Friday 1 October 2021

karjagi rajagopala dasaru ಕರ್ಜಗಿ ರಾಜಗೋಪಾಲ ದಾಸರು


Name: Karjagi Rajagopala Dasaru
Ankita: Rajagopaladasa

" ಶ್ರೀ ಕರ್ಜಗಿ ರಾಜಗೋಪಾಲ ದಾಸರು "
ಶ್ರೀ ರಾಜಗೋಪಾಲದಾಸರು ಮೂಲತಃ ಕಡಕೋಳದವರು.
ಆದರೆ ಶ್ರೀ ರಾಜಗೋಪಾಲಚಾರ್ಯರು ನಿರಂತರವಾಗಿ ಕರ್ಜಗಿಯಲ್ಲಿಯೇ ವಾಸವಾಗಿದ್ದರಿಂದಲೇ ಇವರಿಗೆ ಕರ್ಜಗಿ ಎಂಬ ಅಡ್ಡ ಹೆಸರಾಗಿ ಸೇರಿಕೊಂಡಿತು!
ಶ್ರೀ ರಾಜಗೋಪಾಲದಾಸರು ಸ್ವಯಂ ಸ್ಫೂರ್ತಿಯಿಂದ " ರಾಜಗೋಪಾಲದಾಸ " ಅಂಕಿತದಲ್ಲಿ ಅನೇಕ ಪದ - ಪದ್ಯಗಳನ್ನೂ; ಪ್ರಬಂಧಗಳನ್ನೂ ರಚಿಸಿದ್ದಾರೆ. ಅದರಲ್ಲಿ " ಕೀಚಕವಧೆ " ಎಂಬ ಪ್ರಹಸನವು ಅತ್ಯಾಕರ್ಷಕ ಕೃತಿಯಾಗಿದೆ.
ಶ್ರೀ ರಾಜಗೋಪಾಲದಾಸರು ಕರ್ಜಗಿ ವಾಸಿಗಳಾದ ಶ್ರೀ ಗಲಗಲಿ ಗೋಪಾಲಕೃಷ್ಣಾಚಾರ್ಯರ ಶಿಷ್ಯರಾಗಿ ಅವರಲ್ಲಿ ಶಾಸ್ತ್ರಾಧ್ಯನ ಮಾಡಿದವರು.
ಶ್ರೀ ರಾಜಗೋಪಾಲದಾಸರು ತಮ್ಮಿಂದ ರಚಿತವಾದ " ಕೀಚಕ ವಧೆ " ಮಂಗಳಾಚರಣೆಯಲ್ಲಿ ಗಲಗಲಿಯ ಶ್ರೀ ಮುದ್ಗಲಾಚಾರ್ಯರ ಮನೆಯತನದ ಪಂಡಿತರನ್ನು ವರ್ಣಿಸಿ ವಂದಿಸಿದ್ದಾರೆ.
ಧಾತ್ರಿಯೊಳು ವಿಚಿತ್ರ ಗಾಲವ ।
ಕ್ಷೇತ್ರದಲ್ಲಿಯ ಮುದ್ಗಲಾರ್ಯರ ।
ಪುತ್ರ ಪೌತ್ರ ಪ್ರಪೌತ್ರ ಮೊದಲು । ಕ ।।
ಳತ್ರ ಮಿತ್ರರು ಛಾತ್ರ ವರ್ಗಕೆ ।
ಪಾತ್ರ ಪದ ಶತ ವತ್ರಕೆ । ವರ ।
ಗಾತ್ರದಿಂದಭಿನಮಿಸಿ ವರಗಳ ।।
ಶ್ರೀ ರಾಜಗೋಪಾಲದಾಸರ ಶೈಲಿಯು ಹಲವೆಡೆ ಪ್ರಸನ್ನ ಗಂಭೀರವಾಗಿಯೂ; ಕೆಲವು ಕಡೆ ಕೋಮಲವಾಗಿಯೂ; ಅಲ್ಲಲ್ಲಿ ಜಾನಪದ ಜಾಡಿನ ಗತ್ತು - ಸುತ್ತುಗಳಲ್ಲಿ ಹರಿದು ಮೊರೆಯುತ್ತದೆ.
ಕೀಚಕನನ್ನು ಕೊಲ್ಲುವಾಗ ಶ್ರೀ ಭೀಮಸೇನದೇವರು ಕಾಮಿನೀ ವೇಷ ತೊಟ್ಟಿದ್ದನ್ನು ಅತ್ಯಂತ ಮನೋಜ್ಞ ಮಾರ್ಮಿಕ ಶೈಲಿಯಲ್ಲಿ ಶ್ರೀ ರಾಜಗೋಪಾಲದಾಸರು ಈ ಕೆಳಗಿನಂತೆ ಬಣ್ಣಿಸಿದ್ದಾರೆ!!
ಭೀಮನು ಸರ್ವ ಜನ ಮೋಹಿಸುವಂಥ ।
ಕಾಮಿನಿಯ ರೂಪವ ತೊಟ್ಟನು ।। ಪಲ್ಲವಿ ।।
ಸೋಮ ಸಮಾನನ ತಾಮರ ಸಾಂಬಕ ।
ಹೇಮಾಂಬರ ಕಂಠಿ ಮಣಿ । ಗಣಸು ।
ತ್ರಾಮ ಕಾಮಿನಿಯ ವ್ಯಾಮೋಹಿಪ । ಅಭಿ ।
ರಾಮ ರೂಪ ನಿಸ್ಸೀಮ ಗುಣಾಢ್ಯ ।। ಅ ಪ ।।
ಈ ಹಾಡನ್ನು ನಮ್ಮ ನಿಮ್ಮೆಲ್ಲರಿಗೂ ಚಿರ ಪರಿಚಿತರಾದ, ದಾಸ ಸಾಹಿತ್ಯ ಗಾನ ಗಂಧರ್ವ ಪಂಡಿತ ಶ್ರೀ ಅನಂತ ಕುಲಕರ್ಣಿ ಅವರ ಮಧುರ ಕಂಠದಲ್ಲಿ ಹೊರ ಹೊಮ್ಮಿದೆ!!
ಇಂಥಾ ಅನೇಕ ಸುಮಧುರ - ಸುಂದರ ಸಾಹಿತ್ಯವನ್ನು ಶ್ರೀ ರಾಜಗೋಪಾಲದಾಸರು ರಚಿಸಿದ ಕೃತಿಗಳ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹೇಳುತ್ತಾ...
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****

No comments:

Post a Comment