ಪುಸ್ತಕ ರಶ್ಮಿಗಳ ಬೀರಿದ ಸೂರ್ಯ ಇಂದು ಅಸ್ತಂಗತ 28 dec 2020
ವಿಜಯಪುರದಲ್ಲಿ ಎರಡು ಗುಮ್ಮಟಗಳಂತೆ . ಐತಿಹಾಸಿಕವಾಗಿ ಪ್ರಸಿದ್ಧವಾದ ಗೋಳಗುಮ್ಮಟ ಒಂದಾದರೆ ಶ್ರೀನಿವಾಸಾಚಾರ್ಯ ಸು ಮಠದ ಇವರು ಕಟ್ಟಿದ ಪುಸ್ತಕದ ಗುಮ್ಮಟ ಎರಡನೆಯ ಗುಮ್ಮಟವೆಂದು ಪೇಜಾವರ ಶ್ರೀಪಾದಂಗಳವರು ಹೇಳಿದ ಮಾತು ವಿಜಯಪುರದ ಈ ಗುಪ್ತ ಸಾಧಕರ ವ್ಯಕ್ತಿತ್ವವನ್ನು ಚಿತ್ರಿಸಲು ಪರ್ಯಾಪ್ತವಾಗಿದೆ.
ಡಿಸೆಂಬರ್ 20ರಂದು ಕೃತಿಗಳ ಮೇರು ಕಟ್ಟಿದ ಈ ಸುಕೃತಿಗಳು ಪ್ರಕೃತಿಯಲ್ಲಿ ಲೀನರಾಗಿದ್ದಾರೆ.
ಶ್ರೀ ಶ್ರೀ 1008 ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಅಚ್ಛಿನ್ನ ಶಿಷ್ಯರಾದ, ಸಾಧು ಸ್ವಭಾವದ ಶ್ರೀ ಸುಬ್ರಹ್ಮಣ್ಯಆಚಾರ್ಯ ಮಠದ ಇವರ ಸುಪುತ್ರರು ಶ್ರೀನಿವಾಸಾಚಾರ್ಯರು. ವಿಜಯಪುರದಲ್ಲಿ ಋಷಿಸದೃಶ ಜೀವನ ನಡೆಸಿದ ಪಂಡಿತ ಪೂಜ್ಯ ಉಮರ್ಜಿ ತ್ರಿವಿಕ್ರಮಾಚಾರ್ಯರ ಏಕನಿಷ್ಠ ಶಿಷ್ಯರಾಗಿ ಅತ್ಯಂತ ಮಡಿವಂತಿಕೆಯಿಂದ ಇಡೀ ಜೀವನವನ್ನೇ ಧರ್ಮಕ್ಕಾಗಿ ಮೀಸಲಿಟ್ಟವರು ಈ ಸಿದ್ಧಪುರುಷರು. ಒಳ್ಳೆ ಬ್ಯಾಂಕಿನ ನೌಕರಿಯನ್ನು ತಮ್ಮ 50 ನೇ ವಯಸ್ಸಿನಲ್ಲಿ ಭಾರಿ ಭರ್ತಿ ಸಂಸಾರದ ಮಧ್ಯದಲ್ಲಿ ನಾಲ್ಕು ಜನ ಹೆಣ್ಣುಮಕ್ಕಳ ಹೊಣೆ ಇದ್ದಾಗಲೂ , ಮನಸ್ಸಿನಲ್ಲಿ ಮೂಡಿದ ವೈರಾಗ್ಯವನ್ನು ಆ ಕ್ಷಣದಲ್ಲಿ ಕೃತಿಯಲ್ಲಿ ತಂದು ಸ್ವಯಂ ನಿವೃತ್ತಿ ಘೋಷಣೆ ಮಾಡಿ, ತಾವು ಓದಿದ, ತಿಳಿದ, ಕೇಳಿದ ಶಾಸ್ತ್ರ ಪ್ರಮೇಯಗಳ ತಿರುಳನ್ನು ಬ್ರಾಹ್ಮಣ ಸಮಾಜದ ಸಮಗ್ರ ಸಾಧಕರಿಗೆ ಸೋಪಾನವಾಗುವಂತೆ 113 ಅದ್ಭುತ, ಅತ್ಯಂತ ಉಪಯುಕ್ತ ಕೃತಿಗಳಲ್ಲಿ ತಿಳಿಸಿ ವಿಲಕ್ಷಣ ಕೊಡುಗೆ ನೀಡಿದ್ದಾರೆ. ಅನೇಕ ಮಾಸ ಮಹಾತ್ಮೆಗಳು, ಸ್ವಪ್ನ ಪ್ರಪಂಚ, ಭಾಗವತ ಸಂಗ್ರಹ, ರಾಮ ನರಸಿಂಹ ಮುಂತಾದ ಅನೇಕ ಸ್ತೋತ್ರ ಮಂಜರಿಗಳು, ಕರಾವಲಂಬನ, ಮಂಗಳಾಷ್ಟಕಗಳ ಸಂಗ್ರಹ, ಸದಾಚಾರಗಳ ಬಗ್ಗೆ ಅನೇಕ ಪ್ರಮಾಣಬದ್ಧ ಕೃತಿಗಳು, ಹೀಗೆ ಇನ್ನೂ ಅನೇಕ ಕೃತಿಗಳನ್ನು ವಿದ್ವಾಂಸರಿಗೂ, ಸಾಧಕರಿಗೂ ಉಪಯುಕ್ತವಾಗುವ ರೀತಿಯಲ್ಲಿ ಕನ್ನಡದಲ್ಲಿ ರಚಿಸಿ ಪ್ರತಿಯೊಂದು ಮಾತಿಗೂ ಪ್ರಮಾಣಗಳನ್ನು ನೀಡಿ ಅತ್ಯಂತ ಸ್ತುತ್ಯ ಕಾರ್ಯವನ್ನು ಮಾಡಿದ್ದಾರೆ. ಒಂದೊಂದೇ ಕೃತಿಗೂ ಅನೇಕ ಮೂಲಪ್ರತಿಗಳನ್ನು ಸಂಶೋಧಿಸಿ, ತಾವೇ ಕುಳಿತು ಬರೆದು ಡಿಟಿಪಿ ಮಾಡಿಸಿ, ತಾವು ಸ್ವಯಂ ಒಳ್ಳೆಯ ಶಾಸ್ತ್ರಜ್ಞರಾದರೂ ಕೂಡ ವಿದ್ವಾಂಸರ ಮುಂದೆ ವಿನಯದಿಂದ ಓದಿ ತೋರಿಸಿ ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಭಾರೀ ಶ್ರಮ ಸಾಧ್ಯವಾದ ಕೆಲಸವನ್ನು ತಮ್ಮ ಜೀವನದ ದ್ವಿತೀಯಾರ್ಧದಲ್ಲಿ ಮಾಡಿದ್ದು ಶ್ಲಾಘನೀಯವಾದದ್ದು. ತಮ್ಮ ಮಕ್ಕಳೆಲ್ಲರ ಸಂಸಾರವನ್ನು ಅತ್ಯಂತ ಯೋಗ್ಯವಾಗಿ ನಡೆಯುವಂತಾಗಿಸಿ, ಮಗನನ್ನೂ ಒಳ್ಳೆಯ ವಿದ್ವಾಂಸನಾಗುವಂತೆ ಪಂ. ಮಧ್ವಾಚಾರ್ಯ ಮೊಕಾಶಿ ಅವರಲ್ಲಿ ಶಾಸ್ತ್ರ ಪಾಠ ಹೇಳಿಸಿ, ತಂದೆಯಾಗಿ ಮಾಡಬೇಕಾದ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಅನೇಕ ವರ್ಷಗಳ ಕಾಲ ವಿಜಯಪುರದಲ್ಲಿ ಇದ್ದ ಇವರು ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಮೇಲೆಯೂ ತಮ್ಮ ಬೆನ್ನುನೋವಿನ ಮಧ್ಯದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ೧೦೦೮ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ವಿಜಯಪುರದಲ್ಲಿ ಮಾಡಿದ ತಮ್ಮ ಗುರುಗಳ ಮಹಾಸಮಾರಧನೆಯ ಸ್ಮರಣ ಸಂಚಿಕೆಯನ್ನು ಹಾಗೂ ಇನ್ನೂ ಅನೇಕ ಸ್ಮರಣ ಸಂಚಿಕೆಗಳನ್ನೂ ಸಂಪಾದಿಸಿ ಮಹಾಸ್ವಾಮಿಗಳ ಸೇವೆ ಮಾಡಿದ್ದಾರೆ. "ಹಯವದನ ವಿಠ್ಠಲ" ಎನ್ನುವ ಅಂಕಿತದಿಂದ (ಅವರಿಗೆ ಸ್ವಪ್ನ ಲಬ್ಧವಾದದ್ದು) ಅನೇಕ ಪದ್ಯಗಳನ್ನು ರಚಿಸಿದ್ದಾರೆ. ಅನೇಕ ಮಠ ಮಾನ್ಯಗಳಿಂದ, ಸಂಘ ಸಂಸ್ಥೆಗಳ ವತಿಯಿಂದ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನಿತ್ಯ ಮೂರುಗಂಟೆಯ ಸವಿಸ್ತಾರವಾದ ಪೂಜೆ, ಅನೇಕ ಗಂಟೆಗಳ ಸರ್ವಮೂಲ ಪಾರಾಯಣ, ಗ್ರಂಥಗಳ ಅಧ್ಯಯನ, ಪುಸ್ತಕಗಳ ಲೇಖನ, ಇದುವೇ ಅವರ ಜೀವನ. ಮಿಂಚಬೇಕೆಂದು ಕೊಂಚವೂ ಇಚ್ಚಿಸಲಿಲ್ಲ, ಲೋಭದ ಲೇಪವು ಇಲ್ಲ, ಮಾತ್ಸರ್ಯ ಮನೆ ಮಾಡಲಿಲ್ಲ, ಕ್ರೋಧಗೊಂಡವರಲ್ಲ, ಮೃದು ನುಡಿಯ ರೂಢಿ ಬಿಡಲಿಲ್ಲ, ಎಷ್ಟು ಹೇಳಿದರೂ ಈ ಗುಣಗಳು ಮುಗಿಯುವುದಿಲ್ಲ. .
ಶಾಸ್ತ್ರ ಸಾಗರದಲ್ಲಿ ಮುಳುಗಿ ಅನೇಕ ಪ್ರಮೇಯ ರತ್ನಗಳನ್ನು ಹುಡುಕಿ ತಮ್ಮ ಕೃತಿಗಳಲ್ಲಿ ಅವುಗಳನ್ನು ಪೋಣಿಸಿ ಪರಮಾತ್ಮನನ್ನು ಅದರಿಂದ ಪೂಜಿಸಿ, ಸಾಧಕ ಸಮಾಜಕ್ಕೆ ನಿರ್ಮಾಲ್ಯದಂತೆ ಅದನ್ನು ನೀಡಿದ ಇವರನ್ನು ವಿಜಯಪುರ ಹಾಗೂ ಸಮಗ್ರ ಬ್ರಾಹ್ಮಣ ಸಮಾಜ ಇಂದು ನೆನೆಯುತ್ತದೆ.
ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಮಹಾಮಾರಿಗೆ ತುತ್ತಾಗಿ ಹೋದರು ಎನ್ನುವುದು ನೆಪಮಾತ್ರವಾದೀತು. ತಾವೇ ಅದ್ಭುತ ಸಾಧನೆಯ ಸೋಪಾನವನ್ನು ಸದ್ಗತಿಯ ಕಡೆಗೆ ಕಟ್ಟಿ ಇಲ್ಲಿನ ಬಂಧನವನ್ನು ಕಳಚಿಕೊಂಡಂತೆ ನಮಗೆ ಭಾಸವಾಗುತ್ತಿದೆ.
ಇಂತಹ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡ ನಮ್ಮ ಸಮಾಜ ನಿಜಕ್ಕೂ ಬಡವಾಗಿದೆ. ಪರಮಾತ್ಮ ಅವರಿಗೆ ಸದ್ಗತಿಯನ್ನು ನೀಡಲಿ, ಅವರ ಕುಟುಂಬಕ್ಕೆ ಧೈರ್ಯವನ್ನು ದಯಪಾಲಿಸಲಿ. ಮುಂಬರುವ ಪೀಳಿಗೆಗೆ ಅವರ ಪುಸ್ತಕಗಳು ಧರ್ಮಮಾರ್ಗದಲ್ಲಿ ಕೈಹಿಡಿಯುವ ಸ್ನೇಹಿತರಾಗಲಿ ಎಂದು ಮನಃಪೂರ್ವಕವಾಗಿ ಆಶಿಸುತ್ತೇವೆ.
- ಶ್ರೀಮದುತ್ತರಾದಿ ಮಠ, ವಿಜಯಪುರ
ಸರ್ವಜ್ಞ ವಿಹಾರ ವಿದ್ಯಾಪೀಠ, ವಿಜಯಪುರ
ಹಾಗೂ ಸಮಗ್ರ ವಿಜಯಪುರ ವಿಪ್ರ ವೃಂದ.
******
ಕೊರ್ಲಹಳ್ಳಿ ನರಸಿಂಹಾಚಾರ್ಯರು
15 dec 2020
ತಮ್ಮ ಪ್ರವಚನಗಳ ಮೂಲಕ, ಗ್ರಂಥಗಳ ಮೂಲಕ, ಸಂಪಾದಿತ ಕೃತಿಗಳ ಮೂಲಕ, ಸಂಶೋಧನೆಯ ಮೂಲಕ ಶ್ರೀವೇದವ್ಯಾಸ, ಶ್ರೀಕೃಷ್ಣ,ಮಧ್ವರನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದ ಗುರುವರ್ಯ ಶ್ರೀಬನ್ನಂಜೆಗೋವಿಂದಾಚಾರ್ಯರು ಇಂದು ಶ್ರೀಹರಿಯ ಪಾದವನ್ನು ಸೇರಿದ್ದಾರೆ. ಮಾಧ್ವಸಮಾಜ ಎಂದಿಗೂ ಮರೆಯಲಾರದ ಮಹಾನ್ ಚೇತನ, ಮಧ್ವಸಿದ್ಧಾಂತವನ್ನು ದಿಗಂತ ವಿಶ್ರಾಂತವಾಗಿಸಿದ ವಿದ್ವದ್ವರೇಣ್ಯ ಶ್ರೀಬನ್ನಂಜೆಗೋವಿಂದಾಚಾರ್ಯರು ಗೋವಿಂದನ ಸಾನ್ನಿಧ್ಯವನ್ನು ಸೇರಿದ ಈ ಕ್ಷಣದಲ್ಲಿ ಆ ಮಹಾಚೇತನಕ್ಕೆ ಅನಂತನಮನಗಳು
'ಅಭಿನವ ಪಂಡಿತಾಚಾರ್ಯ ಶ್ರೀಬನ್ನಂಜೆ ಗೋವಿಂದಾಚಾರ್ಯರು-
'ಪರಾಶರಸೂನು'ವಿನ ಪರಮಾನುಗ್ರಹ, ಪೂರ್ಣಬೋಧ'ರಪೂರ್ಣಾನುಗ್ರಹಗಳ ಮೂರ್ತರೂಪದಂತೆ ನಮ್ಮೊಡನೆ ಇರುವ ವಿದ್ಯಾವಾಚಸ್ಪತಿ', 'ಅಭಿನವ ಪಂಡಿತಾಚಾರ್ಯ' 'ಪದ್ಮಶ್ರೀ'ಡಾ. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನವೆಂದರೆ, ಆಚಾರ್ಯರ ನಾಲಗೆಯಲ್ಲಿ ನಾಲ್ಮೊಗನರಸಿ ನಲಿದಾಡುತ್ತಾಳೆ. ವೇದಾಂತದ ಗಹನತತ್ತ್ವಗಳೇ ಇರಲಿ, ಮಧ್ವಸಿದ್ಧಾಂತದಕಠಿಣ ಪ್ರಮೇಯಗಳೇ ಇರಲಿ, ರಾಮಾಯಣ, ಭಾಗವತ, ಭಾರತ, ಭಗವದ್ಗೀತೆಗಳ ಪ್ರವಚನವೇ ಇರಲಿ, ಆಚಾರ್ಯರ ವಾಣಿ ಶ್ರೋತೃಗಳ ಸರ್ವೇಂದ್ರಿಯಗಳನ್ನೂ ಶ್ರವಣೇಂದ್ರಿಯದಲ್ಲಿ ಲಯಗೊಳಿಸಬಲ್ಲದು. ಕೇಳುಗರು ಕ್ಷಣಾರ್ಧದಲ್ಲಿ ಆಚಾರ್ಯರ ವಾಗೀಂದ್ರಜಾಲದ ಮಾಯೆಯಲ್ಲಿ ಬಂಧಿಗಳು. ಆಚಾರ್ಯರು ತನಗೆ ತಿಳಿದಿದೆ ಎಂದು ಹೇಳುವುದಿಲ್ಲ, ಒಂದೊಮ್ಮೆ ಹೇಳಿದರೂ ತಿಳಿದ್ದೆಲ್ಲವನ್ನೂ ಹೇಳುವ ತವಕ, ತಿಳಿಯಾದದ್ದನ್ನು ಹೇಳುವ ತುಡಿತ ಅವರ ಪ್ರತಿಮಾತಿನಲ್ಲೂ ವ್ಯಕ್ತ. ಅವರು ತಿಳಿವಿನ ಜಲಧಿಯನ್ನು ಈಜಿ ಪಾರಂಗತರಾಗುವುದರಲ್ಲಿ ಆಸಕ್ತರಲ್ಲ, ವಿದ್ವದ್ ಶರಧಿಯಲ್ಲಿ ಮುಳುಗಿ ರತ್ನಗಳನ್ನು ಹೆಕ್ಕಿ ತರಬಲ್ಲ ಶಕ್ತರು. 1936ರ ಆಗಸ್ಟ್ ಮೂರರಂದು ಉಡುಪಿಯ ಮಹಾವಿದ್ವಾಂಸ ಶ್ರೀಪಡಮನ್ನೂರು ನಾರಾಯಣಾಚಾರ್ಯರ ಮಗನಾಗಿ ಜನಿಸಿದ ಶ್ರೀಗೋವಿಂದಾಚಾರ್ಯರು ಶ್ರೀಪಲಿಮಾರು,ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀವಿದ್ಯಾಮಾನ್ಯರು ಹಾಗೂ ಶ್ರೀಕಾಣಿಯೂರು ಮಠಾಧೀಶರಾಗಿದ್ದ ಶ್ರೀವಿದ್ಯಾಸಮುದ್ರ ತೀರ್ಥರಿಂದ ಹೆಚ್ಚು ಪ್ರಭಾವಿತರಾದರು. ಶ್ರೀಬನ್ನಂಜೆ ತಮ್ಮಪ್ರವಚನಗಳ ಮೂಲಕ ಎಷ್ಟು ಜ್ಞಾನ ಪ್ರಸರಣಕ್ಕೆ ದೀಕ್ಷಾಬದ್ಧರೋ ಅಷ್ಟೇ ತಮ್ಮ ಸಂಶೋಧನೆ, ಗ್ರಂಥಗಳ ಮೂಲಕವೂ. ಬನ್ನಂಜೆಯವರ ಬರಹವೂ ಮಾತಿನಷ್ಟೇ ಸುಭಗ. ವಾಗರ್ಥಗಳ ಮಧುರ ಮಿಲನ, ವರಕವಿ ದ.ರಾ.ಬೇಂದ್ರೆಯಂತವರೇ ಬನ್ನಂಜೆ ಬರಹವನ್ನು ಕುರಿತು, "ಹೆಜ್ಜೆ ಹೆಜ್ಜೆಗೆ ರಸೋಕ್ತಿ, ಭಾವಗೀತ ಸದೃಶವಾಕ್ಯ ಪುಂಜ, ಪುಂಜ...", "ಸುಂದರ ಸೂಕ್ತಿಗರ್ಭಂ" ಈ ಗದ್ಯ ಎಂದು ನುಡಿದಿದ್ದಾರೆ. "ಬನ್ನಂಜೆ ಹೊಸತನ್ನು ಹೇಳಲಿಲ್ಲ, ಆದರೆ ಹೇಳಿದ್ದು ಹಳತು ಅಲ್ಲವೇ ಅಲ್ಲ." ಎಂಬ ಸತ್ಯಕಾಮರ ಮಾತು ಸತ್ಯ. ವೇದವ್ಯಾಸರು, ಆಚಾರ್ಯಮಧ್ವರು, ವಾಲ್ಮೀಕಿ, ಬಾಣಭಟ್ಟ, ಭವಭೂತಿ, ತ್ರಿವಿಕ್ರಮ ಪಂಡಿತಾಚಾರ್ಯರು, ಹರಿದಾಸರು ಬನ್ನಂಜೆಯವರ ಸಾಹಿತ್ಯದ ಮೂಲಕ ಕನ್ನಡಜನಕ್ಕೆ ಹೆಚ್ಚು ಹತ್ತಿರವಾದರು. ವೇದವ್ಯಾಸ. ಮಧ್ವರಂತೂ ಬನ್ನಂಜೆಯವರ ಚಿಂತನದ ಮೂಲ ಸ್ರೋತ. ಭಗವದ್ಗೀತೆಯನ್ನು 'ಭಗವಂತನ ನಲ್ನುಡಿ'ಯಾಗಿ ಅನುವಾದಿಸಿ ಬನ್ನಂಜೆ ಭಗವದ್ಗೀತೆ ಐತಿಹಾಸಿಕವಾಗಿ, ಮನ:ಶಾಸ್ತ್ರೀಯವಾಗಿ ಹಾಗೂ ಭಗವತ್ ಪರವಾಗಿ ಯಾವ ಬಗೆಯಲ್ಲಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ ಎಂದು ತೋರಿದರು.
ಆಚಾರ್ಯಮಧ್ವರ ಹೃದಯದ ಹಾಡು'ದ್ವಾದಶಸ್ತೋತ್ರ"ಗಳನ್ನು ಬನ್ನಂಜೆ ಕನ್ನಡದಲ್ಲಿ ಹಾಡಿದಾಗ, ಆನಂದತೀರ್ಥರು ಆನಂದತುಂದಿಲರಾಗಿ ಹರಸಿರಬೇಕು. ಹಾಗಾಗಿಯೇ ಹನ್ನೆರಡು ಹಾಡುಗಳೂ ಶ್ರವಣರಮಣೀಯವಾದವು. ಹರಿದಾಸಸಾಹಿತ್ಯಕ್ಕೆ ಬೀಜಾವಾಪನೆ ಮಾಡಿದ ಶ್ರೀಮಧ್ವರ ಹಾಡುಗಳು ಕನ್ನಡದಲ್ಲಿ ಮೂಡಿದಾಗ, ಸಂಸ್ಕೃತವರಿಯದ ಮಂದಿ ಸಹ ಆನಂದತೀರ್ಥರ ಭಕ್ತಿಯ ಬಿತ್ತರವನ್ನು ಎತ್ತರವನ್ನು ಕಂಡು ಮಣಿದರು.
ತಲವಕಾರೋಪನಿಷತ್, ಯಾಜ್ಞೀಯ ಮಂತ್ರೋಪನಿಷತ್ ಎಂದು ಖ್ಯಾತವಾಗಿರುವ ಈಶಾವಾಸ್ಯೋಪನಿಷತ್ ಮೊದಲಾದ ಉಪನಿಷತ್ ಗಳನ್ನು ಕನ್ನಡದಲ್ಲಿ ಅನುವಾದಿಸಿರುವ ಪೂಜ್ಯ ಆಚಾರ್ಯರು 'ಯಾಜ್ಞೀಯಮಂತ್ರೋಪನಿಷತ್, ಕಾಠಕೋಪನಿಷತ್, ತಲವಕಾರೋಪವಿಷತ್, ಅಥರ್ವಣೋಪನಿಷತ್, ಷಟ್ ಪ್ರಶ್ನೋಪನಿಷತ್, ಮಾಂಡುಕೋಪನಿಷತ್ ಹೀಗೆ ಆರು ಉಪನಿಷತ್ತುಗಳಿಗೆ ಶ್ರೀಮಧ್ವಭಗವತ್ಪಾದರು ರಚಿಸಿರುವ ಉಪನಿಷದ್ಭಾಷ್ಯಕ್ಕೆ ತ್ರಿವಿಕ್ರಮಪಂಡಿತಾಚಾರ್ಯರ ಪೌತ್ರ ವಾಮನಪಂಡಿತಾಚಾರ್ಯರು ರಚಿಸಿದ, ಇಂದು ಉಪಲಬ್ಧವಿರುವ ಅತ್ಯಂತ ಪ್ರಾಚೀನವಾದಂತಹ ಟೀಕಾಗ್ರಂಥಕ್ಕೆ 'ಭಾವಚಂದ್ರಿಕಾ' ಎನ್ನುವಂತಹ ಟಿಪ್ಪಣಿಯನ್ನು ರಚಿಸಿದ್ದಾರೆ. ವಿಶೇಷವೆಂದರೆ ವಾಮನಪಂಡಿತರ ಟೀಕಾಗ್ರಂಥವೂ ಶ್ರೀಬನ್ನಂಜೆಯವರ ಸಂಶೋಧನೆಯ ಫಲಿತ. ವಾಮನಪಂಡಿತರ ಟೀಕೆಯಲ್ಲಿ ಅಸ್ಫುಟವಾಗಿರುವ ಅರ್ಥವಿಶೇಷಗಳೂ ಶ್ರೀಬನ್ನಂಜೆಯವರ ಟಿಪ್ಪಣಿಯಲ್ಲಿ ಹೆಚ್ಚು ಸ್ಫುಟ ಮಾತ್ರವಲ್ಲ, ಹೆಚ್ಚು ವಿಸ್ತೃತ.
ಮನ್ಯುಸೂಕ್ತ, ಅಂಭ್ರಿಣೀ ಸೂಕ್ತ, ಪ್ರಾಣಾಗ್ನಿ ಸೂಕ್ತ, ಪುರುಷಸೂಕ್ತ, ಶ್ರೀಸೂಕ್ತ ಮೊದಲಾದ ವೇದಸೂಕ್ತಗಳನ್ನು ಶ್ರೀಮಧ್ವರು ತೋರಿದ ಬೆಳಕಿನಲ್ಲಿ ಕನ್ನಡದಲ್ಲಿ ಅನುವಾದಿಸಿರುವ ಶ್ರೀಬನ್ನಂಜೆ ಶ್ರೀಮಧ್ವಭಗವತ್ಪಾದರು ಯಾವರೀತಿಯಲ್ಲಿ ವೇದಾರ್ಥಚಿಂತನೆ ಮಾಡಬೇಕೆಂದು ತಮ್ಮ 'ಋಗ್ಭಾಷ್ಯ'ಹಾಗೂ 'ಖಂಡಾರ್ಥನಿರ್ಣಯ' (ಕರ್ಮನಿರ್ಣಯ)ದಲ್ಲಿ ಮಾರ್ಗದರ್ಶನ ಮಾಡಿರುವರೋ, ಅದೇ ಮಾರ್ಗದರ್ಶನಕ್ಕೆ ಅನುಸಾರಿಯಾಗಿ 'ಶತರುದ್ರೀಯ' (ರುದ್ರಾನುವಾಕ)ದ ಮಂತ್ರಗಳಿಗೆ ಭಾಷ್ಯವನ್ನು ರಚಿಸಿ, ಶತರುದ್ರೀಯ ಮಂತ್ರಗಳು ಯಾವರೀತಿಯಲ್ಲಿ ಪ್ರಧಾನವಾಗಿ ಶ್ರೀನಾರಾಯಣನ ಗುಣಾನುಸಂಧಾನದ ಮಂತ್ರಗಳು, ಮುಖ್ಯತ: ಮುಖ್ಯಪ್ರಾಣನ ಮಹಿಮಾತಿಶಯಗಳನ್ನು ಕೊಂಡಾಡುವ ಮಂತ್ರಗಳು ಮತ್ತು ಯಾವ ರೀತಿಯಲ್ಲಿ ರುದ್ರದೇವರ ಪ್ರತಿಪಾದಕವಾದಂತಹ ಮಂತ್ರಗಳಾಗಿವೆ ಎಂಬುದನ್ನು ತಮ್ಮ ಭಾಷ್ಯದಲ್ಲಿ ಅತ್ಯಂತ ಸುಂದರವಾಗಿ ವೇದಮಂತ್ರಗಳ ಆಂತರ್ಯವನ್ನು ತೆರೆದಿರಿಸಿದ್ದಾರೆ. 'ರುದ್ರ'ಶಬ್ದವನ್ನೂ ಹೇಗೆ ಭಗವತ್ಪರ, ವಾಯುಪರವಾಗಿ ಅನುಸಂಧಾನ ಮಾಡಬಹುದು ಎಂಬುದನ್ನು ಆಚಾರ್ಯರ ಭಾಷ್ಯದಲ್ಲಿ ನೋಡಿದಾಗ, ಆಚಾರ್ಯರ ವೈದುಷ್ಯದ ವಿರಾಟ್ ರೂಪದ ದರ್ಶನವಾಗುತ್ತದೆ. 'ಖಂಡಾರ್ಥ ನಿರ್ಣಯ'ದ ಪ್ರವಚನದಲ್ಲಿ ಯಾಜ್ಞಿಕ ಮಂತ್ರವೊಂದನ್ನು ಪ್ರಾಣನ ಹನುಮ, ಭೀಮ, ಮಧ್ವರೂಪಗಳಿಗೆ ಯಾವರೀತಿ ಅನುಸಂಧಾನ ಮಾಡಬಹುದು ಎಂಬುದನ್ನು ವಿವರಿಸಿದಾಗ, ರೋಮಾಂಚನವಾಗುತ್ತದೆ.ಯಾವ ಅರ್ಥವೂ ವೇದಮಂತ್ರಗಳಿಗೆ ಹೇರಿದ ಅರ್ಥವಲ್ಲ, ಬದಲಾಗಿ ವೇದದ ಆಂತರ್ಯವೇನು ಎಂದು ತೋರುವ ಅರ್ಥ. ಬನ್ನಂಜೆಯವರ 'ಐತರೇಯ ಉಪನಿಷತ್ತಿನಲ್ಲಿ ಬರುವ 'ಮಹಾನಾಮ್ನೀ'ಮಂತ್ರಗಳ ಅರ್ಥಾನುಸಂಧಾನ ಅಪೂರ್ವವಾದ ಅನುಭವ.ಶ್ರೀಮಧ್ವರ ಮಹೋನ್ನತ ಕೃತಿ 'ಮಹಾಭಾರತತಾತ್ಪರ್ಯನಿರ್ಣಯ' ಕ್ಕೆ ಅತ್ಯಂತ ವಿಸ್ತೃತವಾದ ಟೀಕೆಯನ್ನೂ 'ನಿರ್ಣಯಭಾವಚಂದ್ರಿಕಾ' ಎಂಬ ಹೆಸರಿನಲ್ಲಿ ರಚಿಸಿದ್ದಾರೆ. ಶ್ರೀಮಧ್ವರ ಪದಪ್ರಯೋಗಗಳ ಹಿಂದಿನ ಹಿರಿದಾದ ಅರ್ಥವನ್ನು ತೋರುವುದರಲ್ಲಿ ಬನ್ನಂಜೆಯವರಿಗೆ ಮುಖ್ಯತಾತ್ಪರ್ಯ. ಶ್ರೀವೇದಾಂಗತೀರ್ಥರ 'ಪದಾರ್ಥದೀಪಿಕೆ' ಹಾಗೂ ಶ್ರೀವ್ಯಾಸತೀರ್ಥರ 'ಭಾವಪಂಚಿಕೆ' ಟೀಕಾಗಳಿಗಿಂತ ಹೆಚ್ಚು ವಿಸ್ತೃತವಾದಂತಹ ಟೀಕೆಯನ್ನು ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ರಚಿಸುವ ಮೂಲಕ ಮಾಧ್ವ ವಾಙ್ಮಯಕ್ಕೆ ಮಹತ್ತ್ವದಕೊಡುಗೆ ಶ್ರೀಬನ್ನಂಜೆಯವರದು. ಶ್ರೀನಾರಾಯಣಪಂಡಿತಾಚಾರ್ಯರ ಮಧ್ವವಿಜಯಕ್ಕೆ ಆಚಾರ್ಯರು ರಚಿಸಿದ ವ್ಯಾಖ್ಯಾನ ಅಸದೃಶವಾದ ವ್ಯಾಖ್ಯಾನ. ಭಾಷ್ಯಕಾರರಾಗಿ, ಟೀಕಾಕಾರರಾಗಿ, ಟಿಪ್ಪಣಿಕಾರರಾಗಿ ತಮ್ಮ ವಿಶ್ವಗುರುಗಳ ಪ್ರಸಾದಿತವಾದ ವೈದುಷ್ಯವನ್ನು ಪ್ರಕಟಗೊಳಿಸಿದ ಆಚಾರ್ಯರು 'ಪ್ರಾಣಸೂತ್ರ' ಗಳನ್ನು ರಚಿಸುವ ಮೂಲಕ ಸೂತ್ರಕಾರರೂ ಆಗಿದ್ದಾರೆ. ಶ್ರೀಮಧ್ವರ ಸಾಕ್ಷಾತ್ ಶಿಷ್ಯರಾದ ಫಲಿಮಾರು ಮಠದ ಮೂಲಯತಿಗಳಾದ ಶ್ರೀಹೃಷಿಕೇಶತೀರ್ಥರ ಪಾಠದನ್ವಯ ಶ್ರೀಮಧ್ವರ ಸರ್ವಮೂಲಗ್ರಂಥಗಳ ಶುದ್ಧಪಾಠದ ಸಂಪಾದನೆ, ಪ್ರಕಟಣೆಯ ಮೂಲಕ ವೇದಾಂತ ಪ್ರಪಂಚಕ್ಕೆ ಅವಿಸ್ಮರಣೀಯ ಕೊಡುಗೆ ಬನ್ನಂಜೆ ಗೋವಿಂದಾಚಾರ್ಯರದು. ಆಚಾರ್ಯಮಧ್ವರ ಕೃತಿಗಳು, ತ್ರಿವಿಕ್ರಮ ಪಂಡಿತಾಚಾರ್ಯ, ನಾರಾಯಣಪಂಡಿತಾಚಾರ್ಯರ ರಚನೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಶ್ರೀಬನ್ನಂಜೆ, ಬಾಣನ 'ಕಾದಂಬರಿ', ಭವಭೂತಿಯ 'ಉತ್ತರರಾಮ ಚರಿತ', ಶೂದ್ರಕನ 'ಮೃಚ್ಛಕಟಿಕ' ಮೊದಲಾದ ಸಂಸ್ಕೃತದ ಮೇರು ಕೃತಿಗಳಿಗೆ ತಮ್ಮ ಅನುವಾದದ ಮೂಲಕ ಕನ್ನಡದಲ್ಲಿ ಹೊಸಹುಟ್ಟು ನೀಡಿದ್ದಾರೆ. ಬಾಣಭಟ್ಟನ ಕಾದಂಬರಿಯ ಅನುವಾದ ವರಕವಿ ಬೇಂದ್ರೆ, ಕವಿವರ್ಯ ಪುತಿನ ರಂತಹವರನ್ನೂ ಪುಲಕಿತರನ್ನಾಗಿಸಿದ ಅನುವಾದ. 'ವಿಷ್ಣುಪುರಾಣ'ವನ್ನು ಕುರಿತು 'ಪರಾಶರ ಕಂಡ ಪರತತ್ವ', ತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯ ಮಧ್ವರು ಸಂಗ್ರಹಿಸಿರುವ 'ರಾಮಾಯಣದ ಕಥಾಸಂಗ್ರಹವನ್ನು 'ಮಧ್ವರಾಮಾಯಣ' ಎಂಬ ಹೆಸರಿನಲ್ಲಿ ಅನುವಾದ, 'ವಾಲ್ಮೀಕಿ ಕಂಡ ರಾಮಾಯಣ' 'ಚಕ್ರಾಬ್ಜಮಂಡಲ' ವನ್ನು ಕುರಿತ ವಿದ್ವತ್ಪೂರ್ಣಬರಹ ಶ್ರೀಬನ್ನಂಜೆಯವರ ವಿದ್ವತ್ತಿಗೆ ದರ್ಪಣಗಳಾಗಿವೆ. ಪುರಂದರದಾಸರು, ಕನಕದಾಸರ ಕೃತಿಗಳನ್ನು ಕುರಿತ ಪುರಂದರೋಪನಿಷತ್, ಕನಕೋಪನಿಷತ್ ಹರಿದಾಸಸಾಹಿತ್ಯಕ್ಕೆ ಬನ್ನಂಜೆ ನೀಡಿದ ಅಪೂರ್ವ ಕೊಡುಗೆಗಳು. ಭೋಗ-ಯೋಗ ಎರಡೂ ಜೀವನದ ಮಂಗಲಕ್ರಿಯೆಗಳು , ಯಾವುದೋ ಒಂದನ್ನು ಅತಿಯಾಗಿ ಆರಾಧಿಸುವನು ಜೀವನದ ಪೂರ್ಣಯೋಗದಿಂದ ವಂಚಿತನಾಗುತ್ತಾನೆ ಎಂಬ ಅಭಿಪ್ರಾಯದ ಬನ್ನಂಜೆ ವೇದವ್ಯಾಸರ ಬ್ರಹ್ಮಸೂತ್ರಗಳ ದಿವ್ಯವಾದ ಅನುಭವದೊಂದಿಗೇ ವಾತ್ಸಾಯನನ ಕಾಮಸೂತ್ರಗಳನ್ನೂ ಪೂರ್ಣದೃಷ್ಟಿಯಿಂದ ನೋಡಬೇಕು ಎಂದು ಪ್ರತಿಪಾದಿಸಿದವರು ಇದರ ದ್ಯೋತಕ- ಪ್ರಾಚೀನಭಾರತದಲ್ಲಿ ಕಾಮಶಾಸ್ತ್ರ ಎಂಬ ಕೃತಿ. ಬೇರೆಯವರ ದೃಷ್ಟಿಗಿಂತ ಭಿನ್ನವೆಂದೆನಿಸುವ ಆದರೆ ಸತ್ಯಕ್ಕೆ ಹತ್ತಿರವಾದ ಮತ್ತು ವೇದವ್ಯಾಸ-ಕೃಷ್ಣ, ಮಧ್ವರಿಗೆ ಸಮ್ಮತವಾದ ಅಭಿಪ್ರಾಯಗಳನ್ನು ತಮ್ಮ ಕೃತಿ-ಮಾತುಗಳಲ್ಲಿ ಬಿಂಬಿಸುವ ಬನ್ನಂಜೆ ಕೆಲವೊಮ್ಮೆ ಸಂಪ್ರದಾಯವಾದಿಗಳು ನಂಬಿರುವ ವಿಚಾರಗಳಿಗಿಂತ ಭಿನ್ನವಾದ ವಿಚಾರಗಳನ್ನು ವ್ಯಕ್ತಪಡಿಸಿರುವುದೂ ಉಂಟು. ಶ್ರೀಕೃಷ್ಣನ ಪ್ರತಿಷ್ಟೆ ಪಶ್ವಿಮಾಭಿಮುಖವಾಗಿಯೇ ಆಗಿದೆ ಎಂದು ಸಾಧಾರವಾಗಿ ಪ್ರತಿಪಾದಿಸಿದವರು ಬನ್ನಂಜೆ.
ಬೇಂದ್ರೆಯವರ ನಾಕುತಂತಿಯ ಅರ್ಥಬಿತ್ತರವನ್ನು ಬಿತ್ತರಿಸಿದವರೂ ಬನ್ನಂಜೆ. ನನ್ನ ಕೃತಿ ಸೂತ್ರಪ್ರಾಯ ನೀನು ಅದಕ್ಕೆ ಭಾಷ್ಯ ಬರೆಯಬೇಕು ಎಂದು ವರಕವಿಗಳಿಂದಲೇ ಆಜ್ಞಪ್ತರಾದ ಧನ್ಯಜೀವಿ ಶ್ರೀಗೋವಿಂದಾಚಾರ್ಯರು. ಕಿಷ್ ಕಿಂಧಾಕಾಂಡ, ಪ್ರಕಟವಾಗಿರುವ ಬನ್ನಂಜೆ ಬರಹಗಳಲ್ಲಿ ಶ್ರೀಬನ್ನಂಜೆ ಯಾವರೀತಿಯಲ್ಲಿ ವಿಭಿನ್ನವಾಗಿ ಮತ್ತು ವಿಶಿಷ್ಟ ಆಲೋಚಿಸಬಲ್ಲರು ಎಂಬುದಕ್ಕೆ ಸಾಕ್ಷಿಗಳಾಗಿವೆ. ವೇದಾಂತದ ಬಗ್ಗೆ ಶ್ರೀಬನ್ನಂಜೆಯವರು ನೀಡಿರುವ ಪ್ರವಚನಗಳನ್ನು ಪುಸ್ತಕಗಳ ರೂಪದಲ್ಲಿ ಸಂಗ್ರಹಿಸಿದರೆ, ಅಪಾರವಾದಂತಹ ಸಾರಸ್ವತ ಸಂಪತ್ತು ನಮ್ಮದಾಗುತ್ತದೆ.ವಿದೇಶಗಳಲ್ಲಿಯೂ ಸಹ ಪ್ರವಚನಗಳನ್ನು ನೀಡಿ ಶ್ರೀವೇದವ್ಯಾಸರ, ಮಧ್ವರ ಸಿದ್ಧಾಂತವನ್ನು ಪ್ರಸರಿಸುತ್ತಿರುವ ಮಹಾಗುರು ಶ್ರೀಬನ್ನಂಜೆಯವರು.
ಒಂದು ತೀರಾ ವೈಯಕ್ತಿಕವಾದ ಅನುಭವ, ಶ್ರೀಜಗನ್ನಾಥದಾಸರ ಜೀವನವನ್ನು ಕುರಿತು ನನ್ನಿಂದ ರಚಿತವಾಗಿದ್ದ 'ಫಲವಿದು ಬಾಳ್ದುದಕೆ' ಕಾದಂಬರಿಯನ್ನು ಪರಮಪೂಜ್ಯ ಶ್ರೀಪೇಜಾವರ ಶ್ರೀಗಳು ಲೋಕಾರ್ಪಣೆ-ಲೋಕೇಶಾರ್ಪಣೆ ಮಾಡಿದ್ದರು. ಆ ಕೃತಿಯನ್ನು ಪೂಜ್ಯ ಬನ್ನಂಜೆಯವರು ಚಾಮರಾಜಪೇಟೆಯ ಶ್ರೀರಾಮಸೇವಾಮಂಡಳಿಯಲ್ಲಿ ರಾಮಾಯಣ ಕುರಿತು ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಮರ್ಪಿಸಿ, ಮುಂದೆ ಕೃತಿ ರಚನೆಗೆ ಆಚಾರ್ಯರ ಅನುಗ್ರಹ ಬೇಕು ಎಂದು ಪ್ರಾರ್ಥಿಸಿದೆ. ಶ್ರೀಗೋವಿಂದಾಚಾರ್ಯರು ನನ್ನ ತಲೆಯ ಮೇಲೆ ಕೈಯಿರಿಸಿದರು. ಯೋಗಿಕ ಪರಿಭಾಷೆಯಲ್ಲಿ ಶಕ್ತಿಪಾತವೆಂದು ಕರೆಯುವಂತಹ ಅನುಭವ. ಸಹಸ್ರ ಮಿಂಚುಗಳು ಹೊಳೆದಂತೆ, ಮೈಯಲ್ಲಿ ನಖಶಿಖಾಂತ ವಿದ್ಯುತ್ ಪ್ರವಹಿಸಿದಂತೆ, ಅಂತಹ ಅನುಭವ ನನ್ನದಾಗಿಸಿದ ಆಚಾರ್ಯರಿಗೆ ಅಭಿವಂದನೆಗಳು
ಒಮ್ಮೆ ಬನ್ನಂಜೆ ವಿಜಯ ಕಾಲೇಜು (ಆಗ ಬಿಎಚ್ ಎಸ್ ಕಾಲೇಜು) ಆಯೋಜಿಸಿದ್ದ ವರಕವಿ ಬೇಂದ್ರೆಯವರ ಸಾಹಿತ್ಯ ಕುರಿತ ವಿಚಾರಸಂಕಿರಣಕ್ಕೆ ಬಂದ ಸಂದರ್ಭದಲ್ಲಿ ಮಾತನಾಡುತ್ತಾ 'ಗುರುಗಳೇ ವೇದವ್ಯಾಸರ ವಿಚಾರಗಳನ್ನು ಪ್ರಕಟಿಸುವಲ್ಲಿ ಆಚಾರ್ಯಮಧ್ವರು ಮಾಧ್ಯಮವಾದಂತೆ ನೀವು ಮಧ್ವರ ವಿಚಾರಗಳನ್ನು ಪ್ರಕಟಿಸುವಲ್ಲಿ ಮಾಧ್ಯಮವಾದಿರಿ'ಎಂದೆ. ಆಗ ಬನ್ನಂಜೆ ಎಂದರು "ನಾನು ಆಗಲಿಲ್ಲ- ಮಧ್ವರು ಮಾಧ್ಯಮಮಾಡಿಕೊಂಡರು ಅದು ಅವರ ಅನುಗ್ರಹ" ಎಂದರು. ಶ್ರೀಬನ್ನಂಜೆಯವರು ಬಿ.ಎಚ್.ಎಸ್.ಕಾಲೇಜಿನ 'ಬೇಂದ್ರೆಸಾಹಿತ್ಯ'ಕುರಿತ ವಿಚಾರ ಸಂಕಿರಣದಲ್ಲಿ ನೀಡಿದ ಉಪನ್ಯಾಸವನ್ನು ಬರಹದ ರೂಪಕ್ಕೆ ತರುವ ಭಾಗ್ಯವೂ ನನಗೊದಗಿತು. ಪ್ರತಿನಿತ್ಯ ಶ್ರೀಬನ್ನಂಜೆಯವರ ಪ್ರವಚನ ಕೇಳದೆ ಇರಲೂ ಆಗದಷ್ಟು ನನ್ನ ಭಾವಕೋಶದ ಭಾಗವಾಗಿದ್ದಾರೆ ಮಹಾಭಾಗ ಶ್ರೀಬನ್ನಂಜೆಯವರು. ಉಪನಿಷತ್ತುಗಳು, ಭಾಗವತ, ಆಚಾರ್ಯರ ಸರ್ವಮೂಲ ಕೃತಿಗಳು ಪ್ರತಿನಿತ್ಯ ಬನ್ನಂಜೆಯವರ ಮೂಲಕ ಹತ್ತಿರವಾಗುತ್ತಲೇ ಇವೆ. ಶ್ರೀವೇದವ್ಯಾಸ,ಕೃಷ್ಣ,ಮಧ್ವರ ಚಿಂತನಗಳೋ ಮಹಾಸಮುದ್ರ, ನಾವೋ ಬೊಗಸೆಯಲ್ಲಿಯೂ ಹಿಡಿಯಲಾಗದ ಅಲ್ಪಮತಿಗಳು. ಹಾಗಿದ್ದಾಗ್ಯೂ ನಮ್ಮ ಮೇಲಿನ ಕಾರುಣ್ಯದಿಂದ ಶ್ರೀಬನ್ನಂಜೆಗೋವಿಂದಾಚಾರ್ಯರಂತಹ ಜ್ಞಾನಿಗಳನ್ನು ನಮಗೆ ನೀಡಿ ಹರಸುತ್ತಿರುವ ಮಾಧವ, ಮಧ್ವರಿಗೆ ಈ ಜೀವನ ಎಷ್ಟು ಋಣಿಯಾಗಿದ್ದರೂ ಕಡಿಮೆಯೆ. ಬನ್ನಂಜೆಯವರ ಮೂಲಕ ಶ್ರೀವೇದವ್ಯಾಸ-ಮಧ್ವರು ನಮಗೆ ಇನ್ನೂ ಹೆಚ್ಚು ಹತ್ತಿರವಾದರು. ಅಮರರಾದ ಆಚಾರ್ಯರಿಗೆ ಅಂತಿಮ ನಮನಗಳು. ವೇಣುಗೋಪಾಲ. ಬಿ.ಎನ್.
*******
ಪುರದ ಪುಣ್ಯವೆ ಪುರುಷರೂಪಿಂದೆ ಪೋದಂತೆ
- ರೋಹಿತ್ ಚಕ್ರತೀರ್ಥ | ಹೊಸ ದಿಗಂತ 14 ಡಿಸೆಂಬರ್ 2020
ಡಾ. ಎಂ.ಎಂ. ಕಲಬುರ್ಗಿಯವರು ಹಂಪಿ ವಿವಿಯ ಕುಲಪತಿಗಳಾಗಿದ್ದ ಸಮಯ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಹೊಸಪೇಟೆಯ ಮೇಲಿಂದ ಬೇರಾವುದೋ ಊರಿಗೆ ಪ್ರಯಾಣ ಮಾಡುತ್ತಿದ್ದಾರೆಂಬ ಸುದ್ದಿ ಸಿಕ್ಕಿತು. ಅವರನ್ನು ನಮ್ಮ ವಿಶ್ವವಿದ್ಯಾಲಯಕ್ಕೂ ಕರೆಸಿ ಮಾತಾಡಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಭಾವಿಸಿದ ಕಲಬುರ್ಗಿ, ತನ್ನ ಕಿರಿಯ ಸಹೋದ್ಯೋಗಿಗಳನ್ನು ಕರೆದು, ಬನ್ನಂಜೆಯವರನ್ನು ಕರೆಸುವುದಕ್ಕೆ ಏರ್ಪಾಟು ಮಾಡಿಸಿದರು. ಆಗ ಹಂಪಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎ.ವಿ. ನಾವಡ, ಬನ್ನಂಜೆಯವರನ್ನು ಕಂಡು ಮಾತಾಡಿಸಿ ಮನವೊಲಿಸಿ ವಿಶ್ವವಿದ್ಯಾಲಯಕ್ಕೆ ಕರೆತಂದರು. ಬನ್ನಂಜೆ ಅಂದು ವಿದ್ವತ್ಸಮೂಹವನ್ನು ಎದುರಿಗೆ ಕೂರಿಸಿಕೊಂಡು ಒಂದು ತಾಸು ಅತ್ಯದ್ಭುತವಾದ ಉಪನ್ಯಾಸ ನಡೆಸಿಕೊಟ್ಟರು. ಅದರ ಮರುದಿನವೇ ವಿಶ್ವವಿದ್ಯಾಲಯದಲ್ಲಿ ಒಂದಷ್ಟು ಹಳಸುಗಾಳಿಯ ಹಬೆಯೆದ್ದಿತು. ಕುಲಪತಿಗಳು ಯಾವುದೋ ಮಾಧ್ವಮಠದ ಕಚ್ಛೆಪಂಚೆ ಪಂಡಿತರನ್ನೆಲ್ಲ ಕರೆಸಿ ವೇದಿಕೆ ಹತ್ತಿಸಿ ವಿಶ್ವವಿದ್ಯಾಲಯದ ಘನತೆ ಹದಗೆಡಿಸುತ್ತಿದ್ದಾರೆಂದೂ ಅವರ ಮೇಲೆ ಮೇಲಿನವರಿಗೆ ದೂರು ಕೊಡಬೇಕೆಂದೂ ಒಂದಷ್ಟು ಚರ್ಚೆಗಳು ವಿಶ್ವವಿದ್ಯಾಲಯದ ಹಜಾರದಲ್ಲಿ ನಡೆಯತೊಡಗಿದವು. ಇಷ್ಟೆಲ್ಲ ವಿವಾದಕ್ಕೆ ಕಾರಣವಾಗುವಂಥ ಯಾವ ವಿಷಯವನ್ನು ಬನ್ನಂಜೆ ಮಾತಾಡಿದ್ದರು ಎನ್ನುತ್ತೀರಾ? ಅವರು ಕೊಟ್ಟದ್ದು ಬೇಂದ್ರೆಯವರ "ನಾಕುತಂತಿ"ಯ ಮೇಲೆ ಉದ್ಭೋದಕ ಉಪನ್ಯಾಸ!
ದುರಂತ ನೋಡಿ. ನಮ್ಮಲ್ಲಿ ಜ್ಞಾನಾಧಿಕಾರ ಕೇಂದ್ರಗಳಾದ ಶಾಲೆ-ಕಾಲೇಜು-ಉನ್ನತ ಅಧ್ಯಯನ ಸಂಸ್ಥೆಗಳು, ಸರಕಾರೀ ಅಕಾಡೆಮಿ/ಪ್ರಾಧಿಕಾರಗಳು, ಪತ್ರಿಕೆ-ಟಿವಿಯಂಥ ಮಾಧ್ಯಮ ವೇದಿಕೆಗಳು ಎಲ್ಲವೂ ಐವತ್ತು ವರ್ಷಗಳಿಗೂ ಹೆಚ್ಚುಕಾಲ ಆಳಲ್ಪಟ್ಟಿದ್ದು ಎಡಸಿದ್ಧಾಂತಿಗಳಿಂದಲೇ. ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲ ಮಡೆಯರು, ಮಂಕರು, ಅಜ್ಞಾನಿಗಳು ಎಂದೇ ಹಣೆಪಟ್ಟಿ ಹಚ್ಚಿಕೊಂಡು ಬರಲಾಯಿತು. ತಮ್ಮ ಸಿದ್ಧಾಂತಕ್ಕೊಗ್ಗದ ಎಲ್ಲವೂ ತಪ್ಪೆಂದೇ ನಿರ್ಣಯ ಹೊರಡಿಸುತ್ತಿದ್ದ ಎಡ-ಬಿಡಂಗಿ ವಿದ್ವಾಂಸರೊಂದಷ್ಟು ಜನ, ಕಚ್ಛೆ-ಪಂಚೆಯ ಮಂದಿಯನ್ನು, ಜುಟ್ಟು ಬಿಟ್ಟವರನ್ನು, ಜನಿವಾರ ತೊಟ್ಟವರನ್ನು ಸೀಮಿತ ದೃಷ್ಟಿಕೋನದ ಕೂಪಮಂಡೂಕಗಳು ಎಂದು ಬ್ರ್ಯಾಂಡ್ ಮಾಡಿದರು! ದುರಂತವೆಂದರೆ ಬರೋಬ್ಬರಿ 30 ಸಂಸ್ಕೃತ ಕೃತಿಗಳನ್ನು ಬರೆದ, ಐವತ್ತಕ್ಕೂ ಹೆಚ್ಚು ಸಂಸ್ಕೃತ ಕೃತಿಗಳನ್ನು ತಿಳಿಗನ್ನಡಕ್ಕೆ ಅನುವಾದ ಮಾಡಿದ, 70ಕ್ಕೂ ಹೆಚ್ಚು ಮೂಲ ಕನ್ನಡ ಕೃತಿಗಳನ್ನು ರಚಿಸಿದ ಬನ್ನಂಜೆ ಎಡಸಿದ್ಧಾಂತಿಗಳಿಗಾಗಲೀ ಸರಕಾರಗಳಿಗಾಗಲೀ ಯಾವತ್ತೂ ಸಾಹಿತಿ ಎಂದು ಕಾಣಲೇ ಇಲ್ಲ! ಸಂಸ್ಕೃತ ವಾಙ್ಮಯದ ಮೇರುಶಿಖರದಂತಿದ್ದ ಅವರಿಗೆ ವ್ಯಾಸ, ಸರಸ್ವತಿಯರ ಹೆಸರಿನ ಯಾವೊಂದು ರಾಷ್ಟ್ರೀಯ ಪುರಸ್ಕಾರವೂ ಬರಲಿಲ್ಲ. ಕನ್ನಡದ ಪಂಪ, ರತ್ನ ಪ್ರಶಸ್ತಿಗಳಿಗೂ ಅವರು ಅಸ್ಪೃಶ್ಯರಾಗಿಯೇ ಉಳಿದರು. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುವ ಸರಕಾರೀ ಅನ್ಯಾಯಗಳಿಗೆ ಬನ್ನಂಜೆಯವರೂ ಬಲಿಪಶುವಾಗಬೇಕಾಯಿತು. ಸರಕಾರದ ನಿರ್ಣಾಯಕ ಸ್ಥಾನದಲ್ಲಿ ಕೂತವರಿಗೆ ಗುಣಗ್ರಾಹಿತ್ವವಿದ್ದಿದ್ದರೆ ಬನ್ನಂಜೆಯವರಿಗೆ ಕನಿಷ್ಠ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಎಂದೋ ಬರಬೇಕಿತ್ತು. ಆದರೆ ಸಾಲು ಸಾಲು ಅಪಾತ್ರರಿಗೆಲ್ಲ ಆ ಗೌರವ ದಕ್ಕಿದ ಮೇಲೆ ಬನ್ನಂಜೆಯವರಿಗೆ ಬರದಿದ್ದುದು ಒಳ್ಳೆಯದೇ ಆಯಿತು ಎಂದು ನಾವು ನಿಟ್ಟುಸಿರುಬಿಡಬೇಕಷ್ಟೆ!
ಬನ್ನಂಜೆ ಗೋವಿಂದಾಚಾರ್ಯರು ಹುಟ್ಟಿದ್ದು 1936ರ ಆಗಸ್ಟ್ 3ರಂದು, ಪೊಡವಿಗೊಡೆಯನ ನಾಡು ಉಡುಪಿಯಲ್ಲಿ. ತಂದೆ ತರ್ಕಕೇಸರಿ ಪಡುಮನ್ನೂರು ನಾರಾಯಣಾಚಾರ್ಯರು. ಮಠದ ಸ್ವಾಮಿಗಳಿಗೆ ಪಾಠ ಹೇಳುತ್ತಿದ್ದ ಪ್ರಕಾಂಡ ಪಂಡಿತರು. ಬಾಲಕ ಗೋವಿಂದನಿಗೆ ಪ್ರಥಮಪಾಠಗಳೆಲ್ಲ ನಡೆದುದು ಮನೆಯಲ್ಲೇ, ಪಿತೃಮುಖೇನ. ಹಾಗಾಗಿ ಸಂಸ್ಕೃತದ ಅಡಿಪಾಯ ಎಳವೆಯಲ್ಲೇ ಗಟ್ಟಿಯಾಯಿತು. ಆದರೇನಂತೆ, ಸಂಸ್ಕೃತ ಕಾಲೇಜಿನಲ್ಲಿ ಪದವಿ ಪಡೆದು, ಶಿಕ್ಷಕನೋ ಪ್ರಾಧ್ಯಾಪಕನೋ ಆಗಿ ಜೀವನವ್ಯವಸಾಯ ಮಾಡಬೇಕೆಂದು ಬಯಸಿದವನಿಗೆ ಪ್ರಥಮಚುಂಬನಂ ದಂತಭಗ್ನಂ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ನಪಾಸಿನ ಗೌರವ! ಛಲಬಿಡದೆ ಮತ್ತೆ ಪರೀಕ್ಷಿಸಿದರೆ ಎರಡನೇ ವರ್ಷದಲ್ಲಿ ಇತಿಹಾಸ ಪುನರಾವರ್ತನ! ಮಠದ ವಿದ್ವಾಂಸರ ಮಗನಾಗಿ ಇಂಥ ಅಪಮಾನವನ್ನು, ಅದೂ ಕಾರ್ಯಕ್ಷೇತ್ರ ಉಡುಪಿಯಲ್ಲೇ ಅನುಭವಿಸುತ್ತ ಬದುಕುವುದು ಹೇಗೆ? ಪೇಚಾಟ, ಸಂಕಟ, ದುಃಖ. ಅದೊಂದು ದಿನ, ಹತಾಶೆಯಿಂದ ಮಡುಗಟ್ಟಿದ್ದ ಮನಸ್ಸು ಯೋಚಿಸಿತು: ಮಠದ ಮಾಣಿಗಳಿಗೆ ಪಾಠ ಮಾಡುವ ಸಂಸ್ಕೃತ ಶಿಕ್ಷಕನಾಗುವುದಕ್ಕಿಂತ ಶಿಕ್ಷಕರಿಗೇ ಪಾಠ ಮಾಡುವ ಗುರುವಿನ ಸ್ಥಾನಕ್ಕೇರಬೇಕು! ಯೋಚನೆ ನಿರ್ಧಾರವಾಯಿತು, ನಿರ್ಧಾರ ಸಂಕಲ್ಪವಾಯಿತು. ಜಗಲಿ ಹಾರದವನ ಗಗನಗಮನ! ಯಾಕಾಗಬಾರದು? ಹೊಳೆಹಾರದ ಹನುಮಂತ ಸಾಗರವನ್ನೇ ದಾಟಲಿಲ್ಲವೇ? ಹನುಮದ್ವಿಕಾಸಕ್ಕೊಂದು ನಾಂದಿಯಾಯಿತು. ಹುಡುಗ ತುಪ್ಪದ ದೀಪಹಚ್ಚಿದ; ಗ್ರಂಥಗಳ ಕಟ್ಟುಬಿಚ್ಚಿದ; ಸ್ವಾಧ್ಯಾಯಕ್ಕಿಳಿದ. ಮೂರುವರ್ಷ ಪರ್ಯಂತ ದಿನದ ಇಪ್ಪತ್ತಕ್ಕೂ ಹೆಚ್ಚು ತಾಸುಗಳನ್ನು ಅಧ್ಯಯನವೊಂದರಲ್ಲೇ ಕಳೆದ. ಕರಗಿದ ಎಣ್ಣೆ, ಬತ್ತಿಗಳು ಬೆಳಕಾಗಿ ಸಾರ್ಥಕ್ಯ ಕಂಡವು.
ಆ ಮೂರು ವರ್ಷಗಳನ್ನು ಕಳೆದು ಹೊರಬಂದ ಹುಡುಗ, ಕತ್ತಲ ತತ್ತಿಯನ್ನೊಡೆದು ಹೊರಬಂದ ಬೆಳಕಿನ ಮಗು. ದ್ವಿಜ. ಕಣ್ಣುಗಳಲ್ಲಿ ಅಸಾಧಾರಣ ಕಾಂತಿ. ನಾಲಗೆಯಲ್ಲಿ ವಾಗ್ದೇವಿ. ಮಾತಿನಲ್ಲಿ ಚಿಂತನೆಯ ಹೊಳಹು. ಆಲಿಸಿದವರಿಗೆ ರೋಮಾಂಚನ. ಬರೆದ ಸಾಲುಗಳೆಲ್ಲ ವೇದದ ಋಕ್ಕುಗಳಂತೆ, ಮಂತ್ರಗಳಂತೆ. ಅಪ್ಪನ ಕರ್ಮಠ ಸಾಂಪ್ರದಾಯಿಕತೆಗೆ ಆಘಾತ ಕೊಡಬೇಕೆಂದು ಬೀದಿಯಲ್ಲಿ ನಿಂತು ಸಿಗರೇಟೆಳೆಯುವ ದಿನಗಳೆಲ್ಲ ಕಳೆದಿದ್ದವು. ಮೈಮನಗಳಲ್ಲಿ ಒಡಮೂಡಿದ್ದ ಪಕ್ವತೆ. ಅಣ್ಣ ರಾಮಾಚಾರ್ಯರು "ಸುದರ್ಶನ" ಎಂಬ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಆ ಪತ್ರಿಕೆಯಲ್ಲಿ ತಮ್ಮ ಗೋವಿಂದ ಆಗೀಗ ಒಂದೊಂದು ಬರಹಗಳನ್ನು ಪ್ರಕಟಿಸತೊಡಗಿದ. ಬೀಳಬೇಕಿದ್ದ ಕಣ್ಣುಗಳಿಗದು ಬಿತ್ತು. ಉದಯವಾಣಿಯಲ್ಲೊಂದು ಕೆಲಸ ನಿಕ್ಕಿಯಾಯಿತು. ಮೊದಮೊದಲು ಸಾಧಾರಣ ಪತ್ರಕರ್ತನ ಹುದ್ದೆ. ನಂತರ ಸ್ವಸಾಮರ್ಥ್ಯ, ಪಾಂಡಿತ್ಯಗಳಿಂದ ಏರಿದ ಈ ಯುವಕ ಒಂದೊಂದೇ ಮೆಟ್ಟಿಲು. "ಕಿಷ್ಕಿಂಧಾಕಾಂಡ" ಅಂಕಣ ಜನಪ್ರಿಯವಾಯಿತು. ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಜವಾಬ್ದಾರಿ ಹೆಗಲೇರಿತು. ಅದನ್ನು ಸಮರ್ಥವಾಗಿ ನಿರ್ವಹಿಸಿದರು, ನಿಭಾಯಿಸಿದರು, ಹೊಸತೊಂದು ಹೊಳಪು ಕೊಟ್ಟರು ಬನ್ನಂಜೆ - ಒಂದೆರಡಲ್ಲ; ಮೂವತ್ತು ವರ್ಷ! ಆ ಮೂರು ದಶಕಗಳುದ್ದಕ್ಕೆ ಬನ್ನಂಜೆಯವರು ಬರೆದು ಪ್ರಕಟಿಸಿದ ಪುಸ್ತಕ ವಿಮರ್ಶೆಗಳೇ ಬರೋಬ್ಬರಿ 750ರಷ್ಟು! ಅದರ ಹತ್ತರಲ್ಲೊಂದಷ್ಟನ್ನೂ ಬರೆಯದ, ಓದದ, ಸಾಧಿಸದ ಪಂಡಿತಪುತ್ರರೆಲ್ಲ ಕವಿ, ಸಾಹಿತಿ, ವಿಮರ್ಶಕರ ಬಿರುದುಬಾವಲಿ ಧರಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಠಳಾಯಿಸಿಬಿಟ್ಟರು!
ಬನ್ನಂಜೆಯವರು ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿ ಪ್ರಕಟಿಸಿದ್ದು ಬಾಣಭಟ್ಟನ ಕಾದಂಬರಿಯ ಕನ್ನಡರೂಪ. ಕೆಲವೆಡೆ ಎರಡೆರಡೆ ಶಬ್ದಗಳಷ್ಟು ಸಂಕ್ಷಿಪ್ತ. ಇನ್ನು ಕೆಲವೆಡೆ ಆರೇಳು ಸಾಲಿಗೂ ಪೂರ್ಣವಿರಾಮ ಸಿಕ್ಕದಷ್ಟು ದೀರ್ಘ. ಕನ್ನಡದ ಬಾಣನೆಂಬಷ್ಟು ಪ್ರಗಲ್ಭತೆ, ವಾಕ್ಯಸೌಂದರ್ಯ, ನಿರಾಡಂಭರ ಸರಳತೆ, ಅನುಪಮ ಅರ್ಥವಿನ್ಯಾಸ. ಬಿಡಿಸಿದಷ್ಟು ತೆರೆದುಕೊಳ್ಳುವ ಅರ್ಥ - ಉಪನಿಷತ್ತುಗಳ ಮಾತಿನಂತೆ. "ಕಾದಂಬರಿ" ವಿದ್ವಜ್ಜನರ ಪ್ರಶಂಸೆಗೆ ಭಾಜನವಾಯಿತು. ಅಲ್ಲಿಂದ ಮುಂದಕ್ಕೆ ಬನ್ನಂಜೆ ತಿರುಗಿನೋಡಿದ್ದೇ ಇಲ್ಲ. ಸಂಸ್ಕೃತದ ಹಲವು ನಾಟಕ-ಕಾವ್ಯಕೃತಿಗಳು ಕನ್ನಡಕ್ಕೆ, ಈ ನೆಲಸಂಸ್ಕೃತಿಯದೇ ಕೃತಿಗಳೋ ಎಂಬಷ್ಟು ಸಹಜಗುಣ ಮೈವೆತ್ತು ಅನುವಾದಗೊಂಡವು. ಕಾಳಿದಾಸನ ಅಭಿಜ್ಞಾನಶಾಕುಂತಲ - ನೆನಪಾದಳು ಶಕುಂತಲೆ, ಭವಭೂತಿಯ ಉತ್ತರರಾಮಚರಿತ - ಮತ್ತೆ ರಾಮನ ಕತೆ, ಶೂದ್ರಕನ ಮೃಚ್ಛಕಟಿಕ - ಆವೆಯ ಮಣ್ಣಿನ ಆಟದ ಬಂಡಿ, ದಂಡಿಯ ದಶಕುಮಾರ ಚರಿತ - ಹತ್ತು ಮಕ್ಕಳ ಕತೆ, ಭಗವದ್ಗೀತೆ - ಭಗವಂತನ ನಲ್ನುಡಿ, ವಿಷ್ಣುಸಹಸ್ರನಾಮ - ದೇವರ ಸಾವಿರ ಹೆಸರಿನ ಹಾಡು... ಶೀರ್ಷಿಕೆಯಲ್ಲೇ ಇಂಥ ಜೀವಂತಿಕೆ! ಒಳಗಿನ ಹೂರಣ ಕೇಳಬೇಕೆ! ಸಂಸ್ಕೃತದ ಕಾವ್ಯ-ನಾಟಕಗಳೆಲ್ಲವೂ ಹಳೆಗನ್ನಡದ, ಬಹುತೇಕ ರಂಗಪ್ರಯೋಗಕ್ಕೊಗ್ಗದ ಮಾದರಿಯಲ್ಲಿ ಬರುತ್ತಿದ್ದಾಗ ಬನ್ನಂಜೆಯವರ ಅನುವಾದಗಳು, ಕತ್ತಲೆ ಕವಿದ ನೆಲಮಾಳಿಗೆಗೆ ಬೆಳಕಿನ ಕಿಂಡಿ ಹೊದೆಸಿದಂತಾಯಿತು. "ಮಣ್ಣಿನ ಬಂಡಿ" ನಾಟಕದ ಸೂತ್ರಧಾರನ ಬಾಯಲ್ಲಿ ಅವರು ಕುಂದಗನ್ನಡವನ್ನೂ ಆಡಿಸಿದ್ದಾರೆಂಬುದು ವಿಶೇಷ.
ವೇದದೃಷ್ಟಾರರಿಗೆಂತೋ ಅಂತೆಯೇ ಬನ್ನಂಜೆಯವರಿಗೆ ಪದಗಳ ಬಗ್ಗೆ ಪ್ರೀತಿ. ಒಂದೊಂದು ಪದವನ್ನೂ ಅವರು ಸಾಗರದಲ್ಲಿ ಮುಳುಗಿ ಎತ್ತಿತಂದ ಮುತ್ತಿನ ಕಾಳಜಿಯಿಂದ ಬಿಡಿಸಿ ಅದರ ಅರ್ಥವಿಸ್ತಾರಗಳನ್ನು ಓದುಗರ, ಕೇಳುಗರ ಮುಂದೆ ಹರಡುತ್ತಿದ್ದರು. "ಎಲ್ಲ ಸಂಖ್ಯೆಗಳೂ ರಾಮಾನುಜನ್ ಗೆಳೆಯರಾಗಿದ್ದವು" ಎಂಬ ಮಾತಿದೆ. ಅದನ್ನೇ ಶಬ್ದಲೋಕಕ್ಕೆ ಅನ್ವಯಿಸುವುದಾದರೆ ಎಲ್ಲ ಶಬ್ದಗಳೂ ಬನ್ನಂಜೆಯವರ ಜ್ಞಾತಿಗಳೇ ಆಗಿದ್ದವೆನ್ನಬಹುದು. ಅವರ ಉಪನ್ಯಾಸ ಹಳಿಯ ಮೇಲೋಡಿದ ರೈಲಿನಂತಲ್ಲ; ಮೃಗಯಾವಿನೋದಕ್ಕಾಗಿ ಹೊರಟ ರಾಜನ ಸವಾರಿಯಂತೆ. ಅವರು ಸಾಹಿತ್ಯದ ಗೊಂಡಾರಣ್ಯವನ್ನು ಹೊಗುತ್ತಾರೆ; ಅಲ್ಲಿ ಅವರಿಗೆ ಬೃಹದ್ವೃಕ್ಷಗಳು, ಗಿಡಬಳ್ಳಿ ಪೊದೆಹೊದರುಗಳು, ನೀರಿನ ಝರಿ-ತೊರೆ-ನದಿಗಳು, ಬಯಲು, ಗುಡ್ಡ-ದಿಬ್ಬ-ಕಣಿವೆಗಳು ಎಲ್ಲವೂ ಸಿಗುತ್ತವೆ. ಅವನ್ನೆಲ್ಲ ಇದೇ ಮೊದಲ ಬಾರಿಗೆ ಕಾಣುತ್ತಿದ್ದೇನೋ ಎಂಬಂತೆ ಅಚ್ಚರಿಯ ಕಣ್ಣುಗಳಿಂದ ನೋಡುತ್ತ, ತೋರಿಸುತ್ತ, ವಿವರಿಸುತ್ತ ಅವರು ಆ ಎಲ್ಲ ಹೊಕ್ಕುಬರೆ ದಾರಿಗಳಲ್ಲಿ ಹೋಗಿಬಂದು ಹೊಸದೊಂದು ಜಗತ್ತನ್ನೇ ಸೃಷ್ಟಿಸುತ್ತಾರೆ. ಬೇಟೆಯೆಂಬುದು ಕೇವಲ ನೆಪವಾಗಿ, ಅಥವಾ ಕೆಲವೊಮ್ಮೆ ನಗಣ್ಯವಾಗಿ, ಈ ವಿಹಾರ-ಸಂಚಾರಗಳೇ ಮುಖ್ಯಭೂಮಿಕೆಯನ್ನು ಆವರಿಸಿಕೊಳ್ಳುತ್ತವೆ. ಅವರ ಮಾತುಗಳಲ್ಲಿ ಮಾಧ್ವಮತ-ಮಠಗಳ ವಿಚಾರಗಳೆಂತೋ ಹಾಗೆಯೇ ಸರ್ ಜಾನ್ ವುಡ್‍ರಾಫ್, ಫ್ರಿತ್ಸೋ ಕಾಪ್ರಾ, ಅಲೆಕ್ಸಿಸ್ ಕ್ಯಾರಲ್‍ರಂಥ ವಿದೇಶೀ ವಿದ್ವಾಂಸರೂ ಲೀಲಾಜಾಲವಾಗಿ ಬಂದುಹೋಗುತ್ತಿದ್ದರೆಂಬುದು ವಿಶೇಷ. ಜಯತಿ ಪರಾಶರ ಸೂನುಃ ಸತ್ಯವತೀಹೃದಯನಂದನೋ ವ್ಯಾಸಃ | ಯಸ್ಯಾsಸ್ಯಕಮಲಗಲಿತಂ ವಾಙ್ಮಯಮ್ ಅಮೃತಂ ಜಗತ್ಪಿಬತಿ || ಎಂದು ವ್ಯಾಸರನ್ನು ಸ್ಮರಿಸಿಕೊಂಡು ಅವರು ಪ್ರಾರಂಭಿಸುತ್ತಿದ್ದ ಆ ಪ್ರತಿ ಪ್ರವಚನದಲ್ಲೂ ಆಯ್ದು ಜೋಳಿಗೆಗಿಳಿಸಿಕೊಳ್ಳುವ ಹತ್ತಾರು ಸಂಗತಿಗಳು ಇದ್ದೇ ಇರುತ್ತಿದ್ದವು. ಅಂಥ ಸುಮಾರು 30,000 ಗಂಟೆಗಳಷ್ಟು ಉಪನ್ಯಾಸವನ್ನು ಅವರು ಜಗತ್ತಿನ ಕಿವಿಗಳಿಗೆ ಇಳಿಸಿಹೋಗಿದ್ದಾರೆಂಬುದು ಗಿನ್ನೆಸ್ ಪುಸ್ತಕದಲ್ಲಿ ಸೇರಬೇಕಿರುವ ದಾಖಲೆಯೂ ಹೌದು.
ಬನ್ನಂಜೆ ಅಧ್ಯಯನದ ವಿಷಯದಲ್ಲಿ ಕರ್ಮಠದಲ್ಲಿ ಕರ್ಮಠರು; ಆದರೆ ಕಂಡುಂಡದ್ದನ್ನು ಅರ್ಥೈಸಿಕೊಂಡು ಜಗತ್ತಿಗೆ ಕೊಡುವುದರಲ್ಲಿ ಆಧುನಿಕರಲ್ಲಿ ಆಧುನಿಕರು. ಮನಸ್ಸಿಗೆ ಬಂದದ್ದನ್ನೆಲ್ಲ ಅಥವಾ ಆ ಕ್ಷಣಕ್ಕೆ ಲಹರಿಯಿದ್ದುದನ್ನೆಲ್ಲ ಫಿಲಾಸಫಿ ಎಂಬ ಹೆಸರಿನಲ್ಲಿ ಶ್ರೋತೃಗಳಿಗೆ ದಾಟಿಸುವ ಆಧುನಿಕ ಗುರುಗಳಿಗಿಂತ ಬನ್ನಂಜೆ ಭಿನ್ನ. ಅವರು ಅದೇನೇ ಮಾತಾಡಲಿ, ಅದಕ್ಕೊಂದು ಶಾಸ್ತ್ರದ ಹಿನ್ನೆಲೆ, ಪುರಾವೆ, ಪೂರಕದಾಖಲೆಗಳು ಇದ್ದೇ ಇರುತ್ತಿದ್ದವು. ಇದನ್ನೇ ಬನ್ನಂಜೆಯವರ ಅಹಂಕಾರ, ಧಾರ್ಷ್ಟ್ಯ ಎಂದೆಲ್ಲ ಅರ್ಥೈಸಿದವರೂ ಇದ್ದಾರೆ. ಆದರೆ ಪಾಂಡಿತ್ಯ ಮತ್ತು ಅಪಾರ ಅಧ್ಯಯನದ ಬಲದಿಂದ ಬರುವ ಈ ಜ್ಞಾನದ ಧಾಡಸಿತನ (ಅಡಾಸಿಟಿ) ಬನ್ನಂಜೆಯವರಿಗೆ ಜನ್ಮಜಾತ. ಒಂದು ಉದಾಹರಣೆ: 1958ರಲ್ಲಿ ಅವರಿಗೆ 22ರ ಹರೆಯ. ಆನಂದತೀರ್ಥರು (ಅರ್ಥಾತ್ ಆಚಾರ್ಯ ಮಧ್ವರು) ಬರೆದ ತಂತ್ರಸಾರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ, ಟೀಕೆ-ಟಿಪ್ಪಣಿ-ತಾತ್ಪರ್ಯಗಳನ್ನು ಕೊಡುವ ದೊಡ್ಡ ಹೊಣೆಗಾರಿಕೆಯನ್ನು ಬನ್ನಂಜೆ ಏಕಮೇವರಾಗಿ ತನ್ನ ಕೃಶ ಹೆಗಲುಗಳ ಮೇಲೆ ಹೊತ್ತರು. ಕೃತಿಯನ್ನು ಪೂರ್ಣಗೊಳಿಸಿ ಪೇಜಾವರ ಶ್ರೀ ವಿಶ್ವೇಶತೀರ್ಥರ ಅವಗಾಹನೆಗಿಟ್ಟು ಮುನ್ನುಡಿ ಬಯಸಿದರು. ಆಗ ವಿಶ್ವೇಶತೀರ್ಥರು ತಮ್ಮ ಮುನ್ನುಡಿಯಲ್ಲಿ "ಉಪಾಸನೆಯ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಆಚಾರ್ಯಮಧ್ವರ ದೃಷ್ಟಿಗೆ ವಿರುದ್ಧವಾದ ಒಂದು ವಿಚಾರವನ್ನು ಬನ್ನಂಜೆ ಸಮ್ಮತಿಸಿದ್ದಾರೆ" ಎಂದು ಬರೆದುಬಿಟ್ಟರು. ಆದರೆ ಬನ್ನಂಜೆ, ಮತ್ತೆ ಮಧ್ವರ ಬೇರೊಂದು ಕೃತಿಯಲ್ಲಿ ಬಂದಿರುವ ಅಂಶವನ್ನು ಮುಂದಿಟ್ಟುಕೊಂಡು ತಾನು ಬರೆದಿರುವುದಕ್ಕೆ ಶಾಸ್ತ್ರಸಮ್ಮತಿ ಇದೆ ಎಂದು ಅದೇ ಕೃತಿಯಲ್ಲಿ ಉತ್ತರರೂಪದ ಟಿಪ್ಪಣಿ ಕೊಟ್ಟರು! 22ರ ಎಳವೆಯಲ್ಲೇ ಅವರ ಅಧ್ಯಯನದ ಆಳ-ವಿಸ್ತಾರಗಳು ಹೇಗಿದ್ದವೆಂದರೆ ತಂತ್ರಸಾರ ಕೃತಿಗೆ ಬನ್ನಂಜೆ ಪೀಠಿಕೆಯಾಗಿ 45 ಪುಟಗಳಷ್ಟಾಗುವ ದೀರ್ಘ, ಘನಿಷ್ಠ ಪ್ರಸ್ತಾವನೆಯನ್ನೂ ಬರೆದಿದ್ದಾರೆ. ಹೀಗೆ ತನ್ನ ಪ್ರತಿ ಮಾತಿಗೂ ತನ್ನ ಅಧ್ಯಯನದ ಸಂಗತಿಗಳ ಒಳಗಿಂದಲೇ ಪುರಾವೆಗಳನ್ನು ಹುಡುಕುವ ಬಗೆ ಇದೆಯಲ್ಲ, ಅದು, ಅತ್ಯಂತ ಶುದ್ಧ ಭಾರತೀಯ ಚಿಂತನಕ್ರಮವೇ ಆಗಿದೆ.
ಬನ್ನಂಜೆ ಆ ಕಾಲಕ್ಕೇ ಆಧುನಿಕರಾಗಿದ್ದರೆಂಬುದಕ್ಕೆ ಇನ್ನೊಂದು ದೃಷ್ಟಾಂತವೂ ನಮಗೆ ಅವರ ಯೌವನದ ದಿನಗಳಲ್ಲೇ ಸಿಗುತ್ತದೆ. 1950ರ ದಶಕ. ಪಾವಂಜೆ ಗುರುರಾಜರಾಯರ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ ಆ ಕಾಲದಲ್ಲಿ ಭಜನೆ, ಸ್ತೋತ್ರ, ಮಂತ್ರಗಳ ಕೃತಿಗಳನ್ನು ಅಚ್ಚುಹಾಕಿ ಮಾರಾಟ ಮಾಡುತ್ತಿತ್ತು. ಗುರುವಿನಿಂದ ಶಿಷ್ಯನಿಗೆ ದೀಕ್ಷೆಮುಖೇನವಷ್ಟೇ ಹೋಗಬೇಕಾದ ಮಂತ್ರಗಳೆಲ್ಲ ಹೀಗೆ ಪುಸ್ತಕಗಳಲ್ಲಿ ಪ್ರಕಟವಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಅಪಾತ್ರರ ಕೈಗಳಿಗೆಲ್ಲ ಹೋಗಿ ಮೈಲಿಗೆಯಾಯಿತು ಎಂದು ಯಾರೋ ಗುಲ್ಲೆಬ್ಬಿಸಿದರಂತೆ. ಆಗ ಪ್ರಕಾಶಕರ ಪರವಾಗಿ ನಿಂತು ಗಟ್ಟಿದನಿ ಎತ್ತಿದವರು ಇಬ್ಬರು - ಅದೇ ಪೇಜಾವರ ಶ್ರೀಗಳು ಮತ್ತು ಬನ್ನಂಜೆ! ವಿಶ್ವೇಶತೀರ್ಥರ ಜೊತೆ ಬನ್ನಂಜೆಯವರದು ಪ್ರೀತಿ-ಹುಸಿಕೋಪಗಳ ಸಂಬಂಧ. ವಿಶ್ವೇಶರ ವಿದ್ಯಾಗುರುಗಳಾದ ವಿದ್ಯಾಮಾನ್ಯರೇ ಬನ್ನಂಜೆಯವರಿಗೂ ಗುರುಗಳಾಗಿ ಒದಗಿಬಂದವರು (ಇನ್ನೊಬ್ಬ ಗುರುಗಳು ವಿದ್ಯಾಸಮುದ್ರತೀರ್ಥರು). ಹಾಗಾಗಿ ವಿಶ್ವೇಶತೀರ್ಥರ ಜೊತೆ ಬನ್ನಂಜೆಯವರಿಗೆ ಶಾಸ್ತ್ರಚರ್ಚೆ, ವಾದ-ಸಂವಾದಗಳನ್ನು ಮಾಡುವ ಸ್ವಾತಂತ್ರ್ಯ ಮತ್ತು ಸಲಿಗೆ ಪ್ರಾರಂಭದಿಂದಲೇ ಇತ್ತು. ಅವರಿಬ್ಬರ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದರೂ ಅವೆಲ್ಲವೂ ಆಯಾ ಚರ್ಚೆಗಳ ಶಾಸ್ತ್ರವಿಷಯಗಳಿಗಷ್ಟೇ ಸೀಮಿತವಾಗಿದ್ದವೇ ಹೊರತು ವೈಯಕ್ತಿಕ ನೆಲೆಗೆ ಎಂದೂ ಇಳಿದದ್ದೇ ಇಲ್ಲ. ಬನ್ನಂಜೆಯವರು ಅದೆಷ್ಟೋ ಸಲ ತನ್ನ ಸ್ವಚ್ಛಂದ ಮನೋವೃತ್ತಿಯಿಂದಾಗಿ ಸಾಂಪ್ರದಾಯಿಕ ಕಣ್ಣುಗಳನ್ನು ಕೆಂಪಗಾಗಿಸಿದ್ದಿದೆ; ಅನ್ಯಥಾ ಅಪಾರ್ಥಕ್ಕೆ ಎಡೆಮಾಡಿಕೊಟ್ಟದ್ದೂ ಇದೆ. ಬನ್ನಂಜೆಯವರ ಯಾವುದೋ ಮಾತನ್ನು ಹಿನ್ನೆಲೆ-ಮುನ್ನೆಲೆಗಳಿಂದ ಪ್ರತ್ಯೇಕಿಸಿ ಅನ್ಯಾರ್ಥ/ಅಪಾರ್ಥಗಳು ಬರುವಂತೆ ಎಡಿಟ್ ಮಾಡಿ ಕೆಲವು ಕಿಡಿಗೇಡಿಗಳು ಜಾಲತಾಣಗಳಲ್ಲಿ ಹಂಚಿಕೊಂಡು ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೃತ್ಯವೆಸಗಿದ್ದೂ ಇದೆ. ಅಂಥ ವಿಚಾರಗಳಿಗೆಲ್ಲ ಬನ್ನಂಜೆಯವರು ಹೇಳುತ್ತಿದ್ದ ಮಾತೊಂದೆ: "ಬನ್ನಂಜೆ ಇನ್ನೂ ಬದುಕಿದ್ದೇನಲ್ಲ? ಭಿನ್ನಾಭಿಪ್ರಾಯ ಇರುವವರು ಎದುರೆದುರು ಬಂದು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ. ಯಾರೋ ಎಲ್ಲೋ ಕಲ್ಲೆಸೆದರೆಂದು ನಾನೇಕೆ ಪ್ರತಿಕ್ರಿಯೆ ಕೊಡುತ್ತಕೂಡಲಿ?" ಸತ್ಯನಿಷ್ಠುರತೆಯ ವಿಷಯಕ್ಕೆ ಬಂದರೆ ಬನ್ನಂಜೆಯವರಿಗೆ ಸ್ವಸಮುದಾಯದೊಳಗೇ ವಿರೋಧಿಗಳು ಹೆಚ್ಚಿದ್ದರೆಂಬುದು ಹೊರಗಿನ ವಿರೋಧಿಗಳಿಗೆ ಗೊತ್ತಿಲ್ಲದಿರಬಹುದು!
ವಿದ್ವದ್ವಲಯಕ್ಕೆ ಬನ್ನಂಜೆಯವರು ಕೊಟ್ಟ ಅಮೂಲ್ಯ ರತ್ನಗಳೆಂದರೆ ಹೃಷೀಕೇಶತೀರ್ಥರ ಕೈಬರಹದಲ್ಲಿದ್ದ ಸರ್ವಮೂಲಗ್ರಂಥಗಳನ್ನು ತಪ್ಪಿಗೆ ಎಡೆಯಿಲ್ಲದಂತೆ ಟೀಕೆ-ಟಿಪ್ಪಣಿಯ ಜೊತೆಗೆ ಮುದ್ರಿಸಿದ್ದು. ಆಚಾರ್ಯ ಮಧ್ವರ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ಉದ್ಗ್ರಂಥಕ್ಕೆ ಅಷ್ಟೇ ಬಲಯುತವಾದ ವ್ಯಾಖ್ಯಾನಗಳನ್ನು ಬರೆದದ್ದು. ಉಪನಿಷತ್ತುಗಳಿಗೆ ಭಾಷ್ಯ, ಪುರುಷಸೂಕ್ತ, ಶ್ರೀಸೂಕ್ತದಂಥ ಹಲವು ವೈದಿಕ ಸಾಹಿತ್ಯಗಳಿಗೆ ವಿದ್ವತ್ಪೂರ್ಣ ವಿವರಣೆ, ಮಧ್ವಾಚಾರ್ಯರ ಬಹುತೇಕ ಎಲ್ಲ ಕೃತಿಗಳಿಗೂ ವಿವರಣೆ, ಟಿಪ್ಪಣಿ, ಅನುವಾದ, ಮಧ್ವರ ಜೀವನ-ಸಾಧನೆಗಳ ಕುರಿತು ಕೃತಿ, ಹರಿದಾಸ ಸಾಹಿತ್ಯದ ಬಗ್ಗೆ ಹಲವು ಚಿಕ್ಕ-ದೊಡ್ಡ ಗ್ರಂಥಗಳು, ಆರ್ಷಸಾಹಿತ್ಯದ ಹಿನ್ನೆಲೆಯಲ್ಲಿ ಪುರಂದರದಾಸರ ಸಾಹಿತ್ಯದ ವಿವೇಚನೆ.. ಇವಿಷ್ಟೇ ಅಲ್ಲದೆ ಭಾರತೀಯ ಕಾಮಶಾಸ್ತ್ರದ ಕುರಿತು ಕೂಡ ಕೃತಿಗಳನ್ನು ಬರೆದು ಉಪಕರಿಸಿದವರು ಬನ್ನಂಜೆ ಗೋವಿಂದಾಚಾರ್ಯರು. ಸ್ವಯಂ ಕವಿಹೃದಯದ ಬನ್ನಂಜೆಯವರು ಪಲಿಮಾರು ಮಠದ ರಘುವಲ್ಲಭ ತೀರ್ಥರು (ಕಾವ್ಯನಾಮ ಕುಮುದಾತನಯ) ಮತ್ತು ಕೂರಾಡಿ ಸೀತಾರಾಮ ಅಡಿಗರ ಜೊತೆಗೂಡಿ ಮುಕ್ಕಣ್ಣದರ್ಶನ ಎಂಬ ಕವನಸಂಕಲನವನ್ನು ತನ್ನ ಹದಿಹರೆಯದ ಬಿಸಿರಕ್ತದ ದಿನಗಳಲ್ಲೇ ತಂದದ್ದುಂಟು (ಆಗವರಿಗೆ 25). ಬೇಂದ್ರೆ, ಪಾವೆಂ, ಕುಶಿ ಹರಿದಾಸ ಭಟ್ಟ, ಕಾರಂತ, ಅಮೃತ ಸೋಮೇಶ್ವರ ಮೊದಲಾದವರೆಲ್ಲ ಬನ್ನಂಜೆಯವರ ಸ್ನೇಹವಲಯದಲ್ಲಿದ್ದವರು. ಎಷ್ಟೊಂದು ತನ್ಮಯತೆಯಿಂದ ಬನ್ನಂಜೆಯವರು ಶಾಸ್ತ್ರಾಧ್ಯಯನ, ಪಾಠ-ಪ್ರವಚನ, ಶಾಸ್ತ್ರಗ್ರಂಥ ರಚನ-ಪ್ರಕಟನಗಳಲ್ಲಿ ತೊಡಗಿಕೊಳ್ಳುತ್ತಿದ್ದರೋ ಅಷ್ಟೇ ಶ್ರದ್ಧೆಯಿಂದ ಉಡುಪಿಯ ತಿಂಗಳೆಯಲ್ಲಿ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬಂದರೆಂಬುದು ಬಹುಶಃ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಧ್ವಮತಾನುಯಾಯಿ ಬನ್ನಂಜೆಯವರು ತಮ್ಮ "ವೇದಗಳ ಸಂದೇಶ" ಎಂಬ ಬೃಹತ್ ಸಾಹಿತ್ಯದಲ್ಲಿ ಮಧ್ವರ ಟೀಕೆಯ ಜೊತೆಗೇ ಶಂಕರ ಮತ್ತು ರಾಮಾನುಜರ ಟೀಕೆಯನ್ನೂ ಮುಂದಿಟ್ಟುಕೊಂಡು ವೇದಗಳ ಅರ್ಥಜಿಜ್ಞಾಸೆ ನಡೆಸಿದ್ದಾರೆ; ಜೊತೆಗೆ ಜಿ.ವಿ. ಅಯ್ಯರರು ಆಚಾರ್ಯತ್ರಯರ ಮೇಲೆ ನಿರ್ಮಿಸಿದ ಮೂರು ಸಂಸ್ಕೃತ ಸಿನೆಮಗಳಿಗೂ ಸಂಭಾಷಣೆ ಬರೆದಿದ್ದಾರೆ - ಎಂಬುದೂ ಬಹಳ ಮಂದಿಗೆ ತಿಳಿದಿಲ್ಲದ ಸತ್ಯ.
ಒಂದು ವರ್ಷದ ಅಂತರದಲ್ಲಿ ಉಡುಪಿ ಶ್ರೀ ವಿಶ್ವೇಶ ತೀರ್ಥರನ್ನು, ಸಾಹಿತಿ ಸಜ್ಜನ ಕಲಾವಿದ ಉದ್ಯಾವರ ಮಾಧವಾಚಾರ್ಯರನ್ನು ಮತ್ತು ಇದೀಗ ವಿದ್ಯಾವಾಚಸ್ಪತಿ ಸವ್ಯಸಾಚಿ ಬಹುಶ್ರುತ ವಿದ್ವನ್ಮಣಿ ಬನ್ನಂಜೆ ಗೋವಿಂದಾಚಾರ್ಯರನ್ನು ಕಳೆದುಕೊಂಡಿದೆ. ಇಂಥ ಘಟಾನುಘಟಿಗಳ ಅಗಲಿಕೆ, ಒಂದು ಬಗೆಯಲ್ಲಿ ಪುರದ ಪುಣ್ಯವೆ ಪುರುಷರೂಪದಿಂದ ಹೋದಂತಾಗಿದೆ.
✍🏻 ರೋಹಿತ ಚಕ್ರತೀರ್ಥ
******
ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರ ಪುಸ್ತಕಗಳು
ಕನ್ನಡ ಪುಸ್ತಕಗಳು
1. ಅಂಕೆಯಲ್ಲಿ ಆಧ್ಯಾತ್ಮ , 2. ಆಚಾರ್ಯ ಮಧ್ವ, 3. ಆನಂದ ತೀರ್ಥರ ಭಕ್ತಿ ಗೀತೆಗಳು-ಕನ್ನಡಾನುವಾದ, 4. ಆವೆಯ ಮಣ್ಣಿನ ಆಟದ ಬಂಡಿ, 5. ಇನ್ನಷ್ಟು ಹೇಳದೇ ಉಳಿದದ್ದು, 6. ಒಂದು ಎರಡಲ್ಲ ಎರಡು ಒಂದಲ್ಲ, 7. ಋತುಗಳ ಹೆಣಿಗೆ, 8. ಕನಕೋಪನಿಷತ್ತು, 9. ಕಿಷ್ಕಿಂಧಾ ಕಾಂಡ, 10. ಕೃಷ್ಣನ ಉಡುಪಿ, 11. ಕೃಷ್ಣನೆಂಬ ಸೊದೆಯ ಕಡಲು, 12. ಕೃಷ್ಣ ಮಾಲಾ ಧ್ಯಾನ ಮಾಲಾ, 13. ಜಯಂತಿ ಕಲ್ಪ, 14. ತಲವಕಾರೋಪನಿಷತ್, 15. ತಂತ್ರಸಾರ - ಸಂಗ್ರಹ, 16. ಧೀರಸನ್ಯಾಸಿ ಆನಂದತೀರ್ಥರು-ಪುಟಾಣಿಗಳ ಸಂಪುಟ, 17. ನಾಕು ಹಾಡುಗಳು, 18. ನೆನಪಾದಳು ಶಕುಂತಲೆ, 19. ಪರಾಶರ ಕಂಡ ಪರತತ್ವ, 20. ಪಂಚ ಸೂತ್ರಗಳು, 21. ಪುರಂದರೋಪನಿಷತ್, 22. ಪುರುಷ ಸೂಕ್ತ ಶ್ರೀ ಸೂಕ್ತ, 23 ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ, 24. ಪ್ರಾಣ ಸೂತ್ರಗಳು, 25. ಬನ್ನಂಜೆ ಬರಹಗಳು- 1 2 3 4 , 26 ಬಾಣಭಟ್ಟನ ಕಾದಂಬರಿ, 27. ಭಗವದ್ಗೀತೆ ಭಾಗ-1, 2,3,4,5,6, 28. ಭಗವಂತನ ನಲ್ನುಡಿ, 29 ಭೀಮಸೇನ: ವ್ಯಾಸರು ಕಂಡಂತೆ, 30 ಮತ್ತೆ ರಾಮನ ಕಥೆ, 31 ಮಧ್ವವಿಜಯ, 32 ಮಹಾಭಾರತ ತಾತ್ಪರ್ಯ ನಿರ್ಣಯ-ಮಹಾಭಾರತ ತಾತ್ಪರ್ಯ (ಶ್ಲೋಕ ಮಾತ್ರಾ), 33 ಮಹಾಶ್ವೇತೆ, 34 ಮುಗಿಲ ಮಾತು, 35 ಮುಂಜಾನೆಯಿಂದ ಸಂಜೆಯತನಕ, 36 ಮಂಗಲಾಷ್ಟಕಮ್, 37 ಯಾಜ್ಞೀಯ ಮಂತ್ರೋಪನಿಷದ್, 38 ವಾಲ್ಮೀಕಿ ಕಂಡ ರಾಮಾಯಣ (ಬಾಲಕಾಂಡ), 39 ವಿಷ್ಣು ಸಹಸ್ರನಾಮ ಸ್ತೋತ್ರ, 40 ವಿಷ್ಣು ಸ್ತುತಿ-ನಖ ಸ್ತುತಿ-ವಾಯುಸ್ತುತಿ, 41 ಶಿವ ಸ್ತುತಿ-ನರಸಿಂಹ ಸ್ತುತಿ, 42 ಸಾರಸ್ವತ ಸಂಪತ್ತು, 43 ಸಂಗ್ರಹ ಭಾಗವತ, 44 ಸಂಗ್ರಹ ರಾಮಾಯಣ, 45 ಹದಿನಾಕು ಹಾಡುಗಳು, 46 ಹೇಳದೆ ಉಳಿದದ್ದು, 47 ಪ್ರಯೋಗಶೀಲ ಬೇಂದ್ರೆ , 49 ರಾಮಾಚಾರ್ಯರ ಗೀತಾ, 50 ರೂಖಿ ಮೇಶ್ಕಿಟಾ ಗೆ ಉತ್ತರ.
ಸಂಸ್ಕೃತ ಪುಸ್ತಕಗಳು :
1. ಸಮಗ್ರ ಹೃಷಿಕೇಶ ತೀರ್ಥರ ಪಾಠ (ಸರ್ವಮೂಲ), 2. ಉಪನಿಷತ್ ಚಂದ್ರಿಕಾ-೧, 3. ಕರ್ಮಸಿದ್ಧಾಂತಃ, 4. ನ್ಯಾಯಾಮೃತಕೂಲ್ಯಾ, 5. ಭಾಗವತ ತಾತ್ಪರ್ಯನಿರ್ಣಯಃ, 6. ಸಂಗ್ರಹ ರಾಮಾಯಣ-೧,೨, 7. ಶತರುದ್ರೀಯಮ್, 8. ಶ್ರೀಮಹಾಭಾರತ ತಾತ್ಪರ್ಯನಿರ್ಣಯಃ-೧,೨, 9. ಶ್ರೀಮಹಾಭಾರತ ತಾತ್ಪರ್ಯಂ, 10. ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ, 11. ಜಯಂತೀ ಕಲ್ಪಃ, 12. ತತ್ವ ಚಂದ್ರಿಕಾ, 13. ತಾಪನಿ ಉಪನಿಷತ್ತು, 14. ಅಸ್ಯವಾಮೀಯಸೂಕ್ತಂ, 15. ಶ್ರೀಮಧ್ವವಿಜಯಃ, 16. ದೂಷಣತ್ರಯಮ್, 17. ಖಂಡಾರ್ಥ ಚಂದ್ರಿಕಾ, 18.ಉಪಾಸನಾ ವಿಧಿ ಅಥವಾ ಧ್ಯಾನಯೋಗ, 19. ಭಾರತೀಯ ಮನಶಾಸ್ತ್ರ ತತ್ವಾನಿ ಮಧ್ವವಿಜಯ ಮೂಲ ಮಾತ್ರ, 20. ಪ್ರಾಣಾಗ್ನಿ ಸೂಕ್ತ
English
1. Ramayana-major roles of minor characters
2. Pearls of bliss
3. Udupi of Lord Krishna
4. Talavakara upanishadh
5. Ancient studies of kamashastra
6. Acharya Madhwa
ಬನ್ನಂಜೆ ಗೋವಿಂದಾಚಾರ್ಯರ ಬಗ್ಗೆ ಪುಸ್ತಕಗಳು:
1. ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು-ಹರಿಹರ ಪ್ರಿಯ
2. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ-ಬೆಳಗೋಡು ರಮೇಶ ಭಟ್
3. ಕೃತಿ ಸಮೀಕ್ಷೆ(ಬ್ರಹ್ಮರಥ-೨)-ತುಶಿಮಮ, ವರ್ಷ: ೨೦೧೫; ಉಡುಪಿ.
4. Bannanje A rishi Revealed
5. ಬನ್ನಂಜೆ ಷಡ್ದರ್ಶನ
No comments:
Post a Comment