ಶ್ರೀಂ ಶ್ರೀ ಕಂ ಕಪಿಲಾಯ ನಮಃ
ನಡುಪುರೇಶಾಂಕಿತಂ ವರ್ಯಂ ಹರಿಭಕ್ತಿ ಪರಾಯಣಮ್/
ಮೃಡವರೇಣ್ಯ ಕೃಪಾಪೂರ್ಣಂ ರಾಘವಾರ್ಯ ಗುರುಮ್ ಭಜೆ//
19 ನೇ ಶತಮಾನದವರು, ಕುಷ್ಟಗಿಯ ದಾಸಾರ್ಯರು, ಪದಗಳಲಾಲಿತ್ಯದಿಂದ ಪರಮಾತ್ಮನ ಒಲಿಸಿಕೊಂಡಿರುವಂತಹಾ, ಕಾಶಿ ವಿಶ್ವೇಶ್ವರನ ವಿಶೇಷ ಅನುಗ್ರಹ ಪಾತ್ರರಾದ,ಶ್ರೀ ರಘುಕಾಂತತೀರ್ಥರಲ್ಲಿ ವ್ಯಾಸಂಗ ಮಾಡಿದವರಾದ, ಪರಮಶ್ರೇಷ್ಠ ದಾಸಾರ್ಯರು ನಡುಪುರೇಶ,ಕಟಿಪುರೇಶ ಇತ್ಯಾದಿ ಅಂಕಿತನಾಮಗಳಿಂದ ಕೃತಿ ರಚನೆ ಮಾಡಿದ ಶ್ರೀ ರಾಘವಾರ್ಯ ಒಡೆಯರ ಆರಾಧನಾ ಮಹೋತ್ಸವ (ಪುಷ್ಯ ಕೃಷ್ಣ ಏಕಾದಶಿ, ದ್ವಾದಶಿ ಆರಾಧನೆಯ ಆಚರಣೆ)
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
ದಿನಾಂಕ : 09.02.2021 ಮಂಗಳವಾರ - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪರಮಾನುಗ್ರಹ ಪಾತ್ರರಾದ ನಡುವಲಕೊಪ್ಪ ಶ್ರೀ ರಾಘವಾರ್ಯ ಒಡೆಯರ ಆರಾಧನಾ ಮಹೋತ್ಸವ "
" ಪ್ರಾಸ್ತಾವಿಕ "
ಕನ್ನಡ ಸಾಹಿತ್ಯದ 2000 ವರ್ಷಗಳ ಸುದೀರ್ಘ ಇತಿಹಾಸದಲ್ಲಿ " ಹರಿದಾಸ ಸಾಹಿತ್ಯ " ಒಂದು ಪ್ರಮುಖ ಘಟ್ಟ.
ಹೆಚ್ಚು ಕಡಿಮೆ 8 ಶತಮಾನಗಳ ವ್ಯಾಪ್ತಿಯ ಈ ಭಕ್ತಿ ಸಾಹಿತ್ಯ ಪ್ರಕಾರವನ್ನು ಸುಮಾರು 6500 ಜನ ಹರಿದಾಸರು ತಮ್ಮ ಬಗೆ ಬಗೆಯ ರಚನೆಯಿಂದ ಮುಖ್ಯವಾಗಿ ಕೀರ್ತನೆಗಳಿಂದ ಸಮೃದ್ಧವಾಗಿಸಿದ್ದಾರೆ.
ಈ ಕೀರ್ತನೆಗಳು ಇಂದಿಗೂ ಜನಪ್ರಿಯವಾಗಿ ಪ್ರಚಾರದಲ್ಲಿವೆ.
ಕೆಲವು ಮುಖ್ಯ ಹರಿದಾಸರುಗಳ ಹೆಸರುಗಳು ಮನೆ ಮಾತಾಗಿದೆ.
ಸಾಹಿತ್ಯಕ ಶ್ರೀಮಂತಿಕೆಯಿಂದ ಮಾತ್ರವಲ್ಲದೆ ದ್ವೈತ ಸಿದ್ಧಾಂತವನ್ನು ಅಧ್ಯಯನ ಮಾಡುವ ದೃಷ್ಟಿಯಿಂದಲೂ " ಹರಿದಾಸ ಸಾಹಿತ್ಯ " ಮಹತ್ವದ್ದಾಗಿದೆ.
ಕರ್ನಾಟಕ ಸಂಗೀತಕ್ಕೆ ಹರಿದಾಸರ ಕೀರ್ತನೆಗಳ ಕೊಡುಗೆಯಂತೂ ಅಸಾಧಾರಣವಾದುದು.
" ಶ್ರೀ ರಾಘವಾರ್ಯ ಒಡೆಯರ ಸಂಕ್ಷಿಪ್ತ ಚರಿತ್ರೆ "
ಹೆಸರು : ಶ್ರೀ ರಾಘವಾರ್ಯ
ತಂದೆ : ಶ್ರೀ ಸ್ವಾಮಿರಾಯಾಚಾರ್ಯರು
ಕಾಲ : ಕ್ರಿ ಶ 1829 - 1904
ವಿದ್ಯಾ ಗುರುಗಳು :
ತಾತ೦ದಿರಾದ ಶ್ರೀ ವಿದ್ವಾನ್ ಶ್ರೀ ವೇಂಕಟಾಚಾರ್ಯರು ಮತ್ತು ತಂದೆಯವರಾದ ಶ್ರೀ ಸ್ವಾಮಿರಾಯಾಚಾರ್ಯರಲ್ಲಿ ಸಾಹಿತ್ಯ - ವ್ಯಾಕರಣ - ವೇದವನ್ನೂ......
ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠಾಧೀಶರಾದ ಶ್ರೀ ರಘುದಾಂತ ತೀರ್ಥರಲ್ಲಿ ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನವನ್ನು ಮಾಡಿದರು.
" ವಿದ್ಯಾ ಶಿಷ್ಯರು "
ಶ್ರೀ ರಾಘವಾರ್ಯರು ಅಧ್ಯಯನ - ಅಧ್ಯಾಪನ ಮಾಡುತ್ತಾ - ಸ್ವತಃ ತಾವೇ ಅನೇಕ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಅಸನ - ವಸನದೊಂದಿಗೆ ವಿದ್ಯಾ ದಾನ ಮಾಡುತ್ತಿದ್ದರು.
ಅವರ ವಿದ್ಯಾ ಶಿಷ್ಯರಲ್ಲಿ ಪ್ರಮುಖರು...
ಹುನಗುಂದದ ಶ್ರೀ ಪುರಾಣಿಕ್ ನಾರಾಯಣಾಚಾರ್ಯ
ಹನುಮಸಾಗರದ ಶ್ರೀ ಪುರಾಣಿಕ್ ಭೀಮಸೇನಾಚಾರ್ಯ
ಗುನ್ಹಾಳದ ಶ್ರೀ ವೆಂಕಣ್ಣಾಚಾರ್ಯ ಕಟ್ಟಿ
ಮೊದಲಾದವರು ಶ್ರೀ ರಾಘವಾರ್ಯರಲ್ಲಿ ಅಧ್ಯಯನ ಮಾಡಿ ಪಂಡಿತರಲ್ಲೇ ಉತ್ತಮರೆಂದು ಖ್ಯಾತಿ ಪಡೆದರು.
" ವಿವಾಹ "
ಶ್ರೀ ರಾಘವಾರ್ಯರು ಆರ್ಥಿಕವಾಗಿ ಅನುಕೂಲರಾಗಿದ್ದರು.
ಜಮೀನುಗಳೂ, ಇನಾ೦ ಭೂಮಿ, ನೈಜಾಮ್ ದೊರೆಯಿಂದ ಗೌರವ ಪೂರ್ವಕವಾಗಿ ದೊರೆತ ಜಾಗೀರುಗಳು ಅವರದಾಗಿತ್ತು.
ವಿಜಾಪುರದ ಉಚ್ಛ ಅಧಿಕಾರಿಯಾದ ಶ್ರೀ ಸುಬ್ಬರಾಯರು ಶ್ರೀ ರಾಘವಾರ್ಯರಿಗೆ ಸರ್ಕಾರೀ ಉದ್ಯೋಗ ದೊರಕಿಸಿಕೊಟ್ಟು - ಜೊತೆಗೆ ಅವರ ಪ್ರೀತಿಯ ಪುತ್ರಿಯಾದ ವೃಂದಾವನೀ ಬಾಯಿಯನ್ನು ಕೊಟ್ಟು ವಿವಾಹ ಮಾಡಿದರು.
" ಶ್ರೀ ಮಂತ್ರಾಲಯ ಗುರುಗಳ ಅನುಗ್ರಹ "
ಶ್ರೀ ರಾಘವಾರ್ಯರು ಶ್ರೀ ಮಂತ್ರಾಲಯ ಪ್ರಭುಗಳ ಪರಮಾನುಗ್ರಹದಿಂದ ಜನಿಸಿದರು.
ಇವರು ಶ್ರೀ ರಾಯರ ಅವಿಚ್ಛಿನ್ನ ಭಕ್ತರು.
ಇವರು ತಮ್ಮ ನಿರಂತರ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರ ಅನುಷ್ಠಾನದಿಂದ ಮಂತ್ರಸಿದ್ಧಿಯನ್ನು ಹೊಂದಿದ್ದರು.
ಸುತ್ತಮುತ್ತಲಿನ ಹಳ್ಳಿಯ ಜನರು ಪ್ರತಿ ಗುರುವಾರ ಶ್ರೀ ರಾಘವಾರ್ಯರಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿದ್ದರು.
ಇವರು ಭಕ್ತ ಜನರಿಗೆ ಕೊಡುವ ಔಷದೋಪಚಾರ ಏನೆಂದರೆ...
ಶ್ರೀ ರಾಯರ ಅಷ್ಟೋತ್ತರ ಮಂತ್ರ ಜಪ ಮಾಡಿ - ಶ್ರೀ ರಾಯರ ವೃಂದಾವನಕ್ಕೆ ಅಭಿಷೇಕ ಮಾಡಿದ ಮಂತ್ರ ಪೂರಿತ ಪಾದೋದಕ ಪ್ರೋಕ್ಷಣೆ ಮಾಡಿ - ಕುಡಿಸಿ ಜನರ ವ್ಯಾಧಿ ಪರಿಹಾರ ಮಾಡುತ್ತಿದ್ದರು.
ಇವರು ಪ್ರತಿವರ್ಷ ಶ್ರೀ ರಾಯರ ಆರಾಧನೆಗೆ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಹೋಗಿ ತಾಳ ತಂಬೂರಿ ಮೀಟುತ್ತಾ ನೃತ್ಯದೊಂದಿಗೆ ಶ್ರೀ ರಾಯರ ಸನ್ನಿಧಿಯಲ್ಲಿ ಭಜನ ಮಾಡುತ್ತಿದ್ದರು.
" ಒಡೆಯರು " ಯೆಂಬ ಬಿರುದು ಪ್ರದಾನ "
ಉತ್ತರಾದಿಮಠದ ಶ್ರೀ ಸತ್ಯಪರಾಕ್ರಮತೀರ್ಥರು ಶ್ರೀ ರಾಘವಾರ್ಯರಿಗೆ ಅವರ ವಿದ್ಯಾ ವೈಭವನ್ನು ಕಂಡು ಪರಮ ಸಂತೋಷದಿಂದ " ಒಡೆಯರು " ಯೆಂಬ ಬಿರುದನ್ನು ಕೊಟ್ಟಿದ್ದರಿಂದ - ಅಂದಿನಿಂದ ಶ್ರೀ ರಾಘವಾರ್ಯರು " ರಾಘವಾರ್ಯ ಒಡೆಯ " ರೆಂದು ಕರೆಯಲ್ಪಟ್ಟರು.
ಅಂಕಿಂತ : ಶ್ರೀ ನಡುಪುರೇಶ
ಉಪಲಬ್ಧ ಕೃತಿಗಳು : 16
" ಸಮಕಾಲೀನ ಯತಿಗಳು "
ಶ್ರೀ ರಾಯರ ಮಠದ ಸುಗುಣೇಂದ್ರತೀರ್ಥರು - ಶ್ರೀ ಸುಧರ್ಮೇಂದ್ರತೀರ್ಥರು - ಶ್ರೀ ಸುಜ್ಞಾನೇಂದ್ರ ತೀರ್ಥರು - ಶ್ರೀ ಕೂಡ್ಲಿ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುದಾಂತ ತೀರ್ಥರು - ಶ್ರೀ ರಘುಪ್ರೇಮ ತೀರ್ಥರು.
" ಸಮಕಾಲೀನ ಹರಿದಾಸರು "
ಶ್ರೀ ಇಭ್ರಾಮಪುರ ಕೃಷ್ಣಾಚಾರ್ಯರು - ಮೊದಲಕಲ್ಲು ಶ್ರೀ ಶೇಷದಾಸರು - ಶ್ರೀ ಮುದ್ದು ಭೀಮಾಚಾರ್ಯರು - ಶ್ರೀ ಯಲಿಮೆಲಿ ಹಯಗ್ರೀವಾಚಾರ್ಯರು - ಶ್ರೀ ಸುರಪುರದ ಆನಂದದಾಸರು
" ಕೃತಿಗಳು "
ಸಂಸ್ಕೃತ ಸಾಹಿತ್ಯದ ಪಾಂಡಿತ್ಯ - ವ್ಯಾಸ - ದಾಸ ಸಾಹಿತ್ಯಗಳಲ್ಲಿ ಆಳವಾದ ಅಧ್ಯಯನ - ಕವಿತಾ ಶಕ್ತಿ - ದ್ವೈತ ತತ್ತ್ವ ಜ್ಞಾನ ಮುಂತಾದ ಆಧ್ಯಾತ್ಮಿಕ ಪಥದಲ್ಲಿ ಬಾಳಿದ ಶ್ರೀ ರಾಘವಾರ್ಯರು ಹಳ್ಳಿಗರ ಮಧ್ಯೆಯೇ ಬದುಕಿದ್ದು ತಮ್ಮ ಜೀವನ ಪರ್ಯಂತ ಅವರ ಒಡನಾಟ ಸುಖ - ದುಃಖಗಳನ್ನು ಕಂಡವರು.
ಜಾನಪದ ಸತ್ತ್ವದ ಸೌಂದರ್ಯ- ಭಾಷೆಯ ಮರ್ಮಗಳನ್ನರಿತು ಅವರು ರಚಿಸಿದ ಸಾಹಿತ್ಯ ಅಪಾರವಾದದ್ದು.
ಇವರು ಶ್ರೀ ಹರಿ ವಾಯು ಗುರುಗಳ ಪರವಾಗಿ 1000 ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದು - ಅದರಲ್ಲಿ 16 ಕೃತಿಗಳು ಮಾತ್ರ ಸಿಕ್ಕಿದ್ದು- ಆ ಕೃತಿಗಳನ್ನು ಮೈಸೂರಿನ ಶ್ರೀ ಗುರು ಗೋವಿಂದದಾಸರು ತಮ್ಮ " ಹರಿ ಭಕ್ತ ವಿಜಯ ಗ್ರಂಥ ಮಾಲಿಕೆ " ಯಲ್ಲಿ ಪ್ರಕಟಿಸಿದ್ದಾರೆ.
ಉಪಲಬ್ಧವಿರುವ ಪದ್ಯಗಳೆಲ್ಲವೂ " ನಡಮಲಕೊಪ್ಪ ಗ್ರಾಮದ ಶ್ರೀ ಶ್ರೀ ಪ್ರಾಣದೇವರ " ಹೆಸರನ್ನು ಆಧರಿಸಿ " ನಡುಪುರೇಶ " ಎಂಬ ಅಂಕಿತ ಹೊಂದಿದೆ..
ಉತ್ತರ ಕರ್ನಾಟಕದ ಗಂಡು ಭಾಷೆಯ ಬಳಕೆಯಲ್ಲಿ ಶ್ರೀ ರಾಘವಾರ್ಯರ ಪದಗಳೆಲ್ಲವೂ ವೈಶಿಷ್ಟ್ಯ ಪೂರ್ಣವಾಗಿ ಮೂಡಿ ಬಂದಿವೆ.
ಜಾನಪದ ಶೈಲಿಯಲ್ಲಿ ವೇದಾಂತ ಜಟಿಲ ತತ್ತ್ವಗಳನ್ನು ಅತ್ಯಂತ ಸರಳ ಸುಂದರವಾದ ಅಚ್ಛ ಕನ್ನಡದಲ್ಲಿ ಗೇಯ ರೂಪದಲ್ಲಿ...
ಎಣ್ಕಿಲ್ಲದ ಮಹಿಮ ।ಮಣ್ಯಲ್ಕೇರ್ಲ್ಹನುಮ ।ಟಣ್ಯನ ವಾರಿಧಿಯ ।ದಣ್ಕೊಳದಲೆ ಹಾರಿ ।ಕೆಣ್ಕಿದ ರಕ್ಕಸರ ।ನೊಣ್ಕೆ ಸರಿ ವರಿಸಿ ।।ಹೆಣ್ಕಳ ರಾವಣನ ।ಮಣ್ಕೋಟಿ ಪುರವನ್ನು । ಸುಣ್ಕಲ್ಲು ಸುಟ್ಟಂತೆ ।ಕ್ಷಣ್ಕಿ ಸುಟ್ಟ್ಲನುಮ ।।ಮುಂದೆ ಸಾಗುತ್ತಾ ... ನಡುಪರಿ ಹನುಮನ ನಂಬಿದೆ ।ಮನುಜಗೆ ಬಡತನವೆಲ್ಲೈತೆ ।ಬಿಡದೆ ಭಕುತರ ಸಲುಹುವ-ನೆಂಬುದು ಭೇರಿ ಹೊಡಿತೈತೆ ।।
ಶ್ರೀ ರಾಘವಾರ್ಯರ ಉಪಲಬ್ಧ ಕೃತಿಗಳು ಹೀಗಿವೆ....
ಶುಕ್ರವಾರದ ಹಾಡು - 78 ನುಡಿಗಳು.
ಷಟ್ಪದಿ ರೂಪದಲ್ಲಿರುವ ದಶಾವತಾರದ ಹಾಸಿಗೆ ಕರೆಯುವ ಹಾಡು - 11
ನುಡಿಗಳು
ಪ್ರಯಾಗ ಮಹಾತ್ಮ್ಯೇ - 25 ನುಡಿಗಳು
ಕಾಶೀ ಹಾಡು - 14 ನುಡಿಗಳು
ಶ್ರೀ ಮಹಾಲಕ್ಷ್ಮೀ ಸ್ತುತಿ - 5 ನುಡಿಗಳು.
ಜೊತೆಗೆ ಆರತಿ ಹಾಡು - ಈಶ್ವರ ಮತ್ತು ಮೃತ್ಯುಂಜಯ. ಶ್ರೀ ಪ್ರಾಣದೇವರ ಸ್ತೋತ್ರ ಪದಗಳೂ ಮತ್ತು ಉದಯರಾಗ.
ಶ್ರೀ ನರಸಿಂಹದೇವರನ್ನು ಕುರಿತು...
ಮಾರಿ ನೋಡಿದರಂತು ।ಕ್ವಾರಿಯು ಮಳ ಉದ್ದ । ಬೇರುಗಳನು ತಿಂದು ಬದುಕುವನು ।। ಮೂರು ಲೋಕಗಳಂಜಿ ।ಚೀರುವ ಧ್ವನಿಯು । ವಿ ।ಕಾರ ಮೃಗವ । ಕಂ ।ಡರಾರು ಸೇರರು ನೀ ।।
ಸಂಸ್ಕೃತದ ಉದ್ಧಾಮ ಪಂಡಿತರಾಗಿದ್ದರೂ - ತಿರುಳುಗನ್ನಡ ಜಾನಪದ ಶೈಲಿಯಲ್ಲಿ ಮನೋಜ್ಞ ಕೀರ್ತನೆಗಳನ್ನು ಕಟ್ಟುವುದು ಶ್ರೀ ರಾಘವರ್ಯ ಒಡೆಯರ ವೈಶಿಷ್ಟ್ಯವಾಗಿದೆ.
ದ್ರಾಕ್ಷಾ ಪಾಕದಲ್ಲಿ ಸಂಸ್ಕೃತದ ಪುರಾಣ - ಉಪನಿಷತ್ತುಗಳ ಸಾರವನ್ನೆಲ್ಲಾ ಕನ್ನಡೀಕರಿಸುವ ಹದ ಹವಣಗಳು ಶ್ರೀ ರಾಘವಾರ್ಯ ಒಡೆಯರಲ್ಲಿ ಅನ್ಯಾದೃಶ್ಯವಾಗಿದೆ.
ಇಂಥಾ ಮಹಾನುಭಾವರು ಶ್ರೀ ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ಕೊಟ್ಟು ಕ್ರಿ ಶ 1904 ರ ಪುಷ್ಯ ಬಹುಳ ಏಕಾದಶೀ ಶ್ರೀ ಹರಿಯ ವಾಸ ಸ್ಥಾನವಾದ ವೈಕುಂಠಕ್ಕೆ ಪ್ರಯಾಣ ಮಾಡಿದರು.
ಅವರ ಆರಾಧನೆಯನ್ನು ಪ್ರತಿವರ್ಷ ಪುಷ್ಯ ಬಹುಳ ದ್ವಾದಶೀ ಯಂದು ಆಚರಿಸಲಾಗುವದು.
ನಡುಪುರೇಶಾ೦ಕಿತ೦ ವರ್ಯ೦
ಹರಿ ಭಕ್ತಿ ಪಾರಾಯಣಮ್ ।
ಮೃಡವರೇಣ್ಯ ಕೃಪಾಪೂರ್ಣ೦
ರಾಘವಾರ್ಯ ಗುರು೦ ಭಜೇ ।।
BY ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
"ನಡುಪುರೇಶ" ಅಂಕಿತರಾದ ನಡುವಲ ಕೊಪ್ಪದ "ರಾಘವಾರ್ಯರ" ಮಣ್ಕಲೇರಿ ಹನುಮಂತ ದೇವರನ್ನು ಗ್ರಾಮ್ಯ ಭಾಷೆಯಿಂದಲೇ ಸ್ತುತಿಗೈದರು. ರೋಚಕವಾಗಿದೆ.
"ಟಣ್ಣನೇ ವಾರಿಧಿಯ _ ದಣ್ಕೊಳದಲೆ ಹಾರಿ _
ಕೆಣ್ಕಿದಾ ರಕ್ಕಸರ _ ನೊಣ್ಕ ಸರಿ ವರಸಿ _
ಹೆಣ್ಕಳ್ಳ ರಾವಣನ _ ಮಣ್ಕೋಟಿ ಪುರವನ್ನು
ಸುಣ್ಕಲ್ಲು ಸುಟ್ಟಂತೆ ಕ್ಷಣ್ಕೆ ಸುಟ್ಹನುಮಾ"
"ಎಣ್ಕಿಲ್ಲದಾ ಮಹಿಮ _ ಮಣ್ಕಲ್ಯೇರ್ಹನುಮಾ"
****
No comments:
Post a Comment