Sunday 23 May 2021

lakshmipati vittala dasa 1858 kampli ಲಕ್ಷ್ಮೀಪತಿ ವಿಠ್ಠಲರು ದಾಸರು

LAKSHMIPATI VITTALA DASA

1760-1858

Lakshmipathi Vittala

Kampli

***

" ಶ್ರೀ ಲಕ್ಷ್ಮೀಪತಿ ವಿಠ್ಠಲರ ಕಣ್ಣಲ್ಲಿ ಶ್ರೀ ಗುರು ರಾಘವೇಂದ್ರರು " 

ರಚನೆ : 

ಶ್ರೀ ಹನುಮದ್ದಾಸರು 

ಅಂಕಿತ : 

ಶ್ರೀ ಲಕ್ಷ್ಮೀಪತಿ ವಿಠ್ಠಲ 

ಅಂಕಿತ ಗುರುಗಳು : 

ಶ್ರೀ ಗುರು ಶ್ರೀಶ ವಿಠ್ಠಲರು 

ರಾಗ : ಶಂಕರಾಭರಣ ತಾಳ : ಅಟ್ಟ 

ಈತನೇ ಗುರುರಾಘವೇಂದ್ರಾ 

ಖ್ಯಾತ ಕಾಣಿರೋ ।

 ವಾತಮತ ದುಗ್ಧಾಬ್ಧಿ ಚಂದ್ರ 

ಸುಖಾತಿಯಶಗಳ ನೀವ ನಿರುತ ।। ಪಲ್ಲವಿ ।। 

ಹಿಂದೆ ಹೇಮಕಶ್ಯಪನ ಸುತನೆಂದು 

ಕರಸಲು ಓಂ ನಮಃ ಶಿವ ।

ಯೆಂದು ಬರೆಯಲು ಹೇಳಲಾ 

ಪಿತನು ನಾರೇಯಣನೆ ಪರ ।

ನೆಂದು ಬರೆಯಲು ರೋಷದಲಿ 

ಖಳನು ತೋರೆಲವೋ ಸ್ತಂಭದಿ ।।

ಯಿಂದು ನಿನ್ನನು ಕಾವ 

ದೇವರನೂ ಯೆಂದೆನ್ನಲವನೂ ।

ಇಂದಿರೇಶನ ದ್ವಂದ್ವ ರೂಪವ 

ಅಂದು ತೋರಿದ ಮಹಿಮನೊ ।। ಚರಣ ।। 

ವ್ಯಾಸ ಮುನಿಯಾಗವತರಿಸಿ । ಜೀ ।

ವೇಶರೊಂದೆಂತೆ೦ಬ ಮಾಯಿಗಳ । ಕು ।

ಭಾಷ್ಯಗಳಿಗೆಲ್ಲಾ ತಾ ಕೆಡಿಸೀ ಸರ್ವಜ್ಞ ।

ಶಾಸ್ತ್ರವ ಲೇಶಿನಲಿ ಸಜ್ಜನಕೆ । ಬೋ ।

ಧಿಸಿ ದುರ್ವಾದಿಗಳ । ಸ ।

ಚ್ಛಾಸ್ತ್ರವೆಂಬಸಿಯಲ್ಲಿ 

ಖಂಡ್ರಿಸಿ ಹರಿ ಪ್ರೀತಿ ಗೊಳಸೀ ।

ಕೇಶವನೆ ಪರನೆಂದು ಸಾರುತ ।

ದಾಶರಥಿ ನಿಜ ದಾಸ್ಯ ಪಡೆದ ।। ಚರಣ ।। 

ವರಹದಂಷ್ಟ್ರಜಯಳ । ಸುತೀರದ ।

ಲಿರುವ ಮಂತ್ರಾಲಯ ಸ್ಥಳದೀ ।

ವರ ಸುವೃಂದಾವನದಿ ರಾಜಿಸುತಾ ।

ಭೂಸುರರು ಮಾಡುವ ।

ಪರಮ ಆರಾಧನೆಯ ಕೈಕೊಳುತಾ ।।

ತ್ರಿವಿಧರ್ಗೆತಕ್ಕ ।

ವರಗಳನುದಿನದಲ್ಲಿ ನೀಡುತ್ತಾ ।

ಜಗದೊಳು ಪುನೀತಾ ।

ಗುರು ಸುಧೀಂದ್ರ ಸು ತೀರಥರ ಸಿರಿ ।

 ಕರ ಕಮಲ ಸಂಜಾತಾ ಪ್ರೀತಾ ।। ಚರಣ ।। 

ಮೆರೆವ ದ್ವಾದಶ ಮುದ್ರೆಯು ।

ಕರದಿ ದಂಡ ಕಮಂಡಲವು । ಶ್ರೀ ।

ತರುಳ ತುಲಸೀ ಸರವು ಕೊರಳಲ್ಲಿ ।

ಶ್ರೀ ಹರಿಯ ಧ್ಯಾನವು ।

ನಿರುತ ಮಾಡುವ ತನ್ನ ಮನದಲ್ಲಿ ।।

ಸುಕ್ಷೇತ್ರ ತೀರ್ಥಕೆ ।

ಸರಿಮಿಗಿಲು ಯೆನಿಸುತ್ತಲಿಹ್ಯದಿಲ್ಲಿ ।

ಇವರಂಘ್ರಿಯಲ್ಲಿ ।

ನಿರುತ ಸೇವೆಯ ಮಾಳ್ಪ ಜನರಿಗೆ ।

ಸುಖಗಳನೆ ಕೊಡುವಲ್ಲಿ ।। ಚರಣ ।। 

ಚತುರ ಫಲಗಳನು ಕೊಡುತಾ ।

ಯತಿ ಶಿರೋಮಣಿ ನಾಮದಲಿ । ಶ್ರೀ ।

ಪತಿಯು ತಾನೇ ಚಕ್ರ ರೂಪದಲೀ ।

ಇವರಲ್ಲಿ ನಿಂತೂ ।

ಕಟಿಯ ನಡೆಸುವ ಸರ್ವ ಕಾಲದಲೀ ।।

ಈ ಮಹಿಮೆಯನುನಾ ।

ತುತಿಸ ಬಲ್ಲೆನೆ ಅಲ್ಪ-

ಮತಿಯಲ್ಲೀ ಸದ್ಭಕ್ತಿಯಲ್ಲೀ ।

ತುತಿಸುವರ ಪಾಲಿಸುವ । ಲಕ್ಷ್ಮೀ ।

ಪತಿ ವಿಠ್ಠಲ ಸತ್ಕರುಣದಲ್ಲೀ ।। ಚರಣ ।। 

ಪ್ರಮಾಣ : 

ಶ್ರೀ ನೃಸಿಂಹ ಪುರಾಣದನ್ವಯ... 

ಶಂಖುಕರ್ಣಾsದೇವಸ್ತು 

ಬ್ರಹ್ಮಶಾಪಾಶ್ಚ ಭೂತಲೇ ।

ಪ್ರಹ್ಲಾದ ಇತಿ ವಿಖ್ಯಾತೋ 

ಭೂಭಾರ ಕ್ಷಪಣೇ ರತಃ ।।

ಸ ಏವ ರಾಘವೇಂದ್ರಾಖ್ಯ 

ಯತಿ ರೂಪೇಣ ಸರ್ವದಾ ।

ಕಲೌಯುಗೇ ರಾಮ ಸೇವಾ 

ಕುರ್ವನ್ಮ೦ತ್ರಾಲಯೇ ಭವೇತ್ ।। 

ಶ್ರೀ ಪ್ರಹ್ಲಾದರಾಜರು 

( ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರರು ) 

14ನೇ ಕಕ್ಷೆಗೆ ಸೇರಿದ ಶ್ರೀ ನಾರದ ಮಹರ್ಷಿಗಳ ಶಿಷ್ಯರಾದ್ದರಿಂದ 15ನೇ ಕಕ್ಷೆಯಲ್ಲಿ ಬರುವ ಅಷ್ಟ ವಸುಗಳಲ್ಲಿ " ಅಗ್ನಿ " ಎಂಬ ವಸುವು, ಭೃಗು ಮಹರ್ಷಿಯು, ದಕ್ಷ ಪ್ರಜೇಶ್ವರನ ಪತ್ನಿಯಾದ ಪ್ರಸೂತಿಯು ಈ ಮೂರು ಮಂದಿಯೂ ಸಮಾನರು. 

ಶ್ರೀ ನಾರದ ಮಹರ್ಷಿಗಳಿಗಿಂತ ಸ್ವಲ್ಪ ಅಧಮರು ಮತ್ತು ವರುಣನಿಗಿಂತ 1/4 ಗುಣ ಅಧಮರು. 

ಅನಂತರ ಶ್ರೀ ಪ್ರಹ್ಲಾದರಾಜರು ಶ್ರೀ ಭೃಗು ಮಹರ್ಷಿಗಳಿಗಿಂತ ಸ್ಪಲ್ಪ ಅಧಮರು. 

ಸತ್ಯ ಲೋಕಾಧಿಪತಿಯಾದ ಶ್ರೀ ಬ್ರಹ್ಮದೇವರ ಸೇವಕರೂ; ಸತ್ಯನಾಮಕನೂ; ಸ್ವಾಮಿಯೂ ಆದ ಶ್ರೀಮನ್ನಾರಾಯಣನ ಕಿಂಕರರಾದ; ಶ್ರೀ ಬ್ರಹ್ಮದೇವರ ಶಾಪವೆಂಬ ( ಗುಣ ) ವರದಿಂದ ಕಂಗೊಳಿಸುತ್ತಿರುವ; ಮೂಲರೂಪದ ಶ್ರೀ ಶಂಖುಕರ್ಣರೇ! 

ನೀವು ಶ್ರೀ ಹರಿಯ ಸಂಕಲ್ಪದಂತೆ ನಾಲ್ಕು ಅವತಾರಗಳನ್ನುಯೆತ್ತಿ ಶ್ರೀ ಹರಿಯ ಸೇವೆ, ಲೋಕ ಕಲ್ಯಾಣಗಳನ್ನು ನೆರವೇರಿಸಿ ಕೀರ್ತಿ ಗಳಿಸಿದ್ದೀರಿ! 

ನೀವು ಶ್ರೀ ಪ್ರಹ್ಲಾದರಾಜ ರೂಪದಿಂದ ಶ್ರೀ ಲಕ್ಷ್ಮೀನೃಸಿಂಹನನ್ನು ಪೂಜಿಸಿ ಅವನ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ. 

ಮತ್ತೆ ದ್ವಾಪರದಲ್ಲಿ " ಪ್ರಹ್ಲಾದ " ಯೆಂದರೆ ಆನಂದಯುಕ್ತರಾದ ಶ್ರೀ ಬಾಹ್ಲೀಕರಾಜರ ರೂಪದಿಂದ ಶ್ರೀ ರುಕ್ಮಿಣೀ ಪತಿಯಾದ ಶ್ರೀ ಕೃಷ್ಣನನ್ನು ಚೆನ್ನಾಗಿ ಸೇವಿಸಿದ್ದೀರಿ. 

ಮುಂದೆ, ಯದುಕುಲ ಲಲಾಮನಾದ ಶ್ರೀ ಮೂಲ ಗೋಪಾಲ ಕೃಷ್ಣನನ್ನು ಆರಾಧಿಸಿದ್ದೀರಿ.

 " ವ್ಯಾಸಾರ್ಯ " ಯೆಂದರೆ......

ಶ್ರೀ ವೇದವ್ಯಾಸದೇವರೇ ಆರ್ಯ ( ಪೂಜ್ಯ ) ರಾಗಿವುಳ್ಳ ಶ್ರೀ ರಾಘವೇಂದ್ರತೀರ್ಥರೇ ನೀವು ಶ್ರೀಮನ್ಮೂಲ ರಘುಪತಿ ವೇದವ್ಯಾಸದೇವರನ್ನು ಚೆನ್ನಾಗಿ ಸಂತೋಷ ಪಡಿಸಿದ್ದೀರಿ. 

" ವ್ಯಾಸಾರ್ಯ " ಯೆಂದರೆ....

ಶ್ರೀ ಮೂಲರಾಮ - ಶ್ರೀ ದಿಗ್ವಿಜಯರಾಮ, ಶ್ರೀ ವೇದವ್ಯಾಸದೇವರೇ ಉಪಾಸ್ಯ ಮೂರ್ತಿಯಾಗುಳ್ಳ; ಆಶ್ರಮ ಜ್ಯೇಷ್ಠರಾದ ಶ್ರೀ ಯಾದವೇಂದ್ರತೀರ್ಥರನ್ನು ಶ್ರೀ ರಾಘವೇಂದ್ರ ರೂಪದಿಂದ ಚೆನ್ನಾಗಿ ಗೌರವಿಸಿದ್ದೀರಿಯೆಂದು ಅರ್ಥ. 

ಶ್ರೀ ಶಂಖುಕರ್ಣರೆಂಬ ದೇವತೆಯು ನಾಲ್ಕು ಅವತರಗಳನ್ನೆತ್ತಿ ಶ್ರೀ ಹರಿಭಕ್ತಿ, ಭಾಗವತ ಧರ್ಮ, ಸಜ್ಜನೋದ್ಧಾರ, ತತ್ತ್ವ ಪ್ರಸಾರಗಳನ್ನು ನೆರವೇರಿಸಿ ಲೋಕ ವಿಖ್ಯಾತರಾದರೆಂದೂ; ಆ ಶ್ರೀ ಶಂಖುಕರ್ಣರ ನಾಲ್ಕು ಅವತಾರಗಳೇ ಕ್ರಮವಾಗಿ ಕೃತಯುಗದಲ್ಲಿ ಶ್ರೀ ಪ್ರಹ್ಲಾದರಾಜರಾಗಿಯೂ; ದ್ವಾಪರದಲ್ಲಿ ಶ್ರೀ ಬಾಹ್ಲೀಕರಾಜರಾಗಿಯೂ; ಈ ಕಲಿಯುಗದಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರಾಗಿಯೂ ಮತ್ತೆ ನಾಲ್ಕನೆಯ ಮತ್ತು ಕೊನೆಯ ಅವತಾರವಾಗಿ ಶ್ರೀ ರಾಘವೇಂದ್ರ ತೀರ್ಥರ ರೂಪದಲ್ಲಿ ಬಂದು ಶ್ರೀ ದ್ವೈತ ಮತದ ಕೀರ್ತಿ ಪತಾಕೆಯನ್ನು ಹಾರಿಸಿ ತುಂಗಭದ್ರಾ ನದೀ ತೀರದಲ್ಲಿ ಮಂತ್ರಸಿದ್ಧಿ ಕ್ಷೇತ್ರವೆಂದು ಜಗದ್ವಿಖ್ಯಾತವಾದ ಶ್ರೀ ಕ್ಷೇತ್ರ ಮಂತ್ರಾಲಯದ ವೃಂದಾವನದಲ್ಲಿ ಸಶರೀರರಾಗಿ ವಿರಾಜಮಾನರಾಗಿ ತಮ್ಮನ್ನು ನಂಬಿ ಬಂದ ಭಕ್ತ ಜನರ ಮನೋಭೀಷ್ಟಗಳನ್ನು ಪೂರೈಸುತ್ತಾ ಚತುರ್ವಿಧ ಪುರುಷಾರ್ಥಗಳನ್ನು ಕೊಡುವ ಕಲಿಯುಗದ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರಾಗಿದ್ದಾರೆಂದು ಶ್ರೀ ಲಕ್ಷ್ಮೀಪತಿವಿಠ್ಠಲರು ( ಶ್ರೀ ಹನುಮದ್ದಾಸರು ) ಖಚಿತ ಪಡಿಸಿದ್ದಾರೆ. 

ಇದುವೇ ಶ್ರೀ ಮಂತ್ರಾಲಯ ಪ್ರಭುಗಳ ವೈಭವ!!! 

" ಪ್ರಮಾಣಗಳು... " 

" ಶ್ರೀ ಪ್ರಹ್ಲಾದರಾಜರು " 

ಸೂತ್ರಭಾಷ್ಯದನ್ವಯ... 

ದೇವಾಃ ಶಾಪ ಬಲದೇವ 

ಪ್ರಹ್ಲಾದಾದಿತ್ವಮಾಗತಃ ।

ದೇವಾಃ ಶಾಪಾಭಿಭೂತತ್ವಾತ್ 

ಪ್ರಹ್ಲಾದಾದ್ಯ ಬಭೂವಿರೇ ।। 

ಸ್ಕಾಂದಪುರಾಣದ ವಚನದಂತೆ.. 

ಋತೇತು ತಾತ್ವಿರ್ಕಾದೇವಾ-

ನ್ನಾರದಾದೀನಥೈವ ಚ ।

ಪ್ರಹ್ಲಾದಾದುತ್ತಮಃ ಕೋನು 

ವಿಷ್ಣುಭಕ್ತೌ ಜಗತ್ತ್ರಯೇ ।। 

" ಶ್ರೀ ಬಾಹ್ಲೀಕರಾಜರು.... " 

ಶ್ರೀಮದಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯ 11 - 8 ದನ್ವಯ.. 

ಬಾಹ್ಲೀಕೋರಾಜ ಸತ್ತಮಃ 

ಹಿರಣ್ಯಕಶಿಪೋ ಪುತ್ರಃ ।

ಪ್ರಹ್ಲಾದೋ ಭಗವತ್ಪ್ರಿಯಃ 

ವಾಯೂನಾ ಚ ಸಮಾವಿಷ್ಟಃ ।। 

ಶ್ರೀರಮಾಪತಿ ವಿಠ್ಠಲರು.. 

ಈತನೇ ಪ್ರಹ್ಲಾದನು ಆಹ್ಲಾದ-

ಕರನು ಶೂರ ಬಾಹ್ಲೀಕನೆನಿಸಿದ ।। 

" ಶ್ರೀ ವ್ಯಾಸರಾಜ ಗುರುಸಾರ್ವಭೌಮರು " 

ಶ್ರೀ ಪ್ರಹ್ಲಾದರಾಜರೇ ಶ್ರೀ ವ್ಯಾಸರಾಜರೆಂದು ಶ್ರೀ ವಿಜಯೀಂದ್ರತೀರ್ಥರು " ಶ್ರೀ ವ್ಯಾಸರಾಜ ಸ್ತೋತ್ರ " ದಲ್ಲಿ ಸ್ಪಷ್ಟ ಪಡಿಸಿದ್ದಾರೆ. 

ಪ್ರಹ್ಲಾದಸ್ಯಾsವತಾರೋಸಾ-

ವೀಂದ್ರಾಸ್ಯಾನುಪ್ರವೇಶನಾತ್ ।

ತೇನೆ ತತ್ಸೇವಿನಾಂ ನೃಣಾಂ 

ಸರ್ವಮೇತದ್ಭವೇಧ್ರುವಮ್ ।। 

ಶ್ರೀ ಶ್ರೀದವಿಠ್ಥಲರು.. 

ಕನಕ ಕಶಿಪು ತನಯ ಘನ ಅಂಶದಿ ।

ಫಣಿಗಣ ರಮಣಾವೇಶದಿ ಪೊಳೆಯುತ ।

ದಿನ ದಿನದಲಿ ಹರಿಮನ ತಣಿಸುತಲಿಹ ।

ಘನ ಮಹಿಮನೆ ಶ್ರೀ ಯತಿಕುಲ ತಿಲಕಾ । 

" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು " 

" ಶ್ರೀ ಗೋಪಾಲದಾಸರು " 

ಪ್ರಥಮ ಪ್ರಹ್ಲಾದ ವ್ಯಾಸ 

ಮುನಿಯೇ ಯತಿ ರಾಘವೇಂದ್ರ ।। 

" ಶ್ರೀ ಮೊದಲಕಲ್ಲು ಶೇಷದಾಸರು " 

ಪ್ರಖ್ಯಾತವಾದ ನ್ಯಾಯಾಮೃತ ವನ್ನು ।

ತರ್ಕತಾಂಡವ ಚಂದ್ರಿಕೆ ಪರಿಮಳ ಮೊದಲಾದ ।

ಮಿಕ್ಕಾದ ಗ್ರಂಥವೆಂತೆಂಬ ವ್ರಜ್ರದಲಿ ।। 

ಶ್ರೀ ಶ್ಯಾಮಸುಂದರದಾಸರು... 

ವರ ಪ್ರಹ್ಲಾದನೋ 

ಮರಳಿ ಬಾಹ್ಲೀಕನೋ ।

ಗುರು ವ್ಯಾಸರಾಯನೋ 

ಪರಿಮಳಾಚಾರ್ಯನೋ ।। 

by ಆಚಾರ್ಯ ನಾಗರಾಜು ಹಾವೇರಿ

    ಗುರು ವಿಜಯ ಪ್ರತಿಷ್ಠಾನ

******

 

No comments:

Post a Comment