.
ಪುಷ್ಯ ಬಹುಳ ದ್ವಿತೀಯಾ
ನಾರಾಯಣಾರ್ಯ ಕರಾಬ್ಜೋತ್ಥ ಹರೇಃ ಪಾದವಲಂಬಿನಃ/
ಸ್ಮರಾಮಿ ಶ್ರೀ ಹನುಮದ್ದಾರ್ಯಂ ಕರಣತ್ರಯ ವಿಶುದ್ಧಯೇ//
ಮಹಾನ್ ಸಾಧಕರಾದ ಶ್ರೀನೀಲಂಗಿ ನಾರಾಯಣಾಚಾರ್ಯರ ಶಿಷ್ಯರೂ , ಕನಸಿನಲ್ಲಿ ಪಾಂಡುರಂಗನ ದರ್ಶನ ಪಡೆದವರು, ರಾಯರ ಪರಮಾನುಗ್ರಹಪಾತ್ರರು, ಅಪರೋಕ್ಷಜ್ಞಾನಿಗಳು, ದಾಸ ಸಾಹಿತ್ಯಕ್ಕೆ ಪರಮೋತ್ಕೃಷ್ಟ ಸೇವೆಯನ್ನು ಮಾಡಿದವರಾದ ಶ್ರೀ ಮಣೂರು ಹನುಮದಾಸರು.
****
ಶ್ರೀ ಮಣೂರು ಹನುಮದಾಸರು
ಕೇಶವನ ಪರಮಪುಣ್ಯಕ್ಷೇತ್ರವಾದ ಮಣೂರಿನಲ್ಲಿ 19ನೇ ಶತಮಾನದ ಮೊದಲ ಭಾಗದಲ್ಲಿ ಶ್ಯಾಮಾಚಾರ್ಯ, ಚಿಮಣಾಬಾಯಿ ದಂಪತಿಗಳು ಕೇಶವದೇವರ ಸೇವೆಮಾಡಿದ ಫಲದ ವರಪ್ರಸಾದವೇ ನಮ್ಮ ಶ್ರೀ ಹನುಮದಾಸರು... ಇವರ ವಿದ್ಯಾಭ್ಯಾಸ, ಶಾಸ್ತ್ರಾಭ್ಯಾಸ ಎಲ್ಲವೂ ಅಪರೋಕ್ಷಜ್ಞಾನಿಗಳಾದ, ಇವರ ಮುತ್ತಾತಂದಿರಾದ, ಶ್ರೀ ರಾಮಾಚಾರ್ಯರಲ್ಲೇ ಆಗಿತ್ತು.... ಸಣ್ಣ ವಯಸ್ಸಿನಲ್ಲೇ ತಂದೆತಾಯಿಯರನ್ನ ಕಳೆದುಕೊಂಡ ಶ್ರೀ ಹನುಮಂತಾಚಾರ್ಯರು, ನಂತರದಲಿ ಸೋದರಮಾವಂದಿರ ಮನೆಯಲ್ಲಿ ಸೇರಿಕೊಂಡರು... ಹೀಗೊಮ್ಮೆ ಸೋದರಮಾವಂದಿರೊಂದಿಗೆ ಮಹಾರಾಷ್ಟ್ರ ಕಡೆಯ ಗ್ರಾಮ ನೀಲಂಗಿ (ಲಾತೂರ್ ಹತ್ರ) ಗೆ ಸೇರಿದರು.... ಅಲ್ಲಿ ಯಾತ್ರಾರ್ಥಿಗಳಿಗೆ ಉಪಚರ್ಯಗಳನ್ನು ಮಾಡುವ ಮಹಾನುಭಾವರಾದ ಶ್ರೀ ನೀಲಂಗಿ ನಾರಾಯಣಾಚಾರ್ಯರ ಮನೆಯಲ್ಲಿ ಶ್ರೀ ಹನುಮಂತಾಚಾರ್ಯರು ಅವರ ಇಬ್ಬರೂ ಸೋದರಮಾವಂದಿರು ಬಿಡಾರ ಮಾಡಿದರು ... ಮನೆ ಒಳಗಡೆ ಬರುವಾಗ ಹಾದಿಯಲ್ಲಿ ಶ್ರೀ ಹನುಮಂತದಾಸರಿಗೆ ಮುಳ್ಳು ಚುಚ್ಚಿದಕಾರಣ ಕುಂಟುತ್ತ ಬರ್ತಿರುವುದು ಶ್ರೀ ನೀಲಂಗಿ ಆಚಾರ್ಯರು ನೋಡಿ ಅವರನ್ನು ಕರೆದು ಮುಳ್ಳು ಚುಚ್ಚಿದ ಪಾದವನ್ನು ತೊಳೆದು ಮುಳ್ಳನ್ನು ತೆಗೆದು, ಇದು ಸಾಧನೆಗಾಗಿ ಹುಟ್ಟಿ ಬಂದ ಪಾದ ಅಂತ ಹೇಳ್ತಿರುವಾಗಲೇ ಶ್ರೀ ಹನುಮದಾಸರಿಗೂ ಮಹಾನುಭಾವರ ಸ್ಪರ್ಶೆದಿಂದ ಜ್ಞಾನವು ಪ್ರಕಾಶಮಾನವಾಗಿ ಒಂದು ರೀತಿಯ ರೋಮಾಂಚನ ಉಂಟಾಗಿತ್ತು... ಆದಿನ ಏಕಾದಶಿಯಾದ ಕಾರಣ, ಮರುದಿನ ಬೆಳಗ್ಗೆ ಸ್ನಾನ, ಪೂಜಾದಿಗಳು ಇಲ್ಲೇ ಬಂದು ಮಾಡುವಿಯಂತೆ ಬೇಗ ಬಾ ಮಂತ್ರೋಪದೇಶ ಮಾಡುವೆನು ಎಂದು ಶ್ರೀ ಹನುಮದಾಸರಿಗೆ ಶ್ರೀ ನೀಲಂಗಿ ಆಚಾರ್ಯರು ಹೇಳಿ ಕಳಿಸಿದರು.. ಮರುದಿನ ಹೇಳಿದ ಸಮಯಕ್ಕೆ ಬಂದ ಶಿಷ್ಯನಿಗೆ ದೇವರ ಪೂಜೆ ಮಾಡು ಎಂದು ಹೇಳಿ , ಪೂಜೆಯ ನಂತರ ಬಿಂಬನನ್ನು ಧ್ಯಾನಿಸುತ್ತಾ ಮಂತ್ರೋಪದೇಶವನ್ನು ಮಾಡಿ ಹನುಮದ್ದಾಸ ಎಂದು ನಾಮಾಂಕಿತವನ್ನು ನೀಡಿ, ನೀನು ಈಗ ಮಾಡುವ ಯಾಚನಾವೃತ್ತಿಯನ್ನು ಬಿಟ್ಟು, ಊರಿನಲ್ಲಿನ ಪ್ರಾಣದೇವರ ದೇವಸ್ಥಾನದಲ್ಲಿ ಪೂಜಾದಿಗಳು ಮಾಡಿಕೊಳ್ಳುತ್ತಾ, ಅಲ್ಲಿಯೇ ನಿಮ್ಮಲ್ಲಿನ ದಾಸಕೂಟದ ವೃದ್ಧರ ಸಂಗವನ್ನು ಮಾಡಿ ದಾಸಸಾಹಿತ್ಯದ ಹಿರಿಮೆಯನ್ನು ಅರಿಯಲೆಂದು ಹೇಳಿ ಆಶೀರ್ವಾದ ಮಾಡಿ ಮತ್ತೆ ಮಣೂರಿಗೆ ಕಳಿಸಿದರು ಶ್ರೀ ನೀಲಂಗಿ ನಾರಾಯಣಾಚಾರ್ಯರು...
ಅಲ್ಲಿಂದ ಹಿಂತಿರುಗಿದ ಶ್ರೀ ಹನುಮದ್ದಾಸರು ಜಪ,ತಪ ಅನುಷ್ಟಾನಗಳಲ್ಲಿ ನಿರತರಾದರು. ಅಲ್ಲದೆ ತೀರ್ಥಕ್ಷೇತ್ರಗಳಿಗೆ ಯಾತ್ರೆಗೆ ಹೋಗಿ ಅಲ್ಲಿನ ಎಲ್ಲಾ ಸಜ್ಜನರಿಗೆ ದಾಸ ಸಾಹಿತ್ಯದ ಉಪದೇಶ ಮಾಡುತ್ತಾ ಸಂಚಾರ ಮಾಡ್ತಿದ್ದರು.. ಹೆಚ್ಚಾಗಿ ತಿರುಪತಿ, ಮಂತ್ರಾಲಯಕ್ಕೆ ಹೋಗುತ್ತಿದ್ದರು.
ತಮ್ಮ ತಪಶ್ಶಕ್ತಿಯಿಂದ ಶರಣಾಗಿ ಬಂದ ಭಕ್ತರ ಕಷ್ಟಗಳನ್ನು ಪರಿಹಾರ ಮಾಡ್ತಿದ್ದರು. ಸಂತಾನದ ಭಾಗ್ಯಕ್ಕಾಗಿ ಆಶೀರ್ವಾದ ಮಾಡಿದ್ದು, ಅನಾರೋಗ್ಯದ ಪರಿಹಾರ ಮಾಡಿದ್ದನ್ನು ಇತ್ಯಾದಿ ಅನೇಕ ಘಟನೆಗಳನ್ನು ಇಂದಿಗೂ ಜನರು ಹೇಳುತ್ತಾರೆ.
ಶ್ರೀ ಹನುಮದ್ದಾಸರು ಸ್ವತಃ ಸಾಹಿತ್ಯದ ರಚನೆ ಮಾಡದೇ ಇದ್ದರೂ ಇಡೀ ಜೀವನದಲ್ಲಿ ದಾಸ ಸಾಹಿತ್ಯದ ಸೇವೆ, ಭಜನೆ ಆರಾಧನಾ ಕಾರ್ಯಗಳನ್ನು ನಡೆಸುಕೊಂಡು ಬಂದವರಾಗಿದ್ದರು.. ಇವರ ಶಿಷ್ಯ ಸಂಪತ್ತಿನಲ್ಲಿ ಶ್ರೀ ಚಂಡರಕಿ ರಾಘವೇಂದ್ರ ದಾಸರು, ಶ್ರೀ ಬೂದಿಹಾಳ ಅನಂತಾಚಾರ್ಯ, ಹೊಸಪೇಟೆಯ ವಕೀಲರಾದ ಕಣಿವೆಹಳ್ಳಿ ನಾರಾಯಣರಾಯರು, ಮುದ್ದೇಬಿಹಾಳ್ ವೆಂಕಟರಾವು, ಶ್ರೀನಿವಾಸರಾವ್ ಅವರೂ, ಗುರಮಿಟಕಲ್ ಶ್ರೀ ಗುಂಡಾಚಾರ್ಯ, ತಿರುಪತಿಯ ಶ್ರೀವತ್ಸವಿಠಲರು, ಗಲಗಲಿ ರಾಜಣ್ಣನವರು, ಹರಿದಾಸಿ ತಾಯಿ ಪಳ್ಳೇ ಕೃಷ್ಣವೇಣಮ್ಮನವರು ಇನ್ನೂ ಸಾಕಷ್ಟು ಜನ ಶ್ರೇಷ್ಠರಿದ್ದಾರೆ....
ಹರಿದಾಸರಿಗೆ ಶಿಷ್ಯರೇ ಮಕ್ಕಳು ಎಂಬಂತೆ ದಾಸರ ನಿರ್ಯಾಣದ ಸಮಯದಲ್ಲಿ ಸಹಾ ಶಿಷ್ಯವೃಂದವೇ ಹತ್ರ ಇದ್ದಿತ್ತಂತೆ...
ನೋಡಿ ಈ ವಿಷಯವೂ ಸಹಾ ರೋಮಾಂಚನ...
ಪ್ರತೀ ದಾಸಾರ್ಯರ ಆರಾಧನೆಯನ್ನ ಮಣೂರಿನಲ್ಲಿ ಮಾಡುವ ದಾಸಾರ್ಯರು ಮೊದಲ ಸಲ ಶ್ರೀಮತ್ಪುರಂದರದಾಸಾರ್ಯರ ಆರಾಧನೆಯನ್ನು ಕೃಷ್ಣಾತೀರದಲ್ಲಿ ಶಿಷ್ಯರ ಬೇಡಿಕೆಯಂತೆ ಮಾಡಲು ನಿಶ್ಚಯಿಸಿ ಕೃಷ್ಣಾತೀರಕ್ಕೆ ಬಂದಿರ್ತಾರೆ. ಅಲ್ಲಿ ಕ್ಷಯರೋಗ ಪೀತಿಡರಾದ ಶ್ರೀ ಮುಡಮಾಲಿ ರಾಮಾರ್ಯರು ದಾಸರಬಳಿ ಬಂದು ಅನುಗ್ರಹ ಮಾಡಬೇಕೆಂದು ಕೇಳಿದಾಗ, ಪ್ರಾರಬ್ಧ ಅನುಭವಿಸಲೇಬೇಕು ಎಂದು ದಾಸರು ಹೊರಟುಹೋಗ್ತಾರೆ. ಮರುದಿನ ಇನ್ನು ಸಾವು ತಪ್ಪದು ಅಂತ ನಿರ್ಧಾರಕ್ಕೆ ಬಂದ ಶ್ರೀ ರಾಮಾರ್ಯರು ಶ್ರೀಮತ್ಪುರಂದರದಾಸರ ಆರಾಧನೆ ನಡೆಯುವ ಜಾಗಕ್ಕೆ ಹೋದರು.. ಪೂರ್ತಿ ಜೀರ್ಣಾವಸ್ಥೆಯಲ್ಲಿದ್ದ ಶರೀರವನ್ನು ಜನರ ಸಹಾಯದಿಂದ ಎಳೆದುಕೊಂಡು ಬಂದಂತಾಗಿ ಶ್ರೀ ದಾಸರ ಪಾದಗಳ ಮೇಲೆ ಬಿದ್ದುಬಿಡ್ತಾರೆ.. ಆಗ ದಾಸರಂತಾರೆ ಭಯಪಡಬೇಡಪ್ಪಾ, ಶ್ರೀಮತ್ಪುರಂದರದಾಸರು ನಿನ್ನಿಂದ ಸೇವೆ ತಗೋಬೇಕು ಅಂತಿದ್ದಾರೆ. ಹೀಗಾಗಿ ಅವರ ಸೇವೆ ಮಾಡ್ತಿನಿ ಅಂತ ನಿರ್ಧಾರ ಮಾಡಿಕೋ ಜೀವ ಉಳಿತದೆ ಅಂತಾರೆ.. ರಾಮಾರ್ಯರಂತಾರೆ ಸ್ವಾಮೀ ! ನೀವು ಏನೇ ಹೇಳಿ ಅದನ್ನು ನಾ ಮಾಡ್ತಿನಿ ಅಂತ...
ಶ್ರೀ ದಾಸಾರ್ಯರ ಆಜ್ಞೆಯಂತೆ ರಾಮಾರ್ಯರು ತಮ್ಮಲ್ಲಿನ ಶ್ರೀ ಪ್ರಾಣದೇವರಿಗೆ ನಿತ್ಯವೂ ಸುಂದರಕಾಂಡದಿಂದ ಅನುಷ್ಠಾನಪೂರ್ವಕವಾಗಿ ಅಭಿಷೇಕ ಮಾಡಿ ಆ ತೀರ್ಥವನ್ನು ತೆಗದುಕೊಳ್ಳಲು ಆರಂಭಮಾಡ್ತಾರೆ.. ಹೀಗೆ ಶ್ರೀ ದಾಸಾರ್ಯರು ಹೇಳಿದಷ್ಟು ದಿನ ನಿತ್ಯ ಪೂಜೆ, ಅಭಿಷೇಕ ಮಾಡಿ ತೀರ್ಥ ಸೇವನದಿಂದ ವ್ಯಾಧಿಯಿಂದ ಗುಣಮುಖರಾಗ್ತಾರೆ.. ಶ್ರೀ ದಾಸರು ಹೇಳಿದ ದಿನಕ್ಕೆ ಮೃತ್ಯುಪರಿಹಾರವಾಗಿರ್ತದೆ, ನಂತರವೂ ಸೇವೆ ಮುಂದೆವರಿಸಿದ ರಾಮಾರ್ಯರ ಕನಸಿನಲಿ ಕಪ್ಪು ಬಣ್ಣದ, ದ್ವಾದಶನಾಮಗಳನ್ನು, ಊರ್ಥ್ವ ಪುಂಡ್ರಗಳನ್ನು ಧರಿಸಿದ ಒಬ್ಬ ಬ್ರಾಹ್ಮಣ ಬಂದು ಮೈಯೆಲ್ಲಾ ಕೈ ಆಡಿಸಿ ಹೋಗಿರುತ್ತಾರೆ. ಎಚ್ಚರ ಗೊಂಡು ನೋಡಲು ಯಾರೂ ಕಾಣ್ಸಿರೋಲ್ಲ. ಅಂದಿನಿಂದ ಪೂರ್ತಿ ಗುಣಮುಖರಾಗುತ್ತಾರೆ ಶ್ರೀ ರಾಮಾರ್ಯರು. ನಂತರದ ಮೂರು ನಾಲ್ಕು ತಿಂಗಳನಂತರ ಮತ್ತೆ ಶ್ರೀಮತ್ಪುರಂದರದಾಸರ ಆರಾಧನೆ ಬಂದಿರ್ತದೆ. ಆಗ ದಾಸರನ್ನು ಪ್ರಾರ್ಥಿಸಿ ಈ ಸಲ ಆರಾಧನೆ ಮಂತ್ರಾಲಯದಲ್ಲಿ ಮಾಡಲು ದಯಪಾಲಿಸಬೇಕಂತಾರೆ. ಆಗ ಶ್ರೀ ದಾಸಾರ್ಯರು ಒಪ್ಪಿ , ಮಂತ್ರಾಲಯಕ್ಕೆ ಬಂದು ಅಲ್ಲಿ ರಾಮಾರ್ಯರ ಆಧ್ವರ್ಯದಲ್ಲಿಯೇ ಆರಾಧನೆ ನಡೆಸಿರುತ್ತಾರೆ..
ಆ ದಿನ ರಾತ್ರಿ ಭೋಜನಾನಂತರ ಶ್ರೀ ಹನುಮದ್ದಾಸರು ಏಕಾಂತದಲ್ಲಿ ರಾಯರ ಪ್ರಾರ್ಥನ ಮಾಡಿಕೊಂಡು, ಮಂಗಳಾರತಿ ತೆಗದುಕೊಂಡು ತಾವಿದ್ದ ಜಾಗಕ್ಕೆ ಹೋಗಿ ಮಲಗಿರ್ತಾರೆ.. ಆಗ ರಾಯರ ಪೂಜೆ ಮಾಡ್ತಿರುವ ಶ್ರೀ ವೇದವ್ಯಾಸಾಚಾರ್ಯರ ತಂದೆಯವರಾದ ರಾಮಾಚಾರ್ಯರಿಗೆ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರು ಸ್ವಪ್ನದಲ್ಲಿ ಕಾಣಿಸಿ, ನಮ್ಮ ವೃಂದಾವನದಲ್ಲಿ ಇರುವಂತಹಾ ತಾಂಡವಕೃಷ್ಣ ಪ್ರತಿಮೆಯನ್ನು ಹನುಮದಾಸರಿಗೆ ನೀಡಬೇಕೆಂದು ತಿಳಿಸಿರುತ್ತಾರೆ..
ಮರುದಿನ ಪ್ರಾತಃಪೂಜೆಯನ್ನು ಮುಗಿಸಿ ಪ್ರದಕ್ಷಿಣೆ ಮಾಡಲು ಬಂದ ದಾಸರನ್ನು ಕರೆದು ಸ್ವಪ್ನ ವೃತ್ತಾಂತವನ್ನು ತಿಳಿಸಿ, ತಮ್ಮ ಪುತ್ರರಾದ ಶ್ರೀ ವೇದವ್ಯಾಸಾಚಾರ್ಯರ ಕೈಯಿಂದಲೇ ಶ್ರೀ ದಾಸಾರ್ಯರ ಉಡಿಯಲ್ಲಿ ಫಲಮಂತ್ರಾಕ್ಷತೆ ಜೊತೆ ಹಾಕಿಸುತ್ತಾರೆ... ಇದನ್ನು ಕಂಡ ಶ್ರೀ ದಾಸಾರ್ಯರು, ಮತ್ತೆ ಅವರ ಶಿಷ್ಯ ವೃಂದ ಪರಮಾನಂದಭರಿತರಾಗಿ, ಅಂದಿನ ಹಸ್ತೋದಕಸೇವೆಯನ್ನು ತಾವೇ ನಿರ್ವಹಿಸಿ, ಶ್ರೀ ರಾಯರ ಸೇವೆಯನ್ನು ಮಾಡಿದರಂತೆ...
ಶ್ರೀ ರಾಯರ ಅನುಗ್ರಹದಂತೆ ಬಂದಿರುವ ತಾಂಡವಕೃಷ್ಣನನ್ನು ಪೂಜಿಸುತ್ತಾ ದಾಸಾರ್ಯರು ಮೈಮರೆತುಹೋಗ್ತಿದ್ದರಂತೆ..
ಹೀಗೆ ಸದ್ಭಕ್ತರಿಗೆ ಸದಾ ಒಲಿದು ಬರುವ , ಇಂತಹ ಮಸಾನುಭಾವರಿಗೆ ಅವರನ್ನು ನಮಗೆ ದಯಪಾಲಿಸಿದ ಪರಮಾತ್ಮನಿಗೆ ನಾವು ಏನು ತಾನೆ ನೀಡಲು ಸಾಧ್ಯ.. ನಿಸ್ವಾರ್ಥ
ಭಕ್ತಿಯಿಂದ ಪೂಜೆ, ಸ್ಮರಣೆ ಮಾಡುವದೊಂದು ಹೊರತು.. ಅಲ್ಲವೇ?
ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಸಮೂಹದ ಎಲ್ಲಾ ಸಜ್ಜನರಮೇಲಿರರೆಂದು ಅವರಲ್ಲಿ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಧನ್ವಂತರೀ ರೂಪೀ ಪರಮಾತ್ಮನ ಅನುಗ್ರಹವಾಗಲೆಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
No comments:
Post a Comment