Tuesday, 27 April 2021

subodharamarayaru ಸುಬೋಧರಾಮರಾಯರು phalguna shukla ekadashi

SUBODHARAMARAYARU ಸುಬೋಧರಾಮರಾಯರು

ರಘುರಾಮ ವಿಠಲ

ಫಾಲ್ಗುಣ ಶುದ್ಧ ಏಕಾದಶಿ/ದ್ವಾದಶಿ

ಶ್ರೀ ಗೋರೆಬಾಳ ಹನುಮಂತರಾಯರಂತೆಯೇ ಅವರ ಹಾದಿಯಲ್ಲೇ ನಡೆದು ಹರಿದಾಸ ಸಾಹಿತ್ಯದ ಸೇವೆ ಮಾಡಿದವರು,  ಅನೇಕ ಕೃತಿ ಸಂಗ್ರಹ ಮಾಡಿ ಸಂಶೋಧಿಸಿ  ಸ್ವಚ್ಛ ಕೃತಿಗಳನ್ನು ಪ್ರಕಟ ಮಾಡಿದವರು, ಅನೇಕ ಮಹನೀಯರ ಚರಿತ್ರೆಗಳನ್ನೂ ಸಹ ಪ್ರಕಟಮಾಡಿದವರು,  ಸುಬೋಧ ಪ್ರಕಟನಾಲಯದ ಅಧಿನೇತ, ಕರಿಗಿರೀಶ  ಅಂಕಿತಸ್ಥರಾದ ಶ್ರೀ ವರವಣಿರಾಮರಾಯರ. ಶ್ರೀಕಾಂತ ಅಂಕಿತಸ್ಥರಾದ ಶ್ರೀ ದಾಸರ ಲಕ್ಷ್ಮೀನಾರಾಯಣ ದಾಸರ ಆತ್ಮೀಯರು, ನಿಕಟವರ್ತಿಗಳು, ಅನೇಕ ಪ್ರಶಸ್ತಿಗಳನ್ನು ಪಡೆದವರು, ತಮ್ಮ ಅಂತ್ಯಕಾಲದಲ್ಲಿ ಪರಮಾತ್ಮನನ್ನು ಧ್ಯಾನಿಸುತ್ತಲೇ ದೇಹವನ್ನು ಬಿಟ್ಟ ಚೇತನರು ಶ್ರೀ ರಘುರಾಮವಿಠಲ ಅಂಕಿತಸ್ಥರು, ತಮ್ಮ ಪ್ರಕಟನಾಲಯದ ಹೆಸರನ್ನೇ ಮನೆಯ ಹೆಸರೆನ್ನುವಂತೆ ಪ್ರಖ್ಯಾತರಾದ ಶ್ರೀ ಸುಬೋಧರಾಮರಾಯರ ಆರಾಧನಾ ಪರ್ವಕಾಲವು

ಇಂತಹ ಮಹಾನುಭಾವರ ದಯೆಯಿಂದ ಇಂದು ನಾವು ಸರಿಯಾದ ಸಾಹಿತ್ಯವನ್ನು  ಪಡೆದಿದ್ದೆವೆ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.  ಶ್ರೀ ಸುಬೋಧ ರಾಮರಾಯರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಅವರಲ್ಲಿ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಲಕ್ಷ್ಮೀವೆಂಕಪ್ಪನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

smt. padma sirish

ಜೈ ವಿಜಯರಾಯ

ನಾದನೀರಾಜನದಿಂ ದಾಸಸುರಭಿ 🙏🏽

***

ಮಹನೀಯರ ಕುರಿತು ಮಹಾನುಭಾವರ ಮಾತುಗಳು


ರಘುರಾಮವಿಠಲಾಂಕಿತಸ್ಥರಾದ ಶ್ರೀಸುಬೋಧರಾಮರಾಯರು ಇಹಲೋಕಯಾತ್ರೆ ಮುಗಿಸಿದ ವಿಷಾದ ವಿಷಯವನ್ನು ತಿಳಿದು ಶ್ರೀಮನ್ಮಂತ್ರಾಲಯಪ್ರಭುಗಳ ಪೂರ್ವಾಶ್ರಮದ ವಂಶಸ್ಥರಾದ ಶ್ರೀ ರಾಜಾಗುರುರಾಜಾಚಾರ್ಯರು ನೀಡಿದ ಶ್ರದ್ಧಾಂಜಲಿಯ ಪತ್ರ.


ಕನ್ನಡನಾಡಿನಲ್ಲಿ ಪ್ರಖ್ಯಾತ ಸಾಹಿತಿಗಳೂ, ಪತ್ರಿಕಾ ಸಂಪಾದಕರೂ, ಗ್ರಂಥಪ್ರಕಾಶಕರೂ, ಹರಿದಾಸಸಾಹಿತ್ಯ ಪ್ರಚಾರಕರೂ ಪಂಡಿತರೂ ಆಗಿದ್ದ ಶ್ರೀಸುಬೋಧರಾಮರಾಯರು ಬೆಂಗಳೂರಿನಲ್ಲಿ ಸ್ವಗೃಹದಲ್ಲಿ ದಿನಾಂಕ 19-04-1970 ರಂದು ಮಧ್ಯಾಹ್ನ ಸುಮಾರು 3 ಘಂಟೆಗೆ ತಮ್ಮ 80 ನೆಯ ವರ್ಷದ ವಯಸ್ಸಿನಲ್ಲಿ ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇವೆ.


         ದಿವಂಗತ ರಾಮರಾಯರು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗಗಳಲ್ಲಿ ಸೇವೆಸಲ್ಲಿಸಿ ಕನ್ನಡ ನುಡಿಗೆ ಬೆಡಗು ತಂದು, ಕನ್ನಡಿಗರ ಗೌರವಾದರಗಳಿಗೆ ಪಾತ್ರರಾಗಿದ್ದರು.  ಶ್ರೀಸುಬೋಧ ರಾಮರಾಯರು ಬೆಂಗಳೂರು ಪುರಸಭಾ ಸದಸ್ಯರಾಗಿ, ಶಾಲಾ ಅಧ್ಯಾಪಕರಾಗಿ, ಭಾರತ ಸ್ವಾತಂತ್ರ್ಯ ಸಂಗ್ರಾಮವೀರರಾಗಿ, ಪತ್ರಿಕಾಸಂಪಾದಕರಾಗಿ, ಗ್ರಂಥ ಪ್ರಕಾಶಕರಾಗಿ, ಲೇಖಕರಾಗಿ, ಸಂಘ ಸಂಸ್ಥೆಗಳ ಸ್ಥಾಪಕರಾಗಿ - ಹೀಗೆ ಬಹುಮುಖದಿಂದ ಕನ್ನಡನಾಡು, ನುಡಿಗಳ ಸೇವೆಮಾಡಿದ ಮಹನೀಯರು.


           ಸುಮಾರು 50 ವರ್ಷಗಳಕಾಲ ಪವಿತ್ರ ಜೀವನ ನಡೆಸಿ ಇವರೆಸಗಿದ ತ್ಯಾಗ-ಸೇವೆಗಳು ಆದರ್ಶವಾಗಿವೆ.  1913 ರಲ್ಲಿ ಬೆಂಗಳೂರಿಗೆ ಬಂದ ಶ್ರೀರಾಮರಾಯರು ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸಂಕಲ್ಪಿಸಿ 1915 ರಲ್ಲಿ "ಸುಬೋಧ ಕುಸುಮಾಂಜಲಿ" ಗ್ರಂಥಮಾಲೆಯನ್ನು ಪ್ರಾರಂಭಿಸಿ, ಭಾರತದ ಸಾಧುಸಂತರು, ಮಹಾತ್ಮರು, ಭಕ್ತರು, ಹರಿದಾಸರೇ ಮೊದಲಾದವರ ಜೀವನ ಚರಿತ್ರೆಯನ್ನು ರಚಿಸಿ ಪ್ರಕಾಶನಗೊಳಿಸಿ ಆ ಪಂಡಿತ ಪಾಮರರಿಗೂ ಉಪಕಾರಮಾಡಿದರು.  ಸುಮಾರು 150 ಕ್ಕೂ ಮೀರಿ ಇವರು ಬರೆದ ಗ್ರಂಥಗಳು ನಿಜವಾಗಿ ಕನ್ನಡ ದೇವಿಯ ಭವ್ಯಭಂಡಾರಕ್ಕೆ ಅವರಿತ್ತ ಉತ್ತಮ ಕೊಡುಗೆಯಾಗಿವೆ.


          1925 ಸುಮಾರಿಗೆ "ಸುಬೋಧ" ಎಂಬ ಶ್ರೇಷ್ಠ ಸಾಂಸ್ಕೃತಿಕ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಕನ್ನಡ ಜನತೆಯ ಆಧ್ಯಾತ್ಮಿಕ, ಧಾರ್ಮಿಕ, ನೈತಿಕ-ಮತ್ತು ಸಾಂಸ್ಕೃತಿಕ ಜಾಗೃತಿಗೆ ಕಾರಣರಾದರು.  "ಸುಬೋಧ" ಪತ್ರಿಕೆಯು ಅತ್ಯಂತ ಜನಪ್ರಿಯವಾಗಿ ಶ್ರೀಯುತರಿಗೆ "ಸುಬೋಧ ರಾಮರಾಯರು" ಎಂಬ ಹೆಸರೇ ಶಾಶ್ವತವಾಗಿ ಉಳಿಯುವಂತಾದುದು ಸೂಕ್ತ ಸಾಕ್ಷಿಯಾಗಿದೆ.  1934 ಸುಮಾರಿಗೆ "ಕರ್ಣಾಟಕ ಹರಿದಾಸ ತರಂಗಿಣಿ" ಯನ್ನಾರಂಭಿಸಿ ತನ್ಮೂಲಕ 2 ಸಾವಿರ ಪುಟಕ್ಕೂ ಮಿಕ್ಕಿ ಹರಿದಾಸ ವಾಙ್ಮಯವನ್ನು ಬೆಳೆಸಿ, ಕನ್ನಡನಾಡಿಗೆ ಕಾಣಿಕೆಯಾಗಿತ್ತರು.


           1945 ರಲ್ಲಿ ಮಾಧ್ವಯುವಕ ಸಂಘ ಮತ್ತು ಅದರ ಆಶ್ರಯದಲ್ಲಿ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ ಪ್ರೌಢಶಾಲೆ, ಕಲಾಶಾಲೆಗಳಲ್ಲಿ ಓದುವ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವೇರ್ಪಡಿಸಿ ಉಪಕರಿಸಿದರು.  ಅಖಿಲಭಾರತ ಮಾಧ್ವ ಮಹಾಮಂಡಲದಲ್ಲಿ ಬಹು ಬಗೆ ಸೇವೆಮಾಡಿದರು.


         ಶ್ರೀವಾಲ್ಮೀಕಿರಾಮಾಯಣ, ಶ್ರೀಮದ್ಭಾಗವತ, ಕುಮಾರ ವ್ಯಾಸಭಾರತಗಳ ಸರಳ ಸಂಗ್ರಹ ಗದ್ಯಾನುವಾದದ ಮೂರು ಸಂಪುಟಗಳನ್ನು ಹೊರತಂದರು.  ಶ್ರೀ ರಾಮರಾಯರು ಸರಳಜೀವಿಗಳೂ, ಸದಾಚಾರ ಸಂಪನ್ನರೂ, ಶ್ರೀಹರಿವಾಯು ಶ್ರೀ ಗುರುಸಾರ್ವಭೌಮರ ಭಕ್ತರೂ ಆಗಿದ್ದು ಮತತ್ರಯ ಮಠಾಧೀಶರ ಅನುಗ್ರಹಕ್ಕೆ ಪಾತ್ರರಾಗಿದ್ದರು.  ಇಂಥ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡ ಸಮಾಜ ಬಡವಾಗಿದೆ.  ದಿವಂಗತರ ಆತ್ಮಕ್ಕೆ ಭಗವಂತನು ಶಾಂತಿಯನ್ನಿತ್ತು ಉತ್ತಮ ಗತಿಯನ್ನೀಯಲಿ ಎಂದು ಪ್ರಾರ್ಥಿಸುವೆವು.


              ಮಹಾನುಭಾವರ ಕುರಿತು ಮತ್ತೊಬ್ಬ ಮಹಾನುಭಾವರು ಬರೆದುದ್ದನ್ನು ಓದುವುದೇ ನಮ್ಮ ಸೌಭಾಗ್ಯವು. ಶ್ರೀ ಸುಬೋಧರಾಮರಾಯರ ಆರಾಧನಾ(ಏಕಾದಶೀ) ಪರ್ವಕಾಲದ ಸುಸಂದರ್ಭದಲ್ಲಿ ಪತ್ರ ಬರೆದ ಶ್ರೀ ರಾಜಾಗುರುರಾಜಾಚಾರ್ಯರ ಹಾಗೂ,  ರಘುರಾಮವಿಠಲ ಅಂಕಿತಸ್ಥರಾದ ಶ್ರೀ ಸುಬೋಧರಾಮರಾಯರ ಅನುಗ್ರಹದ ಜೊತೆಗೆ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಭೈಷ್ಮೀಸತ್ಯಾ ಸಮೇತ ಶ್ರೀಕೃಷ್ಣಪರಮಾತ್ಮನ ಪರಮಾನುಗ್ರಹವೂ ಸಜ್ಜನವರ್ಗದಮೇಲೆ ಸುಸ್ಥಿರವಾಗಿರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..

smt. padma sirish

ಜೈ ವಿಜಯರಾಯ

ನಾದನೀರಾಜನದಿಂ ದಾಸಸುರಭಿ  🙏🏽


No comments:

Post a Comment