Friday 16 April 2021

murugodu krishnadasaru ಕೃಷ್ಣದಾಸರು chaitra shuddha chaturthi



shri gurubyO namaha, hari Om... 


chaitra shuddha chaturthi is the puNya dina of the shri murugODu krishna dAsaru.


murugODu krishna dAsa varada gOvindA, gOvindA...

*****

'ಸಾರಸ್ವತ ಸಾನ್ನಿಧ್ಯ'ಲೇಖನ ಮಾಲಿಕೆಯ ಇಪ್ಪತ್ತೊಂದನೆಯ ಲೇಖನ- ಶ್ರೀಮುರಗೋಡು ಕೃಷ್ಣದಾಸರು
ಅಂದು ಆನಂದತೀರ್ಥರು ಆನಂದದಿಂದ ನಂದಕಂದನ ಸ್ತುತಿಮಾಡಿ ಹಾಡಿದ ಹಾಡುಗಳು 'ದ್ವಾದಶಸ್ತೋತ್ರ'ಗಳ ರೂಪದಲ್ಲಿ ಕರ್ನಾಟಕದ ಹರಿದಾಸಸಾಹಿತ್ಯ ಪರಂಪರೆಗೆ ಬೀಜಾವಾಪನೆಮಾಡಿದವು. ಶ್ರೀಮಧ್ವಮುನಿಗಳಿಂದ ಪ್ರೇರಿತರಾದ ಶ್ರೀನರಹರಿತೀರ್ಥಶ್ರೀಮಚ್ಚರಣರು ಹರಿದಾಸಸಾಹಿತ್ಯಪರಂಪರೆಗೆ ಆದ್ಯರಾದರು . ಶ್ರೀಪಾದರಾಜರು ಕನ್ನಡಭಾಷೆಗೆ ಸಂಸ್ಕೃತ ಸಮಪೀಠವಿಟ್ಟು ಹರಿದಾಸಸಾಹಿತ್ಯಪರಂಪರೆಗೆ ಹೊಸಚಾಲನೆ ನೀಡಿದರು. ಶ್ರೀವ್ಯಾಸರಾಜರಂತೂ ಶ್ರೀಪುರಂದರ,ಕನಕದಾಸಾರ್ಯರಾದಿ ಪ್ರಭೃತಿಗಳಿಗೆ ದೀಕ್ಷೆ ನೀಡಿ ಹರಿದಾಸಸಾಹಿತ್ಯಪರಂಪರೆಯ ಸೀಮಾಪುರುಷರಾದರು. ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಾಘವೇಂದ್ರರು, ಶ್ರೀವರದೇಂದ್ರರು ಮೊದಲಾದ ಯತಿವರೇಣ್ಯರು, ಶ್ರೀಪುರಂದರದಾಸರು, ಶ್ರೀಕನಕದಾಸರು,ಶ್ರೀವಿಜಯದಾಸರು, ಶ್ರೀಪ್ರಸನ್ನ ವೇಂಕಟದಾಸರು, ಶ್ರೀಮಹೀಪತಿದಾಸರು, ಶ್ರೀಗೋಪಾಲದಾಸರು, ಶ್ರೀಜಗನ್ನಾಥದಾಸರು, ಶ್ರೀಮೋಹನದಾಸರು,ಶ್ರೀಗುರುಜಗನ್ನಾಥದಾಸರೇ ಮೊದಲಾದ ದಾಸವರೇಣ್ಯರು ತಮ್ಮ ಅನುಭಾವದ ಎತ್ತರದಿಂದ, ವ್ಯಕ್ತಿತ್ವದ ಹಿರಿಮೆಯಿಂದ, ಕಾವ್ಯಶಾಸ್ತ್ರಫ್ರೌಡಿಮೆಯಿಂದ ಹರಿದಾಸಸಾಹಿತ್ಯಪರಂಪರೆಗೇ ಘನತೆಯನ್ನು ತಂದಿತ್ತರು. ಅವರ ನಡೆ ನುಡಿಗಳಲ್ಲಿ ವೇದಾಂತ ಮೂರ್ತರೂಪದಾಳಿ ಬಂದಂತೆ ಬದುಕಿದರು. ನಂತರದ ದಿನಗಳಲ್ಲಿ ಹರಿದಾಸದೀಕ್ಷೆಯನ್ನು ಪಡೆದವರ ಸಂಖ್ಯೆಯಲ್ಲಿ ಬಾಹುಳ್ಯವಿದ್ದರೂ, ಮೊದಲಿದ್ದಂತಹ ಅನುಭಾವದ ಬಿತ್ತರ, ವ್ಯಕ್ತಿತ್ವದ ಎತ್ತರ ಅಷ್ಟಾಗಿ ಕಾಣಸಿಗುವುದಿಲ್ಲ. ಅನುಭಾವದ ಸ್ಥಾನವನ್ನು ಅನುಕರಣೆ ಆಕ್ರಮಿಸಿತು. ಇಪ್ಪತ್ತನೆಯ ಶತಮಾನದಲ್ಲಿ ಕೆಲವು ಅಪರೂಪದ ಉದಾಹರಣೆಗಳನ್ನು ಹೊರತು ಪಡಿಸಿದರೆ, ಅನುಕರಣೆ, ಶಬ್ದಪ್ರಯೋಗದ ಮೋಹ ಅನುಭಾವವನ್ನು ಮಸುಕುಮಾಡಿತು. ಇಂತಹ ಸಂದರ್ಭದಲ್ಲಿಯೂ ತಮ್ಮ ನಿಸ್ಪೃಹವಾದಂತಹ ಜೀವನದಿಂದ, ಹರಿಗರ್ಪಿತವಾದಂತಹ ಬದುಕಿನಿಂದ ಮಾನ್ಯರಾದ ಮಹನೀಯರು ಶ್ರೀಮುರಗೋಡು ಕೃಷ್ಣದಾಸರು.
ಹರಿದಾಸಶ್ರೇಷ್ಠರ ಕೃತಿಗಳನ್ನು ಯಾವುದೇ ದ್ರವ್ಯಾಪೇಕ್ಷೆಯಿಲ್ಲದೆ ಹಾಡುತ್ತಾ, ತಾದಾತ್ಮ್ಯಭಾವದ ಹಾಡುಗಳಿಂದ ಭಗವಂತನನ್ನು ಅನನ್ಯವಾಗಿ ಆರಾಧಿಸುತ್ತಾ ಬದುಕಿದ ಶ್ರೀಮುರಗೋಡು ಕೃಷ್ಣದಾಸರ ತಾತ ಶ್ರೀರಾಮನಾಮವನ್ನು ಜಪಿಸಿ ಅಪೂರ್ವವಾದಂತಹ ಸಿದ್ಧಿಪಡೆದ ನಾಮಯೋಗಿ ಶ್ರೀವಾಮನಾಚಾರ್ಯರು. ತಂದೆ ಶ್ರೀಭೀಮಾಚಾರ್ಯರು. ಜೀವನದ ಪ್ರಾರಂಭದ ದಿನಗಳಲ್ಲಿ ನಾಟಕಕಂಪನಿಯೊಂದರಲ್ಲಿ ಪಾತ್ರಮಾಡುತ್ತಿದ್ದು, ಶ್ರೀಕೃಷ್ಣ  ಧರ್ಮಕರ್ಮಸಂಯೋಗದಿಂದ ಶ್ರೀಮಳಖೇಡ ಕ್ಷೇತ್ರಕ್ಕೆ ಬಂದರು. ಅಲ್ಲಿ ಶ್ರೀಜಯತೀರ್ಥರ ಪರಮಾನುಗ್ರಹದಿಂದ ಶ್ರೀಮಣೂರುಮಧ್ವಾಚಾರ್ಯರೆಂಬ ಸಾಧಕರು ಗುರುವಾಗಿ ದೊರೆತರು. ನಂತರ ಪರಮಪೂಜ್ಯರಾದ ಪಲಿಮಾರು,ಭಂಡಾರಕೇರಿ ಉಭಯಮಠಾಧೀಶರಾದ ಶ್ರೀವಿದ್ಯಾಮಾನ್ಯತೀರ್ಥರು, ಶ್ರೀಕುಂದಾಪುರ ವ್ಯಾಸರಾಜ ಮಠಾಧೀಶರಾದ ಶ್ರೀಲಕ್ಷ್ಮೀಶತೀರ್ಥರು ಮೊದಲಾದ ಮಹನೀಯರ ಅನುಗ್ರಹ ಪಡೆದರು. ದಾಸದೀಕ್ಷೆಪಡೆದು 'ಶರಣ್ಯವಿಠ್ಠಲ' ಅಂಕಿತವನ್ನು ಪಡೆದರೂ, ತಮ್ಮ ಕೃತಿಗಳ ಗಾಯನಕ್ಕಿಂತ ಅಪರೋಕ್ಷಜ್ಞಾನಿಗಳಾದ ಪೂರ್ವದ ಹರಿದಾಸರ ಕೃತಿಗಳ ಭಜನೆ, ಗಾಯನಕ್ಕೆ ಹೆಚ್ಚಿನ ಒತ್ತನ್ನು ನೀಡಿದರು.  ಎಲ್ಲಾ ಮಾಧ್ವ ಯತಿಪುಂಗವರ,ದಾಸಶ್ರೇಷ್ಠರ ಆರಾಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,  ಶ್ರೀಹರಿಯ ಕೈಂಕರ್ಯರೂಪವಾದ ತಮ್ಮ ಗಾಯನಸೇವೆಯನ್ನು ಮಾಡುತ್ತಾ ಯೋಗಿಯಂತೆ ಜೀವನವನ್ನು ನಡೆಸಿದರು. ಶ್ರೀಸೋದಾಕ್ಷೇತ್ರಕ್ಕೆ ಶ್ರೀವಾದಿರಾಜಗುರುಸಾರ್ವಭೌಮರ ಆರಾಧನೆಗೆ ಬರುವಂತಹ ಭಕ್ತಾದಿಗಳಿಗೆ ಅನೇಕ ವರ್ಷಗಳ ಕಾಲ ಶಿರಸಿಯಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಿ ಶ್ರೀರಾಜರ ಕೃಪೆಗೆ ಪಾತ್ರರಾದರು. 'ಶ್ರೀಹರಿಗುರುಭಜನಚಂದ್ರಿಕ' ಕೃತಿಯಂತೂ ಹದಿನಾಲ್ಕಕ್ಕೂ ಹೆಚ್ಚಿನ ಮುದ್ರಣವನ್ನು ಪಡೆದು ಅರವತ್ತುಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಎಂದರೆ ಶ್ರೀದಾಸರ ಸೇವೆಯ ಮಹತಿ ನಮಗೆ ಅರಿವಾಗದಿರದು. ಪರಮಪೂಜ್ಯ ಶ್ರೀವಿಶ್ವೇಶತೀರ್ಥರು,  ಶ್ರೀಸತ್ಯಪ್ರಮೋದತೀರ್ಥರು, ಶ್ರೀಸುಶಮೀಂದ್ರತೀರ್ಥರು, ಶ್ರೀಸತ್ಯಾತ್ಮತೀರ್ಥರೇ ಮೊದಲಾದ ಯತಿಗಳ ಪ್ರೀತ್ಯಾದರಪೂರ್ವಕ ಅನುಗ್ರಹಕ್ಕೆ ಪಾತ್ರರಾದವರು ಶ್ರೀಕೃಷ್ಣದಾಸರು.   ನಾಡಿನ ಹೆಸರಾಂತ ಹರಿದಾಸರ ಕೃತಿಗಳ ಗಾಯಕರಾದ ಶ್ರೀಅನಂತಕುಲಕರ್ಣಿ, ಶ್ರೀರಾಯಚೂರು ಶೇಷಗಿರಿದಾಸ್, ಶ್ರೀಪುತ್ತೂರು ನರಸಿಂಹ ನಾಯಕ್, ಶ್ರೀಕನಕಗಿರಿ ಹುಸೇನ್ ಸಾಬ್ ದಾಸರೇ ಮೊದಲಾದವರಿಗೆ ಸ್ಪೂರ್ತಿದಾತರಾಗಿದ್ದ ಶ್ರೀಮುರಗೋಡು ಕೃಷ್ಣದಾಸರನ್ನು ಅವರ ಮನೆಯಲ್ಲಿ ಒಂದು ಬಾರಿ ದರ್ಶಿಸುವ ಸಂದರ್ಭ ಇನ್ನೂ ಮನಸ್ಸಿನಲ್ಲಿ ಹಸುರಾಗಿದೆ. ಬಿ.ಎಚ್.ಎಸ್.ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ, ಸಹೃದಯಿ, ಸಾಹಿತ್ಯಪ್ರೇಮಿ ಪ್ರಾಂಶುಪಾಲ ಶ್ರೀಡಿ.ಎನ್.ವೆಂಕಟರಾವ್ ರವರು ದಾಸಸಾಹಿತ್ಯದ ಮೇಲಿನ ಅತ್ಯಂತ ಪ್ರೀತಿಯಿಂದ 'ಹರಿದಾಸಸಾಹಿತ್ಯೋತ್ಸವ'ವನ್ನು ಆಯೋಜಿಸಿದ್ದಂತಹ ಸಂದರ್ಭದಲ್ಲಿ, ಶ್ರೀಭದ್ರಗಿರಿ ಅಚ್ಯುತದಾಸರು, ಶ್ರೀವಿದ್ಯಾಭೂಷಣರು, ಶ್ರೀಹುಸೇನಸಾಬರು, ಶ್ರೀಆರ್.ಕೆ.ಪದ್ಮನಾಭ, ಶ್ರೀರಾಯಚೂರು ಶೇಷಗಿರಿದಾಸರೇ ಮೊದಲಾದ ಮಹನೀಯರು ಭಾಗವಹಿಸಿದ್ದ ಅಪೂರ್ವವವಾದಂತಹ ಕಾರ್ಯಕ್ರಮವದು. ಸಮಾರೋಪ ಸಮಾರಂಭದಲ್ಲಿ ಶ್ರೀ ಮುರಗೋಡು ಕೃಷ್ಣದಾಸರಿಗೆ ಅಭಿವಂದನ ಸಲ್ಲಿಸಿ, ಅವರಿಂದ ಹರಿಭಕ್ತಿಗಾನವನ್ನು ಶ್ರವಣ ಮಾಡುವಂತೆ ಹಿರಿಯ ಹರಿದಾಸಸಾಹಿತ್ಯ ವಿದ್ವಾಂಸರೂ, ವಿಜಯ ಪಿ.ಯು.ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಅನಂತ ಪದ್ಮನಾಭರಾವ್ ನೀಡಿದ್ದ ಸಲಹೆಯಂತೆ, ಶ್ರೀವೆಂಕಟರಾವ್, ಡಾ.ಅನಂತಪದ್ಮನಾಭರಾವ್ ರೊಂದಿಗೆ ಶ್ರೀಮುರಗೋಡುದಾಸರ ಮನೆಗೆ ಹೋದಂತಹ ಸಂದರ್ಭದಲ್ಲಿ ಆ ಮೇರು ಸಾಧಕನ ಸರಳತೆ, ಸಜ್ಜನಿಕೆ, ಹರಿಗರ್ಪಿತವಾದಂತಹ ಜೀವನದ ದರ್ಶನವಾಯಿತು. ನಮ್ಮ ಪುಣ್ಯದಂತೆ ಸಮಾರೋಪ ಸಮಾರಂಭದಲ್ಲಿ ಅಭಿವಂದನೆ ಸ್ವೀಕರಿಸಿ, ಹರಿದಾಸರ ಕೃತಿಗಳನ್ನು ಶ್ರೀದಾಸರು ತಮ್ಮ ಪುತ್ರ ಶ್ರೀವಿಜಯವಿಠಲಾಚಾರ್ಯರೊಡನೆ ಹಾಡಲು ಪ್ರಾರಂಭಿಸಿದಾಗ, ನಾವೇ ಹಾಕಿಕೊಂಡಿದ್ದ ಸಮಯದ ಮಿತಿ ಮನಸ್ಸಿನಿಂದ ಮರೆಯಾಯಿತು. ಸಭಾಂಗಣ ಆ ಕಂಚಿನ ಕಂಠದ ಭಾವಪೂರ್ಣ, ಭಕ್ತಿ ಭರಿತವಾದ ಗಾನದಲ್ಲಿ ಲೀನವಾಯಿತು. ಅಂತಹ ಮಹಾಸಾಧಕ ಶ್ರೀಮುರಗೋಡು ಕೃಷ್ಣದಾಸರ ದಿವ್ಯ ಚೇತನಕ್ಕೆ ಅನಂತ ಪ್ರಣಾಮಗಳು. -ಶ್ರೀಕೃಷ್ಣ,ಮಧ್ವರು ತಮ್ಮ ಸೇವೆಯನ್ನು ನಿರಂತರ ಮಾಡಿದ ಇಂತಹ ಪವಿತ್ರಚೇತನಗಳ ಸ್ಮರಣೆಯಿಂದ ತೃಪ್ತರಾಗಿ ಅನುಗ್ರಹಿಸಲಿ. -ವೇಣುಗೋಪಾಲ. ಬಿ.ಎನ್.
***********





shri krishnArpaNamastu... 

No comments:

Post a Comment