ದಾಸರ ಹೆಸರು :HENNE RANGADASARU ಹೆನ್ನೆರಂಗದಾಸರು
OR HONNAPPA DASARU ಹೊನ್ನಪ್ಪದಾಸರು
ಲಭ್ಯ ಕೀರ್ತನೆಗಳ ಸಂಖ್ಯೆ : 188
ದಾಸರ ಹೆಸರು : ಸದಾನಂದರು
ಲಭ್ಯ ಕೀರ್ತನೆಗಳ ಸಂಖ್ಯೆ : 69
***
ಮಾಘ ಕೃಷ್ಣ ಅಷ್ಟಮಿ
ಶ್ರೀಹೊನ್ನಪ್ಪದಾಸರ ಆರಾಧನಾ ಮಹೋತ್ಸವ
ವಂದ್ಯಾಯ ಹೆನ್ನೆರಂಗ ದಾಸಾರ್ಯಾಯ ದಾಸಧರ್ಮ ರತಾಯಚ/
ನಮತಾಮಿಷ್ಠದಾತ್ರೇಚ ಭಕ್ತಾನಾಂ ಕಾಮಧೇನವೇ//
17 ನೆಯ ಶತಮಾನದ ಶ್ರೇಷ್ಠ ಹರಿದಾಸರು, ಆಂಧ್ರದ ಕದಿರಿ ಮತ್ತು ಅನಂತಪುರದ ಸಮೀಪದಲ್ಲಿರುವ ಪೆನ್ನಹೋಬಿಲ ನರಸಿಂಹ ದೇವರ ಪರಮ ಆರಾಧಕರು, ನರಸಿಂಹ ದೇವರ ಪ್ರೇರಣೆಯಂತೆಯೇ ಹೆನ್ನೆರಂಗವಿಠಲ ಎನ್ನುವ ಅಂಕಿತನಾಮದಿಂದ ಅದ್ಭುತವಾದ ಕೃತಿರಚನೆಗಳನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಚನೆ ಮಾಡಿದವರು, ಸದಾ ಹರಿಧ್ಯಾನದಲ್ಲಿಯೇ ತರ್ಪರರಾಗಿದ್ದು ತಮ್ಮ ಇಡೀ ಜೀವನವನ್ನೇ ಭಗವಂತನ ಪಾದಸೇವೆಯಲ್ಲಿ ಕಳೆದವರಾದ
ಶ್ರೀ ಹೊನ್ನಪ್ಪದಾಸರ ಆರಾಧನಾ ಮಹೋತ್ಸವ ಶ್ರೀ ದಾಸರ ಕಟ್ಟಿ ಅನಂತಪುರ ಜಿಲ್ಲೆಯ ವಜ್ರಕರೂರು ಮಂಡಲದ ಕಡಮಲಕುಂಟಾ ಗ್ರಾಮದಲ್ಲಿದೆ
***
ಶ್ರೀ ಹೆನ್ನೆ ರಂಗ ವಿಠಲಾಂಕಿತ ಹೆನ್ನೆರಂಗದಾಸರು
ನಮ್ಮ ಭಾರತ ದೇಶದಲ್ಲಿ ಹರಿದಾಸರುಗಳ ಅಪಾರವಾದ ಸಮೂಹವಿದೆ. ಅಂತಹ ಸಮೂಹಕ್ಕೆ ಸೇರಿದವರು ನಮ್ಮ ಹೆನ್ನೆರಂಗ ವಿಠಲಾಂಕಿತ ಹೊನ್ನಪ್ಪ ದಾಸರು. ದಾಸರ ಜನ್ಮ ಸ್ಥಳ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ವಜ್ರಕರೂರು ಮಂಡಲದ ಗಡೇ ಹೊತೂರು ಎಂಬ ಗ್ರಾಮ. ಇದು ಪ್ರಸಿದ್ಧ ನರಸಿಂಹಕ್ಷೇತ್ರವಾದ ಪೆನ್ನಾ ಅಹೋಬಿಲಂಗೆ ಹತ್ತಿರವಿದ್ದ ಕಾರಣ ದಾಸರಿಗೆ ಈ ನರಸಿಂಹ ಸ್ವಾಮಿಯಲ್ಲಿ ಅಪಾರ ಭಕ್ತಿ ಇದ್ದರಿಂದ ಅವರು ಹೆನ್ನೆರಂಗ ವಿಠಲ ಎಂಬ ಅಂಕಿತದಿಂದ ಅನೇಕ ಕೀರ್ತನೆಗಳು ರಚಿಸಿ ಹೆನ್ನೆರಂಗದಾಸರೆಂದು ಪ್ರಸಿದ್ಧಿಯಾಗಿದ್ದಾರೆ.
ಈ ಪ್ರದೇಶವು ಕರ್ನಾಟಕದ ಗಡಿಭಾಗದಲ್ಲಿರುವಕಾರಣ ದಾಸರು ಕನ್ನಡದಲ್ಲಿಯೇ ಕೀರ್ತನೆ ರಚಿಸಿದರು. ಕೀರ್ತನೆಗಳ ಜೊತೆಗೆ ಶತಕವುಕೂಡ ಇವರ ಕೃತಿಗಳಲ್ಲಿ ಕಾಣಬಹುದು ದಾಸರು ರಚಿಸಿದ 'ಹೆನ್ನೆ ರಂಗವಿಠಲ ಶತಕದ' ಮೂಲಕ ನಮಗೆ ಭಾಗವತದ ಸಾರವನ್ನು ತಿಳಿಸಿದ್ದಾರೆ.
ದಾಸರು ಕೆಲ ಕಾಲ ಗಡೆಹೊತೂರಿನಿಂದ ಹತ್ತಿರದಲ್ಲಿರುವ ಕಡಮಲಕುಂಟ ಗ್ರಾಮಕ್ಕೆ ಬಂದು ನೆಲಸಿದಾಗ ಅವರಿಗೆ ಕರ್ನಾಟಕದ ಸುರಪುರ ದೊರೆಯಾದ ವಾಸುದೇವ ನಾಯಕರ ಆಗ್ರಹದಮೇರೆಗೆ ಅವರ ಆಸ್ಥಾನದಲ್ಲಿಯ ಮುದನೂರಿಗೆ ಬಂದರು. ಏಳು ತೀರ್ಥಗಳ ಸಂಗಮವಾದ (ರಾಮ ತೀರ್ಥ, ಪಾಲುತೀಥ೯, ಸಂಗಮ ತೀರ್ಥ, ಮರಳುತೀರ್ಥ, ಚಕ್ರ ತೀರ್ಥ) ಮುದನೂರು ಗ್ರಾಮದಲ್ಲಿನ ಏಕ ಶಿಲಾ ವಿಗ್ರಹವಿರುವ ಸ್ವಯಂಭೂ ರುಕ್ಮಿಣಿ ಪಾಂಡು ರಂಗಸ್ವಾಮಿ, ವೇಣುಗೋಪಾಲ ಸ್ವಾಮಿ ಮತ್ತು ನರಸಿಂಹಸ್ವಾಮಿಯ ನಿತ್ಯ ಪೂಜೆಗಳನ್ನು ನೆರವೇರಿಸತ್ತಾ ಅಲ್ಲಿಯೇ ಕೆಲ ಕಾಲ ಉಳಿದುಕೊಂಡರೆಂದು ತಿಳಿದು ಬಂದಿದೆ. ಈ ಆಧಾರದಿಂದ ಇವರ ಕಾಲ 17ನೇ ಶತಮಾನ ವಿರಬಹುದೆಂದು ಹೇಳಬಹುದು.
ಪುರಂದರ ದಾಸರು ವಿಜಯದಾಸರಂತೆ ಹೆನ್ನೆರಂಗದಾಸರು ಕೂಡ 'ಹರಿ ಸರ್ವೋತ್ತಮ ವಾಯು ಜೀವೊತ್ತಮ' ತತ್ವವನ್ನು ಪ್ರಚಾರ ಮಾಡುತ್ತ ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ಕೀರ್ತನೆಗಳಲ್ಲಿ ಅವರ ಆರಾಧ್ಯ ದೈವ ಪೆನ್ನಾ ಅಹೋಬಿಲ ನರಸಿಂಹಸ್ವಾಮಿಯ ಅಕ್ಷರಮಾಲೆಯನ್ನು ಸಮರ್ಪಿಸಿ ಪೆನ್ನಾ ಅಹೋಬಿಲ ಅನ್ನಮಯ್ಯ ಎಂದು ಪ್ರಸಿದ್ದರಾಗಿದ್ದಾರೆ. ದಾಸರ ಕೀರ್ತನೆಗಳಲ್ಲಿ ಅವರು ಅರ್ಚಿಸಿದ ಮುದನೂರು ಗೋಪಾಲಸ್ವಾಮಿ, ಹೊತೂರು ವೆಂಕಟರಮಣ, ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಸ್ತುತಿಸಿದ್ದಾರೆ.
ದಾಸರ ಕ್ಷೇತ್ರದಲ್ಲಿ ಅವರ ಪವಾಡಗಳು ಇವತ್ತಿಗೂ ಮನೆ ಮಾತಾಗಿವೆ. ಅವರು ಗಡೇ ಹೊತೂರಿನ ತಮ್ಮ ಮನೆಯಿಂದ ಪೆನ್ನಾ ಅಹೋಬಿಲ ನರಸಿಂಹಸ್ವಾಮಿಯ ಗುಡಿಗೆ ಸುರಂಗ ಮಾರ್ಗವಾಗಿ ಹೋಗಿ ನಿತ್ಯವೂ ದರ್ಶನ ಪಡೆದು ಬರುತ್ತಿದ್ದರೆಂದು ಪ್ರತೀತಿ.
ದಾಸರ ಪ್ರಸಿದ್ಧಿಯಿಂದ ಅಸೂಯೆಗೊಂಡ ಕೆಲವರು ದಾಸರ ಮೇಲೆ ಗೋಹತ್ಯ ಆಪಾದನೆ ಮಾಡಿದರು. ಆಗ ದಾಸರು ಆ ಹಸುವನ್ನು ದ್ವಾದಶ ಸ್ತೋತ್ರ ಪಠಿಸಿ ಅದನ್ನು ಬದುಕಿಸಿದರು. ಸ್ವಯಂ ಆದಿಶೇಷರೇ ಇವರ ಸಹೋದರರೆಂದು ನಂಬಿಕೆ. ದಾಸರು ಅವರ ಸಹೋದರನ ಜೊತೆ ಮಾತನಾಡುತ್ತಿದ್ದರೆಂದು, ಆ ನಾಗಪ್ಪನ ಮಹಿಮೆಯಿಂದ ಅವರಿಗೆ ಭೂಮಿ ದೊರೆಯಿತೆಂದು ಸರಕಾರಿ ಕಡೆತಗಳಲ್ಲಿ ಉಲ್ಲೆಖವಿದೆ. ಆ ಕಡಮಲಕುಂಟ ಮತ್ತು ಗಡೇ ಹೊತೂರಿನ ಮಧ್ಯದ ಭೂಮಿಯನ್ನು ಈಗಲೂ ನಾಗಪ್ಪ ಮಾನ್ಯಂ ಎಂದು ಕರೆಯುತ್ತಾರೆ.
ಇಲ್ಲಿಯವರೆಗೆ ದೊರೆತಿರುವ ದಾಸರ ಕೀರ್ತನೆಗಳು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಗ್ರ ದಾಸ ಸಾಹಿತ್ಯ Vol 29 Part 1 & part 2 ನಲ್ಲಿ 2003ರಲ್ಲಿ ಪ್ರಕಟಿಸಲಾಯಿತು.
ದಾಸರ ಹಲವಾರು ಶಿಷ್ಯರು ಆಂಧ್ರ, ಕರ್ನಾಟಕ ಮಹಾರಾಷ್ಟ್ರದಲ್ಲಿದ್ದಾರೆ. ಪ್ರತಿ ವರ್ಷ ದಾಸರ ಆರಾಧನೆಯು ಮಾಘ ಬಹುಳ ಸಪ್ತಮಿ, ಅಷ್ಟಮಿ ಮತ್ತು ನವಮಿ ತಿಥಿಗಳಂದು ಹೆನ್ನೆರಂಗ ವಿಠಲ ದಾಸ ಮಂಡಳಿಯು ವಿಜ್ರಂಬಣೆಯಿಂದ ಕಡಮಲ ಕುಂಟದಲ್ಲಿರುವ ದಾಸರ ವೃಂದಾವನಕಟ್ಟೆಯಲ್ಲಿ ಜರುಗಿಸುತ್ತಾರೆ.
ಹೆನ್ನೆರಂಗ ವಿಠಲ ದಾಸರು ಇವತ್ತಿಗೂ ಕಡಮಲ ಕುಂಟದ ತಮ್ಮ ಕಟ್ಟೆಯಲ್ಲಿದ್ದು ಶ್ರದ್ದಾ ಭಕ್ತಿಯಿಂದ ಬಂದವರ ಮನೋ ಬಿಷ್ಟೆಯನ್ನು ನೆರವೇರಿಸುತ್ತಾರೆ
***
info from kannadasiri.in
by
ಡಾ. ಬಸವರಾಜ ಸಬರದ
ಡಾ. ಜಯಲಕ್ಷ್ಮಿ ಮಂಗಳಮೂತಿ
ಪೀಠಿಕೆ
ಸಮಗ್ರ ದಾಸವಾಙ್ಮಯವು ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ಪ್ರಾರಂಭದ ಘಟ್ಟದಲ್ಲಿ ಶ್ರೀಪಾದರಾಯರಿಂದ ಹಿಡಿದು ಇಂದಿನ ಆಧುನಿಕ ಸಂದರ್ಭದ ಕಾರ್ಪರ ನರಹರಿದಾಸರವರೆಗೆ ಇದರ ಬೆಳವಣಿಗೆಯನ್ನು ಗಮನಿಸಬಹುದಾಗಿದೆ. ಹೀಗಾಗಿ ಅಧ್ಯಯನದ ದೃಷ್ಟಿಯಿಂದ ಸಮಗ್ರ ದಾಸ ವಾಙ್ಮಯವನ್ನು ಎರಡು ರೀತಿಯ ಶಿಸ್ತನ್ನಳವಡಿಸಿಕೊಂಡು ಗಮನಿಸಬೇಕೆನಿಸುತ್ತದೆ.
ಶ್ರೀಪಾದರಾಜರಿಂದ ವಿಜಯದಾಸರವರೆಗೆ ರಚನೆಗೊಂಡ ದಾಸ ವಾಙ್ಮಯವು ಶಿಷ್ಟ ಪರಂಪರೆಯಿಂದ ಬೆಳೆದು ಮಾಧ್ವ ಸಿದ್ಧಾಂತವನ್ನು ಅನುಸರಿಸಿ ರಚನೆಯಾಗಿದೆ. ಸಂಸ್ಕøತ ಸಾಹಿತ್ಯದ ಶಾಸ್ತ್ರಗ್ರಂಥಗಳ ಅಧ್ಯಯನದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ರಚನೆಗೊಂಡದ್ದಾಗಿದೆ. ಎರಡನೇ ಹಂತದಲ್ಲಿ ಬೆಳೆದು ಬಂದ ದಾಸ ವಾಙ್ಮಯವು ಜನಪದರಿಂದ ರಚನೆಯಾದುದಾಗಿದೆ. ಮಾಧ್ವಮತದÀ ಸಿದ್ಧಾಂತ ಹಾಗೂ ಮೊದಲನೇ ಘಟ್ಟದ ದಾಸವರೇಣ್ಯರ ಪ್ರಭಾವ ಸಹಜವಾಗಿಯೇ ಈ ಜನಪದ ಮೂಲದಿಂದ ಬಂದ ಹರಿದಾಸರ ಮೇಲೆ ಪ್ರಭಾವವನ್ನುಂಟು ಮಾಡಿದೆ. ಎರಡನೇ ಹಂತದಲ್ಲಿ ಬೆಳೆದು ನಿಂತಿರುವ ಈ ಜನಪದ ಹರಿದಾಸರು ಮೂಲ ಸಿದ್ಧಾಂತಕ್ಕನುಗುಣವಾಗಿಯೇ ಕೀರ್ತನೆಗಳನ್ನು ರಚಿಸಿದರೂ ಕೂಡಾ ಈ ಕೀರ್ತನೆಗಳಲ್ಲಿ ಜನಪದ ಸಂಸ್ಕøತಿಯ ಅನೇಕ ಸಂರಚನೆಗಳು ಕೂಡಿಕೊಂಡಿವೆ. ಹೀಗಾಗಿ ಈ ಎರಡನೇ ಹಂತದ ಹರಿದಾಸರ ಕೀರ್ತನೆಗಳನ್ನು ಜಾನಪದದ ನೆಲೆಯಿಂದ ನೋಡುವುದು ಕೂಡ ಇಂದಿನ ಅಗತ್ಯವಾಗಿದೆ.
ಈ ಸಂಪುಟದಲ್ಲಿ ಅಂತಹ ಜನಪದ ಪರಂಪರೆಯಿಂದ ಬಂದಂತಹ ನಾಲ್ಕು ಜನ ಹರಿದಾಸರ ಸಂಕೀರ್ತನೆಗಳನ್ನು ಸಂಪಾದಿಸಿಕೊಂಡಲಾಗಿದೆ. 18-19ನೇ ಶತಮಾನದಲ್ಲಿದ್ದ ಹರಿದಾಸರ ರಚನೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಆಧ್ಯಾತ್ಮವೆಂಬುದು ಕೇವಲ ಯತಿಗಳ ಹಾಗೂ ಪಂಡಿತರ ಸೊತ್ತಾಗಿರುವಂಥ ಸಂದರ್ಭದಲ್ಲಿ ಸಾಮಾನ್ಯ ಜನವರ್ಗದಿಂದ ಬಂದ ಈ ಹರಿದಾಸರು ಸಂಸಾರದಲ್ಲಿದ್ದುಕೊಂಡೇ ಮಹತ್ತರವಾದುದನ್ನು ಸಾಧಿಸಿದರು. ತಮ್ಮ ದಿನನಿತ್ಯದ ದುಡಿಮೆಯ ಪ್ರತೀಕಗಳ ಮೂಲಕವೇ ಆಧ್ಯಾತ್ಮದ ಅನನ್ಯತೆಯನ್ನು ಕಟ್ಟಿ ನಿಲ್ಲಿಸಿದರು. ಸಂಸಾರದ ಜಂಜಾಟದಲ್ಲಿದ್ದುಕೊಂಡೇ ಭಕ್ತಿಯ ಮಹತ್ವವನ್ನು ಸಾರಿ ಹೇಳಿದರು. ಹೀಗಾಗಿ ಇವರಿಗೆ ಸಂಸಾರವೆಂಬುದು ಆಧ್ಯಾತ್ಮ ಸಾಧನೆಗೆ ತೊಡಕಾಗಿ ಕಾಣಲಿಲ್ಲ. ಈ ಸಾಮಾನ್ಯ ವರ್ಗದಿಂದ ಬಂದ ಹರಿದಾಸರ ವಿಶಿಷ್ಟತೆಯೇನೆಂದರೆ ಇವರು ಕೇವಲ ಕೀರ್ತನಗೆಳನ್ನು ಮಾತ್ರ ರಚಿಸಲಿಲ್ಲ. ಕೀರ್ತನೆ ಕಥನ ಕವನಗಳೊಂದಿಗೆ, ಲಾವಣಿ, ಗೀಗೀ ಪದ, ಬಯಲಾಟದಂತಹ ಜನಪದ ಪ್ರಕಾರಗಳಲ್ಲಿಯೂ ಕಾವ್ಯ ರಚಿಸಿದರು.
ಈ ಸಂಪುಟದಲ್ಲಿ ಬರುವ ನಾಲ್ಕು ಜನ ಹರಿದಾಸರಲ್ಲಿ ಇಬ್ಬರು ಹರಿದಾಸರು ಸುಶಿಕ್ಷಿತ ಮನೆತನದಿಂದ ಬಂದರೆ ಇನ್ನಿಬ್ಬರು ಹರಿದಾಸರು ಸಾಮಾನ್ಯ ವರ್ಗದಿಂದ ಬಂದವರಾಗಿದ್ದಾರೆ. ಇವರು ಹುಟ್ಟಿ ಬಂದ ಪರಿಸರದಲ್ಲಿ ವ್ಯತ್ಯಾಸವಿದ್ದರೂ ಹರಿದಾಸ ಮತದ ತತ್ತ್ವಗಳ ಪಾಲನೆಯಲ್ಲಿ ಒಮ್ಮತವಿರುವುದನ್ನು ಕಾಣಬಹುದಾಗಿದೆ.
ಕನ್ನಡ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಆದರೆ ಕುತೂಹಲದ ಸಂಗತಿಯೆಂದರೆ ಈ ಎರಡು ಶತಮಾನಗಳ ಅವಧಿಯಲ್ಲಿ ಅಸಂಖ್ಯಾತ ತತ್ವಪದಕಾರರು, ಕೀರ್ತನಕಾರರು ಹುಟ್ಟಿಬೆಳೆದಿರುವುದು ಗಮನಾರ್ಹ ಸಂಗತಿಯೆನಿಸುತ್ತದೆ. ಹದಿನೈದು ಹದಿನಾರನೇ ಶತಮಾನದಲ್ಲಿದ್ದ ಶಿಷ್ಟ ಪರಂಪರೆ ಈ ಸಮುದಾಯದ ಮೇಲೆ ಪ್ರಭಾವ ಬೀರಿದ್ದರೂ ಸಾಮಾನ್ಯವರ್ಗದಿಂದ ಬಂದ ಈ ಹರಿದಾಸರು ರಚಿಸಿದ ರಚನೆಗಳು ಭಾಷೆ, ವಸ್ತು, ಅಭಿವ್ಯಕ್ತಿ ನಲೆಯಲ್ಲಿ ವಿಶಿಷ್ಟವಾಗಿಯೇ ನಿಲ್ಲುತ್ತಾರೆ.
ಈ ಸಂಪುಟದಲ್ಲಿ ಬೆಳಗಾಂವ ಜಿಲ್ಲೆಯ ಗೋಕಾಕದ ಅನಾಂತಾದ್ರೀಶರ ಕಥನ ಕವನಗಳು, ಗುಲ್ಬರ್ಗ ಜಿಲ್ಲೆಯ ಮುದನೂರಿನ ಹೆನ್ನೆರಂಗದಾಸರ ಕೀರ್ತನೆಗಳು, ರಾಯಚೂರು ಜಿಲ್ಲೆಯ ಅಸ್ಕಿಹಾಳ ಗೋವಿಂದದಾಸರ ರಚನೆಗಳು ಮತ್ತು ರಾಯಚೂರು ಜಿಲ್ಲೆಯ ಕೊಪ್ಪರ ಗ್ರಾಮದ ಕಾರ್ಪರ ನರಹರಿದಾಸರ ಕೀರ್ತನೆಗಳು ಸೇರಿಕೊಂಡಿವೆ.
ಶ್ರೀ ಹೆನ್ನೆರಂಗ ದಾಸರ ಜನ್ಮಸ್ಥಳ ಹಾಗೂ ಅವರ ಜೀವನ ವಿವರಗಳಿಗೆ ಸಂಬಂಧಿಸಿದಂತೆ ಅಧಿಕೃತವಾದ ಮಾಹಿತಿ ದೊರಕುವುದಿಲ್ಲ. 'ಹೆನ್ನೆರಂಗವಿಠಲ' ಎಂಬ ಅಂಕಿತನಾಮದಲ್ಲಿ ಅವರು ಕೀರ್ತನೆಗಳನ್ನು ರಚಿಸಿದ್ದಾರೆ. ಮದ್ರಾಸ್ ಪ್ರಾಂತದ ಅನಂತಪುರ ಜಿಲ್ಲೆಯ ಗುತ್ತಿ ತಾಲೂಕಿನಲ್ಲಿ ಪೆನ್ನ ಅಹೋಬಲವೆಂಬ ಕ್ಷೇತ್ರವಿದೆ. ಅಲ್ಲಿಯ ನರಸಿಂಹ ದೇವರು ಸುಪ್ರಸಿದ್ಧವಾಗಿದೆ. ಈ ಕ್ಷೇತ್ರದ ಹತ್ತಿರವೇ ಪಿನಾಕಿನಿ ನದಿ ಹರಿಯುತ್ತದೆ. ಮೈಸೂರು ಪ್ರಾಂತದ ನಂದಿದುರ್ಗದಲ್ಲಿ ಹುಟ್ಟಿದ ಈ ನದಿಗೆ 'ಪೆನ್ನೆರುಪೆನ್ನ' ಎಂದು ಆ ಪ್ರದೇಶದ ಜನ ಕರೆಯುತ್ತಾರೆ. ಹೀಗಾಗಿ ನರಸಿಂಹ ದೇವರ ಭಕ್ತರಾದ ಹೆನ್ನೆರಂಗದಾಸರು 'ಹೆನ್ನೆರಂಗವಿಠಲ' ಎಂಬ ಮುದ್ರಿಕೆಯಿಂದ ತಮ್ಮ ಕೀರ್ತನೆಗಳನ್ನು ರಚಿಸಿದ್ದಾರೆ. ಹೀಗಾಗಿ ಇವರು ಮದ್ರಾಸ್ ಪ್ರಾಂತದ ಅನಂತಪುರ ಜಿಲ್ಲೆಯಲ್ಲಿಯೇ ಜನಿಸಿರಬೇಕೆಂದು ಊಹಿಸಬಹುದಾಗಿದೆ. ಕನಕಗಿರಿಯ ರಾಜಗೋಪಾಲಾಚಾರ್ಯರು ಕ್ರಿ.ಶ 1939ರಲ್ಲಿ ಪ್ರಕಟಿಸಿರುವ 'ಹೆನ್ನೆರಂಗ ವಿಠಲರ ಕೀರ್ತನೆಗಳು' ಪುಸ್ತಕದಲ್ಲಿ ಇದೇ ಅಭಿಪ್ರಾಯವನ್ನು ತಾಳಿದ್ದಾರೆ. ಮುಂದೆ ಹೆನ್ನರಂಗದಾಸರು ಗುಲಬರ್ಗಾ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಬಂದು ನೆಲೆಸಿರಬಹುದಾಗಿದೆ. ಏಳು ತೀರ್ಥಗಳ ( ರಾಮತೀರ್ಥ, ಹಾಲುತೀರ್ಥ, ಸಂಗಮತೀರ್ಥ, ಪಾಂಡುತೀರ್ಥ ಮರುಳತೀರ್ಥ, ಸಕ್ಕರೆತೀರ್ಥ) ಸಂಗಮ ಕ್ಷೇತ್ರವೆಂದು ಮುದನೂರು ಗ್ರಾಮ ಪ್ರಸಿದ್ಧವಾಗಿದೆ. ಅಲ್ಲದೆ ಇಲ್ಲಿ ಏಕಶಿಲೆಯಲ್ಲಿ ಸ್ವಯಂಭೂ ರುಕ್ಮಿಣಿಪಾಂಡುರಂಗದೇವರು, ವೇಣುಗೋಪಾಲದೇವರು, ಮತ್ತು ನರಸಿಂಹದೇವರು ಆವಿರ್ಭವಿಸಿದ ತ್ರಿಮೂರ್ತಿ ಇದೆ. ಈ ಕ್ಷೇತ್ರಕ್ಕೆ ಹೆನ್ನೆರಂಗದಾಸರು ಭಕ್ತಿಯಿಂದ ನಡೆದು ಕೊಳ್ಳುತ್ತಿದ್ದರೆಂದು ತಿಳಿದು ಬರುತ್ತದೆ.
ಹೆನ್ನೆರಂಗದಾಸರ ಕಾಲನಿರ್ಣಯವೂ ಸಂಧಿಗ್ದವಾಗಿದೆ ಕನಕಗಿರಿಯ ರಾಜಗೋಪಾಲಾಚಾರ್ಯರ ಪ್ರಕಾರ ಹೆನ್ನೆರಂಗವಿಠಲರು ಸುರಪುರದ ವಾಸುದೇವ ನಾಯಕರಂಥಹ ದೊರೆತನದಲ್ಲಿ ಬಾಳಿದರೆಂದು ತಿಳಿದು ಬರುತ್ತದೆ. ಆದ್ದರಿಂದ ಸುರಪುರದ ವಾಸುದೇವ ನಾಯಕರ ಕಾಲವನ್ನು ಗಮನದಲ್ಲಿಟ್ಟುಕೊಂಡರೆ ಹೆನ್ನೆರಂಗದಾಸರು ಕ್ರಿ.ಶ 1800-1860ರ ಸುಮಾರಿಗೆ ಬಾಳಿರಬಹುದೆಂದು ತಿಳಿದು ಬರುತ್ತದೆ.
ಸಂಗ್ರಹ-ಸಂಸ್ಕರಣ-ಸಂಪಾದನೆ
ಈ ಸಂಪುಟದಲ್ಲಿ ಬರುವ ನಾಲ್ಕು ಜನ ಹರಿದಾಸರ ಕೀರ್ತನೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಅನೇಕ ಆಕರಗಳನ್ನು ಬಳಸಿಕೊಳ್ಳಲಾಗಿದೆ. ಇಲ್ಲಿಯ ಕೀರ್ತನೆಗಳನ್ನು ಮುಖ್ಯವಾಗಿ ಎರಡು ರೀತಿಯ ಆಕರ ಗಳಿನ್ನಿಟ್ಟುಕೊಂಡು ಜೋಡಿಸಲಾಗಿದೆ. ಇಲ್ಲಿಯ ಕೆಲವು ದಾಸರ ಕೀರ್ತನಗಳು ಈಗಾಗಲೆ ಪ್ರಕಟವಾಗಿವೆ. ಇನ್ನು ಕೆಲವು ದಾಸರ ಕೀರ್ತನಗಳು, ಈ ಸಂಪುಟದ ಮೂಲಕ ಮೊದಲಬಾರಿಗೆ ಪ್ರಕಟಗೊಳ್ಳುತ್ತಲಿವೆ. ಇವುಗಳಿಗೆ ಸಂಬಂಧಿಸಿದ ವಿವರಗಳನ್ನು ಗಮನಿಸಬಹುದಾಗಿದೆ.
ಶ್ರೀಗೋಕಾವಿ ಅನಂತಾದ್ರೀಶರ ರಚನೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟವಾಗಿರುವ ಮೂರು ಪಠ್ಯಗಳನ್ನು ಆಕರವಾಗಿಟ್ಟುಕೊಳ್ಳಲಾಗಿದೆ. ಅನಂತಾದ್ರೀಶದಾಸರು ವೆಂಕಟೇಶ ಪಾರಿಜಾತ, ಶಿವಪಾರಿಜಾತ, ಧ್ರುವಚರಿತ್ರೆ ಹಾಗೂ ಪ್ರಹ್ಲಾದ ಚರಿತ್ರೆ ಮುಂತಾದ ಕಥನಕಾವ್ಯಗಳನ್ನು ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ವೆಂಕಟೇಶ ಪಾರಿಜಾತ ಕಥನಕಾವ್ಯವನ್ನು ಗದಗಿನ ಹೊಂಬಾಳಿ ಬಂಧುಗಳು ಪ್ರಕಾಶನದವರು ಕ್ರಿ.ಶ 1960 ರಲ್ಲಿ ಪ್ರಕಟಿಸಿದ್ದಾರೆ.'ಶ್ರೀ ಕೃಷ್ಣಚರಿತ್ರೆ'ಯನ್ನು 1935 ರಲ್ಲಿ ದಿ|| ಬಿಂದಾಚಾರ್ಯಜಯತೀರ್ಥಾಚಾರ್ಯ ಗೋಕಾಕ ಇವರು ಪ್ರಕಟಿಸಿದ್ದರು. 'ಪ್ರಹ್ಲಾದ ಚರಿತ್ರೆ' ಕಥನಕಾವ್ಯವು ಇದೇ ಪ್ರಕಾಶನದಿಂದ ಕ್ರಿ.ಶ 1980ರಲ್ಲಿ ಪ್ರಕಟವಾಗಿದೆ. ಇವೆರಡೂ ಪ್ರಕಟಿತ ಕೃತಿಗಳಲ್ಲಿರುವ ಹಾಡುಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಈ ಪ್ರಕಟಿತ ಹಾಡುಗಳಲ್ಲಿ ಅನೇಕ ಅಶುದ್ಧ ಪಾಠಗಳಿದ್ದು ಅವುಗಳನ್ನು ಪರಿಷ್ಕರಿಸಿ ಶುದ್ಧ ಪಾಠಗಳನ್ನು ಮಾತ್ರ ಇಲ್ಲಿ ಸಂಪಾದಿಸಲಾಗಿದೆ. 'ಶಿವಪಾರಿಜಾತ' ಕಥನ ಕಾವ್ಯವು ಜೀರ್ಣಾವಸ್ಥೆಯಲ್ಲಿರುವ ಮುದ್ರಿತ ಕೃತಿಯಾಗಿದ್ದು ಈ ಕೃತಿಯ ಸಂಪಾದಕರ ಪ್ರಕಾಶಕರ ವಿವರಗಳು ತಿಳಿದುಬಂದಿಲ್ಲ. ನಾವು ಕ್ಷೇತ್ರಕಾರ್ಯ ಮಾಡಿದಾಗ ಧ್ವನಿ ಮುದ್ರಿಸಿಕೊಂಡ ವಕ್ತøಗಳ ಹಾಡುಗಳನ್ನು ಈ ಜೀರ್ಣಗೊಂಡ ಕೃತಿಯೊಂದಿಗೆ ತುಲನೆ ಮಾಡಿನೋಡಿ ಶುದ್ಧ ಪಾಠಗಳನ್ನು ಸಿದ್ಧಪಡಿಸಿ ಈ ಕಾವ್ಯವನ್ನು ಸಂಪಾದಿಸಿಕೊಡಲಾಗಿದೆ. 'ಧ್ರುವಚರಿತ್ರೆ' ಕಥನ ಕಾವ್ಯವು ಇದುವರೆಗೆ ಎಲ್ಲಿಯೂ ಪ್ರಕಟವಾಗಿರುವುದಿಲ್ಲ. ಇದರ ಮೂಲ ಪ್ರತಿಯನ್ನು ನಾವು ಶ್ರೀ ಜಯತೀರ್ಥ ಅಷ್ಟಪುತ್ರೆ, ಗೋಕಾಕ, ಇವರಿಂದÀ ಪಡೆದುಕೊಂಡಿದ್ದೇವೆ. ಈ ಹಸ್ತಪ್ರತಿ ದೇವನಾಗರಿ ಲಿಪಿಯಲ್ಲಿದೆ. ಈ ಹಸ್ತಪ್ರತಿಯನ್ನು ಪರಿಷ್ಕರಿಸಿ ದೇವನಾಗರಿ ಲಿಪಿಯಿಂದ ಕನ್ನಡ ಲಿಪಿಗೆ ಬದಲಾಯಿಸಿ ಅದರ ಶುದ್ಧ ಪಾಠವನ್ನು ಇಲ್ಲಿಕೊಡಲಾಗಿದೆ. ಶ್ರೀತುಳಜಾಮಹಾತ್ಮೆ ಹಸ್ತಪ್ರತಿಯನ್ನು ಉದಯ ಆಚಾರ ಗೋಕಾಕರಿಂದ ಸಂಗ್ರಹಿಸಲಾಗಿದ್ದು ಪ್ರಥಮ ಬಾರಿ ಪ್ರಕಟಗೊಳ್ಳುತ್ತಲಿದೆ. ಅನಂತಾದ್ರೀಶರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆಂಬುದು ಈಗಾಗಲೇ ಸ್ವಷ್ಟವಾಗಿದೆ. ನಾವು ಕೈಕೊಂಡ ಕ್ಷೇತ್ರಕಾರ್ಯದಲ್ಲಿ ಇವರ ಕೀರ್ತನೆಗಳು ಅಧಿಕ ಸಂಖ್ಯೆಯಲ್ಲಿ ನಮಗೆ ದೊರೆಯಲಿಲ್ಲ. ಈಗ ಸಧ್ಯಕ್ಕೆ ಏಳು ಕೀರ್ತನೆಗಳನ್ನು ಇದರೊಂದಿಗೆ ಸಂಗ್ರಹಿಸಿಕೊಟ್ಟಿದ್ದೇವೆ. ಈ ಕೀರ್ತನೆಗಳನ್ನು ಶ್ರೀಮತಿ ಲಲಿತಾಬಾಯಿ ಕೊಪ್ಪರ, ಶ್ರೀಮತಿ ಗೋದಾವರಿ ಕಲ್ಲೂರಕರ್, ಡಾ||ಶೈಲಜಾ ಕೊಪ್ಪರ್, ಶ್ರೀಮತಿ ಶಾಲಿನಿ ಕೊಪ್ಪರ ವಕ್ತøಗಳಿಂದ ಪಡೆದುಕೊಳ್ಳಲಾಗಿದೆ. ಹಾಗೆ ಪಡೆದು ಕೊಂಡ ಕೀರ್ತನೆಗಳನ್ನು ಪರಿಷ್ಕರಿಸಿ ತೆಗೆದುಕೊಳ್ಳಲಾಗಿದೆ.
ಹೆನ್ನರಂಗವಿಠಲರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಕ್ರಿ.ಶ 1939ರಲ್ಲಿ ಕನಕಗಿರಿಯ ರಾಜಗೋಪಾಲಾಚಾರ್ಯರು ಹೆನ್ನರಂಗ ವಿಠಲರ 63 ಕೀರ್ತನಗಳನ್ನು ಪ್ರಕಟಿಸಿದ್ದಾರೆ ಹೀಗೆ ಹೆನ್ನರಂಗವಿಠಲರ ಕೀರ್ತನೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಇದೊಂದೇ ಕೃತಿ ಪ್ರಕಟವಾಗಿದೆ. ಇದು ಕೂಡಾ ಅಪೂರ್ಣವಾಗಿದೆ. ಗುಲಬರ್ಗಾ ಜಿಲ್ಲೆಯ ಸುರಪುರದಲ್ಲಿ ವಾಸಿಸುತ್ತಿರುವ ಶ್ರೀ ಶ್ರೀಹರಿರಾವ್ ಆದವಾನಿಯವರು ಆಸಕ್ತಿಯಿಂದ ಕೆಲವು ದಾಸರ ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ. ಅವರ ಸಂಗ್ರಹದಿಂದ ಹೆನ್ನೆರಂಗವಿಠಲ ರಚನೆಗಳನ್ನು ಆಯ್ದುಕೊಂಡು, ಪರಿಷ್ಕರಿಸಿ ಇಲ್ಲಿಕೊಡಲಾಗಿದೆ. ಪರಿವಿಡಿಯಲ್ಲಿ ಎರಡುನೂರು ಕೀರ್ತನೆಗಳ ಪ್ರಸ್ತಾಪವಿದ್ದರೂ ಅದರಲ್ಲಿ ಕೆಲಕೀರ್ತನೆಗಳು ಅಳಿಸಿ ಹೋಗಿವೆ. ಹೀಗಾಗಿ ಒಂದು ನೂರಾ ಎಂಬತ್ತೈದು ಕೀರ್ತನಗಳನ್ನು ಮಾತ್ರ ನಮಗೆ ಸಂಪಾದಿಸಿಕೊಡಲು ಸಾಧ್ಯವಾಗಿದೆ. ಶ್ರೀ ಶ್ರೀಹರಿರಾವರ್ ಆದವಾನಿಯವರಿಂದ ನಮಗೆ ದೊರೆತಿರುವ ಈ ಹಸ್ತಪ್ರತಿ ತೆಲುಗು ಲಿಪಿಯಲ್ಲಿದೆ. ಇದನ್ನು ಕನ್ನಡ ಲಿಪಿಗೆ ಅಳವಡಿಸಿ, ಪಾಠಾಂತರಗಳನ್ನು ಪರಿಷ್ಕರಿಸಿ ಭಾವಾರ್ಥವನ್ನು ಜೋಡಿಸಿ ಸಂಪಾದಿಸಿ ಕೊಡಲಾಗಿದೆ. ಹೆನ್ನೆರಂಗ ವಿಠಲರು, ಶತಕಗಳನ್ನು ಹಾಗೂ ಸೀಸಪದ್ಯಗಳನ್ನು ರಚಿಸಿರುವುದು ತಿಳಿದು ಬರುತ್ತದೆ. ಕನಕಗಿರಿಯ ರಾಜಗೋಪಾಲಚಾರ್ಯರು ಸಂಪಾದಿಸಿ ಪ್ರಕಟಿಸಿರುವ ಕೃತಿಯಲ್ಲಿ ಶತಕ ಹಾಗು ಸೀಸಪದ್ಯಗಳನ್ನು ನೋಡಬಹುದಾಗಿದೆ. ಈ ಸಂಪುಟವು ಕೀರ್ತನೆಗಳ ಪ್ರಕಟಣೆಗೆ ಮಾತ್ರ ಸೀಮಿತವಾಗಿರುವುದರಿಂದ ನಾವಿಲ್ಲಿ ಅವರ ಕೀರ್ತನಗಳನ್ನು ಮಾತ್ರ ಸಂಪಾದಿಸಿ ಕೊಟ್ಟಿದ್ದೇವೆ.
ಅಸ್ಕಿಹಾಳ ಗೋವಿಂದದಾಸರು ಕೀರ್ತನೆಗಳನ್ನು ರಚಿಸಿರುವುದಲ್ಲದೆ ಬಯಲಾಟ, ಗೀಗಿಪದ, ಲಾವಣಿಗಳನ್ನು ಕೂಡಾ ರಚಿಸಿದ್ದಾರೆ. ಮೂವತ್ತು ಕೀರ್ತನಗಳನ್ನೊಳಗೊಂಡ ಕೃತಿಯೊಂದು 1978ರಲ್ಲಿ ರಾಯಚೂರಿನ 'ಶ್ರೀಕೋಟೆ ಗುರುರಾಜ ಭಜನಾಮಂಡಳಿಯವರಿಂದ ಪ್ರಕಟಗೊಂಡಿದೆ' ಗೋವಿಂದದಾಸರ ಮನೆತನದವರು ಈಗ ರಾಯಚೂರಿನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಭೇಟಿಯಾಗಿ ನಾವು ಅವರಿಂದ ಗೋವಿಂದ ದಾಸರ ಕೀರ್ತನೆಗಳÀÀ ಹಸ್ತ ಪ್ರತಿಯನ್ನು ಪಡೆದುಕೊಂಡಿದ್ದೇವೆ. ಈ ಹಸ್ತಪ್ರತಿ ಹಾಗೂ ಈಗಾಗಲೇ ಪ್ರಕಟಿತವಾಗಿರುವ ಕೀರ್ತನಗಳ ಸಂಕಲನ ಇವರೆಡನ್ನೂ ಇಲ್ಲಿ ಆಕರವಾಗಿಟ್ಟುಕೊಳ್ಳಲಾಗಿದೆ. ಎರಡೂ ಆಕರಗಳ ಮೂಲಕ ಪರಿಷ್ಕರಣೆಯನ್ನು ಮಾಡಿ ಅಂತಿಮವಾಗಿ ಮೂವತ್ತು ಕೀರ್ತನೆಗಳನ್ನು ಇಲ್ಲಿ ಸಂಪಾದಿಸಿಕೊಡಲಾಗಿದೆ.
ಕಾರ್ಪರ ನರಹರಿದಾಸರು ಅನೇಕೆ ಕೀರ್ತನೆಗಳನ್ನು, ಬಯಲಾಟದ ಹಾಡುಗಳನ್ನು ರಚಿಸಿದ್ದಾರೆ. ರಾಯಚೂರಿನ ಕೋಟೆ ಭಜನಾ ಮಂಡಳಿಯವರು ಈಗಾಗಲೇ ಇವರ ಒಂದನೂರಾ ಹದಿನಾಲ್ಕು ಕೀರ್ತನೆÀಗಳನ್ನು 1984ರಲ್ಲಿ ಪ್ರಕಟಿಸಿದ್ದಾರೆ. ಕಾರ್ಪರ ನರಹರಿದಾಸರ ಮಕ್ಕಳಾದ ಶ್ರೀ.ಕೆ ಜಯಾಚಾರ್ಯ ಹಾಗೂ ದಾಸರ ಅಳಿಯಂದಿರಾದ ಶ್ರೀ ಕೆ.ಎನ್.ಆಚಾರ್ಯ ಇವರು ಸಂಗ್ರಹಿಸಿದ ಹಸ್ತ ಪ್ರತಿಗಳನ್ನು ಇಲ್ಲಿ ಆಧಾರವಾಗಿಟ್ಟುಕೊಳ್ಳಲಾಗಿದೆ. ಇವೆರಡೂ ಆಕರಗಳಿಂದ ಶುದ್ಧ ಪಾಠವನ್ನು ಗುರಿತಿಸಿ ಇತ್ತೀಚೆಗೆ ದೊರೆತ ಅವರ ಆರು ಕೀರ್ತನೆಗಳನ್ನು ಇದಕ್ಕೆ ಜೋಡಿಸಿ ಕಾರ್ಪರ ನರಹರಿದಾಸರ ಒಟ್ಟು ನೂರಾಇಪ್ಪತ್ತು ಕೀರ್ತನಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಈ ಸಂಪುಟದಲ್ಲಿ ಬರುವ ನಾಲ್ಕುಜನ ಹರಿದಾಸರ ರಚನೆಗಳನ್ನು ಇತರ ದಾಸರ ರಚನೆಗಳೊಂದಿಗೆ, ಹೋಲಿಸಿ ನೋಡಿದಾಗ ಕೆಲವು ವಿಶಿಷ್ಟ ಸಂಗತಿ ಬೆಳಕಿಗೆ ಬರುತ್ತವೆ. ದಾಸ ಸಾಹಿತ್ಯದ ಮೊದಲಿನ ಘಟ್ಟಗಳಿಗೆ ಭಿನ್ನವಾಗಿ ನಿಲ್ಲುವ ಈ ದಾಸರ ಸಾಹಿತ್ಯ ರಚನೆಗಳಲ್ಲಿ ಜಾನಪದ ಪ್ರಭಾವವನ್ನು ಕಾಣಬಹುದಾಗಿಗೆ. ದ್ವೈತಸಿದ್ಧಾಂತವು ಜನಪದ ರೂಪಗಳ ಮುಖಾಂತರ ಇಲ್ಲಿ ಕಾಣಿಸಿಕೊಂಡಿದೆ. ಶಿಷ್ಟ ಪರಂಪರೆಯ ಪುರಾಣ ಶತಕ, ಕೀರ್ತನೆಗಳಿರುವಂತೆ ಜನಪದ ಪರಂಪರೆಯ ಪಾರಿಜಾತ, ಲಾವಣಿ ಬಯಲಾಟದಂತಹ ಜನಪದ ರೂಪಗಳೂ ಈ ಹರಿದಾಸರಲ್ಲಿ ಬಳಕೆಯಾಗಿವೆ.
18-19ನೇ ಶತಮಾನ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯಲ್ಲಿ ಅಂತಹ ಮಹತ್ವದ ಕಾಲವಾಗಿರದಿದ್ದರೂ ತತ್ವಪದ ಸಾಹಿತ್ಯ, ಕೀರ್ತನ ಸಾಹಿತ್ಯದಂತಹ ಕ್ಷೇತ್ರಗಳಲ್ಲಿ ಬಹಳ ಮಹತ್ವ, ಬೆಳವಣಿಗೆಯನ್ನು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ದೇಶದಾದ್ಯಂತ ಪಾಶ್ಚಾತ್ಯರ ರೋಮ್ಯಾಂಟಿಕ ಪ್ರಭಾವ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಪ್ರದೇಶದ ಕವಿಗಳು, ಕೀರ್ತನಕಾರರು ದೇಶೀಯ ರೂಪಕಗಳೊಂದಿಗೆ, ಬದುಕಿನ ಹುಡುಕಾಟವನ್ನು ಪ್ರಾರಂಭಿಸಿದ್ದು ತುಂಬ ಗಮನಾರ್ಹವಾದ ಸಂಗತಿಯಾಗಿದೆ.
ದಕ್ಷಿಣ ಕರ್ನಾಟಕದ ಹಾಗೂ ಮುಂಬಯಿ ಕರ್ನಾಟಕ ಕಡೆ ಪಾಶ್ಚಾತ್ಯ ಸಾಹಿತ್ಯ ತುಂಬ ಪ್ರಭಾವಭೀರಿದ ಸಂದರ್ಭದಲ್ಲಿ ಈ ಹೈದ್ರಾಬಾದ ಕರ್ನಾಟಕದ ಪ್ರದೇಶದಲ್ಲಿ ಕೀರ್ತನಕಾರರು, ತತ್ವಪದಕಾರರು, ತಮ್ಮ ದೇಶೀಯರೂಪಗಳ ಮೂಲಕವೇ ಹೊಸ ಚಿಂತನೆಯನ್ನು ಪ್ರಾರಂಭಿಸಿದ್ದು ಹಾಗೂ ಇವರ ರಚನೆಗಳು ಜನಸಮುದಾಯದ ನಾಲಿಗೆಯ ಮೇಲೆ ನರ್ತಿಸಿದ್ದು ಇವತ್ತಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ.
ಭಕ್ತಿ ಆಧ್ಯಾತ್ಮದಂತಹ ವಿಷಯಗಳಲಿ ಇಲ್ಲಿಯ ಜನ ಸಮುದಾಯದಲ್ಲಿ ಸಹಿಷ್ಣುತೆ, ಭಾವೈಕ್ಯತೆಯನ್ನು ಮೂಡಿಸಿದ್ದು ಮಹತ್ವದ ಸಂಗತಿಯಾಗಿದೆ. ದಾಸ ಸಾಹಿತ್ಯದ ಪರಂಪರೆಯಲ್ಲಿ ಅನೇಕ ಕೀರ್ತನಕಾರರು ಬೇರೆ ಬೇರೆ ಜಾತಿ-ಮತಗಳಿಂದ ಹುಟ್ಟಿಬಂದಿರುವುದು ಗಮನಿಸುವ ವಿಷಯವಾಗಿದೆ. ದಾಸ ಸಾಹಿತ್ಯದ ಮೊದಲನೇ ಘಟ್ಟದಲ್ಲಿ ಕುರುಬ ಜನಾಂಗದಿಂದ ಕನಕದಾಸ ಮಹತ್ವದ ಕೀರ್ತನಕಾರನಾದರೆ 19ನೆ ಶತಮಾನದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಪಿಂಜಾರ ಜನಾಂಗದಿಂದ ಬಂದ ರಾಮದಾಸನÀು ದ್ವೈತಮತದ ವಿಶಾಲತೆಗೆ ಸಾಕ್ಷಿಯಾಗಿದ್ದಾನೆ. ವೈಷ್ಣವ ಮನೆತನದಲ್ಲಿ ಜನಿಸಿದ ಅನಂತಾದ್ರೀಶರು ಶಿವಪಾರಿಜಾತದಂತಹ ಕಥನಕಾವ್ಯವನ್ನು ರಚಿಸಿರುವುದು ಮಹತ್ವದ ಸಂಗತಿಯಾಗುತ್ತದೆ. ಜನಪದ ಮೌಲ್ಯಗಳಿಂದ ಬಂದ ಇಂತಹ ಕೀರ್ತನಕಾರರು ತಮ್ಮ ಕೀರ್ತನೆಗಳ ಮೂಲಕ ಜನಸಮುದಾಯಕ್ಕೆ ಹತ್ತಿರವಾಗಿದ್ದಾರೆ. ಹರಿ-ಹರ ಎಂಬ ಭೇದವನ್ನು ಬಿಟ್ಟು ಜಾತಿ-ಮತಗಳ ಹಂಗನ್ನು ತೊರೆದು ಮಾನವೀಯತೆಗೆ ಪ್ರಾಮುಖ್ಯತೆ ನೀಡಿದ್ದು, ಆಧ್ಯಾತ್ಮದ ಎತ್ತರವನ್ನೇರಿದ್ದು ಗುರುತಿಸುವಂಥ ವಿಷಯವಾಗಿದೆ.
ಈ ಸಂಪುಟದ ಹರಿದಾಸರು ವಸ್ತು, ಅಭಿವ್ಯಕ್ತಿ, ಭಾಷೆ ಆಶಯ ಇವುಗಳಲ್ಲಿ ತಮ್ಮದೇ ಆದ ವಿಶಿಷ್ಟತೆಯನ್ನು ಮೆರೆದಿದ್ದಾರೆ. ಅನಂತಾದ್ರೀಶರು ರಚಿಸಿರುವ ನಾಲ್ಕು ಸುದೀರ್ಘ ಕಥನಕಾವ್ಯಗಳಲ್ಲಿ ಪುರಾಣದ ಮೂಲಕ ಭಕ್ತಿ ಪರಂಪರೆಯನ್ನು ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. 18-19ನೇ ಶತಮಾನದ ಸಂದರ್ಭದಲ್ಲಿ ಮೂಡಿ ಬಂದ ಈ ಕಲ್ಯಾಣ ಹಾಗೂ ಪರಿಣಯಕ್ಕೆ ಸಂಬಂದಪಟ್ಟ ಕಥಾವಸ್ತು ಹೆಚ್ಚು ಕುತೂಹಲವನ್ನುಂಟು ಮಾಡುತ್ತದೆ. ವೆಂಕಟೇಶ, ಶಿವ, ಧ್ರುವ, ಪ್ರಹ್ಲಾದ, ಈ ಮೊದಲಾದ ಮಹಿಮರನ್ನು ಈ ಕವಿ ಸಾಮಾನ್ಯ ಜನತೆಯಲ್ಲಿರುವ ಭಕ್ತಿಯ ಅನಂತತೆಯಲ್ಲಿ ಕಂಡುಕೊಳ್ಳುತ್ತಾರೆ. ಹೀಗಾಗಿ ಈ ಶಿವ ವೆಂಕಟೇಶರು ನಮ್ಮ ಸುತ್ತು ಮುತ್ತಲಿನ ಮಹತ್ವದ ಸಾಧಕರಂತೆ ಕಾಣಿಸುತ್ತಾರೆ. ಹೀಗೆ ಪುರಾಣವನ್ನು ವಾಸ್ತವದ ಮೂಲಕ ಕಟ್ಟಿಕೊಡುವ ಅನಂತಾದ್ರೀಶರ ಕಥನಕವನಗಳು ದಾಸ ಸಾಹಿತ್ಯ ಪರಂಪರೆಯಲ್ಲಿಯೇ ವಿಶಿಷ್ಟ ರಚನೆಗಳಾಗಿ ಕಾಣಿಸಿಕೊಳ್ಳುತ್ತವೆ. ಇಂತಹುದೇ ಪರಂಪರೆಯನ್ನು ಮುಂದುವರೆಸಿದ ಕಾರ್ಪರ ನರಹರಿ ದಾಸರು ಸಮಗ್ರ ಭಾಗವತ ಪುರಾಣವನ್ನು ಕೇವಲ 18 ನುಡಿಗಳಲ್ಲಿ ಕಟ್ಟಿಕೊಟ್ಟಿರುವುದು ಅವರ ಕಥನಕಲೆಗೆ ಸಾಕ್ಷಿಂiÀiಂತಿದೆ. ಹೆನ್ನೆರಂಗದಾಸರ ಹಾಗೂ ಅಸ್ಕಿಹಾಳ ಗೋವಿಂದದಾಸರ ಕೀರ್ತನೆಗಳಲ್ಲಿ ಈ ಪ್ರದೇಶದ ಭಾಷೆ ಮೈಕೊಡವಿ ನಿಂತಿದೆ. ಅನೇಕ ಲಾವಣಿ, ಬಯಲಾಟಗಳನ್ನು ಬರೆದಿರುವ ಗೋವಿಂದ ದಾಸರು ಜನಪದ ನುಡಿಗಟ್ಟಿನ ಮೂಲಕ ಕೀರ್ತನ ಪರಂಪರೆಯನ್ನು ಬೆಳೆಸಿರುವುದು ಕುತೂಹಲಕಾರಿಯಾದ ಸಂಗತಿಯಾಗಿದೆ.
ಈ ಸಂಪುಟದ ಹರಿದಾಸರ ರಚನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ ನಡೆದಿರುವದಿಲ್ಲ. ಇವರ ರಚನೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದಾಗ ಇನ್ನೂ ಹೊಸ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ, ನಡೆ ನುಡಿ ಒಂದಾಗಿ ಸರಳ ಜೀವನ ನಡೆಸಿ ತಮ್ಮ ಅನುಭಾವದ ಅಂತ:ಸತ್ವವನ್ನು ಧಾರೆಯೆರೆದು ಕೊಟ್ಟಿರುವ ಇಲ್ಲಿಯ ದಾಸರು ಅಧ್ಯಯನ ಯೋಗ್ಯರಾಗಿದ್ದಾರೆ. e್ಞÁನ, ಭಕ್ತಿ, ಸಾಧನೆಗೆ ಇಂತಹ ದಾಸರ ರಚನೆಗಳು ಸ್ಥೂರ್ತಿದಾಯಕವಾಗಿದೆ.
ಕೃತಜ್ಞತೆಗಳು
ಈ ಸಂಪುಟದ ಹರಿದಾಸರ ಕೀರ್ತನೆಗಳನ್ನು ಸಂಪಾದಿಸಿಕೊಡಲು ನಮಗೆ ತಿಳಿಸಿದ ಕಾರ್ಯನಿರ್ವಾಹಕÀ ಸಂಪಾದಕರಾದ ಡಾ||ಶ್ರೀನಿವಾಸ ಹಾವನೂರು ಅವರಿಗೆ ಇಂತಹ ಮಹತ್ವದ ಯೋಜನೆಯನ್ನು ಕೈಗೊಂಡು ಈ ಯೋಜನೆಯಲ್ಲಿ ಭಾಗವಹಿಸುವ ಅವಕಾಶವನ್ನಿತ್ತ ಕನ್ನಡ ಸಂಸ್ಕøತಿ ಇಲಾಖೆಯ ನಿರ್ದೇಶಕರಿಗೆ ಅನಂತ ಕೃತಜ್ಞತೆಗಳು ಸಲ್ಲುತ್ತವೆ. ಸಮಗ್ರ ದಾಸವಾಙ್ಮಯ ಯೋಜನೆಯ ಸಮಿತಿಯ ಎಲ್ಲ ಸದಸ್ಯರುಗಳಿಗೂ ನಾವು ಋಣಿಯಾಗಿದ್ದೇವೆ.
ಈ ಸಂಪುಟದ ಹರಿದಾಸರ ರಚನೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಅನೇಕರು ಸಹಾಯ ಸಹಕಾರ ನೀಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಸುರಪುರದ ಶ್ರೀಹರಿ ಕುಲಕರ್ಣಿ, ಗೋಕಾಕದ ಶ್ರೀಜಯತೀರ್ಥ ಅಷ್ಟಮಿತ್ರೆ. ರಾಯಚೂರಿನ ಭೀಮದಾಸ, ಕೊಪ್ಪರದ ಶ್ರೀ ಕೆ. ಜಯಾಚಾರ್ಯರು ಇವರ ಸಹಾಯ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ.
ಶ್ರೀ ಹೆನ್ನೆರಂಗದಾಸರ ಎರಡುನೂರು ಕೀರ್ತನೆಗಳು ಪ್ರಪ್ರಥಮವಾಗಿ ಈ ಸಂಪುಟದ ಮೂಲಕ ಬೆಳಕು ಕಾಣುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಅದರಂತೆ ಅನಂತಾದ್ರೀಶರ 'ಧ್ರುವಚರಿತ್ರೆ' ಕಥನಕಾವ್ಯವು ಇದೇ ಮೊದಲಬಾರಿಗೆ ಈ ಸಂಪುಟದ ಮೂಲಕ ಪ್ರಕಟವಾಗುತ್ತಿದೆ. ನಾವು ಎಷ್ಟೋಶ್ರಮವಹಿಸಿದ್ದರೂ ಈ ದಾಸರ ಚರಿತ್ರೆಯನ್ನು ಇಡಿಯಾಗಿ ಕಟ್ಟಿಕೊಡಲಿಕ್ಕೆ ಆಗಲಿಲ್ಲ. ಪಾಠ ಪರಿಷ್ಕರಣೆಯಲ್ಲಿ ಕೆಲವು ದೋಷಗಳು ಉಳಿದುಕೊಂಡಿರಬಹುದಾಗಿದೆ. ಓದುಗರು, ವಿಮರ್ಶಕರು, ದಯವಿಟ್ಟು ತಮ್ಮ ರಚಾನಾತ್ಮಕ ಸಲಹೆಗಳನ್ನು ನೀಡಬೇಕೆಂದು ಕೋರುತ್ತೇವೆ. ಈ ಸಂಪುಟವನ್ನು ಸಿದ್ಧಪಡಿಸುವಲ್ಲಿ ಸಹಕರಿಸಿದ ಎಲ್ಲರಿಗೂ ನಮ್ಮ ಅನಂತ ಕೃತಜ್ಞತೆಗಳು.
ಸಂಪಾದಕರು
ಡಾ. ಬಸವರಾಜ ಸಬರದ
ಡಾ. ಜಯಲಕ್ಷ್ಮಿ ಮಂಗಳಮೂತಿ
***
No comments:
Post a Comment