Tuesday 1 January 2019

ಅಪ್ಪಾವರು ಮಹಿಮೆ 06 ಇಭರಾಮಪುರ appavaru mahime 06

                                                   


ಕೌತಾಳಂ ಶ್ರೀ ರಂಗಯ್ಯ ನವರ 

ಮಹಿಮೆ ಸಹ ಬಹಳಷ್ಟು ಇದೆ.

ಮುಂದೆ ಇವರೇ ಇಭರಾಮಪುರ ಅಪ್ಪಾವರು ಆಗಿ ಅವತಾರ ಮಾಡಿದರು ಅಂತ ಭಕ್ತರ ನಂಬಿಕೆ

ಅವರ ಒಂದು ಮಹಿಮೆಯನ್ನು ತಿಳಿಸುವ ಪುಟ್ಟ ಪ್ರಯತ್ನ

🙏🙏

ಅಂದು ನವರಾತ್ರಿಯ ಸಮಯ.

ಎಲ್ಲಾರ ಮನೆಗಳಲ್ಲಿ ಜಗತ್ತಿನ ತಂದೆಯಾದ ಶ್ರೀನಿವಾಸನ ಕಲ್ಯಾಣದ ಸಡಗರ ಸಂಭ್ರಮ ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟನ ಚರಿತ್ರೆ ಎಲ್ಲಾ ಭಕ್ತರ ಮನೆಯಲ್ಲಿ ಪಾರಾಯಣ ಸಂಭ್ರಮದಿಂದ ನಡೆದಿದೆ.  ರಂಗಯ್ಯನವರ ತಾಯಿ ಲಕ್ಷ್ಮಮ್ಮ ನವರಿಗೆ ದೇವಗಿರಿಯಾದ, ಭೂವೈಕುಂಠವಾದ, ಸಪ್ತಪರ್ವತಗಳ ,ಒಡೆಯನಾದ ಪದುಮಾವತಿಯ ಪ್ರಾಣಪ್ರಿಯನಾದ ಶ್ರೀನಿವಾಸನ ದರುಶನ ಮಾಡಬೇಕೆಂದು ಬಹು ಅಪೇಕ್ಷೆ ಆಯಿತು.

*ಪುಣ್ಯ ಚರಿತನಾದ ಶ್ರೀನಿವಾಸನ ಭಕ್ತನಾದ ತನ್ನ ಮಗನನ್ನು ಕುರಿತು ಮಗು ರಂಗ! ನನ್ನ ತಿರುಪತಿ ಗೆ ಕರೆದುಕೊಂಡು ಹೋಗುವಿಯಾ!!ಆ ಸ್ವಾಮಿಯ ಬ್ರಹ್ಮೋತ್ಸವ ನೋಡಬೇಕು ಎನ್ನುವ ಆಸೆ ಬಹಳವಾಗಿದೆ.ಕರೆದು ಕೊಂಡು ಹೋಗುವಿಯಾ ಎಂದಳು.  ಅದಕ್ಕೆ ರಂಗಯ್ಯ ನವರು ಅಮ್ಮ!! ಎಲ್ಲಿ ನೋಡಲು ಅಲ್ಲಿ ವ್ಯಾಪ್ತನಾಗಿರುವ,ಕರೆದಲ್ಲಿಗೆ ಬರುವ ಕಡು ಕರುಣಾನಿಧಿ, ಆದ ಆ ಸ್ವಾಮಿಯ ವೈಭವವನ್ನು ಎಲ್ಲಾ ಕಡೆ ಕಾಣಬಹುದು.

ಸಾಧನ ಶರೀರವಿದು, ಸಾಧಾರಣ ವಲ್ಲವು ಅಂತಹ ಈ ಶರೀರಕ್ಕೆ ಜನ್ಮವಿತ್ತ ನಿನ್ನ ಆಪೇಕ್ಷೆಯನ್ನು ಪೂರೈಸುವದು ನನ್ನ ಕರ್ತವ್ಯ. ಅದನ್ನು ತಪ್ಪದೇ ನಡೆಸಿಕೊಡುವೆನು ಅಂತ ಹೇಳುತ್ತಾರೆ.
ತಕ್ಷಣ ತಮ್ಮ ತಾಯಿಯನ್ನು ತಮ್ಮ ಮನೆಯ ಮಾಳಿಗೆಗೆ ಕರೆದೊಯ್ದರು.  ತಿರುಮಲೆ ಯ ದಿಕ್ಕಿನ ಕಡೆ ಕೈ ತೋರಿಸುತ್ತಾ ಅಮ್ಮಾ !! ಅದೋ ನೋಡು ಬ್ರಹ್ಮಾಂಡದ ಒಡೆಯನಾದ,ಬ್ರಹ್ಮನ ಪಿತನಾದ ಆ ಶ್ರೀನಿವಾಸನ ಬ್ರಹ್ಮೋತ್ಸವ ದ ವೈಭವವನ್ನು.   ಬಂಗಾರದ ಶಿಖರದಿಂದ ಒಪ್ಪುವ ಆ ಸ್ವಾಮಿಯ ಮಂದಿರ ನೋಡು. ಆನಂದಾದ್ರಿಯಲ್ಲಿ ಇಂದಿರೆಯನ್ನು ತನ್ನ ಎದೆಯಲ್ಲಿ ಧರಿಸಿ ನಗುಮುಖದಿಂದ ನಿಂತ ಆ ಶ್ರೀನಿವಾಸನ ನೋಡು. ಅಂತ   ಸಪ್ತಗಿರಿಯ ಒಡೆಯನ ದರುಶನ ತಾಯಿಗೆ ಮಾಡಿಸಿದರು. * ನಂತರ ದೇವ ಬೀದಿಯ ನಾಲ್ಕು ಕಡೆ ಗರುಡವಾಹನನಾಗಿ ತನ್ನ ಮಡದಿಯರ ಕೂಡ ಸಡಗರದಿಂದ ಸಂಚರಿಸುವ ಆ ಸ್ವಾಮಿಯ ಮೂರ್ತಿಯನ್ನು ದರುಶನ ಮಾಡಿಸಿದರು ..  ಆ ಸ್ವಾಮಿಯ ಮುಂದೆ ಭಕ್ತರ ಭಜನೆ ನರ್ತನೆ, ಅದರ ಮುಂದೆ ನಿಧಾನವಾಗಿ ಸಾಗುವ ಗಜ,ಅಶ್ವ ಗಳನ್ನು ಮತ್ತು ಹರಿದಾಸರ ಭಕ್ತರ ವೃಂದವನ್ನು ನೇರವಾಗಿ ಬಹು ಹತ್ತಿರ ದಿಂದ ಕಂಡಳು. .. ಆನಂದದಿಂದ ಕಣ್ಣು ಗಳಲ್ಲಿ ನೀರನ್ನು ಸುರಿಸುತ್ತಾ ಗೋವಿಂದಾ!! ಗೋವಿಂದ!!🙏 ಎಂದು  ಮುಕ್ತ ಕಂಠದಿಂದ ಕೂಗಿದಳು.. ಆ ತಾಯಿಗೆ ಕಾಲದ ಪರಿವೆಯೆ ಇಲ್ಲ. ಸಂಪೂರ್ಣ ಬ್ರಹ್ಮೋತ್ಸವ ದ ದರುಶನ ವಾದ ಮೇಲೆ ರಂಗಯ್ಯ ನಿನ್ನನ್ನು ಮಗನಾಗಿ ಪಡೆದ ನನ್ನ ಜನುಮ ಧನ್ಯವಾಯಿತು ಎಂದಳು..
ಯಾವುದೇ ಟಿವಿ ಇಲ್ಲದ ಕಾಲ.
ಭಗವಂತನ ದರುಶನ ವನ್ನು *ತಮ್ಮ ತಾಯಿಗೆ ನೇರವಾಗಿ ಮಾಡಿಸಿದ ಆ ಮಹಾನುಭಾವರ   ಸ್ಮರಣೆ, ಉದಯಕಾಲದಲ್ಲಿ ಮಾಡಿದರೆ ನಮ್ಮ ಈ ಜೀವನ ಧನ್ಯ!!....
ಇಂತಹ ಪರಮ ಭಾಗವತರು ಅನೇಕ ಜನ ನಮ್ಮ ಮಧ್ವಮತದಲ್ಲಿ ಭಗವಂತನ ಅಪ್ಪಣೆಯಂತೆ ಧರೆಯೊಳು ಅವತಾರ ಮಾಡಿದ್ದಾರೆ..  ಭಗವಂತನಿಂದ ದೂರವಾಗಿ ಅವನ ನಾಮ ಸ್ಮರಣೆ ಮಾಡದ ನನ್ನಂತಹ ಜನಗಳಿಗೆ ಉದ್ದಾರ ಮಾಡಲು ಇಂತಹವರು ಬರುತ್ತಾರೆ.. ಇಂತಹ ಅನೇಕ ಪರಮ ಭಾಗವತರನ್ನು ಕೊಂಡಾಡುವದು ಪ್ರತಿದಿನವು..
🙏🙏
ರಂಗಯ್ಯ ನ ನೋಡಿರೈ
ಕೌತಾಳದ ಶ್ರೀ ರಂಗಯ್ಯ ನ ಪಾಡಿರೈ
🙏
ನಿನ್ನ ದಾಸರು ಪೊದ್ದವಸನ ಎನಗಾಗಲಿ !
ನಿನ್ನ ದಾಸರು ಉಂಡ ಎಂಜಲು ಎನಗಾಗಲಿ !
ನಿನ್ನ ದಾಸರ ಪಾದೋದಕವೆ ಎನಗಾಗಲಿ !
ನಿನ್ನ ದಾಸರು ಇಟ್ಟಾಭರಣವೆ ಎನಗಾಗಲಿ !
ನಿನ್ನ ದಾಸರು ಚರಿಸಿದ ಉತ್ತಮ ಭೂಮಿ !
ಪುಣ್ಯ ನಿಧಿಗಳೆಲ್ಲ ಎನಗಾಗಲಿ ದೇವ !
ನಿನ್ನ ದಾಸರು ಪೇಳಿದ್ದದೆ ಮಹ ಉಪದೇಶ !
ನಿನ್ನ ದಾಸರು ಕೇಳಿದ್ದದೆ ಎನಗೆ ಹರುಷ !
ನಿನ್ನ ದಾಸರ ಮಾತು ಸಕಲ ಶ್ರುತಿ ವಚನ !
ನಿನ್ನ ದಾಸರ ಲೀಲೆ ಎನಗೆ ಪುಷ್ಪದ ಮಾಲೆ !
ನಿನ್ನ ದಾಸರ ಕರುಣಾ ಎನಗೆ ಕವಚ !
ನಿನ್ನ ದಾಸರ ಸಂದರುಶನವೆ ಲಾಭ !
ನಿನ್ನ ದಾಸರು ಕೀರ್ತಿ ಎನಗೆ ಪರಮ ಪೂರ್ತಿ !
ನಿನ್ನ ದಾಸರ ಸಂಗ ಮಹದುರಿತ !
ಮನ್ನಿಸು ಮೋಹನ್ನ *ವಿಜಯ ವಿಠ್ಠಲ ಚನ್ನ !
 ಇದಲ್ಲದೆ ಪ್ರತಿ ಮಾತುಗಳಿಲ್ಲ *
*****

ಶ್ರೀ ಇಭರಾಮಪುರಾಧೀಶಯ ನಮಃ ||
|| ಶ್ರೀ ಅಪ್ಪಾವರ ಚರಿತ್ರೆ ||

 ಶ್ರೀ ಅಪ್ಪಾವರು ವಾಕ್ ಸಿದ್ದಿ :

ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ಪಂಚಮುಖಿ ಮುಖ್ಯಪ್ರಾಣ ಆರಾಧಕರು , ನಿರಂತರ ಶ್ರೀಮಾನ್ ನ್ಯಾಯಸುಧಾ ಪರಿಮಳ ಗ್ರಂಥದ ಪಾರಾಯಣದಿಂದ ಅವರು ನುಡಿದ ಪ್ರತಿಯೊಂದು ಮಾತು ಸತ್ಯವಾಗುತ್ತಿತು. ಶ್ರೀ ಗಣೇಶಾಚಾರ್ಯರು ಪರಮಹಂಸ ಪೀಠದಲ್ಲಿ  ವಿರಾಜಾಮಾನರಾಗುತ್ತಾರೆ ಎಂಬ ನುಡಿಯು ಮುಂದೆ ಅವರು ಸುಧರ್ಮೇಂದ್ರತೀರ್ಥರೆಂದು ಜಗನ್ಮಾನ್ಯರಾದ ಮಹಿಮೆ ನೋಡಿದ್ದೇವೆ ಹಾಗೆಯೇ ಮುತ್ತಿನಂತಹ ಮಗ ಹುಟ್ಟುತ್ತಾನೆ ಎಂದು ಶ್ರೀ ವೆಂಕಟಗಿರಿ ಅಚಾರ್ಯರಿಗೆ ಅನುಗ್ರಹ ಮಾಡಿದಕೆ ಶ್ರೀಸ್ವಾಮಿರಾಯರು ಮುಂದೆ ಶ್ರೀ ಗುರುಜಗನ್ನಾಥ ದಾಸರು ಎಂಬ ಅಂಕಿತದಿಂದ ಪ್ರಸಿದ್ದರಾಗಿದು ನೋಡಿದ್ದೇವೆ. ಹೀಗೆ ಶ್ರೀಅಪ್ಪಾವರು ನುಡಿದಿದೆಲ್ಲ ಸತ್ಯವಾದ ಹಲವು ಮಹಿಮೆಗಳನು ನೋಡಿದ್ದೇವೆ.

 ಕುಂಜಾರುಗಿರಿ ಕ್ಷೇತ್ರದಲ್ಲಿ ಅಪ್ಪಾವರ ತೋರಿದ ಮಹಿಮೆ :

ಶ್ರೀ ಅಪ್ಪಾವರು ಸಂಚಾರತ್ವೇನ  ಉಡುಪಿಯಾತ್ರೇ ಹೋಗಿರುತ್ತಾರೆ. ಶ್ರೀ ಮಧ್ವಾಚಾರ್ಯರ ಜನ್ಮ ಭೂಮಿಯಾದ ಪಾಜಕ ಕ್ಷೇತ್ರ ದರ್ಶನಮಾಡಿ ನಂತರದಲ್ಲಿ ಪರಶುರಾಮ ದೇವರು ಪ್ರತಿಷ್ಠಿತ ಕುಂಜಾರು ಗಿರಿ ಶ್ರೀದುರ್ಗಾ ದೇವಿಯ ದರ್ಶನಕ್ಕೆ ಬಂದಿರುತ್ತಾರೆ.

ಅಲ್ಲಿ ಶ್ರೀವೆಂಕಟೇಶ ದಾಸರೆಂಬುವರು ತಮ್ಮ ಪತ್ನಿ ತಿಮ್ಮವ್ವನವರ ಜೊತೆಯಲ್ಲಿ ದುರ್ಗಾದೇವಿಯ ಸೇವೆ ಮಾಡಲು ಬಂದಿರುತ್ತಾರೆ. ತಿಮ್ಮವ್ವನವರು ತಮ್ಮ ಗಂಡನಿಗೆ ಇರುವ ವ್ಯಾಧಿಯ ನಿವಾರಣೆಗೆ ಹಲವು ದಿವಸದಿಂದ ಸೇವೆ ಸಲ್ಲಿಸುತ್ತಿದ್ದರು.

ಒಂದು ದಿನ ಶ್ರೀ ವೆಂಕಟೇಶದಾಸರ ಪತ್ನಿ ತಿಮ್ಮವ್ವನವರು  ಸೇವೆ ಮುಗಿಸಿಕೊಂಡು ದೇವಿಯ ದರ್ಶನ ಪಡೆದಮೇಲೆ   ಅಲ್ಲಿಯ ದೇವಸ್ಥಾನದ ಅರ್ಚಕರು ಪ್ರಸಾದ ಕೊಟ್ಟರು. ಪ್ರಸಾದದಲ್ಲಿ  ಅಂಗಾರ ಮತ್ತು ತುಳಸಿ ಇರುವ ಕಾಯಿ ಬಟ್ಟಲು ಬಂತು. ಅರ್ಚಕರು ಕೊಟ್ಟ ಆ ಪ್ರಸಾದವನ್ನು ನೋಡಿ ಅದರಲ್ಲಿ ಇದ್ದ ಅಂಗಾರ ಮತ್ತು ತುಳಸಿಯನು ನೋಡಿ  ಅಶುಭಸೂಚಕವೆಂದು ಬಹುದುಃಖದಿಂದ ಅಳ್ಳುತ್ತಾ ಕಣ್ಣೀರು ಹಾಕುತ್ತಿದಳು.

ಕಣ್ಣೀರು ಇಡುತ್ತಿದ ತಿಮ್ಮವ್ವನವರನು ನೋಡಿ ಅಲ್ಲಿಯೇ ಇದ್ದ ಅಪ್ಪಾವರು , ಬೇಸರ ಪಡಬೇಡಮ್ಮ ದೇವಿಯು ಪ್ರಸನ್ನಳಾಗಿ ಆ ಪ್ರಸಾದ ಕರುಣಿಸಿದ್ದಾಳೆ.

ನಿಮಗೆ ಅಂಗಾರವನ್ನು ನೀಡುವ ಮೂಲಕ ಅದನ್ನು ಧರಿಸುವ ವೈಷ್ಣವೋತ್ತಮನಾದ ಪುತ್ರನನ್ನು ಹಾಗೂ ತುಳಸಿಯನ್ನು ನೀಡುವ ಮೂಲಕ ಅದನ್ನು ಪೂಜೆಸುವ ಹೆಣ್ಣು ಸಂತಾನವನ್ನು ಕರುಣಿಸುವುದಾಗಿಯೂ ಸೂಚಿಸಿದ್ದಾಳೆ ಎಂದು ತಿಮ್ಮವ್ವನವರಿಗೆ ಸಮಾಧಾನಮಾಡಿ ಅವರಿಗೆ ಅಭಯ ನೀಡುತ್ತಾರೆ.

ಮುಂದೆ ಎಲ್ಲವೂ ಒಳ್ಳೆಯದಾಗುವದು ಎಂದು ಆಶೀರ್ವಾದ ಮಾಡಿದರು ಅಪ್ಪಾವರು ಹೇಳಿದ ಮಾತು ಹುಸಿಯಾಗಲಿಲ್ಲ, ಮುಂದೆ ವೆಂಕಟ ದಾಸರಿಗೆ ಒಂದು ಗಂಡು ಮಗು ಜನಿಸಿತು,ಅವರೇ ಶ್ರೀ ಕರ್ಣಾಟಕ ಭಕ್ತ ವಿಜಯ ಎಂಬ ಉತ್ತಮ ಗ್ರಂಥ ವನ್ನು ಬರೆದ ಶ್ರೀ ಬೇಲೂರು ಕೇಶವ ದಾಸರು ಎಂದು ಪ್ರಸಿದ್ಧಿಯನ್ನು ಹೊಂದಿದರು.

ಶ್ರೀ ರಾಯರ ಸ್ತೋತ್ರದಲ್ಲಿ " ತದ್ದರ್ಶನಂ ದುರಿತಕಾನನ ದಾವಭೂತಂ " ಎಂದು ಅಪ್ಪಣಾಚಾರ್ಯರು ರಾಯರ ದರ್ಶನದಿಂದ ಸಕಲ ದುರಿತವು ಪರಿಹಾರ ಆಗುತೆ ಎಂದು ಹೇಳಿದು ರಾಯರಿಗೆ ಮಾತ್ರವಲ್ಲ ರಾಯರ ಭಕ್ತರ ದರ್ಶನದಿಂದಲು ನಮಗೆ ಬಂದ ದುರಿತಗಳು ಪರಿಹಾರ ವಾಗುವುದೆಂದು ಶ್ರೀ ಅಪ್ಪಾವರ ತೋರಿಸಿದ ಈ ಮಹಿಮೆಯಲ್ಲಿ ಸ್ಪಷ್ಟವಾಗುತೆ.


ಹರಿಯ ಧ್ಯಾನದೊಳಿದ್ದು ನಲಿವಾ | ತನ್ನ
ಚರಣ ಸೇವಕರಿಗೆ ಸುಲಭದಿಂದೊಳಿವಾ |
ದುರುಳ ದೃಕೃತ್ಯಗಳಳಿವಾ | ತನ್ನವರ
ಸಮಯಕೆ ಸ್ವಪ್ನದಿ ಬಂದು ನಿಲುವಾ |
ಮರುತ ದೇವರು ಇವರ ಹೃನ್ಮಂದಿರದೊಳಗೆ ನೆಲಸಿ ನಿಜಾಭಿಮಾನದಲ್ಲಿರುವ | ಕಾರಣದಿಂದ ಸುಂದರುಶನವೇ ಸ್ವರ್ಗಾದಿ ಸಾಧನ ||

 ಕರುಣಾಸಾಗರರ ನೋಡಿದೆಯಾ | ಮಹಾ ಪುರುಷರಿಗೊಂದಿಸಿ ವರವ ಬೇಡಿದೆಯಾ || ಪ ||

ಹರಿ ಭಕ್ತರಾಗ್ರಣಿಯ ಗುಣಗಳ  ಅರಿಯದವರು ಇವರನಾಡಿಕೊಂಡರೆ ಕೊರತೆಯಾಗುವುದೇನು ಇಭರಾಮಪುರ ನಿಲಯ ಕೃಷ್ಣಾರ್ಯರ ||ಅ. ಪ||
~ಇಂದಿರೇಶ ದಾಸರು

 ಸ್ಮರಿಸುವ ನರನೇ ಧನ್ಯ ಸನ್ಮಾನ್ಯ || ಪ ||
 ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮ
 ಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ || ಅ.ಪ ||

ಭರತ ಭೂಮಿಯೊಳವತರಿಸಿ ದೇವಾಂಶದಿ
ಪುರುಹೂತನಂತೆ ಗಜಾಂತ ವೈಭವದಿಂದ
ಮೆರೆಯುತ ತಮ್ಮಯ ಚರಣಾರಾಧಕರನು-
ದ್ದರಿಸಲೋಸುಗದಿ ಸಂಚರಿಸುತ ಮುದದಿ
ಸಂದರುಶನದಿಂಧಾಘವ ಕಳೆದು ಬಲು
ಕರುಣದಲಿಷ್ಟಾರ್ಥವ ಗರಿದು ಬಹು ಶರಣು ಜ-
ನರ ಪೊರೆವ ಭೂಸುರರೊಳು ಮರುತ ಮತಾಬ್ಧಿ
ಚಂದಿರನೆನಿಸಿದವರ ||
~ ಕಾರ್ಪರ ನರಹರಿದಾಸರು
*********


ಶ್ರೀ ಇಭರಾಮಪುರಾಧೀಶಯ ನಮಃ || || ಶ್ರೀ ಅಪ್ಪಾವರ ಚರಿತ್ರೆ ||
 ಕುಂಭಕೋಣ ಯಾತ್ರೆ:
ಶ್ರೀ ಅಪ್ಪಾವರು ಒಂದು ಬಾರಿ ದಕ್ಷಿಣ ಭಾರತದ ತೀರ್ಥ ಯಾತ್ರೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರ ದರ್ಶನ ಮಾಡಲು ನಿರ್ಧರಿಸುತ್ತಾರೆ. ಯಾತ್ರೆಯ ಬಗ್ಗೆ ಶ್ರೀ ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರ ಹತ್ತಿರ  ಬಗ್ಗೆ ಹೇಳಿಕೊಳ್ಳುತ್ತಾರೆ.
ಶ್ರೀ ಯೋಗಿನಾರಾಯಣಾಚಾರ್ಯರು ಅಪ್ಪಾವರ ಮಾತಿನಂತೆಯೇ ಎಲ್ಲಾ ಸಿದ್ಧತೆಗಳನ್ನು ಮಾಡಿರುತ್ತಾರೆ. ದೂರದ ಕುಂಭಕೋಣಕೆ ತಲುಪಲು ಸುಮಾರು ವಾರದ ಸಮಯಬೇಕು. ವಾರಗಳೇ ಕಳೆದವು ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಹತ್ತಿರವಾಗುತ್ತದೆ ಜೇಷ್ಟ ಮಾಸದ ಕೃಷ್ಣ ಪಕ್ಷ ಏಕಾದಶಿಯೂ ಕೂಡ ಬಂತು ಮರುದಿನವೇ ಶ್ರೀ ವಿಜಯೀಂದ್ರ ತೀರ್ಥರ ಮಧ್ಯಾರಾಧನೆ ಆದರೂ ಶ್ರೀ ಅಪ್ಪಾವರು ಯಾತ್ರೆಗೆ ಯಾವಾಗ ಹೊರಡುವ  ಬಗ್ಗೆ ಏನು ಸುಳಿವು ಕೊಡಲಿಲ್ಲ.
ಏಕಾದಶಿಯ ರಾತ್ರಿ ಅಪ್ಪಾವರು ಶ್ರೀ ನಾರಾಯಣಾಚಾರ್ಯರಿಗೆ ಕರೆದು ನಾಳೆ ಶ್ರೀ ವಿಜಯೀಂದ್ರರ  ಆರಾಧನೆ ದರ್ಶನಕ್ಕೆ ಹೊರಡಬೇಕು ಬೆಳಗ್ಗೆ ಬೇಗ ಎದ್ದು ಅಹ್ನಿಕಾದಿಗಳನ್ನು ಮುಗಿಸಲು ಸೂಚಿಸುತ್ತಾರೆ. ದರ್ಶನದ ಭಾಗ್ಯ ದೊರೆಯುತ್ತದೆ ಎನ್ನುವ ಖುಷಿಯಲ್ಲಿ ಇದ್ದ ಆಚಾರ್ಯರಿಗೆ ಇನ್ನೊಂದುಕಡೆ ದೂರದ ಕುಂಭಕೋಣಕೆ ಬೆಳಗಾಗುವುದರಲ್ಲಿ ಹೇಗೆ ಹೋಗಿ ತಲುಪಬೇಕೆಂಬ ಗೊಂದಲ ಮನಸ್ಸಿನಲ್ಲಿ ಮೂಡತ್ತದೆ.
ಆದರೂ ಅಪ್ಪಾರ ಆಜ್ಞೆ ಎಂದು ಭಾವಿಸಿ ಬೆಳಗ್ಗೆ ಬೇಗ ಎದ್ದು ಅಹ್ನೀಕಾದಿಗಳನ್ನು ಮುಗಿಸಿದ ಆಚಾರ್ಯರು ಶ್ರೀ ಅಪ್ಪಾವರ ಬಳಿ ಬಂದು ತಮ್ಮ ಮನದಲ್ಲಿನ ಗೊಂದಲಗಳನ್ನು  ಹೇಳಿಕೊಳ್ಳುತ್ತಾರೆ . ಅಪ್ಪಾವರು ಆಚಾರ್ಯರ ಗೊಂದಲಕ್ಕೆ ನಗುತ್ತಾ ನನ್ನ ಕೈ ಹಿಡಿಯಿರಿ ಎನ್ನುತ್ತಾರೆ.
ಶ್ರೀ ಅಪ್ಪಾವರ ಕೈ ಹಿಡಿದ ಶ್ರೀ ಯೋಗಿ ನಾರಾಯಣಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಕುಂಭಕೋಣಕೆ ತಲುಪಿಸಿ ಶ್ಚತುರಧಿಕ ಶತಗ್ರಂಥರತ್ನಗಳ ಒಡೆಯರಾದ ಶ್ರೀ ವಿಜಯೀಂದ್ರ ತೀರ್ಥರ ದರ್ಶನವನ್ನು ಮಾಡಿಸುತ್ತಾರೆ.
ಹರಿಯ ಧ್ಯಾನದೊಳಿದ್ದು ನಲಿವಾ | ತನ್ನ
ಚಾರಣ ಸೇವಕರಿಗೆ ಸುಲಭದಿಂದೊಳಿವಾ |
ದುರುಳ ದೃಕೃತ್ಯಗಳಳಿವಾ | ತನ್ನವರ
ಸಮಯಕೆ ಸ್ವಪ್ನದಿ ಬಂದು ನಿಲುವಾ |
ಮರುತ ದೇವರು ಇವರ ಹೃನ್ಮಂದಿರದೊಳಗೆ ನೆಲಸಿ ನಿಜಾಭಿಮಾನದಲ್ಲಿರುವ | ಕಾರಣದಿಂದ ಸುಂದರುಶನವೇ ಸ್ವರ್ಗಾದಿ ಸಾಧನ ||

ಇಂದಿರೇಶ ದಾಸರು ಹೇಳುವಂತೆ  ಕರುಣಾ ಸಾಗರರಾದ ನಮ್ಮ ಅಪ್ಪಾವರು ತಮ್ಮ ಚಾರಣ ಸೇವಕರಿಗೆ ಅತಿಸುಲಭವಾಗಿ ಒಲಿದು ಸಾಧನದ ಮಾರ್ಗವನ್ನು ತೋರಿಸಿದ್ದಾರೆ.

ಅಗಮ್ಯ ಮಹಿಮನಾದ ಅಪ್ಪಾವರು ವಾಯುವಾಹನದ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು. ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು. ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರಿಗೆ ಪಾದಾರವಿಂದಗಳಲ್ಲಿ ಸಮರ್ಪಿಸಿ ಅಪ್ಪರೋಕ್ಷ ಹೊಂದಿದ್ದಾರೆ.
*******

|| ಶ್ರೀ ಇಭರಾಮಪುರಾಧೀಯ ನಮಃ || || ಶ್ರೀ ಅಪ್ಪಾವರ ಮಹಿಮೆ ||
 ಪರಿಮಳ ಶರೀರ :
ನದಿಪ್ರದೇಶೇ ಪರಿತೋಪಿ ಸ್ನಾನೇನ ಸುಗಂಧಿಮನ್ |
ಸ್ಮೃತಿಮಾತ್ರಾಚ್ಚ ಕೇಷಾಂಚಿತ್ ಯತ್ರಕುತ್ರಾಪಿ ವಾಸಿನಾಮ್ ||

ಶ್ರೀ ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾಯಣಾಚಾರ್ಯರು ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಬರುವ ಶ್ಲೋಕವಿದು. ಶ್ರೀ ಅಪ್ಪಾವರ ಮಹಿಮೆ ಸಾರುವ ಈ ಸ್ತೋತ್ರ ಮಾಲೆಯಲ್ಲಿ ಶ್ರೀ ಆಚಾರ್ಯರು ಹೇಳುವಂತೆ ಶ್ರೀ ಅಪ್ಪಾವರು ನದಿ ಪ್ರದೇಶದಲ್ಲಿ ಸ್ನಾನ ಮಾಡಿದಾಗ ಸುಗಂಧ ಪರಿಮಳದ ಸುವಾಸನೆ ಅವರ ದೇಹದಿಂದ ಹೊರಬರುತಿತ್ತು.

 ಕುಹಕಿಗಳಿಂದ  ಪರೀಕ್ಷೆ :
 ಒಂದು ಬಾರಿ ಶ್ರೀ ಅಪ್ಪಾವರು ದಕ್ಷಿಣ ಭಾರತದ ಯಾತ್ರೆಯ ಸಮಯದಲ್ಲಿ ಕಾವೇರಿ ಸ್ನಾನಕ್ಕೆಂದು ಶ್ರೀರಂಗಪಟ್ಟಣ ನಗರಕ್ಕೆ ಬಂದಾಗ ಅಲ್ಲಿ ಕೆಲ ಕುಹಕಿಗಳು ಶ್ರೀ ಅಪ್ಪಾವರು ಯಾವುದೋ ದ್ರವ್ಯ ಧಾರಣೆ ಮಾಡಿಕೊಂಡು ಜನರಿಗೆ ತಪ್ಪು ಗ್ರಹಿಕೆ ಮಾಡುತ್ತಿದ್ದಾರೆಯೆಂದು ಅವರ ಪರೀಕ್ಷೆ ಮಾಡುಲು ಮುಂದಾಗುತ್ತಾರೆ.

"ನೀವು ಸ್ನಾನ ಮಾಡಿದಾಗ  ಪರಿಮಳದ‌ ಸುವಾಹನೆ ಬರುವುದೆಂದು  ಕೇಳಿದ್ದೇವೆ , ಅದನ್ನು ನೀವು ಈಗ ಕಾವೇರಿ ನದಿಯಲ್ಲಿ ಸ್ನಾನಮಾಡಿ ತೋರಿಸಿ" ಎನ್ನುತ್ತಾರೆ.

ಆಗ ಶ್ರೀ ಅಪ್ಪಾವರು ಸ್ನಾನ ಮಾಡಿದಾಗ ಕಾವೇರಿ ನದಿಯಲ್ಲಿ  ಮತ್ತು ಸುತ್ತ- ಮುತ್ತಲಿನ ಗ್ರಾಮದಲ್ಲಿ ಪರಿಮಳದ ಸುವಾಸನೆ ಹರಡಿತು. ಅಪ್ಪಾವರ ಪರೀಕ್ಷೆ ಮಾಡಲು ಬಂದ ಆ ಕುಹಕಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಪ್ಪಾವರ ಬಳಿ ಶರಣಾಗುತ್ತಾರೆ. ಕರುಣಾ ಸಾಗರರಾದ ಅಪ್ಪಾವರು ಪರೀಕ್ಷೆ ಮಾಡಲು ಬಂದ‌ ಆ  ಜನರನ್ನು  ಕ್ಷಮಿಸಿ ಅನುಗ್ರಹಿಸುತ್ತಾರೆ.

ಶ್ರೀ ಅಪ್ಪಾವರು ಬರೆದ ಪತ್ರಗಳು, ಧರಿಸಿದ ಉಡುಪುಗಳು ,ಅವರು ನದಿಯಲ್ಲಿ ಸ್ನಾನ ಮಾಡಿದಾಗ, ಅವರ ಕೈನಿಂದ ಬಂದ ವಸ್ತುಗಳಲ್ಲಿ ಪರಿಮಳದ ಸುವಾಸನೆ ಬರುತ್ತಿದ್ದ ಕಾರಣ ಶ್ರೀ ಅಪ್ಪಾವರು ಶ್ರೀ ಪರಿಮಳಾಚಾರ್ಯರು ಎಂದು ಪ್ರಸಿದ್ಧಿಯಾಗಿದ್ದರು.

ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ, ಉಪಾಸನೆ ಮತ್ತು ಅನುಷ್ಠಾನ ಹಾಗೂ  ಶ್ರೀ ರಾಯರ ಮತ್ತು  ವಾಯುದೇವರ ವಿಶೇಷ ಕಾರುಣ್ಯದಿಂದ ಶೃತಿ- ಸ್ಮೃತಿ ಸಮ್ಮತವಾದ ಈ ಮಹಿಮೆಗಳು ಗೋಚರವಾಗುತ್ತಿತು ಎಂದು ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾಯಣಾಚಾರ್ಯರು  ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ  .

ಈಗಲೂ ಶರಣುಬಂದ ಭಕ್ತಜನರಿಗೆ ತಮ್ಮ ಬಹಿರ್ಮುಖತ್ವವನು ಪರಿಮಳದ ಸುವಾಸನೆ ಮೂಲಕ ಅನುಗ್ರಹಿಸುತ್ತಿದ್ದಾರೆ.

 ಶ್ರೀ ಇಂದಿರೇಶ ದಾಸರು ಹೇಳುವಂತೆ :

 ಅವಾವ ಯೋಗಿಗಳವತಾರ | ಎಂದು
 ನಾ ವರ್ಣಿಸಲು ಪರಿಮಳ ಶರೀರ |
ಸೇವಿಪ ಸುಜನರ ಮಂದಾರ | ತರು
ಪಾವನಾತ್ಮಕ ಪುಣ್ಯ ಪುರುಷ ಉದಾರ |
ಈ ವಿಧದಿ ಮಹಿಮೆಗಳು ಮಾತ್ತಾವ ನರರಿಗೆ ದೊರಕುವುದು | ಶ್ರೀದೇವಿರಮಣ ಸಹಾಯದಿಂದ  ಧರಾವಲಯದಿ ದಿಗ್ವಿಜಯ ಗೈಸಿದ ||

 ಕಾರ್ಪರ ನರಹರಿ ದಾಸರು:

ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ
ಶಿರಪರಿಯಂತರ ಗುರುಗಳಾಕೃತಿಯನ್ನು
ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ
ಪರಿಶೋಭಿಸುವ ರತ್ನಾಭರಣದಿಂದೋಪ್ಪುವ
ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ
ಸುಂದರವಾದ ಮುಖದೊಳು ಮಂದಸ್ಮಿರ
 ಕಸ್ತೂರಿಯಂತೆ ಪರಿಮಳಾನ್ವಿತ ಶರೀರ
ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ
**********



ಶ್ರೀಶ ಲಕ್ಷ್ಮೀಗೆ ಬ್ರಹ್ಮ ಜೀವೇಶರಾ ನಮಿಸಿ|..
ಅಪ್ಪಾವರ ದಿವ್ಯ ಭಾಸುರ ಚರಿತೆ ನಾ ಲೇಶಮತಿ ಪೇಳ್ವೆ||
✍ಶ್ರೀ ಇಭರಾಮಪುರ ಅಪ್ಪಾವರು ಪ್ರತಿ ವರುಷವು ಸುರಪುರಕ್ಕೆ ಶ್ರೀ ನರಸಿಂಹ ದೇವರ ಸಂದರ್ಶನ ಮಾಡಲು ಶ್ರೀ ನರಸಿಂಹ ಜಯಂತಿ ಉತ್ಸವಕ್ಕೆ ಆಗಮಿಸುತ್ತಾ ಇದ್ದರು.ಮಾರ್ಗದಲ್ಲಿ ಇರುವ ಮಾನ್ವಿ ಕ್ಷೇತ್ರಕ್ಕೆ ಬಂದಾಗ ಪುಷ್ಯಮಾಸವಾಗಿತ್ತು.
ಅವಾಗ ಶ್ರೀಅಪ್ಪಾವರು ಉಳಿದುಕೊಂಡ ಮನೆಯವರಾದ ಮಾನ್ವಿಯ ಕುಲಕರ್ಣಿ ಮನೆತನದವರು ಶ್ರೀ ಅಪ್ಪಾವರಿಗೆ ಸಾಷ್ಟಾಂಗ ನಮಸ್ಕರಿಸಿ, ಈ ಸಲ ಮಧ್ವ ನವಮಿಯ ಮಹೋತ್ಸವಕ್ಕೆ ದಯಮಾಡಿ ಮಾನ್ವಿಗೆ ಆಗಮಿಸಿ ನಮನ್ನು ಉದ್ದಾರ ಮಾಡಬೇಕೆಂದು ಭಕ್ತಿ,ಇಂದ ಕೇಳಿಕೊಂಡರು.
ಅವಾಗ್ಗೆ ಅಪ್ಪಾವರು 
ಕುಲಕರ್ಣಿ ಆಗಲಿ!!
ನಾವು ಕೆಲಸದ ನಿಮಿತ್ತ ವಾಗಿ ಸೊಲ್ಲಾಪುರ ಹೋಗಬೇಕಾಗಿದೆ.ನೀವು ಇತ್ತ ಮಧ್ವ ನವಮಿಯ ಮಹೋತ್ಸವ ನೆರವೇರಿಸಿ..
ನಾವು ಶ್ರೀ ಮಧ್ವ ನವಮಿಯ ದಿನ ಎಲ್ಲಿ ಇದ್ದರು ಸಹ ಸರಿಯಾಗಿ  ಮಧ್ಯಾನ್ಹ ೧೨ಗಂಟೆಗೆ ನಿಮ್ಮ ಮನೆಗೆ ಬರುತ್ತೇವೆ ಎಂದು ಹೇಳಿ ಎಲ್ಲಾ ಭಕ್ತರಿಗೆ ಆಶೀರ್ವಾದ ಮಾಡಿ ಮುಂದೆ ಸಂಚಾರ ಹೊರಟರು.ಮಾಘ ಮಾಸ ಬಂತು.ಈ ಸಾರಿ ಮಾನ್ವಿ ಯಲ್ಲಿ ಬಹಳ ವಿಶೇಷ. ಇಭರಾಮಪುರ ಅಪ್ಪಾವರು ಬರುತ್ತಾರೆ ಅನ್ನುವ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿ ಅಸಂಖ್ಯಾತ ಭಕ್ತರು ಒಂದೆರಡು ದಿನ ಮುಂಚಿತವಾಗಿ ಕುಲಕರ್ಣಿಯ ಮನೆಗೆ ಆಗಮಿಸುತ್ತಾರೆ.ಉತ್ಸವದ ದಿನ ಆರಂಭವಾಗಿದೆ.ರಥಸಪ್ತಮಿ,
ಮರುದಿನ ಭೀಷ್ಮ ಅಷ್ಟಮಿ ಶ್ರೀಅಪ್ಪಾವರ ಆಗಮನವಿಲ್ಲ.
ಇದೇನಿದು!! ಅಪ್ಪಾವರು ಬರುತ್ತೇನೆ ಅಂತ ಹೇಳಿದ್ದಾರೆ .ಇನ್ನೂ ಬರಲಿಲ್ಲ ವಲ್ಲ ಅಂತ ಕುಲಕರ್ಣಿ ಯವರಿಗೆ ಸ್ವಲ್ಪ ನಿರಾಶೆ ಆಯಿತು.
ಮರುದಿನ ಮಧ್ವ ನವಮಿ.
ಶ್ರೀಅಪ್ಪಾವರ ಆಗಮನವಿಲ್ಲ!!
ಅವಾಗ್ಗೆ ಕುಲಕರ್ಣಿ ಯವರು ಶ್ರೀ ಇಭರಾಮಪುರ ಅಪ್ಪಾವರು ಎಂದಿಗು, ಯಾವ ಭಕ್ತರಿಗು, ಯಾರಿಗೂ ನಿರಾಶೆ ಮಾಡಿಲ್ಲ. ಎಲ್ಲರಿಗೂ ಅನುಗ್ರಹ ಮಾಡಿದ್ದಾರೆ...
ಇಂದು ಏಕೆ ಹೀಗೆಆಯಿತೋ??ಏನೋ!!
ಮುಖ್ಯ ನನಗೆ ಅವರಿಗೆ ಸೇವೆ ಮಾಡುವ ಭಾಗ್ಯ ಲಭ್ಯ ಇಲ್ಲವೆಂದು ಚಿಂತಾ ಮಗ್ನರಾಗಿದ್ದರು... 
ಆದರೂ ಕಾರ್ಯಕ್ರಮ ನಿಲ್ಲುವಂತಿಲ್ಲ.
ಬೆಳಿಗ್ಗೆ ಇಂದ ಪಾರಾಯಣ ಪಠಣಾದಿಗಳು ನಡೆಯತ್ತಾ ಇದ್ದವು.ಅಡಿಗೆ ಯಾಯಿತು
ನೈವೇದ್ಯ ಸಹ ಆಗಿದೆ.
ಇನ್ನೂ ಅಪ್ಪಾವರ ಆಗಮನವಿಲ್ಲ...
ಸಮಯ ಸರಿಯಾಗಿ ಮಧ್ಯಾಹ್ನ ೧೧:೩೦ ಆಗಿದೆ
ಬ್ರಾಹ್ಮಣ ಸುವಾಸಿನಿಯರಿಗೆ ಭೋಜನಕ್ಕೆ ಎಲೆಗಳನ್ನು ಸಹ ಹಾಕಿದ್ದಾರೆ.
ಕುಳಿತವರಿಗೆಲ್ಲ ಸಾಲಾಗಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿದ್ದಾರೆ.
ಅವಾಗ ಕುಲಕರ್ಣಿ ಯವರು ಬಂದು 
"ಕೃಷ್ಣಾರ್ಪಣಮಸ್ತು" ಅಂತ ಯಾರು ಹೇಳಬೇಡಿ. ಸರಿಯಾಗಿ ೧೨:೦೦ಗಂಟೆಗೆ ಅಪ್ಪಾವರು ಬರುತ್ತೇನೆ ಅಂತ ಸ್ಪಷ್ಟವಾಗಿ ಕಾಲ ನಿರ್ದೇಶನ ಮಾಡಿ ಹೇಳಿದ್ದಾರೆ.ಇನ್ನೂ ಕೆಲ ಸಮಯ ಕಾಯುವದು ಅಗತ್ಯ ವೆಂದು ಬಂದಂತಹ ಭಕ್ತರ ಬಳಿ ವಿಜ್ಞಾಪನೆ ಮಾಡಿಕೊಳ್ಳಲು
ಎಲ್ಲಾ ರು ಆಗಬಹುದು ಅಂತ ಹೇಳುತ್ತಾರೆ.
ತಕ್ಷಣ ದಲ್ಲಿ ದೇವರ ಮನೆಯಿಂದ ಪುನುಗು ಕಸ್ತೂರಿ ಜಾಜಿ ಮುಂತಾದ ದೇವಲೋಕದ ಪರಿಮಳವು ವಾಸನೆ ಆ ಸ್ಥಳದಲ್ಲಿ ಬಂತು...
ಕಲೆತ ಜನರೆಲ್ಲ ತಕ್ಷಣ  ಇದೇನು!! ಘಮಘಮಿಸುವ ಸುವಾಸನೆ ನಿಮ್ಮ ದೇವರ ಮನೆಯಿಂದ ಎಂದು ಕುಲಕರ್ಣಿ ಅವರನ್ನು ಕೇಳುತ್ತಿದ್ದರು.
ದೇವರ ಮನೆಯ ಒಳಗಡೆ ಹೋಗಿ ನೋಡುವ ಧೈರ್ಯ ಯಾರಿಗು ಇಲ್ಲ.
ಕುಲಕರ್ಣಿ ದಂಪತಿಗಳು ಅಪ್ಪಾವರ ಸ್ಮರಣೆ ಮಾಡುತ್ತಾ ದೇವರ ಮನೆಗೆ ಹೋಗುವ ಧೈರ್ಯ ಮಾಡಿದರು.
ದೇವರ ಕಟ್ಟಿಯ ಮೇಲೆ ದೊಡ್ಡದಾದ ಘಟಸರ್ಪವು ಹೆಡೆಆಡಿಸುತ್ತಾ ಕುಳಿತಿತ್ತು..
ಅದನ್ನು ದಿಟ್ಟಿಸಿ ನೋಡಲು ಶ್ರೀ ಇಭರಾಮಪುರ ಅಪ್ಪಾವರ ಆಕೃತಿ ಅವರ ಕಣ್ಣಿಗೆ ಕಾಣಿಸಿದೊಡನೆ,ಇತರ ಜನರೆಲ್ಲ ಒಳಗಡೆ ನುಗ್ಗಿ ದರುಶನ ಪಡೆದರು.
"ಸರ್ಪವು ಅದೃಶ್ಯ ವಾಯಿತು".
ಎಲ್ಲರು ರೋಮಾಂಚಿತರಾಗಿ, ಭಕ್ತಿ ಇಂದ ಅಪ್ಪಾವರು ದರುಶನ ಕೊಟ್ಟ ದೇವರ ಜಗುಲಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.
ದೇವರ ಮನೆಯಲ್ಲಿ ಒಂದು ಎಲೆಯಲ್ಲಿ ಇದು ಶ್ರೀ ಅಪ್ಪಾವರ ಎಲೆ ಎಂದು ಹೇಳಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿ ಇತರ ಬ್ರಾಹ್ಮಣ ಸುವಾಸಿನಿಯರಿಗೆ ಕೃಷ್ಣಾರ್ಪಣಮಸ್ತು ಅಂತ ಹೇಳಿ ಭೋಜನಕ್ಕೆ ಕೂಡಿಸುವರು.
ಕುಲಕರ್ಣಿ ಯವರ ಆನಂದ ಹೇಳತೀರದು.
ಶ್ರೀ ಮಧ್ವ ನವಮಿ ಗೆ ಸರಿಯಾಗಿ ಮಧ್ಯಾಹ್ನ ಸಮಯದಲ್ಲಿ ಬರುತ್ತೇವೆ ಅಂತ ಹೇಳಿದ ಶ್ರೀಅಪ್ಪಾವರು "ಒಂದಂಶದಿಂದ ಶೇಷರೂಪದಿಂದ ದರುಶನ ಕೊಟ್ಟು ಅದೃಶ್ಯ ರಾದ" ಸಂಗತಿಯನ್ನು ನೆನೆದು ಬಹಳ ಸಂತೋಷ ಭರಿತರಾದರು.
ಭೌತಿಕ ದೇಹದಿಂದ ಇರುವ ಸಮಯದಲ್ಲಿ ಸಹ ಬೇರೆ ಕಡೆಗೆ ಒಂದು ಅಂಶದಿಂದ ಬಂದು ಭಕ್ತರ ಉದ್ದಾರ ಮಾಡುವದು ಮತ್ತುಸುಮನೋಹರ ಪರಿಮಳವನ್ನು ಬೀರುವದು ,ಹೀಗೆ ಮೊದಲಾದ ಅಪೂರ್ವ ಮಹಿಮೆಯನ್ನು,ಅಂದಿಗು ಮತ್ತುಇಂದಿಗು ಸಹ ತೋರುತ್ತಾ,ಭಕ್ತರು ಬೇಡಿದ ಇಷ್ಟಾರ್ಥ ಗಳನ್ನು ನೆರವೇರಿಸಿ,ಇಭರಾಮಪುರದಲ್ಲಿ ನೆಲೆಸಿರುವ ಅಪ್ಪಾವರ ಕಾರುಣ್ಯ ಬಹಳ ದೊಡ್ಡದು...
ಭಗವಂತನ ಕೃಪೆ ಇಂದ ಇಂತಹ ಅಪರೋಕ್ಷ ಜ್ಞಾನಿಗಳ ಮಹಿಮೆ ವ್ಯಾಪ್ತವಾದುದು. .
🙏ಶ್ರೀ ಕೃಷ್ಣಾರ್ಪಣಮಸ್ತು🙏
ಸಾನುರಾಗದಿ ಇವರ ಮಹಿಮೆಯ|
ಗಾನ ಮಾಡುತ ಕುಣಿದು ಹಿಗ್ಗಲು|
ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು||
🙏ಅ.ವಿಜಯವಿಠ್ಠಲ🙏
************

ನೆನ್ನೆ ಶ್ರೀ ಅಪ್ಪಾವರ ಚರಿತ್ರೆ ಯನ್ನು ಪೋಸ್ಟ್ ಮಾಡಿದ್ದೆ.ಅದರಲ್ಲಿ ಮಾನವಿಯ ಕುಲಕರ್ಣಿ ಮನೆತನದವರು ಶ್ರೀ ಅಪ್ಪಾವರನ್ನು ಶ್ರೀ ಮಧ್ವ ನವಮಿಗೆ ಬರಲು ಆಹ್ವಾನಿಸಿ ದಾಗ ಶ್ರೀ ಅಪ್ಪಾವರು ಒಪ್ಪಿಗೆ ಕೊಟ್ಟು ಆ ದಿನ ಮಧ್ಯಾಹ್ನದ ಸಮಯದಲ್ಲಿ ಬರುತ್ತೇನೆ ಎಂದು ಹೇಳಿ ಸರಿಯಾದ ಸಮಯಕ್ಕೆ ಅವರ ಮನೆಯ ದೇವರ ಮನೆಯಲ್ಲಿ ಸರ್ಪರೂಪದಿಂದ ಕುಲಕರ್ಣಿ ಮತ್ತು ಅವರ ಮನೆಯವರಿಗೆ ಮತ್ತು ಸಕಲ ಭಕ್ತರಿಗೆ ದರುಶನ ಕೊಟ್ಟ ಬಗ್ಗೆ ಓದಿದ್ದೇವೆ.
ಯೋಗಿಗಳಾದ, ಭಗವಂತನ ಭಕ್ತರು ಅಷ್ಟಸಿದ್ದಿಗಳನ್ನು ಭಗವಂತನ ಅನುಗ್ರಹ ದಿಂದ ಪಡೆದಿರುತ್ತಾರೆ.
"ಇವರು ತಾವು ಯಾವ ರೂಪವನ್ನು ಸ್ವೀಕಾರ ಮಾಡಲು ಅಥವಾ ಧಾರಣೆ ಮಾಡಲು ಬಯಸುವರೋ ಆ ರೂಪದ ಅಂತರ್ಯಾಮಿಯಾದ ಭಗವಂತನನ್ನು ಧ್ಯಾನಿಸಿ ತಮ್ಮ ಯೋಗಬಲ, ಧ್ಯಾನಬಲದಿಂದ ಆ ರೂಪವನ್ನು ಹೊಂದುತ್ತಾರೆ."
ಅದು ಯಾವುದೇ ರೂಪವಾಗಿರಬಹುದು.
ಇಂತಹ ಸಿದ್ದಿಯು ನಮ್ಮ ಶ್ರೀ ಇಭರಾಮಪುರ ಅಪ್ಪಾವರ ಬಳಿ ಇತ್ತು.
ಹೇಳಿದ ಸಮಯಕ್ಕೆ ತಾವು ಸರಿಯಾಗಿ ಆಗಮಿಸಿ ತಾವು  ಇರುವುದನ್ನು  ಶ್ರೀಅಪ್ಪಾವರು ದೇವಲೋಕದ ಪುಷ್ಪಗಳ ಸುವಾಸನೆಯ ಮೂಲಕ ಸೂಚಿಸಿರುವುದೇ ಅವರು ದೇವತೆಗಳು ಮತ್ತು ದೇವಾಂಶರು ಎನ್ನುವುದಕ್ಕೆ ಸಾಕ್ಷಿ. 
"ಶ್ರೀಅಪ್ಪಾವರು ತಮ್ಮ ಪಾಡಿಗೆ ತಾವು  ಬಂದು ಹೋಗಿದ್ದರೂ  ಆಗುತ್ತಾ ಇತ್ತು.ಆದರೆ ತಮ್ಮ ಭಕ್ತರನ್ನು ಎಂದಿಗೂ ನಿರಾಶೆ ಮಾಡದಿರುವುದು ಜ್ಞಾನಿಗಳ ಲಕ್ಷಣ. ಹೀಗಾಗಿಯೇ ಶ್ರೀಅಪ್ಪಾ ವರು  ಮನೆಯಒಳಗಡೆ ತಮ್ಮ ಇರುವನ್ನು ಭಕ್ತರಿಗೆ ಸುವಾಸನೆಯ ಮೂಲಕ ತೋರಿದ್ದಾರೆ. ಅದು ಅವರ ಕಾರುಣ್ಯದ ಎತ್ತರವನ್ನು ತೋರುತ್ತದೆ.
ಇಂತಹ ಅನೇಕ ಭಗವದ್ಭಕ್ತರ ಮಹಿಮೆಗಳು ಅವರ  ಬಗ್ಗೆ  ನಮಗೆ ತಿಳಿದಿದ್ದರೂ ಮೇಲಿಂದ ಮೇಲೆ ಅವರ ಬಗ್ಗೆ ಓದುತ್ತಲೇ ಇರಬೇಕು.
ಇದರಿಂದಾಗಿ ನಮ್ಮ ಮನಸ್ಸು ಶುದ್ದವಾಗುತ್ತದೆ.
ಮನ ಶುದ್ದಿಯಿಂದ ಸಾಧನೆ ಕಡೆ ಹಾದಿ.
ಇಂತಹ ಪರಮ ಭಾಗವತರನು ಕೊಂಡಾಡುವದು ಪ್ರತಿದಿನವು..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಸಾನುರಾಗದಿ ಇವರ ಮಹಿಮೆಯ|
ಗಾನ ಮಾಡುತ ಕುಣಿದು ಹಿಗ್ಗಲು|
ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು||
**********

ತಂದೆಯಲ್ಲವೇ ನಮಗೆ|
ಎಂದೆಂದಿಗೂ ಸಲಹುವ ಇಂದಿರೇಶನ ದಾಸಾ||
✍ಒಮ್ಮೆ ಶ್ರೀಅಪ್ಪಾವರು ಸಂಚಾರತ್ವೇನ ತಮ್ಮ ಭಕ್ತರಾದ ಮುಜಾಮುದಾರರ ಮನೆಗೆ ಬರುತ್ತಾರೆ.
ಅವಾಗ ಮುಜಾಮುದಾರರು ಅಪ್ಪಾವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.
"ಸ್ವಾಮಿ! ತಾವು ಎಲ್ಲರಿಗು ಅನುಗ್ರಹ ಮಾಡಿದ್ದೀರಿ. ಎಲ್ಲರಿಗು ಅವರುಗಳು ಕೇಳಿದ್ದು ಕೊಟ್ಟಿದ್ದೀರಿ.ತಮ್ಮ ಪಾದುಕೆಗಳು,ಕೋಲು, ಇನ್ನೂ ಅನೇಕ...
ಹಾಗೆ ನಮಗು ಸಹ ಅನುಗ್ರಹ ಮಾಡಿ.. 
ಅಂತ  ಕೇಳಿಕೊಂಡಾಗ
ಅವಾಗ್ಗೆ 
ಶ್ರೀಅಪ್ಪಾವರು ಹೇಳುತ್ತಾರೆ.
"ನಾನೇ ನಿಮ್ಮ ಮನೆಯಲ್ಲಿ ಇದ್ದೀನಿ" ಅಂತಾ ಹೇಳಿ ಮುಂದೆ ಪಯಣವನ್ನು ಬೆಳೆಸುತ್ತಾರೆ.
ಒಂದೆರಡು ದಿನಗಳ ನಂತರ ಒಂದು ಘಟನೆ ನಡೆಯುತ್ತದೆ. ಮುಜಾಮುದಾರರು 
ಸ್ನಾನವಾದ ನಂತರ ದೇವರ ಮನೆ,ಕಟ್ಟಿ ಸ್ವಚ್ಛತೆ ಮಾಡಿ ಅಲ್ಲಿ ಇಟ್ಟಿರುವ ಸಂಪುಷ್ಟವನ್ನು ತೆಗೆದುಕೊಂಡು ತುಳಸಿ ತರುವದು ನಿತ್ಯ ಪದ್ಧತಿ.
ಆದಿನ ಸಂಪುಷ್ಟ ಸ್ವಲ್ಪ ಭಾರವಾಗಿ ತೋರಿತು.
ಯಾಕೆ! ಇಷ್ಟು ಭಾರವಾಗಿದೆ? ಅದರಲ್ಲಿ ಏನು ಇಟ್ಟಿಲ್ಲವಲ್ಲ !!!
ಅಂತ ತೆಗೆದು ನೋಡಲಾಗಿ
ಶ್ರೀಅಪ್ಪಾವರ ಬೆಳ್ಳಿಯ ಮೂರ್ತಿ ಸುಮಾರು 3inch ಅಳತೆಯ ಪ್ರತಿಮೆ ಕಾಣುತ್ತದೆ.
ತಕ್ಷಣ, ಮುಜಾಮುದಾರರಿಗೆ ಶ್ರೀ ಅಪ್ಪಾವರು ಹೇಳಿದ ವಾಣಿ.. ನಾನೇ ನಿಮ್ಮ ಮನೆಯಲ್ಲಿ ಇದ್ದೀನಿ..ನೆನಪಿಗೆ ಬರುತ್ತದೆ. ಮತ್ತು
ತಮ್ಮ ಮೇಲೆ  ಅವರು ಮಾಡಿದ  ಅನುಗ್ರಹ ವನ್ನು ನೆನೆದು ಆನಂದಭರಿತರಾಗುತ್ತಾರೆ.
ಆದರೆ ಆ ಪ್ರತಿಮೆಯ ಬಲಗಡೆಯ ಕಿವಿ ಸ್ವಲ್ಪ ದೊಡ್ಡದು ಇರುತ್ತದೆ... 
ಇದು ಯಾಕೋ ಸರಿ ಕಾಣುತಾ ಇಲ್ಲ ಅಂತ ಹೇಳಿ ಅಕ್ಕಸಾಲಿಗನನ್ನು ಕರೆದು ಸಣ್ಣ ರಂಪದಿಂದ(hack saw blade)ಕೊಯ್ಯಲು ಹೇಳುತ್ತಾರೆ.ಅದನ್ನು ಕೊಯ್ಯಲು ಹೋದಾಗ ಅದರಿಂದ ಅಂದರೆ ಬಲಕಿವಿ ಇಂದ ರಕ್ತ ಬರುತ್ತದೆ.. ತಕ್ಷಣ ಅಕ್ಕಸಾಲಿಗ ಭಯದಿಂದ ಅಲ್ಲಿಗೆ ಬಿಟ್ಟು ಕೈ ಮುಗಿಯುತ್ತಾನೆ.🙏
ಆ ನಂತರ ಆ ರಾತ್ರಿ  ಮುಜಾಮುದಾರರ ಸ್ವಪ್ನದಲ್ಲಿ ಶ್ರೀಅಪ್ಪಾವರು ಬಂದು ಹೇಳುತ್ತಾರೆ..
 "ನಿನಗೆ ನಾನು ಬೇಕಾ??ಅಥವ ನನ್ನ ಕಿವಿ ಬೇಕಾ..ಅಂತ ಹೇಳಿ ಅದು ಹಾಗೇ ಇರಲಿ ಅಂತ ಹೇಳುತ್ತಾರೆ.
ಈಗಲೂ ಆ ಪ್ರತಿಮೆ ಮುಜಾಮುದಾರರ ವಂಶಸ್ಥರ ಮನೆಯಲ್ಲಿ ಇದೆ.
ಭಕ್ತರ ಮನೋ ಅಭಿಲಾಷೆ ಪೂರೈಸುವ ಶ್ರೀ ಅಪ್ಪಾವರ ಅನುಗ್ರಹ ಸದಾ ನಮ್ಮ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಕಟ್ಟು ಕಥೆಯಿದು ಅಲ್ಲ|
ದುಷ್ಟ ರಿಗೆ ಸಿಗರೊಲ್ಲ|
ಗಟ್ಟ್ಯಾಗಿ ಇವರ ಭಜಿಸೆ ಬಿಟ್ಟಿರನು ತಾ ಬಲ್ಲ|
ಇಷ್ಟಾರ್ಥ ಸುರಿಮಳೆಯ ಕೊಡುವರಿದು ಸುಳ್ಳಲ್ಲ|
ಎಷ್ಟ್ಹೇಳಲಿವರ ಮಹಿಮೆಯ| ಅರಿಯೆ ನಾ ಖುಲ್ಲ|

🙏ಶ್ರೀ ಕೃಷ್ಣಾಚಾರ್ಯ ಗುರುಂ ಭಜೇ🙏
************

|ಶ್ರೀ ಅಪ್ಪಾವರ ಮಹಿಮೆ||
ಇಂದು ಅವರ ಮಧ್ಯ ಆರಾಧನಾ.
✍ಒಮ್ಮೆ ಶ್ರೀ ಅಪ್ಪಾವರು ಸಂಚಾರತ್ವೇನ ಗದ್ವಾಲ ಪ್ರಾಂತ್ಯಕ್ಕೆ ಹೋಗುತ್ತಾರೆ.
ಅಲ್ಲಿ ಕೆಲ ವರುಷಗಳಿಂದ ಮಳೆ ಬೆಳೆ ಇಲ್ಲದೆ, ಬರಗಾಲ ಬಂದಿರುತ್ತದೆ.
ಶ್ರೀಅಪ್ಪಾವರು ಊರ ಹೊರಗಿನ ಒಂದು ಗಿಡದ ಕೆಳಗೆ ಕುಳಿತಿರುತ್ತಾರೆ.
ಗದ್ವಾಲ ರಾಜ ಅವರನ್ನು ಭೇಟಿಯಾಗಲು ಬರುತ್ತಾನೆ.
ತನ್ನ ರಾಜ್ಯಕ್ಕೆ ಬಂದೊದಗಿದ ದುಸ್ತಿತಿ,ಜನಗಳು ,ಜಾನುವಾರು ಗಳು ಪಡುತ್ತಿರುವ ಕಷ್ಟವನ್ನು ಅಪ್ಪಾವರ ಬಳಿ ತನ್ನ ದುಖಃವನ್ನು ಹೇಳಿಕೊಳ್ಳುವ.
ಅವಾಗ್ಗೆ  ಶ್ರೀಅಪ್ಪಾವರು 
"ರಾಜಾ ನೀನು ಅರಮನೆಗೆ ಹಿಂತಿರುಗು ಮಳೆ ಬರುವದು" ಅಂತ ಹೇಳಿದಾಗ
,ಅವನಿಗೆ ನಂಬಿಕೆ ಬಾರದೇ ಇಷ್ಟು ದಿನ ಬಾರದ ಮಳೆ ಇವಾಗ ಹೇಗೆ ಬರುವದು?? ಅನ್ನುವದು ಅವನ ಮನಸ್ಸಿನಲ್ಲಿ ಆಲೋಚನೆ ಬರುತ್ತದೆ.
ಅದನ್ನು ಕಂಡ ಶ್ರೀಅಪ್ಪಾವರು ಮತ್ತೆ ಅದೇ ಮಾತನ್ನು ಹೇಳುತ್ತಾರೆ. ಅರಮನೆಗೆ ಹಿಂತಿರುಗಿ ಅಂತ.
   ಭಗವಂತನ ಮತ್ತು ಮುಖ್ಯ ಪ್ರಾಣನ ಉಪಾಸಕರ ಮಾತು ಸುಳ್ಳಾಗುವದೇ..
ತನ್ನ ಭಕ್ತ ರಾಡಿದ ಮಾತು ಸತ್ಯ ಮಾಡುವವ ನಮ್ಮ ಶ್ರೀ ಹರಿ.
ಅದರಂತೆ
ಆ ರಾಜ ಅರಮನೆಗೆ ಮುಟ್ಟುವಷ್ಟು ರೊಳಗೆ ಧಾರಾಕಾರ ಮಳೆ ಬಂದು ಆ ರಾಜ್ಯದಲ್ಲಿ ಇರುವ ಕೆರೆ,ಬಾವಿಗಳು,ನದಿ ಎಲ್ಲವೂ ತುಂಬಿ ಹರಿಯುತ್ತದೆ.
ಅದನ್ನು ಕಂಡ ರಾಜನು ಶ್ರೀಅಪ್ಪಾವರ ಬಳಿ ಬಂದು
"ಸ್ವಾಮಿ! ನನ್ನ ರಾಜ್ಯವನ್ನು, ಉಳಿಸಿದ್ದೀರಿ.ನಿಮಗೇನು ಬೇಕು ಕೇಳಿ ಕೊಡುತ್ತೇನೆ." ಅಂಥ ಹೇಳಿದಾಗ ಅವಾಗ್ಗೆ ಶ್ರೀಅಪ್ಪಾವರು ನಸು ನಗುತ್ತಾ
"ರಾಜಾ !ನೀ ಏನು ಕೊಡುತ್ತೀಯೊ?ಭಗವಂತ ನನಗೆ ಎಲ್ಲಾ ಕೊಟ್ಟಾನಾ.ನನಗೆ ಏನು ಬೇಡ ಅಂಥ ಹೇಳುತ್ತಾರೆ.
ಆದರು ಗದ್ವಾಲ ರಾಜ ಬಿಡುವದಿಲ್ಲ, ಪರಿಪರಿಯಾಗಿ ಬೇಡಿಕೊಳ್ಳಲು
ಅವಾಗ್ಗೆ ಶ್ರೀಅಪ್ಪಾವರು ಹೇಳುತ್ತಾರೆ. 
"ನಿಮ್ಮ ಊರಿನಲ್ಲಿ ಇರುವ ಅಗ್ರಹಾರದಲ್ಲಿ ನಮ್ಮ ಸ್ವಾಮಿ ಭಾರತೀಶ ಇದ್ದಾನೆ. ಅವನ ಮೂರ್ತಿಯನ್ನು  ಕೊಡಿಸು ಎನ್ನಲು
ಅವಾಗ್ಗೆ ಶ್ರೀಅಪ್ಪಾವರು ಮತ್ತು ರಾಜ ಇಬ್ಬರು ಅಲ್ಲಿ ಹೋಗುತ್ತಾರೆ. ಅಲ್ಲಿ ಇರುವ ಜನರಿಗೆ ಆ ಸ್ವಾಮಿಯನ್ನು ಕರೆದುಕೊಂಡು ಹೋಗಲು ಕೇಳಿದಾಗ,ಅಲ್ಲಿ ಇರುವ ಯಾರೂ ಒಪ್ಪಿಗೆ ಕೊಡುವದಿಲ್ಲ..
ವಾದ ವಿವಾದಗಳು ಆಗುತ್ತವೆ.
ಅಲ್ಲಿ ಒಬ್ಬ ನನ್ನಂತಹ ಮೂರ್ಖ  ಶ್ರೀಅಪ್ಪಾವರ ಬಗ್ಗೆ ತಿಳಿಯದಂತಹವ  ಹೇಳುತ್ತಾನೆ..
ಹೊರಗೆ ನಿಂತು ಕರಿಯಿರಿ.ಬಂದರೆ ಕರೆದುಕೊಂಡು ಹೋಗಿ ಅಂತ" ಅವನ ಯೋಚನೆ ಏನಿತ್ತು ಎಂದರೆ ಎಲ್ಲಿಯಾದರು ಜಡ ವಸ್ತು, ಕಲ್ಲಿನ ಮೂರ್ತಿ ಅವರ ಹಿಂದೆ ಹೋಗಲು ಸಾಧ್ಯವಿಲ್ಲ ಎಂದು.
ಜಡ ಬುದ್ದಿಯವ ಜಡವಾಗಿ ಯೋಚನೆ ಮಾಡಿದ.ಅದಕ್ಕೆ ಎಲ್ಲರು ಸರಿ ಎಂದರು.

ಕಂಡ ಕಂಡಲ್ಲಿ ವಿಶ್ವ ರೂಪವ ಕಾಂಬುವ ಶ್ರೀ ಹರಿಯ ಭಕ್ತರಾದ  ಶ್ರೀಅಪ್ಪಾವರು ಆ ಮೂರ್ತಿಗೆ ಕೈ ಮುಗಿದು ಅದರಲ್ಲಿ ಅವನ ಸನ್ನಿಧಾನವನ್ನು ವಿಶೇಷವಾಗಿ ಚಿಂತನೆ ಮಾಡಿ ಭಕ್ತಿ ಇಂದ 
"ಭಾರತೀಶ! ನಡಿ ಇಭರಾಮಪುರಕ್ಕೆ .. ಹೋಗೋಣ "ಅಂತ ಕೇಳಿಕೊಂಡು ಕುದುರೆ ಏರಿ ಹೊರಟಾಗ,ಅವರ ಹಿಂದೆಯೆ ಆ ಸ್ವಾಮಿ   ಬರುತ್ತಾನೆ.
ಬಂದಂತಹ ಶ್ರೀ ಮುಖ್ಯ ಪ್ರಾಣದೇವರನ್ನು ತಮ್ಮ ಮನೆಯ ಹತ್ತಿರ ಪ್ರತಿಷ್ಠೆ ಮಾಡುತ್ತಾರೆ.
ಈ ಪ್ರಾಣದೇವರ ಚಿತ್ರ.👆👆
ಈ ಪ್ರಾಣದೇವರ ವಿಶೇಷ ಏನೆಂದರೆ .
ತಲೆಯ ಹಾಗು ಬಾಲದ ಮಧ್ಯ ದಲ್ಲಿ ಸುದರ್ಶನ ಇದೆ.
ಕೈಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದಿದ್ದಾನೆ.
ಶಿಖಾ ಇದೆ ತಲೆಯಲ್ಲಿ.
ಶ್ರೀ ಮುಖ್ಯಪ್ರಾಣದೇವರು  ಕರೆದಕೂಡಲೆ ಬಂದರು.
ಅಂತ ಸಹಜವಾದ ಒಂದು ಕುತೂಹಲ, ನಮಗೆಲ್ಲ ರಿಗೆ ಬರುವದು ಸಹಜ.
ಹೀಗು ನಡೆಯುವದೇ?? ಅಂತ ಕೆಲವರಿಗೆ ಸಂದೇಹ.
ಇದರ ಬಗ್ಗೆ ತಿಳಿದಷ್ಟು ಹೇಳುವ ಪ್ರಯತ್ನ.
"ಪರಮಾತ್ಮನು ಭಕ್ತಪರಾಧೀನನಾದ ಕಾರಣ,ಶ್ರೀ ಇಭರಾಮಪುರ ಅಪ್ಪಾವರಂತಹ ಮಹಾತ್ಮರಿಗೆ ಭಗವಂತನು ವಶನಾದ ಮೇಲೆ ಭಗವಂತನ ಮಗನಾದ ಮತ್ತು ಮಂತ್ರಿಯಾದ ಶ್ರೀಮುಖ್ಯಪ್ರಾಣದೇವರು ಇವರ ಹಿಂದೆ ಬರುವುದು ಉಚಿತವಾಗಿದೆ... 
ಇಂತಹ ಮಹನೀಯರ ಮುಖಾಂತರ ನಮ್ಮಂತಹ ಅಜ್ಞ ಜನಗಳ ಉದ್ಧಾರಗೋಸುಗ ಜೀವೋತ್ತಮರಾದ ವಾಯುದೇವರು, ಸರ್ವೋತ್ತಮನಾದ ಪರಮಾತ್ಮನ  ಅಪೌರುಷೇಯವಾದ ಮಹಿಮೆಯನ್ನು  ವ್ಯಕ್ತಪಡಿಸುವರು.
ಜಡ ಬುದ್ದಿಯವರು ಜ್ಞಾನಿಗಳ ನಡುವಳಿಕೆ ಯಲ್ಲಿ ಸಂಶಯ ದೋಷವನ್ನು ಹುಡುಕಿ ದೋಷಕ್ಕೆ ಗುರಿಯಾಗುವರು.
ಸ್ವತಃ ಮುಖ್ಯ ಪ್ರಾಣದೇವರೇ ಅವರಿಗೆ ಒಲಿದು ಬಂದ.
ನಮಗೆಲ್ಲ ಸಹ ಮುಖ್ಯ ಪ್ರಾಣದೇವರ ಅನುಗ್ರಹ ಶ್ರೀ ಅಪ್ಪಾವರು ಮಾಡಿಸಬೇಕು ಎಂದು ಅವರ ಪಾದ ಕಮಲಗಳಲ್ಲಿ ಪ್ರಾರ್ಥನೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏 
ಕಾಯೋ ಕಾಯೋ ಕಾಯೋ|
ಕೃಷ್ಣಾರ್ಯ ಗುರುವರ|

🙏ಶ್ರೀ ಕೃಷ್ಣಾರ್ಯ ಗುರುವರ ಪಾಹಿಮಾಂ🙏
_ಈ ಪ್ರಾಣದೇವರ ಚಿತ್ರ._ಈ ಪ್ರಾಣದೇವರ ವಿಶೇಷ ಏನೆಂದರೆ .__ತಲೆಯ ಹಾಗೂ ಬಾಲದ ಮಧ್ಯೆ ಸುದರ್ಶನ ಇದೆ, ಕಯ್ಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದಿದ್ದಾನೆ, ತಲೆಯಲ್ಲಿ ಶಿಖಾ ಇದೆ. 
**********





No comments:

Post a Comment