Tuesday 1 January 2019

ರಾಯರು 07 ಮಹಿಮೆ ರಾಘವೇಂದ್ರ ಸ್ವಾಮಿ rayaru 07 mahime raghavendra swamy


 ಶ್ರೀ ಪರಿಮಳಾಚಾರ್ಯ - 1 "
[ ಶ್ರೀ ರಾಯರ ಪಟ್ಟಾಭಿಷೇಕ - ಜನುಮದಿನದ ವಿಶೇಷ ]

" ಶ್ರೀಮನ್ನ್ಯಾಯಸುಧಾ ಪರಿಮಳ - ಒಂದು ಚಿಂತನೆ "

ಇದು ಶ್ರೀಭಗವನ್ವೇದವ್ಯಾಸರು ರಚಿಸಿದ " ಬ್ರಹ್ಮ ಸೂತ್ರ " ಗಳಿಗೆ ಶ್ರೀಮದಾಚಾರ್ಯರು " ಅನುವ್ಯಾಖ್ಯಾನ " ವೆಂಬ ಗ್ರಂಥವನ್ನು ರಚಿಸಿದರು. ಈ ಅನುವ್ಯಾಖ್ಯಾನಕ್ಕೆ ಶ್ರೀಮಜ್ಜಯತೀರ್ಥರು ರಚಿಸಿದ ಪರಮ ಅದ್ಭುತವಾದ ಟೀಕೆ " ಶ್ರೀಮನ್ನ್ಯಾಯಸುಧಾ ". ಈ ಗ್ರಂಥದ ಆದ್ಯಂತ ಶ್ಲೋಕಗಳು...

ಆದಿ :
ಶ್ರೀಯಃಪತ್ಯೇ ನಿತ್ಯಾಗಣಿತ ಗುಣ ಮಾಣಿಕ್ಯ ವಿಶದ-
ಪ್ರಭಾಜಾಲೋಲ್ಲಾಸೋಪಹತ ಸಕಲಾವದ್ಯ ತಮಸೇ ।
ಜಗಜ್ಜನ್ಮಸ್ಥೇಮ ಪ್ರಲಯ ರಚನಾ ಶೀಲವಪುಷೋ 
ನಮೋSಶೇಷಾವನ್ಮಾಯಸ್ಮೃತಿ ಹೃದಯದೀಪ್ತಾಯ ಹರಯೇ ।।

ಅಂತ್ಯ :

ಇತಿ ಶ್ರೀಮತ್ಪೂರ್ಣಪ್ರಮತಿ ಭಗವತ್ಪಾದ ಸುಕೃತೇ-
ರನುವ್ಯಾಖ್ಯಾನಸ್ಯ ಪ್ರಗುಣ ಜಯತೀರ್ಥಾಖ್ಯಯತಿನಾ ।
ಕೃತಾಯಾಂ ಟೀಕಾಯಾಂ ವಿಷಮ ಪದ ವಾಕ್ಯಾರ್ಥ ವಿಮೃತೌ 
ಚತುರ್ಥೇSಧ್ಯಾಯೇSಸ್ಮಿನ್ ಚರಮ ಚರಣಃ ಪರ್ಯವಸಿತಃ ।।

ಈ ಪ್ರೌಢ ಗ್ರಂಥಕ್ಕೆ ಹೊರಟ ಟೀಕಾ - ಟಿಪ್ಪಣಿಗಳು ಅಸಂಖ್ಯ. ಅವುಗಳ ವಿವರ..

1. ವಾಗ್ವಜ್ರಮ್ - ಶ್ರೀ ಶ್ರೀಪಾದರಾಜರು 
2. ಶ್ರೀಮನ್ನ್ಯಾಯಸುಧಾಬಿಂದುಃ - ಶ್ರೀ ವಿಜಯೀಂದ್ರತೀರ್ಥರು
3. ಗುರ್ವಾರ್ಥದೀಪಿಕಾ - ಶ್ರೀ ಭಾವಿಸಮೀರ ವಾದಿರಾಜರು 
4. ವಿವೃತ್ತಿಃ - ಶ್ರೀ ಕಂಬಾಲೂರು ರಾಮಚಂದ್ರತೀರ್ಥರು 
5. ಪರಿಮಳ - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 
6. ಯದುಪತ್ಯ ಟಿಪ್ಪಣಿ - ಶ್ರೀ ಯಾದವಾರ್ಯರು 
7. ಸುಧಾ ಟಿಪ್ಪಣಿ - ಶ್ರೀ ಬಿದರಳ್ಳಿ ಶ್ರೀನಿವಾಸಾಚಾರ್ಯರು 
8. ಆನಂದಃ - ಶ್ರೀ ಗಲಗಲಿ ನರಸಿಂಹಾಚಾರ್ಯರು 
9. ವಾಕ್ಯಾರ್ಥ ಚಂದ್ರಿಕಾ - ಶ್ರೀ ವಿದ್ಯಾಧೀಶತೀರ್ಥರು 
10.ಭಾವರತ್ನ ಕೋಶಃ - ಶ್ರೀ ಸುಮತೀಂದ್ರತೀರ್ಥರು 
11. ಲಘು ರಸ ರಂಜನೀ - ಶ್ರೀ ವ್ಯಾಸತತ್ತ್ವಜ್ಞತೀರ್ಥರು
12. ಗುರು ರಸ ರಂಜನೀ - ಶ್ರೀ ವ್ಯಾಸತತ್ತ್ವಜ್ಞತೀರ್ಥರು
13. ಕುಲಿಶಮ್ - ಶ್ರೀ ವ್ಯಾಸತತ್ತ್ವಜ್ಞತೀರ್ಥರು 
14. ಶೇಷವಾಕ್ಯಾರ್ಥ ಚಂದ್ರಿಕಾ - ಶ್ರೀ ಪಾಂಡುರಂಗಿ ಕೇಶವಾಚಾರ್ಯರು 
15. ರಸ ಕೂಲಂಕುಷಃ - ಶ್ರೀ ಕುಂಡಲಗಿರಿ ಆಚಾರ್ಯರು 
16. ಸುಧಾ ವಿವೃತ್ತಿಃ - ಶ್ರೀ ಸತ್ಯವ್ರತತೀರ್ಥರು
17. ದುರ್ಘಟವಾಕ್ಯಾರ್ಥವಿಚಾರಃ ಮತ್ತು ನ್ಯಾಯಸುಧಾ ಪಾರಾಕು - ಶ್ರೀ ಸತ್ಯನಾಥತೀರ್ಥರು
18. ರಸರಂಜನೀ - ಶ್ರೀ ಮಾದನೂರು ವಿಷ್ಣುತೀರ್ಥರು 
19. ಲಘು ರಸರಂಜನೀ - ಶ್ರೀ ಅಡವಿ ಕೃಷ್ಣಾಚಾರ್ಯರು 
20. ಚಷಖ - ಶ್ರೀ ಮನ್ನಾರಿ ಕೃಷ್ಣಾಚಾರ್ಯರು 
21. ಉಪಸ್ಪರ್ಶಃ - ಶ್ರೀ ಏರೀ ಬಾಳಾಚಾರ್ಯರು 
22. ನ್ಯಾಯಸುಧಾವಿವೃತ್ತಿಃ - ಶ್ರೀ ಅಹೋಬಳಾಚಾರ್ಯರು
23. ನ್ಯಾಯಸುಧಾ ಸೌಧ ವ್ಯಾಕ್ಯಾರ್ಥ ಚಂದ್ರಿಕಾ ರತ್ನಮಾಲಾ - ಶ್ರೀ ಪಾಂಡುರಂಗೀ ನರಸಿಂಹಾಚಾರ್ಯರು
24. ನ್ಯಾಯಸುಧಾ ವ್ಯಾಖ್ಯಾನ - ಶ್ರೀ ರತ್ನಗರ್ಭ ಒಡೆಯರು 
25. ನ್ಯಾಯಸುಧಾ ವ್ಯಾಖ್ಯಾನ - ಶ್ರೀ ಪ್ರಹ್ಲಾದಾಚಾರ್ಯ ಉಮರ್ಜಿ 
26. ನ್ಯಾಯಸುಧಾ ಟಿಪ್ಪಣಿ - ಶ್ರೀ ಕಾಶಿ ತಿಮ್ಮಣ್ಣಾಚಾರ್ಯರು 
27. ನ್ಯಾಯಸುಧಾ ಮಂಡನಮ್ - ಶ್ರೀ ಸತ್ಯಪ್ರಮೋದತೀರ್ಥರು 
28. ಸುಧಾವಿವೃತ್ತಿಃ - ಶ್ರೀ ರೊಟ್ಟಿ ವೆಂಕಟಭಟ್ಟರು 
29. ಸುಧಾ ಪಾಕ್ಕಿಕಾ - ಶ್ರೀ ಸತ್ಯಪರಾಕ್ರಮತೀರ್ಥರು 
30. ವಾಕ್ಯಾರ್ಥ ವಿವೃತ್ತಿ - ಶ್ರೀ ವಂಶಪಲ್ಲಿ ಶ್ರೀನಿವಾಸಾಚಾರ್ಯರು 
31. ಶ್ರೀ ಸುಧಾ ಟಿಪ್ಪಣಿ - ಶ್ರೀ ಪಾಂಘ್ರಿ ಶ್ರೀನಿವಾಸಾಚಾರ್ಯರು 
32. ಹುಗ್ಗಿ - ಶ್ರೀ ಕಲ್ಲಾಪುರ ಸತ್ಯಾಧಿರಾಜಾಚಾರ್ಯರು 
33. ಟಿಪ್ಪಣಿ - ಶ್ರೀ ತಾಮ್ರಪರ್ಣಿ ಆನಂದತೀರ್ಥಾಚಾರ್ಯರು 
34. ನ್ಯಾಯಸುಧಾ ಕಂಠಕೋದ್ಧಾರಃ - ಶ್ರೀ ಜಾಲಿಹಾಳ ಶ್ರೀನಿವಾಸಾಚಾರ್ಯರು. 
35. ಪಂಚರತ್ನ ಸ್ಫಟಿಕಃ - ಶ್ರೀ ಗಲಗಲಿ ಗೋವಿಂದಾಚಾರ್ಯರು 
36. ಪಂಚಾಧಿಕರಣೆ - ಶ್ರೀಮುಷ್ಣಂ ಆಚಾರ್ಯರು 
37. ಶ್ರೀಮನ್ನ್ಯಾಯಸುಧಾ ಟಿಪ್ಪಣಿ - ಶ್ರೀ ಹುಲಗಿ ಶ್ರೀಯಃಪತ್ಯಾಚಾರ್ಯರು 
38. ಸಿದ್ಧಾಂತ ಪ್ರಭಾ - ಶ್ರೀ ಲಿಂಗೇರಿ ಶ್ರೀನಿವಾಸಾಚಾರ್ಯರು

ಮೇಲ್ಕಂಡ ಟಿಪ್ಪಣಿ ಮತ್ತು ವ್ಯಾಖ್ಯಾನಗಳಲ್ಲಿ ಸರ್ವಕಾಲೀನ ಶ್ರೇಷ್ಠ ಟಿಪ್ಪಣಿ , ಸಮಗ್ರ ಮತ್ತು ಸಂಪೂರ್ಣವಾದದು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ ಕೃತ " ಪರಿಮಳ ". ಇದು ಮಠಾತೀತವಾಗಿ ಸರ್ವರಿಂದಲೂ ಪೂಜ್ಯನೀಯ ಶ್ರೀಮನ್ನ್ಯಾಯಸುಧಾಕ್ಕೆ ಸರ್ವ ಶ್ರೇಷ್ಠ ಟಿಪ್ಪಣಿ. ಆದ್ದರಿಂದಲೇ ಶ್ರೀಮನ್ನ್ಯಾಯಸುಧಾ ಪರಿಮಳ ಎಂದು ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟಿದೆ.

" ಪರಿಮಳ ಮಹಿಮೆ "

ಶ್ರೀಮನ್ನ್ಯಾಯಸುಧಾ ಪರಿಮಳವು ವೈಷ್ಣವ ಸಿದ್ಧಾಂತದ ಕಲಶ ಕೃತಿ. ಇದರಿಂದಲೇ ಶ್ರೀ ರಾಯರಿಗೆ " ಪರಿಮಳಾಚಾರ್ಯ " ರೆಂಬ ಹೆಸರು. ವೇದಾಂತ ವೀಥಿಯಲ್ಲಿ ಶ್ರೀ ಜಯತೀರ್ಥರ ಸುಧಾ ಗ್ರಂಥವು ಒಂದು ಸೀಮೆ ಗಲ್ಲು. ಈ ಪ್ರೌಢ ಗ್ರಂಥಕ್ಕೆ ಹೊರಟ ಟೀಕೆ - ಟಿಪ್ಪಣಿಗಳು ಅಸಂಖ್ಯ. ಅವುಗಳಲ್ಲಿ " ಪರಿಮಳ " ವು ಒಂದು " ಅನರ್ಘ್ಯರತ್ನ ".

ಈ ಪರಿಮಳದಲ್ಲಿ ಶ್ರೀ ಗುರುಸಾರ್ವಭೌಮರು ಪ್ರತಿ ಪದಕ್ಕೂ ಅರ್ಥ ಬರೆಯುವುದಿಲ್ಲ. ಪಂಡಿತರಿಗೆ ಸಂದೇಹ ಬರಬಹುದಾದ ಸಂದರ್ಭಗಳಲ್ಲಿ ಮೇಲೆ ಬೆಳಕಿನ ಸೆಳಕನ್ನು ಮಿಂಚಾಡಿಸುತ್ತಾರೆ. ಹೀಗೆ ಶ್ರೀಮನ್ನ್ಯಾಯಸುಧೆಯ ಮರ್ಮಸ್ಥಳದ ಮೇಲೆಯೇ ಬೆರಳಿಟ್ಟಂತೆ ಸಂಕ್ಷಿಪ್ತವಾಗಿ ಬರೆಯುತ್ತಾ ಹೋದರೂ ಪರಿಮಳವು ಹೆಬ್ಬೊತ್ತಿಗೆಯಾಗಿದೆ.

ಮಹಾಭಾಷ್ಯಂ ವೆಂಕಣ್ಣಭಟ್ಟರಿಗೆ ವೈಯಾಕರಣದ ಸಂಸ್ಕಾರ ಬಲವತ್ತರವಾಗಿದೆ. ಪರಿಮಳ ಬರೆಯುವ ಸಂದರ್ಭದಲ್ಲಿ...

ಅರ್ಧಮಾತ್ರಾ ಲಾಘವೇನ ಪುತ್ರೋತ್ಸವಂ ಮನ್ಯoತೇ ವೈಯಾಕರಣಾಃ ।।

ಒಂದು ಶಬ್ದ ಅರ್ಧ ಮಾತ್ರೆ ಕಡಿಮೆಯಾದರೆ ಗಂಡು ಮಗು ಹುಟ್ಟಿದಷ್ಟು ಹಿಗ್ಗು ವ್ಯಾಕರಣ ಪಂಡಿತರಿಗೆ ಎಂದು ಹೇಳಿದ್ದಾರೆ. ಹತ್ತು ಮಾತುಗಳಲ್ಲಿ ಸ್ತುತಿಸಿ ಹೇಳುವ ಇತರರ ಭಾವವನ್ನು ಶ್ರೀ ಗುರುಸಾರ್ವಭೌಮರು ಮುತ್ತಿನಂಥಹಾ ಒಂದೇ ಮಾತಿನಲ್ಲಿ ಹೇಳಿ ಅವರಿಗಿಂತಾ ಹೆಚ್ಚಿನ ಬೆಳಕನ್ನು ಬೀರುತ್ತಾರೆ.

ಶಾಸ್ತ್ರ ಪ್ರಪಂಚದಲ್ಲಿ ಮಾತುಗಳ ಇಂತಹ ತೂಕ, ಪಾಕಗಳು ವಿರಳವಾಗಿಯೇ ಕಾಣ ಸಿಗುತ್ತದೆ. ಆ ದೃಷ್ಠಿಯಿಂದ " ಪರಿಮಳವು ಪಾರಿಜಾತ ಕುಸುಮದಂತೆ ತನ್ನ ಸೌಗಂಧವನ್ನು ವೇದಾಂತ ವಿಶ್ವವನ್ನೇ ಸುರಭೀಕರಿಸುತ್ತಿದೆ.

" ಶ್ರೀಮನ್ನ್ಯಾಯಸುಧಾ ಪರಿಮಳ - ಒಂದು ಚಿಂತನೆ "

ದ್ವೈತ ವೇದಾಂತ ಗುರು ಪರಂಪರೆಯ ವಿಶಾಲಾಕಾಶದಲ್ಲಿ ಬೆಳಗಿ ಬೆಳಗುತ್ತಿರುವ ಧ್ರುವತಾರೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು. ಮೊದಲ ಆಶ್ರಮದಲ್ಲಿ ದೊಡ್ಡ ವೈಣಿಕರು. ಮುಂದಿನ ಆಶ್ರಮದಲ್ಲಿ ಪರಮ ಅದ್ಭುತ ವೈದಿಕರು. ಮೊದಮೊದಲು ವೀಣೆಯಿಂದ ನಾದ ಹರಿಸಿ ಸಜ್ಜನರನ್ನು ನಾದಲೋಲ ದೇವನೆಡೆಗೆ ಸೆಳೆಯುತ್ತಿದ್ದ ಇವರು ಮುಂದೆ ತಾವೇ ವೀಣೆಯಾದರು.

ಅಥ ಖಲ್ವಿಯಂ ದೈವೀ ವೀಣಾ ಭವತಿ ।।

ಎಂದು ಐತರೇಯೋಪನಿಷತ್ತು ನಿರೂಪಿಸಿದಂತೆ ತಾವೇ ವೀಣೆಯಾಗಿ ಭಗವಂತನ ಗುಣ ಪಾರಮ್ಯದ ಗಾನವನ್ನು ಮಿಡಿದರು. ಆ ಮೂಲಕ ಭಕ್ತ ಭಾವುಕರ ಹೃದಯ ಅವರೆಡೆಗೆ ಮಿಡಿಯಿತು.

ಅವರ ಬರವಣಿಗೆಯಲ್ಲಿ ಸ್ವತಂತ್ರ ಗ್ರಂಥಗಳು ಅತ್ಯಲ್ಪ. ಹಿಂದಿನವರು ಬರೆದಿಟ್ಟ ಗ್ರಂಥರಾಶಿಯ ಅಂತರಂಗವನ್ನು ತೆರೆದು ತೋರುವುದಕ್ಕಾಗಿಯೇ ತಮ್ಮ ಬರವಣಿಗೆಯನ್ನು ಮೇಸಲಿಟ್ಟವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು!

ಅಂಥಹಾ ಟಿಪ್ಪಣಿ ಗ್ರಂಥಗಳಲ್ಲಿ ಎಲ್ಲಕ್ಕಿಂತಾ ದೊಡ್ಡ ವಿಸ್ತೃತ ಟಿಪ್ಪಣಿಯೆಂದರೆ " ಪರಿಮಳ ".

ಅಪೌರುಷೇಯ ಗ್ರಂಥರಾಶಿ ವೇದ. ಅವುಗಳ ಅರ್ಥ ನಿರ್ಣಯಕ್ಕಾಗಿ ಹಾಕಿದ ಚೌಕಟ್ಟು ಬ್ರಹ್ಮಸೂತ್ರ. ಸೂತ್ರಗಳ ಅರ್ಥ ವಿವರಣೆ ಭಾಷ್ಯ ಮತ್ತು ಅನುಭಾಷ್ಯಗಳು. ಅನುಭಾಷ್ಯ ( ಅನುವ್ಯಾಖ್ಯಾನ ) ದ ಟೀಕೆ " ನ್ಯಾಯಸುಧೆ " ಎಂದೇ ಖ್ಯಾತವಾದ " ವಿಷಮ ಪದ ವಾಕ್ಯಾರ್ಥ ವಿವೃತ್ತಿ ".

" ನ್ಯಾಯಸುಧೆ " ಗೆ ಶ್ರೀ ರಾಯರು ರಚಿಸಿದ ಶ್ರೇಷ್ಠ ಟಿಪ್ಪಣಿ " ಪರಿಮಳ ". ಟಿಪ್ಪಣಿಕಾರರ ಭಾರ ದೊಡ್ಡದು. ಶ್ರೀ ರಾಯರು ಟೀಕೆಯನ್ನು ವಿವರಿಸಬೇಕು. ಕೆಲವೊಮ್ಮೆ ಅನುಭಾಷ್ಯವನ್ನು ಮುಟ್ಟಬೇಕು. ಮತ್ತೊಮ್ಮೆ ಸೂತ್ರವನ್ನು ತಟ್ಟಬೇಕು. ಇನ್ನೊಮ್ಮೆ ವೇದವನ್ನೂ ವ್ಯಾಖ್ಯಾನಿಸಬೇಕು.

" ಪರಿಮಳ ಏಕೆ? "

ಶ್ರೀ ವಾದೀಂದ್ರತೀರ್ಥರೆಂದರು..

ಧೀರಶ್ರೀ ರಾಘವೇಂದ್ರ ತ್ವದತುಲ ರಸನಾರಂಗ ನೃತ್ಯತ್ ಸ್ವಯಂಭೂ 
ಯೋಷಾಧಮ್ಮಿಲ್ಲ ಭಾರಶ್ಲಥಕುಸುಮ ತತೀಸ್ತ್ವದ್ಗಿರಸ್ಸಂಗಿರಾಮಃ ।
ಯಾಭಿಸಮ್ಮಿಶ್ರತಾಭಿರ್ನಿರವಧಿವಸುಧಾ ಸಾ ಸುಧಾಪಿ 
ಕ್ಷೋಣೀಗೀರ್ವಾಣಗಮ್ಯಂ ಪರಿಮಲಮತುಲಂ ಸಾಂಪ್ರತಂ ಸಾಂಪ್ರಪೇದೇ ।।

ಪಾಠ ಪ್ರವಚನಗಳನ್ನು ಮಾಡುತ್ತಿದ್ದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ರಸನಾ ರಂಗ ಸ್ಥಳದಲ್ಲಿ ವಾಗ್ದೇವಿಯ ನರ್ತನ ನಡೆದಿದೆ. ಆದ ವಾಗ್ದೇವಿಯ ಕೇಶ ವಿನ್ಯಾಸದ ಮಲ್ಲಿಗೆ ಬಿಡಿಯಾಗಿ ಉದುರಿದೆ. ಅವನ್ನೆಲ್ಲ ಒಟ್ಟು ಸೇರಿಸಿದಾಗ " ದಿವ್ಯ ಪರಿಮಳ " ಬಂದಿದೆ. ಅದೇ " ಶ್ರೀಮನ್ನ್ಯಾಯಸುಧಾ ಪರಿಮಳ " ಅಂದರೆ ಶ್ರೀ ಸುಧೀಂದ್ರತೀರ್ಥರಲ್ಲಿ ತಮ್ಮ ಸುಧಾ ಅಧ್ಯಯನ ಕಾಲದಲ್ಲಿ ಅಲ್ಲಲ್ಲಿ ಅಡಿ ಟಿಪ್ಪಣಿಗಳನ್ನು ಮಾಡಿಕೊಂಡಿದ್ದರು. ಅನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಸಂಪಾದಿಸಿದ ಈ ಗ್ರಂಥ " ಪರಿಮಳ ". ಆದ್ದರಿಂದಲೇ ಅಧ್ಯೇತೃವಿಗೂ, ಅಧ್ಯಾಪಕನಿಗೂ ಅತ್ಯುಪಯುಕ್ತ.

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಟಿಪ್ಪಣಿಯನ್ನು ಕಮಲಾಲಯನಿಗೆ ಅರ್ಪಿಸಿದ ಮೇಲೆ ಗ್ರಂಥಾಂತ್ಯದಲ್ಲಿ..

ಯೇ ತು ನ್ಯಾಯಸುಧಾಪಾನಕಾಮುಕಾ ರಸಿಕಾ ಬುಧಾಃ ।
ಆಘ್ರಾಯೇಮಂ ಪರಿಮಲಂ ಸೇವ೦ತಾಂ ತೇ ಸುಧಾಮಿಮಾಮ್ ।।

ಈ ನ್ಯಾಯಸುಧೆಯೆಂಬ ಅಮೃತವನ್ನು ಕಡೆಯ ಬಯಸಿದ ಓ ರಸಜ್ಞ ಜ್ಞಾನಿಗಳೇ! ಈ ಪರಿಮಳವನ್ನು ಆಘ್ರಾಣಿಸಿ ಆಘ್ರಾಣ ಮಾತ್ರದಿಂದ ಹೃಷ್ಟರಾಗಿ ಉತ್ಸಾಹಗೊಂಡು ಸುಧೆಯನ್ನು ಕುಡಿಯಿರಿ. ರುಚಿಕರವಾದ ತಿಂಡಿಯೂ ಪರಿಮಳದ ಕಾರಣದಿಂದ ಹೆಚ್ಚು ರುಚಿಸುವುದಿಲ್ಲವೇ? ನಾರೀಕೇಲ ಪಾಕಕ್ಕೆ ಏಲಕ್ಕಿ ಸೇರಿಸಿದಂತೆ!

" ಅನ್ವರ್ಥ ಟಿಪ್ಪಣಿ "

ಸುಲಲಿತ ಸುಮಧುರ ಶಬ್ದ ಪುಂಜದೊಡನೆ ಪ್ರೌಢ ಗಾಂಭೀರ್ಯದಿಂದ ಸಾಗುವ ನ್ಯಾಯಸುಧೆಯನ್ನು ಅಧ್ಯಯನ ಮಾಡುವವನಿಗೆ ಹತ್ತು ಹಲವು ಸಮಸ್ಯಗಳು ಎದುರಾಗುತ್ತವೆ. ಈ ವಾಕ್ಯ ಇದ್ದಕ್ಕಿದ್ದಂತೆ ಏಕೆ ಹೊರಟಿದೆ? ಬೇರೆಡೆ ಹೆಚ್ಚು ಕಾಣಸಿಗದ ಇದೇ ಶಬ್ದವನ್ನು ಬಳಿಸಿದುದರ ಔಚಿತ್ಯವೇನು? ಈ ವ್ಯಾಕರಣಕ್ಕೆ ಈ ಶಬ್ದ ಬದ್ಧವೇ? ಈ ಮಾತಿನ ಭಾವವೇನು? ಇದರಿಂದ ಪ್ರಕೃತಕ್ಕೇನು ಉಪಯೋಗ? ಅಲ್ಲಿ ಅಂದುದಕ್ಕೂ ಇಲ್ಲಿ ಅನ್ನುತ್ತಿರುವುದಕ್ಕೂ ಹೊಂದಿಕೆಯಾಗುತ್ತಿಲ್ಲವಲ್ಲಾ? ಇಷ್ಟು ಉದ್ದದ ಟೀಕೆಯಿಂದ ಒಟ್ಟು ಏನು ಹೇಳಿದಂತಾಯಿತು? ಇಂತಹಾ ಯಾವ ಪ್ರಶ್ನೆ ಬಂದರೂ ಉತ್ತರಕ್ಕಾಗಿ ಪರಿಮಳದೆಡೆಗೆ ಕಣ್ಣು ಹಾಕಿಸಿದರೆ ಸಾಕು.

" ಪರಿಮಳ ಟಿಪ್ಪಣಿ ಸಾಗುವ ಸಾಮಾನ್ಯ ಕ್ರಮ ಹೀಗೆ "...

ಮೊತ್ತಮೊದಲು ನ್ಯಾಯಸುಧೆಯ ಈ ಪ್ರಕರಣ ಏನು ಹೇಳ ಹೊರಟಿದೆ ಎಂಬ ವಿವೇಚನೆಯ ಚಿಕ್ಕವಾದ ಚೊಕ್ಕವಾದ ಅವತರಣಿಕೆಯ ಮಾತು, ಮುಂದಿನ ಮಾತಿನಲ್ಲಿ ಆ ವಾಕ್ಯದ ಅಂತರ ಭಾವದ ನಿರೂಪಣೆ. ಅದರಿಂದಾಗಿ ಪ್ರಕೃತೋಪಯೋಗ ವಿವೇಚನೆ, ವ್ಯಾಕರಣ, ಮೀಮಾಂಸಾ ವಿಷಯಗಳು ಆಜ್ಞನಿಗೂ ಅರ್ಥವಾಗುವಂತೆ ಸುಲಲಿತ ಬೋಧನೆ. ಪ್ರಕರಣ ಮುಗಿದೊಡನೆ ಸಮಗ್ರ ವಿಷಯ ಸಂಗ್ರಹ. ಅನಿವಾರ್ಯ, ಅವಶ್ಯಕವೆನಿಸಿದಲ್ಲಿ ಮಾತ್ರ ಗ್ರಂಥಾಂತರದಲ್ಲಿಯ ವಿಷಯಗಳ ಉಲ್ಲೇಖ. ಈ ವಿಶಿಷ್ಟ ಶೈಲಿಯಿಂದ ಪರಿಮಳವು ಜಿಜ್ಞಾಸು ವೃಂದಕ್ಕೆ ಕಲ್ಪವೃಕ್ಷವಾಗಿದೆ.

ಆರಂಭದಲ್ಲಿ ಶ್ರೀ ಗುರುರಾಜರು ಒಂದು ಮಾತೆಂದರು..

ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿಗರ್ಭಿತಾ ।
ಪ್ರತಿಭಾತಿ ಸುಧಾsಥಾಪಿ ಗ್ರಂಥಾಲ್ಪತ್ವಾಯ ನೋಚ್ಯತೇ ।।

ನ್ಯಾಯಸುಧೆಯ ಒಂದೊಂದು ಪದದಲ್ಲಿ ಹತ್ತು ಹಲವು ಅರ್ಥಗಳು ನಮಗೆ ಹೊಳೆಯುತ್ತಿವೆ. ವಾಕ್ಯ ವಾಕ್ಯವೂ ಅನೇಕ ಭಾವವನ್ನು ಹೊರಸೂಸಿವೆ. ಗರ್ಭದಲ್ಲಿ ಇಣುಕಿ ನೋಡಿದರೆ ಇನ್ನಷ್ಟು ಅರ್ಥಗಳು. ಆದರೆ ಅವೆಲ್ಲವನ್ನು ಇಲ್ಲಿ ಬರೆಯಲಾರೆ. ಗ್ರಂಥ ಅತಿ ಹಿರಿಯದಾಗಬಾರದಲ್ಲವೇ?

ಇಂತಹಾ ಔಚಿತ್ಯ ಪ್ರಜ್ಞೆಯೊಡನೆ ಮೇರು ಪಾಂಡಿತ್ಯದ ಹೆಮ್ಮೆಯುಳ್ಳ ಇವರ ವಿನಯದ ಮಾತನ್ನು ಕೊನೆಯಲ್ಲಿ ನೋಡಬೇಕು...

ಜ್ಞಾನಾಬ್ಧಿರಪ್ಯವಾದೀದ್ಯತ್ ಸ್ಖಲತ್ವಂ ಸ್ವಾತ್ಮನಸ್ಸದಾ ।
ಮಾದೃಶಾನಾಂ ಸ್ಖಲತ್ವಂ ಕಿಂ ವಾಚ್ಯಂ ಕ್ಷಾಮ್ಯಂತು ತದ್ಬುಧಾಃ ।।

ಜ್ಞಾನದ ಕಡಲೆನಿಸಿದ ಜಯತೀರ್ಥರೇ ಎಡವು ತಡವುಗಳು ನನ್ನಿಂದ ನಡೆಯಲು ಸಾಧ್ಯವೆಂದು ಹೇಳಿರಲು, ನನ್ನಂಥವರು ಎಡುವುವೆಂದು ಹೇಳತಕ್ಕದ್ದೇನಿದೆ? ಅಂಥಹಾ ಎಡವನ್ನು ಸಜ್ಜನ ವಿವೇವಿಗಳು ಕ್ಷಮಿಸಬೇಕು.

ನ್ಯಾಯಸುಧೆ ಆಕಾರದಲ್ಲಿ ಆಗಲೀ, ವಿಚಾರದಲ್ಲಾಗಲೀ ಚಿಕ್ಕ ಗ್ರಂಥವಲ್ಲ. ಇದಕ್ಕೆ ಟಿಪ್ಪಣಿ ಬರೆಯ ಹೊರಡಬೇಕಾದರೆ ಎದೆಗಾರಿಕೆ ಬೇಕು. ಮುಗಿಸಬಲ್ಲೆನೆಂಬ ವಿಶ್ವಾಸ ಬೇಕು. ಆರಂಭಿಸಿದವರೆಲ್ಲಾ ಮುಗಿಸಿಲ್ಲ. ಮುಗಿಸಿದವರೆಲ್ಲರೂ ಆರಂಭಿಸಿಲ್ಲ. ಕೆಲವೇ ಭಾಗಗಳಿಗೆ ಟಿಪ್ಪಣಿ ಬರೆಯುವೆನೆಂದು ಸಂಕಲ್ಪಿಸಿ ಹಲವು ವರ್ಷಗಳ ವರೆಗೆ ಬರೆದ ಟಿಪ್ಪಣ್ಯಾಚಾರ್ಯರಿದ್ದಾರೆ. ಅಂಥಲ್ಲಿ ಸಮಗ್ರ ನ್ಯಾಯಸುಧೆಗೆ ಬರೆದಿರುವ ಈ ಪರಿಮಳ ಶ್ರೀ ಗುರುಸಾರ್ವಭೌಮರು ಶಿಷ್ಯ ಪ್ರೀತಿಯಿಂದ ಲೋಕಕ್ಕಿತ್ತ ವರದಾನ!

" ಇತರ ಶಾಸ್ತ್ರಗಳ ಸುಸ್ಪಷ್ಟ ವಿವರಣೆ "

ವ್ಯಾಕರಣ, ಮೀಮಾಂಸಾ ಮೊದಲಾದ ಶಾಸ್ತ್ರಗಳ ವಿಷಯಗಳನ್ನು ಸಂದರ್ಭೋಚಿತವಾಗಿ ವಿವರಿಸುವುದರ ಮೂಲಕ ಟೀಕೆಯನ್ನು ಅರ್ಥೈಸಿಕೊಳ್ಳಲು ಶ್ರೀ ಗುರುರಾಜರು ಅನುವು ಮಾಡಿಕೊಡುತ್ತಾರೆ. ಟೀಕೆಯಲ್ಲಿ ವ್ಯಾಕರಣದ ಬಗೆಗೆ ಏನು ಮಾತು ಬಂದರೂ ತಕ್ಷಣ ಶ್ರೀ ರಾಯರ ಬರವಣಿಗೆಯನ್ನು ತೆರೆಯುವುದು ವಿದ್ವತ್ಪ್ರಪಂಚದಲ್ಲಿ ರೂಢಿಯಾಗಿದೆ. ಪುಂಖಾನುಪುಂಖವಾಗಿ ಸೂತ್ರಗಳನ್ನು ಉದಾಹರಿಸಿ ಅವುಗಳಿಗೆ ಶಾಸ್ತ್ರ ಸಮ್ಮತವಾದ ಅರ್ಥವನ್ನು ವಿವರಿಸುವ ಅವರ ಶೈಲಿ ಅನ್ಯಾದೃಶ್ಯ. ಓಂಕಾರ ಮತ್ತು ಬ್ರಹ್ಮ ಶಬ್ದದ ನಿಷ್ಪತ್ತಿ, ಸ್ಥೇಮ ಶಬ್ದ ಸ್ವರೂಪ ಮುಂತಾದವು ಇದಕ್ಕೆ ಉದಾಹರಣೆಗಳು.

ವ್ಯಾಕರಣದಂತೆ ಪೂರ್ವ ಮೀಮಾಂಸಾದಲ್ಲೂ ಶ್ರೀ ರಾಯರಿಗೆ ಅದ್ಭುತ ಗತಿಯಿದೆ.ಭಾಟ್ಟಸಂಗ್ರಹವನ್ನು ಬರೆದವರು ರಾಯರು. ಟೀಕೆಯಲ್ಲಿ ಹೆಚ್ಚು ಮೀಮಾಂಸಾ ನ್ಯಾಯಗಳ ಬಳಕೆ ಇಲ್ಲದಿದ್ದರೂ ಸಿ ರಾಯರು ಸಂದರ್ಭಾನುಸಾರಿ ನ್ಯಾಯಗಳನ್ನು ಉಲ್ಲೇಖಿಸುತ್ತಾ ಗ್ರಂಥ ಗೌರವವನ್ನು ಹೆಚ್ಚಿಸಿದ್ದಾರೆ.

" ಸರಲ ಸುಂದರ "

ಸಂಸ್ಕೃತ ಭಾಷೆಯಲ್ಲಿ ಸುಲಭದ ವಿಷಯವನ್ನು ಕಷ್ಟಕರವಾಗುವಂತೆಯೂ ಹೇಳಬಹುದು. ಕ್ಲಿಷ್ಟವಾದುದನ್ನು ತಿಳಿಯಾಗಿಯೂ ನಿರೂಪಿಸಬಹುದು. ನ್ಯಾಯಶಾಸ್ತ್ರದ ಪರಿಷ್ಕಾರಗಳ ಪ್ರಣಾಲಿಯನ್ನು ಅನುಸರಿಸಿ ನಿರೂಪಿಸ ತೊಡಗಿದರೆ ಕೆಲವೊಮ್ಮೆ ಚಿಕ್ಕ ವಿಷಯವೂ ಸಾಮಾನ್ಯ ಓದುಗರಿಗೆ ಶಿರಃ ಶೂಲೆಯನ್ನುಂಟು ಮಾಡಿ ಬಿಡುತ್ತದೆ. ಅದೇ ವಿಷಯವನ್ನು ಲೋಕ ದೃಷ್ಟಾಂತವನ್ನಿತ್ತು ವಿವರಿಸಿದಾಗ ಸರಲತಮವೆನಿಸುತ್ತದೆ. ಶ್ರೀ ರಾಯರು ಎರಡನೇ ಕ್ರಮ ಹೆಜ್ಜೆ ಹೆಜ್ಜೆಗೂ ಇದನ್ನು ನಾವು " ಪರಿಮಳ " ದಲ್ಲಿ ಗಮನಿಸಬಹುದು.

ಬಹು ಭಾಷಣ - ಲೇಖನಗಳಿಂದೇನು? ಶ್ರೀ ರಾಯರ ಪರಿಮಳವನ್ನು ಆದ್ಯಂತ ಓದುತ್ತಾ ಸಾಗಿದರೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ವ್ಯಾಕರಣ ನಿಖರತೆಯನ್ನು ಕೊಂಡಾಡಬೇಕೋ; ಮೀಮಾಂಸಾ ವೈದುಷ್ಯವನ್ನು ಹೊಗಳಬೇಕೋ; ನ್ಯಾಯ ನೈಪುಣ್ಯತೆಯನ್ನು ಬಣ್ಣಿಸಲೋ; ವೇದ ವಿದ್ಯಾ ಪಾರಂಗತತೆಯನ್ನು ಪ್ರಶಂಸಿಸಲೋ; ಧರ್ಮ ಶಾಸ್ತ್ರ ಚಾತುರ್ಯವನ್ನು ಸ್ತುತಿಸಲೋ; ಲೋಕ ಜ್ಞಾನ - ವಿಷಯ - ವೇತ್ತೃತ್ವವನ್ನು ವಿವರಿಸಲೋ ಏನೂ ತಿಳಿಯದಾಗಿಬಿಡುತ್ತದೆ. ಇವರೆಂಬ ಭಾವವೊಂದು ಉದಿಸಿಬಿಡುತ್ತದೆ.

" ಪರಿಮಳದ ಬಗ್ಗೆ ಅಲ್ಪ ಶಬ್ದಗಳಲ್ಲಿ ಬರೆಯ / ಹೇಳ ಹೊರಟ ಉದ್ಧಟತನದ ಬಗ್ಗೆ ಅಸಹ್ಯವೆನಿಸಿ, ಕಣ್ಣಲ್ಲಿ ನೀರು ತುಂಬಿ ಪರಮ ಅತ್ಯಂತ ದಯಾಳು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಕಡೆ ಮನಸ್ಸು ಬಾಗಿ ಬಿಡುತ್ತದೆ ".

ಆದ್ದರಿಂದ ಮೇಲ್ಕಂಡ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಶ್ರೀ ರಾಘವೇಂದ್ರತೀರ್ಥರೊಬ್ಬರೇ " ಶ್ರೀಮನ್ನ್ಯಾಯಸುಧೆ " ಗೆ ಸಮಗ್ರವಾದ ಮತ್ತು ಸಂಪೂರ್ಣವಾದ " ಪರಿಮಳ " ಎಂಬ ಟೀಕೆಯನ್ನು ಬರೆದಿದ್ದಾರೆ ಎನ್ನುವುದು ಸುಸ್ಪಷ್ಟ. ಅದಕ್ಕಾಗಿಯೇ " ಶ್ರೀಮನ್ನ್ಯಾಯಸುಧಾ ಪರಿಮಳ " ಎಂದು ಸರ್ವಕಾಲದಲ್ಲಿಯೂ; ಸಕಲ ವಿದ್ವನ್ಮಂಡಲಿ ಒಪ್ಪಿರುವ ಏಕೈಕ ಟಿಪ್ಪಣಿ " ಪರಿಮಳ ". ಇದಕ್ಕೆ ಕಾರಣ ಶ್ರೀ ರಾಯರ ಪರಿಮಳವು ಶ್ರೀಮನ್ನ್ಯಾಯಸುಧೆಯ ಸಂಪೂರ್ಣವಾದ ಟಿಪ್ಪಣಿ!

ಶ್ರೀ ವಿದ್ಯಾರಣ್ಯರು ಶ್ರೀ ಜಯತೀರ್ಥರ " ಪ್ರಮಾಣ ಲಕ್ಷಣ ವ್ಯಾಖ್ಯಾನ " ನೋಡಿ ತಲೆದೂಗಿ ಆನೆಯ ಮೇಲೆ ಕೂಡಿಸಿ ಮೆರವಿಣಿಗೆ ಮಾಡಿದರೇ, ಶ್ರೀ ರಾಯರ ಭಾಟ್ಟಸಂಗ್ರಹ " ಎಂಬ ಗ್ರಂಥವನ್ನು ಶ್ರೀ ಅಪ್ಪಯ್ಯದೀಕ್ಷಿತರ ಮೊಮ್ಮಗ ಹಾಗೂ ಅದ್ವೈತ ವಿದ್ಯಾಚಾರ್ಯರಾದ ಶ್ರೀ ನೀಲಕಂಠ ದೀಕ್ಷಿತರು ಆನೆಯ ಮೇಲಿಟ್ಟು ಮೆರವಣಿಗೆ ಮಾಡಿದ್ದಾರೆ. ಇದು ಶ್ರೀ ಬಾದರಾಯಣ - ಶ್ರೀ ಆಚಾರ್ಯ ಮಧ್ವರ - ಶ್ರೀ ಜಯತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ರಾಯರ ವೈಭವ!!

ಶ್ರೀ ಹರಿ ವಾಯುಗಳ ಶ್ರೀ ಜಯತೀರ್ಥರ ಪರಿಪೂರ್ಣ ಅನುಗ್ರಹ ಪಾತ್ರರಾದ ಶ್ರೀ ರಾಯರ ಟಿಪ್ಪಣಿ ರತ್ನದ ಹೆಸರು ಶ್ರೀಮಜ್ಜಯತೀರ್ಥರ ಟೀಕಾ ರತ್ನದ ಜೊತೆ ಹೊಂದುತ್ತದೆ ಅದಕ್ಕಾಗಿಯೇ " ಶ್ರೀಮನ್ನ್ಯಾಯಸುಧಾ ಪರಿಮಳ " ಎಂದು ಪಂಡಿತರು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಶ್ರೀಮನ್ನ್ಯಾಯಸುಧೆಗೆ ಸರ್ವಕಾಲೀನ ಸಂಪೂರ್ಣ ಮತ್ತು ಸಮಗ್ರವಾದ ಟಿಪ್ಪಣಿ " ಪರಿಮಳ " ವೇ ಪ್ರಸಿದ್ಧವಾದ ಟಿಪ್ಪಣಿ "
by ಗುರು ವಿಜಯ ಪ್ರತಿಷ್ಠಾನ


***

ಇನ್ನೊಮ್ಮೆ ಬಾ ರಾಘವೇಂದ್ರ
ಜನಮನದಲ್ಲಿ ಸದ್ಭಾವನೆ ಬಿತ್ತಲು ಇನ್ನೊಮ್ಮೆ ಬಾ ಗುರುರಾಯ ಎಂಬ ದಾಸರ ಹಾಡಿನಂತೆ ಕಲಿಯುಗದಲ್ಲಿ ತುಂಬಿ ತುಳುಕುತ್ತಿರುವ ಅನೀತಿ, ಅಧರ್ಮ, ಭ್ರಷ್ಟಾಚಾರ ಹೋಗಲಾಡಿಸಲು ಮತ್ತೊಮ್ಮೆ ಈ ಭೂಮಿ ಮೇಲೆ ಅವತರಿಸಿ ಎಲ್ಲರನ್ನು ಉದ್ದರಿಸಲು ರಾಯರು ಇನ್ನೊಮ್ಮೆ ಬರುವುದು ಅಗತ್ಯವಾಗಿದೆ.
ರಾಘವೇಂದ್ರರು ಕೇವಲ ನರ ಮಾನವರಲ್ಲ ಅವರ ಜನ್ಮ ವೃತ್ತಾಂತದ ಮಹಿಮೆ  ಅಪರಂಪಾರವಾಗಿದೆ. 
ಹಲವು ಯುಗಗಳ ಹಿಂದೆ ಸತ್ಯ ಲೋಕದ  ಒಡೆಯ ಬ್ರಹ್ಮದೇವರು ಶ್ರೀ ಹರಿಯ ಪೂಜೆಗೆ ತುಳಸಿ, ಹೂವುಗಳನ್ನು ತಂದು ಕೊಡಲು ಶಂಕುಕರ್ಣನೆಂಬ ಸೇವಕನನ್ನು ನೇಮಿಸಿದ್ದರು.
ಒಂದು ದಿನ ಹೂ ತರಲು  ತಡಮಾಡಿದ್ದರಿಂದ ಕೋಪಗೊಂಡ ಬ್ರಹ್ಮದೇವರು,  ಭೂಲೋಕದಲ್ಲಿ ನೀನು ರಾಕ್ಷಸನಾಗಿ ಜನ್ಮ ತಾಳು ಎಂದು ಶಾಪ ಕೊಡುತ್ತಾರೆ. ಶಂಕಕರ್ಣನು ಶಾಪದಿಂದ ಮುಕ್ತಿ ನೀಡುವಂತೆ ಪರಿಪರಿಯಾಗಿ ಬ್ರಹ್ಮನಲ್ಲಿ ಬೇಡಿಕೊಳ್ಳುತ್ತಾನೆ. ಶಿಷ್ಯನ ಭಕ್ತಿಗೆ ಮೆಚ್ಚಿ  ಬ್ರಹ್ಮನು ನೀನು ನಿರಂತರ ಶ್ರೀಹರಿಯ ಸೇವೆ ಮಾಡಿದ್ದರಿಂದ ರಾಕ್ಷಸರ ವಂಶದಲ್ಲಿ ಜನಿಸುವೆ ಆದರೇ  ಸ್ವಭಾವದಲ್ಲಿ ಶ್ರೀ ಹರಿಯ ಭಕ್ತನಾಗಿ ಮೆರೆಯುವೆ ಎಂದು ಹೇಳಿದನಂತೆ.
ಬ್ರಹ್ಮದೇವರ ಸಂಕಲ್ಪದಂತೆ ಶಂಕಕರ್ಣನು ಹಿರಣ್ಯಕಷ್ಯಪನೆಂಬ ಅಸುರನ ಪುತ್ರನಾಗಿ ಜನಿಸುತ್ತಾನೆ. ಪ್ರಹ್ಲಾದನಾಗಿ ಬೆಳೆಯುತ್ತಾನೆ. ಅದೇ ಪ್ರಹ್ಲಾದನೇ ಮುಂದೆ ವ್ಯಾಸರಾಯರಾಗಿ ನಂತರ ಶ್ರೀ ರಾಘವೇಂದ್ರರಾಗಿ ಅವತರಿಸುತ್ತಾರೆ.
ತಿಮ್ಮಣ್ಣ ಭಟ್ಟ ಮತ್ತು ಗೋಪಿಕಾಂಬಾ ದಂಪತಿಗಳ ಪುತ್ರನಾಗಿ 1595 ಫಾಲ್ಗುಣ ಶುಕ್ಲ ಸಪ್ತಮಿ ಗುರುವಾರದಂದು ಭೂಲೋಕದ ಜನತೆಯ ಇಷ್ಟಾರ್ಥ ಪೂರೈಸುವ ವೆಂಕಟನಾಥರಾಗಿ ರಾಯರು ಜನಿಸಿದರು.
ಅದೆ ಸಂದರ್ಭದಲ್ಲಿ ಶ್ರೀ ಮಠದ ಮಠಾಧೀಶರಾಗಿ ಶ್ರೀ ಸುಧೀಂದ್ರತೀರ್ಥರು ಅಧಿಕಾರ ವಹಿಸಿಕೊಂಡಿದ್ದರು. ವೆಂಕಟನಾಥನ ಉಪನಯನ ಮಾಡಿ ಇದೆ ಮಠಕ್ಕೆ ಬಿಡಬೇಕೆಂದು ಶ್ರೀಪಾದಂಗಳವರ ಅಪ್ಪಣೆ ಆಯಿತು. ಶ್ರೀಗಳ ಸಂಕಲ್ಪದಂತೆ ವೆಂಕಟನಾಥನ ವಿದ್ಯಾಭ್ಯಾಸ ಕುಂಭಕೋಣಂ ಮಠದಲ್ಲಿ ನಡೆಯಿತು.
ನಂತರ ಸರಸ್ವತಿಯೊಂದಿಗೆ 1614ರಲ್ಲಿ ವೆಂಕಟನಾಥರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಸಾರದ ಜವಬ್ದಾರಿ ಹೊತ್ತ ಅವರು ತುಂಡೀರಮಂಡಲದಲ್ಲಿ ಪ್ರಸಿದ್ದಿ ಯಾದ ಕಾವೇರಿ ಪಟ್ಟಣ ಎಂಬ ಅಗ್ರಹಾರದಲ್ಲಿ ಜೀವನ ಸಾಗಿಸತೊಡಗಿದರು. ತಮ್ಮ ಶಿಷ್ಯರ ವಿದ್ಯಾಭ್ಯಾಸದೊಂದಿಗೆ ಅವರ ಜೀವನಕ್ಕೂ ಇವರೇ ನೆರವಾಗಬೇಕಾಗಿತ್ತು. ಮೊದಲೇ ಬಡತನ ಅವರ ಬೆನ್ನು ಹತ್ತಿತ್ತು. ತಮ್ಮ ಸಂಸಾರವೇ ಭಾರವಾಗಿರುವಾಗ ಶಿಷ್ಯರ ಜೀವನಕ್ಕೆ ಹೇಗೆ ನೆರವಾಗಬೇಕೆಂಬ ಚಿಂತೆ ಅವರನ್ನು ಕಾಡತೊಡಗಿತು. ವಿದ್ಯಾರ್ಜನೆಗೆ ಬಂದ ಮಕ್ಕಳನ್ನು ಮರಳಿ ಕಳಿಸಲು ಒಪ್ಪದ ಅವರು ವಿದ್ಯಾದಾನ ಮಾಡಲು ಸಿದ್ದರಾದರು.
ಬಡತನ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ನಿತ್ಯ ಊಟಕ್ಕೂ ಗತಿ ಇಲ್ಲದಂತಾಯಿತು. ವೇದ ಶಾಸ್ತ್ರಪಾರಂಗತರಾದ ವೆಂಕಟನಾಥರು ಬಡತನದ ಸ್ಥಿತಿ ಸುಧಿಂದ್ರತೀರ್ಥರಿಗೆ ತಿಳಿಯಿತು. ಕೂಡಲೇ ಅವರನ್ನು ಮಠಕ್ಕೆ ಕರೆಯಿಸಿ ಆಶ್ರಯ ನೀಡಿದರು. ಶ್ರೀ ನಾರಾಯಣ ಪಂಡಿತಾಚಾರ್ಯರು ರಚಿಸಿದ ಶ್ರೀಮದಾನಂದತೀರ್ಥ ಭಗವತ್ಪಾದರು ಎಂಬ ಗ್ರಂಥಕ್ಕೆ ವ್ಯಾಖ್ಯಾನ ಬರೆಯುವ ಯೋಗ ಶ್ರೀಗಳಿಂದ ಸಿಕ್ಕಿತು.
ಶ್ರೀ ಮೂಲರಾಮದೇವರ ಅನುಗ್ರಹ, ಶ್ರೀ ಗಳ ಸಂಕಲ್ಪದಂತೆ ತಂಜಾವೂರಿನಲ್ಲಿ 1621ರಲ್ಲಿ ಫಾಲ್ಗುಣ ಶುದ್ಧ ಬಿದಗಿಯಂದು ವೆಂಕಟನಾಥರಿಗೆ  ಸನ್ಯಾಸ ದೀಕ್ಷೆ ನೀಡಿದ ಸುಧೀಂದ್ರರು ರಾಘವೇಂದ್ರತೀರ್ಥರು ಎಂದು ಅಭಿದಾನ ನೀಡಿ, ಮಠದ ಜವಬ್ದಾರಿ ವಹಿಸಿಕೊಟ್ಟರು.
ಮುಂದೆ ರಾಯರು ಹಲವಾರು ಪವಾಡಗಳನ್ನು ಮಾಡುತ್ತಾ ಸಂಕಷ್ಟದಲ್ಲಿದ್ದವರನ್ನು ಉದ್ದರಿಸಿದರು.
ಶ್ರೀ ರಾಘವೇಂದ್ರರು 48 ಅಮೋಘ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅಣುಮಧ್ವವಿಜಯ ವ್ಯಾಖ್ಯಾನ ವೊಂದನ್ನು ಬಿಟ್ಟರೆ ಉಳಿದೆಲ್ಲವೂ ಸನ್ಯಾಸಾಶ್ರಮ ಸ್ವೀಕರಿಸಿದ ನಂತರವೇ ರಚನೆಗೊಂಡಿವೆ. ಮೂರು ವೇದಗಳನ್ನು ಕುರಿತು ಗ್ರಂಥ ಬರೆದಿದ್ದಾರೆ. ಅದರಲ್ಲಿ ಋಗ್ವೇದ ಕೃತಿ ಪ್ರಮುಖವಾಗಿದೆ. ತಂತ್ರ ದೀಪಿಕಾ, ನ್ಯಾಯ ಮುಕ್ತಾವಲಿ, ಬ್ರಹ್ಮ ಸೂತ್ರಭಾಷ್ಯ, ಟೀಕಾನ್ಯಾಯ ಸುಧಾ- ಪರಿಮಳ, ಶ್ರೀ ಕೃಷ್ಣ ಚರಿತ್ರೆ ಮಂಜರಿ ಸೇರಿದಂತೆ 48 ಗ್ರಂಥಗಳ ಮೂಲಕ ಅಕ್ಷರಾನುಗ್ರಹ ನೀಡಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆ , ಕರ್ನಾಟಕದ ರಾಯಚೂರಿನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಮಂತ್ರಾಲಯದಲ್ಲಿ ರಾಘವೇಂದ್ರರು 1671 ರಲ್ಲಿ ವೃಂದಾವನಸ್ಥರಾದರು.
ಬಡತನದಲ್ಲಿ ಜೀವನ ಸಾಗಿಸಿದ ರಾಯರು ಇಂದು ಚಿನ್ನ, ಬೆಳ್ಳಿಯಲ್ಲಿ ಅಲಂಕೃತ ರಥದಲ್ಲಿ ವೈಭವಯುತವಾಗಿ ಮೆರೆಯುತ್ತಾ ಪಾಮರರನ್ನು ಪಾವನಗೊಳಿಸುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಭಕ್ತರಿಗೆ ಅನ್ನ ದಾನ ನಡೆಯುತ್ತದೆ. ಅವರು ಉಪವಾಸ ಅನುಭವಿಸಿದರೂ ತಮ್ಮ ದರುಶನಕ್ಕೆ ಬರುವ ಭಕ್ತರಿಗೆ ಹೊಟ್ಟೆ ತುಂಬ ಊಟ ಮಾಡಿಸಿ ಕಳುಹಿಸುತ್ತಿದ್ದಾರೆ.


ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ
****

No comments:

Post a Comment