Name: Karkalada Venkataramana
ಕಾರ್ಕಳದ ವೆಂಕಟ್ರಮಣ ದಾಸರು
Available Kruti 0
****
info from kannadasiri.in
By Srinivasa Havanur
ಪ್ರಸ್ತುತ ಸಂಪುಟದಲ್ಲಿ ತುಪಾಕಿ ವೆಂಕಟರಮಣಾಚಾರ್ಯ ಮತ್ತು ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಇವರ ಹಾಡುಗಳನ್ನು ಸಂಗ್ರಹಿಸಲಾಗಿದೆ. ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆಯವರು. ಮೂರು ದಶಕಗಳ ಅಂತರದಲ್ಲಿ ಸಮಕಾಲೀನರು. ಇಬ್ಬರಿಗೂ ತಿರುಪತಿಯ ವೆಂಕಟೇಶನೇ ಆರಾಧ್ಯ ದೈವತ. ಈ ಇಬ್ಬರು ಪರಂಪರಾಗತ ದಾಸದೀಕ್ಷೆಯನ್ನು ಹೊಂದಿಯೆ ಹಾಡುಗಳನ್ನು ರಚಿಸ ಹೊರಟವರಲ್ಲ. ಇನ್ನೊಂದು ವಿಶೇಷತೆ ಎಂದರೆ ಅವರಿಗೆ ಮಾಧ್ವ ಪರಂಪರೆಯ ಗೌಡ ಸಾರಸ್ವತ ಮಠಾಧೀಶರುಗಳ ನಿಕಟ ಸಂಪರ್ಕವಿದ್ದಿತು. ಮುಖ್ಯವಾಗಿ ಭಕ್ತಿಭಾವದ ಅಭಿವ್ಯಕ್ತಿಯಲ್ಲಿ ಅನೇಕ ಕಡೆ ಸಾಮ್ಯವಿದೆ. ಆದ್ದರಿಂದ ಇವರಿಬ್ಬರ ಹಾಡುಗಳನ್ನು ಜೊತೆಯಾಗಿ ಕೊಡಮಾಡುವಲ್ಲಿ ಔಚಿತ್ಯವಿದೆ.
ಕಾರ್ಕಳದ ವೆಂಕಟ್ರಮಣ
ಕಾರ್ಕಳದ ವೆಂಕಟ್ರಮಣ ದೇವಸ್ಥಾನ ಮತ್ತು ಅಲ್ಲಿ ಪ್ರತಿವರ್ಷ ನಡೆಯುತ್ತಿರುವ ಲಕ್ಷದೀಪೋತ್ಸವದ ಕುರಿತು ವಿಸ್ತಾರವಾಗಿ ವೈಭವೋಪೇತವಾಗಿ ಹಾಡುಗಳನ್ನು ರಚಿಸಿದ್ದಾರೆ - ಅವಕ್ಕಾಗಿ ಈ ಸಂಗ್ರಹದಲ್ಲಿ ಒಂದು ಉಪವಿಭಾಗವನ್ನೇ ಮಾಡುವಷ್ಟು.
ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ -
ದರವಿ ಶ್ರೀ ವೆಂಕಟೇಶ್ವರನ ಲೀಲಾ ಬಿ
ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯ ರಚನಾ ಗುಣಗಳಿಂದ
ಸುರನಾರಿಯರು ಪೇಳ್ದ ಸಂವಾದ ತೆರನಂತೆ
ವಿರಚಿಸಿದೆನೀ ಕೃತಿಯ ದೋಷಡವಿದ್ದರೆ ತಿದ್ದಿ
ಉರು ಮತ್ಸರಾದಿಗಳ ವರ್ಜಿಸುತ ನಿತ್ಯದೊಳ್
ಮೆರೆಸುವದು ಸರ್ವ ಜನರು ||
ಎಂಬುದರಿಂದ ಆರಂಭಿಸುತ್ತಾರೆ.
ಈ ದೇವಸ್ಥಾನದ ಲಕ್ಷದೀಪೋತ್ಸವದ ಹಿನ್ನೆಲೆಯನ್ನು ಮಿತ್ರ ಪ್ರೊ. ಎಂ. ರಾಮಚಂದ್ರರು ಈ ರೀತಿಯಾಗಿ ಬರೆದು ತಿಳಿಸಿದ್ದಾರೆ.
'ದ.ಕ. ಜಿಲ್ಲೆಯಲ್ಲಿ ಗೌಡ ಸಾರಸ್ವತ ಸಮಾಜದವರು ಮನ್ನಿಸುವ ಹಲವಾರು ವೆಂಕಟ್ರಮಣನ ದೇವಸ್ಥಾನಗಳಿವೆ. ಅವುಗಳಲ್ಲಿ ಕಾರ್ಕಳದ ದೇವಸ್ಥಾನಕ್ಕೆ ನಡೆದು ಕೊಳ್ಳುವವರ ಸಂಖ್ಯೆ ಬಲು ದೊಡ್ಡದು. ಅದಕ್ಕೆಂದು ಪಡುತಿರುಪತಿ ಎಂಬ ಅಭಿಧಾನ ಕಾರ್ಕಳಕ್ಕೆ ಸಂದಿದೆ. ಇಲ್ಲಿಯ ವೆಂಕಟ್ರಮಣನ ವಿಧ್ಯುಕ್ತ ಪೂಜೆ 1537ರಲ್ಲಿ ನಡೆದದ್ದರ ಶಾಸನೋಲ್ಲೇಖವಿದೆ. ಅದಕ್ಕೂ ಮುಂಚಿನಿಂದಲೂ ಇದ್ದಿರಬಹುದು. ದೇವಾಲಯವನ್ನು ನಿರ್ಮಿಸುವ ಕಾಲಕ್ಕೆ ಮೂಲ ಮೂರ್ತಿಯನ್ನು ಒಂದು ಚಪ್ಪರ ಕಟ್ಟಿ ಕೂಡಿಸುತ್ತಿದ್ದರಾದ್ದರಿಂದ `ಚಪ್ಪರ ಶ್ರೀನಿವಾಸ’ ಎಂಬ ಹೆಸರೂ ಅವನಿಗಿದೆ.
ಇಲ್ಲಿಯ ವೆಂಕಟೇಶ ದೇವರಿಗೆ ವರ್ಷದಲ್ಲಿ ಎರಡು ಬಾರಿ ವಿಶೇಷ ಉತ್ಸವ ನಡೆಯುವುದು. ಒಂದು ವೈಶಾಖ ಮಾಸದ ರಥೋತ್ಸವ, ಮತ್ತೊಂದು ಕಾರ್ತೀಕ ಮಾಸದ ದೀಪೋತ್ಸವ. ದೀಪೋತ್ಸವವು ಕಾರ್ತೀಕ ಶುದ್ಧ ದ್ವಾದಶಿಯಂದು (ಉತ್ಥಾನದ್ವಾದಶಿ), ಕಟ್ಟೆ ಪೂಜೆಯಿಂದ ಮೊದಲಾಗಿ ಕಾರ್ತೀಕ ವದ್ಯ ಷಷ್ಠಿಯ ದಿನ ಅವಭೃಥ ಸ್ನಾನದೊಂದಿಗೆ ಮುಕ್ತಾಯವಾಗುತ್ತದೆ. ಪಂಚಮಿಯ ದಿನ ಪಟ್ಟದೇವರನ್ನು (ಮೂಲ ಮೂರ್ತಿ) ಉತ್ಸವ ಮೂರ್ತಿ ಸಹಿತ, ದೇವಸ್ಥಾನದಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವ ವನ ಪ್ರದೇಶಕ್ಕೆ ಕರೆದೊಯ್ಯುವರು. ಅಲ್ಲಿ ಭಕ್ತಾದಿಗಳಿಂದ ಪೂಜಾ ಸೇವೆ ಅಖಂಡವಾಗಿ ನಡೆಯುವುದು. ಅನಂತರದ ಭೋಜನ ಕಾರ್ಯಕ್ರಮವು ‘ವನಭೋಜನ’ ಎದಂದೇ ಪ್ರಸಿದ್ಧವಾಗಿದೆ. ಅಂದೇ ಕತ್ತಲೆಯಾಗುವ ಸಮಯದಲ್ಲಿ ದೀಪೋತ್ಸವ. ಎಲ್ಲೆಲ್ಲಿಯೂ, ದಾರಿಯುದ್ದಕ್ಕೂ ಹಣತೆಯ ದೀಪಗಳು. ವಾದ್ಯ ಘೋಷದೊಡನೆ ದೇವರನ್ನು ಮೂಲಸ್ಥಾನಕ್ಕೆ ಕರೆತರುತ್ತಾರೆ. ಅಲ್ಲಿಯ ಹೊರಗಿನ ಕಟ್ಟೆಯ ಮೇಲೆ ದೇವರ ಮೂರ್ತಿಗಳನ್ನು ಕೂಡ್ರಿಸಿ ಸೇವೆ ಸಲ್ಲಿಸುತ್ತಾರೆ. ಇಡೀ ರಾತ್ರಿ ಈ ದೀಪೋತ್ಸವ ನಡೆದ ಮೇಲೆ ನಸುಕಿನಲ್ಲಿ ಅವಭೃಥ ಸ್ನಾನ. ಅನಂತರ ದೇವರ ಮೂರ್ತಿಗಳನ್ನು ಸ್ವಸ್ಥಾನಕ್ಕೆ ಸೇರಿಸುವರು. ವೆಂಕಟೇಶ ದೇವರ ಜೊತೆಗೆ ಹನುಮ, ಗರುಡ, ಶೇಷ ದೇವರುಗಳೂ ಇರುತ್ತಾರೆ; ಪೂಜೆಗೊಳ್ಳುತ್ತಾರೆ.
ಮರು ತಿಂಗಳು ಮಾರ್ಗಶಿರ ಮಾಸದಲ್ಲಿ ಬರುವ ಮುಕ್ಕೋಟಿ ದ್ವಾದಶಿಯಂದು, ಕಾರ್ಕಳದಲ್ಲಿಯ ರಾಮಸಮುದ್ರದಲ್ಲಿ ಮತ್ತೆ ದೇವರಿಗೆ ಅವಭೃಥ ಸ್ನಾನ, ಪೂಜಾದಿಗಳು ಸಲ್ಲುತ್ತವೆ......'
ಪಾವಂಜೆ ಹರಿದಾಸರು, ಕಾರ್ತೀಕ ಮಾಸದ ವಾರವಿಡೀ ನಡೆಯುವ ಉತ್ಸವ ಕಾರ್ಯಗಳನ್ನು ಊರ್ವಶಿ ರಂಭೆಯರ ಸಂವಾದದ ಮೂಲಕ ಕೊಟ್ಟಿದ್ದಾರೆ. ಇಲ್ಲಿ ರಂಭೆ ಅಕುಟಿಲ ಬಾಲೆಯಂತೆ ಪ್ರಶ್ನೆ ಕೇಳುತ್ತಾಳೆ; ಊರ್ವಶಿ ಉತ್ತರಿಸುತ್ತಾಳೆ. ಆ ಮೂಲಕ ಪ್ರತಿದಿನದ ಪೂಜಾ ವಿವರಗಳು ಬಂದಿವೆ. ಪಂಚಮಿಯ ಇಡೀ ರಾತ್ರಿ ಎಚ್ಚರಿದ್ದುದರಿಂದ ರಂಭೆಗೆ ನಿದ್ರೆಯ ಮಂಪರು! ಏನಿದ್ದರೂ ವೆಂಕಟೇಶನ, ಅವನ ಮಹೋತ್ಸವದ ವಿವರಗಳು ಸಾಂಗೋ-ಪಾಂಗವಾಗಿ ಬಂದಿವೆ.
ಇದೆಲ್ಲ ದೇವತಾ ಸ್ತುತಿಯನ್ನುಳಿದು, ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯನವರು ಆತ್ಮನಿವೇದನೆಯ ಹಲವಾರು ಹಾಡುಗಳನ್ನು ರಚಿಸಿದ್ದಾರೆ. ಅವುಗಳಿಂದ ಅವರು ಪ್ರಾಪಂಚಿಕ ಕಷ್ಟಗಳಿಂದ ಸಾಕಷ್ಟು ನೊಂದವರೂ, ತಿಳಿಯದೇ ತಪ್ಪುಗಳನ್ನು ಮಾಡುವವರೂ ಆಗಿದ್ದರೆಂದು ಅನಿಸುವುದು. ಅದಕ್ಕಾಗಿ ದೇವರಲ್ಲಿ ಹಲವಾರು ಸಲ ಕ್ಷಮಾಯಾಚನೆ ಮಾಡಿದ್ದಾರೆ. ತಮ್ಮ ಹರಿಕೀರ್ತನ ವೃತ್ತಿ ಹೊಟ್ಟೆಯ ಪಾಡಿಗಾಗಿ ಇದೆಯೆಂಬುದೂ ಅವರ ಮನಕ್ಕೆ ತಟ್ಟಿದೆ. ‘ನಾರಾಯಣ, ನರಹರಿಯೆನ್ನುವ ವ್ಯಾಪಾರವ ನಾ ಮಾಡುತ್ತಿರಲು’ ಎಂಬೀ ಅನಿಸಿಕೆಯನ್ನು ಹಲವು ಬಾರೆ ವ್ಯಕ್ತಪಡಿಸಿದ್ದಾರೆ. ‘ಎಣಿಸಲು ಬೇಡ ಎನ್ನಪರಾಧ, ಗಣಿತಕ್ಕೆ ಕೂಡ’ ಎಂದಿದ್ದಾರೆ, ಮತ್ತು ದೇವರಲ್ಲಿ ಅನನ್ಯ ಶರಣಾಗತಿಯನ್ನು ಕೋರಿದ್ದಾರೆ. ತಮ್ಮ ಉದ್ಧಾರಕನಾದ ವೆಂಕಟರಮಣನು ದೂರದ ಬೆಟ್ಟದಲ್ಲಿ ‘ಅಡಗಿಕೊಂಡರೂ’ ನಾನು ಬಿಡುವುದಿಲ್ಲ. ನನ್ನನ್ನು ಆತ ಮೇಲೆತ್ತಬೇಕು - ಎಂಬಂತಹ ಅಳಲನ್ನು ತೋಡಿಕೊಂಡಿದ್ದಾರೆ.
ಲಕ್ಷ್ಮೀನಾರ್ಣಪ್ಪಯ್ಯನವರ ಹಾಡುಗಳಲ್ಲಿ, ದೇವತಾಸ್ತುತಿಯ ನಿಮಿತ್ತ ಸಂಸ್ಕøತ ಭೂಯಿಷ್ಠವಾದ ವಿಶೇಷಣಗಳ ಬಾಹುಳ್ಯವಿದೆ. ಹಾಗಿದ್ದರೂ ಗಹನ ವಿಚಾರಗಳನ್ನೇನೂ ಪ್ರಸ್ತಾಪಿಸದ, ಶಿಷ್ಟ ಶೈಲಿಗೆ ವಾಲಿದ, ಸರಳ ನಿರೂಪಣೆಯನ್ನು ನಾವು ಕಾಣುತ್ತೇವೆ. ‘ಹರಿಧ್ಯಾನವೆ ಗಂಗಾಸ್ನಾನ; ವಿಷಯಾನುಭವ ಜಯವೆ ಮೌನ’. ಮತ್ತರ ಸಂಗ ಪ್ರವೃತ್ತಿಯೊಳಿರದ ನಿವೃತ್ತಿಯೊಳಿರುವುದು ಮಾನ’ ಎಂಬಂತಹ ಚಾಟೂಕ್ತಿಗಳಿಗೂ ಅಲ್ಲಲ್ಲಿ ಇಂಬು ದೊರೆತಿದೆ.
ಕೃತಜ್ಞತೆಗಳು
ತುಪಾಕಿ ಆಚಾರ್ಯರ ‘ದೇವರ ನಾಮಗಳು’ ಕೃತಿಯ ಜೆರಾಕ್ಸ್ ಪ್ರತಿಯನ್ನು ಒದಗಿಸಿದ, ಲಂಡನ್ನಿನ ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಡಾ||ನಂದಕುಮಾರರಿಗೆ, ಪಾವಂಜೆ ಹರಿದಾಸ ಕೀರ್ತನೆಗಳನ್ನು ಒಂದೆಡೆ ಸಂಕಲಿಸಿ, ನಮ್ಮ ಆ ಕೆಲಸವನ್ನು ಉಳಿಸಿದ ಹಳೆಯಂಗಡಿ ಸತ್ಸಂಗ ಸೇವಾ ಸಮಿತಿಯವರಿಗೆ ನಮ್ಮ ಕೃತಜ್ಞತೆಗಳು ಸಲ್ಲಬೇಕು.
ಡಾ|| ಜಿ. ವೆಂಕಟಸುಬ್ಬಯ್ಯ ಅವರು ಹಿರಿಯ ತಲೆಮಾರಿನ ವಿದ್ವಾಂಸರು. ಹಸ್ತಪ್ರತಿಯನ್ನು ಪರಿಶೀಲಿಸಿ, ಬೇಕಿದ್ದ ವಿವರಣೆ ಒದಗಿಸಿದ್ದಾರೆ. ಉಪಯುಕ್ತ ಸೂಚನೆಗಳನ್ನು ಮಾಡಿದ್ದಾರೆ. ಅವರ ಆಭಾರವನ್ನು ಆದರದಿಂದ ಮನ್ನಿಸುವೆವು.
ಸೌ. ಮೀನಾ ರಾವ್ ಅವರು ಸಂಪಾದನ ಕಾರ್ಯದ ಎಲ್ಲ ಹಂತಗಳಲ್ಲಿಯೂ ನನ್ನೊಂದಿಗೆ ಪರಿಶ್ರಮಿಸಿದ್ದಾರೆ. ಕೈಗೆತ್ತಿಕೊಂಡ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಪ್ರವೃತ್ತಿ ಅವರದು. ಅವರಿಗೆ ವೈಯಕ್ತಿಕವಾದ ಕೃತಜ್ಞತೆಗಳನ್ನು ಸಲ್ಲಿಸುವೆ.
by ಶ್ರೀನಿವಾಸ ಹಾವನೂರ
****
No comments:
Post a Comment