Friday 13 August 2021

rangesha vittala dasaru 1954 ರಂಗೇಶ ವಿಠಲ ದಾಸರು

    ..

Name:  rangesha vittala dasaru ರಂಗೇಶ ವಿಠಲ ದಾಸರು

Ankita: rangesha vittala

Kruti: 106

ರಂಗೇಶ ವಿಠಲ ದಾಸರು ದಾಸರು

***


info from kannadasiri.in

ರಂಗೇಶ ವಿಠಲರು (1875-1954)

ತಂದೆ ಮುದ್ದುಮೋಹನದಾಸರ ಶಿಷ್ಯರಲ್ಲಿ ಒಬ್ಬರಾದ ರಂಗೇಶವಿಠಲರ ನಿಜನಾಮ ಎ.ಆರ್. ಸಂಜೀವರಾಯರು (ಅರಕೆರೆ ರಾಮಣ್ಣ ಸಂಜೀವರಾವ್) ತುಮಕೂರು-ಮಧುಗಿರಿ ರಸ್ತೆಯಲ್ಲಿರುವ ಅರಕೆರೆ ಇವರ ಜನ್ಮಸ್ಥಳ. ಇವರ ತಂದೆ ರಾಮಣ್ಣ, ತಾಯಿ ಸಂಜೀವಮ್ಮ. ರಾಮಣ್ಣನವರಿಗೆ ಏಳು ಮಂದಿ ಹೆಣ್ಣುಮಕ್ಕಳು ಮತ್ತು ಒಬ್ಬನೇ ಗಂಡು ಮಗ. ಅರಕೆರೆ ರಾಮಣ್ಣನವರು ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತರಾಗಿದ್ದರು. ರಾಮಣ್ಣನವರ ಹಿರಿಯ ಮಗ ಸಂಜೀವರಾಯರು ಎಸ್.ಎಸ್.ಎಲ್.ಸಿ.ವರೆಗೂ ವಿದ್ಯಾಭ್ಯಾಸ ಮುಗಿಸಿ, ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲಮೊ ಮಾಡಿದ್ದರು. ಕೆಲವು ಕಾಲ ಮೈಸೂರು ಸಂಸ್ಥಾನದ ಪಬ್ಲಿಕ್‍ವಕ್ರ್ಸ್ ಇಲಾಖೆಯಲ್ಲಿ ಓವರ್‍ಸೀಯರ್ ಆಗಿ ಕೆಲಸ ಮಾಡಿದರು. ತಮ್ಮ ಮೇಲಿನ ಅಧಿಕಾರಿಯ ಧೋರಣೆ ಹಿಡಿಸದೆ ಅವನ ಜೊತೆ ವಾದಿಸಿ ರಾಜೀನಾಮೆ ಕೊಟ್ಟರು. ಅನಂತರ ಹಲವು ಟೌನ್ ಮುನ್ಸಿಪಾಲಿಟಿಗಳಲ್ಲಿ ಕಾಮಗಾರಿ ಪರಿವೀಕ್ಷಕರಾಗಿ ಕೆಲಸಮಾಡಿದರು.

ಸಂಜೀವರಾಯರ ಬದುಕಿನಲ್ಲಿ ನಡೆದ ಒಂದು ಕಹಿಘಟನೆ ಜೀವನದಲ್ಲಿ ಬೇಸರ ವೈರಾಗ್ಯ ಬರುವಂತೆ ಮಾಡಿತು. ರಾಯರಿಗೆ ಒಬ್ಬಳೇ ಮಗಳು. ಅವಳಿಗೆ ಹತ್ತನೇ ವಯಸ್ಸಿನಲ್ಲಿಯೇ ಮದುವೆಯನ್ನು ಮಾಡಿದರು. ಹನ್ನೊಂದನೇ ವಯಸ್ಸಿನಲ್ಲಿ ಆಕೆ ವಿಧವೆಯಾದಳಂತೆ. ಬದುಕಿನಲ್ಲಿ ಬೇಸತ್ತ ರಾಯರು ದೇಶಾಂತರ ಹೊರಟುಹೋದರು. ಒಂದು ವರ್ಷ ಅವರು ಎಲ್ಲಿದ್ದಾರೆಂದು ಸುಳಿವು ಸಿಗಲಿಲ್ಲ. ಅನಂತರ ತಮ್ಮ ತಂದೆಗೆ ಹೈದ್ರಾಬಾದಿನಿಂದ ಪತ್ರ ಬರೆದು ಅಲ್ಲಿ ಅಂಚೆ ಇಲಾಖೆಯಲ್ಲಿ ಗುಮಾಸ್ತರಾಗಿರುವುದಾಗಿ ತಿಳಿಸಿದರು. ಸ್ವಲ್ಪ ಕಾಲವಾದ ಮೇಲೆ ಆ ಕೆಲಸ ಬಿಟ್ಟು ಕರಾಚಿಗೆ ಹೋಗಿ ಸಿಂಗರ್ ಹೊಲಿಗೆ ಯಂತ್ರದ ಮಾರಾಟ ವಿಭಾಗದಲ್ಲಿ ಕೆಲಸ ಮಾಡಿದರು. 1910ರ ಸುಮಾರಿಗೆ ಮತ್ತೆ ಬೆಂಗಳೂರಿಗೆ ಹಿಂತಿರುಗಿದರು. ಕೆಲವು ವರ್ಷ ಸೌದೆ ಇದ್ದಿಲು ಡಿಪೋ ನಡೆಸಿದರು. ಕೆಲವು ಕಾಲ ಬೆಂಗಳೂರು ಪ್ರೆಸ್ ಮ್ಯಾನೇಜರಾಗಿದ್ದರು. ಇನ್ನು ಕೆಲವು ದಿನ ಫೋಟೋ ಸ್ಟುಡಿಯೋ ನಡೆಸಿದರು. 1930-42ರವರೆಗೆ ಕುಣಿಗಲ್ ತಾಲ್ಲೂಕು ಕೀಲಾರ ಎಂಬಲ್ಲಿ ಇನಾಂದಾರರೊಬ್ಬರ ಎಸ್ಟೇಟ್ ಮ್ಯಾನೇಜರ್ ಆಗಿ ಕೆಲಸಮಾಡಿದರು. 1942ರ ವೇಳೆಗೆ ತಮ್ಮ ಸ್ವಂತ ಊರು ಅರಕೆರೆಗೆ ಬಂದು ನೆಲೆಸಿದರು. ಸಂಜೀವರಾಯರು ಕಟ್ಟುನಿಟ್ಟಿನ ಮನುಷ್ಯ ಎಂಬುದನ್ನು, ಸ್ವಲ್ಪ ವಿಚಿತ್ರ ಸ್ವಭಾವದವರು ಎಂಬುದನ್ನು ಮೂರು ಪ್ರಸಂಗಗಳೊಂದಿಗೆ ಡಾ|| ಪ್ರಭುಶಂಕರ1 ಅವರು ನಿರೂಪಿಸಿದ್ದಾರೆ.

ಹತ್ತು ಹನ್ನೆರಡು ಉದ್ಯೋಗಗಳನ್ನು ನಡೆಸಿದ ಸಂಜೀವರಾಯರು `ನಾಗರಾಜ', `ಸುಮಿತ್ರ' ಎಂಬ ಎರಡು ಕಾದಂಬರಿಗಳನ್ನೂ ಬರೆದು ಪ್ರಕಟಿಸಿದರು.2 ಈ ಮಧ್ಯದಲ್ಲಿ ಆಗಾಗ ದೇಶಾಂತರ ಹೋಗುವುದು, ವರ್ಷಗಳ ಕಾಲ ಕಾಣೆಯಾಗುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. 1915ರ ಸುಮಾರಿನಲ್ಲಿ ಒಮ್ಮೆ ಹೀಗೆ ನಾಪತ್ತೆಯಾದರು. ಮನೆಯವರಿಗೆಲ್ಲಾ ಇದು ಅಭ್ಯಾಸವಾಗಿತ್ತೊ ಏನೋ ಅವರನ್ನು ಹುಡುಕಿಸುವ ಪ್ರಯತ್ನ ಮಾಡಲಿಲ್ಲ. ದೇವರಾಯನದುರ್ಗದ ಜಾತ್ರೆಯಲ್ಲಿ ದಾಸರ ವೇಷದಲ್ಲಿ ಗೆಜ್ಜೆಕಟ್ಟಿ, ತಂಬೂರಿ ಹಿಡಿದು ಕುಣಿಯುತ್ತಿದ್ದ ಸಂಜೀವರಾಯರನ್ನು ತಾವು ಕಂಡದ್ದಾಗಿ ಪರಿಚಿತರೊಬ್ಬರು ತಿಳಿಸಿದರಂತೆ.

ಸಂಜೀವರಾಯರು ಮುದ್ದು ಮೋಹನದಾಸರಿಂದ ಹರಿದಾಸ ದೀಕ್ಷೆ ಪಡೆದರು.

ವರಗುರು ತಂದೆ ಮುದ್ದು ಮೋಹನದಾಸ| ರೆನಗಿತ್ತರು ಲೇಸ

ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಕೀ.181

ಈ ಕೀರ್ತನೆಯಲ್ಲಿ ತಮಗೆ ಗುರುಗಳ ಅನುಗ್ರಹವಾದ ಸಂದರ್ಭವನ್ನು ದಾಸರು ಸ್ಮರಿಸಿದ್ದಾರೆ. `ಪರಮಾರ್ಥ ಚಂದ್ರೋದಯ' ಪತ್ರಿಕೆಯ 1928 ರ ಒಂದು ಸಂಚಿಕೆಯಲ್ಲಿ ಈ ಕೀರ್ತನೆ ಪ್ರಕಟವಾಗಿದೆ. ಈ ವೇಳೆಗೆ ಸುಬ್ಬರಾಯದಾಸರು (ತಂದೆ ಮುದ್ದುಮೋಹನವಿಠಲ) 75 ಮಂದಿ ಶಿಷ್ಯರಿಗೆ ಅಂಕಿತೋಪದೇಶವನ್ನು ಮಾಡಿದ್ದರು. ಅಂಕಿತೋಪದೇಶ ಪಡೆದ ಮೊದಲ ಶಿಷ್ಯರು ಬಾಗೇಪಲ್ಲಿ ಶೇಷದಾಸರು. ಸಂಜೀವರಾಯರು 39ನೆಯವರು. ಬಾಗೇಪಲ್ಲಿ ಶೇಷದಾಸರು 1924ರ ರಕ್ತಾಕ್ಷಿ ಸಂವತ್ಸರದ ಭಾದ್ರಪದ ಶುಕ್ಲ ಪೌರ್ಣಮಿಯಂದು ಸ್ವರ್ಗಸ್ಥರಾದ ಸಂಗತಿಯನ್ನು ರಂಗೇಶವಿಠಲರು ತಮ್ಮ ಕೀರ್ತನೆಯೊಂದರಲ್ಲಿ ಸ್ಮರಿಸಿದ್ದಾರೆ. (ಕೀ.182) ಇವುಗಳ ಆಧಾರದ ಮೇಲೆ 1915ರ ಸುಮಾರಿನಲ್ಲಿ ಸಂಜೀವರಾಯರಿಗೆ ಅಂಕಿತೋಪದೇಶವಾಯಿತು ಎಂದು ಭಾವಿಸಬಹುದು. ತಂದೆ ಮುದ್ದುಮೋಹನದಾಸರಿಂದ ಅವರು ಪಡೆದ ಅಂಕಿತ `ರಂಗೇಶವಿಠಲ'. `ಮಾನನಿಧಿ ರಂಗೇಶವಿಠಲ ಕೇಳೊ' ಎಂಬ ಅಂಕಿತಪದದ ಮೂಲಕ (ಅನುಬಂಧ 5-ಅ) ತಂದೆ ಮುದ್ದುಮೋಹನವಿಠಲರು ದಾಸದೀಕ್ಷೆ ನೀಡಿದರು ಎಂದು ತಿಳಿದುಬರುತ್ತದೆ.

ರಂಗೇಶವಿಠಲರ ಸÀುಮಾರು 115 ಕೀರ್ತನೆಗಳು ದೊರೆತಿವೆ. ಈ ಕೀರ್ತನೆಗಳ ಶುದ್ಧಪ್ರತಿಯನ್ನು 1925ರಲ್ಲೇ ದಾಸರೇ ಸಿದ್ಧಪಡಿಸಿ ಮುದ್ರಣ ಪ್ರತಿಯನ್ನು ತಯಾರಿಸಿದ್ದರು. ಮೈಸೂರು ಕೃಷ್ಣರಾಜ ಮಿಲ್ಸ್‍ನ ಆಫೀಸ್À ಮ್ಯಾನೇಜರ್ ಆಗಿದ್ದ ಎಸ್. ಬಿಂದುರಾಯರು ಈ ಕೀರ್ತನೆಗಳಿಗೆ ರಾಗ ತಾಳಗಳನ್ನು ನಿರ್ಣಯಿಸಿ ಕೊಟ್ಟಿದ್ದರು. ಉಡುಪಿಯ ಪಾವಂಜೆ ಗುರುರಾಯರು ಈ ಕೀರ್ತನೆಗಳನ್ನು ಪ್ರಕಟಿಸಲು ಒಪ್ಪಿದ್ದರು. ಆದರೆ ಪ್ರಕಟವಾಗಲಿಲ್ಲ. ಸುಮಾರು 1915ರಲ್ಲಿ ದಾಸದೀಕ್ಷೆ ಸ್ವೀಕರಿಸಿದ ರಂಗೇಶವಿಠಲರು ಮುಂದಿನ ಹತ್ತು ವರ್ಷಗಳಲ್ಲಿ ರಚಿಸಿದ ಕೀರ್ತನೆಗಳು ಇವು. ಆ ಮುಂದಿನ 30 ವರ್ಷಗಳ ಕಾಲ ಇವರು ಕೀರ್ತನೆಗಳನ್ನು ರಚನೆ ಮಾಡಿದರೆ ಇಲ್ಲವೇ ಎಂಬುದು ತಿಳಿದು ಬರುವುದಿಲ್ಲ. ತಂದೆ ಮುದ್ದುಮೋಹನವಿಠಲರು ಮತ್ತು ಅವರ ಶಿಷ್ಯರು 20-30ರ ದಶಕದಲ್ಲಿ ಹರಿದಾಸ ಸಾಹಿತ್ಯ ಆಂದೋಲನವನ್ನೇ ಕೈಗೊಂಡರು. ದೇವರಾಯನದುರ್ಗ ಮತ್ತು ಬೆಂಗಳೂರು ಇವರ ಧಾರ್ಮಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವಾಗಿತ್ತು. 1940ರಲ್ಲಿ ತಂದೆ ಮುದ್ದುಮೋಹನದಾಸರು ಸ್ವರ್ಗಸ್ಥರಾದ ಮೇಲೆ ದಾಸಕೂಟದ ಚಟುವಟಿಕೆಗಳು ಕ್ಷೀಣಿಸುತ್ತಾ ಬಂದವು. ಸಮಕಾಲೀನ ಹರಿದಾಸರ ಧಾರ್ಮಿಕ ಸಾಹಿತ್ಯದ ಪ್ರಕಟಣೆಗೇ ಮೀಸಲಾಗಿದ್ದ `ಪರಮಾರ್ಥ ಚಂದ್ರೋದಯ'1 ಪತ್ರಿಕೆಯೂ ಸ್ಥಗಿತವಾಯಿತು. ಸ್ವಾತಂತ್ರ್ಯ ಪೂರ್ವದ ಸಾಮಾಜಿಕ, ರಾಜಕೀಯ ಬದಲಾವಣೆಗಳಿಂದಾಗಿ ಹರಿದಾಸರು ಬೇರೆ ಬೇರೆ ಭಾಗಗಳಿಗೆ ಹಂಚಿಹೋದರು. ದಾಸಸಾಹಿತ್ಯದ ರಚನೆಗಳು ಸ್ಥಗಿತಗೊಂಡವು. ರಂಗೇಶವಿಠಲರು ಇದೇ ಪರಿಸರದಲ್ಲಿ ಇದ್ದವರಾದ್ದರಿಂದ 1925ರ ನಂತರ ಅವರು ಕೀರ್ತನೆಗಳ ರಚನೆಯನ್ನು ಮುಂದುವರೆಸಲಿಲ್ಲವೆಂದು ತೋರುತ್ತದೆ. ಕೀರ್ತನೆಗಳಲ್ಲದೆ ಕೇಶವಾದಿ ಚರ್ತುವಿಂಶತಿ ರೂಪ ಲಕ್ಷಣ ವಿವರಣ ಸ್ತೋತ್ರವನ್ನು (25 ಷಟ್ಪದಿಗಳು), ಮಾಸ ನಿಯಾಮಕ ಪರಮಾತ್ಮನ ರೂಪಗಳ ಸ್ತುತಿಯನ್ನು (15 ಭಾಮಿನಿ ಷಟ್ಪದಿಗಳು) ರಚಿಸಿದ್ದಾರೆ. ಈ ಎರಡು ಭಾಮಿನಿ ಷಟ್ಪದಿಗಳನ್ನು ರಚಿಸಿದ್ದು 1940ರಲ್ಲಿ. ದಾಸರು ಕೀಲಾರದಲ್ಲಿ ಇದ್ದಾಗ. ಕೀಲಾರದಿಂದ ತಮ್ಮ ಸ್ವಂತ ಸ್ಥಳ ಅರಕೆರೆಗೆ ಬಂದು ನೆಲೆಸಿದರು.

*****

No comments:

Post a Comment