puShya bahuLa yEkAdashi is the ArAdhane of shri ramAkAntha viTTala dAsaru.
Original name: cheLLakere shri krishNa rAyaru
upadEsha gurugaLu: tandE muddu mOhana viTTala dAsaru
Period: 1906 - 1983
His wife was Smt. Sundramma, who had the ankita of surEsha viTTala.
His sister was smt. AmbAbAyI, who had the Ankita of shri gOpAlakrishNa viTTala.
*************
ಪರಮಪ್ರಿಯ ಸುಬ್ಬರಾಯದಾಸರ (ಶ್ರೀ ತಂದೆಮುದ್ದುಮೋಹನವಿಠಲರ) ಪ್ರೀತಿಯ ಶಿಷ್ಯರು, ಹರಿದಾಸಿ ಅಂಬಾಬಾಯಿ(ಗೋಪಾಲಕೃಷ್ಣವಿಠಲ) ಅವರ ಸೋದರರು, ಶ್ರೀಮದ್ಹರಿಕಥಾಮೃತಸಾರದ 32 ಸಂಧಿಗಳ ಸಾರವನ್ನು 32 ಪದ್ಯಗಳಲ್ಲಿ ರಚನೆ ಮಾಡಿದವರು, 137 ನುಡಿಗಳುಳ್ಳಂತಹ ಹರಿದಾಸದರ್ಪಣ ವೆಂಬ ಮೇರು ಕೃತಿಯ ಜೊತೆ, ರಾಮದೇವರ ಚರಿತೆಯನ್ನು (ವೃತ್ತನಾಮ), ಬಾದರಾಯಣ ಸ್ತುತಿಯನ್ನು 73 ನುಡಿಗಳಲ್ಲಿ ರಚಿಸಿದವರು, ರಾಯರ ಪರಮಾನುಗ್ರಹ ಪಾತ್ರರು, ಲೌಕಿಕ ವೃತ್ತಿಯಲ್ಲಿದ್ದರೂ, ಹರಿದಾಸ ಸಾಹಿತ್ಯದ ಸೇವೆಯಲ್ಲಿಯೆ ಜೀವನವನ್ನು ಕಳೆದ ಶ್ರೀ ರಮಾಕಾಂತ ವಿಠಲರ
ಆರಾಧನೆಯ ಶುಭಸ್ಮರಣೆಗಳು.. (ಪುಷ್ಯ ಬಹುಳ ಏಕಾದಶಿ, ದ್ವಾದಶಿ ಆರಾಧನೆಯ ಆಚರಣೆ)
ಶ್ರೀ ದಾಸದ್ವಯರ ಅನುಗ್ರಹ ನಮ್ಮ ಸಮೂಹದ ಸದಸ್ಯರೆಲ್ಲರಮೇಲಿರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ..
-Smt. Padma Sirish
ನಾದನೀರಾಜನದಿಂ ದಾಸಸುರಭಿ
****
" ದಿನಾಂಕ : 09.02.2021 ಮಂಗಳವಾರ - ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ರಮಾಕಾಂತ ದಾಸರ ಆರಾಧನಾ ಮಹೋತ್ಸವ "
20ನೆಯ ಶತಮಾನದ ಆದರ್ಶ ಹರಿದಾಸಾಗ್ರಣಿಗಳೆಂದು ಹೆಸರಾದ ಶ್ರೀ ತಂದೆ ಮುದ್ದುಮೊಹನ ದಾಸರ ಶಿಷ್ಯ ವೃಂದದಲ್ಲಿ ಶ್ರೀ ರಮಾಕಾಂತ ದಾಸರೂ ಒಬ್ಬರು.
ಶ್ರೀ ತಂದೆ ಮುದ್ದು ಮೋಹನ ದಾಸರಿಂದ ತಮ್ಮ ತಾರುಣ್ಯದಲ್ಲಿಯೇ ಅಂಕೀತೋಪದೇಶವನ್ನು ಪಡೆದು - ಲೌಕಿಕ ಜೀವನದಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ - ಹರಿದಾಸ ಸಾಹಿತ್ಯ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು - ಸಂಸಾರದ ಸುಖ - ದುಃಖಗಳಿಗೆ ವಿಚಲಿತರಾಗದೆ ನಿರ್ಲಿಪ್ತವಾಗಿ - ಬಂದುದ್ದೆಲ್ಲ ಶ್ರೀಹರಿ ಕೊಟ್ಟಿದ್ದೆಂದು ಸಮಚಿತ್ತದಿಂದ ಸ್ವೀಕರಿಸಿದ ಗುಪ್ತ ಸಾಧಕರು ಶ್ರೀ ರಮಾಕಾಂತ ದಾಸರು.
" ಶ್ರೀ ರಮಾಕಾಂತ ದಾಸರ ಸಂಕ್ಷಿಪ್ತ ಚರಿತ್ರೆ "
ಹೆಸರು :
ಚೆಳ್ಳಕೆರೆ ಶ್ರೀ ಕೃಷ್ಣರಾಯರು
ತಂದೆ :
ಶ್ರೀ ಭೀಮಸೇನರಾವ್
ತಾಯಿ : ಸಾಧ್ವೀ ಭಾರತೀಬಾಯಿ ( ಶ್ರೀ ಯಾದವೇಂದ್ರ ವಿಠಲ )
ಕಾಲ : ಕ್ರಿ ಶ 1906 - 1984
ಅಕ್ಕ :
ಸಾಧ್ವೀ ಅಂಬಾಬಾಯಿ ( ಶ್ರೀ ಗೋಪಾಲಕೃಷ್ಣ ವಿಠಲ )
ಅಜ್ಜಿ : ಸಾಧ್ವೀ ರುಕ್ಮಿಣೀಬಾಯಿ ( ಶ್ರೀ ಸೀತಾಪತಿವಿಠಲ )
ಉಪನಯನ : ಕ್ರಿ ಶ 1913ಶ್
ಶ್ರೀ ಕೃಷ್ಣರಾಯರಿಗೆ ಎಂಟನೇ ವಯಸ್ಸಿನಲ್ಲಿ ಉಪನಯವಾಯಿತು.
ಅಂದಿನಿಂದ ಶ್ರೀ ದಾಸರು ಅಂತ್ಯದ ವರೆಗೂ " ಏಕಾದಶೀ ವ್ರತ " ವನ್ನು ಆಚರಿಸಿದ ಮಹನೀಯರು.
" ವಿವಾಹ "
ಕ್ರಿ ಶ 1923 ರಲ್ಲಿ ಸಂಪ್ರದಾಯ ಕುಟುಂಬದ ಸಾಧ್ವೀ ಸುಂದರಮ್ಮ ಅವರೊಂದಿಗೆ ವಿವಾಹವಾಯಿತು.
" ಸಾತ್ವಿಕ ಬದುಕು "
ಅಜ್ಜಿ, ಅಕ್ಕನವರ ದಾಸ ದೀಕ್ಷೆ - ದೈವ ಭಕ್ತಿ - ಕಷ್ಟ ಸಹಿಷ್ಣುತೆ - ಸರಳತೆ - ಸಹನೆ ಮುಂತಾದ ಸದ್ಗುಣಗಳು ಶ್ರೀ ಕೃಷ್ಣರಾಯರಲ್ಲಿ ಮನೆ ಮಾಡಿಕೊಂಡು ಮುಂದಿನ ಭವ್ಯ ಜೀವನಕ್ಕೆ ನಾಂದಿಯಾಯಿತು.
ದಿನಗಳು ಕಳೆದಂತೆ ತಾವೂ ಹರಿದಾಸರಾಗಿ ಶ್ರೀ ಹರಿ ವಾಯು ಗುರುಗಳ ಗುಣಸ್ತವನ ಗೈಯಬೇಕೆಂಬ ಅಪಕ್ಷೇ ತೀವ್ರವಾಯಿತು.
ಶ್ರೀ ಕೃಷ್ಣರಾಯರು ಒಂದುದಿನ ತಮ್ಮ ಮನೆಗೆ ಬಂದಿದ್ದ ಶ್ರೀ ತಂದೆ ಮುದ್ದು ಮೋಹನದಾಸರಲ್ಲಿ ತಮ್ಮ ಮನ ಬಯಕೆಯನ್ನು ಬಿನ್ನೈಸಿಕೊಂಡರು.
ಶ್ರೀ ಕೃಷ್ಣರಾಯರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಶ್ರೀ ತಂದೆ ಮುದ್ದು ಮೋಹನ ದಾಸರಿಗೆ ಅವರ ಭಗವದ್ಭಕ್ತಿ - ವಿನಯ ಮೊದಲಾದ ಸದ್ಗುಣಗಳನ್ನು ಕಂಡು ತುಂಬಾ ಸಂತೋಷ ಪಟ್ಟಿದ್ದರು.
ಹಾಗಾಗಿ ಶ್ರೀ ಕೃಷ್ಣರಾಯರ ಅಪೇಕ್ಷೆಯನ್ನು ಮನ್ನಿಸಿ ಶ್ರೀ ತಂದೆ ಮುದ್ದು ಮೋಹನದಾಸರು.......
ಕ್ರಿ ಶ 1924 ಶ್ರೀ ಕೃಷ್ಣರಾಯರಿಗೆ......
" ರಮಾಕಾಂತ ವಿಠಲ "
ಯೆಂಬ ಅಂಕಿತದೊಂದಿಗೆ ಮಂತ್ರೋಪದೇಶ ಮಾಡಿ ಪರಮಾನುಗ್ರಹ ಮಾಡಿದರು.
" ಅಂಕಿತ ಪದ "
ರಮಾಕಾಂತ ವಿಠಲನೇ ನೀನವರ
ಸಲಹ ಬೇಕೋ ಹರಿಯೇ ।। ಪಲ್ಲವಿ ।।
ದೀನನಾಥನೇ ಕೈಪಿಡಿದು
ಉದ್ಧರಿಸಿ ಕಾಪಾಡೋ ಹರಿಯೇ ।
ಮನ್ಮನೋರಥ ದಾತಾ ಸ್ವಾಮೀ
ಶ್ರೀ ಹರಿಯೇ ಕಾಪಾಡಬೇಕಿವನಾ ।। ಅ ಪ ।।
ಹರಿ ಗುರು ಭಕ್ತಿ ಮೊದಲಾದ
ಸದ್ಗುಣವನೇ ಕೊಟ್ಟು ।
ಪರಮ ದಯದಿಂದ ಇಹಪರದಿ
ಕಾಪಾಡೋ ಹರಿಯೇ ।
ಕರಿ ವರದ ಕಾಮಿತಾರ್ಥವನಿತ್ತು ।
ಕರುಣದಿಂದಲಿ ಕಾಪಾಡೋ
ಹರಿಯೇ ।। ಚರಣ ।।
ದೋಷ ದೂರನೇ
ಕೃಷ್ಣ ಶೇಷಗಿರಿ
ವಾಸ ಕೃಪಾಸಾಂದ್ರ ನೀ
ಸಲಹಬೇಕೋ ಹರಿಯೇ ।
ಶೇಷ ಪರ್ಯಂಕ
ಶಯನ ಶ್ರೀ ಹರಿಯೇ । ಸಂ ।
ತೋಷವನೆ ಕೊಟ್ಟು ನೀ
ಕಾಪಾಡೋ ಹರಿಯೇ ।। ಚರಣ ।।
ಧರ್ಮ ಕಾಮಾರ್ಥ ಮೊದಲಾದ
ಪುರುಷಾರ್ಥವನೆ ಕೊಟ್ಟು
ನ್ಮುದದಿ ಕಾಯೋ ಹರಿಯೇ ।
ಮ ಸ್ವಾಮಿ ಕೈವಲ್ಯದಾಯಕ
ತಂದೆಮುದ್ದು ಮೋಹನ ವಿಠಲನೇ
ನೀನೀವನ ನಿರ್ಮಲ ಮನದಿ
ನಿಂತು ಧರ್ಮ ಪ್ರೇರಕನಾಗಿ
ಸಲಹೋ ಹರಿಯೇ ।। ಚರಣ ।।
ಇದೇ ಸಂದರ್ಭದಲ್ಲಿ.......
" ಶ್ರೀ ಕೃಷ್ಣರಾಯರ ಧರ್ಮಪತ್ನಿ ಸಾಧ್ವೀ ಸುಂದರಮ್ಮ ಅವರಿಗೆ " ಸುರೇಶ ವಿಠಲ " - ಅವರ ದೊಡ್ಡ ಮಗ ಶ್ರೀ ವಿಠಲನಿಗೆ " ಕಾಂತೇಶ ವಿಠಲ " - ಚಿಕ್ಕ ಮಗನಾದ ಶ್ರೀ ಜಯ ಮಾರುತಿಗೆ " ಜಯ ಮಾರುತೀಶ ವಿಠಲ "
ಎಂದು ಅಂಕಿತವನ್ನು ದಯಪಾಲಿಸಿದರು.
ಶ್ರೀ ಕೃಷ್ಣರಾಯರ ಒಬ್ಬಳೇ ಮಗಳಾದ ಸಾಧ್ವೀ ಶ್ರೀರಮಣಿಗೆ ತಮ್ಮ ಶಿಷ್ಯರಾದ ಶ್ರೀ ಉರಗಾದ್ರಿವಾಸ ವಿಠಲರಿಂದ " ರಮಾ ಮಧುಸೂದನ ವಿಠಲ " ಯೆಂಬ ಅಂಕಿತವನ್ನು ಕೊಡಿಸಿದರು.
" ದಾಸರ ಕಾವ್ಯ ರಚನಾ ಶೈಲಿ "
ಶ್ರೀ ರಮಾಕಾಂತ ವಿಠಲಾ೦ಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಕ್ರಿ ಶ 1938 ರಲ್ಲಿ " ಹರಿದಾಸ ದರ್ಪಣ " ಯೆಂಬ ಕೃತಿಯನ್ನು ಭಾಮಿನೀ ಷಟ್ಪದಿಯಲ್ಲಿ ರಚಿಸಿದ್ದಾರೆ.
ಇದು 137 ಪದ್ಯಗಳನ್ನು ಒಳಗೊಂಡ ದೀರ್ಘ ಕೃತಿ.
ಶ್ರೀ ತಂದೆ ಮುದ್ದು ಮೋಹನ ದಾಸರು ಹರಿದಾಸ ದರ್ಪಣವನ್ನು ಸಂಪೂರ್ಣವಾಗಿ ಓದಿ ಸಂತೋಷಪಟ್ಟು ತಾವು ಹೊರತರುತ್ತಿದ್ದ " ಪರಮಾರ್ಥ ಚಂದ್ರೋದಯ " ಯೆಂಬ ಧಾರ್ಮಿಕ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿ ಶಿಷ್ಯರನ್ನು ಪ್ರೋತ್ಸಾಯಿಸಿದರು.
ದಾಸ ಧರ್ಮದ
ಕೋಶವಿದು । ಕಮ ।
ಲೇಶ ಕರುಣದಿ
ಬರೆಯಿಸಿದ । ಉಪ ।
ದೇಶ ಮಾತುಗಳಾತನ
ಭಕ್ತರಿಗಿಷ್ಟ ಸಲ್ಲಿಸಲಿ ।।
ಲೇಶ ಭಕ್ತಿ ವಿರಕ್ತಿ ಜ್ಞಾನವ ।
ಆಶಿಪರಿಗೆ ರಮೇಶ ದಯದಲಿ ।
ತಾಸು ತಾಸಿಗೆ ತ್ರಾಸು
ಕೊಡದಲೇ ಪೋಷಿಸುತ್ತಿರಲಿ ।।...
ನರಹರಿಯು ಪ್ರೇರಿಸಿದ ತೆರದೊಳು ।
ವಿರಚಿಸಿದೆನೀ ಪದ್ಯ ಮಾಲೆಯ ।
ಕರುಣಿಸಲು ಗುರುಬಿಂಬ
ಶ್ರೀ ತಂದೆ ಮುದ್ದು ಮೋಹನನು ।।
ಎಂದು ವಿನೀತರಾಗಿ ನುಡಿಯುವ ಶ್ರೀ ರಮಾಕಾಂತದಾಸರ ಕಾವ್ಯ ಚಾತುರ್ಯವೂ ಸಹಾ ಅತ್ಯಂತ ಮನೋಜ್ಞವಾಗಿದೆ..
ಆಧ್ಯಾತ್ಮಿಕ ರಹಸ್ಯಗಳನ್ನು ಹೃದ್ಯವೆನ್ನಿಸುವ ಭಾಷೆಯ ಬಂಧದಲ್ಲಿ ಹಿಡಿದಿಡುವ ಅವರ ಶೈಲಿಯೇ ಒಂದು ಸೊಗಸು.
ಗಹನ ಗಂಭೀರವಾದ ಅನೇಕ ಶಾಸ್ತ್ರೋಕ್ತಿಗಳನ್ನೂ ಎಂಥಹಾ ಪಾಮರನಿಗೂ ಎಟುಕುವಂತೆ ಸ್ವಾರಸ್ಯಕರವಾಗಿ ನಿರೂಪಿಸುತ್ತಾರೆ.
ಜಠಿಲ ಸಮಸ್ಯೆಗೂ ಸುಲಭ ಪರಿಹಾರ ಕೊಟ್ಟಿದ್ದಾರೆ.
" ಗುರು ಭಕ್ತಿ "
ಶ್ರೀ ರಮಾಕಾಂತದಾಸರಿಗೆ ತಮ್ಮ ಗುರುಗಳ ಮೇಲೆ ಎಲ್ಲಿದ್ದದ ಪ್ರೀತಿ.
ತಾಯಿ ಮಗನ ಸಂಬಂಧ.
ಹಾಗೆಯೇ ಶಿಷ್ಯನ ಮೇಲೆ ಗುರುಗಳಿಗೆ ಮಾತೃವಾತ್ಸಲ್ಯ.
ಶ್ರೀ ದಾಸರು ತಮ್ಮ ಗುರಗಳನ್ನು ಕುರಿತು...
ಗುರುವಿನಿಂದಲೇ ಜ್ಞಾನ ಲಾಭವು ।
ಗುರುವಿನಿಂದಲೇ ಸಿದ್ಧಿ ಸಾಧ್ಯವು ।
ಗುರು ಕುಲದಿ ಗುರು ಸೇವೆ ಗೈಯ್ವುದೇ
ಪರಮ ಗುರು ಧರ್ಮ ।।
ಗುರುವಬಿಟ್ಟನ್ಯತ್ರ ಎರಗದೆ ।
ಗುರುವಿನಿಂ ಸತ್ಕೃಪೆಯ ಪಡೆವುದು ।
ಗುರುವೇ ಸದ್ಗತಿ ದಾತ
ಗುರುವಿಲ್ಲದಲೆ ಹರಿ ಒಲಿಯ ।।
" ಮಡಿ ಮೈಲಿಗೆ ಕುರಿತು "
ಮಡಿ ಮೈಲಿಗೆ ಸೂಕ್ಷ್ಮ ವಿಷಯವನ್ನು ಶ್ರೀ ರಮಾಕಾಂತದಾಸರು ವಿಚಾರ ಪೂರ್ಣವಾದ ತಮ್ಮ ಒಳಗಣ್ಣಿನಿಂದಲೇ ನೋಡಿ...
ಯಾವುದು ಮಡಿ?ಯಾವುದು ಮೈಲಿಗೆ?
ಎಂಬುದನ್ನು...
ಹತ್ತು ಮೈಲಿಗೆ ಸಾವು ಮೈಲಿಗೆ ।
ನಟ್ಟ ನಡುವಲಿ ಇದರ ಗೊಡುವೆಯ ।
ಬಿಟ್ಟವನೆ ಮಡಿವಂತ
ಕೃಷ್ಣನ ಸ್ಮರಣೆಗಧಿಕಾರಿ ।।
ವಿಠಲನ ನಾಮವನು ವದನದೊ-
ಳಿಟ್ಟು ಮರೆಯದೆ ನಿಷ್ಠೆಯಿರಲದೆ ।
ಅಟ್ಟಹಾಸದ ಮಡಿಯು
ಮೈಲಿಗೆಯ ಮಾತೆ ಮೈಲಿಗೆಯು ।।
ಎಂದು ಸರಳವಾಗಿ ಹೇಳಿದ್ದಾರೆ.
ನಿತ್ಯ ಸ್ನಾನವು ಮಡಿಯದಲ್ಲವೆ ।
ಉತ್ತಮಾಂಬರ ಮಡಿಯದಲ್ಲವೆ ।
ಮತ್ತೆ ಗೋಪಿಚಂದನದ
ಲೇಪನವು ಮಡಿಯಲ್ಲವೆ ।।
ಹೃತ್ಸ್ಥ ಹರಿಗವದಾನವೆಂದರಿ-
ದುತ್ತಮನ ನುಡಿ ನುಡಿಗೆ ನೆ
ನೆಯುವ ಸತ್ವ ಭಾವನೆ ಮಡಿಯು ।
ಗಡಿಬಿಡಿ ವ್ಯರ್ಥ ಮಡಿಗಾಗಿ ।।
ಮಡಿಗಾಗಿ ಮಾಡುವ ಗಡಿಬಿಡಿ ವ್ಯರ್ಥ ಎಂದು ತಿಳಿಸಿದ್ದಾರೆ.
" ಅಂಕಿತ ಮತ್ತು ದಾಸರ ಮಹತ್ವ "
ಅಂಕಿತವು ದೊರಕುವುವು ಸುಲಭವಲ್ಲ.
ಕೇವಲ ಮನುಷ್ಯ ಪ್ರಯತ್ನದಿಂದ ಇದು ದಕ್ಕುವುದಿಲ್ಲ.
ಇದಕ್ಕೆ ಜನ್ಮ ಜನ್ಮಾಂತರ ಸುಕೃತ ಇರಬೇಕು.
ಜನ್ಮ ಜನ್ಮಾಂತರಗಳಲ್ಲಿ ಶ್ರೀ ಹರಿ ವಾಯುಗಳನ್ನು ಪೂಜಿಸಿರಬೇಕು.
ಹಲವಾರು ಜನ್ಮಗಳ ಜಪ - ತಪ - ಧ್ಯಾನ ಮುಂತಾದ ಪುಣ್ಯ ರಾಶಿಯ ಮಿಳಿತವಾಗಿರಬೇಕು.
ಆಗ ಮಾತ್ರ ನಿಯತ ಗುರುಗಳ ದರ್ಶನವಾಗಿ ಅಂಕಿತ ದೊರೆಯುತ್ತದೆ.
ಹಲವು ಜನ್ಮದೊಳಲವಬೋಧರ ।
ಚೆಲುವ ಮತವನು ಪೊಂದಿ ಬರುತಲಿ ।
ಹಲಧರಾನುಜನನ್ನು ಪೂಜಿಸಿ ಹಲವು ಜನ್ಮದಲಿ ।।
ಹಲವು ಜನ್ಮದ ಧ್ಯಾನ ಜಪ ತಪ ।
ಹಲವು ಜನ್ಮದ ಪುಣ್ಯ ರಾಶಿಯು ।
ಮಿಳಿತವಾಗುತ ಫಲಿಸಿ-
ದಲ್ಲದೆ ದೊರಕದಂಕಿತವು ।।
ಅಂಕಿತವು ಸಾಮಾನ್ಯವಲ್ಲ ಎಂಬುದಕ್ಕೆ...
ಸತಿಗೆ ಪತಿ ಇಪ್ಪಂತೆ ।
ಜೀವಗೆ ಹಿತವ ನೆಣಿಸುವ ।
ಬಿಂಬ ನಾಮಕ ಪತಿಕರಿಸಿತಾ ।
ಧರಿಪ ನಾಮವೇ ಮನುಜಗಂಕಿತವು ।।
" ತಾನು ಹರಿದಾಸ " ಎಂದು ಹೇಳಿಕೊಳ್ಳಲು ದಾಸರಿಗೆ ಬಹು ಹೆಮ್ಮೆ.
ಜನ್ಮ ಸಾರ್ಥಕ್ಯಗೊಳಿಸುವ ಹರಿದಾಸತನದ ಹಿರಿಮೆಯೇ ಹಿರಿಮೆ.
ಭಗವದೊಲಿಮೆಗೆ ಹರಿ ದಾಸ್ಯವೇ ಹೆದ್ದಾರಿ.
ಶ್ರೀ ಹರಿಯನ್ನು ಸದೃಢವಾಗಿ ನಂಬಿದ ದಾಸ ದಾಸರ ಚರಣ ದಾಸನಾಗಿ - ದಾಸರ ಪದ ಧೂಳಿಯನ್ನು ಶಿರದಲ್ಲಿ ಧರಿಸುವುದೇ ಪರಮ ಭೂಷಣವೆಂದು....
ದಾಸನೆಂಬುವ ಬಲಹು ಎನಗಿದೆ ।
ದಾಸ ದಾಸರ ಚರಣ ದಾಸ್ಯದ ।
ಮೀಸಲಿನ ಆ ಭಾಗ್ಯ ಎನ್ನದು
ದಾಸ ಪದ ಧೂಳಿ ।।
ಭೂಷಣವು ಶಿರ
ಮಕುಟ ಎನಗದು ।
ಏಸು ಪುಣ್ಯದ
ರಾಶಿ ಒದಗಿತೋ ।
ದಾಸ ವಂಶದಿ ತಂದು
ಎನ್ನನು ಧನ್ಯ ನೆನಿಸಿದರು ।।
" ಹರಿಕಥಾಮೃತಸಾರ ಸಂಗ್ರಹ "
ಇದು ಶ್ರೀ ರಮಾಕಾಂತದಾಸರ ಮತ್ತೊಂದು ಉತ್ಕೃಷ್ಟವಾದ ಕೆಕೃತಿ.
ಇದು ಭಾಮಿನೀ ಷಟ್ಪದಿಯಲ್ಲಿ ಇದ್ದು 32 ಸಂಧಿಗಳ ಸಾರಸುಧೆಯನ್ನು 32 ಪದ್ಯಗಳಲ್ಲಿ ಸೆರೆ ಹಿಡಿದಿದ್ದಾರೆ.
ಸಾರವೆನು ಗುರು ದಯದಿ । ಜಗದೋ ।
ದ್ಧಾರ ನರಹರಿಕೃಪಾಪಾತ್ರರು ।
ಧೀರ ಶ್ರೀ ಜಗನ್ನಾಥದಾಸರ
ಮುಕ್ತಿಪ್ರದವಾದ ।।
ಚಾರುತರ ದ್ವಾತ್ರಿ೦ಶ ಸಂಧಿ । ವಿ ।
ಸ್ತಾರದಿಂದಿಹ ಹರಿಕಥಾಮೃತ ।
ಸಾರ ಸಂಗ್ರಹ ಸಂಧಿ
ಕ್ರಮದಲೆ ಸುಜನರಾಲಿಪುದು ।।
" ಶ್ರೀ ರಾಯರ ಅಂತರಂಗ ಭಕ್ತರು "
ಶ್ರೀ ರಾಯರ ದರ್ಶನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ಮುಗಿಸಿಕೊಂಡು ಶ್ರೀ ಗುರುಸಾರ್ವಭೌಮರ ಮೂಲ ಬೃಂದಾವನ ಸನ್ನಿಧಾನಕ್ಕೆ ಬಂದು ಶ್ರೀ ಗುರುಸಾರ್ವಭೌಮರನ್ನು ತದೇಕ ಚಿತ್ತದಿಂದ ನೋಡುತ್ತಾ - ಎದೆ ತುಂಬಿ...
ಶ್ರೀ ರಮಾಕಾಂತದಾಸರ ಶ್ರೀ ರಾಘವೇಂದ್ರ ದೀಕ್ಷೆ ಪ್ರಶ್ನಾತೀತವಾದದ್ದು.
ಶ್ರೀ ದಾಸವರ್ಯರು ಶ್ರೀ ರಾಯರನ್ನು ಕುರಿತು ಭಕ್ತಿ ಪರಿಮಳ ಭರಿತವಾದ ಪುಷ್ಪ ಮಾಲೆಗಳಂತೆ ಕಂಗೊಳಿಸುವ ಆರು ಕೃತಿಗಳನ್ನು ರಚಿಸಿದ್ದಾರೆ.
ಕರೆದಲ್ಲಿ ಬರುವ ।
ಸುರತರು ಕರುಣಾಸಾಂದ್ರ ।। ಪಲ್ಲವಿ ।।
ಗುರುಸಾರ್ವಭೌಮ ।
ಯತಿವರ ರಾಘವೇಂದ್ರ ।। ಅ ಪ ।।
.... ಮಾಸ ಐದರಲ್ಲಿ ಪರ
ಮೂರನೆಯ ದಿನದಲ್ಲಿ ।
ಶಿಸಲು ತವ ಪಾದ
ಸೇವೆಯನೆ ಇತ್ತು ।
ದಾಸನಾದೆನ್ನ ಮನ-
ದಾಶೆಯೆನೆ ಪೂರೈಸಿ ।
ಪೋಷಿಸಿದೆ ಶ್ರೀ ರಮಾ-
ಕಾಂತ ವಿಠಲನ ಪ್ರಿಯ ।। ೫ ।।
ಶ್ರೀ ರಾಯರ ಮೇಲೆ ಇನ್ನೊಂದು ಕೃತಿ...
ರಾಯರೆಂದು ಕರೆದ ಮಾತ್ರದೀ -
ನಿರುತ ನಮ್ಮ ।
ಕಾಯುವಂಥ
ಕರುಣಾ ಪೂರ್ಣರು ।। ಪಲ್ಲವಿ ।।
ತೋಯಜಾಕ್ಷನಮಲ ಗುಣದಿ ।
ತೋಯುವಂತೆ ಮಾಡಿ ಭವದಿ ।
ನೋಯಗೊಡದುದ್ಧರಿಸ ಲೋಕ ।
ಪ್ರೀಯ ಯತಿ ಶ್ರೀ ರಾಘವೇಂದ್ರ ।। ಅ. ಪ ।।
.... ಕರ್ತೃ ರಮಾಕಾಂತ ವಿಠಲನಾ -
ದಯಕೆ ಸತ್ಪಾತ್ರ ಮಂತ್ರಮನೆ
ನಿವಾಸನಾ ।
ಅರ್ಥಿಯಿಂ ಸೇವಿಸಲು ಕಾಮಿ ।
ತಾರ್ಥ ಕೊಡುವ ಕಲ್ಪತರುವು ।
ಭಕ್ತಿಲಷ್ಟಾಕ್ಷರದಿ ನಮಿಸೆ ।
ಮುಕ್ತಿ ಕೊಡುವ ಶಕ್ತರಿವರು ।। 5 ।।
ಮತ್ತೊಂದು ಕೃತಿಯಲ್ಲಿ...
ರಾಘವೇಂದ್ರ ಗುರುವೇ ನಿಮ್ಮಯ
ಅನುರಾಗವ ನಾ ಬೇಡುವೆ ।। ಪಲ್ಲವಿ ।।
ಬಾಗಿ ನಮಿಪೆ ದಯಾ-
ಸಾಗರ ಯತಿವರ ।
ಜಾಗು ಮಾಡದೆ ಯೆನ್ನ ।
ಬೇಗ ಸಲಹಿರಿ ಯೆಂದು ।। ಅ ಪ ।।
... ಮಂತ್ರಾಲಯ ಪ್ರಭುವೇ
ವಾಂಛಿತಪ್ರದ ।
ಚಿಂತಾರತುನ ಸಮರೇ ।
ಎಂತುಟೋ ನಿಮ್ಮೊಳು
ಸಂತಸದಲಿ । ರಮಾ ।
ಕಾಂತವಿಠಲ ನಿಂತು
ಪಂಥ ಪೂರೈಸುವ ।। 5 ।।
ಮಗದೊಂದು ಕ್ರತಿಯಲ್ಲಿ...
ಕೈಯ ಬಿಡುವರೇ ।
ಗುರು ರಾಘವೇಂದ್ರ ।
ಕೈಯ ಬಿಡುವರೇ ।। ಪಲ್ಲವಿ ।।
ಕೈಯ ಬಿಡುವರೇನೋ ಗುರುವೇ ।
ಹೇಯ ಭವದಿ ನೋಯುವವನ ।
ಕಾಯಿದಿರೆ ಇನ್ಯಾರು ಯೆನಗೆ ।
ಜೀಯ ನಿನ್ನನೇ ಮೊರೆಯ
ಹೊಕ್ಕನೋ ।। ಅ ಪ ।।
... ಅಕ್ಕರೆಯಲಿ ಕರೆದು ನಿಮ್ಮ ।
ಮಕ್ಕಳಲ್ಲಿ ಒಬ್ಬನೆಂದು ।
ರಕ್ಷಿಸೋ ರಮಾಕಾಂತ ವಿಠಲನ ।
ಭಕ್ತಾಗ್ರಣಿ ಶ್ರೀ ಯತಿ ಶಿರೋಮಣಿ ।। 3 ।।
" ಕೃತಿಗಳು "
ಶ್ರೀ ರಾಮ ಚರಿತಾಮೃತ ಸಾರ - ಇದು ಆರ್ಯ ವೃತ್ತದ 27 ನುಡಿಗಳ ಕೃತಿ.
ಶ್ರೀ ಬಾದರಾಯಣ ಸ್ತುತಿ - 73 ನುಡಿಗಳ ದೀರ್ಘ ಕೃತಿ.
ಶ್ರೀ ತಂದೆ ಮುದ್ದು ಮೋಹನದಾಸರಿಂದ ಅಂಕಿತ ಪಡೆದು - ತತ್ತ್ವ ಪ್ರಮೇಯ ಭರಿತವೂ - ಲಯ ಬದ್ಧವೂ - ಲಾಲಿತ್ಯದಿಂದ ಕೂಡಿದ ಪದ ಪದ್ಯಗಳನ್ನು ರಚಿಸಿ - ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ, ಪುಷ್ಯ ಬಹುಳ ಏಕಾದಶೀ ( 28.01.1983 ) ಯಂದು ಶ್ರೀ ಹರಿಯ ಪುರವಾದ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು.
ವರ ತಂದೆ ಮುದ್ದು ಮೋಹನ್ನ
ಗುರು ಬಲ ಒಂದು ।
ಗುರು ರಾಘವೇಂದ್ರರ
ಕೃಪೆಯು ಎರಡು ।
ಕರಿಗಿರಿ ನರಹರಿ ಕ
ದರೂರು ಮರುತನ ।
ಪರಮ ದಯ ಇವು
ನಾಲ್ಕು ವಜ್ರ ಕವಚವು ಎನಗೆ ।।
ಶ್ರೀ ರಮಾಕಾಂತ ವಿಠಲರು ಶ್ರವಣ ರಮಣೀಯವಾದ ತಮ್ಮ ಪದ ಪದ್ಯಗಳ ಪ್ರಖರತೆ ಹಾಗೂ ನಾದ ಮುಖರತೆಗಳಿಂದ ಸಹೃದಯರ ಮನಃ ಪ್ರೀಣನವನ್ನು ಮಾಡುತ್ತಾರೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
No comments:
Post a Comment