Monday 31 May 2021

narasimha murthy dasaru ಶ್ರೀ ಜೆ ನರಸಿಂಹಮೂರ್ತಿ 2021



narasimha murthy dasaru 

ankita - narasimha vittala

ನರಸಿಂಹ ವಿಠಲಾಂಕಿತ ಶ್ರೀ ಜೆ ನರಸಿಂಹಮೂರ್ತಿ May 2021

" ಪರಮ ಸಾತ್ವಿಕ ಚೇತನಕ್ಕೆ ಸದ್ಗತಿಯಾಗಲಿ !! "

" ಶ್ರೀ ರಾಯರ ಅಂತರಂಗ ಭಕ್ತರೂ - ಕಾರುಣ್ಯಪಾತ್ರರು ಆದ ಶ್ರೀ ನರಸಿಂಹ ವಿಠಲಾಂಕಿತ ಶ್ರೀ ಜೆ ನರಸಿಂಹಮೂರ್ತಿಗಳ ವೈಕುಂಠ ಯಾತ್ರೆ "- May 2021

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ 

ನವಾಣಿ ಗೃಹ್ಣಾತಿ ನರೋSಪರಾಣಿ ।

ತಥಾ ಶರೀರಾಣಿ ವಿಹಾಯ ಜೀರ್ಣಾನ್ಯಾನಿ 

ಸಂಯಾತಿ ನವಾನಿ ದೇಹಿ ।। ಭಗವದ್ಗೀತಾ - 2/22 ।।

ಒಬ್ಬ ಮನುಷ್ಯನು ಹೇಗೆ ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವನೋ - ಹಾಗೆಯೇ ಆತ್ಮವು ಜೀರ್ಣವಾದ ದೇಹವನ್ನು ಬಿಟ್ಟು ಹೊಸ ದೇಹವನ್ನು ಸ್ವೀಕರಿಸುತ್ತದೆ. 

" ವಿಶೇಷಾರ್ಥ "

ಶ್ರೀ ಹರಿ ಪರಮಾತ್ಮನ ಕೃಪೆಯಿಂದ ಜೀವಾತ್ಮವು ಇನ್ನೊಂದು ದೇಹವನ್ನು ಪ್ರವೇಶಿಸುವುದು ಸಾಧ್ಯವಾಗುವುದು. 

ಸ್ನೇಹಿತನು - ತನ್ನ ಸ್ನೇಹಿತನ ಆಸೆಯನ್ನು ನಡೆಸಿಕೊಡುವಂತೆ - ಶ್ರೀ ಹರಿ ಪರಮಾತ್ಮ ಜೀವಾತ್ಮನ ಆಸೆಯನ್ನು ನಡೆಸಿಕೊಡುತ್ತಾನೆ. 

ವೇದೋಪನಿಷತ್ತುಗಳು ಆತ್ಮ ಮತ್ತು ಪರಮಾತ್ಮ ಒಂದೇ ವೃಕ್ಷದ ಮೇಲೆ ಕುಳಿತಿರುವ ಎರಡು ಗೆಳೆಯ ಪಕ್ಷಿಗಳಿಗೆ ಹೋಲಿಸುತ್ತವೆ. 

ಒಂದು ಪಕ್ಷಿಯು [ ಜೀವಾತ್ಮ ] ವೃಕ್ಷದ ಹಣ್ಣನ್ನು ತಿನ್ನುತ್ತದೆ. 

ಇನ್ನೊಂದು ಪಕ್ಷಿಯು [ ಪರಮಾತ್ಮ ] ತನ್ನ ಗೆಳೆಯನನ್ನು ನೋಡುತ್ತದೆ. 

ಒಂದು ಪಕ್ಷಿಯು [ ಜೀವಾತ್ಮ ] ಪ್ರಾಪಂಚಿಕ ವೃಕ್ಷದ ಹಣ್ಣುಗಳಿಗಾಗಿ ಆಸೆ ಪಟ್ಟಿದೆ. 

ಮತ್ತೊಂದು ತನ್ನ ಸ್ನೇಹಿತ ಮಾಡುವುದನ್ನು ನೋಡುತ್ತಾ ಸುಮ್ಮನಿದೆ. 

ಶ್ರೀ ಹರಿ ಪರಮಾತ್ಮ ವೀಕ್ಷಿಸುವ ಪಕ್ಷಿ. 

ಜೀವಾತ್ಮ ತಿನ್ನುವ ಪಕ್ಷಿ. 

ಈರ್ವರೂ ಸ್ನೇಹಿತರಾದರೂ.... 

ಒಂದು ಪ್ರಭು - ಇನ್ನೊಂದು ಸೇವಕ. 

ಜೀವಾತ್ಮವು ಈ ಸಂಬಂಧವನ್ನು ಮರೆತಿರುವುದೇ ಒಂದು ಮರದ ಮೇಲಿನಿಂದ ಮತ್ತೊಂದು ಮರಕ್ಕೆ ಅಥವಾ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಬದಲಾವಣೆ ಮಾಡುವುದಕ್ಕೆ ಕಾರಣ. 

ಐಹಿಕ ದೇಹವೆನ್ನುವ ವೃಕ್ಷದ ಮೇಲೆ ಜೀವಾತ್ಮವು ಬಹು ಕಷ್ಟ ಪಡುತ್ತದೆ. 

ಆದರೆ ಅದು ಶ್ರೀ ಹರಿ ಪರಮಾತ್ಮನನ್ನು ಸರ್ವೋತ್ತಮನಾದ " ಪರಮ ಗುರು " ಯೆಂದು ಒಪ್ಪಿಕೊಳ್ಳುತ್ತಲೇ ಅಧೀನ ಪಕ್ಷಿಯು ಎಲ್ಲ ದುಃಖದಿಂದ ಮುಕ್ತವಾಗುತ್ತದೆ. 

ಅದಕ್ಕೆ ಶ್ರೀ ಬೃಹಸ್ಪತ್ಯಾಂಶ ಸಂಭೂತರಾದ ಶ್ರೀ ಜಗನ್ನಾಥದಾಸರು... 

ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ।

ಭಗವಂತನೆಂಬ ಆಗಸದಲ್ಲಿ ಪಸರಿಸಿದ ।।

ಎಂದೂ ಹೇಳಿದ್ದು. 

" ಮುಕ್ತಿ ಪಥ "

ಶ್ರೀಯುತ ಜೆ ನರಸಿಂಹಮೂರ್ತಿಗಳು ಪರಮ ಸಾತ್ವಿಕರೂ ಮತ್ತು ಸಜ್ಜನರು ಹಾಗೂ ಅಜಾತ ಶತ್ರುಗಳು. 

ಬಹುಮುಖ ವ್ಯಕ್ತಿತ್ವದ ಇವರು ಅನೇಕ ಯತಿಗಳ - ಹರಿದಾಸರ ಬಗ್ಗೆ ನಾಟಕ ರಚಿಸಿ - ಕಥೆ - ಮಾತು [ ಡೈಲಾಗ್ಸ್ ] - ನಿರ್ದೇಶನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಇವರು ಶ್ರೀ ರಾಯರ ಪ್ರೇರಣೆಯಂತೆ " ನರಸಿಂಹ ವಿಠಲ " ಅಂಕಿತದಲ್ಲಿ ಸುಮಾರು 2000 ಕ್ಕೂ ಅಧಿಕ ಶ್ರೀ ರಾಯರ ಪರವಾದ ಕೃತಿಗಳನ್ನು ರಚಿಸಿ ಶ್ರೀ ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ ಪೂತಾತ್ಮರು. 

ಇವರ ಕೃತಿಗಳನ್ನು ಶ್ರೀ ರಾಯರ ಮಠವು ಮುದ್ರಿಸಿ ಪ್ರಕಟಿಸಿದೆ. 

ಅಂಥಾ ಉತ್ತಮವಾದ ಚೇತನ ಕಾಲನ ಕರೆಗೆ ಓಗೊಟ್ಟು - ಈದಿನ ಪ್ರಾತಃ ಕಾಲದಲ್ಲಿ ವೈಕುಂಠ ಪಥದಲ್ಲಿ ನಡೆದರು. 

ಈ ಉತ್ತಮ ಚೇತನಕ್ಕೆ " ಮೋಕ್ಷಪ್ರದನಾದ ಶ್ರೀ ನರಸಿಂಹ " ನು ಉತ್ತಮ ಲೋಕವನ್ನು ಕರುಣಿಸಲಿ. 

ಈ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಹರಿ ವಾಯು ಗುರುಗಳು ಅವರ ಕುಟುಂಬಕ್ಕೆ ನೀಡಲಿ !!

(received in whatsApp)

***


No comments:

Post a Comment