ಶ್ರೀ ಸ್ವಾಮಿರಾಜಾಚಾರ್ಯ ವೈದ್ಯ 1882-1992
ಅಂಕಿತನಾಮ :- ಮುರಳೀವಿನೋದ ವಿಠಲದಾಸ ಸಾಹಿತ್ಯದ ಸೇವೆ ಮಾಡಿದ ನಮ್ಮ ದಾಸಾರ್ಯರು ಲೌಕಿಕ ವಿದ್ಯೆಯಲ್ಲಿಯೂ ಆದ್ಯರಾಗಿದ್ದರೆನ್ನುವುದು ಗೊತ್ತಿರುವ ವಿಷಯವೇ.. ಕರ್ತವ್ಯ ಪಾಲನಗೆ ಲೌಕಿಕ ವಿದ್ಯಾ, ವೃತ್ತಿಗಳಾದರೆ , ಮಾನಸ ಪೂಜಾ ರೂಪವಾಗಿ ದಾಸ ಸಾಹಿತ್ಯದ ಸೇವೆಯೇ ಅವರ ಉಸಿರಾಗಿತ್ತು..
ಶ್ರೀ ವಿದ್ಯಾಪ್ರಸನ್ನತೀರ್ಥರು ತಮ್ಮ ಪೂರ್ವಾಶ್ರಮದಲ್ಲಿ ಎಲ್.ಎಲ್.ಬಿ ಓದಿದವರಾಗಿದ್ದರು, ಶ್ರೀಯುತ ಗೋರೆಬಾಳ ಹನುಮಂತರಾಯರೂ ಸಹ.. ಹಾಗೆಯೆ ಉಪಾಧ್ಯಾಯ ವೃತ್ತಿಯಲ್ಲಿ ನಮ್ಮ ಉರಗಾದ್ರಿವಾಸವಿಠಲರು, ಶ್ರೀ ತಂದೆವೆಂಕಟೇಶವಿಠಲರನ್ನು ಉದಾಹರಣೆಯಾಗಿ ಹೇಳಬಹುದು... ಇವರಂತೆಯೇ ಸರ್ಕಾರಿ ಕೆಲಸಕ್ಕೆ ತಿಲೋದಕ ನೀಡಿ ವೈದ್ಯ ವೃತ್ತಿಯನ್ನಾದರಿಸಿದ ರಾಯರ ಪರಮ ಭಕ್ತರಾದ ಶ್ರೀ ವಿಠಲೇಶಾಂಕಿತಸ್ಥರಾದ ಶ್ರೀ ವಿಠೋಬಾಚಾರ್ಯರು ಆಯುರ್ವೇದ ವೈದ್ಯ ನಿಪುಣರಾಗಿದ್ದರು ... ಇಂಥವರ ಹಾದಿಯಲ್ಲಿ ನಡೆದ ಮತ್ತೊಬ್ಬ ದಾಸಾರ್ಯರು ಇಂದಿನ ನಮ್ಮ ಕಥಾನಾಯಕರಾದ ಶ್ರೀ ಸ್ವಾಮಿರಾಜಾಚಾರ್ಯ ವೈದ್ಯ ಇವರೂ ಸಹ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಖ್ಯಾತ ವೈದ್ಯರಾಗಿದ್ದರು... ಇವರ ಸ್ವಸ್ಥಳವಾದ ಕುಷ್ಟಗಿಯಲ್ಲಿ, ಬಳ್ಳಾರಿ, ಬಾಗಲಕೋಟೆ ಮೊದಲಾದ ಸ್ಥಳಗಳಲ್ಲಿ ಆಯುರ್ವೇದ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ , ಅವುಗಳ ಅಧ್ಯಕ್ಷರಾಗಿಯೂ, ಪ್ರಾಧ್ಯಾಪಕರಾಗಿಯೂ ಅನೇಕ ಸಂವತ್ಸರಗಳ ಕಾಲ ಸೇವೆಯನ್ನು ಮಾಡಿದವರಾಗಿ , ಆಗಿನ ನಮ್ಮ ಭಾರತದ ಪ್ರಪ್ರಧಮ ರಾಷ್ಟ್ರಪತಿಗಳಾದ ಶ್ರೀ ಡಾ. ರಾಜೇಂದ್ರಪ್ರಸಾದ್ ಅವರಿಂದ ಸನ್ಮಾನಿಸಲ್ಪಟ್ಟ ಮಹಾನ್ ವೈದ್ಯರು ನಮ್ಮ ಶ್ರೀ ದಾಸಾರ್ಯರು...
ಇನ್ನೂ ಒಂದು ವಿಶೇಷವೆಂದರೆ, ನಾವು ಹಿಂದಿನ ಲೇಖನಗಳಲ್ಲಿ ಕುಷ್ಟಗಿಯ ಮಹಾನ್ ದಾಸಾರ್ಯರಾದ, ಸಂಸ್ಕೃತ ಪಂಡಿತರು, ವ್ಯಾಸ- ದಾಸ ಸಾಮಿತ್ಯದಲ್ಲಿ ಪ್ರಾವೀಣ್ಯರೂ ಆದ ಶ್ರೀ ರಾಘವಾರ್ಯ ಒಡೆಯರ ಚರಿತ್ರೆ ಓದಿದ್ದಿವಿ.... ಅವರ ಪೌತ್ರರು ಹಾಗೂ ದತ್ತಕ ಪುತ್ರರೇ ಶ್ರೀ ಸ್ವಾಮಿರಾಜಾಚಾರ್ಯ ವೈದ್ಯರು.. ನೋಡಿ ಹಿರಿಯರ ಆಶೀರ್ವಾದ ಇದ್ದರೆ , ಅವರ ಹಾದಿಯನ್ನು ಕಿರಿಯರು ಹಿಡಿದರೆ ಜೀವನ ಸಾಧನಾ ಪಥದಲ್ಲಿಯೆ ಸಾಗೋದು ಎನ್ನುವ ಉದಾಹರಣೆಗೆ ಶ್ರೀ ವೈದ್ಯರನ್ನ ತೆಗದುಕೊಳ್ಳಬಹುದಲ್ಲವೇ?
ಮಕ್ಕಳಿಲ್ಲದ ಕಾರಣ ಶ್ರೀ ರಾಘವಾರ್ಯ ಒಡೆಯರು , ಶ್ರೀ ಸ್ವಾಮಿರಾಜಾಚಾರ್ಯರನ್ನು ದತ್ತಕ ತಗೊಂಡು ಲೌಕಿಕ ವಿದ್ಯಾಭ್ಯಾಸದ ಜೊತೆಗೆ ಶಾಸ್ತ್ರದ ವಿಚಾರದಲ್ಲಿಯೂ ನಿಷ್ಣಾತರನ್ನಾಗಿ ಮಾಡಿದರು. ಮುಂದಿನ ವಿದ್ಯಾಭ್ಯಾಸಕ್ಕೆ ರಾಯಚೂರು ಪ್ರಾಂತಕ್ಕೆ ಕರೆದುಕೊಂಡು ಬಂದರು..
ಅಲ್ಲಿ ಆಗಿನ ಕಾಲದ ಶ್ರೀ ಮಂತ್ರಾಲಯ ಮಠಾಧೀಶರಾದ ಶ್ರೀ ಸುಶೀಲೇಂದ್ರತೀರ್ಥರ ಆಗಮನವಾಗಿತ್ತು.. ಸಂಸ್ಥಾನ ಪೂಜೆ, ಪ್ರಸಾದಗಳನಂತರ ಶ್ರೀಗಳ ಕುರಿತು ಗುರುಸ್ತೋತ್ರವನ್ನು ರಚಿಸಿ ಬಾಲಕನಾದ ಶ್ರೀ ಸ್ವಾಮಿರಾಜಾಚಾರ್ಯರಿಂದ ಹೇಳಿಸಿದರು.. ಶ್ರೀಗಳು ಬಹಳ ಸಂತೋಷಪಟ್ಟು ತಮ್ಮ ಅಮೃತಹಸ್ತವನ್ನು ಆ ಕಂದನ ತಲೆಯಮೇಲಿಟ್ಟು ಆಶೀರ್ವಾದ ಮಾಡಿದರು.. ನಂತರದಲ್ಲಿ ಶ್ರೀ ರಾಘವಾರ್ಯ ಒಡೆಯರು ಸ್ವಾಮಿರಾಜಾಚಾರ್ಯರಿಗೆ ತಾವೇ ಗುರುಗಳಾಗಿ ಮಧ್ವ ಶಾಸ್ತ್ರದ ಎಲ್ಲ ತತ್ವಗಳನ್ನು ತಿಳಿಸಿದರು...
ರಾಘವಾರ್ಯ ಒಡೆಯರು ಕಾಲವಾದನಂತರ ಶ್ರೀ ವೈದ್ಯರು ತಮ್ಮ ಸಾಧನೆಯನ್ನು ಮುಂದುವರೆಸಿದರು.. ಲೌಕಿಕ ವೈದ್ಯಕೀಯ ವೃತ್ತಿಯ ಜೊತೆ , ಶಾಸ್ತ್ರಾಧ್ಯಯನ , ಪೂಜೆಯನ್ನು ಎಂದಿಗೂ ಬಿಟ್ಟವರಲ್ಲ. ಮದುವೆಯಾಗಿ ಒಬ್ಬ ಮಗ ಹುಟ್ಟಿ, ಆ ಮಗ ಆಕಸ್ಮಿಕವಾಗಿ ಸತ್ತುಹೋದ ಘಟನೆ ಶ್ರೀ ಸ್ವಾಮಿರಾಜಾಚಾರ್ಯರ ಮೇಲೆ ಬಹಳ ಪ್ರಭಾವ ತೋರಿಸಿ, ತಾತನವರಾದ ರಾಘವಾರ್ಯ ಒಡೆಯರ ವೈರಾಗ್ಯ ಪೂರಿತ ಮಾತುಗಳು ಪದೇ ಪದೇ ನೆನಪಿಗೆ ಬರುತ್ತಿದ್ದು ಆಧ್ಯಾತ್ಮಿಕತೆಯ ಭಾವ ಇನ್ನೂ ಹೆಚ್ಚಿಸಿತು.. ಆ ಸಂದರ್ಭದಲ್ಲಿ ಅಲ್ಲಿನ ಪರಮ ಯೋಗಿಗಳು, ಸ್ವಾತಂತ್ರ್ಯ ಹೋರಾಟಗಾರರು ಆದ ಮುರಡಿ ಭೀಮಜ್ಜನವರ ಸಾಂಗತ್ಯದಿಂದ ಪರಮಾತ್ಮನಲ್ಲಿ ಪೂರ್ಣ ಭಕ್ತಿ ಮಾಡುತ್ತ ವ್ಯಾಸ-ದಾಸ ಸಾಹಿತ್ಯ ಸೇವೆಯಲ್ಲಿಯೇ ಜೀವನವನ್ನು ಕಳೆಯುತ್ತಿದ್ದರು..
ಮೈಸೂರಿನ ಶ್ರೇಷ್ಠ ದಾಸಾರ್ಯರು, ಹರಿದಾಸಕುಲತಿಲಕ ರೆಂದೇ ಪ್ರಸಿದ್ಧರಾದ, ಶ್ರೀ ಪರಮಪ್ರಿಯ ತಂದೆಮುದ್ದುಮೋಹನವಿಠಲರ ಕೊನೆಯ ಶಿಷ್ಯರಾದ ಶ್ರೀ ಗುರುಗೋವಿಂದವಿಠಲರು ಹರಿದಾಸ ಸಾಹಿತ್ಯದ ಸಂಶೋಧಕರಾಗಿ ಮನೆ ಮನೆ ತಿರುಗುತ್ತ, ಎಲ್ಲ ದಾಸಾರ್ಯರ ಚರಿತ್ರೆಯನ್ನು ಸಂಗ್ರಹಿಸುತ್ತ ಕುಷ್ಟಗಿಯ ಶ್ರೀ ರಾಘವಾರ್ಯ ಒಡೆಯರ ಜೀವನ ಚರಿತ್ರೆಯನ್ನು ಸಂಗ್ರಹಿಸಲು ಬಂದಾಗ ಶ್ರೀ ಸ್ವಾಮಿರಾಜಾಚಾರ್ಯ ವೈದ್ಯರು ಅವರನ್ನು ಗೌರವಿಸಿ ತಮ್ಮ ತಾತಂದಿರಾದ ರಾಘವಾರ್ಯ ಒಡೆಯರ ಜೀವನ ಚರಿತ್ರೆಯನ್ನು ತಿಳಿಸುತ್ತಾರೆ.... ಆಗ ಶ್ರೀ ಗುರುಗೋವಿಂದವಿಠಲರು ಶ್ರೀ ವೈದ್ಯರ ಆಧ್ಯಾತ್ಮಿಕ ಭಕ್ತಿಯನ್ನು, ತಾತನವರಿಂದ ಬಂದ ಪಾರಂಪರಿಕ ಜ್ಞಾನದ ಆಸ್ತಿಯನ್ನು ಕಂಡು ತುಂಬಾ ಸಂತಸಪಟ್ಟವರಾಗಿ ವೈದ್ಯರನ್ನು ಅನುಗ್ರಹಿಸಿ ಮುರಳೀವಿನೋದ ವಿಠಲ ಎಂದು ಅಂಕಿತನಾಮ ನೀಡಿದರು...
ಅಂಕಿತೋಪದೇಶದ ಪದ ಹೀಗಿದೆ....
👇🏽👇🏽👇🏽👇🏽
ಮುರಳಿ ವಿನೋದ ವಿಠಲ ಪೊರೆಯ ಬೇಕಿವನಾ...
ದುರಿತ ದುಷ್ಕೃತವೆಲ್ಲ ದೂರ ಸಾಗಿಸುತಾ ..
ಚಾರು ಯೌವನದಲ್ಲಿ ಪರಿಪರಿಯ ಲೌಕಿಕದಿಮಾರಮಣ ಸ್ಮೃತಿ
ರಹಿತ ಕರ್ಮವೆಸಗೀಜಾರಿ ಪೋಗಲು ಆಯು - ಆರಾಧ್ಯ ದೇವತೆಯಚಾರುತರ ಪೂಜಿಸಲು ಸಾರಿ ಬಂದಿಹನಾ ..
ಹಿಂದೆ ಮಾಡಿರುವ ಬಹು - ಮಂದಿ ಜನಗಳ ಸೇವೆ
ಇಂದಿರೇಶನೆ ನಿನ್ನ ಸೇವೆ
ಎಂದೆನಿಸೀ ,ಇಂದಿರಾರಾಧ್ಯ ಪದ ಚೆಂದದಿಂ ಪೊರೆ ಇವನ
ಮಂದರೋದ್ಧಾರಿ ಹರಿ ಕಂದರ್ಪಪಿತನೇ....
ಧ್ಯಾನ ಯೋಗದಿ ಮನವ ಸಾನುಕೂಲಿಸು ಇವಗೆ
ಮಾನನಿಧಿ ಮಧ್ವಪದ ರೇಣುನಾಶ್ರಯಿಸೀಗಾನದಲಿ
ತವ ಮಹಿಮೆ ಪೊಗಳಿಕೆಯನೆ ಇತ್ತು
ಪ್ರಾಣಾಂತರಾತ್ಮಕನೆ ಪಾಲಿಸೈ ಹರಿಯೆ ...
ದೇವಧನ್ವಂತರಿಯೆ ಪಾವನಾತ್ಮಕ ನಿನ್ನಸೇವೆ ಗಯ್ಯುವವಗಿ -
ನ್ನಾವ ದುರಿತಗಳೋಭಾವದಲಿ ಮೈದೋರಿ
ನೀವೊಲಿದು ತೋದರಂತೆದೇವ
ತವ ದಾಸ್ಯವನು ಇತ್ತಿಹೆನು ಹರಿಯೇ ...
ನಾರಸಿಂಹಾತ್ಮಕನೆ ಕಾರುಣ್ಯದಲಿ ಹೃದಯ-
ವಾರಿರುಹ ಮಧ್ಯದಲಿ ತೋರಿ ತವ ರೂಪ ಪಾರುಗೈ ಭವವ ಗುರುಗೋವಿಂದ ವಿಠಲನೆಸಾರಿ ತವ ಪಾದವನು ಪ್ರಾರ್ಥಿಸುವೆ ಹರಿಯೇ....
🙏🏽🙇🏻♀🙏🏽
ನಂತರದಲಿ ಗುರುಗಳ ಹಾದಿಯನ್ನೇ ಹಿಡಿದು ಕುಷ್ಟಗಿ ಸುತ್ತಮುತ್ತ ಆಗಿಹೋದ ಎಲ್ಲ ಹರಿದಾಸರ ಚರಿತ್ರೆ ಸಂಗ್ರಹಮಾಡಿ ಆನಂದ ಸೇವಾ ಟ್ರಸ್ಟ್ ಎನ್ನುವ ಆಧ್ಯಾತ್ಮಿಕ ಸಂಸ್ಥೆಯನ್ನು ಸ್ಥಾಪಿಸಿ, ದಾಸರ ಜೀವನ ಚರಿತ್ರೆಗಳ ಸಂಗ್ರಹ, ಶ್ರೀಮದಾಚಾರ್ಯರ ತತ್ವಗಳನ್ನು ತಿಳಿಸಿ ಹೇಳುವುದೇ ಧ್ಯೇಯವಾಗಿ ಬದುಕಿದರು.. ತಮ್ಮ ತಾತಂದಿರಾದ ರಾಘವಾರ್ಯ ಒಡೆಯರ ಚರಿತ್ರೆ, ಅವರ ಪದ್ಯಗಳನ್ನು, ತುಂಬಾ ಜನ ಹರಿದಾಸರ ಜೀವನ ಚರಿತ್ರೆ, ಅವರ ಕೃತಿಗಳನ್ನು ಸಂಗ್ರಹಿಸಿ ಪ್ರಕಾಶನ ಮಾಡಿದರೆಂದು ಹೇಳ್ತಾರೆ..
ದಾಸ ಸಾಹಿತ್ಯದ ಸೇವೆಯಲ್ಲಿಯೇ ಇಡೀ ಜೀವನವನ್ನು ಕಳೆದ ಶ್ರೀ ಮುರಳೀವಿನೋದ ವಿಠಲರು ಸ್ವತಃ ಯಾವ ರಚನೆಯೂ ಮಾಡಲಿಲ್ಲ... ಆದರೆ ಬದುಕಿದಷ್ಟು ದಿನಗಳೂ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದರೂ, ದಾಸರ ಸೇವೆಯನ್ನು ಬಿಡದೆ ಮಾಡಿದ ಮಹಾನುಭಾವರಾಗಿದ್ದರು.. ಹರಿದಾಸ ದೀಕ್ಷೆಯಲ್ಲಿಯೂ ಅದರ ಅನುಷ್ಠಾನದಲ್ಲಿಯೂ ನೂರು ವರ್ಷಗಳಿಗಿಂತಧಿಕ (1882-1992) ಬಾಳಿದ ಪರಮಚೇತನರ ಕಿಂಚಿತ್ ಸ್ಮರಣೆ ನಮ್ಮ ಕಷ್ಮಲಗಳನ್ನು ನಾಶ ಮಾಡುವ ಆಯುಧವೆನ್ನುವುದರಲ್ಲಿ ಈಷಣ್ಮಾತ್ರವೂ ಸಂದೇಹವಿಲ್ಲ...
ಶ್ರೀ ದಾಸಾರ್ಯರ ಕುರಿತಾದ ಮತ್ತಷ್ಟು ಮಾಹಿತಿ, ಅವರ ಕೃತಿಗಳು ತಿಳಿದವರಿದ್ದರೆ ದಯವಿಟ್ಟು ನಮಗೆ ಪರ್ಸನಲ್ಲೀ ತಿಳಿಸಬೇಕೆಂದು ವಿನಂತಿ..
ಶ್ರೀ ಮುರಳೀವಿನೋದ ವಿಠಲರ, ಅವರ ಗುರುಗಳು ಶ್ರೀ ಗುರುಗೋವಿಂದವಿಠಲರ, ತಾತನವರಾದ ಶ್ರೀ ರಾಘವಾರ್ಯ ಒಡೆಯರ ಅನುಗ್ರಹ ಕ್ಷಣಕ್ಷಣಕ್ಕೂ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ...
ಇನ್ನೂ ಇವರ ಕುರಿತಾದ ಮಾಹಿತಿ ಇದ್ದವರು ನನಗೆ ದಯಪಾಲಿಸಿ 🙏🏽
-Smt. Padma Sirish 6360104951 ೬೩೬೦೧೦೪೯೫೧
ನಾದನೀರಾಜನದಿಂ ದಾಸಸುರಭಿ 🙏🏽
***
No comments:
Post a Comment