Sunday, 23 May 2021

abhinava purandara dasa ಅಭಿನವ ಪುರಂದರದಾಸರು

  " ಶ್ರೀ ಅಭಿನವ ಪುರಂದರದಾಸರು "

ಹೆಸರು : ಶ್ರೀ ಶ್ರೀ ಅಪ್ಪಣ್ಣ ಭಾಗವತ 

ಅಂಶ : ಶ್ರೀ ಬೃಹಸ್ಪತ್ಯಾಚಾರ್ಯರು 

ಕಕ್ಷೆ : 10 

ಇವರು ಶ್ರೀ ಪುರಂದರದಾಸರ ಮೂರನೇ ಮಗ. 

ಇವರು ತಂದೆಯಿಂದಲೇ " ಅಭಿನವ ಪುರಂದರ ವಿಠಲ " ಯೆಂದು ಅಂಕೀತೋಪದೇಶ ಹೊಂದಿ - ತಮ್ಮ ಮನೆತನದ ಪರಂಪರೆಯ ನಂದಾದೀಪವು ನಂದದಂತೆ - ಎಂದೂ ಕುಂದದಂತೆ - ಇನಿತೂ ಕೆಂಡದಂತೆ ಮುಂದುವರೆಸಿಕೊಂಡು ಬಂದರು. 

ಇವರ ಪದ್ಯಗಳಲ್ಲಿ ಕವಿತ್ವದ ಜೊತೆಗೆ ಭಕ್ತಿಯ ಪ್ರಭಾವವು ಚನ್ನಾಗಿ ಮುದ್ರೆಯೊತ್ತಿದೆ. 

" ಶ್ರೀ ಅಭಿನವ ಪುರಂದರ ವಿಠಲ " ಯೆಂಬ ಮುದ್ರಿಕೆಯಿಂದ ಇವರು ರಚಿಸಿದ ಪದಗಳು ಭಾವ ಕೋಮಲತೆಯಿಂದಲೂ - ಭಾಷಾ ಸೌಂದರ್ಯದಿಂದಲೂ - ವಾಚನೀಯವೂ - ರೋಚನೀಯವೂ ಆಗಿದೆ. 

ಶ್ರೀ ವ್ಯಾಸರಾಜ ಗುರುಸಾರ್ವಭೌಮರನ್ನು ಹೊಗಳಿ ಹಾಡಿದ ಅವರ ಒಂದು ಕೃತಿಯನ್ನು ನೋಡೋಣ... 

ಎನ್ನ ಜನ್ಮ ಸಫಲವಾಯುತು -

ನೀವು ಕೇಳಿರಯ್ಯಾ ।

ಅನ್ಯರನ್ನಾಶ್ರಯಿಸಲ್ಯಾತಕೆ ।

ತನ್ನ ತಾನೇ ವ್ಯಾಸಮುನಿ ।

ಎನ್ನ ಕೈ ಪಿಡಿದ ಮ್ಯಾಲೆ ।। ಪಲ್ಲವಿ ।।

... ಛಂದದಿಂದ ಪೊರೆವ ಅಭಿನವ ।

ಪುರಂದರ ವಿಠಲನ ಭಜಿಪ ।

ತಂದು ತೋರಿದ -

ವೈಷ್ಣವ ಕುಮದೇಂದು ।

ವ್ಯಾಸರಾಯರ ಕಂಡ ಮ್ಯಾಲೆ ।।

ಈ ಶ್ರೀ ಅಪ್ಪಣ್ಣ ಭಾಗವತರು ಚಿಕ್ಕವರಿದ್ದಾಗ ಶ್ರೀ ಪುರಂದರದಾಸರು ಬ್ರಾಹ್ಮಣ ಭೋಜನಕ್ಕಾಗಿ ತುಪ್ಪ ತರಲು ಕಳಿಸಿದ್ದರು. 

ಅಂಗಡಿಯಿಂದ ಅಪ್ಪಣ್ಣನು ಬೇಗ ಬಾರದಾಗ ಶ್ರೀ ಪುರಂದರಾರ್ಯರು ಚಿಂತಾಕ್ರಾಂತರಾಗಿ ಕುಳಿತರು. 

ಆಗ ಶ್ರೀ ಪಂಢರ ಪುರಾಧೀಶ ಶ್ರೀ ವಿಠಲನೇ ಅಪ್ಪಣ್ಣನ ವೇಷದಿಂದ ತುಪ್ಪ ತೆಗೆದುಕೊಂಡು ಬಂದು ಬಡಿಸಿದನು. 

ಬ್ರಾಹ್ಮಣ ಭೋಜನ ಆದ ಬಳಿಕ ನಿಜವಾದ ಅಪ್ಪಣ್ಣನು ತುಪ್ಪ ತೆಗೆದುಕೊಂಡು ಮನೆಗೆ ಬಂದಾಗ ಶ್ರೀ ಪುರಂದರ ದಾಸರಿಗೆ ದಿಗಿಲಾಯಿತು. 

ದಿವ್ಯ ದೃಷ್ಟಿಯಿಂದ ನೋಡಿದಾಗ ಪರಮಾನಂದವೂ ಆಯಿತು. ತಮ್ಮ ತಂದೆಯ ಮೇಲೆ ಶ್ರೀ ಹರಿಯು ತೋರಿದ ಕಾರುಣ್ಯವನ್ನು ನೆನೆದು ಗದ್ಗದಿತ ಕಂಠದಿಂದ, ಮನದುಂಬಿ..... 

ಯೆಂದಪ್ಪಿಕೊಂಬೆ ರಂಗಯ್ಯನ ।

ಯೆಂದಪ್ಪಿಕೊಂಬೆನೊ ।

ಅಪ್ಪಣ್ಣ ಭಾಗವತ -

ರೂಪವೂ ತಾನಾಗಿ ।

ತುಪ್ಪದ ಬಿಂದಿಗಿ 

ತಂದ ಮುಕುಂದನ ।।

ಯೆಂದು ಅತ್ಯಂತ ಭಕ್ತಿಯಿಂದ ಸ್ತೋತ್ರ ಮಾಡಿದರು. 

ಶ್ರೀ ಅಭಿನವ ಪುರಂದರ ದಾಸರು 4 ಪದಗಳು, 1 ಸುಳಾದಿ, 1 ಉಗಾಭೋಗ ರಚಿಸಿದ್ದಾರೆ. 

ಭಕುತರಿಗಾಗಿ ಬಾಳುವೆ ಅಯ್ಯಾ ನೀನು । ಭಕುತರಿಗಾಗಿ ಬದುಕುವೆ ಅಯ್ಯಾ ನೀನು । ಭಕುತರಿಗಾಗಿ ಗಳಿಸುವೆ ಅಯ್ಯಾ ನೀನು । ಭಕುತರಿಗಾಗಿ ಘತೈಸುವೆ ನೀನು । ಸಕಳೇಶ್ವರ ನಿನಗೊಂದು ಕಾರಣವಿಲ್ಲ । ಮುಕುತೇಶ್ವರ ನಿನಗೊಂದು ಕಥನವಿಲ್ಲ । ಭಕುತರಿಗಾಗಿ ನಿನ್ನ ಜೀವನವಯ್ಯಾ । ಭಕ್ತವತ್ಸಲ ನಮ್ಮ ಪುರಂದರ ವಿಠಲ । ಭಕುತರಿಗಾಗಿ ನಿನ್ನ ಬಾಳುವೆ ಅಯ್ಯಾ ।।

*****

No comments:

Post a Comment