Friday, 1 October 2021

prayagavva dasaru bhagamma 1750 plus ಪ್ರಯಾಗವ್ವ ದಾಸರು

 

Name: prayagavva

Earlier Name: Bhagamma

Ankita: prayagavva


ವಿದುಷಿ.ಪ್ರಯಾಗವ್ವನವರು ಗಲಗಲಿ ಅವ್ವನವರ ಶಿಷ್ಯಳು. 

" ಶ್ರೀ ಹರಿ ಭಕ್ತೆ ಪ್ರಯಾಗವ್ವ "

ಪರಮ ಭಾಗವದ್ಭಕ್ತೆಯೂ, ಪ್ರಮೇಯ ವಿಜ್ಞಳೂ ಆದ ಪ್ರಯಾಗಬಾಯಿಯ ಹೆಸರನ್ನು ಯಾರೂ ಕೇಳಿರಲಿಕ್ಕಿಲ್ಲ. 

ಆದರೆ ನಾವು ಇಲ್ಲಿ ಉಲ್ಲೇಖಿಸಿದ ಈ ಮಾಧ್ವ ಮಹಿಳೆಯು ಕಥಾ ಪ್ರಧಾನವಾದ ಪುರಾಣ ವಸ್ತುಗಳನ್ನು ಆಯ್ದುಕೊಂಡು ಅದರಲ್ಲಿ ಹರಿ ಭಕ್ತಿ ರಸವನ್ನು ತುಂಬಿ ಕಾವ್ಯ ಕಲಶಗಳನ್ನಾಗಿ ಮೆರೆಸಿದ್ದಾಳೆ. 

ಆದರೆ ಪ್ರಯಾಗವ್ವ ಬರೀ ಕವಿಯಲ್ಲ ಮಹಾ ತತ್ತ್ವಜ್ಞಾನಿಯಾದ ವೇದಾಂತ ವಿದುಷಿ.ಪ್ರಯಾಗವ್ವನವರು ಗಲಗಲಿ ಅವ್ವನವರ ಶಿಷ್ಯಳು. 

ಮಾಧ್ವ ತತ್ತ್ವಜ್ಞಾನದ ಬೋಧನ ಪ್ರಧಾನವಾದ " ಶೃಂಗಾರ ತಾರತಮ್ಯ " ಮುಂತಾದ ಅವ್ವನವರ ಸತ್ಕೃತಿಗಳಿಂದ ಸ್ಫೂರ್ತಿ ಪಡೆದು ಪ್ರಯಾಗವ್ವನವರು ಕೃತಿ ರಚನೆಗೆ ಕೈ ಹಾಕಿದರು.

ಅವ್ವನವರ ಹಿಂದೆ ಇದ್ದು ಅವರು ಆಗಾಗ ಹೇಳುವ ಹಾಡುವ ಪದಗಳನ್ನು ಬರೆದುಕೊಂಡು ತಾನೂ ಹಾಡುವುದೇ ಅವಳ ಮುಖ್ಯ ಕೆಲಸವಾಗಿದ್ದಿತು.ಗಲಗಲಿ ಅವ್ವನವರು ಕಾಶೀ ಯಾತ್ರೆಗೆ ಹೊರಟಾಗ ಅವರ ಜೊತೆ ಹೊರಟ ನೂರಾರು ಜನ ಶಿಷ್ಯರಲ್ಲಿ ಪ್ರಯಾಗವ್ವನೂ ಇದ್ದಳು. 

ಕಾಶಿಯಲ್ಲಿದ್ದಾಗ ಪ್ರಯಾಗವ್ವನಿಗೆ ವಾಂತಿ ಶುರುವಾಗಿ ಕಲರಾ ಬಂದಿತು. 

ಆಗ ಪ್ರಯಾಗವ್ವ ಗಲಗಲಿ ಅವ್ವನವರ ಪಾದದ ಮೇಲೆ ತಲೆಯಿಟ್ಟು ತಮ್ಮನ್ನು ಈ ಮೃತ್ಯು ಸಂಕಟದಿಂದ ಪಾರು ಮಾಡಬೇಕೆಂದು ಬೇಡಿಕೊಂಡಳು.

ಆಗ ಗಲಗಲಿ ಅವ್ವನವರು ಪ್ರಯಾಗವ್ವಗೆ ಶ್ರೀಮದ್ಭಗವತದ ಮೂರನೇ ಸ್ಕಂದವನ್ನು ಕನ್ನಡ ಪದ್ಯದಲ್ಲಿ ಭಾಷಾಂತರಿಸಲಿಕ್ಕೆ ಹೇಳಿದರು.

ಅದರಂತೆ ಪ್ರಯಾಗವ್ವನು ಸಂಕಲ್ಪ ಮಾಡಿದಾಗ ಅವಳ ಕಲರಾ ರೋಗವು ಕಡಿಮೆಯಾಯಿತು.

ಆದರೆ ಶ್ರೀಮದ್ಭಾಗವತದಂಥ ಕಠಿಣ ಪುರಾಣ, ಅದರಲ್ಲಿಯೂ ಪ್ರಮೇಯ ಜಾಲ ಜಟಿಲವಾದ ತೃತೀಯ ಸ್ಕಂದವನ್ನು ಕನ್ನಡಿಸುವುದು ಹೇಗೆ? 

ಪ್ರಯಾಗವ್ವನು ಹಾಗೆ ಅಪ್ಪಣೆ ಮಾಡಿದ ಗಲಗಲಿ ಅವ್ವನವರಿಗೆ ಶರಣು ಹೋದಳು.

ಆಗ ಅವ್ವನವರು ಪ್ರಯಾಗವ್ವಳಿಗೆ ತೃತೀಯ ಸ್ಕಂದದ ತತ್ತ್ವಗಳ ತಿರುಳನ್ನೂ, ಪ್ರಮೇಯ ಭಾಗಗಳ ವಿವರಗಳನ್ನೂ ಸರಳವಾಗಿ ತಿಳಿಸಿಕೊಟ್ಟು ಇದನ್ನು ಕನ್ನಡಿಸು ಎಂದು ಹೇಳಿದರು.

" ವಿಜಯಧ್ವಜೀಯ ಟೀಕೆ " ಗನುಗುಣವಾಗಿ ಸಮಗ್ರ ತೃತೀಯ ಸ್ಕಂದವನ್ನು ಸರಸ ಸುಂದರವಾಗಿ ಕನ್ನಡ ಪದ್ಯ ಬದ್ಧವಾಗಿ ಮಾಡಿದ ಪ್ರಯಾಗವ್ವನ ಜಾಣ್ಮೆಗೈಮೆಗಳು ಅಸಾಧಾರವವಾಗಿದೆ.

ಈ ಗ್ರಂಥದ ಪ್ರಾರಂಭದಲ್ಲಿ ಪ್ರಯಾಗವ್ವನು ತನ್ನ ಗುರುಗಳಾದ ಗಲಗಲಿ ಮನೆತನದ ಕುಲದೇವರಾದ ಪುಂಡಲೀಕ ವರದ ಶ್ರೀ ಪಾಂಡುರಂಗನನ್ನೇ ಭಕ್ತಿಯಿಂದ ವಂದಿಸಿ ಹರಿ ಗುರು ಭಕ್ತಿಯನ್ನು ಮೆರೆದಿರುವಳು.

ಪುಂಡರೀಕ ಪ್ರಭು 

ಪಾಂಡುರಂಗನ ಪಾದ ।

ಕಂಡು ವಂದನೆಯ 

ಮಾಡುವೆನು ।

ದಂಡಿಸಿ ದೇಹವ 

ತಾಂಡವ ಕೃಷ್ಣನ ।

ಕೊಂಡಾಡಿ ಪದವ 

ಪೇಳುವೆನು ।।

ಶ್ರೀ ಗಲಗಲಿ ಆಚಾರ್ಯರಂಥ ಅಪರೋಕ್ಷ ಜ್ಞಾನಿಗಳ ಪತ್ನಿಯ ಸಹವಾಸ ತನಗೆ ದೊರೆತಿದ್ದು ತನ್ನ ಏಸು ಜನ್ಮದ ಭಾಗ್ಯವೋ ಏನೋ ಎಂದು ಅವ್ವನವರಿಗೆ ಈ ಗ್ರಂಥ ಪ್ರಾರಂಭದಲ್ಲಿ ಗ್ರಂಥ ಕರ್ತಳು ಕೃತಜ್ಞತೆಯನ್ನು ಸಲ್ಲಿಸಿದ್ದಾಳೆ.

ಏಸು ಜನ್ಮದ ಪುಣ್ಯ

ವಾಸವಾಯಿತೋ ।

ವಿಷ್ಣುದಾಸರ ದಾಸಿ 

ದಾಸಿ ನಾನಾದೆ ।

ಈ ಸಂಸಾರ ಕ್ಲೇಶವು 

ಕಳೆದು । ಸು ।

ವಾಸನೆಯ ಕೊಡು 

ಗುರುರಾಜ ।।

ಇಂಥ ಶ್ರೀ ವಿಷ್ಣುದಾಸರ ಮನೆಯ ದಾಸಿಯಾಗಿದ್ದೊಂದು ತನ್ನ ದೊಡ್ಡ ಭಾಗ್ಯಯೆಂದು ಪ್ರಯಾಗವ್ವ ಅಭಿಮಾನದಿಂದ ಹೇಳಿಕೊಂಡಿದ್ದಾಳೆ.

ಶ್ರೀಮದ್ಭಾಗವತದ 12 ಸ್ಕಂದಗಳಲ್ಲಿ ಹೆಚ್ಚಾಗಿ ಮೂರನೆಯ ಸ್ಕಂದದಲ್ಲಿ ಬರೀ ವೇದಾಂತ ವಿಷಯವೇ ತುಂಬಿದೆ.

ಕಥಾ ಪ್ರಚುರವಾದ 8-9-10ನೇ ಸ್ಕಂದಗಳನ್ನು ಬಿಟ್ಟು...

ಸೃಷ್ಟಿ ಪ್ರಕ್ರಿಯೆ

ಸಾಂಖ್ಯ ತತ್ತ್ವ

ಧರ್ಮ ಸೂಕ್ಷ್ಮ

ಕರ್ಮ ಮೀಮಾಂಸಾ

ಮುಂತಾದ ಕ್ಲಿಷ್ಟ ವಿಷಯಗಳನ್ನು ವಿವರಿಸುವ ತೃತೀಯ ಸ್ಕಂದವನ್ನೇ ಆಯ್ದು ಅತ್ಯಂತ ಸಮರ್ಥ ರೀತಿಯಿಂದ ಕನ್ನಡಿಸಿ ಅದರಲ್ಲಿ 

ಭಾಗವತ ತಾತ್ಪರ್ಯ

ವಿಜಯಧ್ವಜೀಯ

ಯಾದುಪತ್ಯ

ಮುಂತಾದ ಟೀಕಾ ಟಿಪ್ಪಣಿಗಳಿಗನುಗುಣವಾಗಿಯೇ ತತ್ತ್ವಾರ್ಥಗಳನ್ನು ನಿರೂಪಿಸಿದ ಪ್ರಯಾಗವ್ವನು ವೇದಾಂತ ವಾಗ್ಮಯಕ್ಕೆ ಅದರಲ್ಲಿಯೂ ಮಾಧ್ವ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯು ಅಪೂರ್ವವೂ, ಅಭಿನಂದನೀಯವೂ ಆಗಿದೆ.

ಗಹನಗೂಢವಾದ ತತ್ತ್ವಗಳಿಂದ ತುಂಬಿದ ಈ ತೃತೀಯ ಸ್ಕಂದದ ಕನ್ನಡೀಕರಣ ಶಕ್ತಿಯನ್ನು ತನಗೆ ಕೊಡುಯೆಂದು ಮೊದಲು ಸಾಂಪ್ರದಾಯಿಕವಾಗಿ ಶ್ರೀ ಗಣಪತಿಯನ್ನು ಸ್ತುತಿಸಿ, ಕೊನೆಗೆ ನಿಜವಾದ ವಿಘ್ನಹರ್ತಾಸ್ವಾಮಿ ಶ್ರೀ ಹರಿಯೇ ಎಂದು ಶ್ರೀ ಮಹಾ ವಿಷ್ಣುವಿಗೆ ಶರಣು ಹೋಗಿ ತನ್ನ ಕಾಮಿತವಾದ ಗ್ರಂಥ ಪೂರ್ತಿಯು ಶ್ರೀ ರಾಮನ ದಯೆಯಿಂದಲೇ ಸಾಧ್ಯ ಎಂಬುದನ್ನು ತಾರತಮ್ಯ ಕ್ರಮ ತಿಳಿದ ಪ್ರಯಾಗವ್ವ ಪ್ರಾರಂಭದಲ್ಲಿಯೇ ತಿಳಿದಿದ್ದಾಳೆ.

ಇದರಿಂದಲೇ ಪ್ರಯಾಗವ್ವನ ಅಚ್ಚ ವೈಷ್ಣವ ಸಿದ್ಧಾಂತದ ನಿಚ್ಛಳ ಜ್ಞಾನ ಎಷ್ಟು ಪ್ರಖರವಾಗಿದ್ದಿತೆಂಬುದು ಸ್ಪಷ್ಟವಾಗುತ್ತದೆ.ತೃತೀಯ ಸ್ಕಂದದಲಿ.... 

ರತಿಯಿಟ್ಟು ಮನದಲ್ಲೇ ।

ಯತಿ ಮುನಿರಾಯ-

ನಿಗೊಂದಿಸುವೆ ।

ಭಕ್ತಿಯಿಂದಲೇ ಮತಿ 

ಬೇಡಿ ಪಾರ್ವತಿ ।

ಸುತಗೆ ವಂದನೆಯ 

ಮಾಡುವೆನು ।।

ಸ್ವಾಮಿ ಗುರುಗಳ ಪಾದ ।

ನೇಮದಿ ಭಜಿಸುವೆ ।

ಸೋಮ ಮುಖಿಯ ಪತಿಯಾದ ।

ರಾಮ ನಾಮವ ।

ಪ್ರೇಮದಿಂದಲಿ ಪಾಡಿ ।

ಕಾಮಿತ ಫಲವ ಐದುವೆನು ।।

ದುರ್ಯೋಧನನ ದುಷ್ಟ ಮಾತುಗಳಿಂದ ನೊಂದ ವಿದುರನು ತೀರ್ಥ ಯಾತ್ರೆಗೆ ಹೊರಟು ದಾರಿಯಲ್ಲಿ ಉದ್ಧವನ ಆದೇಶದ ಮೇರೆಗೆ ಶ್ರೀ ಮೈತ್ರೇಯರ ಬಳಿಗೆ ಬಂದು " ಸೃಷ್ಟಿ ಸ್ಥಿತಿ ಲಯದಷ್ಟು ವಿಸ್ತಾರಗಟ್ಯಾಗಿ ವಿದುರ ಕೇಳಿದನು ".

ಆಗ ಸಾಕ್ಷಾತ್ಭಗವಂತನ ವದನಾರವಿಂದದಿಂದಲೇ ಕೇಳಿ ತತ್ತ್ವಜ್ಞಾನದ ತಿರುಳನ್ನೆಲ್ಲಾ ತಿಳಿಯಾಗಿ ತಿಳಿದ ವಿಮಲ ಜ್ಞಾನಿ ಶ್ರೀ ಮೈತ್ರೇಯರು ವಿದುರನಿಗೆ ಶ್ರೀ ಹರಿಯ ಮಹಾ ಮಹಿಮಾ ರೂಪವಾದ ಸೃಷ್ಟಿ ಸ್ಥಿತಿ ಲಯಾದಿಗಳನ್ನು ನಿರೂಪಿಸಲು ಪ್ರಾರಂಭಿಸುತ್ತಾರೆ.

ಸುತ ಬ್ರಹ್ಮರಾಯಗ 

ಶತ ವರುಷ ಮುಗಿಯಲು ।

ಅತಿಶಯ ಜಲ ತುಂಬಿದವು ।

ಇತರ ದೇವತೆಗಳು ಮತಿ 

ಭ್ರಾ೦ತರಾಗಿ । ಶ್ರೀ ।

ಪತಿ ನೀನೆ ಗತಿ ನಮಗೆನಲು ।।

ಆಲದೆಲೆಯ ಮ್ಯಾಲೆ 

ನೀಲ ಮೇಘ ಸ್ವಾಮಿ ।

ಬಾಲನಾಗಿ ಮಲಗಿರಲು ।

ಲೋಲಾಕ್ಷನ ಮಹಿಮೆ । ಮ ।

ಹಾಲಕ್ಷ್ಮೀ ತಾ ತಿಳಿದು ।

ಮೇಲಾಗಿ ಸ್ತೋತ್ರ । ಮಾಡಿ ।

ದಳು ಆಮ್ರಾಯಣಿ ಸೂಕ್ತ ।

ದಲೆ ಅಂಬುಜನಾಭನ್ನ 

ನಂಬಿ ಸ್ತೋತ್ರವನೆ । ಮಾಡಿ ।

ದಳು ರಮೆಯ ಸ್ತುತಿ ।

ಕೇಳಿ ಅಂಬುದಿ೦ ।

ದಲೇ ಎದ್ದು ಕಂಬು

ಕಂಧರ ಬಂದನಾಗ ।।

ಅನಿರುದ್ಧ ಪ್ರದ್ಯುಮ್ನ 

ಘನ ಸಂಕರ್ಷಣ ।

ಸನಕಾದಿ ಪತಿ ವಾಸುದೇವ ।

ಕನಿಕೆ ಮಾಯಾ ಜಯ 

ಕೃತು ಶಾಂತಾದೇವಿಯರು ।

ಅನುಕೂಲವಾಗಿ ಪುಟ್ಟಿದರು ।।

ಹೀಗೆ ವೇದಾಂತ ಮೀಮಾಂಸಾ ಶಾಸ್ತ್ರಗಳ ಕಠಿಣ ವಿಷಯಗಳನ್ನೂ ನೀರು ನೀರಾಗಿ ಹಿಂಜಿ ಹಿಗ್ಗಿಸಿ ಮನಂಬುಗುವ ರೀತಿಯಲ್ಲಿ ಹೇಳುವ ಹದ ಹವಣು ಪ್ರಯಾಗವ್ವನಂತೆ ಬೇರಾರಿಗೂ ಸಾಧಿಸಿದಂತೆ ಕಂಡು ಬರುವುದಿಲ್ಲ!

ಇಂಥ ರುಕ್ಷ ವಿಷಯದಲ್ಲಿ ತನ್ನ ವಾಣಿಯನ್ನು ಓಡಿಸಿದ್ದರೂ ಪ್ರಯಾಗವ್ವನ ಕಾವ್ಯದ ಝರಿ ಬತ್ತಿಲ್ಲ. 

ಪ್ರಸಂಗ ಬಂದಾಗ ಪ್ರಯಾಗವ್ವನ ಸರಸ ಕವಿತ್ವವು ರಸ ಕಾರಂಜಿಯನ್ನು ಚಿಮ್ಮಿಸದೆ ಬಿಟ್ಟಿಲ್ಲ.ಕರ್ದಮ ದೇವಹೂತಿಯರ ವಿವಾಹ, ತದನಂತರ ಪ್ರಣಯ ವಿಲಾಸ, ಸರಸ ಸಂಭಾಷಣೆಯ ಪ್ರಸಂಗಗಳನ್ನು ಶೃಂಗಾರ ತರಂಗಿತವಾದ ಸುಮಧುರ ಶೈಲಿಯಲ್ಲಿ ಕವಯಿತ್ರಿ ಪ್ರಯಾಗವ್ವ ಬಿತ್ತರಿಸುತ್ತಾಳೆ

ಸಂಡಿಗೆ ಹಪ್ಪಳ 

ಮಂಡಿಗೆ ಗುಲ್ಲೋರಿಗಿ ।

ದಿಂಡು ಸೂರಣೆ ಬಡಿಸುವರು ।

ಬೆಂಡೀಕಾಯಿ ಶಾಖ 

ಸಂಡಿಗಿ ಹಳಿ ಶಾಖ ।

ಗಂಡಸರು ಭೂಮ

 ಬಡಿಸುವರು ।।

ಉರಟನಿ - ಭೂಮದ ಹಾಡು - ಹಸೆ ಕರೆದ ಪದಗಳಲ್ಲಿ ಮಧುರಸ ಹೊಸ ರೀತಿಯಿಂದಲೇ ಹರಿದು ಎಲ್ಲೆಡೆಗೂ ಹೌಸು ಹುಮ್ಮಸ್ಸುಗಳ ಸೌರಭ ಬೀಸಿ ಬಂದಂತೆನಿಸುತ್ತದೆ.

ಮುಂದೆ ದೇವಹೂತಿಯ ಪರಿ ಪರಿ ಸೇವೆಗೆ ಮೆಚ್ಚಿದ ಕರ್ದಮ ಋಷಿಯು ಒಲಿದು ವರ ಬೇಡೆಂದಾಗ ಆ ರಸಿಕ ಋಷಿ ರಮಣಿಯು....

ವಸುಧಾಧಿತಿ ಪತಿ ಪುತ್ರ ।

ಹೊಸದಾಗಿ ನುಡಿದಳು ।

ಹಸನಾದ ಮೋಕ್ಷ ಹಾಂಗಿರಲೆ ।।

ಕುಸುಮನಾಭ ನೀವು ।

ದಶದಿಕ್ಕಿನಲ್ಲೆಸೆವೊ 

ಮಂದಿರ ಮಾಡೆನ್ನಲು ।।

ಇಲ್ಲಿ ಸಂದರ್ಭೋಚಿತವಾಗಿ ತಕ್ಕ ಪದ ಪ್ರಯೋಗ ಮಾಡುವ ಈ ಕವಿಕಾಮಿನಿಯ ಶಬ್ದಶಕ್ತಿ ಜ್ಞಾನದ ಅಗಾಧೆಯನ್ನು ಕಾಣಬಹುದು. 

ತಮ್ಮ ವಿಹಾರಕ್ಕಾಗಿ ಭವ್ಯ ಅರಮನೆ - ದಿವ್ಯ ವಸ್ತ್ರಾಭರಣಗಳನ್ನೂ ಅನೇಕ ದಾಸ ದಾಸಿಯರು ಚಂದನಗಂಧ, ಕುಸುಮ ಹಾರ, ಹೂವಿನ ಹಾಸಿಗೆ ಮುಂತಾದ ವಿವಿಧ ವಿಲಾಸಿ ವಸ್ತುಗಳನ್ನೂ ಬೇಡುವ ದೇವಹೂತಿಗೆ ಕವಯಿತ್ರಿ " ವಸುಧಾಧಿತಿಪತಿ ಪುತ್ರ " ಎಂಬ ಹೇತುಗರ್ಭ ವಿಶೇಷಣವನ್ನು ಕೊಟ್ಟು ವಿಶೇಷಾರ್ಥವೊಂದು ಧ್ವನಿತವಾಗುವಂತೆ ಮಾಡಿದ್ದಾಳೆ.

ದೇವಹೂತಿ ಬಡ ಬ್ರಾಹ್ಮಣನ ಮಗಳಾದ ಬರೀ ವೈದಿಕ ಮುತ್ತೈದೆಯಲ್ಲ. 

ಅವಳು ಮೊದಲು ವಿಶ್ವ ಸಾಮ್ರಾಟನ ಮಗಳು. 

ಅವಳಿಗೆ ರಾಜ ಭೋಗದ ಅನುಭವವಿದೆ. 

ಆದುದರಿಂದಲೇ ಗುಡಿಸಲದ ಗೃಹಸ್ಥರಿಗೆ ಕಲ್ಪನೆ ಕೂಡಾ ಇಲ್ಲದ ವಿಲಾಸ ಸಾಮಾಗ್ರಿಗಳನ್ನು ಸಿದ್ಧಪಡಿಸಲು ಸಿದ್ಧ ತಾಪಸರಾದ ಕರ್ದಮ ಮುನಿಗಳಿಗೆ ಬಿನ್ನವಿಸಿದಳು ಎಂದು ಸೂಚವಾಗಿ ಈ " ವಸುಧಾಧಿತಿಪತಿ ಪುತ್ರ " ಎಂಬ ವಿಶೇಷಣದಿಂದ ಕಾಣಿಸಿದ್ದಾಳೆ.

ಮತ್ತೆ ಅದೇ ಪದ್ಯದಲ್ಲಿ " ಹೊಸದಾಗಿ ನುಡಿದಳು " ಎನ್ನುವುದರಿಂದ ದೇವಹೂತಿಯು ಸಾಮನ್ಯ ನಾರಿಯಂತೆ ಬರೀ ವಿಲಾಸಪ್ರಿಯಳಾಗಿದ್ದಿಲ್ಲ. 

ಅಂತೆಯೇ ಅವಳು ಹಿಂದೆಂದೂ ಇಂಥಾ ಕಾಮನೆಯನ್ನು ಮಾಡಿದ್ದಿಲ್ಲ.

ಇಂದು ಒಂದುಸಲ ತಮ್ಮ ಇಡೀ ಆಯುಷ್ಯದಲ್ಲಿಯೇ ಒಂದು ಸಾರಿ ಅವರು ಲೌಕಿಕ ವಿಷಯ ಸುಖಕ್ಕೆ ಇಳಿಯುವವರಿದ್ದರು. 

ಆದುದರಿಂದಲೇ ಅವಳು ಆ ನಿಮಿಷ ರಸ ನಿಮಿಷವಾಗಲೆಂದು ಅಂದು ಅದಕ್ಕೆ ಬೇಕಾದ ಸುಖೋಪಭೋಗ ಸಾಮಾಗ್ರಿಗಳನ್ನೆಲ್ಲಾ ಅದೇ ಮೊದಲುಬಾರಿ ಅಪೇಕ್ಷಿಸಿದ್ದು ಎಂಬುದನ್ನು " ಹೊಸದಾಗಿ ನುಡಿದಳು " ಎಂಬ ಶಬ್ದದಿಂದ ಸೂಚಿಸಿ ದೇವಹೂತಿಯ ವೈರಾಗ್ಯ ಹಾಗೂ ವಿಷಯ ಸುಖ ವಿಮುಖ ಪ್ರವೃತ್ತಿಗಳನ್ನು ಎತ್ತಿ ತೋರಿಸಿದ್ದಾಳೆ.

ಎಂತಲೇ ಅವಳು ತನ್ನ ಪತಿಗೆ ರಾಜ ಮಹಾರಾಜನಾಗಿ ಸಿರಿ ಸಂಪದಗಳಿಂದ ಮೆರೆಯುವ ಮಗನನ್ನು ಕೊಡು ಎಂದು ಕೇಳದೆ " ಇತರ ವಿಷಯ ಬಿಟ್ಟು ಗತಿ ಮೋಕ್ಷ ನೀಡುವಂಥ ಸುತನ ಕೊಡೆಂದು ಕೇಳಿದಳು.

ಅವಳ ಅಪೇಕ್ಷೆಯಂತೆ ಅಷ್ಟ ಮಹಾ ಸಿದ್ಧಿಗಳನ್ನೆಲ್ಲಾ ಸ್ವಾಧೀನ ಪಡಿಸಿಕೊಂಡ ಕರ್ದಮರು ದಿವ್ಯ ಮಂದಿರ, ವಿಹಾರ ವಿಮಾನ, ವಿಲಾಸ ಸಾಮಾಗ್ರಿಗಳನ್ನೆಲ್ಲಾ ತಪೋ ಬಲದಿಂದ ನಿರ್ಮಿಸಿ ದೇವ ಪುತ್ರಿಯಾದ ದೇವಹೂತಿಯ ಕಾಮನೆಗಳನ್ನೆಲ್ಲಾ ಪೂರೈಸಿ ಸಂತವಿಸಿ ಅವಳಿಗೆ...

ಮನು ಪುತ್ರಿ ನೀ ಕೇಳು 

ಮನದಲ್ಲಿ ಖೇದವು ಬೇಡ ।

ವನಜಲೋಚನೆ ನಿನ್ನದರದಲಿ ।

ಜನಿಸುವಾಗಲೇ 

ಘನ ಮಹಿಮ ಕೃಷ್ಣನು ।

ಮನಿಸಿನಿಂದಾತನ ಭಜಿಸು ।।

ಎಂದು ಹೇಳಿದರು. 

ಅದರಂತೆ ಕಪಿಲಾವತಾರವಾಯಿತು 

ಮತ್ತು 9 ಜನ ಕನ್ನಿಕೆಯರು ದೇವಹೂತಿಯಲ್ಲಿ ಕರ್ದಮನಿಂದ ಜನಿಸಿದರು.

ಇಂತೂ ಇಂಥ ಕ್ಲಿಷ್ಟವಾದ ತತ್ತ್ವಜ್ಞಾನದ ಭಾಗವನ್ನು ಶೈಲಿಗೆ ಹೊಂದಿಸಿಕೊಂಡು ಶಾಸ್ತ್ರಗಂಧಿ ಕಾವ್ಯವನ್ನು ಬರೆದ ಪ್ರಯಾಗವ್ವ ಕವಿಯೂ ಹೌದು, ಪಂಡಿತಳೂ ಹೌದು, ತತ್ತ್ವಜ್ಞಾನಿಯೂ ಹೌದು.

ಮಾಧ್ವ ವಾಜ್ಮಯಕ್ಕೆ ಇಂಥಾ ಮೌಲಿಕವಾದ ತಾತ್ವಿಕ ಕಾಣಿಕೆ ಕೊಟ್ಟ ಮಹಿಳೆಯರಲ್ಲಿ ಪ್ರಯಾಗವ್ವನಿಗೆ ಅಗ್ರಸ್ಥಾನ, 

ವಿಶಿಷ್ಟ ಮಾನಗಳು ಸಲ್ಲುವುದರಲ್ಲಿ ಸಂದೇಹವಿಲ್ಲ!!

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

****

No comments:

Post a Comment