ ಊಳಿಗ ಪೇಳೋ
2. ಕಾಯೋ ಯೆನ್ನ ಶ್ರೀಧರ ಕರುಣಾಕರ
3. ಹರೀ ವಿಠ್ಠಲ ಪಾಂಡುರಂಗ
4. ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ
5. ಶ್ರೀಪತಿ ವಿಠ್ಠಲನ ಸೇವಿಸು
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
" ಅಧಿಕ ಮಾಸ - 12 "
" ಶ್ರೀ ರಾಯರ, ಶ್ರೀ ವಿಜಯರಾಯರ, ಶ್ರೀ ಶೇಷದಾಸರ ಪ್ರೀತಿಪಾತ್ರರು ಪರಮಪೂಜ್ಯ ಶ್ರೀ ಉಪ್ಪಲಿ ತಾತ "
" ಪೂಜ್ಯ ಶ್ರೀ ಉಪ್ಪಲಿ ಗುರುಮಧ್ವರಾಯರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಉಪ್ಪಲಿ ಗುರುಮಧ್ವರಾಯರು
ತಂದೆ : ಶ್ರೀ ವಿಜಯರಾಯರು
ತಾಯಿ : ಸಾಧ್ವೀ ಲಕ್ಷ್ಮೀಬಾಯಿ
ಜನನ : ಕ್ರಿ ಶ 1918
ಸಂವತ್ಸರ : ಸಿದ್ಧಾರ್ಥ
ಆಯಣ : ಉತ್ತರಾಯಣ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ : ಗುರುವಾರ
ಯೋಗ : ಸಿದ್ಧಿ
ರಾಶಿ : ತುಲಾ
ನಕ್ಷತ್ರ ಮತ್ತು ಚರಣ :
ವಿಶಾಖ 3ನೇ ಚರಣ
ಜನ್ಮ ನಾಮ :
ತೇಜಪ್ಪ
ಗೋತ್ರ : ಕೌಂಡಿನ್ಯ
ಉಪನಯನ :
ಕ್ರಿ ಶ 1927
ಬ್ರಹ್ಮೋಪದೇಶ :
ಅಪರೋಕ್ಷ ಜ್ಞಾನಿಗಳಾದ ಶ್ರೀ ಇಂದಿರೇಶರು
( ಶ್ರೀ ಪಾಂಡುರಂಗೀ ಹುಚ್ಚಾಚಾರ್ಯರು )
ಧರ್ಮ ಪತ್ನಿ :
ಸಾಧ್ವೀ ಗಂಗಾಬಾಯಿ ( ಸಾವಿತ್ರಿ )
ಸುಳಾದಿ ಹೇಳಿಕೊಟ್ಟ ಗುರುಗಳು :
ಶ್ರೀ ಮಾನವಿ ವೆಂಕೋಬರಾಯರು
ಶ್ರೀ ಉಪ್ಪಲಿ ಗುರು ಮಧ್ವರಾಯರು ರಾಯಚೂರಲ್ಲಿ ಕ್ರಿ ಶ 1995 ಶ್ರೀ ಗುರು ವಿಜಯದಾಸಾಶ್ರಮ ಸ್ಥಾಪಿಸಿದರು.
ಉತ್ತನೂರಿನಲ್ಲಿ ಶ್ರೀ ಗೋಪಾಲದಾಸರ ಕಟ್ಟೆ ನಿರ್ಮಾಣ ಮಾಡಿದರು
ರೇಖಾ ಕೃತಿಗಳು :
ಶ್ರೀ ಗೋಪಾಲದಾಸರು ವಿರಾಟ ಪುರುಷನ ಆಕೃತಿಯನ್ನು ಚಿತ್ರಿಸಿದಂತೆ, ಶ್ರೀ ಗುರುಮಧ್ವರಾಯರು " ಸುಜ್ಞಾನ ಪಟಗಳ " ನ್ನು ಬರೆದಿದ್ದಾರೆ. ಅವುಗಳ ವಿವರ...
1 ಮತ್ತು 2 - ಖಗೋಳ ಮತ್ತು ಭೂಗೋಳದ ವಿವರಣೆ
3. ಸೂಕ್ಷ್ಮಮತ್ತು ಸ್ಥೂಲ ಸೃಷ್ಟಿ
4. ಪದ್ಮಕಲ್ಪ, ವಿರಾಟಕಲ್ಪ, ಶ್ವೇತ ವರಾಹ ಕಲ್ಪ - ಸೃಷ್ಟಿ
5. ಧಾಮ ತ್ರಯಗಳು ( ಅನಂತಾಸನ, ಶ್ವೇತದ್ವೀಪ, ವೈಕುಂಠ )
6. ಸಪ್ತ ದ್ವೀಪಗಳು
7. ನವ ಖಂಡಗಳು
8. ಐತಿಹಾಸಿಕ - ರಾಜ ವಂಶಾವಳಿ
9. ಓಂಕಾರದ ವಿವರಣೆ
10. ಗಾಯತ್ರೀ ಮಂತ್ರದ ಉತ್ಪತ್ತಿ
11. ದೇಹಾಂತರ್ಗತ ಕಮಲಗಳ ವಿವರಣೆ
12. ಸೂರ್ಯನ ರಥ ಹಾಗೂ ತಿರುಗುವ ಪಥ
13. ಶ್ರೀಕಾರದಲ್ಲಿ ಅಷ್ಟಕದ ಅಡಕ
14. ಶ್ರೀಕಾರದಲ್ಲಿ ಶ್ರೀ ಶೇಷದಾಸರ ಉಗಾಭೋಗ
15. ಶ್ರೀ ಹರಿಕಥಾಮೃತಸಾರದಲ್ಲಿ ವಿವರಿಸಿದ ಪಂಚಾಗ್ನಿಯಲಿ, ಶ್ರೀಮನ್ನಾರಾಯಣನ ತ್ರಿ೦ಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿ
" ಗ್ರಂಥಗಳು "
1. ಶ್ರೀ ಶೇಷದಾಸರ ಉಗಾಭೋಗ, ಸುಳಾದಿಗಳು - 1985
2. ಶ್ರೀ ಶೇಷದಾಸ ಕೃತ " ನಿತ್ಯಕರ್ಮಾನುಷ್ಠಾನ " - 1988
3. ಶ್ರೀ ಗೋಪಾಲದಾಸಾರ್ಯರ " ಸುಳಾದಿ ಮತ್ತು ಪದಗಳು " - 1989
4. ಶ್ರೀ ಶೇಷದಾಸ ಕೃತ" ಪಂಚ ಪ್ರಮೇಯ " - 1990
5. ಶ್ರೀ ವಿಜಯದಾಸಾರ್ಯ ಕೃತ " ತಾರತಮ್ಯ ಸುಳಾದಿ " - 1991
6. ಶ್ರೀ ಶೇಷದಾಸ ಕೃತ" ವಾರದ ಸುಳಾದಿ " - 1992
7. ಶ್ರೀ ಗುರು ಶ್ರೀಶ ವಿಠಲ ಕೃತ " ಸುಳಾದಿಗಳು " - 1998.
8. ಉದ್ಧಾಲಕನ ಕಥೆ - 1992
9. ಶ್ರೀ ವಿಜಯದಾಸಾರ್ಯ ಕೃತ " ಸೃಷ್ಟಿ ಪ್ರಕರಣ ಸುಳಾದಿ " - 1999
10. ತೀರ್ಥ ಕ್ಷೇತ್ರ ಮಹಿಮೆ - 1997
11 .ಶ್ರೀ ಪ್ರಾಣದೇವರ ಮಹಿಮಾ ಸುಳಾದಿ - 1997
12. ಜೀವದ ಉಪಾಸನಾ ಪ್ರಕರಣ ಸುಳಾದಿ - 1998
13. ಸಾಧನಾ ಕ್ರಮ ಸುಳಾದಿ - 1998
14. ಶ್ರೀ ಹರಿಗುರುಗಳ ಸ್ತೋತ್ರ - 1999
15. ಪುರುಹೂತ ಜಯತೀರ್ಥ ಶ್ರೀ ಶೇಷದಾಸರು - 1999
16. ಶ್ರೀ ಶೇಷದಾಸರ ಚರಿತ್ರೆ - 1999
17. ಶ್ರೀ ಹರಿಕಥಾಮೃತ ನಿಘಂಟು - 2000
ಜೊತೆಗೆ ಜ್ಞಾನ ಪ್ರಸಾರ ಪ್ರಕಾಶನ ಮತ್ತು ಗುರು ವಿಜಯ ದಾಸಾಶ್ರಮದಿಂದ ಅನೇಕ ಗ್ರಂಥಗಳು ಮುದ್ರಣಗೊಂಡಿವೆ!!
" ಪ್ರಶಸ್ತಿಗಳು "
ಶ್ರೀ ಭಂಡಾರುಕೇರಿ ಮಠದಿಂದ " ಹರಿದಾಸ ವಾಙ್ಞಯ ವಿಶಾರದ "
ರಾಯಚೂರು ಭಕ್ತರಿಂದ " ಸುಳಾದಿ ರತ್ನಾಕರ "
ಶ್ರೀ ರಾಯರ ಮಠದಿಂದ " ಶ್ರೀ ರಘುನಂದನ ಪ್ರಶಸ್ತಿ " ಮತ್ತು ತುಲಾಭಾರ ಮತ್ತು ಸನ್ಮಾನಗಳು
ಶ್ರೀ ಉತ್ತರಾದಿ ಮಠದಿಂದ " ದಾಸ ಸಾಹಿತ್ಯ ಭೂಷಣ "
ಶ್ರೀ ಭೀಮನಕಟ್ಟೆ ಮಠದಿಂದ " ಶ್ರೀ ಭೀಮಸೇತು ಪುರಂದರ "
" ನಿರ್ಯಾಣ "
ವಿಕೃತಿ ನಾಮ ಸಂವತ್ಸರ ಭಾದ್ರಪದ ಶುದ್ಧ ಪೌರ್ಣಿಮಾ ಉಪರಿ ಪ್ರತಿಪಾದ ( 21.09.2010 )
ಶ್ರೀ ಉಪ್ಪಲಿ ಗುರುಮಧ್ವರಾಯರ ಉತ್ತರ ಕ್ರಿಯೆ, ಮಾಸಾನುಮಾಸಿಕ ಶ್ರಾದ್ಧದ - ದಾನ ಧರ್ಮಗಳ ಖರ್ಚನ್ನು ಶ್ರೀ ಮಂತ್ರಾಲಯ ರಾಯರ ಮಠದವರು ಅನುಕೂಲ ಮಾಡಿಕೊಟ್ಟರು.
ಇದರಿಂದ - ಶ್ರೀ ಉಪ್ಪಲಿ ತಾತ ಶ್ರೀ ರಾಯರಿಗೆ ಎಷ್ಟು ಪ್ರೀತ್ಯಾಸ್ಪದರೋ ಎಂಬುದು ಸ್ಪಷ್ಟವಾಗುತ್ತದೆ.
ವಿಶೇಷ ವಿಚಾರ :
ನನಗೂ - ನನ್ನ ಗುರುಗಳಾದ ಪರಮಪೂಜ್ಯ ಕೀರ್ತಿಶೇಷ ರಾಜಾ ಎಸ್ ರಾಜಗೋಪಾಲಾಚಾರ್ಯರಿಗೆ ಪ್ರಾತಃ ಸ್ಮರಣೆಯ ಪರಮಪೂಜ್ಯ ಶ್ರೀ ಉಪ್ಪಲಿ ತಾತ ಅವರನ್ನು ಕಂಡರೆ ಏನೋ ಒಂದು ವಿಚಿತ್ರವಾದ ಆನಂದ.
ಅವರ ಮುಖ ದರ್ಶನವಾದರೆ ಸಾಕು ನಮ್ಮ ಜನ್ಮ ಸಾರ್ಥಕವಾಯಿತು ಎಂದು ಅವರ ಕಾಲ ಮೇಲೆ ಬಿದ್ದು ಬಿಡುತ್ತಿದ್ದೇವು.
ನಾನು ಆ ಮಹಾತ್ಮರನ್ನು ಕಂಡದ್ದು ಶ್ರೀ ವಿಜಯರಾಯರ ಆರಾಧನಾ ಶುಭ ಸಂದರ್ಭ - ಶ್ರೀ ಕ್ಷೇತ್ರ ಚಿಪ್ಪಗಿರಿಯಲ್ಲಿ.
ಶ್ರೀ ರಾಯರ - ಶ್ರೀ ವಿಜಯರಾಯರ ಪರಮಾನುಗ್ರದಿಂದ ಅಪಮೃತ್ಯು ಪರಿಹಾರವಾದಾಗ - ಶ್ರೀ ವಿಜಯರಾಯರ ತಂಬೂರಿಗೆ ಶ್ರೀ ಸುಶಮೀ೦ದ್ರತೀರ್ಥರ ಆದೇಶದೊಂದಿಗೆ ನನ್ನ ತೀರ್ಥರೂಪರು " ಬೆಳ್ಳಿ ಕಟ್ಟು ಹಾಕಿಸಿ ಶ್ರೀ ವಿಜಯರಾಯರ ಸನ್ನಿಧಿಯಲ್ಲಿ ಸಮರ್ಪಣೆ ಮಾಡುವ ಸಲುವಾಗಿ ನಾನು - ನನ್ನ ತಂದೆಯವರು - ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯರು ಹೋಗಿದ್ದಾಗ ಅವರನ್ನು ಕಂಡದ್ದು. ( 2007 ).
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಉಪ್ಪಲಿ ತಾತ ಅವರನ್ನು ಕಂಡ ನಾವುಗಳೇ ಪರಮ ಧನ್ಯರೂ - ಮಾನ್ಯರು
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
" ಅಧಿಕ ಮಾಸ - 13 "
" ಶ್ರೀ ರಾಯರ - ಶ್ರೀ ವಿಜಯರಾಯರ - ಶ್ರೀ ಶೇಷದಾಸರ - ಶ್ರೀ ಉಪ್ಪಲಿ ತಾತ ಅವರ ಪ್ರೀತಿಪಾತ್ರರು ಶ್ರೀ ಕಾಶಿ ಹನುಮಂತದಾಸರು "
" ಪೂಜ್ಯ ಶ್ರೀ ಕಾಶಿದಾಸರ ಸಂಕ್ಷಿಪ್ತ ಮಾಹಿತಿ "
ದಾಸರೇ ಗತಿಯು ನಮಗೆ ।
ಕಾಶಿ ಹನುಮದ್ದಾಸರೇ ।। ಪಲ್ಲವಿ ।।
ದಾಸ ಸಾಹಿತ್ಯ ಭೂಷಣ
ಗುರು ಮಧ್ವ ತಾತನ ।
ವಿಶೇಷ ಅಂತಃಕರಣ
ಪಡೆದಂಥ ।। ಅ ಪ ।। ....
ಜಪತಪಾನುಷ್ಠಾನ ಹರಿ
ನಾಮ ಶ್ರವಣ ನಿಸ್ಸೀಮ ।
ತಾಪತ್ರಯ ಕಳೆಯೋ
ಸಿರಿನಿವಾಸ ವಿಠಲನ
ದಾಸರೇ ಹನುಮದ್ದಾಸರೇ ।।
ಪ್ರತಿನಿತ್ಯ ಪ್ರಾತಃ ಕಾಲದಲ್ಲಿ ಯಾರು ಶ್ರೀ ಹಕಾಶೀ ಹನುಮಂತದಾಸರ ಸ್ಮರಣೆ ಮಾಡುತ್ತಾರೋ - ಅವರಿಗೆ ಶ್ರೀ ಉಪ್ಪಲಿ ತಾತ ಅವರ ಅಂತರ್ಯಾಮಿ ಶ್ರೀ ಶೇಷದಾಸರು - ಶ್ರೀ ವಿಜಯರಾಯರು - ಅವರ ಅಂತರ್ಯಾಮಿ ಶ್ರೀ ರಾಯರು - ಅವರ ಅಂತರ್ಯಾಮಿ ಶ್ರೀ ಭಾರತೀ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲ ರಘುಪತಿ ವೇದವ್ಯಾಸೋ sಭಿನ್ನ ಶ್ರೀ ವಿಜಯವಿಠಲ ಒಲಿದು ಮುಕ್ತಿ ಕೊಡುವಾ...
" ಶ್ರೀ ಕಾಶೀ ಹನುಮಂತದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಕಾಶಿ ಹನುಮಂತದಾಸರು
ತಂದೆ : ಶ್ರೀ ಕೃಷ್ಣರಾಯರು
ತಾಯಿ : ಸಾಧ್ವೀ ಪದ್ಮಾವತೀಬಾಯಿ
ಜನನ : ಕ್ರಿ ಶ 1940 ( 14.05.1940 )
ಜನ್ಮ ಸ್ಥಳ : ಬೋರಗಿ ಗ್ರಾಮ ( ಬಿಜಾಪುರ ಜಿಲ್ಲೆ )
" ಶ್ರೀ ಮಂತ್ರಾಲಯ ಪ್ರಭುಗಳ ಪರಮಾನುಗ್ರಹ "
ಮಂತ್ರ ಪ್ರತಿಪಾದ್ಯನ ಕ್ಷೇತ್ರ ಶ್ರೀ ಮಂತ್ರಾಲಯ.
ಕ್ಷೇತ್ರ ಪಾಲಕ ಶ್ರೀ ನರಸಿಂಹದೇವರು.
ಶ್ರೀ ನರಸಿಂಹದೇವರ ಪೂರ್ಣಾನುಗ್ರಕ್ಕ ಪಾತ್ರರಾದ ಶ್ರೀ ಪ್ರಹ್ಲಾದರಾಜರೇ ಕಲಿಯುಗದ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರು.
ಪ್ರಾರಬ್ಧ ಕರ್ಮ ಎಂಥವರನ್ನಾದರೂ ಮಣಿಸದೆ ಬಿಡದು.
" ಅವಶ್ಯ೦ ಅನುಭೋಕ್ತವ್ಯಮ್ "
ಎಂದಂತೆ - ಮಗು ಶ್ರೀ ಹನುಮಂತರಾಯರು 6 ವರ್ಷದ ಬಾಲಕ.
ದುರದೃಷ್ಟವಶಾತ್ ಆ ಬಾಲಕನಿಗೆ ವಿಷಮ ಜ್ವರ ಕಾಣಿಸಿಕೊಂಡಿತು.
ಚಿಕಿತ್ಸೆಗಾಗಿ ಆ ಹಳ್ಳಿಯ ವೈದ್ಯರ ಬಳಿ ಕರೆದುಕೊಂಡು ಹೋದರು.
ವೈದ್ಯರು ಬಾಲಕನಿಗೆ ಚುಚ್ಚು ಮದ್ದು ನೀಡಿದರು.
ಆ ಔಷಧ ವಿಪರೀತ ಪರಿಣಾಮ ಬೀರಿತು.
ಆ ಚುಚ್ಚುಮದ್ದಿನಿಂದ ದೇಹದ ನರ ಮಂಡಲದ ಮೇಲೆ ವಿಪರೀತ ಪರಿಣಾಮ ಬೀರಿದ್ದೂ ಅಲ್ಲದೇ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡು ಕಗ್ಗತ್ತಲೆಯಲ್ಲೇ ಬದುಕುವಂತೆ ಮಾಡಿತು.
ಶ್ರೀ ಕ್ಷೇತ್ರ ಮಂಚಾಲೆಗೆ ಬಂದು ತಾಯಿ - ಮಗ ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದರು.
ಒಂದು ಮಂಡಲ ಪರ್ಯಂತ ಸೇವೆ ಮಾಡಿದರೂ ಶ್ರೀ ರಾಯರ ಕರುಣೆ ಆಗಿಲ್ಲವೆಂದು ಚಿಂತಾಕ್ರಾಂತಳಾದಳು.
ಕರುಣಾವಾರಿಧಿ ಶ್ರೀ ಹರಿಯ ಕರುಣೆಯ ಕಂದ ಶ್ರೀ ರಾಯರಿಗೆ ಪ್ರೇರಣೆಯಾಯಿತು.
ಶ್ರೀ ರಾಯರು ಶ್ರೀ ಹನುಮಂತದಾಸರ ತಾಯಿಯ ಸ್ವಪ್ನದಲ್ಲಿ ಕಾಣಿಸಿಕೊಂಡು....
ನಿನ್ನ ಮಗನಿಗೆ ಈ ಜನ್ಮದಲ್ಲಿ ದೃಷ್ಟಿ ಬರುವ ಯೋಗವಿಲ್ಲ.
ಒಂದುವೇಳೆ ಈ ಜನ್ಮಕ್ಕೆ ಆಗ್ರಹ ಪೂರ್ವಕ ಕಾಣುವ ದೃಷ್ಟಿ ಕೊಟ್ಟರೂ ಮುಂದಿನ ಜನುಮಗಳಲ್ಲಿಯೂ ಅವರು ನೇತ್ರ ಹೀನರಾಗಿಯೇ ಬಾಳಬೇಕು.
ಇವೆರಡರಲ್ಲಿ ತಾಯಿಯ ಇಚ್ಛೆಯನ್ನು ಅಪೇಕ್ಷಿಸಿದರು.
ಆಗ ತಾಯಿ ಪದ್ಮಾವತಿಬಾಯಿ ಮಾತೃವಾತ್ಸಲ್ಯ, ಮಮತೆಯ ಸಾಕಾರಮೂರ್ತಿಯು ಮುಂದಿನ ಜನುಮಗಳಲ್ಲಿಯಾದರೂ ಮಗನು ಬೆಳಕಿನಲ್ಲಿ ಓಡ್ಯಾಡುವಂತೆ ಸುಖದ ಬದುಕು ಆಗಲಿ ಎಂದು ಹಾರೈಸಿ ಶ್ರೀ ರಾಯರ ವಿಶೇಷ ಅನುಗ್ರಹಕ್ಕೆ ಪ್ರಾರ್ಥಿಸಿಕೊಂಡು " ನಿಮ್ಮ ಚಿತ್ತ - ಎಮ್ಮ ಭಾಗ್ಯ " ವೆಂದು ಸುಮ್ಮನಾದಳು.
ಶ್ರೀ ಹರಿಯ ಸಂಕಲ್ಪದಂತೆ ಮಗುವಿನ ಕೊನೆಯವರೆಗೂ ಆತನ ಸಾಧನೆ, ಕಾರ್ಯಗಳಲ್ಲಿ ತಾವೇ ಮುಂದಾಗಿ ನಿಂತು ಆತನ ಬದುಕಿನ ನಿರ್ವಹಣೆ ಭಾರ ತಾವೇ ಹೊತ್ತು ತಾಯಿಗಿದ್ದ ಚಿಂತೆ, ಮಹಾಭಯ ಪರಿಹಾರ ಮಾಡುವ ಅಭಯ ನೀಡಿ ಶ್ರೀ ರಾಯರು ಅದೃಶ್ಯರಾದರು.
ಮುಂದೆ 68 ವರ್ಷಗಳ ಕಾಲ ಶ್ರೀ ಕಾಶಿದಾಸರ ಕೈ ಹಿಡಿದು ಕುರಡರಿಗೆ ಕೋಲ ಆಸರೆಯಂತೆ ಆಸರೆ ನೀಡಿ, ಶ್ರೀ ಕಾಶಿದಾಸರ ಆಸೆಗಳನ್ನೆಲ್ಲಾ ಪೂರೈಸುತ್ತಾ ಅವರ ಬದುಕಿನ ಜಟಕಾ ಬಂಡಿಯ ಸಾರಥಿಯಾದರು ಶ್ರೀ ಮಂತ್ರಾಲಯ ಪ್ರಭುಗಳು!
ಇದುವೇ ಶ್ರೀ ರಾಯರ ಕಾರುಣ್ಯ!
ಅಲ್ಲಿಂದ ಮುಂದೆ ಶ್ರೀ ಕ್ಷೇತ್ರ ಉಡುಪಿಗೆ ಹೋಗಿ ಅಲ್ಲಿ ಜಗದೊಡೆಯನಾದ ಶ್ರೀ ಕೃಷ್ಣ ಪರಮಾತ್ಮನ ಸೇವೆ ಮುಗಿಸಿ ಪುನಃ ಶ್ರೀ ರಾಯರ ಸನ್ನಿಧಿಗೆ ಬಂದು ಸೇವೆ ಸಲ್ಲಿಸಿ ಆಪತ್ಕಾಲ ಮಿತ್ರರಾದ ಶ್ರೀ ಚಿಪ್ಪಗಿರಿ ನಿಲಯದಾರ ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯದಾಸರ ಪ್ರೇರಣೆಯಂತೆ ಬಂದು ಸೇವೆ ಮಾಡಲಾರಂಭಿಸಿದರು.
ಶ್ರೀ ವಿಜಯರಾಯರ ಕೃಪಾ ಕಟಾಕ್ಷದಿಂದ ಶ್ರೀ ಕ್ಷೇತ್ರ ಕಾಶಿಗೆ ಹೋಗಿ ಹನುಮಾನ್ ಘಾಟ್ ನಲ್ಲಿಯೇ ವಾಸ ಮಾಡತೊಡಿದರು.
ಸುಮಾರು 24 ವರ್ಷಗಳ ಕಾಲ ಕಾಶಿ ಕ್ಷೇತ್ರದಲ್ಲೇ ಶ್ರೀ ವಿಶ್ವನಾಥ - ಶ್ರೀ ವಿಶಾಲಾಕ್ಷಿ ಸನ್ನಿಧಾನದಲ್ಲಿದ್ದು ಸಾಧನೆ ಮಾಡಿದರು.
ಶ್ರೀ ರಾಮದುರ್ಗದ ಮಾಧವೇಶಾಚಾರ್ಯರ ಪರಮಾನುಗ್ರಹಕ್ಕೆ ಪಾತ್ರರಾದರು!
ಶ್ರೀ ಕಾಶಿದಾಸರು ಕಾಶಿಯಲ್ಲಿದ್ದಾಗ ನೇಪಾಳದಿಂದ ಬಂದ ಸಾಲಿಗ್ರಾಮ ಮತ್ತು ಪೂಜಾ ವಸ್ತುಗಳನ್ನು ಹೊತ್ತು ತಂದು ಕರ್ನಾಟಕದಲ್ಲಿರುವ ಮಠ - ಮಾನ್ಯಗಳಿಗೆ ಮಾರಾಟ ಮಾಡಿ ಸ್ವತಂತ್ರ ಜೀವನ ಮಾಡಲಾರಂಭಿಸಿದರು!
" ಶ್ರೀ ಗುರು ವಿಜಯದಾಸಾಶ್ರಮ "
ಶ್ರೀ ರಾಮದುರ್ಗದ ಮಾಧವೇಶಾಚಾರ್ಯರ ಪರಮಾನುಗ್ರಹದಿಂದ ಶ್ರೀ ವಿಜಯದಾಸಾಶ್ರಮಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ.
ಶ್ರೀ ಉಪ್ಪಲಿ ಗುರುಮಧ್ವರಾಯರೊಂದಿಗೆ ಶ್ರೀ ಶೇಷದಾಸರ ( ಶ್ರೀ ಗುರು ವಿಜಯ ವಿಠಲ ) ಸೇವೆಯಲ್ಲಿ ಕೈ ಜೋಡಿಸಿರುವ ಮಹನೀಯರು ಶ್ರೀ ಕಾಶೀ ಹನುಮದ್ದಾಸರು.
ಇದು ಹಾಲಿನೊಂದಿಗೆ ಜೇನು ಬೆರೆತಂತೆ ಆಗಿ ಸಜ್ಜನ ಜಗತ್ತಿಗೆ ಆನಂದದಾಯಕ ವಿಚಾರವಾಯಿತು!
ಶ್ರೀ ಉಪ್ಪಲಿ ಮಧ್ವರಾಯರ ಪರಿವಾರದಲ್ಲಿ ಮುಖ್ಯವಾಗಿದ್ದರು.
" ಗೋಪಾಲವಿಠಲ ಪ್ರಶಸ್ತಿ "
ಶ್ರೀ ಕಾಶೀ ಹನುಮದ್ದಾಸರಿಗೂ, ಶ್ರೀ ಸುಶಮೀ೦ದ್ರತೀರ್ಥ ಶ್ರೀಪಾದಂಗಳವರ ಆಪ್ತ ಕಾರ್ಯದರ್ಶಿಗಳಾದ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯರಿಗೂ ಆತ್ಮೀಯ ಸಂಬಂಧ.
ಶ್ರೀ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಕಾಶೀದಾಸರ ಸೇವೆಯನ್ನು ಗುರುತಿಸಿ ಶ್ರೀ ರಾಯರ ಮಠದಿಂದ " ಶ್ರೀ ಗೋಪಾಲವಿಠಲ " ಪ್ರಶಸ್ತಿಯನ್ನು ಶ್ರೀ ಸುಶಮೀ೦ದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತಗಳಿಂದ ಕ್ರಿ ಶ 2007 ರಲ್ಲಿ ಸ್ವೀಕರಿಸಿದ ಪೂತಾತ್ಮಾರು!!
" ಉಪಸಂಹಾರ "
ಶ್ರೀ ಪರಮಾತ್ಮನ ಸೃಷ್ಟಿ ಕ್ರಮದಲ್ಲಿ ಹುಟ್ಟು ಜೀವದ ಪ್ರಾರಂಭ - ಕೊನೆ ಇವೆರಡರ ಮಧ್ಯ ನಡೆಯುವ ಹೋರಾಟವೇ ಜೀವನ. ಸೃಷ್ಟಿ - ಸ್ಥಿತಿ ನಿಯಮ - ಲಯ ಇವು ಭಗವಂತನ ವ್ಯಾಪಾರ.
ಸೃಷ್ಟಿಗೆ ಬಂದದ್ದು ಲಯ ಹೊಂದಲೇಬೇಕು.
( ಜಾತಸ್ಯ ಮರಣಂ ಧ್ರುವಮ್ )
ಮಾನವನು ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಸಾರ್ಥಕದ ಬದುಕು, ಸಾಧನೆ ಎಷ್ಟೆಂಬುದೇ ಮುಖ್ಯ!
ಅಲ್ಪ ಕಾಲದಲ್ಲಿ ಮಹತ್ವ ಸಾಧನೆ ಮಾಡಿ ತೋರಿಸುವುದು ಮಹಾತ್ಮರ ಲಕ್ಷಣ.
ಇದರಂತೆ ಶ್ರೀ ಕಾಶಿದಾಸರು ಸಿಕ್ಕ ಅಲ್ಪ ಆಯುಷ್ಯದಲ್ಲಿ ಚಿನ್ನದಂಥಾ ಸಾಧನೆ ಮಾಡಿರುವರು.
ದಿನಾಂಕ : 16.12.2008 ಮಂಗಳವಾರ ಶ್ರೀ ಕಾಲ ನಾಮಕ ಪರಮಾತ್ಮನ ಕರೆಗೆ ಓಗೊಟ್ಟು ವೈಕುಂಠಕ್ಕೆ ಪ್ರಯಾಣ ಮಾಡಿದರು!
ಶ್ರೀ ರಾಯರ - ಶ್ರೀ ವಿಜಯರಾಯರ ಸಂಪರ್ಕಕ್ಕೆ ಬರುವ ಸುಜೀವಿಗಳು ಮಹತ್ತರ ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಇದು ಜ್ವಲಂತ ನಿದರ್ಶನ.
ರಾಯರೇ ಗತಿಯು ಜಗತ್ತಿನ ಸುಜನರಿಗೆಲ್ಲಾ ರಾಯರೇ ಗತಿಯು!!
" ವಿಶೇಷ ವಿಚಾರ "
ಶ್ರೀ ಕ್ಷೇತ್ರ ಚಿಪ್ಪಗಿರಿ ನಿಲಯರೂ - ಆಪತ್ಕಾಲ ಮಿತ್ರರಾದ ಶ್ರೀ ವಿಜಯರಾಯರ ಕಟ್ಟೆಗೆ - ಆಪತ್ಬಾಂಧವರೂ - ಕಲಿಯುಗ ಕಲ್ಪವೃಕ್ಷ - ಕಾಮಧೇನುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಶಮೀ೦ದ್ರತೀರ್ಥರು ಸುಮಾರು ೪೦ ಕೆ ಜಿ " ಬೆಳ್ಳಿ ಕವಚ " ಮಾಡಿಸಿ ಅರ್ಪಿಸಿದರೆ...
ಶ್ರೀ ವಿಜಯರಾಯರ ಪರಮಾನುಗ್ರಹದಿಂದ ಅಪಮೃತ್ಯುವಿನಿಂದ ಪಾರಾದ ನನ್ನ ತಂದೆಯವರು - ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಶಮೀ೦ದ್ರತೀರ್ಥರ ಆದೇಶಾನುಸಾರವಾಗಿ " ಶ್ರೀ ವಿಜಯರಾಯರ ತಂಬೂರಿಗೆ ಬೆಳ್ಳಿ ಕವಚ " ಮಾಡಿಸಿ ಸಮರ್ಪಿಸಿದ್ದಾರೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
" ಅಧಿಕ ಮಾಸ - 14 "
" ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರು ಶ್ರೀ ಗುರು ಮಧ್ವಪತಿವಿಠ್ಠಲ "
ಶ್ರೀಮಧ್ವಪತಿ - ಶ್ರೀ ನಾರದಾಂಶ ಪುರಂದರದಾಸರ ಕಡೆಯ ಮಕ್ಕಳು.
ಅಂಕಿತ :
ಶ್ರೀ ಗುರು ಮಧ್ವಪತಿವಿಠ್ಠಲ
ಉಪದೇಶ ಗುರುಗಳು :
ಶ್ರೀ ಪುರಂದರವಿಠ್ಠಲರು
ಶ್ರೀ ಮಧ್ವಪತಿ ಹುಟ್ಟು ಮೂಕರಾಗಿದ್ದರು.
ಶ್ರೀ ಮಧ್ವಪತಿ ಶ್ರೀ ಪ್ರಹ್ಲಾದಾಂಶ ವ್ಯಾಸರಾಜ ಗುರುಸಾರ್ವಭೌಮರನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದ್ದರ ಫಲ ಹಾಗೂ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪರಮಾನುಗ್ರಹದಿಂದ ಮೂಕತೆಯು ಹೋಗಿ ವಾಕೋ ವೈದುಷ್ಯವು ಶ್ರೀ ಮಧ್ವಪತಿಗೆ ಪ್ರಾಪ್ತವಾಯಿತು!
" ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಕಾರುಣ್ಯಪಾತ್ರರು ಶ್ರೀ ಮಧ್ವಪತಿ "
ಶ್ರೀ ಮಧ್ವಪತಿ ಚಿಕ್ಕವರಿದ್ದಾಗ ಶ್ರೀ ಪುರಂದರದಾಸರು ಒಂದುದಿನ ಶ್ರೀ ಯಂತ್ರೋದ್ಧಾರಕ ಪ್ರಾಣದೇವರಿಗೆ ನೈವೇದ್ಯ ಮಾಡಿ ಕೊಂಡು ಬಾ ಎಂದು ಕರಿಗಡುಬು ಮತ್ತು ಚಿತ್ರಾನ್ನದ ತಟ್ಟೆಯನ್ನು ಕೈಯಲ್ಲಿ ಕೊಟ್ಟು ಕಳುಹಿಸಿದರು.
ಶ್ರೀ ಮಧ್ವಪತಿ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಮುಂದೆ ತಟ್ಟೆಯನ್ನಿಟ್ಟು ತಿನ್ನಬೇಕೆಂದು ಪ್ರಾರ್ಥಿಸಿಕೊಂಡರು.
ಕಲ್ಲು ಮೂರುತಿಯು ಬಾಯಿ ಬಿಡದಾದಾಗ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಪಾದಕ್ಕೆ " ತಲೆ ಒಡೆದುಕೊಂಡು ಅಸುನೀಗುವೆ " ಎಂದು ಎಂದು ರಂಭಾಟ ರೋದಂತಿಗಳೊಂದಿಗೆ ಆಲ್ಪರಿದು ಅಂಗಲಾಚಿದರು.
ಮಗುವಾದ ಶ್ರೀ ಮಧ್ವಪತಿಯ ಈ ಭಕ್ತಿಯ ಮೊಂಡಾಟವನ್ನು ನೋಡಿ ಕರಳು ಕರುಗಿದ ಶ್ರೀ ಯಂತ್ರೋದ್ಧಾರಕ ಪ್ರಾಣದೇವರು ಬಾಯಿ ತೆರೆದರು!!
ಶ್ರೀ ಮಧ್ವಪತಿಯು ಶ್ರೀ ಯಂತ್ರೋದ್ಧಾರಕ ಪ್ರಾಣದೇವರಿಗೆ ಕರಿಗಡುಬು ಮತ್ತು ಚಿತ್ರಾನ್ನವನ್ನು ಉಣ್ಣಿಸಿ ಖಾಲಿ ಪರಾತದೊಂದಿಗೆ ಮನೆಗೆ ಬಂದರು.
2 - 3 ದಿನಗಳು ಹೀಗೆ ನಡೆಯಲು ಇದನ್ನು ನಂಬಲಾರದ ಶ್ರೀ ಪುರಂದರದಾಸರು 4ನೇ ದಿನ ತಾವೇ ಮಗನೊಂದಿಗೆ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಸನ್ನಿಧಾನಕ್ಕೆ ಬಂದರು.
ಬಂಡಿ ಅನ್ನವ ಉಂಡ ಕೂಸು ಮಗುವಾದ ಶ್ರೀ ಮಧ್ವಪತಿಯ ಭಕ್ತಿಗೆ ಬಾಯಿ ತೆರೆದಿದ್ದನ್ನು ನೋಡಿ ಶ್ರೀ ಪುರಂದರದಾಸರು ಕೌತುಕ ಪಟ್ಟರು.
ಆ ಮಗುವನ್ನು ಪ್ರೀತಿಯಿಂದ ಅಪ್ಪಿಕೊಂಡರು!!
ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಸನ್ನಿಧಾನದಲ್ಲಿ ಶ್ರೀ ಮಧ್ವಪತಿಗೆ " ಶ್ರೀ ಗುರು ಮಧ್ವಪತಿವಿಠ್ಠಲ " ಅಂಕಿತವನ್ನು ಕೊಟ್ಟು ಪರತತ್ತ್ವೋಪದೇಶ ಮಾಡಿದರು.
ಶ್ರೀ ಗುರು ಮಧ್ವಪತಿವಿಠ್ಠಲರು..
" ಕಂದಗೆಳಿದರು ಪುರಂದರದಾಸರು "
ಎಂಬ ಪದದಲ್ಲಿ ಶ್ರೀ ಗುರು ಮಧ್ವಪತಿವಿಠ್ಠಲರು...
ಈ ಮಹಿಮೆಯನು ನೋಡಿ ಪ್
ರೇಮದಲಿ ಮಗನಪ್ಪಿ ।
ಸೋಮಶೇಖರ ಪ್ರಿಯ
ಒಲಿದ ನಿನಗೆ ।
ಕಾಮಿತಾರ್ಥವ ಕೊಡುವ
ಕಲ್ಪತರು ಸ್ವಾಮಿ ಹನುಮ ।
ಭೀಮ ಮಧ್ವರ ದಯಕೆ ಪ್
ರೇಮ ಪಾತ್ರನಾದಿ ।।
ಜಯ ಜಯತು ಜಯ
ಹನುಮ ಜಯ ಜಯತು ।
ಜಯ ಭೀಮ ಜಯ
ಜಯತು ಗುರು ಮಧ್ವರಾಯ ।
ಜಯತು ಜಯ ಜಯತು
ಗುರು ಮಧ್ವಪತಿವಿಠ್ಠಲನ ದಾಸನಿಗೆ ।
ಜಯ ಜಯತು ಜಯತು
ಯಂತ್ರೋದ್ಧಾರಕ ಹನುಮಗೆ ।।
ತಂದೆಯಾದ ಶ್ರೀ ಪುರಂದರದಾಸರಿಂದ ಅಂಕಿತವನ್ನು ಪಡೆದ ಶ್ರೀ ಗುರು ಮಧ್ವಪತಿವಿಠ್ಠಲರು...
1. ಪದ - 10
2. ಉಗಾಭೋಗ - 12
3. ಸುಳಾದಿ - 7 ಗಳನ್ನೂ ರಚಿಸಿದ್ದಾರೆ!!
ಹರಿಯೇ ಸರ್ವೋತ್ತಮ
ಹರಿಯೇ ಪರದೈವತೇ ।
ಹರಿಯೇ ಗುರು
ಮಧ್ವಪತಿವಿಠ್ಠಲಾ ।।
" ವಿಶೇಷ ವಿಚಾರ "
ಮುಂದೆ ಶ್ರೀ ಗುರು ಮಧ್ವಪತಿವಿಠ್ಠಲರೇ.....
ದ್ವಿತೀಯ ಘಟ್ಟ ಆಧುನಿಕ ಹರಿದಾಸ ಸಾಹಿತ್ಯ ಹರಿಕಾರರಾದ ಶ್ರೀ ವಿಜಯದಾಸರಾಗಿ ಅವತಾರ ಮಾಡಿ ಇಲ್ಲಿಯೂ ಶ್ರೀ ಪ್ರಹ್ಲಾದಾವತಾರಿ ಶ್ರೀ ರಾಯರ ಪ್ರೀತಿಪಾತ್ರರಾಗಿ, ಶ್ರೀ ರಾಯರ ಮಠದ ಶಿಷ್ಯರಾಗಿ, ಶ್ರೀ ರಾಯರು ಸ್ಥಿರವಾಗಿ ನೆಲೆನಿಂತ ಶ್ರೀ ಕ್ಷೇತ್ರ ಮಂತ್ರಾಲಯದ ವಿಳಾಸವನ್ನು ತಿಳಿಸಿದ ಮಹಾನುಭಾವರು ಮತ್ತು ಶ್ರೀ ರಾಯರಿಗೆ ಶ್ರೀ ವಿಜಯರಾಯರ ಶಿಷ್ಯ - ಪ್ರಶಿಷ್ಯ ಹರಿದಾಸ ಪರಂಪರೆಯ ಮೇಲೆ ಮಾತೃವಾತ್ಸಲ್ಯ, ಅಂತಃಕರಣ ಮತ್ತು ಪ್ರೀತಿ!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
" ಅಧಿಕ ಮಾಸ - 15 "
" ಕನಕ ಸಾಹಿತ್ಯ ವೈಭವ "
ಮಂಗಳಾರತಿಯ ಪಾಡಿರೆ
ಮಾನಿನಿಯರು ।। ಪಲ್ಲವಿ ।।
ಅಂಧಕನನುಜನ
ಕಂದನ ತಂದೆಯೆ ।
ಕೊಂದನ ಶಿರದಲಿ
ನಿಂದವನ ।
ಚಂದದಿ ಪಡೆದವನ
ನಂದನೆಯಲ । ನಲ ।
ವಿಂದ ಧರಿಸಿದ ಮು-
ಕುಂದಗೆ ।। ಚರಣ ।।
ರಥವನಡರು ಸುರ
ಪಥದಲಿ ತಿರುಗುವನ ।
ಸುತನಿಗೆ ಶಾಪವ ನಿತ್ತವನ ।
ಖಾತಿಯನು ತಡೆದನ
ಸತಿಯ ಜನನಿ ಸುತನ ।
ಸತಿಯರನಾಳಿದ
ಚತುರನ ।। ಚರಣ ।।
ಹರಿಯ ಮಗನ ಶಿರನ ತ
ರಿದನ ತಂದೆಯ ।
ಹಿರಿಯ ಮಗನ
ತಂದೆಯ ಪಿತನ ।
ಭರದಿ ಭುಜಿಸಿದವನ
ಶಿರದಲಿ ನಟಿಸಿದ ।
ವರ ನೆಲೆಯಾದಿ-
ಕೇಶವಗೆ ।। ಚರಣ ।।
ಅಂಧಕ = ಧೃತರಾಷ್ಟ್ರನ
ಅನುಜನ = ತಮ್ಮನ ( ಪಾಂಡುವಿನ )
ಕಂದನ = ಧರ್ಮರಾಜನ
ತಂದೆಯ = ಯಮನ
ಕೊಂದನ = ಶಿವನ
ಶಿರದಲಿ ನಿಂದವನ = ಚಂದ್ರನ
ಚಂದದಿ ಪಡೆದನ = ಸಮುದ್ರರಾಜನ
ನಂದನೆಯಳ = ಶ್ರೀ ಮಹಾಲಕ್ಷ್ಮೀಯನ್ನು
ನಲವಿಂದ = ಸಂತೋಷದಿಂದ
ಧರಿಸಿದ ಮುಕುಂದಗೆ = ಕೈ ಹಿಡಿದ ವಿಷ್ಣುವಿಗೆ
ರಥವನಡರು = ರಥದ ಮೇಲೆ ಹತ್ತಿ
ಸುರ ಪಥದಲ್ಲಿ = ಗಗನ ಮಾರ್ಗದಲ್ಲಿ
ತಿರುವವನ = ಸಂಚರಿಸುವ
ಸೂರ್ಯನ ಸುತನಿಗೆ = ಕರ್ಣನಿಗೆ
ಶಾಪವಿತ್ತವನ = ಶ್ರೀ ಪರಶುರಾಮದೇವರ
ಖತಿಯನು = ಕೋಪವನು
ತಡೆದನ = ತಡೆವ ಶ್ರೀ ರಾಮಚಂದ್ರನ
ಸತಿಯ = ಸೀತೆಯ
ಜನನಿ = ಭೂದೇವಿಯ
ಸುತನ = ನರಕಾಸುರನ
" ಸತಿಯರನಾಳಿದ ಚತುರನಿಗೆ "
16000 ಸ್ತ್ರೀಯರನ್ನು ಆಳಿದ ಶ್ರೀ ಕೃಷ್ಣನಿಗೆ
ಹರಿ = ಸೂರ್ಯ
ಮಗನ = ಮಗನಾದ ಕರ್ಣನ
ಶಿರ ತರಿದನ = ತಲೆ ಕತ್ತರಿಸಿದ
ಅರ್ಜುನನ ತಂದೆಯ = ಪಾಂಡುರಾಜನ
ಹಿರಿಯ ಮಗನ = ಧರ್ಮರಾಜನ
ತಮ್ಮನ = ಶ್ರೀ ಭೀಮಸೇನದೇವರ
ಪಿತನ = ತಂದೆಯಾದ ಶ್ರೀ ವಾಯುದೇವರ
ಭರದಿ ಭುಜಿಸಿದವನ = ಕಾಳಿಂಗ ಸರ್ಪದ
ಶಿರದಲಿ ನಟಿಸಿದವರ = ಹೆಡೆಯ ಮೇಲೆ ಕುಣಿದ
" ಕಾಗಿನೆಲೆಯಾದಿಕೇಶವಗೆ "
ಯೆನ್ನ ಭಿನ್ನ ರೂಪಿಯಾದ ಶ್ರೀ ಆದಿಕೇಶವೋsಭಿನ್ನ ಶ್ರೀ ಕೃಷ್ಣನಿಗೆ !!
****
ಅಧಿಕ ಮಾಸ - 16 "
" ಶ್ರೀ ರಾಯರ ಅಂತರಂಗ ಭಕ್ತರು ಶ್ರೀ ಹನುಮೇಶವಿಠ್ಠಲರು "
ಹೆಸರು :
ಶ್ರೀ ಹನುಮಂತ ರಂಗಾರಾವ್ ಬುರ್ಲಿ
ಕಾಲ :
ಕ್ರಿ ಶ 1854 - 1941
ಇಷ್ಟ ಗುರುಗಳು :
ಶ್ರೀ ರಾಘವೇಂದ್ರತೀರ್ಥರು
ಉಪದೇಶ ಗುರುಗಳು :
ಶ್ರೀ ಸತ್ಯಜ್ಞಾನತೀರ್ಥರು
ಅಂಕಿತ :
ಶ್ರೀ ಹನುಮೇಶವಿಠ್ಠಲ
" ಹನುಮೇಶವಿಠ್ಠಲ " ಯೆಂಬ ಅಂಕಿತವನ್ನು ಉತ್ತರಾದಿಮಠದ ಶ್ರೀ ಸತ್ಯಜ್ಞಾನತೀರ್ಥರು ದಯಪಾಲಿಸಿದರೆಂದು ಶ್ರೀ ಹನುಮೇಶವಿಠ್ಠಲರೇ ಈ ಕೆಳಕಂಡ ಸ್ತೋತ್ರ ಪದದಲ್ಲಿ ಖಚಿತ ಪಡಿಸಿದ್ದಾರೆ.
ರಾಗ : ದರ್ಬಾರು ತಾಳ : ಆದಿ
ಗುರು ಸತ್ಯಜ್ಞಾನರ
ಚರಣ ದರುಶನದಿ ।
ನೂರಾರು ಜನ್ಮ ಪಾವನ-
ವಾಯಿತು ಮುದದಿ ।। ಪಲ್ಲವಿ ।।
ಗುರುಗಳ ಉಪದೇಶದಿಂ
ಪರಮ ಪಾವನನಾದೆ ।
ನರಹರಿಯ ಭಜಿಸುವ -
ಅಧಿಕಾರಿಯಾದೆ ।
ಗುರು ಮಧ್ವರಾಯರಾ
ಗ್ರಂಥ ಶ್ರವಣಾದಿಗಳ ।
ನಿರುತದಲಿ ಮಾಡುವು-
ದಕರ್ಹನಾದೆ ।। ಚರಣ ।।
ಗುರುಗಳುಪದೇಶವಿಲ್ಲದೆ
ಮಾಡುವ ಮಂತ್ರ ।
ಗುರುಗಳುಪದೇಶ-
ವಿಲ್ಲದ ಜ್ಞಾನ ।
ಗುರುಗಳುಪದೇಶವಿಲ್ಲದ
ಕರ್ಮಕವನಗಳು ।
ಉರುಗವಾಸದಂತೆ
ಕಾಣಯ್ಯ ।। ಚರಣ ।।
ಅಂಕಿತವಿಲ್ಲದಾ
ಪದ್ಯಗಳು ಶೋಭಿಸವು ।
ಅಂಕಿತವು ಇಲ್ಲ-
ದಿರಬಾರದೆನುತಾ ।
ಪಂಕಜನಾಭ
ಹನುಮೇಶವಿಠ್ಠಲನೆಂಬೊ ।
ಅಂಕಿತವನಿತ್ತಾ ಗುರುವು
ಮಾಡಿ ಮಮತಾ ।। ಚರಣ ।।
" ದಾಸರಿಗೆ ಒಲಿದ ಶ್ರೀ ಗುರುಸಾರ್ವಭೌಮರು "
ತುಂಗಭದ್ರಾ ನದೀ ತೀರದ ಹಳ್ಳಳ್ಳಿ ಗ್ರಾಮ.
ಇದು ಹಾವನೂರಿಗೆ ಹತ್ತಿರದಲ್ಲಿದೆ.
ಅಲ್ಲಿ ತುಂಗಭದ್ರಾ ನದಿಯಲ್ಲಿ ಶ್ರೀ ರಾಘವೇಂದ್ರತೀರ್ಥರ ಮೃತ್ತಿಕಾ ಬೃಂದಾವನವಿದೆ ಎಂದು ಸ್ವಪ್ನ ಸೂಚಿತವಾಗುತ್ತದೆ.
ರಾಗ : ಮೋಹನ ತಾಳ ; ಆದಿ
ಎಲ್ಲಿರುವೆ ತಂದೆ ಬಾರೋ
ಗುರುರಾಯನೇ ।। ಪಲ್ಲವಿ ।।
ಬಳಲುವೆ ಭವದಿ
ತಳಮಳಿಸುವೆನೋ ।
ಕಳವಳಿಕೆಯ ಬಿಡಿಸೋ
ಗುರುರಾಯನೇ ।। ಚರಣ ।।
ತಡ ನೀ ಮಾಡಲು
ತಡೆಯಲಾಗದೋ ।
ಗಡ ಬಾ ಇಡು
ದಯವಾ ।। ಚರಣ ।।
ಸಕಲರಲ್ಲಿ ವ್ಯಾಪಕ-
ನೆಂದ್ದರಿಯನು ।
ಪ್ರಕಟಿಸಿದಿ ಜಗದಿ ।। ಚರಣ ।।
ಹರಿ ನಾಮವು ಸರ್ವ
ತಾರಕವೆಂಬೋದು ।
ಮೆರೆಸಿದೆ
ಧರೆಯೊಳಗೆ ।। ಚರಣ ।।
ಧೀರನಾದ
ಹನುಮೇಶವಿಠ್ಠಲನ ।
ಧ್ಯಾನದಿ ಮನ
ನಿಲ್ಲಿಸೋ ।। ಚರಣ ।।
ಮತ್ತು ಶ್ರೀ ರಾಯರನ್ನು ಅತಿ ವಿನಯದಿಂದ...
ರಾಗ : ಸುರಟಿ ತಾಳ : ಆದಿ
ಗುರುರಾಜನೇ ಯೆನ್ನ
ಪರಿಪಾಲಿಪುದ ಬಿಟ್ಟು ।
ವರ ಮಂತ್ರಾಲಯದೊ-
ಳಿರುವುದುಚಿತವೇ ।। ಪಲ್ಲವಿ ।।
ಬಡ ಭಕ್ತನನು ಕಷ್ಟ
ಕಡಲೊಳಿರಿಸಿ । ತುಂಗಾ ।
ದಡದಿನಿಂತೆನ್ನ ಕೈ
ಬಿಡುವುದುಚಿತವೇನೋ ।। ಚರಣ ।।
ಅಡಿ ಸೇವಕನೊಳಿಂಥಾ
ಕಡು ಕೋಪವ್ಯಾತಕೋ ।
ನುಡಿ ನುಡಿಗೆನ್ನ ತಪ್ಪು
ಹಿಡಿದು ಪೋಗುವರೇನೋ ।। ಚರಣ ।।
ಒಡೆಯ ಶ್ರೀ ಹನುಮೇಶ-
ವಿಠ್ಠಲನ ದಾಸನೇ ।
ಬಡವನಿರುವೆನೆಂದು
ನೋಡದಿರುವರೇನೋ ।। ಚರಣ ।।
ಇನ್ನೊಂದು ಸುಂದರ ಕೃತಿಯೊಂದಿಗೆ ಶ್ರೀ ರಾಯರನ್ನು....
ರಾಗ : ಪೂರ್ವೀ ತಾಳ : ಆದಿ
ಗುರು ರಾಘವೇಂದ್ರ ತವ
ಚರಣ ದರುಶನಕೆ ।
ಬರಲಿಲ್ಲವೆಂದು ಕೋಪವ
ಮಾಡ್ವದ್ಯಾಕೊ ।। ಪಲ್ಲವಿ ।।
ಧನವಿಲ್ಲ ಕೈಯೊಳಗೆ
ತನುವಿನಲ್ಲಿ ಬಲವಿಲ್ಲ ।
ಅನುಕೂಲವಿಲ್ಲವೋ
ಯೆನ್ನ ಮನೆಯೊಳಗೆ ।
ಘನ ಸುಪ್ರಯಾಸ
ನಿನ ದಾಸಗೊದಗಿದ ಮ್ಯಾಲೆ ।
ಯೆನ ಮ್ಯಾಲೆ ದೋಷ-
ವೇನಿರುವಡಿದರೊಳಗೆ ।। ಚರಣ ।।
ಗೆಲುವಿಲ್ಲ ಮನದೊಳಗೆ
ಫಲವಿಲ್ಲ ಸಂಸಾರ ।
ಬಲೆಯೊಳಗೆ
ಸಿಲುಕಿ ನಾ ಬೇಸತ್ತೆನೋ ।
ಹಲುಬುವೆನೋ ದಾರಿದ್ರ್ಯ
ಬವಣೆಯನು ತಪ್ಪಿಸೋ ।
ಸುಲಭ ಸಾಧನೆ ಪೇಳಿ
ಸಲಹೋ ಗುರುವರನೇ ।। ಚರಣ ।।
ಒಂದು ಬಗೆಯನು ತೋರೋ ।
ಇಂದು ನಾ ಹೊರಡುವೆನೋ ।
ಛಂದದಿಂದಲಿ
ಪರಿವಾರ ಸಹಿತಾ ।।
ತಂದೆ ಹನುಮೇಶ-
ವಿಠ್ಠಲನ ಕಂದನೆ ನಿನ್ನ ।
ಬಂದು ನೋಡುವೆ ಮಾಡ್ವೆ
ಸೇವೆ ತವ ದೂತಾ ।। ಚರಣ ।।
ಯೆಂದು ಶ್ರೀ ರಾಯರನ್ನು ಪ್ರಾರ್ಥಿಸಿ ಅವರು ಶ್ರೀ ರಾಯರ ಮೃತ್ತಿಕಾ ಬೃಂದಾವನವನ್ನು ಹುಡುಕಿ " ಗುತ್ತಲ " ತಂದು ಪ್ರತಿಷ್ಠಾಪಿಸಿದರು ಶ್ರೀ ಹನುಮೇಶವಿಠ್ಠಲರು.
" ಶ್ರೀ ಕ್ಷೇತ್ರ ಮಂತ್ರಾಲಯ ಯಾತ್ರೆ "
ಶ್ರೀ ಹನುಮೇಶವಿಠ್ಠಲರು ಶ್ರೀ ಕ್ಷೇತ್ರಕ್ಕೆ ದಯಮಾಡಿಸಿ ತುಂಗೆಯಲ್ಲಿ ಮಿಂದು ಶ್ರೀ ಕ್ಷೇತ್ರ ದೇವತೆಯಾದ ಶ್ರೀ ಮಂತ್ರಾಲಯಾ೦ಬಿಕೆ ( ಶ್ರೀ ದುರ್ಗಾದೇವಿ ) ಯ ದರ್ಶನ ಪಡೆದು ಶ್ರೀ ರಾಯರ ಮೂಲ ಬೃಂದಾವನ ಸನ್ನಿಧಾನಕ್ಕೆ ಬಂದು ಶ್ರೀ ರಾಯರ ಮುಂಭಾಗದಲ್ಲಿ ನಿಂತು ಶ್ರೀ ರಾಯರು ತಮ್ಮ ಮೇಲೆ ತೋರಿದ ಕಾರುಣ್ಯವನ್ನು ಸ್ಮರಿಸುತ್ತಾ...
ರಾಗ : ಆರಭಿ ತಾಳ : ಆದಿ
ಯಾಕೆ ಬಳಲಿಸುವಿ
ಗುರುರಾಯಾ ಇನ್ನು ।
ಸಾಕು ಮಾಡಿ ಸಲಹೋ
ಕಡು ಬೇಗ ಜೀಯಾ ।। ಪಲ್ಲವಿ ।।
ಭಕ್ತ ಕೇಳಿದರೆ
ಕೊಡವಲ್ಲಿ । ಉಪ ।
ಯುಕ್ತವಲ್ಲದ ಮಾಯವನು
ಬಿಡಿಸಲೊಲ್ಲಿ ।
ಶಕ್ತಿ ನಿನಗಿಹುದೋ
ಕರದಲ್ಲಿ । ವಿ ।
ರಕ್ತನೇ ಕೋಪ-
ವ್ಯಾತಕೋ ದಾಸರಲ್ಲಿ ।। ಚರಣ ।।
ತ್ರಾಹಿ ತ್ರಾಹಿ ಗುರು-
ರಾಯಾ ಈಗ ।
ದೇಹಿ ಎಂಬಗೆ ನಾಸ್ತಿ
ಎನಬ್ಯಾಡೋ ಜೀಯಾ ।
ದೇಹ ನಿನಗೊಪ್ಪಿಸಿ-
ದೆನಯ್ಯಾ ಮುದ್ದು ।
ಮೋಹದಾ ಹರಿಕಂದ
ಪ್ರಹ್ಲಾದರಾಯಾ ।। ಚರಣ ।।
ಇಷ್ಟಕ್ಕೆ ನಾ
ಬಿಡುವುದಿಲ್ಲ । ನೀನು ।
ಥಟ್ಟನೆ ಕೊರಳ
ಕೊಯ್ದರೆ ಯತ್ನವಿಲ್ಲ ।
ಕೊಟ್ಟು ಕಾಯ್ದರೆ
ಅಹಿತವಲ್ಲಾ ನಮ್ಮ ।
ಧಿಟ್ಟ ಶ್ರೀ ಹನುಮೇಶ-
ವಿಠ್ಠಲನ ಜಾಲಾ ।। ಚರಣ ।।
ಯೆಂದು ಸ್ತೋತ್ರ ಮಾಡಿ ಶ್ರೀ ರಾಯರ ದರ್ಶನ ಮಾಡಿಕೊಂಡು, ತೀರ್ಥ ಪ್ರಸಾದ - ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ರಾಯರ ಅಪ್ಪಣೆ ಪಡೆದು ಗುತ್ತಲಕ್ಕೆ ಬಂದರು.
" ಗ್ರಂಥಗಳು "
1. ಹರಿಕಥಾಮೃತಸಾರಕ್ಕೆ ವಿಸ್ತೃತವಾದ ಟಿಪ್ಪಣಿ
2. ರಾಮಾಯಣದ ಸುಂದರಕಾಂಡವನ್ನು ಕನ್ನಡದಲ್ಲಿ ಪದ್ಯ ರೂಪದಲ್ಲಿ ರಚಿಸಿದ್ದಾರೆ
3. ಅನುಭವಾಮೃತಸಾರ
" ನಿರ್ಯಾಣ "
ಶ್ರೀ ಹನುಮೇಶವಿಠ್ಠಲರು ಶ್ರೀ ಸತ್ಯಜ್ಞಾನತೀರ್ಥರಿಂದ ಅಂಕಿತವನ್ನು ಪಡೆದು ಅನೇಕ ಪದ ಪದ್ಯಗಳನ್ನು ರಚಿಸಿ ಶ್ರೀ ಹರಿ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಕ್ರಿ ಶ 1941 ರಲ್ಲಿ ವೈಕುಂಠ ಯಾತ್ರೆ ಮಾಡಿದರು.
ಗುರು ಪವಮಾನಾ ಪೊರೆವುದು
ಎನ್ನನ್ನು ನೀ ತ್ವರಾ ।
ಸತ್ವರಿಗೆ ಸುಖ ಮಿತ್ರರಾಜಗೆ ಸಗ್ಗ ।
ದುಃಖ ತಾಮಸರಿಗೆ ಈವ ।।
ಮೂರು ವಿಧ ಜೇವರೊಳು
ಬ್ರಹ್ಮಕಲ್ಪ ಪರಿಯಂತರ ।
ವರ ಶ್ರೀ ಹನುಮೇಶವಿಠ್ಠಲನ
ಚರಣಾದುಪಾಸನೆಯ ಮಾಡ್ವ ।।
" ವಿಶೇಷ ವಿಚಾರ "
ಶ್ರೀ ಹನುಮೇಶ ದಾಸರ ಸದ್ವಂಶಕ್ಕೆ ಸೇರಿದವರು ಶ್ರೀಯುತ ಮನೋಜ್ ಬುರ್ಲಿ ಅವರು.
ಇವರು - ನನ್ನ ಹರಿದಾಸ ಸಂತತಿಯ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಎಂದು ಹೇಳುವುದಕ್ಕೆ ಹೆಮ್ಮೆ ಆಗುತ್ತದೆ.
****
" ಅಧಿಕ ಮಾಸ - 17 "
" ಶ್ರೀ ಪುರಂದರದಾಸರು ಕಂಡ ಶ್ರೀ ವಿಜಯೀಂದ್ರತೀರ್ಥರು "
ವಿಜಯೀಂದ್ರ ಗುರುಗಳ
ಚರಿತೆಯನು ಅರಿತಷ್ಟು ಪೇಳುವೆ ।
ಸುಜನರೆಲ್ಲರು ಸಾವಧಾನದಿ
ಕೇಳ್ವುದು ।। ಪಲ್ಲವಿ ।।
ಗುರು ವ್ಯಾಸರಾಯರಲಿ ಸಕಲ
ಶಾಸ್ತ್ರದ ಸಾರ ತಿಳಿದು ।
ಗುರು ಸುರೇಂದ್ರರ
ತನಯನೆಂದೆನಿಸಿ
ಮೆರೆವಾ ।। ಅ. ಪ ।।
ವಿಬುಧೇಂದ್ರರೆ
ವಿಠ್ಠಲಾಚಾರ್ಯರಾಗಿ ।
ಸುಬುಧರೆಲ್ಲರೂ
ಕೊಂಡಾಡೆ ವಿಜಯೀ೦ದ್ರರಾ ।
ವಿಬುಧಮುನಿ ಹರುಷ-
ದಿಂದ ಸುಜನರಿಗೆ ।
ಸದ್ಬುದ್ಧಿ ಸುಜ್ಞಾನ
ಕೊಟ್ಟು ಪೊರೆವ ಧೊರಿ ।। 1 ।।
... ಅಂದು ಕಾಶಿಯಲಿ
ನರಸಿಂಹಭಟ್ಟನನು ಗೆಲಿದು ।
ಇಂದು ಕುಂಭಕೋಣೆಯಲಿ
ಅಪ್ಪಯ್ಯಧೀಕ್ಷಿತನ
ಗೆದ್ದ ಧೀಮಂತ ।
ಮಧ್ವ ಮತ ಸಿದ್ಧಾಂತವೇ
ಶ್ರೇಷ್ಠವೆಂದು ಸಾರಿ ।
ಮಧ್ವವಲ್ಲಭ
ಪುರಂದರವಿಠ್ಠಲನ್ನ
ಧರೆಯೊಳಗೆ
ಸ್ಥಿರವಾಗಿ ಸ್ಥಾಪಿಸದ ।। 27 ।।
ಶ್ರೀ ನಾರದಾಂಶ ಪುರಂದರದಾಸರು ಶ್ರೀ ವಿಜಯೀ೦ದ್ರತೀರ್ಥರ ಸ್ತುತಿಯನ್ನು ರಚಿಸಿದ್ದಾರೆ.
ಸುಮಾರು 27 ನುಡಿಗಳಲ್ಲಿ ಶ್ರೀ ಮಧ್ವಾಚಾರ್ಯರ ಮೂಲ ಪರಂಪರೆಯಲ್ಲಿ ಬಂದ ಶ್ರೀ ರಾಮಚಂದ್ರತೀರ್ಥರಿಗೆ ಶ್ರೀ ವಿಬುಧೇಂದ್ರತೀರ್ಥ ವಿದ್ಯಾ ವೈಭವವನ್ನೂ ಹಾಗೆಯೇ ಅವರ ಅಂಶಾವತಾರವನ್ನೂ - ಅವರ ಮುಂದಿನ ಅವತಾರವೇ ಶ್ರೀ ವಿಜಯೀ೦ದ್ರತೀರ್ಥರೆಂಬದನ್ನೂ - ಶ್ರೀ ವ್ಯಾಸರಾಜರು ಮತ್ತು ಶ್ರೀ ವಿಜಯೀ೦ದ್ರತೀರ್ಥರ ಸಂಬಂಧ - ಶ್ರೀ ವಿಜಯೀ೦ದ್ರತೀರ್ಥರ ವಿದ್ಯೆ - ಗ್ರಂಥ ರಚನಾ ಕೌಶಲ - 64 ವಿದ್ಯೆಗಳಲ್ಲಿ ಶ್ರೀ ವಿಜಯೀ೦ದ್ರತೀರ್ಥರು ತೋರಿದ ಅಸಾಧಾರಣ ಪ್ರತಿಭೆ - ಪರವಾದಿ ದಿಗ್ವಿಜಯ ಮತ್ತು ಅವರ ಮೇಲೆ ತೋರಿದ ಕಾರುಣ್ಯ - ಶ್ರೀ ವಿಜಯೀ೦ದ್ರತೀರ್ಥರ ಸೌಂದರ್ಯ ವರ್ಣನೆ ಮುಂತಾದ ವಿಷಯಗಳನ್ನು ಸೆರೆ ಹಿಡಿದ್ದಿದ್ದಾರೆ.
ಈ ಮೇಲ್ಕಂಡ ಪದ ಇರುವ ...
ಪುಸ್ತಕದ ಹೆಸರು :
ಮಧ್ವಮುನಿ ಪರಂಪರಾ ಯತಿಗಳು
ನಾನು - 2004 - 05 ರಲ್ಲಿ ಬೆಳಗಾಂ - ಬಾಗಲಕೋಟೆ - ವಿಜಾಪುರ ಜಿಲ್ಲೆಯಲ್ಲಿ ಪ್ರವಾಸ ಮಾಡಿದಾಗ ಅಲ್ಲಿ ಒಂದು ಫುಟ್ ಪಾತ್ ಮೇಲಿನ ಅಂಗಡಿಯಲ್ಲಿ ಖರೀದಿಸಿದ್ದು.
ಅದು ಸುಮಾರು 150 ವರ್ಷಗಳ ಹಿಂದಿನ ಪ್ರತಿ.
ಆ ಪುಸ್ತಕದ ಮೇಲ್ಭಾಗದಲ್ಲಿ ಸಂಪಾದಕರು ವೆಂಕಪ್ಪಾಚಾರಿ - 1850 ಎಂದು ಬರೆಯಲಾಗಿದೆ
ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ.
****
" ಅಧಿಕ ಮಾಸ - 18 "
" ಶ್ರೀ ಆನಂದತೀರ್ಥರು "
" ಶ್ರೀ ರಾಘವೇಂದ್ರ ವಿಜಯ ಮಹಾಕಾವ್ಯಮ್ ".....
" ಶ್ರೀ ಸರ್ವಜ್ಞಾಚಾರ್ಯರ ಅವತಾರ ತ್ರಯ "
ರಾಮಾವತಾರಸ್ಯ ಹರೆರಾಧತ್ತ ಸೇವಾಂ
ಹನೂಮದ್ವಪುಷಾ ಸಮೀರ: ।
ಭೀಮಾತ್ಮನಾ ಯಾದವಭೂಷಣಸ್ಯ
ಮಧ್ವಾತ್ಮನಾ ವ್ಯಾಸಮುನಿತ್ವಭಾಜ: ।।
ಸರ್ವ ಜೀವೋತ್ತಮರಾದ ಶ್ರೀ ಮುಖ್ಯಪ್ರಾಣದೇವರು ಶ್ರೀ ಹನುಮಂತರಾಗಿ ಅವತರಿಸಿ ತ್ರೇತೆಯಲ್ಲಿ ಶ್ರೀರಾಮಚಂದ್ರ ರೂಪಿಯಾದ ಶ್ರೀ ಹರಿಯ ಸೇವೆಯನ್ನು ಮಾಡಿದರು.
ಅನಂತರ ದ್ವಾಪರದಲ್ಲಿ ಶ್ರೀ ಹರಿಯು ಶ್ರೀ ಕೃಷ್ಣ ಪರಮಾತ್ಮನಾಗಿ ಅವತರಿಸಿದಾಗ ಶ್ರೀ ಭೀಮಸೇನರಾಗಿ ಅವತರಿಸಿ ಶ್ರೀ ಕೃಷ್ಣ ಪರಮಾತ್ಮನನ್ನು ಸೇವಿಸಿದರು.
ಶ್ರೀ ಹರಿಯು ಶ್ರೀ ವೇದವ್ಯಾಸ ಮುನಿಯ ರೂಪದಿಂದ ಅವತರಿಸಿದಾಗ ಈ ಕಲಿಯುಗದಲ್ಲಿ ಶ್ರೀ ಮಧ್ವ ರೂಪದಿಂದ ಶ್ರೀ ವೇದವ್ಯಾಸರ ಶಿಷ್ಯತ್ವವನ್ನು ವಹಿಸಿ ಸಜ್ಜನರಿಗೆ ತತ್ತ್ವಜ್ಞಾನೋಪದೇಶವನ್ನು ಮಾಡಿ ಶ್ರೀ ಹರಿಯ ಸೇವೆಯನ್ನು ಮಾಡಿದರು.
ಹೀಗೆ ಮೂರು ಅವತಾರಗಳಲ್ಲಿಯೂ ಅವಿಚ್ಛಿನ್ನವಾಗಿ ಶ್ರೀ ಹರಿ ಸೇವೆ ಮಾಡಿ ವಿಶ್ವ ಗುರುಗಳಾದ ಶ್ರೀ ಪವಮಾನರು ವಿರಾಜಿಸಿದರು.
" ಶ್ರೀ ಸರ್ವಜ್ಞಾಚಾರ್ಯರ ಸಂದೇಶ "
ಶ್ರೀಮದಾಚಾರ್ಯರಿಂದ ಆರಂಭಿಸಿ ಬಂದಿರುವ ಸಂಪ್ರದಾಯ ಕ್ರಮವನ್ನು ಹೇಳುತ್ತಾ ಶ್ರೀ ಮಧ್ವರ ಸಂದೇಶವನ್ನು.....
ಆಭಾಷ್ಯ ಭಾಷ್ಯ೦ ನಿಗಮಾಂತ
ಸೂತ್ರ ವ್ಯಾಖ್ಯಾತ್ಮಕಂ
ಪೂರ್ಣಮತಿರ್ಗುರುರ್ನ: ।
ಸಂಪಾದಯಧ್ವಂ ಮತ
ಸಂಪ್ರದಾಯ ಸಮೃದ್ಧಿಮಿತ್ಯಾದಿ
ದಿಶೇ ಯಾಮೀಶಾನ್ ।।
ವಿಶ್ವ ಗುರುಗಳಾದ ಶ್ರೀ ಪೂರ್ಣಪ್ರಜ್ಞಾಚಾರ್ಯರು ವೇದಾರ್ಥ ನಿರ್ಣಾಯಕವಾದ ಬ್ರಹ್ಮಸೂತ್ರಗಳ ವ್ಯಾಖ್ಯಾನ ರೂಪವಾದ ಬ್ರಹ್ಮಸೂತ್ರಭಾಷ್ಯವನ್ನು ಇನ್ನಿತರ ಗ್ರಂಥಗಳನ್ನು ರಚಿಸಿದರು.
ತಮ್ಮ ಅವತಾರ ಕಾರ್ಯವನ್ನು ಚೆನ್ನಾಗಿ ನಿರ್ವಹಸಿ, ತಾವು ಅಂತರ್ಧಾನ ಹೊಂದುವುದಕ್ಕೆ ಮೊದಲು ತಮ್ಮ ಶಿಷ್ಯರಾದ ಶ್ರೀ ಪದ್ಮನಾಭತೀರ್ಥರೇ ಮೊದಲಾದ ಸಂನ್ಯಾಸಿ ಶ್ರೇಷ್ಠರನ್ನು ಕರೆದು.....
ಎಲೈ ಶಿಷ್ಯರಾದ ಯತಿಶ್ರೇಷ್ಠರೇ!
" ನಾವು ಉಪದೇಶಿಸಿದ ಸಿದ್ಧಾಂತವನ್ನು ಶಿಷ್ಯ - ಪ್ರಶಿಷ್ಯೋಪದೇಶ ಪರಂಪರೆಯಿಂದ ಮುಂದುವರೆಸಿ ನಮ್ಮ ಮತ ಸಮೃದ್ಧಿಯನ್ನು ಮುಂದುವರೆಸುತ್ತಾ ಬರಬೇಕು "
ಯೆಂದು ಅವರಿಗೆ ಆಜ್ಞಾಪಿಸಿದರು.
" ಶ್ರೀ ಸರ್ವಜ್ಞಾಚಾರ್ಯರನ್ನು ಕ್ಷೀರ ಸಮುದ್ರ ರೂಪರೆಂದು ವರ್ಣಿಸುತ್ತಾ - ಕ್ಷೀರ ಸಮುದ್ರದ ಸಾಮ್ಯವನ್ನು ಹೇಳುತ್ತಾರೆ ".....
ಭಾಷ್ಯಾಮೃತೋತ್ಪಾದಕರೋsನುಭಾಷ್ಯ
ಶ್ರೀಮಾನ್ ಸ ಭಾಷ್ಯಾ೦ತರ ಕಲ್ಪಶಾಖೀ ।
ವ್ಯಾಸಂ ಗುರು೦ ಸಂಶ್ರಯತೇ ಬದರ್ಯಾ೦
ಆನಂದತೀರ್ಥಾಭಿಧದುಗ್ಧಸಿಂಧು: ।।
ಕ್ಷೀರ ಸಮುದ್ರವನ್ನು ದೇವಾಸುರರು ಕಡೆದಾಗ ಅಮೃತವು ಹುಟ್ಟಿತು.
ಶ್ರೀ ಮಹಾಲಕ್ಷ್ಮೀದೇವಿಯರು ಪ್ರಾದುರ್ಭಾವ ಹೊಂದಿದರು.
ಕಲ್ಪವೃಕ್ಷ ಕಾಮಧೇನು ಮುಂತಾದವುಗಳು ಹುಟ್ಟಿದವು.
ಅದರಂತೆಯೇ ಶ್ರೀಮದಾಚಾರ್ಯರು...
" ಸೂತ್ರಭಾಷ್ಯ " ವೆಂಬ ಅಮೃತವನ್ನು ಉತ್ಪಾದಿಸಿ, " ಅನುವ್ಯಾಖ್ಯಾನ " ಎಂಬ ಶ್ರೀ ಮಹಾಲಕ್ಷ್ಮೀದೇವಿಯರ ಪ್ರಾದುರ್ಭಾವಗಳಿಗೆ ಸಮಾನವಾದ ಗ್ರಂಥ ರತ್ನಗಳನ್ನು ರಚಿಸಿ " ಕ್ಷೀರ ಸಮುದ್ರದ ಸಾಮ್ಯ " ವನ್ನು ಹೊಂದಿದ್ದಾರೆ.
ಇಂಥಹಾ ಶ್ರೀ ಸರ್ವಜ್ಞಾಚಾರ್ಯರು ತಮ್ಮ ಅವತಾರ ಕಾರ್ಯವನ್ನೆಲ್ಲಾ ಮುಗಿಸಿದ ಮೇಲೆ ಮಹಾ ( ಉತ್ತರ ) ಬದರೀ ವಾಸಿಗಳೂ, ತಮ್ಮ ಗುರುಗಳಾದ ಶ್ರೀ ಭಗವನ್ ವೇದವ್ಯಾಸದೇವರನ್ನು ಸೇವಿಸುತ್ತಾ ಬದರಿಯಲ್ಲಿಯೇ ಇದ್ದಾರೆ!!
ಶ್ರೀ ಸರ್ವಜ್ಞಾಚಾರ್ಯರು ಬ್ರಹ್ಮಸೂತ್ರ ಭಾಷ್ಯ ಬರೆಯಲು ಕಾರಣ...
ಕುರುಸೂತ್ರ ಭಾಷ್ಯಮವಿಲಂಬಿತ೦ ವ್ರಜೇ ।
ಸುಮಾತೇನ ಯೋಜಯ ಕವೇ ಶ್ರುತಿಸ್ಮೃತೀ: ।।
ಬ್ರಹ್ಮಸೂತ್ರಗಳಿಗೆ ಶ್ರೀ ಸರ್ವಜ್ಞಾಚಾರ್ಯರು ನಾಲ್ಕು ಕೃತಿಗಳನ್ನು ರಚಿಸಿದ್ದಾರೆ.
1. ಬ್ರಹ್ಮಸೂತ್ರಭಾಷ್ಯ
2. ಅಣುಭಾಷ್ಯ
3. ಅನುವ್ಯಾಖ್ಯಾನ
4. ನ್ಯಾಯ ವಿವರಣ
ಇವೇ ಬ್ರಹ್ಮಸೂತ್ರಗಳನ್ನು ಧೀರ್ಘವಾಗಿ ಅಧ್ಯಯನ ಮಾಡಲು ಶ್ರೀ ಸರ್ವಜ್ಞಾಚಾರ್ಯರು ಮಾಡಿದ ಮಹೋಪಾಕರ.
ಅಣುಭಾಷ್ಯ ಮತ್ತು ಅನುವ್ಯಾಖ್ಯಾನ ಎರಡೂ ಕೃತಿಗಳೂ ಶ್ಲೋಕ ರೂಪದಲ್ಲಿದೆ.
ಸೂತ್ರಗಳಿಗೆ ಅಲಂಕಾರ ಕೊಟ್ಟು ತತ್ತ್ವ ಸಾಹಿತ್ಯಕ್ಕೆ ಶ್ಲೋಕ ಸ್ವರೂಪವಾಗಿ ಒದಗಿಸಿದ ಅದ್ವಿತೀಯ ಪ್ರತಿಭೆ ಶ್ರೀಮದಾಚಾರ್ಯರು.
ಶ್ರೀ ಶಂಕರಾಚಾರ್ಯರೇ ಆಗಲೀ, ಶ್ರೀ ರಾಮಾನುಜಾಚಾರ್ಯರೇ ಆಗಲೀ " ಅಣುಭಾಷ್ಯ " ದಂಥಾ ಸಂಗ್ರಹ ಭಾಷ್ಯ ಬರೆದಿಲ್ಲ!
ಶ್ರೀ ಶಂಕರಾಚಾರ್ಯರು ಸೂತ್ರಕ್ಕೆ ಒಂದೇ ಭಾಷ್ಯ ಬರೆದಿರುತ್ತಾರೆ.
ಶ್ರೀ ಶಂಕರಾಚಾರ್ಯರು ಭಾಷ್ಯ ಬರೆಯ ಪೂರ್ವದಲ್ಲಿ ತಮ್ಮ ಮತಾಭಿಪ್ರಾಯವನ್ನು ತಿಳಿಸಲು ಪೂರ್ವಾಗ್ರಹ ಪೀಡಿತರಾಗಿ ಅಭ್ಯಾಸ ಭಾಷ್ಯವೊಂದನ್ನು ರಚಿಸಿ ಇದರ ಹಿನ್ನೆಲೆಯಲ್ಲಿ ತಮ್ಮ ಭಾಷ್ಯವನ್ನು ಅಧ್ಯಯನ ಮಾಡಬೇಕೆಂದು ತಿಳಿಸುತ್ತಾರೆ.
ಶ್ರೀ ರಾಮಾನುಜಾಚಾರ್ಯರು...
1. ಶ್ರೀಭಾಷ್ಯ
2, ವೇದಾಂತದೀಪ
3. ವೇದಾಂತಸಾರ
ಯೆಂಬ ಮೂರು ಕೃತಿಗಳನ್ನು ರಚಿಸಿರುತ್ತಾರೆ.
" ಅಣುಭಾಷ್ಯ "
ಇದು ಭಾಷ್ಯದ ಅರ್ಥ ಸಂಗ್ರಹ ರೂಪ ( ಅಣು = ಸೂಕ್ಷ್ಮ ) ವೇ " ಅಣುಭಾಷ್ಯ ".
ಸಂಪೂರ್ಣ ಅಣುಭಾಷ್ಯ ಪಾರಾಯಣ ಮಾಡಬೇಕಾದರೆ 3 - 4 ತಾಸು ಬೇಕಾಗುವುದು.
ಆದರೆ ಸಮಯಾಭಾವದಿಂದಿರುವ ಸಜ್ಜನರ ಉದ್ಧಾರಕ್ಕಾಗಿ ಶ್ರೀ ಸರ್ವಜ್ಞಾಚಾರ್ಯರು ಕರುಣೆಯಿಂದ ರಚಿಸಿದ ಪುಟ್ಟ ಆಕೃತಿ ರೂಪ ಭಾಷ್ಯವೇ " ಅಣುಭಾಷ್ಯ ".
ಶ್ಲೋಕ ರೂಪದಲ್ಲಿ 32, ಅನುಷ್ಟಪ್ ಛಂದಸ್ಸಿನಲ್ಲಿ ಬ್ರಹ್ಮಸೂತ್ರ ಭಾಷ್ಯದಲ್ಲಿ ತಿಳಿಸಿದಂತೆ ನಾಲ್ಕು ಅಧ್ಯಾಯ,
ತದಂತರ್ಗತ 4 ಪಾದಗಳನ್ನೂ ಅತಿ ಸಂಗ್ರಹವಾಗಿ ರಚಿಸಿರುತ್ತಾರೆ.
ಅಣುಭಾಷ್ಯ ಪಾರಾಯಣ ಅಧ್ಯಯನದಿಂದ ಬ್ರಹ್ಮಸೂತ್ರ ಭಾಷ್ಯ ಪಾರಾಯಣದ ಸಮಫಲ ಲಭಿಸುವುದೆಂದೂ ಸಹ ಅನುಗ್ರಹಿಸಿ ಮಹದುಪಕಾರ ಮಾಡಿರುತ್ತಾರೆ.
ಶ್ರೀ ಕೃಷ್ಣ ಪರಮಾತ್ಮ ತನ್ನ ತಾಯಿ ಯಶೋದೆಗೆ ತನ್ನ ಪುಟ್ಟ ಬಾಯಲ್ಲಿ ಇಡೀ ಬ್ರಹ್ಮಾಂಡವನ್ನು ತೋರಿಸಿದಂತೆ ಇರುವುದು.
ಶ್ರೀ ವಾದೀಂದ್ರತೀರ್ಥರು...
ಉದ್ವೇಲ ವ್ಯಾಸತಂತ್ರ ವ್ಯವಸಿತ
ನಿಖಿಲಾಭಿಜ್ಞ ಹೃದ್ಯಾನವಿದ್ಯಾ
ನಂತತ್ರಯ್ಯಂತ ಭಾವ ಪ್ರಕಟನ-
ಘಟನಾ ಸರ್ವತಂತ್ರ ಸ್ವತಂತ್ರೇ ।
ಸಂವರ್ಣೇ ಮಂತ್ರವರ್ಣೇರನಿತರ
ವಿಷಯ ಸ್ಪರ್ಷಿಭಿ: ಪಾವಮಾನೇ
ರೂಪೇ ಲೋಕೈಕದೀಪೇ ಪ್ರಸರತು
ಹೃದಯಂ ಮಾಮಕಂ ಮಧ್ವನಾಮ್ನಿ ।। 4 ।।
ಸೀಮಾತೀತವಾದ ಸಿ ವೇದವ್ಯಾಸದೇವರು ರಚಿಸಿದ ಬ್ರಹ್ಮಮೀಮಾಂಸಾದಿ ಶಾಸ್ತ್ರಗಳಿಂದ ಚೆನ್ನಾಗಿ ತಿಳಿಯಲ್ಪಟ್ಟು ಸಮಸ್ತ ಪ್ರಮೇಯಗಳನ್ನೂ ಅರಿತ, ಮನೋಹರವೂ, ದೋಷ ರಹಿತವೂ, ಅಪರಿಮಿತವೂ ಆದ ಸಕಲ ಉಪನಿಷತ್ತುಗಳ ಅಭಿಪ್ರಾಯಗಳನ್ನು ಹೊಂದಿಸುವುದು ಮತ್ತು ಸ್ಥಾಪನೆ ಮಾಡುವುದರಲ್ಲಿಯೂ ಹಾಗೂ ಎಲ್ಲಾ ಸಿದ್ಧಾಂತ ಶಾಸ್ತ್ರಗಳಲ್ಲಿಯೂ ಬೇರೊಬ್ಬರ ಆಕ್ಷೇಪಣೆಯಿಲ್ಲದೆ ಸ್ವಯಂ ಸಮರ್ಥರೂ ಆದ, ಶ್ರೀ ವಾಯುದೇವರನ್ನು ಬಿಟ್ಟು ಮತ್ತೊಬ್ಬರನ್ನೂ ಪ್ರತಿಪಾದಿಸದಿರುವ " ಬಳಿತ್ಥಾ ಸೂಕ್ತ "....
" ಬಟ್ ತದ್ದರ್ಶನಮಿತ್ಥಮೇವ ನಿಹಿತಮ್ "
" ಪ್ರಲಯೇsಪಿ ಪ್ರತಿಭಾತಪರಾವರಃ
ಮುಖ್ಯವಾಯುರ್ನಿತ್ಯಸಮಃ "
" ಅಮೃತೋ ವಾಯುನಿರ್ಧಿಷ್ಟ:
ನಿತ್ಯಜ್ಞಾನಾತ್ಮಕತ್ವತಃ "
ಯೆಂದು ವೇದ ಭಾಗಗಳಲ್ಲಿ - ಅನುವ್ಯಾಖ್ಯಾನ ಮತ್ತು ಬೃಹತ್ಭಾಷ್ಯದಲ್ಲಿ ಬರುವ ಸ್ತೋತ್ರಗಳಿಂದ ಪ್ರತಿಪಾದ್ಯರಾದ, ಮುಖ್ಯವಾಗಿ ಜನರಿಗೆ ಜ್ಞಾನ ಪ್ರಕಾಶವಾದ, ಶ್ರೀ ವಾಯುದೇವರ ಸಂಬಂಧಿಯಾದ, ಪವಿತ್ರೀಕರಣ ಸಮರ್ಥವಾದ " ಶ್ರೀಮಧ್ವ " ರೆಂಬ ಶ್ರೀ ವಾಯುದೇವರ ಅವತಾರದಲ್ಲಿ ನನ್ನ ಮನಸ್ಸು ನೆಲೆಗೊಳ್ಳಲಿ!!
ಶ್ರೀ ಪುರಂದರದಾಸರು...
ರಾಗ : ಹಿಂದೂಸ್ಥಾನಿಕಾಪಿ ತಾಳ : ಅಟ
ಸಾರಿ ಬಂದನೆ
ಪ್ರಾಣೇಶ ಬಂದನೆ ।। ಪಲ್ಲವಿ ।।
ಸಾರಿ ಬಂದ ಲಂಕಾಪುರವ ।
ಮೀರಿದ ರಾವಣನ ಕಂಡು ।
ಧೀರನು ವಯ್ಯಾರದಿಂದ ।। ಆ. ಪ ।।
ವಾಯುಪುತ್ರನೇ
ಶ್ರೀರಾಮನ ದೂತನೆ ।
ಪ್ರಿಯದಿಂದ ।
ಸೀತಾ೦ಗನೆಗೆ । ಮುದ್ರಿ ।
ಕೆಯ ತಂದಿತ್ತವನೇ ।। ಚರಣ ।।
ಭೀಮಸೇನನೇ ಕುಂತಿ
ತನೆಯನೇ । ವಿರಾಟ ।
ನ ಮನೆಯಲ್ಲಿ ನಿಂತು
ಕೀಚಕನ ಸಂಹರಿಸಿದವನೇ ।। ಚರಣ ।।
ಮಧ್ವರಾಯನೇ
ಸರ್ವಜ್ಞ ಶ್ರೇಷ್ಟನೇ ।
ಅದ್ವೈತವಗೆದ್ದು ।
ಪುರಂದರವಿಠಲನ ಮುಂದೆ
ನಿಂತವನೇ ।। ಚರಣ ।।
ಶ್ರೀ ವಿಜಯರಾಯರು...
ಅಜಪದಕೆ ಅರ್ಹನಾದ ।
ಋಜುಗಣ ಜೀವೋತ್ತಮನ ।
ನಿಜ ಪದಕೆ ಬರುವ ।
ವಿಜಯವಿಠಲನ ದಾಸ ।।
****
" ಅಧಿಕಮಾಸ - 19 "
" ಮಧ್ವ ಮತವೇ ಜಗತ್ತಿನ ಶ್ರೇಷ್ಠ ಮತವು "
" ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರಿಂದ ರಚಿತವಾದ " ಯುಕ್ತಿಮಲ್ಲಿಕಾ " ಗ್ರಂಥದ " ಫಲಸೌರಭ " ದಲ್ಲಿನ " ವಾಯುಪುರಾಣ ವಚನಗಳ ಸಂಗ್ರಹ "...
ವಾಯೋರ್ದಿವ್ಯಾನಿ ರೂಪಾಣಿ
ಪದತ್ರಯ ಯುತಾನಿ ಚ ।
ತ್ರಿಕೋಟಿ ಮೂರ್ತಿ ಸಂಯುಕ್-
ತಸ್ತ್ರೇತಾಯಾ೦ ರಾಕ್ಷಸಾಂತಕಃ ।
ಹನುಮಾನಿತಿ ವಿಖ್ಯಾತೋ
ರಾಮಕಾರ್ಯ ಧುರಂಧರಃ ।।
ಶ್ರೀ ವಾಯುದೇವರು ಮೂರು ಪದ್ಮ ಸಂಖ್ಯೆಯ ರೂಪಗಳುಳ್ಳವರು.
ಶ್ರೀ ರಾಮಾವತಾರದಲ್ಲಿ ಮೂರು ಕೋಟಿ ರೂಪಗಳಿಂದ ಯುಕ್ತರಾಗಿ, ರಾಕ್ಷಸಾಂತಕರಾಗಿ ತ್ರೇತಾ ಯುಗದಲ್ಲಿ ಶ್ರೀ ರಾಮ ಕಾರ್ಯ ಧುರಂಧರರಾದ " ಹನುಮಂತ ದೇವ " ರೆಂದು ಪ್ರಖ್ಯಾತರಾದರು.
ಸ ವಾಯುರ್ಭೀಮಸೇನೋಭೂ
ದ್ದ್ವಾಪರಾಂತೇ ಕುರೂದ್ವಹಃ ।
ಕೃಷ್ಣ೦ ಸಂಪೂಜಯಾಮಾಸ
ಹತ್ವಾ ದುರ್ಯೋಧನಾದಿಕಾನ್ ।।
ಆ ಶ್ರೀ ವಾಯುದೇವರೇ ಕುರುವಂಶದಲ್ಲಿ " ಶ್ರೀ ಭೀಮಸೇನ " ರೆಂಬ ನಾಮದಿಂದ ದ್ವಾಪರದಲ್ಲಿ ಅವತರಿಸಿ ದುರ್ಯೋಧನಾದಿಗಳನ್ನು ಸಂಹರಿಸಿ ಶ್ರೀ ಕೃಷ್ಣ ಪರಮಾತ್ಮನನ್ನು ಚೆನ್ನಾಗಿ ಪೂಜಿಸಿದರು.
ಭೂಭಾರ ಹರಣವೆಂಬ ಶ್ರೀ ಕೃಷ್ಣ ಪರಮಾತ್ಮನ ಕಾರ್ಯದಲ್ಲಿ ಪ್ರಥಮಾಂಗನೆನಿಸಿದರು.
ದ್ವೈಪಾಯನಸ್ಯ ಸೇವಾರ್ಥಂ
ಬದರ್ಯಾಂತು ಕಲೌಯುಗೇ ।
ವಾಯುಶ್ಚ ಯತಿ ರೂಪೇಣ
ಕೃತ್ವಾ ದುಃಶಾಸ್ತ್ರ ಖಂಡನಮ್ ।
ತತಃ ಕಲಿಯುಗೇ ಪ್ರಾಪ್ತೇ
ತೃತೀಯೋ ಮಧ್ವನಾಮಕಃ ।
ಭೂರೇಖಾ ದಕ್ಷಿಣಾ ಭಾಗೇ
ಮಣಿಮದ್ಗರ್ವ ಶಾಂತಯೇ ।
ದಿಕ್ಕುರ್ವಂಸ್ತತ್ಪ್ರಭಾಂ ಸದ್ಯೋ-
ವತೀರ್ಣೋತ್ರ ದ್ವಿಜಾನ್ವಯೇ ।।
ಇತ್ಯಾದ್ಯಾ: ಸೂಕ್ತಯೋ
ವಾಯುಪುರಾಣಸ್ಥಾ: ಸಹಸ್ರಶಃ ।
ಅವತಾರ ತ್ರಯಂ ವಾಯೋ:
ಕಥಯಂತಿ ಮಹಾತ್ಮನಃ ।।
ಈ ಕಲಿಯುಗದಲ್ಲಿ ಶ್ರೀ ಬಾದರಾಯಣರ ಸೇವೆಯನ್ನು ಬದರಿಕಾಶ್ರಮದಲ್ಲಿ ಮಾಡಿ, ದುಃಶಾಸ್ತ್ರಗಳನ್ನು ಖಂಡಿಸಿ, ಭೂರೇಖೆಯ ದಕ್ಷಿಣ ಭಾಗದಲ್ಲಿ ಮಣಿಮಂತನ ಗರ್ವ ಶಾಂತಿಗಾಗಿ ಆತನ ಮಾಯಾವಾದವೆಂಬುದನ್ನು ಖಂಡಿಸಿ ಆತನ ಪ್ರಭಾವದಿಂದ ಸುಜೀವಿಗಳನ್ನು ರಕ್ಷಿಸಿ ಉಡುಪಿ ಸಮೀಪದಲ್ಲಿ ಬ್ರಾಹ್ಮಣ ಪುತ್ರರಾಗಿ ಶೀಘ್ರವಾಗಿ ಅವತರಿಸಿದರು.
ಇದೆ ಮುಂತಾದ ವಿಷಯಗಳು ವಾಯುಪುರಾಣದ ಬಹು ವಾಕ್ಯಗಳು ಶ್ರೀ ವಾಯುದೇವರ ಅವತಾರಾಗಳನ್ನು ಯತಿ ರೂಪವಾದ " ಶ್ರೀ ಮಧ್ವ ರೂಪ " ಸಹಿತನಾಗಿ ವಿಸ್ತಾರವಾಗಿ ನಿರೂಪಿಸುತ್ತವೆ.
ಅತಃ ಶ್ರುತಿಸ್ಮೃತಿ ಸ್ತುತ್ಯ
ಚಿತ್ರಚಾರಿತ್ರ್ಯ ವಿಸ್ತೃತೇ: ।
ಮಧ್ವಸ್ಯೇವ ಮತಂ
ಯುಕ್ತ್ಯಾನ್ವಿತಂ ಪರಮ ಮಂಗಲಂ ।।
ಆದ್ದರಿಂದ ಶ್ರುತಿ ಸ್ಮೃತಿಗಳಿಂದ ನಿರೂಪಿಸಲಾದ ವಿಸ್ತಾರವಾದ ಚಿತ್ರ ಚರಿತ್ರೆಗಳಿಂದ " ಮಧ್ವ ಮತ " ವೇ ಯುಕ್ತಿಯುಕ್ತವೆಂದೂ - ಪರಮ ಮಂಗಲಕರವೆಂದೂ ಸಿದ್ಧವಾಗಿದೆ.
ರಾಗ : ಕಾಂಬೋಧಿ ತಾಳ : ಝ೦ಪೆ
ಮಧ್ವರಾಯರ ಕರುಣ
ಪಡೆಯದವ ಧಾಯೊಳಗೆ ।
ಇದ್ದರೇನು ಇಲ್ಲದಿದ್ದರೇನು ।। ಪಲ್ಲವಿ ।।
ಮಧ್ವ ಮತವೇ ಮತವು
ಸಕಲ ಶ್ರುತಿ ಸಮ್ಮತವು ।
ಮಧ್ವರಾಯರ ಧ್ಯಾನ
ಅಮೃತ ಪಾನ ।
ಮಧ್ವರಾಯರ ಲೀಲೆ
ನವ ರತುನದ ಮಾಲೆ ।
ಮಧ್ವರಾಯರ ಸ್ಮರಣೆ
ಕುಲಕೋಟಿ ಉದ್ಧರಣೆ ।। ಚರಣ ।।
ಮಧ್ವರಾಯರ ಕಥಾ
ಕೇಳಲು ದುರಿತಹರ ।
ಮಧ್ವರಾಯರ ಭಕುತಿ
ಮಾಡೆ ಮುಕುತಿ ।
ಮಧ್ವರಾಯರ ಸ್ತೋತ್ರ
ಮಾಡಿದವ ಸತ್ಪಾತ್ರ ।
ಮಧ್ವರಾಯರ ಭಜನೆ
ದುಷ್ಕರ್ಮ ತ್ಯಜನೆ ।। ಚರಣ ।।
ಮಧ್ವರಾಯರ ದಾಸ-
ನಾದವನೇ ನಿರ್ದೋಷ ।
ಮಧ್ವರಾಯರ ಭಂಟ
ಜಗಕೆ ನೆಂಟ ।
ಮಧ್ವ ರಮಣ ವಿಜಯವಿಠ್ಠಲ
ಕಿಂಕರರಾದ ।
ಮಧ್ವರ ಕಾರುಣ್ಯ
ಪಡೆದವನೇ ಧನ್ಯ ।। ಚರಣ ।।
****
" ಅಧಿಕಮಾಸ - 20 "
" ಮಧುಕರ ವೃತ್ತಿ "
ಈ ವೃತ್ತಿ ಶ್ರೀ ಹರಿದಾಸ ದೀಕ್ಷೆಯ ಸ್ವಾರಸ್ಯವನ್ನು ವಿವರಿಸುತ್ತದೆ.
* ಹರಿದಾಸರು ಲೌಕಿಕರಂತೆ ಯಾವ ಉದ್ಯೋಗವನ್ನೂ ಹಿಡಿಯುವುದಿಲ್ಲ.
* ಶ್ರೀ ಹರಿದಾಸರುಗಳು ಹರಿ ನಾಮ ಸಂಕೀರ್ತನೆ ಮಾಡುತ್ತಾ ಊರೂರು - ಕೇರಿ ಕೇರಿಗಳನ್ನು ತಿರುಗಿ ಅವರಿವರು ಕೊಡುವ ಆಹಾರ ಪದಾರ್ಥಗಳನ್ನು ಪಡೆದುಕೊಂಡು ಹೋಗುತ್ತಾರೆ.
* ಈ ವೃತ್ತಿಯನ್ನು ಇಲ್ಲಿ ದುಂಬಿಯ ಅಲೆದಾಟಕ್ಕೆ ಹೋಲಿಸಿದ್ದಾರೆ.
ದುಂಬಿಯ ನೆಗೆದಾಟ, ಝೇ೦ಕಾರಗಳು ಶ್ರೀ ಹರಿದಾಸರ ಗೀತ - ನರ್ತನೆಗಳಿಗೆ ಸಮಾನ.
* " ಮಧುಕರ ವೃತ್ತಿ " ಯೆನ್ನುವದು ಧರ್ಮ ಶಾಸ್ತ್ರದಲ್ಲಿ ಅಧ್ಯಾತ್ಮ ನಿಷ್ಠೆಯುಳ್ಳವರಿಗೆ ವಿಹಿತವಾಗಿದೆ.
ಈ ವೃತ್ತಿಗೆ ಸಂಬಂಧಿಸಿದಂತೆ ಶ್ರೀ ನಾರದಾಂಶ ಪುರಂದರದಾಸರು ಒಂದು ಸುಂದರ ಕೃತಿಯನ್ನು ರಚಿಸಿದ್ದಾರೆ.
* ಮಾಡುವ ಕೆಲಸಕ್ಕೂ ಒಂದು ವೃತ್ತಿ ಗೌರವವನ್ನು ಸಂಪಾದಿಸಿ ಕೊಡುವ ಸಂದರ ಕೃತಿಯಿದು.
* ಅಕ್ಕಿಯ ಭಿಕ್ಷೆಯನ್ನು ಪಡೆದು ಹಾಡಿನ ಭಿಕ್ಷೆಯನ್ನು ನೀಡುವ ನೀಡುವ ಕಾಯಕ ಇವರದಾಗಿತ್ತು.
* ಈ ಸಂಚಾರಿ ಗಾಯಕರ ತಂಡದ ಕಾರ್ಯವನ್ನು ಶ್ಲೇಷೆಯಿಂದ ಶ್ರೀ ನಾರದಾಂಶ ಪುರಂದರದಾಸರು ಅತ್ಯಂತ ಮನೋಜ್ಞ ಮತ್ತು ಅತ್ಯಂತ ಸೊಗಸಾಗಿ ಮೂರು ನುಡಿಗಳಲ್ಲಿ ಸುಂದರ ಪದಗಳೊಂದಿಗೆ ವಿವರಿಸಿದ್ದಾರೆ.
ರಾಗ : ಭೈರವಿ ತಾಳ : ಆದಿ
ಮಧುಕರ ವೃತ್ತಿಯೆನ್ನದು ।
ಅದು ಬಲು ಚೆನ್ನದು ।। ಪಲ್ಲವಿ ।।
ಪದುಮನಾಭನ ಪಾದ ।
ಪದುಮ ಮಧುಪವೆಂಬ ।। ಆ. ಪ ।।
ಕಾಲಿಗೆ ಗೆಜ್ಜೆ ಕಟ್ಟಿ ।
ನೀಲವರ್ಣನ ಗುಣ ।
ಆಲಾಪಿಸುತ್ತ ಬಲು ।
ಓಲಗ ಮಾಡುವಂಥ ।। ಚರಣ ।।
ರಂಗನಾಥನ ಗುಣ ।
ಹಿಂಗದೆ ಪಾಡುತ್ತ ।
ಶೃಂಗಾರ ನೋಡುತ್ತ ।
ಕಂಗಳಾನಂದವೆಂಬ ।। ಚರಣ ।।
ಇಂದಿರಾಪತಿ । ಪು ।
ರಂದರ ವಿಠಲನಲ್ಲಿ ।
ಚಂದದಿ ಭಕ್ತಿಯಿಂದಾ ।
ನಂದವ ಪಡುವಂಥ ।। ಚರಣ ।।
" ಮಧುಕರ ವೃತ್ತಿ "
ಮಧುಕರ ವೃತ್ತಿಯೆಂದರೆ " ಜೇನು ನೊಣ " ( ಭ್ರಮರ ). ಅದು ಯಾವೊಂದು ಹೂವಿಗೂ ಅಂಟಿಕೊಳ್ಳದೆ ಹಲವಾರು ಹೂಗಳ ಮೇಲೆ ಕುಳಿತು ಬಂಡನುಂಡು ಒಡನೆಯೇ ಹಾರಿಹೋಗುವಂತೆ, ಶ್ರೀ ಹರಿದಾಸರೂ ಕೂಡಾ ಮನೆ ಮನೆಗೆ ಹೋಗಿ ಉಪಾದಾನವನ್ನು ಪಡೆದುಕೊಂಡು, ಯಾವ ಮನೆಯ ಕೋಟಲೆಯನ್ನೂ ತಲೆಗೆ ಹಚ್ಚಿಕೊಳ್ಳದೆ ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಹರಿ ಸ್ಮರಣೆ ಮಾಡುತ್ತಾರೆ.
ಇದು " ಮಧುಕರ ವೃತ್ತಿ "!
ಜೇನು ನೊಣದಂತೆ ಅಲೆಯುವುದು.
ಇದನ್ನು ಸಂನ್ಯಾಸಿಗಳ - ಪರಿವ್ರಾಜಕ ಧರ್ಮವೆಂದು ಶಾಸ್ತ್ರ ವಿಧಿಸುತ್ತದೆ.
ಭಾಗವತದಲ್ಲಿಯೂ ಭಗವದ್ಭಕ್ತರು ಹೀಗೆಯೇ ತಮ್ಮೆಲ್ಲ ವ್ಯವಹಾರದಲ್ಲೂ ಭಗವಂತನ ಇರವನ್ನೇ ಕಾಣುತ್ತಾರೆಂದೂ ಅವರ ವೃತ್ತಿ " ಮಧುಕರ ವೃತ್ತಿ " ಯೆಂದೂ ಹೇಳಿದೆ.
" ಸರ್ವದಃ ಸಾರಮಾದತ್ತೇ
ಯಥಾ ಮಧುಕರೋ ಬುಧಃ "
ಹೂವಿನಲ್ಲಿರುವ ಸಾರವನ್ನೂ; ಜೇನನ್ನೂ ದುಂಬಿ ಹೀರಿಕೊಳ್ಳುವಂತೆ, ಶ್ರೀ ಹರಿದಾಸರು ಶ್ರೀ ಹರಿ ಪರಮಾತ್ಮನ ಚರಣ ಕಮಲದಲ್ಲಿರುವ ಸಾರವನ್ನೂ; ಜೇನನ್ನೂ ( ಮಧು ) ಹೀರಿಕೊಳ್ಳುವುದರಿಂದ ಅವರು " ಮಧು - ಪ " ನೇ. ( ಮಧು ಪಿಬತಿ ಇತಿ ). ದುಂಬಿಯಂತೆ ಅವರ ಬದುಕು.
ಅವರನ್ನು " ಚಾರಣ ಗಾಯಕ " ರೆಂದು ಬಣ್ಣಿಸಬಹುದು.
ನೀಲವರ್ಣನ = ಮೋಡದಂತೆ ಕಪ್ಪಾದ ಬಣ್ಣವುಳ್ಳ ಶ್ರೀ ಕೃಷ್ಣ ಪರಮಾತ್ಮ ( ನೀಲಮೇಘಶ್ಯಾಮ )
ಓಲಗ ಮಾಡುವಂಥ = ಶ್ರೀ ಹರಿಯ ಗುಣಗಳನ್ನು ಪಾಡುತ್ತಾ; ಅವನೆದುರು ನಿಂತು ಸೇವೆ ಮಾಡುವುದೇ " ಓಲಗ ". ( ಓಲಗ ಮಾಡು = ದರ್ಬಾರು ಮಾಡು / ಚಾಕರಿ ಮಾಡು ಎಂಬರ್ಥಗಳಿವೆ )
ಹಿಂಗದೆ = ಬೇಸರವಿಲ್ಲದೆ / ಮುಗಿಯಿತು ಎಂದೆನ್ನದೆ
ಶೃಂಗಾರ ನೋಡುತ್ತ = ಸುಂದರವಾದ ಅವನ ಅರ್ಚಾ ಮೂರ್ತಿಗಳನ್ನು ನೋಡುತ್ತ
ಇಂದಿರಾಪತಿ ಪುರಂದರವಿಠಲ = ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀಮನ್ನಾರಾಯಣ!!
****
" ಅಧಿಕಮಾಸ - 21 "
" ಶ್ರೀ ಜಗನ್ನಾಥದಾಸರ - ಶ್ರೀ ರಾಯರ ಪ್ರೀತ್ಯಾಸ್ಪದರು ಶ್ರೀ ಕಮಲಾಪತಿವಿಠ್ಠಲರು "
ಹೆಸರು :
ಶ್ರೀ ರಾಮದಾಸರು
ಜನ್ಮಸ್ಥಳ :
ಸಂತೇಬೆನ್ನೂರು
ಉಪದೇಶ ಗುರುಗಳು :
ಶ್ರೀ ಸುರಪುರ ಆನಂದದಾಸರು
ಅಂಕಿತ ನಾಮ :
ಶ್ರೀ ಕಮಲಾಪತಿವಿಠ್ಠಲ
ಇವರು ಸಂತೆಬೆನ್ನೂರು ಗ್ರಾಮದವರು.
ಇವರ ಮೊದಲಿನ ಹೆಸರು ಶ್ರೀ ರಾಮದಾಸರು.
ಇವರು ಉಡುಪಿಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀಗಳವರಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆಂದು " ಭಾವದರ್ಪಣ ವ್ಯಾಖ್ಯಾನ " ದ ಮಂಗಲಾ ಚರಣ ಪದ್ಯದಲ್ಲಿ ಉಲ್ಲೇಖಿಸಿದ್ದಾರೆ.
ಧೀರ ಕೃಷ್ಣಾಪುರ ಯತಿಗಳ ।
ಚಾರು ಚರಣ ಸರೋಜಯುಗಕೆ ।
ಸ್ಥೈರ್ಯ ಮನದಿಂ ನಮಿಪೆ
ಸಮ್ಯಗ್ ಜ್ಞಾನಪ್ರದರೆಂದು ।।
ಶ್ರೀ ಕಮಲಾಪತಿವಿಠ್ಠಲರು " ಶ್ರೀ ಹರಿಕಥಾಮೃತಸಾರ " ಕ್ಕೆ " ಭಾವದರ್ಪಣ " ವೆಂಬ ಪ್ರಗಲ್ಭವಾದ ವ್ಯಾಖ್ಯಾನವನ್ನು ಬರೆದಿದ್ದಾರೆ.
ಶ್ರೀ ಕಮಲಾಪತಿವಿಠ್ಠಲರ ಕಾವ್ಯದ ಶೈಲಿಯು ತಿಳಿಯಾಗಿದ್ದು ಸರಳತೆಯಲ್ಲಿಯೇ ಸಂಸತೆ ಹಾಗೂ ಪ್ರಾಸಾದಿಕೆಗಳು ಹುರಿಗೊಂಡು ಚೆಲುವು ಚಿಮ್ಮುವಂತೆ ಮಾಡಿದ್ದಾರೆ.
ಸರಸ ಕಾವ್ಯಗಳ ಓದಿ ತಿಳಿಯದ ।
ಮರುತ ಶಾಸ್ತ್ರದ ಮರ್ಮವರಿಯದ ।
ಕರುಣಿ ಕಮಲಾಪತಿಯ
ದಾಸನ ಕರಣದೊಳು ನಿಂತು ।।
ಹರಿಕತಾಮೃತಸಾರ ಗ್ರಂಥಕೆ ಹರಿಯು ।
ಬರೆಸಿದ ಭಾವದರ್ಪಣ
ವರಗುಣಾಢ್ಯರು ನೋಡಿ ।
ನಿರುತದಿ ಕರುಣವ ಮಾಡುವದು ।।
ಈ ತರಹದ ಅವರ ಗೀತ ಕೃತಿಗಳಲ್ಲಿ ಸಹಜ ರಮ್ಯತೆಯು ಒಡಮೂಡಿ ನಿಂತಿದೆ.
ಮಾನವಿಯಲ್ಲಿ ತಮ್ಮ ಮನೆಯ ಕಂಭದಲ್ಲಿಯೇ ಶ್ರೀ ಜಗನ್ನಾಥದಾಸರು ಸನ್ನಿಹಿತರಾಗಿದ್ದಾರಷ್ಟೇ.
ಆ ಸಂದರ್ಭವನ್ನು ತಮ್ಮ ಒಂದು ಪದ್ಯದಲ್ಲಿ ಉಲ್ಲೇಖಿಸಿ ಶ್ರೀ ಕಮಲಾಪತಿವಿಠ್ಠಲರು ಒಂದು ರಮಣೀಯ ಉತ್ಪ್ರೇಕ್ಷಾ ವಿಲಾಸಗೈಯ್ದಿದ್ದಾರೆ ನೋಡಿ...
ರಾಗ : ಕಾಪಿ ತಾಳ : ಅಟ್ಟ
ಅಂಬುಜಾಕ್ಷಿ ಸ್ತ೦ಭದಿಹನ್ಯಾರೇ - ಸಾರೇ ।। ಪಲ್ಲವಿ ।।
ನಂಬಿ ಭಜಿಸುವ ಭಕುತರ ಮನದ ।
ಹಂಬಲ ನೀಡುವರೇ - ನೀರೇ ।। ಆ. ಪ ।।
ಸುರರೊಡೆಯನೋಲ್
ಪರಿಪರಿಯಲೈ ।
ಶ್ವರ್ಯದಿ೦ ರಾಜಿಸುವರ್ಯಾರೇ ।
ಹರಿಕಥಾಮೃತಸಾರ
ಗ್ರಂಥ ವಿರಚಿಸಿ ।
ಧರಣಿ ಸುರರು-
ದ್ಧರಿಸಿದವರೇ ।। ಚರಣ ।।
ಫುಲ್ಲಲೋಚನೆ ಬಲ್ಲೆಯಾ ಇವ ।
ರಿಲ್ಲಿರುವ ಕಾರಣವೇನೇ ।
ಫುಲ್ಲನಾಭನ ಪುಡುಕುತಲೀ ।
ಪ್ರಹ್ಲಾದನನುಜ
ಸಹ್ಲಾದರಿವರೇ ।। ಚರಣ ।।
ಜಲಜ ತುಳಸೀ ಮಣಿ ಸುಮಾಲಿಕೆ ।
ಗಳದಿ ಧರಿಸಿಹನ್ಯಾರೇ - ನೀರೇ ।
ಕಲಿಯುಗಾದಿ ಕಮಲಾಪತಿವಿ ।
ಠ್ಠಲನ ಒಲಿಸಿದಿಳೆಯೊಳಗೆ
ಮೆರೆದರೆ ।। ಚರಣ ।।
ಶ್ರೀ ಪರಮಾತ್ಮನು ಶ್ರೀ ನರಸಿಂಹ ರೂಪದಲ್ಲಿ ಕಂಬದಲ್ಲಿಯೇ ಹೊರಬಿದ್ದು ಬಂದದ್ದರಿಂದ ಆ ಕಂಭದಲ್ಲಿ ಮತ್ತೊಮ್ಮೆ ಶ್ರೀ ನರಸಿಂಹನನ್ನು ಹುಡುಕಲಿಕ್ಕಾಗಿಯೋ ಏನೋ ಎಂಬುವಂತೆ ಶ್ರೀ ಪ್ರಹ್ಲಾದರಾಜರ ತಮ್ಮ ಶ್ರೀ ಸಹ್ಲಾದಾಂಶರಾದ ಜಗನ್ನಾಥದಾಸರು ಕಂಭದಲ್ಲಿ ವಾಸವಾಗಿದ್ದಾರೆ.
ಈ ಪದ್ಯದಲ್ಲಿ ಉತ್ಪ್ರೇಕ್ಷಾಲಂಕಾರದ ಸೊಗಸು ಕಾವ್ಯ ಮರ್ಮಜ್ಞರಿಗೆ ಹೃದ್ಯವಾಗಿ ವೇದ್ಯವಾಗುವುದರಲ್ಲಿ ಸಂದೇಹವಿಲ್ಲ!
" ಶ್ರೀ ರಾಯರ ಬೃಂದಾವನ ಸನ್ನಿಧಿಯಲ್ಲಿ ಶ್ರೀ ಕಮಲಾಪತಿವಿಠ್ಠಲರು "
ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಸೇವೆ ಮಾಡಿ, ಮಾನವಿಗೆ ಹತ್ತಿರದಲ್ಲೇ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ನೆಲೆನಿಂತ ಕಲ್ಪವೃಕ್ಷ ಕಾಮಧೇನುವಾದ ಶ್ರೀ ಪ್ರಹ್ಲಾದಾಂಶ ರಾಘವೇಂದ್ರತೀರ್ಥರ ಸಂದರ್ಶನಾಕಾಂಕ್ಷಿಗಳಾದ ಶ್ರೀ ಕಮಲಾಪತಿವಿಠ್ಠಲರು ಶ್ರೀ ಗುರುರಾಯರ ಸನ್ನಿಧಾನಕ್ಕೆ ಬಂದು ಮೂಲ ಬೃಂದಾವನದ ಮುಂದೆ ನಿಂತು ತದೇಕ ಚಿತ್ತದಿಂದ ಶ್ರೀ ಗುರುರಾಜ ಬೃಂದಾವನ ನೋಡುತ್ತಾ....
ರಾಗ " ಮಧ್ಯಮಾವತಿ ತಾಳ : ಆದಿ
ಭಜಮನ ಶ್ರೀ ರಾಘವೇಂದ್ರ ಗುರುಗಳಾ ।
ನಿಜ ಕಮಲಾವ ಭಜಮನ ।। ಪಲ್ಲವಿ ।।
ಮೂಕ ಬಧೆರ ಗಟಾಕ್ಷ ವಂದೆರಿಗೆ ।
ಬೇಕಾದಿಷ್ಟಾರ್ಥ
ದಾತ ಪ್ರಖ್ಯಾತನಾ ।। ಚರಣ ।।
ಶರಣರ ಮನ
ನಿರ್ಮಲವನು ಮಾಡುವ ।
ಪರಮ ದಯಾನಿಧಿ
ಧೀರ ಗಂಭೀರನಾ ।। ಚರಣ ।।
ಶ್ರೇಷ್ಠನುತ ಕಮಲಾಪತಿವಿಠ್ಠಲನ್ನ ।
ಶ್ರುಷ್ಟು ಪದ ಧೇನಿಪ
ಭೂಪ ಕುಲದೀಪನಾ ।। ಚರಣ ।।
ಹಾಗೆಯೇ...
ರಾಗ : ಹಂಸಾನಂದೀ ತಾಳ : ಆದಿ
ಗುರು ರಾಘವೇಂದ್ರರ ಪದ ಧ್ಯಾನ ।
ಮುಕ್ತಿಗೆ ಸೋಪಾನ ।। ಪಲ್ಲವಿ ।।
ಸ್ಮರಿಸುವೆನಾತನಾ ಹರಿ ಚರಣಕೆ ಮನಾ ।
ಯರಗುವಂದದಿ ಮಾಳ್ಪರೀದಿನ ।। ಚರಣ ।।
ಸುಂದರ ವೃಂದಾವನ ಸಂದರ್ಶನಾ ।
ಆನಂದದಿಂದ ನಿಜ ನಾ ದಿನಾ ।। ಚರಣ ।।
ವರ ಕಮಲಾಪತಿವಿಠ್ಠಲ ।
ಪರನೆಂಬುವೋ ಸುಧಾ ।
ಪರಿಮಳ ಬೆರಸಿದ ಸಾಧನಾ ।
ಮುಕ್ತಿ ಮಾರ್ಗಕೆ ಸೋಪಾನಾ ।। ಚರಣ ।।
ಶ್ರೀ ಗುರುರಾಯರ ಸೇವೆ ಮಾಡಿ ಶ್ರೀ ರಾಯರ ಪಾದೋದಕ - ಹಸ್ತೋದಕ ಪ್ರಸಾದ ಸ್ವೀಕಾರ ಅತಿ ಸಂತೋಷದಿಂದ ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯರಾಯರು ನೆಲೆನಿಂತ ಶ್ರೀ ಕ್ಷೇತ್ರ ಚಿಪ್ಪಗಿರಿಗೆ ಬಂದು ಶ್ರೀ ದಾಸಾರ್ಯರ ಮುಂದೆ ನಿಂತು ಶ್ರೀ ವಿಜಯರಾಯರ ಕುರಿತು....
ಗುರು ವಿಜಯರಾಯರ
ಪದ ಸರಸಿಜ ಸೇವಿಪ ।
ನರನೇ ಜಗನ್ಮಾನ್ಯ
ಧನ್ಯಾ ।। ಪಲ್ಲವಿ ।।
ನಿರುತ ಸ್ಮರಿಸುವರ
ದುರಿತ ತರಿಯಲವ ।
ತರಿಸಿ ನರಹರಿಯ
ಪರಿಚರಿಸುವ ನಿಜ ।। ಆ. ಪ ।।
.... ಮಿತಿಯಿಲ್ಲದವರ
ಚರಿತೆಗಳ ಪೊಗಳುವ ।
ಅತಿಶಯ ಸನ್ಮೋದಾ ।
ಗತಿದಾಯಕ ಪಾರ್ವತಿ ।
ಪತಿ ಅಚಲ ವಸತಿಯನೆ
ಮಾಡೀದಾ ।।
ಕೃತಿ ರಮಣನ ವಲಿಸುತನಶನ ।
ವ್ರತ ಪಥದಿಂದಾಗಾಧಾ ।
ನುತಿಸುತ ಕಮಲಾಪತಿ
ನರಸಾರಥಿ ।
ಪ್ರತಿಮೆಯ ಪ್ರತಿಷ್ಠಿಯ
ಹಿತದಿಂದ ಗೈದಾ ।।
" ಹರಿಕಥಾಮೃತಸಾರದ ವೈಭವ " ಶ್ರೀ ಕಮಲಾಪತಿವಿಠ್ಠಲರು ತಮ್ಮ ಹರಿಕಥಾಮೃತ ಸಾರ ಫಲ ಸ್ತುತಿಯನ್ನು ಈ ರೀತಿ ತಿಳಿಸಿದ್ದಾರೆ.
" ಹ " ಯೆನಲು ಹರಿಯೊಲಿವನು ತಾ ।
" ರಿ " ಯೆನಲು ರಿಕ್ತತ್ವ ಹರಿಯುವ ।
" ಕ " ಯೆನಲು ಕತ್ತಲೆಯ ಅಜ್ಞಾನವನು ಪರಿಹರಿಪ ।
" ಥಾ " ಯೆನಲು ಸ್ಥಾಪಿಸುವ ಜ್ಞಾನವ ।।
" ಮೃ " ಯೆನಲು ಮೃತ ಜನಿಯ ಬಿಡಿಸುವ ।
" ತ " ಯೆನಲು ಹರಿ ತನ್ನ ಮೂರ್ತಿಯ ತೋರುವನು ನಿತ್ಯ ।
" ಸಾ " ಯೆನಲು ಸಾಧಿಸುವ ಮುಕ್ತಿ ।
" ರ " ಯೆನಲು ರತಿಯಿತ್ತು ರಮಿಸುವ ।।
ಕಾಯ ವಾಗ್ಮನದೆಂಟು
ಅಕ್ಕರ ನುಡಿದರದರೊಳಗೆ ।
ಶ್ರೀಯರಸ ವಿಶ್ವಾದಿ ಅಷ್ಟೈ ।
ಶ್ವರ್ಯ ರೂಪದಿ ನಿಂತು ತಾ । ಪರ ।
ಕೀಯ ನೆನಿಸಿದ ಯಿವನ ಮನದೊಳು
ರಾಜಿಪನು ಬಿಡದೆ ।।
ಚಾರುತನದಿ ಹರಿಕಥಾಮೃತ ।
ಸಾರ ಕೃತ ಋಷಿ ಭಾರಧ್ವಾಜರ ।
ಸಾರ ಹೃದಯದಿ ನಿಂತಾ
ಸಕಲ ಸು ಶಾಸ್ತ್ರದಾ ಲೋಕಾ ।।
ಸಾರಿ ಸಾರಿಗೆ ಮಾಡಿ ಮಾಡಿಸಿ ।
ಸೂರೆಗೊಟ್ಟಾನಂದ ಚಿನ್ಮಯ ।
ಪಾರಾವಾರ ಶಯನ
ಶ್ರೀ ಕಮಲಾಪತಿವಿಠ್ಠಲಾ ।।
" ಉಪಸಂಹಾರ "
ಶ್ರೀ ಕಮಲಾಪತಿವಿಠ್ಠಲರಿಗೆ...
೧. ಶ್ರೀ ಗುರು ಕಮಲಾಪತಿವಿಠ್ಠಲರು
೨. ಶ್ರೀ ರಮಾಪತಿವಿಠಲರು
೩. ಶ್ರೀ ಮಧ್ವೇಶವಿಠಲರು
೪. ಶ್ರೀ ಗಂಡೀಶವಿಠಲರು
೫. ಶ್ರೀ ಇಭವರದವಿಠಲರು
ಮೊದಲಾದ ಅನೇಕ ಜನ ಶಿಷ್ಯರು ಶ್ರೀ ಕಮಲಾಪತಿವಿಠ್ಠಲರಿಂದ ಅಂಕಿತ ಪಡೆದು ಹರಿದಾಸರಾಗಿ ಕನ್ನಡಮ್ಮನ ಉಡಿಯನ್ನು ತುಂಬಿದ್ದಾರೆ.
****
" ಅಧಿಕಮಾಸ - 22 "
" कविसार्वभौम श्री कनकदासरु "
" ಶ್ರೀ ಕನಕದಾಸರ ಮೇಲೆ ವಿಶಿಷ್ಟಾದ್ವೈತ - ದ್ವೈತ ಮತದ ಪ್ರಭಾವ "
ಶ್ರೀ ಕನಕದಾಸರು ಶ್ರೀ ರಾಮಾನುಜ ಮತದ ಮಹತಿಯನ್ನು ಮನಗಂಡು ಅದನ್ನು ಸ್ವೀಕರಿಸಿದ್ದರೂ ಶ್ರೀ ದಾಸರಲ್ಲಿ ಯಾವ ದುರಾಗ್ರಹವೂ ಎಳ್ಳಷ್ಟೂ ಇರಲಿಲ್ಲ.
ಶ್ರೀ ಕನಕದಾಸರು ತಮ್ಮ ಮೇಲೆ ಶ್ರೀ ರಾಮಾನುಜ ಹಾಗೂ ಶ್ರೀ ಮಧ್ವ ಮತಗಳ ಗುರುಗಳ ಪರಿಣಾಮವಾಗಿದ್ದಿತೆಂದು ಶ್ರೀ ಕನಕದಾಸರು ಪರ್ಯಾಯವಾಗಿ ಹೇಳಿರುವರು.
ಶ್ರೀ ಕನಕದಾಸರು ಅವರ ಪತ್ನಿ ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡುತ್ತಾ " ಮೋಹನ ತರಂಗಿಣಿ " ಯಲ್ಲಿ....
ಕುವಲಯದಳನೇತ್ರೆ ಕೇಕು ಕೇವಲ । ವೈ ।
ಷ್ಣವರಾಯರುಗಳಿರ್ದೆಸೆಯ ।
ಪವನ ಬಂದೆರಗೆ ಸನ್ಮತಿವೆತ್ತು ಪೇಳುವೆ ।
ಶ್ರವಣಕಾನಂದವೆಂದೆನಿಸೆ ।।
ಎರಡು ದಿಕ್ಕುಗಳಲ್ಲಿರುವ ವೈಷ್ಣವರಾಯರೆಂದರೆ, ಪೂರ್ವ ದಿಕ್ಕಿನಲ್ಲಿರುವ ವಿಜಯನಗರದ ಶ್ರೀವೈಷ್ಣವ ಗುರುಗಳಾದ ಶ್ರೀ ತಾತಾಚಾರ್ಯರು ಮತ್ತು ಪಶ್ಚಿಮ ದಿಕ್ಕಿನಲ್ಲಿರುವ ಉಡುಪಿಯೊಳಗಿನ ಶ್ರೀ ಮಾಧ್ವ ಗುರುಗಳಾದ ಶ್ರೀ ವಾದಿರಾಜರು.
ಶ್ರೀ ಕನಕದಾಸರು ಮೋಹನ ತರಂಗಿಣಿಯನ್ನು ರಚಿಸಿದ್ದು " ಕಾಗೆನೆಲೆ " ಯಲ್ಲಿ ಯೆನ್ನುವುದು ಖಚಿತ..
ಶ್ರೀ ಕನಕದಾಸರೇ " ಮೋಹನ ತರಂಗಿಣಿ " ಯ ರಚನಾ ಸ್ಥಳವನ್ನು...
ಶ್ರೀ ಗಿರಿಜೇಶ್ವರನಾತ್ಮಾಭಿರಾಮ । ಸ ।
ದ್ವಾಗೀಶ ಪಿತ ಪರಂಧಾಮ ।
ಕಾಗಿನೆಲೆಯ ರಂಗ ಸುರ ಸಾರ್ವಭೌಮ । ಸು ।
ತ್ಯಾಗಿ ಪಾಲಿಸೋ ಪೂರ್ಣಕಾಮ ।।
ಯೋಗಿ ಹೃತ್ಕ್ಮಲಾಸನ ದೈತ್ಯ ಕಾಮಾರಿ ।
ರಾಗಿಪ ಭೋಗ ದೇವೇಂದ್ರ ।
ಕಾಗಿನೆಲೆಯ ನರಸಿಂಹಾದಿಕೇಶವ ।
ನಾಗಿಪ ಜನ ಮನೋರಥವ ।।
ಕೃತಿ ಪೇಳ್ದ ಕನಕದಾಸೋತ್ತಮ ಕೇಳ್ವವ ।
ಳತಿ ಸುಜ್ಞಾನ ವಧೂಟಿ ।
ಕೃತಿಗೆ ಕರ್ತನು ಕಾಗಿನೆಲೆಯಾದಿಕೇಶವ ।
ಕೃತಿ ಕೇಳ್ವರ ಪುಣ್ಯವಹುದು ।।
****
" ಅಧಿಕಮಾಸ - 23 "
" श्री कनकदासर काव्य वैभव "
" ಶ್ರೀ ಕನಕದಾಸರ ಕಾವ್ಯ ವೈಭವ "
ರಾಗ : ಕಾಂಬೋಧಿ ತಾಳ : ಝ೦ಪೆ
ನೀ ಮಾಯೆಯೊಳಗೋ ನಿನ್ನೊ-
ಳು ಮಾಯೆಯೋ ।। ಪಲ್ಲವಿ ।।
ನೀ ದೇಹ ದೊಳಗೋ ನಿನ್ನೊ-
ಳು ದೇಹವೋ ಹರಿಯೇ ।। ಆ, ಪ ।।
ಬಯಲೊಳಗೆ ಆಲಯವೊ
ಆಲಯದೊಳಗೆ ಬಯಲೊ ।
ಬಯಲು ಆಲಯವೆರಡು
ನಯನದೊಳಗೊ ।
ನಯನ ಬುದ್ಧಿಯ ಒಳಗೊ
ಬುದ್ಧಿ ನಯನದ ಒಳಗೊ ।
ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೇ ।। ಚರಣ ।।
ಸವಿಯು ಸಕ್ಕರೆಯೊಳಗೊ
ಸಕ್ಕರೆಯು ಸವಿಯೊಳಗೊ ।
ಸವಿಯು ಸಕ್ಕರೆಯೆರಡು
ಜಿಹ್ವೆಯೊಳಗೊ ।
ಜಿಹ್ವೆ ಮನಸಿನ ಒಳಗೊ
ಮನಸು ಜಿಹ್ವೆಯ ಒಳಗೊ ।
ಜಿಹ್ವೆ ಮನಸುಗಳೆರಡು
ನಿನ್ನೊಳಗೊ ಹರಿಯೇ ।। ಚರಣ ।।
ಕುಸುಮದಲಿ ಗಂಧವೊ
ಗಂಧದಲಿ ಕುಸುಮವೊ ।
ಕುಸುಮ ಗಂಧಗಳೆರಡು
ಅಘ್ರಾಣದೊಳಗೆ ।
ಅಸಮಭವ ಕಾಗಿನೆಲೆಯಾದಿ
ಕೇಶವರಾಯ ।
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೊ ಹರಿಯೇ ।। ಚರಣ ।।
ನೀನು ನಿನ್ನಿಂದ ನಿರ್ಮಿತವಾದ ಹಾಗೂ ನಿನ್ನ ಅಧೀನಳಾದ ಪ್ರಕೃತಿಯಲ್ಲಿ ಇದ್ದಿಯೋ ಅಥವಾ ನಿನ್ನಲ್ಲಿ ಆ ಮಾಯೆಯಿರುವಳೋ?
" ಮಾಯೆ " ಯೆಂದರೆ....
" ಪ್ರಕೃತಿ ".
ಇದಕ್ಕೆ ಅಭಿಮಾನಿ " ಶ್ರೀ ಮಹಾಲಕ್ಷ್ಮೀದೇವಿಯರು ".
ನೀ ಮಾಯೆಯ ಅಧೀನವೋ ಅಥವಾ ಮಾಯೆಯು ನಿನ್ನ ಅಧೀನವೋ ತಿಳಿಯಲಾರದ ಕೆಲವರು ನೀನು ಮಾಯೆಯ ಅಧೀನವೆಂದೇ ಭಾವಿಸುವರು.
ನಿನ್ನನ್ನು ವ್ಯಾಪ್ತನೆಂದು ತಿಳಿಯದ ಅಜ್ಞಾನಿಗಳು ನೀನು ಬಯಲಿನಲ್ಲಿ ಆಟವಾಡಿದೆ.
ಮನೆಯಲ್ಲಿ ಊಟ ಮಾಡಿದೆ.
ಬಯಲಿನಲ್ಲಿದ್ದಾಗ ಮನೆಯಲ್ಲಿಲ್ಲ!
ಮನೆಯಲ್ಲಿದ್ದಾಗ ಬಯಲಿನಲ್ಲಿಲ್ಲಯೆಂದು ಭಾವಿಸುವರು.
ಅಚಿಂತ್ಯಾದ್ಭುತ ಸಾಮರ್ಥ್ಯವುಳ್ಳ ನೀನು ಬಯಲಿನಲ್ಲಿಯೂ ಇರುವೆ.
ಆಲಯದೊಳಗೂ ಇರುವೆ.
ಬಯಲಿನಲ್ಲಿರುವ ನೀನು " ಬಯಲು " ಯೆಂದೆನಿಸುವೆ.
ಆಲಯದೊಳಿದ್ದು ಆಲಯವೆನಿಸುವಿ.
ಇದು ಬಯಲು - ಇದು ಆಲಯ ಎಂಬ ಜ್ಞಾನ ಬಂದದ್ದಾದರೂ ಅವುಗಳನ್ನು ಗ್ರಹಿಸದ ನಯನದಿಂದ.
ಆ ನಯನಗಳಲ್ಲೂ ಬಯಲು - ಆಲಯದ ಪ್ರತಿಬಿಂಬ ಬಿದ್ದಿರುವುದು.
ಇದರಿಂದ ನಯನಗಳಲ್ಲಿ ಆಲಯವಿದೆಯೋ - ಆಲಯವು ನಯಗಳಲ್ಲೋ ಎಂದು ಅಪ್ರಬುದ್ಧರಿಗೆ ಸಂದೇಹ ಬರುವುದುಂಟು.
ಆದರೆ ಆ ನಯನಗಳಿಗೆ ದರ್ಶನ ಸಾಮರ್ಥ್ಯ ನೀಡಿ ನಯನವೆನಿಸಿರುವವನೂ ನೀನೇ. ಈ ನಯನದಿಂದ ಜ್ಞಾನ ಬಂದದ್ದು ಬುದ್ಧಿ ಪ್ರಚೋದಕನಾದ ನಿನ್ನಿಂದಲೇ.
ಆದರೆ ಬುದ್ಧಿ ಯಿದ್ದರೆ ನಯನದ ಕಾರ್ಯ ನಡೆಯುವುದುನಯನವಿದ್ದರೆ ಮಾತ್ರ.
ಬಯಲಿನ ಅಭಿಮಾನಿ = ಕ್ಷೇತ್ರ ಪುರುಷ
ಗೃಹಾಭಿಮಾನಿ = ವಾಸ್ತು ಪುರುಷ
ನೇತ್ರಾಭಿಮಾನಿ = ಸೂರ್ಯ
ಬುದ್ಧ್ಯಾಭಿಮಾನಿ = ಉಮಾದೇವಿ
ಮೊದಲಾದ ದೇವತೆಗಳಿಗೆ ಅಂತರ್ಬಹಿರ್ನಿಯಾಮಕನಾದ ನಿನ್ನನ್ನು ತಿಳಿಯಬೇಕು.
ಆದರೆ ತಿನ್ನುವಾಗ ಪ್ರಧಾನವಾದ ಬಾಯಿಯನ್ನೇ ಮರೆವಂತೆ ನಿನ್ನನ್ನೇ ಮರೆಯುವರು.
ಬಯಲಿನಲ್ಲಿ ಆಲಯವಿದೆ.
ಆಲಯದಲ್ಲಾದರೂ ಜೀವಿಗಳಿರುವರು.
ಆಲಯದಲ್ಲಿರುವ ಕೆಲವೇ ಜನಗಳಿರುವ ಪ್ರದೇಶಗಳಲ್ಲೂ ಅನಂತಾನಂತ ಜೀವರಿರುವರು.
ಇವರೆಲ್ಲರಿಗೂ ನಿಯಾಮಕ ನೀನೇ.
ಅಂತರ್ಯಾಮಿಯೂ ನೀನೇ.
ಯಾವುದು ಯಾವುದರಲ್ಲಿ?
ಯೆಂಬ ಸಂಶಯ ಪಿಶಾಚಗ್ರಸ್ತರಿಗೆ " ಭಗವಂತನು ಅಣು ರೇಣು ತೃಣ ಕಾಷ್ಠ ತುಂಬಿರುವನು " ಯೆಂಬ ಮಂತ್ರವಾದಿಯಂತಿರುವುದು!!
ಸಕ್ಕರೆ ತಿಂದಾಗ ನಾಲಿಗೆಯಿಂದ ಸವಿಯನ್ನು ಸವಿಯುತ್ತೀವೆ.
ಸಕ್ಕರೆ ಬಿಟ್ಟು ಸವಿಯಿಲ್ಲ.
ಸವಿಬಿಟ್ಟು ಸಕ್ಕರೆಯಿಲ್ಲ.
ಹಾಗಾದರೆ ಯಾವುದರಲ್ಲಿ ಯಾವುದಿದೆ?
ಸಕ್ಕರೆ ಸಿಹಿಯೆಂದು ತಿಳಿಯುವುದು ಜಿಹ್ವೆಯಿಂದ.
ಈ ಜಿಹ್ವೆಯಿಲ್ಲವಾದರೆ ಸಿಹಿಯೊಳಗೆ ಸಕ್ಕರೆಯೆಂದು ತಿಳಿಯಬೇಕು.
ಗಿಳಿಯು ಪಂಜರದೊಳಗೊ ಪಂಜರದಲ್ಲಿ ಗಿಳಿಯೊ?
ಯೆಂಬ ಸಂಶಯ ಬೇಡ.
ಗಿಳಿಯು ಪಂಜರದಲ್ಲಿಲ್ಲ.
ಗಿಳಿಯಲ್ಲಿಯೇ ಪಂಜರವನ್ನೊಳಗೊಂಡ ಇಡೀ ಜಗತ್ತನ್ನು ಹೊತ್ತಿರುವ ಪರಮಾತ್ಮನಿದ್ದಾನೆ!!
ಹಾಗೆಯೇ...
ಕುಸುಮದಲ್ಲಿ ಗಂಧವೊ ಗಂಧದಲ್ಲಿ ಕುಸುಮವೊ?
ಯೆಂಬ ಸಂಶಯ ಬೇಡ.
ಗಂಧದಲ್ಲಿ ಗಂಧನೆನಿಸಿ ತನ್ನ ರೂಪಗಳನ್ನಿಟ್ಟು ಕುಸುಮವನ್ನು ತಾನು ಸ್ವೀಕರಿಸಿ ನೀಡದವನೇ ಭಗವಂತ. ಈ ಕುಸುಮ ಗಂಧವನ್ನು ತಾನೇ ಅಘ್ರಾಣಿಸಿ ನಮಗೆ ಅಘ್ರಾಣಿಸುವ ಶಕ್ತಿಯನ್ನು ನೀಡಿದವನೇ ಭಗವಂತನು!!
ಶ್ರೀಮದ್ಭಾಗವತ...
ವಿದ್ಯೋತಮಾನ: ಪ್ರಮಾದೋತ್ತಮಾಭಿ: ಸ ವಿದ್ಯುದಭ್ರಾವಲಿಭಿರ್ಯಥಾ ನಭ: ।
ಶ್ರೀರ್ಯತ್ರ ರೂಪಿಣ್ಯಾರುಗಾಯಪಾದಯೋ:
ಕರೋತಿ ಮಾಂ ಬಹುಧಾ ವಿಭೂತಿಭಿ: ।।
ಪ್ರೇ೦ಖಂ ಸ್ಥಿತಾ ಯಾ: ಕುಸುಮಾ-
ಕಾರಾನುಗೈರ್ವಿಗೀಯಮಾನಾ
ಪ್ರಿಯಕರ್ಮ ಗಾಯತೀ ।
ದದರ್ಶ ತತ್ರಾಖಿಲಸಾತ್ವತಾಂ
ಪತಿಂ ಶ್ರಿಯಃ ಪತಿಂ
ಯಜ್ಞಪತಿಂ ಜಗತ್ಪತಿಮ್ ।।
****
" ಅಧಿಕಮಾಸ - 24 "
" श्री भावि समीर वादिराज गुरुसार्वभौमर मतल्लि ऐकादशी व्रत वैभव "
" ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಮಾತಲ್ಲಿ ಏಕಾದಶೀ ವ್ರತ ವೈಭವ "
ಏಕಾದಶೀ ವ್ರತ ಜಾತಿ - ಮತ - ಕುಲ - ಪಂಥಗಳೆಣಿಸದೆ ಸರ್ವರಿಗೂ " ಏಕಾದಶೀ ವ್ರತ " ಕಡ್ಡಾಯ.
ಮೋಕ್ಷಪ್ರದವಾದ ಏಕಾದಶೀ ವ್ರತವನ್ನು ಸಕಲ ಸಜ್ಜನರೂ ಆಚರಿಸಿ ಶ್ರೀ ಜಗನ್ನಾಥನಾದ ಶ್ರೀ ಹರಿಯ ಕೃಪೆಗೆ ಪಾತ್ರರಾಗುವುದು.
ಈ ವ್ರತದ ಆಚರಣೆ ಕುರಿತು ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು ಪರಮ ಅದ್ಭುತವಾಗಿ ತಿಳಿಸಿದ್ದಾರೆ!!!
ರಾಗ : ಕಾಂಬೋಧಿ ತಾಳ : ಅಟ್ಟ
ಮನ್ನಿ ಮನ್ನಿಗೆ ಪೇಳ ಬಂದ ।
ಅನ್ನಾಥ ಬಂಧು ಹಯವದನ ಮುಕುಂದ ।। ಪಲ್ಲವಿ ।।
ತನ್ನ ನಂಬಿದವರ ತಾಪತ್ರಯವ । ಕಳೆ ।
ದುನ್ನಂತ ಪದವೀಯ ನೀವ ತಿಥಿತ್ರಯ ।। ಚರಣ ।।
ವೃದ್ಧಿ ಮಾತ್ರ ಅರುಣೋದಯದ ಕ್ಯಳಗೆ ।
ಶುದ್ಧಿ ಘಳಿಗೆ ವಂದಕೆ ಸಾಕು ಯೆಂದು ।। ಚರಣ ।।
ಅಭಿವೃದ್ಧಿಗೊಂದು ಘಳಿಗೆ ಕ್ಯಳಗೆ । ವಿಂ ।
ಶತಿ ಪಾನಿ ವಾಳದೊಳಗ ಶುದ್ಧಿಬೇಕೆಂದು ।। ಚರಣ ।।
ತಿಥಿ ಸಮವಾದಾಗ ಹತ್ತು ಪಾನಿವಾಳ ।
ತಿಥಿ ಕ್ಷಯದೊಳಗೈದರೊಳು ಶುದ್ಧಿಬೇಕೆಂದು ।। ಚರಣ ।।
ವೃದ್ಧಿ ಹ್ರಾಸದೊಳು ದಶಮೀಗೀ ಪರಿಯಲ್ಲಿ ।
ಶುದ್ಧಿಬೇಕು ಆನದ್ಧ್ಯಯದ ಪಥದಲೆಂದು ।। ಚರಣ ।।
ಊರ್ಯಲ್ಲರರಿವಂತೆ ಕೇರಿ ಕೇರಿಗಳಲ್ಲಿ ।
ಸಾರಿ ಡಂಗುರವ ಹೊಯಿಸಿರೋ ನೀವೆಂದು ।। ಚರಣ ।।
ಇಂದು ದಶಮೀ ಶಾಖಾವ್ರತಗೂಡಿಕೊಂಡು ।
ವಂದೆ ಭೋಜನವನ್ನ ಮಾಡಿರೋ ನೀವೆಂದು ।। ಚರಣ ।।
ತಾಂಬೂಲ ಚರ್ವಣ ಸಲ್ಲ ಸ್ತ್ರೀ ಸಂಗದ ।
ಹಂಬಲವನು ಮಾಡದಿರಿ ನೀವೆಂದು ।। ಚರಣ ।।
ತನ್ನವರೊಡನಾಡಿ ತನ್ನ ಪೂಜೆಯ ಮಾಡಿ ।
ಅನ್ಯಾರ ಕೂಡಾಡಾಬ್ಯಾಡಿ ನೀವೆಂದು ।। ಚರಣ ।।
ನಾಳೆ ಏಕಾದಶೀ ಉಪವಾಸ ಬಂತು ।
ಆಲಸ್ಯವ ಮಾಡದಲೇ ಮಾಡಿರೋ ಯೆಂದು ।। ಚರಣ ।।
ಜಲ ಪಾನಾ ಸಲ್ಲ ಭೋಜನ ಸಲ್ಲ ।
ಫಲಗಳು ತಾಂಬೂಲ ಸಲ್ಲ ಸಾಲನೆಂದು ।। ಚರಣ ।।
ಇರುಳು ಹಗಲು ಜಾಗರದಲ್ಲಿದ್ದು ತನ್ನ ।
ಚರಣದ ಪೂಜೆಯನೆ ಮಾಡಿರೋ ಯೆಂದು ।। ಚರಣ ।।
ಹರಿಕಥೆಯನು ಕೇಳಿ ಹರಿದಾಸರೊಡಗೂಡಿ ।
ತರುಣಿಯರಾಸೆಯನು ಬಿಡಿರೋ ಯೆಂದು ।। ಚರಣ ।।
ಇಂದು ಮುಖಿಯ ಬಿಟ್ಟು ಕಂದನ । ಕೊಂದಪ್ಪಿ ।
ನೆಂದ ನೃಪನ ಕಾಯಿದವ ನಾನೆಂದು ।। ಚರಣ ।।
ಕಳ ಅರ್ಧ್ಯ ದ್ವಾದಶೀ ಬಂದಾಗ ಬಿಡದಲೇ ।
ವಲಿಮೆಯಿಂದ ಪಾರಣೆ ಮಾಡಿರೋ ಯೆಂದು ।। ಚರಣ ।।
ಸುಖ ಪಾರಣ್ಯಾಯಿತೆ ಯೆಂದು ಕೇಳಿ ನಿಮ್ಮ ।
ಸುಕೃತವ ಹರಿಪದದಲರ್ಪಿಸಿರೋ ಯೆಂದು ।। ಚರಣ ।।
ಇಂತು ತಿಥಿತ್ರಯವ ಮಾಡಿದವರಿಗೆ ।
ನಂತ ಫಲವೀವ ಹಯವದನಯಿಂತು ।। ಚರಣ ।।
ತಿಥಿತ್ರಯ = ದಶಮೀ, ಏಕಾದಶೀ, ದ್ವಾದಶೀ
" ಸಕಲ ವ್ರತಗಳು ಹರಿದಿನದ ತರುವಾಯ " ಯೆಂದು ಪ್ರಮೇಯದ ವಿವರಣೆ ಈ ಕೃತಿಯಲ್ಲಿದೆ. ಶ್ರೀಮದಾಚಾರ್ಯರಿಂದ ರಚಿತವಾದ " ಕೃಷ್ಣಾಮೃತ ಮಹಾರ್ಣವ " ಗ್ರಂಥದಲ್ಲಿ ಸುದೀರ್ಘವಾಗಿ ದಶಮೀ - ಏಕಾದಶೀ - ದ್ವಾದಶೀ ತಿಥಿಗಳ ಮಹಾತ್ಮ್ಯೇಯನ್ನು ಹೇಳಲ್ಪಟ್ಟಿದೆ.
ಮೋಕ್ಷಪ್ರದನಾದ ಶ್ರೀ ಮುಕುಂದನೇ ಭಕ್ತರ ಮನೆ ಮನೆಗೆ " ಏಕಾದಶೀ ವ್ರತದ ಮಹಿಮೆ " ಹೇಳ ಬಂದಿದ್ದಾನೆಂದು ಈ ಕೃತಿಯ ವಿಶೇಷ!
ಇಂದು ಮುಖಿಯ ಬಿಟ್ಟು ಕಂದನ । ಕೊಂದಪ್ಪಿ ।
ನೆಂದ ನೃಪನ ಕಾಯಿದವ ನಾನೆಂದು ।। ಚರಣ ।।
ಈ ಚರಣದಲ್ಲಿ ಸೂಚಿಸಲ್ಪಟ್ಟ ಕಥಾ ಸಂದರ್ಭ ಹೀಗಿದೆ.
ಈ ಕಥೆಯು ಸ್ಕಾ೦ದ ಪುರಾಣಾಂತರ್ಗತ ಕಾರ್ತೀಕ ಮಾಸ ಮಹಾತ್ಮ್ಯೇ 20ನೇ ಅಧ್ಯಾಯದಲ್ಲಿ ನಿರೂಪಿತವಾಗಿದೆ.
ಹಿಂದೆ ರುಕ್ಮಾಂಗದ ಎಂಬ ಸಾರ್ವಭೌಮನಿದ್ದನು.
ಅವನ ಪತ್ನಿ ಸಂಧ್ಯಾವಳಿ.
ಮಗ ಧರ್ಮಾಂಗದ.
ಮಹಾ ಜ್ಞಾನಿಯಾದ ವಿಷ್ಣು ಭಕ್ತನಾದ ಆ ಸಾರ್ವಭೌಮನು " ಏಕಾದಶೀ ವ್ರತ " ದಲ್ಲಿ ದೃಢವಾದ ಶ್ರದ್ಧೆಯುಳ್ಳವನಾಗಿ, ತನ್ನ ದೇಶ ವಾಸಿಗಳೆಲ್ಲರಿಂದಲೂ " ಏಕಾದಶೀ ವ್ರತ " ವನ್ನು ಮಾಡಿಸಿದನು.
ಯಾವ ಕಾರಣ ಕುಲದಲ್ಲಿ ಒಬ್ಬ ಪುರುಷನು " ಏಕಾದಶೀ ವ್ರತ " ವನ್ನಾಚರಿಸಿದರೆ ಅವನ ವಂಶೀಯರೆಲ್ಲರೂ ವಿಷ್ಣು ಲೋಕವನ್ನು ಹೊಂದುವರೆಂಬ ಶ್ರೀ ಹರಿಯ ಆದೇಶವಿರುವುದರಿಂದ ಆತನ ಕಾಲದಲ್ಲಿ " ಯಮ ಲೋಕ " ವು ಬರಿದಾಯಿತು.
ಶ್ರೀ ಚಿತ್ರಗುಪ್ತರೂ ಮುನಿಯಂತೆ ಮೌನ ತಾಳಬೇಕಾಯಿತು.
ರುಕ್ಮಾಂಗದನೇ ಯಮ ಲೋಕವು ಬರಿದಾಗುವುದಕ್ಕೆ ಕಾರಣವೆಂದು ಶ್ರೀ ನಾರದರಿಂದ ಅರಿತ ಶ್ರೀ ಯಮಧರ್ಮರಾಜರು ತಮ್ಮ ಪರಿವಾರದೊಡನೆ ರುಕ್ಮಾಂಗದನ ಮೇಲೆ ದಂಡೆತ್ತಿ ಹೋಗಿ ಯುದ್ಧ ಮಾಡಿದರು.
ಆದರೇನು ಆಶ್ಚರ್ಯ!
ರುಕ್ಮಾಂಗದನಿಂದ ಪರಾಜಿತರಾದರು.
ಆಗ ದುಃಖತಪ್ತರಾದ ಶ್ರೀ ಯಮಧರ್ಮರಾಜರು ಶ್ರೀ ಚತುರ್ಮುಖ ಬ್ರಹ್ಮದೇವರ ಬಳಿಗೆ ಹೋಗಿ ದೂರಿತ್ತರು ಹಾಗೂ ರುಕ್ಮಾಂಗದನನ್ನು ಏಕಾದಶೀ ವ್ರತ ಭ್ರಷ್ಟನನ್ನಾಗಿ ಮಾಡಲು ಪ್ರಾರ್ಥಿಸಿದರು.
ಶ್ರೀ ಹರಿಯ ಸಂಕಲ್ಪವನ್ನು ತಿಳಿದು ಅದರಂತೆಯೇ ನಡೆಯುವ ಸರ್ವಜ್ಞರೂ, ಜಗದ್ಗುರುಗಳಾದ ಶ್ರೀ ಚತುರ್ಮುಖ ಬ್ರಹ್ಮದೇವರು ತಮ್ಮ ಮನಸ್ಸಿನಿಂದ ದರ್ಶನ ಮಾತ್ರದಿಂದ ಪುರುಷರನ್ನು ಮೋಹಗೊಳಿಸುವ ರೂಪ - ಲಾವಣ್ಯ - ತಾರುಣ್ಯಗಳುಳ್ಳ " ಮೋಹಿನಿ " ಎಂಬಾಕೆಯನ್ನು ಸೃಷ್ಠಿಸಿ ರುಕ್ಮಾಂಗದನನ್ನು ವ್ರತ ಭ್ರಷ್ಠನನ್ನಾಗಿಸಲು ಆಕೆಗೆ ಆದೇಶಗೈದರು.
ಒಮ್ಮೆ ಬೇಟೆಗೆ ಬಂದಿದ್ದ ರುಕ್ಮಾಂಗದನಿಗೆ ಮೋಹಿನಿಯ ಸಮಾಗಮ.
ಸಂದರ್ಶನ ಮಾತ್ರದಿಂದಲೇ ಅವಳಲ್ಲಿ ಅನುರಕ್ತನಾದನು.
ಆಕೆ ಸದಾ ತನ್ನ ಸಂಗದಲ್ಲೇ ಇರಬೇಕೆಂದೂ, ಮಧ್ಯದಲ್ಲಿ ಆಕೆಯನ್ನು ಪರಿತ್ಯಾಗ ಮಾಡಿದ್ದೇ ಆದರೆ, ಮಗನಾದ ಧರ್ಮಾಂಗದನ ತಲೆಯನ್ನು ಕತ್ತರಿಸಿ ತನಗೆ ಕೊಡಬೇಕೆಂದೂ ಕಾಮ ಮೋಹಿತನಾದ ಸಾರ್ವಭೌಮನಿಂದ ಪ್ರತಿಜ್ಞೆ ಮಾಡಿಸಿ ಅವನನ್ನು ಮೋಹಿಸಿ ವಿವಾಹವಾದಳು.
ಹಲವು ವರ್ಷಗಳೇ ಆಕೆಯೊಂದಿಗೆ ಎಲ್ಲಾ ಭೋಗಗಳನ್ನೂ ಅನುಭವಿಸಿದ ಸಾರ್ವಭೌಮ ಕಾಲದ ಪರಿವಿಯೇ ಇಲ್ಲವಾದ ಆತನಿಗೆ " ಏಕಾದಶೀ ವ್ರತ " ಮರೆಯಿತು.
ಆದರೆ ಒಮ್ಮೆ ಕಾರ್ತೀಕ ಮಾಸದ ಕೃಷ್ಣ ಪಕ್ಷದಲ್ಲಿ ಏಕಾದಶೀ ವ್ರತದ ನೆನಪು ಬಂತು.
ಆಗಲೇ ಮೋಹಿನಿ " ಏಕಾದಶೀ " ದಿನವೇ ಸಾರ್ವಭೌಮನೊಂದಿಗೆ ಭೋಜನ ಹಾಗೂ ಭೋಗಗಳನ್ನು ಕಡ್ಡಾಯ ಮಾಡಿ ಬಯಸಿದಳು.
ರುಕ್ಮಾ೦ಗದನು ಈಗ ಅವಳ ಮಾತನ್ನು ನಡೆಸಲು ನಿರಾಕರಿಸಿದಾಗ ತನಗೆ ಕೊಟ್ಟ ಮಾತಿನ ಪ್ರಕಾರ ಮಗನ ತಲೆಯನ್ನು ಕತ್ತರಿಸಿ ಕೊಡಲು ಆಗ್ರಹ ಪೂರ್ವ ಕೇಳಿದಳು.
ರುಕ್ಮಾಂಗದನು ವಿಹ್ವಲನಾಗಿ ಮೂರ್ಛಿತಾನಾದ.
ಆಗ ತಾಯಿ ಸಂಧ್ಯಾವಳಿಯೊಂದಿಗೆ ಬಂದ ಮಗ ಧರ್ಮಾಂಗದ - ಮೋಹಿನಿಯ ಮಾತನ್ನು ನಡೆಸಿಕೊಟ್ಟು " ಏಕಾದಶೀ ವ್ರತ " ವನ್ನು ಪರಿಪಾಲಿಸಲು ತಂದೆಗಳಲ್ಲಿ ಪ್ರಾರ್ಥಿಸಿದ!
ರಾಜ - ಹೆಂಡತಿ - ಮಕ್ಕಳಲ್ಲಿ ಐಕ್ಯಮತ್ಯವಿದ್ದದ್ದರಿಂದ ರುಕ್ಮಾಂಗದ ತನ್ನ ಪ್ರತಿಜ್ಞೆಗೆ ಅನುಸಾರವಾಗಿ ಮಗನ ತಲೆಯನ್ನು ಕತ್ತರಿಸಲು ಉದ್ಯುಕ್ತನಾದ.
ರಾಜನ ಹಾಗೂ ಅವನ ಪರಿವಾರದವರ ಶ್ರೀ ಹರಿಯಲ್ಲಿನ ದೃಢವಾದ ಭಕ್ತಿಯನ್ನೂ " ಏಕಾದಶೀ ವ್ರತ " ದಲ್ಲಿನ ದೀಕ್ಷೆಯನ್ನೂ ನೋಡಿ ಸಂತುಷ್ಟರಾದ ಇಂದ್ರಾದಿ ದೇವತೆಗಳು ಅಲ್ಲಿಗೆ ಬಂದು ಮಗನ ಹತ್ಯೆಯನ್ನು ತಡೆದರು ಹಾಗೂ ಅವರನ್ನು ಪ್ರಶಂಸಿಸಿದರು!
ಮೋಹಿನಿಗೆ - ದೇವತೆಗಳು ಕಾರ್ತೀಕ ಮಾಸದ ಕೊನೆಯ ಏಕಾದಶೀ ಮಾಡದಿದ್ದವರ ಪುಣ್ಯವೆಲ್ಲಾ ಆಕೆಗೆ ಸೇರುವಂತೆ ವರವಿತ್ತು ಇದರಿಂದ " ಯಮಲೋಕ " ದಲ್ಲಿ ಪುನಃ ಜನರು ಇರುವಂತಾಗುವಂತೆ ವ್ಯವಸ್ಥೆ ಮಾಡಿದರು.
ಈ ಆಖ್ಯಾಯಿಕೆಗಳನ್ನೂ ಕುರಿತು ಪುರಾಣ ವಾಕ್ಯಗಳು ಹೀಗಿವೆ....
ಸ್ಕಾ೦ದಪುರಾಣ....
ಕೋ ನ ಕುರ್ಯಾದ್ವಿಮೂಢಾತ್ಮಾ
ಕಾರ್ತೀಕೇ ತು ಹರೇರ್ದಿನಂ ।
ರುಕ್ಮಾಂಗದಸ್ತು ರಾಜರ್ಷಿ-
ರ್ಯದರ್ಥಂ ತು ಸ್ವಮಾತ್ಮಜಂ ।।
ಶಿರಶ್ಚೇತುಂ ಸಮುದ್ಯಕ್ತ ಸ್ತಾ೦
ತಿಥಿ೦ ಕಃ ಪರಿತ್ಯಜೇತ್ ।।
" ಏಕಾದಶೀ ವ್ರತ " ದ ಹಿರಿಮೆಯ ಬಗೆಗೆ ಶ್ರೀಮದಾಚಾರ್ಯರು ಈ ಸಂದರ್ಭದಲ್ಲಿ " ಕೃಷ್ಣಾಮೃತ ಮಹಾರ್ಣವ " ಗ್ರಂಥದಲ್ಲಿ..
" ರುಕ್ಮಾ೦ಗದ " ಹೇಳಿದ್ದು...
ಅಷ್ಟ ವರ್ಷಾಧಿಕೋ ಯಸ್ತು
ಅಶೀತಿರ್ನಹಿ ಪೂರ್ಯತೇ ।
ಯೋ ಭುಂಕ್ತೇ ಮಾನವಃ ಪಾಪೋ
ವಿಷ್ಣೋರಹನಿ ಚಾsಗತೇ ।। ೧೭೫ ।।
ಪಿತಾ ವಾ ಯಾ ದಿವಾ ಪುತ್ರೋ
ಭಾರ್ಯಾವಾsಪಿ ಸುಹೃಜ್ಜನ: ।
ಪದ್ಮನಾಭ ದಿನೇ ಭುಂಕ್ತೇ
ನಿಗ್ರಾಹ್ಯೋ ದಸ್ಯುವದ್ ಭವೇತ್ ।। ೧೭೬ ।।
" ಧರ್ಮ ವಿಭೂಷಣ " ಹೇಳಿದ್ದು...
ಪ್ರಾತರ್ಹರಿದಿನೇ ಲೋಕಾ-
ಸ್ತಿಷ್ಠಧ್ವಂ ಚೈಕಭೋಜನಾಃ ।
ಅಕ್ಷಾರ ಲವಣಾ: ಸರ್ವೇ
ಹವಿಷ್ಯಾನ್ನನಿಷೇವಿಣ: ।। ೧೭೭ ।।
ಅವನೀತಲ್ಪಶಯನಾ: ಪ್
ರಿಯಾಸಂಗವಿವರ್ಜಿತಾಃ ।
ಸ್ಮರಧ್ವಂ ದೇವ ದೇವೇಶಂ
ಪುರಾಣ ಪುರುಷೋತ್ತಮಮ್ ।। ೧೭೮ ।।
ಸುಕೃದ್ ಭೋಜನ ಸಂಯುಕ್ತಾ
ಹ್ಯುಪವಾಸೇ ಭವಿಷ್ಯಥ ।
ಅಕೃತಶ್ರಾದ್ಧನಿಚಯಾsಜಲ
ಪಿಂಡೋದಕ ಕ್ರಿಯಾ: ।। ೧೭೯ ।।
ಮೇಲ್ಕಂಡ ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು ತಿಥಿತ್ರಯದ ಮಹಾತ್ಮ್ಯೇಯ ಕುರಿತು ಇನ್ನೂ ಹೆಚ್ಚಿನ ವಿವರಗಳಿಗಾಗಿ " ಏಕಾದಶೀ ನಿರ್ಣಯ " ಗ್ರಂಥ ನೋಡುವುದು!!
आचार्य नागराजु हावेरि
गुरु विजय प्रतिष्ठान
****
" ಅಧಿಕಮಾಸ - 25 "
" ಶ್ರೀ ರಾಯರ ವೈಶಿಷ್ಟ್ಯ "
ಶ್ರೀ ಆಹ್ಲಾದಾಂಶ ಅಪ್ಪಣ್ಣಾಚಾರ್ಯರ ಮಾತಲ್ಲಿ.....
ಸರ್ವ ಯಾತ್ರಾ ಫಲಾವಾಪ್ತೈ ಯಥಾ ಶಕ್ತಿ ಪ್ರದಕ್ಷಿಣಮ್ ।
ಕರೋಮಿ ತವ ಸಿದ್ಧಸ್ಯ ವೃಂದಾವನ ಗತಂ ಜಲಮ್ ।
ಶಿರಸಾ ಧಾರಯಮ್ಯದ್ಯ ಸರ್ವ ತೀರ್ಥ ಫಲಾಪ್ತಯೇ ।।
ಸರ್ವಾಭೀಷ್ಟಾರ್ಥ ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ ।
ತವ ಸಂಕೀರ್ತನಂ ವೇದ ಶಾಸ್ತ್ರಾರ್ಥ ಜ್ಞಾನ ಸಿದ್ಧಯೇ ।।
ಶ್ರೀ ಗುರುರಾಜರ ಬೃಂದಾವನ ಪ್ರದಕ್ಷಿಣೆ _ ನಮಸ್ಕಾರ _ ಶಿರಸ್ಸಿನಲ್ಲಿ ಪಾದೋದಕ ಧಾರಣ _ ಸಂಕೀರ್ತನೆಗಳಿಂದ ಬರುವ ಫಲಗಳು ಹೀಗಿವೆ...
ಪ್ರದಕ್ಷಿಣೆ :-
ಸಮಸ್ತ ಉತ್ತಮ ಕ್ಷೇತ್ರಗಳ ವಿಧಿವತ್ತಾಗಿ ಯಾತ್ರೆಗಳಿಂದ ಉಂಟಾದ ಪುಣ್ಯ ಫಲದ ಪ್ರಾಪ್ತಿಗೋಸ್ಕರ " ಸಿದ್ಧ " ರಾದ ಅಪರೊಕ್ಷೀಕೃತಶ್ರೀಶರಾದ ನಿಮ್ಮ ಪ್ರದಕ್ಷಿಣೆಯನ್ನು ನನ್ನ ಶಕ್ತಿಯನ್ನು ಅನುಸರಿಐಸಿ ಮಾಡುತ್ತೇನೆ!
ಪ್ರಮಾಣ :-
ವಿಧಿ ಪೂರ್ವಕ ಸಮಸ್ತ ಉತ್ತಮ ಕ್ಷೇತ್ರಗಳ ಯಾತ್ರಾ ಮಾಡಿದ ಫಲ ಬರುತ್ತದೆ.
1. ಪಶ್ಚಿಮಕ್ಕೆ - ಉಡುಪಿ
2. ಉತ್ತರಕ್ಕೆ - ಬದರೀ, ಕಾಶೀ
3. ಪೂರ್ವಕ್ಕೆ - ಜಗನ್ನಾಥ, ತಿರುಪತಿ, ಕಂಚಿ, ಕಾಳಹಸ್ತಿ
4. ದಕ್ಷಿಣಕ್ಕೆ - ಶ್ರೀ ರಂಗ, ಅನಂತ ಪದ್ಮನಾಭ, ರಾಮೇಶ್ವರ ಮೊದಲಾದ ವೈಷ್ಣವ ಕ್ಷೇತ್ರಗಳ ಯಾತ್ರಾ ಫಲ ಪ್ರಾಪ್ತಿಯಾಗುತ್ತದೆ.
ಕೃಷ್ಣಾಮೃತ ಮಹಾರ್ಣವ :-
ವಿಷ್ಣೋರ್ವಿಮಾನಂ ಯಃ ಕುರ್ಯಾತ್ ಸುಕೃದ್ ಭಕ್ತ್ಯಾ ಪ್ರದಕ್ಷಿಣಮ್ ।
ಅಶ್ವಮೇಧ ಸಹಸ್ರಸ್ಯ ಫಲಮಾಪ್ನೋತಿ ಮಾನವಃ ।।
ಪ್ರದಕ್ಷಿಣಂತು ಯಃ ಕುರ್ಯಾ-
ದ್ಧರಿಭಕ್ತ್ಯಾ ಸಮನ್ವಿತಃ ।
ಹಂಸಯುಕ್ತ ವಿಮಾನೇನ
ವಿಷ್ಣು ಲೋಕಂ ಸ ಗಚ್ಛತಿ ।।
ಶ್ರೀ ವಿಜಯರಾಯರು...
ಕ್ಷಿತಿಯೊಳಗೆ ಮಂಚಾಲೆ ಗ್ರಾಮಕ್ಕೆ ।
ಪ್ರತಿಯು ಇಲ್ಲವೆಂದೆನಿಸಿಕೊಂಬುದು ।
ಪತಿತ ಪಾವನ ವಿಜಯವಿಠ್ಠಲನ ।
ತುತಿಸಿ ಕೊಳ್ಳುತ ಮೆರೆವ ।।
ಗುರುಗಳ ನೋಡಿದೆ
ಗುರುಗಳ ನೋಡಿದೆ ।।
ಶ್ರೀ ಗೋಪಾಲದಾಸರು...
ಆವ ತೀರ್ಥದಲ್ಲಿ
ಪೋಗಿ ಬಂದುದಕ್ಕಿಂತ ।
ತಾವಧಿಕವಾಗಿ ಫಲವ
ಈವನು ಶ್ರೀ ಹರಿ । ಲಕುಮೀ ।
ದೇವಿ ಸಹಿತ ಇದ್ದು
ಕೋವಿದರಿಗಿನ್ನು ಬಿಡದೆ ।
ಪಾವನ ಮಂಗಳ ಕ್ಷೇತ್ರ
ಆವಾವ ವರ್ಣಿಪೆ ಮತ್ತೆ ।
ಭುವನದೊಳಗೆ ದೇವ
ದೇವೇಶ ಗೋಪಾಲವಿಠ್ಠಲ ಇಲ್ಲಿ ।
ಆವಾಗ ಸೇವಿಸಿಕೊಳ್ಳುತಿಪ್ಪ ।।
ಶ್ರೀ ಗುರು ಶ್ರೀಶವಿಠ್ಠಲರು...
ಹಲವು ಕ್ಷೇತ್ರಗಳೇಕೆ
ಹಲವು ತೀರ್ಥಗಳೇಕೆ ।
ಫಲ ಸುಲಭದಲ್ಲಿರಲು ।
ಬಲವು ಇದ್ದದ್ದರೊಳು
ಪ್ರದಕ್ಷಿಣೆ ಸುಪದಜಲ ।
ತಲೆಯಲ್ಲಿ ಧರಿಸಿ ನಿತ್ಯ ।
ಮಲ ರಹಿತನು ಆಗಿ
ದಂಡ ಪ್ರಣಾಮವು ಮಾಡೆ ।
ಒಲಿವ ಕರುಣದಲಿ ಬೇಗ ।
ಜಲಜನಾಭನು ನಾಲ್ಕು
ರೂಪದಿಂದಿವರಲ್ಲಿ ।
ಸಿಲುಕಿ ಪೂಜೆಯ
ಕೊಂಬ ಸತತ ।।
ಹರಿದಾಸರಿದ್ದ ಸ್ಥಳವು
ವರ ಕಾಶಿ ಮೊದಲಾದ ।
ಕುರುಕ್ಷೇತ್ರಕಿಂತಧಿಕ ।
ಸುರ ಋಷಿ ಮುನಿಗಳು
ಇಲ್ಲಿಹರು ವೈಕುಂಠ ।
ಸರಿಮಿಗಿಲು ಎಂದೆನಿಪುದೋ ।
ಪರಮ ಸುಜ್ಞಾನಿಗಳಿಗೀ
ಫಲವು ದೊರಕುವುದು ।
ತರತಮಕೆ ಇತರ ಜನಕೆ ।
ಗುರು ಶ್ರೀಶವಿಠ್ಠಲನು
ಇವರ ರೂಪ ನಾಮದಲಿ ।
ಪರಿಪರಿಯ ವರವ
ಗರೆವಾ - ಪೊರೆವಾ ।।
ಪಾದೋದಕ ಧಾರಣೆ :-
ಎಲ್ಲಾ ತೀರ್ಥಗಳಲ್ಲಿ ಸ್ನಾನ ಮತ್ತು ಪಾನಾದಿಗಳಿಂದ ಉಂಟಾಗುವ ಪುಣ್ಯ ಫಲದ ಪ್ರಾಪ್ತಿಗೋಸ್ಕರ " ತಪೋ ಜ್ಞಾನ ಸಿದ್ಧರಾದ ಸಾಂಶ ದೇವತೆಗಳಾದ ತಮ್ಮ ( ಶ್ರೀ ರಾಯರ ) ಸನ್ನಿಧಾನಯುಕ್ತ ವೃಂದಾವನಕ್ಕೆ ಈ ( ಗುರು ಸ್ತೋತ್ರ ) ಸ್ತೋತ್ರ ಪಠಣ ಪೂರ್ವಕ ಅಭಿಷಿಕ್ತವಾದ ಉದಕವನ್ನು ಈಗಲೇ ಭಕ್ತಿಯಿಂದ ಧಾರಣೆ ಮಾಡುತ್ತೇನೆ.
ಕೃಷ್ಣಾಮೃತ ಮಹಾರ್ಣವ :-
ತೀರ್ಥ ಕೋಟಿ ಸಹಸ್ರಾಣಿ
ವ್ರತ ಕೋಟಿ ಶತಾನಿ ಚ ।
ನಾರಾಯಣ ಪ್ರಣಾಮಸ್ಯ
ಕಲಾಂ ನಾರ್ಹಂತಿ ಷೋಡಶೀಮ್ ।।
ಶ್ರೀ ಕೃಷ್ಣಾಚಾರ್ಯ ಸ್ಮೃತಿ ಮುಕ್ತಾವಲೀ...
ಮಹಾಭಾಗವತಾನಾಂ ಚ
ಪಿಬೇತ್ ಪಾದೋದಕಂ ತು ಯಃ ।
ಶಿರಸಾ ಧಾರಯೇದ್ ಭಕ್ತ್ಯಾ
ಸರ್ವಪಾಪೈ: ಪ್ರಮುಚ್ಯತೇ ।।
ಶ್ರೀ ಗುರು ಜಗನ್ನಾಥದಾಸರು....
ಪಾದೋದಕಂ ತ್ರಿಜಗತಾಂ
ಅಘರಾಶಿ ನಿಷೂದನಮ್ ।
ತತ್ಪಾದಸಲಿಲಂ ಭಕ್ತ್ಯಾ ಯೇ
ಧರಂತಿ ದಿನೇ ದಿನೇ ।
ಬ್ರಹ್ಮಹತ್ಯಾದಿಭಿ: ಪಾಪೈ:
ಮುಚ್ಯಂತೇ ತೇ ನ ಸಂಶಯಃ ।।
ನಮಸ್ಕಾರ :-
ನಾನು ನನ್ನ ಎಲ್ಲಾ ಅಭೀಷ್ಟಗಳ ಪ್ರಾಪ್ತಿಗೋಸ್ಕರ ನಿಮ್ಮನ್ನು ಕುರಿತು ಭಕ್ತಿ ಶ್ರದ್ಧೆಗಳಿಂದ ನಮಸ್ಕಾರ ಮಾಡುತ್ತೇನೆ.
ಪ್ರಮಾಣ : -
ಉರಸಾ ಶಿರಸಾ ದೃಷ್ಟ್ಯಾ
ಮನಸಾ ವಚನಾ ತಥಾ ।
ಪದ್ಭ್ಯಾ೦ ಕರಾಭ್ಯಾ೦ ಜಾನುಭ್ಯಾ೦
ಪ್ರಾಣಾಮೋsಷ್ಟಾಂಗ ಈರಿತಃ ।।
ಸಂಕೀರ್ತನೆ :-
ಚತುರ್ವೇದಗಳೂ, ಸರ್ವ ವೇದಾರ್ಥ ನಿರ್ಣಾಯಕ ಬ್ರಹ್ಮಸೂತ್ರಾದಿ ಸಚ್ಛಾಸ್ತ್ರದ ಸಮೀಚೀನ ಜ್ಞಾನದ ಸಂಪಾದನೇಚ್ಛೆಯಿಂದ ತಮ್ಮ ನಾಮ ಜಪ ಸ್ತೋತ್ರ ಪಠಣಾಡಿಗಳನ್ನು ಮಾಡುತ್ತೇನೆ!!
ಯದ್ವೃಂದಾವನ ಸಪ್ರದಕ್ಷಿಣ
ನಮಸ್ಕಾರಾಭಿಷೇಕ ಸ್ತುತಿ
ಧ್ಯಾನಾರಾಧನ ಮೃದ್ವಿಲೇಪನ
ಮುಖಾನೇಕೋಪಚಾರಾನ್ ಸದಾ ।
ಕಾರಂಕಾರಮಭಿಪ್ರಯಾಂತಿ ಚತುರೋ
ಲೋಕಾ: ಪುಮಾರ್ಥಾನ್ ಸದಾ
ಶ್ರೀಮತ್ಸದ್ಗುರುರಾಘವೇಂದ್ರ ಯತಿರಾಟ್
ಕುರ್ಯಾದ್ಧ್ರುವಂ ಮಂಗಲಮ್ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
" ಅಧಿಕಮಾಸ - 26 "
" ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಕಣ್ಣಲ್ಲಿ ಪರಮ ಪುರುಷೋತ್ತಮ ಶ್ರೀಮನ್ನಾರಾಯಣ "
ರಚನೆ : ಶ್ರೀ ಶ್ರೀನಿವಾಸಾಚಾರ್ಯರು, ಬ್ಯಾಗವಾಟ
ವಿದ್ಯಾ ಗುರುಗಳು :
ಗೀರ್ವಾಣಾಭಾಷಾ ಕೋವಿದರೂ, ಷಡ್ದರ್ಶಿನೀವಲ್ಲಭರೂ; ಶ್ರೀ ರಾಯರ ಮರಿಮೊಮ್ಮಕ್ಕಳೂ ಆದ ಶ್ರೀ ಬಲರಾಮಾಚಾರ್ಯರು ( ಶ್ರೀ ವರದೇಂದ್ರತೀರ್ಥರು )
ಅಂಕಿತ : ಶ್ರೀ ಜಗನ್ನಾಥವಿಠಲ
ಹರಿಕಥಾಮೃತಸಾರದ ವ್ಯಾಪ್ಟಿಸಂಧಿಯಲ್ಲಿ....
ಹರಿಕಥಾಮೃತಸಾರ ಗುರುಗಳ ।
ಕರುಣದಿಂದಾಪನಿತು ಪೇಳುವೆ ।
ಪರಮ ಭಗವದ್ಭಕ್ತರಾದರದಿ ಕೇಳುವುದು ।। ಪಲ್ಲವಿ ।।
ಪುರುಷ ರೂಪತ್ರಯ ಪುರಾತನ ।
ಪುರುಷ ಪುರುಷೋತ್ತಮ ಕ್ಷರಾಕ್ಷರ ।
ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ ।।
ಪುರುಷಸೂಕ್ತ ಸುಮೇಯ । ತತ್ತ ।
ತ್ಪುರುಷಹೃತ್ಪುಷ್ಕರನಿಲಯ ಮಹ ।
ಪುರುಷ ಜಾಂಡಾಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ ।। ೧ ।।
" ವಿವರಣೆ "
" ಪುರುಷ ರೂಪ ತ್ರಯ "
ಮೂರು ಪುರುಷ ರೂಪಗಳನ್ನು ಧರಿಸಿದ
" ಪುರಾತನ ಪುರುಷ "
ಜಗತ್ತಿನಲ್ಲಿ ಸೃಷ್ಟಿ ಪ್ರಾರಂಭಕ್ಕಿಂತ ಮೊದಲಿಗೆ ಇದ್ದವ
( ಆದಿ ಪುರುಷ - ಶ್ರೀ ಹರಿ )
" ಪುರುಷೋತ್ತಮ "
ಶ್ರೀ ಮಹಾಲಕ್ಷ್ಮೀ, ಶ್ರೀ ಬ್ರಹ್ಮಾದಿಗಳಿಗಿಂತ ಶ್ರೇಷ್ಠನಾದ
" ಕ್ಷರ "
ದೇಹ ನಾಶ ಹೊಂದುವ ಬ್ರಹ್ಮಾದಿ ತೃಣಾಂತ ಸರ್ವ ಜೀವರು
" ಅಕ್ಷರ "
ದೇಹ ನಾಶವಿಲ್ಲದ, ನಿತ್ಯಮುಕ್ತಳಾದ ಶ್ರೀ ಮಹಾ ಲಕ್ಷ್ಮೀದೇವಿಯು
ಪುರುಷ - ಈ ಕ್ಷರ, ಅಕ್ಷರ ಪುರುಷರಿಂದ
ಪೂಜಿತ ಪಾದ = ಪೂಜಿಸಸಲ್ಪಡುವ ಪಾದ ಕಮಲಗಳುಳ್ಳ
ಪೂರ್ಣಾನಂದ = ಪರಿಪೂರ್ಣವಾದ ಆನಂದ
ಜ್ಞಾನಮಯ = ಜ್ಞಾನಾನಂದಾತ್ಮಕವಾದ ಸ್ವರೂಪವುಳ್ಳ
ಪುರುಷಸೂಕ್ತ = ಸಕಲ ವೇದ ಸಾರಭೂತವಾದ ಪುರುಷಸೂಕ್ತದಿಂದ
ಸುಮೇಯ = ಪುರುಷ ಸೂಕ್ತದಿಂದ ಪ್ರತಿಪಾದಿತನಾದ
ತತ್ತತ್ಪುರುಷ = ಕ್ಷರಾಕ್ಷರ ಪುರುಷರೆಲ್ಲರ
ಹೃತ್ಪುಷ್ಕರ = ಹೃದಯಕಮಲವನ್ನು
ನಿಲಯ = ವಾಸವಾಗಿರುವ
ಮಹ ಪುರುಷ = ಪುರುಷೋತ್ತಮನಾದ ಶ್ರೀ ಹರಿಯಿಂದ
ಜ = ಹುಟ್ಟಿದ
ಅಂಡ = ಬ್ರಹ್ಮಾಂಡದ
ಅಂತರದಿ = ಒಳಗೂ, ಹೊರಗೂ - ಎಲ್ಲಾ ಕಡೆಗೂ
ವ್ಯಾಪ್ತ = ವ್ಯಾಪಿಸಿ ಕೊಂಡಿರುವ
" ನಿರ್ಲಿಪ್ತ "
ಚೇತನಾಚೇತನ ವಿಲಕ್ಷಣನೂ, ಅವೆಲ್ಲವುಗಳ ಸಂಬಂಧವಿಲ್ಲದಿರುವನು!!
ಪೂರ್ಣಾನಂದ - ಪೂರ್ಣಶಕ್ತಿ - ಪೂರ್ಣ ಐಶ್ವರ್ಯ - ಪೂರ್ಣ ಜ್ಞಾನ - ಪೂರ್ಣ ತೇಜಸ್ಸು - ಪೂರ್ಣ ಪ್ರಭಾ - ಈ ಷಡ್ಗುಣೈಶ್ವರ್ಯವುಳ್ಳ ಭಗವಂತನು " ಪುರುಷ " ಶಬ್ದ ವಾಚ್ಯನಾಗಿದ್ದಾನೆ.
पूर्षु शरीरेषु पुरि हृदयाख्यपत्तने
शेते अस्ति इति पुरुषः
ಪೂರ್ಷು = ಶರೀರಗಳಲ್ಲಿ
ಪುರಿ = ಜೀವರ ಪುರಿ ( ಪಟ್ಟಣದಲ್ಲಿ )
ಶೇತೇ = ವಾಸವಾಗಿರುತ್ತಾನೆ.
ಆದ್ದರಿಂದ ಶ್ರೀ ಪರಮಾತ್ಮನು " ಪುರುಷ " ನೆನಿಸುತ್ತಾನೆ.
" ಮಹಾಭಾರತ ಶಾಂತಿ ಪರ್ವ " ದಲ್ಲಿ....
नवद्वारं पुरं पुण्यं
एतैरभावै: समन्वितं |
व्याप्यशेते महात्मायः
तस्मात् पुरुष उच्यते ||
9 ಬಾಗಿಲುಳ್ಳ ಪುಣ್ಯಕರವಾದ " ದೇಹ " ವೆಂಬ ಪಟ್ಟಣದಲ್ಲಿ ಮಹಾತ್ಮನಾದ ಶ್ರೀ ಪರಮಾತ್ಮನು ವ್ಯಾಪಿಸಿರುತ್ತಾನೆ. ಈ ಕಾರಣದಿಂದ ಭಗವಂತನು ಪುರುಷನೆನಿಸುತ್ತಾನೆ.
" ಪುರುಷ ರೂಪತ್ರಯ "
विष्णोस्तु त्रीणि रूपाणि पुरुषस्य महात्मनः |
प्रथमं महतः सृष्टय द्वितीयंत्वांड संस्थितं |
तृतीयं सर्व भूतस्थं तानिज्ञात्वा विमुच्यते || इति भागवतं ||
ಮಹಾತ್ಮನಾದ ಪುರುಷ ಶಬ್ದವಾಚ್ಯನಾದ ಶ್ರೀ ಪರಮಾತ್ಮನ ಮೂರು ರೂಪಗಳು...
1. ಮಹತ್ತತ್ತ್ವವನ್ನು ಸೃಷ್ಟಿಸಿದ್ದು ಭಗವಂತನ ಮೊದಲನೆಯ ರೂಪ.
2. ಬ್ರಹ್ಮಾಂಡಾ೦ತರ್ಗತನಾದ ಭಗವಂತನ ಎರಡನೆಯ ರೂಪ.
3. ಸಮಸ್ತ ಜೀವರಾಶಿಗಳಲ್ಲಿರುವ ಭಗವಂತನ ಮೂರನೆಯ ರೂಪ.
ಶ್ರೀ ಹರಿಯು ಸ್ವತಃ ಪುರುಷ ರೂಪ
ಶ್ರೀ ರಮಾಂತರ್ಗತ ರೂಪ
ಶ್ರೀ ಬ್ರಹ್ಮಾದಿ ತೃಣಾಂತ ಜೀವರ ಅಂತರ್ಗತ ರೂಪ
ಸಾತ್ವಿಕ - ರಾಜಸ - ತಾಮಸ ತ್ರಿವಿಧ ಜೀವರಲ್ಲಿದ್ದು ಮೂರು ರೂಪನಾಗಿ ಯೋಗ್ಯತಾನುಸಾರ ಕರ್ಮಾ ಮಾಡಿಸುತ್ತಾನೆ.
ಭೂಚರ - ಖೇಚರ - ಜಲಚರಗಳಲ್ಲಿ ವಾಸವಾಗಿರುವವನು.
ಶ್ವೇತದ್ವೀಪ - ಅನಂತಾಸನ - ವೈಕುಂಠಗಳಲ್ಲಿ ವಾಸ ಮಾಡುವವನು.
ಸ್ವರ್ಗಲೋಕ - ಭೂಲೋಕ - ಪಾತಾಳ ಲೋಕಗಳಲ್ಲಿರುವವನು.
ಅಗ್ರೇಶ - ಪ್ರಾದೇಶ - ಮೂಲೇಶ ನಾಮಕನಾಗಿರುವನು.
ಸ್ತ್ರೀ - ಪುರುಷ - ನಪುಂಸಕ ದೇಹಗಳಲ್ಲಿರುವವನು.
ವಿಶ್ವ - ತೈಜಸ - ಪ್ರಾಜ್ಞ ಮೂರು ರೂಪಗಳ ಪರಮಾತ್ಮನು.
ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸನು ಪ್ರಾತಃಕಾಲದಲ್ಲಿ " ಬಾಲರೂಪ ", ಮಧ್ಯಾಹ್ನ " ಮೌವನ ರೂಪ " , ಸಾಯಂಕಾಲ " ಮುದುಕನಾಕಾರ " ದಂತೆ ಹರಿದಾಸರಿಗೆ ತೋರಿದ ಮೂರು ರೂಪಗಳು.
ब्रह्मणि ब्रह्म रूपोसौ
शिवरूपी शिवेस्थितः |
पृथगेक स्थितोदेवो-
विष्णुरूपि जनार्दनः इति ||
ಬ್ರಹ್ಮ, ವಿಷ್ಣು, ಶಿವ ಮೂರು ಮಹಾತ್ಮನಾದ ವಿಷ್ಣುರೂಪಗಳೇ ಆಗಿರುವುದರಿಂದ ಚತುರ್ಮುಖ ಬ್ರಹ್ಮನಲ್ಲಿ ಪರಬ್ರಹ್ಮರೂಪಿಯಾಗಿರುತ್ತಾನೆ.
ಶಿವನಲ್ಲಿ ಶಿವ ರೂಪಿಯಾಗಿದ್ದಾನೆ.
ನಾರಾಯಣ ಸ್ವತಃ ವಿಷ್ಣು ರೂಪದಿಂದ ಪ್ರಕಾಶಮಾನನಾಗಿದ್ದು " ಪುರುಷ ರೂಪ ತ್ರಯ " ನಾಗಿದ್ದಾನೆ.
" ಪುರಾತನ ಪುರುಷ "
भगवानेक आसीदमग्रे
आत्मात्मानं विधुः ||
इदमग्रे आसीत् न ब्रह्म
न च शंकरः ||
पुरापि भवतीति पुरातनः ||
स वै किलायां पुरुषः पुरातनोय
एक आसीद विशेष आत्मनि ||
ಸರ್ವೋತ್ತಮನಾದ ಪರಮಾತ್ಮನು ಎಲ್ಲಾ ಜೀವ ರಾಶಿಗಳಿಗೂ ನಿಯಾಮಕನಾಗಿರುವವನೂ, ಉತ್ತಮನಾಗಿರುವವನೂ ಮತ್ತು ಸೃಷ್ಟಿಗಿಂತ ಪೂರ್ವದಲ್ಲಿ ತಾನೊಬ್ಬನೇ ಇರುವವನಾಗಿದ್ದಾನೆ.
ಜಗತ್ತು ಸೃಷ್ಟಿಯಾಗುವುದಕ್ಕಿಂತಲೂ ಬ್ರಹ್ಮನಾಗಲೀ, ರುದ್ರನಾಗಲೀ ಯಾರೂ ಇರಲಿಲ್ಲ. ಆದರೆ ಶ್ರೀ ಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನೊಬ್ಬನೇ ಇದ್ದನು.
ಆದ್ದರಿಂದ ಶ್ರೀ ಹರಿಯು ಪುರಾತನನೆನಿಸಿಕೊಳ್ಳುತ್ತಾನೆ.
ಎಲ್ಲರ ಸೃಷ್ಟಿಗಿಂತಲೂ ಮೊದಲು ಇದ್ದವನಾದ್ದರಿಂದ ಶ್ರೀ ವಿಷ್ಣುವು ಪುರಾತನನೆನಿಸಿಕೊಳ್ಳುತ್ತಾನೆ.
ಜೀವರು ನಿತ್ಯರಾದ್ದರಿಂದ ಪರಮಾತ್ಮನು ಪುರಾತನನೆಂದು ಹೇಗೆ ಕರೆಯಿಸಿಕೊಳ್ಳುತ್ತಾನೆ?
ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಉತ್ತರ ರೂಪದಲ್ಲಿರುವ ಶ್ರುತಿ ವಾಕ್ಯವು....
एको नारायणः आसीत्
न द्वितीयः अवतस्ते ||
ಅನಾದಿ ಜೀವರಾಶಿಗಳಿಗೆಲ್ಲ ಶ್ರೀ ಮಹಾವಿಷ್ಣುವೋಬ್ಬನೇ ಪೂರ್ವದಲ್ಲಿದ್ದನು ಬೇರೇ ಯಾರೂ ಇರಲಿಲ್ಲ ಎಂಬ ವೇದ ವಾಕ್ಯವು ಶ್ರೀ ಮಹಾ ವಿಷ್ಣುವೊಬ್ಬನೇ " ಪುರಾತನ " ಎಂದು ಸ್ಪಷ್ಟ ಪಡಿಸುತ್ತದೆ.
" ಕ್ಷರ ಪುರುಷ ಪೂಜಿತ ಪಾದ "
ದೇಹ ನಾಶವುಳ್ಳಂತ ಬ್ರಹ್ಮಾದಿ ತೃಣಾಂತ ಜೀವಿಗಳಿಂದ ಪೂಜಿತ ಪಾದ ಎಂದಾಗುತ್ತದೆ.
ಆದರೆ " ಕ್ಷರ " ದಲ್ಲಿ....
" ದೈತ್ಯರು ವಿಷ್ಣು ದ್ವೇಷಿಗಳೂ " ಕ್ಷರ ಪುರುಷ ಪೂಜಿತ ಪಾದ ಹೇಗೆ ಹೊಂದುತ್ತದೆ ಎಂಬ ಸಂದೇಹ ಬಂದರೆ ಅದಕ್ಕೆ ಉತ್ತರ...
ದೇವರೇ ಇಲ್ಲಾ ಎನ್ನುವವರೂ;
ದೇವರೇ ನಾನು ಎನ್ನುವವರೂ;
ಜಗತ್ತು ಮಿಥ್ಯಾ ಎನ್ನುವವರೂ;
ಭಗವದ್ವೇಷಿಗಳಾದ್ದರಿಂದ ಅವರು ಭಗವಂತನನ್ನು ಪೂಜಿಸುವ ಪ್ರಸಕ್ತಿಯೇ ಇರುವುದಿಲ್ಲ.
ಆದ್ದರಿಂದ....
" ಕ್ಷರ ಪೂಜಿತ ಪಾದ " ಯೆಂದರೆ ಭಗವದ್ಭಕ್ತರಿಂದ, ಸಾತ್ವಿಕರಾದ ಜೀವರಿಂದ ಪೂಜಿಸಲ್ಪಡುವ ಪಾದ ಎಂದು ತಾತ್ಪರ್ಯ!
ಅಕ್ಷರ ಪುರುಷಳಾದ ಶ್ರೀ ಮಹಾಲಕ್ಷ್ಮೀದೇವಿಯಿಂದ ನಿತ್ಯ ನಿತಾಂತರವಾಗಿ ಪೂಜೆಗೊಳ್ಳುತ್ತಿದ್ದರಿಂದ ಕ್ಷರಾಕ್ಷರ ಪುರುಷ ಪೂಜಿತ ಪಾದ ಎಂದು ಶ್ರೀ ಜಗನ್ನಾಥದಾಸಾರ್ಯರು ಸಾರ್ಥಕವಾದ ಪದ ಪ್ರಯೋಗ ಮಾಡಿದ್ದಾರೆ.
ಜಗತ್ತಿನಲ್ಲಿ ಯಾವುದೇ ಒಂದು ವಸ್ತುವಿನಲ್ಲಿ ಇನ್ನೊಂದು ಪದಾರ್ಥವಿದ್ದರೆ ಆ ಪದಾರ್ಥದ ಲೇಪ ಆ ವಸ್ತುವಿಗೆ ಇರುತ್ತದೆ.
ಸಾಮಾನ್ಯವಾಗಿ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿದಾಗ ಆ ಹಾಲಿನ ಸಂಪರ್ಕ ಆ ಪಾತ್ರಗೆ ಉಂಟಾಗುತ್ತದೆ.
ಅಂದಮೇಲೆ ಪರಮಾತ್ಮನೂ ಕೂಡಾ ಬ್ರಹ್ಮಾಂಡದ ಒಳ ಹೊರಗೆ ವ್ಯಾಪ್ತನಾಗಿದ್ದನೆಂದ ಮೇಲೆ ಅವನ ಲೇಪ, ಆಸಕ್ತಿ, ಮಮತಾ ಸಂಪರ್ಕ ಈ ಬ್ರಹ್ಮಾಂಡದ ಜೊತೆಗೆ ಇರಬೇಕಾಗಿತ್ತು.
ಆದರೆ ಭಗವಂತನು ಆಕಾಶದಂತೆ ಅಂದರೆ ಆಕಾಶದಲ್ಲಿ ಎಲ್ಲಾ ಪದಾರ್ಥಗಳೂ ಇದ್ದರೂ ಕೂಡ ಅದಕ್ಕೆ ಯಾವ ಪದಾರ್ಥಗಳ ಲೇಪ ಇರುವುವುದಿಲ್ಲವೋ ಅದರಂತೆ ಶ್ರೀ ಮಹಾವಿಷ್ಣುವು ಕೂಡಾ ನಿರ್ಲಿಪ್ತನಾಗಿರುತ್ತಾನೆ.
ಇದು ಶಾಸ್ತ್ರ ಸಿದ್ಧ ವಿಷಯ.
ಪರಮಾತ್ಮನ ಎಲ್ಲಾ ಅವತಾರಗಳಿಗೆ ಪರಸ್ಪರ ಅಭೇದ.
ಪರಮಾತ್ಮನ ಅವಯವಗಳಿಗೂ, ಪರಮಾತ್ಮನಿಗೂ ಪರಸ್ಪರ ಅಭೇದ.
ಪರಮಾತ್ಮನು ಒಂದು ಅವಯವದಿಂದ ಇನ್ನೊಂದು ಅವಯವದಿಂದ ಮಾಡಬೇಕಾದ ಕೆಲಸವನ್ನು ಮಾಡಬಲ್ಲ ಸಮರ್ಥ!
ಅಂದರೆ....
ಪರಮಾತ್ಮನು ತನ್ನ ಕೈಯಿಂದ ಮಾಡಬೇಕಾದ ಕೆಲಸವನ್ನು ತನ್ನ ಕಣ್ಣಿನಿಂದ ಮಾಡಬಲ್ಲ.
ಕಾಲಿನಿಂದಾಗುವ ಕೆಲಸವನ್ನು ಕಿವಿಯಿಂದ ಮಾಡಬಲ್ಲ.
ಇದು ಶ್ರೀ ಹರಿಯ ಅಚಿಂತ್ಯಾದ್ಭುತ ಶಕ್ತಿಯ ದ್ಯೋತಕ.
ಸಜ್ಜನರಿಗೆ, ಭಗವದ್ಭಕ್ತರಿಗೆ, ಸಾತ್ವಿಕರಿಗೆ ಈ ವಿಷಯ ದೃಢೀಕರಣಾರ್ಥವಾಗಿ ಪರಮಾತ್ಮನು ಇದನ್ನು ತನ್ನಿಂದ ಸೃಷ್ಟವಾದ ಪ್ರಾಣಿಯಲ್ಲಿ ಈ ಶಕ್ತಿಯನ್ನಿಟ್ಟು ತೋರಿಸಿದ್ದಾನೆ.
ಉದಾಹರಣೆಗೆ...
ಸರ್ಪಕ್ಕೆ " ಚಕ್ಷುಶ್ರೋತೃ " ಎಂದು ಹೆಸರು.
ಅಂದರೆ ಸರ್ಪವು ಕಣ್ಣಿನಿಂದ ನೋಡುತ್ತದೆ ಮತ್ತು ಕೇಳುತ್ತದೆ.
ಅದರಂತೆ ಶ್ರೀ ಮಹಾವಿಷ್ಣುವು ಸರ್ವತ್ರ ವ್ಯಾಪ್ತನಾಗಿದ್ದು ನಿರ್ಲಿಪ್ತನಾಗಿರುತ್ತಾನೆ.
ಕೊಳಲೇನು ಪುಣ್ಯ ಮಾಡಿ
ರಂಗನ ಕರವನೈದಿತೇ ।। ಪಲ್ಲವಿ ।।
ಬಹಳುಗ್ರ ತಪವ ಮಾಡಿದಂಥ
ಭೋಗವಾದಿತೇ ।। ಅ ಪ ।।
ಧರಿಸಲ್ಹರಿಯು ಜಗವ
ಮೋಹಿಪ ಶಕುತಿ ಬಂದಿತೇ ।
ಸ್ಮರನ ಬಾಧೆಯು ಆತನ
ನುಡಿಗೆ ಸ್ಮರಣೆಗೈದಿತೇ ।। ಚರಣ ।।
ವಾರಿಜಾಕ್ಷನ ಮುಖರಿಗಿಂತ
ಸಾಹಸ ಬಂದಿತೇ ।
ಶ್ರೀರಮೆಯರಿಂಗೆ ಬಲವಾ-
ದಸೂಯೆ ದೊರಕಿತೇ ।। ಚರಣ ।।
ಭವನ ಸದನ ಜೀವರಿಗೆ
ಪಾದಪವಾಳೀತೇ । ಜಗನ್ನಾ ।
ತವಿಠಲನ ಮುಖರಿಗೆ
ಶಬ್ದವಿಲ್ಲದೆ ಹೋಯಿತೇ ।। ಚರಣ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
" ಅಧಿಕಮಾಸ - 27 "
" ನಾಮದ ಘನತೆ "
ರಾಗ : ಕಾಂಬೋಧಿ ತಾಳ : ಝ೦ಪೆ
ನಾಮದಾ ಘನತೆ
ನಿಮಗೆ ಸಲ್ಲೋದೇ ।
ಶ್ರೀಮಂತ ರಾಘವೇಂದ್ರ-
ಸ್ವಾಮಿ ಯೆಂತೆಂಬ ।। ಪಲ್ಲವಿ ।।
ಅಲವಬೋಧರ ಭಾಷ್ಯಾ೦-
ಬುಧಿಗೆ ಟೀಕೆಗಳೆಂಬ ।
ಲಲಿತ ಸೇತುವೆ
ಕಟ್ಟಿ ಹರಿದಾಸರ ।
ಸುಲಭದಿ೦ದೈದಿಸಿ
ದಶ ಕರಣಗಳ ಜೈಸಿ ।
ವಲಿಸಿ ಸವಿದೆ ವಿಷ್ಣು
ಜ್ಞಾನ ಪ್ರಕೃತಿಯನು ।। ಚರಣ ।।
ಹಲವು ದುರ್ಮತ
ವಾದಿಗಳೆಂಬಾದ್ರಿಗಳ । ವಾ ।
ಕ್ಕುಲಿಶದಿಂದವರ
ಪಕ್ಷವ ಛೇದಿಸಿ ।
ಅಲವಬೋಧರ ಮತ
ಅಮರಾವತಿಯಲಿ । ನಿ ।
ಶ್ಚಲ ಸಾಮ್ರಾಜ್ಯವನಾಳಿ
ಕವಿಗಳ ಪೊರೆದೆ ।। ಚರಣ ।।
ಭಾಸುರ ಸಚ್ಚಾಸ್ತ್ರ
ವದನದಿ ವೊಪ್ಪುತ ।
ಪೂಶರ ಜಯ
ಶಕ್ತಿಯನೆ ಧರಿಸಿದೆ ।
ವಾಸವಿ ಸಖ ಗುರು
ಗೋಪಾಲವಿಠಲನ ದಾಸ ।
ಶ್ರೀ ಸುಧೀಂದ್ರ ಕುಮಾರ
ಸ್ವಾಮಿ ಶ್ರೀ ರಾಘವೇಂದ್ರ ।। ಚರಣ ।।
" ವಿವರಣೆ "
ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮರತಾಯ ಚ ।
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ ।।
ಶ್ರೀ ರಾಘವೇಂದ್ರ ಯತಿ ಕುಲ ತಿಲಕರೇ! ನೀವು ಸತ್ಯವಾದ ಮಾತುಗಳನ್ನು ಯಾವಾಗಲೂ ಆಡುತ್ತಿರುವಿರಿ ಮತ್ತು ಧರ್ಮ ಕಾರ್ಯಗಳನ್ನೇ ಮಾಡುತ್ತಿರುವಿರಿ.
ಎಲ್ಲಾ ಲೋಕಗಳನ್ನೂ ಸೃಷ್ಟಿಸುವವನಾದ್ದರಿಂದ " ಸತ್ಯ " ಯೆಂಬ ಹೆಸರುಳ್ಳವನಾಗಿಯೂ; ಎಲ್ಲಾ ಲೋಕಗಳನ್ನೂ ಧರಿಸಿರುವುದರಿಂದ " ಧರ್ಮ " ಯೆಂಬ ಹೆಸರುಳ್ಳವನಾಗಿಯೂ ಇರುವ ಶ್ರೀ ನಾರಾಯಣನಲ್ಲಿ ನೀವು ಯಾವಾಗಲೂ ಆಸಕ್ತರಾಗಿರುವಿರಿ.
ಅಂದರೆ...
ಶ್ರೀ ನಾರಾಯಣನ ಸೇವೆ ಬಿಟ್ಟು ಇತರೆ ಕಾರ್ಯಗಳನ್ನು ಮಾಡುವುದಿಲ್ಲ!
ಕಾಮ್ಯ - ಅಕಾಮ್ಯವೆಂದು ಧರ್ಮವು ಎರಡು ವಿಧವಾಗಿದೆ.
1) ಫಲಾಪೇಕ್ಷೆಯಿಂದ ಮಾಡುವ ಧರ್ಮವು ಕಾಮ್ಯ ಧರ್ಮವೆನಿಸುತ್ತದೆ.
ಅದು ಮುಕ್ತಿಗೆ ಸಾಧನವಾಗಲಾರದು.
2) ಫಲಾಪೇಕ್ಷೆಯಿಲ್ಲದೆ ಶ್ರೀ ಹರಿಯ ಪ್ರೀತಿಯನ್ನು ಅಪೇಕ್ಷಿಸಿ ಮಾಡುತ್ತಿರುವ ಧರ್ಮವು ಹರಿ ಪ್ರೀತಿಯನ್ನುಟ್ಟಿಸಿ ಮುಕ್ತಿಗೆ ಸಾಧನವಾಗುತ್ತದೆ.
ಆದ್ದರಿಂದ ಅಕಾಮ್ಯ ಧರ್ಮವೇ ಉತ್ತಮವೆನಿಸುತ್ತದೆ.
ತಾವು ಸೃಷ್ಟಿಕರ್ತನಾದುದರಿಂದ " ಸತ್ಯ " ವೆಂಬ ಹೆಸರುಳ್ಳ ನಾರಾಯಣನಿಗೆ ಪ್ರಿಯವಾದ ನಿಷ್ಕಾಮ ಧರ್ಮದಲ್ಲಿ ಯಾವಾಗಲೂ ಆಸಕ್ತರಾಗಿರುವಿರಿ.
ಮೇಲ್ಕಂಡ ಈ ಮೂರು ಕಾರಣಗಳಿಂದ " ಸತ್ಯಧರ್ಮರತ " ಎಂಬ ಹೆಸರುಳ್ಳ ನಿಮ್ಮನ್ನು ಯಾವಾಗಲೂ ನಮಸ್ಕರಿಸುತ್ತೇನೆ.
ನೀವು ನನ್ನಲ್ಲಿ ಪ್ರಸನ್ನರಾಗಿ ಸತ್ಯ ಮಾತುಗಳನ್ನು ನನ್ನಿಂದ ಯಾವಾಗಲೂ ಹೇಳಿಸಿರಿ.
ನಿಷ್ಕಾಮ ಕರ್ಮಗಳನ್ನೇ ನನ್ನಿಂದ ಮಾಡಿಸಿರಿ.
ತಮ್ಮ ತಂದೆಯೂ, ನಮ್ಮನ್ನು ಪೋಷಿಸುವವನೂ ಆಗಿರುವ ಶ್ರೀ ಹರಿಯ ಪ್ರೀತಿಯು ನಮ್ಮಲ್ಲಿ ಏರ್ಪಡುವಂತೆ ಅನುಗ್ರಹಿಸಿರಿ!!
ನಾವು ಅಪೇಕ್ಷಿಸಿದ ಎಲ್ಲಾ ಇಷ್ಟಾರ್ಥಗಳನ್ನು ಕೊಡುವ ಶಕ್ತಿಯುಳ್ಳ " ಒಂದು ಮರ " ವೂ, " ಒಂದು ದನ " ವೂ ದೇವಲೋಕದಲ್ಲಿದೆ. ಆ ಮರಕ್ಕೆ " ಕಲ್ಪವೃಕ್ಷ " ವೆಂದೂ; ದನಕ್ಕೆ " ಕಾಮಧೇನು " ಯೆಂದೂ ಹೆಸರು.
ಇವೆರಡೂ ಸಮುದ್ರ ಮಥನ ಕಾಲದಲ್ಲಿ ಶ್ರೀ ಹರಿಯ ಅನುಗ್ರಹದಿಂದ ಹುಟ್ಟಿವೆ.
ನೀವು ಶ್ರೀ ಶ್ರೀನಿವಾಸನ ಪೂರ್ಣಾನುಗ್ರಹಕ್ಕೆ ಪಾತ್ರರಾಗಿರುವಿರಿ ಮತ್ತು ಎಲ್ಲರಿಗೂ ಬೇಕಾದ ಇಷ್ಟಾರ್ಥಗಳನ್ನು ನೀಡುತ್ತಿರುವಿರಿ.
ಆದ್ದರಿಂದ ನಿಮ್ಮನ್ನು ಸೇವಿಸುವವರಿಗೆ " ಕಲ್ಪವೃಕ್ಷ " ದಂತೆಯೂ; ನಮಸ್ಕರಿಸುವವರಿಗೆ " ಕಾಮಧೇನು " ವಿನಂತೆಯೂ ಎಲ್ಲಾ ಇಷ್ಟಾರ್ಥಗಳನ್ನು ಕೊಡುತ್ತಿರುವ ಮೇಲ್ಕಂಡ ಎಲ್ಲಾ ಕಾರಣಗಳಿಂದ ಪೂಜ್ಯರಾದ ನಿಮ್ಮನ್ನು ಭಕ್ತಿಯಿಂದ ಸೇವಿಸುವೆನು ಮತ್ತು ನಮಸ್ಕರಿಸುವೆನು.
ಎಲ್ಲಾ ಇಷ್ಟಾರ್ಥಗಳನ್ನೂ ಕೊಡಿರಿ.
ಮುಕ್ತಿಯನ್ನು ಶ್ರೀ ಹಾರ್ರಿಯಿಂದ ಕೊಡಿಸಿರಿ.
ಪ್ರಮಾಣ :
" ಅಪೇಕ್ಷಿತ ಪ್ರದಾತಾನ್ಯೋ
ರಾಘವೇಂದ್ರಾನ್ನ ವಿದ್ಯತೇ "
" ವಿಷ್ಣುರ್ಹಿದಾತಾ ಮೋಕ್ಷಸ್ಯ
ವಾಯುಶ್ಚ ತದನುಜ್ಞಯಾ "
" ಭಜತಾಂ "
ಪದವನ್ನು ಕ್ರಿಯಾ ಪದವೆಂದು ತಿಳಿದು...
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ
ರಾಘವೇಂದ್ರಾಯ ಭಕ್ತಜನ: ಭಜತಾಂ ।
ಯೆಂದು ಅನ್ವಯ ಮಾಡಿಕೊಳ್ಳಬೇಕು.
ಪೂಜ್ಯರೂ - ಸತ್ಯಧರ್ಮರತರೂ - ನಮಸ್ಕರಿಸುವವರಿಗೆ ಕಲ್ಪವೃಕ್ಷ ಮತ್ತು ಕಾಮಧೇನುವಿನಂತೆಯೂ ಇರುವ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ನಮಗೆ ಎಲ್ಲಾ ವಿಷಯಗಳಲ್ಲಿಯೂ ಅನುಕೂಲವಾಗುವುದಕ್ಕಾಗಿ ನನ್ನಂಥಹ ಭಕ್ತರೆಲ್ಲರೂ ಅವರನ್ನು ಸೇವಿಸಲಿ!!
ಈ ಸ್ತೋತ್ರದ ಕೊನೆಗೆ ಸರ್ವರಿಗೂ ಸ್ಮಪಟು - ಜ್ಞಾನ ಮುಂತಾದ ಎಲ್ಲಾ ಇಷ್ಟಾರ್ಥಗಳನ್ನೂ ಕೊಡುವ ಶಕ್ತಿಯುಳ್ಳ " ಕಾಮಧೇನು " ವಿನ ಹೆಸರು ಹೇಳಲ್ಪಟ್ಟಿದೆ.
ಆದ್ದರಿಂದ ಈ ಸ್ತೋತ್ರವನ್ನು ಪಠಿಸುವವರಿಗೆ ಶ್ರೀ ಲಕ್ಷ್ಮೀ ನಾರಾಯಣನ ಅನುಗ್ರಹದಿಂದ ಲಭ್ಯವಾದ ಮುಕ್ತ್ಯಾದಿ ಸಕಲ ಪುರುಷಾರ್ಥಗಳೂ; ಶ್ರೀ ಮಹಾಲಕ್ಷ್ಮೀ ದೇವಿಯರ ಅನುಗ್ರಹದಿಂದ ಲಭ್ಯವಾದ ಸಂಪತ್ತುಗಳೂ ಶ್ರೀಮದಾಚಾರ್ಯರಿಂದ ಆರಂಭಿಸಿ ನಮ್ಮ ಗುರುಗಳ ( ಶ್ರೀರಾಯರ ) ವರೆಗಿರುವ ಎಲ್ಲಾ ಗುರುಗಳ ಅನುಗ್ರಹದಿಂದ ಲಭ್ಯವಾದ, ಮೋಕ್ಷ ಸಾಧನವಾದ ಜ್ಞಾನವೂ ಸಿಗುವುದರಲ್ಲಿ ಸಂಶಯವಿಲ್ಲ!!!
ಈ ಶ್ಲೋಕವು ಶ್ರೀ ರಾಘವೇಂದ್ರ ಸ್ತೋತ್ರದ ಸಾರ ಸಂಗ್ರಹ ಅಥವಾ ವ್ಯಾಖ್ಯಾನ ರೂಪವಾಗಿದೆ. ಆದ್ದರಿಂದ ಈ ಶ್ಲೋಕವನ್ನು ಪಠಿಸಿದರೆ ಶ್ರೀ ರಾಘವೇಂದ್ರ ಸ್ತೋತ್ರವನ್ನು ಒಮ್ಮೆ ಪಠಿಸಿದ ಫಲ ಬರುತ್ತದೆ.
ಶ್ರೀ ಗೋಪಾಲದಾಸರು...
" ರಾ " ಯೆನ್ನೆ ರಾಶಿ ದೋಷಗಳ ದಹಿಸುವ
" ಘ " ಯೆನ್ನೆ ಘನ ಜ್ಞಾನ ಭಕುತಿಯನೀವ
" ವೇಂ " ಯೆನ್ನೆ ವೇಗದಿ ಜನನ ಮರಣ ದೂರ
" ದ್ರ " ಯೆನ್ನೆ ದ್ರವಿಣಾರ್ಥ ಶ್ರುತಿಪಾದ್ಯನಕಾಂಬಾ ।।
ಅಘ೦ ದ್ರಾವಯತೇ ಯಸ್ಮಾದ್
ವೇಂಕಾರೋ ವಾಂಛಿತ ಪ್ರದಃ ।
ರಾಘವೇಂದ್ರಯತಿಸ್ತಸ್ಮಾ
ಲೋಕೇ ಖ್ಯಾತೋ ಭವಿಷ್ಯತಿ ।।
ಅಭೀಷ್ಟಪ್ರದವಾದ ವೇಂಕಾರವು ಪಾಪವನ್ನು ದೂರ ಮಾಡುತ್ತದೆ.
" ರಾಘವೇಂದ್ರ " ಯೆಂಬ ಹೆಸರಿನಲ್ಲಿ " ವೇಂ " ಕಾರವಿರುವುದರಿಂದ ರಾಘವೇಂದ್ರ ಯತಿಗಳು ಪಾಪ ಪರಿಹಾರಕರೂ, ಇಷ್ಟಪ್ರದರೂ ಆಗಿ ಲೋಕದಲ್ಲಿ ಪ್ರಸಿದ್ಧರಾಗುವರು ಎಂದು ಪುರಾಣೋಕ್ತಿ!!
ಶ್ರೀ ರಘುನಾಥವಿಠಲರು...
ರಾಗ : ಬೇಹಾಗ್ ತಾಳ : ಆದಿ
ದರುಶನವೆ ಘನ ।। ಪಲ್ಲವಿ ।।
ದರುಶನವೆ ಘನ
ದುರಿತವನ ದಹನ ।
ಗುರುರಾಘವೇಂದ್ರರ ।
ಚರಣ ಸೇವಕರ । ಸಂ ।। ಅ ಪ ।।
ಪರಮ ಭಕುತಿ । ಪು ।
ರಸ್ಸರದೋಳಿವರ । ಪಾದ ।
ಸರಸಿಜ ಧೂಳಿಯ ।
ಧರಿಸಿದವರ । ಸಂ ।। ಚರಣ ।।
ಭ್ರಮರದಂತೆ ಪದ ।
ಕಮಲದಿ ಸರ್ವದ ।
ವಿಮಲ ಮನವಿರುವ ।
ಸುಮಹಾತ್ಮರ । ಸಂ ।। ಚರಣ ।।
ಶ್ರೀ ರಘುನಾಥ । ವಿಠ ।
ಲಾರಾಧಕ । ಗುರು ।
ಸಾರ್ವಭೌಮರ ಪದ ।
ಸಾರಿ ಭಜಿಪರ । ಸಂ ।। ಚರಣ ।।
****
" ಅಧಿಕಮಾಸ - 28 "
" पादुका महिमा "
" ಶ್ರೀ ರಾಯರ ಪಾದುಕಾ ಮಹಿಮೆ "
यत्पाद कंज रजसा परिभूषितांग
यत्पाद पद्म मधुपायित मानसा ये ।
यत्पाद पद्म परिकीर्तन जीर्ण वाचः
तद्दर्शनं दुरित कानन दावभूतम ॥ ९ ॥
ಯತ್ಪಾದ ಕಂಜ ರಾಜಸಾ ಪರಿಭೂಷಿತಾಂಗ
ಯತ್ಪಾದ ಪದ್ಮ ಮಧುಪಾಯಿತ ಮಾನಸಾ ಯೇ ।
ಯತ್ಪಾದ ಪದ್ಮ ಪರಿಕೀರ್ತನ ಜೀರ್ಣ ವಾಚ:
ತದ್ದರ್ಶನ೦ ದುರಿತ ಕಾನನ ದಾವಭೂತಮ್ ।। ೯ ।।
ಶ್ರೀ ಗುರುಸಾರ್ವಭೌಮರ ಸಂದರ್ಶನವು ಭಕ್ತರ ಪಾಪ ನಾಶಕವೆಂಬುದನ್ನು ಕೈಮುತ್ಯ ನ್ಯಾಯದಿಂದ ಶ್ರೀ ಅಪ್ಪಣ್ಣಾಚಾರ್ಯರು ವರ್ಣಿಸುತ್ತಾರೆ.
ಯಾರು, ಯಾವ ಶ್ರೀ ರಾಘವೇಂದ್ರತೀರ್ಥರ ಪಾದ ಕಮಲಗಳ ಧೂಳಿನಿಂದ ಅಲಂಕರಿಸಲ್ಪಟ್ಟ ಅವಯವಗಳುಳ್ಳವರೋ; ಯಾವ ಗುರುಗಳ ಪಾದ ಕಮಲಗಳಲ್ಲಿ ದುಂಬಿಯಂತೆ ಮನಸ್ಸುಳ್ಳವರೋ; ಯಾವ ಗುರುಗಳ ಪಾದಾರವಿಂದಗಳ ಸಂತತ ಸ್ತೋತ್ರ ಮಾಡುವುದರಿಂದ ಪರಿಪಕ್ವವಾದ ಮಾತುಗಳುಳ್ಳವರೋ; ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಭಕ್ತರ ದರ್ಶನವು ಪಾಪಗಳೆಂಬ ಅರಣ್ಯಕ್ಕೆ ಕಾಡ್ಗಿಚ್ಚಿನಂತೆ ಇರುವುದು!
ಶ್ರೀ ರಾಯರ ಭಕ್ತರ ದರ್ಶನವೇ ಪಾಪ ನಾಶಕವೆಂದಾದ ಮೇಲೆ ಶ್ರೀ ಕ್ಷೇತ್ರ ಮಂತ್ರಾಲಯದ ಮೂಲ ವೃಂದಾವನದಲ್ಲಿ ಸಶರೀರರಾಗಿ ವಿರಾಜಮಾನರಾಗಿ ಭಕ್ತರ ಕಲ್ಪವೃಕ್ಷ ಕಾಮಧೇನುವಾದ ಶ್ರೀ ಶ್ರೀ ಗುರುರಾಜ ಗುರುಸಾರ್ವಭೌಮರ ದರ್ಶನವು ಹಾಗೂ ಅವರ ಪೂರ್ಣ ಸನ್ನಿಧಾನ ಉಳ್ಳ ಮೂಲ ಮೃತ್ತಿಕಾ ವೃಂದಾವನದ ಮೂಲಕ ದರ್ಶನವು ಪಾಪ ಪರಿಹಾರಕವೆಂಬುದು ಕೈಮುತ್ಯ ನ್ಯಾಯದಿಂದ ಸಿದ್ಧಿಸಿತು!!
ಜ್ಞಾನಿಗಳ, ಮಹಾ ಭಾಗವತರ ಪಾದ ಧೂಳಿಯನ್ನು ಸರ್ವಾಂಗಗಳಲ್ಲಿ ಧರಿಸಬೇಕೆಂದು ಶ್ರೀಮದ್ಭಾಗವತ ಮಹಾ ಪುರಾಣವು ಹೇಳುತ್ತಿದೆ...
नैषां मतिस्तावदुरुक्रमान्घ्रि
स्पृशत्यनर्थापगमो यदुत्थ: ।
महीयसां पादरजोभिषेकं
निष्किंचनानां न वृणीत यावत् ॥ ( ७-५-३२ )
श्री कृष्णावधूतरु।।
महापद्विनाशाय ते पादरेणु: ।
ಶ್ರೀ ಆಹ್ಲಾದಾಂಶ ಗುರುಜಗನ್ನಾಥದಾಸರು...
ನಿನ್ನ ಕಥೆಗಳ ಶ್ರವಣ ಮಾಡಿಸೋ ।
ನಿನ್ನ ಗುಣ ಕೀರ್ತನೆಯ ಮಾಡಿಸೋ ।
ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪಾದಸೇವಾ ।।
ನಿನ್ನ ಅರ್ಚನೆಗೈಸೋ ಗುರುವರ ।
ನಿನ್ನ ವಂದನೆಗೈಸೋ ಹಾಸ್ಯವ ।
ನಿನ್ನ ಗೆಳೆತನ ನೀಡೋ ಯತಿವರ ನಿನಗರ್ಪಿಸುವೆ ।।
ಯೆಂದು ಬೇಡುತ್ತಾ...
ಸರಸ ಗುರುಗಳ ಪಾದ ಧೂಳಿಯ
ಸ್ಪರ್ಶ ಮಾತ್ರದಲಿ ।
ಪರಮ ಪಾಮರನಾದ ನರನೂ ।
ಹರನ ತೆರದಲಿ ಜ್ಞಾನವೈಯ್ದವ ।
ದುರಿತ ರಾಶಿಯ ದೂರ ಮಾಡುವ
ದುರಿತ ವನ ದಾವ ।।
ಯೆಂದು ಶ್ರೀ ರಾಯರ ಪಾದ ಧೂಳಿಯ ಸ್ಪರ್ಶದಿಂದ, ಶ್ರೀ ಗುರುರಾಯರ ಕೃಪಾ ದೃಷ್ಟಿ ತಮ್ಮ ಮೇಲಾಗಿ ತಮ್ಮ ಸಕಲ ಪಾಪ ಪರಿಹಾರವಾಗಿದೆ ಎಂದು ಹೇಳುತ್ತಾ...
ಶ್ರೀ ರಾಯರ ಮಾತು ಮಾತುಗಳಲ್ಲಿಯೂ ಪರಮಾತ್ಮನ ಸರ್ವೋತ್ತಮತ್ವ ಪ್ರತಿಪಾದನೆಯಿದೆ.
ಶ್ರೀ ರಾಯರ ಗ್ರಂಥಗಳಲ್ಲಿ ಭಗವಂತನ ಪಾದ ಸಂಕೀರ್ತನೆ ಮಾಡಿರುವರು.
ಇಂಥಾ ಶ್ರೀ ರಾಯರು ಭಗವಂತನ ಪಾದ ಸೇವೆ, ಸದಾ ಭಗವಂತನ ಸ್ಮರಣೆ, ಭಗವಂತನ ನಿರಂತರ ಕೀರ್ತನೆ ಇವುಗಳನ್ನು ಮಾಡಿದ್ದರಿಂದ ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾದವರು.
ಶ್ರೀ ಗುರು ಜಗನ್ನಾಥದಾಸರು...
ಏನು ಚೋದ್ಯವೋ
ಕಲಿಯ ಯುಗದಲಿ ।
ಏನು ಈತನ ಪುಣ್ಯ ಬಲವೋ ।
ಏನು ಈತನ ವಶದಿ ಶ್ರೀ
ಹರಿ ತಾನೆ ನಿಂತಿಹನೋ ।।
ಯೆಂದು ಹೇಳಿರುವುದು ಮಾರ್ಮಿಕವಾಗಿದೆ.
ಇದೇ ವಿಷಯವನ್ನು ಪುನಃ " ಶ್ರೀ ರಾಘವೇಂದ್ರ ಮಹಾತ್ಮ್ಯೇ " ಶ್ರೀ ಗುರು ಜಗನ್ನಾಥದಾಸರು...
तद्दर्शनं पापकांतार पावकं ॥
ರಾಗ : ತೋಡಿ ತಾಳ : ಝ೦ಪೆ
ಪಾದುಕದ ಮಹಿಮೆಯನು
ಪಂಡಿತರು ಕೇಳಿ ।
ಆದರದಿ ಸಾಷ್ಟಾಂಗ ಅವನ-
ಮ್ಯಾಲಿಟ್ಟು ಬಾಳಿ ।। ಪಲ್ಲವಿ ।।
ಸ್ವಾದೆ ಪುರದಲ್ಲಿ ಬಹಳ
ಸೊಗಸು ಐಶ್ವರ್ಯದಿಹ ।
ವಾದಿವಂದ್ಯರ ಸಂಕೇತ
ವನದಿ ಜನಿಸೀ ।
ಮೋದದಿ ಪೀಠಗಳಾಗಿ
ಮುಖ್ಯ ಮಧ್ಯ ರಾಷ್ಟ್ರದಲಿ ।
ಭೂದೇವ ರಾಘವೇಂದ್ರ
ಭೂಪರಡಿಯಲಿ ಮ್ಯರದ ।। ಚರಣ ।।
ಹರಿ ಗುರುಗಳನುಗ್ರಹ
ಹವಣದಲಿ ಪಡವದಕೆ ।
ಸಿರಿಗಂಧವಾಗಿ
ಶ್ರೀ ರಾಮನ । ಚರಣ ।
ಕರ್ಪಿತವಾಗಿ
ಚೆನ್ನಾಗಿ ತಾನ್ವೊಹಿಸಿ ।
ಪರಮಹಂಸರ ಸೇರಿ
ಪಾವನವಾಗುವೆಂದು ಬಂದೆ ।। ಚರಣ ।।
ಚೆಲುವ ಪೀಠ ಚಿತ್ರಾಸನದಿ
ಚೆನ್ನಾಗಿ ಕುಳ್ಳಿರಿಸಿ ।
ಅಲಂಕಾರ ಸುವರ್ಣ
ಪುಷ್ಪಾಕ್ಷತೆ ಅರ್ಪಿಸೀ ।
ಸಲೆ ಧೂಪ ದೀಪ
ನೈವೇದ್ಯವನು ಮಾಡಿ ।
ಬಲು ಆರ್ತಿಯೆತ್ತ ನಮಿಸೆ
ಬ್ಯಡಗಿನಭೀಷ್ಟಗಳ ನೀವಾ ।। ಚರಣ ।।
" ಪಾ " ಎಂದು ಉಚ್ಛರಿಸೆ
ಪಾತಕ ಸಮೂಹ ವದ್ದು ।
" ದು " ಎಂಬ ಶಬ್ದ
ಕೇಳಿ ದೂರೊಡುವವೋ ।
" ಕಾ " ಎಂದು ಸ್ಮರಿಸಲು
ಕಾಮಿಸಿದಭೀಷ್ಟಗಳ ।
ಪ್ರೀಯದೈಶ್ಚರ್ಯ ಬಾಹುದು
ಪಿರಿಯ ರಾಘವೇಂದ್ರರ ಶ್ರೀ ।। ಚರಣ ।।
ಧೀರ ಶೇಷಗಿರಿಯಧೀಶ
ಶ್ರೀ ವೆಂಕಟ ನಡಿಯ ।
ಚಾರುತನದಿ ಪೊತ್ತು ನಲಿವ
ಛಂದುಳ್ಳ ಪಾದುಕೆ ।
ಶೂರ ರಾಘವೇಂದ್ರ ಶಿರಸ
ಸುಖದೊಹಿಸಿ ಮ್ಯರಿಯಲು ।
ತಾರತಮ್ಯದವರ ಪಾದವನೆ
ಪೊತ್ತು ಸುಕೃತೆಂಬೋ ।। ಚರಣ ।।
" ಪಾದುಕಾ "
ಎಂಬ ಪದದಲ್ಲಿನ ವರ್ಣಗಳ ಉಚ್ಛಾರ ಮಾತ್ರದಿಂದ ಶ್ರೀ ರಾಯರ ಭಕ್ತ ಜನರಿಗೆ ಬರುವ ಶುಭ ಫಲಗಳು ಈ ಪದದಲ್ಲಿ ಅಡಗಿದೆ.
ಆದ್ದರಿಂದ ಅಪರೋಕ್ಷ ಜ್ಞಾನಿಗಳ ಮಾತಿನಂತೆ ಸಜ್ಜನರೆಲ್ಲರೂ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪಾದುಕಾ ಸ್ಮರಣೆ ಮಾಡಿ ಅವರ ಪರಮಾನುಗ್ರಹಕ್ಕೆ ಪಾತ್ರರಾಗೋಣ...
********
ಅಧಿಕಮಾಸ - 29 " :
" ಭಕ್ತರ ದಾರಿದೀಪ - ಶ್ರೀ ಮಂತ್ರಾಲಯ ಪ್ರಭುಗಳು "
" श्री मनोहर विट्ठल कृत श्री अणु राघवेन्द्र विजय "
" ಶ್ರೀ ಮನೋಹರವಿಠಲ ಕೃತ ಶ್ರೀ ಅಣು ರಾಘವೇಂದ್ರ ವಿಜಯ "
ಶ್ರೀ ಪೂರ್ಣಪ್ರಜ್ಞತೀರ್ಥರ
ದಯಾಪಾಂಗದಿ೦ ।
ತಾಪತ್ರಯಂ ಗೆಲ್ದು
ತುರ್ಯಾಶ್ರಮಂ ತಾಳ್ದು ।
ಶಾಪ ವರಗಳನೀವ
ಶಕ್ತಿಯಂ ಪಡೆದು
ವರಯೋಗ ಮಾರ್ಗವನೇ ಪಿಡಿದು ।।
ಕಾಪಾಡಿ ಬುಧ ಜನರ
ಸಿದ್ಧಾಂತ ಶಾಸ್ತ್ರಗಳ ।
ಸ್ಥಾಪಿಸುತ ದುರ್ಮಾಯಿಗಳ
ಮುರಿದು ಮೌನಿಕುಲ ।
ದೀಪ ಸದ್ಗುಣ ಸಾಂದ್ರ
ಹರಿ ಮತಾಂಬುಧಿ ಚಂದ್ರ
ಪಾಹಿ ಗುರು ರಾಘವೇಂದ್ರ ।।
ವಿಶ್ವ ಗುರುಗಳಾದ ಶ್ರೀಮದಾನಂದತೀರ್ಥರ ಪೂರ್ಣ ದಯೆಗೆ ಪಾತ್ರರಾಗಿದ್ದು; ಸಂಸಾರದಲ್ಲಿ ಇದ್ದರೂ ಪದ್ಮ ಪತ್ರದಂತೆ ಅಸಂಗರಾಗಿ ತಾಪತ್ರಯಗಳನ್ನು ಗೆದ್ದು, ಶ್ರೀ ಭಾರತೀದೇವಿಯರ ಅನುಗ್ರಹ ಆದೇಶದಂತೆ ಯತ್ಯಾಶ್ರಮವನ್ನು ಸ್ವೀಕರಿಸಿ, ಶಾಪಾನುಗ್ರಹಗಳನ್ನು ಕೊಡುವ ಶಕ್ತಿಯನ್ನು ಅಭಿವ್ಯಕ್ತ ಮಾಡಿ ಶ್ರೇಷ್ಠವಾದ ಭಕ್ತಿ ಯೋಗವೆಂಬ ಮಾರ್ಗವನ್ನು ಪಿಡಿದು, ಜ್ಞಾನಿಗಳನ್ನು ತಮ್ಮ ಉಪದೇಶಾಮೃತದಿಂದ ಕಾಪಾಡಿ, ದುರ್ಮಾಯಿಗಳನ್ನು ಮುರಿದು ಮಧ್ವ ಸಿದ್ದಾಂತ ಸಂಸ್ಥಾಪಿಸುತ್ತಾ ಸರ್ವಜ್ಞ ಕಲ್ಪರಾದ ಶ್ರೀಮಜ್ಜಯತೀರ್ಥರ ವಿರಚಿತ ಸಮಗ್ರ ಟೀಕಾ ಗ್ರಂಥಗಳನ್ನು ಟಿಪ್ಪಣಿಗಳನ್ನು ರಚಿಸುವ ಮೂಲಕ ಮನನ ಶೀಲರಾದ ಎಲ್ಲ ಮಧ್ವ ಮತಾವಲಂಬಿಗಳಿಗೆ " ದಾರಿದೀಪ " ರಾಗಿ ಭಕ್ತ್ಯಾದಿ ಸದ್ಗುಣಗಳಿಂದ ಸಮುದ್ರದಂತಿರುವ, ಶ್ರೀಮಧ್ವ ಮತವೆಂಬ ದುಗ್ದಾಬ್ಧಿಗೆ ಪೂರ್ಣಚಂದ್ರನಂತೆ, ಶ್ರೀ ಹರಿ ಸರ್ವೋತ್ತಮತ್ವಾದಿ ಪ್ರಮೇಯಗಳನ್ನು ವಿಶೇಷವಾಗಿ ಸುಜೀವಿಗಳಿಗೆ ಉಪದೇಶ ಮಾಡಿದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಅವರ ಪಾದ ಭಜಕರಾದ ನಮ್ಮನ್ನೂ ಎಲ್ಲಾ ವಿದದಿಂದಲೂ ರಕ್ಷಿಸಲಿ!!
ಶ್ರೀ ವಾದೀಂದ್ರತೀರ್ಥರು...
ವ್ಯಾಸೇನ ವ್ಯುಪ್ತಬೀಜ: ಶ್ರುತಿಭುವಿ ಭಗವತ್ಪಾದಲಬ್ದಾಂಕುರಶ್ರೀ:
ಪ್ರತ್ನೈರೀಷತ್ಪ್ರಭಿನ್ನೋsಜನಿ ಜಯಮುನಿನಾ ಸಮ್ಯಗುದ್ಭಿನ್ನಶಾಖ: ।
ಮೌನೀಶ ವ್ಯಾಸರಾಜಾ ದುದಿತಕಿಸಲಯಃ ಪುಷ್ಠಿತೋಯಂ ಜಯೀ೦ದ್ರಾ-
ದದ್ಯ ಶ್ರೀ ರಾಘವೇಂದ್ರ ದ್ವಿಲಸತಿ ಫಲಿತೋ ಮಧ್ವ ಸಿದ್ಧಾಂತ ಶಾಖೀ ।। ೩೭ ।।
ಶ್ರೀ ಮಧ್ವ ಸಿದ್ಧಾಂತ ವೃಕ್ಷಕ್ಕೆ ಶ್ರೀ ಬಾದರಾಯಣರು ವೇದ ಭೂಮಿಯಲ್ಲಿ " ಬ್ರಹ್ಮಸೂತ್ರ " ಗಳೆಂಬ ಬೀಜ ಬಿತ್ತಿದರು.
ಅದು ಸರ್ವಮೂಲ ನಿರ್ಮಾತೃಗಳಾದ ಸರ್ವಜ್ಞಾಚಾರ್ಯರಿಂದ ಮೊಳಕೆ ಕಂಡಿತು.
ಪದ್ಮನಾಭತೀರ್ಥರೇ ಮೊದಲಾದವರಿಂದ ಸ್ವಲ್ಪ ಮೇಲೆ ಬಂದಿತು.
ಜಯತೀರ್ಥರಿಂದ ಶಾಖೆಗಳು ಬೆಳೆದವು.
ವ್ಯಾಸರಾಜರಿಂದ ಗೆಲ್ಲಿನಲ್ಲಿ ಚಿಗುರು ಮೂಡಿತು.
ವಿಜಯೀ೦ದ್ರರಿಂದ ಹೂ ಬಿಟ್ಟಿತು.
ಇಂದು ರಾಘವೇಂದ್ರತೀರ್ಥರಿಂದ ಫಲಭರಿತವಾಗಿ ಶೋಭಿಸುತ್ತಿದೆ
ಈ ಮಧ್ವ ಸಿದ್ಧಾಂತ ಶಾಖೆ!!
ಇಂದೂ - ಮುಂದೂ ನನ್ನಂಥಾ ಪಾಮರನಿಂದ ಮೊದಲ್ಗೊಂಡು ಶ್ರೇಷ್ಠ ಪಂಡಿತ, ವಿದ್ವಾಂಸರಿಗೂ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೇ " ದಾರಿದೀಪ " ವಾಗಿದ್ದರೆ.
ಆದ್ದರಿಂದ ಎಲ್ಲರೂ ಶ್ರೀ ರಾಯರು ತೋರಿದ ಸನ್ಮಾರ್ಗದಲ್ಲಿ ನಡೆದು ಶ್ರೀ ಹರಿ ವಾಯು ಗುರುರಾಜರ ಪರಮಾನುಗ್ರಹಕ್ಕೆ ಪಾತ್ರರಾಗೋಣ...
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
end
*****
No comments:
Post a Comment