"
Name: Manohara Vittalaru
Earlier Name: Booraladinni Monappanavaru
Ankita: manohara vittala
" ಶ್ರೀ ಮನೋಹರವಿಠ್ಠಲಾಂಕಿತ " ಬೂರಲದಿನ್ನಿ ಶ್ರೀ ಮೋನಪ್ಪನವರು
( ಕ್ರಿ ಶ 1703 - 1772 )
ಶ್ರೀ ಜಗನ್ನಾಥದಾಸರ ಶಿಷ್ಯರಾದ ಇವರು " ಮನೋಹರ ವಿಠಲ " ಎಂಬ ಅಂಕಿತದಿಂದ ಕೀರ್ತನೆಗಳನ್ನೂ, ಕಿರು ಕಾವ್ಯಗಳನ್ನೂ, ಪ್ರಾಕೃತ ಸ್ತೋತ್ರಗಳನ್ನೂ ರಚಿಸಿದ್ದಾರೆ
ಇವರ ಹೆಸರು ಬೂರಲದಿನ್ನಿ ಶ್ರೀ ಮೋನಪ್ಪ ( ನಾರಪ್ಪ ).
ಶ್ರೀ ಮನೋಹರವಿಠಲರು ಜಗನ್ನಾಥದಾಸ ವಿರಚಿತ " ಹರಿಕಥಾಮೃತಸಾರ " ಕ್ಕೆ ಸುಂದರವಾದ ಫಲಶ್ರುತಿಯನ್ನು ರಚಿಸಿದ್ದಾರೆ.
ಶ್ರೀ ಮನೋಹರವಿಠಲರು ರಚಿಸಿದ :-
" ಮನ್ಮಥ ವಿಲಾಸ " ವು ೧೯೭ ಪದ್ಯಗಳುಳ್ಳ ಷಟ್ಪದಿ ಕಾವ್ಯವಾಗಿದೆ.
" ಶ್ರೀ ಕೃಷ್ಣ ಜಯಂತೀ " ಕಾವ್ಯದಲ್ಲಿ ವಾರ್ಧಿಕ ಷಟ್ಪದಿಯ ೧೦೦ ಪದ್ಯಗಳಿರುತ್ತವೆ.
ಶ್ರೀ ಮನೋಹರವಿಠಲರ ಕಾವ್ಯದಲ್ಲಿ ಅರ್ಥಾನುಗುಣವಾದ ಪ್ರಾಸದ ಕಿಂಕಿಣಿ ನಾದವು ಹಿತಮಿತವಾಗಿ ಕಂಡು ಬರುತ್ತವೆ. ಕಥಾ ವಸ್ತು ಹಳೇದಾದರೂ ಕವಿ ಪ್ರಜ್ಞೆಯು ಕಲ್ಪನೆಯ ವೈಚಿತ್ರ್ಯದಿಂದ ಹೊಸತನವನ್ನು ಸಾಧಿಸಿ ತೋರಿಸಿದೆ.
ಈ ಪುರಾಣ ಕಥೆಗಳ ಕಲ್ಪನಾ ಕುಶಾಲವಾದ ಕವಿ ಪ್ರತಿಭೆಯು ಸ್ವಂತಿಕೆಯ ಧೀಮಂತಿಕೆಯಿಂದ ತನ್ನ ತನವನ್ನು ಮೆರೆದಿದೆ.
ಕುಮಾರವ್ಯಾಸ, ಲಕ್ಷ್ಮೀಶರ ಶೈಲಿಯ ಬಿಣ್ಪು, ಕಾವ್ಯದ ಕೆಚ್ಚು ಎರಡೂ ಇವರ ಶಬ್ದ ಶೈಲಿಯಲ್ಲಿ ಜೀವನಾಡಿಗಳಾಗಿ ಮೂಡಿ ಮಿಂಚಿವೆ. ಇವರ ಶೈಲಿಯ ಶ್ರೀಮಂತಿಕೆಗೆ ಅವರ ಹರಿಕಥಾಮೃತಸಾರ ಫಲಶೃತಿಯಲ್ಲಿ..
ವಾದಿಗಳ ಎದೆ ಶೂಲ ಕುಮತವ ।
ಭೇದಿಸುವ ಕರ ವಾಲ ಕಾಮ ।
ಕ್ರೋಧತರಿದಾನಂದವೀವುದು ಹರಿಕಾಥಾಮೃತವು ।।
ಪಾದ ಮಾತ್ರವ ಪಠಿಸುವಗೆ ಗಂಗಾದಿ ಸ್ನಾನ ಫಲವು ಬಹದು । ಮು ।
ನ್ನೋದಿದವನೇ ಧನ್ಯತಮ ಪುಸ್ತಕ ಸಮಗ್ರವನು ।।
ಇದು ಸುಧಾಮಣಿ । ಚಿಂತಿಸುವರಿ ।
ಗಿದು ಅಭೀಷ್ಟವನೀವ ಸುರತರು ।
ವಿದುಮನದ ಕಾಮಿತವ ಕರಕೊಂಬುದಕೆ ಸುರಧೇನು ।।
ಇದು ಚತುರವಿಧದಾ । ಪುರುಷಾ ।
ರ್ಥದ ಸುಮಾರ್ಗವ ಭಕ್ತಿಯಿಂದಲಿ ।
ಸದಮಲ ಶ್ರೀ ಹರಿಕಥಾಮೃತಸಾರ ಕೇಳ್ವರಿಗೆ ।।
ಶ್ರೀ ಮನೋಹರವಿಠಲರ ವೈಶಿಷ್ಟ್ಯ ಯೇನೆಂದರೆ....
ಶ್ರೀ ಪ್ರಾಣೇಶದಾಸರು ಸ್ವಯಂ ತಾವೇ ಶ್ರೀ ಮನೋಹರವಿಠಲ ಕೃತ " ಕೃಷ್ಣ ಜಯಂತೀ ಕಥಾ, ಮನ್ಮಥ ವಿಲಾಸ " ಕಾವ್ಯಗಳನ್ನು ತಮ್ಮ ಹಸ್ತಾಕ್ಷರಗಳಿಂದ ಬರೆದಿಟ್ಟಿದ್ದಾರೆ. ಇದರ ಮೇಲಿಂದ ಶ್ರೀ ಮನೋಹರವಿಠಲರ ಕೃತಿಗಳು ಎಷ್ಟು ಮನೋಹರವಾಗಿರುವವು ಎಂಬ ಕಲ್ಪನೆ ಬರಲು ಸಾಕು!
ಶ್ರೀ ಮನೋಹರವಿಠಲ ಕೃತ " ಅನಂತಕಥಾ " ಎಂಬ ಕಾವ್ಯವನ್ನು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಗೋರೆಬಾಳು ಹನುಮಂತರಾಯರು ( ಶ್ರೀ ಸುಂದರವಿಠಲರು ) ಶೋಧಿಸಿ ಪ್ರಕಟಿಸಿದ್ದಾರೆ.
ಶ್ರೀ ಮನೋಹರವಿಠಲ ಕೃತ " ಗದಾಯುದ್ಧ, ಪಂಚ ಪರ್ವ ಭಾರತ, ಸಂಕೋಚ ಭಾರತ " ಮುಂತಾದ ಕಾವ್ಯಗಳು ಅಮುದ್ರಿತವಾಗಿಯೇ ಉಳಿದಿವೆ.
ಶ್ರೀ ಮನೋಹರವಿಠಲರ ಕೃತಿಗಳಲ್ಲಿ " ಅನಂತಕಥಾ " ಕಾವ್ಯವು ಅರಸು ಕೃತಿಯಾಗಿದೆ. ವಾರ್ಧಿಕ ಷಟ್ಪದಿಯ ವೃತ್ತದಲ್ಲಿ ಬರೆಯಲ್ಪಟ್ಟ ಈ ಕಾವ್ಯವು ಮಹಾಕಾವ್ಯದ ಮಹತಿಯನ್ನು ಮೆರೆದಿದೆ.
ಕುಮಾರವ್ಯಾಸ, ಲಕ್ಷ್ಮೀಶ, ಕುಮಾರವಾಲ್ಮೀಕೀ ಮುಂತಾದವರ ಕೃತಿಗಳಿಗೆ ಹೊಯ್ ಕೈಯ್ಯಾಗಿ ನಿಲ್ಲಬಲ್ಲ ಈ ಅನುಪಮ ಮಹಾ ಕಾವ್ಯದಲ್ಲಿ ವೈಷ್ಣವೀಯ ಪ್ರತಿಭೆಯ ಕಾವ್ಯಮುಖದ ದರ್ಶನವಾಗುತ್ತದೆ. ಇದರ ಕಥಾ ವಸ್ತು ಮಹಾಭಾರತಾದಿ ಪ್ರಾಚೀನ ಗ್ರಂಥಗಳಿಂದ ಎತ್ತಿಕೊಂಡಿದ್ದರೂ ಶ್ರೀ ಮನೋಹರವಿಠಲರ ಪ್ರತಿಭೆಯ ಕಲಾ ಕುಂಚದ ಕೈವಾಡದಿಂದ ನಿರೂಪಣದ ನಾವೀನ್ಯವು ಮೌಲಿಕತೆಯ ಮೆರಗನಾಂತು ರಸದ ಹೊಸತನವನ್ನು ಸೊಗಯಿಸಿದೆ. ಇದರಲ್ಲಿ ಪ್ರಾಚೀನ ಕಥಾ ವಸ್ತುವಿನ ಅನುಸರಣವಿದ್ದರೂ ಅನುಕರಣವಿಲ್ಲ.
ಕಾವ್ಯದ ಶಯ್ಯೆಯಲ್ಲಿ ನಾಟಕೀಯ ಸನ್ನಿವೇಶಗಳನ್ನು ಸೂಕ್ತವಾಗಿ ಅಳವಡಿಸಿದ್ದು ಕವಿಯ ಕಲಾವಂತಿಕೆಯನ್ನೂ, ಸಾಹಿತ್ಯ ಪ್ರಜ್ಞೆಯನ್ನೂ ಎತ್ತಿ ತೋರುತ್ತದೆ.
ಶ್ರೀ ಮನೋಹರವಿಠಲರ ಬೆಡಗಿನ ನಡಿಗೆಗೆ...
ಕಲಹಂಸ ಸಾರಸ ಚಕೋರದಿಂ ಕೀರದಿಂ ।
ಕಲಕಲ ಧ್ವನಿಯ ಕಾರಂಡದಿ೦ ತಂಡದಿಂ ।
ಕಲೆತು ಬೆರಬೆರವ ಬಕ ಕೋಕಿಯಂ ಕೇಕಿಯಿಂದುಲಿವನೀರ್ವಕ್ಕಿಯಿಂದ ।।
ಸುಳಿಸುಳಿವ ಜಲಚರ ಪ್ರಾಣಿಗಳ ಶ್ರೇಣಿಗಳ ।
ಚಲುವಿಕೆಯ ಕುಮುದ ಕುಲ್ಹಾರದಿ೦ ಸಾರದಿಂ ।
ಬೆಳೆದಬ್ಜ ಕುಸುಮಗಳ ಜಾಲದಿಂ ಕೂಲದಿಂದ್ವಯ ಸರಸಿಗಳ್ಮೆರೆದವು ।।
ಶ್ರೀ ಮನೋಹರವಿಠಲರ ಕನ್ನಡ ಹರಿವಾಯುಸ್ತುತಿ ಮತ್ತು ಶ್ರೀ ರಾಯರಸ್ತೋತ್ರವೂ ಇಷ್ಟೇ ಮನೋಹರವಾದ ಕಾವ್ಯವಾಗಿದೆ. ಶ್ರೀ ರಾಯರ ಸ್ತೋತ್ರ...
ಸಕಲ ಸಂಪದ್ಭಕ್ತಿ ಸಂತತ ।
ಸುಕಲ ವಾದ್ದೇಹದ ಸುಪಾಟವ ।
ಭಕುತರಿಗೆ ವಿಜ್ಞಾನ ಸಂಮಾನಾದಿಗಳನಿತ್ತು ।।
ವಿಕಲಮತಿ ಕಾಯಜದಖಿಲವಾ ।
ತಕವ ತರಿಪುತ ಸಲಹೋ ಗುರುಗಳ ।
ಮಕುಟಮಣಿ ಶ್ರೀ ರಾಘವೇಂದ್ರನೇ ಲೋಕ ಸುಂದರನೇ ।।
ಶ್ರೀ ರಾಘವೇಂದ್ರ ಗುರು ಸ್ತೋತ್ರಮಂ । ಭಕ್ತಿಯಿಂ ।
ದಾರದೊಡಂ ಪಠಿಸಿ ಜಪಿಸಿದರೆ ಕುಷ್ಠಾದಿ ।
ಕ್ರೂರ ರೋಗಗಳಿವ ವತಿತ್ವರ್ಯದಿಂದ೦ಧ ಜಪಿಸಿದರೆ ದಿವ್ಯದೃಷ್ಟಿ ।।
ಸಾರುವನವಂ ಏಡ ಮೂಕಾನಾದರು೦ ಸರಿಯೆ ।
ಚಾರು ವಾಚಾಲನಾಗುವ ಸ್ತುತಿಯ ಪಠಿಸಿದವ ಪೂರ್ಣಾಯು ಸಿರಿತಾಳ್ವನೋ ।।
ಜ್ಯೋತಿ ಕನ್ನಡಿಯೊಳಗೆ ಮುಖಸ್ಪಷ್ಟ ಕಾಣಿಸುವ ।
ರೀತಿಯಿಂ ಗ್ರಹಿಸಿ ಶ್ರೀ ಮನೋಹರವಿಠ್ಠಲದಾಸ ।
ಚಾತುರ್ಯದಿಂ ಪೇಳ್ದನೆಂದರಿದು ಬರೆದೋದಿ ಕೇಳ್ವುದೆಲ್ಲಾ ಸುಜನರೂ ।।
ಒಟ್ಟಾರೆ ಶ್ರೀ ಮನೋಹರವಿಠಲರು ಬರೀ ದೇವರ ನಾಮದ ದಾಸಯ್ಯರಾಗದೆ ದಾಸೋಲ್ಲಾಸಗೈಯ್ಯುವ " ಕವಿಬ್ರಹ್ಮ " ರಾಗಿದ್ದಾರೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
No comments:
Post a Comment