Tuesday, 1 January 2019

ಅಪ್ಪಾವರು ಮಹಿಮೆ 08 ಇಭರಾಮಪುರ appavaru mahime 08


|| ಶ್ರೀ ಇಭರಾಮಪುರಾಧೀಶಯ ನಮಃ ||
|| ಶ್ರೀ ಅಪ್ಪಾವರ ಚರಿತ್ರೆ ||

 ಸುರಪುರದ ಆನಂದ ದಾಸರು

ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರಿಗೆ ದೇಶದ ಎಲ್ಲೆಡೆ ಹಲವಾರು ಜನ ಶಿಷ್ಯರುಗಳಿದ್ದರು. ಅವರ ಪ್ರಮುಖ ಶಿಷ್ಯರಲ್ಲಿ ಕಮಲೇಶವಿಠಲಾಕಿಂತರಾದ ಸುರಪುರದ ಆನಂದದಾಸರು ಒಬ್ಬರಾಗಿದ್ದರು.

 ದಾಸರಿಗೆ ಸ್ವರೂಪ ಜ್ಞಾನ :
ಶ್ರೀ ರಾಯರ ವೃಂದಾವನ ಸನ್ನಿಧಾನದಲ್ಲಿ ನಾದಾನುಸಂಧಾನ ಸುಖದಲ್ಲಿ ಶ್ರೀ ಆನಂದದಾಸರು ತಮ್ಮನೇ ತಾವು ಮರೆತು ಭಾವ ಸಮಾಧಿಯಲ್ಲಿದ್ದಾಗ; ಅಲ್ಲಿಗೆ ಶ್ರೀ ಅಪ್ಪಾವರು ಆಗಮಿಸುತ್ತಾರೆ. ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ದಾಸರಿಗೆ ಗಾನ ಗಂಧರ್ವನ ಸ್ವರೂಪದ ಅರಿವನ್ನುಂಟು ಮಾಡುತ್ತಾರೆ.

 ಶ್ರೀ ಅಪ್ಪಾವರು : "ಹೌದೋ ಆನಂದಾ! ಗಾನ ಮಾಡುವುದು ನಿನ್ನ ಸ್ವರೂಪಕ್ಕೆ ಬಂದದ್ದು; ಇಲ್ಲೂ ಗಂಧರ್ವ! ಲೋಕದ ಗಂಧರ್ವನೇ ನೀನು" ಎಂದು ಬೆನ್ನು ಚಪ್ಪರಿಸಿದಾಗಲೇ ಬಹಿರ್ಮುಖರಾದ ದಾಸರನ್ನು ಶ್ರೀ ಅಪ್ಪಾವರು ಪುನಃ " ಈಗ ಆಯಿತೇ ನಿನ್ನ ಸ್ವರೂಪ ಜ್ಞಾನ! " ಎಂದರು.

 ಶ್ರೀ ಆನಂದದಾಸರು :ಎಚ್ಚೆತ್ತು, ತಮ್ಮ ಸ್ವರೂಪವನ್ನು ತೋರಿಸಿದ ಅಪ್ಪಾವರ ಕಾಲಿಗೆ ಬಿದ್ದವರೇ ಆನಂದಾಶ್ರುಗಳಿಂದ ತನ್ನನ್ನು ಉದ್ಧರಿಸಬೇಕೆಂದು ಪ್ರಾರ್ಥಿಸಿಕೊಂಡರು.

 ಶ್ರೀ ಅಪ್ಪಾವರು :ನಿನ್ನ ಸ್ವರೂಪವೇ ಎಂಥಾದ್ದೆಂದರೆ ನಿನ್ನ ಭಾಗ್ಯ ಎಲ್ಲರ ಪಾಲಿಗಿಲ್ಲ. ಎಲ್ಲರ ಶ್ರಮ ನಿನಗಿಲ್ಲ. ನಿನಗೆ ಇದೇ ದಾರಿಯಲ್ಲೇ ಕ್ಷಿಪ್ರದಲ್ಲೇ ಭಗವದ್ದರ್ಶನವಾಗುವುದೆಂದರು.

ಶ್ರೀ ಆನಂದ ದಾಸರು ಉತ್ತರಿಸದೇ ಮನದಲ್ಲೇ ಶ್ರೀ ಅಪ್ಪಾವರ ಮಾತನ್ನು ಪುನಃ ಪುನಃ ಮನನ ಮಾಡಿಕೊಂಡರು. ಏಕಾಂತವನ್ನು ಬಯಸಿದವರೇ ಕೆಲವು ಕಾಲ ಏಕಾಂತದಲ್ಲಿರಲು ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯನ್ನು ಸೇರಿ ಅಲ್ಲಿ ತಮ್ಮ ಇಷ್ಟದೇವತೆ; ಕುಲದೇವತೆ; ಗುರೂಪದಿಷ್ಟ ದೇವತೆಯಾದ ಶ್ರೀ ನೃಸಿಂಹ ಮಂತ್ರೋಪಾಸನೆಯನ್ನು ಮಾಡಿದರು. ನೆನಸಿದಂತೆ ರೂಪ ದರ್ಶನ; ಗುಣ ಕ್ರಿಯಾನುಭಾವಗಳು ಶ್ರೀ ಆನಂದದಾಸರಿಗೆ ಆದವು.

ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ಶ್ರೀ ಅಪ್ಪಾವರ ವಿಶೇಷ ಅನುಗ್ರಹಕ್ಕೆ ಪಾತ್ರರಾದ ಶ್ರೀ ಆನಂದದಾಸರು ತಮ್ಮ ಜೀವನದಲ್ಲಿ ಅಪರೋಕ್ಷವನ್ನು ಹೊಂದಿದರು.

ಆಗ ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಅಪ್ಪಾವರ, ಹಾಗು ಶ್ರೀ ರಾಯರ ದಯಾಳುತ್ವವನ್ನು ಸ್ಮರಿಸುತ್ತಾ ಅವರ ಕಾಲದಲ್ಲಿ ಶ್ರೀ ರಾಯರ ಅಂತರಂಗ ಭಕ್ತರು ಹಾಗೂ ಅಪರೋಕ್ಷ ಜ್ಞಾನಿಗಳನು ಗುರುತಿಸಿ ಅವರ ಸ್ಮರಣೆ ಮಾಡುತ್ತಾರೆ.

ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।

ನಾರಾಯಣ ನಾಮ ಪಾರಾಯಣರ । ಪಾ ।
ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।

ಅಲವಬೋಧ ಸತ್ಕುಲ ದೀಪರೆನಿಸಿದ ।
ಹುಲುಗಿಯ ನರಸಪ್ಪಾಚಾರ್ಯರ ।
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ ।
ನಿರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।
ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।
 ಯಳಮೇಲಿ ಹಯಗ್ರೀವಾಚಾರ್ಯರ ।
ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
 ಬಲವಂತ ಯೋಗಿ ನಾರಾಯಣಾರ್ಯರ ।। 

ಧರಣಿದೇವರಿಗೆ ನಿರುತಾನ್ನವನೀವ ।
ವರ ಹರಿಹರ ಭೀಮಾಚಾರ್ಯರ ।
ಹರಿದಾಸರಿಗೆ ಮಂದಿರವಾದ ।
 ಇಭರಾಂಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।
ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।
ಸರ ಶ್ರೀ ರಂಗದ ರಾಮಾಚಾರ್ಯರ ।
ಸುರಪುರ ಶ್ರೀ ನರಹರಿಯ ಪಾದಾಂಬುಜ ।
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।।

ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।
ಮಾಡಿದ ಆರಂಭದಿಂ ।
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।
ದಾರಾಧಿಸುವರಾನಂದದಿ ।।
ಸಾರ ಭಕ್ತರ ಪಾದಾರವಿಂದಕೆ । ನಮ ।
ಸ್ಕಾರ ಮಾಡಿರೋ ಸಾಷ್ಟಾಂಗದಿ ।
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।
ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।।

ಶ್ರೀ ಆನಂದದಾಸರ ಅಭಿವೃದ್ಧಿಯನ್ನು ನೋಡಿ ಸಂತೋಷ ಪಟ್ಟು ಸುರಪುರದ
ಮಹಾರಾಜನು ಕನಕಾಭಿಷೇಕ ಮಾಡಿದನು. ವನಪರ್ತಿ, ಗದ್ವಾಲ, ಕೊಲ್ಹಾಪುರ ಮತ್ತು ಮೈಸೂರು ಮಹಾರಾಜಾಸ್ಥಾನಗಳು ಸನ್ಮಾನಿಸಿದವು,  ರಾಜ-ಮಹಾರಾಜರ, ಪಂಡಿತ-ಪಾಮರರ,  ದಾಸರ ಸಂಗೀತ ಹಾಗು ಪ್ರವಚನಗಳು ಮಾನ್ಯ ಸಾಮಾನ್ಯರೆಲ್ಲರ ಮನಸೂರೆಗೊಂಡಿದ್ದವು.
ಅವರೇಲ್ಲ ಶ್ರೀ ಆನಂದದಾಸರಿಗೆ ಭಕ್ತಿ ಶ್ರದ್ದೆಗಳಿಂದ ಗೌರವ ಸಮರ್ಪಣೆ ಮಾಡಿದರು.


" ಸಂಗೀತ ಸರಸ್ವತೀ "

ಹಿಂದೂಸ್ತಾನೀ, ಕರ್ನಾಟಕೀ ಸಂಗೀತ ಪದ್ಧತಿಗಳ ಮಧುರ ಸಂಗಮವು, ಅವರ ಕೀರ್ತನೆಗಳನ್ನು ಹೃದಯಂಗಮವಾಗಿಸುತ್ತಿದ್ದವು. ಭರತ ನಾಟ್ಯಕ್ಕೆ ಅನುಕೂಲವಾದ ಅನೇಕ ಭಾವ್ಯಾಭಿವ್ಯಂಜಕ ಮಟ್ಟು ಗಟ್ಟುಗಳನ್ನು ಅವರು ತಮ್ಮ ವಿವಿಧ ಜಾವಡಿಗಳಲ್ಲಿ ಸಂಗ್ರಹಿಸಿದ್ದರು.

" ಮೈಸೂರು ಸಂಸ್ಥಾನದಲ್ಲಿ ಕನಕಾಭಿಷೇಕ "

ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಆನಂದದಾಸರನ್ನು ಅರಮನೆಗೆ ರಾಜ ಮರ್ಯಾದೆಯಿಂದ ಆಹ್ವಾನಿಸಿ ಆಸ್ಥಾನದಲ್ಲಿ ಅವರಿಂದ ಹರಿಕಥೆಗಳನ್ನು ಮಾಡಿಸಿ ಪರಮಾನಂದ ಪಟ್ಟು ಶ್ರೀ ದಾಸರ ಜ್ಞಾನ - ಭಕ್ತಿ - ಗಾನಗಳಿಗೆ ಮನಸೋತು ಶ್ರೀ ಆನಂದದಾಸರಿಗೆ ಸ್ವತಃ ಮಹಾರಾಜರೇ ಕನಕಾಭಿಷೇಕ ಮಾಡಿದರು.

ಕೊಲ್ಹಾಪುರ ಮಹಾರಾಜನಿಂದ ಸನ್ಮಾನಿತರಾಗಿ ನೇರವಾಗಿ ಜಗನ್ಮಾತೆಯಾದ ಮಹಾಲಕ್ಷ್ಮೀಯ ದರ್ಶನಾಕಾಂಕ್ಷಿಗಳಾಗಿ ಅಮ್ಮನ ಪರಮಾನುಗ್ರದಿಂದ ಆದ ಈ ರಾಜ ಸನ್ಮಾನಗಳನ್ನು ಕಂಡು ಹರ್ಷ ಪುಳಕಿತರಾಗಿ ಶ್ರೀ ಮಹಾಲಕ್ಷ್ಮಿಯ ಮುಂಭಾಗದಲ್ಲಿ ನಿಂತು..

ರಾಗ : ಅರಭಿ ತಾಳ : ಆದಿ
ರಮಾ ಸಮುದ್ರನ ಕುಮಾರಿ ನಿನ್ನಯ ।
ಸಮಾನರ್ಯಾರಮ್ಮಾ ।। ಪಲ್ಲವಿ ।।
ಸುಮಾಸ್ತ್ರನಯ್ಯನೆದೆ ಸತತ । ಬ ।
ಹುಮಾನದಲಿ ಮೆರೆವ ಮಹಾ ಮಹಿಮಳೆ ।। ಅ. ಪ ।।
ಕನಕ ಮಂಡಿತ ಕುಟಿಲಾಳಕ ಜಾಲೇ । ಶ್ರೀ ಚಂ ।
ದನ ಕುಂಕುಮ ಕಸ್ತೂರಿ ತಿಲಕಾಂಕಿತ ಫಾಲೇ ।
ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ । ಚಂಪಕ ।
ನನೆ ನಾಸಾಗ್ರದೊಳೊಗುವ ಮೌಕ್ತಿಕ ಲೋಲೇ ।। ಚರಣ ।।
ಮಿನುಗುವ ಮಾಣಿಕಮಣಿಧರ । ಪುಟದೊ ।
ಳಿನಿವರ ವಜ್ರದಿ ಕಣಿಗಳ ರಾಜಿ । ದ ।
ಶನಯುತ ಸ್ಮೇರಾನನ ಶುಭ ಕಾಂತಿಯಿಂ ।
ವನಜ ಭವನ ಮನೆಗೆ ಮಂಗಳಗರೆವ ।। ಚರಣ ।।
ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೆ । ಒಪ್ಪುವ ।
ರರಿರಾಜನ ಕರಡಿರುವಿಕೆ ಕರಗಳ ಲೀಲೇ ।
ಶರಣಾಗತ ಜನ ಪರಿಪಾಲನರತ ಶೀಲೇ । ಗಂಡನ ।
ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ ।। ಚರಣ ।।
ಕರುಣಿಸಮ್ಮ ತಮ ಕರುಣಕಟಾಕ್ಷದ ।
ಸಿರಿಯ ಬೆಳಗಿನೊಳ್ ಪರಿಚಯಿಸುವ । ಸುಜ ।
ನಾರಾ ಚರಣಾಂಬುಜ ಪರಿಮಳದೊಳು । ಮನ ।
ವೆರಗಿಸುವುದು ಸೌಂದರ್ಯ ಶಿಕಾಮಣಿ ।। ಚರಣ ।।
ರಮಣೀಯ ವಿಮಲಾ ಕಮಲಾಯತದಳ ನೇತ್ರೇ । ಚಂಪಕ ।
ಸುಮದ ಸುವರ್ಣ ಪರಿಮಳದ ಸುಂದರ ಗಾತ್ರೇ ।
ಕಮಲಭವೇಂದ್ರಾದ್ಯಮರ ಮುನಿಗಣ ಸ್ತೋತ್ರೇ । ಶ್ರೀ ।
ಕಮಲೇಶವಿಠ್ಠಲರಾಯನ ಕರುಣಕೆ ಪಾತ್ರೇ ।। ಚರಣ ।।


 ದಾಸರ ಶಿಷ್ಯ ಸಂಪತ್ತು :

ಶ್ರೀ ಮಡಕಶಿರದ ಭೀಮದಾಸರು - ಭೀಮೇಶವಿಠ್ಠಲ
ಶ್ರೀ ಕಮಲಾಪತಿದಾಸರು - ಕಮಲಾಪತಿವಿಠ್ಠಲ
ಶ್ರೀ ಜೋಶಿ ವೆಂಕಪ್ಪಾಚಾರ್ಯರು - ವೆಂಕಟೇಶವಿಠ್ಠಲ
ಶ್ರೀ ಹರಪನಹಳ್ಳಿ ರಾಮಾಚಾರ್ಯರು - ಇಂದಿರೇಶ
ಶ್ರೀ ಗುಂಡಾಚಾರ್ಯರು
ಶ್ರೀ ಬೇಲೂರು ವೆಂಕಟ ಸುಬ್ಬದಾಸರು
ಶ್ರೀ ಸುರಪುರದ ಪ್ರೇಮದಾಸರು
ಸಾಧ್ವೀ ತಂಗಮ್ಮನವರು ( ಇವರು ಶ್ರೀ  ಆನಂದ ದಾಸರ ಮಗಳು )

ಶ್ರೀ ಅಪ್ಪಾವರವರಿಂದ ಅನುಗೃಹೀತರು

೧. ಶ್ರೀ ಗಂಧರ್ವಾಂಶ ಸುರಪುರದ ಆನಂದದಾಸರು
೨. ಶ್ರೀ ಆಹ್ಲಾದಾಂಶ ಗುರು ಜಗನ್ನಾಥದಾಸರು
೩. ವಿದ್ವಾನ್ ಶ್ರೀ ಯಲಿಮೇಲಿ ಹಯಗ್ರೀವಾಚಾರ್ಯರು
೪. ವಿದ್ವಾನ್ ಶ್ರೀ ಯಲಿಮೇಲಿ ವಿಠಲಾಚಾರ್ಯರು
೫. ಶ್ರೀ ವಿಜಯರಾಮಚಂದ್ರದಾಸರು
೬. ಶ್ರೀ ಜಯೇಶವಿಠಲರು
೭. ಶ್ರೀ ಕಾರ್ಪರ ನರಹರಿ ದಾಸರು
೮. ಶ್ರೀ ಮುದ್ದು ಭೀಮಾಚಾರ್ಯರು
೯. ಶ್ರೀ ಯೋಗಿ ನಾರಾಯಣಾಚಾರ್ಯರು


ಶ್ರೀ ಅಪ್ಪಾವರು ಶ್ರೀ ಪಂಚಮುಖಿ ಪ್ರಾಣದೇವರನ್ನು ಪ್ರತಿನಿತ್ಯ ಪೂಜಿಸುತ್ತಾ ,ಪಂಚಮುಖನ ಪಂಚ ರೂಪಗಳನ್ನು ತಮ್ಮ ಮನೋ ಪಂಕಜದಲ್ಲಿ ಸದಾ ಧ್ಯಾನಿಸುತ್ತಾ ಅಪರೋಕ್ಷ ಜ್ಞಾನವನ್ನು ಹೊಂದಿ ತಮ್ಮಲ್ಲಿ ಶರಣು ಬಂದ ಜನರಿಗೆ ಉದ್ಧಾರ ಮಾಡಿದ್ದಾರೆ.


ಇದನಾ ಬೇಡಿದವನಲ್ಲಾ ।
ಬುಧರಂತರ್ಯಾಮಿ ಲಕುಮೀ ನಲ್ಲಾ      ।। ಪಲ್ಲವಿ ।।

ಪಾಪ ಕಾರ್ಯದ ಪಾಪ ವ್ಯಾಪಿಸಿ ದೇಹದಿ ।
ಲೋಪಗೈಸೋದು ಸತ್ಕರ್ಮ ।
ದೀಪ ನೀನಾಗಿರೆ ಉಪದೇಶಿಸೀ ಭವ ।
ಕೂಪದಿಂದೆತ್ತೆಂದು ಬೇಡಿದೆನಲ್ಲದೆ  ।।

ವಿಷಯದೊಳ್ಸಂಚರಿಪ ದೋಷಕಾರಿ ಮನ ।
ಆಶೆಯೊಳು ಪೊಕ್ಕು ।
ನಾಶ ಗೈದೆನ್ನ ವಿಶೇಷ ಸಾಧನಗಳ । ನೀ ।
ಪೋಷಿಸು ಎಂದು ಬೇಡಿದನಲ್ಲದೆ       ।।

ಸುಧೆ ತಂದ ವಿಜಯರಾಮಚಂದ್ರವಿಠಲ । ನಿನ ।
ಗೆದಿರ್ಯಾರೋ ಪೇಳುವರು ।
ಮುದದಿಂದ ಕೃಷ್ಣಾರ್ಯರೊಳು ಬೇಡಿದೆನಲ್ಲದೆ ।। ಚರಣ ।।

 ಗದುಗಿನ ಯೋಗಿ ನಾರಾಯಣಾಚಾರ್ಯರು...

ಭಾರತೀಶ ಪದದ್ವಂದ್ವಂ ಸಾರಸ ಭ್ರಮರಾಯಿತಮ್ ।
ಸುರವತ್ಕಾಂತಿ ಸಂಪನ್ನಂ ಕೃಷ್ಣಾಚಾರ್ಯ ಗುರುಂಭಜೇ ।।

ಭಾರತೀ ಪತಿಯಾದ ಶ್ರೀ ಮುಖ್ಯಪ್ರಾಣನ ಪಾದ ಕಮಲದಲ್ಲಿ ದುಂಬಿಯಂತಿರುವ; ದೇವತೆಗಳಂತೆ ಪ್ರಕಾಶಮಾನರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ!!

ಸ್ಮರಿಸುವ ನರನೆ ಧನ್ಯ
 ಇಭರಾಮಪುರಾಧೀಶ
***********

| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||

ಗುರು ಮಹಿಮಾ : ಅಪಮೃತ್ಯು ಪರಿಹಾರ

ಶ್ರೀಅಪ್ಪಾವರು ತಮಿಳುನಾಡು ಸಂಚರ ಅನ್ವಯ ಈರೋಡ ಸಮೀಪದ ಭವಾನಿ ಎಂಬ ಸ್ಥಳಕ್ಕೆ ದಯಮಾಡಿಸಿದರು. ಅಲ್ಲಿಯ ಶಿಷರೊಬ್ಬರಾದ ಭುಜಂಗ ರಾಯರ ಮನೆಯಲ್ಲಿ ಪ್ರಾಣದೇವರ ಪೂಜೆ  ನೆರವೇರಿಸಿದರು. 

ಭುಜಂಗ ರಾಯರಿಗೆ ಏಕಮಾತ್ರ ಸುಪುತ್ರ. ಅವನಿಗೆ ಸ್ವಲ್ಪ ಸಮಯದ ಹಿಂದೆ ವಿವಾಹವಾಗಿ ನಿಷೇಕ ಮಹೋತ್ಸವ ಏರ್ಪಾಟು ನಡೆದಿತ್ತು. ನೂತನ ದಂಪತಿಗೆ ಆಶೀರ್ವಾದ ಮಾಡಲು  ಭುಜಂಗರಾಯರ ಕುಟುಂಬ ಶ್ರೀ ಅಪ್ಪಾವರನ್ನು ಪ್ರಾಥನೇ ಮಾಡುತ್ತಾರೆ. ಅಪ್ಪಾವರ ಇದಕ್ಕೆ ಕೂಡಲೇ ಸಮತಿಸಲಿಲ್ಲ ಆದರೆ ಕುಟುಂಬದವರು ಅತೀವ ವಿನಯದಿಂದ ಪುನಃ ಪುನಃ ಬೇಡಿಕೊಂಡಾಗ  ಅಪ್ಪಾವರು ಸಮತಿಸುತ್ತಾರೆ.

ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಅತೀವ ಶೋಕದ ವಾತಾವರಣ.ಮದುಮಗ ಕುಸಿದು ಬಿದ್ದು ಮೃತಪಟ್ಟಿದ್ದ. ದಿಕ್ಕು ದೆಸೆ ತೋಚದಂತಹ ಸಮಯ ದುಃಖ ಭರಿತರಾಗಿದ ಕುಟುಂಬದವರು ಅಪ್ಪಾವರನ್ನು ಮೊರೆಹೋಗುತ್ತಾರೆ. ಸೊಸೆಯನ್ನು ಮುಂದೆಮಾಡಿಕೊಂಡು ಅಪ್ಪಾವರ ಸಂದರ್ಶನ ಮಾಡಿದಾಗ "ಧೀರ್ಘ ಸುಮಂಗಲೀ ಭವ" ಎಂದು ಆಶೀರ್ವಾದ ಮಾಡಿದರು. ಆಶೀರ್ವಾದ ಕೇಳಿದ ಮೇಲೆ ಇನ್ನು ದುಃಖ. ಎಲ್ಲ ಬಲ್ಲ ಅಪ್ಪಾವರು ಆಕೆಯನ್ನು ಸಮಾಧಾನಮಾಡಿ ನಿನ್ನ ಮಾಂಗಲ್ಯ ಭದ್ರವಾಗಿದೆಯೆಂದು ಅಭಯ ನೀಡಿದರು.

ಅಪ್ಪಾವರು ತಮ್ಮ ಉಪಾಸ್ಯಮೂರ್ತಿಯಾದ ಪಂಚಮುಖಿ ಮುಖ್ಯಪ್ರಾಣದೇವರಿಗೆ ವಿಶೇಷ ಪ್ರಾರ್ಥನೆಮಾಡಿ ಭುಜಂಗರಾಯರ ಏಕಮಾತ್ರ ಸುಪುತ್ರನ  ಅಪಮೃತ್ಯು ಪರಿಹಾರ ಮಾಡುತ್ತಾರೆ. 

ಭೃತ್ಯ ಜನರಿಗೆ ಬಂದಿರುವ ಅಪ
ಮೃತ್ಯುಗಳ ಪರಿಹರಿಸಿ ಗುರುಗಳು
ಮೃತಿಕಾ  ಪಾದೋದಕಂಗಳನ್ನಿತ್ತು ಸಲಹಿದನೋ |
ವ್ಯತ್ಯಯವು ಇನಿತಿಲ್ಲ ಇದರೊಳು ಆ
ತಥ್ಯ ಮಾತುಗಳಿಲ್ಲಿ ಈತನ
ಕೃತ್ಯ ಗೋಚರಿಸುವುದೆ ಭುದರಿಗೆ ಸತ್ಯ ಪೇಳುವೇನು||
- ಶ್ರೀಕೃಷ್ಣಾರ್ಯ ಕಥಾಮೃತಸಾರ ಮಹಿಮಾ ಸಂಧಿ 

ತನುವು ಭಾರವು ಎನಗೆ ಮನಕೊಂದು ಬೇಕಿಲ್ಲ ।
ದಿನದಿನದ ವೃತ್ತಿಗಳು ನಿನ್ನ ಆಜ್ಞಾ ॥
ಕನಸಿಲಾದರು ಒಮ್ಮೆ ಅನ್ನನಾ ಕಾಣದಿರೆ ।
ಪೂರ್ಣಕಾರುಣ್ಯ ಮಾಡೆನ್ನ ತಂದೆ ॥
ಜಯ ಜಯತು ಕೃಷ್ಣರ್ಯ । ಜಯ ಜಯತು ಸಜ್ಜನ ಅಭಯ ।ಜಯತು ಕೈವಲ್ಯದನೆ ಜಯತು ಗುರುವೆ ॥ 
॥ ಜಯತು ಜಯತು ॥
ಶ್ರೀ ಇಭರಾಮಪುರಾಧೀಶ

(ವಿಷ್ಣು ತೀರ್ಥಾಚಾರ್ ಇಭರಾಮಪುರ)
*********

ಶ್ರೀ ಅಪ್ಪಾವರ ಮಹಿಮೆ ;ಅಭಿಮಂತ್ರಿತ ಅಂಗಾರದ 

ಒಂದು ಸಲ ಸಂಚಾರ ಸಮಯದಲ್ಲಿ  ಶ್ರೀ ಅಪ್ಪಾವರು (ಶ್ರೀ ಕೃಷ್ಣಾರ್ಯರು) ಸುರಪುರದಲ್ಲಿ ಇದ್ದರು.ಅಲ್ಲಿ ಒಬ್ಬರು ಶ್ರೀ ಪಾಲ್ಮೂರು ವಾಮನಾಚಾರ್ಯ ಎಂಬುವರು ಅಪ್ಪಾವರ ಭಕ್ತರು.
ಅಪ್ಪಾವರು ಅಲ್ಲಿ ಇದ್ದ ಸಮಯದಲ್ಲಿ ಆ ವಾಮನಾಚಾರ್ಯರ ಪತ್ನಿ ಗರ್ಭಿಣಿ ಆಗಿದ್ದು ಪ್ರಸವ ಕಾಲ ಸಮೀಪಿಸಿತ್ತು.
ಸಕಾಲದಲ್ಲಿ ಆ ಹೆಣ್ಣು ಮಗಳು ಗಂಡು ಮಗುವಿಗೆ ಜನ್ಮ ಇತ್ತಳು.
ಆದರೇನು?? ಪ್ರಸವ ಸಮಯದಲ್ಲಿ ಆ ಬಾಣಂತಿಗೆ ಎರಡು ಕಣ್ಣು ಗಳು ಇಂಗಿಹೋಯಿತು. ಎಷ್ಟೋ ಉಪಚಾರಗಳಾದವು.
ಆ ಕಾಲದಲ್ಲಿ ಇರುವ ಎಲ್ಲಾ ವೈದ್ಯಕೀಯ ಚಿಕಿತ್ಸೆ ಗಳು ಆದವು. ಅನೇಕ ವೈದ್ಯರ ಪ್ರಯತ್ನ ಮಾಡಿದರು ಸಹ  ಕುರುಡು ಆಗಿದ್ದ ಆ ತಾಯಿಯ ಕಣ್ಣು ಬರಲಿಲ್ಲ.

ಆ ನಂತರ ವಾಮನಾಚಾರ್ಯರು ಅಪ್ಪಾವರ ಬಳಿ ಬಂದು ತಮಗೆ ಬಂದು ಒದಗಿದ ಕಷ್ಟದ ಪರಿಸ್ಥಿತಿ ಹೇಳಿಕೊಂಡರು.
ತಕ್ಷಣ ಅಪ್ಪಾವರು ಹೇಳಿದರು ವೃದ್ಧಿ ಮುಗಿದ ಮೇಲೆ ಬಂದು ನಮಗೆ ಕಾಣಬೇಕು ಅಂತ  ಆದರೇನು ಮಾಡುವದು!! ಆ ಆಚಾರ್ಯರಿಗೆ ಯಾವುದೊ ಕೆಲಸದ ನಿಮಿತ್ತ ಹೈದರಾಬಾದ್ ಹೋಗುವ ಅವಶ್ಯಕತೆ ಇರುತ್ತದೆ. ಆ ಕೆಲಸ ಮುಗಿಸಿಕೊಂಡು ೧೫ದಿನಗಳ ನಂತರ ಊರಿಗೆ ಬಂದು ಶ್ರೀ ಅಪ್ಪಾವರ ಬಳಿ ಬಂದು ವಿಜ್ಞಾಪನೆ ಮಾಡಿಕೊಳ್ಳಲು 

ಶ್ರೀ ಅಪ್ಪಾವರು ಹೇಳುತ್ತಾರೆ
ವಾಮನಾಚಾರ್ಯರೇ!! ಸಮಯವು ಮೀರಿಹೋಯಿತು.
ನಾವು ತಿಳಿಸಿದ  ಹಾಗೆ ವೃದ್ದಿ ತೀರಿದ ನಂತರ ಹೇಳಿದ ಸಮಯಕ್ಕೆ ನೀವು ಬರಲಿಲ್ಲ.ಚಿಂತಿಸಬೇಡಿ ನಿಮ್ಮ ಹೆಂಡತಿಗೆ ಒಂದೇ ಕಣ್ಣು ಬರುತ್ತದೆ. ಮತ್ತೊಂದು ಬರುವುದಿಲ್ಲ ಇಗೋ ಈ ಅಭಿಮಂತ್ರಿತವಾದ,ಪೂಜೆ ಸಮಯದಲ್ಲಿ ಧೂಪಾರತಿ ಮಾಡಿದ ಶ್ರೀ ವಿಷ್ಣು ವಿಗೆ ಸಮರ್ಪಿತವಾದ ಅಂಗಾರವನ್ನು ತೆಗೆದುಕೊಂಡು ದಿನಂಪ್ರತಿ ಈ ಅಂಗಾರವನ್ನು ಸಾಣೆಕಲ್ಲಿನ ಮೇಲೆ ತೇಯ್ದು ಅವರ ಕಣ್ಣಿಗೆ ಹಚ್ಚುತ್ತಾ ಬನ್ನಿ. ನಮ್ಮ ಉಪಾಸ್ಯ ಮೂರ್ತಿ ಯಾದ ಶ್ರೀ ಪಂಚಮುಖಿ ಪ್ರಾಣದೇವರು ಅವರಿಗೆ ನೇತ್ರವನ್ನು ಅನುಗ್ರಹ ಮಾಡುತ್ತಾರೆ.  ಚಿಂತಿಸಬೇಡಿ ಅಂತ ಹೇಳಿ ಅಂಗಾರವನ್ನು ಕೊಡುತ್ತಾರೆ.

 ಶ್ರೀಅಪ್ಪಾವರ ಮಾತಿನಂತೆ ಅದೇ ರೀತಿ ಚಿಕಿತ್ಸೆ ಮಾಡಲು ಬರೇ ಮೂರು ದಿನದಲ್ಲಿ ಆ ಹೆಣ್ಣು ಮಗಳಿಗೆ ಬಲಗಣ್ಣು  ಕಾಣಲು ಆರಂಭವಾಯಿತು. ಅದೊಂದೇ ಕಣ್ಣು ಅವರು ಜೀವಿತಕಾಲದವರೆಗೆ ಇದ್ದು ಶ್ರೀ ಅಪ್ಪಾವರ ಚರಣ ಭಜನೆಯನ್ನು ಮಾಡುತ್ತಾ ಕಾಲ ಕಳೆದರು. ಮತ್ತು ಸದ್ವಂಶಾಭಿವೃದ್ದಿಯನ್ನು ಪಡೆದರು.

ಉದಯಕಾಲದಿ ಇಂತಹ ಪರಮ ಭಾಗವತರ ಸ್ಮರಣೆ
ನಮ್ಮ ಜೀವನ ಉದ್ದಾರವಾಗುವದರಲ್ಲಿ ಸಂಶಯವಿಲ್ಲ.

ಚಿರಕಾಲ ಸೇವಿಪ ಪರಮ ವಂದ್ಯರಿಗೆಲ್ಲ
ವರ ಪುತ್ರ ಸೌಖ್ಯ ವ ಕರುಣಿಸುವರು ಸತ್ಯ
ಸ್ಮರಿಸುವ ನರನೇ ಧನ್ಯ

ಶ್ರೀ ಕೃಷ್ಣಾರ್ಯರ
*********

|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||
|| ಶ್ರೀ ವಿಜಯರಾಮಚಂದ್ರ ಗುರುಭ್ಯೋ ನಮಃ ||
|| ಶ್ರೀ ಜಯೇಶವಿಠಲ ಗುರುಭ್ಯೋ ನಮಃ ||

ಗುರು ಮಹಿಮೆ :  ರಾಜದರ್ಬಾರ್ ನಲ್ಲಿ ನಡೆದ ಘಟನೆ

ಇಂದುಮೌಳಿ ಪದಾಬ್ಜಾಳಿಂ | 
ಮಂದ ಸಜ್ಜನ ತಾರಕಂ | 
ಇಂದ್ರಕಾಮ ಸಮಾಭಾಸಂ | 
ಸುಂದರಾಂಗ ಸಮನ್ವಿತಂ ||
ವಿಜಯೋಪದೋಪೇತಂ |
ಅಜಜಾತ ಸುತಾಖ್ಯಾಜಂ | 
ಶ್ರೀ ಜಯೇಶೇತಿ ದಾಸಾಖ್ಯಂ | 
ಭಜೇ ವೈರಾಗ್ಯಶಾಲಿನಂ ||

ಶ್ರೀ ಶೇಷಾದ್ರಿ ಐಯ್ಯರ್  ಮೈಸೂರ್ ಸಂಸ್ಥಾನದ  ದಿವನಾಗಿದರು. ಇವರು ಶ್ರೀ ಜಯೇಶವಿಠಲ ದಾಸರ ಪರಮಾಪ್ತರಾಗಿದರು. ಶ್ರೀದಾಸರು ಲೌಕಿಕದಲ್ಲಿ ಸರ್ಕಾರದ ಉತ್ತನ ಹುದ್ದೆಯಲ್ಲಿ ಇದ್ದರು ತಮ್ಮ ನಿತ್ಯಧರ್ಮಚಾರಣೆಯಲ್ಲಿ ಕಿಂಚಿತ್ತೂ ವ್ಯತಸ್ಯ ಮಾಡುತ್ತಿರಲಿಲ್ಲ. ಅನೇಕರು ದಾಸರಿಗೆ ಧರ್ಮಾನಿಷ್ಠ ಪರೀಕ್ಷಿಸಲು ಹೋಗಿ ವಿಫಲಯತ್ನ ಮಾಡಿದರು.

ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ತಮ್ಮ ಎಲ್ಲ ಮಂತ್ರಿಗಳು ಅಧಿಕಾರಿಗಳಿಗೆ ದರ್ಬಾರ ಆನಂತರದಲ್ಲಿ ಔತಣ ಕೂಟ ವ್ಯವಸ್ಥೆಯನ್ನು ಮಾಡಿದಿರುತ್ತಾರೆ. ಶ್ರೀ ಶೇಷಾದ್ರಿ ಐಯ್ಯರ್ ಅರಮನೆಯ ದಿವನಾರಾದ ಕಾರಣ ಅವರ ಮುಂದಾಳತ್ವದಲ್ಲಿ ಎಲ್ಲಾ ವ್ಯವಸ್ಥೆಯ ನೋಡಿಕೊಂಡು ಎಲ್ಲಾ ಗಣ್ಯಾತಿಗಣ್ಯರನ್ನು ಅತಿಥಿಗಳ ಬರಮಾಡಿಕೊಳ್ಳಲಾಯಿತು. ದಾಸರಿಗೂ ವಿಶೇಷವಾದ ಆಹ್ವಾನವಿತ್ತು.ಆದರೆ ದಾಸರು ತಮ್ಮ ಅನುಷ್ಟಾನಕೆ ಭಂಗವಾಗುವಂತಹ ಯಾವದೇ ಕಾರ್ಯಕ್ರಮಕೆ ಹೋಗುತ್ತಿರಲಿಲ್ಲ.

ಶ್ರೀದಾಸರು ಯಾವುದೇ ಔತಣಕೆ ಬರುವುದಿಲ್ಲದ ಕಾರಣ ದರ್ಬಾರ್ ಮುಗಿಯುವ ಕ್ಷಣದಲ್ಲಿ ದಿವಾನರು ಜೋರಾಗಿ ರಾಜರಿಗೆ ಕೇಳುವಹಾಗೆ ದಾಸರನ್ನು ನೋಡುತ್ತಾ ಔತಣಕೆ ಬರದೆ ರಾಜರಿಗೆ ಅವಮರ್ಯಾದೆ ಮಾಡುತಿದಿರಿ ಒಡೆಯರಿಂದ ನಿಮಗೆ ಎರಡುಹೊತ್ತು ಅನ್ನ ದೊರೆಯುತ್ತದೆ ಅಂತ ಜೋರಾಗಿ ಹೇಳಿದರು. ದಾಸರು ಅದಕ್ಕೆ "ನನಗೆ ಅನ್ನ  ದೊರೆಯುತ್ತಿರುವುದು ಜಗದೊಡೆಯನಿಂದ" ಅಂತ ದಿವಾನರು ಪ್ರತಿಕ್ರಿಯೆ ನೀಡಿ ಸುಮ್ಮನಾಗುತ್ತಾರೆ.  ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು ಈ ಸಂಭಾಷಣೆ ಕಿವಿಗೆ ಬಿದ್ದು ಶ್ರೀದಾಸರ ನೀಡಿದ ಪ್ರತಿಕ್ರಿಯೆಗೆ , ಸ್ವನಿಷ್ಠೆಯನ್ನು ಮೆಚ್ಚಿ ಗೌರವ ಸಮರ್ಪಣೆ ಮಾಡಿ ತೆರಳುತ್ತಾರೆ.

ವಿಷ್ಣುತೀರ್ಥಾಚಾರ್ ಇಭರಾಮಪುರ

ಶ್ರೀ ಇಭರಾಮಪುರಾಧೀಶ
************


|ಶ್ರೀ ಅಪ್ಪಾವರ ಚರಿತ್ರೆ|
✍ಅನೇಕ ಲೋಕಗಳ ಜ್ಞಾನ ಉಳ್ಳ ಲೋಕೋತ್ತರ ಗುರು..
🙏🙏
ಶ್ರೀ ಮಹಾಭಾರತದ ಸಭಾಪರ್ವದ ೬ನೇ ಅಧ್ಯಾಯದಲ್ಲಿ ಶ್ರೀಧರ್ಮರಾಜರಿಗು ಮತ್ತು ಮಹರ್ಷಿ ನಾರದರಿಗು ಒಂದು ಸಂವಾದ ನಡೆಯುತ್ತದೆ. 
ಧರ್ಮರಾಜ ನಾರದರನ್ನು ಕೇಳುತ್ತಾನೆ.
ನೀವು ಸಕಲ ಲೋಕಗಳನ್ನು ಸಂಚಾರ ಮಾಡುವಂತಹ ಮಹಾನುಭಾವರು.
ಈ ತರಹದ ಮಯ ಸಭೆಯನ್ನು ಎಲ್ಲಿಯಾದರು ಯಾವ ಲೋಕದಲ್ಲಿ ಆದರು ಕಂಡಿದ್ದೀರಾ??
ಎಂದು..
ಅದಕ್ಕೆ ನಾರದರು
 ಭೂಲೋಕದಲ್ಲಿ ಈ ತರಹದ ಸಭಾ ಭವನ ಎಲ್ಲಿ ಇಲ್ಲ.ಅದರಂತೆ ಈ ರೀತಿ ಇರುವ ಸಭೆ ಗಳನ್ನು ದೇವಲೋಕದಲ್ಲಿ ನೋಡಿದ್ದೇನೆ ಎಂದು ಹೇಳಿ ಬ್ರಹ್ಮ ಸಭೆ ಇಂದ್ರಸಭೆ,ಯಮ ಸಭೆ,ಮತ್ತು ಕುಬೇರ ಸಭೆ ಮೊದಲಾದ ಎಲ್ಲಾ ಸಭೆಗಳ ವೃತ್ತಾಂತ ಅದರ ವೈಭವ, ಅಲ್ಲಿ ಇರುವ ಜನರು,ಸಭೆಯ ಸುತ್ತಳತೆ,ಮತ್ತು ಅದರ ಸೌಂದರ್ಯ ವನ್ನು ಬಹುವಾಗಿ ವರ್ಣನೆ ಮಾಡುತ್ತಾರೆ. 
ಇದರಿಂದ ತಿಳಿದು ಬರುವದೇನೆಂದರೆ 
ನಾರದರಿಗೆ ಸಕಲ ಲೋಕಗಳ ಜ್ಞಾನ ಅಷ್ಟು ಸ್ಫುಟವಾಗಿ ತಿಳಿದಿತ್ತು ಎಂದು ನಮಗೆ ತಿಳಿದುಬರುತ್ತದೆ.
ಇದನ್ನು 
ಶ್ರೀ ಅಪ್ಪಾವರ ಚರಿತ್ರೆಯಲ್ಲಿ ಹೇಗೆ ಅನ್ವಯ ಮಾಡುವದು ಎಂದರೆ
ನಾರದ ಮಹರ್ಷಿಗಳಿಂದ ಅನುಗ್ರಹ ಪಡೆದವರು ಶ್ರೀ ಪ್ರಹ್ಲಾದ ರಾಜರು.ಅವರೇ ಮುಂದೆ ಶ್ರೀ ವ್ಯಾಸರಾಯರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳು ಆಗಿ ಅವತಾರ ಮಾಡಿ ಸಕಲ ಸಜ್ಜನರನ್ನು ಉದ್ದಾರ ಮಾಡಿದ್ದಾರೆ ಮತ್ತು ಇಂದಿಗೆ ಸಹ ಮಾಡುತ್ತಾ ಇದ್ದಾರೆ.
ಅಂತಹ ಶ್ರೀ ರಾಘವೇಂದ್ರ ಸ್ವಾಮಿಗಳ  ಪರಮಾನುಗ್ರಹ ಪಾತ್ರರಾದ ನಮ್ಮ ಶ್ರೀ ಅಪ್ಪಾವರ ಚರಿತ್ರೆ ಯಲ್ಲಿ
ಸಹ ಇಂತಹುದೇ ಘಟನೆ ನೋಡಬಹುದು. 
ಒಮ್ಮೆ ಒಬ್ಬ ಆಚಾರ್ಯರು ಶ್ರೀ ಅಪ್ಪಾವರ ಹತ್ತಿರ ಬಂದು 
ಬಲಿ ಚಕ್ರವರ್ತಿಯ ಸಭೆ ಹೇಗಿದೆ?? ಎಂದು ಕೇಳಿದಾಗ
ಅವಾಗ ಶ್ರೀಅಪ್ಪಾವರು 
ಬಲಿ ಚಕ್ರವರ್ತಿಯ ಅರಮನೆಯ ವೈಶಿಷ್ಟ್ಯ. ಅಲ್ಲಿ ಶ್ರೀಪ್ರಹ್ಲಾದ ರಾಜರು ಬಲಿಗೆ ಮಾಡುತ್ತಾ ಇರುವ ಶ್ರೀ ಮದ್ ಭಾಗವತದ ಉಪದೇಶ.ಭಗವಂತ ಅವನ ಮನೆಯನ್ನು ಬಾಗಿಲು ಕಾಯುತ್ತಾ ಇರುವ ರೂಪದ ವರ್ಣನೆ ಮತ್ತು ಅಲ್ಲಿ ಇರುವ ಜನರು
ಮತ್ತು 
ಹಿಂದೆ ರಾವಣನು ಬಲಿಯ ಪುರಕ್ಕೆ ಬಂದಾಗ ಮೂರು ಕೋಟಿ ಮುಖ್ಯಪ್ರಾಣದೇವರ ರೂಪ ಅವನನ್ನು ಹಿಮ್ಮೆಟ್ಟಿಸಿದ ಬಗ್ಗೆ
ಎಲ್ಲಾ ವನ್ನು ವಿವರಿಸಲು ಆಚಾರ್ಯರು ದಿಗ್ಭ್ರಾಂತರಾದರಂತೆ.
ಹೀಗೆ ಸತ್ಯಲೋಕದಿಂದ ಆರಂಭಿಸಿ ಪಾತಾಳ ಲೋಕದ ವರೆಗಿನ  ಸ್ಪುಟವಾದ ಜ್ಞಾನ ಶ್ರೀ ಅಪ್ಪಾವರಿಗೆ ಇತ್ತು ಎಂಬುದನ್ನು ಇಲ್ಲಿ ತಿಳಿಯಬಹುದು.
 ಇದನ್ನು ಅವರ ಶಿಷ್ಯರಾದ ಶ್ರೀ ಯೋಗಿ ನಾರಾಯಣ ಆಚಾರ್ಯರು ತಮ್ಮ ಕೃತಿಯಲ್ಲಿ ಅದನ್ನು ಶ್ಲೋಕ ರೂಪದಲ್ಲಿ ವರ್ಣನೆ ಮಾಡಿದ್ದಾರೆ.
ಪ್ರಾತಃ ಕಾಲ ಇಂತಹ ಭಗವಂತನ ಭಕ್ತರ ಸ್ಮರಣೆ ನಮ್ಮ ಜೀವನ ಧನ್ಯ..
ಇಂತಹ ಮಹಾನುಭಾವರಾದ ಶ್ರೀ ಅಪ್ಪಾವರು ತಮ್ಮ ಉಪಾಸ್ಯ ಮೂರ್ತಿಯ ಅನುಗ್ರಹ ಬಲದಿಂದ ಈ ದೇಶಕ್ಕೆ ಬಂದ  ರೋಗವನ್ನು ಹೊಡೆದೋಡಿಸಲಿ.ಸಕಲರಿಗು ಮಂಗಳವನ್ನು ಉಂಟು ಮಾಡಲಿ ಎಂದು ಅವರ ಬಳಿ ಕೇಳುತ್ತಾ ಮತ್ತು ಅವರ ಅಂತರ್ಯಾಮಿಯಾದ ಶ್ರೀ ಕೃಷ್ಣ ನಿಗೆ ಸಹ ಪ್ರಾರ್ಥನೆ ಮಾಡುತ್ತಾ...
🙏ಶ್ರೀ ಕೃಷ್ಣಾರ್ಪಣಮಸ್ತು🙏
ಸಾನುರಾಗದಿ ಇವರ ಮಹಿಮೆಯ|
ಗಾನ ಮಾಡುತ ಕುಣಿದು ಹಿಗ್ಗಲು|
ಶ್ರೀನಿವಾಸನ ಪೂಜೆ ಸುರನದಿ ಸ್ನಾನವೆನಿಸುವದು|
🙏ಶ್ರೀ ಕೃಷ್ಣಾಚಾರ್ಯ ಗುರುಂ ಭಜೇ🙏

(ಸಂಗ್ರಹ:ಇಭರಾಮಪುರ ಶ್ರೀ ಅಪ್ಪಾವರ ಚರಿತ್ರೆ ಪುಸ್ತಕ).
***************



|ಶ್ರೀ ಇಭರಾಮಪುರ ಅಪ್ಪಾವರ ಮಹಿಮೆ|
✍ಒಮ್ಮೆ ಶ್ರೀ ಅಪ್ಪಾವರು ಸಂಚಾರತ್ವೇನ  ಆದವಾನಿಗೆ ಬರುತ್ತಾರೆ. ಅಲ್ಲಿ ಒಬ್ಬ ಸದ್ಗೃಹಸ್ಥನ ಮನೆಯಲ್ಲಿ ಇಳಿದುಕೊಳ್ಳುತ್ತಾರೆ.ಆದರೆ ಅವರ ಮನೆಯಲ್ಲಿ ಸ್ನಾನದ ಮನೆಯು ಅನುಕೂಲವಾಗಿರಲಿಲ್ಲ. ಆದ್ದರಿಂದ ಅವರು ಮನೆಯ ಮುಂಭಾಗದಲ್ಲಿ ಇರುವ ಒಳ ಅಂಗಳದಲ್ಲಿ ಸ್ನಾನಕ್ಕಾಗಿ ವ್ಯವಸ್ಥೆ ಮಾಡಲಾಯಿತು.
ಶ್ರೀ ಅಪ್ಪಾವರು ಸ್ನಾನ ಮಾಡಿದೊಡನೆ ಆ ಪ್ರದೇಶವೆಲ್ಲ ವಿಚಿತ್ರ ವಾದ ಪುನುಗು, ಕಸ್ತೂರಿ,ಸುವಾಸನೆ ಆ ಪ್ರದೇಶವೆಲ್ಲ ವ್ಯಾಪಿಸಿತು.
ಅಲ್ಲಿ ಇದ್ದ ಜನರೆಲ್ಲಾ ಇದನ್ನು ಕಂಡು ಬೆರಗಾದರು.ನಿತ್ಯವು ಶ್ರೀಅಪ್ಪಾವರಿಗೆ ಅಲ್ಲಿ ಇದ್ದ ಜನರೆಲ್ಲಾ ತಮ್ಮ ಮನೆಗೆ ಕರೆದು ಆತಿಥ್ಯಮಾಡುವರು..ಹೀಗೆ 
ಶ್ರೀಅಪ್ಪಾವರು ಯಾರ ಮನೆಗೆ ಹೋದರು ಸಹ ನಾನಾ ಬಗೆಯ ಪರಿಮಳದ ಅನುಭವ ಆ ಮನೆಯವರಿಗೆ ಹಾಗು ಸುತ್ತಲಿನ ಜನರಿಗೆ.
ಇದನ್ನು ಕಂಡು ಅವರಿಗೆ ಪರಿಮಳದ ಆಚಾರ್ಯರು ಎಂದೇ ಪ್ರಸಿದ್ಧಿ ಆಯಿತು.
ಕೆಲವರು ಕುಹಕಿಗಳು ಇವರು ಯಾವುದೊ ಮಂತ್ರಶಕ್ತಿ ಯನ್ನು ವಶಪಡಿಸಿಕೊಂಡಿದ್ದಾರೆ,ಅಥವಾ ತಂತ್ರ ವಿದ್ಯೆಯನ್ನು ಕಲಿತಿದ್ದಾರೆ ಅಂತ ಅಪ ಪ್ರಚಾರ ಮಾಡಲು ಶುರು ಮಾಡಿದರು.
ನಿಂದಕರಿಗೇನು ಕೊರತೆ ಇರಲಿಲ್ಲ ಅವರ ಕಾಲದಲ್ಲಿ.
ಮತ್ತೆ ಕೆಲವು ಸಜ್ಜನರು ಇವರ್ಯಾರೋ ದೊಡ್ಡವರು ,ಮತ್ತು ಅವರ ಸ್ವರೂಪ ಶಕ್ತಿಯ ಇರಬೇಕು ಎಂದು ಕೊಂಡಾಡಿದರು.
ಇದನ್ನು ತಿಳಿದ ಶ್ರೀಅಪ್ಪಾವರು
"ಇದು ಮತ್ತೇನು ಅಲ್ಲ.
ನಾವು ನಿತ್ಯ ವು ಪುನಃ ಪುನಃ ಶ್ರೀ ಮನ್ಯಾಯ ಸುಧಾ ಪರಿಮಳ ಗ್ರಂಥಗಳು ಪಾರಾಯಣ ಮಾಡಿದುದರ ಫಲವೆಂದು" ನುಡಿದರು.
ಆದರು ಜನಗಳಿಗೆ ಇದರ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಾ ಇರುವದು ಬಿಡಲಿಲ್ಲ.
ಮುಂದೆ ಸಂಚಾರ ಮಾಡುತ್ತಾ ಹೊಸಪೇಟೆ ಬಳಿ ಇರುವ ನಾರಾಯಣ ದೇವರ ಕೆರೆ ಎಂಬ ಗ್ರಾಮಕ್ಕೆ ದಯಮಾಡಿಸಿದರು.ಅಲ್ಲಿ ವಕೀಲರು ಆದಂತಹ ಧಾರವಾಡದ ಶ್ರೀ ಕೃಷ್ಣ ರಾಯರ ಮನೆಯಲ್ಲಿ ವಾಸ್ತವ್ಯವನ್ನು ಮಾಡಿದರು.
ಅಲ್ಲಿಯು ಸಹ  ನಿಂದಕರ ಸಂಖ್ಯೆ ಕಡಿಮೆ ಇರಲಿಲ್ಲ.
ಇದನ್ನು ಕಂಡ ಮನೆಯ ಯಜಮಾನ ಶ್ರೀಅಪ್ಪಾವರ ಬಳಿ ಬಂದು ಜನರಾಡಿಕೊಳ್ಳುವ ವ್ಯಂಗ್ಯ ಭರಿತ ಮಾತುಗಳನ್ನು ಅಪ್ಪಾವರಿಗೆ ಹೇಳಿದಾಗ
ಅದಕ್ಕೆ ಶ್ರೀಅಪ್ಪಾವರು
"ಜನರಾಡಿಕೊಂಡರೆ ನಮಗೇನು ಹಾನಿಯಿಲ್ಲ...
ಆದರೆ ಆಸ್ತಿಕರಾದವರು ಆಡಿಕೊಂಡು ಈ ಪಾಪಕ್ಕೆ ಗುರಿಯಾಗಬಾರದು..
ಏನು ಮಾಡಿದರೆ ನಿಮಗೆ ಈ ವಿಷಯದಲ್ಲಿ ನಂಬಿಕೆ ಬರಲು ಸಾಧ್ಯ?? ಅಂತ ಕೇಳಿದಾಗ
ಅಲ್ಲಿ ಇದ್ದವರ ಅಭಿಪ್ರಾಯ ದಂತೆ ತಮ್ಮ ಸ್ನಾನದ ಸಮಯದಲ್ಲಿ ಬರುವ ಸುಗಂಧ ಭರಿತ ಸುವಾಸನೆ ಉತ್ಪನ್ನ ವಾಗುವದಷ್ಟೇ..
ಅದನ್ನು ತಕ್ಷಣ ದಲ್ಲಿ ಉಪಸಂಹಾರ ಮಾಡಿದರೆ ನಮಗೆ ನಂಬಿಕೆ ಯಾಗುವದೆಂಬ ಅಭಿಪ್ರಾಯ ತಿಳಿದು ಅದೇ ರೀತಿಯಲ್ಲಿ ಸುಗಂಧ ವಾಸನೆಯನ್ನು ಅಡಗಿಸಿದರು. 
ತಕ್ಷಣ ಎಲ್ಲಾ ರು ಭಯಭೀತರಾಗಿ 
ಸ್ವಾಮಿ!! ನಾವೆಲ್ಲರೂ ನಿಮ್ಮ ಮಕ್ಕಳು. ನೀವು ನಮಗೆ ಅಪ್ಪಾವರು. ತಂದೆಯು ಮಕ್ಕಳ ತಪ್ಪನ್ನು ಕ್ಷಮಿಸುವ ಹಾಗೇ ನಮ್ಮ ತಪ್ಪು ಕ್ಷಮಿಸಿ. ಅಂತಕೇಳಿಕೊಳ್ಳುವರು.
ದಯಾ ಸಮುದ್ರ ರಾದ ಶ್ರೀಅಪ್ಪಾವರು ಅವರ ತಪ್ಪನ್ನು ಮನ್ನಿಸಿ ಅವರಿಗೆಲ್ಲ ಆಶೀರ್ವಾದ ಮಾಡಿ ಮುಂದೆ ಸಂಚಾರ ಬೆಳೆಸುತ್ತಾರೆ.
ಒಂದೇ,ಎರಡೆ  ಎಷ್ಟು ಇವರ ಬಗ್ಗೆ ಹೇಳಿದರು ಕಡಿಮೆಯಾಗಿ ಕಾಣುವ ಇಂತಹ ಮಹಿಮಾತೀತರನ್ನು ನೆನೆಯುವದು ನನ್ನ ಭಾಗ್ಯ...
🙏ಶ್ರೀ ಕೃಷ್ಣಾರ್ಪಣಮಸ್ತು🙏
 ಕರುಣಾಸಾಗರರ ನೋಡಿದೆಯಾ|.| 
ಹರಿಭಕ್ತರಾಗ್ರಣಿಯ ಗುಣಗಳ| ಅರಿಯದವರು ಇವರನಾಡಿಕೊಂಡರೆ|
ಕೊರತೆಯಾಗುವದೇನು ಇಭರಾಮಪುರ| ನಿಲಯ ಕೃಷ್ಣಾರ್ಯರ||.||ಅ.ಪ||
🙏🙏🙏🙏🙏🙏
************

|ಶ್ರೀ ಕೃಷ್ಣಾಚಾರ್ಯ ಗುರುಭ್ಯೋ ನಮಃ|
✍ಒಂದು ಸಲ ಸಂಚಾರ ಸಮಯದಲ್ಲಿ  ಶ್ರೀ ಅಪ್ಪಾವರು (ಶ್ರೀ ಕೃಷ್ಣಾರ್ಯರು) ಸುರಪುರದಲ್ಲಿ ಇದ್ದರು..ಅಲ್ಲಿ ಒಬ್ಬರು ಶ್ರೀ ಪಾಲ್ಮೂರು ವಾಮನಾಚಾರ್ಯ ಎಂಬುವರು ಶ್ರೀ ಅಪ್ಪಾವರ ಭಕ್ತರು.
ಅಪ್ಪಾವರು ಅಲ್ಲಿ ಇದ್ದ ಸಮಯದಲ್ಲಿ ಆ ವಾಮನಾಚಾರ್ಯರ ಪತ್ನಿ ಗರ್ಭಿಣಿ ಆಗಿದ್ದು ಪ್ರಸವ ಕಾಲ ಸಮೀಪಿಸಿತ್ತು.
ಸಕಾಲದಲ್ಲಿ ಆ ಹೆಣ್ಣು ಮಗಳು ಗಂಡು ಮಗುವಿಗೆ ಜನ್ಮ ಇತ್ತಳು.
ಆದರೇನು??
ಪ್ರಸವ ಸಮಯದಲ್ಲಿ ಆ ಬಾಣಂತಿಗೆ ಎರಡು ಕಣ್ಣು ಗಳು ಇಂಗಿಹೋಯಿತು.
ಎಷ್ಟೋ ಉಪಚಾರಗಳಾದವು.
ಆ ಕಾಲದಲ್ಲಿ ಇರುವ ಎಲ್ಲಾ ವೈದ್ಯಕೀಯ ಚಿಕಿತ್ಸೆ ಗಳು ಆದವು. ಅನೇಕ ವೈದ್ಯರ ಪ್ರಯತ್ನ ಮಾಡಿದರು ಸಹ  ಕುರುಡು ಆಗಿದ್ದ ಆ ತಾಯಿಯ ಕಣ್ಣು ಬರಲಿಲ್ಲ.
ಆ ನಂತರ ವಾಮನಾಚಾರ್ಯರು ಶ್ರೀಅಪ್ಪಾವರ ಬಳಿ ಬಂದು ತಮಗೆ  ಒದಗಿದ ಕಷ್ಟದ ಪರಿಸ್ಥಿತಿ ಹೇಳಿಕೊಂಡರು.
ತಕ್ಷಣ ಶ್ರೀಅಪ್ಪಾವರು ಹೇಳಿದರು.
"ವೃದ್ಧಿ ಮುಗಿದ ಮೇಲೆ ಬಂದು ನಮಗೆ ಕಾಣಬೇಕು" ಅಂತ..
ಆದರೇನು ಮಾಡುವದು!! ಆ ಆಚಾರ್ಯರಿಗೆ ಯಾವುದೊ ಕೆಲಸದ ನಿಮಿತ್ತ ಹೈದರಾಬಾದ್ ಹೋಗುವ ಅವಶ್ಯಕತೆ ಇರುತ್ತದೆ.
ಆ ಕೆಲಸ ಮುಗಿಸಿಕೊಂಡು ೧೫ದಿನಗಳ ನಂತರ ಊರಿಗೆ ಬಂದು ಶ್ರೀ ಅಪ್ಪಾವರ ಬಳಿ ಬಂದು ವಿಜ್ಞಾಪನೆ ಮಾಡಿಕೊಳ್ಳಲು 
ಶ್ರೀ ಅಪ್ಪಾವರು ಹೇಳುತ್ತಾರೆ
ವಾಮನಾಚಾರ್ಯರೇ!ಸಮಯವು ಮೀರಿ ಹೋಯಿತು.ನಾವು ತಿಳಿಸಿದ  ಹಾಗೆ ವೃದ್ದಿ ತೀರಿದ ನಂತರ ಹೇಳಿದ ಸಮಯಕ್ಕೆ ನೀವು ಬರಲಿಲ್ಲ.ಚಿಂತಿಸಬೇಡಿ.
ನಿಮ್ಮ ಹೆಂಡತಿಗೆ ಒಂದೇ ಕಣ್ಣು ಬರುತ್ತದೆ. ಮತ್ತೊಂದು ಬರುವುದಿಲ್ಲ.ಇಗೋ! ಈ ಅಭಿಮಂತ್ರಿತವಾದ,ಪೂಜೆಯ ಸಮಯದಲ್ಲಿ ಧೂಪಾರತಿ ಮಾಡಿದ ಶ್ರೀ ವಿಷ್ಣುವಿಗೆ ಸಮರ್ಪಿತವಾದ ಅಂಗಾರವನ್ನು ತೆಗೆದುಕೊಂಡು ದಿನಂಪ್ರತಿ ಈ ಅಂಗಾರವನ್ನು ಸಾಣೆಕಲ್ಲಿನ ಮೇಲೆ ತೇಯ್ದು ಅವರ ಕಣ್ಣಿಗೆ ಹಚ್ಚುತ್ತಾ ಬನ್ನಿ.
ನಮ್ಮ ಉಪಾಸ್ಯ ಮೂರ್ತಿ ಯಾದ ಶ್ರೀ ಪಂಚಮುಖಿ ಪ್ರಾಣದೇವರು ಅವರಿಗೆ ನೇತ್ರವನ್ನು ಅನುಗ್ರಹ ಮಾಡುತ್ತಾರೆ.. 
ಚಿಂತಿಸಬೇಡಿ! ಅಂತ ಹೇಳಿ ಅಂಗಾರವನ್ನು ಕೊಡುತ್ತಾರೆ.
 ಶ್ರೀಅಪ್ಪಾವರ ಮಾತಿನಂತೆ ಅದೇ ರೀತಿ ಚಿಕಿತ್ಸೆ ಮಾಡಲು ಬರೇ ಮೂರು ದಿನದಲ್ಲಿ ಆ ಹೆಣ್ಣು ಮಗಳಿಗೆ ಬಲಗಣ್ಣು  ಕಾಣಲು ಆರಂಭವಾಯಿತು..
ಅದೊಂದೇ ಕಣ್ಣು ಅವರು ಜೀವಿತಕಾಲದವರೆಗೆ ಇದ್ದು ಶ್ರೀ ಅಪ್ಪಾವರ ಚರಣ ಭಜನೆಯನ್ನು ಮಾಡುತ್ತಾ ಕಾಲ ಕಳೆದರು.
ಮತ್ತು ಸದ್ವಂಶಾಭಿವೃದ್ದಿಯನ್ನು ಪಡೆದರು.
ನಮಗೆ ಸಹ  ಭಗವಂತನ ಮತ್ತು ಅವನ ಭಕ್ತರ ಚರಿತ್ರೆ ಬಗ್ಗೆ ತಿಳಿದುಕೊಳ್ಳಲು ಜ್ಞಾನದ ಕಣ್ಣು ಅವರೇ ಕೊಡಲಿ ಎಂದು ಅವರಿಗೆ ಕೇಳಿಕೊಳ್ಳುತ್ತಾ..
ಉದಯಕಾಲದಿ ಇಂತಹ ಪರಮ ಭಾಗವತರ ಸ್ಮರಣೆ
ನಮ್ಮ ಜೀವನ ಉದ್ದಾರವಾಗುವದರಲ್ಲಿ ಸಂಶಯವಿಲ್ಲ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಚಿರಕಾಲ ಸೇವಿಪ ಪರಮ ವಂದ್ಯರಿಗೆಲ್ಲ|
ವರ ಪುತ್ರ ಸೌಖ್ಯ ವ ಕರುಣಿಸುವರು ಸತ್ಯ|
..
ಸ್ಮರಿಸುವ ನರನೇ ಧನ್ಯ|
ಶ್ರೀ ಕೃಷ್ಣಾರ್ಯರ|

🙏ಅ.ವಿಜಯವಿಠ್ಠಲ🙏
************

||ಶ್ರೀ ಇಭರಾಮಪುರ ಅಪ್ಪಾವರ ಕೃಪಾ||
||ಕರುಣಾ ಸಾಗರರ ನೋಡಿದೆಯಾ||
✍ಮೂರು ವರುಷಗಳ ಹಿಂದೆ ಶ್ರೀ ಅಪ್ಪಾವರ ಕಟ್ಟಿ ಯಲ್ಲಿ ಹೊಸದಾಗಿ ಅಡಿಗೆ ಮನೆ ಮತ್ತು ದೊಡ್ಡ ಹಾಲ್ ನ ಕಟ್ಟಡ ನಿರ್ಮಾಣ ಕಾರ್ಯ ನಡೆದಿತ್ತು..
ನೆಲಕ್ಕೆ ಹಾಕಲು ಪಾಲಿಶ್ ಬಂಡೆ ಗಳು ಬಂದಿದ್ದವು..
ಕೆಲಸ ನಡೆದಿತ್ತು..ಸಾಯಂಕಾಲ ವಾದಾಗ ಕೆಲಸದವರು ಮತ್ತು ಅರ್ಚಕರು ಮನೆಗೆ ಹೋದಾಗ  ಯಾರು ಇಲ್ಲದ ಸಮಯದಲ್ಲಿ  ಒಬ್ಬರು ಪಾಲಿಶ್ ಬಂಡೆಯನ್ನು ತೆಗೆದುಕೊಂಡು ಮನೆಗೆ ಹೋಗಲು... 
ಆ ದಿನ ರಾತ್ರಿ ಅವರಿಗೆ  ಆರೋಗ್ಯ ಸಮಸ್ಯೆ ಉಂಟಾಗಿ ಮರುದಿನ ಬೆಳಿಗ್ಗೆ ಬಂದು ಅಪ್ಪಾವರ ಕಟ್ಟಿಯಲ್ಲಿ  ಬಂಡೆ ಇಟ್ಟು ಹೋದರು.
ಹೀಗೆ ಜ್ಞಾನಿಗಳ ವಸ್ತುಗಳ ಮೇಲೆ ಕಣ್ಣು ಹಾಕಿದವರಿಗೆ ಒಳಿತಾಗದು ಎಂಬುದು ಇಂದಿಗೂ ಸಹ ನೋಡುತ್ತಾ ಇದ್ದೇವೆ.
ಮಠ,ದೇವಾಲಯ, ಮತ್ತುಭಗವಂತನ ಭಕ್ತರ, ವಸ್ತುಗಳನ್ನು ಅಪಹರಿಸಿ ದವರಿಗೆ ಒಳಿತಾಗದು.ದೋಷವು ಬರುವದು.
ಇಲ್ಲಿ ಶ್ರೀ ಅಪ್ಪಾವರ ಕಾರುಣ್ಯವನ್ನು ಹೇಳಬೇಕು.
ತೆಗೆದುಕೊಂಡು ಹೋದವನಿಗೆ  ತಪ್ಪು ಮಾಡಿದ ಮಗುವಿಗೆ  ತಂದೆ ಹೊಡೆದು ಬುದ್ದಿ ಕಲಿಸುವಂತೆ ಆ ವ್ಯಕ್ತಿ ಗೆ ಅವನ ತಪ್ಪು ತಿಳಿಸಿ ಮತ್ತೆ ವಸ್ತುವನ್ನು ಹಿಂದಕ್ಕೆ ತರಿಸಿದರು.
ಮತ್ತು
ಆ ವ್ಯಕ್ತಿ  ವಿತ್ತ ಅಪಹಾರದ ದೋಷಕ್ಕೆ ಒಳಗಾಗಿ ಪಾಪಕೂಪದಲ್ಲಿ ಬೀಳಬಾರದೆಂದು ಕಾರುಣ್ಯವನ್ನು ಮಾಡಿದ ಮಹಾನುಭಾವರು.

ಅಷ್ಟೇ ಹೊರತುಪಡಿಸಿ" 
ಕಲ್ಲು ಬಂಡೆಯನ್ನು ಬಿಡಲಿಲ್ಲ. ವಾಪಾಸು ತರಿಸಿಕೊಂಡರು. ನಮ್ಮ ಹಾಗೇ  ನರರು ಅವರೆಂದು ಎಂದು ತಿಳಿಯಬೇಡಿ.
ಇದರಿಂದಾಗಿ ದೋಷ ಬರುವದು ಹೊರತು ಬೇರೆನು ಇಲ್ಲ.

ಶ್ರೀ ಅಪ್ಪಾವರು ಜ್ಞಾನಿಗಳು. ಭಗವಂತನ ಭಕ್ತರು. ಅವರಿಗೆ ಲೌಕಿಕ ವಸ್ತುಗಳ ಮೇಲೆ ಯಾವುದೇ ಮೋಹವಿಲ್ಲ.
ಅವರಿಗೆ ಕಲ್ಲು ,ಮಣ್ಣು , ಮನೆ,ಲೋಹ ,ಎಲ್ಲಾ ಒಂದೇ.
ಮನೆ ,ಮಡದಿ ,ಮಕ್ಕಳು_ ಇವುಗಳ ಮೇಲೆ ನಮ್ಮ ಹಾಗೇ ಮೋಹ ಇಲ್ಲ.
ಅವರು ಮೋಹ ಮಾಡುವದು ನ ಭಗವಂತ ಮೇಲೆ ಮಾತ್ರ..
ಇಂತಹ ಭಗವಂತನ ಭಕ್ತರ ಅನುಗ್ರಹ ಸದಾ ನಮಗೆಲ್ಲ ಇರಲಿ ಎಂದು ಕೇಳಿಕೊಳ್ಳುವ.

🙏ಶ್ರೀ ಕೃಷ್ಣಾರ್ಪಣಮಸ್ತು🙏
************


ಕರುಣಾಸಾಗರರ ನೋಡಿದೆಯಾ| 
|ಮಹಾ ಪುರುಷರಿಗೊಂದಿಸಿ ವರವ ಬೇಡಿದೆಯಾ||
🙏🙏🙏🙏
ಶ್ರೀ ಇಭರಾಮಪುರ ಅಪ್ಪಾವರು ಭಗವಂತನ ಅನುಗ್ರಹ ಬಲದಿಂದ ತೋರಿದ ಅಸಂಖ್ಯಾತ ಮಹಿಮೆ ಗಳಲ್ಲಿ ಇದು ಒಂದು.
ಕಳೆದ ವಾರ ಒಬ್ಬ ರೈತ ತನ್ನ ಹೊಲದಲ್ಲಿ ಬೋರ್ವೆಲ ಹಾಕಿಸಬೇಕಿತ್ತು..ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆ ಆಗಿದೆ.
ಕೆಲವೊಮ್ಮೆ ಹಾಕಿಸುವಾಗ ಎಷ್ಟೋ ಅಡಿ ಒಳಗೆ ಹೋದರು ನೀರು ಬಾರದೇ ಇರುವದು ಸಹ ಆಗಿರುವುದನ್ನು ನೋಡಿ ಕೇಳಿರುತ್ತೇವೆ.
ಕೆಲಸ ಆರಂಭವಾಗುವ ಮುಂಚೆ ಆ ರೈತ  ತನ್ನ ಹೊಲದಲ್ಲಿ  ನಿಂತು ಶ್ರೀ ಅಪ್ಪಾವರ ಗುಡಿ ಎದುರಿಗೆ ಮುಖವನ್ನು ಮಾಡಿ ಕೈ ಮುಗಿದು ಎಲೆ ಅಡಿಕೆ ದಕ್ಷಿಣೆ ಇಟ್ಟು ಒಂದೇ ಮನಸ್ಸಿನಿಂದ
ಶ್ರೀ ಅಪ್ಪಾವರ ಬಳಿ ಪ್ರಾರ್ಥನೆ ಮಾಡಿಕೊಂಡ.
"ತಾತ! ನನ್ನ ಹೊಲದಲ್ಲಿ ಬೋರ್ವೆಲ ಹಾಕಿಸುತ್ತಾ ಇದ್ದೀನಿ.ನೀರು ಬರುವಂತೆ ಮಾಡು..ನೀರು ಬಿದ್ದರೆ ನಿನ್ನ ಗುಡಿಗೆ ಈ ಆರಾಧನಾ ಸಮಯಕ್ಕೆ ಮುಂಚೆ ಸುಣ್ಣ ವನ್ನು ನಾನು ಒಬ್ಬನೇ ನಿಂತು ಹಚ್ಚುವೆ".ಎಂದು ಕೇಳಿಕೊಂಡನು.
ಶ್ರೀ ಅಪ್ಪಾವರ ಕಾರುಣ್ಯ ದೊಡ್ಡದು. ಅವನ ಹೊಲದಲ್ಲಿ ಬೋರ್ವೆಲ ೩೦ ರಿಂದ ೪೦ಅಡಿ ಒಳಗೆ ಹೋದ ತಕ್ಷಣ ನೀರು ಬಂದಿದೆ.
ಮರುದಿನವೇ ತಾನೇ ಸುಣ್ಣ ವನ್ನು ತಂದು ಶ್ರೀ ಅಪ್ಪಾವರ ಕಟ್ಟಿ  ಗುಡಿಯ  ಕಟ್ಟಡಕ್ಕೆ ಸುಣ್ಣ ವನ್ನು ಎರಡು ದಿನಗಳ ಕಾಲ ಮಾಡಿ ಕಿಂಚಿತ್ತೂ ಸೇವೆ ರೂಪದಲ್ಲಿ ಧನವನ್ನು ಕೊಟ್ಟು ಹೋಗಿದ್ದಾನೆ.
ಕರೆದಲ್ಲಿಗೆ ಬರುವ ಮಂತ್ರಾಲಯ ಮಹಾಪ್ರಭುಗಳ ಅಂತರಂಗ ಭಕ್ತರಾದ ಶ್ರೀ ಅಪ್ಪಾವರು ತಮ್ಮ ನಂಬಿದವರಿಗೆ ಅನುಗ್ರಹ ಮಾಡಲು ದೊಡ್ಡವರು ಮಾಡುವ ಕಾರುಣ್ಯವನ್ನು ಹೇಳಲು ಸಾಧ್ಯವಿಲ್ಲ.
ಅಂದಿಗು ಮತ್ತು ಇಂದಿಗೂ ನಂಬಿದವರ ಪೊರೆವ ಶ್ರೀ ಇಭರಾಮಪುರ ಅಪ್ಪಾವರು ನಮ್ಮ ಎಲ್ಲಾರ ಮೇಲೆ ತಮ್ಮ ಕರುಣಾ ದೃಷ್ಟಿಯಿಂದ ನೋಡಿ ನಮ್ಮನ್ನು ಉದ್ದರಿಸಲಿ ಎಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಶ್ರೀ ಜಯೇಶವಿಠಲರು ಹೇಳಿದ ಈ ನುಡಿ ಶ್ರೀ ಅಪ್ಪಾವರು ಕಲಿಬಾಧೆ ನಿವಾರಕರು ಅಂತ ಸೂಚನೆ ನೀಡುತ್ತದೆ..ಇದು ಕೇವಲ ದೇವಾಂಶರಿಗೆ  ಮಾತ್ರ ಸಾಧ್ಯ....
🙏🙏
ಈ ಧರಣಿಯಲಿ ಕಲಿಯು ಬಾಧಿಸಲು ಸುಜ್ಞಾನ ।
ಮೇದಿನಿ ಸುರರೆಲ್ಲ ಮೊರೆಯಿಡಲು ಶ್ರೀ ರಮಣ ।
ಭೇದ ಸತ್ಯವ ತೋರೆ ಕೃಷ್ಣಾರ್ಯ ಪ್ರಭುವರನ ।
ಆದರದಿ ಕಳುಹಿದನು ನಿನ್ನ ಸಹಿತಾ ।।

ಕಪ್ಪು ಗೊರಳನ‌ ಬಿಂಬ ಅಪ್ಪ ಸಲಹೋ||

🙏ಶ್ರೀ ಕೃಷ್ಣಾಚಾರ್ಯ ಗುರುಂ ಭಜೇ🙏
************


ಪ್ರವರರಿಯದವನಿಂದ ಮದವಿಳಿಸಿದೇ|
🙏🙏
ಶ್ರೀ ಇಭರಾಮಪುರ ಅಪ್ಪಾವರ ಚರಿತ್ರೆ
✍ಒಮ್ಮೆ ಮಂತ್ರಾಲಯ ಕ್ಷೇತ್ರಕ್ಕೆ ರಾಮಾಚಾರ್ಯರು ಎಂಬ ಪಂಡಿತರು ಸಂತಾನ ಅಪೇಕ್ಷಿತ ವಾಗಿ ಶ್ರೀ ರಾಯರ ಸೇವೆಗಾಗಿ ಬಂದಿರುತ್ತಾರೆ.ದೊಡ್ಡ ಪಂಡಿತರು. ಪಾಠ ಪ್ರವಚನ ಕುಶಲರು.ಆದರೆ ಅವರಲ್ಲಿ ಒಂದು ದೋಷ.ವಿನಯ ಅವರ ಬಳಿ ಇದ್ದಿಲ್ಲ.
ಮಂತ್ರಾಲಯ ಕ್ಕೆ ಸೇವೆಗಾಗಿ ಬಂದ ಅನೇಕ ಅಕ್ಷರಸ್ಥರ ಜೊತೆಯಲ್ಲಿ ಶಾಸ್ತ್ರ ವಿಚಾರವಾಗಿ ವಾದ ಮಾಡಿ ಅವರನ್ನು ನಿರುತ್ತರ ಮಾಡಿ,ಅಹಂಕಾರ ದಿಂದ ವರ್ತನೆ ಮಾಡಲು ಆರಂಭಿಸಿದರು. ಇದು ರಾಯರಿಗೆ ಸರಿ ಕಾಣಲಿಲ್ಲ.
ಇವರು ಅಲ್ಲಿ ಇದ್ದಾಗ ಶ್ರೀ ಅಪ್ಪಾವರು ರಾಯರ ದರ್ಶನಕ್ಕೆ ಬಂದಿರುತ್ತಾರೆ.
ರಾಯರ ವರ್ಧಂತಿ ಸಹ ಆ ಸಮಯದಲ್ಲಿ ಇರುತ್ತದೆ. ಹಾಗಾಗಿ ರಾಯರ ವರ್ಧಂತಿ ಸಮಾರಾಧನೆಗೆ ರಾಯರ ಹತ್ತಿರ ಬಂದು ಇಭರಾಮಪುರಕ್ಕೆ ಬರಲು ರಾಯರಿಗೆ ಆಹ್ವಾನವನ್ನು ಕೊಡುತ್ತಾರೆ.ರಾಯರ ಜೊತೆಯಲ್ಲಿ ಇವರು ಮಾತನಾಡುವ ಸಾಮರ್ಥ್ಯ ಅವರಿಗೆ ಇತ್ತು.
ವೃಂದಾವನದ ಮುಂದೆ ನಿಂತು ಇವರು ಮಾತನಾಡಿದರೆ ರಾಯರು ಒಳಗಡೆ ಇಂದ ಉತ್ತರ ಕೊಡುತ್ತಾ ಇದ್ದರು.
ನೋಡುವವರಿಗೆ ಇವರೊಬ್ಬರೇ ಮಾತನಾಡುತ್ತಾ ಇದ್ದಾರೆ ಅಂತ ಭಾವಿಸುತ್ತಾ ಇದ್ದರು.
ಅಲ್ಲಿ ಕುಳಿತಿದ್ದ ಆಚಾರ್ಯರಿಗೆ ಸಹ ಆಹ್ವಾನವನ್ನು ನೀಡುತ್ತಾರೆ.
ಆದರೆ ಆಚಾರ್ಯರು 
ಇವರು ಯಾರೋ! ಏನೋ?? ಮಂತ್ರಾಲಯ ಬಿಟ್ಟು ಹೋಗುವದು ಏಕೆ?? ಎಂದು ಅನುಮಾನದಿಂದ ಉತ್ತರ ಕೊಡಲಿಲ್ಲ.
ಆ ರಾತ್ರಿ ಸ್ವಪ್ನದಲ್ಲಿ ರಾಯರು ಬಂದು ಪಂಡಿತರಿಗೆ  ಇಭರಾಮಪುರಕ್ಕೆ ಹೋಗಲುಸೂಚನೆ ಕೊಡುತ್ತಾರೆ.
ಶ್ರೀರಾಯರ ಆಜ್ಞೆಯಂತೆ ಶ್ರೀ ಅಪ್ಪಾವರ ಮೇಲಿನ ಗೌರವದಿಂದ ಆಚಾರ್ಯರು ಮಂತ್ರಾಲಯ ದಿಂದ ಇಭರಾಮಪುರ ಕ್ಕೆ ಹೆಜ್ಜೆ ನಮಸ್ಕಾರ ಹಾಕುತ್ತಾ ಹೊರಟರು.
ಇತ್ತ ಇಭರಾಮ ಪುರದಲ್ಲಿ ದೊಡ್ಡ ಉತ್ಸವ. ವಿದ್ವತ್ ಗೋಷ್ಠಿ ನಡೆದಿದೆ.ಎಲ್ಲಾ ಮುಗಿದು ಭೋಜನ ಸಮಯ.ಆದರೆ ಶ್ರೀಅಪ್ಪಾವರು ಮಾತ್ರ ಭೋಜನಕ್ಕೆ ಕೂಡದೇ ಯಾರಿಗೋ ಕಾಯುತ್ತಾ ಇದ್ದಾರೆ.ಜನರೆಲ್ಲಾ ಅಪ್ಪಾವರ ವೀಕ್ಷಣೆ ಮಾಡುತ್ತಾ ಇದ್ದಾರೆ.ಸ್ವಲ್ಪ ಹೊತ್ತಿಗೆ ರಾಮಾಚಾರ್ಯರು ಅಲ್ಲಿ ಗೆ ಬರುತ್ತಾರೆ
ಶ್ರೀ ಅಪ್ಪಾವರು ರಾಘವೇಂದ್ರ ಚಿತ್ತಜ್ಞರಾದ್ದರಿಂದ ರಾಯರು ಯಾರಿಗೆ ಏನು ಸೂಚನೆ ಕೊಟ್ಟಿದ್ದಾರೆ ಇವೆಲ್ಲವೂ ಗೊತ್ತಾಗುತ್ತಾ ಇತ್ತು.
ತದನಂತರ ಭೋಜನ ಆದ ಮೇಲೆ ತಾಂಬೂಲ ಕೊಡುವ ವೇಳೆ.
ಶ್ರೀ ಅಪ್ಪಾವರು ತಮ್ಮ ಮನೆಯಲ್ಲಿ ಕೆಲಸ ಮಾಡುವ ನೀರು ತರುವ  ಆಳನ್ನು ಕರೆದು ಅವನನ್ನು ಹಸ್ತದಿಂದ ಸ್ಪರ್ಶಿಸಿ 
"ಈ ರಾಮಾಚಾರ್ಯರು ಪಂಡಿತರು.ಶ್ರೀ ಮನ್ ನ್ಯಾಯ ಸುಧಾ ಗ್ರಂಥ ದಲ್ಲಿ ಇವರಿಗೆ ಅರ್ಥ ವಾಗದ ವಿಷಯಗಳಿಂದ ಸಂಶಯಗ್ರಸ್ತರಾಗಿದ್ದಾರೆ.ಅವರ ಸಂಶಯಗಳನ್ನು ನಿವಾರಿಸಲು ಹೇಳುತ್ತಾರೆ. ಸುತ್ತ ಇದ್ದ ಜನರಿಗೆಲ್ಲ ಆಶ್ಚರ್ಯಕರವಾಗಿ ತೋರುತ್ತದೆ. ಏನು ಓದು ಬರಹ ಇಲ್ಲದವ ಹೇಗೆ ಸುಧಾನುವಾದ ಮಾಡಿಯಾನು ಎಂದು??
ಶ್ರೀ ಅಪ್ಪಾವರ ಅನುಗ್ರಹದಿಂದ ಸತತ ಎರಡು ಗಂಟೆ ಗಳ ಕಾಲ ಸಂಸ್ಕೃತ ದಲ್ಲಿ ಲೀಲಾಜಾಲವಾಗಿ ಸುಧಾನುವಾದ ಮಾಡಿ ಆಚಾರ್ಯರ ಸಂಶಯವನ್ನು ನೀರಿನವ ನಿವಾರಣೆ ಮಾಡುತ್ತಾನೆ.
ಇದರಿಂದ ಆಚಾರ್ಯರಿಗೆ ಗರ್ವಭಂಗವಾಯಿತು.
ಇನ್ನೂ ಮುಂದೆ ಈ ತರಹ ಗರ್ವಪಡಬಾರದು.ತತ್ರಾಪಿ ದೊಡ್ಡವರ ಸನ್ನಿಧಿಯಲ್ಲಿ ಸಾಧು ಜನರಿಗೆ ಅಹಂಕಾರ ದಿಂದ ಮಾತನಾಡಿ ಅವರ ಮನಸ್ಸು ನೋಯಿಸುವ ಕೆಲಸ ಮಾಡಬಾರದು ಎಂದು ತಿಳಿದು ಅಪ್ಪಾವರ ಬಳಿ ಕ್ಷಮೆ ಯಾಚನೆಮಾಡುವರು.
ಶ್ರೀ ಅಪ್ಪಾವರ ಬಳಿ ಭಕ್ತಿ ಮಾಡಿದ ರಾಮಾಚಾರ್ಯರಿಗೆ ಮುಂದೆ ಸಂತಾನವಾಗುತ್ತದೆ.
ಹೀಗೆ ತಮ್ಮ ಹಸ್ತ ಸ್ಪರ್ಶದಿಂದ ಓದು ಬರಹ ಬಾರದ ವ್ಯಕ್ತಿ ಇಂದ ಸಕಲ ಶಾಸ್ತ್ರ ಅರ್ಥ ವನ್ನು ಅನುವಾದ ಮಾಡಿಸಿದ ಈ ಚರಿತ್ರೆ ಮಂತ್ರಾಲಯ ಪ್ರಾಂತ್ಯದಲ್ಲಿ ಬಹು ಜಾಗರೂಕ ವಾಗಿದೆ.
ಹೀಗೆ ಭಗವಂತ ತನ್ನ ಭಕ್ತರಲ್ಲಿ ನಿಂತು ಮಾಡುವ ಲೀಲೆ ಬಹು ವಿಚಿತ್ರ ಮತ್ತು ಸೋಜಿಗ.
ಶ್ರೀ ಕೃಷ್ಣ ಪರಮಾತ್ಮನ,ವಾಯುದೇವರ ಮತ್ತು,ರಾಯರ ಸಂಪೂರ್ಣ ಅನುಗ್ರಹ ಪಾತ್ರರಾದ ಶ್ರೀ ಅಪ್ಪಾವರು ನಮ್ಮ ಮೇಲೆ ಸಹ ಅನುಗ್ರಹ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏
 ಸಾನುರಾಗದಿ ಇವರ ಮಹಿಮೆಯ ಗಾನ ಮಾಡುತ| ಕುಣಿದು ಹಿಗ್ಗಲು ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು.|
🙏ಶ್ರೀ ಕೃಷ್ಣಾಚಾರ್ಯ ಗುರುಂಭಜೇ🙏
********

No comments:

Post a Comment