Friday 16 April 2021

kakhandaki krishnadasaru magha shukla dwadashi s/o Mahipati Dasa ಕಾಖಂಡಕಿ ಕೃಷ್ಣದಾಸರು

Kakhandaki Krishnadasaru s/o Mahipati Dasaru

Period during approximately 1630 to 1700

(Mahipati Dasa period 1611 to 1685)

Poorvashrama Name: Krishna dasaru

Guru: Mahipati Dasa

Ankita: Guru Mahipati

Place: Kakhandaki

Aradhana: magha shukla dwadashi

****


ದಾಸರ ಹೆಸರು : ಕಾಖಂಡಕಿ ಶ್ರೀ ಕೃಷ್ಣದಾಸರು

ಜನ್ಮ ಸ್ಥಳ : ಕಾಖಂಡಕಿ

ತಂದೆ ಹೆಸರು : ಕಾಖಂಡಕಿ ಮಹಿಪತಿರಾಯರು

ತಾಯಿ ಹೆಸರು : ತಿರುಮಲಬಾು

ಕಾಲ : check 1672 - 

ಅಂಕಿತನಾಮ : ಮಹಿಪತಿಸುತ,ಮಹಿಪತಿವಂದನ,ಮಹಿಪತಿಕಂದ

ಲಭ್ಯ ಕೀರ್ತನೆಗಳ ಸಂಖ್ಯೆ : 750

ಗುರುವಿನ ಹೆಸರು : ತಂದೆಯವರಾದ ಮಹಿಪತಿರಾಯರು

ಆಶ್ರಯ : ತಂದೆ

ರೂಪ : ಹರಿದಾಸರು

ಪೂರ್ವಾಶ್ರಮದ ಹೆಸರು : ಕೃಷ್ಣರಾಯ

ಮಕ್ಕಳು: ಅವರ ಹೆಸರು : ಏಳು ಜವ,ರಾಮ,ಯಾದಪ್ಪ (ಝಂಪ), ಗಿರಿ, ದೆವಪ್ಪಯ್ಯ

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಆಖ್ಯಾಯಿಕೆಗಳು, ಖಂಡ ಕಾವ್ಯಗಳು

ಒಡಹುಟ್ಟಿದವರು : ದೇವರಾಯ (ಅಣ್ಣ)

ವೃತ್ತಿ : ಹರಿದಾಸವೃತ್ತಿ

ಕಾಲವಾದ ಸ್ಥಳ ಮತ್ತು ದಿನ : ಕಾಖಂಡಕಿ ಮಾಘಶುದ್ಧ ದ್ವಾದಶಿ

ವೃಂದಾವನ ಇರುವ ಸ್ಥಳ : ಕಾಖಂಡಕಿ (ಬಿಜಾಪುರ ಜಿಲ್ಲೆ)

ಕೃತಿಯ ವೈಶಿಷ್ಟ್ಯ : ಪ್ರಾಸ ಅನುಪ್ರಾಸ ಹಾಗೂ ಪೌರಾಣಿಕ ಕಥೆಗಳು ಗಾಢಪ್ರಭಾವವನ್ನು ಇವರ ಕೃತಿಗಳಲ್ಲಿ ಕಾಣಬಹುದು/ ಅನನ್ಯವಾದ ಭಕ್ತಿ. ಸಮರ್ಪಣಭಾವ ಲೋಕಸಂಗ್ರಹ ಇವರ ಕೃತಿಗಳಲ್ಲಿ ನಿರೂಪಿತವಾಗಿದೆ.

****

ಭಜಾಮಿ ಕೃಷ್ಣ ರಾಜಾನಾಂ ಭೂಪತೇಸ್ತನುಜಂ ವಿಭುಂ/ ಜ್ಞಾನೋಪದೇಶ ಕರ್ತಾರಂ ಸರ್ವದಾನಂದ ರೂಪಿಣಂ//


ಕಾಖಂಡಕಿ ಶ್ರೀ  ಮಹಿಪತಿದಾಸರ ಪುತ್ರರು, ಅಪರೋಕ್ಷಜ್ಞಾನಿಗಳು, ಗುರುಮಹಿಪತಿಸುತ,ಮಹಿಪತಿನಂದನ,ತರಳಮಹಿಪತಿ ಇತ್ಯಾದಿ ಅಂಕಿತನಾಮಗಳಿಂದ ಅದ್ಭುತವಾದ ತತ್ವಗರ್ಭಿತವಾದ ಕೃತಿಗಳನ್ನು  ಜೊತೆಗೆ ವಾಮನ ಚರಿತ್ರೆ, ಗಜೇಂದ್ರಮೋಕ್ಷ,  ಪ್ರಲ್ಹಾದ ಚರಿತ್ರೆ, ಸುಧಾಮ ಚರಿತ್ರೆ ಎನ್ನುವ ದೀರ್ಘಕೃತಿಗಳೂ ರಚಿಸುವುದರ ಜೊತೆ, ಶ್ರೀಮದ್ರಾಮಾಯಣವನ್ನು ಅತ್ಯಂತ ಮೇರುಕೃತಿಯಾಗಿ ಪದ್ಯಗಳು,  ಶ್ಲೋಕಗಳು,  ಸವಾಯಿಗಳು,  ಭಾಮಿನೀಷಟ್ಪದಿಗಳು, ಪರಿವರ್ಧಿನಿಗಳು,  ಚಾಮರಿಗಳು, ವಾರ್ಧಿಕ ಷಟ್ಪದಿ ಇತ್ಯಾದಿ ಛಂದಸ್ಸಿನ ಅಂಶಗಳಿಂದ ತುಂಬಿಸಿ  ಅದ್ಭುತವಾದ ರೀತಿಯಲ್ಲಿ ರಚಿಸಿದವರು. ತಮ್ಮ ತಂದೆಯವರಂತೆಯೇ ದಾಸ ಸಾಹಿತ್ಯದ ಉನ್ನತಿಗೆ ತಮ್ಮ ಇಡೀ ಜೀವನವನ್ನು ಸಮರ್ಪಣೆ  ಮಾಡಿದವರಾದ, ಪರಮಶ್ರೇಷ್ಠ ದಾಸವರೇಣ್ಯರಾದ  ಶ್ರೀ ಕಾಖಂಡಕಿ ಕೃಷ್ಣದಾಸರ ಆರಾಧನಾ ಮಹೋತ್ಸವದ ಶುಭದಿನವಿಂದು (ಆರಾಧನೆ ಏಕಾದಶಿ - ಆಚರಣೆ ದ್ವಾದಶಿ)..

***


info from kannadasiri.in

By Krishna Kolhara Kulkarni

ಕಾಖಂಡಕಿ ಕೃಷ್ಣದಾಸರು

ಹರಿದಾಸರೂ, ಶ್ರೇಷ್ಠ ಅನುಭಾವ ಕವಿಗಳೂ ಆದ ಕಾಖಂಡಕಿಯ ಮಹಿಪತಿ ರಾಯರ ಮಕ್ಕಳು ಕೃಷ್ಣದಾಸರು. ತಂದೆಯ ದಾರಿಯಲ್ಲಿ ಸಾಗಿದ ಕೃಷ್ಣದಾಸರು ಏಳುನೂರಕ್ಕೂ ಮಿಕ್ಕಿದ ಕೀರ್ತನೆಗಳನ್ನು ಬರೆದಿದ್ದಾರೆ, ಉಗಾಭೋಗ, ಒಂದು ಸುಳಾದಿ ಹಾಗೂ ಅನೇಕ ವಚನಗಳ ಜೊತೆಗೆ ಅನೇಕ ಖಂಡ ಕಾವ್ಯಗಳನ್ನೂ, ಆಖ್ಯಾನ-ಗಳನ್ನೂ ರಚಿಸಿದ್ದಾರೆ. ವಿಜಾಪುರ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷ್ಣದಾಸರ ಕೃತಿಗಳು ಜನಪ್ರಿಯವಾಗಿವೆ.

ಮಹಿಪತಿರಾಯರಂತೆ ಅವರ ಮಕ್ಕಳಾದ ಕೃಷ್ಣದಾಸರು ತಮ್ಮ ಕುರಿತು ಚಾರಿತ್ರಿಕವಾಗಿ ಏನನ್ನೂ ಹೇಳಲಿಲ್ಲ. ಆದರೂ ಮಹಿಪತಿರಾಯರ ಕುರಿತು ಕೃಷ್ಣದಾಸರ ಮೊಮ್ಮಕ್ಕಳು ಅಲ್ಲಲ್ಲಿ ಹೇಳಿರುವರು. ರುಕ್ಮಜದಾಸನೆಂಬ ಕವಿಯ ಮರಾಠಿ ಅಪೂರ್ಣ ಕಾವ್ಯ ದೊರೆಯುತ್ತದೆ. ಆದರೆ ಕೃಷ್ಣದಾಸರ ಕುರಿತು ಏನೂ ದೊರೆಯುವುದಿಲ್ಲ.

ಪರಂಪರೆಯಿಂದ ಕೇಳಿಬಂದ ಚರಿತ್ರೆಯಂತೆ, ಮಹಿಪತಿರಾಯರಿಗೆ ಇಬ್ಬರು ಮಕ್ಕಳು. ಒಬ್ಬರ ಹೆಸರು ದೇವರಾಯ ಇನ್ನೊಬ್ಬರು ಕೃಷ್ಣದಾಸರು. ಅವರ ಕಾಲ ಕ್ರಿ.ಶ. ಸು. 1673 ರಿಂದ 17291. ಮಹಿಪತಿರಾಯರು ತಮ್ಮ ಸಾಧನೆಗೆ ವಿಜಾಪುರದ ಹತ್ತಿರದ ಕಾಖಂಡಕಿ ಗ್ರಾಮದಲ್ಲಿ ಬಂದು ವಾಸಮಾಡ ಹತ್ತಿದರು. ಅಲ್ಲಿ ಅವರಿಗೆ ಅವಳಿ ಮಕ್ಕಳ ಜನನವಾಯಿತು. ದೇವರಾಯರು ತಮ್ಮ ಕ್ಷಾತ್ರ ವೃತ್ತಿಯಿಂದ ಜಾಲವಾದಿಯ ದೇಸಗತಿಯನ್ನು ಸಂಪಾದಿಸಿದರು. ಅಂದಿನ ಕಾಲದಲ್ಲಿ `ಡೋಣ ಶಿವಾಜಿ’ ಎಂದು ಹೆಸರು ಗಳಿಸಿದರು. ಕೃಷ್ಣದಾಸರು ತಂದೆಯ ಮಾರ್ಗದರ್ಶನದಲ್ಲಿ ತಾಳ ತಂಬೂರಿಗಳನ್ನು ಹಿಡಿದರು. ಹರಿದಾಸರಾದರು. ಕೃಷ್ಣದಾಸರಿಗೆ ಏಳು ಜನ ಗಂಡು ಮಕ್ಕಳು. ಅವರ ಮನೆತನದ ವಂಶಾವಳಿಯಲ್ಲಿ ಎಲ್ಲ ಏಳು ಜನರ ಹೆಸರುಗಳೂ ದೊರೆಯುತ್ತವೆ. ಬಹುತೇಕ ಅವೆಲ್ಲ ಮನೆತನಗಳು ಇಂದಿಗೂ ಜೀವಂತವಾಗಿವೆ. ಮಹಿಪತಿರಾಯರ ವೃಂದಾವನದ ಹತ್ತಿರ ಕಾಖಂಡಕಿಯಲ್ಲಿ ಕೃಷ್ಣದಾಸರ ವೃಂದಾವನವೂ ಇದೆ. ಅಲ್ಲಿ ಪ್ರತಿವರುಷ ಮಾಘ ಶುದ್ಧ ದ್ವಾದಶಿಯಂದು ಆರಾಧನೆ ಜರುಗುತ್ತದೆ. ಕೃಷ್ಣದಾಸರ ಮುದ್ರಿಕೆಗಳು:- ಮಹಿಪತಿನಂದನ, ಮಹಿಪತಿಕಂದ, ಮಹಿಪತಿಸುತ, ಮಹಿಪತಿಸುತ ಪ್ರಭು, ಮಹಿಪತಿನಂದನ ಕೈವಾರಿ, ಮಹಿಪತಿಚಿನ್ನ ಪ್ರಭು, ಮಹಿಪತಿಜ, ಮಹಿಪತಿ ಅಣುಗ, ಬಾಬಾಮಹಿಪತಿ, ಗುರುಮಹಿಪತಿ ಪ್ರಭು, ತಂದೆ ಮಹಿಪತಿ, ತಂದೆ ಮಹಿಪತಿ ನಂದನ, ತಂದೆ ಗುರುವರಮಹಿಪತಿ, ತಂದೆ ಮಹಿಪತಿನಂದನ ಪ್ರಾಣ, ತಂದೆ ಮಹಿಪತಿನಂದನ ಸಾರಥಿ, ತಂದೆ ಮಹಿಪತಿಕಂದ, ತಂದೆ ಮಹಿಪತಿಬಾಲ, ಗುರುಮಹಿಪತಿಸುತ, ಗುರುವರ ಮಹಿಪತಿ ಮತ್ತು ಗುರುವರ ಮಹಿಪತಿ ನಂದನ, ಕೃಷ್ಣನ ಸ್ವಾಮಿ.

ಕೃಷ್ಣದಾಸರ ಸುಮಾರು 750ಕ್ಕಿಂತ ಅಧಿಕ ಕೃತಿಗಳನ್ನು ಇಲ್ಲಿ ಸಂಪಾದಿಸಲಾಗಿದೆ. ಅವುಗಳನ್ನು

1. ದೇವತಾಸ್ತುತಿ

2. ಗುರುಸ್ತೋತ್ರ

3. ಗುರುಭಕ್ತಿ

4. ಲೋಕ ಸಂಗ್ರಹ ಹಾಗು

5. ಸಮ್ಮಿಶ್ರ ಎಂದು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ದೇವತಾ ಸ್ತೋತ್ರ

ಮೂಲತಃ ಮಾಧ್ವರಾದ ಕೃಷ್ಣದಾಸರು ಮಧ್ವ ಸಿದ್ಧಾಂತ ಅನುಗುಣವಾಗಿ ದೇವತಾ ತಾರತಮ್ಯದ ಸ್ತುತಿ-ಪರ ಕೀರ್ತನೆಗಳನ್ನು ರಚಿಸಿದ್ದಾರೆ. ತಂದೆ ಮಹಿಪತಿರಾಯರದು ಯೋಗ ಪ್ರಧಾನವಾದ ಸಾಧನೆಯಾಗಿತ್ತು. ಅಲ್ಲಿ ಕಾಣದ ಸಾಹಿತ್ಯ ಮಗನಲ್ಲಿ ವಿಪುಲವಾಗಿ ರಚಿತವಾಗಿದೆ.

ಹರಿಸರ್ವೋತ್ತಮತ್ವವನ್ನು ಪ್ರತಿಪಾದಿಸುವಾಗ ಶ್ರೀಹರಿಯ ಗುಣಗಾನವನ್ನು ಮಾಡುವಾಗ ಆತನ ಹತ್ತು ಅವತಾರಗಳಿಗೆ ವಿಶೇಷ ಪ್ರಾಧ್ಯಾನವನ್ನು ಕೊಟ್ಟಿದ್ದಾರೆ. ಉಳಿದ ಹರಿದಾಸರಂತೆ ರಾಮಾಯಣ ಭಾಗವತಗಳ ಕಥಾನಕಗಳು, ಹರಿಭಕ್ತರ ಉಲ್ಲೇಖಗಳು ಹೇರಳವಾಗಿ ಬರುತ್ತವೆ. ಪರಮಾತ್ಮನಲ್ಲಿ ಅನನ್ಯವಾದ ಭಕ್ತಿ, ಸರ್ವಸಮರ್ಪಣ ಭಾವ, ಆತನ ದರ್ಶನ ಕುತೂಹಲ, ಆರ್ತ ಭಾವ, ವಾತ್ಸಲ್ಯ ಅವರ ಕೃತಿಗಳಲ್ಲಿ ಉಕ್ಕಿ ಹರಿದಿವೆ.

ಅವರ 750ಕ್ಕಿಂತ ಅಧಿಕ ಕೃತಿಗಳಲ್ಲಿ ಸುಮಾರು ನಾಲ್ಕು ನೂರು ಕೃತಿಗಳು ದೇವತಾ ಸ್ತುತಿಗೆ ಮೀಸಲಾಗಿದೆ.

`ಬರೆ ವಾಚಾಭಿಮಾನವೇತಕೆ

ಹರಿ ಲೀಲಾಮೃತ ಸೇವಿಸಲಿಕ್ಕೆ'

ಎಂಬುದು ಅವರ ಅಭಿಪ್ರಾಯ `ಸಂಸ್ಕøತ ವಂದ್ಯ ಪ್ರಾಕೃತ ನಿಂದ್ಯ - ಸುಕೃತಿಗಳಾಡುದೇ ಕುಂದಾ' ಎಂದು ಸಂಸ್ಕøತ ಪಂಡಿತರಿಗೆಯೇ ಅದು ಕುಂದು ಎನ್ನುತ್ತಾರೆ. `ಕನ್ನಡ ನುಡಿ ಎಂದ್ಹಳಿಯಬೇಡಿ ಕನ್ನಡಿ ದರ್ಪಣವಲ್ಲವೆ ನೋಡಿ' ಎನ್ನುವಾಗ ಸ್ವರೂಪ ದರ್ಶನ ಕನ್ನಡ ಮಾಧ್ಯಮದಿಂದಲೇ ಸಾಧ್ಯವೆನ್ನುತ್ತಾರೆ.

ಕೃಷ್ಣದಾಸರು ಮಾಧ್ವರು. ಮಧ್ವಮತದ ಅನುಸಾರವಾಗಿ ತಾರತಮ್ಯೊಕ್ತ ದೇವತಾ ಸ್ತುತಿಗಳನ್ನು ರಚಿಸಿದ್ದರೂ ಅವುಗಳಲ್ಲಿ ಪರಮಾತ್ಮನ ಸ್ತುತಿಗೆ ಅಧಿಕ ಪಾಲು ದೊರೆತಿದೆ. ದೊರೆತ ಸುಮಾರು 400ಕ್ಕಿಂತ ಅಧಿಕ ದೇವತಾ ಸ್ತುತಿಪರವಾದ ರಚನೆಗಳಲ್ಲಿ ತುಳಸಿ, ಕೃಷ್ಣವೇಣಿ, ಭಾಗೀರಥಿ, ಗಣಪತಿ, ಪಾರ್ವತಿ, ಶಿವ, ಹನುಮಂತ, ಶಾರದೆ, ಲಕ್ಷ್ಮೀ, ವೇದವ್ಯಾಸರು ಹಾಗು ಭಗವದ್ಗೀತೆಗಳ ಕುರಿತು ಸುಮಾರು 70 ಕೃತಿಗಳಿವೆ. ಅದರಲ್ಲೂ ಅರ್ಧದಷ್ಟು ಶಿವನ ಸ್ತುತಿಪರಕೃತಿಗಳು. ಸಮಕಾಲೀನ ಉತ್ತರಾದಿ ಮಠದ ಯತಿಗಳಾದ ಶ್ರೀ ಸತ್ಯ ಪೂರ್ಣರ ಕುರಿತು ಮೂರು ಕೃತಿಗಳಿವೆ. ಉಳಿದಂತೆ ಯಾವ ಮಾಧ್ವಯತಿಗಳಾಗಲೀ, ಹರಿದಾಸ ಪರಂಪರೆಯ ತಮ್ಮ ಹಿಂದಿನ ಯಾವ ದಾಸರನ್ನು ಸ್ಮರಿಸದಿದ್ದದು ವಿಶೇಷವಾಗಿದೆ. ಪುರಂದರ - ಕನಕ ದಾಸರನ್ನೂ ಸ್ಮರಿಸುವುದಿಲ್ಲ. ಆದರೆ ಅವರ ಹಾಗು ಸಮಕಾಲೀನ ಎಲ್ಲ ಹರಿದಾಸರ ಕೃತಿಗಳ ಪರಿಚಯ ಅವರಿಗಿತ್ತು ಎಂಬುದನ್ನು ಕಾಣಬಹುದಾಗಿದೆ. ಅವರ ಕೃತಿಗಳೊಂದಿಗೆ ಶಿವಶರಣರ ವಚನಗಳೂ ಅವರಿಗೆ ಪರಿಚಿತವಾಗಿದ್ದುವು ಎನ್ನಲು ಅವರ ಪ್ರಭಾವದಲ್ಲಿಯೇ ರಚಿಸಿದ ಹಲವಾರು ವಚನಗಳಿಂದ ಕಾಣಬಹುದು.

ಕೃಷ್ಣದಾಸರ ದೇವತಾ ಸ್ತುತಿಗಳ ವೈಶಿಷ್ಟ್ಯವೆಂದರೆ, ಪ್ರಾಸ-ಅನುಪ್ರಾಸ ಹಾಗು ಪೌರಾಣಿಕ ಕಥೆಗಳ ಗಾಢ ಪ್ರಭಾವ, ಭಾರತ, ಭಾಗವತ ಹಾಗು ರಾಮಾಯಣಗಳ ಅತಿ ಸಣ್ಣ ಪಾತ್ರವೂ ಅವರ ತುದಿನಾಲಿಗೆಯ ಮೇಲಿರಬೇಕು. ಶಿವನ ಮೇಲಿನ ಒಂದು ಷಟ್ಪದಿ.

ನಕ್ಷತ್ರರಮಣನಯ್ಯನಿಗೊಲಿದು ಶರವನ್ನಿತ್ತೆ |

ನಕ್ಷತ್ರದೊಲ್ಲಭನ ತಮ್ಮನಸುತನ ಸುಟ್ಟೆ |

ನಕ್ಷತ್ರ ಇಲ್ಲದವನ ವೈರಿಗಮನನ ತಾತ ನಕ್ಷತ್ರಕಾಂತಧರನೆ ||

ನಕ್ಷತ್ರ ಜಾತನಗ್ರಜನ ಮಸ್ತಕವ ತರಿದೇ |

ನಕ್ಷತ್ರ ಸಹಸ್ರ ಉಳ್ಳವನ ದ್ವಾರವನು ಕಾಯ್ದೆ |

ನಕ್ಷತ್ರ ನೀನೆ ಇಂದ್ರಾದಿದೇವತೆಗಳಿಗೆ ಗುರು

ಮಹಿಪತಿ ಸ್ವಾಮಿ ನಕ್ಷತ್ರ ಭೂಷ ಸಲಹೋ ||

ಇಲ್ಲಿಯ ಪ್ರತಿಯೊಂದು ನಕ್ಷತ್ರಗಳು 27 ನಕ್ಷತ್ರಗಳಲ್ಲಿಯ ಒಂದಾಗಿದ್ದು ಅವುಗಳ ಹೆಸರಿನಿಂದ ಭಾರತ ಭಾಗವತಾದಿಗಳಲ್ಲಿಯ ಉಪಕಥೆಗಳನ್ನು ನೆನಪಿಸುತ್ತಾರೆ. ನಕ್ಷತ್ರ ರಮಣಯ್ಯನಿಗೆ ಒಲಿದು ಶರವನ್ನಿತ್ತೆ ಎಂದಾಗ ಉತ್ತರೆ (ನಕ್ಷತ್ರ) ಯ ಗಂಡ ಅಭಿಮನ್ಯುವಿನ ಅಪ್ಪ ಅರ್ಜುನನಿಗೆ ಒಲಿದು ಪಾಶು-ಪತಾಸ್ತ್ರವನ್ನಿತ್ತವನು ಶಿವನೆಂದಾಗುತ್ತದೆ. ಮಹಾಭಾರತದಲ್ಲಿ ಬರುವ ಕಥೆ.

ಎರಡನೆಯ ಸಾಲು, ನಕ್ಷತ್ರದೊಲ್ಲಭನ ತಮ್ಮನ ಸುತನ ಸುಟ್ಟೆ ಎನ್ನುವಾಗ ರೇವತಿ (ನಕ್ಷತ್ರ)ಯ ಗಂಡ ಬಲರಾಮನ ತಮ್ಮ ಕೃಷ್ಣನ ಮಗ ಮನ್ಮಥನನ್ನು ಸುಟ್ಟ ಶಿವ ಎಂದಾಗುತ್ತದೆ. ಮೂರನೆಯ ಸಾಲು, ನಕ್ಷತ್ರ ಇಲ್ಲದವನ ವೈರಿಗಮನನ ತಾತ ಎನ್ನುವಾಗ ಶ್ರವಣಾ (ನಕ್ಷತ್ರ)= ಕಿವಿ ಇಲ್ಲದ ಹಾವಿನ ವೈರಿ ನವಿಲಿನ ಮೇಲೆ ಹೋಗುವ ಷಣ್ಮುಖನ ಅಪ್ಪ ಶಿವ ಎಂದಾಯಿತು. ಹೀಗೆಯೇ ಪ್ರತಿಯೊಂದು ನಕ್ಷತ್ರಕ್ಕೂ ವಿಶೇಷ ಅರ್ಥವಿದೆ.

ಹೀಗೆ ಕಥೆ - ಉಪಕಥೆಗಳನ್ನು ಹೆಣೆದು ಸ್ತುತಿಸುವ ದಾಸರು ಅದೇ ಶಿವನನ್ನು `ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗ' ಪೂಜೆ ಮಾಡುವ ಬನ್ನಿ ಎನ್ನುವಾಗ ಅಪ್ಪಟ ಶಿವ ಶರಣರಾಗುತ್ತಾರೆ.

ಮಾಧ್ವರ ಮೋಕ್ಷಕ್ಕೆ ದಾರಿ ತೋರುವವನು ಹನುಮಂತ ಆತ `ಮುಖ್ಯ ಪ್ರಾಣದೇವರೂ ಹೌದು. ಅವನನ್ನು ಸ್ತುತಿಸುವ `ಶರಣೆಂಬೆ ಗುರುರಾಯ' ಎಂಬ ಕೀರ್ತನೆಯಲ್ಲಿ ಶ್ರೀ ಮಧ್ವಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಸಾರವನ್ನೆ ಸಾಂಕೇತಿಕವಾಗಿ ಹೇಳಿದ್ದು ದಾಸರ ಪಾಂಡಿತ್ಯಕ್ಕೆ ಉದಾಹರಣೆಯಾಗಿದೆ.

ಲಕ್ಷ್ಮೀದೇವಿಯನ್ನು ಸ್ತುತಿಸುವ `ಎದ್ದಳಿ ಗೀದಕೋ ಶ್ರೀರಮಣಿ ಎದ್ದಳಿಗೀದಕೋ’ ಎಂಬ ಕೀರ್ತನೆ ಅವರ ಶೃಂಗಾರ ಕಲ್ಪನೆಗೆ ಹೆಸರಾಗಿದೆ. `ಮುದ್ದು ಶ್ರೀ ಹರಿಯ ತೋಳತೆಕ್ಕೆಯ ನುಸುಳಿ' ಎದ್ದಳಂತೆ ! ಹಿಂದಿನ ರಾತ್ರಿ ಪರಮಾತ್ಮನೊಡನಾದ ರತಿಕ್ರೀಡೆಯನ್ನು ನವಿರಾಗಿ ಹೇಳುತ್ತ, ಕೊನೆಯಲ್ಲಿ `ತನ್ನ ನಂಬಿದ ಬಾಲರ ಹೊರೆಯಲು ಈರೇಳು ಜಗದ ಜೀವನ ಪಡೆದ ಜನನಿ' ಎದ್ದಳಂತೆ

ಪರಮಾತ್ಮನನ್ನು ಸ್ತುತಿಸಲು ಶಬ್ದಗಳೇ ಸಾಲವು. ಆತನ ದರ್ಶನ ಕುತೂಹಲ ಆಗಮನ, ಬಾಲಲೀಲೆ, ಶ್ರೀ ಹರಿಯ ಹತ್ತವತಾರಗಳ ವರ್ಣನೆಯನ್ನು ಮಾಡುವಾಗ ದಾಸರು ತನ್ಮಯರಾಗಿ ಬಿಡುತ್ತಾರೆ. ಅವನೊಂದಿಗಿನ ದಾಸ್ಯ, ಸಖ್ಯ-ವಾತ್ಸಲ್ಯ ಭಾವನೆಗಳೊಂದಿಗೆ ವಿರಹದಿಂದ ಬಳಲಿದ್ದಾರೆ.

`ಭಕುತರರಿಣಕಂಜಿ ಅಡಗಿದರೇ

ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯ'

ಎಂದು ಪ್ರಾರಂಭವಾಗುವ ಮೂರು ನುಡಿಗಳ ಕೀರ್ತನೆಯಲ್ಲಿ ಶ್ರೀಹರಿಯ ದಶಾವತಾರಗಳನ್ನು ಸುಂದರವಾಗಿ ಸ್ಮರಿಸುತ್ತಾರೆ ``ಕತ್ತಲೆಯೊಳು ಹೆಜ್ಜೆದೊರದೇ ತಿರುಗುತಾ '' (ಮತ್ಸ್ಯ) ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ (ಕೂರ್ಮ) ಅತ್ತಿತ್ತ ನೋಡದೆವೆ ಝಡಪಿನೊಳು ಹೊಕ್ಕು (ವರಾಹ) ಉತ್ತಮ ನರಮೃಗ ದಂತಡವಿಯ ಸೇರಿ (ನಾರಸಿಂಹ) ಹೀಗೆ ಸಾಗುತ್ತದೆ.

ರಾಮ ಬಂದನೇನೆ ಶ್ರೀ ರಘುರಾಮ ಬಂದನೇನೆ, ಪ್ರೇಮಿಕ ಜನರನ್ನು ಪೊರೆಯಲು ಎಂಬ 5 ನುಡಿಗಳ ಕೀರ್ತನೆ ಪದಗಳ ಅನುರಣನದಿಂದ ಕರ್ಣಮಧುರವಾಗಿದೆ.

`ನಮ್ಮರಂಗ ಮಧುರೆಗೆ ನಡೆತರಲು' ಎಂಬ ಒಂಭತ್ತು ನುಡಿಗಳ ನಿಡಿದಾದ ಕೃತಿಯಲ್ಲಿ ದಾಸರ ಕಲ್ಪನೆ ಗರಿ ಕಟ್ಟುತ್ತದೆ. ವೃಂದಾವನದಿಂದ ಅಕ್ರೂರನೊಡನೆ ಮಥುರೆಗೆ ಹೋಗುವಾಗ ಕೃಷ್ಣನ ಅಗಲುವಿಕೆಯ ಚಿತ್ರ ಅನೇಕ ಕೃತಿಗಳಲ್ಲಿ ಬಂದಿದೆ. ಆದರೆ ಇಲ್ಲಿ ಕೃಷ್ಣ ಮಥುರಾ ನಗರದಲ್ಲಿ ಪ್ರವೇಶಿಸಿದಾಗ ಆಗಲೇ ಆತನ ಮಹಿಮೆಯನ್ನು ಕೇಳಿದ ಜನರು ಹೇಗೆ ಸ್ಪಂದಿಸಿದರು ಎಂಬುದನ್ನು ದಾಸರು ತುಂಬ ಸುಂದರವಾಗಿ ಚಿತ್ರಿಸಿದ್ದಾರೆ.

ಮೋಹನಕೃಷ್ಣನನ್ನು ಕಾಣಲು ಒಬ್ಬಳು ಅಳುತ್ತಿರುವ ಕಂದನಿಗೆ ಮೊಲೆ ಕೊಡದೆ ಬಂದರೆ ಇನ್ನೊಬ್ಬಳು ತಲೆಗೆ ಎಣ್ಣೆ ಹಚ್ಚಿಕೊಳ್ಳುತ್ತಿರುವಾಗ ಅರ್ಧದಲ್ಲಿಯೇ ಬಂದಳಂತೆ. ಮತ್ತೊಬ್ಬಳ ಕುಪ್ಪಸದ ಗುಂಡಿ ಬಿಚ್ಚಿದ ಅರಿವೇ ಇಲ್ಲದೇ ಬಂದರೆ ಮಗದೊಬ್ಬಳು `ಅಚ್ಚ ಮೈಯಿಂದ ಬಚ್ಚಲಲ್ಲಿ ಮಜ್ಜಕ್ಕೆ ಕುಳಿತವಳು' ಹಾಗೆಯೇ ಬಂದಳಂತೆ. ಇನ್ನೊಬ್ಬಳು ಗಡಿಬಿಡಿಯಲ್ಲಿ ತನ್ನ ಮಗುವೆಂದು ಅಳತೆಯ ಮಾನವನ್ನು ಬಗಲಲ್ಲಿ ಇಟ್ಟುಕೊಂಡು ಬಂದು ಕಣ್ಣು ಪಾರಣೆ ಮಾಡಿಕೊಂಡಳಂತೆ. ಮುನ್ನಿನ ದೋಷಗಳನ್ನೆಲ್ಲ ಪರಿಹರಿಸಿಕೊಂಡು ಪುಣ್ಯ ಸಂಗ್ರಹ ಮಾಡಿದಳಂತೆ!

`ಅಹುದಹುದು ಅನಾಥ ಬಂಧು' ಪರಮಾತ್ಮನು ಎಂಬಾಗ ತಮ್ಮ ಕುರಿತು `ಪತಿತರೊಳು ಪತಿತ ಅಧಮಾ ಆಮ್ಯಾಲ ಮತಿಹೀನ ಮೂಢ ಪರಮ' ರೆಂದು ಹೇಳಿಕೊಳ್ಳುತ್ತ ಅನಾಥ ಬಂಧುವು `ಮಹಿಪತಿ ಸುತನ ಕರ ಪಿಡಿದು ತನ್ನ ದಾಸರ ದಾಸ ದಾಸನೆನಿಸಿದ' ನಂತೆ !

`ಈ ಪರಿಯ ಸೊಬಗಿನ್ನಾವ ದೇವರಲ್ಲಿ ಕಾಣೆ' ಎಂದು ಪುರಂದರದಾಸರು ಹೇಳಿದರು. ಆದರೆ ಆ ಸೊಬಗು ಮಾತ್ರದಿಂದಲಲ್ಲ' ಎಂದೆಂದು ಆತನ ಜನ ಬಂಧು ಧೀನನಾಥ ತಂದೆ ಮಹಿಪತಿ ಸ್ವಾಮಿಯಂದರೇನು ಮಂದಮತಿ ಕುಂದು ಘನವಂದು ನೋಡದೆ. ಇಂದು ನಂದನನಿಗೆ ಸೇವೆ ಪದಲಿಡದಿದ್ದರೆ' ಆರು ನಿನಂಘ್ರಿ ಭಜಿಸುವರಯ್ಯಾ ಎಂದು ಪರಮಾತ್ಮನನ್ನು ಕೇಳುತ್ತಾರೆ. ಆತ ಕಮಲಭವ ಇಂದ್ರವಂದ್ಯನಾಗಿರಬೇಕು, ರಮೆ `ಧರಾದೇವಿಯ ರಮಣನಾಗಿರಬೇಕು ಜಗದುತ್ಪತ್ತಿ ಸ್ಥಿತಿಲಯ ಕರ್ತನಾಗಿರಬೇಕು ಆದರೆ ಯಮ ದೂತರೊಳಗಾದ ಅಜಮಿಳ, ಸುಗುಣ ಪ್ರಹ್ಲಾದ ಅಂಬರೀಷ ಕರಿವರ ಧ್ರುವಾದಿಗಳನುದ್ಧರಿಸಿ ಕಾಯದಿದ್ದರೆ' ಯಾರು ಆತನ ಅಂಘ್ರಿಗಳನ್ನು ಭಜಿಸುತ್ತಿದ್ದರು? ಆತನು ಸಾರ ಹೃದಯ ಸುರ ಮುನಿಜನ ಪ್ರಿಯನಾಗಿದ್ದರಿಂದಲೇ ಆತನ ಮಹಿಮೆ ತಾನೆ ? ಎನ್ನುತ್ತಾರೆ.

`ಇಂದಿರೇಶನ ಇಂದುವದನವ ಕಂಡು' ಧನ್ಯರಾದ ದಾಸರು `ಮುಕುಂದನ ಕೃಪೆಯಿಂದ ಪರಮಾನಂದ' ರಾಗಿದ್ದಾರೆ.

ಗುರುಸ್ತೋತ್ರ ಗುರುಭಕ್ತಿ

ಪರಮಾತ್ಮನ ಸ್ತುತಿಯ ಅನಂತರ ಕೃಷ್ಣದಾಸರ ಬಹುತೇಕ ಕೃತಿಗಳು ತಮ್ಮ ಗುರುಗಳಾದ ಸ್ವರೂಪೋದ್ಧಾರಕರಾದ ತಂದೆ ಮಹಿಪತಿರಾಯರ ಕುರಿತಾಗಿವೆ. ಸುಮಾರು ನೂರಕ್ಕಿಂತ ಅಧಿಕ ಕೃತಿಗಳಲ್ಲಿ ಮಹಿಪತಿರಾಯರನ್ನು ಸ್ತುತಿಸಿದ್ದಾರೆ.

ಗುರುವಿನ ಕರುಣೆ ಅಗಾಧವಾದದ್ದು ಎನ್ನುತ್ತಾರೆ. ತುಂಬಿದ ಭವ ಮಹಾಶರಧಿಯಲ್ಲಿ ಒಂಭತ್ತು ಛಿದ್ರದ ನಾವೆಯಲ್ಲಿ ನಂಬಿದ ಶರಣರನ್ನು ದಾಟಿಸುವ ಅಂಬಿಗನಾಗಿದ್ದಾನೆ. ಹರಿಯೆಲ್ಲರೊಳೆಂಬುದನ್ನು ಸಾರುತ್ತ ಹರಿಭಕ್ತಿಯ ಕೀಲವನ್ನು ತೋರಿಸಿ, ಜನನ-ಮರಣದ ದಾರಿಯನ್ನು ಹರಿಸಿದ್ದಾರೆ. ಗುರು ಮಹಿಪತಿ ಸ್ವಾಮಿಗಳ ಕರುಣೆ ಅಗಾಧವಾಗಿದೆ, ಅವರು ಪರಮ ಉದಾರಿಗಳು ಎನ್ನುತ್ತಾರೆ.

`ಎನಗಿನ್ಯಾತರ ಹಂಗು, ಘನಗುರು ತಾನಾದ ಶ್ರಯಧೇನು' ಎಂದು ಹೇಳಿದರೆ, ಮತ್ತೊಮ್ಮೆ `ಏನು ಪುಣ್ಯವ ಮಾಡಿದನೋ ಮುನ್ನೆ ಧನ್ಯಗೈಸಿದ ಗುರುಮಹೀಪತಿ ತಾನು' ಎನ್ನುತ್ತಾರೆ. `ಏನೆಂದು ಬಣ್ಣಿಸಲಿ ಗುರುರಾಯನಾ, ತಾ ನೆನೆದರೆ ಧನ್ಯಗೈಸುವನು' ಎಂಬುದಾಗಿ ಗುರುಗಳ ಮಹಿಮೆಯನ್ನು ಬಣ್ಣಿಸುವುದೇ ಅಸಾಧ್ಯವೆನ್ನುತ್ತಾರೆ. ಅಂಥ `ಗುರುರಾಯನ ಪಾದಗಳನ್ನು ಹಿಡಿ, ಹಿಡಿಹಿಡಿ ಪರಮ ಸದ್ಬಾವನೆ ಜಡಿ ಜಡಿಜಡಿ, ಎಂದು ಹೇಳುತ್ತಾರೆ.

`ಗುರುರಾಯನಂಥ ಕರುಣಾಳು ಕಾಣೆನು ಜಗದೊಳಗೆ' ಎಂದು ಪ್ರಾರಂಭವಾಗುವ ಐದು ನುಡಿಗಳ ಒಂದು ಕೃತಿಯಲ್ಲಿ ಗುರುಗಳ ಕರುಣೆಯನ್ನು ತುಂಬು ಹೃದಯದಿಂದ ಸ್ಮರಿಸುತ್ತಾರೆ. ಅಂತೆಯೇ `ಗುರುರಾಯನಾ ಮನೆಯಾ ನಾಯಿ ನಾನು' ಎಂದು ಇನ್ನೊಂದು ಕೃತಿಯಲ್ಲಿ ಹೇಳುತ್ತ `ಗುರು ಗುರು ಎನುತಲಿ ಇರುವೆ ಬಾಗಿಲದೊಳು' ಎನ್ನುತ್ತಾರೆ.

ಗುರುಗಳ ಆಶ್ರಯದ ಹೊರತು ದಾಸರಿಗೆ ಇನ್ನೇನೂ ಬೇಡ `ಗುರು ಕ್ಷೇತ್ರವೇ ಎನಗಿದು ಕಾಶಿ' ಎನ್ನುತ್ತಾರೆ. ಗುರುಗಳು ಹಾಗು ತಮ್ಮ ತಂದೆ ಮಹಿಪತಿರಾಯರ ಕುರಿತು ಅನನ್ಯವಾದ ಭಕ್ತಿ-ಸಂಪೂರ್ಣ ಸಮರ್ಪಣೆ ಕೃಷ್ಣದಾಸರದು. `ಶರಣೆಂದು ಗುರುಮಹಿಪತಿ ಶುಭ ಚರಣಕ ಹೊಯ್ಯಂದ ಡಂಗುರವ' ಎಂದು ಹೇಳುತ್ತ `ಸಂತರೊಳು ಮಹಂತನು ಈತನೆ', `ಗುರು ಎಂದರೆ ಜಗದೊಳು ತಾನೆ ತಾನೇ' ಎಂದೆಲ್ಲ ಹೇಳುತ್ತ ಕೊನೆಗೆ `ನರನಲ್ಲ ನರನಲ್ಲ ಅವತಾರ ದೇಹೆಂದು ಧರೆಯೊಳು ಮುಂಡಿಗೆ ಹಾಕುವೆ ಇದಕಿನ್ನು' ಎಂದು ಘಂಟಾ ಘೋಷವಾಗಿ ಹೇಳುತ್ತಾರೆ.

ಹೀಗೆ ತಮ್ಮ ಗುರುಗಳನ್ನು ಸ್ತುತಿಸಿದ ದಾಸರು ಸಾರ್ವತ್ರಿಕವಾಗಿ ಗುರುಭಕ್ತಿಯ ಮಹಿಮೆಯನ್ನು ಹಲವಾರು ಕೃತಿಗಳಲ್ಲಿ ಹೇಳುತ್ತಾರೆ. `ಅವಗೆಲ್ಲಿಹುದೋ ನಿಜ ಮುಕ್ತಿ ದಾವಗಿಲ್ಲವೋ ಗುರುಪಾದ ಭಕ್ತಿ' ಎನ್ನುತ ಗುರುಪಾದ ಭಕ್ತಿ ಇರದಿದ್ದರೆ ಮುಕ್ತಿ ಇಲ್ಲವೆನ್ನುತ್ತಾರೆ. ಸದ್ಗುರುವಿನಿಂದಲೇ ಕೈವಲ್ಯವೆಂದು ಮತ್ತೊಂದು ಕೃತಿಯಲ್ಲಿ ಹೇಳುತ್ತಾರೆ `ಏನಾದರೇನು ಗುರುದಯ ಪಡಿದನಕಾ ತಾನೊಲಿಯನು ಹರಿ ಕಾವನ ಜನಕಾ' `ಎಲ್ಲಿ ಶ್ರೀ ಗುರುವಿನ ದಯದೊಲವಿಹುದು ಅಲ್ಲಿ ದುರಿತ ಭಯ ಮುಟ್ಟಲರೆಯದು' `ಗುರು ಪರಂದೈವವೆಂದು ಗುರುಮನೆಯ ಹೊಕ್ಕು ಪಡಿ ಪರಗತಿ' ‘ಗುರುಭಕ್ತನೇ ಧನ್ಯನು ಬಲು ಮಾನ್ಯನು' `ಗುರುವಿನ ಕಾಣದೇ ಪರಗತಿ ದೊರೆಯದು' `ಮೋಕ್ಷವಿಲ್ಲ ಗುರುಕೃಪೆವಿನಾ' ಎಂದು ಮುಂತಾಗಿ ಹಲವಾರು ಕೃತಿಗಳಲ್ಲಿ ಗುರು-ಗುರುಭಕ್ತಿಯ ಮಹಿಮೆಯನ್ನು ಬಣ್ಣಿಸಿದ್ದಾರೆ.

ಲೋಕ ಸಂಗ್ರಹ

ಸಂತರು, ದಾಸರು, ಮಹಾತ್ಮರು, ತಮ್ಮ ಸಾಧನೆಯಿಂದ ಜನನ-ಮರಣಗಳನ್ನು ಹರಿದು ಮೋಕ್ಷವನ್ನು ಸಾಧಿಸುವುದರೊಂದಿಗೆ ಸುತ್ತಲಿನ ಸಮಾಜವನ್ನು ಉದ್ದರಿಸುವುಗು ಅವರ ಪರಮ ಕಾರ್ಯಗಳಲ್ಲಿ ಒಂದು. ತಮ್ಮ ಅನುಭವಗಳ ಮೂಸೆಯಲ್ಲಿ ಜಗದ ವ್ಯಾಪಾರವನ್ನು ತಿಕ್ಕಿ-ತಿಕ್ಕಿ ನೋಡುತ್ತ ಈ ಬದುಕನ್ನು ಕುರಿತು ಹಲವಾರು ವಿಷಯಗಳನ್ನು ತಿಳಿಸಿ ಹೇಳುತ್ತಾರೆ. ಅವುಗಳನ್ನೇ ಕೆಲವರು `ಬೋಧಪ್ರದ' ಎಂದೋ `ಉಪದೇಶ'ವೆಂದೋ ಇಲ್ಲ `ಲೋಕ ಸಂಗ್ರಹ'ವೆಂದೋ ಕರೆಯುತ್ತಾರೆ. ಕೃಷ್ಣದಾಸರ ಇಂಥ ಕೃತಿಗಳಲ್ಲಿ ಅಂದಿನ ಸಮಾಜದ ಚಿತ್ರಣ ಬಂದಿದೆ. ಅವರ `ಲೋಕ ಸಂಗ್ರಹ' ಕೃತಿಗಳು ಒಂದು ಮತಕ್ಕೆ, ಜಾತಿಗೆ ಸಂಬಂಧಿಸಿದವುಗಳಲ್ಲ, ಇಡೀ ಮಾನವ ಕುಲಕ್ಕೇ ಸಂಬಂಧಿಸಿದ ಕೃತಿಗಳಾಗಿವೆ.

ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ಮೊದಲು ಆತನ ಸಹವಾಸ ಚೆನ್ನಾಗಿರಬೇಕು. ಸತ್ಸಂಗದಿಂದ ಏನೆಲ್ಲ ಸಾಧಿಸಬಹುದು. `ಇದ್ದರಿರಬೇಕು ಅನುದಿನಾ ಒಳ್ಳೆವರರಾ ಸಹವಾಸಾ-ಗುರುವರ ಮಹಿಪತಿ ಸುತ ಪ್ರಭು ಸ್ಮರಣೆಯಾ ಮರಸು ಮರೆಸುವರದರುದ್ದೇಶ' `ಕೇಳು ಹಿತವಾ ಬಾಳು ಮನವೇ ಸಾಧು ಸಂಗ ಮಾಡು' `ಸತ್ಸಂಗವಿನಾ ಏನ ಸಾಧಿಸುವದೇನರದು' `ಸಾಧುರ ಸಂಗವ ಮಾಡೋ ಪ್ರಾಣಿ.' `ಸಾಧು ಸಂತರಾಶ್ರಯ ಮಾಡಿ' `ಸಿಕ್ಕಲು ನೋಡೇ ಸತ್ಸಂಗ ಯನ ಗಕ್ಕಿತು ಸ್ವಾನುಭವದಂಗ.'

‘ಸಂತರ ನೋಡಿರೈ ಅನಂತನ ಪಾಡಿರೈ’, `ಸಂತರ ಸಹವಾಸಮಾಡು ಮನುಜ ನೀ ಭ್ರಾಂತ ಜನರ ಸಂಗ ವೀಡ್ಯಾಡು' ಹೀಗೆ ಸಂತರ ಸತ್ಸಂಗದ ಮಹಿಮೆಯನ್ನು ಬಣ್ಣಿಸಿದ್ದಾರೆ.

`ಹೊತ್ತು ವ್ಯರ್ಥ ಹೋಗುತಿದಕೊ ಮುತಿನಂಥಾ' ಎಂದು ಹೇಳುವಾಗ ಬದುಕಿನಲ್ಲಿ ಸಾಧಿಸುವ ಮೋಕ್ಷದ ಗುರಿಯನ್ನು ಹೇಳುತ್ತಾರೆ. `ಇಂದು ನರದೇಹದಿಂದ ಬಂದು ಬರಡ ಮಾಡಬ್ಯಾಡಿ ತಂದೆ ಮಹಿಪತಿ ದಯದಿಂದ ಮುಕ್ತಿಯ ಪಡಿಯಿರೋ' `ಸಾರವಲ್ಲ ಸಂಸಾರವಿದು' ಎಂಬ ಕೃತಿಯಲ್ಲಿ ಜೀವನದ ಅನೇಕ ಪಾಶಗಳನ್ನು ವರ್ಣಿಸುತ್ತಾರೆ.

`ಶರೀರವ ಜರಿಯಬೇಡ - ಬೆರಿಯ ಬೇಡಾ ' ಎಂಬ 5 ನುಡಿಗಳ ದೀರ್ಘ ಕೃತಿಯಲ್ಲಿ ಮನುಷ್ಯ ಈ ಶರೀರದಿಂದಲೆ ಏನೆಲ್ಲ ಸಾಧಿಸುತ್ತಾನೆಂಬುದನ್ನು ಬಹು ಸುಂದರವಾಗಿ, ಅಷ್ಟೇ ಮಾರ್ಮಿಕವಾಗಿ ಬಣ್ಣಿಸುತ್ತಾರೆ.

`ಶರಣಾರ್ಥಿ ಶಿವ ಶರಣಾರ್ಥಿ - ಹರಿಹರ ಎಂದು ಶಿವಪದ ಕಂಡವಗೆ' ಎಂಬ ಕೃತಿಯಲ್ಲಿ ಹರಿ-ಹರ ಅಭೇದವನ್ನು ಕಾಣಿಸುತ್ತಾರೆ. `ಮಾನವಾದಮ್ಯಾಲ ತಾನಾರೆಂದರಿಯ ಬೇಕು' ಎಂಬ ಕೃತಿಯಲ್ಲಿ ಮಾನವ ಧರ್ಮವನ್ನು ಹೇಳುತ್ತಾರೆ. ಮನುಷ್ಯ-ರಾಕ್ಷಸರು ಇಲ್ಲಿಯೇ ಇದ್ದಾರೆಂದು ತೋರಿಸುತ್ತ `ಪರರ ಸದ್ಗುಣ ವಾಲಿಸಿಕೊಳುತಲಿ ಸಕಲರಿಗೆ ಮನ್ನಿಸುವವನೆ ಮನುಜನು, ಗರುವ ಹಿಡಿದು ತನ್ನ ಹೊಗಳುತ ಅನ್ಯರ ಬರಿದೆ ನಿಂದಿಸುವವನೆ ದನುಜನು' ಎಂದು ಮುಂತಾಗಿ ಐದು ನುಡಿಗಳಲ್ಲಿ ಮನುಜ-ದನುಜರ ಅಂತರವನ್ನು ಸೊಗಸಾಗಿ ನಿರೂಪಿಸಿದ್ದಾರೆ.

`ಮನಿಮನಿಗೆ ಗುರುಭಕ್ತರಾದವರು ಜಗದೊಳಗೆಲ್ಲಾ' ಎಂದು ಜಗದತುಂಬ ಗುರುಭಕ್ತರು ಸಿಗುತ್ತಾರೆ, ಆದರೆ ಘನನೆಲೆ ಕಂಡವರೊಬ್ಬರಿಲ್ಲಾ' ಎನ್ನುತ್ತ `ಗುರುಸ್ವರೂಪ ವರಿಯದೆ, ನರಭಾವ ಮರಿಯದೆ, ಗುರುಭಕ್ತಿ ಕೀಲವನ್ನು ತಿಳಿಯದೆ' ಗುರುಭಕ್ತರಾದವರಿವರು ! ಆದ್ದರಿಂದಲೇ `ಭಾವನೆ ಬಲೀದನಕಾ ಒಣ ಭಕ್ತಿಯ ಮಾಡಿದರೇನು ದೇವ ದೇವೋತ್ತಮನ ಪದ ಸುಮ್ಮನೆ ದೊರಕುವುದೆ ?' ಎಂದು ಮತ್ತೊಂದು ಕೃತಿಯಲ್ಲಿ ಕೇಳುತ್ತಾರೆ.

`ಇದು ಯಾತರ e್ಞÁನಾ' ಎಂಬ ಮೂರು ನುಡಿಗಳ ಕಿರಿದಾದ ಕೃತಿಯಲ್ಲಿ ಪಾಂಡಿತ್ಯದಿಂದ ಸಾಧಿಸಿದ್ದೇನು ಎಂದು ಕೇಳುತ್ತಾರೆ. `ವೇದವನೋದಿ - ವಿವಾದವ ಮಾಡಿ ಸಾಧಿಸಿದ್ಯಭೀಮನಾ' ಹೌದು ನೀನು ಬಹುದೊಡ್ಡ ಜಾಣನೆಂಬ ಅಭಿಮಾನವನ್ನು ಗಳಿಸಿರಬೇಕು. ಆದರೆ ಸಾಧನೆಯ ದೃಷ್ಟಿಯಿಂದ ಅದು ಬೆಟ್ಟವ ಶೋಧಿಸಿ ಕಷ್ಟದಿ ಇಲಿಯಾ ನೆಟ್ಟನೆ ತೆಗೆದೆ' ಎನ್ನುತ್ತಾರೆ. ವಾಸ್ತವದಲ್ಲಿ ಸಾಧಿಸಬೇಕಾದದ್ದು `` ಘನಗುರು ಮಹಿಪತಿ ಸ್ವಾಮಿಯ ನೆನೆದು ಅನುದಿನವಿಡೀ ಧ್ಯಾನ ಅಲ್ಲವೆ?'


ಸಂಪಾದನೆ

ಕಾಖಂಡಕಿಯ ಕೃಷ್ಣದಾಸರ ಕೃತಿಗಳು ಈವರೆಗೆ ಇಡಿಯಾಗಿ ಎಲ್ಲಿಯೂ ಪ್ರಕಟವಾಗಿಲ್ಲ. `ಶ್ರೀ ಗುರುಮಹಿಪತಿದಾಸ ಸಾಹಿತ್ಯ ಪ್ರಚಾರ ಸಮಿತಿ-ಕಾಖಂಡಕಿ' ಅವರು ಕಳೆದ ಹಲವು ವರುಷಗಳಲ್ಲಿ ಕೃಷ್ಣದಾಸರ ಕೆಲವು ಕೃತಿಗಳನ್ನು ಬಿಡಿ-ಬಿಡಿಯಾಗಿ ಪ್ರಕಟಿಸಿದ್ದಾರೆ. ಅವುಗಳೊಂದಿಗೆ ಇಲ್ಲಿಯ ಎಲ್ಲ ಕೃತಿಗಳ ಹಸ್ತ ಪ್ರತಿಯನ್ನು ನೀಡಿದವರು ದಾಸರ ವಂಶದವರೇ ಆದ ಕೀರ್ತನ ಕೇಸರಿ ಶ್ರೀದ್ಯಾವಪ್ಪಯ ಕಾಖಂಡಕಿ ಅವರು. ಬೇರೆ ಬೇರೆ ಮೂಲಗಳಿಂದ ಪಡೆದು ನಕಲು ಮಾಡಿದ ಹಸ್ತಪ್ರತಿಯನ್ನು ಕೊಟ್ಟಿದ್ದಾರೆ. ಅವರಿಗೂ, `ಶ್ರೀ ಗುರುಮಹಿಪತಿ ದಾಸ ಸಾಹಿತ್ಯ ಪ್ರಚಾರ ಸಮಿತಿ-ಕಾಖಂಡಕಿಯ’ ಪದಾಧಿಕಾರಿಗಳಿಗೂ, ವಿಶೇಷವಾಗಿ ಕಾಯದರ್ಶಿಗಳಾದ ಶ್ರೀ ರಾಮಯ್ಯ (ಅಪ್ಪು) ಗುರಪ್ಪಯ್ಯ ಹರಿದಾಸ ಅವರಿಗೆ ಕೃತಜ್ಞತೆಗಳು.

-ಕೃಷ್ಣ ಕೊಲ್ಹಾರಕುಲಕರ್ಣಿ

*****


ಭಜಾಮಿ ಕೃಷ್ಣ ರಾಜಾನಾಂ ಭೂಪತೇಸ್ತನುಜಂ ವಿಭುಂ/ ಜ್ಞಾನೋಪದೇಶ ಕರ್ತಾರಂ ಸರ್ವದಾನಂದ ರೂಪಿಣಂ//

ಕಾಖಂಡಕಿ ಶ್ರೀ  ಮಹಿಪತಿದಾಸರ ಪುತ್ರರಾದ,  ಮಹಿಪತಿಸುತ,ಮಹಿಪತಿನಂದನ,ತರಳಮಹಿಪತಿ ಇತ್ಯಾದಿ ಅಂಕಿತಗಳಿಂದ ಅದ್ಭುತವಾದ ಕೃತಿಗಳನ್ನು ರಚನೆ ಮಾಡಿದ,  ತಂದೆಯಂತೆ ದಾಸ ಸಾಹಿತ್ಯದ ಉನ್ನತಿಗೆ ತಮ್ಮ ಸೇವೆಯನ್ನು ಮಾಡಿದವರಾದ, ಪರಮ ಶ್ರೇಷ್ಠ ದಾಸವರೇಣ್ಯರಾದ  ಶ್ರೀ ಕಾಖಂಡಕಿ ಕೃಷ್ಣದಾಸರ ಆರಾಧನೆಯೂ ಇಂದು...

ಇಂಥಾ ಮಹಾನುಭಾವರ ಸ್ಮರೆಣೆಯೇ ನಮ್ಮ ಜನ್ಮದ ಸಾರ್ಥಕ್ಯವೂ ಹೌದು.. ಈ ಎಲ್ಲಾ  ಮಹಾನುಭಾವರ ಅನುಗ್ರಹ ನಮ್ಮ ಎಲ್ಲರಮೇಲಿರಲಿ ಎಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ ....

-Smt. Padma Sirish

ನಾದನೀರಾಜನದಿಂ ದಾಸಸುರಭಿ

******

ನಮ್ಮ ಮಾಧ್ವ ಪರಂಪರೆ ಯಲ್ಲಿ ಬಂದ ಅನೇಕ ಹರಿದಾಸರುಗಳು ದೇವತಾ ಪುರುಷರು.. ಭಗವಂತನ ಆಜ್ಞೆಯಂತೆ ಸಾಧನಾ ಭೂಮಿಯಾದ ಈ ಭರತ ಖಂಡಕ್ಕೆ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅನೇಕ ಹರಿದಾಸರೂ ಬಂದು ಅವತರಿಸಿ ತಮ್ಮ ಸಾಧನೆಯನ್ನು ಮಾಡಿಕೊಂಡು  ಭಗವಂತನ ಮಹಿಮೆಯನ್ನು ಸಾರಿ ಸಾರಿ ಹೇಳಿದ್ದಾರೆ..
ಇಂದು ಒಬ್ಬ ಹರಿದಾಸರ ಬಗ್ಗೆ ವಿವರಣೆ ನನ್ನ ಅಲ್ಪಮತಿಗೆ ಬಂದಷ್ಟು.
ಈ ದಿನದ ಆರಾಧನ ಮತ್ತು ಇಂದಿನ ಕಥಾನಾಯಕರು  ಕಾಖಂಡಕಿಯ ಶ್ರೀಕೃಷ್ಣರಾಯರು..
ಇವರು ಶ್ರೀ ಮಹಿಪತಿದಾಸರ ಮಕ್ಕಳು ಮತ್ತು ಅವರ ಶಿಷ್ಯಂದಿರು.
ಶ್ರೀ ಮಹಿಪತಿದಾಸರಿಗೆ ಇಬ್ಬರು ಮಕ್ಕಳು.
ಕೃಷ್ಣರಾಯ ಹಾಗು ದೇವರಾಯ ಅಂತ.
ಇಬ್ಬರಿಗು ಸಣ್ಣ ವಯಸ್ಸಿನಲ್ಲಿ   ಜ್ಞಾನ ಅವರ ತಂದೆಯವರಾದ ಶ್ರೀ ಮಹಿಪತಿದಾಸರಿಂದ ಆಗಿರುತ್ತದೆ.
ದೇವರಾಯರು ಖಡ್ಗವಿದ್ಯೆಯಲ್ಲಿ ಪ್ರವೀಣರು.
ಕೃಷ್ಣರಾಯರು ಹರಿದಾಸ ಪರಂಪರೆಯನ್ನು ಮುಂದುವರೆಸಿಕೊಂಡು ಬಂದರು.
"ಒಮ್ಮೆ ಕೃಷ್ಣರಾಯರು ಸಂಚಾರ ಮಾಡುತಾ ಒಂದು ನದೀ ತೀರದ ಹತ್ತಿರ ಬರುತ್ತಾರೆ. ಅಲ್ಲಿ ತಮ್ಮ ಆಹ್ನೀಕಗಳನ್ನು ಮುಗಿಸಿಕೊಂಡು  ತಮ್ಮ ಸ್ವರೂಪ ಉದ್ದಾರಕರಾದ ಗುರುಗಳಾದ, ಹಾಗು ತಮ್ಮ ತಂದೆಯವರಾದ ಶ್ರೀ ಮಹಿಪತಿದಾಸರ ಪಾದುಕೆ ಗಳಿಗೆ ಪೂಜೆ ಮಾಡುತ್ತಾ ಇರುತ್ತಾರೆ.
ಆ ಸಮಯದಲ್ಲಿ ಶ್ರೀ ಉತ್ತರಾದಿ ಮಠದ ಪರಂಪರೆಯಲ್ಲಿ ಬಂದ ಶ್ರೀ ಸತ್ಯಪೂರ್ಣ ತೀರ್ಥ ಗುರುಗಳ ಸಂಚಾರ  ಅಲ್ಲಿ ಪರಿವಾರ ಸಮೇತವಾಗಿ ವಾಸ್ತವ್ಯ ಹೂಡಿರುತ್ತದೆ.
ಇವರ ಪೂಜಾ ನೋಡಿ ಒಬ್ಬ ಶಿಷ್ಯನು ಸ್ವಾಮಿಗಳ ಬಳಿ ಬಂದು 
"ಸ್ವಾಮಿ!! ಯಾರೋ ಒಬ್ಬ ಶಾಲಗ್ರಾಮ ಪೂಜೆ ಬಿಟ್ಟು ಪಾದುಕಾ ದಂಡ ಪೂಜಾ ಮಾಡುತ್ತಾ ಇದ್ದಾನೆ.. ಅಂದಾಗ ಅವರನ್ನು ಬರಹೇಳಿ ಅಂತ ಸ್ವಾಮಿಗಳ ಅಪ್ಪಣೆ ಆಗುತ್ತದೆ.
ಅವಾಗ ಶ್ರೀ ಕೃಷ್ಣರಾಯರು ಬರುತ್ತಾರೆ.ಆ ಸಮಯದಲ್ಲಿ ಸಂಸ್ಥಾನದ ಪೂಜೆ ನಡೆದಿರುತ್ತದೆ.
ಆ ತಕ್ಷಣ ಅವರು
"ರಾಮ ಬಂದನೇನೆ| ಶ್ರೀ ರಘುರಾಮ ಬಂದನೇನೆ||"..ಅಂತ ಒಂದು ಕೀರ್ತನೆ ರಚನೆ ಮಾಡುತ್ತಾರೆ. ಆ ನಂತರ ಶ್ರೀಗಳು ನೀವು ಯಾರು ಅಂತ ಕೇಳಲಾಗಿ ಅದಕ್ಕೆ ಶ್ರೀಕೃಷ್ಣರಾಯರು "ನಾವು ಶ್ರೀಮಹಿಪತಿದಾಸರ ಮಕ್ಕಳು ಹಾಗು ಅವರ ಶಿಷ್ಯರು"...ಅಂತ ಹೇಳುತ್ತಾರೆ. ಆಗ ಸ್ವಾಮಿಗಳು 
"ಈವತ್ತು ನಿಮ್ಮ ಇಂದ ಪ್ರವಚನ ಆಗಬೇಕು ರಾತ್ರಿ ಅಂತ ಅಪ್ಪಣೆ ಕೊಡಲಾಗಿ,
ಆದಿನ ಏಕಾದಶಿ... 
ದಾಸರು ಗಜೇಂದ್ರ ಮೋಕ್ಷ ಹೇಳಲು ಶುರು ಮಾಡುತ್ತಾರೆ. ಬೆಳಗಿನ ಜಾವದ ವರೆಗು ನಡೆಯುತ್ತದೆ. ಆ ಸಮಯದಲ್ಲಿ ಶ್ರೀಗಳಿಗೆ ಅವರ ಶಿಷ್ಯ ಬಂದು
"ಸ್ವಾಮಿ!! ಪಾರಣೆಗೆ ಹೊತ್ತಾಯಿತು..
ಅಂತ ಹೇಳುತ್ತಾನೆ. 
ಆಗ ಶ್ರೀಗಳು
ಎಲ್ಲಿ !ಪಾರಣೆಯೋ!!,ಆನಿ ಕಾಲು ಮೊಸಳೆ ಹಿಡಿದದಾ,!!ಇನ್ನೇನು ಸ್ವಾಮಿ ಬರುವ ಸಮಯ ಆಯಿತು ಸ್ವಲ್ಪ ತಾಳು.. ಅಂತ ಹೇಳುತ್ತಾರೆ.
ಆ ಸಮಯದಲ್ಲಿ ಭಗವಂತನ ದರುಶನ ಶ್ರೀಗಳಿಗೆ ಮತ್ತು ಶ್ರೀಕೃಷ್ಣರಾಯರಿಗೆ ಇಬ್ಬರಿಗೂ ಆಗುತ್ತದೆ.. 
ನಂತರ ಶ್ರೀ ಸತ್ಯಪೂರ್ಣ ತೀರ್ಥರು ಅವರಿಗೆ  "ಅಯ್ಯ" ಅಂತ ಬಿರುದನ್ನು ಕೊಟ್ಟು ಸನ್ಮಾನ ಮಾಡುತ್ತಾರೆ..
🙏ಶ್ರೀ ಕೃಷ್ಣಾರ್ಪಣಮಸ್ತು🙏
 ಅವಾಗಿನಿಂದಲು ಅವರ ವಂಶದಲ್ಲಿ ಎಲ್ಲರೂ ಅಯ್ಯ ಅಂತ ಹೆಸರನ್ನು  ಸೇರಿಸಿಕೊಂಡು ಬರುತ್ತಾ ಇದ್ದಾರೆ.
ನನಗೆ ಇದನ್ನು ಹೇಳಿದವರು ಅವರ ವಂಶೀಕರಾದ ಕೃಷ್ಣಪ್ಪಯ್ಯ(ಪ್ರವೀಣ ದಾಸ ಕಾಖಂಡಕಿಅವರು.)
|ರಮಾಕಳತ್ರನ ದಾಸ ವರ್ಗಕೆ ನಮಿಪೆ ಅನವರತ||

🙏ಶ್ರೀ ಕೃಷ್ಣರಾಯ ಗುರುಭ್ಯೋ ನಮಃ

***


ಶ್ರೀಮಹೀಪತಿದಾಸರು (ಕಾರ್ತೀಕ ಅಮಾವಾಸ್ಯೆ ಶ್ರೀಮಹೀಪತಿರಾಯರ ಪುಣ್ಯದಿನ-)

ಅಂತರಂಗದ ಅನುಭೂತಿಗೆ ಅಭಿವ್ಯಕ್ತಿನೀಡಿದ ಅಪೂರ್ವ ಸಿದ್ಧಿಪುರುಷರು ಶ್ರೀಮಹೀಪತಿದಾಸರು. ಮೂಲತ: ಬೆಳಗಾವಿ ಜಿಲ್ಲೆಯವರಾದ ಶ್ರೀಮಹೀಪತಿದಾಸರು ತಮ್ಮ ತಂದೆಯ ಕಾಲದಲ್ಲಿ ಆದಿಲಶಾಹಿ ಅರಸರ ರಾಜಧಾನಿಯಾಗಿದ್ದ ವಿಜಾಪುರ (ವಿಜಯಪುರ) ಕ್ಕೆ ಬಂದರು. ತಮ್ಮ ಕಾರ್ಯಕ್ಷಮತೆಯಿಂದ ರಾಜಾಸ್ಥಾನದಲ್ಲಿ ಬಹುಬೇಗ ಉನ್ನತ ಅಧಿಕಾರವನ್ನು ಸಂಪಾದಿಸಿಕೊಂಡರೂ ಅಂತರಂಗದ ತುಡಿತ ಅಧ್ಯಾತ್ಮದೆಡೆಗೆ. ಫಕೀರನೊಬ್ಬನ ಸಂಪರ್ಕ, ನಂತರ ಸಾರವಾಡದ ಭಾಸ್ಕರಸ್ವಾಮಿಗಳ ಒಡನಾಟದಿಂದ ಯೋಗಮಾರ್ಗವನ್ನು ಹಿಡಿದ ಮಹೀಪತಿರಾಯರು ದಾಸಸಾಹಿತ್ಯಕ್ಕೆ ತಮ್ಮ ಅತ್ಯಪೂರ್ವವಾದಂತಹ ಕೊಡುಗೆಯನ್ನು ನೀಡಿದ ಮಹನೀಯರು. 'ಹರಿಬಾಹ್ಯಾಂತರೇಕೋಮಯನೆನಬೇಕು' ಎಂದು ಸಾರಿದ ಮಹೀಪತಿದಾಸರು, "ಸರ್ವೋತ್ತಮನ ಸ್ತುತಿಗೆ ಸರಿಬೆಸದಕ್ಷರ ದೆಣಿಕ್ಯಾಕೆ, ಯತಿಗಣಪ್ರಾಸವೇಕೆ ಸ್ತುತಿ ಸ್ತವನ ಕೊಂಡಾಡಲಿಕ್ಕೆ ಹಿತದೋರದು ಮಿತಿಮಾಡಲಿಕ್ಕೆ ಅತಿಶೋಧಿಸಲಿಕ್ಕೆ ಮುಕ್ತಿಗೆ ಬದ್ಧವೆಂದೆಂದೂ ಉತ್ತಮರುಪೇಕ್ಷಿಸರೆಂದು ನೆತ್ತಿಲಿಟ್ಟುಕೊಂಬರೆಂಬರು ಬಂದು ಅತಿಪ್ರೀತಿಲೆ ನಿಂದು" ಎಂದು ತಮ್ಮ ಕೃತಿಗಳ ಬಗ್ಗೆ ಹೇಳುತ್ತಾ, ತಮ್ಮ ಕೃತಿಗಳ ರಚನೆಯ ಉದ್ದೇಶ ಕವಿಯಾಗುವುದಲ್ಲ, ಪರಮಾತ್ಮನನ್ನು ಕಾಣಬೇಕೆಂಬುದು ಎಂದು ಸ್ಪಷ್ಟಪಡಿಸುತ್ತಾರೆ. ಕನ್ನಡ, ಮರಾಠಿ, ಉರ್ದು, ಹಿಂದಿ ಮೊದಲಾದ ಭಾಷೆಗಳಲ್ಲಿ ತಮ್ಮ ಅನುಭಾವವನ್ನು ಅಭಿವ್ಯಕ್ತಗೊಳಿಸಿರುವ ಮಹೀಪತಿರಾಯರಿಗೆ ಆದಿಗುರುಗಳಾದ ಶ್ರೀಮಧ್ವರಾಯರಲ್ಲಿ ಅವಿಚ್ಛಿನ್ನವಾದಂತಹ ಭಕ್ತಿ. 'ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ ಸ್ಮರಣೆಯೊಳಿಹೆ' 'ಪ್ರಥಮದಲ್ಯಾದೆ ಹನುಮ ದ್ವಿತೀಯದಲ್ಯಾದೆ ಭೀಮ ತೃತೀಯದಲಿ ಪೂರ್ಣಪ್ರಜ್ಞನೆನಿಸಿದ ನಿಸ್ಸೀಮ ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ, ಶ್ರೀಹರಿ ಸಾನ್ನಿಧ್ಯ ಪೂರ್ಣ ಇಹ ಸಕಲ ನಿಪುಣ' ಎಂದು ಶ್ರೀಮಧ್ವಭಗವತ್ಪಾದರನ್ನು ಕೊಂಡಾಡುವ ಶ್ರೀಮಹೀಪತಿದಾಸರು ಸಕಲವೇದಾಂತರಹಸ್ಯವನ್ನು ಅರಿತವರು ಮಧ್ವರು ಮಾತ್ರವೇ ಎಂದು ಸ್ಪಷ್ಟವಾಗಿ ಸಾರುವ ಮಹೀಪತಿದಾಸರು ಶ್ರೀಮಧ್ವಾಚಾರ್ಯರು ಪ್ರತಿಪಾದಿಸಿದ ಶ್ರೀವಿಷ್ಣು ಸರ್ವೋತ್ತಮತ್ವವನ್ನು ತಮ್ಮ ಅನೇಕ ಕೃತಿಗಳಲ್ಲಿ ವಿಶೇಷವಾಗಿ ವರ್ಣಿಸಿದ್ದಾರೆ. ' ಹರಿಯೇ ಶ್ರೀಪರಬ್ರಹ್ಮ ನೆನಬೇಕು ಹರಿ ಪರಂದೈವ ವೆಂದರಿಯಬೇಕು ಹರಿಯೇ ತಾ ಮನ ದೈವವೆನಬೇಕು' ಎಂದು ಶ್ರೀಹರಿಯೇ ಪರದೈವವೆಂದು ಸಾರುವ ಶ್ರೀಮಹೀಪತಿದಾಸರು ಅಂತಹ ಶ್ರೀಹರಿಯ ಸ್ತುತಿಯನ್ನು ಮಾಡುವಾಗ " ಸರ್ವೋತ್ತಮನ ಸ್ತುತಿಗೆ ಸರಿಬೆಸದಕ್ಷರದೆಣಿಕ್ಯಾಕ ಯತಿಫಲ ಗಣ ಪ್ರಾಸವ್ಯಾಕೆ ಸ್ತುತಿ ಸ್ತವನ ಕೊಂಡಾಡಲಿಕ್ಕೆ ಹಿತದೋರದು ಮಿತಿಮಾಡಲಿಕ್ಕೆ ಅತಿಶೋಧಿಸಲಿಕ್ಕೆ" ಎಂದು ಕೇಳಿ 'ಮೀಸಲು ಮನದಲೊಮ್ಮೆ ಮಾಧವ ಎಂದೆನಲು ತಾ ಭಾವಿಸಲು ಹೃದಯದೊಳು ಗೋವಿಂದನು' ಎಂದು ಭಗವಂತ ಭಕ್ತಿಗೆ ಪರವಶನಾಗುತ್ತಾನೆ ಎಂದು ನುಡಿಯುತ್ತಾರೆ. 'ಎಲ್ಲಿ ಶ್ರೀಹರಿ ನಾಮದ ಘೋಷ ಅಲ್ಲಿ ಸಕಲ ಸುಖಸಂತೋಷ ಸುಲಭದಲ್ಯಾಹುದು ಭವಭಯದ ನಾಶ' ಎಂದು ಭಗವಂತನ ನಾಮದ ಮಹಿಮೆಯನ್ನು ತಮ್ಮ ಕೃತಿಗಳಲ್ಲಿ ಕೊಂಡಾಡುವ ಶ್ರೀಮಹೀಪತಿದಾಸರು ಶ್ರೀಹರಿಯ ನಾಮ 'ದೇಹ ಅಭಿಮಾನಿಗಿದು ಸಾಧ್ಯವಾಗುವುದಿಲ್ಲ' ವೆಂಬ ರಹಸ್ಯವನ್ನೂ ತಿಳಿಸುತ್ತಾರೆ. 'ನೋಡಿ ನೋಡಿ ನಿಮ್ಮೊಳು ನಿಜಘನವ' ಎಂದು ನಮ್ಮನ್ನು ಅಂತರಂಗದ ಪ್ರಪಂಚಕ್ಕೆ ಕರೆದೊಯ್ಯುವ ಶ್ರೀಮಹೀಪತಿದಾಸರ ಅನೇಕ ಕೃತಿಗಳು ಅಂತರಂಗದ ದರ್ಶನಕ್ಕೆ ಸಂಬಂಧಿಸಿದ ಕೃತಿಗಳಾಗಿವೆ.'ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ' 'ದಾವಗಿಲ್ಲ ಖೂನ ತನ್ನೊಳಗ ಅವಗೆಲ್ಲಿಯ ಜ್ಞಾನ ಜಗದೊಳಗ' 'ದೇಹದ ಒಳಗಿಹ್ಯ ದೇವರ ತಿಳಿದಿಹ ಆತನೆ ದೇಹಾತೀತನು ಮಾ' 'ನೋಡಿದರೆ ತನ್ನೊಳಗದೆ ಗೂಢವಾಗದೆ ಸೋಹ್ಯ ತಿಳಿಯಗೊಡದೆ' 'ಆದಿ ತತ್ತ್ವದ ಸಾರ ತಿಳಿಯದೆ' ಮೊದಲಾದ ಅನೇಕ ಕೃತಿಗಳು ವಿಶಿಷ್ಟವಾದಂತಹ ಅಂತರಂಗದ ಉಪಾಸನೆಯ ಬಗ್ಗೆ ಹೊಸ ಬೆಳಕನ್ನು ಚೆಲ್ಲುವ ಕೃತಿಗಳಾಗಿದ್ದರೆ 'ಕೋಲು ಕೋಲೆನ್ನ ಕೋಲೆ', 'ಇಂದು ಕಾಯಲಾ ಭಕ್ತವತ್ಸಲ', 'ಸಕಲವೆಲ್ಲವು ಹರಿಸೇವೆಯೆನ್ನಿ', ಮೊದಲಾದ ಕೃತಿಗಳು ಭಕ್ತಿ ಭರಿತವಾದ ಕೃತಿಗಳಾಗಿವೆ. ಗುರುದೇವರಾನಡೆಯವರು ವಿಶ್ವದ ಅನುಭಾವಿಗಳ ಪಂಕ್ತಿಯಲ್ಲಿ ಶ್ರೀಮಹೀಪತಿದಾಸರದು ವಿಶಿಷ್ಟಸ್ಥಾನವೆಂದು ತಮ್ಮ ಕೃತಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ . ಇಂತಹ ಅಪೂರ್ವದ ಅಧ್ಯಾತ್ಮಿಕ ಅನುಭವವನ್ನು, ಅನುಭಾವವನ್ನು ಕನ್ನಡದ ನುಡಿಯಲ್ಲಿ ಹಿಡಿದಿಟ್ಟ ಶ್ರೀಮಹೀಪತಿದಾಸರು ರಚಿಸಿದ ಕೃತಿಗಳ ಬಗ್ಗೆ ಸಂಶೋಧನೆಗಳು ನಡೆದಿವೆಯಾದರೂ ಶ್ರೀದಾಸರು ತೋರಿದ ಅಂತರಂಗದ ಪ್ರಪಂಚದ ಬಗ್ಗೆ ಕನ್ನಡದಲ್ಲಿ ನಡೆದಿರುವ ಅಧ್ಯಯನ ಇನ್ನೂ ಅತ್ಯಲ್ಪವೆಂದೇ ಹೇಳಬಹುದು.ಅಂತಹ ಒಂದು ಭಾಗ್ಯ ಅಂತರ್ಯಾಮಿಯ ಅನುಗ್ರಹದಿಂದ ಬಂದೊದಗಲಿ.


ಶ್ರೀಮಹೀಪತಿದಾಸರು ಸ್ತುತಿಸಿದ ಶ್ರೀಮಧ್ವಮುನಿಗಳು.

ಕಾಖಂಡಕಿಯ ಮಹೀಪತಿದಾಸರದು ಹರಿದಾಸಸಾಹಿತ್ಯಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನ. ಮೂಲತ: ಬೆಳಗಾವಿ ಜಿಲ್ಲೆಯವರಾದ ಮಹೀಪತಿರಾಯರು ತಮ್ಮ ತಂದೆಯ ಕಾಲದಲ್ಲಿ ವಿಜಾಪುರಕ್ಕೆ ವಲಸೆಬಂದರು ತಮ್ಮ ವಿದ್ವತ್ತಿನಿಂದ ವಿಜಾಪುರವನ್ನು ಪಾಲಿಸುತ್ತಿದ್ದ ರಾಜಮನೆತನದವರಿಂದ ಅಪಾರವಾದ ಗೌರವಾದರಗಳಿಗೆ ಭಾಜನರಾದ ಶ್ರೀಮಹೀಪತಿದಾಸರು ಸೂಫಿಸಂತ ಶಹಾನುಂಗನ ಪ್ರಭಾವ ಹಾಗೂ ಸಾರವಾಡದ ಭಾಸ್ಕರಸ್ವಾಮಿಗಳ ಪ್ರಭಾವಕ್ಕೆ ಒಳಗಾದರು. ಭಾಸ್ಕರಸ್ವಾಮಿಗಳಿಂದ ಯೋಗಮಾರ್ಗದ ಪರಿಚಯವನ್ನು ಪಡೆದ ಮಹೀಪತಿದಾಸರು 'ಮಹೀಪತಿ', 'ತರಳಮಹೀಪತಿ' ಅಂಕಿತದಲ್ಲಿ ರಚಿಸಿರುವ ಕೃತಿಗಳು ಅವರ ಅನುಭಾವವನ್ನು ಬಿಂಬಿಸುವ ಮಹತ್ತರ ಕೃತಿಗಳಾಗಿವೆ. ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿರುವ ಶ್ರೀಮಹೀಪತಿರಾಯರು ಶ್ರೀಮಧ್ವಭಗವತ್ಪಾದರ ಸಿದ್ಧಾಂತವನ್ನು ಮನ:ಪೂರ್ವಕವಾಗಿ ಸ್ವೀಕರಿಸಿದವರು. ಶ್ರೀಮಧ್ವಮುನಿಗಳನ್ನು ತಮ್ಮ ಕೃತಿಗಳಲ್ಲಿ ಬಹುವಿಧವಾಗಿ ಸ್ತುತಿಸಿರುವ ಶ್ರೀಮಹೀಪತಿರಾಯರು 'ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ ಸ್ಮರಣೆಯೊಳಿಹೆ" ಎಂದು ಪ್ರಾರಂಭವಾಗುವ ಕೃತಿಯಲ್ಲಿ,

'ಪ್ರಥಮದಲ್ಯಾದೆ ಹನುಮ ದ್ವಿತೀಯದಲ್ಯಾದೆ ಭೀಮ ತೃತೀಯದಲಿ ಪೂರ್ಣಪ್ರಜ್ಞನೆನೆಸಿದೆ ನಿಸ್ಸೀಮ ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ

ಶ್ರೀಹರಿ ಸಾನ್ನಿಧ್ಯಪೂರ್ಣ ಇಹ ಸಕಲ ನಿಪುಣ" ಎಂಬ ವಿಶೇಷಣಗಳಿಂದ ವಿಶ್ವಗುರುಗಳ ಮೂರು ಅವತಾರಗಳನ್ನು, ಮಧ್ವಮುನಿಗಳು ಸರ್ವೋತ್ತಮನ ಪೂರ್ಣಸನ್ನಿಧಾನಪಾತ್ರರೆಂಬ ವಿಚಾರವನ್ನು ತಿಳಿಸಿದ್ದಾರೆ. "ಹರಿಪರದೈವವೆಂದೆನಿಸಿ ದುರುಳರ ಮತವನು ಪರಿಹರಿಸಿ ಪೊರೆದನು ಜಗವುದ್ಧರಿಸಿ" ಎಂದು ಶ್ರೀಮಧ್ವಮುನಿಗಳು ಶ್ರೀಹರಿಸರ್ವೋತ್ತಮನೆಂಬ ಸಿದ್ಧಾಂತವನ್ನು ಪ್ರಚುರಗೊಳಿಸಿ ಪ್ರಚಲಿತವಿದ್ದ ದುರ್ವಾದಗಳನ್ನು ಖಂಡಿಸಿದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಕಲವೇದಾಂತರಹಸ್ಯಗಳನ್ನು ಬಲ್ಲವರು ಶ್ರೀಪೂರ್ಣಪ್ರಜ್ಞರು ಮಾತ್ರವೇ ಎಂಬ ವಿಚಾರವನ್ನು 'ಸ್ಮಾರ್ತವೈಷ್ಣವ ಮತ ಗುರುಮಧ್ವಮುನಿಬಲ್ಲ, ಆರ್ತು ಸ್ಥಾಪಿಸುವುದು ಮನುಜಗಲ್ಲ" ಎಂದು ತಿಳಿಸಿದ್ದಾರೆ. ಶ್ರೀಮಧ್ವಮತದ ಪ್ರಮುಖ ಪರಂಪರೆಗಳಲ್ಲಿ ಒಂದಾದ ಉತ್ತರಾದಿ ಮಠದ ಪರಂಪರೆಯನ್ನು ಹಾಗೂ ಶ್ರೀವ್ಯಾಸರಾಜರೇ ಮೊದಲಾದ ಪ್ರಮುಖ ಯತಿವರ್ಯರ ಸ್ತುತಿಗಾಗಿ ರಚಿಸಿರುವ ಕೃತಿಯ ಪ್ರಾರಂಭದಲ್ಲಿ ಆದಿಗುರುಗಳಾದ ಶ್ರೀಮಧ್ವಮುನಿಗಳನ್ನು ಸಂಪ್ರದಾಯದಂತೆ "ಆದಿಮೂರುತಿತ್ರಯ ಮಧ್ವಮುನಿರೇಯ" ಎಂಬುದಾಗಿ ಸ್ತುತಿಸಿದ್ದಾರೆ. 

ಡಾ. ಬಿ. ಎನ್. ವೇಣುಗೋಪಾಲ

****


No comments:

Post a Comment