Tuesday 1 January 2019

ರಾಯರು 05 ಮಹಿಮೆ ರಾಘವೇಂದ್ರ ಸ್ವಾಮಿ ವೃಂದಾವನ ಪ್ರವೇಶ rayaru 05 mahime raghavendra swamy


ಮಂತ್ರಾಲಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಹಿನ್ನೆಲೆ.
“ನಾನಿನ್ನು ಎರಡು ವರ್ಷ, ಎರಡು ತಿಂಗಳು, ಎರಡು ದಿನ ಮಾತ್ರ ಈ ಭೌತಿಕ ದೇಹದಿಂದ ಇರುವೆನು, ಅನಂತರ ವೃಂದಾವನವನ್ನು ಪ್ರವೇಶಿಸುವೆನು" ಎಂದು ಗುರುರಾಯರು ಹೇಳಿದರು. ತಮ್ಮ ಗುರುಗಳ ಮೇಲೆ ಅಪಾರ ಭಕ್ತಿ-ವಿಶ್ವಾಸವುಳ್ಳ ಶಿಷ್ಯರಿಗೆ, ಗುರುಗಳು ಶೀಘ್ರದಲ್ಲಿಯೇ ತಮ್ಮನ್ನು ಬಿಟ್ಟು ಹೋಗಲಿದ್ದಾರೆ ಎಂಬುದು ತಿಳಿದಾಗ ಅವರು ಚಿಂತೆಗೊಳಗಾದರು. ಕೆಲವು ದಿನಗಳಲ್ಲಿ ಗುರುರಾಯರು ಸಂಚಾರ ಮಾಡುತ್ತಾ ಆದವಾನಿಗೆ ಬಂದರು. ಆಗ ಅವರ ಅನುಗ್ರಹಕ್ಕೆ ಪಾತ್ರರಾದ ದಿವಾನ ವೆಂಕಣ್ಣನವರು ಗುರುರಾಯರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ತಮ್ಮ ಮನೆಯಲ್ಲಿ ವೈಭವದಿಂದ ಶ್ರೀಗಳವರಿಗೆ ಭಿಕ್ಷೆ ಅರ್ಪಿಸಲು ಎಲ್ಲಾ ಏರ್ಪಾಡುಗಳನ್ನು ಮಾಡಿದರು. ಅಲ್ಲದೇ ನವಾಬ ಸಿದ್ಧೀ ಮಸೂದ ಖಾನನಿಗೆ ಶ್ರೀ ರಾಘವೇಂದ್ರ ಗುರುಗಳ ಮಹಿಮೆಯನ್ನು ಹೇಳಿದರು. ಅವನಿಗೆ ತಪ್ಪದೇ ಶ್ರೀಗಳ ದರ್ಶನ ಪಡೆಯಬೇಕೆಂದು ತಿಳಿಸಿದರು.

ನವಾಬ ಸಿದ್ಧೀ ಮಸೂದ ಖಾನನು, ‘ಈ ಬ್ರಾಹ್ಮಣ ಗುರುಗಳು ಎಂತಹ ಮಹಿಮೆ ಉಳ್ಳವರು ಎಂಬುದನ್ನು ನೋಡೋಣ’ ಎಂದು ಮನಸ್ಸಿನಲ್ಲಿ ಅಂದುಕೊಂಡನು. ಶ್ರೀಗಳು ಮೂಲರಾಮನ ಪೂಜೆ ಮಾಡಿ ನೈವೇದ್ಯ ಮಾಡುತ್ತಿರುವ ಸಮಯದಲ್ಲಿ ನವಾಬನು ಒಂದು ಬಟ್ಟೆ ಹೊದಿಸಿದ ತಟ್ಟೆಯನ್ನು ಸೇವಕನಿಂದ ತರಿಸಿ ಶ್ರೀಗಳ ಮುಂದೆ ಇಟ್ಟನು. ಆ ತಟ್ಟೆಯೊಳಗೆ ಮಾಂಸದ ತುಂಡುಗಳಿದ್ದವು. ಸಿದ್ಧೀ ಮಸೂದ ಖಾನನು ಶ್ರೀ ರಾಘವೇಂದ್ರ ಗುರುಗಳನ್ನು ಪರೀಕ್ಷಿಸಲು ಆ ಏರ್ಪಾಡನ್ನು ಮಾಡಿದ್ದನು. ದಿವಾನ ವೆಂಕಣ್ಣನಿಗೆ ಆ ವಿಷಯ ತಿಳಿದಿರಲಿಲ್ಲ. ಆದರೆ ಶ್ರೀಗುರುವರ್ಯರಿಗೆ ಮಾತ್ರ ನವಾಬನು ಮಾಡಿದ ಕುತಂತ್ರ ತಿಳಿಯಿತು. ಕೂಡಲೇ ಶ್ರೀ ಮೂಲರಾಮನಿಗೆ ಪ್ರಾರ್ಥನೆ ಮಾಡಿ ಕಮಂಡಲದಲ್ಲಿನ ತೀರ್ಥವನ್ನು ಬಟ್ಟೆ ಹೊದಿಸಿದ ತಟ್ಟೆಯ ಮೇಲೆ ಪ್ರೋಕ್ಷಿಸಿ ‘ಬಟ್ಟೆಯನ್ನು ತೆಗೆಯಿರಿ’ ಎಂದು ನವಾಬನಿಗೆ ಹೇಳಿದರು. ನವಾಬನು ಬಟ್ಟೆ ತೆಗೆಯಿಸಿದನು. ಆಗ ತಟ್ಟೆಯಲ್ಲಿ ಮಾಂಸದ ಬದಲು ಅತ್ಯಂತ ಉತ್ತಮ ಗುಣಮಟ್ಟದ ಹಣ್ಣುಗಳು ಮತ್ತು ಗುಲಾಬಿ ಹೂಗಳು ಕಂಡು ಬಂದವು. ನವಾಬನು ಆಶ್ಚರ್ಯಚಕಿತ ನಾದನು. ಶ್ರೀ ರಾಘವೇಂದ್ರ ಗುರುಗಳ ಮಹಿಮೆ ಅಪಾರವಾದುದು ಎಂಬುದು ಅವನಿಗೆ ತಿಳಿಯಿತು. ತಾನು ಮಾಡಿದ ಕೆಲಸಕ್ಕೆ ಅವನಿಗೆ ಬಹಳ ದುಃಖವಾಯಿತು. ತಾನು ಮಾಡಿದ ಅಪರಾಧವನ್ನು ಪರಿಹಾರ ಮಾಡಿಕೊಳ್ಳಲು ದಿವಾನ ವೆಂಕಣ್ಣನನ್ನು ಕರೆದು ‘ಓ ವೆಂಕಣ್ಣಾ! ನಿಮ್ಮ ಗುರುಗಳು ಬಹಳ ದೊಡ್ಡವರು, ಮಹಾಮಹಿಮರು. ನಾನು ಅವರಿಗೆ ಜಹಗೀರುಗಳನ್ನು ಕೊಡಲು ಬಯಸಿದ್ದೇನೆ. ಅವರೇನು ಕೋರಿದರೂ ಕೊಡಲು ಸಿದ್ಧನಾಗಿದ್ದೇನೆ. ಹೋಗಿ ಈ ವಿಷಯವನ್ನು ನಿಮ್ಮ ಗುರುಗಳಿಗೆ ತಿಳಿಸು’ ಎಂದನು.


ದಿವಾನ ವೆಂಕಣ್ಣ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಹೋಗಿ ನವಾಬನು ಹೇಳಿದ ವಿಷಯವನ್ನು ಹೇಳಿದನು. ಆಗ ಶ್ರೀಗಳವರು, ‘ವೆಂಕಣ್ಣಾ! ಸರ್ವಸಂಗ ಪರಿತ್ಯಾಗಿಗಳಾದ ನಮಗೇಕೆ ಜಹಗೀರುಗಳು. ನಮಗೆ ಏನೂ ಬೇಡ, ಆದರೂ ನಿಮ್ಮ ನವಾಬನು ಏನಾದರೂ ತೆಗೆದುಕೊಳ್ಳಲೇ ಬೇಕೆಂಬ ನಿರ್ಬಂಧ ಹಾಕಿದ ಕಾರಣ ತುಂಗಭದ್ರಾ ನದಿ ತೀರದಲ್ಲಿ ಇರುವ ಮಂಚಾಲೆ ಎಂಬ ಗ್ರಾಮವನ್ನು ನಮಗೆ ಕೊಟ್ಟರೆ ಸಾಕು’ ಎಂದರು. ಶ್ರೀಗುರುಗಳು ಕೋರಿದ ಮಂಚಾಲೆ ಗ್ರಾಮವನ್ನು ನವಾಬ ಸಿದ್ಧೀ ಮಸೂದ ಖಾನನು ಮೊದಲೇ ಒಬ್ಬ ಫಕೀರನಿಗೆ ಕೊಟ್ಟಿದ್ದನು. ಆದರೆ ಶ್ರೀಗುರುವರ್ಯರ ಕೋರಿಕೆಯನ್ನು ತಪ್ಪದೇ ನೆರವೇರಿಸುತ್ತೇನೆ ಎಂದು ಹೇಳಿ ನವಾಬನು ಆ ಫಕೀರನಿಗೆ ಬೇರೊಂದು ಗ್ರಾಮವನ್ನು ಕೊಟ್ಟು ‘ಮಂಚಾಲೆ’ ಗ್ರಾಮವನ್ನು ತಿರುಗಿ ತೆಗೆದುಕೊಂಡು ಶ್ರೀ ರಾಘವೇಂದ್ರ ಗುರುಗಳಿಗೆ ಸಮರ್ಪಿಸಿದನು. ಮಂಚಾಲೆ ಎಂದರೆ ಹಿಂದೆ ಶ್ರೀ ಪ್ರಹ್ಲಾದರಾಯರು ಯಜ್ಞ ಮಾಡಿ ಪಾವನಗೊಳಿಸಿದ ಪವಿತ್ರ ಸ್ಥಳ. ಆದುದರಿಂದಲೇ ಶ್ರೀ ರಾಘವೇಂದ್ರ ತೀರ್ಥರು ಮಂಚಾಲೆ ಗ್ರಾಮವನ್ನು ಕೇಳಿಕೊಂಡರು. ನವಾಬನು ಅವರ ಕೋರಿಕೆಯನ್ನು ನೆರವೇರಿಸಿದಲ್ಲದೆ ಬಹಳ ವಿಧವಾಗಿ ಅವರನ್ನು ಸತ್ಕರಿಸಿ ನಮಸ್ಕಾರ ಮಾಡಿ ಬೀಳ್ಕೊಟ್ಟನು.


ಕೊನೆಗೆ ಶ್ರೀ ರಾಘವೇಂದ್ರ ಗುರುಗಳು ವೃಂದಾವನವನ್ನು ಪ್ರವೇಶಿಸುವ ಸಮಯವು ಸಮೀಪಿಸಿತು. ಭಕ್ತರಿಗೆ ಈ ವಿಷಯವು ತಿಳಿಯಿತು. ಭಕ್ತರು ತಂಡೋಪತಂಡವಾಗಿ ಬಂದು ಶ್ರೀಗಳ ದರ್ಶನವನ್ನು ಪಡೆದು, ಆಶೀರ್ವಾದ ಪಡೆದು ಹೋಗುತ್ತಿದ್ದರು. ಶ್ರೀಗಳವರು ದಿವಾನ ವೆಂಕಣ್ಣನನ್ನು ಕರೆದು ಒಂದು ವೃಂದಾವನವನ್ನು ಮಾಡಿಸಿದರು. ವೆಂಕಣ್ಣ ವೃಂದಾವನವನ್ನು ಸಿದ್ಧಪಡಿಸಿದ ಮೇಲೆ ಆ ವಿಷಯವನ್ನು ಶ್ರೀಗಳವರಿಗೆ ತಿಳಿಸಿದನು. ಕೂಡಲೇ ಅವರು, ‘ವೆಂಕಣ್ಣಾ ಈ ವೃಂದಾವನವು ಭವಿಷ್ಯದಲ್ಲಿ ಮತ್ತೊಬ್ಬ ಯತಿಪುಂಗವನಿಗೆ ಉಪಯೋಗವಾಗುವುದು. ಆದುದರಿಂದ ನೀನು ಈಗ ಮಾಧವರ ಎಂಬ ಹಳ್ಳಿಯ ಸಮೀಪದಲ್ಲಿ ಒಂದು ದೊಡ್ಡ ಬಂಡೆಯಿದೆ, ಅದನ್ನು ತರಿಸಿ ವೃಂದಾವನ ಕಟ್ಟಿಸು’ ಎಂದರು. ವೆಂಕಣ್ಣನಿಗೆ ಗುರುಗಳು ಹೀಗೇಕೆ ಹೇಳುತ್ತಿದ್ದಾರೆ ಎಂಬುದರ ಕಾರಣ ತಿಳಿಯಲಿಲ್ಲ. ಆಗ ವೆಂಕಣ್ಣನವರು ಗುರುಗಳಿಗೆ, ‘ಸ್ವಾಮಿ, ತಾವು ಮಾಧವರದ ಸಮೀಪದಲ್ಲಿ ಇರುವ ಕಲ್ಲಿನಿಂದ ವೃಂದಾವನ ನಿರ್ಮಿಸ ಬೇಕೆಂದು ಹೇಳಿದಿರಿ. ಅದಕ್ಕೆ ಕಾರಣ ಏನಾದರೂ ಇದ್ದರೆ ದಯವಿಟ್ಟು ಹೇಳಿ’ ಎಂದರು. ಆಗ ಶ್ರೀಗಳವರು, ‘ವೆಂಕಣ್ಣಾ ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಅರಣ್ಯ ಸಂಚಾರ ಮಾಡುತ್ತಾ ಏಳು ಘಳಿಗೆಗಳ ಕಾಲ ನಾನೀಗ ಹೇಳಿದ ಶಿಲೆಯ ಮೇಲೆ ಕುಳಿತಿದ್ದರು. ಶ್ರೀರಾಮನ ಪಾದಸ್ಪರ್ಷದಿಂದ ಆ ಶಿಲೆ ಬಹಳ ಪ್ರಭಾವವುಳ್ಳದ್ದಾಗಿದೆ. ಆ ಕಲ್ಲನ್ನು ೭೦೦ ವರ್ಷ ಪೂಜೆ ಮಾಡಿಸಿಕೊಳ್ಳ ಬೇಕಾಗಿದೆ. ಆದುದರಿಂದಲೇ ನಾನು ಆ ಶಿಲೆಯಿಂದ ವೃಂದಾವನವನ್ನು ನಿರ್ಮಿಸಲು ಹೇಳಿದೆನು’ ಎಂದು ವೆಂಕಣ್ಣನವರ ಸಂದೇಹವನ್ನು ನಿವಾರಿಸಿದರು.


ವೆಂಕಣ್ಣನವರು ಶ್ರೀಗಳವರ ಆಜ್ಞೆಯ ಮೇರೆಗೆ ವೃಂದಾವನವನ್ನು ಮಾಡಿಸಿದರು. ಹಲವು ಭಕ್ತರು, ಪಂಡಿತರು, ಕವಿಗಳು ಗಾಯಕರು ಶ್ರೀಗಳವರ ವೃಂದಾವನ ಪ್ರವೇಶವನ್ನು ನೋಡಲು ಬಂದರು. ಶ್ರೀರಾಘವೇಂದ್ರ ಗುರುಗಳು ಶ್ರೀವಿರೋಧಿ ಕೃತ್ಸಂವತ್ಸರ ಶ್ರಾವಣ ಬಹುಳ ಬಿದಿಗೆಯ ಗುರುವಾರದಂದು ವೃಂದಾವನವನ್ನು ಪ್ರವೇಶಿಸಿದರು. ವೃಂದಾವನ ಪ್ರವೇಶ ಮಹೋತ್ಸವ ಬಹಳ ವೈಭವದಿಂದ ಜರುಗಿತು. ವೃಂದಾವನವನ್ನು ನಿರ್ಮಿಸಿ ಮಿಕ್ಕಿ ಉಳಿದ ಶಿಲೆಯಿಂದ ಶ್ರೀ ಪ್ರಾಣದೇವರ ವಿಗ್ರಹವನ್ನು ನಿರ್ಮಿಸಿ ಶ್ರೀಗಳವರ ವೃಂದಾವನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದರು. ಇಂದಿಗೂ ಆ ಪ್ರಾಣ ದೇವರಿಗೆ ಮತ್ತು ಶ್ರೀ ರಾಘವೇಂದ್ರ ಗುರುಗಳ ವೃಂದಾವನಕ್ಕೆ ವೇದೋಕ್ತ ಪದ್ಧತಿಯಲ್ಲಿ ಪೂಜೆಗಳು ನಡೆಯುತ್ತಿವೆ.


(ಕೃಪೆ : ಶ್ರೀ ರಾಘವೇಂದ್ರ ಚರಿತಾಮೃತ, ಅನುಗ್ರಹ ಪಬ್ಲಿಸಿಟೀಸ್)

*****

ಶ್ರೀ ಗುರು ರಾಘವೇಂದ್ರರ ಪರಮ ಮಂಗಳವಾದ ಚರಿತೆ ಬರೆಯುವೆ|
ಗುರು ವರದೇಂದ್ರರ ಕರುಣದಿಂದಪನಿತು ಹರುಷದಿಂದ|||

ರಣ ರಣ ಬಿಸಿಲು,ಸೂರ್ಯನ ಪ್ರಕರ ಕಿರಣಗಳಿಗೆ ಎಲ್ಲರು ಬಳಲಿದ್ದರು.ಮುಂದೆ ಪ್ರಯಾಣ ಸಾಗದೇ. ಸ್ವಲ್ಪ ವಿಶ್ರಾಂತಿ ಗೊಸ್ಕರ ಶ್ರೀ ರಾಘವೇಂದ್ರ ಸ್ವಾಮಿಗಳ ಸಂಸ್ಥಾನದ ಪರಿವಾರದವರು ಪ್ರಯಾಣದ ಆಯಾಸ ಪರಿಹರಿಸಿಕೊಳ್ಳಲು ಒಂದು ಕಡೆ ನಿಂತಿದ್ದಾರೆ.
ಬಿಸಿಲಿನ ಬಾಧೆಗೆ ಬಳಲಿದ ಪಲ್ಲಕ್ಕಿ ಹೊರುವ ಮನುಷ್ಯರು ಪಲ್ಲಕ್ಕಿ ಯನ್ನು ಗಿಡದ ಕೆಳಗಡೆ ಇಳಿಸಿ ತಾವು ಒಂದು ಗಿಡದ ಕೆಳಗಡೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಾ ಇದ್ದಾರೆ.
ರಾಯರು ಅಲ್ಲಿ ಯೇ ಇದ್ದ ಒಂದು ದೊಡ್ಡ ಕಟ್ಟಿ ಯ ಮೇಲೆ ಕುಳಿತು ಭಗವಂತನ ಧ್ಯಾನ ಮಾಡುತ್ತಾ ಕುಳಿತಿದ್ದಾರೆ.
ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು
ಅರೇ!!ಏನಿದು??ಏನು ಸ್ವಾಮಿ ಇದು??
ನಿಮ್ಮ ಗುರುಗಳು ನಮ್ಮ ನವಾಬನ ಮಗನ ಗೋರಿ ಮೇಲೆ ಕುಳಿತಿದ್ದಾರೆ.ಇದೇನು ಅವರು ಕೂಡುವ ಪೀಠವೇ??
ಗುರುಗಳಿಗೆ ತಿಳಿಯದು. ನಿಮಗೆ ಗೊತ್ತು ಆಗುವದಿಲ್ಲವೇ??ಗುರುಗಳನ್ನು ಅಲ್ಲಿ ಸತ್ತಹೆಣದ ಗೋರಿಯ ಮೇಲೆ ಕೂಡಿಸಿದ್ದೀರಿ  ಎಂದು ಅಲ್ಲಿ ಬಂದ ವ್ಯಕ್ತಿ ಜೋರಾಗಿ ಮಾತನಾಡತೊಡಗಿದ.
ಮಠದ ಪರಿಚಾರಕರಿಗೆ ಆ ವ್ಯಕ್ತಿಯ ಮಾತುಗಳು ಅಧಿಕಪ್ರಸಂಗ ಎನಿಸಿತು.ಅವನ ವ್ಯಂಗ್ಯ ಭರಿತ ಮಾತುಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡಲು ಮುಂದಾದರು.
ತಕ್ಷಣ ರಾಯರು ತಡೆದು ಅಯ್ಯಾ!!ನೀನು ಹೇಳಿದ ಹಾಗೆ ಹಿಂದೆ ಅದು ಗೋರಿಯಾಗಿತ್ತು.ಇಂದು ಆಗಿಲ್ಲ.ಏನು ಸಂಗತಿ??ನಡೆದ ವಿಷಯ ವನ್ನು ಹೇಳು ಎನ್ನಲು
ಅದಕ್ಕೆ ಆ ವ್ಯಕ್ತಿ ಅಳುತ್ತಾ
ನಿನ್ನೆ ಇದೇ ಸಮಯದಲ್ಲಿ ನಮ್ಮ ನವಾಬರು ತಮ್ಮ ಮಗನ ಜೊತೆಗೆ ಇಲ್ಲಿ ಬಂದಿದ್ದರು. ಆಟವಾಡಲು ಹೋದ ನವಾಬನ ಮಗನಿಗೆ ಹಾವು ಕಚ್ಚಿ ಮೃತನಾದ.ಅತೀವ ದುಃಖದಿಂದ ಇಲ್ಲಿ ಮಣ್ಣಿನ ಗೋರಿ ಮಾಡಿದ್ದಾರೆ.ಆ ಹಸೀ ಗೋಡೆಯ ಮೇಲೆ ತಾವು ಕುಳಿತಿದ್ದಿರಿ ಎಂದು ಎಲ್ಲಾ ವಿಷಯ ಹೇಳಿದ.
ತಕ್ಷಣ ಗುರುಗಳು 
ಅಲ್ಲಯ್ಯಾ!! ಆ ಬಾಲಕ ಸತ್ತಿದ್ದರೆ ಮಾತ್ರ ಇದು ಗೋರಿ.ಅವನು ಸತ್ತಿಲ್ಲ!! ಎಂದು ನಸು ನಗುತ್ತಾ ಹೇಳಿದಾಗ ಆ ವ್ಯಕ್ತಿ ಅಲ್ಲಿ ಇಂದ ಓಡಿಹೋಗಿ ಕೆಲವೇ ನಿಮಿಷದಲ್ಲಿ ನವಾಬ ಮತ್ತು ಅವನ ಪರಿವಾರವನ್ನು ಕರೆತಂದು ನವಾಬರೇ ಈ ಗುರುಗಳು ರಾಜಕುಮಾರ ಸತ್ತಿಲ್ಲ ಅಂತ ಹೇಳುತ್ತಾ ಇದ್ದಾರೆ ಎಂದು ರಾಯರಿಗೆ ತೋರಿಸಿ ಹೇಳಿದ.ತಕ್ಷಣ ನವಾಬ ಕುದುರೆಯ ಮೇಲಿಂದ ಕೆಳಗಡೆ ಹಾರಿ ರಾಯರ ಪಾದಕ್ಕೆ ಬಿದ್ದು ಇದ್ದ ಒಬ್ಬ ಮಗನನ್ನು ಬದುಕಿಸಿ ಕೊಡಲು ಅಂಗಲಾಚಿ ಬೇಡಿಕೊಂಡ.
ರಾಯರ ಅಪ್ಪಣೆ ಯಂತೆ ಗೋರಿಯನ್ನು ಒಡೆದು ಮಗುವಿನ ದೇಹವನ್ನು ಹೊರ ತೆಗೆದರು.ದೇಹದಲ್ಲಿ ಉಸಿರಾಟದ ಸೂಚನೆ ಇಲ್ಲ.ಮೈಯೆಲ್ಲಾ ನೀಲಿಯಾಗಿದೆ.
ಸುತ್ತ ಇದ್ದವರೆಲ್ಲ ತಲೆಗೊಂದು ಮಾತನಾಡಿದರು.
ಯಾವುದೊ ಒಬ್ಬ ಹಿಂದು ಸಾಧುವಿನ ಮಾತು ಕೇಳಿ ಮಗನ ಗೋರಿ ತೆಗೆಸಿದ್ದು ತಪ್ಪು ಎಂದು.
ಆ ಬಾಲಕನ ದೇಹವನ್ನು ಗುರುಗಳ ಮುಂದೆ ಮಲಗಿಸಿದರು.
ರಾಯರು ಮಂತ್ರ ವನ್ನು ಉಚ್ಚಾರಣೆ ಮಾಡಿ ಶ್ರೀ ಹರಿಯ ಸ್ಮರಣೆ ಮಾಡುತ್ತಾ ಆ ಬಾಲಕನ ಮೇಲೆ ಅಭಿಮಂತ್ರಿತ ಜಲವನ್ನು ಪ್ರೋಕ್ಷಣೆ ಮಾಡಲು
ತಕ್ಷಣ ಬಾಲಕ ನಿದ್ರೆ ಇಂದ ಎದ್ದು ಕುಳಿತವರಂತೆ ಕುಳಿತ.
ತನ್ನ ತಂದೆ ತಾಯಿಯ ಕಡೆ ನೋಡಿ ಅವರ ಬಳಿ ಓಡಿದ.
 ಗುರುಗಳ ಮಹಿಮೆಯನ್ನು ನೋಡಿ ಸವಣೂರಿನ ನವಾಬ ತನ್ನ ಕಣ್ಣು ತಾನೇ ನಂಬದಾದ.
ಸತ್ತ ಮಗ ಬದುಕಿಬಂದದ್ದು ನೋಡಿ ಅವನು ಹಾಗು ಅವನ ಪರಿವಾರ ರಾಯರ ಪಾದಕ್ಕೆ ಅಡ್ಡಬಿದ್ದು ತಮ್ಮ ಊರಿಗೆ ಬಹು ಮರ್ಯಾದೆಯಿಂದ ಕರೆದುಕೊಂಡು ಹೋಗಿ ‌, ವಿಶೇಷವಾದ ಗೌರವ ವನ್ನು ರಾಯರಿಗೆ ಮಾಡಿ ಕೃಷ್ಣಾಪುರ ಎಂಬ ಗ್ರಾಮವನ್ನು ದಾನ ಕೊಟ್ಟನು.ರಾಯರ ಅಂತರ್ಯಾಮಿಯಾದ ಶ್ರೀ ಕೃಷ್ಣ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು
*****

ಶ್ರೀ ಗುರು ಜಗನ್ನಾಥ ದಾಸರು ರಾಯರಲ್ಲಿ ಯಾವ ರೀತಿಯಲ್ಲಿ  ಪ್ರಾರ್ಥನೆ ಮಾಡಬೇಕು ಅಂತ ಹೇಳಿದ್ದಾರೆ.👇
ನಿನ್ನ ಕಥೆಗಳ ಶ್ರವಣ ಮಾಡಿಸೋ|
ನಿನ್ನ ಗುಣ ಕೀರ್ತನೆಯ ಮಾಡಿಸೋ|
ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದ ಸೇವಾ|
ನಿನ್ನ ಅರ್ಚನಗೈಸೋ ಗುರುವರ|
ನಿನ್ನ ವಂದನೆ ಗೈಸೊ ದಾಸ್ಯವ|
ನಿನ್ನ ಗೆಳೆತನ ನೀಡೋ ಯತಿವರ ಎನ್ನನರ್ಪಿಸುವೆ||


ಇವರ ಪಾದ ಸ್ಮರಣೆಯ ಮಾಡದವನೇ ಪಾಪಿ|
ಮಂದಭಾಗ್ಯರಿಗೆ ದೊರಕದಿವರ ಸೇವಾ|

******


No comments:

Post a Comment