Saturday, 1 May 2021

Ambabai 1943 ಅಂಬಾಬಾಯಿ

 Ambabai

Ankita Gopala krishna vittala

ದಾಸರ ಹೆಸರು        : ಅಂಬಾಬಾಯಿ

ಜನ್ಮ ಸ್ಥಳ                 : ಚಿತ್ರದುರ್ಗ

ತಂದೆ ಹೆಸರು         : ಭೀಮಸೇನರಾಯರು

ತಾಯಿ ಹೆಸರು         : ಭಾರತೀ ಬಾಯಿ

ಕಾಲ                     : 1902 - 1943

ಅಂಕಿತನಾಮ         : ಗೋಪಾಲ ಕೃಷ್ಣವಿಠಲ

ಲಭ್ಯ ಕೀರ್ತನೆಗಳ ಸಂಖ್ಯೆ : 300

ಗುರುವಿನ ಹೆಸರು          : ತಂದೆ ಮುದ್ದು ಮೋಹನ ದಾಸರು, ದೇವರಾಯನ ದುರ್ಗ

ಆಶ್ರಯ                 : ಅಣ್ಣ

ಪೂರ್ವಾಶ್ರಮದ ಹೆಸರು : ಶ್ರೀಮತಿ ಅಂಬಾಬಾಯಿ

ಇತರ ಲಭ್ಯ ಕೈತಿಗಳು      : ತತ್ವಸಾರಾಮೃತ, ಭಗವತಸಾರೋದ್ಧಾರಕಾವ್ಯ, ಚಾಮುಂಡಿಸ್ತುತಿ ರಾಮ ಕಥಾಮೃತ ಕಾವ್ಯ - ಇತ್ಯಾದಿ 17 ದೀರ್ಘಕೃತಿಗಳು.

ಪತಿ: ಪತ್ನಿಯ ಹೆಸರು : ಹನುಮಂತಾಚಾರ್ಯ

ಒಡಹುಟ್ಟಿದವರು         : ಅಣ್ಣ : ಶ್ರೀ ನಿ. ಕೃಷ್ಣರಾಯರು, ತಂಗಿ : ಶ್ರೀಮತಿ ಸೀತಾಬಾು

ವೃತ್ತಿ                     : ಹರಿದಾಸ ವೃತ್ತಿ

ಕಾಲವಾದ ಸ್ಥಳ, ದಿನ : 1943

ಕೃತಿಯ ವೈಶಿಷ್ಟ್ಯ       : ಶುದ್ಧಭಾಷೆ, ಲಯe್ಞನ, ವಿವಿಧ ಛಂದೋರೂಪಗಳ ಪರಿಚಯ ಭಾರತ, ಭಾಗವತ, ಪುರಾಣಗಳ ಆದ್ಯರ್ಯದಿಂದ ಪಡೆದುಕೊಂಡ ಪುರಾಣಪ್ರಜ್ಞೆ ನಿರೂಪಣಾಚಾತುರ್ಯ - ಇವುಗಳಿಂದ ಅಂಬಾಬಾಯಿ ಅವರ ಕೃತಿಗಳು ಗಮನಸೆಳೆಯುತ್ತವೆ.

****

info from kannadasiri.in

by ಡಾ. ಅನಂತಪದ್ಮನಾಭರಾವ್.

ಜಗನ್ನಾಥದಾಸರ ಅನಂತರ ಗೋಪಾಲದಾಸ, ಮೋಹನದಾಸ, ಪಂಗನಾಮದ ತಿಮ್ಮಣ್ಣದಾಸ, ಇವರ ಶಿಷ್ಯಪ್ರಶಿಷ್ಯರ ಮೂಲಕ ಮುಂದುವರೆದ ದಾಸಕೂಟದ ಚಟುವಟಿಕೆಗಳು 19 ಮತ್ತು 20ನೆಯ ಶತಮಾನಗಳಲ್ಲಿ ಹಳೆಯ ಮೈಸೂರು ಪ್ರಾಂತ್ಯದಲ್ಲಿಯೂ ನೆಲೆಯನ್ನು ಕಂಡುಕೊಂಡಿತು. ಜಯೇಶವಿಠಲರು, ಗುರುರಾಮವಿಠಲರು, ಮುದ್ದುಮೋಹನದಾಸರು, ತಂದೆ ಮುದ್ದುಮೋಹನದಾಸರು ಇವರ ಮೂಲಕ ದಾಸಕೂಟದ ಚಟುವಟಿಕೆಗಳು ವಿಸ್ತಾರಗೊಂಡವು. ಅದರಲ್ಲೂ ತಂದೆ ಮುದ್ದುಮೋಹನದಾಸರು ಸಾವಿರಕ್ಕೂ ಹೆಚ್ಚು ಮಂದಿ ಶಿಷ್ಯರಿಗೆ ಅಂಕಿತಗಳನ್ನು ನೀಡಿ ಅವರೆಲ್ಲರನ್ನು ದಾಸಮಾರ್ಗದಲ್ಲಿ ಪ್ರವೃತ್ತರಾಗುವಂತೆ ಪ್ರೇರೇಪಿಸಿದರು.

ತಂದೆ ಮುದ್ದುಮೋಹನದಾಸರಿಂದ ಅಂಕಿತ ಪಡೆದವರೆಲ್ಲರೂ ಕೀರ್ತನೆಗಳನ್ನು ರಚಿಸದಿದ್ದರೂ, ಹರಿದಾಸರು ಹಾಕಿಕೊಟ್ಟ ಹಾದಿಯಲ್ಲಿ ಭಕ್ತಿಪಂಥವನ್ನು ಬೆಳೆಸಿದರು. ಕೆಲವರು ಕೀರ್ತನೆ, ಸುಳಾದಿ, ಉಗಾಭೋಗ, ಖಂಡಕಾವ್ಯಗಳು ಇತ್ಯಾದಿಗಳ ರಚನೆಯ ಮೂಲಕ ಹರಿದಾಸ ಪರಂಪರೆಯನ್ನು ಮುಂದುವರೆಸಿದರು. ಬಾಗೇಪಲ್ಲಿ ಶೇಷದಾಸರು, ರಮಾಕಾಂತವಿಠಲರು, ರಂಗೇಶವಿಠಲರು, ನಿತ್ಯಾನಂದವಿಠಲರು, ಉರಗಾದ್ರಿವಿಠಲರು, ಗುರುಗೋವಿಂದ-ವಿಠಲದಾಸರು ಮೊದಲಾದವರು ಕೀರ್ತನೆ ಮಾಧ್ಯಮದಲ್ಲಿ ಭಕ್ತಿ ಸಾಹಿತ್ಯವನ್ನು ರಚಿಸಿ ದಾಸಕೂಟವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಬೆಂಗಳೂರು, ದೇವರಾಯನದುರ್ಗ, ಚಿತ್ರದುರ್ಗ ಈ ಪ್ರಾಂತ್ಯಗಳಲ್ಲಿ ದಾಸಕೂಟಗಳು ಮರುಹುಟ್ಟು ಪಡೆದವು.

ತಂದೆ ಮುದ್ದುಮೋಹನದಾಸರಿಂದ ಅಂಕಿತ ಪಡೆದವರಲ್ಲಿ ಹಲವಾರು ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ ಕೆಲವರಾದರೂ ಹರಿದಾಸ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಕೃತಿಗಳನ್ನು ರಚಿಸಿರಬೇಕು. ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆಯನ್ನು ಸವಿೂಕ್ಷಿಸುವಾಗ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಇವರಂತೆಯೇ ಗಮನಿಸಬೇಕಾದ ದಾಸ ಸಾಹಿತ್ಯದ ಮತ್ತೊಂದು ಮೇರು ಪ್ರತಿಭೆ ಶ್ರೀಮತಿ ಅಂಬಾಬಾಯಿಯವರು. ತಂದೆ ಮುದ್ದುಮೋಹನದಾಸರ ಶಿಷ್ಯೆಯಾದ ಇವರು ರಚಿಸಿರುವ ಕೀರ್ತನ ಸಾಹಿತ್ಯ ಗಾತ್ರದಲ್ಲೂ, ಪಾತ್ರದಲ್ಲೂ ಮೌಲಿಕವಾಗಿದ್ದು, ಮಹಿಳಾ ಸಾಹಿತ್ಯದಲ್ಲಿ ಉಲ್ಲೇಖನೀಯವಾಗಿದೆ.

ಅಂಬಾಬಾಯಿಯವರ ಜನ್ಮಸ್ಥಳ ಚಿತ್ರದುರ್ಗ. ಅವರು, ಅನಂತಪದ್ಮನಾಭ ಕಥಾಸಾರ, ಎಂಬ ಹಾಡಿನಲ್ಲಿ `ಧರೆಯೊಳಗೆ ಪುಟ್ಟಿ ಮುವ್ವತ್ತಾರು ಸಂವತ್ಸರವು ಸರಿದುದೀ ಬಹುಧಾನ್ಯಕೆ' ಎಂದು ತಿಳಿಸಿ 36 ವರ್ಷಗಳ ನೆನಪಿನಲ್ಲಿ 36 ಪದ್ಯಗಳನ್ನು ಬರೆದಿರುವುದಾಗಿ ತಿಳಿಸಿದ್ದಾರೆ. ಹೀಗೆಯೇ ಬಹುಧಾನ್ಯ ಸಂವತ್ಸರದ ವಿಜಯದಾಸರ ಆರಾಧನೆಯ ದಿನಕ್ಕೆ ತಮಗೆ 36 ವರ್ಷಗಳು ಸರಿದುವೆಂದು ಹೇಳಿದ್ದಾರೆ. ಇದರಿಂದ ಅವರ ಜನ್ಮದಿನ ಶೋಭನಕೃತು ಸಂವತ್ಸರದ ಕಾರ್ತೀಕ ಶುದ್ಧ ದಶಮಿ (1902) ಎಂದು ಖಚಿತವಾಗಿ ಹೇಳಬಹುದು.

ಅಂಬಾಬಾಯಿಯವರ ತಂದೆ ಭೀಮಸೇನರಾಯರು, ತಾಯಿ ಭಾರತೀಬಾಯಿ (ವೆಂಕಮ್ಮ). ಆ ಕಾಲದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಪ್ರೋತ್ಸಾಹವಿರಲಿಲ್ಲ. ಆದರೂ ತಮ್ಮ ಅತಿ ಬುದ್ಧಿವಂತ ಮಗಳನ್ನು ಭೀಮಸೇನರಾಯರು ಶಾಲೆಗೆ ಸೇರಿಸಿದರು. ಮೂರು, ನಾಲ್ಕನೆಯ ತರಗತಿಯವರೆಗೂ ಓದಿಸಿದರು. ಕಾಲಸ್ಥಿತಿಯಂತೆ ಬಾಲ್ಯ ವಿವಾಹದ ಅಲಿಖಿತ ನಿಯಮವನ್ನು ವಿೂರಲಾಗದೆ ಆಕೆಗೆ 10 ವರ್ಷಕ್ಕೆ ಮದುವೆ ಮಾಡಿದರು. ಗೋಪಾಲಪುರದ ಹನುಮಂತಾಚಾರ್ಯ ಎಂಬ ಬಾಲಕನೊಂದಿಗೆ ವಿವಾಹವಾಯಿತು. ವಿವಾಹದೊಂದಿಗೆ ವಿದ್ಯಾಭ್ಯಾಸವು ಸಮಾಪ್ತವಾಯಿತು. 12ನೆಯ ವಯಸ್ಸಿನಲ್ಲಿ ಗಂಡನ ಮನೆಗೆ ಹೋದ ಅಂಬಾಬಾಯಿಯ ಬದುಕು ಅಷ್ಟೇನೂ ಸುಗಮವಾಗಿರಲಿಲ್ಲ. ಊರ ಮಾರಿಯಾಗಿ ಬಂದ ಪ್ಲೇಗಿನ ಉಪಟಳದಿಂದ ಆಕೆ ಒಂದೇ ದಿನ ಗಂಡನನ್ನೂ ತಂದೆಯನ್ನೂ ಕಳೆದುಕೊಂಡಳು. ಆಡುವ ವಯಸ್ಸಿನಲ್ಲೇ ಸಂಕಷ್ಟಗಳ ಸರಮಾಲೆ ಪ್ರಾರಂಭವಾಯಿತು. ಗಂಡನ ಮನೆಯವರು ಸಾಕಷ್ಟು ಉಳ್ಳವರೇ ಆದರೂ ಆ ಪುಟ್ಟ ವಿಧವೆಗೆ ಕೇಶಮಂಡನವನ್ನು ಮಾಡಿ ತವರಿಗೆ ಅಟ್ಟಿದರು. ಬೇರೆ ಯಾವ ಆಸ್ತಿಯೂ ದೊರೆಯಲಿಲ್ಲ. ಅಂಬಾಬಾಯಿ ಅಕ್ಷರಶಃ ಅನಾಥೆಯಾದರು. ಒಂದು ಹೊತ್ತಿನ ಹಿಡಿಕೂಳಿಗಾಗಿ ತಮ್ಮನ ಮನೆ ಮತ್ತು ತಂಗಿಯ ಮನೆಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಬಂತು. ತಮ್ಮನ ಮನೆ ತುಂಬು ಸಂಸಾರದ್ದು. ತಾಯಿ, ಅಜ್ಜಿ ಇಬ್ಬರೂ ಮಡಿ ಹೆಂಗಸರು. ಇವರಿಬ್ಬರ ಜೊತೆಗೆ ಮತ್ತೊಬ್ಬ ಬಾಲ ವಿಧವೆ. ಆರು ತಿಂಗಳು ತಮ್ಮನ ಮನೆಯಲ್ಲಿ ಕಳೆದ ಅಂಬಾಬಾಯಿ, ಅನಂತರ ತಂಗಿ ಸೀತಾಬಾಯಿಗೆ ಸಹಾಯ ಮಾಡಲು ತಂಗಿಯ ಮನೆಗೆ ಬಂದು ಸೇರಿದರು. ತಂಗಿಯ ಮನೆ, ತಮ್ಮನ ಮನೆಗಳಲ್ಲಿ ಹದಿನಾರು ವರ್ಷ ಬದುಕನ್ನು ಸವೆಸಿದರು. ಮನೆಗೆಲಸ, ಮಕ್ಕಳ ಆರೈಕೆ, ಇವುಗಳ ಜೊತೆಯಲ್ಲೇ ಧಾರ್ಮಿಕ ಪ್ರವೃತ್ತಿಯನ್ನು ಬೆಳೆಸಿಕೊಂಡರು. ಪೂಜೆ, ವ್ರತ, ಉಪವಾಸ, ಪಾರಯಣ, ಅಧ್ಯಯನ ಇವುಗಳಿಂದ ಕಷ್ಟಗಳನ್ನು ಮರೆಯುವ ಪ್ರವೃತ್ತಿಯನ್ನು ಬೆಳೆಸಿಕೊಂಡರು. ಕುಸಿಯುವ ಪರಿಸ್ಥಿತಿಯಲ್ಲಿದ್ದ ಆಕೆಗೆ ಈ ಧಾರ್ಮಿಕ ಪ್ರವೃತ್ತಿ ಕುಸಿಯದ ಮನಸ್ಥಿತಿಯನ್ನು ತಂದುಕೊಟ್ಟಿತು. ಇದೇ ಸಂದರ್ಭದಲ್ಲಿ ತಂದೆ ಮುದ್ದುಮೋಹನದಾಸರಿಂದ ಅಂಬಾಬಾಯಿಯವರು `ಗೋಪಾಲಕೃಷ್ಣವಿಠಲ' ಎಂಬ ಅಂಕಿತವನ್ನು ಪಡೆದು ಹರಿದಾಸರಾದರು. ಹೀಗೆ ಅಂಕಿತ ಪಡೆದದ್ದು ಪ್ರಜೋತ್ಪತ್ತಿ ಸಂವತ್ಸರದ ಚೈತ್ರಶುದ್ಧ ಶ್ರೀರಾಮನವಮಿ (1931) ಶನಿವಾರದಂದು.

ಅಂಬಾಬಾಯಿಯವರ ಕುಂಟುಂಬವರ್ಗದವರೆಲ್ಲ ಅಂಕಿತವನ್ನು ಸ್ವೀಕರಿಸಿದ ಹರಿದಾಸರೇ ಆಗಿದ್ದರು. ಅಜ್ಜಿ ಸೀತಾಪತಿವಿಠಲ, ತಾಯಿ ಯಾದವೇಂದ್ರವಿಠಲ, ತಮ್ಮ ರಮಾಕಾಂತವಿಠಲ, ತಮ್ಮನ ಪತ್ನಿ ಸುರೇಶವಿಠಲ, ತಂಗಿ ಪರಮಾನಂದವಿಠಲ, ತಂಗಿಯ ಗಂಡ ನಿತ್ಯಾನಂದವಿಠಲ, ಹೀಗೆ ಹರಿದಾಸ ಕುಟುಂಬದಲ್ಲೇ ಬೆಳೆದ ಅಂಬಾಬಾಯಿಯವರಿಗೆ ಅಂಕಿತ ದೊರೆತ ಮೇಲೆ ಅವರ ಬದುಕಿನ ರೀತಿ ನೀತಿಗಳೇ ಬದಲಾಯಿತು. ಗುರುಗಳ e್ಞÁನಬೋಧೆಯನ್ನು ನಿರಂತರವಾಗಿ ಕೇಳುತ್ತ `ಮನದ ಶೋಕಾಗ್ನಿ ಶಾಂತವಾಯಿತು.' `ಕನಸಿನ ಮನಸಿನ ಕಳವಳ ದೂರವಾಯಿತು.' `ಸಕಲ ಶಾಸ್ತ್ರಗಳನ್ನು ಶೋಧಿಸಿ ಅಕಳಂಕ ತತ್ವವ ಸಾಧಿಸಿ ಮುಕುತಿ ಯೋಗ್ಯರಿಗೆಲ್ಲ ಅಂಕಿತಗಳನ್ನು ನೀಡಿ, ಮಲಿನ ಮನವನ್ನು ತಿದ್ದುವ ಸುe್ಞÁನಿಗಳಾದ' ಗುರುಗಳಿಂದ ಅಂಕಿತ ಪಡೆದ ಮೇಲೆ ಪೂರ್ಣಾವಧಿ ಹರಿದಾಸರೆ ಆದರು. ಲೋಕದ ದೃಷ್ಟಿಯಲ್ಲಿ ನಾವು ಯಾವುದು ಸುಖವೆಂದು ಕರೆಯುತ್ತೇವೆಯೊ ಅದರಿಂದ ಪೂರ್ಣ ವಂಚಿತಳಾದ ಈಕೆಗೆ `ತಾನೊಬ್ಬ ಮಂದಭಾಗ್ಯೆ' ಎಂಬ ಕೊರಗು ಇತ್ತು. ಕರ್ಮದಲ್ಲಿ ಶ್ರದ್ಧೆ, ಧರ್ಮದಲ್ಲಿ ಬುದ್ಧಿ, ನಿರ್ಮಲ e್ಞÁನ-ಇವುಗಳ ಬಗ್ಗೆ ಚಿಂತಿಸುವ ಪರಿಸ್ಥಿತಿಯೇ ಇರಲಿಲ್ಲ. ಅಂಕಿತ ಪಡೆದ ಮೇಲೆ `ದೇಹ ಮೋಹ' ದೂರವಾಯಿತು. `ಭೋಗದಲ್ಲಿ ವೈರಾಗ್ಯ' ಮೂಡಿತು. `ಇಂದು ನಾಳೆಗೆ ಎಂಬ ಮಂದ ಬುದ್ಧಿಯನ್ನು ಬಿಟ್ಟು, ಬಂದದ್ದರಿಂದ ಆನಂದಿಸುತ್ತ, ಮಂದಭಾಗ್ಯರ ಮಾತುಗಳನ್ನು ಲೆಕ್ಕಿಸದೆ, ತಂದೆ ಮುದ್ದು ಮೋಹನದಾಸರ ಪದದ್ವಂದ್ವಗಳನ್ನು ಭಜಿಸುತ್ತ' ಬದುಕನ್ನು ಕಳೆದರು. ಹರಿದಾಸರಿಗೆ ಉಚಿತವಾದ ಧರ್ಮಕರ್ಮಗಳ ಆಚರಣೆ, ವಚನದಲ್ಲಿ ಹರಿಯನಾಮ, ಶುಚಿರ್ಭೂತವಾದ ಜೀವನ, ನಿರಂತರವಾದ ಸಂಚಾರ, ಕೃತಿರಚನೆ, ಭಜನೆ, ಇವು ಅಂಬಾಬಾಯಿಯವರ ಬದುಕಿನ ಅವಿಭಾಜ್ಯ ಭಾಗಗಳಾದವು. ತಮ್ಮ ವೈಯಕ್ತಿಕ ಜೀವನದಲ್ಲಿ ಕಳೆದುಕೊಂಡ ಲೌಕಿಕ ಸುಖವನ್ನು ಆಧ್ಯಾತ್ಮಿಕ ಹಾಗೂ ಪಾರಮಾರ್ಥಿಕ ಸಾಧನೆಯಿಂದ ಸರಿದೂಗಿಸಿಕೊಳ್ಳಲು ಪ್ರಯತ್ನಿಸಿದರು.

`ಅಷ್ಟ ಭಾಗ್ಯಕಧಿಕ ಲಾಭವು | ದಾಸತನವು

ಶ್ರೇಷ್ಠ ಗುರುಗಳಿಂದ ದೊರಕಿತು

ಇಷ್ಟವೆನಗೆ ದಾಸಪೆಸರು

ಶಿಷ್ಟರೆಲ್ಲ ಕರೆಯಲೀಗ

ತುಷ್ಟಿಪಡುವೆ ಶ್ರೀ ಗೋಪಾಲ-

ಕೃಷ್ಣವಿಠಲ ಸಲಹೊ ಎಂದು'

ಈ ನಿರ್ಧಾರಗಳೊಂದಿಗೆ ತಾಳ ತಂಬೂರಿಗಳನ್ನು ಹಿಡಿದು, ಜೋಳಿಗೆ ಹಾಕಿಕೊಂಡು, ಕಾಲಿಗೆ ಗೆಜ್ಜೆಕಟ್ಟಿ ಹರಿದಾಸರ ವೃತ್ತಿಯನ್ನು ಪ್ರೀತಿಯಿಂದ ಸ್ವೀಕರಿಸಿದರು. ಗೊತ್ತು ಗುರಿಯಿಲ್ಲದ ತಮ್ಮ ಬದುಕಿಗೆ ತಾವೇ ಕಟ್ಟುಪಾಡುಗಳನ್ನು ಹಾಕಿಕೊಂಡರು. ಎಚ್ಚೆತ್ತು ನಡೆಯಬೇಕು, ಗುರುಸೇವೆಯನ್ನು ಇಚ್ಛೆಯಿಂದ ಮಾಡಬೇಕು, ತುಚ್ಛಮಾತುಗಳಿಗೆ ಮನಕೊಡಬಾರದು, ವಂದನೆ ನಿಂದನೆಗಳನ್ನು ಒಂದಾಗಿ ಭಾವಿಸಬೇಕು. ಮಂದರಂತೆ ಮನುಜರಿಗೆ ಕಾಣಬೇಕು, ಚಿಂತೆಯನಳಿಯಬೇಕು, `ಸಂತತ ಗೋಪಾಕೃಷ್ಣವಿಠಲನ ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು'. ಈ ಸ್ಪಷ್ಟ ಧ್ಯೇಯಗಳೊಂದಿಗೆ ಹರಿದಾಸವೃತ್ತಿ ಕೈಗೊಂಡರು. ಹರಿದಾಸವೃತ್ತಿ ಅವರಿಗೆ ಹೊಟ್ಟೆಪಾಡಿನ ಕೃತ್ಯವಲ್ಲ, ಅದು ವಿಠಲನ ಸೇವೆ. ಲೌಕಿಕ ಆಸಕ್ತಿಗಳು ಮತ್ತು ಸ್ವಾರ್ಥದಿಂದ ಸಂಪೂರ್ಣ ದೂರವಾಗಿ, ವಿರಕ್ತಿ ಪಥದಲ್ಲಿ ನಡೆದ ಈಕೆ `ಹರಿಗುರು ಕಾರ್ಯಕಲ್ಲವೆ ಈ ದೇಹ' ಎಂದು ಪ್ರಶ್ನಿಸಿಕೊಂಡರು. `ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ ಉನ್ನಂತ ಅಭಿಲಾಷೆ'ಯನ್ನು ನೆರವೇರಿಸುವಂತೆ ಶ್ರೀ ಹರಿಯನ್ನು ಪ್ರಾರ್ಥಿಸಿದರು. `ಭೋಗದಲಿ ವೈರಾಗ್ಯನೀಡು, ಭಾಗವತರ ಸಂಗಕೊಡು,' `ಗರುವಿಕೆಯನು ಬಿಡಿಸು ಶರಣಳ ಪೋಷಿಸು, ನಿರುತದಿ ಧ್ಯಾನಿಪ ವರಮತಿ ನೀಡು'- ಹೀಗೆ ಖಚಿತವಾದ ಬೇಡಿಕೆಗಳನ್ನು ದೇವರ ಮುಂದಿಡುತ್ತಾರೆ. `ಚಿಂತೆಯೆನಗೊಂದಿಲ್ಲ, ಅಂತರಂಗದಿ ನೆಲಸಿ ಸಂತತದಿ ನಿನ ಧ್ಯಾನ ನೀಡೆಂಬೆನೊ' ಎಂದು ಜಗತ್ತಿನ ಚಿಂತೆಗಳಿಂದ ದೂರವಾಗಿ ಭಗವಂತನ ಚಿಂತನೆಯಲ್ಲಿ ತೊಡಗಿಸಿಕೊಳ್ಳುವ ವೈರಾಗ್ಯ ಅವರದು. ಇದನ್ನೇ ತಮ್ಮ ದಿನಚರಿಯಲ್ಲಿ ಹೀಗೆ ಹೇಳಿದ್ದಾರೆ. `ಕಷ್ಟದಲ್ಲಿ ತಲೆತಪ್ಪಿಸಕೊಳ್ಳುವುದು ವೈರಾಗ್ಯವಲ್ಲ. ಪರರ ಬಲವಂತಕ್ಕೆ ವಹಿಸುವುದೂ ವೈರಾಗ್ಯವಲ್ಲ. ಬಂದಂಥ ಕಷ್ಟ ನಿಷ್ಠುರಗಳನ್ನು ಜಯಿಸಿ ಪರಿಣಾಮವನ್ನು ಪರೀಕ್ಷಿಸಿ ಸರ್ವರೂ ಸಂತೋಷದಿಂದ ಅಭಿಮಾನಿಸುತ್ತಿದ್ದ ಕಾಲಕ್ಕೆ ಸಂತೋಷದಿಂದ ಸ್ವಜನಾಭಿಮಾನ ತ್ಯಾಗಪೂರ್ವಕ ಶ್ರೀ ಹರಿಗುರು ಚರಣಾರಾಧಕ ತತ್ಪರರಾಗಬೇಕು. ಇದೇ ಶ್ರೀ ಹರಿಗುರು ಪ್ರೀತಿಕರವಾದ ವೈರಾಗ್ಯ'.

ಈ ಹಿನ್ನೆಲೆಯಲ್ಲಿ ಅವರು ದಾಸತ್ವವನ್ನು ಆಸೆಯಿಂದ ಸ್ವೀಕರಿಸಿದರು.

1. `ಉಡಲು ಉಣಲು ಆಸೆಯಿಲ್ಲ

ತೊಡಲು ಇಡಲು ಮಮತೆಯಿಲ್ಲ

ಎಡದ ಬಲದ ನೆಂಟರಭಿಮಾನವಿಲ್ಲವು

ಎಡರು ಬರಲು ಭಯವು ಇಲ್ಲ

ಬಿಡಲು ದೇಹ ಅಂಜಿಕಿಲ್ಲ' (ಕೀ 219)

2. `ದಾಸತನದಿ ಮೆರೆವುದೊಂದು

ಆಸೆಯಿಲ್ಲದಿನ್ನು ಬೇರೆ

ಆಸೆಯೊಂದು ಇಲ್ಲ ಕೇಳು ನಾಶರಹಿತನೆ

ಪಾಶಕರ್ಮ ಹರಿಸಿ ನಿನ್ನ

ದಾಸಳೆಂದು ಮರೆಸೆ ಜಗಕೆ

ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ' (ಕೀ. 219)

3. `ನಿನ್ನ ಪದುಮ ಪಾದವನು ನಂಬಿದ ಎನ್ನ

ನಿನ್ನ ದಾಸಳೆನಿಸಿ ಘನ್ನ ಮಾರ್ಗ ತೋರಿ

ನಿನ್ನವಳೆನಿಸೊ ಎನ್ನ ಘನ್ನಗೋಪಾಲ

ಅನ್ಯರೊಬ್ಬರ ಕಾಣೆ ಮನ್ನಿಸುವ ಜಗದಿ (ಕೀ. 220)

4. `ಮುಳುಗಿದೆನು ಸಂಸಾರ ಗಣಿಸಲಾಗದ ಕರ್ಮ

ಫಣಿಶಾಯೆ ಕಡೆಮಾಡಿ ಕರವ ಪಿಡಿದು

ಧಣಿಸು ನಿನ್ನ ದಾಸತ್ವ ಧರೆಯ ಮೇಲ್ಡಂಗುರ

ಫಣಿಶಾಯಿ ಗೋಪಾಲಕೃಷ್ಣವಿಠಲ ಕೈಪಿಡಿದು' (ಕೀ. 221)

ಅಂಬಾಬಾಯಿಯವರ ಅತ್ತೆ ಮನೆಯಲ್ಲಿ ಬಹಳಷ್ಟು ದೇವರ ವಿಗ್ರಹಗಳಿದ್ದುವು. ಅದರಲ್ಲಿ ಪುಟ್ಟ ಆರು ಇಂಚಿನ ಗೋಪಾಲಕೃಷ್ಣನ ಕಂಚಿನ ವಿಗ್ರಹ. ಗಂಡ ಸತ್ತು, ಕೇಶ ಮುಂಡನವೂ ಆಗಿ, ಅತ್ತೆಯ ಮನೆಯಲ್ಲಿ ನೆಲೆ ಕಳೆದುಕೊಂಡಾಗ, ಆಕೆ ಬೇಡಿದ್ದು ಆ ಕೃಷ್ಣನ ವಿಗ್ರಹವನ್ನು ಮಾತ್ರ ಸದ್ಯ ಆಸ್ತಿಯಲ್ಲ, ಬೆಳ್ಳಿ ಬಂಗಾರವಲ್ಲ, ಪುಟ್ಟವಿಗ್ರಹ ತಾನೆ ಎಂದು ಅತ್ತೆಮನೆಯವರು ನೀಡಿದ ಕೃಷ್ಣನ ವಿಗ್ರಹವೇ ಆಕೆಯ ಆರಾಧ್ಯ ದೈವವಾಯಿತು. (ಕೀ. 256) ಅದಕ್ಕೆ ಅನುಗುಣವಾಗಿ ಗುರುಗಳು ನೀಡಿದ ಅಂಕಿತ ಗೋಪಾಕೃಷ್ಣವಿಠಲ. ಹೀಗಾಗಿ ಅಂಬಾಬಾಯಿಯವರ ಕೃತಿಗಳಲ್ಲಿ ಬಹುಪಾಲು ಕೃಷ್ಣಸ್ತುತಿಗಳೇ ಆಗಿವೆ. ಗುರುಗಳಿಂದ ಗೋಪಾಲಕೃಷ್ಣವಿಠಲ ಎಂಬ ಅಂಕಿತ ಪಡೆದ ಮೇಲೆ ಅಂಬಾಬಾಯಿಯವರ ಜೀವನ ದೃಷ್ಟಿಯೇ ಬದಲಾಯಿತು. ತಾನೊಬ್ಬ ವಿಧವೆ, ಮಡಿ ಹೆಂಗಸು, ಅನಾಥೆ, ಮಂದಭಾಗ್ಯೆ, ತಮ್ಮ ತಂಗಿಯರ ಸಂಸಾರಗಳಿಗೆ ಭಾರವಾದವಳು ಎಂಬ ಎಲ್ಲ ಸಂಕೋಚಗಳು ದೂರವಾದವು.

`ಮುತ್ತೈದೆಯಾದೆ ನಾ ಮುರವೈರಿ ದಯದಿ

ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ'

ಎಂದು ಘೋಷಿಸಿ ತನ್ನಲ್ಲಿ ಸೌಮಂಗಲ್ಯದ ಎಲ್ಲ ಸಂಕೇತಗಳು ಗುರು ಕರುಣೆಯಿಂದ ಮತ್ತೆ ಪ್ರಾಪ್ತವಾದವೆಂದು ಭಾವಿಸಿದರು. ಅಂಕಿತವೇ ಮಾಂಗಲ್ಯ, ನಾಮವೇ ತಿಲಕ, ಗುರುಕರುಣವೇ ಕವಚ, ಗುರು ಪ್ರೀತಿಯೆ ವಸನ, ಭಕ್ತಿ, e್ಞÁನ, ವೈರಾಗ್ಯಗಳೇ ಮೂರು ಕಾಲಿನ ಜಡೆ, ತತ್ವಗಳೇ ಚೌರಿ, ರಾಗುಟೆ, ಗೊಂಡ್ಯಗಳು, ಶ್ರವಣವೇ ಕರ್ಣಕುಂಡಲ, ನಿರ್ಮಾಲ್ಯವೇ ನಾಸಿಕಾಭರಣ, ಭಕ್ತಿಯೇ ನಡುವಿನೊಡ್ಯಾಣ, ಸದ್ಗುಣಗಳೇ ಪಾದಾಭರಣ, ಗುರುವಿನ ಅನುಗ್ರಹವೇ ಮಂಗಳ ದ್ರವ್ಯಗಳು. ಹೀಗೆ ಸಾಲಂಕೃತಳಾದ ತನ್ನನ್ನು ಶ್ರೀಹರಿಗೆ ಧಾರೆ ಎರೆದು ಕೊಡಲಾಯಿತು ಎಂದು ಭಾವುಕತೆಯಿಂದ ಹೇಳುತ್ತಾರೆ. (ಕೀ. 259)

ಇಂಥ ದೃಢ ನಿರ್ಧಾರ ಮತ್ತು ಸಮರ್ಪಣ ಭಾವದಿಂದ ಅಂಬಾಬಾಯಿ-ಯವರು ಹರಿದಾಸರಂತೆಯೇ ವೇಷಭೂಷಣಗಳನ್ನು ತೊಟ್ಟರು. ಕಾವಿಯ ವಸ್ತ್ರ, ಕಾಲಿಗೆ ಗೆಜ್ಜೆ, ಕೊರಳಿಗೆ ತುಳಸೀ ಮಾಲೆ, ಬಗಲಿಗೆ ತಂಬೂರಿ, ಜೋಳಿಗೆ ಇತ್ಯಾದಿ ಪರಿಕರಗಳನ್ನು ಧರಿಸಿ ಹರಿದಾಸರಾಗಿ ಸಂಚರಿಸತೊಡಗಿದರು. ದೇಹಕ್ಕೆ ಸಂಬಂಧಿಸಿದ ಮಾನಾಭಿಮಾನಗಳನ್ನು ದೂರಮಾಡಿ ಏಕಾಂತಸುಖವನ್ನು ನೀಡುವ ತಂಬೂರಿ ಶ್ರೀಹರಿಯನ್ನು ಒಲಿಸಿಕೊಳ್ಳುವ ಸಾಧನ ಎಂದು ಭಾವಿಸಿದರು.

1. ಬಲು ಬಲು ಪರಿಯಲಿ ಹರಿದಾಸತ್ವಕೆ

ಬರುವಂತೆ ಮಾಡಿದ ತಂಬೂರಿ

ನೆಲೆಯಾದೆನು ಹರಿದಾಸರ ಮಾರ್ಗದಿ

ಕಲುಷವ ಕಳೆದಿತು ತಂಬೂರಿ (ಕೀ. 262)


2. ಬೆಟ್ಟದೊಡೆಯ ತಾನಿಷ್ಟು ಹಠವ ಮಾಡಿ

ಕೊಟ್ಟೇ ಕೊಟ್ಟನು ತಂಬೂರಿ

ಎಷ್ಟು ನಾಚಿಕೆಪಟ್ಟರೂ ಬಿಡದೆಲೆ

ಕಷ್ಟ ಕಳೆಯುತಲಿತ್ತ ತಂಬೂರಿ

ಬಿಟ್ಟು ಹೋಯಿತು ಭವಕಟ್ಟು ಇಂದೆನ್ನನು

ಮುಟ್ಟಿಸಿತ್ಹರಿಪುರ ತಂಬೂರಿ

ಎಷ್ಟು ಪೇಳಲಿ ಶ್ರೀನಿಧಿ ಗೋಪಾಲ

ಕೃಷ್ಣವಿಠಲನಿತ್ತ ತಂಬೂರಿ (ಕೀ. 262)

ಹೀಗೆ ತಂಬೂರಿಯನ್ನು ಹಿಡಿದು ಹರಿದಾಸರಾಗಿ ಸಾಲಮಾಡದೆ, ಸಾಲದೆನ್ನದೆ, ನಾಳೆಗೆ ಇಡದೆ ಬದುಕಿದರು. ಹರಿದಾಸ ಪದ್ಧತಿಯಿಂದ ಗೋಪಾಳ ಧರಿಸಿ, ಭಕ್ತರ ಮನೆಗಳಿಗೆ ಊಂಛವೃತ್ತಿಗೆ ಹೋಗುವುದು ಅವರ ನಿತ್ಯ ವಿಧಿಯಾಗಿತ್ತು.

ಅಂಬಾಬಾಯಿ ಒಂದು ರೀತಿಯ ಆಶುಕವಯತ್ರಿ. ಸಂಚಾರಕಾಲದಲ್ಲಿ ಪ್ರತಿನಿತ್ಯ ಹಾಡುಗಳನ್ನು ಬರೆಯುವ, ಹಾಡುವ, ಅದನ್ನು ಮಹಿಳೆಯರಿಗೆ ಹೇಳಿಕೊಡುವ ಪ್ರವೃತ್ತಿ ಅವರಲ್ಲಿತ್ತು. ಅಪಾರವಾದ ಸೃಜನ ಶಕ್ತಿ ಆಕೆಯಲ್ಲಿತ್ತು. ಒಮ್ಮೆ ಅವರ ತಂಗಿಯ ಮನೆಯಲ್ಲಿದ್ದಾಗ ನಡೆದ ಘಟನೆ ಹೀಗಿದೆ. ಪಕ್ಕದ ಮನೆಯ ಗೃಹಿಣಿ ಲಾಲಿ ಹಾಡೊಂದನ್ನು ಹೇಳುತ್ತಿದ್ದರು. ಆ ಚಂದವಾದ ಹಾಡನ್ನು ಬರೆದುಕೊಡುವಂತೆ ತಂಗಿ ಆಕೆಯನ್ನು ಕೇಳಿದಳು. ಆಕೆಯು ಎರಡು ಮೂರು ದಿನ ಸತಾಯಿಸಿ ನಯವಾಗಿ ತಿರಸ್ಕರಿಸಿದಳು. ತಂಗಿ ತನ್ನ ಬೇಸರವನ್ನು ಅಂಬಾಬಾಯಿಯ ಬಳಿ ತೋಡಿಕೊಂಡಳು. ಅಂದು ಮಧ್ಯರಾತ್ರಿ ಅಂಬಾಬಾಯಿಗೆ ಥಟ್ಟನೆ ಎಚ್ಚರವಾಯಿತು. ಮಿಂದು ಮಡಿಯುಟ್ಟು ದೇವರ ಮುಂದೆ ಕುಳಿತು ಲಾಲಿ ಹಾಡನ್ನು ಬರೆಯಲು ಪ್ರಾರಂಭಿಸಿದರು.

1 ಪುಟ್ಟಿತು ಮನದಲ್ಲಿ ಕೃಷ್ಣಲೀಲೆಯ ಸ್ಮರಣೆ

ತಟ್ಟನೆದ್ದೀಗ ಬರೆಯುವೆ | ಹರಿಚರಿತೆ

ಶ್ರೇಷ್ಠ ಗುರು ಚರಣಕರ್ಪಿಸುವೆ

2. ಅನ್ಯ ಸ್ಮರಣೆಗಳೇಕೆ ಅನ್ಯ ವಾಕ್ಯಗಳೇಕೆ

ಅನ್ಯರಾಡುವ ನುಡಿಯೇಕೆ | ಶ್ರೀ ಕೃಷ್ಣ

ನಿನ್ನ ನೆನಹೆನಗೆ ಆನಂದ

3. ಮುದ್ದು ಕೃಷ್ಣನೆ ದೈವ ಮಧ್ವರಾಯರೆ ಗುರುವು

ಶುದ್ಧ ವೈಷ್ಣವರೆ ಬಂಧುಗಳು | ಎಂದವರು

ಹೆದ್ದಾರಿ ಹಿಡಿದು ನಡೆಯುವರು

ವಸುದೇವ ದೇವಕಿಯರ ಸೆರೆವಾಸ, ಕೃಷ್ಣನ ಜನನ, ವಸುದೇವನ ಗೋಕುಲ ಪ್ರಯಾಣ, ಗೋಕುಲದಲ್ಲಿ ಕೃಷ್ಣನ ಬಾಲಲೀಲೆಗಳು, ಅವನ ತುಂಟಾಟ, ಮುದ್ದು ಮಾತುಗಳು, ಯಶೋದೆಯ ವಾತ್ಸಲ್ಯ, ಇತ್ಯಾದಿಗಳನ್ನು 389 ನುಡಿಗಳ ಈ ದೀರ್ಘರಚನೆಯಲ್ಲಿ ಕಾಣಬಹುದು. ಸುವ್ವಾಲಿ ಧಾಟಿಯ ಈ ಗೇಯ ಕಾವ್ಯವನ್ನು ಅಂಬಾಬಾಯಿ ಮತ್ತು ಅವರ ತಂಗಿ ಕಂಠಪಾಠ ಮಾಡಿಕೊಂಡು ಪ್ರತಿನಿತ್ಯ ಹಾಡುತ್ತಿದ್ದರಂತೆ.

ಅಂಬಾಬಾಯಿಯವರ ಕೀರ್ತನೆಗಳು ಸಾಮಾನ್ಯವಾಗಿ ಮೂರರಿಂದ ಏಳೆಂಟು ನುಡಿಯ ದೇವರ ನಾಮಗಳು. ಒಮ್ಮೆ ಗುರುಗಳು ಹೇಳಿದರಂತೆ `ಗಂಡಸರಿಗೆ ಗಾಯಿತ್ರಿ ಮಂತ್ರ, ಪುರುಷಸೂಕ್ತ, ವಾಯುಸ್ತುತಿಗಳಿವೆ. ದೇವತಾರ್ಚನೆ ವೇಳೆಯಲ್ಲಿ ಇವನ್ನು ಹೇಳಿಕೊಳ್ಳುತ್ತಾರೆ. ಹೆಣ್ಣುಮಕ್ಕಳಿಗೆ ಮನೆಕೆಲಸವೇ ದೇವರ ಪೂಜೆ, ಮನೆಕೆಲಸ ಮಾಡಿಕೊಳ್ಳುತ್ತಲೇ ಹಾಡಿಕೊಳ್ಳಬಹುದಾದ ದೀರ್ಘ ಕೃತಿಗಳನ್ನು ರಚನೆಮಾಡು.' ಗುರುಗಳ ಈ ಆಜ್ಞೆಯಂತೆ ಅಂಬಾಬಾಯಿ ಧೀರ್ಘಕೃತಿಗಳನ್ನು ರಚಿಸಲು ಪ್ರಾರಂಭಿಸಿದರು. ಹೀಗೆ ರಚಿಸಿರುವ ಕೆಲವು ದೀರ್ಘಕೃತಿಗಳು ಹೀಗಿವೆ.

1. ಕೃಷ್ಣ ಬಾಲಲೀಲ ಜೋಗುಳ - 380 ನುಡಿಗಳು

2. ಕಾಂತೇಶ ಕವಚ - 45 ನುಡಿಗಳು

3. ಕದರಮಂಡಲಗಿ ಪ್ರಾಣದೇವರ ಸ್ತೋತ್ರ - 99 ದ್ವಿಪದಿಗಳು

4. ಸರ್ವಸಿದ್ಧಿಪ್ರದಾಯಕ ಸ್ತೋತ್ರ - 61 ನುಡಿಗಳು

5. ಅನಂತಪದ್ಮನಾಭ ಕಥಾಸಾರ - 36 ಷಟ್ಪದಿಗಳು

6. ಕಾಣೆನಿಂಥ ಕರುಣ ಗುರುಗಳ - 22 ನುಡಿಗಳು

7. ಗೋವಿಂದ ಸ್ತುತಿ - 108 ನುಡಿಗಳು

8. ಶ್ರೀ ಹರಿ ಗುಣಮಾಲೆ - 173 ನುಡಿಗಳು

9. ಗುರು ಕವಚ - 145 ನುಡಿಗಳು

10. ನೃಸಿಂಹ ಸ್ತೋತ್ರ - 59 ನುಡಿಗಳು

11. ಸೀತಾಪತಿವಿಠಲ ದಾಸಳ ನಿರ್ಯಾಣಪದ - 43 ನುಡಿಗಳು

12. ವೆಂಕಟೇಶ ಸ್ತೋತ್ರ 1 - 24 ನುಡಿಗಳು

13. ವೆಂಕಟೇಶ ಸ್ತೋತ್ರ 2 - 26 ನುಡಿಗಳು

14. ತತ್ವಸಾರಾಮೃತ - 362 ನುಡಿಗಳು

15. ಭಾಗವತ ಸಾರೋದ್ಧಾರ

&ಟಿbsಠಿ;&ಟಿbsಠಿ;&ಟಿbsಠಿ;&ಟಿbsಠಿ;&ಟಿbsಠಿ;(ವಿಷ್ಣುತೀರ್ಥರ ಸಂಸ್ಕøತ ಕೃತಿಯ ಕನ್ನಡರೂಪ) - 300 ಸಾಂಗತ್ಯಗಳು

16. ಚಾಮುಂಡಿ ಸ್ತುತಿ - 200 ಷಟ್ಪದಿಗಳು

17. ರಾಮಕಥಾಮೃತ ಕಾವ್ಯ -&ಟಿbsಠಿ;2516 ನುಡಿಗಳು

ಅಂಬಾಬಾಯಿ ತಾವು ಹೋದಲೆಲ್ಲಾ ಹೆಣ್ಣು ಮಕ್ಕಳಿಗೆ ಹಾಡುಗಳನ್ನು ಹೇಳಿಕೊಡುವುದರ ಜೊತೆಗೆ ತಾವೇ ಬರೆದ ರಾಮಾಯಣದ ಸುಂದರ ಕಾಂಡವನ್ನು ಹಾಡಿ ಪ್ರವಚನ ಮಾಡುತ್ತಿದ್ದರು. ಎಷ್ಟೋ ಮಂದಿ ಗೃಹಿಣಿಯರು ತಮ್ಮ ಮನೆಗಳಿಗೆ ಕರೆಸಿಕೊಂಡು ಸುಂದರಕಾಂಡದ ಪ್ರವಚನ ಸಪ್ತಾಹಗಳನ್ನು ಏರ್ಪಡಿಸುತ್ತಿದ್ದರು. ಅಂಬಾಬಾಯಿಯವರಿಂದ ಸುಂದರಕಾಂಡ ಹೇಳಿಸಿದರೆ ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆ ಆಕೆ ಬದುಕಿದ್ದಾಗಲೇ ಪ್ರಚಲಿತವಾಗಿತ್ತು. ಗುರುಗಳ ಶಿಷ್ಯವಲಯದಲ್ಲಿ ಆಕೆ ಸುಂದರಕಾಂಡದ ಅಂಬಾಬಾಯಿ ಎಂದೇ ಪರಿಚಿತರಾಗಿದ್ದರು.

ತೀರ್ಥಯಾತ್ರೆ ಮಾಡುವುದು ಅಂಬಾಬಾಯಿಯವರಿಗೆ ಪ್ರಿಯವಾದ ಸಂಗತಿಯಾಗಿತ್ತು. `ಗೆಜ್ಜೆಕಾಲಿಗೆ ಕಟ್ಟಿ, ತಾಳವ ಲಜ್ಜೆಯ ತೊರೆದು ಬಾರಿಸುತ, ಮೂರ್ಜಗದೊಡೆಯ ಜಗಜನ್ಮಾದಿ ಕಾರಣನೆಂದು ಗರ್ಜಿಸುತಲಿ ಸಂಚಾರ ಮಾಳ್ಪುದು' ಅವರಿಗೆ ಪ್ರಿಯವಾದ ವೃತ್ತಿ. ದುಷ್ಟ ಮನಸ್ಸಿನ ಕಲ್ಮಶವನ್ನು ಕಳೆದು ಶಿಷ್ಟ ಜನರ ಸಹವಾಸದಲ್ಲಿ ಸೃಷ್ಟಿಕರ್ತನ ಭಜನೆ ಮಾಡುತ್ತ ಕಷ್ಟಗಳನ್ನು ಈಡಾಡಲು ತೀರ್ಥಯಾತ್ರೆಯ ಮಾರ್ಗವನ್ನು ಕಂಡುಕೊಂಡರು. ತೀರ್ಥಯಾತ್ರೆಯನ್ನು ಅವರು ವಿಜಯಯಾತ್ರೆ ಎಂದೇ ಕರೆಯುತ್ತಿದ್ದರು. ಗುರುಗಳ ಅನುಮತಿಯನ್ನು ವಿಧಿವತ್ತಾಗಿ ಸ್ವೀಕರಿಸಿ ತಮ್ಮ, ತಂಗಿಯರಿಗೆ ತಿಳಿಸಿ ಅವರು ಕೊಟ್ಟ ಅಲ್ಪಸ್ವಲ್ಪ ಹಣದೊಂದಿಗೆ ಪ್ರಯಾಣ ಬೆಳೆಸುತ್ತಿದ್ದರು. ತಂಗಿಗೆ, ನಾದಿನಿಗೆ ಬಾಣಂತನಗಳನ್ನು ಮಾಡಿದಾಗ ಅವರು ಪ್ರೀತಿಯಿಂದ ಸೀರೆ ಕೊಡಿಸುತ್ತೇವೆ ಎಂದರೆ ಬೇಡ ಅದರ ಬದಲು ಹಣವನ್ನೇ ಕೊಡಿ ಎಂದು ಅಲ್ಪ ಹಣವನ್ನು ಪಡೆದು ತಿಂಗಳುಗಟ್ಟಳೆ ತೀರ್ಥಯಾತ್ರೆಗೆ ಹೋಗುತ್ತಿದ್ದರು. ತೀರ್ಥಯಾತ್ರೆಗೆ ಹೊರಡುವ ಮುನ್ನ ಗುರುಗಳಿಂದ ಅನುಮತಿ ಪಡೆದ ಸಂದರ್ಭವೊಂದರ ಉಲ್ಲೇಖ ಹೀಗಿದೆ:(ದಿನಚರಿಯಿಂದ)

`ಶಾಲಿವಾಹನ ಶಕ 1860 ಬಹುಧಾನ್ಯ ಸಂವತ್ಸರ ಕಾರ್ತೀಕ ಶುಧ್ಧನವಮಿ ಬುಧವಾರ. ಉದಯ ಕಾಲದಲ್ಲಿ ಶ್ರೀ ಹರಿ ಗುರು ಸ್ಮರಣಪೂರ್ವಕವಾಗಿ ಎದ್ದು, ಶ್ರೀ ಗುರುದಂಪತಿಗಳಿಗೆ ನಮಸ್ಕರಿಸಿ ಎರಡು ದೇವರ ನಾಮ ರಚನೆ. ಅನಂತರ ಸ್ನಾನ ದೇವರಪೂಜೆ ನೇವೇದ್ಯ ಆದ ತರುವಾಯ ದಾಸತ್ವದ ಸಾಮಗ್ರಿಗಳು ಎಂದರೆ ಅಕ್ಷಯಪಾತ್ರೆ, ಕೋಲು, ತಾಳ, ಗೆಜ್ಜೆ ಇವುಗಳಿಗೆ ಶ್ರೀ ವಿಜಯದಾಸರ ಫೋಟೋಕ್ಕೆ ಪೂಜಾದಿಗಳು. ಶ್ರೀ ಗುರುದಂಪತಿಗಳಿಗೆ ಪೂಜಾದಿಗಳು. ನಂತರ ಈ ದಾಸತ್ವದ ಪದಾರ್ಥಗಳನ್ನು ಶ್ರೀ ಗುರುಗಳಿಂದ ಸ್ವೀಕಾರ. ನಂತರ ಹೊಸದಾಗಿ ರಚಿಸಿದ ದೇವರನಾಮಗಳನ್ನು ಶ್ರೀ ಗುರುಗಳಿಗೆ ಪಠಣದಿಂದ ಸಮರ್ಪಣೆ. ಶ್ರೀ ಗುರುದಂಪತಿಗಳಿಂದಲೂ ಮಿಕ್ಕಾದವರಿಂದಲೂ ಗೋಪಾಳ ಸ್ವೀಕಾರ. ಸಂಚಾರ ಹೊರಡಲು ಶ್ರೀ ಗುರುಗಳಲ್ಲಿ ಆe್ಞÁಸ್ವೀಕಾರ, ನಂತರ ಗುರುಗಳಾದಿಯಾಗಿ ಸರ್ವರ ಭೋಜನ. ನಂತರ ನಿತ್ಯಾನಂದರು, ರಮಾಕಾಂತರು ತಂತಮ್ಮ ಊರಿಗೆ ಪ್ರಯಾಣ. ಸಾಯಂಕಾಲ ಏಳು ಗಂಟೆಗೆ ಪ್ರಯಾಣ ಸಿದ್ಧತೆ. ಶ್ರೀ ಗುರುದಂಪತಿಗಳಿಗೆ ನಮಸ್ಕರಿಸಿ ಅಪರಾಧ ಕ್ಷಮಾಪಣೆ. ಶ್ರೀ ಗುರುಗಳಿಂದ ಫಲ ಮಂತ್ರಾಕ್ಷತೆ. ಮೂಲಧನ ಅಭಯಪ್ರಧಾನ ಸ್ವೀಕಾರ. ರಾತ್ರಿ 8 ಘಂಟೆಗೆ ವಿಜಯ ಪ್ರಯಾಣ'

1 (ತಾ|| 12-11-1938 ಸ್ಥಿರವಾರ. ಸ್ಥಳ:ಆನುಗೋಡು)

ಕಾರ್ತೀಕ ಬಹುಳ ಪಂಚಮಿ ಪ್ರಾತಃ ನಿಯಮ. ಗೋಪಾಳ ವೃತ್ತಿ ಆರು ಮನೆ. ಪ್ರಾಣದೇವರ ದರ್ಶನ. ಮನೆಗೆ ಬಂದು ಅಕ್ಷಯ ಪಾತ್ರೆಗೆ ಮಂಗಳಾರತಿ. ಏನಾದರೂ ವಿಚಾರಗಳು, ಮಾತುಕತೆಗಳು, ಸ್ನಾನ ಅಹ್ನೀಕಾದಿ ಗೋಪಾಲಕೃಷ್ಣನ ಪೂಜಾದಿಗಳು. ಊಟ, ಸಾಯಂಕಾಲದ ಭಜನೆ. ಆಲೂರು ಶೇಷಣ್ಣನವರು, ಶ್ರೀ ರಂಗಮೂರ್ತಿವಿಠಲರು ಆನಂದರಸಪೂರ್ಣ ಇವರುಗಳು. ರಾತ್ರೆ ಬಹಳ ಹೊತ್ತು ಮಾತುಕತೆಗಳು - ದಾಸರುಗಳ ವಿಚಾರಗಳು ತತ್ವ ವಿಚಾರಗಳು - ನಿದ್ರೆ.

2 (ತಾ|| 12-12-1938 ಸೋಮವಾರ ಸ್ಥಳ:ಹಾವೇರಿ)

ಪ್ರಾತಃ ನಿಯಮ ಗೋಪಾಳಕ್ಕೆ ಹೋಗಿದ್ದಾಗ ಕದರುಮಂಡಲಗಿಯಲ್ಲಿ ಕಂಡಿದ್ದ ಕೇಶವಾಚಾರ್ಯರು ಒಬ್ಬರ ಮನೆಯಲ್ಲಿದ್ದರು. ಒಳಗೆ ಬನ್ನಿ ಎಂದರು. ಈ ದಿನ ಊಟಕ್ಕೆ ಏನು ಮಾಡಬೇಕು ಎಂದು ವಿಚಾರಿಸಲು ನಮ್ಮ ತಂಗಿ ಮನೆಗೆ ಬನ್ನಿ ಎಂದರು. ಅಲ್ಲಿಂದ ಶ್ರೀನಿವಾಸದೇವರ ಅಗ್ರಹಾರದಲ್ಲಿ ಒಬ್ಬರು ಪರಮಾದರದಿಂದ ಇನ್ನೊಂದು ದೇವರನಾಮ ಹೇಳಿಸಿ ಒಂದು ಪಾವು ಅಕ್ಕಿ ಒಂದಾಣಿ ಕೊಟ್ಟರು... ಶ್ರೀನಿವಾಸ ದೇವರ ಗುಡಿಯಲ್ಲಿ ಭಜನೆ. ಆ ವಠಾರದವರೆಲ್ಲ ಬಂದು ಕುಳಿತಿದ್ದರು. ದೇವಸ್ಥಾನದ ಬಾಗಿಲು ತೆಗೆದು ಮಂಗಳಾರತಿಯಾಯಿತು. ಭಜನೆ ಮುಗಿಯಿತು. ಅನಂತರ ಒಬ್ಬ ಮುತ್ತೈದೆ ಮನೆಗೆ ಕರೆದುಕೊಂಡು ಹೊಗಿ ಮೊಸರು ಅವಲಕ್ಕಿ ಕೊಟ್ಟರು. ಇನ್ನೊಬ್ಬರು ಕರೆದುಕೊಂಡು ಹೋಗಿ ಸ್ವಯಂಪಾಕ, ಅರಳು, ಮೂರು ಕಾಸು ಕೊಟ್ಟರು. ರಾತ್ರಿ ಪುನಃ ನಾಲ್ಕು ದೇವರನಾಮ ಬರೆದದ್ದು - ನಿದ್ರಾದಿಗಳು.

3 (ತಾ|| 31-12-1939 ಶನಿವಾರ ನವಮಿ. ಸ್ಥಳ:ಸವಣೂರು)

ಪ್ರಾತಃ ನಿಯಮ ಗೋಪಾಳ. ಒಬ್ಬರ ಮನೆಯೊಳಕ್ಕೆ ಕರೆದು ದೇವರನಾಮ ಹೇಳಿಸಿದರು. ಬೆಳಗಾವಿಗೆ ಮೋಟಾರಿಗೆ ಕಳುಹಿಸುತ್ತೇವೆಂದರು. ಗೋಪಾಳದಲ್ಲಿ ಒಂದೂವರಾಣೆ ಬಂದಿತು. ಮೂರು ಕಾಸಿಗೆ ಬಾಳೆಹಣ್ಣು ತಂದೆ ಶ್ರೀನಿವಾಸನ ಪೂಜೆಗೆ. ನಂತರ ಸ್ನಾನ, ಶ್ರೀನಿವಾಸನ ಪೂಜೆ ಸ್ತೋತ್ರಾದಿಗಳು ನಡೆಯಿತು. ಪುಟ್ಟಕ್ಕ ಅಡಿಗೆ ಮಾಡಿ ಬಡಿಸಿದರು. ಊಟಾದ ನಂತರ ಪುಟ್ಟಕ್ಕನ ಮನೆಗೆ ಹೊಗಿ ಬಾಲಲೀಲೆ ಹಾಡು ಹೇಳಿದ್ದು. ಎಲ್ಲರೂ ಬಂದಿದ್ದರು. ನಂತರ ಬಂಡೆರಾಯರನ್ನು ಶೇಷಾಚಾರ್ರು ಬೊಧರಾಯನನ್ನು ನೋಡಿಕೊಂಡು ಬಂದದ್ದು. ಮಾಧ್ವಭಜನೆ ಪುಸ್ತಕ ಒಂದು ಕೊಟ್ಟರು. ರಾತ್ರೆ ಭಜನೆ. ಫಲಹಾರ - ನಿದ್ರೆ.

ಮೇಲಿನ ಮೂರು ಉದಾಹರಣೆಗಳಿಂದ ಅಂಬಾಬಾಯಿಯವರ ದೈನಂದಿನ ಜೀವನಕ್ರಮ ಹೇಗಿತ್ತು ಎನ್ನುವುದನ್ನು ಊಹಿಸಬಹುದು.

ಇವರ ತೀರ್ಥಯಾತ್ರೆಯ ಏರ್ಪಾಡುಗಳೂ ಸಹಾ ಬಹಳ ಸರಳ. ದೇವಾಲಯದ ಕಟ್ಟೆಗಳ ಮೇಲೆ ವಾಸ್ತವ್ಯ. ಗೋಪಾಳದಲ್ಲಿ ಬಂದ ಅಕ್ಕಿ ಮತ್ತಿತರ ವಸ್ತುಗಳಿಂದ ಯಾರಾದರೂ ಗೃಹಸ್ಥರ ಮನೆಯಲ್ಲಿ ಸ್ವಯಂಪಾಕ. ದೇವಾಲಯದ ಹೊರಗೆ ಕುಳಿತು ಹಾಡಲು ತೊಡಗಿದರೆ ಆ ಹಾಡಿನ ಸಾಹಿತ್ಯಕ್ಕೆ, ಚಂದಕ್ಕೆ ಹೆಂಗೆಳೆಯರು ಬೆರಗಾಗುತ್ತಿದ್ದರು. ಯಾವ ದಾಸರ ಹಾಡು ಇದು ನಮಗೂ ಬರೆದುಕೊಡಿ ಎಂದು ಬೇಡಿಕೆಗಳು ಬರುತ್ತಿದ್ದವು. ತಾನೇ ಬರೆದದ್ದು ಎಂದು ಎಲ್ಲಿಯೂ ಹೇಳದೆ ಗೋಪಾಲಕೃಷ್ಣವಿಠಲದಾಸರದೆಂದು ಹೇಳಿ ಒಂದು ಹಾಡು ಕೇಳಿದವರಿಗೆ ನಾಲ್ಕು ಹಾಡು ಬರೆದು ಕೊಡುತ್ತಿದ್ದರು. ಬಿಳಿ ಹಾಳೆ ಲೇಖನಿಗಳನ್ನು ಸದಾ ಜೊತೆಯಲ್ಲಿಯೇ ತೆಗೆದುಕೊಂಡು ಹೊಗುತ್ತಿದ್ದರು. ಹಾಡನ್ನು ಕೇಳಿದವರು ಒಂದಷ್ಟು ಚಿಲ್ಲರೆ ನೀಡಿದರೆ ಅದೇ ಅವರ ತೀರ್ಥಯಾತ್ರೆಗೆ ಮೂಲಧನ. ತಮ್ಮ ಹೆಸರನ್ನು ಅe್ಞÁತವಾಗಿ ಉಳಿಸಿ ಕೃತಿಗಳನ್ನು ಮಾತ್ರ ಪ್ರಸಾರ ಮಾಡುತ್ತಿದ್ದ ಅವರ ಕಾರ್ಯವೈಖರಿ ನಿಜಕ್ಕೂ ಅಪೂರ್ವ.

ಅಂಬಾಬಾಯಿಯವರ ಸಾಹಿತ್ಯದ ಬಹುಪಾಲು ತೀರ್ಥಯಾತ್ರೆಯ ಸಂದರ್ಭದಲ್ಲಿ ರಚಿತವಾದ ಕೀರ್ತನೆಗಳೇ ಆಗಿವೆ. ಕರಿಗಿರಿ, ಕದಿರುಂಡಲಗಿ, ತಿರುಪತಿ, ಉಡುಪಿ, ಪಂಡರಾಪುರ, ಮಂತ್ರಾಲಯ, ಹಂಪೆ, ಸವಣೂರು, ರಿತ್ತಿ, ಭದ್ರಾವತಿ, ಮೊದಲ ಘಟ್ಟ, ಸಾಗರಕಟ್ಟೆ, ಈ ಕ್ಷೇತ್ರಗಳಲ್ಲಿ ಹಲವಾರು ದಿನ ನೆಲೆಸಿ ತಮ್ಮ ಎಲ್ಲ ಕಷ್ಟಗಳನ್ನು ಇಷ್ಟ ದೇವತೆಗಳ ಬಳಿ ನಿವೇದಿಸಿಕೊಂಡಿದ್ದಾರೆ. ತಾವು ಕಂಡ ದಿವ್ಯ ಮೂರ್ತಿಗಳ ಸಾಲಂಕೃತ ಚಿತ್ರ ನೀಡಿದ್ದಾರೆ. ಉತ್ಸವ, ಪೂಜೆ, ಮೊದಲಾದ ಸಂಪ್ರದಾಯಗಳನ್ನು ವಿವರವಾಗಿ ಬಣ್ಣಿಸಿದ್ದಾರೆ.

ಬದುಕಿನ ಎಲ್ಲ ಭದ್ರತೆಗಳನ್ನು ಕಳೆದುಕೊಂಡು ಹತಾಶಳಾಗಿ ಪರಿತಪಿಸುತ್ತಿದ್ದ ಅಂಬಾಬಾಯಿಯವರಿಗೆ ದಾಸಪಂಥದ ಬೆಳಕು ತೋರಿಸಿ ಮಾರ್ಗದರ್ಶನ ಮಾಡಿದವರು ತಂದೆ ಮುದ್ದುಮೋಹನದಾಸರು. ತಮ್ಮ ಗುರುಗಳ ಕರುಣೆ, ಅಪಾರ ವಿದ್ವತ್ತು, ವಾಕ್ಸರಣÉ, ಗುಪ್ತಮಹಿಮೆ, ಶಾಂತಸ್ವಭಾವ, ತತ್ವಾರ್ಥ ಬೋಧÀನೆ, ಹರಿದಾಸ ನಿಷ್ಠೆ ಇವು ಅಂಬಾಬಾಯಿಯವರ ಮೇಲೆ ಅಪಾರ ಪ್ರಭಾವ ಬೀರಿದ್ದುವು. ಈ ಎಲ್ಲವನ್ನೂ ಅವರು ಮತ್ತೆ ಮತ್ತೆ ತಮ್ಮ ಗುರುಸ್ತುತಿಗಳಲ್ಲಿ ನಿರೂಪಿಸಿದ್ದಾರೆ. ತಂದೆ ಮುದ್ದುಮೋಹನದಾಸರೊಬ್ಬರನ್ನು ಕುರಿತೇ ಅಂಬಾಬಾಯಿಯವರು ಸಮಾರು 50 ಕೃತಿಗಳನ್ನು ರಚಿಸಿದ್ದಾರೆ. ಇದನ್ನು ಗಮನಿಸಿದರೆ ಗುರುಗಳ ಬಗ್ಗೆ ಅವರಿಗಿದ್ದ ಅಪಾರ ಭಕ್ತಿಯ ಸ್ವರೂಪವನ್ನು ಅರಿಯಬಹುದು. ತಂದೆ ಮುದ್ದು ಮೋಹನದಾಸರ ಜೀವನ ಚರಿತ್ರೆಯನ್ನು ರಚಿಸಲು ಆಕರವಾಗಬಲ್ಲ ಅಮೂಲ್ಯ ಮಾಹಿತಿಗಳು ಈ ಕೀರ್ತನೆಗಳಲ್ಲಿವೆ. `ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ' ಎಂಬ 9 ನುಡಿಗಳ ಕೃತಿ (ಕೀ. 182) ಮೇಲ್ನೋಟಕ್ಕೆ ಶ್ರೀ ಹರಿಯ ಸ್ತುತಿಮಾಲೆಯಂತೆ ಕಂಡರೂ ಇಲ್ಲಿರುವ 161 ಹರಿನಾಮಗಳು ತಂದೆ ಮುದ್ದು ಮೋಹನದಾಸರು ತಮ್ಮ ಪ್ರಿಯ ಶಿಷ್ಯರಿಗೆ ನೀಡಿದ ಅಂಕಿತಗಳೇ ಆಗಿವೆ. ಈ ಎಲ್ಲ ಹರಿದಾಸರ ಪರಿಚಯವು ಅಂಬಾಬಾಯಿಯವರಿಗೆ ಇತ್ತು. ಇವರೆಲ್ಲರ ಹೆಸರು ಮತ್ತು ಅಂಕಿತಗಳನ್ನು ಅಂಬಾಬಾಯಿಯವರು ಪ್ರತ್ಯೇಕವಾಗಿ ದಾಖಲಿಸಿದ್ದಾರೆ. ಇವರಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಉಳಿದವರೆಲ್ಲಾ ಅe್ಞÁತರಾಗಿಯೇ ಉಳಿದಿದ್ದಾರೆ. (ನೋಡಿ ಅನುಬಂಧ-3)

1931 ರಿಂದ 1940 ರವರೆಗೆ ದಾಸತ್ವದಲ್ಲಿ ಬದುಕಿನ ಅರ್ಥವನ್ನು ಕಂಡುಕೊಂಡಿದ್ದ ಅಂಬಾಬಾಯಿಯವರಿಗೆ ಗುರುಗಳ ನಿಧನದಿಂದ ಚೇತರಿಸಿಕೊಳ್ಳಲಾಗದ ಆಘಾತ ಉಂಟಾಯಿತು. `ಮತಿಧೃತಿಗಳು ನೆಲೆಗೆ ನಿಲ್ಲದಂತಾಯಿತು'. ಈ ಅಗಲಿಕೆಯ ನೋವಿನಿಂದ ದೂರವಾಗಲು ಅಂಬಾಬಾಯಿ ಹೆಚ್ಚು ಕಾಲವನ್ನು ತೀರ್ಥಯಾತ್ರೆಯಲ್ಲೇ ಕಳೆದರು. ಶ್ರೀರಂಗಪಟ್ಟಣ, ತಿರುಮಕೂಡಲು, ನಂಜನಗೂಡು, ಸಾಗರಕಟ್ಟೆಗಳಿಗೆ ಹಲವಾರು ಬಾರಿ ಹೋಗಿ ಬಂದರು. ಅದೊಂದು ಗೊತ್ತು ಗುರಿಯಿಲ್ಲದ ಓಡಾಟ. ನಲವತ್ತು ವಯಸ್ಸಿನ ಈ ವಿರಾಗಿಣಿ ಸಂನ್ಯಾಸಿನಿಯಂತೆ ಊರೂರು ಅಲೆದಳು. ಈ ಸಂದರ್ಭದಲ್ಲಿ ಆಕೆ ಯಾವ ದಿನ ಎಲ್ಲಿ ಹೇಗೆ ತೀರಿಕೊಂಡಳು ಎಂಬುದು ಹತ್ತಿರದ ಸಂಬಂಧಿಗಳಿಗೂ ತಿಳಿಯಲಿಲ್ಲ. ಕಾವೇರಿ ನದಿಯಲ್ಲಿ ಸ್ನಾನ ಮಾಡುವಾಗ ಜಲಸಮಾಧಿಯಾದಳು ಎಂದು ಯಾರೋ ಹೇಳಿದ್ದನ್ನು ರಮಾಕಾಂತವಿಠಲರು, ನಿತ್ಯಾನಂದವಿಠಲರು ಸಂಬಂಧಿಗಳಿಗೆ ತಿಳಿಸಿದರು. ಕೇವಲ ನಲವತ್ತು ಮೂರು ವರ್ಷಗಳ ಜೀವಿತಾವಧಿಯಲ್ಲಿ ಹಲವು ಆಘಾತಗಳನ್ನು ಅನುಭವಿಸಿದ ಚೇತನ ಅಂಬಾಬಾಯಿ. ಒಂದೇ ದಿನ ಗಂಡನನ್ನೂ, ತಂದೆಯನ್ನೂ ಕಳೆದುಕೊಂಡಿದ್ದು ವಿಧಿ ಮಾಡಿದ ಅನ್ಯಾಯ, ಪುಟ್ಟ ವಿಧವೆಯನ್ನು ತೌರಿಗಟ್ಟಿ ಅನಾಥಳನ್ನಾಗಿ ಮಾಡಿದ್ದು ಅತ್ತೆ ಮನೆಯವರ ಅನ್ಯಾಯ, ಈ ಅನ್ಯಾಯಗಳಿಂದ ಬಿಡುಗಡೆಯಾಗಿ ನೋವನ್ನು ಮರೆಯಲು ಆಕೆ ತೀರ್ಥಯಾತ್ರೆಯನ್ನು ಆಶ್ರಯಿಸಿದರು. ಬದುಕಿಗೆ ಮುದ ನೀಡುತ್ತಿದ್ದ ತೀರ್ಥಯಾತ್ರೆ ಅವರ ಬದುಕಿಗೆ ಮುಳುವೂ ಆಯಿತು.

ತನ್ನ 28ನೆಯ ವಯಸ್ಸಿನಲ್ಲಿ ಭಕ್ತಿ ಸಾಹಿತ್ಯ ರಚನೆಗೆ ಪ್ರಾರಂಭಿಸಿ ಅನಂತರ ಕೇವಲ 10-12 ವರ್ಷಗಳು ಮಾತ್ರ ಜೀವಿಸಿದ್ದ ಅಂಬಾಬಾಯಿಯವರು ರಚಿಸಿದ ಕೃತಿಗಳ ಸಂಖ್ಯೆ ಅಪಾರ. ಹಸ್ತಪ್ರತಿಗಳು ಎಲ್ಲೆಲ್ಲಿಯೋ ಹಂಚಿಹೊಗಿದ್ದು, ಈಕೆ ಅe್ಞÁತ ಕವಯತ್ರಿಯಾಗಿಯೇ ಉಳಿದಿದ್ದಾರೆ. `ಪರಮಾರ್ಥ ಚಂದ್ರೋದಯ ಪತ್ರಿಕೆ'ಯ 1940 ಕ್ಕಿಂತ ಹಿಂದಿನ ಸಂಚಿಕೆಗಳಲ್ಲಿ ಈಕೆಯ ಹಲವು ಕೀರ್ತನೆಗಳು ಪ್ರಕಟವಾಗಿವೆ. ಅಷ್ಟನ್ನು ಬಿಟ್ಟರೆ ಈಕೆಯ ಕೃತಿಗಳು ಮುದ್ರಣವನ್ನು ಕಾಣದೆ ಜನರ ಬಾಯಲ್ಲಿ ಉಳಿದದ್ದೇ ಹೆಚ್ಚು. ಈಕೆಯ ಕೀರ್ತನೆಗಳು ಅಂಕಿತ ಪಲ್ಲಟಗೊಂಡು ಬೇರೆ ಹರಿದಾಸರ ಹೆಸರಲ್ಲಿ ಪ್ರಸಿದ್ಧಿಯನ್ನೂ ಪಡೆದಿವೆ. ಗೋಪಾಲವಿಠಲ, ಗುರು ಗೋಪಾಲಕೃಷ್ಣವಿಠಲ, ಕೃಷ್ಣ ಗೋಪಾಲವಿಠಲ ಈ ಅಂಕಿತಸಾಮ್ಯದಿಂದಾಗಿ, ಅಂಕಿತ ಪಲ್ಲಟಗಳಿಂದಾಗಿ, ಅಂಬಾಬಾಯಿಯವರ ಹೆಸರು ಅe್ಞÁತವಾಗಿಯೇ ಉಳಿಯಿತು.

ಗೋಪಾಲಕೃಷ್ಣವಿಠಲ ಅಂಕಿತದಲ್ಲಿ ದೊರೆತಿರುವ ಅಂಬಾಬಾಯಿಯವರ ಕೀರ್ತನೆಗಳು ಸುಮಾರು 300. ಇದರಲ್ಲಿ ಶ್ರೀಹರಿಯ ಸ್ತುತಿಗಳು ಅರ್ಧಭಾಗದಷ್ಟಿದೆ. ಕೃಷ್ಣನ ಬಾಲಲೀಲೆಗಳು, ತಿರುಪತಿಯ ಶ್ರೀನಿವಾಸನ ವೈಭವ, ಉಡುಪಿ ಕೃಷ್ಣನ ಚೆಲುವು, ಪಂಡರಾಪುರದ ಪಾಂಡುರಂಗನ ಭಕ್ತ ವಾತ್ಸಲ್ಯ, ಕರಿಗಿರಿ ನರಸಿಂಹನ ಕರುಣೆ, ಇವುಗಳನ್ನು ಮತ್ತೆ ಮತ್ತೆ ನಿರೂಪಿಸಿದ್ದಾರೆ. ಒಂದೊಂದೇ ನುಡಿಯಲ್ಲಿ ದಶಾವತಾರ ಸ್ತುತಿಗಳನ್ನು ಅಳವಡಿಸುವ ನೈಪುಣ್ಯತೆಯನ್ನು ಇವರ ಕೃತಿಗಳಲ್ಲಿ ಕಾಣಬಹುದು. ಈ ಕೀರ್ತನೆಗಳ ಬಹುಪಾಲು ತೀರ್ಥಕ್ಷೇತ್ರ ಸ್ತುತಿಗಳೇ ಆಗಿರುವುದು ಒಂದು ವೈಶಿಷ್ಟ್ಯ.

ಹನುಮ-ಭೀಮ-ಮಧ್ವ ಈ ಅವತಾರತ್ರಯಗಳ ಕಲ್ಪನೆಯ ಹಿನ್ನೆಲೆಯನ್ನು ಒಳಗೊಂಡ ಕೃತಿಗಳು ಸುಮಾರು 30. ಅದರಲ್ಲೂ ಕದರುಮಂಡಲಗಿ ಹನುಮಂತ (ಕೀ. 104, 108, 111, 123, 124) ಹಂಪೆಯ ಯಂತ್ರೋದ್ಧಾರ ಪ್ರಾಣದೇವರು ( ಕೀ. 110, 116, 120, 122), ಚಳ್ಳಕೆರೆ ಹನುಮಂತ (113, 114), ಬೆಳಗಾವಿಯ ವೀಣೆ ಧರಿಸಿದ ಹನುಮಂತ (117, 127), ಮೊದಲ ಘಟ್ಟದ ಹನುಮಂತ (121, 126), ಇವರ ಹಿರಿಮೆಯನ್ನು ಅನನ್ಯತೆಯಿಂದ ಕೊಂಡಾಡಿದ್ದಾರೆ. ಹನುಮನಾಗಿ ಮಾಡಿದ ರಾಮನ ಸೇವೆ, ಭೀಮನಾಗಿ ತೋರಿದ ಕೃಷ್ಣಭಕ್ತಿ, ಆನಂದತೀರ್ಥರಾಗಿ ಮಾಡಿದ ವೇದವ್ಯಾಸರ ಸೇವೆ, ಇವುಗಳನ್ನು ಚಿತ್ರಿಸಿದ್ದಾರೆ. ಹನುಮಂತನ ನಿಷ್ಠೆ, ಮೌನ, ಸಾಮಥ್ರ್ಯ, ಯೋಗಸಿದ್ಧಿ, ಅಪರೋಕ್ಷ e್ಞÁನ, ಧ್ಯಾನಮುದ್ರೆ, ಸತ್ವಗುಣ, ಸುe್ಞÁನ, ಇವು ಭೀಮ ಮತ್ತು ಆನಂದತೀರ್ಥರಲ್ಲೂ ಹರಿದು ಬಂದ ಹಿನ್ನೆಲೆಯಲ್ಲಿ ಅವತಾರತ್ರಯಗಳ ಚಿತ್ರಣವಿದೆ.

ಆನಂದತೀರ್ಥರಿಂದ ಪ್ರದ್ಯುಮ್ನತೀರ್ಥರವರೆಗೆ ರಚಿಸಲಾಗಿರುವ 12 ಯತಿಸ್ತುತಿಗಳು, 50 ಹರಿದಾಸ ಸ್ತುತಿಗಳು, ಒಂದು ರೀತಿಯಲ್ಲಿ ಪ್ರಶಸ್ತಿಪರವಾಗಿ ಗುರುಗಳ ಹಿರಿಮೆಯನ್ನು ನಿರೂಪಿಸುತ್ತವೆ. ಹರಿದಾಸ ಸ್ತುತಿಯ ಬಹುಪಾಲು ತಂದೆ ಮುದ್ದುಮೋಹನದಾಸರನ್ನು ಕುರಿತ ಸ್ತುತಿಗಳೇ ಆಗಿವೆ. ಆತ್ಮ ಶೋಧನೆ, ಲೋಕನೀತಿ, ತತ್ವನಿರೂಪಣೆ, ಕಥನಾತ್ಮಕ ಹಾಡುಗಳು, ವಿಶೇಷ ಸಂದರ್ಭದ ಹಾಡುಗಳು, ಲಕ್ಷ್ಮಿ, ಭಾರತಿ, ತುಳಸಿ ಮತ್ತು ನದೀ ದೇವತೆಗಳ ಸ್ತುತಿಗಳು ಹೀಗೆ ವ್ಯಾಪಕವಾದ ಕೀರ್ತನ ಸಾಹಿತ್ಯವನ್ನು ಅಂಬಾಬಾಯಿ ರಚಿಸಿದ್ದಾರೆ. ಶುದ್ಧವಾದ ಭಾಷೆ, ಲಯe್ಞÁನ ವಿವಿಧ ಛಂದೋರೂಪದ ಪರಿಚಯ, ಭಾರತ, ಭಾಗವತದ ಪುರಾಣಗಳ ಅಧ್ಯಯನದಿಂದ ಪಡೆದುಕೊಂಡ ಪುರಾಣಪ್ರಜ್ಞೆ ನಿರೂಪಣಾ ಚಾತುರ್ಯ ಇವುಗಳಿಂದ ಅಂಬಾಬಾಯಿಯವರ ಕೃತಿಗಳು ವಿಶಿಷ್ಟತೆಯನ್ನು ಪಡೆದುಕೊಂಡಿವೆ.

ಹತ್ತೊಂಬತ್ತನೆಯ ಶತಮಾನದ ಹರಿದಾಸ ಸಾಹಿತ್ಯ ಸಂಗ್ರಹದಲ್ಲಿ ತೊಡಗಿದ್ದ ನನಗೆ ಅಂಬಾಬಾಯಿಯವರ ಕೃತಿಗಳು ಹಸ್ತಪ್ರತಿರೂಪದಲ್ಲಿ ದೊರೆತದ್ದು 1989 ರಲ್ಲಿ. ನಿತ್ಯಾನಂದವಿಠಲದಾಸರ ಕೃತಿಸಂಗ್ರಹವನ್ನು ನನ್ನ ಅಧ್ಯಯನಕ್ಕೆ ಬಳಸಿಕೊಳ್ಳಲು ಶ್ರೀಮತಿ ಶಾಂತಾನಾಗರಾಜ್ ಅವರು ನನಗೆ ನೀಡಿದರು. ಆ ಸಂಗ್ರಹದಲ್ಲಿದ್ದ ಅಂಬಾಬಾಯಿ ಅವರ ಕೃತಿಗಳನ್ನು ಅಭ್ಯಾಸಮಾಡಲು ಇದರಿಂದ ಸಾಧ್ಯವಾಯಿತು. 2001 ರಲ್ಲಿ ಅಂಬಾಬಾಯಿ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಕೃತಿಗಳ ಬಗ್ಗೆ ಅಧ್ಯಯನ ಮಾಡುವ ಅವಕಾಶವನ್ನೂ ಶ್ರೀಮತಿ ಶಾಂತಾನಾಗರಾಜ್ ಅವರೇ ಒದಗಿಸಿಕೊಟ್ಟರು. ತಮ್ಮಲ್ಲಿದ್ದ ಎಲ್ಲ ಹಸ್ತಪ್ರತಿಗಳನ್ನೂ ನೀಡಿ ಉಪಕರಿಸಿದ್ದಾರೆ. ಪ್ರೊ. ಜಿ. ಅಶ್ವತ್ಥÀನಾರಾಯಣ, ಶ್ರೀ ಎಸ್.ಜಿ. ರಾಮಚಂದ್ರರಾಯರು ಮತ್ತು ಡಾ. ಟಿ.ಎನ್. ನಾಗರತ್ನ ಅವರು ಹಲವು ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಗೆಳೆಯರಾದ ಎಸ್. ಬಿಳಿಗಿರಿವಾಸನ್ ಮತ್ತು ಚಂದ್ರಶೇಖರ್ ಅವರು ಸಂಪಾದನ ಕಾರ್ಯದಲ್ಲಿ ನೆರವು ನೀಡಿದ್ದಾರೆ. ಇವರೆಲ್ಲರಿಗೂ ಕೃತಜ್ಞನಾಗಿದ್ದೇನೆ.

by ಡಾ. ಅನಂತಪದ್ಮನಾಭರಾವ್.

****


by Sri. Nagaraju Haveri

" ಶ್ರೀ ರಾಯರ ಅಂತರಂಗ ಭಕ್ತೆ ಅಂಬಾಬಾಯಿ "

ಹೆಸರು : ಅಂಬಾಬಾಯಿ

ತಂದೆ : ಚೆಳ್ಳಕೇರಿ ಭೀಮಸೇನ ರಾವ್

ತಾಯಿ : ಸಾಧ್ವೀ ಭಾರತೀಬಾಯಿ ( ಯಾದವೇಂದ್ರ ವಿಠಲ )

ಅಜ್ಜಿ : ರುಕ್ಮಿಣೀ ಬಾಯಿ ( ಸೀತಾಪತಿ ವಿಠಲ )

ಕುಲ ಗುರುಗಳು : ಶ್ರೀ ಮಂತ್ರಾಲಯ ಪ್ರಭುಗಳು

ಗುರುಗಳು : ಶ್ರೀ ಸುಶೀಲೇಂದ್ರ ತೀರ್ಥರು

ಅಂಕಿತ : ಗೋಪಾಲಕೃಷ್ಣ ವಿಠಲ

ಉಪದೇಶ ಗುರುಗಳು :ಶ್ರೀ ತಂದೆ ಮುದ್ದು ಮೋಹನ ದಾಸರು

ತಮ್ಮ : ಶ್ರೀ ಸಿ ಕೃಷ್ಣರಾಯರು ( ರಮಾಕಾಂತ ವಿಠಲ )

ಕಾಲ : ಕ್ರಿ ಶ : 1902 - 1943

" ಕೃತಿ ರಚನೆ "

ದೀರ್ಘ ಕೃತಿಗಳು....

೧. ತತ್ತ್ವ ಸಾರಾಮೃತ

೨. ಭಾಗವತ ಸಾರೋದ್ಧಾರ ಕಾವ್ಯ

೩. ಕೃಷ್ಣ ಬಾಲ ಲೀಲೆ ಕಾವ್ಯ

೪. ಜೋಗಳ ಪದ

೫. ಕನ್ನಡ ಶ್ರೀ ವೆಂಕಟೇಶ ಸ್ತೋತ್ರ

೬. ಶ್ರೀ ರಾಘವೇಂದ್ರ ಕಥಾಮೃತ ಕಾವ್ಯ

೭. ಶ್ರೀ ಸುಶೀಲೇಂದ್ರ ಸ್ತುತಿ

ಜೊತೆಗೆ ಉಗಾಭೋಗ, ಪದಗಳು ಸೇರಿ ಸುಮಾರು 250 ಕ್ಕೂ ಅಧಿಕ ಕೃತಿಗಳು ರಚಿಸಿದ್ದಾರೆ.

ಅಂಬಾಬಾಯಿ ಅವರು ಹೆಚ್ಚು ಓದಿಲ್ಲದವರಾದರೂ ಪಂಡಿತರೂ, ವಿದ್ವಜ್ಜನ ತಲೆದೂಗುವಂತಹ ಪ್ರಮೇಯ ಭರಿತ ಪ್ರೌಢ ಶೈಲಿಯ ಪದಗಳು ರಚಿಸಿದ್ದಾರೆ.

ಹರಿ ಪಾರಮ್ಯವನ್ನು ಸಾರುವ ಭಕ್ತಿ ರಸ ಭರಿತವಾದ ಅಮ್ಮನವರ ಕೃತಿಗಳು ಕವಯಿತ್ರಿಯ ಅಸಾಧಾರಣ ಪ್ರತಿಭಾ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿವೆ.

ಪ್ರಮೇಯ ಪುಂಜಗಳನ್ನು ಹಿಂಜಿ ಹೇಳುವ ಪದಗಳಲ್ಲಿ ರಂಜಕತೆಯೂ, ರಸಾಳತೆಯೂ ಕಿಂಚಿದಿವ ಕುಂದಿ ಕುಂದಿದಂತೆ ತೋರಿದರೂ ಇವರ ಕವನಗಳಲ್ಲಿ ನೈಜತೆಯೂ, ಸಾರಲ್ಯ ಹಾಗೂ ಸಾಹಿತ್ಯ ಗುಣಗಳು ಮುಪ್ಪರಿಗೊಂಡು ರಸದ ಹೊನಲಾಗಿ ಹರಿದಿದೆ.

ಅಮ್ಮನವರ ಕೃತಿಗಳಲ್ಲಿ ಹರಿಭಕ್ತಿ ಗುರುಭಕ್ತಿ ಸಂಗಮಿಸಿ ಸಾಹಿತ್ಯದ ರಂಗ ವೇದಿಕೆಯ ಮೇಲೆ ಶಾಸ್ತ್ರೀಯ ತತ್ತ್ವಗಳ ಸಮ್ಯಗ್ ಪ್ರದರ್ಶನವು ಏರ್ಪಡುವಂತೆ ಮಾಡಿವೆ.

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

*******

2 comments:

  1. Tumbaa upayuktavaada mahiti. Swalpa kasta bandare navella hedari hogutteve. Dhairya, paramatma nalli bhakti eddare maatra e samsara bandhana dinda mukti siguttade.

    ReplyDelete
  2. ಅದ್ಭುತವಾದ ಸಂಶೋಧನಾ ಬರಹ: ಆಕೆಯ ದಿನಚರಿ ಪೂರ್ತಿ ದೊರೆತಿದ್ದರೆ ಇನ್ನೂ ಮಾಹಿತಿ ಸಿಕ್ಕುತ್ತಿತ್ತೋ ಎನಿಸುತ್ತದೆ. ಡಾ. ಅನಂತ ಫದ್ಮನಾಭ ರಾಯರ ಪ್ರಯತ್ನ, ಡಾ. ಶಾಂತಾ ನಾಗರಾಜ್ ಅವರ ಪರಿಶ್ರಮ ನಿಜಕ್ಕೂ ಕರ್ನಾಟಕ ಹರಿದಾಸ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆ.

    ReplyDelete