Name: madakashira bheema dasaru
Ankita: Bheemesha Vittala
Period: 1750+
"ಶ್ರೀ ಮಡಕಶಿರ ಭೀಮದಾಸರು "
ಶ್ರೀ ಮಡಕಶಿರ ಭೀಮದಾಸರು ಮೈಸೂರಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪುಣೆಯ ಶ್ರೀ ತ್ರ್ಯ೦ಬಕ ಶಾಸ್ತ್ರಿಗಳು ಬಂದರು.
ಶ್ರೀ ಕೃಷ್ಣರಾಜ ಒಡೆಯರು ಶ್ರೀ ತ್ರ್ಯ೦ಬಕ ಶಾಸ್ತ್ರಿಗಳಿಗೆ ಅದ್ಭುತವಾದ ಸ್ವಾಗತ ಸತ್ಕಾರ ಮಾಡಿ ಶಾಸ್ತ್ರಿಗಳ ಮೇಲೆ ಸುವರ್ಣ ವೃಷ್ಟಿಯನ್ನೇ ಸುರಿಸಿದರು
ಶ್ರೀ ತ್ರ್ಯ೦ಬಕ ಶಾಸ್ತ್ರಿಗಳಿಗೆ ರಾಜ ದರ್ಬಾರಿನಲ್ಲಿ ಆದ ಗೌರವವನ್ನು ಕಂಡು ಈ ಶ್ರೀ ಭೀಮಾಚಾರ್ಯರಲ್ಲಿ ಹೇಯ ಹುಟ್ಟಿತಂತೆ.
ತಾವೂ ಅಂಥಾ ಪಾಂಡಿತ್ಯವನ್ನು ಸಂಪಾದಿಸಿ ರಾಜ ಮನ್ನಣೆಯನ್ನು ಪಡೆಯಬೇಕೆಂದು ಅವರು ಪಾದಚಾರಿಗಳಾಗಿಯೇ ಬಂಗಾಳಕ್ಕೆ ಹೋಗಿ " ನವದ್ವೀಪ " ದಲ್ಲಿ " ನವೀನ ತರ್ಕ ಶಾಸ್ತ್ರ " ವನ್ನು ಅಧ್ಯಯನ ಮಾಡಿದರು.
ಶ್ರೀ ಭೀಮಾಚಾರ್ಯರು ಪ್ರಗಾಢ ಪಂಡಿತರಾದರು. ಹಿಂದಿ - ಬಂಗಾಲಿ ಭಾಷೆಯ ಪರಿಚಯದೊಂದಿಗೆ ಉತ್ತರ ದೇಶದ ಚೈತನ್ಯ ಪಂಥೀಯ ಭಕ್ತಿಯುಕ್ತವಾದ ಸಂಕೀರ್ತನ ಪದ್ಧತಿಯು ಶ್ರೀ ಭೀಮಾಚಾರ್ಯರ ಮೇಲೆ ವಿಲಕ್ಷಣ ಪರಿಣಾಮ ಮಾಡಿತು.
ವಿದ್ಯಾಧ್ಯಯನವೆಲ್ಲಾ ಮುಗಿಸಿ ಮಹಾ ವಿದ್ವಾಂಸರೆನಿಸಿ ಅದೇ ರಾಜ ಮಹಾರಾಜರಿತ್ತ ಶಾಲು ಶಕಲಾತಿಗಳನ್ನು ಧರಿಸಿ ತಮ್ಮ ಬಿರಿದು ಬಾವಲಿಗಳನ್ನು ಮೆರಿಸುತ್ತ ಬಳ್ಳಾರಿಗೆ ಬಂದರು.
ಶ್ರೀ ಭೀಮಾಚಾರ್ಯರ ವಿಲಕ್ಷಣ ಶಾಸ್ತ್ರ ಪಾಂಡಿತ್ಯ, ರಾಜ ಗೌರವ, ಜಯಪತ್ರ, ಪ್ರಮಾಣ ಪತ್ರಗಳನ್ನು ನೋಡಿ ಬಳ್ಳಾರಿಯ ನಾಗರೀಕರೆಲ್ಲರೂ ಹೆಮ್ಮೆಗೊಂಡು ಅವರ ಮದುವೆ ಮಾಡಿದರು.
ಶ್ರೀ ಭೀಮಾಚಾರ್ಯರ ಸಂಸಾರ ಬೆಳೆದ ಬಳಿಕ ಸಂಸಾರಕ್ಕೆ ಚಿಂತೆಯಾಗತೊಡಗಿತು.
ಬಡತನದಲ್ಲಿದ್ದರೂ ಪಾಂಡಿತ್ಯದ ಮದದಿಂದ ಬೀಗಿ ನಡೆಯುತ್ತಿದ್ದ ಶ್ರೀ ಭೀಮಾಚಾರ್ಯರು ನಿರ್ವಾಹವಿಲ್ಲದೆ ಒಬ್ಬ ವಕೀನ ಕಡೆಗೆ ದೇಶಾವರಿಗೆ ಹೋಗಿದ್ದರು.
ಅವನು ಮೂರು ಪೈಸೆ ದೇಶಾವರಿಯನ್ನಿತ್ತ. " ಇಷ್ಟೇ ಮಾತ್ರವೇ ನನ್ನ ಪಾಂಡಿತ್ಯಕ್ಕೆ ಬೆಲೆ " ಎಂದಂದು ಶ್ರೀ ಭೀಮಾಚಾರ್ಯರು ಅವನು ಕೊಟ್ಟ ಪುಡಿಕಾಸು ಅಲ್ಲಿಯೇ ಇಟ್ಟು ಶ್ರೀ ಸುರಪುರ ಆನಂದದಾಸರಿಂದ ದಾಸ ದೀಕ್ಷೆ ತೊಟ್ಟು ತಂಬೂರಿ ಹಿಡಿದು ಹೊರಟರು.
ಶ್ರೀ ಸುರಪುರ ಆನಂದದಾಸರಿಂದ " ಭೀಮೇಶ ವಿಠ್ಠಲ " ಎಂಬ ಅಂಕಿತವನ್ನು ಪಡೆದು ಅನೇಕ ಪದ ಪದ್ಯಗಳನ್ನು ರಚಿಸಿದರು.
ಶ್ರೀ ಭೀಮೇಶ ವಿಠ್ಠಲರ ಕವಿತೆಗಳಲ್ಲಿ ಗುರುಗಳಾದ ಶ್ರೀ ಸುರಪುರ ಆನಂದದಾಸರ ಜಾಡು, ಜಾಣ್ಮೆಗಳು ಮೈದೋರಿದೆ.
ಶ್ರೀ ಭೀಮೇಶ ವಿಠ್ಠಲರು ಹಲವು ಆಖ್ಯಾನಗಳನ್ನೂ, ಬಿಡಿ ದೇವರ ನಾಮಗಳನ್ನೂ ರಚಿಸಿದ್ದಾರೆ.
ಸಂಸ್ಕೃತದ ಉದ್ಧಾಮ ಪಂಡಿತರಾಗಿದ್ದರೂ, ತಿರುಳುಗನ್ನಡ ಶೈಲಿಯಲ್ಲಿ ಮನೋಜ್ಞ ಕೀರ್ತನೆಗಳನ್ನು ಕಟ್ಟುವುದು ಶ್ರೀ ಭೀಮೇಶ ವಿಠ್ಠಲರ ವೈಶಿಷ್ಟ್ಯವಾಗಿದೆ.
ದ್ರಾಕ್ಷಾ ಪಾಕದಲ್ಲಿ ಸಂಸ್ಕೃತದ ಪುರಾಣ, ಉಪನಿಷತ್ತುಗಳ ಸಾರವನ್ನೆಲ್ಲಾ ಕನ್ನಡೀಕರಿಸುವ ಹದ ಹವಣಗಳು ಶ್ರೀ ಭೀಮೇಶ ವಿಠ್ಠಲರಲ್ಲಿ ಅನ್ಯಾದೃಶ್ಯವಾಗಿದೆ.
ಆಂಧ್ರ ಪ್ರದೇಶದಲ್ಲೂ, ಕರ್ನಾಟಕದಲ್ಲೂ ಶ್ರೀ ಭೀಮೇಶ ವಿಠ್ಠಲರ ಹೆಸರು ಪ್ರಸಿದ್ಧವಾಗಿದೆ.
ರಾಗ : ಶಂಕರಾಭರಣ ತಾಳ : ಆದಿ
ರಾಘವೇಂದ್ರ ಗುರುರಾಯ ಯನ್ನ । ಪಾ ।
ಪೌಘಗಳೆಣಿಸದೆ ಪಾಲಿಸೋ ।। ಪಲ್ಲವಿ ।।
ನಾಗಶಯನನಣುಗನೇ ವಂದಿಪೆ । ಅನು ।
ರಾಗದಿ ಹರಿಯನು ತೋರಿಸು ।। ಅ. ಪ ।।
ಹೀನ ವಿಷಯಗಳ ನೋಡುತ ಮನದಲಿ ।
ಧ್ಯಾನವಗೊಳಿಸದೆ ಪೋಷಿಸು ।। ಚರಣ ।।
ಬುಧರ ಚರಣಗಳ ನಮಿಸುತಲನುದಿನ ।
ಮುದವ ಬಡುವ ಪಥವ ತೋರಿಸೋ ।। ಚರಣ ।।
ನೀಚರ ಮನೆ ಮೃಷ್ಟಾನ್ನವ ತ್ಯಜಿಸುತ ।
ಯಾಚನೆ ಮಾಡಿಸುವದೇ ಲೇಸೋ ।। ಚರಣ ।।
ಕುನರ ಜೀವಿಯ ಬಿಡಿಸುತ ಭಕುತರ ಮನೆ ।
ಶುನಕನ ಮಾಡುತ ಪಾಲಿಸೋ ।।
ಬಾಲನ ಬಿಂನಪ ಭೀಮೇಶ ವಿಠ್ಠಲನ ।
ಶೀಲ ಬಲ್ಲ ಗುರು ಲಾಲಿಸೋ ।। ಚರಣ ।।
ರಾಗ : ಮೋಹನ ತಾಳ : ಆದಿ
ಬೇಡುವೆ ನಿನ್ನ ಕೊಡು ವರವನ್ನ ।। ಪಲ್ಲವಿ ।।
ಬೇಡುವೆ ಭಕುತರ ಬೀಡೋಳು ನಿನ್ನ । ಕೊಂ ।
ಡಾಡುವೆ ರಥದೊಳಗಾಡುವೆ ವಿಭುವೆ ನಾ ।। ಚರಣ ।।
ಇಂದ್ರನ ವಿಭವ ಸುಧೀಂದ್ರ ತನುಜ । ರಾಘ ।
ವೇಂದ್ರ ಗುರುವೇ ಕಮಲೇಂದ್ರನ ಕೃಪೆಯ ನಾ ।। ಚರಣ ।।
ವರ ಭೀಮೇಶ ವಿಠ್ಠಲನರಿದವರೊಳು । ನಾ ।
ಪರ ನೆನುತಲಿ ನಿನ್ನ ಚರಣವ ಸ್ತುತಿಸಿ ನಾ ।। ಚರಣ ।।
ಶ್ರೀ ಭೀಮೇಶ ವಿಠ್ಠಲರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ.
ಸುಮಾರು 200 ಕ್ಕೂ ಅಧಿಕ ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
*****
No comments:
Post a Comment