Tuesday, 1 January 2019

ರಾಯರು 01 ಮಹಿಮೆ ರಾಘವೇಂದ್ರ ಸ್ವಾಮಿ rayaru 01 mahime raghavendra swamy



ಶ್ರೀ ರಾಯರ ಆರಾಧನಾ ಲೇಖನ ಮಾಲೆ - ೧ "

" ಧರೆಗಿಳಿದ ಕಾಮಧೇನು ಶ್ರೀ ಮಂತ್ರಾಲಯ ಪ್ರಭುಗಳು "
[ ದಿನಾಂಕ : 27, 28 ಮತ್ತು 29ನೇ ಆಗಸ್ಟ್ 2018 ವರೆಗೆ ಅತಿ ವೈಭವದಿಂದ ನಡೆಯುವ ಶ್ರೀ ರಾಘವೇಂದ್ರತೀರ್ಥರ 348ನೇ ಆರಾಧನಾ ಮತ್ತು 347ನೇ ಆರಾಧನಾ ಮಹೋತ್ಸವ ವಿಶೇಷ ]

ಶ್ರೀ ರಾಯರು ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ್ದು : ಕ್ರಿ ಶ 1671

( ಪ್ರಪ್ರಥಮ ಆರಾಧನಾ ಮಹೋತ್ಸವ ಶ್ರೀ ಯೋಗೀ೦ದ್ರತೀರ್ಥರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನೆರವೇರಿತು )

ಕ್ರಿ ಶ : 1671 to 1700 = 030 ಆರಾಧನಾ ಮಹೋತ್ಸವಗಳು
ಕ್ರಿ ಶ : 1701 to 2018 = 318 ಆರಾಧನಾ ಮಹೋತ್ಸವಗಳು
----------------------------------------------------------------------
ಕ್ರಿ ಶ : 2018ರಲ್ಲಿ ಜರುಗುವ ಶ್ರೀ ರಾಯರ  348ನೇ ಆರಾಧನಾ ಮತ್ತು 347ನೇ ವರ್ಷದ ಆರಾಧನಾ ಮಹೋತ್ಸವ ಆಗುತ್ತದೆ.

*******************

ರಚನೆ :  ಹುಯಿಲಗೋಳ ಶ್ರೀ ನಾರಾಯಣರಾಯರು
ವೃತ್ತಿ : ವಕೀಲರು
ಕಾಲ :ಕ್ರಿ ಶ 1884 - 1971
ಸ್ಥಳ : ಹುಯಿಲಗೋಳ  ಜಿಲ್ಲೆ : ಗದಗ
ಅಂಕಿತ : ಗದುಗಿನ ವೀರ ನಾರಾಯಣ

ರಾಗ : ಷಣ್ಮುಖಪ್ರಿಯ         ತಾಳ : ಆದಿ

ಕೋಪವೇತಕೆ ಬಂದಿತೆನ್ನೊಳು ರಾಯರೇ ಗುರುರಾಯರೇ ।। ಪಲ್ಲವಿ ।।

ತಾಪವಿನ್ನಿದು ಮನವು ಹಿಡಿದುದು ।
ಪಾಪಿಯೆನ್ನೆನು ಕ್ಷಮಿಸಲಾರಿರಾ ।। ಅ ಪ ।।

ಕರುವು ತಾಯನು ನೋಡ ಬರಲೊಡೆ ।
ಕರೆದುಕೊಳ್ಳದೆ ದೂಡಬಹುದೇ ।
ಭರದಿ ದರುಶನಕೆಂದು ಧಾವಿಸೆ ।
ಬರಲು ಬರಗೊಡದಂತೆ ಮಾಡಿದೆ ।। ಚರಣ ।।

ದ್ರೋಹ ಮಾಡಿದೆನೇನು ನಿಮ್ಮೊಳು ।
ದ್ರೋಹ ಮಾಡಿದುದನ್ನು ತಿಳಿಯೆನು ।
ದ್ರೋಹಿಯಾದೊಡೆ ಕ್ಷಮಿಸದೆನ್ನನು ।
ಸ್ನೇಹದಿಂದೆನ್ನೆತ್ತಿಕೊಳ್ಳದೆ ।। ಚರಣ ।।

ಹಣದೊಳಾಶೆಯನಿಟ್ಟೆನೆಂದೊಡೆ ।
ಹಣವು ಸಂಸಾರಿಗಗೆ ಬೇಡವೇ ।
ಸೆಣಿಸಿ ಗದುಗಿನ ವೀರ ನಾರಾ ।
ಯಣ ಭಕುತರ ಸಲುಹದೇ ।। ಚರಣ ।।

" ಪ್ರಸ್ತಾವನೆ "

" ಶ್ರೀ ಆಹ್ಲಾದಾಂಶ ಅಪ್ಪಣ್ಣಾಚಾರ್ಯರು..

ತಪ್ತ ಕಾಂಚನ ಸಂಕಾಶಂ ಅಕ್ಷಮಾಲಾಂ ಕಮಂಡಲು೦ ।
ದೋರ್ಭ್ಯಾ೦ ದಧಾನಂ ಕಾಷಾಯ ವಸನಂ ರಾಮ ಮಾನಸಮ್ ।।
ಯೋಗೀ೦ದ್ರತೀರ್ಥ ವಂದ್ಯಾ೦ಘ್ರಿಂ ತುಳಸೀ ಹಾರ ಭೂಷಿತಂ ।
ಜ್ಞಾನ ಭಕ್ತಿ ತಪಃ ಪೂರ್ಣ೦ ಧ್ಯಾಯೇದಿಷ್ಟಾರ್ಥ ಸಿದ್ಧಯೇ ।।

ಕಾದ ಬಂಗಾರದ೦ತೆ ಶರೀರ ಶೋಭೆಯಿಂದ ರಾರಾಜಿಸುವವರೂ; ಎರಡೂ ಕರಗಳಲ್ಲಿ ಕಮಲಾಕ್ಷೆ ಮಾಲೆ ಮತ್ತು ಕಮಂಡಲುಗಳನ್ನು ಧರಿಸಿರುವವರೂ; ಕಾಷಾಯಾ೦ಬರ ಧಾರಿಗಳೂ; ಮನದಲ್ಲಿ ಶ್ರೀ ಮೂಲರಾಮ ವಿರಾಜಿತರೂ; ಶ್ರೀ ಯೋಗೀ೦ದ್ರತೀರ್ಥರಿಂದ ವಂದಿತ ಪಾದಾಬ್ಜರೂ; ತುಳಸೀ ಮಣಿ ಮಾಲೆಗಳಿಂದ ವಿಭೂಷಿತರೂ; ಶ್ರೀ ಭಗವದ್ಭಕ್ತಿ - ಜ್ಞಾನ - ತಪಸ್ಸುಗಳಿಂದ ಪರಿಪೂರ್ಣರೂ ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಇಷ್ಟಾರ್ಥ ಸಿದ್ಧಿಗಾಗಿ ಧ್ಯಾನಿಸಬೇಕು!!

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸಶರೀರರಾಗಿ ಬೃಂದಾವನ ಪ್ರವೇಶ ಮಾಡುವ ಮೊದಲು ಶ್ರೀ ಕ್ಷೇತ್ರ ಮಂತ್ರಾಲಯದ ಕ್ಷೇತ್ರ ದೇವತೆಯಾದ ಶ್ರೀ ದುರ್ಗಾ ರೂಪಿ ಶ್ರೀ ಮಂಚಾಲಮ್ಮನ ಸನ್ನಿಧಾನದಲ್ಲಿ ಶ್ರಾವಣ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು " ಶ್ರೀ ವರಮಹಾಲಕ್ಷ್ಮೀ ವ್ರತ " ವನ್ನು ವಿಶೇಷ ಪೂಜೆಯನ್ನು ಮಾಡಿ, ಜಗನ್ಮಾತೆಯಾದ ಶ್ರೀ ದುರ್ಗಾದೇವಿ ( ಶ್ರೀ ಮಂಚಾಲಮ್ಮ ) ಯನ್ನು ತದೇಕ ಚಿತ್ತದಿಂದ ನೋಡುತ್ತಾ ಹೃದಯ ತುಂಬಿ ಆನಂದ ಭಾಷ್ಪ ಸುರಿಸುತ್ತಾ...

ನಮೋಸ್ತು ವರದೇ ಕೃಷ್ಣೇ ಕೌಮಾರಿ ಬ್ರಹ್ಮಚಾರಿಣೀ ।
ಬಾಲಾರ್ಕ ಸದೃಶಾಕಾಯೇ ಪೂರ್ಣಚಂದ್ರ ನಿಭಾನನೇ ।।

ಭಾಸಿ ದೇವಿ ಯಥಾ ಪದ್ಮಾ ನಾರಾಯಣ ಪರಿಗ್ರಹಾ ।
ಸ್ವರೂಪೇ ಬ್ರಹ್ಮಚರ್ಯ೦ ಚ ವಿಷದಂ ತವ ಖೇಚರಿ ।।

ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ ।
ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈ: ಪೂಜ್ಯಸೇಪಿ ಚ ।।

ತ್ರೈಲೋಕ್ಯ ರಕ್ಷಣಾರ್ಥಾಯ ಮಹಿಷಾಸುರನಾಶಿನಿ ।
ಪ್ರಸನ್ನಾ ಮೇ ಸುರಶ್ರೇಷ್ಟೇ ದಯಾ೦ ಕುರು ಶಿವಾ ಭವ ।।

ಪ್ರಣಮಂತಿ ಚ ಯೇ ತ್ವಾ೦ ಹಿ ಪ್ರಭಾತೇ ತು ನರಾ ಭುವಿ ।
ನ ತೇಷಾ೦ ದುರ್ಲಭಂ ಕಿಂಚಿತ್ ಪುತ್ರತೋ ಧನತೋಪಿ ವಾ ।।

ದುರ್ಗಾತ್ತಾರಯಸೇ ದುರ್ಗೇ ತತ್ತ್ವಂ ದುರ್ಗಾಸ್ಮೃತಾ ಬುಧೈ: ।
ತ್ವಂ ಕೀರ್ತಿ: ಶ್ರೀರ್ಧೃತಿ: ಸಿದ್ಧಿ ರ್ಹ್ರೀ ವಿದ್ಯಾ ಸಂತತಿರ್ಮತಿ: ।।

ಸಂಧ್ಯಾ ರಾತ್ರಿ: ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿ: ಕ್ಷಮಾ ।
ದಯಾ೦ ಪ್ರಣತಶ್ಚ ತಥಾ ಮೂರ್ಧ್ನಿ ತವ ದೇವಿ ಸುರೇಶ್ವರೀ ।।

ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯಾಸತ್ಯ ಭವಸ್ವ ನಃ ।
ಶರಣಂ ಭವ ಮೇ ಶರಣ್ಯೇ ಭಕ್ತವತ್ಸಲೇ ।।

ಎಂದು ಶ್ರೀ ಗುರುಸಾರ್ವಭೌಮರು ಶ್ರೀ ದುರ್ಗಾದೇವಿ ( ಶ್ರೀ ಮಂಚಾಲಮ್ಮ ) ಯನ್ನು ಭಕ್ತಿಯಿಂದ ಪ್ರಾರ್ಥಿಸಲು ಜಗನ್ಮಾತೆಯಾದ ಶ್ರೀ ದುರ್ಗಾದೇವಿಯು ಪ್ರತ್ಯಕ್ಷಳಾಗಿ " ವತ್ಸಾ! ನಿನ್ನ ಸ್ತೋತ್ರದಿಂದ ನಾನು ಸಂತುಷ್ಟಳಾಗಿದ್ದೇನೆ. ನನ್ನ ಪತಿಯೇ ( ಶ್ರೀ ಹರಿಯೇ ) ನಿನ್ನ ಭಕ್ತಿಗೆ ಮೆಚ್ಚಿ ಕಂಬದಿಂದ ಪ್ರಾದುರ್ಭವಿಸಿ ಕ್ಷಣ ಬಿಡದೇ ನಿನ್ನಲ್ಲಿ ನೆಲೆನಿಂತಿದ್ದಾನೆಂದ ಮೇಲೆ ನಾನು ನಿನ್ನಲ್ಲಿ ಅನುಗ್ರಹ ಮಾಡುವುದು ಸ್ವಾಭಾವಿಕವೇ ಆಗಿದೆ.

ಹಿಂದೆ ನಿನ್ನ ಮನೆತನಕ್ಕೆ ( ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕಾವತಾರದಲ್ಲಿ ) ನಾನೇ ( ಶ್ರೀ ದುರ್ಗಾ ) ಕುಲದೇವತೆಯಾಗಿದ್ದಾಗಲೂ ನೀನು ನನ್ನನ್ನು ಭಕ್ತಿಯಿಂದ ಆರಾಧಿಸಿದೆ. ಈಗಲೂ ನೀನು ನನ್ನನ್ನು ನಿನ್ನ ಕುಲದೇವತೆಯನ್ನಾಗಿ ಮಾಡಿಕೊ. ನಿನ್ನ ಕಾರ್ಯಕ್ಕೆ ನಾನು ಯಾವಾಗಲೂ ಬೆಂಗಾವಲಾಗಿರುತ್ತೇನೆ.

ಮುಂದೆ ಧರ್ಮವು ಸಂಪೂರ್ಣ ಗ್ಲಾನಿಯಾಗುವ ಸ್ಥಿತಿ ಬಂದಾಗ ನಾನೇ ಅವತರಿಸಿ ಬಂದು ಧರ್ಮ ಸಂಸ್ಥಾಪನೆ ಮಾಡಬೇಕೆಂದು ನನ್ನ ಪತಿಯ ( ಶ್ರೀ ಹರಿಯ ) ಆಜ್ಞೆಯಾಗಿದೆ. ಅಲ್ಲಿಯವರೆಗೂ ಧರ್ಮ ರಕ್ಷಣೆಯ ಭಾರ ನಿನ್ನಂತವರ ಮೇಲೆ ಬಿದ್ದಿದೆ.

ಗುರುರಾಧ್ಯ: ಸ್ವಸಿದ್ಧಾಂತಪ್ರತಿಷ್ಠಾಪನಪಂಡಿತಮ್ ।
ಶ್ರುತ್ವಾಯಂ ವ್ಯಾಸನಿಕಟೇ ನಿಶ್ಚಿಂತ ಇವ ವರ್ತತೇ ।।

ಆದ್ದರಿಂದ ನಮ್ಮಿಬ್ಬರ ( ಶ್ರೀ ದುರ್ಗಾ ಮತ್ತು ಶ್ರೀ ರಾಯರ ) ಕಾರ್ಯ ಮತ್ತು ಗುರಿ ಒಂದೇ. ವಾಯುದೇವರು ನಿನ್ನೊಳು ನಿತ್ಯಾವೇಶಯುಕ್ತನಾಗಿದ್ದರಿಂದಲೂ; ವಾಯುದೇವರ ಸಂಪೂರ್ಣ ಸಹಾಯವಿರುವುದರಿಂದಲೂ ನಿನ್ನಿಂದ ಅಸಾಧಾರಣವಾದ ಕಾರ್ಯಗಳಾಗತಕ್ಕಳದ್ದಾಗಿದೆ.

" ಬ್ರಹ್ಮಕಾಂಡ " ದಲ್ಲಿ...

ವಾಯೂನಾ ಚ ಸಮಾವಿಷ್ಟಂ ಹರೇಃ ಪಾದಾಬ್ಜ ಸಂಶಯಂ ।

" ಶ್ರೀ ಮನ್ಮಧ್ವಾಚಾರ್ಯ ನಿರ್ಣಯೋಕ್ತಿ "....

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಎಂದರೆ....

ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್ ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।

ನಿತ್ಯ ಪದಕ್ಕೆ ಅರ್ಥವೇನೆಂದರೆ..

ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!

ನಾನು ( ಶ್ರೀ ದುರ್ಗಾ ರೂಪಿ ಶ್ರೀ ಮಂಚಾಲಮ್ಮ ) ನಿನ್ನನ್ನು ( ಶ್ರೀ ರಾಯರನ್ನು ) ಮುಂದು ಮಾಡಿಕೊಂಡು ಇಲ್ಲೇ ಶ್ರೀ ಕ್ಷೇತ್ರ ಮಂಚಾಲೆಯಲ್ಲೇ ವಾಸವಾಗಿರುತ್ತೇನೆ.

ನೀನು ( ಶ್ರೀ ರಾಯರು ) ಮಾತ್ರ ನನ್ನ ಲಾಂಛನವಾದ ಮೇಷ ಮಸ್ತಕಗಳನ್ನು ನಿನ್ನ ಮಠದ ಮುಂದಿನ ಬಾಗಿಲಿಗೆ ನಿನಗೆ ಎದುರಾಗಿ ಪ್ರತಿಷ್ಠಾಪಿಸು. ಅದು ಎಲ್ಲಾ ಅಸುರೀ ಶಕ್ತಿಗಳಿಗೂ ಪ್ರತಿಬಂಧಕ ರೂಪವಾದುದು. ಇದಲ್ಲದೆ ನಿನ್ನಿಂದ ( ಶ್ರೀ ರಾಯರಿಂದ ) ನಾನೇನನ್ನೂ ( ಶ್ರೀ ಮಂಚಾಲಮ್ಮ ) ಅಪೇಕ್ಷಿಸುವುದಿಲ್ಲ ಎಂದು ಹೇಳಿ ಅಭಯವಿತ್ತು ಅದೃಶ್ಯಳಾದಳು!!

ಜಗನ್ನಾಥನಾದ ಶ್ರೀ ಹರಿಯಿಂದ ನಿಯುಕ್ತರಾದ ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಯರು ತಮ್ಮ ಕಾರ್ಯ ಸಾಧನೆಯಲ್ಲಿ ಜಗನ್ಮಾತೆಯಾದ ಶ್ರೀ ದುರ್ಗಾ ರೂಪಿ ಮಂಚಾಲಮ್ಮನವರ ಬೆಂಬಲ ಪೂರ್ಣವಾಗಿರುವುದನ್ನು ತಿಳಿದು ಅತ್ಯಾನಂದವಾಯಿತು. ಈ ಎಲ್ಲವೂ ಶ್ರೀ ಹರಿಯ ಪರಮಾನುಗ್ರಹವೆಂದು ತಿಳಿದು ತಮ್ಮ ಉಪಾಸ್ಯಮೂರ್ತಿಯಾದ ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಶ್ರೀ ಮೂಲರಾಮನನ್ನು ಸ್ಮರಿಸಿದರು!!

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು " ವಿರೋಧಿಕೃತ್ ಶ್ರಾವಣ ಬಹುಳ ದ್ವಿತೀಯಾ ( ಬಿದಿಗೆ ) ದಿವಸ ಸಶರೀರರಾಗಿ ಕ್ರಿ ಶ 1671 ರಲ್ಲಿ ಬೃಂದಾವನ ಪ್ರವೇಶ ಮಾಡಿ ತಮ್ಮನ್ನು ನಂಬಿಬಂದ ಭಕ್ತರನ್ನು ಕಲ್ಪವೃಕ್ಷ, ಕಾಮಧೇನುವಿನಂತೆ ಪರಮಾನುಗ್ರಹ ಮಾಡುತ್ತಾ ಶ್ರೀ ಕ್ಷೇತ್ರ ಮಂತ್ರಾಲಯದ ಮೂಲ ಬೃಂದಾವನದಲ್ಲಿ ವಿರಾಜಮಾನರಾಗಿ 347 ವರ್ಷಗಳು ಆಯಿತು.

ಈ ಶುಭ ಸಂಧರ್ಭದಲ್ಲಿ ಅಗಮ್ಯ ಮಹಿಮರೂ - ಶ್ರೀ ಲಕ್ಷ್ಮೀ ನಾರಾಯಣರ ನಿತ್ಯ ಸನ್ನಿಧಾನಯುಕ್ತರೂ - ಶ್ರೀ ವಾಯುದೇವದ ನಿತ್ಯಾವೇಶದಿಂದ ಕಂಗೊಳಿಸುತ್ತಿರುವ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಸ್ಮರಣೆ ಮಾಡೋಣ!!

" ಉಪ ಸಂಹಾರ "

" ಶ್ರೀ ಪ್ರಹ್ಲಾದರಾಜರೇ ಶ್ರೀ ಮಂತ್ರಾಲಯ ಪ್ರಭುಗಳು "

ಶ್ರೀಮದ್ಭಾಗವತದಲ್ಲಿನ ಬಲಿ ಚಕ್ರವರ್ತಿ ಪ್ರಸಂಗ ...

ರಕ್ಷಿಷ್ಯೆ ಸರ್ವತೋಹಂ ತ್ವಾ೦ ಸಾನುಗಂ ಸಪರಿಚ್ಛದಮ್ ।
ಸದಾ ಸನ್ನಿಹಿತಂ ವೀರ ತತ್ರ ಮಾಂ ದಕ್ಷ್ಯತೇ ಭವಾನ್ ।।

ಶ್ರೀ ಪ್ರಹ್ಲಾದ ಉವಾಚ : -

ನೇಮ೦ ವಿರಿಂಚೋ ಲಭತೇ ಪ್ರಸಾದಂ ನ ಶ್ರೀರ್ನ ಶರ್ವ: ಕಿಮುತಪಾರೇ ತೇ ।
ಯನ್ನೋಸುರಾಣಾಮಸಿ ದುರ್ಗಪಾಲೋ ವಿಶ್ವಾಭಿವಂದ್ಯೈರಪಿ ವಂದಿತಾಂಘ್ರಿ: ।।

ತಾತ್ಪರ್ಯ :

ಶ್ರೀ ಚತುರ್ಮುಖ ಬ್ರಹ್ಮದೇವರಿಗಾಗಲೀ, ಶ್ರೀ ಜಗನ್ಮಾತೆ ಮಾಹಾಲಕ್ಷ್ಮೀದೇವಿಯರಿಗಾಗಲೀ, ಶ್ರೀ ಮಹಾರುದ್ರದೇವರಿಗಾಗಲೀ ಇಂಥಹಾ ಕೃಪಾ ಪ್ರಸಾದವು ದೊರೆಯಲಿಲ್ಲ. ಹಾಗಿರುವಾಗ ಇತರರ ಮಾತಿರಲಿ ವಿಶ್ವವಂದ್ಯರಾದ ಶ್ರೀ ಚತುರ್ಮುಖ ಬ್ರಹ್ಮದೇವರು ಯಾರ ಚರಣಾರವಿಂದಗಳಿಗೆ ನಮಸ್ಕರಿಸುವರೋ ಅಂಥಹ ಪರಮ ದಯಾಳುವಾದ ನೀನು ( ಶ್ರೀ ಹರಿ ) ನಮ್ಮಂಥಹ ಅಸುರರ ಬಾಗಿಲು ಕಾಯುವವನಾದೆ.

ಇಂಥಹಾ ಪರಮಾನುಗ್ರಹದಿಂದ ನೀನು ( ಶ್ರೀ ಹರಿ ) ನಮ್ಮ ಮನೆಯ ದ್ವಾರಪಾಲಕನೇ ಆಗಿಬಿಟ್ಟೆಯಲ್ಲಾ? ಎಂಥಾ ಕರುಣಾನಿಧಿಯೋ ಸ್ವಾಮಿ ಎಂದು ಶ್ರೀ ಪ್ರಹ್ಲಾದರಾಜರು ಶ್ರೀ ಹರಿಯನ್ನು ಸ್ತುತಿಸಿದ್ದಾರೆ.

ಬ್ರಹ್ಮಾಂಡ ಪುರಾಣದಲ್ಲಿ...

ಬಲಿರಪ್ಯ ಸುರಾವೇಶಾತ್ ಸ್ತುವನ್ನಪಿ ಜನಾರ್ದನಂ ।
ಪ್ರಾಕ್ಷಿಪತ್ಯಂತರಾಕ್ವಾಪಿ ಪ್ರಹ್ಲಾದೋ ನಿತ್ಯಭಕ್ತಿಮಾನ್ ।।

ಶ್ರೀ ಪ್ರಹ್ಲಾದರಾಜರು ಸದಾ ಶ್ರೀ ಹರಿಭಕ್ತಿಯುಳ್ಳ ಶ್ರೀ ವಾಯುದೇವರ ನಿತ್ಯಾವೇಶರಾದುದರಿಂದ ಅವರಿಗೆ ಎಂದೆಂದೂ ಅಸುರಾವೇಶ ಇಲ್ಲ!

ಶ್ರೀ ವಾಮನಾವತಾರಿ ಹರಿ :

ವತ್ಸಾ ಪ್ರಹ್ಲಾದ! ನಿನಗೆ ಮಂಗಳವಾಗಲಿ. ನಿನ್ನ ಪೌತ್ರನೊಡನೆ ಸುತಲ ಲೋಕಕ್ಕೆ ಹೋಗು, ನೀನು ಸಂತೋಷದಿಂದ ಅಲ್ಲಿದ್ದು ನಿನ್ನ ಬಂಧುಗಳನ್ನೇಲ್ಲಾ ಸಂತೋಷ ಪಡಿಸುತ್ತಿರು. ಗದಾಪಾಣಿಯಾಗಿ ಬಾಗಿಲಲ್ಲಿರುವ ನನ್ನನ್ನು ನಿತ್ಯವೂ ನೋಡುತ್ತಿರು. ನನ್ನ ದರ್ಶನದಿಂದ ಸಂತೋಷವನ್ನು ಹೊಂದಿ ಸಕಲ ಪ್ರಾರಬ್ಧ ಕರ್ಮವನ್ನೂ ಕಳೆದುಕೊಳ್ಳುವೆ.

" ಶ್ರೀ ವಾಮನ ಪುರಾಣ " ದಲ್ಲಿ..

ಬ್ರಹ್ಮ ಕರಾರ್ಚಿತ ಮೂಲರಾಮನನ್ನು ಕೊನೆಯ ಯುಗ ಅಂದರೆ ಕಲಿಯುಗದಲ್ಲಿ - ಕೊನೆಯ ಅವತಾರದಲ್ಲಿ ಶ್ರೀ ರಾಘವೇಂದ್ರ ನಾಮಕ ಅವತಾರದಲ್ಲಿ ಕೊನೆಯ ಆಶ್ರಮವೆಂದರೆ ಯತ್ಯಾಶ್ರಮದಲ್ಲಿ ಪೂಜಿಸಿ ನನ್ನ ಸನ್ನಿಧಾನಕ್ಕೆ ಬಾ ಎಂದು ಪರಮಾನುಗ್ರ ಮಾಡಿದನು!!

" ಯದ್ಯದ್ವೈಧಸಮಾತ್ಮನೇದಮನಘಯಚ್ಛಾ೦ತಿಮೇ ಚಾಂತಿಮೇ "

ಶುಕ ಮಹರ್ಷಿಗಳು...

ಪ್ರಹ್ಲಾದನು ಭಗವಂತನ ಆಜ್ಞೆಯನ್ನು ಶಿರಸಾ ವಹಿಸಿ ಬಲಿಯೊಡನೆ ಶ್ರೀ ವಾಮನದೇವರಿಗೆ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ ಸ್ವಾಮಿಯ ಅನುಜ್ಞೆಯನ್ನು ಪಡೆದು ಸಕಲ ಅಸುರ ಸೇನೆಗಳಿಗೆ ಅಧಿಪತಿಯಾಗಿ ಮಹಾಬಿಲವನ್ನು ಸೇರಿದನು!!

ಶ್ರೀ ವಾಮನ ರೂಪಿ ಶ್ರೀ ಹರಿಯ ಪರಮಾನುಗ್ರಹದಿಂದ ಕಲಿಯುಗದ ಜನರನ್ನು ಉದ್ಧರಿಸಲು ಧರೆಗೆ ಇಳಿದು ಬಂದ ಕಲ್ಪವೃಕ್ಷ - ಕಾಮಧೇನು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು. ಈಗಲೂ ಶ್ರೀ ಹರಿಯು ರಾಮ - ನರಹರಿ - ಕೃಷ್ಣ - ಕೃಷ್ಣ ( ವೇದವ್ಯಾಸ ) - ನಾರಾಯಣ ಪಂಚ ರೂಪಗಳಿಂದ ಶ್ರೀ ಕ್ಷೇತ್ರ ಮಂತ್ರಾಲಯ ಬೃಂದಾವನದಲ್ಲಿ ವಿರಾಜಮಾನರಾದ ಶ್ರೀ ರಾಯರಲ್ಲಿ ನೆಲೆನಿಂತು ಶ್ರೀ ರಾಯರಿಗೆ ರಕ್ಷಾ ಕವಚನಾಗಿಯೂ, ಶ್ರೀ ನೃಸಿಂಹ ರೂಪದಲ್ಲಿ ಮಂತ್ರಾಲಯ ಕ್ಷೇತ್ರ ಪಾಲಕನಾಗಿರುವ ಶ್ರೀ ಹರಿಯು ಎಂಥಾ ಪರಮ ಕರುಣಾಳು!

ಶ್ರೀ ಯೋಗೀ೦ದ್ರತೀರ್ಥರು....

ದುರ್ವಾದಿಧ್ವಾಂತ ರವಯೇ ವೈಷ್ಣವೇಂದೀವರೇಂದವೇ ।
ಶ್ರೀ ರಾಘವೇಂದ್ರಗುರುವೇ ನಮೋssತ್ಯಂತದಯಾಲವೇ ।।

ದುರ್ವಾದಿಗಳೆಂಬ ಕತ್ತಲೆಗೆ ಸೂರ್ಯರಾದ; ಸದ್ವೈಷ್ಣವರೆಂಬ ಕುಮುದಗಳನ್ನು ಅರಳಿಸುವ ಪೂರ್ಣಚಂದ್ರರಾದ; ಅತ್ಯಂತ ದಯಾಪೂರ್ಣರಾದ' ಭಕ್ತರಿಗೆ ಆತ್ಮ ಬಂಧುಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಗೆ ನಮಸ್ಕರಿಸುತ್ತೇನೆ ಎಂದು ತಾತ್ಪರ್ಯ!

ರಚನೆ : ಶ್ರೀಮತಿ ಸರಪಾಡ ಗಂಗಮ್ಮ
ಸ್ಥಳ : ಸರಪಾಡ, ದಕ್ಷಿಣ ಕನ್ನಡ ಜಿಲ್ಲೆ
ವೃತ್ತಿ : ಅಧ್ಯಾಪಕಿ
ಕಾಲ : ಕ್ರಿ ಶ 1905 - 1985
ಅಂಕಿತ : ಗಂಗಾಜನಕ ( ಸ್ವಪ್ನಲಬ್ಧ )

ರಾಗ : ದರ್ಬಾರಿಕಾನಡ   ತಾಳ : ಆದಿ

ಗುರುದೇವಾ ಮಂತ್ರಾಲಯ ಯತಿವರ ।। ಪಲ್ಲವಿ ।।

ಗುರುದೇವಾ ಯೆನ್ನ ಗುರುದೇವಾ ।। ಅ ಪ ।।

ಕರುಣಿಸಿ ಪೊರೆಯೆನ್ನ ಮರುಕ ಪಡುವೆ ನಾನು ।
ಯಾರಾರ ನೋಡಿದೆ ಯಾರು ಯೆನಗೆ ಸಿಗಲಿಲ್ಲ ।
ಕಾರುಣ್ಯಮೂರ್ತಿಯೇ ನೀನೆನಗೆ ದಯ ತೋರಿದೆ ।। ಚರಣ ।।

ಮಂದಮತಿಯು ನಾನು ಮನವು ತೋರದು ಏನು ।
ಸಂದಿತು ಯೆನ್ನಯ ಕಾಲವೆಲ್ಲ ।
ಯಿಂದು ನೀ ದಯೆತೋರಿ ಯೆನ್ನ ಮೊರೆಯಕೇಳ್ದೆ ।
ವಂದಿಪೆ ನಿನ್ನಯ ಚರಣದಡಿಗೆ ನಾನು ।। ಚರಣ ।।

ತುಂಗಭದ್ರಾ ನದೀ ತೀರದಿ ನೆಲೆಸಿಹ ।
ಮಂಗಳ ನಿನ್ನ ಪಾಡುವೆನು ।
ರಂಗನಾಥನ ಭಕ್ತ ಶರಣರ ಪಾಲಿಪ ।
ಗಂಗಾಜನಕನ ಪಾದ ಸೇವಕನು ನೀನು ।। ಚರಣ ।।

ಆಚಾರ್ಯ ನಾಗರಾಜು ಹಾವೇರಿ


ಗುರು ವಿಜಯ ಪ್ರತಿಷ್ಠಾನ














" ಶ್ರೀ ರಾಯರ ಆರಾಧನಾ ಲೇಖನ ಮಾಲೆ - ೨ "

" ಶ್ರೀ ಸತ್ಯಲೋಕವಾಸಿಗಳಾದ ಶ್ರೀ ಶಂಖುಕರ್ಣರೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು "

[ ಶ್ರೀ ಲಕ್ಷ್ಮೀನಾರಾಯಣರ ನಿತ್ಯ ಸನ್ನಿಧಾನಯುಕ್ತರೂ, ಶ್ರೀ ವಾಯುದೇವರ ನಿತ್ಯಾವೇಶಯುಕ್ತರೂ ಶ್ರೀ ರಾಯರು ]

ಶಂಖುಕರ್ಣಾಖ್ಯ ದೇವಸ್ತು ಬ್ರಹ್ಮ ಶಾಪಾಶ್ಚ ಭೋತಲೇ ।
ಪ್ರಹ್ಲಾದ ಇತಿ ವಿಖ್ಯಾತೋ ಭೂಭಾರ ಕ್ಷಪಣೇ ರತಃ ।।
ಸ ಏವ ರಾಘವೇಂದ್ರಾಖ್ಯ ಯತಿ ರೂಪೇಣ ಸರ್ವದಾ ।
ಕಲೌಯುಗೇ ರಾಮಸೇವಾಂ ಕುರ್ವನ್ ಮಂತ್ರಾಲಯೇ ಭವೇತ್ ।।

" ಹರಿಕಥಾಮೃತಸಾರದ - ಬೃಹತ್ತಾರತಮ್ಯಸಂಧಿ " ಯಲ್ಲಿ....

ತರಣಿಗಿಂತಲಿ ಪಾದ ಪಾದರೆ ।
ವರುಣ ನೀಚನು ಮಹಾಭಿಷಕು । ದು ।
ರ್ದರ ಸುಶೇಷಣನು ಶಾಂತನೂ ನಾಲ್ವರು ವರುಣ ರೂಪ ।।
ಸುರಮುನಿ ನಾರದನು ಕಿಂಚಿತ್ ಕೊರತೆ ।
ವರುಣಗೆ ಅಗ್ನಿ ಭೃಗು ಅಜ ।
ಗೊರಳ ಪತ್ನಿ ಪ್ರಸೂತಿ ಮೂವರು ನಾರದನಿಗೆ ಅಧಮರು ।। ೨೦ ।।

ನೀಲ ದೃಷ್ಟದ್ಯುಮ್ನ ಲವ ಈ ।
ಲೇಲಿಹಾಸನ ರೂಪಗಳು ಭೃಗು ।
ಕಾಲಿಲಿ ಒದ್ದಿದ್ದರಿಂದ ಹರಿಯ ವ್ಯಾಧನು ಎನಿಸಿದನು ।।
ಏಳು ಋಷಿಗಳಿಗೆ ಉತ್ತಮರು ಮುನಿ ।
ಮೌಳಿ ನಾರದಾಗೆ ಅಧಮ ಮೂವರು ।
ಘಾಳಿಯುತ ಪ್ರಹ್ಲಾದ ಬಾಹ್ಲೀಕರಾಯನು ಎನಿಸಿದನು ।। ೨೧ ।।

ಜನಪ ಕರ್ಮಜರೊಳಗೆ ನಾರದ ।
ಮುನಿ ಅನುಗ್ರಹ ಬಲದಿ ಪ್ರಹ್ಲಾದ ।
ಅನಲ ಭೃಗು ದಾಕ್ಷಾಯಣಿಯಾರಿಗೆ ಸಮನು ಎನಿಸಿಕೊಂಬ ।।
ಮನು ವಿವಸ್ವಾನ್ ಗಾಧಿಜ ಈರ್ವರು ।
ಅನಳಗಿಂತ ಅಧಮರು ಮೂವರು ।
ಎಣೆ ಎನಿಸುವರು ಸಪ್ತ ಋಷಿಗಳಿಗೆ ಎಲ್ಲ ಕಾಲದಲಿ ।। ೨೨ ।।

ನೀಲ, ದುಷ್ಟದ್ಯುಮ್ನ ಮತ್ತು ಲವ - ಈ ಮೂವರು ಶ್ರೀ ಅಗ್ನಿದೇವರ ರೂಪಗಳು.

ಭೃಗು ಮಹರ್ಷಿ ಶ್ರೀ ಹರಿಯನ್ನು ಕಾಲಿಂದ ಒದ್ದದ್ದರಿಂದ ಬೇಡನಾಗಿ ಜನಿಸಿದರು.

ಅಗ್ನಿ, ಭೃಗು ಮತ್ತು ಪ್ರಸೂತಿ - ಈ ಮೂವರು ಸಪ್ತ ಋಷಿಗಳಿಗಿಂತ ಉತ್ತಮರು. ನಾರದಮುನಿಗಿಂತ ಕಡಿಮೆ.

" ಶ್ರೀ ಶಂಖುಕರ್ಣ " ಎಂಬ ಕರ್ಮಜ ದೇವತೆಯ ಅವತಾರ.

ಆದರೆ ಶ್ರೀ ಶಂಖುಕರ್ಣರು 14ನೇ ಕಕ್ಷೆಗೆ ಸೇರಿದ ಶ್ರೀ ನಾರದ ಮಹರ್ಷಿಗಳ ಶಿಷ್ಯರಾದ್ದರಿಂದ 15ನೇ ಕಕ್ಷೆಯಲ್ಲಿ ಬರುವ ಅಷ್ಟ ವಸುಗಳಲ್ಲಿ " ಶ್ರೀ ಅಗ್ನಿದೇವರು ", ಶ್ರೀ ಭೃಗು ಮಹರ್ಷಿಗಳು, ಶ್ರೀ ದಕ್ಷ ಪ್ರಜಾಪತಿ ಹೆಂಡತಿಯಾದ ಪ್ರಸೂತಿಯೂ ಈ ಮೂರು ಮಂದಿಯೂ ಸಮಾನರು.

ಶ್ರೀ ನಾರದರಿಗಿಂತ ಸ್ವಲ್ಪ ಅಧಮರೂ ಮತ್ತು ಶ್ರೀ ವರುಣದೇವರಿಗಿಂತ 1/4 ಗುಣ ಅಧಮರು. ಅನಂತರ ಕರ್ಮಜ ದೇವತೆಗಳ ಮಧ್ಯದಲ್ಲಿ ಪರಿಣಿತರಾದ ಶ್ರೀ ಪ್ರಹ್ಲಾದರಾಜರು ಶ್ರೀ ಭೃಗು ಮಹರ್ಷಿಗಳಿಗಿಂತ ಸ್ವಲ್ಪ ಅಧಮರು.

" ಶ್ರೀ ಮಹಾಲಕ್ಷ್ಮೀದೇವಿಯರ ಸೃಷ್ಟಿ - ಶ್ರೀ ಶಂಖುಕರ್ಣರು "

ನಿತ್ಯ ವಿಯೋಗಿನೀ, ಅಪ್ರಾಕೃತಳೂ, ಶ್ರೀಮನ್ನಾರಾಯಣನ ಸೇವೆಯಲ್ಲಿ ನಿರುತಳೂ ಆಗಿದ್ದ ಶ್ರೀ ಮಹಾಲಕ್ಷ್ಮೀದೇವಿಯರ ಸಂಕಲ್ಪದಂತೆ...

ಶಂಖುವಿನಂತೆ ನಿರ್ಮಲನಾಗಿದ್ದ ಮುಗ್ಧ ಬಾಲಕನೊಬ್ಬನು ಅವಳ ಕಿವಿನಿಯಿಂದ ಹುಟ್ಟಿದನು. 

ಶ್ರೀ ಮಹಾಲಕ್ಷ್ಮೀದೇವಿಯರ ಆಜ್ಞೆಯಂತೆ ಶ್ರೀ ಪರಮಾತ್ಮನ ಸೇವೆಗೆ ಹೂಗಳನ್ನು ತಂದೊಪ್ಪಿಸುವ ಕಾರ್ಯವನ್ನು ಈ ಬಾಲಕನು ಭಕ್ತಿ ಶ್ರದ್ಧೆಗಳಿಂದ ಮಾಡುತ್ತಾ ಶ್ರೀ ಹರಿಯ ಪರಮಾನುಗ್ರಹಕ್ಕೆ ಪಾತ್ರನಾಗಿದ್ದನು.

ಮುಂದೆ ಶ್ರೀ ಲಕ್ಷ್ಮೀ ನಾರಾಯಣರ ಆಜ್ಞೆಯಂತೆ ಶ್ರೀ ಶಂಖುಕರ್ಣರು ಸತ್ಯಲೋಕಾಧಿಪತಿಗಳಾದ ಶ್ರೀ ಚತುರ್ಮುಖ ಬ್ರಹ್ಮದೇವರ ಸನ್ನಿಧಾನಕ್ಕೆ ಬಂದು ತಮ್ಮ ಸೇವಾ ಕೈಂಕರ್ಯವನ್ನು ಮುಂದುವರೆಸಿದರು.

" ಶ್ರೀ ಶಂಖುಕರ್ಣರು ಭೂಮಿಯಲ್ಲಿ ಅವತಾರ ಮಾಡಿದ ವಿವರ ಹೀಗಿದೆ....

ಶ್ರೀ ಚತುರ್ಮುಖ ಬ್ರಹ್ಮದೇವರಿಗೆ ಪ್ರೀತ್ಯಾಸ್ಪದ ಕರ್ಮಜ ದೇವತೆಗಳಾದ ಶ್ರೀ ಶಂಖುಕರ್ಣರು ಶ್ರೀ ಬ್ರಹ್ಮದೇವರ ಆವಾಸ ಸ್ಥಾನವಾದ ಸತ್ಯ ಲೋಕ ವಾಸಿಗಳು. ನಿಮ್ಮ ದ್ವಾರಾ ಲೋಕ ಕಲ್ಯಾಣವನ್ನು ಮಾಡಿಸಿ, ನಿಮ್ಮನ್ನು ಅನುಗ್ರಹಿಸಿ, ಕೀರ್ತಿ ಕೊಡಲು ಸಂಕಲ್ಪಿಸಿದ ಶ್ರೀ ಹರಿಯ ಇಚ್ಛೆಯಂತೆ ನೀವು ನಾಲ್ಕು ಅವತಾರಗಳನ್ನು ಮಾಡಿ ಶ್ರೀ ಹರಿ ಸೇವೆ, ಲೋಕ ಕಲ್ಯಾಣವನ್ನು ಮಾಡಿದ ಮಹನೀಯರು.

***

" ಶ್ರೀ ಪ್ರಹ್ಲಾದರಾಜರು "

ಮೂಲರೂಪದ ಶ್ರೀ ಶಂಖುಕರ್ಣರಾದ ನೀವು, ಶ್ರೀ ಪ್ರಹ್ಲಾದರಾಜರಾಗಿ ಮಧುನಾಮಕ ದೈತ್ಯ ಸಂಹಾರಿಯಾದ ಶ್ರೀ ಹರಿಯ ಸೇವೆ ಮಾಡಿದಿರಿ.

ದೇವ ಮುನಿಗಳಾದ ಶ್ರೀ ನಾರದ ಮಹರ್ಷಿಗಳ ಅನುಗ್ರಹೋಪದೇಶಗಳ ದ್ವಾರಾ ಶ್ರೀ ಹರಿ ತತ್ತ್ವಗಳನ್ನು ಚೆನ್ನಾಗಿ ತಿಳಿದಿರುವ ಶ್ರೀ ನೃಸಿಂಹದೇವರ ಚರಣಕಮಲವನ್ನು ಸೇವಿಸಿದ ಪೂತಾತ್ಮರು.

ನೀವು ದೈತ್ಯ ಯೋನಿಯಲ್ಲಿ ಹುಟ್ಟಿದರೂ ಅಸುರೀ ಭಾವವಿಲ್ಲದೆ ಪರಮ ಸಾತ್ವಿಕರಾದ ದೈತ್ಯ ಸಾಮ್ರಾಜ್ಞಿ ಕಯಾಧುದೇವಿಯ ಕುಮಾರರಾದ ಶ್ರೀ ಪ್ರಹ್ಲಾದರಾಜರು.

ಪ್ರಮಾಣ :

ಪ್ರಹ್ಲಾದೋ ಜನ್ಮ ವೈಷ್ಣವಃ ।

ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।

ವಾಸುದೇವೇ ಭಗವತಿ ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ ನಿರ್ವೈರಾಯ ಪ್ರಿಯ ಸುಹೃತ್ತಮಃ ।
ಮಾನಸ್ತಂಭ ವಿವರ್ಜಿತಃ ಯಥಾ ಭಗವತೀಶ್ವರೇ ।।

ಪ್ರಹ್ಲಾದೋಪಿ ಮಹಾಭಾಗಃ ಕರ್ಮದೇವ ಸಮಃ ಸ್ಮೃತಃ ।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್ ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ ಪೃಥುವ್ಯಾಂ ಖಗಸತ್ತಮಃ ।।

ದೇವಾಃ ಶಾಪ ಬಲದೇವ ಪ್ರಹ್ಲಾದಾದಿತ್ವಮಾಗತಾಃ ।
ದೇವಾಃ ಶಾಪಾಭಿಭೂತತ್ವಾತ್ ಪ್ರಹ್ಲಾದಾದ್ಯ ಬಭೂವಿರೇ ।।

ಪ್ರಹ್ಲಾದೋ  ಕಯಾಧವಃ ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।

ಋತೇತು ತಾತ್ವಿರ್ಕಾ ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।

" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ!! "

ವತ್ಸ! ಯದ್ಯದಭೀಷ್ಟಂತೇ ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ ಕರ್ಮಬಂಧಾತ್ಪ್ರಮುಚ್ಯತೇ ।।

**

" ಶ್ರೀ ಬಾಹ್ಲೀಕರಾಜರು "

ದ್ವಾಪರದಲ್ಲಿ ಪ್ರದೀಪ ಮಹಾರಾಜನ ಪುತ್ರನಾಗಿ ಶ್ರೀ ಕೃಷ್ಣ ಭಕ್ತರಾಗಿ ಶ್ರೀ ಬಾಹ್ಲೀಕರಾಜರೆಂದು ಅವತರಿಸಿ ಶ್ರೀ ಕೃಷ್ಣ - ಶ್ರೀ ಭೀಮಸೇನರನ್ನು ಆರಾಧಿಸಿ ಸಂತೋಷ ಪಡಿಸಿದಿರಿ.

ಯದುನಂದನನಾದ ಶ್ರೀ ಕೃಷ್ಣ ಪರಮಾತ್ಮನನ್ನೂ, ಕುಂತಿ ಪುತ್ರರಾದ ಶ್ರೀ ಭೀಮಸೇನದೇವರನ್ನೂ ಸೇವಿಸಿ ಆನಂದ ಗೊಳಿಸಿದ್ದೀರಿ.

ಪ್ರಮಾಣ :

ಮ ಭಾ ತಾ ನಿ ( ೧೧-೮ )

ಬಾಹ್ಲೀಕರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರ: ।
ಪ್ರಹ್ಲಾದೋ ಭಗವತ್ಪ್ರಿಯಃ ವಾಯುನಾ ಚ ಸಮಾವಿಷ್ಟ: ।।

***

" ಶ್ರೀ ವ್ಯಾಸರಾಜರು "

ಈ ಕಲಿಯುಗದಲ್ಲಿ ಸಮಸ್ತ ಭಕ್ತ ವೃಂದದಿಂದ ನಮಸ್ಕೃತರಾಗಿ ಶ್ರೀ ವ್ಯಾಸರಾಜರೆಂಬ ಹೆಸರಿನಿಂದ ಪ್ರಖ್ಯಾತರಾಗಿದ್ದೀರಿ.

ವಿಜಯ ನಗರ ಸಾಮ್ರಾಜ್ಯಾಧೀಶನಾದ ಕೃಷ್ಣದೇವರಾಯನಿಗೆ ಬಂದಿದ್ದ ಕುಹು ಯೋಗವನ್ನು ಪರಿಹರಿಸಿ ಅವನನ್ನು ರಕ್ಷಿಸಿ ಮಹಾ ಮಹಿಮಾಶಾಲಿಗಳೆಂದು ಎಲ್ಲರಿಂದಲೂ ಸ್ತುತ್ಯರಾಗಿ ಕೀರ್ತಿಗಳಿಸಿದ್ದೀರಿ!

ವೇದಾದಿ ಶಾಸ್ತ್ರಗಳಲ್ಲಿ ಸರ್ವೋತ್ತವದೇವನೆಂದು ಪ್ರತಿಪಾದ್ಯನಾದ ಶ್ರೀ ಹರಿಯ ಸತ್ತತ್ತ್ವಗಳನ್ನು ಸಜ್ಜನರಿಗೆ ಚೆನ್ನಾಗಿ ಬೋಧಿಸಿದ ಶ್ರೀ ಮೂಲಗೋಪಾಲಕೃಷ್ಣಾರಾಧಕರು.

ಶ್ರೀ ವಿಜಯೀ೦ದ್ರತೀರ್ಥರು...

ಪ್ರಹ್ಲಾದಸ್ಯಾsವತಾರೋಸಾವೀಂದ್ರಸ್ಯಾನುಪ್ರವೇಶನಾತ್ ।
ತೇನೇ ತತ್ಸೇವಿನಾ೦ ನೃಣಾ೦ ಸರ್ವಮೇತದ್ಭವೇ ಧ್ರುವಮ್ ।।

***

" ಶ್ರೀ ರಾಘವೇಂದ್ರತೀರ್ಥರು "

ಪುನಃ ಭಗವದಿಚ್ಛೆಯಿಂದ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೆಂದು ಚತುರ್ಥ ಮತ್ತು ಕೊನೆಯ ಅವತಾರವನ್ನು ಮಾಡಿ ಭಕ್ತ ಜನರ ಕಲ್ಪವೃಕ್ಷ - ಕಾಮಧೇನುವೆಂದು ಜಗತ್ಪ್ರಸಿದ್ಧರಾಗಿ ಅದ್ಯಪಿ ಶ್ರೀ ಕ್ಷೇತ್ರ ಮಂತ್ರಾಲಯ ಮೂಲ ಬೃಂದಾವನದಲ್ಲಿ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಾ ವಿರಾಜಮಾನರಾಗಿದ್ದಾರೆ.

ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲರಾಮಚಂದ್ರದೇವರ ಮತ್ತು ಶ್ರೀಮದಾಚಾರ್ಯರ ಕರಾರ್ಚಿತ ಶ್ರೀ ದಿಗ್ವಿಜಯರಾಮಚಂದ್ರದೇವರ ಆರಾಧಕರು!

ನೀವು ಭಗವತಾಗ್ರಣಿಗಳೂ, ಹರಿಭಕ್ತಾಗ್ರೇಸರರೂ, ಶ್ರೀಮನ್ಮೂಲರಾಮಚಂದ್ರದೇವರ ಉಪಾಸನೆಯಿಂದ ಸಾತ್ವಿಕ ಸಕಲ ಪುರುಷಾರ್ಥ ಸಂಪತ್ತುಳ್ಳವರೂ, ಶ್ರೀ ವಾಯುದೇವರ ನಿತ್ಯಾವೇಶಯುಕ್ತರೂ, ಹರಿ ಭಕ್ತಿ ಪ್ರಸಾರಕರಾಗಿ ಭಗವಂತನ ವಿಶೇಷಾನುಗ್ರಹಕ್ಕೆ ಪಾತ್ರರಾಗಿರುವ, ದೇವ ಲೋಕದಲ್ಲಿ ಸುರರಿಂದ ಗೇಗೀಯಮಾನವಾದ ಕೀರ್ತಿಯಿಂದ ರಾರಾಜಿಸುತ್ತಿರುವವರು  ಶಂಖುಕರ್ಣಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು!

ಪ್ರಮಾಣ :

ವಾಯೂನಾ ಚ ಸಮಾವಿಷ್ಟಂ ಹರೇಃ ಪಾದಾಬ್ಜ ಸಂಶಯಂ ।

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಎಂದರೆ ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್ ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।

" ನಿತ್ಯ " ಪದಕ್ಕೆ ಅರ್ಥವೇನೆಂದರೆ..

ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!

ಶ್ರೀ ಪುರಂದರದಾಸರು....

ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।

ಶ್ರೀ ಶ್ಯಾಮಸುಂದರದಾಸರು....

ಎಂಥಾ ದಯವಂತನೋ ।

ಮಂತ್ರಮುನಿನಾಥನೋ ।

ಸಂತತದಿ ತನ್ನನು ।

ಚಿಂತಿಪರಿಗೆ ಕಾಮಧೇನು ।।

ವರ ಪ್ರಹ್ಲಾದನೋ ।

ಮರಳಿ ಬಾಹ್ಲೀಕನೋ ।

ಗುರು ವ್ಯಾಸರಾಯನೋ ।

ಪರಿಮಳಾಚಾರ್ಯನೂ ।।

ಮರುತಾವೇಶಯುಕ್ತನು ।
ದುರಿತ ಕಳೆವ ಶಕ್ತನು ।
ತರಣಿನಿಭ ಗಾತ್ರನು ।
ಪರಮಾ ಸುಚರಿತ್ರನು ।।

ವಿವರಣೆ :

ಮರುತಾವೇಶ ಯುಕ್ತನು = ಶ್ರೀ ವಾಯುದೇವರ ನಿತ್ಯಾವೇಶಯುಕ್ತರು.

ದುರಿತ ಕಳೆವ ಶಕ್ತನು = ಪಾಪ - ಕಷ್ಟ - ಅಮಂಗಲ - ಕೇಡು ಮೊದಲಾವುಗಳನ್ನು ಕಳೆಯುವ ದೈವೀ ಶಕ್ತಿವುಳ್ಳವರು ಶ್ರೀ ರಾಘವೇಂದ್ರತೀರ್ಥರು.

ತರಣಿ = ಸೂರ್ಯ

ನಿಭ = ಬೆಳಕು / ಕಾಂತಿ

ಗಾತ್ರ = ಶರೀರ

ಆಚಾರ್ಯ ನಾಗರಾಜು ಹಾವೇರಿ


ಗುರು ವಿಜಯ ಪ್ರತಿಷ್ಠಾನ










" ಶ್ರೀ ರಾಯರ ಆರಾಧನಾ ಲೇಖನ ಮಾಲೆ - ೩ "

" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಗ್ರಂಥ  ರಚನಾ ಕೌಶಲ - ಒಂದು ಅಧ್ಯಯನ "

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೇ! ದ್ವೈತ ಭಾಷ್ಯಕಾರರಾದ ಶ್ರೀಮದಾನಂದತೀರ್ಥ ಭಗವತ್ಪಾದರ ಸಂಪೂರ್ಣ ಕೃಪೆಗೆ ಪಾತ್ರರಾಗಿರುವ, ಆಶ್ರಿತ ಜನರ ಪಾಪಗಳನ್ನು ಪುಡಿ ಪುಡಿ ಮಾಡಿ ಪೊರೆಯುತ್ತಿರುವ ನೀವು ಸುವರ್ಣ ಕಾಂತಿಯಿಂದ ಶೋಭಾಯಮಾನರಾಗಿದ್ದೀರಿ.

ಶ್ರೀ ಗುರುಸಾರ್ವಭೌಮರು " ಒಂದು ಜಂಗಮ ಜ್ಞಾನಕೋಶ " ವಿದ್ದಂತೆ.

ಜ್ಞಾನ ಗಂಗೆಯನ್ನು ಉಕ್ಕಿ ಹರಿಸಲು 40ಕ್ಕೂ ಅಧಿಕ ಗ್ರಂಥಗಳೆಂಬ ತೊರೆಗಳ ಉಗಮ ಸ್ಥಾನ ಈ ಮಹಾ ಮಹಿಮರು.

ಕೆಲವು ಸ್ವತಂತ್ರ ಕೃತಿಗಳಾದರೆ, ಹಲವು ಟಿಪ್ಪಣಿಯ ಪ್ರಕೃತಿಯವು.

ದ್ವೈತ ಸಿದ್ಧಾಂತದ ತತ್ತ್ವ ರತ್ನಾಕರಗಳು.

ಎಲ್ಲಾ ಕೃತಿಗಳೂ ತತ್ತ್ವ ರತ್ನದ ಅಪ್ರತಿಮ ಪ್ರಕಾಶವನ್ನು ಹೊರ ಸೂಸುವವು.

ಬ್ರಹ್ಮ ಸೂತ್ರಕ್ಕೆ ಸಂಬಂಧಿಸಿದಂತೆ ೬ ಕೃತಿಗಳೂ, ೪ ಟಿಪ್ಪಣಿಗಳು. ಶ್ರೀಮನ್ನ್ಯಾಯಸುಧೆಗೆ - " ಪರಿಮಳ " ಎಂಬ ಸರ್ವಾಕಾಲೀನ ಶ್ರೇಷ್ಠ ಮತ್ತು ಸಂಪೂರ್ಣವಾದ ಟಿಪ್ಪಣಿ. ತಾತ್ಪರ್ಯ ಚಂದ್ರಿಕಾಕ್ಕೆ " ಪ್ರಕಾಶ ".  ತತ್ತ್ವಪ್ರಕಾಶಿಕೆಗೆ " ಭಾವದೀಪ "  ಅನುಭಾಷ್ಯಕ್ಕೆ " ತತ್ತ್ವಮಂಜರೀ " - ಇವು ನಾಲ್ಕು ಟಿಪ್ಪಣಿ.

ನ್ಯಾಯಮುಕ್ತಾವಲೀ ಮತ್ತು ತಂತ್ರದೀಪಿಕಾ - ಇವು ಸ್ವತಂತ್ರ ಕೃತಿ.

ದ್ವೈತ ಭಾಷ್ಯಕಾರರಾದ ಶ್ರೀಮದಾನಂದತೀರ್ಥ ಭಗವತ್ಪಾದರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿರುವ, ಆಶ್ರಿತ ಜನರ ಪಾಪಗಳನ್ನು ಪುಡಿ ಪುಡಿ ಮಾಡಿ ಪೊರೆಯುತ್ತಿರುವ ಶ್ರೀ ರಾಯರು ಸುವರ್ಣ ಕಾಂತಿಯಿಂದ ಶೋಭಾಯಮಾನರಾಗಿದ್ದಾರೆ.

ಶ್ರೀ ಪೂರ್ಣಪ್ರಜ್ಞಾಚಾರ್ಯರ ಸಮಸ್ತ ಭಾವಗಳನ್ನು ಚೆನ್ನಾಗಿ ನಿರ್ಣಯಿಸಿ, ಭಾವ ಪೂರ್ಣವಾದ ಶ್ರೇಷ್ಠ ಟೀಕೆಗಳನ್ನು ರಚಿಸಿ ಟೀಕಾಕೃತ್ಪಾದರೆಂದೇ ಜಗನ್ಮಾನ್ಯರಾದ ಶ್ರೀ ಜಯತೀರ್ಥರ ಅಭಿಪ್ರಾಯಗಳನ್ನು ಚೆನ್ನಾಗಿ ಪ್ರಕಾಶಗೊಳಿಸುವ  " ಭಾವದೀಪ " ಮುಂತಾದ ಅನಿತರ ಸಾಧಾರಣ ಟಿಪ್ಪಣಿಗಳನ್ನು ರಚಿಸಿ " ಟಿಪ್ಪಣ್ಯಾಚಾರ್ಯ ಚಕ್ರವರ್ತಿ " ಗಳೆಂದು ಜ್ಞಾನಿಗಳಿಂದ ಸ್ತುತಿಸಲ್ಪಡುತ್ತಿರುವ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಗ್ರಂಥಗಳ ಕುರಿತು ಮಾಹಿತಿಯಿಲ್ಲಿದೆ.

ಶ್ರೀ ಗುರುಸಾರ್ವಭೌಮರು ಒಂದು ಜಂಗಮ ಜ್ಞಾನಕೋಶವಿದ್ದಂತೆ.

ಶ್ರೀ ರಾಯರು ವ್ಯಾಖ್ಯಾನಿಸದ ಶಬ್ದವಿಲ್ಲ.

ಒಂದೊಂದು ಶಾಸ್ತ್ರೀಯ ಟಿಪ್ಪಣಿ ಗ್ರಂಥಗಳಲ್ಲಿ ಸರ್ವ ಶಾಸ್ತ್ರಗಳ ಸತ್ವಸಾರಗಳನ್ನು ಎರಕ ಹಾಕುವ ವಿಲಕ್ಷಣ ವೈದುಷ್ಯವು ಶ್ರೀ ರಾಯರೊಬ್ಬರದೇ ಸೊತ್ತು.

ಶ್ರೀ ರಾಯರ ಯಾವ ಗ್ರಂಥವನ್ನು ತೆರೆದು ನೋಡಿದರೂ ಚತು: ಶಾಸ್ತ್ರಗಳ ಚತುರಸ್ರ ಪಾಂಡಿತ್ಯದ ಚಾತುರೀ, ವೈಖರೀ, ಮಾಧುರೀಗಳು ಮುಪ್ಪುರಿಗೊಂಡು ಮೆರೆಯುತ್ತವೆ.

ಮಧ್ವ ವಾಙ್ಞಯದ ಅಧ್ವರ್ಯುಗಳಾದ ಶ್ರೀ ರಾಯರು ರಚಿಸಿದ ಗ್ರಂಥ ಸಂಸಾರ ಅಪಾರ. ನಮಗೆ ಈಗ ದೊರೆತ ಗ್ರಂಥಗಳ ಸಂಖ್ಯೆಯೇ ಅರ್ಧ ಶತಕದ ಹತ್ತಿರ. ಉಪಲಬ್ಧವಿರುವ 47 ಗ್ರಂಥಗಳು ಶ್ರೀ ಗುರುರಾಜರ ಸರ್ವ೦ಕಷ ಪ್ರಗಾಢ ಪಾಂಡಿತ್ಯದ ಸಾಂತ್ವಿಕೆ, ಧೀಮಂತಿಕೆಗಳ ಮುದ್ರೆಯನ್ನಾ೦ತು ನಿಂತಿವೆ.

ಎಲ್ಲಾ ಗ್ರಂಥಗಳಲ್ಲಿಯೂ ಶ್ರೀ ರಾಯರ ಸರ್ವ ಶಾಸ್ತ್ರಗಳ ತಲಸ್ಪರ್ಶಿಯಾದ ಜ್ಞಾನ, ತೌಲನಿಕ ದೃಷ್ಟಿ, ಅಗಾಧ ವಿದ್ವತ್ತೆ, ಸುಸೂಕ್ಷ್ಮ ವಿಚಾರ ವೈಚಕ್ಷಣ್ಯಗಳು ಎದ್ದು ಕಾಣುತ್ತವೆ.

ಆಧ್ಯಾತ್ಮಿಕ ಪ್ರಪಂಚದಲ್ಲಿ ಶ್ರೀ ರಾಯರು ಶಕ ಪುರುಷರೆನಿಸಿದರೆ, ಜ್ಞಾನ ಪ್ರಪಂಚಲ್ಲಿಯಂತೂ ಶ್ರೀ ರಾಯರು ಸೀಮಾ ಪುರುಷರೇ ಎನಿಸಿದ್ದಾರೆ.

ಶ್ರೀ ರಾಯರ ಶೈಲಿ ಪಂಡಿತ ರಂಜಕವಾಗಿದೆ.

ಪಾಮರ ಬೋಧಕವಾಗಿದೆ.

ಆದುದರಿಂದಲೇ, ಶ್ರೀ ರಾಯರ ಅನೇಕ ಗ್ರಂಥಗಳು ಪ್ರಜ್ಞಾ ಬೋಧಿನಿಯಾಗಿಯೂ, ಮಂದನಂದಿನಿಯಾಗಿವೆ.

ಆ ಗ್ರಂಥಗಳನ್ನು ಪರಿಶೀಲಿಸಿದರೆ ಶ್ರೀ ರಾಯರ...

ವ್ಯಾಕರಣ ಪಾಂಡಿತವನ್ನು ಹೊಗಳಬೇಕೋ,
ಮೀಮಾಂಸಾ ಶಾಸ್ತ್ರದ ಪ್ರೌಢಿಮೆಯನ್ನು ಪ್ರಶಂಸಿಸಬೇಕೋ,
ನ್ಯಾಯ ನೈಪುಣ್ಯವನ್ನು ಬಣ್ಣಿಸಬೇಕೋ,
ವೇದ ವೈದುಷ್ಯವನ್ನು ಸ್ತುತಿಸಬೇಕೋ,
ಧರ್ಮ ಶಾಸ್ತ್ರ ಪಾಂಡಿತ್ಯವನ್ನು ಕೊಂಡಾಡಬೇಕೋ ಎಂಬುದು ತಿಳಿಯದಾಗುತ್ತದೆ.

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಒಂದೊಂದು ಗ್ರಂಥದ ಪರಾಮರ್ಶೆಯನ್ನು ವಿವರವಾಗಿ ಮಾಡಲು ಹೊರಟರೆ ಒಂದೊಂದು ಹೊತ್ತಿಗೆಯೇ ಬೇಕಾದೀತು. ಕಾರಣ ಇಲ್ಲಿ ಸಂಕ್ಷಿಪ್ತವಾಗಿ, ಸ್ಥೂಲವಾಗಿ ಶ್ರೀ ರಾಯರ ಗ್ರಂಥಗಳ ಅಲ್ಪಾಲ್ಪ ಮಾಡಿ ಕೊಡಲಾಗಿದೆ.

೧. ಸೂತ್ರ ಪ್ರಸ್ಥಾನ ( ಉತ್ತರ ಮೀಮಾಂಸಾ )

ಅ ) ಶ್ರೀಮನ್ನ್ಯಾಯಸುಧಾ ಟಿಪ್ಪಣಿ " ಪರಿಮಳ "

ಶ್ರೀಮನ್ನ್ಯಾಯಸುಧಾ ಪರಿಮಳವು ವೈಷ್ಣವ ವೇದಾಂತದ ಕಲಶ ಕೃತಿ. ಇದರಿಂದಲೇ ಶ್ರೀ ರಾಯರಿಗೆ " ಪರಿಮಳಾಚಾರ್ಯ " ರೆಂದು ಹೆಸರು.

ವೇದಾಂತ ವೀಥಿಯಲ್ಲಿ ಶ್ರೀ ಜಯತೀರ್ಥರ " ಶ್ರೀಮನ್ನ್ಯಾಯಸುಧಾ " ಗ್ರಂಥವು ಒಂದು ಸೀಮೆಗಲ್ಲು.

ಈ ಪ್ರೌಢ ಗ್ರಂಥಕ್ಕೆ ಹೊರಟ ಟೀಕಾ - ಟಿಪ್ಪಣಿಗಳು ಅಸಂಖ್ಯ. ಅವುಗಳಲ್ಲಿ " ಪರಿಮಳ " ವು ಒಂದು ಅನರ್ಘ್ಯ ರತ್ನ.

ಈ ಪರಿಮಳದಲ್ಲಿ ಶ್ರೀ ಗುರುರಾಜರು ಪ್ರತಿ ಪದಕ್ಕೂ ಅರ್ಥ ಬರೆವುದಿಲ್ಲ. ಪಂಡಿತರಿಗೆ ಸಂದೇಹ ಬರಬಹುದಾದ ಸಂದರ್ಭದಲ್ಲಿ ಮೇಲೆ ಬೆಳಕಿನ ಸೆಳಕನ್ನು ಮಿಂಚಾಡಿಸುತ್ತಾರೆ.

ಹೀಗೆ " ಶ್ರೀಮನ್ನ್ಯಾಯಸುಧೆಯ " ಮರ್ಮಸ್ಥಳ " ದ ಮೇಲೆಯೇ ಬೆರಳಿಟ್ಟಂತೆ ಸಂಕ್ಷಿಪ್ತವಾಗಿ ಬರೆಯುತ್ತಾ ಹೋದರು " ಪರಿಮಳ " ವು ಹೆಬ್ಬೊತ್ತಿಗೆಯಾಗಿದೆ.

ಮಹಾಭಾಷ್ಯ೦  ವೆಂಕಟಭಟ್ಟರಿಗೆ ವೈಯಾಕರಣದ ಸಂಸ್ಕಾರ ಬಲವತ್ತರವಾಗಿರಬೇಕು.

" ಪರಿಮಳ " ಬರೆಯುವ ಕಾಲದಲ್ಲಿ ....

" ಅರ್ಧಮಾತ್ರಾ ಲಾಘವೇನ ಪುತ್ರೋತ್ಸವಂ ಮನ್ಯಂತೇ ವೈಯಾಕರಣಾ: "

ಒಂದು ಶಬ್ದ ಅರ್ಧ ಮಾತ್ರೆ ಕಡಿಮೆಯಾದರೆ ಗಂಡು ಮಗು ಹುಟ್ಟಿದಷ್ಟು ಹಿಗ್ಗು ವ್ಯಾಕರಣ ಪಂಡಿತರಿಗೆ ಎಂದು ಹೇಳಿದ್ದಾರೆ.

ಹತ್ತು ಮಾತುಗಳಲ್ಲಿ ಇತರರು ಸುತ್ತಿ ಹೇಳುವ ಭಾವವನ್ನು  ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು " ಮುತ್ತಿನಂಥಹ ಒಂದೇ ಮಾತಿನಲ್ಲಿ ಹೇಳಿ " ಅವರಿಗಿಂತ ಹೆಚ್ಚಿನ ಬೆಳಕನ್ನು ಬೀರುತ್ತಾರೆ.

ಶಾಸ್ತ್ರ ಪ್ರಪಂಚದಲ್ಲಿ ಮಾತುಗಳ ಇಂಥಹ ತೂಕ, ಪಾಕಗಳು ವಿರಳವಾಗಿಯೇ ಕಾಣಸಿಗುತ್ತವೆ.

ಆ ದೃಷ್ಟಿಯಿಂದ " ಪರಿಮಳವು ಪಾರಿಜಾತ ಕುಸುಮದಂತೆ ತನ್ನ ಸೌಗಂಧವನ್ನು ವೇದಾಂತ ವಿಶ್ವವನ್ನೇ " ಸುರಭೀಕರಿಸುತ್ತದೆ.

" ಶ್ರೀಮನ್ನ್ಯಾಯಸುಧಾಕ್ಕೆ ಸರ್ವಕಾಲೀನ ಅನ್ವರ್ಥಕ ಟಿಪ್ಪಣಿ - ಶ್ರೀ ಪರಿಮಳ "

ಸುಲಲಿತ ಸುಮಧುರ ಶಬ್ದ ಪುಂಜದೊಡನೆ ಪ್ರೌಢ ಗಾಂಭೀರ್ಯದಿಂದ ಸಾಗುವ " ಶ್ರೀಮನ್ನ್ಯಾಯಸುಧೆ " ಯನ್ನು ಅಧ್ಯಯನ ಮಾಡುವವರಿಗೆ ಹತ್ತು ಹಲವು ಸಮಸ್ಯೆಗಳು ಎದುರಾಗುತ್ತವೆ.

ಅ ) ಈ ವಾಕ್ಯ ಇದ್ದಕ್ಕಿದ್ದಂತೆ ಏಕೆ ಹೊರಟಿದೆ?

ಆ ) ಬೇರೆಡೆ ಹೆಚ್ಚು ಕಾಣಸಿಗದ ಇದೇ ಶಬ್ದವನ್ನು ಬಳಸಿದುದರ ಔಚಿತ್ಯವೇನು?

ಇ ) ವ್ಯಾಕರಣಕ್ಕೆ ಈ ಶಬ್ದ ಬದ್ಧವೇ?

ಈ ) ಈ ಮಾತಿನ ಭಾವವೇನು?

ಉ ) ಇದರಿಂದ ಪ್ರಕೃತಕ್ಕೇನು ಉಪಯೋಗ?

ಊ ) ಅಲ್ಲಿ ( ಶ್ರೀಮನ್ನ್ಯಾಯಸುಧೆಯಲ್ಲಿ ) ಅಂದುದ್ದಕ್ಕೂ ಇಲ್ಲಿ ( ಶ್ರೀ ಪರಿಮಳ )ಅನ್ನುತ್ತಿರುವ ಹೊಂದಿಕೆ ಆಗುತ್ತಿಲ್ಲವಲ್ಲಾ?

ಎ ) ಇಷ್ಟು ಉದ್ದದ ಟೀಕೆಯಿಂದ ಒಟ್ಟು ಏನು ಹೇಳಿದಂತಾಯಿತು"

ಇಂಥಹಾ ಯಾವ ಪ್ರಶ್ನೆ ಬಂದರೂ ಉತ್ತರಕ್ಕಾಗಿ " ಪರಿಮಳ " ದ ಕಡೆಗೆ ಕಣ್ಣು ಹಾಯಿಸಿದರೆ ಸಾಕು. ಈ ವೈಶಿಷ್ಟ್ಯದಿಂದ " ಪರಿಮಳ " ವು ಜಿಜ್ಞಾಸು ವೃಂದಕ್ಕೆ " ಕಲ್ಪವೃಕ್ಷ " ವಾಗಿದೆ.
ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಗರ್ಭಿತಾ ।
ಪ್ರತಿಭಾತಿ ಸುಧಾsಥಾಪಿ ಗ್ರಂಥಾಲ್ಪತ್ವಾಯ ನೊಚ್ಯತೇ ।।

ಶ್ರೀಮನ್ನ್ಯಾಯಸುಧಾ ಗ್ರಂಥದ ಪ್ರತಿಯೊಂದು ಅಕ್ಷರ ಮತ್ತು ಪದಗಳಲ್ಲಿಯೂ ಅನೇಕ ಅಭಿಪ್ರಾಯ ವಿಶೇಷವುಳ್ಳದ್ದಾಗಿ ಕಂಡು ಬರುತ್ತದೆ. ಆದರೂ ಈ " ಪರಿಮಳ " ಗ್ರಂಥವು ಸಂಕ್ಷಿಪ್ತವಾಗಿರಲೆಂಬ ಉದ್ಧೇಶದಿಂದ ಇಲ್ಲಿ ಅದನ್ನು ಹೆಚ್ಚು ವಿವರಿಸಿಲ್ಲ!

ಯದ್ಭಾನೌ ಯತ್ಕೃಶಾನೌ ಯದಮೃತಕಿರಣೇ ಯದ್ಗ್ರಹೇಷೋದಿತೇಷು 
ಜ್ಯೋತಿರ್ಯಸ್ತಾರಕಾಸು ಪ್ರಥಿತಮಣಿಷು ಯದ್ಯಚ್ಚಸೌದಾಮಿನೀಷು ।
ಸಂಭೂಯೈತತ್ ಸಮಸ್ತಂ ತ್ವದಮಿತಹೃದಯಾಕಾಶನಿರ್ಯತ್ ಪ್ರಕಾಶೇ 
ಧೀರ ಶ್ರೀ ರಾಘವೇಂದ್ರ ಯತಿವರ ಭಜತೇ ಹಂತ ಖದ್ಯೋತರೀತಿಮ್ ।।

ಜ್ಞಾನಿವರೇಣ್ಯ ಗುರುಸಾರ್ವಭೌಮರೇ! ಸೂರ್ಯ, ಅಗ್ನಿ, ಚಂದ್ರ, ಗ್ರಹ, ನಕ್ಷತ್ರ, ಪ್ರಖ್ಯಾತಮಣಿಗಳು, ಮಿಂಚು ಇವೆಲ್ಲವುಗಳ ಒಟ್ಟುಗೂಡಿದ ಪ್ರಕಾಶವೂ ಕೂಡಾ ನಿಮ್ಮ ಹೃದಯಾಕಾಶದಿಂದ ಹೊರಮೊಮ್ಮಿದ ಜ್ಞಾನ ಪ್ರಕಾಶದ ಮುಂದೆ ಮಿಣುಕು ಹುಳದ ಪ್ರಕಾಶದಂತಿಯೇ ಆಗಿದೆ!  

" ಶ್ರೀ ಮನ್ನ್ಯಾಯಸುಧೆಯಲ್ಲಿ ಶ್ರೀ ಜಯತೀರ್ಥರ ವಾಣಿ... "

ಶ್ರೀಯಃ ಪತ್ಯೇ ನಿತ್ಯಗಣಿತಗುಣಮಾಣಿಕ್ಯವಿಶದಾ -
ಪ್ರಭಾಜಲೋಲ್ಲಾಸೋಪಹತಸಕಲಾವದ್ಯತಮಸೇ ।
ಜಗಜ್ಜನ್ಮಸ್ಥೇಮಪ್ರಲಯರಚನಾಶೀಲವಪುಷೇ 
ನಮೋsಶೇಷಾಮ್ನಾಯ ಸ್ಮೃತಿಹೃದಯದೀಪ್ತಾಯ ಹರಿಯೇ ।।

ವ್ಯಾಪ್ತಿರ್ಯಸ್ಯ ನಿಜೇ ನಿಜೇನ ಮಹಾಸಾ ಪಕ್ಷೇ ಸುಪಕ್ಷೇ ಸ್ಥಿತಿಃ 
ವ್ಯಾವೃತ್ತಿಶ್ಚ ವಿಪಕ್ಷತೋsವಿಷಯೇ ಸಕ್ತಿರ್ಣ ವೈ ಬಾಧಿತೇ ।
ನೈವಾಸ್ತಿ ಪ್ರತಿಪಕ್ಷಯುಕ್ತಿರತುಲಂ ಶುದ್ಧಂ ಪ್ರಮಾಣಂ ಸ ಮೇ 
ಭೂಯಾತ್ ತತ್ವನಿರ್ಣಯಾಯ ಭಗವಾನ್ ಆನಂದತೀರ್ಥೋ ಮುನಿಃ ।।

" ಪರಿಮಳ " ದ ಮಂಗಳ ಶ್ಲೋಕಗಳು.. 

ಪೂರ್ಣಾಗಣ್ಯಗುಣೋದಾರಮೂರ್ತಯೇ ಪುಣ್ಯಕೀರ್ತಯೇ ।
ನಮಃ ಶ್ರೀಪತಯೇ ಭಕ್ತದತ್ತಸ್ವಾನಂದಮೂರ್ತಯೇ ।।

ಪೂರ್ಣವಾದ ಅಗಣಿತವಾದ ಗುಣಗಳೆಂಬ ಶರೀರವುಳ್ಳ ಪವಿತ್ರವಾದ ಕೀರ್ತಿವುಳ್ಳ ಮತ್ತು ಭಕ್ತರಿಗೆ ಸ್ವರೂಪ ಭೂತವಾದ ಆನಂದಮಯ ದೇಹವನ್ನು ಕೊಡುವ ಲಕ್ಷ್ಮೀಪತಿಯಾದ ಭಗವಂತನಿಗೆ ನಮಸ್ಕಾರ!

ಪೂರ್ಣಗಣ್ಯಗುಣೋದಾರ  ನಿತ್ಯ ಸುಂದರ ಮೂರ್ತಯೇ ।
ಶ್ರೀಬ್ರಹ್ಮವೀಂದ್ರಪೂರ್ವೇಡ್ಯ ಕೀರ್ತಿನೇ ಬ್ರಹ್ಮಣೇ ನಮಃ ।।

ಪರಿಪೂರ್ಣವಾದ, ಲೆಕ್ಕಿಸಲು ಸಾಧ್ಯವಿಲ್ಲದ ಗುಣಮಯವಾದ ಉತ್ಕೃಷ್ಟವಾದ ನಿತ್ಯವಾದ ಸುಂದರ ದೇಹವುಳ್ಳ ಲಕ್ಷ್ಮೀ ಬ್ರಹ್ಮ ಗರುಡ ಇಂದ್ರಾದಿಗಳಿಂದ ಸ್ತುತಿಸಲ್ಪಡುವ ಕೀರ್ತಿವುಳ್ಳ ಪರಬ್ರಹ್ಮನಿಗೆ ನಮಸ್ಕಾರಗಳು!

ವಿಶ್ವಂ ಯಸ್ಯ ವಶೇ ಸರ್ವಮನಿಶಂ ಶಂಕರಾದಿಕಮ್ ।
ತಸ್ಯ ವಾಯೋಸ್ತೃತೀಯಾಂಶಮಾಶ್ರಯೇ ಶಮವಾಪ್ತಯೇ ।।

ರುದ್ರಾದಿ ಸಮಸ್ತ ಪ್ರಪಂಚವೂ ಯಾವಾಗಲೂ ಯಾರ ವಶದಲ್ಲಿರುವುದೋ ಅಂಥಹಾ ವಾಯುದೇವರ ತೃತೀಯಾವತಾರಭೂತರಾದ ಶ್ರೀಮದಾಚಾರ್ಯರನ್ನು ಸೌಖ್ಯವನ್ನು ಪಡೆಯಲು ಆಶ್ರಯಿಸುತ್ತೇನೆ!

ಸತ್ಪದ್ಮಬಂಧವೋ ಯಸ್ಯ ಗಾವೋ ವಿಶ್ವತಮೋನುದಃ ।
ಸ ಸ್ಯಾತ್ ತತ್ತ್ವಪ್ರಕಾಶಯ ಜಯತೀರ್ಥ ರವಿರ್ಮಮ ।।

ಯಾವ ಶ್ರೀ ಜಯತೀರ್ಥರ ಮಾತುಗಳು ಸಜ್ಜನರೆಂಬ ಕಮಲಗಳನ್ನು ಅರಳಿಸುವ ಬಂಧುಗಳೂ; ಪ್ರಪಂಚದ ಅಜ್ಞಾನಂಧಕಾರವನ್ನು ನಿವಾರಿಸುವವಗಳೂ ಆಗಿವೆಯೋ ಅಂಥಹಾ ಶ್ರೀಮಜ್ಜಯತೀರ್ಥರೆಂಬ ಸೂರ್ಯನು ನನಗೆ ತತ್ತ್ವಗಳ ಪ್ರಕಾಶವನ್ನುಂಟು ಮಾಡಲಿ!

ಪದವಾಕ್ಯ ಪ್ರಮಾಣಜ್ಞೋ ದುರ್ಮತ ಧ್ವಾಂತ ಭಾಸ್ಕರಃ ।
ವ್ಯಾಸತೀರ್ಥ ಮುನೀಂದ್ರೋ ಮೇ ಭೂಯಾತ್ ಜ್ಞಾನ ಸಮೃದ್ಧಯೇ ।।

ವ್ಯಾಕರಣ - ಮೀಮಾಂಸಾ - ತರ್ಕ ಶಾಸ್ತ್ರ ನಿಪುಣರೂ; ದುರ್ಮತಗಳೆಂಬ ಕತ್ತಲೆಗೆ ಸೂರ್ಯನಂತಿರುವವರೂ ಆದ ಶ್ರೀಮದ್ವ್ಯಾಸತೀರ್ಥ ಮುನಿವರೇಣ್ಯರು ನನಗೆ ಜ್ಞಾನ ಸಮೃದ್ಧಿಯನ್ನುಂಟು ಮಾಡಲಿ!

ಅಸ್ಮದ್ದೇಶಿಕಪಾದಾನಾಂ ಪ್ರಣಮ್ಯ ಚರಣಾಂಬುಜಮ್ ।
ಶ್ರೀಮನ್ನ್ಯಾಯಸುಧಾ ವಾಕ್ಯ ವ್ಯಾಖ್ಯಾಂ ಕುರ್ಮೋ ಯಥಾಮತಿ ।।

ನಮ್ಮ ಗುರುವರ್ಯರಾದ ಶ್ರೀ ಸುಧೀಂದ್ರತೀರ್ಥರ ಪಾದಾರವಿಂದಕ್ಕೆರಗಿ ಯಥಾಮತಿ ಶ್ರೀಮನ್ನ್ಯಾಯಸುಧಾ ವಾಕ್ಯಗಳ ವ್ಯಾಖ್ಯಾನವನ್ನು ಮಾಡುವೆವು. 

" ಪರಿಮಳ " ದ ಅಂತಿಮ ಶ್ಲೋಕಗಳು... 

ಸರ್ವೇಂದ್ರಿಯ ಪ್ರೇರಕೇಣ ಶ್ರೀಪ್ರಾಣಪತಿನೇರಿತಃ ।
ಯದವೋಚಮಹಂ ತೆನ ಪ್ರೀಯತಾಂ ಕಮಲಾಲಯಃ ।।

ಎಲ್ಲರ ಎಲ್ಲ ಇಂದ್ರಿಯಗಳನ್ನು ಪ್ರೇರಿಸುವ, ಲಕ್ಷ್ಮೀ ಮತ್ತು ಮುಖ್ಯಪ್ರಾಣರಿಗೆ ಒಡೆಯನಾದ ಪರಮಾತ್ಮನಿಂದ ಪ್ರೇರಿತನಾಗಿ ಏನನ್ನೂ ನುಡಿದಿದ್ದೇನೆಯೋ ಅದರಿಂದ ಲಕ್ಷ್ಮೀಪತಿಯಾದ ಶ್ರೀ ಹರಿಯು ಪ್ರೀತನಾಗಲಿ!

ಯೇ ತು ನ್ಯಾಯಸುಧಾಪಾನಕಾಮುಕಾ ರಸಿಕಾ ಬುಧಃ ।
ಆಘ್ರಾಯೇಮಂ ಪರಿಮಲಂ ಸೇವಂತಾಂ ತೇ ಸುಧಾಮಿಮಾಮ್ ।।

ಶ್ರೀಮನ್ನ್ಯಾಯಸುಧಾವನ್ನು ಪಾನ ಮಾಡ ಬಯಸಿದ ಜ್ಞಾನಿಗಳಾದ ರಸಿಕರು ಈ ಪರಿಮಳವನ್ನು ಆಘ್ರಾಣಿಸಿ ಸುಧೆಯ ಸ್ವಾದವನ್ನು ಸವಿಯಲಿ!

ಜ್ಞಾನಾಬ್ಧಿರಪ್ಯವಾದೀದ್ಯತ್ ಸ್ಖಲತ್ವಂ ಸ್ವಾತ್ಮನಸ್ತದಾ ।
ಮಾದೃಶಾನಾಂ ಸ್ಖಲತ್ವಂ ಕಿಂ ವಾಚ್ಯಂ ಕ್ಷಾಮ್ಯಂತು ತದ್ಬುಧಾಃ ।।

ಜ್ಞಾನ ಸಮುದ್ರರಾದ ಶ್ರೀಮಟ್ಟೀಕಾಕೃತ್ಪಾದರೆ ತಮ್ಮ ಗ್ರಂಥದಲ್ಲಿ ಸ್ಖಾಲಿತ್ಯವನ್ನು ಶಂಕಿಸಿಕೊಂಡಿರುವಾಗ ನಮ್ಮಂಥವರ ಕೃತಿಯಲ್ಲಿ ಸ್ಖಾಲಿತ್ಯವಿದೆಯೆಂದು ಪ್ರತ್ಯೇಕವಾಗಿ ಏನು ಹೇಳುವುದು? ಜ್ಞಾನಿಗಳಾದವರು ಅದನ್ನು ಕ್ಷಮಿಸಲೆಂದು ಅವರಲ್ಲಿ ಕೇಳಿಕೊಳ್ಳುತ್ತೇನೆ. 

ಶ್ರೀ ರಾಘವೇಂದ್ರಗುರುಸಾರ್ವಭೌಮರು ದ್ವೈತ ವಾಜ್ಮಯಕ್ಕೆ ನೀಡಿದ ಕೊಡುಗೆ ಅನನ್ಯ ಮತ್ತು ಅಪಾರವಾಗಿದೆ. ತಮ್ಮ ಸಿದ್ಧಾಂತವನ್ನು ಸಜ್ಜನರಲ್ಲಿ ಪ್ರಚಾರ ಮಾಡುವ ಮೂಲ ಪುನಃ ಪ್ರತಿಷ್ಠಾಪಿಸುವುದಲ್ಲಿ " ಶ್ರೀ ರಾಘವೇಂದ್ರತೀರ್ಥರು ನಿಷ್ಟಾತರೂ ಹಾಗೂ ಸಮರ್ಥರೂ ಆಗಿರುವುದನ್ನು ಕಂಡು ಶ್ರೀಮದಾಚಾರ್ಯರು ಶ್ರೀವೇದವ್ಯಾಸರ ಬಳಿಯಲ್ಲಿ ಕುಳಿತಿರುವಂತಿದೆ " ಎಂದು " ಶ್ರೀ ರಾಘವೇಂದ್ರ ವಿಜಯ ಮಹಾ ಕಾವ್ಯದಲ್ಲಿ " ... 

ಗುರುರಾದ್ಯಃ ಸ್ವಸಿದ್ಧಾಂತ ಪ್ರತಿಷ್ಠಾಪಣ ಪಂಡಿತಮ್ ।
ಶ್ರುತ್ವಾsಯಂ ವ್ಯಾಸ ನಿಕಟೇ ನಿಶ್ಚಿಂತ ಇವ ವರ್ತತೇ ।।

ಎಂದು ವರ್ಣಿಸಿರುವುದು ಸಮುಚಿತವೆ ಆಗಿದೆ. 

ಭಾಷ್ಯಕಾರರಾಗಿ; ಟೀಕಾಕಾರರಾಗಿ; ಟಿಪ್ಪಣಿಕಾರರಾಗಿ ಶ್ರೀ ಮಧ್ವ ಸಿದ್ಧಾಂತವೆಂಬ ಕಲ್ಪವೃಕ್ಷವನ್ನು ತಮ್ಮ ಉತ್ಕೃಷ್ಟ ಗ್ರಂಥಗಳ ಮೂಲಕ ಫಲಭರಿತವಾಗುವಂತೆ, ಸಜ್ಜನರು ಆಸ್ವಾದಿಸುವಂತೆ ಮಾಡಿದವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು!

ಪೂರ್ವ ಪಕ್ಷ ಸಿದ್ಧಾಂತಗಳಲ್ಲಿ ಅನಿತರ ಸಾಧಾರಣ ಪ್ರಕಾಂಡ ಪಂಡಿತರಾಗಿ ಶ್ರೀಮದಾಚಾರ್ಯರ ಹಾಗೂ ಶ್ರೀಮಜ್ಜಯತೀರ್ಥರ ಕೃತಿಗಳಿಗೆ ಅಪ್ರತಿಮ ಟಿಪ್ಪಣಿಗಳನ್ನು ರಚಿಸಿ.. 

" ಸತ್ಪ್ರಬಂಧ ಪ್ರಣಯನ ವಿಷಯೇ ಸ್ತೂಯತೇ ರಾಘವೇಂದ್ರಃ "

ಎಂದು ಶ್ರೀ ವಾದೀಂದ್ರತೀರ್ಥರಂಥಹಾ ವಿದ್ವನ್ಮಣಿಗಳಿಂದ ಮಾನಿತರಾಗಿ " ಟಿಫ್ಫಣ್ಯಾಚಾರ್ಯಚಕ್ರವರ್ತಿ " ಎಂಬ ಹೆಗ್ಗಳಿಕೆಗೆ ಪಾತ್ರರಾಗಿ  ಪ್ರತಿವಾದಿಗಳನ್ನು ಸಾಡೆ ಬಡಿದು ತತ್ತ್ವಜ್ಞಾನದ ದುಂದುಭಿಯನ್ನು ಎಲ್ಲೆಡೆಯಲ್ಲಿಯೂ ಮೊಳಗಿಸಿದವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು!

ಆದ್ದರಿಂದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಅಂತರಂಗ ಭಕ್ತರಾದ ಶ್ರೀ ಅಪ್ಪಣ್ಣಾಚಾರ್ಯರು.. 

" ಸರ್ವತಂತ್ರ ಸ್ವತಂತ್ರೋsಸೌ ಶ್ರೀ ಮಧ್ವಮತ ವರ್ಧನಃ "

ಎಂಬ ವಿಶೇಷಣಗಳಿಂದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಕೊಂಡಾಡಿರುವರು!! 

****

ಆ ) ಅಣುಭಾಷ್ಯ ವ್ಯಾಖ್ಯಾನ ತತ್ತ್ವಮಂಜರೀ

ಶ್ರೀ ಗುರು ಮಧ್ವರು " ಅಣುಭಾಷ್ಯ " ದ ಮೂಲಕ 34 ಚಿಕ್ಕ ಚಿಕ್ಕ ಪದಗಳಲ್ಲಿ " ಬ್ರಹ್ಮ ಮೀಮಾಂಸಾ ಶಾಸ್ತ್ರದ ಸಮ್ಯಗ್ದರ್ಶನವನ್ನು " ಶಿಷ್ಯರಿಗೆ ಮಾಡಿಸಿದ್ದಾರೆ. ಈ ಕಿಂಡಿಯಲ್ಲಿ ಬ್ರಹ್ಮಾಂಡವನ್ನು ಕಾಣಬೇಕಾದರೆ, ಶ್ರೀ ಗುರುಸಾರ್ವಭೌಮರ " ತತ್ತ್ವ ಮಂಜರೀ " ಯನ್ನು ಅವಶ್ಯವಾಗಿ ಅಭ್ಯಸಿಸಲೇಬೇಕು.

" ಅಣುಭಾಷ್ಯ " ದಲ್ಲಿ ಅಡಗಿದ ಸಕಲ ವೇದಾಂತರ್ಥ, ಭಾಷ್ಯಾರ್ಥಗಳು ಶ್ರೀ ಗುರುಸಾರ್ವಬೌಮರ ಕೃತ " ತತ್ತ್ವ ಮಂಜರೀ " ಯಲ್ಲಿವೆ.

ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಶ್ರೀಮದಾಚಾರ್ಯರಿಂದ ರಚಿತವಾದ ಗ್ರಂಥಗಳ ಮಹಿಮೆಯನ್ನು ಹೇಳುತ್ತಾ " ಅಣುಭಾಷ್ಯ " ದ ಮಹಿಮೆಯನ್ನು ಹೀಗೆ ವರ್ಣಿಸುತ್ತಾರೆ.

" ಪುಟ್ಟ ಮಗುವಾಗಿರುವಾಗ ಬಾಲಕೃಷ್ಣನು ತನ್ನ ಕಿರಿದಾದ ಬಾಯಿಯಲ್ಲಿ ಯಶೋದಾದೇವಿಗೆ ಇಡೀ ಬ್ರಹ್ಮಾಂಡವನ್ನೇ ತೋರಿದ. ಅದೇ ರೀತಿಯಲ್ಲಿ " ಅಣುಭಾಷ್ಯ " ವೆಂಬ ಗಾತ್ರದಲ್ಲಿ ಅತ್ಯಂತ ಚಿಕ್ಕದಾದ ಕೃತಿಯಲ್ಲಿ 564 ಬ್ರಹ್ಮ ಸೂತ್ರಗಳಲ್ಲಿ ಅಡಕವಾಗಿರುವ ಅಷ್ಟೂ ಶಾಸ್ತ್ರ ಪ್ರಮೇಯಗಳನ್ನು  ಆಚಾರ್ಯರೇ ನೀವು ತೋರಿಸಿಕೊಟ್ಟಿದ್ದೀರಿ ".

ಹೀಗೆ " ಅಣುಭಾಷ್ಯ " ದ ಮಹಿಮೆಯನ್ನು ಶ್ರೀ  ತ್ರಿವಿಕ್ರಮ ಪಂಡಿತಾಚಾರ್ಯರು ಹೇಳಿದ್ದು ನಿಜ. ಆದರೆ ನಮ್ಮಂಥಹ ಮಂದ ದೃಷ್ಟಿಯವರಿಗೆ ಅದು ಕಾಣದು. ಅದಕ್ಕಾಗಿಯೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ನಮ್ಮ ಮೇಲಿನ ಅನುಗ್ರಹ ದೃಷ್ಟಿಯಿಂದ ಈ ಗ್ರಂಥಕ್ಕೆ " ತತ್ತ್ವ ಮಂಜರೀ " ಎಂಬ ಟಿಪ್ಪಣಿಯನ್ನು ರಚಿಸಿ ಕೊಟ್ಟಿದ್ದಾರೆ. 

" ಅಣುಭಾಷ್ಯ " ದ ಪ್ರತಿಯೊಂದು ಶಬ್ದಗಳೂ " ಸೂತ್ರ " ಗಳ ಆಂತರ್ಯವನ್ನು ಹೇಗೆ ಸಂಗ್ರಹಿಸುತ್ತವೆ ಎಂಬುದನ್ನು ಶ್ರೀ ರಾಘವೇಂದ್ರತೀರ್ಥರು ಶ್ರೀಮದಾಚಾರ್ಯರು ರಚಿಸಿದ...

ಬ್ರಹ್ಮಸೂತ್ರ ಭಾಷ್ಯ
ಅನುವಾಖ್ಯಾನ
ನ್ಯಾಯ ವಿವರಣಗಳ ಆಧಾರದಲ್ಲಿ ಹಾಗೂ

ನ್ಯಾಯಸುಧಾ
ಚಂದ್ರಿಕಾ

ಮೊದಲಾದ ಟಿಪ್ಪಣಿಗಳಿಗೆ ಅನುಸಾರವಾಗಿ ವಿಶದವಾಗಿ ತಿಳಿಸಿ ಕೊಡುತ್ತಾರೆ. ಈ ರೀತಿಯಾಗಿ ಬಹು ಉಪಯೋಗಿಯಾದ ಟಿಪ್ಪಣಿಯ ಮಂಗಳಾಚರಣ ಶ್ಲೋಕ....

ಸಮಸ್ತಗುಣಸಂಪೂರ್ಣ೦ ಸರ್ವದೋಷವಿವರ್ಜಿತಮ್ ।
ಲಕ್ಷ್ಮೀನಾರಾಯಣಂ ವಂದೇ ಭಕ್ತಾsಭೀಷ್ಟ ಫಲಪ್ರದಮ್ ।।

ಅಂತ್ಯ ಶ್ಲೋಕ :

ನಮೋ ನಮೋsಶೇಷದೋಷದೂರಪೂರ್ಣಗುಣಾತ್ಮನೇ ।
ವಿರಿಂಚಿಶರ್ವಪೂರ್ವೆಡ್ಯವಂದ್ಯಾಯಶ್ರೂವರಾಯತೇ ।।

***

ಇ ) ತತ್ತ್ವಪ್ರಕಾಶಿಕಾ ಭಾವದೀಪ

ಶ್ರೀ ಹರಿ ಭಕ್ತರು ತತ್ತ್ವಗಳ ಸರಿಯಾದ ಜ್ಞಾನವಿಲ್ಲದೇ ಪರಿತಪಿಸುತ್ತಿರುವಾಗ, ಶ್ರೀ ಬ್ರಹ್ಮಾದಿ ದೇವತೆಗಳಿಂದ ಪ್ರಾರ್ಥಿತನಾದ ಶ್ರೀಮನ್ನಾರಾಯಣನು ಸತ್ಯವತಿ ನಂದನನಾಗಿ ಭುವಿಗಿಳಿದನು. ಜ್ಞಾನಾವತಾರಿಯಾದ ಶ್ರೀ ಬಾದರಾಯಣರು ಗೌತಮ ಋಷಿಯ ಶಾಪದಿಂದ ನಷ್ಟವಾದ ವೇದ ವಾಙ್ಞಯವನ್ನು ಬೆಳೆಸಿದನು. ಅಸಮರ್ಥ ಭಕ್ತರ ಅರಿವಿಗಾಗಿ ವೇದಗಳನ್ನು ವಿಭಾಗ ಮಾಡಿ ಶ್ರೀ ವೇದವ್ಯಾಸರೆನಿಸಿದರು. ಅಷ್ಟೇ ಅಲ್ಲದೇ, ವೇದಾರ್ಥಗಳನ್ನು ತಿಳಿಯದೇ ಗೊಂದಲಕ್ಕೀಡಾದ ಸಾತ್ವಿಕರಿಗಾಗಿ " ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಸೂತ್ರ " ಗಳನ್ನು ರಚಿಸಿದನು.

ಅನಂತರ ಕೆಲ ಕಾಲದಲ್ಲಿಯೇ ಶ್ರೀ ಭಾರತೀವಿಜಯ, ಶ್ರೀ ಬ್ರಹ್ಮಘೋಷ, ಶ್ರೀ ಶಂಕರ ಮೊದಲಾದವರ 21 ಭಾಷ್ಯಗಳು ಬ್ರಹ್ಮ ಸೂತ್ರಗಳ ಅಧ್ಯಯನದ ದಿಕ್ಕನ್ನೇ ಬದಲಾಯಿಸಿದವು. ಆದ್ದರಿಂದ ಮತ್ತೊಮ್ಮೆ ದೇವತೆಗಳಿಂದ ಪ್ರಾರ್ಥಿತನಾದ ಶ್ರೀ ಹರಿಯು ಶ್ರೀ ಮುಖ್ಯಪ್ರಾಣದೇವರಿಗೆ ತತ್ತ್ವಜ್ಞಾನ ಪ್ರಪಂಚವನ್ನು ಬೆಳಗಿಸುವಂತೆ ಆದೇಶಿಸಿದನು.

ಆಗ ವೈಷ್ಣವರೆಲ್ಲರೂ ಕಂಡದ್ದು ಶ್ರೀ ಮಧ್ವರ ಅವತಾರ. ಸರ್ವಮೂಲ ಗ್ರಂಥಗಳ ಕರ್ತೃಗಳಾದ ಶ್ರೀ ಆಚಾರ್ಯ ಮಧ್ವರಿಂದ ಮೊದಲು ರಚಿತವಾದದ್ದು " ಗೀತಾಭಾಷ್ಯ ".

ಬದರೀ ಯಾತ್ರೆ ಮಾಡಿ ಶ್ರೀಮದಾಚಾರ್ಯರು ಸಾಕ್ಷಾತ್ತಾಗಿ ತಮ್ಮ ಗುರುಗಳಾದ ಶ್ರೀ ವೇದವ್ಯಾಸದೇವರಿಗೆ ತಮ್ಮ ಪ್ರಥಮ ಕೃತಿಯನ್ನು ಅರ್ಪಿಸಿದರು. ಸಂತುಷ್ಟರಾದ ಶ್ರೀ ವ್ಯಾಸರು ಆಗ " ಕುರು ಸೂತ್ರಭಾಷ್ಯ೦ ಅವಿಲಂಭಿತಂ ವಜೇ: ' ಎಂದು ಆಜ್ಞಾಪಿಸಿದರು.

ಶ್ರೀ  ಆದೇಶದಂತೆ ಶ್ರೀಮದಾನಂದತೀರ್ಥರು ಬ್ರಹ್ಮ ಸೂತ್ರಗಳಿಗೆ ಉತ್ಕೃಷ್ಟವಾದ ಭಾಷ್ಯವನ್ನು ರಚಿಸಿದರು.

ಬ್ರಹ್ಮಸೂತ್ರಗಳು ಸಂಕ್ಷಿಪ್ತವಾಗಿದ್ದು, ಅನೇಕ ಅರ್ಥಗಳನ್ನೊಳಗೊಂಡಿವೆ. ಆದ್ದರಿಂದ ಅವುಗಳನ್ನು ತಿರುಚಿ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಯಾವ ಅರ್ಥವನ್ನಾದರೂ ಹೇಳಬಹುದು. ಆದರೆ ಆ ಅರ್ಥಗಳಲ್ಲಿ  ಪೂರ್ವಾಪರ ವಿರೋಧವಿಲ್ಲದೆ ಉಳಿದ ಶಾಸ್ತ್ರ ಪುರಾಣಗಳಿಗೆ ಸರಿ ಹೊಂದುವಂತೆ ಇರಬೇಕು.

ಆದರೆ ಈ ನಿಟ್ಟಿನಲ್ಲಿ ಶ್ರೀ ಶಾಂಕರ ಮೊದಲಾದ ಭಾಷ್ಯಗಳು ಸೋತಿವೆ. ಶ್ರೀ ಆಚಾರ್ಯ ಮಧ್ವರಾದರೂ  ತಮ್ಮ ಮೂಗಿಗೆ ನೇರವಾಗಿ ವ್ಯಾಖ್ಯಾನ ಮಾಡದೇ, ಶ್ರುತಿ ಸ್ಮೃತಿಗಳನ್ನು ಉದಾಹರಿಸಿ ಅವುಗಳ ಆಧಾರದಿಂದ ಸೂತ್ರಕಾರರಿಗೆ ಸಮ್ಮತವಾದ ಅನೇಕ ಪ್ರಮೇಯಗಳನ್ನೊಳಗೊಂಡ ಭಾಷ್ಯವನ್ನು ರಚಿಸಿದ್ದಾರೆ.

ಇಷ್ಟಾದರೂ ಜಡಮತಿಗಳು ನಮಗೆ ಶ್ರೀ ಆಚಾರ್ಯರ ಸೂತ್ರಭಾಷ್ಯದಿಂದ ವೇದಗಳನ್ನು ತಿಳಿಯಲಾಗಲಿಲ್ಲ. ಆಗ ಶ್ರೀ ಜಯತೀರ್ಥರು ಅವತಾರ ಮಾಡಿ ಭಾಷ್ಯದ ತತ್ತ್ವಗಳನ್ನು ಪ್ರಕಟ ಗೊಳಿಸುವ " ತತ್ತ್ವ ಪ್ರಕಾಶಿಕೆ " ಯನ್ನು ನೀಡಿದರು.

ಆದರೆ ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ರಚಿಸಿದ " ತತ್ತ್ವಪ್ರದೀಪ " ವಿರುವಾಗ " ತತ್ತ್ವಪ್ರಕಾಶಿಕಾ " ಔಚಿತ್ಯವಾದರೂ ಏನು? ಎಂಬ ಕುತೂಹಲ ಎಲ್ಲರಿಗೂ ಉದ್ಭವಿಸುತ್ತದೆ. ಈ ಸಂದೇಹಕ್ಕೆ ಶ್ರೀ ಮಂತ್ರಾಲಯ ಪ್ರಭುಗಳು ಈ ಕೆಳಕಂಡ ಸಮರ್ಥನೆಯನ್ನು ನೀಡಿದ್ದಾರೆ.

ಶ್ರೀ ಜಯತೀರ್ಥರು ತತ್ತ್ವಪ್ರಕಾಶಿಕಾ ಮಂಗಳಾಚರಣೆಯಲ್ಲಿ.....

ಗಂಗಾ ಸಂಗೇನ ನೈರ್ಮಲ್ಯ೦ ರಥ್ಯಾದ್ಧಿರ್ಲಭ್ಯತೇ ಯಥಾ ।
ವಾಚೋ ವಿಶುದ್ಧಿ ಸಿದ್ಧ್ಯರ್ಥಂ ಸಂಗಮ್ಯ೦ತೇ ಗುರೋರ್ಗಿರಃ ।।

ಹೇಗೆ ದಾರಿಯಲ್ಲಿ ಹರಿಯುವ ನೀನು ಗಂಗೆಯ ಜೊತೆಗೂಡಿ ಪವಿತ್ರವಾಗುತ್ತದೆಯೋ, ಹಾಗೆಯೇ ಶ್ರೀ ಆಚಾರ್ಯರ ಭಾಷ್ಯವೆಂಬ ಗಂಗಾ ಪ್ರವಾಹದಿಂದ ನನ್ನ ಮಾತುಗಳ ಶುದ್ಧಿಗಾಗಿ ಟೀಕೆಯನ್ನು ಬರೆಯುತ್ತೇನೆ ".  ಮೇಲ್ನೋಟಕ್ಕೆ ಈ ಸ್ತೋತ್ರವು ಶ್ರೀ ಜಯತೀರ್ಥರ ಸಾರತೆಯನ್ನು ತೋರಿಸುವ ಅಹಂಕಾರ ಖಂಡನ ಪರವಾಗಿದೆ. ಆದರೆ ಇದರಲ್ಲಿ ಅಡಗಿರುವ ಗೂಢಾರ್ಥವನ್ನು ಶ್ರೀ ರಾಯರು ತಿಳಿಸಿ ಕೊಟ್ಟಿದ್ದಾರೆ.

" ತತ್ತ್ವಪ್ರಕಾಶಿಕಾ ವೈಶಿಷ್ಟ್ಯ "

ತತ್ತ್ವ ಪ್ರಕಾಶಿಕೆಯು ಭಾಷ್ಯಕ್ಕೆ  ವ್ಯಾಖ್ಯಾನವಾಗಿಲ್ಲ. ಶ್ರೀಮದಾಚಾರ್ಯರ...

ನ್ಯಾಯವಿವರಣ
ಅನುವ್ಯಾಖ್ಯಾನ

ಮೊದಲಾದ ಕೃತಿಗಳಲ್ಲಿ ನಿರೂಪಿತವಾದ ಪ್ರಮೇಯಗಳನ್ನು ಭಾಷ್ಯದ ಜೊತೆ ಸೇರಿಸಿ ಸಿದ್ಧಾಂತವನ್ನು ಇಲ್ಲಿ ಮಂಡಿಸಲಾಗಿದೆ. ಆದ್ದರಿಂದ ಸಮಗ್ರ ಸೂತ್ರ ಪ್ರಸ್ಥಾನಕ್ಕೆ " ತತ್ತ್ವ ಪ್ರಕಾಶಿಕೆ " ಯು " ಟೀಕೆ " ಯಾಗಿದೆ ಎಂದು  ಹೇಳಬಹುದು.

" ತತ್ತ್ವ ಪ್ರದೀಪ " ವಾದರೂ ಭಾಷ್ಯಕ್ಕೆ ಮಾತ್ರ ವ್ಯಾಖ್ಯಾನವಾಗಿದೆ. ತತ್ತ್ವಪ್ರದೀಪದಲ್ಲಿ ಹೇಳಿರುವ ಅಂಶಗಳನ್ನು ಮಾತ್ರ ತಿಳಿಸದೇ, ಹೊಸ ಅರ್ಥವನ್ನೊಳಗೊಂಡಿರುವುದರಿಂದ " ತತ್ತ್ವ ಪ್ರಕಾಶಿಕೆ " ಯು ಅತ್ಯಗತ್ಯವಾಗಿದೆ.

ಇಂಥಹಾ " ತತ್ತ್ವಪ್ರಕಾಶಿಕಾ " ಇದ್ದರೂ ಶ್ರೀ ಜಯತೀರ್ಥರ ವಾಣಿಯು ಗಹನಗಂಭೀರವಾದ್ದರಿಂದ ಟೀಕೆಯನ್ನು ಸರಕಗೊಳಿಸುವ ಟಿಪ್ಪಣಿಯು ಅಗತ್ಯವಾಯಿತು. ಆಗ ಶ್ರೀ ರಾಯರು ದಾರಿದೀಪರಾಗಿ " ತತ್ತ್ವಪ್ರಕಾಶಿಕಾ ಭಾವದೀಪ " ವನ್ನು ರಚಿಸಿದರು.

ಆದರೆ, ಭಾವದೀಪದ ಮೊದಲು ಶ್ರೀ ವ್ಯಾಸರಾಜ ಗುರುಸಾರ್ವಭೌಮರ " ಚಂದ್ರಿಕಾ " ಹಾಗೂ ಇನ್ನಿತರ ಜ್ಞಾನಿವರೇಣ್ಯರ ವ್ಯಾಖ್ಯಾನಗಳು ಇರುವಾಗ " ಭಾವದೀಪ " ವು ಅವಶ್ಯಕವೆಂಬ ಸಂದೇಹ ಜಿಜ್ಞಾಸುಗಳಲ್ಲಿ ಬೇರೂರುವುದು ಸಹಜ!

" ಭಾವದೀಪದ ಅನಿವಾರ್ಯತೆ "

ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಚಂದ್ರಿಕೆಯು ತತ್ತ್ವಪ್ರಕಾಶಿಕೆಯ ಪ್ರತಿಯೊಂದು ವಾಕ್ಯಗಳನ್ನು ವಿವರಿಸುವುದಿಲ್ಲ. ಚಂದ್ರಿಕೆಯಲ್ಲಿ ನ್ಯಾಯ - ವ್ಯಾಕರಣ - ವೇದಾಂತ ಮತ್ತು ಭೂಯಿಷ್ಠವಾಗಿ ಪೂರ್ವ ಮೀಮಾಂಸಾ ಪ್ರಮೇಯಗಳನ್ನು ಬಳಸಿಕೊಂಡು ಪರಮತಗಳನ್ನು ನಿರಾಕರಿಸಿ ಸ್ವಮತವನ್ನು ಸಮರ್ಥಿಸಲಾಗಿದೆ.

ಚಂದ್ರಿಕೆಯು ಬಹಳ ಗಂಭೀರವಾಗಿ ಬಹ್ವರ್ಥ ಗರ್ಭಿತವಾಗಿದೆ. ಈ ಗ್ರಂಥದ ಅಧ್ಯಯನ ಮಾಡಲು ಉಳಿದ ಶಾಸ್ತ್ರಗಳ ಅರಿವು ಅತ್ಯವಶ್ಯಕವಾಗಿದೆ. ಆದ್ದರಿಂದ ಪ್ರೌಢ ಪ್ರಬಂಧದಂತೆ ಇರುವ ಚಂದ್ರಿಕೆಯ ಅಧ್ಯಯನ ಅಲ್ಪಮತಿಗಳಿಗೆ ಅಸಾಧ್ಯವೇ ಸರಿ!!!

ಶ್ರೀ ಗುರುರಾಜರ ಭಾವದೀಪವಾದರೂ ಟೀಕೆಯ ಪ್ರತಿಯೊಂದು ವಾಕ್ಯವನ್ನೂ ವಿವರಿಸುವುದರಿಂದ ತತ್ತ್ವಪ್ರಕಾಶಿಕೆಯ ನಿಗೂಢ ಅರ್ಥಗಳು ಸರಳವಾಗಿ ತಿಳಿಯುತ್ತವೆ ಮತ್ತು ಇಲ್ಲಿ ಟೀಕೆಗೂ, ಚಂದ್ರಿಕೆಯಲ್ಲಿ ಉಕ್ತವಾದ ಪ್ರಮೇಯಗಳಿಗೂ ಸಂಬಂಧವನ್ನು ತಿಳಿಸಲಾಗಿದೆ. ಚಂದ್ರಿಕೆಯಲ್ಲಿ ಪ್ರಾಯಶಃ ಎಲ್ಲಾ ಮತೀಯರನ್ನೂ ಖಂಡಿಸಲಾಗಿದೆ.

ಆದರೆ, ಶ್ರೀ ವ್ಯಾಸರಾಜರ ನಂತರ ಬಂದಿರುವ ಶ್ರೀ ಅಪ್ಪಯ್ಯದೀಕ್ಷಿತರೇ ಮೊದಲಾದವರ ಆಕ್ಷೇಪಗಳನ್ನು ಭಾವದೀಪದಲ್ಲಿ ಚಿಂತಿಸಿ, ಖಂಡನೆ ಮಾಡಿದ್ದಾರೆ. ಈ ಅಂಶವನ್ನು ಶ್ರೀ ಗುರುರಾಯರೇ ಭಾವದೀಪದ ಮಂಗಳಾಚರಣೆಯಲ್ಲಿ ಹೇಳಿದ್ದಾರೆ.

ನೂತನೈರುದಿತಾ ಯೇ ತು ದೋಷಾಸ್ತೇಷಾಮಲಗ್ನತಾಂ ।
ಸಂಪ್ರದರ್ಶಯಿತುಂ ಚಾತಃ ಪ್ರಸನ್ನಾ: ಸಂತು ಸಜ್ಜನಾಃ ।।

ಮತ್ತು ಮಂದ ಬುದ್ಧಿಯವರಿಗೆ ಸುಲಭವಾಗಿ ಅರ್ಥವಾಗಲೂ ಇದು ಸಹಾಯಕವಾಗಿದೆ.

" ಅಪಿ ಮಂದಕೃತೇ ಸರ್ವ ವಿಷಯಾ ಚ ಕೃತಿರ್ಮಮ "

ಅಷ್ಟೇ ಅಲ್ಲದೇ, ಚಂದ್ರಿಕೆಯ ಮೊದಲಿನ ೨ ಅಧ್ಯಾಯಗಳಿಗೆ ಮಾತ್ರ ರಚಿತವಾಗಿದೆ. ಕೊನೆಯ ೨ ಅಧ್ಯಾಯಗಳಿಗೆ ಭಾವದೀಪವೇ ಶ್ರೀ ಚಂದ್ರಿಕಾಚಾರ್ಯರ ಕೆಲಸವನ್ನು ಮಾಡಿದೆ. ಕೊನೆಯ ೨ ಅಧ್ಯಾಯಗಳಲ್ಲಿ ಭಾವದೀಪದ ಶೈಲಿಯು ಮೊದಲಿನ ೨ ಅಧ್ಯಾಯಗಳ ಶೈಲಿಗಿಂತಾ ಭಿನ್ನವಾಗಿದೆ.

ಈ ಕಾರಣದಿಂದ ಭಾವದೀಪವು ಮೊದಲಿನ ೨ ಅಧ್ಯಾಯಗಳಿಗೆ ಕೇವಲ ಟಿಪ್ಪಣಿಯಾದರೆ, ಕೊನೆಯ ೨ ಅಧ್ಯಾಯಗಳಿಗೆ ವ್ಯಾಖ್ಯಾನವೂ ಆಗಿದೆ.

ತತ್ತ್ವಪ್ರಕಾಶಿಕಾದಲ್ಲಿ ಶ್ರೀ ಆಚಾರ್ಯರ ಇತರ ಗ್ರಂಥಗಳಾದ ನ್ಯಾಯ ವಿವರಣ, ಅನುವ್ಯಾಖ್ಯಾನ ಮೊದಲಾದವುಗಳಲ್ಲಿ ಉದಾಹರಿದ ತತ್ತ್ವಗಳನ್ನು ಭಾಷ್ಯದ ಜೊತೆ ಸೇರಿಸಿ ವ್ಯಾಖ್ಯಾನ ಮಾಡಲಾಗಿದೆ.

ನ್ಯಾಯವಿವರಣ ಮೊದಲಾದ ಗ್ರಂಥಗಳು ಅತಿ ವಿಸ್ತಾರವಾದ್ದರಿಂದ ಟೀಕೆಯಲ್ಲಿ ಉಕ್ತವಾದ ನಿರ್ಧಿಷ್ಟ ಭಾಗವು ಗೊತ್ತಾಗದೆ ಮತ್ತೆ ಗೊಂದಲಕ್ಕೆ ಸಿಲುಕುವ ಸಾಧ್ಯತೆ ಇದೆ. ಆಗ ಶ್ರೀ ರಾಯರು ಶ್ರೀಮದಾಚಾರ್ಯರು ಹೇಳಿರುವ ನಿರ್ಧಿಷ್ಟ ಭಾಗವನ್ನು ಆರಿಸಿ ಅವುಗಳನ್ನು ಟೀಕೆಯ ವಾಕ್ಯಗಳೊಂದಿಗೆ ವಿವರಿಸುತ್ತಾರೆ.

ಈ ತರಹದ ದೃಷ್ಟಿಯು ಉಳಿದ ಟಿಪ್ಪಣಿಗಳಲ್ಲಿ ಇಲ್ಲವಾದ್ದರಿಂದ ಭಾವದೀಪವು ಉಚಿತವೆನಿಸುತ್ತದೆ.

ಹೀಗೆ ಮಂದ ಮತಿಗಳಿಗೆ ನೆರವಾಗುವ ಶ್ರೀ ರಾಯರು ಉಳಿದ ಟಿಪ್ಪಣಿಗಳಲ್ಲಿ ಹೇಳಿರುವ ವಿಷಯದ ಗೊಡುವೆಗೆ ಹೋಗದೇ, ಇದು ನಮ್ಮ ಅಭಿಪ್ರಾಯವೆಂದು ಪಾಂಡಿತ್ಯ ಪ್ರದರ್ಶನವನ್ನು ಎಲ್ಲಿಯೂ ಮಾಡಿಕೊಂಡಿಲ್ಲ.

ಶ್ರೀ ರಾಯರ ಶೈಲಿಯು ಸಂಕ್ಷಿಪ್ತವಾದರೂ ಅರ್ಥತಃ ಬಹು ವಿಸ್ತಾರವಾಗಿದೆ. ಹೀಗೆ ಎಲ್ಲಾ ಟಿಪ್ಪಣಿಕಾರರಿಗೆ ಆದರ್ಶವಾದ ಶ್ರೀ ರಾಯರ ಶೈಲಿಗೆ ಕಾರಣ ಅವರಿಗಿರುವ ಅಗಾಧವಾದ ಚತು: ಶಾಸ್ತ್ರ ಪಾಂಡಿತ್ಯ ಮತ್ತು ಬ್ರಹ್ಮಸೂತ್ರಗಳಲ್ಲಿ ಇರುವ ವಿಶೇಷ ಆಸಕ್ತಿ.

ಬ್ರಹ್ಮಸೂತ್ರಗಳಿಗೆ ಸಂಬಂಧಿಸಿದಂತೆ ಶ್ರೀ ರಾಯರು ಒಟ್ಟು ೬ ಗ್ರಂಥಗಳನ್ನು ರಚಿಸಿದ್ದಾರೆ.

ಶ್ರೀಮನ್ನ್ಯಾಯಸುಧಾಕ್ಕೆ " ಪರಿಮಳ "
ತತ್ತ್ವಪ್ರಕಾಶಿಕೆಗೆ ಭಾವದೀಪ
ಚಂದ್ರಿಕಾಕ್ಕೆ ಪ್ರಕಾಶ
ಅಣುಭಾಷ್ಯಕ್ಕೆ ತತ್ತ್ವಮಂಜರೀ
ಬ್ರಹ್ಮಸೂತ್ರಗಳಿಗೆ ಸ್ವತಂತ್ರ ರೂಪವಾದ ನ್ಯಾಯ ಮುಕ್ತಾವಲೀ
ಬ್ರಹ್ಮಸೂತ್ರಗಳ ಅರ್ಥವನ್ನು ತಿಳಿಸುವ ತಂತ್ರದೀಪಿಕಾ

ಈ ೬ ಗ್ರಂಥಗಳಲ್ಲಿ ಎಲ್ಲಿಯೂ ಅನವಶ್ಯಕವಾದ ಹೇಳಿದ್ದಾನ್ನೇ ಹೇಳುವ ಪದಗಳನ್ನು ನೋಡಲಾರೆವು. ಪ್ರಕೃತ ಭಾವದೀಪವು ಟೀಕೆಯ ಗಾಂಭೀರ್ಯವನ್ನು ತಿಳಿಸಲು ಉತ್ತಮ ಸಾಧನವಾಗಿದೆ. ಇಲ್ಲಿ ಶ್ರೀ ಗುರುರಾಜರು ಇನ್ನೊಬ್ಬರು ಹೇಳುವ ಅಂಶವನ್ನು ಹೇಳದೆ ಉಳಿದ ವಿಷಯವನ್ನು ಮಾತ್ರ ತಿಳಿಸುವುದನ್ನು ಮನಗಾಣಬಹುದು.

ಹೀಗೆ ಶ್ರೀಮದಾಚಾರ್ಯರು ಉದಾಹರಿಸಿದ ಒಂದೊಂದು ಶ್ರುತಿಗೂ ಶ್ರೀ ಜಯತೀರ್ಥರು ಟೀಕೆಯ ಬಹ್ವರ್ಥವನ್ನೊಳಗೊಂಡಿದೆ.

ಶ್ರೀಮದಾಚಾರ್ಯರೇ ತಮ್ಮ ಇತರ ಗ್ರಂಥಗಳಲ್ಲಿ ಹೇಳುವ ಪ್ರಮೇಯಗಳನ್ನು ಭಾಷ್ಯದ ವಾಕ್ಯದೊಂದಿಗೆ ಸೇರಿಸಿ ಸಮನ್ವಯ ಮಾಡುವ ಶ್ರೀ ರಾಯರ ಶೈಲಿ ಅಪೂರ್ವ - ಅದ್ಭುತ - ಅದ್ವಿತೀಯವಾಗಿದೆ.

" ಭಾವದೀಪ " ದಲ್ಲಿ ಶ್ರೀಮದಾಚಾರ್ಯರು ತಿಳಿಸಿದ ಸ್ಥಳವನ್ನು ಗುರುತಿಸಿ ಆ ವಾಕ್ಯಗಳನ್ನು ಟೀಕೆಯ ವಾಕ್ಯದೊಂದಿಗೆ ಸೇರಿಸಿ ಟಿಪ್ಪಣಿಯನ್ನು ಬರೆದಿರುವುದನ್ನು ನೋಡಬಹುದು.

ಇಂಥಹ ಕ್ರಮವನ್ನು ಟಿಪ್ಪಣಿಯ ಉದ್ದಗಲಕ್ಕೂ ನೋಡಬಹುದು. ಈ ಭಾಗದ ಕೊನೆಯಲ್ಲಿ ಶ್ರೀ ರಾಯರು....

ಟೀಕಾ ಗಾಂಭೀರ್ಯ ಮಾಹಾತ್ಮ್ಯ೦ ಮರ್ಶ೦ ಮರ್ಶ೦ ಪುರೋ ಮನಃ ।
ನೈತಿ ತದ್ವಿಸ್ತರಭಯಾತ್ಯರೋತ್ಯಗ್ರೇಸರಂ ಮನಃ ।।

" ಟೀಕೆಯ ಅರ್ಥವತ್ತತೆಯನ್ನೂ, ಗಾಂಭೀರ್ಯವನ್ನೂ ಅವಲೋಕಿಸಿದಾಗ ಪುನಃ ಪುನಃ ಅದೇ ವಾಕ್ಯಗಳಿಗೆ ವ್ಯಾಖ್ಯಾನ ಮಾಡಬೇಕಾಗುತ್ತದೆ. ನನ್ನ ಮನಸ್ಸು ಮುಂದಿನ ವಾಕ್ಯಗಳತ್ತ ತೆರಳುವುದೇ ಇಲ್ಲ. ಆದರೆ ನನ್ನ ಗ್ರಂಥ ಮುಗಿಯದೆ ಬಹು ವಿಸ್ತಾರವಾಗುವುದರಿಂದ ಒಲ್ಲದ ಮನಸ್ಸಿನಿಂದ ಮುಂದಿನ ವಾಕ್ಯಗಳತ್ತ ಚಿತ್ತ ಹರಿಸುತ್ತೇನೆ ".

ಹೀಗೆ ಶ್ರೀ ರಾಯರು ಟೀಕೆಯ ಗಾಂಭೀರ್ಯವನ್ನು ಎಲ್ಲಾ ಪಾಮರರಿಗೂ ತಿಳಿಸಿ ಮನಸೇಚ್ಛೆಯಾಗಿ ಶ್ರೀ ಜಯತೀರ್ಥರನ್ನು ಬಹು ವಿಧವಾಗಿ ಕೊಂಡಾಡಿದ್ದಾರೆ.

ಅಂತಿಮವಾಗಿ ಹೇಳಬಹುದಾದದ್ದು ಇಷ್ಟೇ! ಶ್ರೀ ರಾಯರು ಟೀಕೆಯ ವಿಷಯದಲ್ಲಿ ಹೇಳುವ ಈ ಶ್ಲೋಕವನ್ನು ಭಾವದೀಪಕ್ಕೆ ಸಮನ್ವಯ ಮಾಡುವುದೇ " ಭಾವದೀಪ " ದ ನಿಜವಾದ ಪ್ರಶಂಸೆಯಾಗುತ್ತದೆ.

ಆದಿ :
ಲಕ್ಷ್ಮೀನಾರಾಯಣಂ ನತ್ವಾ ಪೂರ್ಣಬೋಧಾನ್ ಗುರೂನಪಿ ।
ತತ್ತ್ವಪ್ರಕಾಶಿಕಅಭಾವದೀಪಂ ಕುರ್ಯಾಂ ಯಥಾಮತಿ ।।

ಅಂತ್ಯ :

ಸರ್ವೇ೦ದ್ರಿಯಪ್ರೇರಕೇಣ ಶ್ರೀ ಪ್ರಾಣಪತಿನೇರಿತಃ ।
ಯದವೋಚಮಹಂತೇನ ಪ್ರೀಣಾತು ಕರುಣಾಕರಃ ।।



ಮುಂದುವರೆಯುವುದು........
|| ಶ್ರೀಮನ್ಮೂಲರಾಮೋ ವಿಜಯತೇ || 
|| ಶ್ರೀಗುರುರಾಜೋ ವಿಜಯತೇ || 

ಪೂಜ್ಯಾಯ ರಾಘವೇಂದ್ರಾಯ | ಸತ್ಯಧರ್ಮರತಾಯಚ | 
ಭಜತಾಂ ಕಲ್ಪವೃಕ್ಷಾಯ | ನಮತಾಂ ಕಾಮಧೇನವೇ || 
ದುರ್ವಾದಿಧ್ವಾಂತರವಯೇ | ವೈಷ್ಣವೇಂದೀವರೇಂದವೇ | 
ಶ್ರೀರಾಘವೇಂದ್ರಗುರವೇ | ನಮೋऽತ್ಯಂತದಯಾಲವೇ || 

ಅರ್ಥ: 

ಪೂಜ್ಯಾಯ - ಪರಮಪೂಜ್ಯರಾದ 

ಸತ್ಯಧರ್ಮರತಾಯ- ಸತ್ಯ ಮತ್ತು ಧರ್ಮಗಳನ್ನು ಆಚರಿಸುವುದರಲ್ಲಿ ಮಗ್ನರಾದ 

ಭಜತಾಮ್ - ಭಜಿಸುವವರಿಗೆ

ಕಲ್ಪವೃಕ್ಷಾಯ- ಬಯಸಿದ್ದನ್ನು ದಯಪಾಲಿಸುವ ಕಲ್ಪವೃಕ್ಷದಂತೇ ಆಚರಣೆಯುಳ್ಳ 

ನಮತಾಮ್- ನಮಸ್ಕರಿಸುವವರಿಗೆ 

ಕಾಮಧೇನವೇ - ಇಚ್ಛಿಸಿದ್ದನ್ನು ದಯಪಾಲಿಸುವ ಕಾಮಧೇನುವಿನಂತೇ ಇರುವ 

ದುರ್ವಾದಿಧ್ವಾಂತರವಯೇ - ದುರ್ಮತಗಳೆಂಬ ಅಂಧಕಾರಕ್ಕೆ ಸೂರ್ಯರಂತಿರುವ 

ವೈಷ್ಣವೇಂದೀವರೇಂದವೇ- ವಿಷ್ಣುವಿನ ಭಕ್ತರೆಂಬ ಕಮಲಗಳಿಗೆ ಚಂದ್ರರಂತಿರುವ 

ಅತ್ಯಂತದಯಾಲವೇ- ಅತ್ಯಂತದಯಾಳುಗಳಾದ 

ರಾಘವೇಂದ್ರಾಯ- ರಘುವಂಶದಲ್ಲಿ ಶ್ರೇಷ್ಠರಾದ ಶ್ರೀರಾಮದೇವರನ್ನೇ ಸರ್ವದೇವತೆಗಳಲ್ಲಿ ಶ್ರೇಷ್ಠರೆಂದು ತಿಳಿದ (ಸಾರಿದ) 

*ಶ್ರೀರಾಘವೇಂದ್ರಗುರವ  ಶ್ರೀರಾಘವೇಂದ್ರತೀರ್ಥರಿಗೆ 

ನಮಃ - ನಮಸ್ಕಾರವು.

|| ನಾಹಂ ಕರ್ತಾ ಹರಿಃ ಕರ್ತಾ ||





ಮನವೆಂಬ ದೇಗುಲ  
ಮನವೆಂಬ ದೇಗುಲದೆ  ಕೃಷ್ಣಾ 
ನಿನ್ನ ನೆನೆಸಿ  ಬಕುತಿಯಲಿ ಪೂಜಿಸೆ, 
ರಾಮನಾಮದ ಪುಷ್ಪಾರ್ಚನೆಯ ಮಾಡಿ, 
ಸಂತಸದ ಹೂಮಾಲೆಯ ಹಾಕಿ , 
ಅನ್ಯರ ಒಳಿತೆ ನೈವೆಧ್ಯವಾಗಿಸೆ, 
ದೈನ್ಯತೆಯ ದೂಪ ಸೇವೆಯಲಿ 
ಜ್ಞಾನ ಜ್ಯೋತಿಯ ಆರತಿ ಮಾಡಿ,
ದಾನ ಧರ್ಮವೆಂಬ ತಾಂಬೂಲವ ನೀಡೆ 
ಪರೋಪಕಾರದ ಪ್ರದಕ್ಷಿಣೆಯಿಂದ 
ಸರ್ವೆಜನಾಹ ಸುಖಿನೋಭವಂತು ಪ್ರಾರ್ಥನೆಯಲಿ 
ಗುರು ರಾಯರ ಬಕುತಿಯಲಿ ನೆನೆದರೆ, 
ಮನೆಯೇ ರಾಯರ ಮಂತ್ರಾಲಯ 
ಮನವೇ ರಾಯರುನೆಲೆಸಿಹ ವೃಂದಾವನ. 
ನೀಡುವನು ಮುಕುತಿಯ ಲಕ್ಷ್ಮೀಜನಾರ್ಧನ.

ಕಮಲಾತನಯ.  🙏🙏🙏🙏



" ಶ್ರೀ ರಾಯರ ಮಹಿಮೆ "
" ಮಂತ್ರಸಿದ್ಧರು ಶ್ರೀ ವೇಂಕಟನಾಥಾಚಾರ್ಯರು "
ಶ್ರೀ ವೇಂಕಟಾರ್ಯರು ಶ್ರೀ ಸುಧೀಂದ್ರತೀರ್ಥರ ಅಪ್ಪಣೆಯ ಮೇರೆಗೆ ಕಾವೇರಿ ಪಟ್ಟಣಕ್ಕೆ ಕುಟುಂಬ ಸಹಿತ ಹೊರಟರು.
ಕಾವೇರಿ ಪಟ್ಟಣದ ಮಾರ್ಗ ಮಧ್ಯದಲ್ಲಿ ಒಂದು ಅಗ್ರಾಹಾರಕ್ಕೆ ಬಂದರು. ರಸ್ತೆಯ ಎರಡೂ ಪಾರ್ಶ್ವದಲ್ಲೂ ಮನೆಗಳು. ಎದುರುಗಡೆ ಒಂದು ಸರೋವರ ಮತ್ತು ದೇವರಗುಡಿಯಿಂದ ಶೋಭಿಸುತ್ತಿತ್ತು ಆ ಅಗ್ರಹಾರ.
ಶ್ರೀ ವೇಂಕಟಾರ್ಯರು ಸಾಧ್ವೀ ಸರಸ್ವತಮ್ಮರೊಂದಿಗೆ ಗಾಡಿಯಿಂದಿಳಿದು ಸರೋವರದಲ್ಲಿ ಕೈಕಾಲು ತೊಳೆದು ಅಲ್ಲೇ ಹತ್ತಿರಲ್ಲಿರುವ ಶಿಲಾ ಮಂಟಪದಲ್ಲಿ ವಿಶ್ರಾಂತಿಗಾಗಿ ಕುಳಿತರು.
ಆ ಸಮಯಕ್ಕೆ ವ್ಯಕ್ತಿಯೊಬ್ಬ ಬಂದು " ಸ್ವಾಮೀ! ನೀವು ಹೊಸಬರೆಂದು ತೋರುವುದು? " ಎಂದು ಕೇಳಲು...
ಶ್ರೀ ವೇಂಕಟಾರ್ಯರುಅಹುದು! ನಾವು ಕಾವೇರಿ ಪಟ್ಟಣಕ್ಕೆ ಹೊರಟಿದ್ದೇವೆ. ಇಲ್ಲಿ ಮಾಧ್ವರ ಮನೆಯಿದೆಯೇ? ಎಂದು ಶ್ರೀ ವೇಂಕಟಾರ್ಯರು ಕೇಳಲು....
ಆ ವ್ಯಕ್ತಿ ಶ್ರೀ ವೇಂಕಟಾರ್ಯರ ತೇಜಸ್ಸಿಗೆ ಪ್ರಭಾವಿತನಾಗಿ...
ಸ್ವಾಮೀ ನಾನೂ ಮಾಧ್ವ ಬ್ರಾಹ್ಮಣನೇ! ನನ್ನ ಹೆಸರು ಭೀಮರಾಯನೆಂದು. ನಾನೇ ಗ್ರಾಮದ ಜಮೀ೦ದಾರನು. ನನ್ನ ಮನೆಯಲ್ಲಿ ಬದರೀ ಸಮಾರಾಧನೆಯಿದೆ. ತಾವು ದಯಮಾಡಿ ನನ್ನ ಸತ್ಕಾರ ಸ್ವೀಕರಿಸಿ ಭೋಜನ ಮಾಡಿ ಮುಂದೆ ಪ್ರಯಾಣ ಮಾಡಬಹುದು ಎಂದು ಬೇಡಿಕೊಂಡಾಗ...
ಆತನ ಸೌಜನ್ಯಾದಿಗಳಿಂದ ಪ್ರೀತರಾದ ಶ್ರೀ ವೇಂಕಟಾರ್ಯರುಸಮ್ಮತಿಸಿದರು. ಭೀಮರಾಯನು ತನ್ನ ಮನೆಗೆ ಕರೆದುಕೊಂಡು ಹೋಗಿ ಶ್ರೀ ವೇಂಕಟಾರ್ಯರಿಗೆ ವಸತಿ ಸೌಕರ್ಯವನ್ನು ಮಾಡಿಕೊಟ್ಟನು.
ಶ್ರೀ ವೇಂಕಟಾರ್ಯರುಸ್ವಲ್ಪ ವಿಶ್ರಾಂತಿ ಪಡೆದು, ಸರೋವರದಲ್ಲಿ ಸ್ನಾನಾದಿ ಮುಗಿಸಿಕೊಂಡು ಬಂದು ಸಂಧ್ಯಾ - ಪೂಜಾದಿಗಳನ್ನು ಮುಗಿಸಿ ಪಾರಾಯಣ ಮಾಡುತ್ತಾ ಭೀಮರಾಯನ ಮನೆಯ ಪಡಶಾಲೆಯಲ್ಲಿ ಕುಳಿತರು.
ಒಂದು ಕ್ಷಣವಾಗಿರಬಹುದು. ದಷ್ಟಪುಷ್ಟ ಯುವಕನೊಬ್ಬನು ಅಲ್ಲಿಗೆ ಬಂದು ಸುತ್ತಾಡುತ್ತಾ ಶ್ರೀ ವೇಂಕಟಾರ್ಯರ ಬಳಿಗೆ ಬಂದು " ತಾವು ಭೋಜನಕ್ಕೆ ಬಂದವರೋ " ಎಂದನು.
ಶ್ರೀ ವೇಂಕಟಾರ್ಯರು " ತಾವ್ಯಾರೋ ತಿಳಿಯಲಿಲ್ಲ? ತಮ್ಮ ಪರಿಚಯ " ಎಂದರು.
ಆ ಯುವಕ ಎಡೆವುಬ್ಬಿಸಿ ಆಢ್ಯತೆಯಿಂದ....
ನನ್ನ ಹೆಸರು ಮುಕುಂದ. ಈ ಮನೆಯಲ್ಲಿ ನಾನು ಹೇಳಿದಂತೆಯೇ ನಡೆಯುತ್ತದೆ. ಈಗ ತಿಳಿಯಿತೇ ನಾನ್ಯಾರೆಂದು? ಹುಸಿ ನಗೆ ಬೀರಿ ಮತ್ತೆ " ಏನು ಸ್ವಾಮೀ! ಎಲ್ಲರೂ ಊಟಕ್ಕೆ ಬರುತ್ತಾರೆಯೇ ವಿನಃ ಸ್ವಲ್ಪ ಸಹಾಯವಾದರೂ ಮಾಡಬಾರದೇ? ಎಂದನು.
ತಮ್ಮನ್ನು ಊಟಕ್ಕೆ ಬಂದ ದೇಶಾವರ ಬ್ರಾಹ್ಮಣನಂತೆ ಕಂಡು ಮಾತನಾಡಿದ್ದರಿಂದ ವ್ಯಥೆಯಾದರೂ ಅದನ್ನು ತೋರಗಾಣದೆ ಶ್ರೀ ವೇಂಕಟಾರ್ಯರು" ನನ್ನಿಂದ ತಮಗೇನು ಸಹಾಯವಾಗಬೇಕು? ಎಂದರು.
ನೋಡಲು ದಷ್ಟಪುಷ್ಟರಾಗಿದ್ದೀರಿ! ಇಂದು ಈ ಮನೆಯಲ್ಲಿ ನೂರಾರು ಜನಕ್ಕೆ ಗಂಧಾಕ್ಷತೆ ಕೊಡಬೇಕು. ನೀವು ಅದನ್ನು ಸಿದ್ಧ ಮಾಡಿಕೊಡಬೇಕು ತಿಳಿಯಿತೇ? ಎಂದು ಹೇಳಿ ದೇವರ ಮನೆಯಿಂದ ದೊಡ್ಡ ಸಾಣೇಕಲ್ಲು, ಗಂಧದ ಕೊರಡು, ಒಂದು ತಂಬಿಗೆ ನೀರು ತಂದು ಶ್ರೀ ವೇಂಕಟಾರ್ಯರ ಮುಂದೆ ಇತ್ತು " ಹೂಂ ಪ್ರಾರಂಭಿಸಿ " ಎಂದು ಹೇಳಿ ಹೊರಟುಹೋದನು.
ಶ್ರೀ ವೇಂಕಟಾರ್ಯರ ಮನಸ್ಸಿಗೆ ನೋವಾದರೂ ಬ್ರಾಹ್ಮಣರ ಸೇವೆ, ಭಗವಂತನು ಪ್ರೀತನಾಗುವನು ಎಂದು ಭಾವಿಸಿದರು.
ಮನೆಯ ಯಜಮಾನ ಎಂಥಾ ಸದ್ಗ್ರುಹಸ್ಥ, ವಿನಯಶೀಲ. ಅವರ ಮನೆಯ ಪುರೋಹಿತರ ಮಗ ಮುಕುಂದ ಎಂಥಾ ಗಡಸು ಮನುಷ್ಯ. ಎಂಥಾ ಅಸಭ್ಯ ವರ್ತನೆ. ಜಗತ್ತಿನಲ್ಲಿ ಇಂಥವರೂ ಇದ್ದಾರಲ್ಲಾ ಎಂದು ವಿಸ್ಮಿತರಾಗಿ ಶ್ರೀ ವೇಂಕಟಾರ್ಯರುಗಂಧವನ್ನು ತೆಗೆಯಲು ಪ್ರಾರಂಭಿಸಿದರು.
ಶ್ರೀ ವೇಂಕಟಾರ್ಯರ ಮುಖದಿಂದ ತಾನಾಗಿಯೇ " ಅಗ್ನಿಸೂಕ್ತ " ಹೊರಹೊಮ್ಮಿತು.
ಅಗ್ನಿ: ಸಪ್ತಿ೦ ವಾಜಂಭರಂ ದದಾತ್ಯಗ್ನಿರ್ವೀರಂ ಶೃತ್ಯಂ ಕರ್ಮನಿಷ್ಠಾಮ್ ।


ಅಗ್ನೀರೋದಸೀ ವಿಚರತ್ಸ ಮಂಜನ್ನಗ್ನಿರ್ನಾರೀಂ ವೀರಕುಕ್ಷಿ೦ ಪುರಂಧೀಮ್ ।।


ಹೀಗೆ ಶ್ರೀ ವೇಂಕಟಾರ್ಯರುವೇದ ಪಾರಾಯಣ ಮಾಡುತ್ತಾ ಗಂಧ ತೆಗೆಯುವಾಗ ಮುಕುಂದನು ಮತ್ತೆ ದಡದಡನೆ ಬಂದು " ಓಹೋ ವೇದ ಬೇರೇ ಬರುತ್ತೋ? ಸಾಕು ನಿಮ್ಮ ಪಾರಾಯಣ. ಹೂಂ ಬೇಗ ಮುಗಿಸಿ ಹೊತ್ತಾಯಿತು " ಎಂದು ಗಟ್ಟಿಯಾಗಿ ಹೇಳಿ ಹೊರಟನು!
ಅದೇ ವೇಳೆಗೆ ಅಕಸ್ಮಾತ್ ಪಡಶಾಲೆಗೆ ಬಂದ ಸರಸ್ವತಮ್ಮ ಅವರಿಗೆ ಮುಕುಂದನ ಗದರಿಕೆ, ಪತಿಯು ಗಂಧ ತೆಗೆಯುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು. ಅದನ್ನು ಕಂಡ ಸರಸ್ವತಮ್ಮ ಅವರ ಹೊಟ್ಟೆಯಲ್ಲಿ ತಳಮಳವಾಯಿತು.
ಎಂಥಾ ಅನ್ಯಾಯ? ರಾಜರಿಂದ, ಪೀಠಾಧಿಪತಿಗಳಿಂದ ಗೌರವಿಸಲ್ಪಟ್ಟ ತನ್ನ ಪತಿ ಸಾಮಾನ್ಯನಂತೆ ಗಂಧ ತೆಗೆಯುವುದೇ?
ವೇದವಿದ್ಯಾಪಾರಂಗತರೂ, ಸಕಲ ಶಾಸ್ತ್ರಪಾರೀಣ, ಷಾಷ್ಠಿಕ ಕುಲ ಭೂಷಣ - ಇಂಥಾ ಮಹಾನುಭಾವರಿಂದ ಒಬ್ಬ ಸಾಮಾನ್ಯ ಗದರಿಸಿ ಗಂಧ ತೇಯಿಸುವುದೇ? ಎಂಬ ದುಃಖ - ಉದ್ವೇಗಗಳಿಂದ ಆ ಸಾಧ್ವಿಯ ಕಣ್ಣಿನಿಂದ ಧಾರಾಕಾರವಾಗಿ ನೀರು ಹರಿಯಿತು! ಪತಿಗಾದ ಅಗೌರವವನ್ನು ಕಂಡು ಕೋಮಲ ಹೃದಯದ ಸರಸ್ವತಮ್ಮನವರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆ ಅಳುವಿನ ಧ್ವನಿ ಕೇಳಿ ತಲೆ ಎತ್ತಿದರು ಶ್ರೀ ವೇಂಕಟಾರ್ಯರು.
ಸಾಧ್ವೀ ಸರಸ್ವತಮ್ಮನವರ ಕಣ್ಣುಗಳಿಂದ ನೀರು ಹರಿಯುತ್ತಿದೆ. ಪತಿ ಪತ್ನಿಯರ ದೃಷ್ಟಿ ಒಂದಾದಾಗ ಶ್ರೀ ವೇಂಕಟಾರ್ಯರುಮೂಗಿನ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ಸಂಜ್ಞೆ ಮಾಡಿದರು.
ಶ್ರೀ ವೇಂಕಟಾರ್ಯರುಬೇಗ ಗಂಧಾಕ್ಷತೆ ಸಿದ್ಧಪಡಿಸಿ ಪಾರಾಯಣ ಮಾಡುತ್ತಾ ಕುಳಿತರು. ಇತ್ತ ಮುಕುಂದ ಗಂಧಾಕ್ಷತೆ ತೆಗೆದುಕೊಂಡು ಹೋಗಿ, ದೇವರ ನೈವೇದ್ಯ ಮುಗಿಸಿ ತೀರ್ಥ - ಗಂಧಾಕ್ಷತೆ ಕೊಟ್ಟು ಭೋಜನಕ್ಕೆ ಕೂಡಲು ಏರ್ಪಾಟು ಮಾಡಿದ.
ಭೀಮರಾಯನು ಆ ಬ್ರಾಹ್ಮಣ ಸಮೂಹದಲ್ಲಿ ಶ್ರೀ ವೇಂಕಟಾರ್ಯರು ಕಾಣದಿರಲು ಅವರಿದ್ದಲ್ಲಿಗೆ ಬಂದು " ಮಹಾ ಸ್ವಾಮೀ! ತೀರ್ಥ ಕೊಡುತ್ತಿದ್ದಾರೆ. ತಾವೇಕೆ ಬರಲಿಲ್ಲ? ದಯಮಾಡಿಸಿ ಸ್ವಾಮೀ " ಎಂದು ಪ್ರಾರ್ಥಿಸಿದನು. ಶ್ರೀ ವೇಂಕಟಾರ್ಯರುಅವರೊಡನೆ ಹೋರಾಡಲು ಸಿದ್ಧರಾದರು.
ಆ ಹೊತ್ತಿಗೆ ಅಲ್ಲಿಯ ಬ್ರಾಹ್ಮಣರು ಹೊಟ್ಟೆ, ಹಣೆ, ಭುಜ ಹಿಡಿದುಕೊಂಡು ಉರಿ ಬೆಂಕಿ ಪ್ರಾಣ ಹೋಗುತ್ತಿದೆ ಎಂದು ಚೀತ್ಕಾರ - ಬೊಬ್ಬಾಟ ಕೇಳಿಸುತ್ತಿದೆ.
ಭೀಮರಾಯರು ಏನಾಯ್ತು ಎಂದು ಪುರೋಹಿತ ರಾಮಾಚಾರ್ಯರನ್ನು ವಿಚಾರಿಸಿದರು. ಭೀಮರಾಯರು ಗಂಧ ತೆಗೆದಿದ್ದು ಯಾರು? ಎಂದು ಕೇಳಿದರೆ ನನ್ನ ಮುಕುಂದ ಎಂದರು. ಮುಕುಂದನನ್ನು ವಿಚಾರಿಸಿದರೆ ನಾನಲ್ಲ ಗಂಧ ತೆಗೆದಿದ್ದು ಈ ಬ್ರಾಹ್ಮಣ ಎಂದು ಶ್ರೀ ವೇಂಕಟಾರ್ಯರನ್ನು ತೋರಿಸಿದ!
ಪುರೋಹಿತ ರಾಮಾಚಾರ್ಯರು ಗಂಧ ಸಿದ್ಧ ಪಡಿಸಲು ನಿನಗೆ ಹೇಳಿದರೆ ಈ ಬ್ರಾಹ್ಮಣರಿಂದ ಗಂಧ ತೇಯಿಸಿದ್ಯಾ? ಇನ್ನು ನಿನ್ನ ದುಷ್ಟ ಬುದ್ಧಿ ಹೋಗಿಲ್ಲವಾ ಎಂದು ಗದರಿಸಿದರು.
ಮನೆಯ ಯಜಮಾನರಾದ ಭೀಮರಾಯರು ಏನೂ ಈ ಸದ್ಬ್ರಾಹ್ಮಣರಿಂದ ಗಂಧ ತೇಯಿಸಿದೆಯಾ? ಎಂದು ಕುಪಿತರಾಗಿ ಶ್ರೀ ವೇಂಕಟಾರ್ಯರತ್ತ ತಿರುಗಿ " ಇದೇನು ಸ್ವಾಮೀ ಹೀಗಾಯಿತು? ಎಂದು ಪ್ರಶ್ನಿಸಿದರು.
ಪುರೋಹಿತ ರಾಮಾಚಾರ್ಯರು " ಸ್ವಾಮೀ ತಾವರೋ ಮಹನೀಯರಂತಿದ್ದೀರಿ. ಬ್ರಾಹ್ಮಣಾಪಮಾನ ಶಾಪದಂತಾಗಿ ಪೀಡಿಸುವುದೆಂದು ಕೇಳಿದ್ದೇನೆ. ತಮ್ಮ ತೇಜಸ್ಸೇ ತಾವು ಮಂತ್ರಸಿದ್ಧರೆಂದು ಸಾರುವುದು! ನನ್ನ ಮಗನ ಅವಿವೇಕದಿಂದ ಈ ಬ್ರಾಹ್ಮಣರು ಕಷ್ಟಪಡುವಂತಾಯಿತು. ಇವರನ್ನು ಕಾಪಾಡಿ " ಎಂದು ಪ್ರಾರ್ಥಿಸಿದರು.
ಶ್ರೀ ವೇಂಕಟಾರ್ಯರು" ಇದೇಕೆ ಹೀಗಾಯಿತೆಂದು ನಾನರಿಯೆ. ಗಂಧ ತೆಗೆಯಲು ಮುಕುಂದ ಹೇಳಿದಾಗ ನಾನು ಅಗ್ನಿಸೂಕ್ತ ಪಾರಾಯಣ ಮಾಡುತ್ತಿದ್ದೆ. ಬಹುಶಃ ಅದರ ಪ್ರಭಾವದಿಂದ ಹೀಗಾಗಿರಬಹುದು. ಚಿಂತಿಸಬೇಡಿ. ಶ್ರೀ ಹರಿವಾಯುಗಳು ಕಾಪಾಡುತ್ತಾರೆ. ಸ್ವಾಮೀ ರಾಮಾಚಾರ್ಯರೇ! ಬ್ರಾಹ್ಮಣರಿಗೆ ಕೊಟ್ಟ ಗಂಧ, ದೇವರ ತೀರ್ಥವನ್ನು ತೆಗೆದುಕೊಂಡು ಬನ್ನಿ " ಎಂದಾಗ, ರಾಮಾಚಾರ್ಯರು ಎಲ್ಲವನ್ನೂ ತಂದರು.
ಶ್ರೀ ವೇಂಕಟಾರ್ಯರುಪೂರ್ವಾಭಿಮುಖವಾಗಿ ಪದ್ಮಾಸನದಲ್ಲಿ ಕುಳಿತು ಆಚಮನ, ಆಸನ ಶುದ್ಧಿ, ಸಂಕಲ್ಪ ಪೂರ್ವಕ ಬೆಳ್ಳಿ ಪಾತ್ರೆಯಲ್ಲಿ ಗಂಧ ಮತ್ತು ದೇವರ ತೀರ್ಥ ಹಾಕಿ ಕಲಕ ಅದನ್ನು ಬಲ ತೊಡೆಯ ಮೇಲಿಟ್ಟುಕೊಂಡು ಗಂಧವನ್ನು ಕರಾಂಗುಲಿಗಳಿಂದ ಸ್ಪರ್ಶಿಸುತ್ತಾ ವರಣಸೂಕ್ತವನ್ನು ಪಠಿಸಲಾರಂಭಿಸಿದರು. ಭೀಮರಾಯರು, ರಾಮಾಚಾರ್ಯರು, ಬ್ರಾಹ್ಮಣ ಸುವಾಸಿನಿಯರು ಶ್ರೀ ವೇಂಕಟಾರ್ಯರನ್ನೇ ನೋಡುತ್ತಿದ್ದಾರೆ. ಶ್ರೀ ವೇಂಕಟಾರ್ಯರುವದನಾರವಿಂದದಲ್ಲಿ ಸುಸ್ವರ ವೇದ ಮಂತ್ರ ಹೊರಮೊಮ್ಮಿತು.
ಕ್ಷತ್ರಸ್ಯ ರಾಜಾ ವಾರಣೋsಧಿರಾಜ: । ನಕ್ಷತ್ರಾಣಗ್೦ ಶತಭಿಗ್ವಸಿಷ್ಠ: ತೌದೇವೇಭ್ಯ: ಕೃಣುತೋ ದೀರ್ಘಮಾಯು: ।।.......
ಇಮಂ ಮೇ ವರುಣ ಶ್ರುಧೀಹವ ಮದ್ಯಾ ಚ ಮೃಢಯಾ । ತಾಮಪಸ್ಯು ರಾಚಕೇ ।......
ಓಂ ಭದ್ರಂ ಕರ್ಣೇಭಿಶ್ರ್ಯುಣುಯಾಮ ದೇವಾ: । ಭದ್ರಂ ಪಶ್ಯೇಮಾಕ್ಷ ಭೀರ್ಯಜಾತ್ರಾ: । ಸ್ಥಿರೈರಂಗೈಸ್ತುಷ್ಟುವಾಗ್೦ ಸಸ್ತನೂಭಿ: । ವಶ್ಯೇಮ ದೇವಹಿತಂ ಯದಾಯು: । ಸ್ವಸ್ತಿನ ಇಂದ್ರೋ ವೃದ್ಧಶ್ರವಾ: । ಸ್ವಸ್ತಿ: ಪೂಷಾ ವಿಶ್ವದೇವಾ: । ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿ: । ಸ್ವಸ್ತಿನೋ ಬೃಹಸ್ಪತಿರ್ದದಾತು । ಓಂ ಶಾಂತಿ ಶಾಂತಿ ಶಾಂತಿ: ।।
ಶ್ರೀ ವೇಂಕಟಾರ್ಯರು ವೇದ ಪಾರಾಯಣ ಮಾಡುತ್ತಿರುವಂತಿಯೇ ಬ್ರಾಹ್ಮಣರ ಶರೀರದಲ್ಲುಂಟಾಗಿದ್ದ ಉರಿ, ತಾಪ ಕಡಿಮೆಯಾಯಿತು.
ಸಾಧ್ವೀ ಸರಸ್ವತಮ್ಮವರ ಮುಖ ವಿಕಸಿತವಾಗಿ ಆನಂದಭಾಷ್ಪ ಹರಿಯುತ್ತಿರುವುದನನ್ನು ಕಂಡು ಶ್ರೀ ವೇಂಕಟಾರ್ಯರು ಮಂದಹಾಸ ಬೀರಿ ಮೇಲಕ್ಕೆದ್ದು ಎಲ್ಲಾ ಬ್ರಾಹ್ಮಣರಿಗೆ ಗಂಧವನ್ನು ಕೊಡುವಂತೆ ಹೇಳಿ ಗಂಧದ ಬಟ್ಟಲನ್ನು ಪೂರೋಹಿತರ ಕೈಗೆ ಕೊಟ್ಟರು.
ಪುರೋಹಿತರು ಅಗ್ನಿ ತಾಪದಿಂದ ಬಳಲುತ್ತಿದ್ದ ಬ್ರಾಹ್ಮಣರಿಗೆಲ್ಲಾ ಗಂಧ ನೀಡಿದರು. ಬ್ರಾಹ್ಮಣರು ಗಂಧವನ್ನು ಎದೆ,ಹೊಟ್ಟೆ, ಭುಜಗಳಿಗೆ ಹಚ್ಚಿಕೊಂಡರು.
ಆಗೊಂದು ಮಹಿಮೆಯೇ ಜರುಗಿಹೋಯಿತು. ಬ್ರಾಹಣರು ಗಂಧ ಸ್ಪರ್ಶವಾದ ಕೂಡಲೇ " ಆಹಾ! ಆನಂದ! ಪರಮಾನಂದ! ಉರಿಯಲ್ಲಾ ಮಾಯವಾಯಿತು!
ಅಬ್ಬಾ! ಎಷ್ಟು ತಂಪಾಗಿದೆ - ಹಿತಕರವಾಗಿದೆ - ಬದುಕಿದೆವು ಆನಂದ । ಎನ್ನುತ್ತಾ ಸಂತೋಷದಿಂದ ಕುಣಿದಾಡ ಹತ್ತಿದರು!
ಆಶ್ಚರ್ಯಾನಂದಗಳಿಂದ ಭೀಮರಾಯರು ಶ್ರೀ ವೇಂಕಟಾರ್ಯರಿಗೆ ಸಾಷ್ಟಾಂಗವೆರಗಿ " ಮಹಾನುಭಾವ! ನನ್ನನ್ನು ಪಾಪದಿಂದ ಮುಕ್ತಗೊಳಿಸಿದಿರಿ!
ನೀವು ಮಾಹಾತ್ಮರು, ಮಂತ್ರಸಿದ್ಧರು ಎಂದು ಸ್ತೋತ್ರ ಮಾಡಿದರು!!



ಗುರು ವಿಜಯ ಪ್ರತಿಷ್ಠಾನ

' ಪೂಜ್ಯಾಯ ರಾಘವೇಂದ್ರಾಯ' --


ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಜಗನ್ ಮಾನ್ಯರು. ಪರಮ ಪೂಜ್ಯರು.


'ಪೂಜ್ಯಾಯ ರಾಘವೇಂದ್ರಾಯ' -- ಎಂದು ಪ್ರಸಿದ್ಧರಾದವರು ರಾಯರು. 


ಅದು ಹೇಗೆ?, ಎಂದು, ಇಂದು ಗುರುರಾಯರ ಆರಾಧನೆಯಂದು ಸ್ಮರಿಸೋಣ. ಪಾವನರಾಗೋಣ. ಅವರ ಅನುಗ್ರಹಕ್ಕೆ ಪಾತ್ರರಾಗೋಣ.


ಮೊದಲನೇಯದಾಗಿ


ಪೂಜ್ಯ ರಾಘವೇಂದ್ರನನ್ನು ಮನಸಾ ಪೂಜಿಸಿ ಪೂಜ್ಯರಾದವರು ಮಂತ್ರಾಲಯ ಪ್ರಭುಗಳು.


ರಾಘವ ಇಂದ್ರ = ರಘುಕುಲದ ಇಂದ್ರ = ಶ್ರೀ ರಾಮ.


ಪೂಜ್ಯ ರಾಮ ತನ್ನನ್ನು ಬಹುಭಕುತಿಯಿಂ ಪೂಜಿಸಿದವರನ್ನು ಪೂಜ್ಯರನ್ನಾಗಿ ಮಾಡದೇ ಇನ್ನೇನು? ಆಗಲಿಲ್ಲವೇ ಅಂಜನಾಸೂನು ಆಂಜನೇಯ. ಇಂದು ಹನುಮಂತನ ಪೂಜಿಸಿದ ಗುಡಿ ಇಲ್ಲದ ಊರೇ ಇಲ್ಲ. 


ಶ್ರೀ ರಾಮ ಪರಮಾತ್ಮನನ್ನು  ಅನನ್ಯ ಪೂಜಿಸಿ ದವರು, ಮತ್ತೆ ಹನುಮಂತ ದೇವರನ್ನು ಬಹು ಭಕ್ತಿಲಿ ಆರಾಧಿಸಿದವರು ಪೂಜ್ಯ ರಾಯರು. ಅದಕ್ಕಾಗಿ ಅವರನ್ನು - 


'ಪೂಜ್ಯಾಯ ರಾಘವೇಂದ್ರಾಯ'. ಎಂದು ಪೂಜಿಸುತ್ತದೆ ಜಗತ್ತು.


'ಸತ್ಯ ಧರ್ಮರತಾಯ ಚ'


ಇನ್ನು ರಾಯರು ಸತ್ಯ, ಧರ್ಮ ರತರು.


'ಸತ್ಯ' ಇದು ಪರಮಾತ್ಮನ ನಾಮ. 


ಭೂತ, ವರ್ತಮಾನ, ಭವಿಷ್ಯಗಳಲ್ಲಿ ಆತ ಸತ್ಯನಾಗಿದ್ದಾನೆ. ನಿತ್ಯನಾಗಿದ್ದಾನೆ. ಮತ್ತೆ ಆತ ಸತ್ ಚಿತ್ ಆನಂದಮಯನಾಗಿ ದ್ದಾನೆ, ಅದಕ್ಕೆ ಆತ ಸತ್ಯ. 


ಸತ್ + ಜನ = ಸಜ್ಜನ =ಸತ್ ನಾಮಕ ಪರಮಾತ್ಮನನ್ನು ಸದಾ ಆರಾಧಿಸುವ ಜನ.


ಸಜ್ಜನರಿಗೆ ಆತ ಬಲು ಪ್ರಿಯ. ಮತ್ತೆ ಸಜ್ಜನರು ಆತನಿಗೆ ಅತ್ಯಂತ ಪ್ರಿಯ.


ಆತ ಇಚ್ಛಿಸಿದ್ದೇ ನಡೆಯುವದು. ಬೇರೆಯವ ರದು ಲವಲೇಶ ಇಲ್ಲ. ಅದಕ್ಕಾಗಿ ಆತ ಸತ್ಯ ಸಂಕಲ್ಪ. ಅದಕ್ಕೇ ಆತ ಸತ್ಯ.


ಸತ್ಯ ರತಾಯ --


ಇಂತಹ ಸತ್ಯ ನಾಮಕ ಪರಮಾತ್ಮನಲ್ಲಿ ರತರು ರಾಯರು. ನಿತ್ಯ,  ಸತ್ಯನನ್ನು  ಪೂಜಿಸುವವರು ಮಂತ್ರಾಲಯಪ್ರಭುಗಳು. ಅದಕ್ಕಾಗಿ ಅವರು  ಪೂಜ್ಯರಾದರು, 'ಪೂಜ್ಯಾಯ--' ಎಂದು ಅವರನ್ನು ನಿತ್ಯ ಸ್ತುತಿಸುತ್ತಾರೆ ಅಪಾರ ಭಕ್ತ ವರ್ಗ.


ಧರ್ಮ ರತಾಯ --


'ಧರ್ಮ' ಇದೂ ಕೂಡ ದೇವರ ಹೆಸರೇ. ಯಾಕೆ?  ಆತ ಧರ್ಮಾಧ್ಯಕ್ಷನಲ್ಲವೇ! 


ಲೋಕಕ್ಕೆ ಧರ್ಮ ಹೇಳಿ ಕೊಡುವವನು ಅವನೇ. 


ಧರ್ಮ ಮಾಡಿ ಮಾಡಿಸುವವನು ಅವನೇ. 


ಧರ್ಮ ಅಧರ್ಮಗಳ ನಿರ್ಧರಿಸುವವ, ನ್ಯಾಯ ಕೊಡುವವ ಅವನೇ. 


ಧರ್ಮದ ಅಭ್ಯುದಯ, ಅಧರ್ಮದ ಅವಸಾನ ಅವನಿಂದಲೇ.


ಅದಕ್ಕಾಗಿ ಆತ 'ಧರ್ಮ' ವಾಚ್ಯ. 'ಧರ್ಮಾಧ್ಯಕ್ಷ'


ವಾಚ್ಯ.


ಇಂಥ ಧರ್ಮ ನಾಮಕ ಪರಮಾತ್ಮನಲ್ಲಿ  ಸದಾ ರತರು ರಾಯರು. ಧರ್ಮ ನನ್ನು ಪೂಜಿಸುವವರು, ಆರಾಧಿಸುವವರು ರಾಯ ರು. ಅದಕ್ಕಾಗಿ ಅವರನ್ನು-


'ಪೂಜ್ಯಾಯ ರಾಘವೇಂದ್ರಾಯ --' ಎಂದು ಭಕ್ತ ಸ್ತೋಮ ಭಜಿಸುತ್ತದೆ.


ಇನ್ನು  ಸತ್ಯವಾದ ಧರ್ಮದಲ್ಲಿ ರತರು, ಆಚರಿ ತರು ರಾಯರು. ಸತ್ ಧರ್ಮವೇ ಅವರ ಆಚಾರ ವಿಚಾರ, ನಡೆ ನುಡಿ.


ಸತ್ಯ, ಧರ್ಮಗಳೇ ಅವರ ಸಹಜ ಸ್ವಭಾವ.


ತಾವು ಧರ್ಮ ಮಾಡಿ ಇತರರಿಂದ ಧರ್ಮ ಮಾಡಿಸುವವರು 'ಕರ್ತಾ ಕಾರಯಿತ್ರಾ'


ರಾಯರು.


ಹೀಗೆ ಸತ್ಯ ಧರ್ಮ ರತ ರಾದ್ದರಿಂದ ರಾಯರು


ಪೂಜ್ಯರು.  ಅದಕ್ಕಾಗಿ ಅವರು 'ಪೂಜ್ಯಾಯರಾಘವೇಂದ್ರಾಯ'


ಎಂದು ಸ್ತುತರು. 


ಇನ್ನು ಸತ್ಯವಾದ ಧರ್ಮ ಅಂದರೆ 'ಈ ಜಗತ್ತು ಸತ್ಯವಾಗಿದೆ', ಜಗತ್ತಿನ ಗುಣಧರ್ಮಗಳು ಸತ್ಯ


ವಾಗಿವೆ. ಪರಮಾತ್ಮ ಸತ್ಯ ಜಗತ್ತಿನ ಸೃಷ್ಟ್ಯಾದಿ ಕರ್ತಾ ಆಗಿದ್ದಾನೆ. ಆದುದರಿಂದ ಅನಂತಗುಣ ಪೂರ್ಣನಾಗಿದ್ದಾನೆ. ನಿರ್ದೋಷ ನಾಗಿದ್ದಾನೆ. ಸರ್ವಜ್ಞನಾಗಿದ್ದಾನೆ. ಇವೆಲ್ಲ ಮಧ್ವಮತದ ಮುತ್ತಿನ ಮಾತುಗಳು. ಇವುಗಳಲ್ಲೇ ರತರು. ಅನುಸಂಧಿಸಿ ಅನುಸರಿಸುವವರು,  ರಾಯರು. ಅದಕ್ಕಾಗಿ ಅವರು ಪೂಜ್ಯರು. - ಪೂಜ್ಯಾಯ --'ಎಂದು ಪ್ರಸಿದ್ಧರು.


ಮತ್ತೆ ಸತ್ಯ ಧರ್ಮ ತುಂಬಿದ, ಸತ್ಯ ಧರ್ಮ ಹೊರಸೂಸುವ ಅನೇಕಾನೇಕ ಧರ್ಮ ಗ್ರಂಥಕಾರರು ರಾಘವೇಂದ್ರಸ್ವಾಮಿಗಳು. 


ಬ್ರಹ್ಮ ಸೂತ್ರಗಳ ಮೇಲೆ ಆರು, ಗೀತೆಯ ಮೇಲೆ ಮೂರು, ಉಪನಿಷತ್ತು ಗಳಿಗೆ ಹತ್ತು, ವೇದಮಂತ್ರಕ್ಕೊಂದು, ರಾಮಾಯಣ ಭಾರತ, ಭಾರತ ನಿರ್ಣಯಗಳಿಗೆ ಹತ್ತಾರು ಗ್ರಂಥ ರಚಿಸಿದರು. ಇವೇ ಪ್ರಸಿದ್ಧ - ರಾಮ ಚಾರಿತ್ರ ಮಂಜರಿ, ಕೃಷ್ಣ ಚಾರಿತ್ರ ಮಂಜರಿ, ಗೀತಾ ವಿವೃತ್ತಿ ಮುಂತಾದವು. ಶ್ರೀ ಮನ್ಯಾಯ ಸುಧಾ ಗ್ರಂಥಕ್ಕೆ ' 'ಪರಿಮಳ' ಎಂಬ ಪ್ರಸಿದ್ಧ ವ್ಯಾಖ್ಯಾನ ರಚಿಸಿದರು. ಪರಿಮಳಾಚಾರ್ಯರೆಂದೇ ಲೋಕ ಪ್ರಸಿದ್ಧರಾದರು.

ತತ್ವ ಪ್ರಕಾಶಿಕಾಕ್ಕೆ ಸಾರ್ಥಕ 'ಭಾವದೀಪ' ರಚಿಸಿದರು. ಚಂದ್ರಿಕಾ, ತರ್ಕತಾಂಡವ ಗಳಿಗೆ ಅಮೂಲ್ಯ ವ್ಯಾಖ್ಯಾನ ರಚಿಸಿದರು. ' ಸರ್ವ ಸಮರ್ಪಣ ಗದ್ಯ' ' ಪ್ರಾತಃ ಸಂಕಲ್ಪ ಗದ್ಯ ' ಮೊದಲಾದ ಸಿದ್ಧ ಪ್ರಮೇಯಗಳಿಗೆ ಪ್ರಸಿದ್ಧ ಕೃತಿ ರಚಿಸಿದರು. ಪಟ್ಟಿ ಹೀಗೆ ಬೆಳೆಯುತ್ತದೆ.

ಇಂಥ ಅಧ್ಯಾತ್ಮ ಮಾರ್ಗದರ್ಶಕ ಗ್ರಂಥ ರಾಶಿ ರಚಿಸಿ ಕೊಟ್ಟಿದ್ದರಿಂದ ಅವರು -


'ಪೂಜ್ಯಾಯ ರಾಘವೇಂದ್ರಾಯ'    ಬಹು ಪೂಜ್ಯರಾಗಿದ್ದಾರೆ.


ಇನ್ನು'ಭಜತಾಂ ಕಲ್ಪವೃಕ್ಷಾಯ' -


ಭಜಿಸಿದವರಿಗೆ ಕೇಳಿದನ್ನು ಕೊಡುವ ಕಲ್ಪವೃಕ್ಷ ಪರಮಾತ್ಮ. ಶ್ರೀ ಹರಿಯನ್ನು ನಿರಂತರ ಭಜಿಸಿದರು ರಾಯರು. ಜನರ ಪರವಾಗಿ ಪ್ರಾರ್ಥಿಸಿದರು. ಜನರಿಗೆ ಬೇಡಿದ್ದು,ಬಯಸಿದ್ದು ಕೊಡುವ ಕಲ್ಪವೃಕ್ಷವಾಗಿ ನೆಲೆನಿಂತರು.


'ನಮತಾಂ ಕಾಮಧೇನುವೇ'-


ಕಲಿಯುಗದ ಕಾಮಧೇನು ಶ್ರೀ ಮನ್ ಮಂತ್ರಾಲಯ ಪ್ರಭುಗಳು. ಹೇಗಾದರು? 


'ಹರಿಪಾದಕಂಜ ನಿಷೇವಣಾಲಬ್ಧ' 


ಹರಿಯ ಸೇವೆಯನ್ನು ಅನನ್ಯವಾಗಿ ಮಾಡಿದ ರು. ಅಪಾರ ಪುಣ್ಯ ಪಡೆದರು. ಪಡೆದ ಪುಣ್ಯ ಹಂಚಲು ಈ ಕಲಿಯುಗದಲ್ಲಿ ಮಂತ್ರಾಲಯದಲ್ಲಿ ನೆಲೆ ಊರಿದರು. ಸ್ಮರಿಸಿದವರಿಗೆ, ನಮಿಸಿದವರಿಗೆ, ಸೇವಿಸು ವವರಿಗೆ, ಬೇಡಿದ್ದು ಕೊಡುವ ಕಾಮಧೇನುಗ ಳಾದರು. ಹೀಗೆ ಕಲಿಯುಗದ ಕಲ್ಪವೃಕ್ಷ, ಕಾಮಧೇನು ಶ್ರೀ ಗುರುಸಾರ್ವಭೌಮರು.


ಅದಕ್ಕಾಗಿ ಅವರನ್ನು


'ಪೂಜ್ಯಾಯ ರಾಘವೇಂದ್ರಾಯ -+' ಎಂದು ಜಗತ್ತು ಆರಾಧಿಸುತ್ತದೆ.


'ದೇವ ಸ್ವಭಾವೋ --'


ದಿವ್ಯ ದೈವೀ ಸ್ವಭಾವ ಗುರುಸಾರ್ವಭೌಮರ ದು.  'ಪರೋಪಕಾರಾರ್ಥಂ --' ಸರ್ವವೂ ಪರೋಪಕಾರಕ್ಕಾಗಿಯೇ. ಪಾಮರರ ಉದ್ಧಾರ ಕ್ಕಾಗಿಯೇ.


'ಧರೆಯ ಮೇಲಿನ ಜನರ ಪೊರೆಯ ಬೇಕಾಗಿದೆ'  ಎಂದು, ಬಂದ ಮೃತ್ಯುವನ್ನೇ ಮುಂದೂಡಿದ ಮಹಾನುಭಾವರು.


ದೇವರನ್ನು ಕಂಡವರಲ್ಲವೇ ಅವರು!  ಅಷ್ಟೇ ಅಲ್ಲ. ಅಷ್ಟಿಟ್ಟೇ ಅಲ್ಲ. ಪರಮಾತ್ಮ ನರಸಿಂಹ ನಾಗಿ ಬಂದ. ಬಾಲ ಪ್ರಲ್ಹಾದನ ಪೊರೆದ.


ಅದೇ ಪ್ರಲ್ಹಾದರು ಗುರುರಾಯರಾಗಿ ಬಂದರು. ಸಾತ್ವಿಕ ಪವಾಡ ಮೆರೆದರು. ಸತ್ವಭರಿತ ಗ್ರಂಥರಾಶಿ ರಚಿಸಿದರು. ಬೇಡಿ ಬಂದವರ ಕೊಟ್ಟು ಪೊರೆದರು. ಬೇಡದೇ ಬಂದವರನ್ನೂ ರಕ್ಷಿಸಿದರು.


ಅದಕ್ಕಾಗಿ ಅವರದು -'ದೇವ ಸ್ವಭಾವೋ --'


ಅದಕ್ಕಾಗಿಯೇ ಅವರು


'ಪೂಜ್ಯಾಯ ರಾಘವೇಂದ್ರಾಯ' ಎಂದು ಭಕ್ತ 


ಕೋಟಿಯಿಂದ ಹಾಡಿ ಹೊಗಳಲ್ಪಡುತ್ತಾರೆ.


'ತೇನ ವಿಘ್ನಾಃ ಪ್ರಣಶ್ಚಂತಿ'


ಇಂಥ ಪರಮ ಪಾವನ ಗುರುಗಳ ಸ್ಮರಣೆ ಸಾಕು. ಸೇವಿಸಲು ಸಾಕು. ನಮ್ಮ ಲೌಕಿಕ, ಪಾರಮಾರ್ಥಿಕ ವಿಘ್ನಗಳು ನಾಶವಾಗುತ್ತವೆ. ಪ್ರಗತಿಯ ದಾರಿ ಸುಗಮವಾಗುತ್ತದೆ.


'ಸಿದ್ಧಂತಿ ಚ ಮನೋರಥಾಃ'


ಬಯಸಿದ ಆಸೆಗಳು ಈಡೇರುತ್ತವೆ.  ಕೇಳಿದ ಕೇಳದ ನಮ್ಮ ಹಿತ ಗುರುಗಳು ಪೂರೈಸುತ್ತಾರೆ.


ಹೀಗೆ ಗುರುಸಾರ್ವಭೌಮರು ನಮ್ಮ ಇಷ್ಟವ ಕೊಟ್ಟು, ಅನಿಷ್ಟವ ಬಿಟ್ಟು ಥಟ್ಟನೇ ಉದ್ಧರಿಸುವ ವಿಷಿಷ್ಠ ಗುರುಗಳು,  ಮಹಾದ ಯಾಳುಗಳು.


ಅದಕ್ಕಾಗಿ ಅವರು


'ಪುಜ್ಯಾಯ ರಾಘವೇಂದ್ರಾಯ' ಎಂದು ಸಾರಿ ಭಜಿಸಲ್ಪಡುತ್ತಾರೆ.


ಇಂಥ ಗುರುಸಾರ್ವಭೌಮರು ಸ್ಮರಿಸೋಣ. ಅವರ ಅಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಲಕ್ಷ್ಮೀ ನರಸಿಂಹ ದೇವರಿಗೆ 


ಶಿ ಸಾ ನಮಿಸೋಣ.


           ಶ್ರೀ ಕೃಷ್ಣಾರ್ಪಣಮಸ್ತು
*****


ಶ್ರೀ ರಾಯರ ಪಾದೋದಕ ಮತ್ತು ಹಸ್ತೋದಕ ಸರ್ವರಿಗೂ ಗ್ರಾಹ್ಯ
ಯತ್ಪಾದೋದಕ ಸಂಚಯಃ ಸುರನದೀ ಮುಖ್ಯಾಪಗಾಸಾದಿತ

ಸಂಖ್ಯಾನುತ್ತಮಪುಣ್ಯಸಂಘವಿಲಸತ್ಪ್ರಖ್ಯಾತ ಪುಣ್ಯಾವಹಃ ।
ದುಸ್ತಾಪತ್ರಯನಾಶನೋ ಭುವಿಮಹಾವಂಧ್ಯಾ ಸುಪುತ್ರಪ್ರದೋ
ವ್ಯಂಗಸ್ವಂಗಸಮೃದ್ಧಿದೋ ಗ್ರಹ ಮಹಾ ಪಾಪಾಪಹಸ್ತ೦ ಶ್ರಯೇ ।। ೮ ।।
೧. ಶ್ರೀ ತ್ರಿವಿಕ್ರಮಾವತಾರದಲ್ಲಿ ಶ್ರೀ ಹರಿಯ ಪಾದದಿಂದ ಆವಿರ್ಭವಿಸಿದ ಕಾರಣದಿಂದ ಗಂಗೆಯು ಪರಮ ಪಾವನಳು. ಇತರ ನದಿಗಳು ಬೇರೆ ಬೇರೆ ಕಾರಣಗಳಿಂದ ಪಾವನವಾಗಿವೆ. ಆದರೆ ಗಂಗೆಗೆ ಸಮವಲ್ಲ. ಈ ಎಲ್ಲಾ ನದಿಗಳೂ ಸ್ನಾನ - ದರ್ಶನ - ಸ್ಮರಣ - ಸ್ಪರ್ಶನ ಮುಂತಾದವುಗಳಿಂದ ಮಹಾ ಪುಣ್ಯವನ್ನು ಕೊಡುತ್ತವೆ. ಒಮ್ಮೊಮ್ಮೆ ಸ್ನಾನದಿಗಳನ್ನು ಮಾಡಿದ್ದರಿಂದ ಒಂದೊಂದು ಪುಣ್ಯದಂತೆ ಪ್ರತಿದಿನದಲ್ಲಿಯೂ ತ್ರಿಕಾಲ ಸ್ನಾನಾದಿಗಳಿಂದ ಅಸಂಖ್ಯ ಪುಣ್ಯಗಳನ್ನು ಕೊಡುತ್ತವೆ. ಈ ಪುಣ್ಯಗಳಿಗೆ ಸಮವಾದ ಪುಣ್ಯಗಳಿಲ್ಲ!!
1) ಗಂಗೆ ಮುಂತಾದ ಎಲ್ಲಾ ನದಿಗಳಲ್ಲಿ ಪ್ರತಿದಿನದಲ್ಲಿಯೂ ತ್ರಿಕಾಲ ಸ್ನಾನ ಮುಂತಾದ್ದರಿಂದ ಬರುವ ಎಲ್ಲಾ ಪುಣ್ಯಗಳ ಸಮೂಕ್ಕಿಂತಲೂ ಮಿಗಿಲಾದ ಪುಣ್ಯವನ್ನು " ಬ್ರಾಹ್ಮಣ ಪಾದೋದಕ ವು ಕೊಡುತ್ತದೆ ಎಂದು ಶಾಸ್ತ್ರಗಳು ಹೊಗಳುತ್ತಿವೆ.
2) ಗಂಗಾ ಜನಕನೂ,ನಿರಪೇಕ್ಷನೂ ಆದ ಶ್ರೀ ಹರಿಯು ಕೃಷ್ಣಾವತಾರದಲ್ಲಿಯೂ, ಇತರಾವತಾರಗಳಲ್ಲಿಯೂ, ರಾಜಸೂಯ ಯಾಗ ಮುಂತಾದ ಸಂದರ್ಭಗಳಲ್ಲಿ ವಿಷ್ಣುಭಕ್ತರಾದ ಬ್ರಾಹ್ಮಣರ ಪಾದವನ್ನು ತಾನೇ ತೊಳೆದು ಬ್ರಾಹ್ಮಣ ಪಾದೋದಕವನ್ನು ತನ್ನ ತಲೆಯಲ್ಲಿ ಧರಿಸಿ ಬ್ರಾಹ್ಮಣ ಪಾದೋದಕದ ಮಹತ್ವವನ್ನು ವ್ಯಕ್ತ ಪಡಿಸಿದ್ದಾನೆ.<br>
3) ಶ್ರೀ ಗುರುರಾಜರ ಮೂಲ ಬೃಂದಾವನದಲ್ಲಿ ಶ್ರೀ ಹರಿಯೂ, ಬ್ರಹ್ಮಾದಿ ಸಕಲ ದೇವತೆಗಳೂ, ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಸನ್ನಿಹಿತರಾಗಿದ್ದಾರೆ. ಆದ್ದರಿಂದ ಬೃಂದಾವನಕ್ಕೆ ಅಭಿಷೇಕ ಮಾಡಿದರೆ ಆ ಅಭಿಷೇಕ ಜಲಕ್ಕೆ ಬೃಂದಾವನದಲ್ಲಿ ವಿಶೇಷ ಸನ್ನಿಧಾನದಿಂದಿರುವ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳ ಸಂಪರ್ಕದಿಂದ ಆ ತೀರ್ಥಗಳಂತೆ ಪಾವನತ್ವವೂ, ಆ ತೀರ್ಥಾಭಿಮಾನಿ ದೇವತೆಗಳಿಗಿಂತ ಉತ್ತಮರಾದ ಶ್ರೀ ಹರಿ ಬ್ರಹ್ಮ ಮುಂತಾದ ದೇವತೆಗಳ ಸಂಪರ್ಕದಿಂದ ಗಂಗಾದಿ ತೀರ್ಥಗಳಿಗಿಂತ ಅಧಿಕವಾದ ಪಾವನತ್ವವು ಬರುತ್ತದೆ.
4) ಪರಮ ಪಾವನನಾದ ಶ್ರೀ ಹರಿಯನ್ನು ಹೃದಯ ಕಮಲದಲ್ಲಿ ಧ್ಯಾನಿಸುತ್ತಿರುವ ಭಗವದ್ಭಕ್ತರ ಶರೀರ ಸಂಪರ್ಕದಿಂದ ಗಂಗಾದಿ ಪುಣ್ಯ ನದಿಗಳೂ ಕೂಡಾ ಪಾವನವಾಗುತ್ತದೆ ಎಂದು ತೀರ್ಥೀ ಕುರ್ವ೦ತಿ ತೀರ್ಥಾನಿ ಸ್ವಾತ್ಮಸ್ಥೇನ ಗದಾಭೃತಾ ಎಂಬ ಶ್ರೀಮದ್ಭಾಗವತದ ವಾಕ್ಯ ಹೇಳುತ್ತದೆ.
ಆದ್ದರಿಂದ ಶ್ರೀ ಹರಿಯನ್ನು ನಿತ್ಯ ನಿರಂತರ ಸ್ಮರಿಸುತ್ತಿರುವ ಶ್ರೀ ಗುರುರಾಜರ ಪಾದೋದಕವು ಸಕಲ ಪುಣ್ಯ ನದಿಗಳಿಂದ ಬರುವ ಪುಣ್ಯಕ್ಕಿಂತಲೂ ಅಧಿಕ ಪುಣ್ಯವನ್ನು ಕೊಡುತ್ತದೆ.
ಇತ್ಯಾದಿ ಕಾರಣಗಳಿಂದ ಸಕಲ ನದಿಗಳಿಂದ ಬರುವ ಪುಣ್ಯಗಳಿಗಿಂತ ಹೆಚ್ಚಿನ ಪುಣ್ಯವನ್ನು ಶ್ರೀ ಗುರುರಾಜರ ಪಾದೋದಕವು ಕೊಡುತ್ತದೆಂದು ಸಿದ್ಧವಾಯಿತು.
೨. ಆಧ್ಯಾತ್ಮಿಕ ತಾಪ, ಆಧಿ ಭೌತಿಕ ತಾಪ, ಆಧಿ ದೈವಿಕ ತಾಪ ಎಂದು ತಾಪವು ಅಂದರೆ ಕಷ್ಟವು ತ್ರಿವಿಧವಾಗಿದೆ.
1) ದೇಹದೊಳಗೆ ರೋಗಾದಿಗಳಿಂದ ಏರ್ಪಡುವ ತಾಪವು ಆಧ್ಯಾತ್ಮಿಕ ತಾಪವೆನಿಸುತ್ತದೆ.
2) ದೇಹದ ವರಗೆ ಕೋಲು ಕತ್ತಿ ಮುಂತಾದವುಗಳ ಹೊಡೆತದಿಂದ ಏರ್ಪಡುವ ತಾಪವು ಆಧಿಭೌತಿಕತಾಪವೆನಿಸುತ್ತದೆ.
3) ದೇವತಾ ಕೋಪದಿಂದ ಏರ್ಪಡುವ ಅತಿವೃಷ್ಟಿ, ಅನಾವೃಷ್ಟಿ, ಅತಿ ಬಿಸಿಲು ಮುಂತಾದವುಗಳಿಂದ ಬರುವ ತಾಪವು ಆದಿ ದೈವಿಕ ತಾಪವೆನಿಸುತ್ತದೆ
ಈ ತ್ರಿವಿಧ ತಾಪಗಳು ಎರಡು ವಿಧವಾಗಿವೆ.
೧} ಏಕಾದಶೀ ಉಪವಾಸ ಮುಂತಾದುವುಗಳಿಂದ ಏರ್ಪಡುವ ಆಧ್ಯಾತ್ಮಿಕ ತಾಪಗಳೂ;
೨} ಪಂಚಾಗ್ನಿ ತಪಸ್ಸು ಮುಂತಾದವುಗಳಿಂದ ಏರ್ಪಡುವ ಆಧಿ ಭೌತಿಕ ತಾಪಗಳೂ;<br>
3} ದೇವತೆಗಳು ನಮ್ಮನ್ನು ಪರೀಕ್ಷಿಸುತ್ತಿರುವಾಗ ರಂತಿದೇವ ಮುಂತಾದದವರಿಗೆ ಬಂದಂತೆ ಬರು ಆದಿ ದೈವಿಕ ತಾಪಗಳು ಮನಸ್ಸಿನ ನೈರ್ಮಲ್ಯಕ್ಕೆ ಕಾರಣವಾಗಿ ಪರಂಪರೆಯಿಂದ ಮೋಕ್ಷಕ್ಕೆ ಕಾರಣವಾಗುತ್ತದೆ.
ಆದ್ದರಿಂದ ಇಂತಹ ತಾಪತ್ರಯವು ಉತ್ತಮ ತಾಪತ್ರಯವು. ಇದಕ್ಕೆ ವಿಪರೀತ ತಾಪತ್ರಯವೂ ದುಷ್ಟ ತಾಪತ್ರಯವು ಅನಿಸುತ್ತದೆ. ಭಕ್ತರಿಗೆ ಬಂದ ಇಂತಹ ದುಷ್ಟ ತಾಪತ್ರಯವನ್ನು ಶ್ರೀ ಗುರುರಾಜರ ಪಾದೋದಕವು ನಾಶ ಮಾಡುತ್ತದೆ.<br>
೩) ಬಹುಕಾಲದ ಮೇಲೆ ಮಕ್ಕಳು ಹುಟ್ಟುವುದು. ಈ ಜನ್ಮ ಅಥವಾ ಜನ್ಮಾಂತರದಲ್ಲಿ ಮಾಡಿದ ಪಾಪಗಳಿಗೆ ಹರಿವಂಶ ಶ್ರವಣ ಮುಂತಾದ ಪ್ರಾಯಶ್ಚಿತ್ತಗಳನ್ನೂ ಮಾಡಿದ ಮೇಲೆ ಮಕ್ಕಳು ಹುಟ್ಟುವುದು, ಪ್ರಾಯಶ್ಚಿತ್ತ ಮಾಡಿದ ಮೇಲೂ ಮಕ್ಕಳು ಹುಟ್ಟದಿರುವುದು ಹೀಗೆ ಬಂಜೆತನದಲ್ಲಿ ಅನೇಕ ವಿಧವಿದೆ. ಇವರಲ್ಲಿ ಪ್ರಾಯಶ್ಚಿತ್ತಾದಿಗಳನ್ನು ಮಾಡಿದರೂ ಮಕ್ಕಳು ಹುಟ್ಟದಿರುವವು ಮಹಾವಂಧ್ಯ ಎನಿಸುವಳು.
ಆ ಮಹಾವಂಧ್ಯೆಯೂ ಶ್ರೀ ಗುರಾಯರ ಪಾದೋದಕವನ್ನು ಅತಿಭಕ್ತಿಯಿಂದ ನಿರಂತರವೂ ಎಡೆಬಿಡದೆ ಸೇವಿಸುತ್ತಾ ಬಂದರೆ ಅವಳು ಜನ್ಮಾಂತರದಲ್ಲಿಯೂ, ಈ ಜನ್ಮದಲ್ಲಿಯೂ ಮಾಡಿರುವ ಎಲ್ಲಾ ಪಾಪ ಪರ್ವತವೂ ಕರಗಿ ಅವಳಿಗೆ ಮಗನು ಹುಟ್ಟುವನು. ಹುಟ್ಟಿದವನು ಸಾಮಾನ್ಯ ಮಗನಲ್ಲ. ಉತ್ತಮ ಪುತ್ರನಾಗಿರುವನು.
೪) ಜನ್ಮಾಂತರೀಯ ಪಾಪಗಳಿಂದ ಹುಟ್ಟುವಾಗಲೇ ಕೆಲವರು ಅಂಗ ಹೀನರಾಗಿ&nbsp; ಹುಟ್ಟುವರು ಅಥವಾ ಈ ಜನ್ಮದಲ್ಲಿ ಮಾಡಿದ ಪಾಪಗಳಿಂದಲೂ ಅಂಗ ಹೀರಾಗುವುದುಂಟು. ಇಂತಹ ವ್ಯಕ್ತಿಗಳು ಶ್ರೀ ರಾಘವೇಂದ್ರತೀರ್ಥರ ಪಾದೋದಕವನ್ನು ಸೇವಿಸುತ್ತಾ ಬಂದರೆ ಅವರ ಪಾಪವೆಲ್ಲಾ ದೂರವಾಗಿ ಪುನಃ ಅಂಗಗಳು ಬರುತ್ತವೆ. ಅಂದರೆ ಇದ್ದ ಅಂಗಗಳು ವಿಕೃತವಾಗಿದ್ದರೆ ವಿಕಾರಗಳೆಲ್ಲವೂ ಹೋಗಿ ಸರಿಯಾಗುತ್ತವೆ. ಅಂಗಗಳು ದೇಹವನ್ನು ಬಿಟ್ಟು ಆಗಲಿ ಎಷ್ಟೋ ಕಾಲವಿದ್ದರೆ ಮುಂದಿನ ಜನ್ಮದಲ್ಲಿ ಉತ್ತಮ ಅಂಗಗಳು ಬರುತ್ತವೆ. ಈ ಅಂಗಗಳೂ ಸುಂದರವಾಗಿಯೂ, ದೃಢವಾಗಿಯೂ ಇರುತ್ತವೆ.
೫) ಶನಿ, ರಾಹು, ಕೇತು, ಅಂಗಾರಕ ಮುಂತಾದ ಗ್ರಹಗಳಿಂಲೂ,ಬ್ರಹ್ಮ ಹತ್ಯಾ ಮುಂತಾದ ಮಹಾ ಪಾಪಗಳಿಂದಲೂ ಬರುವ ಎಲ್ಲಾ ಬಾಧೆಗಳು ಶ್ರೀ ರಾಯರ ಪಾದೋದಕದಿಂದ ನಾಶವಾಗುತ್ತದೆ.
ಇಂತಹ ಪಾದೋದಕ ಮಹಿಮೆಯುಳ್ಳ ಶ್ರೀ ಗುರುರಾಜ ಗುರುಸಾರ್ವಭೌಮರನ್ನು ಸೇವಿಸುತ್ತೇನೆ!!
*****


[6:43 PM, 3/8/2019] +91 80888 22987:  ಶ್ರೀ ಪರಿಮಳಾಚಾರ್ಯ - 12 "

" ದಿನಾಂಕ : 08.03.19 ಶುಕ್ರವಾರ ಶ್ರೀ ರಾಯರ ಪಟ್ಟಾಭಿಷೇಕ ಮಹೋತ್ಸವ "

" ಶ್ರೀ ಶ್ಯಾಮಸುಂದರದಾಸರ ನುಡಿಮುತ್ತುಗಳಲ್ಲಿ ಶ್ರೀ ರಾಘವೇಂದ್ರತೀರ್ಥರು "

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ " ಬಲ್ಲಟಗಿ " ಗ್ರಾಮವು ಶ್ರೀ ಶ್ಯಾಮಸುಂದರದಾಸರ ಜನ್ಮಸ್ಥಳ. ಇವರು ಶ್ರೀ ಮಾನವಿ ಮುನಿಪುಂಗವರಾದ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಮತ್ತು ಶ್ರೀ ಪ್ರಹ್ಲಾದಾಂಶ ಶ್ರೀ ರಾಘವೇಂದ್ರತೀರ್ಥರ ಅಂತರಂಗ ಭಕ್ತರೂ ಹಾಗೂ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾದವರು.

ಶ್ರೀ ಶ್ಯಾಮಸುಂದರದಾಸರ ಕೃತಿಗಳು ಭಕ್ತಿಭಾವದಿಂದ ತುಂಬಿ ತುಳುಕುತ್ತಿರುವ ಇವರ ರಚನಾ ಶೈಲಿ ಶ್ರೀ ದಾಸರ ಹೆಸರಿಗೆ ತಕ್ಕಂತೆ ಸುಂದರವಾದ ಪದ ಸಮುಚ್ಛಯಗಳಿಂದ ಕೂಡಿ ಅರ್ಥಗರ್ಭಿತವಾಗಿವೆ.

ಶ್ಲೇಷಾರ್ಥಗಳನ್ನು ಒಳಗೊಂಡ ಅನೇಕ ಪದ ಪ್ರಯೋಗಗಳಿಂದ ಕೂಡಿದ ಇವರ ಪದಗಳನ್ನು ಅರ್ಥಾನುವಾದ ಮಾಡಲು ಶಾಸ್ತ್ರ ಮತ್ತು ಪುರಾಣ ಜ್ಞಾನವು ಅತ್ಯವಶ್ಯಕವಾಗಿದೆ.

ಈ ಮೊದಲೇ ಹೇಳಿದಂತೆ ಶ್ರೀ ಶ್ಯಾಮಸುಂದರದಾಸರಿಗೆ ಶ್ರೀ ರಾಯರನ್ನು ಕಂಡರೆ ಅತ್ಯಂತ ಪ್ರೀತಿ. ಶ್ರೀ ರಾಯರ ಮೂಲ ಬೃಂದಾವನದ ಮುಂದೆ ನಿಂತರೆ ಸಾಕು ಶ್ರೀ ಶ್ಯಾಮಸುಂದರದಾಸರ ವದನಾರವಿಂದದಲ್ಲಿ ಶ್ರೀ ರಾಯರ ಅಗಣಿತ, ಅತಿಶಯವಾದ ಮಹಿಮೆಗಳು ಗಂಗಾ ಪ್ರವಾಹದಂತೆ ಹರಿಯುತ್ತದೆ.

ರಾಗ : ದುರ್ಗಾ ತಾಳ : ಆದಿ

ಎಂಥ ದಯವಂತನೋ ಮಂತ್ರಮುನಿ ನಾಥನೋ ।
ಸಂತತದಿ ತನ್ನನು ಚಿಂತಿಪರಿಗೆ ಸುರಧೇನು ।। ಪಲ್ಲವಿ ।।

ವರ ಪ್ರಹ್ಲಾದನೂ ಮರಳಿ ಬಾಹ್ಲೀಕನೋ ।
ಗುರು ವ್ಯಾಸರಾಯನೋ ,ಪರಿಮಳಾಚಾರ್ಯನೋ ।। ಚರಣ ।।

ಇರುವ ತುಂಗಾ ತಟದಲ್ಲಿ ಬರುವ ತಾನು ಕರೆದಲ್ಲಿ ।
ಕರವ ಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ ।। ಚರಣ ।।

ಮರುತಾವೇಶಯುಕ್ತನು ದುರಿತ ಕಳೆವ ಶಕ್ತನು ।
ತರಣಿ ನಿಭಗಾತ್ರನು ಪರಮ ಸುಚರಿತ್ರನು ।। ಚರಣ ।।

ಶಿಶುವಿಗಸುವಗರೆದನು ವಸುಧಿ ಸುರರ ಪೊರೆದನು ।
ಅಸಮ ಮಹಾ ಮಹಿಮನೋ ಸುಶೀಲೇಂದ್ರ ವರದನೋ ।। ಚರಣ ।।

ಭೂಮಿಯೊಳು ಖ್ಯಾತನು ಶ್ಯಾಮಸುಂದರ ಪ್ರೀತನು ।
ಕಾಮಿತಾರ್ಥದಾತನು ಸ್ವಾಮಿ ನಮಗೆ ಈತನು ।। ಚರಣ ।।

" ಪ್ರಮಾಣ "

ಶ್ರೀ ನೃಸಿಂಹ ಪುರಾಣ....

ಶಂಖುಕರ್ಣಾಖ್ಯ ದೇವಸ್ತು ಬ್ರಹ್ಮ ಶಾಪಾಶ್ಚ ಭೋತಲೇ ।
ಪ್ರಹ್ಲಾದ ಇತಿ ವಿಖ್ಯಾತೋ ಭೂಭಾರ ಕ್ಷಪಣೇ ರತಃ ।।
ಸ ಏವ ರಾಘವೇಂದ್ರಾಖ್ಯ ಯತಿ ರೂಪೇಣ ಸರ್ವದಾ ।
ಕಲೌಯುಗೇ ರಾಮಸೇವಾಂ ಕುರ್ವನ್ ಮಂತ್ರಾಲಯೇ ಭವೇತ್ ।।

ಪ್ರಹ್ಲಾದೋ ಜನ್ಮ ವೈಷ್ಣವಃ ।।

ಶ್ರೀ ಬ್ರಹ್ಮಾಂಡಪುರಾಣದಲ್ಲಿ...

ಪ್ರಹ್ಲಾದೋಪಿ ಮಹಾಭಾಗಃ ಕರ್ಮದೇವ ಸಮಃ ಸ್ಮೃತಃ ।

ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।

" ಶ್ರೀಮದ್ಭಾಗವತ ಮಹಾ ಪುರಾಣ "

ವಾಸುದೇವೇ ಭಗವತಿ ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ ನಿರ್ವೈರಾಯ ಪ್ರಿಯ ಸುಹೃತ್ತಮಃ ।

" ಶ್ರೀ ಗರುಡಪುರಾಣದ ಬ್ರಹ್ಮಕಾಂಡ " ದಲ್ಲಿ.....

ಮಾನಸ್ತಂಭ ವಿವರ್ಜಿತಃ ಯಥಾ ಭಗವತೀಶ್ವರೇ ।।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್ ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ ಪೃಥುವ್ಯಾಂ ಖಗಸತ್ತಮಃ ।।

" ಸೂತ್ರ ಭಾಷ್ಯ " ದಲ್ಲಿ....

ದೇವಾಃ ಶಾಪ ಬಲದೇವ ಪ್ರಹ್ಲಾದಾದಿತ್ವಮಾಗತಾಃ ।
ದೇವಾಃ ಶಾಪಾಭಿಭೂತತ್ವಾತ್ ಪ್ರಹ್ಲಾದಾದ್ಯ ಬಭೂವಿರೇ ।।

" ಯಜುರ್ವೇದ ಬ್ರಾಹ್ಮಣ ೫ನೇ ಖಂಡ "

ಪ್ರಹ್ಲಾದೋ ವೈ ಕಯಾಧವಃ ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।

" ಶ್ರೀ ಸ್ಕಂದ ಪುರಾಣ " ದಲ್ಲಿ..

ಋತೇತು ತಾತ್ವಿರ್ಕಾ ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।

" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ "

ಶ್ರೀ ಮದ್ಭಾಗವತ ಮಹಾ ಪುರಾಣದಲ್ಲಿ....

ವತ್ಸ! ಯದ್ಯದಭೀಷ್ಟಂತೇ ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ ಕರ್ಮಬಂಧಾತ್ಪ್ರಮುಚ್ಯತೇ ।।

" ಶ್ರೀ ಪ್ರಹ್ಲಾದರೇ ಬಾಹ್ಲೀಕರಾಜರು " ....

ಶ್ರೀಮದಾಚಾರ್ಯರು - ಮ ಭಾ ತಾ ನಿ - ೧೧ - ೮

ಬಾಹ್ಲೀಕೋರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರಃ ।
ಪ್ರಹ್ಲಾದಃ ಭಗವತ್ಪ್ರಿಯಃ ವಾಯೂನಾ ಚ ಸಮಾವಿಷ್ಟಃ ।।

" ಶ್ರೀ ಪ್ರಹ್ಲಾದರೇ ಶ್ರೀ ವ್ಯಾಸರಾಜರು ".....

ಶ್ರೀಪುರಂದರದಾಸರು....

ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।

ಶ್ರೀ ಕನಕದಾಸರು....

ವ್ಯಾಸರಾಯರಿಗೆ ಮೂರು ಜನ್ಮ । ದಾಸರಿಗೆ ಎರಡು ಜನ್ಮ । ಶ್ರೀ ವ್ಯಾಸರಾಯರೇ ರಾಘವೇಂದ್ರರಾಯರು ರಾಮಚಂದ್ರನ ಆಶ್ರಿತ ಜನ ಕೋಟಿಯೊಳಗೆ । ಉತ್ಕ್ರುಷ್ಠರಾದವರು । ನಾರದರ ಅಂಶವೇ ಪುರಂದರ ದಾಸರು । ತಮ್ಮ ಕೂಸಾದ ಭೃಗು ಮುನಿಯಲ್ಲಿ । ತಾವು ಒಂದು ಅಂಶದಿ ನಿಂದು ವಿಜಯದಾಸರೆಂದು ಪೆಸರು ಪಡೆವ । ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ಎರಡು ಜನ್ಮ ಶೂದ್ರ ಯೋನಿಯಲ್ಲಿ ಪೊಕ್ಕೆನಲು । ಒಂದು ಜನುಮ ವಿದುರನಾಗಿ ಕುರುಬ ಕುಲದಲ್ಲೀಗ ಪುಟ್ಟಿದೆ । ಎನಗೆ ಈ ಜನ್ಮದಲ್ಲಿ ಮುಕುತಿ ಎಂತೆಂಬೆ । ವರದಪ್ಪನೇ ಸೋಮ । ಗುರುರಾಯ ದಿನಕರನು । ಅಭಿನವ ಬೃಹಸ್ಪತಿ । ಮಧ್ವಪತಿ ಭೃಗು ಅಂಶದಿ ಮೆರೆವ । ಮಹಾ ಮಹಿಮೆ ಪೊಗಳುವೆನು । ಭಾಗವತರೊಳು ಯೋಗೀಂದ್ರ ಕೃಷ್ಣನ್ನ । ಬಾಗಿ ನಮಿಸುವ ದಾಸ ಜನರ ಪೋಷಕ ಕಾಗಿನೆಲೆಯಾದಿ ಕೇಶವರಾಯ । ದಾಸೋತ್ತಮರ ಗುಣವನ್ನು ಕನಕದಾಸ ಪೇಳಿದನು ।।

ವಿವರಣೆ :

" ವ್ಯಾಸರಾಯರಿಗೆ ಮೂರು ಜನ್ಮ "

ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜರು.

" ದಾಸರಿಗೆ ಎರಡು ಜನ್ಮ "

ಮಹಾಭಾರತದಲ್ಲಿನ ಶ್ರೀ ವಿದುರ ಮತ್ತು ಶ್ರೀ ಕನಕದಾಸರು

" ಶ್ರೀ ವ್ಯಾಸರಾಯರೇ ರಾಘವೇಂದ್ರರಾಯರು "

ಶ್ರೀ ವ್ಯಾಸರಾಜರ ಮುಂದಿನ ಅವತಾರವೇ ಶ್ರೀರಾಯರು!!!!

ಶ್ರೀ ವಿಜಯೀ೦ದ್ರತೀರ್ಥರು ಶ್ರೀ ವ್ಯಾಸರಾಜ ಸ್ತೋತ್ರದಲ್ಲಿ....

ಪ್ರಹ್ಲಾದಸ್ಯಾವತಾರೋ ಸಾವೀಂದ್ರಸ್ಯಾನುಪ್ರವೇಶನಾತ್ ।
ತೇನೆ ಸತ್ಸೇವಿನಾಂ ನೃಣಾಂ ಸರ್ವಮೇತದ್ಭವೇ ಧ್ರುವಮ್ ।।

ಶ್ರೀ ವಿಜಯರಾಯರು....

ವೃಕೋದರನಿಂದ ನೊಂದು ದೇಹವನು ಬಿಡುವಾಗ । ಬಾ । ಹ್ಲೀಕ ರಾಯನಾಗಿ ಹುಟ್ಟಿದ್ದ ಪ್ರಹ್ಲಾದ । ತಾ । ನುಕುತಿಯಲಿ ಪೊಗಳಿ ವರವ ಬೇಡಿದನು ವೈದಿಕ ಮಾರ್ಗವನೇ ಪಿಡಿದು ।। ಉಕಿತಿಯನು ಸಾಧಿಸುತ ಕಲಿಯೊಳಗೆ ನಿಮ್ಮ । ಪೂ । ಜಕನಾಗಿ ಬಾಳುವೆನು ಎಂದು ತಲೆವಾಗಿದನು । ಭಕುತಿಗೆ ಮೆಚ್ಚಿ ಕೈಸಲೆ ಎಂದ ಮಾತಿಂದು ಪ್ರಕಟವಾಯಿತು ಧರೆಯೊಳು ।।

" ಶ್ರೀ ಪ್ರಹ್ಲಾದರೇ ಶ್ರೀ ರಾಘವೇಂದ್ರತೀರ್ಥರು "

ಶ್ರೀ ಗೋಪಾಲದಾಸರು...

ಶೇಷಾಂಶ ಪ್ರಹ್ಲಾದ ವ್ಯಾಸ ಮುನಿಯೇ++++++

ರಾಘವೇಂದ್ರ ।
ಈ ಸುಬಗೆ ಪುಣ್ಯ ಇವರಿಗೆ ಕೇಶವನೆ ತಾ ಮಾಡಿಸಿ ।।

ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ।
ಯತಿ ರಾಘವೇಂದ್ರ ।।

ಶ್ರೀ ಪ್ರಾಣೇಶದಾಸರು...

ರಾಯರ ನೋಡಿರಿ ಗುರು ರಾಯರ ಪಾಡಿರೈ ।
ಸಿರಿ ಪ್ರಹ್ಲಾದ ವರ ಬಾಹ್ಲೀಕ ಗುರು ವ್ಯಾಸ ರಾಘವೇಂದ್ರ ।।

ಶ್ರೀ ಶ್ರೀಕರವಿಠಲರು...

ಸಹ್ಲಾದಣ್ಣನಣ್ಣ ಬಾರೋ । ಪ್ರಹ್ಲಾದರಾಜಾ ।
ಬಾಹ್ಲೀಕ ವ್ಯಾಸನಾಗಿ ಉಹ್ಲಾಸದಿಂದ ಬಾರೋ ।।
ರಾಜ ಬಾರೋ ಗುರುರಾಜ ಬಾರೋ ।
ರಾಜಾಧಿರಾಜ ಗುರುರಾಜ ಬಾರೋ ।।

" ಶ್ರೀ ವಾಯುದೇವರ ನಿತ್ಯಾವೇಶಯುಕ್ತರು ಶ್ರೀ ರಾಘವೇಂದ್ರತೀರ್ಥರು "

" ಬ್ರಹ್ಮಕಾಂಡ "

ವಾಯೂನಾ ಚ ಸಮಾವಿಷ್ಟಂ ಹರೇಃ ಪಾದಾಬ್ಜ ಸಂಶಯಂ ।

ಶ್ರೀಮದಾಚಾರ್ಯರು....

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಎಂದರೆ ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್

ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।

" ನಿತ್ಯ " ಪದಕ್ಕೆ ಅರ್ಥವೇನೆಂದರೆ..

ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!

ಇನ್ನೊಂದು ಪದದಲ್ಲಿ....

ರಾಗ : ಹಂಸಾನಂದೀ ತಾಳ : ಆದಿ

ರಾಯರೇ ಗತಿಯು ನಮಗೆ ।
ವಾಯುಸುಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।

ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ ।
ಯುಕುತಮಾಗಿಹ ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ ಭಕುತಿ ವಿರುಕುತಿ ಗತಿಯು ।
ಅಕಳಂಕ ಶ್ರೀಮಂತ ಮಂದಿರದಿ ನೆಲಸಿಪ್ಪ ।। ಚರಣ ।।

ಋಷಿಗಳಿಗೆ ಪ್ರಣವವೇ ಗತಿ ಝಷಗಳಿಗೆ ಜಲವೇ ಗತಿ ।
ಸಸಿಗಳಭಿವೃದ್ಧಿಗೆ ಶಶಿಯೇ ಗತಿಯು ।
ಶಿಶುಗಳಿಗೆ ಜಲವೆ ಗತಿ ಪಶುಗಳಿಗೆ ತೃಣವೆ ಗತಿ ।
ಈಸು ಮಹಿಮೆಲಿ ಮೆರೆವ ಮಿಸುನಿ ಶಯ್ಯಜರಾದ ।। ಚರಣ ।।

ಕಾಮಿನೀ ಮಣಿಯರಿಗೆ ಕೈಪಿಡಿದ ಕಾಂತ ಗತಿ ।
ಭೂಮಿ ವಿಬುಧರಿಗೆ ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ ಭಯ ಪೋಪುವುದಕೆ । ಶ್ರೀ ।
ಶ್ಯಾಮಸುಂದರ ವಿಠ್ಠಲ ಸ್ವಾಮಿ ನಾಮವೇ ಗತಿಯೋ ।। ಚರಣ ।।

ವಿವರಣೆ :

ಶುಕ = ಗಿಳಿ
ಪಿಕ = ಕೋಗಿಲೆ
ವಿಕುಲ = ಪಕ್ಷಿ ಕುಲ
ಚೂತ ಸುಕುಜ = ಒಳ್ಳೆಯ ಮಾವಿನ ಮರ
ಪ್ರಣವ = ಓಂಕಾರ
ರುಷಗಳು = ಜಲಚರ ಪ್ರಾಣಿಗಳು
ಮಿಸುನಿಶಯ್ಯಜ = ಹಿರಣ್ಯಕಶಿಪುವಿನ ಮಗ
ತಾಮರಸ ಸಖ = ಕಮಲದ ಹೂವಿಗೆ ಮಿತ್ರನಾದ ಸೂರ್ಯ
ಸುತನ = ಯಮಧರ್ಮರಾಜರ
ಧಾಮ = ಪುರಕ್ಕೆ

ಶ್ರೀ ರಾಯರನ್ನು ಯಾರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸುತ್ತಾರೋ, ಭಜಿಸುತ್ತಾರೋ, ಶ್ರೀ ರಾಯರೇ ಗತಿಯೆಂದು ಸರ್ವ ಕಾಲಗಳಲ್ಲಿಯೂ ಸೇವಿಸುತ್ತಾರೋ ಅವರಿಗೆ ಶ್ರೀ ಯಮಧರ್ಮರಾಜರ ಭಯವು ಅಂದರೆ " ನರಕ " ದ ಭಯ ಇಲ್ಲ ಎನ್ನುವುದನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ರಾಘವೇಂದ್ರ ಗುರುರಾಯರ ಅದ್ಭುತ ಮಹಿಮೆಯನ್ನು ಅತಿ ಮನೋಜ್ಞವಾಗಿ ಸರಳ ಸುಂದರವಾಗಿ ತಿಳಿಸಿದ್ದಾರೆ.

ಮತ್ತೊಂದು ಪದ್ಯದಲ್ಲಿ....

ರಾಗ : ಕಾಂಬೋಧಿ ತಾಳ : ಝಂಪೆ

ಸತತ ಪಾಲಿಸೋ ಯೆನ್ನ ।
ಯತಿ ರಾಘವೇಂದ್ರ ।
ಪತಿತ ಪಾವನ ಪಾವನ ।
ಸುತ ಮತಾಂಬುಧಿ ಚಂದ್ರ ।। ಪಲ್ಲವಿ ।।

ನಂಬಿದೆನೋ ನಿನ್ನ ಚರಣಾಂಬುಜವ ಮನ್ಮನದ ।
ಹಂಬಲವ ಪೂರೈಸೋ ಬೆಂಬಿಡದಲೆ ।
ಕುಂಭಿಣೀಸುರ ನಿಕುರುಂಬ ವಂದಿತ ಜಿತ ।
ಶಂಬರಾಂತಕ ಶಾತಕುಂಭ ಕಶ್ಯಪ ತನಯ ।। ಚರಣ ।।

( ಕುಂಭಿಣೀಸುರ = ಭೂಸುರ; ನಿಕುರುಂಬ = ಸಮೂಹ; ಶಾತಕುಂಭ = ಬಂಗಾರ; ಶಾತಕುಂಭಕಶ್ಯಪ = ಹಿರಣ್ಯಕಶಿಪು; ಶಾತಕುಂಭಕಶ್ಯಪ ತನಯ = ಹಿರಣ್ಯಕಶಿಪುವಿನ ಮಗ ಪ್ರಹ್ಲಾದ )

ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ ।
ವೀಣಾ ವೇಂಕಟ ಅಭಿದಾನದಿಂದ ।
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮ ।
ಯೇನೆಂದು ಬಣ್ಣಿಸಲಿ ಜ್ಞಾನಿಕುಲ ತಿಲಕ ।। ಚರಣ ।।

ಮಂದಮತಿಗಳ ಸಂಗದಿಂದ ನಿನ್ನಯ ಚರಣ ।
ಇಂದಿನ ತನಕ ನಾ ಪೊಂದಲಿಲ್ಲ ।
ಕುಂದು ಯೆಣಿಸದೆ ಕಾಯೋ ಕಂದರ್ಪ ಪಿತ । ಶ್ಯಾಮ ।
ಸುಂದರನ ದಾಸ ಕರ್ಮಂದಿ ಕುಲವರಿಯ ।। ಚರಣ ।।



ನಮ್ಮ ನಿಮ್ಮೆಲ್ಲರಿಗೂ ರಾಯರೇ ಗತಿಯು ನಮಗೆ ಶ್ರೀ ರಾಘವೇಂದ್ರ ಗುರುರಾಯರೇ ಗತಿಯು!!!!!
********



ಗುರು ರಾಘವೇಂದ್ರ ಸ್ವಾಮಿಯ ಪವಾಡ
ಕಲಿಯುಗದ ಕಾಮದೇನು ಕೇಳಿದ ವರವನ್ನು ಕೊಡುವ ತುಂಗಭದ್ರಾ ತೀರದ ಮಂತ್ರಾಲಯದ ರಾಘವೇಂದ್ರ ಸ್ವಾಮಿ. ದೇಗುಲದಲ್ಲಿ ಕೊಟ್ಟ ರಾಯರ ಮಂತ್ರಾಕ್ಷತೆಯನ್ನು ಭಕ್ತಿ ಶ್ರದ್ಧೆಯಿಂದ ಏನು ಮಾಡಬೇಕು ಯಾವ ರೀತಿ ಅದನ್ನು ಬಳಸಿದರೆ ಗುರು ರಾಯರ ಅನುಗ್ರಹ ಪಡೆಯಬಹುದು . ಹಲವಾರು ದೇವರ ಸನ್ನಿಧಿಯಲ್ಲಿ ಮಂತ್ರಾಕ್ಷತೆಯನ್ನು ಪ್ರಸಾಧವಾಗಿ ಕೊಡುತ್ತಾರೆ ಮಂತ್ರಾಕ್ಷತೆಗಿರುವ ವಿಶೇಷ ಪ್ರಾಮುಖ್ಯತೆ ನಮ್ಮ ಯುವಪೀಳಿಗೆಗೆ ತಿಳಿದಿರುವುದು ತುಂಬಾ ಕಡಿಮೆ ಮಂತ್ರಾಕ್ಷತೆಯನ್ನು ಬೇಕಾಬಿಟ್ಟಿ ಬಿಳಿಸುತ್ತಾರೆ
ಇವುಗಳನ್ನು ತಲೆಗೂ ಸರಿಯಾಗಿ ಹಾಕಿಕೊಳ್ಳದೆ ಜೇಬಿನಲ್ಲೂ ಸರಿಯಾಗಿ ಇಡದೆ ನೆಲದ ಮೇಲೆ ಅರ್ಧಕ್ಕೆ ಅರ್ಧ ಮಂತ್ರಾಕ್ಷತೆಯನ್ನು ಚೆಲ್ಲುತ್ತಾರೆ. ಶ್ರೀ ಗುರುರಾಘವೇಂದ್ರ ಸ್ವಾಮಿ ದೇಗುಲದಿಂದ ಸಿಕ್ಕ ಮಂತ್ರಾಕ್ಷತೆ ಬಹಳ ಶಕ್ತಿಯುತವಾದದ್ದು ಗುರುಗಳ ಮಂತ್ರಾಕ್ಷತೆ ಪಡೆದ ಎಲ್ಲರಿಗೂ ಎಲ್ಲ ಕಾರ್ಯಕ್ಷೇತ್ರದಲ್ಲೂ ಯಶಸ್ಸು ಖಚಿತ. ಮದುವೆ ಶುಭಾರಂಭಗಳಲ್ಲಿಯೂ ಶುಭ ಸಂಕೇತವಾಗಿ ಅಕ್ಷತೆಯನ್ನು ಬಳಸಲಾಗುತ್ತದೆ. ಮದುವೆ ಮಾಡಿಕೊಳ್ಳುವ ಹುಡುಗ ಹುಡುಗಿಗೆ ಹಾಕುವ ಆರತಕ್ಷತೆಯಲ್ಲಿ ಸಾವಿರಾರು ಪ್ರಾರ್ಥನೆ ಇರುತ್ತದೆ. ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತಿರ ಮತ್ತು ಅದು ಕೆಲ ನಿಮಿಷಗಳಲ್ಲೆ ಕೆಳಗೆ ಬೀಳುತ್ತದೆ. ಮಂತ್ರಾಕ್ಷತೆಗೆ ಇರುವ ಶಕ್ತಿ ಅಪಾರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಎಲ್ಲ ಕೆಲಸದಲ್ಲಿಯೂ ಯಶಸ್ಸು ಖಚಿತ.
ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಂತ್ರಾಕ್ಷತೆ ಬಳಸಬಹುದು ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದನ್ನು ನಿಮ್ಮ ದೇಹದ ಬಲ ಭಾಗದಲ್ಲಿ ಇಟ್ಟುಕೊಳ್ಳಬೇಕು ಅಂದರೆ ಬಲಭಾಗದ ಜೇಬಿನಲ್ಲಿ ನಂತರ ಮನೆಗೆ ತೆರಳಿದ ಮೇಲೆ ಅದಕ್ಕೆ ಶ್ರೀಗಂಧವನ್ನು ನೀರಿನಲ್ಲಿ ಕಲಸಿ ಒಂದೆರಡು ತುಳಸಿ ದಳವನ್ನು ತಲೆಗೆ ಪ್ರೋಕ್ಷಣೆಯನ್ನು ಮಾಡಿಕೊಂಡು ರಾಯರನ್ನು ನೆನೆಯುತ್ತ ಯಾವುದೇ ಕಾರ್ಯವನ್ನು ಮಾಡಿದರು ಯಶಸ್ಸು ಸಿಗುವುದು ಶತಸಿದ್ದ ಹಾಗೆಯೇ ಬಟ್ಟೆಯಲ್ಲಿದ್ದ ಅಕ್ಷತೆಯನ್ನು ತಲೆಗೆ ನಿತ್ಯ 2 ಕಾಳುಗಳನ್ನು ಹಾಕಿಕೊಳ್ಳಿ ಮಂತ್ರಾಕ್ಷತೆಯನ್ನು
ಸಂಗ್ರಹಿಸಿಟ್ಟುಕೊಳ್ಳಿ ಯಾವುದೇ ರೀತಿಯ ಸಮಸ್ಯೆ ಬಂದಾಗ ಮಂತ್ರಾಕ್ಷತೆ ನಿಮ್ಮ ತಲೆಮೇಲಿರಲಿ ಆಗ ರಾಯರ ಶ್ರೀರಕ್ಷೆ ನಿಮ್ಮ ಮೇಲಿರುತ್ತದೆ. ಕಷ್ಟಕಾಲದಲ್ಲಿ ರಾಯರ ಮಂತ್ರಾಕ್ಷತೆ ಬಳಸಿ ರಾಯರ ಪವಾಡವನ್ನು ನೇರವಾಗಿ ನೋಡಿ ಸ್ನೇಹಿತರೆ ನಿಮಗೂ ಕೂಡ ಸಾಧ್ಯವಾದರೆ ಜೀವನದಲ್ಲಿ ಒಮ್ಮೆಯಾದರೂ ತುಂಗಾತೀರ ಸ್ನಾನವನ್ನು ಮಾಡಿ ಮಂತ್ರಾಲಯದ ಶ್ರೀ ಗುರುರಾಯರ ದರ್ಶನವನ್ನು ಮಾಡಿ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸಿ ಜೊತೆಗೆ ಅಕ್ಷತೆಯನ್ನು ತೆಗೆದುಕೊಂಡು ಬನ್ನಿ.

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)
************




ಧರೆಯೊದ್ದಾರಕೆ ಮೆರೆವರು ಗುರುಗಳು| 
ವರ ಮಂತ್ರಾಲಯ ದಲ್ಲಿ|
ವರ ಪ್ರಹ್ಲಾದರು ವ್ಯಾಸ ಪ್ರಭುಗಳು| 
ವರ ತುಂಗಾತಟದಲ್ಲಿ|
🙏ಶ್ರೀ ಗುರುರಾಯರ ಮಹಿಮೆ.🙏
✍ಶ್ರೀ ಮಲ್ಲಪ್ಪ ಸಿಂಧೆ ಮತ್ತು ಅವರ ಸಹೋದರರು ಶ್ರೀ ಗುರು ರಾಜರ ಪರಮ ಭಕ್ತರು.
 ಪುಣೆಯ ಸಿಂಧೆ ಮನೆತನದವರು ಇವರು.ಬಹಳ ಧಾರ್ಮಿಕರು,ಧರ್ಮಕಾರ್ಯ
ನಿರತರು,ಶ್ರೇಷ್ಠ ಉದ್ದಿಮೆ ದಾರರು,ಮತ್ತು ಶ್ರೀಮಂತ ಮನೆತನ.
ಇಂತಹ ಮನೆತನದ ಶ್ರೀ ಮಲ್ಲಪ್ಪ ಸಿಂಧೆ ಅವರಿಗೆ ರಾಯರು ಎಂದರೆ ವಿಶೇಷ ಭಕ್ತಿ.ಯಾವುದೇ ಕಾರ್ಯವನ್ನು ಮಾಡುವ ಮೊದಲು ರಾಯರನ್ನು ಪ್ರಾರ್ಥನೆ ಮಾಡಿ ಆರಂಭಿಸುವದು ಅವರ ಪದ್ದತಿ...
ಒಮ್ಮೆ ದುರದೃಷ್ಟವಶಾತ್, ಅವರ ಪ್ರಾರಬ್ಧ ಕರ್ಮಾನುಸಾರ ಕಾಯಿಲೆಗೆ ತುತ್ತಾಗಿ ಆಪರೇಶನ್ ಮಾಡುವ ಪರಿಸ್ಥಿತಿ ಬಂತು.
ಪ್ರಾಣಾಪಾಯಕರವಾದ ಆ ಆಪರೇಶನ್ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆ ಯಲ್ಲಿ ೭/೮/೧೯೬೭ರಂದು ನಡೆಯಿತು. ಸುಮಾರು ೫ತಾಸುಗಳ ಕಾಲ ನಡೆದ ಆಪರೇಶನ್. ರಾಯರ ಅನುಗ್ರಹ ದಿಂದ ಆಪತ್ತು ನಿಂದ ಪಾರಾದರು...
ಶಸ್ತ್ರಚಿಕಿತ್ಸೆ ಹಿಂದಿನ ದಿನ 
ರಾತ್ರಿ ಮಲ್ಲಪ್ಪ ನವರು ರಾಯರ ಬಳಿ ಪ್ರಾರ್ಥನೆ ಮಾಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿಕೊಡಲು ಕೇಳಿಕೊಳ್ಳುವರು.
ಆ ರಾತ್ರಿ ಅವರು ಮಲಗಿದ್ದಾಗ ಸ್ವಪ್ನದಲ್ಲಿ ಮಂತ್ರಾಲಯ ಪ್ರಭುಗಳ ದರುಶನವಾಗಿದೆ...
ಒಬ್ಬ ಯತಿಗಳು ಧ್ಯಾನ ಮಾಡುತ್ತಾ ಒಂದು ಕೊಠಡಿಯಲ್ಲಿ ಕುಳಿತಿದ್ದಾರೆ..
ಅಲ್ಲಿ ಮಲ್ಲಪ್ಪ ಸಿಂಧೆಯವರು ತಮ್ಮ ಸಂಗಡಿಗರಾದ ಶ್ರೀ ಕೊಂಡಪ್ಪ ಮತ್ತು ವೆಂಕಟಸ್ವಾಮಿ ಜೊತೆಗೆ ಹೋಗುತ್ತಾರೆ.
ಗುರುಗಳ ಬಳಿ ಕುಳಿತಿದ್ದ ಶಿಷ್ಯ ನೊಬ್ಬ ಇವರನ್ನು ಕಂಡು ಓಹೋ!!ಬನ್ನಿ.. ಬನ್ನಿ!! ಗುರುಗಳ ನೋಡಲು ನೀವು ಬರುವಿರೆಂದು ಗುರುಗಳ ಆಜ್ಞೆ ಆಗಿದೆ.ಪೂಜೆ ಮುಗಿದಿದೆ.
ನೋಡಿ!! ನಿಮಗಾಗಿ ರಾಯರು ಇಲ್ಲಿ ಪ್ರಸಾದ ಇಟ್ಟಿದ್ದಾರೆ.ಇದನ್ನು ಸ್ವೀಕರಿಸಿ...
ಗುರುಗಳು ಧ್ಯಾನಕ್ಕೆ ಕುಳಿತಿದ್ದಾರೆ.ಅವರ ಧ್ಯಾನಕ್ಕೆ ಭಂಗ ತರಬೇಡಿ ಎಂದು ಹೇಳಿ ಆ ಕೊಠಡಿಯಲ್ಲಿ ಒಂದು ಕಡೆ ಇಟ್ಟು ಇರುವ ಪ್ರಸಾದವನ್ನು  ಭಕ್ರಿ, ತುಪ್ಪ, ಮತ್ತು ಸಕ್ಕರೆ, ಅವರಿಗೆ ತೋರಿಸಲು  ಮಲ್ಲಪ್ಪ ಸಿಂಧೆಯವರು ಅದನ್ನು ಭಕ್ತಿ ಇಂದ ಸ್ವೀಕರಿಸಿ  ಗುರುಗಳಿಗೆ ದೂರದಿಂದ ನಮಸ್ಕಾರ ಮಾಡಿ ಹೊರಬಂದರು.
ಎಚ್ಚರಿಕೆ ಆಯಿತು. ನೋಡಿದರೆ ಸುತ್ತಲೂ ಯಾರು ಇಲ್ಲ.
ಸ್ವಪ್ನದಲ್ಲಿ ಗುರುಗಳ ಅನುಗ್ರಹ ನೆನೆದು ಆನಂದ ಭರಿತರಾದರು..
ಬೆಳಿಗ್ಗೆ ಎದ್ದ ಕೂಡಲೇ ತಮಗೆ ರಾತ್ರಿ ಬಿದ್ದ ಸ್ವಪ್ನ ಸೂಚಿತ ದೃಶ್ಯಗಳನ್ನು ಯೋಚಿಸುತ್ತಾ
ನನ್ನ ಜೊತೆಯಲ್ಲಿ ಇದ್ದವರು ಕೊಂಡಪ್ಪ ಮತ್ತು ವೆಂಕಟಸ್ವಾಮಿ.
ಅಂದರೆ ಭಗವಂತನ ಹೆಸರು ಇಟ್ಟು ಕೊಂಡವರು..
"ಬಹುಶಃ ಭಗವಂತನು ಅವರ ರೂಪದಿಂದ ಬಂದು" "ಅಪ್ಯಚ್ಯುತೋ ಗುರುದ್ವಾರ" ಅಂದರೆ 
"ಶ್ರೀ ಹರಿಯು ಸಹ ಗುರುಗಳ ಮುಖಾಂತರವೆ ಅನುಗ್ರಹ ಮಾಡಿಸುವನು". ಅದರಂತೆ "ಶ್ರೀ ರಾಯರ ಮುಖಾಂತರ ವಾಗಿ ನನಗೆ ಸ್ವಪ್ನದಲ್ಲಿ ರೊಟ್ಟಿ (ಭಕ್ರಿ) ತುಪ್ಪ, ಸಕ್ಕರೆ ಪ್ರಸಾದ ಕೊಡಿಸಿ,ನಿನ್ನ ಶಸ್ತ್ರಚಿಕಿತ್ಸೆ ರೊಟ್ಟಿ (ಭಕ್ರಿ) ಯಂತೆ ಕಠಿಣವಾಗಿದ್ದರು ಸಹ ನಾವು ಅದನ್ನು ತುಪ್ಪ ದಂತೆ ಕರಗಿಸಿ ಸಕ್ಕರೆಯಂತೆ ಆನಂದವಾಗುವಂತೆ ಮಾಡುತ್ತೇವೆ ಎಂದು ಸೂಚಿಸಿದ್ದಾರೆ"...
ಆಯುಷ್ಯ ಅಭಿವೃದ್ಧಿಗೆ ಘೃತ ಮುಖ್ಯ ಅಂತ ಹೇಳುತ್ತಾರೆ.. 
"ಬರಿಯ ಆಯುಷ್ಯ ಇದ್ದರೆ ಉಪಯೋಗ ಇಲ್ಲ. ನಮ್ಮ ಜೀವನ ಸಹ ಮಧುರವಾಗಿ ಸಿಹಿಯಾಗಿ ಇರಬೇಕು ಅಂದರೆ ಸಕ್ಕರೆ ಯನ್ನು ದಯಪಾಲಿಸಿದ್ದಾರೆ..".
ಆಹಾ!!ನಾನೆಂಥಹ ಭಾಗ್ಯಶಾಲಿ.
ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರನಾದೆ.ಇನ್ನೂ ನನಗೆ ಯಾವ ಭಯವು ಇಲ್ಲ ಅಂತ ಹೇಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಗೆ ಕೊಡುತ್ತಾರೆ
ಮರುದಿನ ಸತತ ೫ ತಾಸುಗಳ ಕಾಲ ಶಸ್ತ್ರಚಿಕಿತ್ಸೆ ಅವರಿಗೆ ನಡೆಯುತ್ತದೆ..
ಬಂದ ವಿಪತ್ತಿನಿಂದ ಸಿಂಧೆಯವರು ಪಾರಾಗುತ್ತಾರೆ..
ಹೀಗೆ 
ಮಂತ್ರಾಲಯ ಪ್ರಭುಗಳು ತಮ್ಮ ಭಕ್ತರು ಎಲ್ಲೆ ಇರಲಿ ಅವರ ರಕ್ಷಣೆ ಮಾಡುವವರು ಎಂಬುದನ್ನು ಈ ಘಟನೆ ತೋರಿಸುತ್ತದೆ...
ನಂತರ ಅವರ ಆರೋಗ್ಯ ಗುಣವಾದ ಮೇಲೆ ಮಂತ್ರಾಲಯಕ್ಕೆ ಬಂದು ಗುರುರಾಜರ ದರುಶನ ಪಡೆದು ಅವಾಗ ಪೀಠದಲ್ಲಿ ಇದ್ದ 
ಶ್ರೀ ಸುಜಯೀಂದ್ರ ಗುರುಗಳಿಗೆ  ನಮಸ್ಕರಿಸಿ ತಮಗಾದ ಸ್ವಪ್ನ ಅನುಭವವನ್ನು ಹೇಳಿ 
ನನಗೆ ಮಂತ್ರಾಲಯ ಮಂದಿರವನ್ನು ಜೀರ್ಣೋದ್ಧಾರ ಮಾಡಲು ರಾಯರ ಸೂಚನೆಯಾಗಿದೆ.ಹಾಗಾಗಿ ಆಲಯ ನಿರ್ಮಾಣಕ್ಕೆ ತಾವು ಅಪ್ಪಣೆ ಕೊಡಬೇಕು ಅಂತ ಕೇಳಿ ಅವರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು... 
ಆ ನಂತರ ಆಲಯ ಜೀರ್ಣೋದ್ಧಾರ ಆಯಿತು..
ಹೀಗೆ ಸ್ವಪ್ನದಲ್ಲಿ ಬಂದು ಅನುಗ್ರಹ ಮಾಡಿ ಅವರಿಂದ ಆಲಯ ನಿರ್ಮಾಣದ ಸೇವೆಯನ್ನು ತೆಗೆದುಕೊಂಡು ಅವರಿಗೆ ಅನುಗ್ರಹ ಮತ್ತು ಅವರಿಗೆ ಖ್ಯಾತಿಯನ್ನು ನೀಡಿದವರು ರಾಯರು.
ಹೀಗೆ ಅಸಂಖ್ಯಾತ ಅವರ ಮಹಿಮೆಯ ಸಮುದ್ರದಲ್ಲಿ ಇದು ಒಂದು  ಘಟನೆ ಒಂದು ಹನಿ ಅಂತ ಹೇಳಬಹುದು..
ರಾಯರಎ ಎಲ್ಲಾ ಭಕ್ತ ವೃಂದಕ್ಕೆ ರಾಯರ ಮತ್ತು ಅವರ ಅಂತರ್ಯಾಮಿಯಾದ ಶ್ರೀ ರಾಘವನ ಅನುಗ್ರಹವಾಗಲಿ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಕರೆದರೆ ಬರುವರು| ಅರಘಳಿಗೆ ಇರದಲೆ|
ಕರ್ಕಶ ಹೃದಯಿಗಳಲ್ಲ|
ಧರೆಯೊಳು ಗುರುಗಳ ಮೊರೆಯಿಡಲಾಗದ|
ನರರೇ ಪಾಪಿಗಳೆಲ್ಲ.||
 ಭುವಿಯೊಳು ಬಹುಪರಿ| ಬಳಲುವ ಮನುಜರ| ಭವಣೆಯ ಬಲು ತಿಳಿದಿಲ್ಲಿ|
ತವಕದಿ ಬಿಡಿಸಲು| ಅವತರಿಸಿರುವರು|
ವರ ಮಂತ್ರಾಲಯ ದಲ್ಲಿ||

🙏ಅ.ವಿಜಯವಿಠ್ಠಲ🙏
***********

ಶ್ರೀ ಮೂಲ ರಾಮಚಂದ್ರಾಯ ನಮಃ.
ಶ್ರೀ ರಾಘವೇಂದ್ರಾಯ ನಮಃ

ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರತಿದಿನವೂ

ಬ್ರಾಹ್ಮೀ ಮೂಹೂರ್ತ ದಲ್ಲೆದ್ದು ಸ್ನಾನ ಆಹ್ನೀಕ ಗಳನ್ನು ಮುಗಿಸಿಕೊಂಡು, ಶಿಷ್ಯರಿಗೆ ವೇದಾಂತ
ಪ್ರವಚನಗಳನ್ನು ಮಾಡಿಸುತ್ತಿದ್ದರು.

ಮಧ್ಯಾಹ್ನ ಸ್ನಾನ ಜಪ ಗಳಾದ ಮೇಲೆ ಬ್ರಹ್ಮ
ಕರಾರ್ಚಿತ ಶ್ರೀ ಮೂಲರಾಮ ದೇವರು, ದಿಗ್ವಿಜಯ
ರಾಮ, ವೈಕುಂಠ ವಾಸುದೇವ ಮೂರ್ತಿ, ಬಲ
ಮುರಿ ಶಂಖ ಈ ದಿವ್ಯ ಮೂರ್ತಿಗಳನ್ನು
ಆರಾಧಿಸುತ್ತಿದ್ದರು.

ಒಂದೊಂದು ರೂಪವನ್ನು ಚಿಂತಿಸುತ್ತಾ, ಆ ರೂಪವನ್ನು ಮೂರ್ತಿ ಯಲ್ಲಿ ಕಂಡು ತುಳಸೀ
ದಳವನ್ನು ಅರ್ಪಿಸುತ್ತಿದ್ದರು. 

ಯಾವ ಮೂರ್ತಿಯಲ್ಲಿ ಯಾವ ರೂಪವನ್ನು
ಕಂಡರೂ " ವೇಣುಗೋಪಾಲ" ರೂಪವೇ
ಸ್ವಾಮಿಗಳ ಮನಸ್ಸನ್ನು ಆವರಿಸುತ್ತಿತ್ತು.

ಆದುದರಿಂದ ಸ್ವಾಮಿಗಳು ಸುವರ್ಣ ಮಯ ವಾದ
ವೇಣುಗೋಪಾಲ ಮೂರ್ತಿಯನ್ನು ನಿರ್ಮಿಸಿ
ಆರಾಧಿಸುತ್ತಿದ್ದರು.

ಒಂದು ದಿನ ವೇಣುಗೋಪಾಲನ ಮೂರ್ತಿ ಯನ್ನೇ
ನೋಡುತ್ತಾ, ಪರವಶರಾಗಿ ವೀಣೆಯನ್ನು
ನುಡಿಸುತ್ತಾ ಆನಂದದಿಂದ ಹಾಡಿದರು.

ರಾಗ ಭೈರವಿ. ತಾಳ ತ್ರಿಪುಟ ಛಾಪು.

ಇಂದು ಎನಗೆ ಗೋವಿಂದ ನಿನ್ನ ಪಾದಾರವಿಂದ ವ

ತೋರೊ ಮುಕುಂದನೆ // ಪ//

ಮಂದರೋದ್ಧಾರನೆ ನಂದ ಗೋಪನ ಕಂದ
ಇಂದಿರಾ ರಮಣ ಗೋವಿಂದ ಗೋಕುಲಾನಂದ // ಅ.ಪ.//

ನೊಂದೆನಯ್ಯಾ ಭವ ಬಂಧನ ದೊಳು ಸಿಲುಕಿ

ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದ ನಾನೆಂದೆನ್ನ ಕುಂದುಗಳು ಎಣಿಸದೆ
ತಂದೆ ನೀ ಕಾಯೋ ಕಂದರ್ಪ ಜನಕನೆ //೧//

ಮೂಢತನದಿ ಬಲು ಹೇಡಿ ಜೀವ ನಾನಾಗಿ
ದೃಢ ಭಕ್ತಿಯ ಮಾಡಲಿಲ್ಲವೊ ಹರಿಯೇ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿ ಕೊಂಬೆನೊ ಸ್ವಾಮಿ //೨//

ಧಾರಿಣಿಯೊಳು ಭೂಭಾರ ಜೀವನ ನಾಗಿ
ಮೇರೆ ದಪ್ಪಿ ನಡೆದು ಸೇರಿದೆ ಕುಜನರ
ಯಾರೂ ಕಾಯುವವರಿಲ್ಲ ಸೇರಿದೆ ನಿನಗಯ್ಯಾ
ಧೀರ ವೇಣುಗೋಪಾಲ ಪಾರುಗಾಣಿಸೊ ಸ್ವಾಮೀ //

ಈ ಪದ ವನ್ನು ಗುರುರಾಯರು ಹಾಡುತ್ತಿರುವಾಗ,
ಗೋಪಾಲನು ಗತಿಗೆ ತಕ್ಕಂತೆ ನರ್ತನ ಮಾಡಿದನಂತೆ.
ಪ್ರೇಮ ಪಾರವಶ್ಯದಲ್ಲಿ ಶಬ್ದ ಸಂಭ್ರಮ ವಿರುವುದಿಲ್ಲ.


// ಶ್ರೀ ರಾಘವೇಂದ್ರಾಯ ನಮಃ//
************

ಸರ್ವೋತ್ತಮ ಶ್ರೀಹರಿಯ ಅಭಿನ್ನ ಅವತಾರ 
ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಕರುಣಾಪೂರ್ಣ 
ಕೃಪಾ ದೃಷ್ಟಿ ಮಾತ್ರದಿಂದಲೇ.. 
ಜಡವಾದ ಶಿಲೆ ಸುಂದರ ಹೆಣ್ಣಾಗಿ ~ ಜ್ಞಾನಿ ಗೌತಮರ ಋಷಿ ಪತ್ನಿ ಅಹಲ್ಯ ಶಾಪವಿಮೋಚನಳಾಗಿ ಕೃತ ಕೃತ್ಯಳಾದರೆ ..
ಸೃಷ್ಟಿ ತದ್ವಿರುದ್ಧವೆನಿಸುವ ಸೋಜಿಗವೆನಿಸುವ 
ರಾಮಸೇತುಬಂಧನದ ಮಹತ್ಕಾರ್ಯದಲಿ ಕಪಿಗಳು ಪೇರಿಸಿದ 
ಜಡ ಶಿಲೆಗಳು  ಶ್ರೀ ರಾಮಚಂದ್ರನ ಕರುಣಾಪೂರ್ಣ 
ಕೃಪಾ ದೃಷ್ಟಿ ಮಾತ್ರದಿಂದಲೇ.. 
ಸಮುದ್ರದಲಿ ತೇಲಿ ಸುಸ್ಥಿರವಾದ ಸೇತು ನಿರ್ಮಾಣದಂತಹ ಅಸಾಧ್ಯಕಾರ್ಯವೂ ಸಾಧ್ಯವಾಯಿತು ..

ಜ್ಞಾನಿಗಳು ಹೇಳುವಂತೆ ಸರ್ವಶಕ್ತ ಅನಂತಗುಣಪರಿಪೂರ್ಣ 
ಶ್ರೀ ರಾಮಚಂದ್ರ ದೇವರ 
ಕರುಣಾಪೂರ್ಣ ಕೃಪಾದೃಷ್ಟಿ ಮಾತ್ರದಿಂದಲೇ ..
" ಎಂತಹ ಅಸಾಧ್ಯ~ವಿಪರೀತವೆನಿಸುವ ಸಂದಿಗ್ದ ಸನ್ನಿವೇಶಗಳೂ 
ಸುಯೋಗವಾಗಿ ಪರಿವರ್ತನೆ ಗೊಳ್ಳುತ್ತವೆ | "

ಅಂತಹ #ಸೀತಾರಾಮಚಂದ್ರರ  ಪಾದಪದ್ಮಗಳಿಗೆ ಶರಣು |🙌
_ರಾಮಾಯಣ 
ಗುರುರಾಯರ ದಿವ್ಯ ಸಾನಿಧ್ಯ ಮಂತ್ರಾಲಯದಲ್ಲಿರುವ ವೃಂದಾವನ 
ಶಿಲೆ ತ್ರೇತಾಯುಗದಲಿ 
#ಸೀತಾರಾಮಚಂದ್ರ ದೇವರು ವಿಶ್ರಮಕ್ಕಾಗಿ ವಿರಮಿಸಿದ ಶಿಲೆಯೇ ರಾಯರು ತಮ್ಮ ಅಪರೋಕ್ಷ ಜ್ಞಾನದಿಂದ ಗುರುತಿಸಿ ದಿವಾನ ವೆಂಕಣ್ಣನಿಗೆ ಆಜ್ಞೆಯಿತ್ತು ಶ್ರೀ ರಾಮಚಂದ್ರದೇವರ ಪಾದಸ್ಪರ್ಶಮಾಡಿದ  ಶಿಲೆಯಿಂದಲೇ ವೃಂದಾವನ ನಿರ್ಮಾಣಮಾಡಲು ಸೂಚಿದರು |
ಶುದ್ಧ ಭಕುತಿಯಲಿ ಭಕುತರರು ಗುರು ರಾಯರ ಅನುಗ್ರಹ ಪಡೆಯಲು ರಾಯರ ಮೂಲವೃಂದಾವನದೆದುರು ನಿಂತು ಮಾಡುವ ಪರಿ ಪರಿಯ ಪ್ರಾರ್ಥನೆ ..ಎಷ್ಟು ನೋಡಿದರೂ ವೃಂದಾವನದ ದರುಶನ ಮನತಣಿಯದು ..ಭಕುತರು ಹರಿವಾಯು ಗುರುರಾಯರಲಿ ಮಾಡುವ ಶುದ್ಧ ಭಕುತಿ ದಣಿಯದು ... ವೃಂದಾವನ  ಶಿಲೆ ರಾಯರ ಭಕುತರ ಶುದ್ಧ ಭಕುತಿ ಮತ್ತು ಗುರುರಾಯರ ಮಂಗಳಕರ ಗುರು ಅನುಗ್ರಹದ ದರುಶನಕ್ಕಿರುವ (ರಾಮಸೇತುವೆಯಂತೆಯೇ ) ಸಂಪರ್ಕದ ಸೇತುವೆಯ ಶಿಲೆಯಾಗಿರುವುದು ..
ಈ ಅನುಸಂಧಾನದಿಂದಲೇ (ಅರ್ಚಕರಿಂದ ಸ್ಥಳ ಪುರಾಣ ಕೇಳಿದ)  ಬ್ರಿಟಿಷ್ ಅಧಿಕಾರಿ ಸರ್ ಥಾಮಸ್ ಮನ್ರೋ ಮಂತ್ರಾಲಯ ಸ್ಥಳ ಪರಿವೀಕ್ಷಣೆಮಾಡಲು ಬಂದಾಗ ತಾನು ಖುದ್ದಾಗಿ ರಾಯರಿಗೆ ಮಾತನಾಡಿ ತಿಳಿಯುವುದಾಗಿ ವಿನಮ್ರನಾಗಿ ರಾಯರ ದಿವ್ಯ ವೃಂದಾವನ ಸಾನಿಧ್ಯಕ್ಕೆ ಎದುರಾಗಿ ನಿಂತು ರಾಯರನ್ನು ಆಂಗ್ಲ ಭಾಷೆಯಲ್ಲಿ ಸಂಬೋಧಿಸಲು ಗುರುರಾಯರೇ ವೃಂದಾವನದಲಿ ಪ್ರತ್ಯಕ್ಷ ರೂಪದಿಂದ ಆಂಗ್ಲ ಅಧಿಕಾರಿಗೆ  (ಪರಿಶುದ್ಧ ಭಕುತಿಗೆ) ದರುಶನಕೊಟ್ಟು ಆಂಗ್ಲಭಾಷೆಯಲ್ಲಿಯೇ ಸಂಬೋಧನೆಮಾಡಿ ಅಧಿಕಾರಿ ಮನ್ರೋ ಸಂದೇಹಗಳನ್ನು ಪರಿಹರಿಸಿದ್ದು ಮಾತ್ರವಲ್ಲದೇ ಗುರುಅನುಗ್ರಹ ರೂಪವಾದ ಮುಷ್ಟಿ ಮಂತ್ರಾಕ್ಷತೆಯನ್ನೂ ಗುರುರಾಯರು ಬ್ರಿಟಿಷ್ ಅಧಿಕಾರಿ ಮನ್ರೋಗೆ ನೀಡಿ ಹರಸಿದರು ..

~ಗೋವಿಂದ
************

ರಾಘವೇಂದ್ರ ಚಿತ್ತಜ್ಞ

ಮಂತ್ರಾಲಯಕ್ಕೆ ಒಬ್ಬ ದಂಪತಿಗಳು ಸಂತಾನ ಭಾಗ್ಯ ಬೇಡಲು ಬಂದಿದ್ದರು. ಸಂತಾನ ಕರುಣಿಸಿದರೆ ರಾಯರ ಸೇವೆ ಮತ್ತು ಒಂದು ಲಕ್ಷ ಜನರಿಗೆ ದಾಸೋಹ ಎಂಬುದು ಅವರ ಹರಕೆ. ದಯಾಮಯಿ ರಾಯರ ಅನುಗ್ರಹದಿಂದ ದಂಪತಿಗಳಿಗೆ ಶಿಶು ಜನಿಸಿತು. ಹರಕೆ ಹೊರುವ ಭರದಲ್ಲಿ ಹೇಳಿ ಕೊಂಡ ಒಂದು ಲಕ್ಷ ಜನರಿಗೆ ದಾಸೋಹ ಮೈ ಚಳಿ (ಬೆವರು) ಹಿಡಿಸುವಂತಾಗಿತ್ತು. ಅಂತೂ ಮಂತ್ರಾಲಯಕ್ಕೆ ಬಂದರು, ರಾಯರಲ್ಲಿ ಕಷ್ಟ ಅರುಹಿದರು.
 ರಾತ್ರಿ ಕನಸಲ್ಲಿ ರಾಯರು ..
"ನಾಳೆ ನಮ್ಮ ಮಠದ ಮುಂದೆ ಕುದುರೆಯೇರಿ ಒಬ್ಬ ಬ್ರಾಹ್ಮಣ ಬರುತ್ತಾರೆ. ಅವರನ್ನು ಸತ್ಕರಿಸಿ, ನಿಮ್ಮ ಹರಕೆಯ ಲೆಕ್ಕ ತೀರುವುದು" ಎಂದು ಸೂಚಿಸುತ್ತಾರೆ.
ಮರುದಿನ ಮುಂಜಾನೆಯಿಂದ ದಂಪತಿಗಳು ಚಾತಕ ಪಕ್ಷಿಯಂತೆ ಮಠದ ಮುಂದೆ ಕಾಯುತ್ತಾರೆ. ಒಂದೆರಡು ಗಂಟೆಗಳ ಬಳಿಕ ರಾಯರೇ ತಿಳಿಸಿದಂತೆ ಒಬ್ಬಾತ ಕುದುರೆಯೇರಿ ಬಂದವರು ಈ ದಂಪತಿಗಳ ಬಳಿಗೇ ಬಂದು.."ರಾಯರು ಎಲ್ಲಾ ತಿಳಿಸಿದ್ದಾರೆ, ಎಂದು ಬರಲಿ ಸತ್ಕಾರ ಸ್ವೀಕರಿಸಲು?" ಎಂದು ನೇರವಾಗಿ ಕೇಳಿಯೂ ಬಿಡುತ್ತಾರೆ. ದಂಪತಿಗಳಿಗೆ ಆಶ್ಚರ್ಯ. ಆದರೂ ರಾಯರ ಮಹಿಮೆ ಬಗ್ಗೆ ಮೊದಲೇ ನಂಬಿದ್ದ ಅವರು ಒಂದು ಪ್ರಶಸ್ತ ದಿನವನ್ನು ಸೂಚಿಸಿ, ಆಗಬಹುದೇ ಎಂದು ಕೇಳಿದಾಗ ಬ್ರಾಹ್ಮಣ ಒಪ್ಪಿ ಕೊಳ್ಳುತ್ತಾರೆ.
ಸತ್ಕಾರದ ದಿನ ಬಂತು. ದಂಪತಿಗಳು ಯೋಗ್ಯ ರೀತಿಯಲ್ಲಿ ಬ್ರಾಹ್ಮಣನನ್ನು ಸತ್ಕರಿಸಿ, ತದ ನಂತರ ಅವರು ಭೋಜನ ಸ್ವೀಕರಿಸಿದ ಎಲೆಯನ್ನು ಎತ್ತಿದಾಗ ಮತ್ತೊಂದು, ಅದನ್ನು ಎತ್ತಿದಾಗ ಮಗುದೊಂದು, ಮುಂದೆ ಇನ್ನೊಂದು, ಮತ್ತೊಂದು...ಹೀಗೆ ಒಂದು ಲಕ್ಷ ಎಲೆ ಆಗುತ್ತದೆ. ರಾಯರ ಮಹಿಮೆ ಅಗಾಧ..ಕರುಣೆಯೂ ಅಗಾಧ.
ಅಂದ ಹಾಗೆ ಅ ಬ್ರಾಹ್ಮಣ ಯಾರು ಗೊತ್ತೇ..
ಮಂತ್ರಾಲಯದ ಸಮೀಪ ಇರುವ ಇಭರಾಮ ಪುರದ ಅಪ್ಪಾವರು. ಅವರು ರಾಯರೊಡನೆ ತಮ್ಮ ಜೀವಿತದ ಕಾಲದಲ್ಲಿ ಮಂತ್ರಾಲಯಕ್ಕೆ ಬಂದು ರಾಯರ ಬ್ರಂದಾವನದ ಮುಂದೆ ರಾಯರೊಡನೆ ಸಂಭಾಷಣೆ ನಡೆಸುವ, ರಾಯರ ಅಂತರಾಳ ತಿಳಿದ ಇನ್ನೊಬ್ಬ ಮಹಾನ್ ಸಂತರು. ಇವರ ನಿಜ ನಾಮ ಕೃಷ್ಣಾಚಾರ್ಯರು.
ಆದರೆ ಇವರನ್ನು ಆಪ್ಪಾವರು ಅಂತಾನೆ ಕರೆಯೋದು. 
ಇವರಿಗೆ ಇನ್ನೊಂದು ಹೆಸರು.. ರಾಘವೇಂದ್ರ ಚಿತ್ತಜ್ಞಂ ಅಂತ.  ಅದರ ಅರ್ಥ "ರಾಯರ ಮನದಾಳ ಬಲ್ಲವರು" ಎಂದು. ಮಂತ್ರಾಲಯಕ್ಕೆ ಹೋಗುವವರಿದ್ದರೆ ಇಭರಾಂ ಪುರಕ್ಕೂ ಭೇಟಿಯಿತ್ತು ಧನ್ಯತೆ ಅನುಭವಿಸಿ.
******
Hanumanthapuram Near Chidambaram
Raghavendra Swamy 
Vrundavana




No comments:

Post a Comment