Sunday, 1 August 2021

karki keshavadasa dasaru 1975 ಕರ್ಕಿ ಕೇಶವದಾಸರು

Name            : Karki Keshavadasa

ದಾಸರ ಹೆಸರು   : ಕರ್ಕಿ ಕೇಶವದಾಸ

Period: 1900-1975

Old Name     :      ಶ್ರೀ ಈಶ್ವರ ಕೇಶವ ಭಟ್ಟ

ಜನ್ಮ ಸ್ಥಳ        : ಕರ್ಕಿ

ತಂದೆ ಹೆಸರು    : ಶ್ರೀ ಕೇಶವ ಭಟ್ಟ ಭೈರವ ಭಟ್ಟ ಬುರ್ಡೆ

ತಾಯಿ ಹೆಸರು    : ಲಕ್ಷ್ಮೀ

ಕಾಲ                : from 1900 -

ಅಂಕಿತನಾಮ    : ಚನ್ನಕೇಶವ

ಲಭ್ಯ ಕೀರ್ತನೆಗಳ ಸಂಖ್ಯೆ: 97

ಕೃತಿಯ ವೈಶಿಷ್ಟ್ಯ: ಇವರ ಕೀರ್ತನೆಗಳು ಭಜನೆ ಹಾಗೂ ಹಾಡಲು ಯೋಗ್ಯವಾದವು, ಸರಳ, ಸುಭಗ, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯ ಪ್ರಯೋಗವನ್ನು ಇಲ್ಲಿ ಬಳಸಲಾಗಿದೆ

ಇತರೆ: ಸಮಾಜ ಸೇವಕರಾಗಿ, ರಾಜಕೀಯ ಮುಂದಾಳುಗಳಾಗಿ, ಕಾಂಗ್ರೇಸ್ ಕಾರ್ಯಕರ್ತರಾಗಿ, ಹಲವಾರು ಸಂಘಗಳ ಸ್ಥಾಪಕರೂ ಪದಾಧಿಕಾರಿಗಳು ಆಗಿ ದೇವಾಲಯಗಳನ್ನು ಕಟ್ಟಿಸಿ ಕೀರ್ತನೆಗಳನ್ನು ರಚಿಸಿರು.

****

info from kannadasiri.in

ದಿ. ಶ್ರೀ ಕರ್ಕಿ ಕೇಶವದಾಸರ ನಿಜನಾಮ, ಶ್ರೀ ಈಶ್ವರ ಕೇಶವ ಭಟ್ಟ ಎಂಬುದಾಗಿ, ಕರ್ಕಿಯಲ್ಲಿ ಇ.ಕೆ. ಭಟ್ಟ ಎಂದೆ ಖ್ಯಾತರಾದವರು. ಕೇಶವ ದಾಸರು 1900ನೇ ಇಸವಿಯಲ್ಲಿ ಕರ್ಕಿಯಲ್ಲಿ ಜನ್ಮತಳೆದರು. ತಂದೆ ಶ್ರೀ ಕೇಶವ ಭಟ್ಟ ಭೈರವ ಭಟ್ಟ ಬುರ್ಡೆ. ತಾಯಿ ಲಕ್ಷ್ಮೀ ಎಂಬುವರು. ತಂದೆಯವರು ಪುರೋಹಿತರಾಗಿ ಮಂತ್ರವಿದರಾಗಿ ಸಂಪ್ರದಾಯಸ್ಥ ಮನೆತನದವರಾಗಿದ್ದರು. ಮಕ್ಕಳಲ್ಲೂ ಹಿಂದಿನ ಆಚಾರ ವಿಚಾರಗಳು, ಬೆಳೆಯಲು ಕಾರಣರಾಗಿದ್ದರು. ಬಾಲ್ಯದಿಂದಲೂ ದೈವ ಭಕ್ತಿ, ಭಜನೆ ಪೂಜೆಗಳಲ್ಲಿ ಕೇಶವದಾಸರಿಗೆ ಒಲವು ಹೆಚ್ಚಾಗಿದ್ದಿತು. ತಂದೆಯವರಿಗೆ ಹುಡುಗನ ದೈವಭಕ್ತಿ ಶ್ರದ್ಧೆಗಳನ್ನು ಕಂಡು ಸಂತೋಷವಾಗುತ್ತಿತ್ತು. ಕೇಶವ ಭಟ್ಟರು ಸಂಪ್ರದಾಯಸ್ತರಾಗಿದ್ದರೂ ಹೊನ್ನಾವರದಲ್ಲಿರುವ ಸೈಂಟ್ ಥಾಮಸ್ ಹೈಸ್ಕೂಲಿನಲ್ಲಿ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರು. ಆಗ ಈ ಪ್ರೌಢಶಾಲೆ ಮುಂಬೈ ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದಿತು. ಅದೇ ಶಾಲೆಯಲ್ಲಿ ಈಶ್ವರ ಕೇಶವ ಭಟ್ಟರು ಎರಡು ವರ್ಷ ಅಭ್ಯಾಸ ಮಾಡಿ ಮ್ಯಟ್ರಿಕ್ ಪರೀಕ್ಷೆಯನ್ನು ಮುಗಿಸಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಕಾಲಕ್ಕೆ ಕಾಂಗ್ರೆಸ್ ಸ್ವಾತಂತ್ರ ಚಳುವಳಿಯ ಕರೆಕೊಟ್ಟಕಾಲ. ಹಾಗಾಗಿ 1920-21 ಚಳುವಳಿಯ ಸಂದರ್ಭದಲ್ಲಿ ಕಾರ್ಯಕರ್ತರಾಗಿ ಹಲವು ಕಡೆ ಸಂಚಾರ ಮಾಡಿದರು. ಚಳುವಳಿಯು ಮುಗಿದ ನಂತರ ಉದ್ಯೋಗ ದೊರಕದ ಕಾರಣ ಮನೆಯ ಆರ್ಥಿಕಪರಿಸ್ಥಿತಿ ಉಲ್ಬಣ ಗೊಂಡಿತು. ಮನೆಯ ಪರಿಸ್ಥಿತಿಯನ್ನು ಮತ್ತು ತಮ್ಮ ನಿರುದ್ಯೋಗಸಮಸ್ಯೆಗಳಲ್ಲೂ ಸಹ ಸಿಕ್ಕ ಸಮಾಧಾನವೆಂದರೆ ಸತ್ಸಂಗದಲ್ಲಿ ಕಾಲ ಯಾಚನೆ, ಅದಕ್ಕಾಗಿ ಕರ್ಕಿಯಲ್ಲಿರುವ ಶ್ರೀ ಚನ್ನಕೇಶವ ದೇವಾಲಯದಲ್ಲಿ ವಾಸಮಾಡುತ್ತಿದ್ದರು. ಅಲ್ಲಿ ತಮ್ಮ ಗೆಳೆಯರೊಡನೆ, ಹೆಚ್ಚಿನ ಸಮಯ ಪೂಜೆ ಹಾಗೂ ಭಜನೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಈ ಕಾಲದಲ್ಲಿ ಅವರು ಭಗವಂತನಾದ ಚೆನ್ನಕೇಶವನನ್ನು ಕುರಿತು ಸಾಕಷ್ಟು ಕೀರ್ತನೆಗಳನ್ನು ರಚಿಸಿದರು. ಊರಿನವರು ಇವರ ಕೀರ್ತನೆ ಹಾಗೂ ಭಕ್ತಿಯನ್ನು ಗಮನಿಸಿ ಗೌರವ ಕೊಡುತ್ತಿದ್ದರು. ದೇವರ ಬಗೆಗಿನ ಭಕ್ತಿ ಶ್ರದ್ಧೆಗಳೇ ಇವರು ದಾಸರಾಗುವುದಕ್ಕೆ ಪ್ರೇರಣೆ ಒದಗಿಸಿತು. ಆಕಾಲದಲ್ಲಿ ಇವರು ಕೇಶವದಾಸರೆಂದೆ ಖ್ಯಾತರಾಗತೊಡಗಿದರು.


ಮುಂದೆ ಪಿ.ಜೆ. ಕರ್ಕಿಯವರ ಅಕ್ಕನ ಮಗಳು ವೆಂಕೂಬಾಯಿ ಎಂಬುವರೊಡನೆ ವಿವಾಹವಾಯಿತು. ಶ್ರೀ ಪಿ.ಜೆ. ಕರ್ಕಿಯವರು ಖ್ಯಾತ ವಕೀಲರಾಗಿದ್ದರು. ಶಂಕರ ಮಹಾಭಲ ಗೋಕರ್ಣ ಎನ್ನುವವರು ಶ್ರೀ ಕೇಶವ ದಾಸರ ಮಾವ. ಇವರು ಹವ್ಯಕ ಬ್ರಾಹ್ಮಣರಲ್ಲಿ ಆ ಪರಿಸರದ ಮೊದಲ ವಕೀಲರೆನಿಸಿದ್ದರು.


ಮುಂದೆ ಕೇಶವದಾಸರು ಪುಣೆಯಲ್ಲಿ ಭೊಪಟ್‍ಕರರು ನಡೆಸುತ್ತಿದ್ದ ವಕೀಲವೃತ್ತಿಗೆ ಅರ್ಹತೆಯ ಪರೀಕ್ಷೆಯನ್ನು ಪಡೆಯಲೋಸುಗ ಒಂದು ವರ್ಷ ಅಧ್ಯಯನಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ‘ಹೈಕೋರ್ಟ್ ಪ್ಲೀಡರ್’ ಎಂಬ ಪ್ರಮಾಣ ಪತ್ರ ಪಡೆದುಕೊಂಡರು, ತಮ್ಮ ವಕೀಲಿ ವೃತ್ತಿಯನ್ನು ಹೊನ್ನಾವರದಲ್ಲಿ ಪ್ರಾರಂಭಿಸಿದರು.


ಕಾಂಗ್ರೇಸ್ ಕಾರ್ಯಕರ್ತರಾಗಿದ್ದ ತಾವು 1930-31ರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಜೈಲುವಾಸವನ್ನು ಅನುಭವಿಸಿದರು. ಮತ್ತೆ 1942ರ ಚಳುವಳಿಯಲ್ಲಿಯೂ ಜೈಲುವಾಸ ಅನುಭವಿಸಿದರು. 1947ರಲ್ಲಿ ಕಾಂಗ್ರೇಸ್ ಅಭ್ಯರ್ಥಿ ಎಸ್. ಎಸ್. ಶಾಸ್ತ್ರಿಗಳ ಜೊತೆಗೆ ಸೇರಿ ಅವರಿಗೆ ಸಹಾಯಕವಾಗಿ ಪ್ರಚಾರ ನಡೆಸಿದರು. ಮುಂಬೈ ಭೂಶಾಸನದ ವಿರುದ್ಧ ಸಣ್ಣ ಭೂಹಿಡುವಳಿದಾರರ ವತಿಯಿಂದ ಹೋರಾಟದಲ್ಲಿ ಪಾಲ್ಗೊಂಡರು. ಈ ರಾಜಕೀಯ ಸಂದರ್ಭದಲ್ಲಿ ಹಲವಾರು ಕೀರ್ತನೆಗಳು ರಚಿತವಾದವು. 1935 ರ ಕಾಲದಲ್ಲಿ ಹೊನ್ನಾವರದ ಪುರಸಭಾ ಸದಸ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿದರು. ನಿರಂತರ 25 ವರ್ಷ ಜನಸೇವೆಯೆ ಜನಾರ್ಧನ ಸೇವೆಯೆಂದು ಕೆಲಸ ಮಾಡಿದರು. ಹವ್ಯಕ ಸಮಾಜದ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಅದರ ಅಧ್ಯಕ್ಷರೂ ಆಗಿದ್ದರು. ಕರ್ಕಿಯಲ್ಲಿ ಶ್ರೀ ಚನ್ನಕೇಶವ ಸಹಕಾರಿ ಸಂಘವನ್ನು ಸ್ಥಾಪಿಸಿದರು. ಶಾಲೆಯನ್ನು ಕಟ್ಟಿ ಬೆಳೆಸಿದರು. ಮತ್ತೇ ಹೊನ್ನಾವರದ ಸಮೀಪದಲ್ಲಿರುವ ಪುಣ್ಯ ತೀರ್ಥವಾದ ರಾಮ ತೀರ್ಥದಲ್ಲಿ ಶ್ರೀ ರಾಮೇಶ್ವರ ದೇವಸ್ಥಾನವನ್ನು ಕಟ್ಟಿಸಿದರು, ಅಲ್ಲಿ ದತ್ತಮಂದಿರವನ್ನು ನಿರ್ಮಿಸಿದರು.


ಕೇಶವದಾಸರ ತಂದೆ ಕೇಶವ ಭಟ್ಟರು ಕಾಲ್ನಡಿಗೆಯಲ್ಲಿಯೆ ರಾಮೇಶ್ವರಕ್ಕೆ ಹೋಗಿ ರಾಮೇಶ್ವರ ಲಿಂಗವನ್ನು ತಂದು ಪ್ರತಿಷ್ಠಾಪಿಸಿದರು. ಈ ದೇವಾಲಯ ಅರಬ್ಬಿ ಸಮುದ್ರಕ್ಕೆ ಮುಖವಾಗಿ ಕಟ್ಟಲ್ಪಟ್ಟಿದೆ. ಈ ದೇವಾಲಯದ ಅರ್ಚನೆಯನ್ನು ಕೇಶವದಾಸರೆ ನಿರ್ವಹಿಸುತ್ತಿದ್ದರು. ದೇವಾಲಯಕ್ಕೆ ದಿನಂಪ್ರತಿ ಬೆಳಿಗ್ಗೆ 5 ಗಂಟೆಗೆ ಹೋಗಿ ರಾಮತೀರ್ಥದಲ್ಲಿ ಮಿಂದು, ಅರ್ಚನೆಮಾಡಿ ಮತ್ತೆ ಮನೆದೇವರಿಗೆ ಅರ್ಚನೆ ಸಲ್ಲಿಸುತ್ತಿದ್ದರು. ಶ್ರೀ ರಾಮತೀರ್ಥ, ಶ್ರೀ ದತ್ತರಾಮಲಿಂಗೇಶ್ವರ ದೇವರುಗಳ ಮೇಲೆ ಕೀರ್ತನೆಗಳು ಸಾಕಷ್ಟು ರಚನೆಯಾದವು.


ಪ್ರತಿನಿತ್ಯ ಮನೆಯಲ್ಲಿ ತಾವೆ ರಚಿಸಿದ ಅಷ್ಟೋತ್ತರ ಹಾಗೂ ದೇವಿಯ ಸ್ತೋತ್ರರೂಪವಾದ ಸಂಸ್ಕøತ ಶ್ಲೋಕಗಳನ್ನು ಪಠಿಸುತ್ತಿದ್ದರು. ಈ ಕೃತಿ ಈಗಾಗಲೆ ಪ್ರಕಟಗೊಂಡು ಭಗವದ್ಭಕ್ತರ ಮನೆಗಳಲ್ಲಿವೆ.


ಕೇಶವದಾಸರದು ಭಕ್ತಿಯಿಂದ ಹಾಡುವ ಕೀರ್ತನೆಗಳಾಗಿವೆ. ಅವರು ನಾಲ್ಕು ಭಾಗಗಳಾಗಿ ಕೀರ್ತನೆಗಳನ್ನು ಮುದ್ರಿಸಿದ್ದಾರೆ. ಅವುಗಳಲ್ಲಿ ಎರಡು ಮತ್ತು ಮೂರನೇ ಸಂಪುಟವನ್ನುಳಿದು ಉಳಿದವು ಉಪಲಬ್ಧವಾಗಿಲ್ಲ.


ಈಗ ಅವರ ಉಪಲಬ್ಧವಾದÀ ಕೀರ್ತನೆಗಳು ಒಟ್ಟು 65 ಮಾತ್ರ ಉಳಿದ ಭಾಗಗಳಲ್ಲಿ ಸುಮಾರು 100 ಕೀರ್ತನೆಗಳು ಇವೆ. ಕೀರ್ತನೆಗಳು ಎಂಬ ಮುದ್ರಿತ ಸಂಗ್ರಹ ಕೃತಿಯಲ್ಲಿ ಶ್ರೀ ಅನಂತಶಯನ ಶ್ರೀ ಶ್ರೀಧರಸ್ವಾಮಿ, ಶ್ರೀ ಕೇಶವದಾಸ ಕರ್ಕಿಯವರ ಕೀರ್ತನೆಗಳಿವೆ. ಈ ಕೀರ್ತನೆಗಳು ಕೆಲವು ಸಂಸ್ಕøತ ಸ್ತೋತ್ರ ರೂಪವಾಗಿಯು ಮತ್ತೆ ಕೆಲವು ಕೀರ್ತನ ರೂಪದಲ್ಲಿಯೂ ಇವೆ. ಇದರಲ್ಲಿ ರಾಮೇಶ್ವರಾಷ್ಟಕ, ರಾಮತೀರ್ಥಸ್ತರ್ವ:, ಶ್ರೀ ರಾಮೇಶ್ವರ ಪಂಚಾಕ್ಷರಿ ಸ್ತೋತ್ರಂ. ಶ್ರೀ ದತ್ತಮೂರ್ತಿಗುರ್ವಷ್ಟಕಂ, ಮುಂತಾದ ಸಂಸ್ಕøತ ರಚನೆಗಳಿವೆ, ದಾಸರ ಶ್ರೀ ಕರಿಕಾನ ಪರಮೇಶ್ವರಿ ಮಂಗಳಗೀತ, ಶ್ರೀಕರಿಕಾನ ಪರಮೇಶ್ವರಿ ವಂದನಾಷ್ಟಕಗಳೂ ಸಂಸ್ಕøತ ಶ್ಲೋಕ ರೂಪದಲ್ಲಿಯೇ ಇವೆ. ಇದಲ್ಲದೆ ‘ಶ್ರೀ ಕರಿಕಾನ ಪರಮೇಶ್ವರೀ ಸ್ತೋತ್ರಮಾಲಾ’ ಕೃತಿಯೂ ಸಂಸ್ಕøತ ಶ್ಲೋಕ ರೂಪದಲ್ಲಿಯೇ ಇದೆ.


ಕೇಶವದಾಸರು ಇಂಗ್ಲೀಷ್ ಭಾಷೆಯಲ್ಲಿ ಮಹಾಭಾರತದ ಹಿನ್ನೆಲೆಯ ಪ್ರಸಂಗ ರಚಿಸಿದ್ದಾರೆ. ಯಕ್ಷಗಾನ ಸಂಘ ಸ್ಥಾಪಿಸಿ ಪಾತ್ರದಾರಿಗಳಾಗಿದ್ದರು. ಈ ರೀತಿಯ ಬಹುಮುಖ ಸೇವೆಯ ಕರ್ಕಿ ಕೇಶವದಾಸರು, ಸಮಾಜ ಸೇವಕರಾಗಿ, ರಾಜಕೀಯ ಮುಂದಾಳುಗಳಾಗಿ, ಕಾಂಗ್ರೇಸ್ ಕಾರ್ಯಕರ್ತರಾಗಿ, ಹಲವಾರು ಸಂಘಗಳ ಸ್ಥಾಪಕರೂ ಪದಾಧಿಕಾರಿಗಳು ಆಗಿ ದೇವಾಲಯಗಳನ್ನು ಕಟ್ಟಿಸಿ ಕೀರ್ತನೆಗಳನ್ನು ರಚಿಸಿ, ಭಜನೆಯ ಆಸಕ್ತಿಯನ್ನು ಬೆಳಸಿ ದಿನಾಂಕ 31 ಜನವರಿ 1975ರಲ್ಲಿ ದಿವಂಗತರಾದರು.


ಕೇಶವದಾಸರ ಕೀರ್ತನೆಗಳೆಲ್ಲ ಭಕ್ತಿ ಪ್ರಧಾನವಾದವು, ಪ್ರತಿನಿತ್ಯವೂ ಮನೆಯಲ್ಲಿ ಭಜಿಸಲು ಯೋಗ್ಯವಾದ ರೀತಿಯಲ್ಲಿ ಇಲ್ಲಿನ ಕೀರ್ತನೆಗಳಿವೆ. ಚೆನ್ನಕೇಶವನ ಎಲ್ಲಾ ಕೀರ್ತನೆಗಳು ನಾರಾಯಣನ ಭಕ್ತಿ ಸುಧೆಯನ್ನೇ ಹರಿಸುತ್ತದೆ. ಇವರ ಕೀರ್ತನೆಗಳಲ್ಲಿ ಭಗವದ್ಭಕ್ತಿ ಸಂಸಾರದ ತಾಪತ್ರಯ, ಅದರಿಂದ ಬಿಡಿಸಿ ಕೊಳ್ಳಲು ದೇವರಿಗೆ ಶರಣಾಗತಿ ಹೊಂದುವುದು, ಅನನ್ಯಧ್ಯಾನ, ಭಗವದ್ ಪ್ರೀತಿಯಿಂದ ಮಾನವ ಶಾಂತಿನೆಮ್ಮದಿಗಳನ್ನು ಪಡೆಯಬಲ್ಲನೆಂದು ನಿರೂಪಿಸುತ್ತಾರೆ. ಇವರ ಹೆಚ್ಚಿನ ಕೀರ್ತನೆಗಳು ಪೌರಾಣಿಕ ಸಂದರ್ಭಗಳನ್ನು ಉಲ್ಲೇಖಿಸಿ ಮುಕ್ತಿ ಪಡೆದುದನ್ನು ಉಲ್ಲೇಖಿಸುತ್ತಾ ಹೋಗುತ್ತವೆ. ದೈವ, ಭಕ್ತಿ, ಭಜನೆ ಇಹ ಜೀವನದ ಬಗೆಗಿನ ನಿರ್ಲಿಪ್ತತೆಗಳಿಂದಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಇವರು ಮನಹರಿಸಿದಂತಿಲ್ಲ. ವಕೀಲರಾಗಿದ್ದು ಹಲವು ಸಂಸ್ಥೆಗಳ ಪದಾಧಿಕಾರಿಗಳಾಗಿದ್ದು. ಚಳುವಳಿಯಲ್ಲಿ ಭಾಗವಹಿಸಿದ್ದರೂ ಆಗಿನ ಘಟನೆಗಳನ್ನು ಲೌಕಿಕವೆಂಬ ಕಾರಣಕ್ಕಾಗಿ ಕೇಶವದಾಸರು ಗಮನಿಸಿದಂತಿಲ್ಲ. ದೇವರು ಸರ್ವಾಂತರ್ಯಾಮಿ ಎಂದು ನಿರೂಪಿಸುತ್ತಾ


ಭೂತಾಳ ಪಾತಾಳ ಸಕಲ ಲೋಕಗಳಲ್ಲಿ

ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ

ಮಾತು ಚೇಷ್ಟೆಗಳಲ್ಲಿ ಕೆರೆ ಭಾವಿ ವನದಲ್ಲಿ

ಕೋತಿ ಖಗವೃಂದ ಪಶುವರ್ಗಂಗಳಲ್ಲಿ

ವೇದ ಶಾಸ್ತ್ರಗಳಲ್ಲಿ ಸರ್ವಧರ್ಮಗಳಲ್ಲಿ

ಭೋಧಕ ಮೋದಲಾದ ಗುರುವರ್ಗದಲ್ಲಿ

ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ

ವಾದ್ಯ ಮೃದಂಗಾವಿನಾದಂಗಳಲ್ಲಿ -


ಎಂದು ಸರ್ವ ಶಕ್ತ, ಸರ್ವ ವ್ಯಾಪ್ತಸ್ಥ ಭಗವಂತನ ನಾಮ ಸ್ಮರಣೆಗೆ ಕರೆಯುತ್ತಿದ್ದಾರೆ. ಕೇಶವನು (ದೀನರೆಲ್ಲರಿಗು ಬಂಧು) ದೀನರಿಗೆಲ್ಲಾ ಬಂಧು, ಹೀನರಿಗೆಲ್ಲಾ ಬಂಧು. ಈತನ ಚರಣವನ್ನು ಕರುಣವನ್ನು, ಪಡೆಯುವುದೇ ನಮ್ಮ ಗುರಿ ಎನ್ನುತ್ತಾರೆ. ಇದಕ್ಕಾಗಿ ಭಕ್ತಿಯೆಂಬ ಬೀಜವನ್ನು ಬಿತ್ತಯ್ಯ ಅದರಲ್ಲಿ ಬೆಳೆವ ಮುಕ್ತಿ ಎಂಬ ಫಲವನ್ನು ತಿನ್ನಯ್ಯ ಎಂಬ ಸಲಹೆ ಇವರದು, ಹರಿನಾಮ ಸ್ಮರಣೆಯಿಂದ ಸಕಲ ಅಭಿಷü್ಟಗಳು ಇರುತ್ತವೆಂದು ‘ಹರಿನಾಮ ಮರೆಯ ಬೇಡಯ್ಯ ಪರಿದುರಿತಗಳೆಲ್ಲ ಅದು ನೀಗುವುದಯ್ಯ’ ಎಂದು ಆಪ್ತವಾಗಿ ಹೇಳುತ್ತಾರೆ.


ಪುರಾಣ ದೃಶ್ಯಗಳನ್ನು ಕೇಶವದಾಸರು ಕೊಡುತ್ತಲೆ ಕೇಶವನ ಶಕ್ತಿಯನ್ನು ಮನದಟ್ಟು ಮಾಡಿಕೊಡುತ್ತಾರೆ. ಉದಾ :

ತರಳನಾಗಿಹ ಧ್ರುವನು ಘೋರ ತಪವಂಗೈಯೆ |

ಹರುಷದಿಂ ಬಾಲಕಗೆ ವರ ಪದವಿಯಿತ್ತೆ, |

ದೊರೆಯು ರುಕುಮಾಂಗದನು ಏಕಾದಶೀ ವ್ರತವ |

ಸರಸದಿಂದಾಚರಿಸೆ ನಿಜ ಭಕ್ತಿಗೊಲಿದೆ,

ಮುಂತಾಗಿ ಪುರಾಣ ಪಾತ್ರಗಳನ್ನು ವಿಶೇಷವಾಗಿ ಪರಿಚಯಿಸುತ್ತಾರೆ. ಕೆಲವು ಕೀರ್ತನೆಗಳಲ್ಲಿ ಸಂಖ್ಯಾ ಸಂಖೇತಗಳ ಮೂಲಕ ದೇವರ ಸ್ಮರಣೆ ಪೂಜೆ ಮಾಡುವುದನ್ನು ತಿಳಿಸಿರುತ್ತಾರೆ.


ಪಂಚೇಂದ್ರಿಯವಗೆದ್ದು ಪಂಚಾಮೃತಗಳಿಂದ

ಕಂಚಿಪುರವಾಸಿಯ ಕಾಯವನು ತೊಳೆದು

ಆರು ಅರಿಗಳ ಜೈಸಿ ಆರುಶಾಸ್ತ್ರಗಳಿಂದ

ಧಾರೆ ಪುರವಾಸಿಗೆ ಗಂಧ ಲೇಪಿಸುತ

ಮೂರು ವೈರಿಗಳಂತೆಯೆ ಚಾರು ವೇದಗಳಿಂದ

ಮಾರ ಪಿತನಿಗೆ ನಿತ್ಯ ಪುಷ್ಪವೇರಿಸುತಾ

ಆತ್ಮ ನಿವೇದನೆಯ ಕೀರ್ತನೆಗಳು ಸಂಸಾರ ಜೀವನದ ಅನಿತ್ಯತೆಯನ್ನು ತಿಳಿಸುತ್ತವೆ. ಸಂಸಾರದ ಕಷ್ಟನಷ್ಟಗಳಿಂದ ಮುಕ್ತಿಗೋಳಿಸೆಂದು ಬೇಡುತ್ತಾ

ಕಷ್ಟಗಳ ಪರಿಹರಿಸೋ ಶ್ರೇಷ್ಠ ಮಾರುತಿಯೇ

ಭ್ರಷ್ಟ ನಾನು ಭಂಡ ಸಂಸಾರದಲ್ಲಿ

ಸ್ವಾರ್ಥವೆನ್ನುವ ದುಃಖಸಾಗರದಲ್ಲಿ ಮುಳುಗಿದ್ದು

ಸ್ವಾರ್ಥಕೋಸುಗ ಹೀನ ಕೃತ್ಯಗಳ ಗೈವಾ

ಅರ್ಥವನು ಗಳಿಸುತ್ತಾ ತುಂಬಿದೆನು ಈ ಒಡಲ

ವ್ಯರ್ಥವಾಯಿತು ಜನ್ಮ ಸಾರ್ಥವನು ಮಾಡೋ -

ಎಂದು ಮೊರೆ ಹೋಗುತ್ತಾರೆ.


ಕೇಶವದಾಸರ ಉಪಲಬ್ಧವಾದ ಎರಡು ಸಂಪುಟಗಳಲ್ಲಿ 97 ಕೀರ್ತನೆಗಳಿವೆ. ಇವೆಲ್ಲವೂ ದೇವರ ಸ್ತುತಿ ರೂಪವೇ ಆಗಿದೆ. ಆತ್ಮನಿವೇದನೆಯೂ ಸ್ತುತಿಯ ರೀತಿಯದೇ, ಇವರ ಕೀರ್ತನೆಗಳು ಭಜನೆ ಹಾಗೂ ಹಾಡಲು ಯೋಗ್ಯವಾದವು, ಸರಳ, ಸುಭಗ, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯ ಪ್ರಯೋಗವನ್ನು ಇಲ್ಲಿ ಬಳಸಲಾಗಿದೆ. ಇವು ಸಾಹಿತ್ಯ ಗುಣಕ್ಕಿಂತಲೂ ಭಕ್ತಿಯ ಭಜನೆಯ ಮುಖೇನ ದೇವರನ್ನು ಒಲಿಸಿ ಕೊಳ್ಳುವತ್ತ ಮಾರ್ಗದರ್ಶನ ನೀಡುತ್ತವೆ.

*****




No comments:

Post a Comment