Tuesday 1 January 2019

ಮಧ್ವಾಚಾರ್ಯರು 02 madhwacharya 02


ಆಚಾರ್ಯ ಮಧ್ವರ ಸಂಪರ್ಕಕ್ಕೆ ಬಂದಿರುವ ತುಳುನಾಡಿನ ಊರುಗಳು

1. ಅವತಾರ ಭೂಮಿ ಪಾಜಕ - ಆಚಾರ್ಯರ ಜನ್ಮಸ್ಥಳ
2. ರಜತಪೀಠಪುರ - ಉಡುಪಿ
3. ಅನಂತಾಸನ, ಮಹೇಂದ್ರದಿಗಾಲಯ (ಚಂದ್ರೇಶ್ವರ), ಕಾನನ ದೇವತಾಸದನ (ಕೊಡವೂರು), ತಾಳಕುಡೆ (ಬನ್ನಂಜೆ) - ಈ ೪ ದೇವಾಲಯಗಳನ್ನು ಆಚಾರ್ಯರು ತಮ್ಮ ೭ ವಯಸ್ಸಿನಲ್ಲಿ ನಟ್ಟಿರುಳಿನಲ್ಲಿ ನಡೆದುಕೊಂಡು
ಸಂದರ್ಶಿಸಿದ್ದರು
4. ಮದ್ದ - ಈ ಗ್ರಾಮದಲ್ಲಿ ಮಧ್ವಾಚಾರ್ಯರು ಒಂದು ಶಿಲೆಯ ಮೇಲೆ ಕುಳಿತುಕೊಂಡಿದ್ದರು. ಹಾಗಾಗಿ ಈ ಊರಿಗೆ ಮಧ್ವ ಮದ್ದ ಎಂದು ಹೆಸರಾಯಿತು
5. ಘೃತವಲ್ಲೀ - ನೈಯಂಬಳ್ಳಿ
6. ಕಾಂತಾವರ - ಶ್ರೀ ಕಾಂತೇಶ್ವರ ಸದನ - ಆಚಾರ್ಯರು ತಮ್ಮ ಕಿರುಬೆರಳನ್ನು ನೆಲಕ್ಕೆ ಒತ್ತಿ ಅದನ್ನು ಅಲುಗಾಡಿಸಿ ಎಂದು ಜಟ್ಟಿಗಳಿಗೆ ಸವಾಲು ಹಾಕಿದ ಸ್ಥಳ.
7. ನಾರ್ಶ್ಯ - ನರಸಿಂಹ ಗೇಹ - ಆಚಾರ್ಯರು ಒಬ್ಬ ವಟುವಿನ ಹೆಗಲ ಮೇಲೆ ಕುಳಿತು ನರಸಿಂಹನ ಗುಡಿಗೆ ಪ್ರದಕ್ಷಿಣೆ ಬಂದ ಸ್ಥಳ
8. ಗುಹಪ್ರಿಯ ಮಹೀಧ್ರ - ಕುಮಾರಪರ್ವತ- ವಿಷ್ಣುತೀರ್ಥಾಚಾರ್ಯರು ಸಂಚರಿಸಿದ ಪರ್ವತ
9. ಹರಿಶ್ಚಂದ್ರ ಮಹೀಧ್ರ - ವಿಷ್ಣುತೀರ್ಥಾಚಾರ್ಯರು ಗುಹಾ ಪ್ರವೇಶ ಮಾಡಿದ ಪರ್ವತ
10. ಮಧ್ಯವಾಟ - ಆಚಾರ್ಯರು ಉಡುಪಿ ಹಾಗು ಸುಬ್ರಹ್ಮಣ್ಯಗಳ ಮಧ್ಯೆ ಸಂಚಾರಿಸುತ್ತಿದ್ದಾಗ ಇಳಿದು ಕೊಳ್ಳುತ್ತಿದ್ದ ಸ್ಥಳ. ಇಲ್ಲಿ ಒಂದು ವ್ಯಾಸಮುಷ್ಟಿಯನ್ನು ಪ್ರತಿಷ್ಠಾಪಿಸಿದ್ದಾರೆ
11. ಎರ್ಕಿಮಠ - ಇಲ್ಲಿನ ಗೃಹಸ್ಥರಿಗೆ ಆಚಾರ್ಯರು ಚನ್ನಕೇಶವ ದೇವರ ವಿಗ್ರಹ ಮತ್ತು ಮುದ್ರೆಗಳನ್ನು ದಯಪಾಲಿಸಿದ್ದಾರೆ
12. ಅನಂತಶಯನ - ಆಚಾರ್ಯರು ಸಹಸ್ರ ಕದಳಿ ಫಲ ಮತ್ತು ಅನೇಕ ಕೊಡ ಹಾಲನ್ನು ಸ್ವೀಕರಿಸಿ ಅಚ್ಚರಿ ಮೂಡಿಸಿದ ಸ್ಥಳ
13. ವಿಷ್ಣುಮಂಗಲ - ಆಚಾರ್ಯರು ತ್ರಿವಿಕ್ರಮಪಂಡಿತರನ್ನು ವಾದದಲ್ಲಿ ಜಯಿಸಿದ ಸ್ಥಳ
14. ಚಿಟ್ಪಾಡಿ ಬೀಡು - ಆಚಾರ್ಯ ಮಧ್ವರ ಮನೆಗೆ ಹಾಲನ್ನು ಒದಗಿಸುತ್ತಿದ್ದ ಮನೆತನ. ಇಲ್ಲಿ ಶ್ರೀ ಭೂ ಸಮೇತನಾದ ಶ್ರೀನಿವಾಸ ದೇವರ ದೇವಳವಿದೆ. ಆಚಾರ್ಯರು ಇವರಿಗೆ ವಿಗ್ರಹಗಳನ್ನು ದಯಪಾಲಿಸಿದ್ದಾರೆ
15. ನಿಡಂಬೂರು ಪಕ್ಷನಾಥ ಬಲ್ಲಾಳರ ಮನೆ- ಆಚಾರ್ಯರು ಇಲ್ಲಿನ ಗೃಹಸ್ಥರಿಗೆ ಲಕ್ಷ್ಮೀನಾರಾಯಣ ವಿಗ್ರಹವನ್ನು ದಯಪಾಲಿಸಿದ್ದಾರೆ
16. ಉಜಿರೆ - ಆಚಾರ್ಯರು ಪಂಡಿತರನ್ನು ವಾದದಲ್ಲಿ ಗೆದ್ದು ಕರ್ಮನಿರ್ಣಯ ಗ್ರಂಥವನ್ನು ರಚಿಸಿದ ಸ್ಥಳ
17. ಪ್ರಾಗ್ರ್ಯವಾಟ - ಕೊಡಿಪಾಡಿ ಜನಾರ್ದನ ದೇವಳ
18. ಮದನೇಶ್ವರ - ಮಧೂರು ಮದನೇಶ್ವರ ಮಹಾಗಣಪತಿ ದೇವಳ
19. ಅಡೂರು - ಮಹಾಲಿಂಗೇಶ್ವರ ದೇವಳ. ಇಲ್ಲಿ ಒಂದು ವಿಷ್ಣು ದೇವಳವನ್ನು ಆಚಾರ್ಯರು ಪ್ರತಿಷ್ಠಾಪಿಸಿದ್ದಾರೆ
20. ಕಾವು ಮಠ - ಆಚಾರ್ಯರು ತ್ರಿವಿಕ್ರಮ ಪಂಡಿತರನ್ನು ವಾದದಲ್ಲಿ ಗೆದ್ದ ಕುರುಹಾಗಿ ಇಲ್ಲಿ ವಿಜಯಸ್ತಂಭವನ್ನು ನೆಡಲಾಗಿದೆ. ಆಚಾರ್ಯರು ಶ್ರೀ ಲಕ್ಷ್ಮೀನಾರಾಯಣ ವಿಗ್ರಹ ಹಾಗು ಪಂಚ ಮುದ್ರೆಗಳನ್ನು ತ್ರಿವಿಕ್ರಮಪಂಡಿತರಿಗೆ ಅನುಗ್ರಹಿಸಿದ್ದಾರೆ
21. ಸಂದೊಳಿಗೆ ಪಾಡಿ ತಾಂತ್ಯ ಮಠ ಕುಕ್ಕಿಕಟ್ಟೆ
22. ಕಣ್ವತೀರ್ಥ - ಇಲ್ಲಿಯ ಅಶ್ವತ್ಥ ಕಟ್ಟೆಯ ಕಮಾನಿನಲ್ಲಿ ಆಚಾರ್ಯರು ದ್ವಂದ್ವ ಮಠವನ್ನು ನಿರ್ಣಯಿಸಿದರು. ಪೇಜಾವರ ಮಠದ ಪರಂಪರೆಯಲ್ಲಿ ಬಂದ ಶ್ರೀ ವಿಜಯಧ್ವಜ ತೀರ್ಥರು ಗ್ರಂಥ ರಚನೆ ಮಾಡುವಾಗ ಮರದ ಎಲೆಗಳ ಸದ್ದನ್ನು ಕೈಯೆತ್ತಿ ನಿಲ್ಲಿಸಿದ ಮಹಾತ್ಮರು
23. ಕಾರ್ಯೂರು ಮಠ
24. ತೆಂಕನಿಡಿಯೂರು
25. ಕೊಕ್ಕಡ ವೈದ್ಯನಾಥೇಶ್ವರ ದೇವಾಲಯ
26. ಮಲ್ಪೆ ಕಡಲಕಿನಾರೆ ವಡಭಾಂಡೇಶ್ವರ- ಆಚಾರ್ಯರಿಗೆ ಕೃಷ್ಣ ಪ್ರತಿಮೆ ದೊರೆತ ಸ್ಥಳ. ಇಲ್ಲಿ ಬಲರಾಮನನ್ನು ಪ್ರತಿಷ್ಠಾಪಿಸಿದ್ದಾರೆ
27. ಪಾರಂತಿಸುರ ಸದನ - ಆಚಾರ್ಯರು ಜೀರ್ಣಾವಸ್ಥೆಯಲ್ಲಿದ್ದ ಪಂಚ ಮುರಾರಿ ಸನ್ನಿಧಾನವನ್ನು ಜೀರ್ಣೋದ್ಧಾರ ಮಾಡಿ ಬಲಿ ಉತ್ಸವ ನಡೆಸಿದ ಸ್ಥಳ
28. ತುಂಗಾತೀರ - ಆಚಾರ್ಯರು ಬಂಡೆಯನ್ನು ಹರಿಯುವ ನೀರಿಗೆ ಅಡ್ಡವಾಗಿಟ್ಟ ಸ್ಥಳ
29. ಸೇತುತಿಲ(ಕಟ್ಟತ್ತಿಲ) - ಆಚಾರ್ಯರು ರಚಿಸಿರುವ ಸರ್ವಮೂಲ ಗ್ರಂಥಗಳ ಮೂಲಪ್ರತಿಗಳನ್ನು ಇಲ್ಲಿ ಭೂಗತ ಮಾಡಿ ಮೇಲೊಂದು ತೀರ್ಥವನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಪುಸ್ತಕ ತೀರ್ಥವೆಂದು ಹೆಸರು. ಮುಂದೆ ಧರ್ಮ ಖಿಲವಾದಾಗ ಶ್ರೀ ವಿಷ್ಣುತೀರ್ಥಾಚಾರ್ಯರು ಕುಮಾರಪರ್ವತದಿಂದ ಬಂದು ಭೂಗತವಾಗಿರುವ ಸರ್ವಮೂಲಗ್ರಂಥಗಳನ್ನು ಹೊರತೆಗೆದು ಧರ್ಮವನ್ನು ಪುನಃ ಸ್ಥಾಪಿಸುತ್ತಾರೆ

ಮಧ್ವೇಶಾರ್ಪಣಮಸ್ತು.


ಮಧ್ವ ನವಮಿಗೆ ಇನ್ನೂ ೫ ದಿನ. 14 feb 2019
ಜಗದ್ಗುರು ಗಳಾದ ಶ್ರೀ ಮಧ್ವಾಚಾರ್ಯರ ಬಗ್ಗೆ ತಿಳಿಯುವ ಪುಟ್ಟ ಪ್ರಯತ್ನ.

ಶ್ರೀ ಮಧ್ವಾಚಾರ್ಯರು ತಮ್ಮ ಶಿಷ್ಯ ಪರಿವಾರದ ಜೊತೆಯಲ್ಲಿ ಒಮ್ಮೆ ಬದರಿ ಯಾತ್ರೆ ಕೈಗೊಂಡರು. ಬದರಿ ಕ್ಷೇತ್ರದ ಹತ್ತಿರ ಬರುತ್ತಾ ಇದ್ದಾರೆ.
ಅಲ್ಲಿ ಒಬ್ಬ ರಾಕ್ಷಸ ಹುಲಿಯ ವೇಷದಲ್ಲಿ ಇವರನ್ನು ಸಂಹರಿಸಲು ಕಾಯುತ್ತಾ ಕುಳಿತಿದ್ದ.
ಸಜ್ಜನರ ,ಭಗವದ್ಭಕ್ತರ ವಿನಾಶ,ಸಾವು, ಬಯಸುವದು ರಾಕ್ಷಸರ ಗುರಿ ಅಥವಾ ಅವರ ಸ್ವಭಾವ. ಅದಕ್ಕೆ ಅವರು ಹೇಗಾದರು ವೇಷ ಬದಲಾವಣೆಗಳನ್ನು ಮಾಡಬಲ್ಲರು.ಇದಕ್ಕೆ ಪೂರಕವಾದ ಕತೆಗಳನ್ನು ರಾಮಾಯಣ ಮಹಾಭಾರತ ಮತ್ತು ಭಾಗವತಾದಿ ಮಹಾ ಪುರಾಣಗಳಲ್ಲಿ ಕೇಳಿರುತ್ತೇವೆ.
ಹುಲಿಯ ವೇಷದಲ್ಲಿ ಇದ್ದ ರಕ್ಕಸನಿಗೆ ಶ್ರೀ ಮಧ್ವಾಚಾರ್ಯರನ್ನು ನೋಡಿ ಮನದಲ್ಲಿ ಯೋಚಿಸುವ.!! ಇವರು ಅಜೇಯರು.ಇವರ ಮೇಲೆ ಯಾವ ದೈತ್ಯರ ಆಟ ಸಾಗದು.ಇವರ ಮೇಲೆ ಆಕ್ರಮಣ ಮಾಡಿದವರು ಎಲ್ಲಾ ಮೃತ್ಯು ಲೋಕದ ಕಡೆಗೆ ಪಯಣ ಬೆಳೆಸಿದ್ದಾರೆ..
ಯಾರೊಬ್ಬರೂ ಹಿಂದಿರುಗಿ ಬಂದಿಲ್ಲ. ಅದಕ್ಕಿಂತ ಇವರ ಬದಲಿಗೆ ಇವರ ಶಿಷ್ಯರಾದ ಶ್ರೀ ಸತ್ಯತೀರ್ಥರನ್ನು  ಸಂಹರಿಸೋಣ ಎಂದು ನಿರ್ಧಾರ ಮಾಡಿ ತಕ್ಷಣ ಅವರ ಮೇಲೆ ಹಾರಿದ..
ದೇವರ ಪೆಟ್ಟಿಗೆ ಯನ್ನು ಹಿಡಿದು ಭಗವಂತನ ಮತ್ತು ತಮ್ಮ ಗುರುಗಳನ್ನು ಸ್ಮರಿಸುತ್ತಾ ಶ್ರೀ ಸತ್ಯತೀರ್ಥರು  ಎಲ್ಲರಿಗಿಂತ ಮುಂದೆ ಹೊರಟಿದ್ದಾರೆ.
ಯಾವುದೇ ಪ್ರಯಾಣ ಮಾಡಬೇಕು ಆದರೆ ದೇವರನ್ನು ಸ್ಮರಿಸುತ್ತಾ ಸಾಗಬೇಕು.ಹಾಗೆ ಮಾಡಿದರೆ ಸುರಕ್ಷಿತ ಪಯಣ ನಮ್ಮ ದಾಗುವದು.ಯಾವುದೇ ವಿಘ್ನಗಳು ಬರುವ ದಿಲ್ಲ.
ಹುಲಿಯ ರೂಪದಲ್ಲಿ ಇದ್ದ ರಕ್ಕಸ ಹಿಂದಿನಿಂದ ಅವರ ಮೇಲೆ ಎರಗಿದ.
ಎಲ್ಲಾ ಕಡೆ ವ್ಯಾಪ್ತರಾದ ವಾಯುದೇವರ ಕಣ್ಣು ತಪ್ಪಿಸಿ ದುಷ್ಟ ಕಾರ್ಯ ಮಾಡಲು ಸಾಧ್ಯವೇ??
ಪ್ರತಿಯೊಂದು ಅವರ ಕಣ್ಣಿಗೆ ಕಾಣುತ್ತದೆ. ಇನ್ನೇನು ಅವರ ಮೇಲೆ ಹುಲಿ ಬೀಳಬೇಕು!!.
ತಕ್ಷಣ ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರ ಹಸ್ತದ ಪೆಟ್ಟು ಆ ಹುಲಿಯ ತಲೆ ಮೇಲೆ ಬಿತ್ತು.
ಶ್ರೀ ಸತ್ಯತೀರ್ಥರನ್ನು ಕೊಲ್ಲಲು ಬಂದವ ಆ ತಕ್ಷಣ ಯಮಪುರಿಗೆ ಸೇರಿಬಿಟ್ಟ.
ಭೀಮಸೇನ ದೇವರ ಪ್ರಹಾರಕ್ಕೆ ಬದುಕಿ ಉಳಿದ ದುಷ್ಟ ರು ಉಂಟೇ??
ಹುಲಿ ಹಾರುವುದು ಕಂಡು ಹಿಂದೆ ಇದ್ದ ಶಿಷ್ಯ ಪರಿವಾರದಲ್ಲಿ ಗಾಭರಿ,ಭಯದ ವಾತಾವರಣ.
ಆದರೆ ತಮ್ಮ ಕೈ ಹಿಡಿದವರನ್ನು ಎಂದಿಗು ಕೈ ಬಿಟ್ಟವರಲ್ಲ ನಮ್ಮ ವಾಯುದೇವರು. 
ಅವರ ಮೂರು ಅವತಾರದಲ್ಲಿ ಸಹ ಅನೇಕ ದೃಷ್ಟಾಂತ ನೋಡಬಹುದು.
ಈ ಪ್ರಸಂಗದ ಒಳ ಅರ್ಥ ಇಷ್ಟೇ. 
ಶ್ರೀ ಸತ್ಯ ತೀರ್ಥರು ಸಾತ್ವಿಕರು.ಆಚಾರ್ಯರ ಮತವನ್ನು ಅನುಸರಿಸಿ ನಡೆಯುವವರು.ಕೈಯಲ್ಲಿ ದೇವರ ಪೆಟ್ಟಿಗೆ. ಅಂದರೆ ಭಗವಂತನ ಆರಾಧಕರು.ಸದಾ ತಮ್ಮ ಗುರುಗಳಾದ ಶ್ರೀ ಮಧ್ವಾಚಾರ್ಯರ ವಾಣಿಯನ್ನು ಅನುಸರಿಸಿ ನಡೆಯುವವರು.
ಅಂದರೆ ಯಾರು ಶ್ರೀ ಮಧ್ವಾಚಾರ್ಯರ ಮಾತನ್ನು ಅನುಸರಿಸಿ ನಡೆಯುವವರು, ನಿತ್ಯ ಭಗವಂತನ ಆರಾಧಕರಿಗೆ,ಅವನ ನಂಬಿದವರಿಗೆ ಎಂತಹ ದುಷ್ಟ ಶಕ್ತಿ ಗಳು ಬರಲಿ ಅವೆಲ್ಲವೂ ಸಂಹಾರ ಮಾಡಿ ನಿಮ್ಮ ರಕ್ಷಣೆ ಮಾಡುವೆವು ಎಂಬುದನ್ನು ಶ್ರೀ ಮಧ್ವಾಚಾರ್ಯರ ಇಲ್ಲಿ ಸೂಕ್ಷ್ಮ ವಾಗಿ ತೋರಿಸಿ ಕೊಡುತ್ತಾರೆ.
ಈ ಮೇಲಿನ ಪ್ರಸಂಗದ ಸಾಲು ಸುಮಧ್ವ ವಿಜಯದಲ್ಲಿ ದಶಮ ಅಧ್ಯಾಯ ೨೩ನೇ ಸಾಲಿನಲ್ಲಿ ಬರುತ್ತದೆ.
🙏ಶ್ರೀ ಮಧ್ವಾಚಾರ್ಯರ ಚರಿತ್ರೆಯು ನನ್ನಂತಹ ಪಾಮರನನ್ನು ಉದ್ದರಿಸಲು ಅವರೇ ನಿಂತು ಪ್ರೇರಿಸಿ,ಬರೆಸಿದ್ದು.
ಶ್ರೀ ಆನಂದತೀರ್ಥ ಗುರುಗಳ ಅಂತರ್ಯಾಮಿಯಾದ ಶ್ರೀಹರಿ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು
🙏
ಒಡೆಯನಾಜ್ಞವ ತಾಳಿ| ಕಾರ್ಯಮಾಡಿದ ಗುರುವೆ|
ಕಡು ಸಮರ್ಥ ವಿಜಯವಿಠ್ಠಲನ ನಿಜ ದಾಸ||
🙏ಅ.ವಿಜಯವಿಠ್ಠಲ🙏



****
ಇನ್ನೂ ಮೂರು ದಿನ ಮಧ್ವನವಮಿಗೆ
ಅವರ ಸ್ಮರಣೆ ಅವರ ಮೊದಲನೆಯ ಅವತಾರವಾದ ಹನುಮಂತ ದೇವರ ಸ್ಮರಣೆ ಮಾಡುತ್ತಾ..
🙏
ಅಂಜೀಕಿನ್ನ್ಯಾತಕಯ್ಯ ಸಜ್ಜನರಿಗೆ|
ಸಂಜೀವರಾಯನ ಸ್ಮರಣೆ ಮಾಡಿದ ಮೇಲೆ||

ನಮ್ಮ ಬದುಕಿಗೆ,ಉಸುರಿಗೆ ದೇವತೆಯಾಗಿದ್ದು ಸಂಜೀವಎಂದೇ ಎನಿಸಿರುವ
 ಶ್ರೀ ಮುಖ್ಯ ಪ್ರಾಣರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದಲ್ಲಿ ಯಾವುದೇ ಬಗೆಯ ಅಂಜಿಕೆಗೆ,ಆಪತ್ತಿಗೆ ಅವಕಾಶ ಇಲ್ಲ ಅಂತ ನಮ್ಮ ದಾಸವರ್ಯರು ನುಡಿದ ಹಾಗು ನೀಡಿದ ಅಭಯವಚನ..
ಮತ್ತೆ ಇದಕ್ಕೆ ಉದಾಹರಣೆ
 ನಾವು ರಾಮಾಯಣದಲ್ಲಿ ಪ್ರಸ್ತಾಪ ಮಾಡುವ ಮೈನಾಕ ಪರ್ವತ ಈ ಮಾತಿಗೆ ಉತ್ತಮ ನಿದರ್ಶನ.
ಸಮುದ್ರೊಲ್ಲಂಘನದಲ್ಲಿ ತೊಡಗಿದ್ದ ಹನುಮಂತ ದೇವರಿಗೆ,ದಾರಿಯಲ್ಲಿ ಮೈನಾಕ ಪರ್ವತ ಅಡ್ಡ ಬಂದು,ತನ್ನ ಆತಿಥ್ಯ ಸ್ವೀಕರಿಸಿ ಹೋಗಬೇಕು ಎಂದು ಪ್ರಾರ್ಥನೆ ಮಾಡುತ್ತಾರೆ. ಆದರೆ ರಾಮಕಾರ್ಯ ವಿಳಂಬವಾಗುವದು ಎನ್ನುವ ಉದ್ದೇಶದಿಂದ  ಅವನ ಆತಿಥ್ಯವನ್ನು,ಸ್ವೀಕರಿಸದೇ,ತನ್ನ ಬರಿಯ ಕೈಯಿಂದಲೇ ಅವನನ್ನು ಮುಟ್ಟಿ ಆಶೀರ್ವದಿಸಿದರು..
ಯಾವಾಗ ಸಂಜೀವ ರಾಯನ ಸ್ಪರ್ಶ ಆದಕೂಡಲೇ ಅವನ ಅಂಜಿಕೆ ದೂರವಾಯಿತು.
 ತನ್ನ ರೆಕ್ಕೆಗಳನ್ನು ತುಂಡರಿಸಿ ಹೊರಟಿದ್ದ ಇಂದ್ರನ ಕಣ್ಣು ತಪ್ಪಿಸಿಕೊಂಡು ಸಮುದ್ರ ದೊಳಗೆ ಮುಳುಗಿದ್ದ ಮೈನಾಕ ಪರ್ವತ.
ಯಾವಾಗ ಹನುಮಂತ ದೇವರಿಗೆ ಆತಿಥ್ಯ ಮಾಡಲು ನಿಂತ  ಅವನನ್ನು ಕಂಡು ದೇವೇಂದ್ರ ಬಲು ಪ್ರಸನ್ನನಾಗಿ ಅವನಿಗೆ ಅಭಯವನ್ನು ನೀಡುತ್ತಾರೆ.
ನಿನಗೆ ಯಾವುದೇ ಭಯವಿಲ್ಲ ಎಂದು ಆಶೀರ್ವದಿಸುತ್ತಾರೆ..
ಹೀಗೆ ಮೈನಾಕ ಸಂಜೀವರಾಯನ ಸೇವೆಯನ್ನು ಮಾಡಿ ತನಗೆ ಇದ್ದ ದೇವೇಂದ್ರನ ಅಂಜಿಕೆ ಕಳೆದುಕೊಂಡ..
ದೇವೇಂದ್ರನ ಅಂಜಿಕೆ ದೂರವಾದ ಮೇಲೆ,ಇತರ ಭೂತ ಪ್ರೇತಾದಿಗಳ ಭಯ, ಇತ್ಯಾದಿ, ದುಷ್ಟ ಜನರ ಭಯ ಸಹ ದೂರವಾಗುವದು. ಎಂಬುದಕ್ಕೆ ಸಂದೇಹವಿಲ್ಲ ..
ಅದಕ್ಕೆ ದಾಸರು ಹೇಳಿದ್ದು
ಅಂಜಿಕೆ ಇನ್ಯಾತಕಯ್ಯ ಅಂತ..
 .ಇನ್ನೂ ನಾವು  ಅಂಜಿಕೆಯನ್ನು ಕಳೆದುಕೊಳ್ಳುವ ಹಾದಿಯಲ್ಲಿ ಸಾಗೋಣವೇ.
ಅವರ ಪಾದವನ್ನು ಹಿಡಿಯೋಣವೇ..
🙏
ಮರುತಾ ನಿನ್ನ ಮಹಿಮೆ ಪರಿ ಪರಿಯಿಂದ ತಿಳಿದು|
ಚರಿಸಿದ ಮನುಜಗೆ ದುರಿತ ಬಾಧೆಗಳ್ಯಾಕೆ|

🙏ಅ.ವಿಜಯವಿಠ್ಠಲ 
***
ಇಂದಿಗೆ ಎರಡು ದಿನ ಮಧ್ವ ನವಮಿಗೆ.
ಒಂದು ದಿನ ಬಾಲಕ ವಾಸುದೇವ ತನ್ನ ಸಹಪಾಠಿಗಳು ಜೊತೆಯಲ್ಲಿ ಸಮಿತ್ತು ತರಲು ಕಾಡಿಗೆ ಹೊರಟ.ಪಾಠದ ನಂತರ ಬಿಡುವಿನ ಸಮಯದಲ್ಲಿ ಈ ಕೆಲಸ.
ಸಹಪಾಠಿಗಳು ಜೊತೆಯಲ್ಲಿ ಅವರ ಗುರು ಪುತ್ರ ನಿದ್ದ.ಅವನ ಹೆಸರು ಸಹ ವಾಸುದೇವ.ಆಶ್ರಮಕ್ಕೆ ಹಿಂತಿರುಗಬೇಕು ಆ ಸಮಯದಲ್ಲಿ ಗುರುಪುತ್ರ ತಲೆನೋವಿನ ಭಾದೆಯಿಂದ ಬಳಲುತ್ತಾ ಚೀರುತ್ತಾ ನೆಲಕ್ಕೆ ಒರಗಿದ.ಅದು ಅವನಿಗೆ ಹುಟ್ಟಿದಾರಭ್ಯದಿಂದ ಬಂದ ರೋಗ. ಯಾವಾಗ ಬರುವದು ಹೋಗುವದು ಸಹ ಗೊತ್ತಿಲ್ಲ.ಅದರ ಭಾದೆ ಮಾತ್ರ ಅವನಿಗೆ ಹೇಳತೀರದು.
ಅವನ ಪುಣ್ಯ ಇಷ್ಟು ಸಾರಿ ತಲೆನೋವು ಬಂದಾಗ ವಾಸುದೇವ ಅವನ ಜೊತೆಗೆ ಇದ್ದಿಲ್ಲ.
ತಕ್ಷಣ ಅವನ ಬಳಿ ಧಾವಿಸಿದ ಬಾಲಕ ವಾಸುದೇವ ಅವನ ಕಿವಿಯಲ್ಲಿ ಜೋರಾಗಿ ಒಮ್ಮೆ  ಗಾಳಿಯನ್ನು ಊದಿದ
ಏನಾಶ್ಚರ್ಯ!!ತಕ್ಷಣ ಗುರುಪುತ್ರ  ಎದ್ದು ಕುಳಿತ.ಅಂದಿನಿಂದ ಅವನು ಜೀವನದ ಉದ್ದಕ್ಕೂ ತಲೆನೋವು ಇಂದ ಬಳಲಲಿಲ್ಲ.ಅದು ಸಹ ಅವನ ಹತ್ತಿರ ಬರಲಿಲ್ಲ.
ತಲೆನೋವು ಕಳೆಯಿತು.ವಾಯುದೇವರ ಅನುಗ್ರಹದಿಂದ ಅವನು ದೊಡ್ಡ ಮೇಧಾವಿ ಎಂದು ಎನಿಸಿದ. 
ತಲೆ ನೋವು ಬರಲು ಕಾರಣ ಮಾನಸಿಕ ಗೊಂದಲ ಅಥವಾ ಒತ್ತಡ ದಿಂದಾಗಿ.
ಸಂಸಾರ ಚಿಂತನೆ ಯಲ್ಲಿ ಮುಳುಗಿದ ನಮ್ಮಂತಹವರಿಗೆ ಭಗವಂತನ ಕುರಿತು ಚಿಂತನೆ ಮಾಡುವುದಕ್ಕಾಗಿ ಸಮಯ ಇಲ್ಲ. ಹಾಗಾಗಿ ನಮಗೆಲ್ಲ ಸಹ ತಲೆ ನೋವು ಬಹಳ.
ನಮ್ಮ ಪ್ರಾರಬ್ಧ ಕರ್ಮದ ಫಲವೆ  ರೋಗಗಳು
ಯಾವುದೊ ಜನ್ಮದ ಪ್ರಾರಬ್ಧ ಫಲದಿಂದ ಗುರು ಪುತ್ರ ನಿಗೆ ಬಂದ ತಲೆನೋವನ್ನು,ಅವರ ಪಾಪಗಳನ್ನು ಪರಿಹರಿಸಿದವರು ವಾಯುದೇವರು.
ಅವನಿಗೆ ತಲಿಶೂಲಿ ಹುಟ್ಟಿದ ದಿನದಿಂದ ಇದ್ದರೆ,ನಮಗು ಸಹ ಸಂಸಾರ ಶೂಲಿ ಅನಾದಿಯಾಗಿ ಕಾಡುತ್ತಿದೆ ..ಇದರಿಂದ ಹೇಗೆ ಆ ಬಾಲಕ ಅವರ ಜೊತೆ ಇದ್ದು ಪಾರಾದನೋ,ಹೇಗೆ ಶ್ರೀಮಧ್ವರು ಅವನ ಕಿವಿಯನ್ನು ಊದಿ ಅವನ ರೋಗ ಪರಿಹರಿಸಿದರೋ,ಹಾಗೆಯೇ ನಾವು ಅವರ ಗ್ರಂಥವನ್ನು, ಅವರ ವಾಣಿಯನ್ನು ಶ್ರವಣಮಾಡಿ,ಅದನ್ನು ಅನುಸರಿಸಿದರೆ,ಅವರ ಶಬ್ದಗಳನ್ನು ನಮ್ಮ ಕಿವಿಯಲ್ಲಿ ಕೇಳಿದರೆ,ಅವರು ನಮ್ಮ ಕಿವಿಗಳನ್ನು ಊದಿದಂತಾಗಿ ನಮ್ಮ ಸಂಸಾರಶೂಲಿಯನ್ನೆ ಪರಿಹರಿಸಬಲ್ಲರು..
ಅದರಿಂದ ನಾವುಗಳು ಮಧ್ವಮತವನ್ನು ಬಿಡದೇ,ಶ್ರೀಮಧ್ವಾಚಾರ್ಯರ ವಾಣಿಯನ್ನು  ನಿತ್ಯವು ಶ್ರವಣ ಮಾಡುತ್ತಾ ಇರುವ ಹಾಗೇ,ಅವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವ ..
ಅವರನ್ನು ಉದಾಸೀನ ಮಾಡಿದರೆ ಹರಿಯ ಅನುಗ್ರಹ ಬಹು ಕಠಿಣ
ಅವರ ಅನುಗ್ರಹ ನಮಗೆಲ್ಲ ಸದಾ ಕಾಲ ಇರಲಿ ಎಂದು ಪ್ರಾರ್ಥಿಸಿ ವಾಯುದೇವರ ಅಂತರ್ಯಾಮಿಯಾದ ಶ್ರೀ ಹರಿಗೆ ಈ ಚರಿತ್ರೆ ಸಮರ್ಪಣೆ ಮಾಡುತ್ತಾ ಶ್ರೀ ಕೃಷ್ಣಾರ್ಪಣಮಸ್ತು.
🙏
ಒಡೆಯನಾಜ್ಞವ ತಾಳಿ| ಕಾರ್ಯಮಾಡಿದ ಗುರುವೆ|
ಕಡು ಸಮರ್ಥ ವಿಜಯವಿಠ್ಠಲನ  ನಿಜ ದಾಸ||

🙏ಅ.ವಿಜಯವಿಠ್ಠಲ
*****
ಮರುತದೇವನೆ ಅವತರಿಸಿದ ಹರುಷದಲಿ|
ಕರುಣಾಕರ ಮೂರ್ತಿ ವಿಜಯವಿಠ್ಠಲ ರೇಯ|
ಪರನೆಂದು ಸಾರಿ ಧರೆಯೊಳಗೆ ಮೆರೆದ||
ನಾಳೆಯೆ ಮಧ್ವನವಮಿ.
ಸಂಕ್ರಮಣ ಉತ್ಸವದ ಕಾಲ ಉಡುಪಿಯಲ್ಲಿ. ಅನಂತೇಶ್ವರನ ಬಳಿ ವಿಶೇಷ ಉತ್ಸವ ಗಳನ್ನು ಮುಗಿಸಿಕೊಂಡು ಪಾಜಕಕ್ಕೆ ಹಿಂತಿರುಗುವ ಸಮಯ.ಮಧ್ಯ ರಾತ್ರಿ ಆಗಿದೆ.ಆ ಕತ್ತಲಲ್ಲು ಸಹ ಊರಿಗೆ ಹಿಂತಿರುಗಬೇಕು ಎನ್ನುವ ತವಕ.
ಮೇಲಾಗಿ ದೈವ ಪ್ರೇರಣೆ.
ಬಾಲಕ ವಾಸುದೇವನ ಜೊತೆಯಲ್ಲಿ  ಮಧ್ಯಗೇಹಭಟ್ಟರು ತಮ್ಮ ಪರಿವಾರದ ಸಮೇತ ನಡುರಾತ್ರಿಯಲ್ಲಿ ಹೊರಟಿದ್ದಾರೆ.
ಮೊದಲೇ ಆ ಜಾಗ ಸರಿ ಇಲ್ಲ.ಭೂತ ಪ್ರೇತಗಳು ತಿರುಗಾಡುವ ಸಮಯ.ಆದರು ಧೈರ್ಯದಿಂದ ಮುಂದೆ ಹೆಜ್ಜೆಗಳನ್ನು ಹಾಕುತ್ತಾ ಇದ್ದಾರೆ.ಇದ್ದಕ್ಕಿದ್ದಂತೆ ಅವರ ಗುಂಪಿನಲ್ಲಿ ಇದ್ದ ಒಬ್ಬ ವ್ಯಕ್ತಿ ರಕ್ತವನ್ನು ಕಾರುತ್ತಾ ಕೆಳಗಡೆ ಬಿದ್ದ.
ಉಳಿದವರು ಅಂದುಕೊಂಡರು.ಇದು ಭೂತ ಚೇಷ್ಟೆ.ಪುಟ್ಟ ಬಾಲಕನಾದ ವಾಸುದೇವನಿಗೆ ಭೂತ ಚೇಷ್ಟೆ ಮಾಡಲಿಲ್ಲ. ಸುರಕ್ಷಿತವಾಗಿ ಇದ್ದಾನೆ.ಬಹುಶಃ ನಮ್ಮ ಪುಣ್ಯ ದ ಫಲ ಅಂತ ಅಂದುಕೊಂಡರು.
ಹನುಮಾವತಾರದಲ್ಲಿ ರಕ್ಕಸ ಕುಲ ಸಂಹಾರ ಮಾಡಿದವರಿಗೆ ಭೂತದ ಭಯವೇ!!
ಕೆಳಗಡೆ ಬಿದ್ದ ವ್ಯಕ್ತಿಯ ಒಳಗಡೆ ಪ್ರವೇಶಿಸಿದ ಭೂತ ಹೇಳಿತು.
ಈ ಹೊತ್ತಿನಲ್ಲಿ ನಿಮ್ಮದು ಎಂತಹ ಸಾಹಸ??ಇದು ನಮ್ಮ ಸ್ಥಳ.ನಾವುಗಳು ತಿರುಗಾಡುವ ಸಮಯ ಇದು.
ಮಧ್ಯರಾತ್ರಿಯಲ್ಲಿ ಇಲ್ಲಿ ಬಂದವರಾರು ಹಿಂದಿರುಗಿ ಹೋದದ್ದು ಇಲ್ಲವೇ ಇಲ್ಲ.ಪ್ರಾಣಕ್ಕೆ ಸಂಚಕಾರ.ಅಂತಹುದರಲ್ಲಿ ನೀವು ಎಲ್ಲರುಹೊರಟಿದ್ದೀರಿ .
ನಿಮಗೆ ಪ್ರಾಣಕ್ಕೆ ಸಂಚಕಾರ ವಾಗದೇ ಇದ್ದುದ್ದು ಆ ಬಾಲಕನ ಸಾಮರ್ಥ್ಯ ದಿಂದ.ಆ ಬಾಲಕ ಇರದಿದ್ದರೆ ನಿಮ್ಮ ಎಲ್ಲರ ಪ್ರಾಣಹರಣ ವಾಗುತ್ತಾ ಇತ್ತು.
ಸಾಮಾನ್ಯ ಬಾಲಕನಲ್ಲ ಇವನು.ಅಂತ ಹೇಳಿ ಆ ಪಿಶಾಚಿ ಅವನ ಮೈಯಿಂದ ತೊಲಗಿತು.
ಅವಾಗ ಎಲ್ಲರು ಅಂದುಕೊಂಡರು!!.
ನಮ್ಮ ಪುಣ್ಯ ದಿಂದ ಬಾಲಕ ವಾಸುದೇವ ನಿಗೆ ಏನಾಗಲಿಲ್ಲ ಅಂತ ಅಂದುಕೊಂಡಿದ್ದು ನಮ್ಮ ಭ್ರಮೆ.
ಆ ಮಗುವಾದ ವಾಸುದೇವನ ದಯೆಇಂದ ನಮ್ಮ ಪ್ರಾಣ ಉಳಿದಿದ್ದು ಅಂತ.
ಸಾಕ್ಷಾತ್ ಪ್ರಾಣದೇವರು ಜೊತೆಯಲ್ಲಿ ಇರಬೇಕು ಆದರೆ ಭೂತ ಪಿಶಾಚಿ ಗಳ ಭಾದೆಯೆ.??
ಇದು ಬಾಲಕನಾಗಿದ್ದಾಗ ಶ್ರೀ ಮಧ್ವಾಚಾರ್ಯರು ತೋರಿಸಿದ ಮಹಿಮೆ.
ಅವರ ಸನ್ನಿಧಾನ ಮಾತ್ರ ದಿಂದ ದೊಡ್ಡ ಆಪತ್ತು ಇಂದ ಅವರೆಲ್ಲರೂ ಪಾರಾಗಿದ್ದರು.
ಅಂದರೆ ವಾಯುದೇವರ ಜೊತೆಯಲ್ಲಿ ಇದ್ದ ಮಧ್ಯಗೇಹ ಭಟ್ಟರು ಮತ್ತು ಅವರ ಪರಿವಾರ ಸುರಕ್ಷಿತವಾಗಿ ಊರು ತಲುಪಿದರು.
ಇನ್ನೊಂದು ಉದಾಹರಣೆ.👇

ಮಹಾಭಾರತ ಯುದ್ಧದ ಆರಂಭದಲ್ಲಿ ದುರ್ಯೋಧನ ದ್ರೋಣರ ಬಳಿ ಬಂದು ಹೇಳುವ. 
ಗುರುಗಳೇ!!ಪಾಂಡವ ಸೇನೆ ಎಷ್ಟು ಅದ್ಬುತ!! ಇದಕ್ಕೆ ಭೀಮನ ರಕ್ಷಣೆ. ಮತ್ತು ಜೊತೆಯಲ್ಲಿ ಕೃಷ್ಣ. 
ಭೀಮನ ಬಲಕ್ಕೆ ಸರಿಸಮನಾದವರು ಯಾರು ಇಲ್ಲ. ಪಿತಾಮಹನಾದ ಭೀಷ್ಮರ ಬಲವು  ಸಮನಾಗುವುದಿಲ್ಲ.
ಭೀಮನಂತಹ ಶಕ್ತಿ ವುಳ್ಳವರು ನಮ್ಮ ಪರಿವಾರದಲ್ಲಿ ಒಬ್ಬರು ಸಹ ಇಲ್ಲ. 
ಇದೇ ಭೀಮಸೇನ ಹಿಂದೆ
ಉಳಿದ  ಪಾಂಡವ ಸಹೋದರರನ್ನು ಅರಗಿನ ಮನೆಯಲ್ಲಿ,ಅರಣ್ಯದಲ್ಲಿ ಕಾಪಾಡಿದ್ದು.
ಇವನ ರಕ್ಷಣೆ ಯಲ್ಲಿ ಯಾರು ಇರುತ್ತಾರೆ ಅವರಿಗೆ ಏನು ಮಾಡಲು ಆಗುವುದಿಲ್ಲ ವಲ್ಲ. ಇದೆ ನನ್ನ ವ್ಯಥೆ..

ಮೊದಲ ಘಟನೆ ಯಲ್ಲಿ 
ಪಿಶಾಚಿ ನುಡಿದದ್ದು.. ಬಾಲಕನ ಜೊತೆಯಲ್ಲಿ ನೀವು ಗಳು ಇದ್ದ ಕಾರಣ ನಿಮಗೆ ಏನು ಆಗಲಿಲ್ಲ ಅಂತ.

ಎರಡನೇ ಘಟನೆ ಯಲ್ಲಿ ದುರ್ಯೋಧನ ಹೇಳಿದ್ದು.. ಭೀಮಸೇನ ಇರುವವರೆಗೆ ಯಾರಿಗೂ ಏನು ಮಾಡಲು ಆಗುವುದಿಲ್ಲ ಅಂತ.
ಅಂದರೆ 
ವಾಯುದೇವರ ಕೃಪೆ ಮತ್ತು ಅವರ ರಕ್ಷಣೆ ಯಲ್ಲಿ ಯಾರು ಇದ್ದಾರೆ ಅವರಿಗೆ ಯಾರಿಂದ ಏನು ಆಗುವುದಿಲ್ಲ ಅಂತ ಈ ಎರಡು ಘಟನೆಗಳು ತೋರಿಸುತ್ತದೆ.
ಇನ್ನೂ ಅಸಂಖ್ಯಾತ ಉದಾಹರಣೆಗಳು ರಾಮಾಯಣ ಮಹಾಭಾರತ ಮತ್ತು ಶ್ರೀ ಮಧ್ವಾಚಾರ್ಯರ ಜೀವನ ಚರಿತ್ರೆ ಯಲ್ಲಿ ನೋಡಬಹುದು.

ಆವಾವ ಲೋಕದೊಳಗೆ  ನಿನಗೆ ಪ್ರತಿಭಟರಿಲ್ಲ|
ಆವಾವ ಲೋಕ ಗಳು ನೀನು ಅರಿಯದವಲ್ಲ|
ಚೆನ್ನ ಮೂರುತಿ ವೇಣುಗೋಪಾಲ ವಿಠ್ಠಲ| 
ನಿನ್ನಾಧೀನದಿ ಜಗದ ವ್ಯಾಪಾರ ಗೈಸುವ||
******

No comments:

Post a Comment