Wednesday, 14 April 2021

sukhanidhi vittalaru yeri narayanacharyaru magha shukla dwiteeya ಸುಖನಿಧಿವಿಠಲರು ಏರಿ ನಾರಾಯಣಾಚಾರ್ಯರು


Sukhanidhi Vittalaru

Aradhane: magha shukla dwiteeya or triteeya


" ಈ ದಿನ  - 13.02.2021 - ಶ್ರೀ ಸುಖನಿಧಿ ವಿಠಲರ ಆರಾಧನಾ ಮಹೋತ್ಸವ "

ಸಂಸ್ಕೃತದ ಕಬ್ಬಿಣದ ಕಡಲೆಯ ರೂಪವಾದ ಪ್ರಮೇಯಗಳನ್ನು ವ್ಯಾಸ ಕೂಟ ಭಕ್ತಿಯ ಸೂತ್ರಗಳನ್ನು ಮಾರ್ಗದರ್ಶನ ಮಾಡಿಸಿತು. 

ದಾಸ ಕೂಟ ಅದೇ ಭಕ್ತಿ ರಸವನ್ನು ಸರಳ ಕನ್ನಡವಾದ ಜಾನಪದದ ಆಡು ಭಾಷೆಯಲ್ಲಿ ಪ್ರಮೇಯಭರಿತ ಪದಗಳನ್ನು ರಚಿಸಿ ಜನ ಸಾಮಾನ್ಯರಿಗೂ ತಲುಪುವಂತೆ ಮಾಡಿತು. 

ಇದುವೇ ಹರಿದಾಸ ಸಾಹಿತ್ಯದ ಹಿರಿಮೆ. 

ದಾಸ ಕೂಟದ ಪ್ರವರ್ತಕರು ಸಾಕ್ಷಾತ್ ಶ್ರೀ ಮಹಾಲಕ್ಷ್ಮೀ ದೇವಿಯರೂ - ಶ್ರೀ ಚತುರ್ಮುಖ ಬ್ರಹ್ಮದೇವರು -  ಶ್ರೀ ವಾಯುದೇವರು. ( ಶ್ರೀ ಹನುಮ ಭೀಮ ಮಧ್ವರು )'

ಶ್ರೀ ಮಧ್ವಾಚಾರ್ಯರಿಂದ ಪ್ರಾರಂಭವಾದ ಈ ಭಕ್ತಿ ಸಾಹಿತ್ಯವು ಶ್ರೀ ನರಹರಿತೀರ್ಥರಿಂದ ಹರಿದಾಸ ಪಂಥ ಪ್ರಾರಂಭವಾಯಿತು. 

ಇದರಿಂದ ಸರಳ ಕನ್ನಡ ಭಾಷೆಯ ಸಾಹಿತ್ಯ ಗಂಗೆಯ ಪ್ರವಾಹ ಪ್ರಾರಂಭವಾಯಿತು. 

ಮುಂದೆ ಈ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀ ಜಯತೀರ್ಥರು - ದಾಸ ಸಾಹಿತ್ಯದ ಆದ್ಯರು -  ಶ್ರೀ ವಿಬುಧೇಂದ್ರತೀರ್ಥರು - ಶ್ರೀ ಶ್ರೀಪಾದರಾಜರು ಮತ್ತು ಶ್ರೀ ವ್ಯಾಸರಾಜರು ಮುಂದುವರೆಸಿದರು. 

ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರೆಂಬ ಅನರ್ಘ್ಯ ರತ್ನಗಳನ್ನು ಕೊಟ್ಟು ಹರಿದಾಸ ಸಾಹಿತ್ಯ ಉಗಮಕ್ಕೆ ಕಾರಣರಾದರು. 

ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ಸೂಕ್ತ ಸ್ಥಾನವನ್ನು ಕಲ್ಪಿಸಿ ಕೊಟ್ಟವರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು.

ಜಾನಪದ ಶೈಲಿಯಲ್ಲಿ ಪದ - ಪದ್ಯ - ಸುಳಾದಿ - ಉಗಾಭೋಗಗಳನ್ನು ರಚಿಸಿ ರಾಗಬದ್ಧವಾಗಿ ಹಾಡಿ ಸಂಗೀತವನ್ನೂ ಪ್ರಸಿದ್ಧಿಗೆ ತಂದರು. 

ಇನ್ನು ಶ್ರೀ ವಿಜಯರಾಯರು ಮತ್ತು ಶಿಷ್ಯ ಪ್ರಶಿಷ್ಯರು ಹರಿದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅದ್ಭುತ. 

ಶ್ರೀ ಪ್ರಾಣೇಶದಾಸರ ಸತ್ಪರಂಪರೆಯಲ್ಲಿ ಬಂದ ಶ್ರೀ ಶ್ರೀಶ ಪ್ರಾಣೇಶ ದಾಸರ ಪ್ರೀತಿಯ ಶಿಷ್ಯರೇ ನಮ್ಮ ಇಂದಿನ ಕಥಾನಾಯಕರೂ, 

ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಸುಖನಿಧಿ ವಿಠಲರು. 

" ಶ್ರೀ ಸುಖನಿಧಿ ವಿಠಲರ ಸಂಕ್ಷಿಪ್ತ ಮಾಹಿತಿ "

ಹೆಸರು : ಶ್ರೀ ಏರಿ ನಾರಾಯಣಾಚಾರ್ಯರು 

ಸ್ಥಳ : ಕರ್ಜಗಿ  

ಕಾಲ : 19 - 20ನೇ ಶತಮಾನದ ಮಧ್ಯಕಾಲ 

ಅಂಕಿತ : ಶ್ರೀ ಸುಖನಿಧಿವಿಠಲ 

ಉಪದೇಶ ಗುರುಗಳು : ಶ್ರೀ ಶ್ರೀಶ ಪ್ರಾಣೇಶ ದಾಸರು 

ಕೃತಿಗಳು :  09

ರಾಗ : ಸಾರಂಗ  ತಾಳ : ಝ೦ಪೆ 

ಜನನ ಮರಣ 

ಬಿಡಿಸೋ ವನಜನಾಭ ।

ಇನಕೋಟಿ ತೇಜ ಯೆನ-

ಗನುಕೂಲ ದೋರಿ ।। ಪಲ್ಲವಿ ।।  

ಕೆಟ್ಟ ವಿಷಯಂಗಳು 

ಯನಗಿಷ್ಟವೆಂದಾಚಾರಿಸಿ ।

ಬಟ್ಟೆಗೆಟ್ಟೆನೋ ದೇವ ಭ್ರಷ್ಟತನದಿ ।

ದುಷ್ಟ ಸೇವೆಯ ಮಾಡಿ 

ಕಷ್ಟ ಪಡವರೇ ಸ್ವಾಮಿ ।

ನಷ್ಟ ತುಷ್ಟಿಗಳಿಗಿದು ಶ್ರೇಷ್ಠ 

ಭಕುತಿಯನಿತ್ತು ।। ಚರಣ ।।

ಹಿಂದಿನಂದದಿ ತಂದೆ 

ಇಂದು ನೀ ಮರೆದರೆ ।

ನಂದ ಕಾಂಬುವ-

ಧ್ಯಾ೦ಗೋ ಇಂದಿರೇಶ ।

ಸಂದೇಹ ಮಾಡದಲೇ 

ಹೊಂದಿದವರೊಳ-

ಗೆಣಿಸಿ ಭವ ।

ಬಂಧನವ ಹರಿಸಿ ಪೊರೆ । ಗೋ । 

ವಿಂದ ಗೋವಳರಾಯ ।। ಚರಣ ।।

ಮೋದತೀರ್ಥರ 

ಶಾಸ್ತ್ರ ಆದರದಿ ತಿಳಿಸಿ ।

ಭೇದ ಪಂಚಕ ಮರ್ಮ ಬೋಧಿಸಿ ।

ಮೊದಮಯನಾದ 

ಸಿರಿ ಸುಖನಿಧಿ ವಿಠಲನೇ ।

ಹಾದಿ ತೋರುವನೆಂದು 

ಪಾದಕೆರಗಿದ ಬಳಿಕ ।। ಚರಣ ।।

*****

ರಾಗ : ಮೋಹನ   ತಾಳ : ಆದಿ 

ಧಣಿ ಇವನೇ ನಮ್ಮ ಧಣಿ ಧಣಿ ಜೀವರಿಗೆ ।

ಹೊಣಿ ವಜ್ರದಾ ಖಣಿ ದೇವ । ಶಿಖಾ ।

ಮಣಿ ಪ್ರಾಣೇಶ ನಮ್ಮ ।

ನಮ್ಮ ಧಣಿ ಇವನೇ ।ನಮ್ಮ ಧಣಿ ।। ಪಲ್ಲವಿ ।।

... ವಾರಿಜೋದ್ಭವನ ಪಟ್ಟಕ್ಕೆ ಅರ್ಹನು ।

ಶ್ರೀ ರಮಣ ಸುಖನಿಧಿ ವಿಠಲನ್ನ ।

ಚಾರು ಚರಣಾಬ್ಜ ಭೃಂಗ 

ಧೀರ ಮೂರುತಿ ನಮ್ಮ ಧಣಿ ।। 5 ।।

***

ರಾಗ : ನಾದನಾಮಕ್ರಿಯ  ತಾಳ : ಆದಿ 

ಕಾಕಾಗಿಹೆನೊ ನಾನು ಕಲುಷ ಭವದಿ ।

ಕಾಕಾಗಿಹೆನೊ ನಾನು ।

ಲೋಕ ಮಹಿತ ಹರಿ  ಬೇಕಾದ 

ಭಕುತರಿಗೆ ನಾಕಾದಿ ಪದವಿತ್ತ ।। ಪಲ್ಲವಿ ।।

.... ಇವರಂತೆ ನಾನಲ್ಲ ಇವರ ದಾಸರ ದಾಸ ।

ತವಕದಿ ಪೊರೆಯೆನ್ನ ಸುಖನಿಧಿ ವಿಠಲ ।। 5 ।।

** 

ರಾಗ : ಸಾರಂಗ    ತಾಳ : ಝ೦ಪೆ 

ನರಸಿಂಹ ಪಾಲಿಸೆನ್ನ ನೀ ಕರುಣಾ ।

ಪರಿಪೂರ್ಣ ಶರಣರ ದಯದಿಂದ ।। ಪಲ್ಲವಿ ।।

... ಪರಮಾ ಪುರುಷಾ ವರದಾನಾ

 ಶ್ರೀತನಾ ತೊರೆಯಲ್ ।

ಸಿರಿ ವರದನೆ ಪೊರೆ 

ಯನ್ನನೆ ಸುಖನಿಧಿವಿಠಲನೇ ।। 3 ||

** 

" ದಶಾವತಾರ ಸ್ತುತಿ "

ಮೊದಲು ವೇದವ ತಂದ ಮತ್ಸ್ಯಾವತಾರದಿ  ।

ಮೇಲ್ಗಿರಿಯ ಪೊತ್ತು ಕೂರ್ಮ ನಾಮದಿ ।

ಒಲಿದು ಭೂಮಿಯ ತಂದು ವರಾಹ ರೂಪದಿ ।

ಬಾಲನ ಸಲುಹಿದ ಚಳುವ ನರಹರಿಯೇ ।। ೧ ।।

ಬಲಿಯ ದಾನವ ಬೇಡಿ ಛಲದಿ ಕ್ಷತ್ರಿಯರ ।

ಕುಲವೆಲ್ಲ ಸಂಹರಿಸಿ ರಾಮನಾದಿ ।

ಹಾಲು ಮೊಸರು ಬೆನ್ನಿ ಲೀಲೆಯಿಂದಲಿ ತಿಂದು ।

ಲೋಲಾಕ್ಷಿಯರ ಗೂಡಿದಾ ಬಾಲ ಗೋಪಾಲಾ ।। ೨ ।।

ತ್ರಿಪುರರ ಸತಿಯರ ವ್ರತಗೆಡಿಸಿ ಬೇಗ ।

ಚಪಲ ತನದಿ ಅಶ್ವ ರೂಢನಾಗಿ ।

ಕೃಪಣ ವತ್ಸಲ ನಮ್ಮ ಸುಖನಿಧಿವಿಠಲನ ।

ಅಪರಿಮಿತ ಮಹಿಮೆಗೆ ನಮೋ ಎಂಬೆವೀಗ ।। ೩ ।।

**

ರಾಗ ಆನಂದಭೈರವಿ  ತಾಳ : ಅಟ್ಟ 

ಎಂದೆಂದ್ಯಾವದು ಒಲ್ಲೆ ಇಂದಿರಾಧವ ನಿಮ್ಮ ।

ಪೊಂದಿ ಪೊಗಳುವಂಥ ಸುಂದರದಾಸರ ಪಾದ ।

ದ್ವಂದ್ವ ಸೇವೆಗಳ ಹೊರತೊಂದು ।। ಪಲ್ಲವಿ ।।

... ಸತ್ತು ಹುಟ್ಟುವುದು ಒಲ್ಲೆನೊ ಸತತ ।

ಭ್ರಷ್ಟ ಸಂಗದಿ  ಇರಲೊಲ್ಲೆನೊ ।

ಸೃಷ್ಟಿಗೊಡೆಯ ತಂದೆ 

ಸುಖನಿಧಿವಿಠಲ ನಿನ್ನ ।

ಅಷ್ಟು ಸ್ಥಳದಿ ಕಾಂಬ ಶ್ರೇಷ್ಠರ 

ಸೇವೆಯ ಹೊರತು ।। 3 ।।

*** 

ರಾಗ : ಕಲ್ಯಾಣಿ  ತಾಳ : ರೂಪಕ 

ಯಾಕೆ ಮಾತುಗಳಾ-ಡುವೆಯೊ । ವಿ ।

ವೇಕ ಶೂನ್ಯನೆ ।ಈ ಲೋಕದಿ ।। ಪಲ್ಲವಿ ।।

ಶ್ರೀಕರಾರ್ಚಿತ ಹರಿ ಪದ ಸ್ವೀಕರಿಸದೆ ।

ಲೋಕ ನಿಂದ್ಯ ಕಾಕು ಮನುಜ ।। ಅ ಪ ।।

... ಹರಿ ಮುಖ ಸುರ-ರೊಡೆಯ ನಮ್ಮ ।

ಸಿರಿ ಸುಖನಿಧಿವಿಠಲನ್ನ ।

ಚರಣಾಶ್ರಯದಲೆ ಅವನ ।

ಸರಿಯಾಗುವೆನೆಂದೆನೆ ನಿತ್ಯ 

ನಿರಯದಿ ನಿನ್ನಿರಿಸತಿಹರು ।। 3 ।।

**

ರಾಗ : ಶಂಕರಾಭರಣ  ತಾಳ : ಆದಿ 

ಚಿಂತಿಪುದ್ಯಾತಕೋ ಮನವೇ ಸಂತತ ।

ಅಂತರಂಗದಿ ಸಿರಿ ಕಾಂತನೇ 

ತಾ ನಿಂತು ಆದ್ಯಂತ ।

ತಿಳಿದು ನಿನ್ನ ಪ್ರಾಂತ - 

ಗಾಣಿಸುವನು ।। ಪಲ್ಲವಿ ।।

ಮೋದತೀರ್ಥರ 

ಉಕುತಿನಾದರದಲಿ ।

ಮೋದದಿಂ ಮಾಡೋ ಭಕುತಿ ।

ಶ್ರೀದ ಸುಖನಿಧಿವಿಠಲನ್ನ 

ಪಾದವ ಭಜಿಸದೆ ।

ಖೇದಗಳಿಗೊಳಗಾಗಿ 

ಮಾಧವನ ಮರೆದು ನೀ ।। 3 ।।

*****

ರಾಗ : ದರ್ಬಾರಿ  ತಾಳ : ದೀಪಚಂದ್ 

ವಂದೇ ಮನದಿ ಬೇಡುವೆ ನಿನ್ನ ಇಂದಿರಾಪತಿ ಕೃಷ್ಣಾ ।

ನಂದತೀರ್ಥ ದ್ವಾರ ಸಂದರುಶನ ಸುಖ ।। ಪಲ್ಲವಿ ।।

.... ದುರುಳ ವಿಷಯಾಸಕ್ತಿ ಕರಣ ಮನಗಳನೊಲ್ಲೆ ।

ಹರಿದಾಸ್ಯ ರಹಿತ ನಾರಾ ಸಂಗವಲ್ಲೆ ।

ಸ್ಮರಣೆ ಸರ್ವದಾ ಕಲಿಸಿ ಕಲಿಸಿ ನಿನ್ನಪರೋಕ್ಷ ।

ಕರೆಸು ವೈಕುಂಠಕ್ಕೆ ಸುಖನಿಧಿವಿಠಲಾ ।। 3 ।।

ಶ್ರೀ ಸುಖನಿಧಿ ವಿಠ್ಠಲರ ಪದಗಳಲ್ಲಿ ರಸವು ಮಡುವುಗಟ್ಟಿದೆ. 

ಭಕ್ತಿಯು ಕೋಡಿಗಟ್ಟಿ ಹರಿದಿದೆ. ತಿಳಿಯಾದ ಭಾಷೆ, ಶೈಲಿ ಓಜಸ್ವಿಯಾಗಿದೆ.

ನಯವಾದ ಭಾವ, ಸವಿಯಾದ ಬಂಧದಿಂದ ಚಂದ ಚಲುವನಾಂತು ಶ್ರೀ ಸುಖನಿಧಿ ವಿಠ್ಠಲರ ಪದ್ಯಗಳು ಚೇತೋಹಾರಿಯಾಗಿವೆ  

ಶ್ರೀ ರಮಾಪತಿವಿಠಲರು ( ನರೆಗಲ್ಲು ಶ್ರೀ ರಾಮದಾಸರು ) ಮತ್ತು ಶ್ರೀ ಸುಖನಿಧಿ ವಿಠಲರು ( ಶ್ರೀ ಏರಿ ನಾರಾಯಣಾಚಾರ್ಯರು ) ಇಬ್ಬರೂ ಕರ್ಜಗಿ ದಾಸಾರ್ಯರಾದ ಶ್ರೀ ಶ್ರೀದ ವಿಠಲರ ತಂಗಿಯ ಮಕ್ಕಳು!!

by ಆಚಾರ್ಯ ನಾಗರಾಜು ಹಾವೇರಿ 

     ಗುರು ವಿಜಯ ಪ್ರತಿಷ್ಠಾನ

****


13.2.2021 ಇಂದು 19ನೇ ಶತಮಾನದ ದಾಸಶ್ರೇಷ್ಠರು, ಶ್ರೀ ಶ್ರೀದವಿಠಲರ ಅಳಿಯಂದಿರೂ,   ಶ್ರೀ ಶ್ರೀಶಪ್ರಾಣೇಶವಿಠಲರ ಶಿಷ್ಯರು ಆದ ಶ್ರೀ  ಸುಖನಿಧಿವಿಠಲರ (ಶ್ರೀ ಏರಿ ನಾರಾಯಣಾಚಾರ್ಯರ) ಆರಾಧನಾ ಮಹೋತ್ಸವ ... ಶ್ರೀ ದಾಸಾರ್ಯರ ಕಾರುಣ್ಯ ನಮ್ಮ ಎಲ್ಲರ ಮೇಲೆ ಸದಾ ಇರಲಿ ಎಂದು ಬೇಡಿಕೊಳ್ಳುತ್ತಾ ....

-Smt. Padma Sirish

ನಾದನೀರಾಜನದಿಂ ದಾಸಸುರಭಿ  

***


No comments:

Post a Comment