Tuesday 1 January 2019

vyasaraja vardhanti birthday vaishakha shukla saptami ವ್ಯಾಸರಾಜ ವರ್ಧಂತಿ



shri gurubyO namaha, hari Om... 


vaishAka shudda sapthami is the vardanthi (janmadina) of shri vyAsarAja gurusarvabhowmaru.

He was born with the blessings of shri brahmaNya tIrtharu at Bannur and was raised in the maTA from the day of his birth. While brahmaNya tIrtharu is his ashrama gurugaLu and taught him initially, shripAdarAjaru is his vidya gurugaLu and advanced his education at muLabAgilu. 

His shishyarus were many including bhAvisamIra vAdirAjaru, purandara dAsaru, kanaka dAsaru and 24 biDi sanyAsigaLu who were named as per the 24 keshava namagaLu. vijayIndra tIrtharu was his shishyaru too and was called vishNu tIrtharu before vyAsarAjaru gifted him to shri surEndra tIrtharu of Mantralaya maTa at the request of shri surEndra tIrtharu. surEndra tIrtharU renamed him vijayIndra tIrtharu after exchanging danDa.

He has written 18 granthAs, the 3 most popular and studied ones are referred to as vyAsatraya.  They are tAtparya chandrika, nyAyAmruta and taraka tAnDava.

He was the rAja guru of krishNadEvarAya and saved him from a dOshA by becoming the emperor and sitting on the throne during that moment. 

He also performed pUje to Tirupati srinivasa for 12 years and then handed over the responsibility back to the families who were traditionally responsible for the pUja. 

He did pratishTApane of 732 vAyu dEvarus.  Of these 365 were done in a single year in and around penagonDA. This was to counter the influence of Jainism in that region. One of the most popular ones is the chakratIrtha prANadEvaru at Hampi. 

He has also done pratishTApane of the following. 
1. srInivAsa dEvaru at Channapattana. 
2. navanIta krishNa at malUr in the temple of apramEya swami. 
3. shri varadarAjaru next to the pushkaraNi at kanchi varadarAja swamy temple. 
4. vEnugOpAla krishNa dEvaru at muLabAgilu Town. 
5. shri lakshminArAyaNa dEvaru at hulekal, near sOde. 

He annointed srInivAsa tIrtharu as his successor at vyAsarAja maTa and attained brindAvana at nava brindAvanA. 

shri vyAsarAja gurusArvabhowmaru guruvantargata, bhAratIramaNa mukhyaprAnantargata, rukmiNi satyabhAma pate shri mUla gOpAlakrishNa dEvara 
pAdaravindakke gOvindA gOvindA....

shri krishNArpaNamastu...


***

ವೈಶಾಖ  ಶುದ್ಧ ಸಪ್ತಮಿ ಶ್ರೀವ್ಯಾಸರಾಜಗುರು ಸಾರ್ವಭೌಮರು ಭೂಮಿಯಲ್ಲಿ ಅವತರಿಸಿದ ಪರಮಮಂಗಳವಾದ ದಿನ. ಈ ಹಿನ್ನೆಲೆಯಲ್ಲಿ ಶ್ರೀವ್ಯಾಸರಾಜಗುರು ಸಾರ್ವಭೌಮರ ಸ್ಮರಣೆ.

ಗುರುವೇ ಕೊಂಡಾಡಿದ ಶಿಷ್ಯಾಗ್ರಣಿ.
'ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸಂನ್ಯಾಸದಿರುವ' ಎಂದು ತಮ್ಮ ವಿದ್ಯಾಗುರುಗಳಾದ ಶ್ರೀ ಶ್ರೀಪಾದರಾಜ ಗುರುಸಾರ್ವಭೌಮ ರಿಂದಲೇ ಮುಕ್ತಕಂಠದಿಂದ   ಶ್ಲಾಘ್ಯರಾದ ಶಕಪುರುಷರು ಶ್ರೀವ್ಯಾಸರಾಜಗುರು ಸಾರ್ವಭೌಮರು. ಶ್ರೀಪೂರ್ಣಪ್ರಜ್ಞರ   ಪ್ರಣೀತವಾದ 'ತತ್ತ್ವವಾದ' ಪರಿಧಿಯನ್ನು ವಿಸ್ತರಿಸಿದ ಪುಣ್ಯಪುರುಷರ ಪಂಕ್ತಿಯಲ್ಲಿ   ಅಗ್ರಮಾನ್ಯರಾದ ಶ್ರೀವ್ಯಾಸರಾಜರು ಶ್ರೀಮದಾಚಾರ್ಯರ ಸಿದ್ಧಾಂತವನ್ನು ಎಷ್ಟು ಸಮೃದ್ಧವಾಗಿ ವ್ಯಾಖ್ಯಾನಿಸ ಬಹುದೆಂದು ವಿದ್ವಜ್ಜನರಿಗೆ ತೋರಿದರು ಮಾತ್ರವಲ್ಲ,  ಶ್ರೀಮಧ್ವಭಗವತ್ಪಾದರು  ಪ್ರತಿಪಾದಿಸಿದ ಸಿದ್ಧಾಂತ ಎಷ್ಟು ನಿರ್ದುಷ್ಟವಾದುದು  ಎಂಬುದನ್ನು ತೋರಿದ  ವಿದ್ವದ್ವರೇಣ್ಯರು. ವೈಚಾರಿಕ ಜಗತ್ತಿನಲ್ಲಿ ಆಚಾರ್ಯ ಮಧ್ವರು ಪ್ರತಿಪಾದಿಸಿದ  'ತತ್ತ್ವವಾದ' ಉಳಿದೆಲ್ಲ ಚಿಂತನ ಕ್ರಮಗಳಿಗಿಂತ ಎಷ್ಟು ಗಂಭೀರ, ವ್ಯಾಪಕ ಮತ್ತು ಆ  ಸಿದ್ಧಾಂತದಲ್ಲಿ ಪರಪಕ್ಷೀಯರ ಆಕ್ಷೇಪಗಳಿಗೆ ಆಸ್ಪದವೇ ಇಲ್ಲವೆಂದು ಸತಾರ್ಕಿಕವಾಗಿ  ಪ್ರತಿಷ್ಠಾಪಿಸಿದ ಪುಣ್ಯಚರಿತರು. ತಮ್ಮ 'ವ್ಯಾಸತ್ರಯ' ಗಳೆಂದೇ  ವಿದ್ವನ್ಮಾನಿತವಾದ  'ತರ್ಕತಾಂಡವ', 'ನ್ಯಾಯಾಮೃತ' ಹಾಗೂ 'ತಾತ್ಪರ್ಯಚಂದ್ರಿಕಾ'  ಗ್ರಂಥಗಳಿಂದ ತತ್ತ್ವಜ್ಞಾನ  ಪ್ರಪಂಚದಲ್ಲಿ ವಿಶ್ವಗುರುಗಳಾದ ಶ್ರೀಮನ್ಮಧ್ವಾಚಾರ್ಯರು,  ವಿಶ್ವಮಾನ್ಯ ಟೀಕಾಕಾರರಾದ  ಶ್ರೀಜಯತೀರ್ಥರೊಂದಿಗೆ ಮುನಿತ್ರಯರಲ್ಲಿ ಒಬ್ಬರೆಂದು  ಮಾನ್ಯರಾದ ಮಹನೀಯರು.  'ಶ್ರೀವ್ಯಾಸತೀರ್ಥರ ತರ್ಕದ ಕೌಶಲ, ವಿಚಾರದ ಆಳ ಭಾರತೀಯ  ತತ್ತ್ವಚಿಂತಕರಲ್ಲಿಯೇ  ಅನ್ಯಾದೃಶವಾದುದು' ಎಂದು ನಿರ್ಮತ್ಸರರಾದ ಪರಮತೀಯ ವಿದ್ವಾಂಸರೂ  ಕೊಂಡಾಡಿದ್ದಾರೆ. ತಮ್ಮ  ಪೂರ್ವಕಾಲದ ಹಾಗೂ ಸಮಕಾಲೀನ ತತ್ತ್ವಚಿಂತನೆಗಳನ್ನು  ಕೂಲಂಕಷವಾಗಿ ಅಧ್ಯಯನ ಮಾಡಿ ಅಷ್ಟೇ  ತಲಸ್ಪರ್ಶಿಯಾದ ವಿಮರ್ಶೆಯನ್ನು ಮಾಡಿ ಅನೇಕ ಸಂದಿಗ್ಧಗಳನ್ನು ಪರಿಹರಿಸಿದರು.  ಮಾಧ್ವತತ್ತ್ವಜ್ಞಾನದ ಪ್ರಚಾರದಲ್ಲಿ ಅಪ್ರತಿಮವಾದ  ಭೂಮಿಕೆಯನ್ನು ನಿರ್ವಹಿಸಿದ  ಶ್ರೀವ್ಯಾಸರಾಜಗುರು ಸಾರ್ವಭೌಮರು ಶ್ರೀಮನ್ಮಧ್ವಾಚಾರ್ಯರಿಂದ  ಪ್ರೇರಿತವಾಗಿದ್ದ ಹರಿದಾಸ  ಸಾಹಿತ್ಯಪರಂಪರೆಗೂ ಮುಖ್ಯಚಾಲಕ ಶಕ್ತಿಯಾಗಿದ್ದರು.  ಶ್ರೀವಾದಿರಾಜಗುರು ಸಾರ್ವಭೌಮರು,  ಶ್ರೀವಿಜಯೀಂದ್ರಗುರು ಸಾರ್ವಭೌಮರು, ದಾಸಶ್ರೇಷ್ಠರಾದ  ಶ್ರೀಪುರಂದರದಾಸರು, ಶ್ರೀಕನಕದಾಸರೇ  ಮೊದಲಾದ ಜ್ಞಾನಿ ನಾಯಕರಿಗೆ  ಗುರುಸ್ಥಾನದಲ್ಲಿದ್ದು, ವಿಶ್ವಪಾವನ ವೆಂಬ  ವಿಶ್ವವಿದ್ಯಾನಿಲಯ ವೊಂದರ ಸ್ಥಾಪನೆ, ತನ್ಮೂಲಕ ಅಸಾಧಾರಣ ವಿದ್ವಾಂಸರನ್ನು  ವಾಙ್ಮಯಲೋಕಕ್ಕೆ ಕೊಡುಗೆಯಾಗಿ ನೀಡಿದ  ಶ್ರೀವ್ಯಾಸರಾಜರು ವಿಜಯನಗರದ ಧರ್ಮಸಾಮ್ರಾಜ್ಯ ರಕ್ಷಣೆಗೆ ದೀಕ್ಷಾಬದ್ಧರಾಗಿ ಸನಾತನ  ಧರ್ಮದ ಸಂರಕ್ಷಣೆಗೆ ನೀಡಿದ ಕೊಡುಗೆ ಚಿರಸ್ಮರಣೀಯ.  ಶ್ರೀವ್ಯಾಸರಾಜರನ್ನು ಅವರ ತರುವಾಯ ಮಾಧ್ವ ವಾಙ್ಮಯಲೋಕವನ್ನು ಬೆಳಗಿದ ಯತಿವರೇಣ್ಯರು,  ಹರಿದಾಸಶ್ರೇಷ್ಠರು ಹಾಗೂ ವಿದ್ವಾಂಸರು  ಅತ್ಯಂತ ಗೌರವಾದರಗಳಿಂದ ಸ್ತುತಿಸಿದ್ದಾರೆ. ಕನ್ನಡ ಭಾಷೆಗೆ ಸಂಸ್ಕೃತದ  ಸಮಪೀಠವನ್ನಿತ್ತು ಹರಿದಾಸಸಾಹಿತ್ಯದ ಪ್ರವರ್ಧನೆ ಮಾಡಿದ, ಸ್ವತ: ಶ್ರೀವ್ಯಾಸರಾಜರಂತಹ  ವಿದ್ವದ್ವಿಭೂತಿಗೆ ವಿದ್ಯಾಗುರುವಾದ ಮಹಿತೋನ್ನತ ಚರಿತ  ಶ್ರೀಶ್ರೀಪಾದರಾಜರು ತಮ್ಮ ಎರಡು ಕನ್ನಡ ಕೃತಿಗಳಲ್ಲಿ ತಮ್ಮ ಶಿಷ್ಯರನ್ನು  ಆನಂದತುಂದಿಲರಾಗಿ ಕೊಂಡಾಡಿದ್ದಾರೆ. ಶಿಷ್ಯನ  ಗುಣಗಳ ಔನ್ನತ್ಯವನ್ನು ಗುರುವಾದವನು  ಕೊಂಡಾಡುವ ಒಂದು ಔದಾರ್ಯದ ಶ್ರೇಷ್ಠಪರಂಪರೆಗೆ  ನಾಂದಿಹಾಡಿರುವ ಶ್ರೀ ಶ್ರೀಪಾದರಾಜರು ಅಶನ  ವಸನಗಳಿಗೆ ಆಶೆ ಪಟ್ಟು ಜನರಿಗೆ ಮೋಸಮಾಡುತ್ತಾ  ಕಾಲ ಕಳೆಯುವಂತಹ ಸಂನ್ಯಾಸಿಗಳೇ  ಹೆಚ್ಚಾಗಿರುವ ಕಾಲದಲ್ಲಿ ಅಹೋರಾತ್ರಿ ಶ್ರೀಹರಿಯ ಧ್ಯಾನದಲ್ಲಿ ರತರಾಗಿರುವ  ಶ್ರೀವ್ಯಾಸರಾಜರನ್ನು ಮುಕ್ತಕಂಠದಲ್ಲಿ ಶ್ಲಾಘನೆ  ಮಾಡುವುದರೊಂದಿಗೆ ಸಾಮ್ರಾಟರು ತಮಗೆ ಗೌರವ ಪೂರ್ವಕವಾಗಿ ನೀಡಿದ ಭೂಮಿಯನ್ನು  ವೃತ್ತಿಗಳನ್ನಾಗಿ ವಿಂಗಡಿಸಿ ಅವುಗಳನ್ನು  ಬ್ರಾಹ್ಮಣರಿಗೆ ದಾನವಾಗಿ ನೀಡಿ ಅವರ  ಜೀವನಕ್ಕೆ ಶ್ರೀವ್ಯಾಸರಾಜರು ಆಶ್ರಯದಾತರಾದ  ವಿಚಾರವನ್ನು ತಿಳಿಸಿದ್ದಾರೆ.
ಒಬ್ಬ ಸಂನ್ಯಾಸಿ ತಟಾಕ ನಿರ್ಮಾಣ, ಭೂದಾನಾದಿ ಜನಪಯೋಗಿ ಕಾರ್ಯಗಳನ್ನು ತನ್ನ ಕರ್ತವ್ಯವೆಂದು ಮಾಡುತ್ತಾ ಉಳಿದವರಿಗೆ ಮಾರ್ಗದರ್ಶಕನಾಗಿರುವುದು ಅಪರೂಪದ ಸಂಗತಿ. ಹಾಗಾಗಿಯೇ   ಶ್ರೀಪಾದರಾಜರು 'ಇದಿರಾವನು ನಿನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸ' ಎಂಬ   ಕೃತಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ವ್ಯಾಸರಾಜರ ಅಪ್ರತಿಮವಾದ ವಾದಕೌಶಲವನ್ನು   "ವಾದಿತಿಮಿರ ಮಾರ್ತಾಂಡನೆಂದೆನಿಸಿದೆ ವಾದಿ ಶರಭಭೇರುಂಡ ವ್ಯಾಸರಾಯ' ಎಂದು   ಪ್ರಶಂಸಿಸಿದ್ದಾರೆ. ಸಾಮ್ರಾಟರ ಕಿರೀಟಗಳೇ ಪಾದಗಳನ್ನು ಸ್ಪರ್ಶಿಸುತ್ತಿದ್ದರೂ ಕಿಂಚಿತ್ತೂ ಅಹಂಕಾರವೂ ಇರದ  ಶ್ರೀವ್ಯಾಸರಾಜರನ್ನು "ಹಮ್ಮನಳಿದು ಶ್ರೀಪತಿ ರಂಗವಿಠಲನ್ನ   ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯ' ಎಂದು ಕೊಂಡಾಡಿದ್ದಾರೆ. ಸ್ವತ:   ಅಗ್ರಮಾನ್ಯ ವಿದ್ವದ್ವರೇಣ್ಯರಾದ ಗುರುಗಳಿಂದ ಮುಕ್ತ ಶ್ಲಾಘನೆಗೆ ಪಾತ್ರರಾಗುವುದು ಸುಲಭದ ಮಾತಲ್ಲ. ಅಂತಹ ಅಸಾಧ್ಯವಾದುದನ್ನು ಸಾಧಿಸಿದ ಸಿದ್ಧಪುರುಷರು ಶ್ರೀವ್ಯಾಸರಾಜರು.  
by ಡಾ. ಬಿ.ಎನ್. ವೇಣುಗೋಪಾಲ.
****

ಶ್ರೀವ್ಯಾಸರಾಜ ಚಿಂತನ

( ಶ್ರೀವ್ಯಾಸರಾಜರ ವರ್ಧಂತಿ  ವಿಶೇಷ ಸಂಚಿಕೆ )

ಹರೇಶ್ರೀನಿವಾಸ
ಶ್ರೀವ್ಯಾಸರಾಜಗುರುಸಾರ್ವಭೌಮರ  ವರ್ಧಂತಿ  ಪ್ರಯುಕ್ತ ಶ್ರೀವಿಜಯಿಂದ್ರತೀರ್ಥರು ರಚಿಸಿದ ಶ್ರೀವ್ಯಾಸರಾಜಸ್ತೋತ್ರದ ಕೆಲವು ಶ್ಲೋಕಗಳ ಅರ್ಥಚಿಂತನ ಮಾಡೋಣ

🌷ಶ್ರೀವ್ಯಾಸರಾಜಸ್ತೋತ್ರಮ್🌷

ಮಧ್ವಸಿದ್ಧಾಂತದುಗ್ಧಾಬ್ಧಿವೃದ್ಧಿಪೂರ್ಣಕಲಾಧರಃ |
ಶ್ರೀವ್ಯಾಸರಾಜಯತೀಂದ್ರೋ ಮೇ ಭೂಯಾದೀಪ್ಸೀತಸಿದ್ಧಯೇ || 6 ||

ಮಧ್ವಸಿದ್ಧಾಂತವೆಂಬ ಕ್ಷೀರಸಾಗರವನ್ನು ಅಭಿವೃದ್ಧಿಗೊಳಿಸುವಲ್ಲಿ ಹುಣ್ಣಿಮೆಯ ಚಂದಿರನಂತಿಪ್ಪರು .ಇಂತಹ ಶ್ರೀವ್ಯಾಸರಾಜಯತಿಶ್ರೇಷ್ಠರು ನನ್ನ ಇಷ್ಟಾರ್ಥವನ್ನು ಕರುಣಿಸಲಿ .

ಯನ್ನಾಮಗ್ರಹಣಾದೇವ ಪಾಪರಾಶಿಃ ಪಲಾಯತೇ |
ಸೋsಯಂ ಶ್ರೀವ್ಯಾಸಯೋಗೀಂದ್ರೋ ನಿಹಂತು ದುರಿತಾನಿ || 7 ||

ಯಾರ ನಾಮಸ್ಮರಣೆಯಿಂದಲೇ ಪಾಪರಾಶಿಗಳು ನಾಶವಾಗಿ ಹೋಗುವುದೋ   ಅಂತಹ ಯೋಗಿಂದ್ರರಾದ ಶ್ರೀವ್ಯಾಸತೀರ್ಥರು ನಮ್ಮ ಪಾಪಗಳನ್ನು ಪರಿಹರಿಸಲಿ .

ದ್ವಾತ್ರಿಂಶತ್ಸಪ್ತಶತಕಮೂರ್ತೀ ರ್ಹನುಮತಃಪ್ರಭೋಃ |
ಪ್ರತಿಷ್ಠಾತಾ ಸ್ಮೃತಿಖ್ಯಾತಸ್ತಂ ಭಜೇ ವ್ಯಾಸಯೋಗಿನಮ್ ||10| |

ನಮ್ಮ. ಗುರುಗಳು  ಪ್ರಭುಶ್ರೀಹನುಮಂತನ 732 ಮೂರ್ತಿಗಳನ್ನು ಅಲ್ಲಲ್ಲಿ ಪ್ರತೀಷ್ಠಾಪನ ಮಾಡಿ ಎಲ್ಲ ಸಜ್ಜನರ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿದು ಪ್ರಸಿದ್ಧರಾದರು .ಇಂಥ ಶ್ರೀವ್ಯಾಸಯೋಗಿಗಳನ್ನು ಭಕ್ತಿಯಿಂದ ಭಜಿಸುತ್ತೇನೆ .

ವಾತಜ್ವರಾದಿರೋಗಾಶ್ಚ ಭಕ್ತ್ಯಾ ಯಮುಪಸೇವಿತಃ |
ಧೃಢವ್ರತಸ್ಯ ನಶ್ಯಂತಿ ಪಿಶಾಚಾಶ್ಚ ತಮಾಹಶ್ರಯೆ  || 14 ||

ಯಾವ ಗುರುಗಳನ್ನು ಭಕ್ತಿಯಿಂದ ಸೇವಿಸುತ್ತಿರುವ ಧೃಢವಾದ ವ್ರತವನ್ನು ಕೈಗೊಂಡಿರುವ ಮನುಷ್ಯನ ವಾತಜ್ವರಾದಿರೋಗಗಳೂ ಹಾಗೂ ಪಿಶಾಚದಿಭಾಧೆಗಳೂ ನಾಶವಾಗಿ. ಹೋಗುವುವೋ ಅಂಥಗುರುಗಳನ್ನು ಆಶ್ರಯವನ್ನು ಹೊಂದುವೆನು .

ರತ್ನಸಿಂಹಾಸನಾರೂಢಂ ಚಾಮರೈರಭಿವೀಜಿತಮ್ |
ಧ್ಯಾಯನ್ನಾವರ್ತಯೇದ್ಯಸ್ತು ಮಹತೀಂ ಶ್ರೀಯಮಾಫ್ನುಯಾತ್ ||17 ||

ರತ್ನಸಿಂಹಾಸನಾರೂಢರಾದ ,ಸೇವಕಜನರಿಂದ ಚಾಮರಗಳಿಂದ ಬೀಸಿಕೊಳ್ಳುತ್ತಿರುವ ಯತಿಶ್ರೇಷ್ಠರ ನಾಮವನ್ನು ಹಾಗೂ ಮೂರ್ತಿಯನ್ನು ಪುನಃ ಪುನಃ.ಧ್ಯಾನಿಸುವವನು ಅತುಲವಾದ  ಸಂಪತ್ತಿಯನ್ನು ಹೊಂದುವನು .

ನಮೋ ವ್ಯಾಸಮುನಿಂದ್ರಾಯ ಭಕ್ತಾಭೀಷ್ಟಾಪ್ರದಾಯಿನೇ |
ನಮತಾಂ ಕಲ್ಪತರವೇ ಭಜತಾಂ ಕಾಮಧೇನವೇ || 19 ||

ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ವ್ಯಾಸಮುನಿಂದ್ರರಿಗೆ ನಮನಗಳಿರಲಿ .ಶ್ರೀವ್ಯಾಸರಾಜರು ನಮಿಸುವ ಭಕ್ತರಿಗೆ ಕಲ್ಪವೃಕ್ಷದಂತಿಪ್ಪರು .ಸೇವಿಸುವ ಭಕ್ತರಿಗೆ ಕಾಮಧೇನುವಂತೆ ಇಷ್ಟಾರ್ಥಗಳನ್ನು ಇತ್ತು ಸಲುಹುವರು .

ವ್ಯಾಸರಾಜಗುರೋ ಮಹ್ಯಂ ತತ್ಪಾಂದಬುಜ ಸೇವಿನೇ |
ದುರಿತಾನಿ ಹನ ಸರ್ವಾಣಿ ಯಚ್ಛ ಶೀಘ್ರಂ ಮನೋರಥಾನ್ || 20 ||

ಶ್ರೀವ್ಯಾಸರಾಜಗುರುಗಳೇ ! ನಿಮ್ಮ ಪಾದಕಮಲಗಳನ್ನು ಸೇವಿಸುವ ನನಗೆ ಎಲ್ಲ ಪಾಪಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಅನುಗ್ರಹಿಸಿರಿ .

ಯೋ ವ್ಯಾಸತ್ರಯ ಸಂಜ್ಞಕಾನ್ ಧೃಢತರಾನ್ ಮಧ್ವಾರ್ಯಶಾಸ್ತ್ರಾವಲೀ-
ರಕ್ಷಾನ್ ವಜ್ರಶೀಲಾಕೃತಾನ್ ಬಹಃಮತಿಃ ಕೃತ್ವಾ ಪರೈದುಸ್ತರಾನ್ |
ಪ್ರಾಯಚ್ಛನ್ನಿಜಪಾದಯುಗ್ಮಸರಸೀ ಜಾಸಕ್ತನೃಣಾಂ ಮುದಾ
ಸೋsಯಂ ವ್ಯಾಸಮುನೀಶ್ವರೋ ಮಮ ಭವೇತ್ ತಾಪತ್ರಯಕ್ಷಂತಯೇ || 21 ||

ಯಾರು ವ್ಯಾಸತ್ರಯಗಳೆಂಬ ಹೆಸರಃಳ್ಳ (ನ್ಯಾಯಾಮೃತ ,ಚಂದ್ರಿಕಾ ತರ್ಕತಾಂಡವ) ಧೃಢತರವಾದ ಶ್ರೀಮಧ್ವಶಾಸ್ತ್ರದ ತತ್ವರಹಸ್ಯಗಳನ್ನು ರಕ್ಷಿಸುವ ವಜ್ರಶಿಲೆಯಂತೆ ಅಚ್ಛೇದ್ಯಾಭೇದ್ಯವಾದ ,ಪರವಾದಿಗಳಿಗೆ ಖಂಡಿಸಲಾಗದ ಕೃತಿಗಳನ್ನು ರಚಿಸಿ ತನ್ನ ಪಾದಕಮಲಗಳ ಆರಾಧಕರಿಗೆ ಕರುಣಿಸಿದರೋ ಅಂತಹ ಶ್ರೀವ್ಯಾಸತೀರ್ಥರು ನಮ್ಮ ಮೂರುಬಗೆಯ ತಾಪಗಳನ್ನು ಪರಿಹರಿಸಲಿ .

ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್ |
ಮುಚ್ಯತೇ ಸರ್ವದುಃಖೇಭ್ಯಸ್ತದಂತರ್ಯಾಮಿಣೋ ಬಲಾತ್ ||23 ||

ವ್ಯಾಸರಾಜ ವ್ಯಾಸರಾಜ  ಎಂಬುದಾಗಿ ಭಕ್ತಿಯಿಂದ ಸದಾ ಪಠಿಸುವವನು ವ್ಯಾಸರಾಜರ ಅಂತರ್ಯಾಮಿಯಾದ ಗೋಪಾಲಕೃಷ್ಣದೇವರ ಅನುಗ್ರಹದಿಂದ ಎಲ್ಲಾ ದುಃಖಗಳಿಂದ ಮುಕ್ತನಾಗುವನು .

ಗುರುಭಕ್ತ್ಯಾ ಭವೇದ್ವಿಷ್ಣುಭಕ್ತಿರವ್ಯಭಿಚಾರಿಣೀ |
ತಯಾ ಸರ್ವಂ ಲಭೇದ್ಧೀಮಾಂ ಸ್ಥಸ್ಮಾದೇತತ್ ಸದಾ ಪಠೇತ್ || 25 ||

ನಮ್ಮ ಗುರುವರ್ಯರಲ್ಲಿ ಮಾಡುವ ನಿರ್ವ್ಯಾಜ ಭಕ್ತಿಯಿಂದ ವಿಷ್ಣುವಿನಲ್ಲಿ ಅಚಲವಾದ ಭಕ್ತಿಯು ಉತ್ಪನ್ನವಾಗುವುದು ಧೀಮಂತನಾದ ಭಕ್ತನು ಶ್ರೀಹರಿಭಕ್ತಿಯಿಂದ ಸಕಲಾಭಿಷ್ಟಗಳನ್ನು ಹೊಂದುವನು .ಆದ್ದರಿಂದ ಈ ಗುರುಸ್ತೋತ್ರಗಳನ್ನು ಸದಾಪಠಿಸಿ ಗುರ್ವನುಗ್ರಹವನ್ನು ಸಂಪಾದಿಸಬೇಕು .

ಇತಿ.ಶ್ರೀವಿಜಯಿಂದ್ರತೀರ್ಥ ವಿರಚಿತಂ  ವ್ಯಾಸರಾಜಸ್ತೋತ್ರಮ್

    || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ....

 ‌(received in WhatsApp)

***
ಇಂದು ವೈಶಾಖ ಶುದ್ಧ ಸಪ್ತಮೀ ಶ್ರೀವ್ಯಾಸರಾಜಗುರುಸಾರ್ವಭೌಮರ ಜಯಂತಿ. ಮುನಿತ್ರಯರಲ್ಲಿ ಒಬ್ಬರಾಗಿ, ಶ್ರೀಮಧ್ವ ತತ್ತ್ವಜ್ಞಾನವನ್ನು ದಿಗಂತ ವಿಶ್ರಾಂತವಾಗಿಸಿದ ಶ್ರೀವ್ಯಾಸರಾಜರನ್ನು ಕುರಿತು ಹಿಂದೆ ಪ್ರಕಟವಾಗಿದ್ದ ಲೇಖನಗಳನ್ನು ಒಟ್ಟುಗೂಡಿಸಿ ಶ್ರೀಚಂದ್ರಿಕಾಚಾರ್ಯರ ಪುಣ್ಯಸ್ಮರಣೆಗೆ ನೀಡಲಾಗಿದೆ.
ವಿಶ್ವಗುರು ಶ್ರೀಮಧ್ವಾಚಾರ್ಯರ ಸಿದ್ಧಾಂತವನ್ನು ದಿಗಂತವಿಶ್ರಾಂತವನ್ನಾಗಿಸಿದ ವಿಶ್ವವಂದ್ಯ ವಿದ್ವದ್ವಿಭೂತಿಗಳಾದ ಶ್ರೀವ್ಯಾಸರಾಜಗುರುಸಾರ್ವಭೌಮರು ತಮ್ಮ ವ್ಯಾಸತ್ರಯಗಳೆಂದೇ ಖ್ಯಾತವಾಗಿರುವ 'ತಾತ್ಪರ್ಯಚಂದ್ರಿಕಾ' 'ತರ್ಕತಾಂಡವ' ಹಾಗೂ 'ನ್ಯಾಯಾಮೃತ' ಕೃತಿಗಳೆಂಬ ಅತ್ಯಂತ ಸುಭದ್ರವಾದ ತಳಹದಿಯ ಮೇಲೆ ಪ್ರತಿಷ್ಠಾಪಿಸಿದ ವಿದ್ವದ್ವಿಭೂತಿಗಳು. ಶ್ರೀಮದಾಚಾರ್ಯರು, ಶ್ರೀಟೀಕಾಕೃತ್ಪಾದರೊಂದಿಗೆ 'ಮುನಿತ್ರಯ'ರೆಂದು ಮಾನಿತರಾದವರು. ಭಾರತೀಯ ತತ್ತ್ವಶಾಸ್ತ್ರದ ಇತಿಹಾಸವನ್ನು ರಚಿಸಿದ ದಾಸಗುಪ್ತರಂತಹ ಪರಮತೀಯ ವಿದ್ವಾಂಸರೇ " ವೈಚಾರಿಕ ಪ್ರಪಂಚದಲ್ಲಿ ಸೂಕ್ಷ್ಮ ತಾರ್ಕಿಕ ಪ್ರಜ್ಞೆ ಮತ್ತು ವಾಕ್ಯಾರ್ಥ ಕೌಶಲದಲ್ಲಿ ಶ್ರೀವ್ಯಾಸತೀರ್ಥರಿಗೆ ಹೆಗಲೆಣೆಯಾಗಿ ನಿಲ್ಲಬಲ್ಲ ಇನ್ನೊಬ್ಬ ವ್ಯಕ್ತಿ ಭಾರತೀಯ ತತ್ತ್ವಶಾಸ್ತ್ರ ಪ್ರಪಂಚದಲ್ಲಿ ಇಲ್ಲವೇ ಇಲ್ಲ" ಎಂದು ಅತ್ಯಂತ ಸ್ಷಷ್ಟವಾದಂತಹ ಮಾತುಗಳಲ್ಲಿ ಶ್ರೀವ್ಯಾಸರಾಜರ ಮಹತಿಯನ್ನು ಕೊಂಡಾಡಿದ್ದಾರೆ ಎಂಬುದನ್ನು ಗಮನಿಸಿದಾಗ ಶ್ರೀವ್ಯಾಸತೀರ್ಥರು ದರ್ಶನ ಪರಂಪರೆಗೆ ನೀಡಿದ ಮಹೋನ್ನತ ಕೊಡುಗೆಯ ಅರಿವಾಗದಿರದು. ಪ್ರತಿಕಕ್ಷಿಗಳು ವ್ಯಾಸರಾಜರು ಪ್ರತಿಷ್ಠಾಪಿಸಿದ ಸಿದ್ಧಾಂತದ ಎದುರು ನಿರುತ್ತರರಾದರು. ಸಿದ್ಧಾಂತದ ಸಮರ್ಥ ಪ್ರತಿಪಾದನೆಯ ವಿವಿಧ ಕ್ರಮಗಳನ್ನು, ಶಾಸ್ತ್ರೀಯ ಪ್ರಕ್ರಿಯೆಗಳನ್ನೂ ಅತ್ಯಂತ ಶ್ಲಾಘನೀಯವಾಗಿ ಬಳಸಿಕೊಂಡು ವಿಮತೀಯರು ಆಕ್ಷೇಪಿಸದಂತೆ, ಖಂಡಿಸಲೂ ಅವಕಾಶ ನೀಡದಂತೆ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ ರೀತಿ ಅನ್ಯಾದೃಶ. ಸಮಕಾಲೀನ ಶಾಸ್ತ್ರಗ್ರಂಥಗಳನ್ನು ಕರಗತಮಾಡಿಕೊಂಡು ಪ್ರಸಕ್ತಿಯಿದ್ದಾಗಲೆಲ್ಲಾ ತಮ್ಮ ಸಿದ್ಧಾಂತ ಸ್ಥಾಪನೆಗೆ ಪೂರಕವಾಗುವ ಪೋಷಕವಾಗುವ ವಾಕ್ಯಗಳನ್ನು ಯಥೋಚಿತವಾಗಿ ಉಲ್ಲೇಖಿಸುವ ಕೌಶಲ್ಯ ಶ್ರೀವ್ಯಾಸತೀರ್ಥರಲ್ಲಿ ಮಾತ್ರವೇ ಕಾಣಬಹುದು. ಮಾತ್ರವಲ್ಲದೆ, ಶ್ರೀಮಧ್ವ ಭಗವತ್ಪಾದರ ಸಿದ್ಧಾಂತವನ್ನು ಎಷ್ಟು ಸಮೃದ್ಧವಾಗಿ ವ್ಯಾಖ್ಯಾನಿಸಬಹುದು ಎಂಬುದನ್ನು ತೋರಿದರು. ಶ್ರೀಆನಂದತೀರ್ಥರ ವಿಚಾರಸರಣಿ ಎಷ್ಟು ನವೀನ ಮತ್ತು ಅಷ್ಟೇ ಸತ್ವಪೂರ್ಣವೆಂಬುದನ್ನು ನಿರ್ಮತ್ಸರರಾದ ಅನ್ಯಮತೀಯರೂ ಒಪ್ಪುವಂತೆ ಮಾಡಿದರು. ಶ್ರೀಭಗವತ್ಪಾದರ ಸಿದ್ಧಾಂತ ಎಷ್ಟು ಗಂಭೀರ, ವ್ಯಾಪಕ ಮತ್ತು ಅಷ್ಟೇ ನಿರ್ದುಷ್ಟವೆಂಬುದನ್ನು ತಮ್ಮ ಕೃತಿಗಳ ಮೂಲಕ ತೋರಿದ ಮೂರ್ಧನ್ಯರು.
ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾಗಿ ಶ್ರೀನರಹರಿತೀರ್ಥರಿಂದ ಪ್ರವರ್ತಿತವಾದ ಹರಿದಾಸಸಾಹಿತ್ಯಪರಂಪರೆಗೆ ಪೋಷಕ ಶಕ್ತಿಯಾಗಿ, ಕನ್ನಡದ ಮನೆ ಮನೆಯಲ್ಲಿ ಭಕ್ತಿ ಭಾಗೀರಥಿಯ ಪ್ರವಾಹ ಹರಿಯುವಂತೆ ಮಾಡಿದ ಮಹನೀಯರು. ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀಪುರಂದರರು, ಶ್ರೀಕನಕರು ಮೊದಲಾದ ಜ್ಞಾನಿಶ್ರೇಷ್ಠರಿಗೆ ಗುರುಸ್ಥಾನೀಯರಾಗಿದ್ದವರು ಶ್ರೀವ್ಯಾಸರಾಜರು ಎಂದರೆ ಅವರ ಹಿರಿಮೆ ಎಂತಹುದು ಎಂಬುದು ತಿಳಿಯುತ್ತದೆ. 'ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸಂನ್ನ್ಯಾಸದಿರವ' ' ಇದಿರಾವನು ನಿನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲೋಸ " ಎಂದು ತಮ್ಮ ವಿದ್ಯಾಗುರುಗಳಾದ ಶ್ರೀಪಾದರಾಜ ಗುರುಸಾರ್ವಭೌಮರಂತಹ ಮಹಾಮನೀಷಿಗಳಿಂದಲೇ ಕೊಂಡಾಡಲ್ಪಟ್ಟವರು. ಸಾಮ್ರಾಟರು ತಮಗೆ ಅತ್ಯಂತ ಗೌರವದಿಂದ ನೀಡಿದ ಭೂಮಿಯನ್ನು ವೃತ್ತಿಗಳಾಗಿ ವಿಂಗಡಿಸಿ,ವೇದವಿದ್ವಾಂಸರಿಗೆ ದಾನವನ್ನಾಗಿ ನೀಡಿ ಅವರ ಜೀವನಕ್ಕೆ ಮಾರ್ಗವನ್ನು ಕಲ್ಪಿಸಿದ ಶ್ರೀವ್ಯಾಸರಾಜರ ಔದಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಶ್ರೀಪಾದರಾಜರು ತಮ್ಮ ಮತ್ತೊಂದು ಕೃತಿಯಲ್ಲಿ 'ವಾದಿತಿಮಿರ ಮಾರ್ತಾಂಡನೆನಿಸಿದೆ ವಾದಿ ಶರಭಭೇರುಂಡ ವ್ಯಾಸರಾಯ' ಎಂಬುದಾಗಿ 'ಪ್ರತ್ಯರ್ಥಿ ಗಜಕೇಸರಿ'ಗಳಾದ ಶ್ರೀವ್ಯಾಸತೀರ್ಥರ ವಾದಕೌಶಲವನ್ನು ಕೊಂಡಾಡಿದ್ದಾರೆ. ಚಕ್ರವರ್ತಿಗಳೇ ಯಾರ ದರ್ಶನಕ್ಕಾಗಿ ಕಾಯುತ್ತಿದ್ದರೋ ಅಂತಹ ಯತಿಕುಲಚಕ್ರವರ್ತಿಗಳಾದ ಶ್ರೀವ್ಯಾಸರಾಜರು ಅಹಂಕಾರವಿದೂರರು ಎಂಬ ವಿಷಯವನ್ನು 'ಹಮ್ಮನಳಿದು ಶ್ರೀಪತಿ ರಂಗವಿಠಲನ್ನ ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯ" ಎಂದು ಅತ್ಯಂತ ಪ್ರಾಂಜಲರಾಗಿ ಪ್ರಶಂಸೆ ಮಾಡಿದ್ದಾರೆ. ಶ್ರೀವಾದಿರಾಜಗುರುಸಾರ್ವಭೌಮರು 'ವ್ಯಾಸಮುನಿರಾಯ ನಿಮ್ಮ ಪೆಸರು ಲೇಸು, ಭಾಸುರ ವಿರಕ್ತಿಯೆಂಬ ಶಶಿಮುಖಿ ಅರಸ', 'ಸಿರಿಹಯವದನನ ಅರಮನೆಯಿಂದ ಪಟ್ಟದ ಆನೆ' ಎಂದು ಕೊಂಡಾಡಿದ್ದರೆ, ಶ್ರೀವಿಜಯೀಂದ್ರ ಗುರುಸಾರ್ವಭೌಮರು 'ಶ್ರೀವ್ಯಾಸಯೋಗಿ ಹರಿಪಾದರಾಗೀ ಭಕ್ತಾತಿಪೂಗೀ ಹಿತದಕ್ಷಸದ್ಗೀ ತ್ಯಾಗೀ ವಿರಾಗೀ ವಿಷಯೇಷು ಭೋಗೀ ಮುಕ್ತೌ ಸದಾಗೀತ ಸುರೇಂದ್ರ ಸಂಗೀ" ಎಂದು ನಮಿಸಿದ್ದಾರೆ. ತಮ್ಮ ಮತ್ತೊಂದು ಕೃತಿಯಲ್ಲಿ ಶ್ರೀವ್ಯಾಸರಾಜರನ್ನು ಮೇಘವೊಂದಕ್ಕೆ ಸಮೀಕರಿಸಿ "ಯೋಗಿ ವ್ಯಾಸರಾಯರೆಂಬ ವಿಚಿತ್ರಮೇಘ ಬೇಗ ವಿಷ್ಣುಪದವ ತೋರಿಸುತ್ತಾ ಬಂತಿದಿಕೋ" ಎಂದು ಕೊಂಡಾಡಿದ್ದಾರೆ. "ಅಂಗಜನಯ್ಯನೇ ಪರನೆಂದು ಘುಡಘುಡಿಸುತ್ತಾ ಕಂಗಳೆಂಬ ಮಿಂಚನೇ ನೆರಹಿ ಲೋಕದಿ ಹಿಂಸೆ ಪರಿವ ಅಜ್ಞಾನವೆಂಬ ಕತ್ತಲೆಯ ಭಂಗಿಸಿ ಸುರಪಥವ ತೋರಿಸುತ್ತಾ ಬರುತ್ತಿರುವ " ವ್ಯಾಸರಾಯರೆಂಬ ಮೇಘ "ಸಿರಿಯರಸನ ಸಮ್ಯಜ್ಞಾನವೆಂಬ ಪೈರಿಗೆ ಬೇರು ಬಿಡೆ ಹರಿಕಥೆಯಿಂದ ಮಳೆಗೆರೆದು ನೇರ ಶಿಷ್ಯಮನವೆಂಬ ಕೆರೆಯ ನೀರು ತುಂಬಿಸಿ ವರಗಳೆಂಬ ಕೋಡಿ ಹರಿಸುತ ವಿಜಯೀಂದ್ರನ ಗುರು" ಎಂಬುದಾಗಿ ಸ್ತುತಿಸಿದ್ದಾರೆ. ದಾಸಶ್ರೇಷ್ಠರಾದ ಶ್ರೀಪುರಂದರರದಾಸರು "ಈಸು ಮುನಿಗಳಿದ್ದೇನು ಮಾಡಿದರು ವ್ಯಾಸಮುನಿ ಮಧ್ವಮತವನುದ್ಧರಿಸಿದ' ಎಂದು ಮೈಮರೆತು ಸ್ತುತಿಸಿದ್ದಾರೆ.
ಕರ್ನಾಟಕ ಸಾಮ್ರಾಜ್ಯಕ್ಕೆ ಬಂದೊದಗಿದ ವಿಪತ್ತನ್ನು ಪರಿಹರಿಸಿ ಸನಾತನ ಧರ್ಮವನ್ನು ರಕ್ಷಿಸಿದ ತಪೋನಿಧಿಗಳು. ಏಳುನೂರ ಮೂವತ್ತೆರಡು ಪ್ರಾಣಪ್ರತೀಕಗಳನ್ನು ಪ್ರತಿಷ್ಠಾಪಿಸಿ ದೇಶದ ಉದ್ದಗಲಕ್ಕೂ ಧರ್ಮಜಾಗೃತಿಯನ್ನು ಮೂಡಿಸಿದ ಮಹನೀಯರು. 'ಹರಿಯಿಲ್ಲದ ಕ್ಷೇತ್ರವರಿಯದ ಮಹಾಮಹಿಮ', 'ಸಿರಿಕೃಷ್ಣ ಸರಸೀರುಹ ಭೃಂಗ', ಶ್ರೀವ್ಯಾಸತೀರ್ಥ ಗುರುಸಾರ್ವಭೌಮರು ಶ್ರೀರಾಘವೇಂದ್ರರಾಗಿ ಅವತರಿಸಿ ಜಗತ್ತನ್ನು ಪೊರೆಯುತ್ತಿರುವುದು ಸರ್ವವಿದಿತ.
ಶ್ರೀವ್ಯಾಸರಾಜಗುರುಸಾರ್ವಭೌಮರು ರಚಿಸಿದ 'ನ್ಯಾಯಾಮೃತ') 'ವಾಸುದೇವನ ಚರಣವನಜ ವಂದಿಪ, ಸನ್ನ್ಯಾಸ ರತ್ನಾಕರ'ರೆಂದು ದಾಸಶ್ರೇಷ್ಠರಾದ ಶ್ರೀಪುರಂದರದಾಸರು ಕೊಂಡಾಡಿದ ಶ್ರೀವ್ಯಾಸತೀರ್ಥರು ರಚಿಸಿದ ಅಪೂರ್ವವಾದ ಗ್ರಂಥಗಳಲ್ಲಿ 'ನ್ಯಾಯಾಮೃತ' ಅತ್ಯಂತ ಪ್ರಮುಖವಾದಂತಹ ಕೃತಿ.
"ನಿಖಿಲಗುಣನಿಕಾಯಂ ನಿತ್ಯನಿರ್ಧೂತಹೇಯಂ ಶುಭತಮಮತಿಮೇಯಂ ಶುದ್ಧಸೌಖ್ಯಾಪ್ತ್ಯುಪಾಯಂI ಸಕಲನಿಗಮಗೇಯಂ ಸರ್ವಶಬ್ದಾಭಿದೇಯಂ ನವಜಲಧರಕಾಯಂ ನೌಮಿ ಲಕ್ಷ್ಮೀಸಹಾಯಂII"
"ವಿಘ್ನೌಘವಾರಣಂ ಸತ್ಯಾಶೇಷ ವಿಶ್ವಸ್ಯಕಾರಣಂI ಕರುಣಾಸಿಂಧುಮಾನಂದತೀರ್ಥ ಬಂಧುಂ ಹರಿಂ ಭಜೇII"
ಎಂಬುದಾಗಿ ಲಕ್ಷ್ಮೀಪತಿಯಾದಂತಹ, ಸಕಲದೋಷದೂರನಾದಂತಹ, ಸಕಲಕಲ್ಯಾಣಗುಣಗಳಿಗೆ ನೆಲೆಯಾದಂತಹ,ಸರ್ವಶಬ್ದವಾಚ್ಯನಾದ ಶ್ರೀಹರಿಯ ಸ್ತುತಿ ಹಾಗೂ'ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ ಆನಂದತೀರ್ಥಮತುಲಂ ಭಜೇ ತಾಪತ್ರಯಾಪಹಂ" ಎಂದು ವಿಶ್ವಗುರುಗಳಾದ ಶ್ರೀಮಧ್ವಮುನಿಗಳ ಸ್ತುತಿಯೊಂದಿಗೆ ಪ್ರಾರಂಭವಾಗುವಂತಹ 'ನ್ಯಾಯಾಮೃತ' ಕೃತಿ ವೇದಾಂತಕ್ಕೆ ಸಂಬಂಧಿಸಿದಂತಹ ವಾದಗ್ರಂಥಗಳ ಪರಂಪರೆಯಲ್ಲಿಯೇ ಅತ್ಯಪೂರ್ವವಾದಂತಹ ಗ್ರಂಥ. ಪ್ರಾಚೀನ ವ್ಯಾಖ್ಯಾನಕಾರರ ಹಾಗೂ ಗ್ರಂಥಕಾರರ ಹಲವು ವಿಚಾರಗಳ ಆಧಾರದಲ್ಲಿಯೇ ಈ ಮಹೋನ್ನತಕೃತಿ ರಚನೆಯಾಗಿದ್ದರೂ, ಪ್ರಾಚೀನಗ್ರಂಥಗಳ ಅನೇಕವಿಚಾರಗಳನ್ನು ವಿನೂತನರೀತಿಯಿಂದ ಪ್ರತಿಪಾದಿಸುವ ಮೂಲಕ ಮತ್ತು ಅವುಗಳೊಂದಿಗೆ ಹೊಸ ವಿಚಾರಗಳನ್ನೂ ಪ್ರಸ್ತಾಪಿಸುವ ಮೂಲಕ ತತ್ತ್ವವಾದ ಹಾಗೂ ಉಳಿದ ಸಿದ್ಧಾಂತಗಳ ವಾದಭೂಮಿಕೆಯಲ್ಲಿ ತತ್ತ್ವವಾದದ ಮಹಾನ್ ಸಮರ್ಥಕರಾಗಿ ಶ್ರೀವ್ಯಾಸರಾಜಗುರುಸಾರ್ವಭೌಮರು ವಿಶ್ವವಿಖ್ಯಾತರಾದರು. ಪ್ರತಿಕಕ್ಷಿಗಳಿಗೆ ದುರ್ಗಮ್ಯವಾದಂತಹ ಯುಕ್ತಿಗಳನ್ನು ತಮ್ಮ ಗ್ರಂಥದಲ್ಲಿ ಪ್ರತಿಪಾದಿಸಿದರು. ವಿಮತೀಯ ಮಹಾಮನೀಷಿಗಳನ್ನು ಕೆಣಕಿ,ಕೆರಳಿಸಿ ವಾದಭೂಮಿಯಲ್ಲಿ ಶತಶತಮಾನಗಳಾದರೂ ತನ್ನ ತೀಕ್ಷ್ಣತೆಯನ್ನು ಕಳೆದುಕೊಳ್ಳದ ಈ ನ್ಯಾಯಾಮೃತ ಗ್ರಂಥ ವ್ಯಾಸತೀರ್ಥರ ವಿದ್ಯಾವಿಭವಕ್ಕೆ, ಅಷ್ಟೇ ತೀಕ್ಷ್ಣವಾದಂತಹ ವಾದವೈಖರಿಗೆ ಸಾಕ್ಷಿಯಾದಂತಹ ಗ್ರಂಥ. ಪರಮತಗಳ ಪ್ರತಿಯೊಂದು ಪ್ರಮೇಯವನ್ನೂ ಕೂಲಂಕಷವಾಗಿ ವಿಮರ್ಶಿಸಿ, ಅವುಗಳ ಅಶಾಸ್ತ್ರೀಯತೆಯನ್ನೂ, ಪ್ರಮಾಣವೈರುದ್ಧ್ಯವನ್ನೂ ಎತ್ತಿ ತೋರಿದಂತಹ ಗ್ರಂಥ. ಈ ಗ್ರಂಥದ ಪ್ರಭಾವವೆಷ್ಟು ಎಂದರೆ ಪ್ರತಿಕಕ್ಷಿಗಳು ತಮ್ಮ ಸಿದ್ಧಾಂತವನ್ನು ವ್ಯಾಸತೀರ್ಥರು ತೋರಿದಂತಹ ಬೆಳಕಿನಲ್ಲಿ ಪುನರ್ ಪರಿಶೀಲಿಸಬೇಕಾಯಿತು. ಪರಮತೀಯರಾದ ದಿಗ್ದಂತಿ ವಿದ್ವಾಂಸರು ಪ್ರತಿರೋಧತೋರಲು ಪ್ರಯತ್ನಿಸಿದರೂ, ಶ್ರೀವ್ಯಾಸತೀರ್ಥರ ಶಿಷ್ಯಾಗ್ರಣಿಗಳಾದ ಶ್ರೀವಿಜಯೀಂದ್ರ ಶ್ರೀಮಚ್ಚರಣರು ಅವರನ್ನು ನಿರುತ್ತರಗೊಳಿಸಿದರು. ವಿಮತದ ಪ್ರಚಂಡವಿದ್ವಾಂಸನೊಬ್ಬನು ನ್ಯಾಯಾಮೃತ ಗ್ರಂಥವನ್ನು ಖಂಡಿಸುವ ವ್ಯಾಜದಿಂದ ಕೃತಿಯೊಂದನ್ನು ರಚಿಸಿದರೂ ಶ್ರೀರಘೂತ್ತಮತೀರ್ಥರ ಶಿಷ್ಯರಾದ ತರಂಗಿಣಿ ರಾಮಾಚಾರ್ಯರು ಮತ್ತು ಶ್ರೀ ವಿದ್ಯಾಧೀಶ ತೀರ್ಥರ ಪೂರ್ವಾಶ್ರಮದ ಪಿತೃಪಾದರಾದ ಆನಂದ ಭಟ್ಟಾರಕರು ಆ ವಿಮತದ ಗ್ರಂಥಕ್ಕೆ ತರಂಗಿಣಿ ಮತ್ತು ನ್ಯಾಯಾಮೃತ ಕಂಟಕೋದ್ಧಾರ ಖಂಡನಾ ಗ್ರಂಥ ಗಳನ್ನು ರಚನೆ ಮಾಡಿ ಪ್ರತಿವಾದಿಯ ಆಕ್ಷೇಪಗಳಿಗೆ ಸೂಕ್ತ ಪ್ರತ್ಯುತ್ತರ ವನ್ನು ನೀಡಿದರು. ಹೀಗೆ ಉಳಿದ ಸಿದ್ಧಾಂತಗಳು ಹಾಗೂ ಶ್ರೀಮಧ್ವಾಚಾರ್ಯರು ಪುನ:ಪ್ರತಿಷ್ಠಾಪಿಸಿದ ತತ್ತ್ವವಾದಗಳ ನಡುವಿನ ತಾತ್ತ್ವಿಕ ಸಂವಾದಕ್ಕೆ ಮುಖ್ಯ ಆಕರ ಗ್ರಂಥವಾಗಿ ವಿದ್ವಾಂಸರ ವಿದ್ವತ್ತಿಗೆ ನಿಕಷವಾದಂತಹ ಕೃತಿ ನ್ಯಾಯಾಮೃತ. ಶ್ರೀವ್ಯಾಸರಾಜಗುರುಸಾರ್ವಭೌಮರು ತಮ್ಮ ಕೃತಿಯಲ್ಲಿ ಮೊದಲಿಗೆ ವಿಮತೀಯರು ಜಗತ್ತನ್ನು 'ಮಿಥ್ಯಾ' ಎಂದು ಸಾಧಿಸಲು ನೀಡಿರುವ ಎಲ್ಲಾ ಪ್ರಮಾಣಗಳ ಔಚಿತ್ಯವನ್ನು ಅತ್ಯಂತ ವಿವರವಾಗಿ ವಿಮರ್ಶಿಸಿ, ಪರಮತೀಯರ ವಾದ ಎಷ್ಟು ಅಸಮರ್ಥನೀಯ ಎಂದು ಸದೃಢವಾಗಿ ಸಾಧಿಸುತ್ತಾರೆ. ಬ್ರಹ್ಮನ ನಿರ್ಗುಣತ್ತ್ವ, ನಿರಾಕರತ್ವ, ಸ್ವಪ್ರಕಾಶತ್ವ, ಅವಾಚ್ಯತ್ವ ಮೊದಲಾದವುಗಳನ್ನು ವಿಮತೀಯರು ಅರ್ಥೈಸುವ ಕ್ರಮದಲ್ಲಿನ ಲೋಪವನ್ನು ತೋರಿಸಿ, ಭಗವಂತನ ಗುಣಪೂರ್ಣತ್ವವನ್ನು ಸಾಧಿಸುತ್ತಾರೆ. ಶ್ರೀಮಧ್ವ ಭಗವತ್ಪಾದರ ಮುಖ್ಯಪ್ರಮೇಯಗಳಲ್ಲಿ ಒಂದಾದ 'ಭೇದ' ಯಥಾರ್ಥ, ಪ್ರಮಾಣ ಹಾಗೂ ಪ್ರತ್ಯಕ್ಷ ಸಿದ್ಧವಾದುದೆಂದು ತೋರಿದ್ದು ಮಾತ್ರವಲ್ಲದೆ, ಐಕ್ಯ(ಬ್ರಹ್ಮೈಕ್ಯ) ಯಾವರೀತಿಯಲ್ಲಿ ಅಸಂಭವವೆಂದು ಸಹಾ ಯುಕ್ತಿ ಹಾಗೂ ಪ್ರಮಾಣಪೂರ್ವಕವಾಗಿ ಸಾಧಿಸಿದ್ದಾರೆ. ಶ್ರವಣ,ಮನನಾದಿಗಳ ಸ್ವರೂಪ, ಮೋಕ್ಷದ ಸ್ವರೂಪವನ್ನು ಸಹಾ ತಮ್ಮ ಪೂರ್ವಸೂರಿಗಳಾದ ಶ್ರೀಜಯತೀರ್ಥ ಗುರುಸಾರ್ವಭೌಮರು ಹಾಗೂ ಶ್ರೀವಿಷ್ಣುದಾಸಾಚಾರ್ಯರಿಗಿಂತ ಹೆಚ್ಚು ವಿಸ್ತೃತವಾಗಿ ವಿವರಿಸಿ ಮೋಕ್ಷವೆಂದರೆ ಅವಿದ್ಯಾನಿವೃತ್ತಿ ಮಾತ್ರ, ಮೋಕ್ಷದಲ್ಲಿ ತಾರತಮ್ಯವಿಲ್ಲ ಎಂಬ ಉಳಿದ ಮತಗಳ ಅಭಿಪ್ರಾಯಗಳನ್ನು ನಿರಾಕರಣಮಾಡಿ, ಮೋಕ್ಷದಲ್ಲಿ ಆನಂದತಾರತಮ್ಯ ಶ್ರುತಿ ಸಮ್ಮತವೆಂದು ಪ್ರತಿಪಾದಿಸಿ ಮಧ್ವಭಗವತ್ಪಾದರ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾರೆ. ನ್ಯಾಯಾಮೃತದಲ್ಲಿ ಅನೇಕ ಗ್ರಂಥಕಾರರನ್ನು ಹಾಗೂ ಗ್ರಂಥಗಳನ್ನು ಉಲ್ಲೇಖಿಸಿ, ಅವುಗಳ ಅತ್ಯಂತ ಗಂಭೀರವಾದ, ಮಾತ್ಸರ್ಯ, ದುಸ್ತರ್ಕ, ನಿಂದನಾ, ವಿಷಯಾಂತರ, ಪಕ್ಷಪಾತ ರಹಿತವಾದ ವಿಮರ್ಶೆಯನ್ನು ನಡೆಸಿ ಶ್ರೀಮಧ್ವಭಗವತ್ಪಾದರ ಸಿದ್ಧಾಂತ ಎಷ್ಟು ದೋಷರಹಿತ ಮತ್ತು ಪ್ರಮಾಣಗಳಿಂದ ಪ್ರಮಿತ ಎಂಬುದನ್ನು ತೋರುವ ರೀತಿ ಅನ್ಯಾದೃಶ. ಪಿ.ಆರ್.ದಾಸಗುಪ್ತಾ ರಂತಹ ವಿದ್ವಾಂಸರು ಶ್ರೀವ್ಯಾಸತೀರ್ಥರ ವಾದವೈಖರಿಯನ್ನು ಕುರಿತು ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ ಎಂಬ ಗ್ರಂಥದಲ್ಲಿ "ತರ್ಕಕೌಶಲ ವಾಕ್ಯಾರ್ಥದಲ್ಲಿ ಶ್ರೀವ್ಯಾಸತೀರ್ಥರು ತೋರುವ ಹರಿತಮತಿಗೆ ಸಮಾನವಾದ ಪ್ರತಿಭೆ ಇಡೀ ಭಾರತೀಯ ದಾರ್ಶನಿಕ ಪ್ರಪಂಚದಲ್ಲಿ ಅನ್ಯತ್ರದುರ್ಲಭ" ಎಂದು ಹೇಳಿರುವ ಮಾತು ಇಲ್ಲಿ ಉಲ್ಲೇಖನೀಯ. 'ಆನಂದತೀರ್ಥರ ಪಟ್ಟದಾನೆ'ಯಂತೆ, ಪ್ರತಿವಾದಿಗಳ ಸಿದ್ಧಾಂತವೆಂಬ ಕದಳೀವನವನ್ನು ಹೊಕ್ಕು ಧ್ವಂಸಗೊಳಿಸುವ ಮತ್ತವಾರಣದಂತೆ ಮೆರೆವ ಶ್ರೀವ್ಯಾಸರಾಜರ ಮಹತಿಗೆ ಎಣೆಯುಂಟೆ? 'ಮಧ್ವಮತವನುದ್ಧರಿಸಿದ ವ್ಯಾಸಮುನಿಯ ಮಹತಿಯನ್ನು ವ್ಯಾಸತೀರ್ಥರ ಗುರುಗಳಾದ ಶ್ರೀಪಾದರಾಜಗುರುಸಾರ್ವಭೌಮರ ನುಡಿಯಲ್ಲಿ ಹೇಳಬೇಕೆಂದರೆ 'ಸಾಸಿರಜಿಹ್ವೆಯುಳ್ಳ ಶೇಷನೇ ಕೊಂಡಾಡಬೇಕು"
'ತಾತ್ಪರ್ಯಚಂದ್ರಿಕಾ' : ಮಧ್ವಮತದ ಮೇಧಾವಿ ಮೂರ್ಧನ್ಯರು, ಸಹೃದಯರಾದ ಅನ್ಯಮತೀಯವಿದ್ವಾಂಸರೂ ಅತ್ಯಂತ ಗೌರವದಿಂದ ಶ್ರೀವ್ಯಾಸತೀರ್ಥರನ್ನು 'ಶ್ರೀಚಂದ್ರಿಕಾಚಾರ್ಯರು' ಎಂದು ಸಂಬೋಧಿಸಲು ಕಾರಣವಾದಂತಹ ಅತ್ಯಪೂರ್ವಕೃತಿ 'ತಾತ್ಪರ್ಯಚಂದ್ರಿಕಾ'. ಶ್ರೀವೇದವ್ಯಾಸದೇವರ ಬ್ರಹ್ಮಸೂತ್ರಗಳ ಹಾರ್ದವನ್ನು ತೆರೆದಿಡಲು ಶ್ರೀಮಧ್ವಾಚಾರ್ಯರು ರಚಿಸಿದ 'ಬ್ರಹ್ಮಸೂತ್ರಭಾಷ್ಯ'ಕ್ಕೆ ಶ್ರೀಜಯತೀರ್ಥರು ರಚಿಸಿದ 'ತತ್ತ್ವಪ್ರಕಾಶಿಕಾ' ಟೀಕೆಗೆ ಶ್ರೀವ್ಯಾಸರಾಜರು ರಚಿಸಿದ ಅತ್ಯಂತ ವಿಸ್ತೃತವಾದಂತಹ ಟಿಪ್ಪಣಿ-'ತಾತ್ಪರ್ಯಚಂದ್ರಿಕಾ' ಸಂಕ್ಷಿಪ್ತವಾಗಿ 'ಚಂದ್ರಿಕಾ'ಎಂದು ಪ್ರಸಿದ್ಧಿಗೊಂಡಿದೆ. ಭಗವಂತನ ಸ್ವಯಂವ್ಯಕ್ತಕ್ಷೇತ್ರಗಳಲ್ಲಿ ಒಂದಾದ ಶ್ರೀರಂಗಂ ನಲ್ಲಿ ಶ್ರೀವ್ಯಾಸರಾಜರು ಈ ಕೃತಿಯನ್ನು ರಚಿಸಿದ್ದು, ಶ್ರೀರಂಗನಾಥನನ್ನು 'ಅಸ್ಪೃಷ್ಟದೋಷಗಂಧಾಯ ಕಲ್ಯಾಣಗುಣಸಿಂಧವೇ ನಮೋ ನಮೋ ಭಕ್ತಮುಕ್ತಿದಾಯಿನೇ ಶೇಷಶಾಯಿನೆ" ಎಂದು ಪ್ರಾರಂಭದಲ್ಲಿ ಸ್ತುತಿಸಿ ಸಮನ್ವಯಾಧ್ಯಾಯ ಹಾಗೂ ಅವಿರೋಧಾಧ್ಯಾಯದಲ್ಲಿ ವರ್ಣಿತವಾಗಿರುವ ಭಗವಂತನ ಸರ್ವದೋಷರಾಹಿತ್ಯವನ್ನು, ಗುಣಪರಿಪೂರ್ಣತ್ವವನ್ನು, ಭಕ್ತ ಎಂಬ ಶಬ್ದ ಪ್ರಯೋಗದಿಂದ ಸಾಧನಾಧ್ಯಾಯದ ಸಾರವನ್ನು, ಮೋಕ್ಷದಾಯಿನೆ ಎಂಬ ವಿಶೇಷಣದ ಪ್ರಯೋಗದಿಂದ ಫಲಾಧ್ಯಾಯದ ಸೂಚನೆಯನ್ನೂ ಶ್ರೀವ್ಯಾಸತೀರ್ಥರು ತಮ್ಮ ಕೃತಿಯ ಮಂಗಳಾಚರಣೆಯಲ್ಲಿ ಮಾಡಿರುವುದು ವಿಶೇಷ. ಶ್ರೀಜಯತೀರ್ಥಗುರುಸಾರ್ವಭೌಮರ 'ತತ್ತ್ವಪ್ರಕಾಶಿಕಾ' ಕೃತಿಯನ್ನು ವ್ಯಾಖ್ಯಾನಿಸುವ ವ್ಯಾಜದಿಂದ ವಿಶ್ವಗುರುಗಳು ಸೂತ್ರಪ್ರಸ್ಥಾನಕ್ಕೆ ಸಂಬಂಧಿಸಿದಂತೆ ಅನುಗ್ರಹಿಸಿರುವ 'ಬ್ರಹ್ಮಸೂತ್ರಭಾಷ್ಯ', 'ಅನುವ್ಯಾಖ್ಯಾನ', 'ಅಣುಭಾಷ್ಯ' ಹಾಗೂ 'ನ್ಯಾಯವಿವರಣ' ಕೃತಿಗಳು, ಶ್ರೀಮಧ್ವಭಾಷ್ಯಕ್ಕೆ ಶ್ರೀಪದ್ಮನಾಭತೀರ್ಥರು ರಚಿಸಿದ 'ಸನ್ನ್ಯಾಯರತ್ನಾವಳಿ', ಶ್ರೀತ್ರಿವಿಕ್ರಮಪಂಡಿತಾಚಾರ್ಯರು ರಚಿಸಿದ 'ತತ್ತ್ವಪ್ರದೀಪ' ಶ್ರೀಜಯತೀರ್ಥರು ರಚಿಸಿದ 'ತತ್ತ್ಪಪ್ರಕಾಶಿಕಾ', 'ನ್ಯಾಯಸುಧಾ' ಕೃತಿಗಳೊಂದಿಗೆ ಶ್ರೀಮಧ್ವಭಗವತ್ಪಾದರು ಬ್ರಹ್ಮಸೂತ್ರಭಾಷ್ಯ ರಚಿಸುವ ಪೂರ್ವದಲ್ಲಿ ರಚಿತವಾಗಿದ್ದ ಪ್ರಮುಖಭಾಷ್ಯಗಳನ್ನು, ಅವುಗಳ ವ್ಯಾಖ್ಯಾನಗ್ರಂಥಗಳನ್ನು ಸಹಾ ಪರಿಶೀಲಿಸಿ ಅವುಗಳಲ್ಲಿ ಅಡಕವಾಗಿರುವ ವಿಚಾರಗಳನ್ನು ಒಂದೆಡೆ ತಂದು ತುಲನಾತ್ಮಕವಾಗಿ ವ್ಯಾಖ್ಯಾನಿಸಿರುವ ಅಪೂರ್ವಗ್ರಂಥ 'ತಾತ್ಪರ್ಯಚಂದ್ರಿಕಾ'.ಶ್ರೀಮಧ್ವಾಚಾರ್ಯರು, ಶ್ರೀಜಯತೀರ್ಥರು ಅನುಸರಿಸಿದ ವಾದಪದ್ಧತಿಯಿಂದ ವಿಶೇಷವಾಗಿ ಉಪಕೃತರಾಗಿರುವ ಶ್ರೀವ್ಯಾಸತೀರ್ಥರು ನ್ಯಾಯ, ಮೀಮಾಂಸಾದಿ ಪ್ರಕ್ರಿಯೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿದ್ದಾರೆ. ವಿಶೇಷವೆಂದರೆ ಶ್ರೀಮಧ್ವರ ಸಿದ್ಧಾಂತವು ಪೂರ್ವಮೀಮಾಂಸಾಶಾಸ್ತ್ರಕ್ಕೂ ಸಮ್ಮತವೆಂಬುದನ್ನು ತೋರಲು ಪೂರ್ವಮೀಮಾಂಸಾಶಾಸ್ತ್ರದ 60 ನ್ಯಾಯಗಳನ್ನು ಬಳಸಿ, ಶ್ರೀಮದಾಚಾರ್ಯರು ಪ್ರತಿಪಾದಿಸಿರುವ ಸೂತ್ರಾರ್ಥಕ್ಕೂ ಪೂರ್ವಮೀಮಾಂಸಾಶಾಸ್ತ್ರಕ್ಕೂ ಯಾವುದೇ ವಿರೋಧವಿಲ್ಲವೆಂದು ತೋರಿದ್ದಾರೆ. ವ್ಯಾಕರಣದ ರೀತ್ಯವೂ ಶ್ರೀಮಧ್ವಭಾಷ್ಯ ನಿರ್ದುಷ್ಟವಾದುದು ಎಂದು ತೋರಿದ ಶ್ರೀವ್ಯಾಸತೀರ್ಥರು ತಮ್ಮ 'ಚಂದ್ರಿಕಾ'ಕೃತಿಯ ಮೂಲಕ ಅಧಿಕರಣಪ್ರಸ್ಥಾನಕ್ಕೆ ಹೊಸ ಆಯಾಮ ನೀಡಿದ ಶಕಪುರುಷರು. ಶ್ರೀಮಧ್ವಭಗವತ್ಪಾದರ ಸಿದ್ಧಾಂತವನ್ನು ಎಷ್ಟು ಸಮೃದ್ಧವಾಗಿ ವ್ಯಾಖ್ಯಾನಿಸಬಹುದೆಂದು ಜಗತ್ತಿಗೆ ತೋರಿದ ಪೂರ್ಣಪ್ರಜ್ಞರ, ಜಯತೀರ್ಥರ ಪರಮಾನುಗ್ರಹ ಪಾತ್ರರು. ಪರಮತಗಳ ಪ್ರಮೇಯಗಳನ್ನು ನಿರಾಕರಣಮಾಡಿ ಶ್ರೀಮಧ್ವರು, ಶ್ರೀಜಯತೀರ್ಥರು ಎತ್ತಿಹಿಡಿದ ಸಿದ್ಧಾಂತವನ್ನು ಸಮರ್ಥಿಸುವಲ್ಲಿ ಶ್ರೀವ್ಯಾಸರಾಜರ ಗ್ರಂಥಗಾಂಭೀರ್ಯ ಅನ್ಯಾದೃಶ. ಎಲ್ಲಿಯೂ ಒಂದೂ ಅಪ್ರಸ್ತುತವಾದ, ಅಪ್ರಾಸಂಗಿಕವಾದ ಮಾತಿಲ್ಲ. ಕೃತಿಗಳ ವಿಮರ್ಶೆ ಸಹ ಅತ್ಯಂತ ವಸ್ತುನಿಷ್ಠವಾದ ವಿಮರ್ಶೆ, ಎಲ್ಲಿಯೂ ಹದ ತಪ್ಪಿದ ಮಾತಿಲ್ಲ. "ಸಂಸ್ಕೃತವಾಙ್ಮಯದ ತತ್ತ್ವಶಾಸ್ತ್ರೀಯ ಗ್ರಂಥಪ್ರಪಂಚದಲ್ಲಿ ಈ ಕೃತಿಗೆ ವ್ಯಾಪಕ ಹಾಗೂ ಗಂಭೀರವಿಚಾರಪರತೆತ ದೃಷ್ಟಿಯಿಂದ ಸರಿಸಮಾನವಾದ ಇನ್ನೊಂದು ಕೃತಿ ದುರ್ಲಭ. ಬ್ರಹ್ಮಸೂತ್ರಗಳ ಹಾಗೂ ಅವುಗಳ ಅರ್ಥವಿವರಣೆಗೆಂದೇ ಮೀಸಲಾದ ಭಾಷ್ಯಗಳ ವಿಮರ್ಶಾತ್ಮಕ ಅಧ್ಯಯನಕ್ಕೆ ಹೆಸರಾಂತಹ ಈ ಕೃತಿಯ ಪಾಂಡಿತ್ಯ, ಸೂಕ್ಷ್ಮವಿಶ್ಲೇಷಣೆ, ನಿಶಿತವಿಮರ್ಶೆ,ಪ್ರೌಢಪ್ರತಿಪಾದನಾಶೈಲಿ ಮತ್ತು ಬಾದರಾಯಣರ ಕೃತಿಗಳ ಅಂತ:ಪ್ರಜ್ಞೆ -ಈ ಎಲ್ಲಾ ದೃಷ್ಟಿಯಿಂದ ಅತ್ಯುತ್ತಮವಾದುದು: ಈ ಕೃತಿಯನ್ನು ಮೀರಬಲ್ಲ ಇನ್ನೊಂದು ಗ್ರಂಥ ಇದುವರೆಗೂ ಬಂದಿಲ್ಲ: ಮುಂದೆಯೂ ಬರಲಾರದು" ಎಂಬ ಪ್ರೊ.ಬಿ.ಎನ್.ಕೆ.ಶರ್ಮರವರು 'ಚಂದ್ರಿಕಾ' ಕುರಿತು ಆಡಿರುವ ಮಾತುಗಳು ಅಕ್ಷರಶ: ಸತ್ಯ. ಶ್ರೀವ್ಯಾಸತೀರ್ಥರ ಮುಗಿಲು ಮುಟ್ಟುವ ವಿದ್ವತ್ತು, ಸಮಗ್ರತೆ, ವಿವರಣೆಯನ್ನು ನೀಡುವಲ್ಲಿ ತೋರುವಂತಹ ನಿಷ್ಕೃಷ್ಟತೆ ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ತಟಸ್ಥವಾದ, ಪಕ್ಷಪಾತರಹಿತವಾದ ವಿಚಾರಕ್ಷಮತೆ ಅನ್ಯತ್ರದುರ್ಲಭವಾದ ಸಂಗತಿಗಳು. ಶ್ರೀಜಯತೀರ್ಥರು ವಿವರಿಸಿದ ವಿಶ್ವಗುರುಗಳ ಭಾಷ್ಯಭಾವವನ್ನು, ಭಾಷ್ಯದಲ್ಲಿ ಪ್ರತಿಫಲಿತವಾಗಿರುವ ಪೂರ್ಣಪ್ರಜ್ಞರ ಪೂರ್ಣದೃಷ್ಟಿಯನ್ನು ಅತ್ಯಂತ ವಿಶದವಾಗಿ ತೆರೆದು ತೋರುವಲ್ಲಿ ಶ್ರೀವ್ಯಾಸತೀರ್ಥರ ಸಾಧನೆ ಅನನ್ಯಸಾಧಾರಣ. ಬ್ರಹ್ಮಸೂತ್ರಗಳ ಮೊದಲ ಎರಡು ಅಧ್ಯಾಯಗಳಿಗೆ ಮಾತ್ರ ಸೀಮಿತವಾಗಿರುವ 'ತಾತ್ಪರ್ಯಚಂದ್ರಿಕಾ' ಸುಮಾರು 3450 ಗ್ರಂಥಗಳಷ್ಟಿದೆ. ಶ್ರೀವ್ಯಾಸರಾಜರ ಚಂದ್ರಿಕಾ ಕೃತಿಯ ಪ್ರಭಾವ ಮಾಧ್ವವಾಙ್ಮಯದಲ್ಲಿ ಎಷ್ಟಿದೆ ಎಂದರೆ ಶ್ರೀವ್ಯಾಸತೀರ್ಥರ ನಂತರ ಮಾಧ್ವವಾಙ್ಮಯಲೋಕವನ್ನು ಬೆಳಗಿದ ಶ್ರೀವಿಜಯೀಂದ್ರರು, ಶ್ರೀರಘೂತ್ತಮತೀರ್ಥರು, ಶ್ರೀರಾಘವೇಂದ್ರರು, ಶ್ರೀವೇದೇಶತೀರ್ಥರು, ಶ್ರೀವಿದ್ಯಾಧೀಶರು, ಶ್ರೀಕಂಬಾಲೂರು ರಾಮಚಂದ್ರತೀರ್ಥರು, ಶ್ರೀಸತ್ಯನಾಥರು, ಶ್ರೀಶೇಷಚಂದ್ರಿಕಾಚಾರ್ಯರು, ಶ್ರೀಜಗನ್ನಾಥತೀರ್ಥರು ಶ್ರೀಬಿದರಹಳ್ಳಿ ಶ್ರೀನಿವಾಸಾಚಾರ್ಯರೇ ಮೊದಲಾದ ದಿಗ್ದಂತಿ ಟಿಪ್ಪಣಿಕಾರರು,ವ್ಯಾಖ್ಯಾನಕಾರರು, ಗ್ರಂಥಕಾರರೆಲ್ಲರೂ 'ಚಂದ್ರಿಕಾಚಾರ್ಯ'ರೆಂದು ಅತ್ಯಂತ ಗೌರವ ಭಾವನೆಯಿಂದ ಸ್ತುತಿಸಿದ್ದಾರೆ. ಶ್ರೀಮಧ್ವಭಗವತ್ಪಾದರು, ಶ್ರೀಟೀಕಾಕೃತ್ಪಾದರೊಂದಿಗೆ ಶ್ರೀಚಂದ್ರಿಕಾಚಾರ್ಯರು ಮುನಿತ್ರಯರಲ್ಲಿ ಒಬ್ಬರೆಂದು ಅಸಾಧಾರಣ ಗೌರವಕ್ಕೆ ಭಾಜನರಾಗಿದ್ದಾರೆ. ಶ್ರೀವ್ಯಾಸರಾಜರ ಚಂದ್ರಿಕಾ ಗ್ರಂಥದಲ್ಲಿ ವ್ಯಾಖ್ಯಾನವಾಗದೆ ಉಳಿದಿದ್ದ ಬ್ರಹ್ಮಸೂತ್ರಗಳ ಉಳಿದ ಎರಡು ಅಧ್ಯಾಯಗಳಿಗೆ ಶ್ರೀವ್ಯಾಸರಾಜರ ಪೀಠದಲ್ಲಿ ಬಂದ ಶ್ರೀರಘುನಾಥತೀರ್ಥರು ಶ್ರೀವ್ಯಾಸತೀರ್ಥರ ಶೈಲಿಯನ್ನೇ ಅನುಸರಿಸಿ ವ್ಯಾಖ್ಯಾನ ಮಾಡಿ ಶ್ರೀಶೇಷಚಂದ್ರಿಕಾಚಾರ್ಯೆರೆಂದು ಖ್ಯಾತರಾಗಿದ್ದಾರೆ. , ಶ್ರೀವ್ಯಾಸತೀರ್ಥರೇ ಮತ್ತೊಮ್ಮೆ ಶ್ರೀರಾಘವೇಂದ್ರತೀರ್ಥರಾಗಿ ಅವತರಿಸಿ ಬಂದು ತಮ್ಮ ಲೋಕೋತ್ತರ ಕೃತಿಗೆ ಪೊಡವಿಗೊಡೆಯನಾದ ಉಡುಪಿ ಶ್ರೀಕೃಷ್ಣನ ಸಾನ್ನಿಧ್ಯದಲ್ಲಿ 'ತಾತ್ಪರ್ಯಚಂದ್ರಿಕಾ ಪ್ರಕಾಶ'ಟಿಪ್ಪಣಿಯನ್ನು ರಚಿಸಿ ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾರೆ. ಆ ಸಂದರ್ಭದಲ್ಲಿ ಶ್ರೀಪರಿಮಳಾಚಾರ್ಯರು ನಿರ್ಮಿಸಿದ ಸ್ವರ್ಣಮಯವಾದ ಶ್ರೀಕೃಷ್ಣಪ್ರತಿಮೆ ಅದ್ಯಪಿ ಶ್ರೀರಾಘವೇಂದ್ರಮಠದಲ್ಲಿ ಶ್ರೀಗಳಿಂದ ಪ್ರತಿನಿತ್ಯ ಪೂಜೆಗೊಳ್ಳುತ್ತಿದೆ. ಶ್ರೀವಿದ್ಯಾಧೀಶರ ಸಮಕಾಲೀನರಾಗಿದ್ದ ಶ್ರೀಪಾಂಡುರಂಗೀ ಕೇಶವಾಚಾರ್ಯರು ಸಹಾ ಚಂದ್ರಿಕಾ ಗ್ರಂಥಕ್ಕೆ 'ಚಂದ್ರಿಕಾಲಘು ಗುರುರಾಜೀಯ'ವೆಂಬ ಟಿಪ್ಪಣಿಯನ್ನು ರಚಿಸಿದ್ದಾರೆ. ತಮ್ಮ ವೈದುಷ್ಯದಿಂದ ವಿಶ್ವಗುರುಗಳ, ಟೀಕಾಚಾರ್ಯರ ಹಾರ್ದವನ್ನು ತನ್ಮೂಲಕ ಶ್ರೀವೇದವ್ಯಾಸರ ಬ್ರಹ್ಮಸೂತ್ರಗಳ ಅರ್ಥವನ್ನು ಜಗತ್ತಿಗೆ ತೋರಿದ ಶ್ರೀವ್ಯಾಸತೀರ್ಥಗುರುಸಾರ್ವಭೌಮರು ನಿಜಕ್ಕೂ ಶ್ರೀಪುರಂದರದಾಸಾರ್ಯರೆಂದಂತೆ " ಈಸು ಮುನಿಗಳಿದ್ದೇನು ಮಾಡಿದರು ವ್ಯಾಸಮುನಿ ಮಧ್ವಮತವನುದ್ಧರಿಸಿದ".
ತರ್ಕತಾಂಡವ
"ನಾನು ಅಧ್ಯಯನ ಮಾಡಿರುವ ಗ್ರಂಥಗಳನ್ನೆಲ್ಲವನ್ನೂ ಇವರು ಅಧ್ಯಯನ ಮಾಡಿದ್ದಾರೆ, ನಾನು ಅಭ್ಯಾಸ ಮಾಡದಿರುವಂತಹ ಗ್ರಂಥಗಳೂ ಇವರಿಗೆ ತಿಳಿದಿದೆ, 'ನವೀನ ವ್ಯಾಸ' ರಂತಿರುವ ಶ್ರೀವ್ಯಾಸತೀರ್ಥರಿಗೆ ಸಮಾನನಾದ ವ್ಯಕ್ತಿಯನ್ನು ನಾನು ನೋಡಿಲ್ಲ" ಇದು ಪಕ್ಷಧರಮಿಶ್ರರೆಂಬ ಮಹಾವಿದ್ವಾಂಸ ಶ್ರೀವ್ಯಾಸರಾಜರ ವಿದ್ಯಾವಿಭವವನ್ನು ಕೊಂಡಾಡಿದ ರೀತಿ. ಅಂತಹ ವಿದ್ವನ್ಮಾನ್ಯರಾದ ಯತಿವರ ಶ್ರೀವ್ಯಾಸರಾಜರು ರಚಿಸಿದ ಮತ್ತೊಂದು ಅಪೂರ್ವವಾದಂತಹ ಕೃತಿ 'ತರ್ಕತಾಂಡವ'.
ಜೀವ-ಬ್ರಹ್ಮೈಕ್ಯವಾದವನ್ನು, ಜಗನ್ಮಿಥ್ಯಾವಾದವನ್ನು ಖಂಡಿಸುವಂತಹ ಸಂದರ್ಭದಲ್ಲಿ ನ್ಯಾಯ,ವೈಶೇಷಿಕರ ತಂತ್ರಗಳನ್ನು ಮಧ್ವಸಿದ್ಧಾಂತವು ಬಳಸಿಕೊಂಡಿದ್ದಾಗ್ಯೂ, ಮೂಲಭೂತವಾಗಿ ವೈಶೀಷಿಕ ಮತಕ್ಕೂ ಇರುವಂತಹ ಅನೇಕ ಭಿನ್ನಾಭಿಪ್ರಾಯಗಳನ್ನು ಶ್ರೀವ್ಯಾಸತೀರ್ಥರು ತಮ್ಮ ಈ ಕೃತಿಯಲ್ಲಿ ಅತ್ಯಂತ ಸೂಕ್ತವಾಗಿ ಶ್ರೀಮಧ್ವಭಗವತ್ಪಾದರ ಅನುವ್ಯಾಖ್ಯಾನ ಹಾಗೂ ಶ್ರೀಟೀಕಾಕೃತ್ಪಾದರ 'ನ್ಯಾಯಸುಧಾ' ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು, ಅಗತ್ಯವೆನಿಸಿದೆಡೆಯಲ್ಲಿ ಆಚಾರ್ಯರ ಹಾಗೂ ಟೀಕಾಚಾರ್ಯರ ಭಾವವನ್ನು ಹೆಚ್ಚು ವಿಸ್ತೃತಮಾಡಿ ನ್ಯಾಯಮತವನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ ಖಂಡನೆಮಾಡಿದ್ದಾರೆ. ಕಾಳೀಯಮರ್ದನ ಸಂದರ್ಭದಲ್ಲಿ ಶ್ರೀಕೃಷ್ಣನ ತಾಂಡವವನ್ನು ನೆನಪಿಸುವಂತೆ, ನ್ಯಾಯಶಾಸ್ತ್ರದ ಮೇಲೆ ಶ್ರೀಕೃಷ್ಣನ ಪಾದಪೂಜಕರಾದ ಶ್ರೀವ್ಯಾಸತೀರ್ಥರ ಉಕ್ತಿ ತಾಂಡವವನ್ನು ಇಲ್ಲಿ ನೋಡಬಹುದು. ಈ ಕೃತಿಯು ಮೂರು ಪರಿಚ್ಛೇದಗಳನ್ನು ಹೊಂದಿದ್ದು ಪ್ರಮಾಣತ್ರಯಗಳಾದ ಪ್ರತ್ಯಕ್ಷ,ಆಗಮ,ಅನುಮಾನಗಳ ವಿಶ್ಲೇಷಣೆಗೆ ಶ್ರೀವ್ಯಾಸತೀರ್ಥಗುರುಸಾರ್ವಭೌಮರು ಹೆಚ್ಚಿನ ಮಹತ್ತ್ವವನ್ನು ನೀಡಿದ್ದಾರೆ. ಮೊದಲನೆಯ ಪರಿಚ್ಛೇದದಲ್ಲಿ ಪ್ರಾಮಾಣ್ಯವಾದ, ವೇದಾಪೌರುಷೇಯತ್ವ,ವೇದೈಕಗಮ್ಯನಾದ ಈಶ್ವರವಾದ,ವರ್ಣನಿತ್ಯತ್ವವಾದ ಮೊದಲಾದ ವಿಚಾರಗಳನ್ನು ವಿವೇಚಿಸಿರುವ ಶ್ರೀವ್ಯಾಸರಾಜರು ಕೇವಲ ಅನುಮಾನದಿಂದಲೇ ಈಶ್ವರನ ಅಸ್ತಿತ್ವವನ್ನು ಸಾಧಿಸಬಹುದು ಹಾಗೂ ವೇದಗಳು ಈಶ್ವರ ಕರ್ತೃಕಗಳೆಂಬ ನ್ಯಾಯವೈಶೇಷಿಕರ ಮತವನ್ನು ನಿರಾಕರಣ ಮಾಡಿದ್ದಾರೆ. ದ್ವಿತೀಯಪರಿಚ್ಛೇದದಲ್ಲಿ ಶ್ರೀಮಧ್ವಗುರುಗಳು ತಮ್ಮ ಸಿದ್ಧಾಂತದಲ್ಲಿ ಅಂಗೀಕರಿಸಿರುವ ಹತ್ತುಪದಾರ್ಥಗಳಲ್ಲಿ ಒಂದಾದ ಶಕ್ತಿಯನ್ನು ಕುರಿತು ಹಾಗೂ ತೃತೀಯ ಪರಿಚ್ಛೇದದಲ್ಲಿ ಅನುಮಾನವನ್ನು ಕುರಿತು ಶ್ರೀಮದಾಚಾರ್ಯರಿಗೆ,ಟೀಕಾಚಾರ್ಯರಿಗೆ ಸಮ್ಮತವಾದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಈ ಗ್ರಂಥದಲ್ಲಿ ತಮ್ಮ ಹಿಂದಿನ ಮನೀಷಿಗಳ ವಾಕ್ಯಗಳನ್ನು ಯಾವ,ಯಾವ ಸಂದರ್ಭಗಳಲ್ಲಿ ವಿಸ್ತೃತಗೊಳಿಸಬಹುದು ಮತ್ತು ಅಂತಹ ವಿಸ್ತರಣದಿಂದ ಸಿದ್ಧಾಂತ ಯಾವ ರೀತಿ ಪ್ರಬಲವಾಗಿ ಪ್ರತಿಪಾದಿತವಾಗಬಲ್ಲುದೋ ಅಂತಹ ಸಂದರ್ಭಗಳಲ್ಲಿ ಶ್ರೀವ್ಯಾಸರಾಜರು ಶ್ರೀಮಧ್ವಭಗವತ್ಪಾದರಿಗೆ, ಶ್ರೀಟೀಕಾಕೃತ್ಪಾದರಿಗೆ ಅಭಿಪ್ರೇತವಾಗುವಂತೆ ವಿಸ್ತರಿಸಿದ್ದಾರೆ. ನ್ಯಾಯಮತದ ಉದ್ಗ್ರಂಥಗಳಾದ ಉದಯನಾಚಾರ್ಯರ ಕುಸುಮಾಂಜಲಿ, ಗಂಗೇಶೋಪಾಧ್ಯಾಯರ ತತ್ವಚಿಂತಾಮಣೀ ಮೊದಲಾದ ಗ್ರಂಥಗಳಲ್ಲಿ ಪ್ರತಿಪಾದಿತವಾಗಿರುವ ವಿಚಾರಗಳನ್ನು ಪಕ್ಷಧರ ಮಿಶ್ರ, ಪ್ರಗಲ್ಭ, ಯಜ್ಞಪತಿ ಮೊದಲಾದವರ ಕೃತಿಗಳನ್ನೂ ಸತಾರ್ಕಿಕವಾಗಿ ನಿರಾಕರಣ ಮಾಡಿ ಶ್ರೀಮಧ್ವರ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ನ್ಯಾಯಶಾಸ್ತ್ರದೊಂದಿಗೆ ಮೀಮಾಂಸಾಶಾಸ್ತ್ರದ ಎರಡು ಪ್ರಭೇದಗಳಾದ ಭಾಟ್ಟ, ಪ್ರಾಭಾಕರ ಮತಗಳನ್ನು, ಸಾಂಖ್ಯಮತವನ್ನೂ ನಿರಾಕರಣಮಾಡಿದ ಶ್ರೀವ್ಯಾಸತೀರ್ಥರ ವೈದುಷ್ಯ ಶ್ರೀವೇದವ್ಯಾಸ,ಮಧ್ವ,ಜಯತೀರ್ಥರ ಅನುಪಮವಾದ ಅನುಗ್ರಹದ ಮೂರ್ತರೂಪವೆನ್ನಬಹುದು. ಶ್ರೀವ್ಯಾಸರಾಜರ ವಿದ್ವತ್ಪೂರ್ಣಕೃತಿಗೆ ಶ್ರೀವಿಜಯೀಂದ್ರ ತೀರ್ಥಗುರುಸಾರ್ವಭೌಮರು 'ಯುಕ್ತಿ ರತ್ನಾಕರ' ಎಂಬ ವ್ಯಾಖ್ಯಾನವನ್ನು ರಚಿಸಿದ್ದು ನಮ್ಮ ದುರ್ದೈವದಿಂದ ಇಂದು ಪೂರ್ಣಗ್ರಂಥ ಅನುಪಲಬ್ಧವಾಗಿದೆ. ಶ್ರೀರಾಘವೇಂದ್ರಗುರುಸಾರ್ವಭೌಮರು ಪ್ರಸಿದ್ಧವಾದ 'ನ್ಯಾಯದೀಪ' ವ್ಯಾಖ್ಯಾನವನ್ನು ರಚಿಸಿದ್ದಾರೆ.
ಮಂದಾರಮಂಜರಿ, ಭೇದೋಜ್ಜೀವನ ಹಾಗೂ ಕನ್ನಡ ಕೃತಿಗಳು : ಶ್ರೀಮಧ್ವಾಚಾರ್ಯರು ರಚಿಸಿದ ಪ್ರಕರಣಗ್ರಂಥಗಳಿಗೆ ಶ್ರೀಟೀಕಾಕೃತ್ಪಾದರು ರಚಿಸಿರುವ ಟೀಕಾಗ್ರಂಥಗಳಲ್ಲಿ ಪ್ರಪಂಚ ಮಿಥ್ಯತ್ವಾನುಮಾನ ಖಂಡನ,ಮಾಯಾವಾದಖಂಡನ, ಉಪಾಧಿಖಂಡನ ಹಾಗೂ ತತ್ತ್ವವಿವೇಕ ಈ ನಾಲ್ಕು ಕೃತಿಗಳ ಟೀಕಾಗ್ರಂಥಗಳಿಗೆ ಶ್ರೀವ್ಯಾಸರಾಜರು ಟಿಪ್ಪಣಿಗ್ರಂಥಗಳನ್ನು ರಚಿಸಿದ್ದು, ತಮ್ಮ ಅಸದೃಶವಾದ ವೈದುಷ್ಯದಿಂದ ತಮ್ಮ ಹಿಂದೆ ರಚಿತವಾಗಿದ್ದ ಟಿಪ್ಪಣಿಗ್ರಂಥಗಳನ್ನು ಆಚ್ಛಾದಿಸಿ ಟೀಕಾಗ್ರಂಥಗಳಿಗೆ ಅಗ್ರಮಾನ್ಯಟಿಪ್ಪಣಿಕಾರರಾಗಿ ಮಾನಿತರಾದ ಮಹಾನುಭಾವರಾಗಿದ್ದಾರೆ. ಶ್ರೀಜಯತೀರ್ಥರ ಕೃತಿಗಳಲ್ಲಿ ಅಸ್ಪಷ್ಟವಾಗಿರುವ ಅಂಶಗಳಿಗೆ ಮಾತ್ರ ಟಿಪ್ಪಣಿಯನ್ನು ರಚಿಸಿರುವುದಾಗಿ, ಎಲ್ಲಿ ಅತ್ಯವಶ್ಯವಾಗಿರುವುದೋ ಅಲ್ಲಿ ಮಾತ್ರ ಗ್ರಂಥಕ್ಕೆ ಪೂರಕವಾದ ಮತ್ತು ಗ್ರಂಥಾತಿರಿಕ್ತವಾದ ವಿಷಯಗಳನ್ನು ಪ್ರಸ್ತಾಪಮಾಡುವುದಾಗಿ ತಿಳಿಸಿರುವ ಶ್ರೀವ್ಯಾಸರಾಜರು ಮೂಲದ ಅರ್ಥವನ್ನು ಪುಷ್ಟೀಕರಿಸಲು ವಿದ್ವತ್ಪೂರ್ಣವಾದ ಪ್ರಯತ್ನವನ್ನು ಮಾಡುತ್ತಾರೆ. ಅತ್ಯಂತ ಕ್ಲಿಷ್ಟವಾದ ಭಾಷಾಶೈಲಿಯನ್ನು ಹೊಂದಿರುವ ಈ ಮಂದಾರಮಂಜರಿಗಳು ಶ್ರೀವ್ಯಾಸರಾಜರ ಹರಿತವಾದ ವಿವೇಚನೆ, ತರ್ಕಶಾಸ್ತ್ರದಲ್ಲಿನ ವೈದುಷ್ಯಕ್ಕೆ ದ್ಯೋತಕಗಳಾಗಿವೆ. 'ಭೇದೋಜ್ಜೀವನ' ಶ್ರೀವ್ಯಾಸರಾಜರು ರಚಿಸಿರುವ ಗ್ರಂಥಗಳಲ್ಲಿ ಕೊನೆಯ ಗ್ರಂಥವಾಗಿದ್ದು ಶ್ರೀಮಧ್ವಸಿದ್ಧಾಂತದ ಅತ್ಯಂತ ಪ್ರಮುಖ ಪ್ರಮೇಯಗಳಲ್ಲಿ ಒಂದಾದ ಭೇದವನ್ನು ಪ್ರಮಾಣತ್ರಯಗಳಿಂದ ಸ್ಪಷ್ಟವಾಗಿ ಪ್ರತಿಷ್ಠಾಪಿಸುವ ಉದ್ದೇಶವನ್ನು ಹೊಂದಿದೆ. ಶ್ರೀ ಶ್ರೀನಿವಾಸ ಸ್ತೋತ್ರ, ಶ್ರೀಕೃಷ್ಣ ಮಂಗಳಾಷ್ಟಕ, ವಾಯುಗದ್ಯಮ್, 'ಯಂತ್ರೋದ್ಧಾರಕ ಪ್ರಾಣದೇವರ ಸ್ತೋತ್ರ', ಲಘು ಶಿವಸ್ತುತಿ, ಶ್ರೀಬ್ರಹ್ಮಣ್ಯತೀರ್ಥ ಪಂಚರತ್ನಮಾಲಿಕಾ, ಶ್ರೀಶ್ರೀಪಾದರಾಜ ಪಂಚರತ್ನ ಮಾಲಿಕಾ' ಹೀಗೆ ಸ್ತೋತ್ರ ಸಾಹಿತ್ಯಕ್ಕೂ ಶ್ರೀವ್ಯಾಸರಾಜರ ಕೊಡುಗೆ ಅಪೂರ್ವ.
ಕರ್ನಾಟಕ ಸಂಗೀತ ಪರಂಪರೆಯಲ್ಲಿಯೂ ಪ್ರಾತ:ಸ್ಮರಣೀಯರಾಗಿ ಮಾನ್ಯರಾಗಿರುವ ಮಹನೀಯರು ಶ್ರೀವ್ಯಾಸರಾಜರು. ಸಂಗೀತವಿದ್ಯಾರಂಭಕ್ಕೆ ಶಾಸ್ತ್ರೀಯಮಾರ್ಗವನ್ನು ತೋರಿಸಿದ ಶ್ರೀವ್ಯಾಸರಾಜರು ಪ್ರಚಲಿತವಾಗಿದ್ದ ಲಕ್ಷಣಸಾಹಿತ್ಯಕ್ಕೆ ಲಕ್ಷ್ಯಗಳನ್ನೊದಗಿಸಿದರು. ಸಂಗೀತಶಾಸ್ತ್ರಕಾರನಾದ ತುಳಜಾಜಿ ಮಹಾರಾಜನು ತನ್ನ 'ಸಂಗೀತ ಸಾರಾಮೃತ'ವೆಂಬ ಕೃತಿಯಲ್ಲಿ ಶ್ರೀವ್ಯಾಸತೀರ್ಥರನ್ನು ಅತ್ಯಂತ ಗೌರವಪೂರ್ವಕವಾಗಿ 'ಸಂಗೀತವಿದ್ಯಾ ಸಂಪ್ರದಾಯ ಪ್ರವರ್ತಕ: ವಿದ್ಯಾಸಿಂಹಾಸನಾಧ್ಯಕ್ಷ:' ಎಂಬುದಾಗಿ ಸಂಬೋಧಿಸಿ ತನ್ನ ಕೃತಿಯಲ್ಲಿ ಶ್ರೀವ್ಯಾಸರಾಜರು ರಚಿಸಿದ ಸಾಹಿತ್ಯವನ್ನು ತನ್ನ ಲಕ್ಷಣಗ್ರಂಥದಲ್ಲಿ ಲಕ್ಷ್ಯವಾಗಿ ಸ್ವೀಕರಿಸಿರುವುದಾಗಿ ತಿಳಿಸಿದ್ದಾನೆ. ಜನಕ-ಜನ್ಯರಾಗಗಳ ವಿವೇಚನೆ, ರಾಗಾಲಾಪನೆಯಲ್ಲಿ ಒಂದು ಶಿಸ್ತನ್ನು ವ್ಯವಸ್ಥಿತರೂಪದಲ್ಲಿ ತಂದ ಶ್ರೀವ್ಯಾಸತೀರ್ಥರು ಸಂಗೀತ ಸಂಪ್ರದಾಯಕ್ಕೆ ಒಂದು ಶಿಸ್ತನ್ನು ಒದಗಿಸಿದರು ಎಂದರೆ ತಪ್ಪಾಗಲಾರದು.
ಶ್ರೀವ್ಯಾಸರಾಜರ ಕನ್ನಡ ಕೃತಿಗಳು- ಉಗಾಭೋಗ, ಸುಳಾದಿ, ಕೀರ್ತನೆ, ವೃತ್ತನಾಮ ಹೀಗೆ ಹಲವು ಪ್ರಕಾರಗಳನ್ನು ಬಳಸಿ, 'ಶ್ರೀಕೃಷ್ಣ, ಸಿರಿಕೃಷ್ಣ, ಕೃಷ್ಣ' ಅಂಕಿತದೊಡನೆ ಕನ್ನಡ ಭಾಷೆಯಲ್ಲಿ ಕೃತಿರಚನೆ ಮಾಡಿರುವ ಶ್ರೀವ್ಯಾಸತೀರ್ಥರ ಕೃತಿಗಳನ್ನು ಗಮನಿಸಿದ ಸಂದರ್ಭದಲ್ಲಿ ಅತ್ಯಂತ ಸರಳವಾದ ಶೈಲಿ, ಭಾವವ್ಯಂಜಕವಾದ ಅಭಿವ್ಯಕ್ತಿ, ರೂಪಕ ಅಲಂಕಾರದ ಅತ್ಯಂತ ಸಶಕ್ತ ಬಳಕೆ, ಅನುಪ್ರಾಸ, ಒಳಪ್ರಾಸ, ಆದ್ಯಂತಪ್ರಾಸಗಳು, ಕೆಲವೊಮ್ಮೆ ಆಡುಮಾತಿನ ಸೊಗಡು, ಕೆಲವೊಮ್ಮ ಸಂಸ್ಕೃತ ಭೂಯಿಷ್ಠವಾದ ನಡೆ, ಶ್ರೀಮಧ್ವಭಗವತ್ಪಾದರು ಪ್ರತಿಪಾದಿಸಿದ ತತ್ತ್ವಪ್ರತಿಪಾದನೆ, ಪ್ರತಿಪದದಲ್ಲಿಯೂ ಅಭಿವ್ಯಕ್ತಗೊಳ್ಳುವ ಹರಿಭಕ್ತಿ,ಆತ್ಮಶೋಧನೆ, ಮಧುರಭಾವ, ವಾತ್ಸಲ್ಯಭಾವ, ಭಗವದ್ಗೀತೆಯಂತಹ ತತ್ತ್ವಗರ್ಭಿತವಾದ ಕೃತಿಯ ಸಾರವನ್ನು ಸರಳವಾದ ಕನ್ನಡದಲ್ಲಿ ಪಡಿಮೂಡಿಸುವ ಮಹತ್ತರವಾದ ಸಾರಸ್ವತಸಿದ್ಧಿ ಶ್ರೀವ್ಯಾಸತೀರ್ಥರನ್ನು ಕನ್ನಡ ಸಾರಸ್ವತಲೋಕದ ಸಿದ್ಧಪುರುಷರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಿಸುತ್ತವೆ. ಭಾಗವತದ ಪ್ರಸಂಗಗಳನ್ನು ವರ್ಣಿಸುವಲ್ಲಿ ವ್ಯಾಸತೀರ್ಥರು ಮೈಮರೆಯುತ್ತಾರೆ. 'ಬಿಲ್ಲುಗಾರನಯ್ಯನ ಬೇಟ ನಗೆ ನಡೆ ನೋಟ ಇಲ್ಲದಂತಾಯಿತಲ್ಲ ತಲ್ಲಣಿಸುತಿದೆ ತಾಪ ಮೈಯೊಳು ಹೆಚ್ಚಿ" ಎಂದು ಗೋಪಿಕೆಯರು ಶ್ರೀಕೃಷ್ಣನ ವಿರಹದಿಂದ ಉಂಟಾದ ತಾಪವನ್ನು ವರ್ಣಿಸಿ ಕೃಷ್ಣನೊಡಗಿನ ತಮ್ಮ ಒಡನಾಟ 'ಕನಸಿನೊಳು ಕಂಡ ತೆರನಾಯಿತು'ಎಂದು ತಮ್ಮ ನೋವನ್ನು ಉದ್ಧವನಲ್ಲಿ ತೋಡಿಕೊಳ್ಳುತ್ತಾರೆ. 'ಬಹುಕಾಲ ನಿನ್ನಶ್ರವಣವೆಂಬ ಹೊನ್ನೋಲೆಯ ಬಹುಮಾನದಿಂದೆನ್ನ ಕಿವಿಯೊಳಿಟ್ಟು' 'ಗಾತ್ರವೆ ಮಂದಿರ ಹೃದಯವೇ ಮಂಟಪ, ನೇತ್ರವೇ ಮಹಾದೀಪ, ಹಸ್ತಚಾಮರವು ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ ಶಾಸ್ತ್ರಮಾತುಗಳೆಲ್ಲ ಮಂತ್ರಗಳು' ಈ ನುಡಿಗಳಲ್ಲಿ ರೂಪಕಾಲಂಕಾರ ಮಾಲಿಕಾರೂಪದಲ್ಲಿ ಬಿಂಬಮೂರ್ತಿಯನ್ನು ಅಲಂಕರಿಸಿದರೆ, 'ಜೇನಿನೊಳಗೆ ಬಿದ್ದ ನೊಣದಂತೆ ಸತಿಸುತ ಜನಪಾಶಬದ್ಧನಾದೆ ಮೀನು ಮಾಂಸದಾಸೆಗೆ ಹೋಗಿ ಸಿಕ್ಕಿದಂತೆ, ಏಣವು ಕಿಂಕಿಣಿಧ್ವನಿಗೆ ಮರುಳಾದಂತೆ' ಮೊದಲಾದ ನುಡಿಗಳಲ್ಲಿ ಉಪಮೆ ಮೈದಳೆಯುತ್ತದೆ. ಅಲಂಕಾರವನ್ನು ಸಹಜವಾಗಿ ಬಳಸುವಂತೆ . "ರಂಗಬಂದ ಬೃಂದಾವನದಲಿ ನಿಂದ ಕೊಳಲಿನ ಧ್ವನಿ ಬಲುಚೆಂದ' 'ಸೇರಿದೆನು ಸೇರಿದೆನು ಜಗದೀಶನ ನರಕಜನ್ಮದ ಭಯವು ಎನಗೆ ಇನಿತಿಲ್ಲ' ಹೀಗೆ ಸಹಜೋಕ್ತಿಯಲ್ಲಿಯೂ ಭಾವಾಭಿವ್ಯಕ್ತಗೊಳಿಸುವ ಶ್ರೀವ್ಯಾಸತೀರ್ಥರ ಸಿದ್ಧಿ ಅನ್ಯಾದೃಶ. ಶ್ರೀಕೃಷ್ಣನನ್ನು ಮಗುವಾಗಿ ಕಂಡು 'ಕಡಗೋಲ ತಾರೆನ್ನ ಚಿನ್ನವೆ ಮೊಸರೊಡೆದರೆ ಬೆಣ್ಣೆ ಬಾರದು ಮುದ್ದುರಂಗ', 'ಕಂದನಿಗೆ ಕಾಲಿಲ್ಲವಮ್ಮ ಪುಟ್ಟಿದಂದಿಂದ ಈ ಅಂಬೆಗಾಲು ಬಿಡದಮ್ಮ' ಎಂದು ಮನದಣಿಯೆ ಹಾಡುತ್ತಾರೆ. 'ಬಾಡಿದ ಹೂವು ಪಲ್ಲವಿಸಿತು ಹರಿನೋಡಲು ಜಗವು ಭುಲ್ಲವಿಸಿತು ಕೂಡಿದ ಮನದತಾಪಗಳೆಲ್ಲ ಎತ್ತಲೋಡಿತೋ ಹರಿಬಂದ ಭರದಿಂದ ನೋಡಾ'ಎಂದು ಸಂಭ್ರಮಿಸುವ ಶ್ರೀವ್ಯಾಸತೀರ್ಥರು "ಅಂತರಂಗದಲಿ ಹರಿಯ ಕಾಣದವ ಹುಟ್ಟುಗುರುಡನೊ", "ಎನ ಬಿಂಬಮೂರ್ತಿಯ ಪೂಜಿಪೆನೋ ನಾನು' ಮೊದಲಾದ ಕೃತಿಗಳು ಶ್ರೀವ್ಯಾಸರಾಜರ ಅಂತರಂಗದ ಸಾಧನೆಯನ್ನು ಬಿಂಬಿಸುತ್ತವೆ. 'ಕೊಳಲನೂದುವ ಚದುರನ್ಯಾರೆ', 'ತುಂಬಿತು ಬೆಳದಿಂಗಳು' ಮೊದಲಾದ ಕೃತಿಗಳು ಕನ್ನಡದಲ್ಲಿ ಭಾವಗೀತೆಯ ಉಗಮಕ್ಕೆ ನಿಶ್ಚಿತವಾಗಿ ಪ್ರಭಾವ ಬೀರಿರುವ ಕೃತಿಗಳು. 'ಮೇವ ಮರೆತವು ಗೋವುಗಳೆಲ್ಲ ಸಾವಧಾನದಿಂದ್ಹರಿದಳು ಯಮುನೆ" ವ್ಯಾಸರಾಜರು ವರಕವಿಯಾಗಿ ಬಿಡುತ್ತಾರೆ, ಶ್ರೀಕೃಷ್ಣನನ್ನು ಮಧುರ,ದಾಸ್ಯ, ಸಖ್ಯ ಎಲ್ಲಾ ಭಾವಗಳಿಂದ ಸ್ತುತಿಸುವ ವ್ಯಾಸತೀರ್ಥರು ವಿಶ್ವಗುರುಗಳಾದ ಮಧ್ವಾಚಾರ್ಯರಲ್ಲಿಯೂ ತಮ್ಮ ಅನನ್ಯವಾದ ಭಕ್ತಿಯನ್ನು ಮೆರೆಯುತ್ತಾರೆ. "ನೀನೇ ವರಗುರು ಮುಖ್ಯಪ್ರಾಣ', 'ಮಧ್ವಮುನಿಯು ಮೋಕ್ಷವೀವನು', 'ಸಾರಿರೋ ಡಂಗೂರವ ನಮ್ಮ ಭಾರತೀರಮಣ', 'ಜಯವಾಯು ಹನುಮಂತ ಜಯಭೀಮ ಬಲವಂತ' 'ಜಾಣ ನೀನಹುದೋ' ಅವತಾರತ್ರಯಗಳನ್ನು ಎಷ್ಟು ಸ್ತುತಿಸಿದರೂ ದಣಿವಿಲ್ಲ.
(recd.in whatsapp)
***

No comments:

Post a Comment