" ಈದಿನ 06.07.2021 ಮಂಗಳವಾರ ಆರಾಧನಾ ಮಹೋತ್ಸವ "
" ಶ್ರೀ ರಾಯರ ಅಂತರಂಹ ಭಕ್ತರೂ - ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಋಜುತ್ವ ದೀಕ್ಷಾಬದ್ಧರೂ - ಉಡುಪಿಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥರು "
ಪ್ರಪಂಚದಲ್ಲಿ ಶ್ರೀಮನ್ನ್ಯಾಯಸುಧಾ ಗ್ರಂಥದ ತಿರುಳನ್ನು ಬೆಳಗಿಸಿರುವವರಲ್ಲಿ ಶ್ರೀ ಕೃಷ್ಣಾಪುರದ ಮಠದ ಪ್ರಾತಃ ಸ್ಮರಣೆಯ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು ಒಬ್ಬರು.
ಉಡುಪಿಯಿಂದ ೧೧ ಮೈಲು ಈಶಾನ್ಯದಲ್ಲಿ " ಭಾಗವತ ಬೆಟ್ಟ " ಎಂಬ ಒಂದು ಪುಟ್ಟ ಹಳ್ಳಿ ಇದೆ.
ಈ ಗ್ರಾಮವು ಕಾನನಗಳಿಂದ ಸುತ್ತುವರಿಯಲ್ಪಟ್ಟದ್ದಾಗಿ ಒಂದು ಋಷ್ಯಾಶ್ರಮದಂತೆ ಈಗಲೂ ಕಂಗೊಳಿಸುತ್ತಿದೆ.
ಇದೇ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥರ ಜನ್ಮ ಸ್ಥಳ.
" ವಿದ್ಯಾ ಗುರುಗಳು "
ಅಪರೋಕ್ಷ ಜ್ಞಾನಿಗಳೂ - ದಾನಿಗಳೂ - ಸಕಲ ಶಾಸ್ತ್ರ ಪಾರಂಗತರೂ - ಶ್ರೀ ಪುತ್ತಿಗೆ ಮಠಾಧೀಶರೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಭುವನೇಂದ್ರ ತೀರ್ಥರು.
" ಶ್ರೀ ಭುವನೇಂದ್ರ ತೀರ್ಥರ ಪರಮಾನುಗ್ರಹ "
ಒಂದುದಿನ ರಾತ್ರಿಯಲ್ಲಿ ಶ್ರೀ ಭುವನೇಂದ್ರ ತೀರ್ಥರು ಶ್ರೀ ಕೃಷ್ಣ ದೇವರಿಗೆ ಪ್ರದಕ್ಷಿಣೆಯಾಗಿ ದೀಪ ಸಹಿತರಾಗಿ ಬಂದರು.
ಆದ ಶ್ರೀ ಕೃಷ್ಣ ದೇವರೆದುರಿನ ಚಂದ್ರಸಾಲೆಯಲ್ಲಿ ಮಲಗಿರುವ ಈ ಬಾಲಕನು ಕನಸಿನಲ್ಲಿ ಕನವರಿಸುತ್ತಾ ಕೈಗಳನ್ನು ತಲೆಯ ಮೇಲೆ ಜೋಡಿಸಿಕೊಂಡು....
" ಯದಾ ವಿರಕ್ಹಃ ಪುರುಷಃ ಪ್ರಜಾಯತೇ "
ಎಂಬ ಶ್ಲೋಕವನ್ನುಉಚ್ಚರಿಸಿದನು.
ಕೂಡಲೇ ಶ್ರೀ ಭುವನೇಂದ್ರ ತೀರ್ಥರು ಅಲ್ಲಿಗೆ ಓದಿ ದೀಪದ ಬೆಳಕಿನಲ್ಲಿ ಈ ಬಾಲಕನನ್ನು ಕಂಡರೂ.
ಆಗ ಆ ಬಾಲಕನು ತೇಜ:ಪುಂಜನಾಗಿಯೂ - ವಿರಕ್ತ ಶಿಖಾಮಣಿಯಾಗಿಯೂ ಕಂಡನು.
ಕೂಡಲೇ ಶ್ರೀ ಭುವನೇಂದ್ರ ತೀರ್ಥ ಗುರುವರೇಣ್ಯರು ಈ ವಟುವಿನ ಮುಖದಿಂದ ಆಗಿರುವ ಶುಭ ಸೂಚನೆಯಿಂದ ಆನಂದ ಹೊಂದಿ - ಬೆಳಗಾದ ಮೇಲೆ ಈ ವಟುವಿನ ಕುಲ ಗೋತ್ರಗಳನ್ನು ವಿಚಾರಿಸಿ - ಸತ್ಕುಲ ಪ್ರಸೂತನೆಂದು ಖಚಿತ ಪಡಿಸಿಕೊಂಡು - ಇವನೇ ಈ ಶ್ರೀ ಜನಾರ್ದನ ತೀರ್ಥರ ಸಂಸ್ಥಾನಾಧಿಪತಿಗಳಾಗಲು ಯೋಗ್ಯನೆಂದು ನಿರ್ಣಯವನ್ನು ಮಾಡಿಕೊಂಡು...
ತುರ್ಯಾಶ್ರಮವನ್ನು ಕೊಟ್ಟು - ಪ್ರಣವ ಮಂತ್ರೋಪದೇಶ ಮಾಡಿ " ಶ್ರೀ ವಿದ್ಯಾಧೀಶ ತೀರ್ಥ " ರೆಂದು ನಾಮಕರಣ ಮಾಡಿ - ತಮ್ಮ ಅಮೃತ ಮಾಯವಾದ ಹಸ್ತಗಳಿಂದ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿ " ಶ್ರೀ ಕೃಷ್ಣಾಪುರ ಮಠಕ್ಕೆ ಪೀಠಾಧಿಪತಿ " ಗಳನ್ನಾಗಿ ನೇಮಿಸಿದರು.
" ವಿದ್ಯಾಭ್ಯಾಸ "
ಶ್ರೀ ವಿದ್ಯಾಧೀಶ ತೀರ್ಥರು - ಶ್ರೀ ಭುವನೇಂದ್ರ ತೀರ್ಥರಲ್ಲಿ ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನ ಮಾಡಿ - ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾ ಕೇಂದ್ರವಾದ ಕಾಶೀ ಕ್ಷೇತ್ರಕ್ಕೆ ಬಂದು ೧೨ ವರ್ಷಗಳ ಕಾಲ ತರ್ಕ - ಮೀಮಾಂಸಾ ಶಾಸ್ತ್ರಗಳನ್ನೂ - ಜೊತೆಯಲ್ಲಿ ಷಡ್ದರ್ಶನಗಳನ್ನು ಅಧ್ಯಯನ ಮಾಡಿ ಪ್ರಥಮ ಶ್ರೇಣಿ ಪಂಡಿತರಾಗಿ ಉಡುಪಿಗೆ ಬಂದರು.
ಶ್ರೀ ವಿದ್ಯಾಧೀಶ ತೀರ್ಥರಿಗೆ ಪ್ರಸಿದ್ಧ ಪಂಡಿತರಾಗಿದ್ದ ಪರಮಪೂಜ್ಯ ಕಾಶೀ ತಿಮ್ಮಣ್ಣಾಚಾರ್ಯರು ಸಹಾಧ್ಯಾಯಿಗಳು ಆಗಿದ್ದರು.
" ಅನ್ನದಾನಿಗಳು "
ಪರಮಪೂಜ್ಯ ಶ್ರೀ ಶ್ರೀಪಾದರು ತಮ್ಮ ಪ್ರಯಾಗಾ ಮಠದಲ್ಲೂ - ಶ್ರೀ ಕೃಷ್ಣಾಪುರ ಮಠದಲ್ಲೂ - ದಂಡತೀರ್ಥ ಮಠದಲ್ಲೂ "ಅನ್ನಛತ್ರ ಬೈರಾಗಿ ಛತ್ರ " ಗಳನ್ನಿಡಿಸಿದ್ದರು.
ಉಡುಪಿಯಲ್ಲೂ - ಕೃಷ್ಣಾಪುರದಲ್ಲೋ ಇರುವ ತಮ್ಮ ಮಠವನ್ನು ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದರು.
" ಶ್ರೀಮನ್ನ್ಯಾಯಸುಧಾ ಮಂಗಳ "
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥರು ೧೨ ಬಾರಿ ಶ್ರೀ ಅನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಪರಿಮಳ ಮಂಗಳ ಮಹೋತ್ಸವವನ್ನು ಅತ್ಯಂತ ವೈಭವದಿಂದ ನೆರವೇರಿಸಿದರು.
" ವಿದ್ಯಾ ಶಿಷ್ಯರು "
ಶ್ರೀ ಪೇಜಾವರ ಮಠದ ಶ್ರೀ ವಿಶ್ವರಾಜ ತೀರ್ಥರು - ಶ್ರೀ ಸೋದೆ ಮಠದ ಶ್ರೀ ವಿಶ್ವಾಧೀಶ ತೀರ್ಥರು - ಶ್ರೀ ಶ್ರೀಮುಷ್ಣ ಸುಬ್ರಯಾಚಾರ್ಯರು - ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು ಮೊದಲಾದ ಅನೇಕ ಶಿಷ್ಯರು.
" ಶ್ರೀ ಕೃಷ್ಣ ಪರ್ಯಾಯ ಮಹೋತ್ಸವ "
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥರು ೪ ಪರ್ಯಾಯ ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಿದ್ದಾರೆ.
" ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸನ ಕಾರುಣ್ಯ "
ಶ್ರೀ ವಿದ್ಯಾಧೀಶ ತೀರ್ಥರು ಶಿಷ್ಯ ಪರಿವಾರದೊಂದಿಗೆ ಶ್ರೀ ಶ್ರೀನಿವಾಸನ ದರ್ಶನಾಕಾಂಕ್ಷಿಗಳಾಗಿ ತಿರುಮಲೆಗೆ ದಿಗ್ವಿಜಯ ಮಾಡಿಸಿದ್ದಾರೆ.
ಸ್ವಾಮಿ ಪುಷ್ಕರಣಿಯಲ್ಲಿ ಮಿಂದು - ಅಹ್ನೀಕ ಮುಗಿಸಿ ಶ್ರೀ ಶ್ರೀನಿವಾಸನ ದರ್ಶನಕ್ಕೆ ಬಂದಿದ್ದಾರೆ - ದರ್ಶನಕ್ಕೆ ತೊಂದರೆ ಆಗಿ - ದರ್ಶನವಾಗದೆ ಮುಂದಿನ ಯಾವ ಕೆಲಸವನ್ನೂ ಮಾಡಲಾರೆಯೆಂದು ಕುಳಿತು ಬಿಟ್ಟರು.
ಆಗ ಅವರ ವಿದ್ಯಾ ಶಿಷ್ಯರಾದ ಶ್ರೀ ವಾದಿರಾಜಾಚಾರ್ಯರು ಬಂದು ಮಹಾಂತನೊಡನೆ ಮಾತನಾಡಿ ಸಕಲ ಸಂಸ್ಥಾನೋಚಿತ ಮರ್ಯಾದೆಯಿಂದ ಶ್ರೀ ಶ್ರೀನಿವಾಸನ ದರ್ಶನ ಮಾಡಿಸಿದರು.
" ನಿರ್ಯಾಣ "
ವಿಕ್ರಮ ನಾಮ ಸಂವತ್ಸರ ಜ್ಯೇಷ್ಠ ಬಹುಳ ದ್ವಾದಶೀ ಶನಿವಾರ [ ಕ್ರಿ ಶ 1881 ] ದಂದು ಶ್ರೀ ಹರಿಯ ಪಾದಾರವಿಂದವನ್ನು ಸೇರಿದರು - ಇವರ ವೃಂದಾವನ ಬೆಂಗಳೂರಿನ ಗೊಂಡೋಪಂತ ಛತ್ರದಲ್ಲಿದೆ.