BY ಹೆಜಮಾಡಿ ಸುಧೀಂದ್ರ ಆಚಾರ್ಯ 15 oct 2021
ವಿಜಯದಶಮಿ Ashvina shukla dashami
ಮಧ್ವಾಚಾರ್ಯರ ಜಯಂತಿ
|| ನ ಚ ಮಧ್ವಸಮೋ ಗುರು: ||
ವಿಜಯದಶಮಿ!!!, ವೇದವಾಕ್ಯಗಳಿಗೆ, ವೇದವ್ಯಾಸರ ವಾಕ್ಯಗಳಿಗೆ, ಸಮಸ್ತ ವೈದಿಕ ವಾಙಮಯಗಳಿಗೆ, ಯಥಾರ್ಥವಾದ ವ್ಯಾಖ್ಯಾನವನ್ನು ಸಜ್ಜನರಿಗೆ ತಿಳಿಸಲೋಸುಗ ಪ್ರಾಣದೇವರು ಪಾಜಕದಲ್ಲಿ ಪ್ರಾದುರ್ಭವಿಸಿದ ಪವಿತ್ರದಿನ.
ಮಾಯಾವಾದವೆಂಬ ಕತ್ತಲು ಜಗತ್ತನ್ನು ವ್ಯಾಪಿಸಿದ್ದ ಸಮಯ, ಹಿಂದಿನ ಭಾಷ್ಯಕಾರರ ಭಾಷ್ಯವನ್ನು ಖಂಡಿಸುತ್ತಾ ಮುಂದಿನವರು, ಅವರ ಭಾಷ್ಯವನ್ನು ಖಂಡಿಸುತ್ತಾ ಇನ್ನೊಬ್ಬರು, ಹೀಗೆ ಬ್ರಹ್ಮಸೂತ್ರಗಳಿಗೆ ಭಾಷ್ಯಗಳ ಸಂಖ್ಯೆ ಇಪ್ಪತ್ತೊಂದಕ್ಕೆ ತಲುಪಿದ್ದ ಸಮಯ! ಇನ್ನೊಂದು ಕಡೆ ಅನ್ಯಮತೀಯರಿಂದ ಸನಾತನ ಧರ್ಮದ ಮೇಲೆ ನಿರಂತರ ಅಟ್ಟಹಾಸ, ಇಂತಹ ಜ್ಞಾನಾಂಧಕಾರದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ , ಸನಾತನ ಧರ್ಮಕ್ಕೆ, ಸಮಸ್ತ ಸಜ್ಜನರಿಗೆ, ದಾರಿತೋರಿದ ಬೆಳಕು ಪಾಜಕದಲ್ಲಿ ವಾಸುದೇವನಾಗಿ ಉದಿಸಿತು!! ಪೂರ್ಣಪ್ರಜ್ಞರೆಂದು ಪ್ರಸಿದ್ಧವಾಯಿತು!! ಮಧ್ವರಾಗಿ ಮೆರೆಯಿತು!!
ಶ್ರೀಮದಾಚಾರ್ಯರು! ಅವರು ಪೂರ್ಣತೆಯ ಸಂಕೇತ, ಅದಕ್ಕೆಂದೇ ಅವರು ಪೂರ್ಣಪ್ರಜ್ಞರು! ಅವರು ಜ್ಞಾನಾನಂದದ ಸಂಕೇತ, ಆದ್ದರಿಂದಲೇ ಅವರು ಆನಂದತೀರ್ಥರು!! ಅವರ ತತ್ವಗಳು ದೇವಾನುದೇವತೆಗಳಿಗೆ, ಸಜ್ಜನರಿಗೆ ಸುಖದಾಯಕ ಅದಕ್ಕೆಂದೇ ಅವರು ಸುಖ ತೀರ್ಥರು! ಗರುಡ ಶೇಷ ರುದ್ರರನ್ನೊಳಗೊಂಡ ಸಮಸ್ತ ಜೀವ ಪ್ರಪಂಚಕ್ಕೆ ಅವರು ಗುರುಸ್ಥಾನೀಯರು! ಅದಕ್ಕೆಂದೇ ಅವರು ಮಧ್ವರು!!
ವೇದಗಳ ಆದಿ, ಮಧ್ಯ, ಅಂತ್ಯದಲ್ಲಿ ಸಮಗ್ರವಾಗಿ ಪ್ರತಿಪಾದಿಸಲ್ಪಟ್ಟ ಶ್ರೀಮನ್ನಾರಾಯಣನ ಸರ್ವೋತ್ತಮತ್ವವನ್ನು ಸಮರ್ಥವಾಗಿ ಪ್ರತಿಪಾದಿಸಿದವರೇ ಶ್ರೀಮನ್ಮಧ್ವಾಚಾರ್ಯರು! ಎರಡು ಅಥವಾ ಅದಕ್ಕಿಂತ ಹೆಚ್ಚಿನ ಶಕ್ತಿಗಳು ಜಗತ್ತನ್ನು ನಿಯಂತ್ರಿಸುತ್ತಿದ್ದರೆ, ಕ್ರಮಬದ್ಧವಾದ ಜಗತ್ಪಾಲನೆ ಸಾಧ್ಯವೇ ಇಲ್ಲ! ಎರಡು ಅತ್ಯುತ್ತಮ ಮಹಾಶಕ್ತಿಗಳ ಅಸ್ತಿತ್ವ ಏಕಕಾಲದಲ್ಲಿ ಸಾಧ್ಯವೇ ಇಲ್ಲ, ಇದು ಜಗತ್ತಿನ ಸಾಮಾನ್ಯ ನಿಯಮ. ಇದನ್ನೇ ಆಚಾರ್ಯರು "ಏಕ ಏವ ಮಹಾಶಕ್ತಿ: ಕುರುತೇ ಸರ್ವಮಂಜಸಾ" ಎಂದರು! ಜಗತ್ತಿನ ಸಮಸ್ತ ಜೀವಿಗಳ, ಸಮಸ್ತ ಪದಾರ್ಥಗಳ ಒಳ ಹೊರಗೆ ನಿಂತು, ಅವರಿಂದ ಸಕಲ ಕರ್ಮಗಳನ್ನು ಮಾಡಿಸುವ ನಾರಾಯಣನೇ ಪರಮಾತ್ಮ ನಾಗಿದ್ದಾನೆ ಪರತತ್ವನಾಗಿದ್ದಾನೆ, ಬ್ರಹ್ಮಾದಿ ಸಕಲ ದೇವತೆಗಳೂ ಶ್ರೀಹರಿಯ ಕಿಂಕರರು! ಅಂದಮಾತ್ರಕ್ಕೆ ಅನ್ಯ ದೇವತೆಗಳ ತಿರಸ್ಕಾರ ಸಲ್ಲದು. ಅವರನ್ನು ಯಥೋಚಿತವಾಗಿ ಆರಾಧಿಸಲೇಬೇಕು. ಆರಾಧಿಸುವಾಗ ಆಯಾ ದೇವತೆಗಳ ಅಂತರ್ಯಾಮಿಯಾಗಿ ಶ್ರೀಹರಿಯನ್ನು ಚಿಂತನೆ ಮಾಡಬೇಕು ಎಂದು ತಿಳಿಸಿದವರು ಶ್ರೀಮದಾಚಾರ್ಯರು.
ಇನ್ನು ಅನೇಕರಿಂದ ಆಕ್ಷೇಪಕ್ಕೆ ಒಳಗಾದದ್ದು ಆಚಾರ್ಯರು ತಿಳಿಸಿದ ಭೇದ ತತ್ವ! ಜೀವಿ ಜೀವಿಗಳ ನಡುವೆ, ಜಡ ಜಡಗಳ ನಡುವೆ, ಜೀವ ಜಡಗಳ ನಡುವೆ, ಜೀವ ಮತ್ತು ಜಡಗಳಿಂದ ಪರಮಾತ್ಮನಿಗೆ ಹೀಗೆ ಒಟ್ಟು ಪಂಚಭೇದಗಳನ್ನು ಆಚಾರ್ಯರು ತಿಳಿಸಿದ್ದಾರೆ. ಇದು ಎಲ್ಲರ ಅನುಭವಕ್ಕೆ ಬರುವ ವಿಷಯವೂ ಕೂಡಾ ಆಗಿದೆ! ಆದರೂ ಕೆಲವರಿಗೆ ಮುಕ್ತವಾಗಿ ಒಪ್ಪಿಕೊಳ್ಳಲು ಏನೋ ಪೂರ್ವಾಗ್ರಹ! ಏನೋ ಸಂಕೋಚ!
ಪ್ರಪಂಚದಲ್ಲಿ ಒಂದೇ ತೆರನಾದ ಎರಡು ವಸ್ತುಗಳು ಇಲ್ಲವೇ ಇಲ್ಲ! ಒಂದೇ ಮರದ ಎರಡು ಎಲೆಗಳೂ ಕೂಡ ಸಂಪೂರ್ಣವಾಗಿ ಸಮನಾಗಿಲ್ಲ! ಎಲೆಯ ವಿಷಯ ಹಾಗಿರಲಿ, ನಮ್ಮದೇ ದೇಹದ ಯಾವುದೇ ಎರಡು ಅಂಗಗಳು ಸಂಪೂರ್ಣವಾಗಿ ಒಂದೇ ಸಮನಾಗಿಲ್ಲ!! ದೃಷ್ಟಿದೋಷವಿರುವವರಿಗೆ ಈ ವಿಷಯ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ! ಎರಡು ಕಣ್ಣುಗಳ ವೀಕ್ಷಣಾ ಸಾಮರ್ಥ್ಯವೂ ಕೂಡ ಬೇರೆಬೇರೆಯಾಗಿಯೇ ಇರುತ್ತದೆ! ಇದನ್ನೇ ಆಚಾರ್ಯರು " ಭಿನ್ನಾಶ್ಚ ಭಿನ್ನಧರ್ಮಾಶ್ಚ ಪದಾರ್ಥಾ ನಿಖಿಲಾ ಅಪಿ" ಎಂದರು.
ತಾರತಮ್ಯ ಮಧ್ವಸಿದ್ಧಾಂತದ ಇನ್ನೊಂದು ತತ್ವ. ಹಲವರಿಂದ ಆಕ್ಷೇಪಕ್ಕೆ ಒಳಗಾದ ತತ್ವವೂ ಹೌದು!! ಬ್ರಹ್ಮನಿಂದ ಆರಂಭಿಸಿ ತೃಣ ಪರ್ಯಂತ ಎಲ್ಲಾ ವಸ್ತುಗಳೂ ತಾರತಮ್ಯದಿಂದ ಕೂಡಿದೆ, ತಾರತಮ್ಯವಿಲ್ಲದೆ ಈ ಜಗತ್ತೇ ನಡೆಯದು! ಉದಾಹರಣೆಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೋರಿಕೆಗೆ ಎಲ್ಲರೂ ಸಮಾನರು! ಇದೇ ಸಮಾನತೆಯ ವಿಷಯವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಮತ ಗಿಟ್ಟಿಸಿಕೊಂಡು ಅಧಿಕಾರ ಪಡೆದ ಒಬ್ಬ ಮಂತ್ರಿಗೆ ಝಡ್ ಪ್ಲಸ್ ಭದ್ರತೆ! ಆ ಮಂತ್ರಿಯನ್ನು ಕಾಣಬೇಕೆಂದರೆ ಮತಹಾಕಿದ ಒಬ್ಬ ಸಾಮಾನ್ಯ ಮತದಾರ ದಿನಗಟ್ಟಲೆ ಕಾಯಬೇಕು! ಎಲ್ಲಿದೆ ಸಮಾನತೆ !? ಉಚ್ಚ ಅಧಿಕಾರಿ ವರ್ಗದಿಂದ ಹಿಡಿದು, ಸಾಮಾನ್ಯ ನೌಕರನವರೆಗೆ , ಹುದ್ದೆಯಲ್ಲಿ ವೇತನದಲ್ಲಿ ಅಧಿಕಾರದಲ್ಲಿ ಎಲ್ಲ ಕಡೆಯೂ ತಾರತಮ್ಯವೇ ತುಂಬಿದೆ!! ಎಲ್ಲರಿಗೆ ಎಲ್ಲರೂ ಸಮಾನತೆಯಿಂದ ಕೂಡಿದ ಪ್ರಪಂಚವನ್ನು ಊಹಿಸುವುದು ಕೂಡ ಕಷ್ಟವಾಗುತ್ತದೆ. ತಾರತಮ್ಯ ಅದು ವಸ್ತುಸ್ಥಿತಿ ! ತಾರತಮ್ಯ ಜಗದ ನಿಯಮ!!
ಇನ್ನು ಬ್ರಹ್ಮ ಸಗುಣನೋ? ನಿರ್ಗುಣನೋ? ಸಾಕಾರನೋ? ನಿರಾಕಾರನೋ? ಪ್ರಾಕೃತ ಗುಣಗಳಿಲ್ಲದವನಾದ್ದರಿಂದ ನಿರ್ಗುಣ, ಜ್ಞಾನಾನಂದಾದಿ ಅನಂತ ಗುಣಪೂರ್ಣನಾದ್ದರಿಂದ ಸಗುಣ! ಹಾಗೆಯೇ ಪ್ರಾಕೃತ ದೇಹವಿಲ್ಲದವನಾದ್ದರಿಂದ ನಿರಾಕಾರ, ಜ್ಞಾನ ಆನಂದಾದಿಗಳೇ ದೇಹವುಳ್ಳವನಾದ್ದರಿಂದ ಸಾಕಾರ! ಬೆಲ್ಲದಿಂದ ಸಿಹಿಯನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ, ಹಾಗೆಯೇ ಭಗವಂತನಿಂದ ಅವನ ಗುಣ ಮತ್ತು ಆಕಾರಗಳು ಅಭಿನ್ನ! ಗೊಂದಲಕ್ಕೆ ಎಡೆಯೇ ಇಲ್ಲದಂತೆ ಇದನ್ನು ತಿಳಿಸಿದವರು ಶ್ರೀಮದಾಚಾರ್ಯರು!
ಅಂತೆಯೇ ಇನ್ನೊಂದು ಪ್ರಶ್ನೆ! ಜಗತ್ತು ಸತ್ಯವೋ ಸುಳ್ಳೋ !!??? ಶ್ರೀಮದಾಚಾರ್ಯರು ಸಾರಿ ಸಾರಿ ಹೇಳಿದ್ದಾರೆ, ಬ್ರಹ್ಮನೆಷ್ಟು ಸತ್ಯವೋ ಹಾಗೆಯೇ ಅವನಿಂದ ಸೃಷ್ಟವಾದ ಈ ಜಗತ್ತು ಕೂಡ ಅಷ್ಟೇ ಸತ್ಯ! "ಯಚ್ಚಿಕೇತ ಸತ್ಯಮಿತ್ತನ್ನ ಮೋಘಂ" ಭಗವಂತ ಯಾವುದನ್ನು ಸೃಷ್ಟಿಸಿದ್ದಾನೋ ಅದು ಸತ್ಯವಾಗಿಯೂ ಸತ್ಯವಾದುದು! ಆದರೆ ಕೆಲವರು ಜಗತ್ತನ್ನು ಮಿಥ್ಯೆ ಎಂದು ಹೇಳುತ್ತಾರೆ. ಆದರೆ ವಿಪರ್ಯಾಸವೆಂದರೆ ಜಗತ್ತನ್ನು ಮಿಥ್ಯೆ ಎಂದು ಸಾಧಿಸುವ ಈ ಮಂದಿ ತಮ್ಮ ಹೆಸರಿನ ಮುಂದೆ ಮಾತ್ರ ಜಗದ್ಗುರು ಎಂಬ ಶಬ್ದವನ್ನು ಸೇರಿಸಲು ಮರೆಯುವುದಿಲ್ಲ! ಮಿಥ್ಯೆಯಾದ ಜಗತ್ತಿನ ಗುರುಗಳಾಗಿ ಇವರು ಸಾಧಿಸುವುದಾದರೂ ಏನು!? ಎಂಥಾ ವೈಪರೀತ್ಯ ವಲ್ಲವೇ!!
ಇನ್ನು ವರ್ಣವ್ಯವಸ್ಥೆಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಅತ್ಯಂತ ನಿಖರವಾಗಿ ಬೆಳಕು ಚೆಲ್ಲಿದ ಏಕಮೇವ ಆಚಾರ್ಯರೆಂದರೆ ಅದು ಶ್ರೀಮದಾಚಾರ್ಯರು ಮಾತ್ರ ! ವರ್ಣ ಕೇವಲ ದೇಹಕ್ಕೆ ಸಂಬಂಧಿಸಿರದೆ ಅದರೊಳಗಿನ ಜೀವಕ್ಕೂ ಸಂಬಂಧಪಟ್ಟದ್ದಾಗಿದೆ! ಬ್ರಾಹ್ಮಣ ದೇಹದಲ್ಲಿ ಶೂದ್ರ ಜೀವ ಇರಬಹುದು, ಅಂತೆಯೇ ಶೂದ್ರ ದೇಹದಲ್ಲಿ ಬ್ರಾಹ್ಮಣ ಜೀವವೂ ಇರಬಹುದು! ದೇಹಕ್ಕೆ ಸಂಬಂಧಿಸಿದ ವರ್ಣ ನಿತ್ಯವಲ್ಲ , ಆದರೆ ಜೀವನಿಗೆ ಸಂಬಂಧಿಸಿದ ವರ್ಣ ಅದು ಸ್ವಾಭಾವಿಕ ಸತ್ಯ ! ಬಹುಶ: ಅನುಭವಕ್ಕೆ ( ಆತ್ಮಸಾಕ್ಷಿ ) ಆದ್ಯತೆ ನೀಡಿದ ಏಕಮೇವ ಆಚಾರ್ಯರೆಂದರೆ ಅದು ಶ್ರೀಮದಾಚಾರ್ಯರು!
" ನ ಚ ಅನುಭವ ವಿರೋಧೇ ಆಗಮಸ್ಯ ಪ್ರಾಮಾಣ್ಯಂ" ಅನುಭವಕ್ಕೆ ವಿರೋಧವಾಗಿ ಸಂದೇಶವು ಎಲ್ಲಿಂದ ಬಂದರೂ ಅದು ಗ್ರಾಹ್ಯ ವಾಗಲಾರದು!
ಪ್ರತಿಯೊಂದು ಮತದ ಅಂತಿಮಗುರಿ ಅದು ಮೋಕ್ಷ. ಕೆಲವರ ಪ್ರಕಾರ ದುಃಖಾಭಾವವೇ ಮುಖ್ಯವಾದರೆ, ಮತ್ತೆ ಕೆಲವರು ಜೀವ ಬ್ರಹ್ಮರ ಐಕ್ಯವನ್ನು ಮೋಕ್ಷವೆಂದರು! ಇದನ್ನೆಲ್ಲ ನಿರಾಕರಿಸಿದ ಆಚಾರ್ಯರು, ಭಗವಂತನಿಂದ ಸಂಪೂರ್ಣ ಭಿನ್ನರಾಗಿ, ಅವನ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟು, ತಾರತಮ್ಯ ಸಹಿತವಾಗಿ ಜೀವರ ಸ್ವರೂಪಾನಂದದ ಪರಿಪೂರ್ಣ ಅಭಿವ್ಯಕ್ತಿಯನ್ನು ಮೋಕ್ಷವೆಂದು ತಿಳಿಸಿದರು.
ಸಾಮಾನ್ಯವಾಗಿ ಧಾರ್ಮಿಕ ನೇತಾರರಿಗೆ ಅಂಟಿಕೊಳ್ಳುವ ಒಂದು ಪ್ರಮುಖ ಆಕ್ಷೇಪವೆಂದರೆ ಅವರ ಆಧ್ಯಾತ್ಮಿಕವಾಗಿ ತಮ್ಮ ಯೋಚನಾಲಹರಿಯನ್ನು ಹರಿಯಬಿಡುತ್ತಾರೆಯೇ ಹೊರತು ಸಾಮಾಜಿಕವಾಗಿ ಅಲ್ಲಾ ಎಂದು! ಇದಕ್ಕೆ ಅಪವಾದ ಶ್ರೀಮದಾಚಾರ್ಯರು! ಭಗವಂತನ ಸೇವೆಯ ಜೊತೆಜೊತೆಗೆ ಸಕಲ ಜೀವಿಗಳ ಸೇವೆಗೂ ಆಚಾರ್ಯರು ಆದ್ಯತೆ ನೀಡಿದರು. ಭಗವಂತನ ರಾಜ್ಯದಲ್ಲಿ ನಾವು ವಾಸ ಮಾಡುತ್ತಿರುವುದಕ್ಕೆ ಭಗವಂತನಿಗೆ ನಾವು ಸಲ್ಲಿಸುವ ಕಪ್ಪವೆಂದರೆ ಅದು ಜನಸೇವೆ!
" ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇ:"
" ತಸ್ಯ-ಪ್ರಾಣ್ಯುಪಕಾರೇಣ ಸಂತುಷ್ಟೋ ಭವತೀಶ್ವರ:"
ಇನ್ನು ಸನಾತನ ಧರ್ಮದಲ್ಲಿ ಸ್ತ್ರೀಯರಿಗೆ ಸಮಾನ ಪ್ರಾಶಸ್ತ್ಯವಿಲ್ಲ ಎಂದು ಅರಚುವ ಮಂದಿ ಆಚಾರ್ಯರ ಈ ಮಾತನ್ನು ಒಮ್ಮೆ ಗಮನಿಸಬೇಕು
" ಕನ್ಯೋದಿತಾ ಬತ ಕುಲದ್ವಯತಾರಿಣೀತಿ" ಒಬ್ಬ ಗಂಡು ಒಂದು ಕುಲದ ಉದ್ಧಾರಕನಾದರೆ ಒಬ್ಬ ಹೆಣ್ಣುಮಗಳು ಎರಡು ಕುಲದ ಉದ್ಧಾರಕಳು! ಇದು ಸ್ತ್ರೀಯರ ಬಗ್ಗೆ ಆಚಾರ್ಯರ ನಿಲುವು !!
ಭಕ್ತಿ ಪಂಥದ ಉಗಮ, ದಾಸ ಸಾಹಿತ್ಯದ ಉಗಮ ಎರಡೂ ಶ್ರೀಮದಾಚಾರ್ಯರಿಂದಲೇ! ಜ್ಞಾನವಿಲ್ಲದ ಭಕ್ತಿ ಅದು ಕುರುಡು ಭಕ್ತಿ, ಭಕ್ತಿಯಿಲ್ಲದ ಜ್ಞಾನ ಅದು ಒಣ ಪಾಂಡಿತ್ಯ. ಜ್ಞಾನ ಪ್ರೇಮಗಳ ಪ್ರವಾಹವು ಒಂದೆಡೆ ಸೇರಿದಾಗ ಆವಿಷ್ಕಾರಗೊಳ್ಳುವುದೇ ನಿಜವಾದ ಭಕ್ತಿ! ಇದನ್ನು ಸಾರಿದವರು ಆಚಾರ್ಯರು. ತಾವೇ ಸ್ವತ: ದ್ವಾದಶಸ್ತೋತ್ರಾಧಿಗಳನ್ನು ರಚಿಸುವ ಮೂಲಕ ದಾಸಸಾಹಿತ್ಯಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು. ಇದರ ಫಲವಾಗಿಯೇ ನಂತರದಲ್ಲಿ ಲಕ್ಷಾಂತರ ಭಕ್ತಿ ಕೀರ್ತನೆಗಳು ಭಗವಂತನ ಗುಣ ಮಹಿಮೆಯನ್ನು ಕೊಂಡಾಡುತ್ತಾ ಆಡುಭಾಷೆಯಲ್ಲಿ ಹರಿದುಬಂದವು, ಭಾವವನ್ನೂ ಭಾಷೆಯನ್ನೂ ಸಮೃದ್ಧಗೊಳಿಸಿದವು!
ಹೀಗೆ ತತ್ವವಾದವೆಂಬ ಜ್ಯೋತಿಯ ಮೂಲಕ ಭಗವಾನ್ ವೇದವ್ಯಾಸರ ವಾಕ್ಯಗಳ ನಿಜ ಆಂತರ್ಯವನ್ನು ಸಮಾಜಕ್ಕೆ ತೋರಿದವರು ಶ್ರೀಮದಾಚಾರ್ಯರು! " ಅಂತೇ ಸಿದ್ಧಸ್ತು ಸಿದ್ಧಾಂತ: ಮಧ್ವಸ್ಯಾಗಮ ಏವಹಿ " ಎಂಬ ಶ್ರೀಮದ್ವಾದಿರಾಜ ಗುರುಸಾರ್ವಭೌಮರ ಮಾತಿನಂತೆ ಎಂದೆಂದಿಗೂ ಅಖಂಡಿತವಾಗಿ ಅಭೇಧ್ಯವಾಗಿ ಇರು
ವುದು ಶ್ರೀಮದಾಚಾರ್ಯರ ಸಿದ್ಧಾಂತದ ವೈಶಿಷ್ಟ್ಯ!!
ಶ್ರೀಮದಾಚಾರ್ಯರ ಸಿದ್ಧಾಂತವನ್ನೂ, ಶ್ರೀಮದಾಚಾರ್ಯರ ಮಹಿಮೆಯನ್ನೂ, ಪರಿಪೂರ್ಣವಾಗಿ ತಿಳಿಯುವುದು ಅದು ದೇವತೆಗಳಿಗೂ ಅಸಾಧ್ಯವಾದ ವಿಷಯ! ಅಂತಹ ಶ್ರೀಮದಾಚಾರ್ಯರು ಅವತರಿಸಿದ ಪರಮಪವಿತ್ರ ದಿನವೇ ವಿಜಯದಶಮಿ. ಪ್ರತಿಯೊಬ್ಬ ಆಸ್ತಿಕರೂ ಶ್ರೀಮದಾಚಾರ್ಯರಿಗೆ ಅತ್ಯಂತ ಕೃತಜ್ಞರಾಗಿರಲೇಬೇಕು! ಸಜ್ಜನರ ಮೇಲೆ ಶ್ರೀಮದಾಚಾರ್ಯರು ತೋರಿದ ಕೃಪೆ ಅದು ಅಪಾರ! ಶ್ರೀಮದಾಚಾರ್ಯರು ಕೊಟ್ಟ ಗ್ರಂಥಗಳ ಅಧ್ಯಯನ ಮಾಡುವುದು ಸಜ್ಜನರ ಆದ್ಯ ಕರ್ತವ್ಯ.
ಜನ್ಮತ: ಮಾಧ್ವರಾಗುವುದಕ್ಕಿಂತಲೂ, ತತ್ವತ: ಮಾಧ್ವರಾಗುವುದು ಬಹಳ ವಿಶೇಷ. ಸಮಗ್ರ ಸರ್ವಮೂಲ ಗಳ ಅಧ್ಯಯನವನ್ನು ಟೀಕಾ ಸಹಿತವಾಗಿ ತಪಸ್ಸಿನಂತೆ ಅಧ್ಯಯನ ಮಾಡುವುದು ಪ್ರತಿಯೊಬ್ಬ ಮಾಧ್ವರ ವ್ರತವಾಗಬೇಕು. ನಾವೂ ಅಧ್ಯಯನ ಮಾಡಿ, ಯಥಾಯೋಗ್ಯವಾಗಿ ನಮ್ಮ ಪ್ರತಿಯೊಬ್ಬ ಕುಟುಂಬ ಸದಸ್ಯರಿಂದಲೂ ಮಧ್ವ ಸಿದ್ಧಾಂತದ ಅಧ್ಯಯನ, ಅನುಸಂಧಾನ ಮಾಡಿಸಿದೆವೆಂದರೆ ಅದೇ ನಾವು ಆಚಾರ್ಯರಿಗೆ ಸಲ್ಲಿಸುವ ನಿಜವಾದ ಗುರುದಕ್ಷಿಣೆ!
ಅನಂತ ಜನ್ಮಗಳ ಪುಣ್ಯ ವಿಶೇಷವಿದ್ದರೆ ಮಾತ್ರ ಮಾಧ್ವ ಸಿದ್ಧಾಂತದಲ್ಲಿ ಒಲವು ಮೂಡಲು ಸಾಧ್ಯ. ದೊರಕಿದ ಬಹು ಅಮೂಲ್ಯವಾದ ಮಾಧ್ವ ಜನ್ಮವನ್ನು ವ್ಯರ್ಥಗೊಳಿಸದಿರೋಣ. ಒಂದಲ್ಲ ಎರಡಲ್ಲ ಅನಂತ ಜನ್ಮಗಳಲ್ಲೂ ನಮಗೆ ಶ್ರೀಮದಾಚಾರ್ಯರೇ ಗುರುಗಳಾಗಿ ದೊರಕಲಿ. ಅವರಿಗೆ ಶಿರಬಾಗಿ " ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ" ಎನ್ನುವ ಭಾಗ್ಯ ಅನಂತ ಜನ್ಮಗಳಲ್ಲಿ ನಮಗೆ ಒದಗಿ ಬರಲಿ!
"ಆಚಾರ್ಯಾ: ಶ್ರೀಮದಾಚಾರ್ಯಾ: ಸಂತು ಮೇ ಜನ್ಮ ಜನ್ಮನಿ" 🙇♂️🙇♂️
end
****
ಶ್ರೀ ಪೂರ್ಣಪ್ರಜ್ಞರು ಭೂಮಿಯಲ್ಲಿ ಅವತರಿಸಿದ ಪರಮಪವಿತ್ರವಾದ ದಿನ ವಿಜಯದಶಮಿ. ಸರ್ವದಾ ವಿಜಯಪ್ರದನಾದ ಶ್ರೀಹರಿಯನ್ನು ತಿಳಿಸುವ ಶಾಸ್ತ್ರವನ್ನು ʼದʼ ಅನುಗ್ರಹಿಸಿದ ಶಮಿ -ಶಮಗುಣ ಭರಿತರು ಶ್ರೀಮಧ್ವರು.
ಉಡುಪಿಯ ಸಮೀಪದ ಒಂದು ಪುಟ್ಟ ಹಳ್ಳಿ ಪಾಜಕ. ಪರಾತ್ಪರನಾದ ಶ್ರೀಪರಶುರಾಮನ, ಶ್ರೀದುರ್ಗಾದೇವಿಯ ಸಾನ್ನಿಧ್ಯವಿಶೇಷದಿಂದ ಪವಿತ್ರವಾಗಿದ್ದ ಈ ಪುಣ್ಯಭೂಮಿ ಪವಮಾನನ ಪ್ರಾದುರ್ಭಾವದಿಂದ ಪ್ರಖ್ಯಾತವಾಯಿತು. ತತ್ತ್ವಜ್ಞಾನಕ್ಕೆ ಮಹೋನ್ನತ ಕೊಡುಗೆಯನ್ನು ನೀಡಿದ ಹಿರಿಮೆಗೆ ಭಾಜನವಾಯಿತು. ಮಧ್ಯಗೇಹಭಟ್ಟರು( ನಡಿಲ್ಲಾಯ ನಾರಾಯಣ ಭಟ್ಟರು ) ಮತ್ತು ವೇದವತಿಯರೆಂಬ ಪುಣ್ಯದಂಪತಿಗಳನ್ನು ನಿಮಿತ್ತವಾಗಿರಿಸಿಕೊಂಡು ಪ್ರಾಣದೇವ ಅವತರಿಸುವ ಪೂರ್ವದಲ್ಲಿಯೇ ಉಡುಪಿಯ ಹಿರಿದೈವ ಅನಂತಾಸನ ಲೋಕೋತ್ತರವಾದ ತೇಜಸ್ಸೊಂದು ಭೂಮಿಯಲ್ಲಿ ಅವತರಿಸುವ ಸೂಚನೆಯನ್ನು ನೀಡಿದ್ದ. ನಡಿಲ್ಲಾಯದಂಪತಿಗಳ ದಂಪತಿಗಳ ಪುಣ್ಯಗರ್ಭದಲ್ಲಿ ಅವತರಿಸಿದ ಆ ಅಲೌಕಿಕ ತೇಜಸ್ಸು ತನ್ನ ಅಸದೃಶವಾದ ಪಾಂಡಿತ್ಯದಿಂದ, ಅಸಾಧಾರಣವಾದ ವ್ಯಕ್ತಿತ್ತ್ವದಿಂದ, ಅಪ್ರತಿಮವಾದ ತಪಶ್ಚರ್ಯದಿಂದ, ಅನುಪಮವಾದ ಹರಿಭಕ್ತಿಯಿಂದ, ಅಪ್ರತಿದ್ವಂದ್ವವಾದ ಸಿದ್ಧಾಂತದಿಂದ ಅವನಿಯಲ್ಲಿ ಅದ್ವಿತೀಯವೆನಿಸಿತು. ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯವಾಯಿತು.ವೈದಿಕ ಚಿಂತನಕ್ರಮಕ್ಕೆ ಒಂದು ಶಿಸ್ತನ್ನು, ನಿಖರತೆಯನ್ನು, ಹೊಸನೋಟವನ್ನು ನೀಡಿ, ವೈಚಾರಿಕ ಕ್ರಾಂತಿಯ ಶುಭೋದಯವನ್ನು ಸಾರಿದ ಮಹಾಮನೀಷಿಯ ಅವತರಣದಿಂದ ಅಜ್ಞಾತವಾಗಿದ್ದ ಗ್ರಾಮವೊಂದು ಜಿಜ್ಞಾಸುಗಳ, ಪ್ರಾಜ್ಞರ ಪರಮಗಮ್ಯಸ್ಥಾನವಾಯಿತು.ವಿಲಂಬಿ ಸಂವತ್ಸರದ (ಕ್ರಿ.ಶ 1238)ರ ಆಶ್ವಯುಜ ಶುಕ್ಲಪಕ್ಷದ ವಿಜಯದಶಮಿಯ ಪರ್ವಕಾಲದಲ್ಲಿ ಅವತರಿಸಿದ ಶಿಶುವಿಗೆ ತಂದೆಯಿಟ್ಟ ಹೆಸರು 'ವಾಸುದೇವ'. ಭೂಮಿಯಲ್ಲಿ ವಾಸುದೇವರೂಪದಲ್ಲಿ ಅಸುದೇವ ಅವತರಿಸಿದ ಸಂದರ್ಭದಲ್ಲಿ ಜಿಜ್ಞಾಸುಗಳಿಗೆ ವೇದ-ವೇದಾಂತಗಳ ಪರಿಚಯವಿದ್ದರೂ, ವೇದವ್ಯಾಸರಿಗೆ ಸಮ್ಮತವಾದ, ವೇದಾಂತದ ಅಂತರ್ನಿಹಿತವಾದ ಸತ್ಯ ಅಸ್ಪಷ್ಟವಾಗಿಯೇ ಇತ್ತು. ಹೊಸ ಬೆಳಕಿಗೆ ಜಗತ್ತು ಕಾಯುತ್ತಿತ್ತು. ಭಗವಾನ್ ವೇದವ್ಯಾಸರ ಹೃದ್ಗತವನ್ನು ತೆರೆದಿಡುವ ಮಹಾಮನೀಷಿಯೋರ್ವನ ಆಗಮನಕ್ಕೆ ಜಗತ್ತು ಕಾತರದಿಂದ ಕಾಯುತ್ತಿದ್ದಂತಹ ಸಂದರ್ಭದಲ್ಲಿ,ಭಗವದಾಣತಿಯಂತೆ ಪರಮೇಷ್ಠಿ ಪದಾರ್ಹನಾದ ಪವಮಾನನ ಅವತಾರ ಪಾಜಕದಲ್ಲಾಯಿತು.
ತಮ್ಮ ಅಸಾಧಾರಣವಾದ ಪಾಂಡಿತ್ಯದಿಂದ, ಅನುಪಮವಾದ ಹರಿಭಕ್ತಿಯಿಂದ, ಅಲೌಕಿಕವಾದ ತೇಜಸ್ಸಿನಿಂದ, ಅನನ್ಯವಾದ ವ್ಯಕ್ತಿತ್ವದಿಂದ ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯರಾದ ಶ್ರೀಮಧ್ವಾಚಾರ್ಯರು ವೈದಿಕಚಿಂತನ ಕ್ರಮಕ್ಕೆ ಒಂದು ಹೊಸ ಶಿಸ್ತನ್ನು, ನಿಖರತೆಯನ್ನು ಹೊಸನೋಟವನ್ನು ನೀಡಿ ಬೌದ್ಧಿಕ ಕ್ರಾಂತಿಯ ಶುಭೋದಯವನ್ನು ಸಾರಿದ ಮಹಾಮನೀಷಿಗಳು. ವೇದ,ಉಪನಿಷತ್, ಭಗವದ್ಗೀತೆ, ಬ್ರಹ್ಮಸೂತ್ರಗಳು,ಪುರಾಣಗಳು,ಪಂಚರಾತ್ರವೇ ಮೊದಲಾದ ಸಮಗ್ರ ವೇದಾಂತ ವಾಙ್ಮಯದ ಯಥಾರ್ಥ ಚಿತ್ರಣವನ್ನು ಭಗವಾನ್ ಶ್ರೀವೇದವ್ಯಾಸದೇವರಿಗೆ ಸಮ್ಮತವಾಗುವಂತೆ ನೀಡುವಲ್ಲಿ ಶ್ರೀಮಧ್ವಾಚಾರ್ಯರು ಅತ್ಯಂತ ಪರಿಣಾಮಕಾರಿಯಾದ ಹಾಗೂ ಪ್ರಭಾವಶಾಲಿಯಾದ ಪಾತ್ರವನ್ನು ವಹಿಸಿದರು. ಸಮಸ್ತ ವೈದಿಕವಾಙ್ಮಯವನ್ನು ಅಖಂಡವಾಗಿ ಅರ್ಥೈಸಿ, ತಮ್ಮ ಅಪರೂಪವಾದ ಸಂಶೋಧನಾಪ್ರಜ್ಞೆಯಿಂದ ಅಪಾತತ: ಕಾಣುವ ಅನೇಕ ವಿರೋಧಾಭಾಸಗಳನ್ನು ಪರಿಹರಿಸಿದ ಅಶ್ರುತ ಪ್ರತಿಭೆ ಶ್ರೀಆನಂದತೀರ್ಥರದು. ವೇದಾಂತವೆಂದರೆ ಮೂಢನಂಬಿಕೆಯಲ್ಲ, ಅತ್ಯಂತ ವೈಜ್ಞಾನಿಕವಾದ ಮತ್ತು ಪ್ರಾಯೋಗಿಕವಾದ ಚಿರಂತನ ಸತ್ಯವೆಂದು ತಮ್ಮ 'ತತ್ತ್ವವಾದ'ದಲ್ಲಿ ಪ್ರಚುರ ಪಡಿಸಿದರು. ನಾರಾಯಣನೊಬ್ಬನೇ ಸರ್ವೋತ್ತಮನಾದ ಸ್ವತಂತ್ರನಾದ ಪರದೈವವೆಂದು, ಸಮಸ್ತ ವೇದವಾಙ್ಮಯವೂ ಅಷ್ಟೇ ಅಲ್ಲ ಸಮಸ್ತ ಶಬ್ದರಾಶಿ,ಧ್ವನಿಗಳೂ ಮುಖ್ಯತ: ಅವನ ಗುಣಗಾನವನ್ನೇ ಮಾಡುತ್ತಿವೆ ಎಂದು ವಿಷ್ಣುಸರ್ವೋತ್ತಮತ್ವವನ್ನು ಪ್ರತಿಪಾದಿಸಿದ ಶ್ರೀಮಧ್ವಾಚಾರ್ಯರು ವೇದಸೂಕ್ತಗಳಲ್ಲಿ ಇಂದ್ರ,ವರುಣ,ಅಗ್ನಿ ಮುಂತಾದ ನಾನಾಗುಣನಾಮಗಳಿಂದ ಪ್ರತಿಪಾದ್ಯನಾದ ನಾರಾಯಣ ಅನಂತ ಕಲ್ಯಾಣಗುಣಪೂರ್ಣನೆಂದು, ಅವನಿಂದ ಸೃಷ್ಟವಾದ,ವ್ಯಕ್ತವಾದ ಈ ಜಗತ್ತು ಶ್ರೀಹರಿಯ ಅಧೀನವೆಂದು ವೇದಪ್ರತಿಪಾದಿತವಾದ ಸತ್ಯವನ್ನು ಪುನ: ಬೆಳಕಿಗೆ ತಂದರು. ಸಮಸ್ತವೇದಪ್ರತಿಪಾದ್ಯನಾದ ಶ್ರೀಹರಿ ಸರ್ವೋತ್ತಮನೆಂದು, ಉಳಿದ ಎಲ್ಲಾ ದೇವತೆಗಳೂ ಗುರುಸ್ಥಾನೀಯರೆಂದು ತಿಳಿಸಿದರು. ಜಗತ್ತು ಸತ್ಯವೆಂದು ಅತ್ಯಂತ ಸ್ಪಷ್ಟವಾಗಿ ವೇದ, ಉಪನಿಷತ್ತುಗಳ ಸಂದೇಶವನ್ನು ಸಾರಿದ ಶ್ರೀಮಧ್ವಾಚಾರ್ಯರು ಒಂದು ಜೀವಿಯಂತೆ ಇನ್ನೊಂದು ಜೀವಿಯಿಲ್ಲ, ಜಡವಸ್ತುಗಳಲ್ಲಿಯೂ ಪರಸ್ಪರ ಭೇದಗಳಿವೆ. ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಿಶಿಷ್ಟವಾದ ಸ್ವಭಾವವಿದೆ ಎಂದು ತಿಳಿಸಿದರು. ಶ್ರೀಮಧ್ವರು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಪೂರ್ಣವಿಕಾಸವೇ ಜೀವನದ ಗುರಿಯಾಗಬೇಕು ಎಂದು ವ್ಯಕ್ತಿವಿಶಿಷ್ಟವಾದವನ್ನು ಪ್ರತಿಪಾದಿಸಿದರು."ಭಗವಂತನನ್ನು ಅರಿತವನು ಮಾತ್ರವೇ ಜಗತ್ತಿನ ರಹಸ್ಯವನ್ನು ಅರಿಯಬಲ್ಲ, ಭಗವಂತನನ್ನು ಅರಿಯುವುದು ಕಠಿಣತಮವೇ ಆದರೂ, ಜ್ಞಾನ,ವೈರಾಗ್ಯಗಳ ಸಂಪರ್ಕದಲ್ಲಿ ಪರಿಶುದ್ಧವಾದ ಶ್ರೀಹರಿಯ ಚರಣಭಕ್ತಿಯೇ ಅಂತಹ ಪ್ರಯತ್ನವನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿಯಾಗಬಲ್ಲುದು' ಎಂದು ತಮ್ಮ ಭಕ್ತಿ ಸಿದ್ಧಾಂತವನ್ನು ಪ್ರಚುರ ಪಡಿಸಿದ ಶ್ರೀಮಧ್ವಮುನಿಗಳು ಜ್ಞಾನಯೋಗ, ಕರ್ಮಯೋಗಗಳು ಪರಸ್ಪರಸಂಬಂಧವಿರದವುಗಳಲ್ಲ, ಪರಸ್ಪರ ಪೂರಕವಾದವು ಅವುಗಳ ಸಮನ್ವಯವೇ ಸಾಧನೆಯ ಪ್ರಮುಖ ಅಂಶವೆಂದು ಜ್ಞಾನಯೋಗ-ಕರ್ಮಯೋಗಗಳ ಸಂಬಂಧವನ್ನು ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದರು.
ಶ್ರೀಹರಿಯಲ್ಲಿ ಅಪಾರವಾದ ಪ್ರೀತಿ,ಭಕ್ತಿಗಳೇ ಆತನ ಅನುಗ್ರಹಸಿದ್ಧಿಗೆ ಸಾಧನಗಳೆಂದು ಒತ್ತಿಹೇಳಿದ ಪೂರ್ಣಪ್ರಜ್ಞರು ಸತ್ಯವಾದ ಜಗತ್ತನ್ನು ನಾವು ಪ್ರೀತಿಸಬೇಕು. ಜಗತ್ತು ಶ್ರೀಹರಿಯ ಲೀಲಾತಿಶಯಗಳನ್ನು ಅಭಿವ್ಯಂಜಿಸುವುದರಿಂದ ಜಗತ್ತನ್ನು ಪ್ರೀತಿಸಿದರೆ ಶ್ರೀಹರಿಯ ಲೀಲಾತಿಶಯಗಳನ್ನೂ ಪ್ರೀತಿಸಿದಂತೆ ಎಂದು ತಿಳಿಸಿದರು. ದೀನರಿಗೆ,ದು:ಖಿತರಿಗೆ ನೆರವಾಗುವುದು ಭಗವಂತನ ರಾಜ್ಯದ ಪ್ರಜೆಗಳಾದ ನಾವು ಸಲ್ಲಿಸುವ ಕಂದಾಯವೆಂದು ಸಮಾಜಸೇವೆ ಪ್ರತಿಯೊಬ್ಬನ ವಿಹಿತಕರ್ತವ್ಯವೆಂದು ಉಪದೇಶಿಸಿ ಸಮಾಜಸೇವೆಗೆ ಒತ್ತು ನೀಡಿ ಸಮಾಜಸೇವೆಯೂ ಭಗವತ್ಪೂಜೆಯೆಂದು ಸಾರಿದ ಶ್ರೀಪೂರ್ಣಬೋಧರು ತಮ್ಮ ಸಮಾಜಮುಖಿ ಚಿಂತನದಿಂದ ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯರಾದರು. ನಾವು ಊಹಿಸಲೂ ಆಗದ ಎತ್ತರದ ನೆಲೆ ಸತ್ಯಲೋಕದ ಅಧಿಪತಿಗಳಾಗಿದ್ದ ಶ್ರೀಮುಖ್ಯಪ್ರಾಣರು ನಮ್ಮ ಮೇಲಿನ ಕರುಣೆಯ ಕಾರಣದಿಂದಾಗಿ ಭೂಮಿಗಿಳಿದು ಮಾಡಿದ ಅನುಗ್ರಹ ಅನ್ಯಾದೃಶ. ಒಂದು ದಿನ ಮಾತ್ರವಲ್ಲ ಪ್ರತಿನಿತ್ಯವೂ, ಪ್ರತಿಕ್ಷಣವೂ ನಮ್ಮ ಹೃದಯದಲ್ಲಿ ಶ್ರೀಮಧ್ವರ ಜಯಂತಿಯಾಗುತ್ತಿರಲಿ. ಮಧ್ವರೆಂಬ ಸೂರ್ಯ ಕವಿದ ಕತ್ತಲೆಯನ್ನು ಅತ್ತ ಸರಿಸಲಿ. ಶ್ರೀವೇದವ್ಯಾಸರ ಮಾರ್ಗದಲ್ಲಿ ನಮ್ಮನ್ನು ಮುನ್ನೆಡೆಸಲಿ. 🙏🙏🙏
ಪ್ರೀತೋಸ್ತು ಕೃಷ್ಣ ಪ್ರಭುಃ
ಫಣೀಂದ್ರ ಕೆ
***
No comments:
Post a Comment