Tuesday 1 January 2019

ವಿಶ್ವೇಶ ತೀರ್ಥರು 02 ಪೇಜಾವರ ಶ್ರೀ 02 vishwesha teertharu 02 pejavara shree 02


29 December 2019 ಇವತ್ತು ನಮ್ಮೆಲ್ಲರ  ಗುರುಗಳಾದ ಶ್ರೀ ಪೇಜಾವರ ಶ್ರೀಗಳು ತಮ್ಮ ದೇಹವನ್ನು ತ್ಯಜಿಸಿ ಜಗದ್ವಾಪಿಗಳಾಗಿದ್ದಾರೆ. ಇನ್ನು ಮುಂದೆ ಅವರು ಸದಾ ನಮ್ಮೆಲ್ಲರ ಹೃದಯದಲ್ಲಿ ಹಾಗೂ ತಾನು, ಮನದಲ್ಲಿ ವಾಸಿಸಲಿದ್ದಾರೆ.

ವಿಶ್ವೇಶತೀರ್ಥ vishwesha thirtha
ಹೌದು! ನಾವೆಷ್ಟು ಸುದೈವಿಗಳು! ಕೇಳಿದರೆ ನಂಬಲಿಕ್ಕೂ ಸಾಧ್ಯವಾಗದ ಪ್ರಸಂಗವೊಂದಕ್ಕೆ ಸಾಕ್ಷಿಯಾಗಿದ್ದೇವೆ. ಇಂದು ಖಂಡಿತ ಭಾರತದ ಪರ್ವದಿನ.ಈ ದೇಶ ಕಂಡ ಧೀಮಂತ ಸಂತ, ಪರಮಪೂಜ್ಯ ಪೇಜಾವರ ಶ್ರೀಪಾದರು ಕೇವಲ ಸನ್ಯಾಸಾಶ್ರಮದಲ್ಲಿಯೇ ಎಂಭತ್ತು ವರ್ಷಗಳನ್ನು ಸಾರ್ಥಕವಾಗಿಸಿದ ಪರ್ವ ದಿನ.
                 ನಮ್ಮ ಮುಂದಿನ ಪೀಳಿಗೆಯ ಜನ ಇಂಥ ಒಬ್ಬ ಸಂತರು ಇದ್ದರು ಎಂದರೆ ಖಂಡಿತ ನಂಬಲಾರರು.ಅಂಥ ಪರಿಪೂರ್ಣಶುದ್ಧ ವ್ಯಕ್ತಿತ್ವ ಶ್ರೀಪಾದರದ್ದು.ಫೋನೆತ್ತಿದರೆ ಸುಳ್ಳನಾಡುವ ಈ ಕಾಲದಲ್ಲಿ ಒಮ್ಮೆಯೂ ಸುಳ್ಳು ಸುಳಿಯದ ಬಾಯಿ, ಶುದ್ಧಾಂತಃಕರಣ,ನಂಬಲಿಕ್ಕೂ ಸಾಧ್ಯವಾಗದ ಪ್ರಾಮಾಣಿಕತನ,ಸರಳತೆ,ಸಕಲವಾದಿಗಳನ್ನೂ ಮಣಿಸಿದ, ಮಣಿಸಬಲ್ಲ ಪಾಂಡಿತ್ಯ, ಅದಕ್ಕೆ ತಿಲಕಪ್ರಾಯವಾದ ನಿರಹಂಕಾರ,ನಿರಾಡಂಬರತೆ ಒಂದೇ ಎರಡೇ ಎಲ್ಲ ಸದ್ಗುಣಗಳೂ ಅವರ ಪುಟ್ಟ ಶರಿರವನ್ನೇ ಆಶ್ರಯಿಸಿಬಿಟ್ಟಿವೆ.
                 ಅವರು ಸಂಪ್ರದಾಯವಾದಿಗಳೆಂದರೆ ಕ್ರಾಂತಿಕಾರಿಗಳು;ಕ್ರಾಂತಿಕಾರಿಗಳೆಂದರೆ ಸಂಪ್ರದಾಯವಾದಿಗಳು.ಅರವತ್ತರ ದಶಕದಲ್ಲಿಯೇ ದಲಿತಕೇರಿಗೆ ಕಾಲಿಟ್ಟು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಪಟ್ಟ ಮೊದಲ ಯತಿ ಪೇಜಾವರರು.ಆಗ ಅವರನ್ನು ಬ್ರಾಹ್ಮಣರು ಮಾತ್ರವಲ್ಲ ಅನೇಕ ಹಿಂದೂಗಳೇ ವಿರೋಧಿಸಿದ್ದರು.ಅಂದು ವಿರೋಧಿಸಿದವರು ಈಗ ಅದೇ ಕಾರಣಕ್ಕಾಗಿ ಆದರಿಸುತ್ತಿದ್ದಾರೆ. 'ಸಂತನ ಬದುಕು ಸಂತನಿಗಲ್ಲ,ಸಮಾಜಕ್ಕೆ'ಎಂಬ ಧ್ಯೇಯ ಅವರದ್ದು.ನಿಜ!
ಪೇಜಾವರರು ಮನಸ್ಸು ಮಾಡಿದ್ದರೆ ಬೇಕಾದಷ್ಟು ಐಶಾರಾಮಿಯಾಗಿ ಬದುಕಬಹುದಿತ್ತು.ಆದರೆ ಅದು ತಲೆಗೆ ಹತ್ತಲಿಲ್ಲ;ಹತ್ತಿದ್ದು ಎರಡೇ,ದೇವ-ದೇಶ.ಈ ಎರಡರ ನಡುವಿನ ಸೇತುವೆ ಪೇಜಾವರ ಶ್ರೀಪಾದರು.ಯಾವಾಗಲೂ ಅವರ ಚಿಂತನೆ ಈ ಎರಡರ ಬಗ್ಗೆಯೇ ಇರುತ್ತದೆ.ಅನೇಕರು ಅವರ ಕಾರ್ಯಗಳಿಗೆ ವಿರೋಧಿಸುತ್ತಾರೆ, ಅದಕ್ಕೆಲ್ಲ ಕುಗ್ಗದ
ಹೊಗಳಿದಕ್ಕೆ ಹಿಗ್ಗದ ಶುದ್ಧ ವೃತ್ತಿ ಅವರದ್ದು.ಅವರೊಮ್ಮೆ ಹೇಳಿದ್ದರು" ನಾನು ಯಾರು ಹೊಗಳಿದರೂ ಹಿಗ್ಗಲಾರೆ;ತೆಗಳಿದರೂ ಕುಗ್ಗಲಾರೆ ಏಕೆಂದರೆ ಎಲ್ಲರಿಗಿಂತಲೂ ಚೆನ್ನಾಗಿ ನನ್ನ ಪರಿಚಯ ನನಗಿದೆ" ಎಂದು.ಅವರ ಈ ಮಾತುಗಳನ್ನು ನಾವು ಒಮ್ಮೆ ಅರ್ಥೈಸಿಕೊಂಡರೆ ಸಾಕು ನಾವು ತಪ್ಪು ಮಾಡಲಾರೆವು;ಮಾಡದರೆ ವ್ಯಥೆ ಪಡದೇ ಇರಲಾರೆವು.
                 ಇನ್ನು ಅವರ ಪಾಂಡಿತ್ಯಕ್ಕೆ ಎಲ್ಲರೂ ತಲೆಬಾಗಲೇಬೇಕು.ಕೇವಲ ಹದಿನಂಟನೇ ವಯಸ್ಸಿನಲ್ಲೇ ಮೈಸೂರಿನ ಮಹಾವಿದ್ವಾಂಸರನ್ನು ಜಯಿಸಿದ ವಿದ್ವತ್ತು ಅವರದು.ತ್ರಿಮತಸ್ಥವಿದ್ವಾಂಸರ ಸಮ್ಮೇಳನವನ್ನು ಮೈಸೂರು ರಾಜರು ನಡೆಸಿದಾಗ ವಿದ್ವತ್ಸಭಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದು ಶ್ರೀವಿಶ್ವೇಶತೀರ್ಥರು.ಆಗ ಅವರ ವಯಸ್ಸು ಕೇವಲ ಇಪ್ಪತ್ತೊಂದು.ಶ್ರೀಪಾದರ ವಿದ್ವತ್ತಿಗೆ ಬೆರಗಾದ ರಾಜರು ಅರಮನೆಗೆ ಕರೆಸಿ ಪೂಜೆ ನೆರವೇರಿಸಿದ್ದರು.ಇಂದಿಗೂ ಅನೇಕ ವಿದ್ವತ್ಸಭೆಗಳಲ್ಲಿ ಶ್ರೀಪಾದರ ಮಾತೇ ಕೊನೆಯಾಗುತ್ತದೆ.ಮತ್ತೆ ಅದನ್ನು ಆಕ್ಷೇಪಿಸುವ ಮಾತು ಹೊರಟರೆ ಶ್ರೀಪಾದರವಿದ್ವತ್ತಿನಮಾತಿನ ಬಾಣ ಅದನ್ನು ಅಲ್ಲೇ ತಡೆದುಬಿಟ್ಟಿರುತ್ತದೆ.ನಾವು ಮಾಧ್ವಸಿದ್ಧಾಂತದ ಮಹೋನ್ನತಗ್ರಂಥ 'ಶ್ರೀಮನ್ಯಾಯಸುಧಾ'ವನ್ನು ಜೀವನದಲ್ಲಿ ಒಮ್ಮೆ ಅಧ್ಯಯನ ಮಾಡುವುದೇ ಕಷ್ಟ. ಅನೇಕ ಯತಿಗಳು ಎಂಟುಬಾರಿ ,ಒಂಭತ್ತುಬಾರಿ ಈ ಗ್ರಂಥದ ಮಂಗಳ ಮಾಡಿದ ಮಹಾತ್ಮರು ಎಂದು ಕೇಳಿದ್ದೇವೆ.ಅಂಥದ್ದರಲ್ಲಿ ಪೇಜಾವರಶ್ರೀಪಾದರು ಐವತ್ತಕ್ಕೂ ಹೆಚ್ಚು ಬಾರಿ ಪಾಠ, ಮೂವತ್ತಾರು ಬಾರಿ ಮಂಗಳ ಮಾಡಿದ್ದಾರೆಂದರೆ ಅರ್ಥಮಾಡಿಕೊಳ್ಳಿ ಎಂಥ ಮಹಾತ್ಮರ ಕಾಲಘಟ್ಟದಲ್ಲಿ ನಾವಿದ್ದೇವೆಂದು.
                 ಪೇಜಾವರರು ಎಂತಹ ತಪೋನಿಷ್ಠರೆಂಬುವುದಕ್ಕೆ ನಿಮಗೊಂದು ಘಟನೆ ಹೇಳುತ್ತೇನೆ.ಮೊನ್ನೆ ಪೇಜಾವರಶ್ರೀಪಾದರಿಗೆ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಾಗ ವೈದ್ಯರಿಗೆ ಕಟ್ಟಪ್ಪಣೆ ಮಾಡಿದ್ದರು "ನನಗೆ ಎಚ್ಚರ ತಪ್ಪಿಸುವಷ್ಟು  ಅನಸ್ತೇಷಿಯಾ ಕೊಡಕೂಡದು, ಎಚ್ಚರ ತಪ್ಪಿದರೆ ನನ್ನ ನಿತ್ಯದ ಪಾರಾಯಣಗಳೆಲ್ಲವೂ ತಪ್ಪಿ ಹೋಗುತ್ತವೆ" ಎಂದಾಗ ವೈದ್ಯರೇ ಎಚ್ಚರ ತಪ್ಪುವಂತಾಗಿತ್ತು!.ಆಸ್ಪತ್ರೆಯಲ್ಲಿರುವಷ್ಟು ಕಾಲ ಎಂದಿಗೂ ತಮ್ಮ ಅನುಷ್ಠಾನ ,ಪೂಜೆ, ಪಾರಾಯಣಗಳನ್ನು ಬಿಡಲಿಲ್ಲ ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಂಡೇ ಹೋಗಿದ್ದರು ಶ್ರೀಪಾದರು. ಆಸ್ಪತ್ರೆಯಿಂದ ಸಂಜೆ ನಾಲ್ಕರ ಹೊತ್ತಿಗೆ ಮರಳಿದ ನಂತರವೂ ಅನೇಕ ಸಿಬ್ಬಂದಿಗಳ ಇಂದು ಬೇಡ,ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸಾತ್ವಿಕಪ್ರತಿಭಟನೆಯನ್ನು ಲೆಕ್ಕಿಸದೇ ಆರೂವರೆಯ ಶ್ರೀಕೃಷ್ಣನ ಚಾಮರ ಸೇವೆಗೆ ಮಡಿಸ್ನಾನ ಮಾಡಿ, ಓಡಿಬಂದು ಮಹಾಮಹಿಮನ ಪೊಡವಿಗೊಡೆಯನ ಪೂಜೆಗೈದರು. ಇಂತಹ ಮಹಾತ್ಮರು ನಮ್ಮೊಡನೆ ಇದ್ದಾರೆ ಎಂದು ಹೇಳುವದಕ್ಕೂ ಜನ್ಮ-ಜನ್ಮಾಂತರಗಳ ಪುಣ್ಯ ಬೇಕು. ಅವರ ಎಂಭತ್ತು ನೂರಾಗಲಿ,ನೂರು ನೂರಿಪ್ಪತ್ತಾಗಲಿ. ಕಾಣುವ ಸೌಭಾಗ್ಯ ನಮ್ಮದಾಗಲಿ,ಅವರ ಅನುಗ್ರಹ ಎಮಗಾಗಲಿ. ಅವರಿಗೆ ನಮ್ಮ ನಮನಗಳು ಅನಂತವಾಗುತ್ತಲೇ ಇರಲಿ.
***********

ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು
ಉಡುಪಿಯಿಂದ ೧೨೦ ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿ. ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಇಂಥ ಹಳ್ಳಿಯಲ್ಲಿ ೧೯೩೧ ಎಪ್ರಿಲ್ ೨೭ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದರು.
ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಿಗೆ ‘ವೆಂಕಟರಮಣ’ ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಜನನ.
ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ. ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು.
ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ: ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೆ?
ತಂದೆ – ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. ‘ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?’
ವೆಂಕಟರಮಣ ಉತ್ತರಿಸಿದ: “ಹ್ಞೂ, ಆಗುತ್ತೇನೆ”
ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರೆರಿಸಿದ, ಮೇಲೆ ನಿಂತ ದೇವತೆಗಳು ‘ತಥಾsಸ್ತು’ ಎಂದರು.
ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.
ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (೩.೧೨.೧೯೩೮) ವೆಂಕಟರಮಣನಿಗೆ ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜದ ಪುಟ್ಟ ಹಳ್ಳಿಯ ಮುಗ್ಧ ಬಾಲಕ, ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ. ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.
ವಿದ್ವತ್ ಪ್ರಕಾಶ
೧೯೪೩ರ ಫೆಬ್ರವರಿ ತಿಂಗಳು. ಶ್ರೀವಿದ್ಯಾಮಾನ್ಯ ತೀರ್ಥರು ಭಂಡಾರಕೇರಿಯಲ್ಲಿ ಶ್ರೀ ಮಧ್ವರಾದ್ಧಾಂತ ಸಂವರ್ಧಿನೀ ಸಭೆಯನ್ನು ಸ್ಥಾಪಿಸಿದರು. ವಿದ್ವಾಂಸರ ಮೇಳವೇ ಭಂಡಾರಕೇರಿಗೆ ಧಾವಿಸಿತು. ಆ ಬಾರಿಯ ಮಧ್ವನವಮಿಯ ವಿದ್ವತ್ಸಭೆಯ ಅಧ್ಯಕ್ಷತೆಯನ್ನು ೧೨ರ ಬಾಲಯತಿ ಶ್ರೀ ವಿಶ್ವೇಶ ತೀರ್ಥರಿಗೆ ಒಪ್ಪಿಸಿದರು. ಈ ವಾಮನಮೂರ್ತಿಯ ವಿದ್ಯೆಯ ತ್ರಿವಿಕ್ರಮಾವತಾರವನ್ನು ಅವರು ಅಂದೇ ಗುರುತಿಸಿದ್ದರು.
ನಾಡಿನ ಉದ್ದಗಲದಿಂದ ಹಿರಿಯ ವಿದ್ವಾಂಸರೆಲ್ಲ ಬಂದು ನೆರೆದಿದ್ದ ಆ ವಿದ್ವತ್ ಸಭೆಯಲ್ಲಿ ಪುಟ್ಟ ಯತಿ ವಿಶ್ವೇಶ ತೀರ್ಥರು ನೀಡಿದ ಚುಟುಕು ಭಾಷಣ ಎಲ್ಲರಿಗೂ ಚುರುಕು ಮುಟ್ಟಿಸಿತು. ಇಡಿಯ ಸಭೆಗೆ ಸಭೆಯೇ ತಲೆದೂಗಿತು. ಜತೆಗೆ ಅವರು ಶಾರ್ದೂಲ ವಿಕ್ರೀಡಿತದಲ್ಲಿ ರಚಿಸಿದ ಪದ್ಯವಂತೂ ಪಂಡಿತ ಮಂಡಳಿಯನ್ನು ಬೆರಗುಗೊಳಿಸಿತು.

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)
*************

ಸಂತರ ಸಂತೈಸಿದ ಏಕಾಂತಿಗಳ ಮಾತು.
ಪಂ.ಪ್ರವೀಣಾಚಾರ್ಯ. ಹುನಗುಂದ.

ಆ ವ್ಯಕ್ತಿ ಸಮಾಜದ ಶಕ್ತಿ. ವಾಮನನ ಆಕಾರ ತ್ರಿವಿಕ್ರಮನಂತೆ ಆಚಾರ. ಅವರು ದಾರಿಯಲ್ಲಿ ನಡೆಯಲಿಲ್ಲ. ಅವರು ನಡೆದದ್ದೇ ದಾರಿಯಾಯಿತು. ಅವರ ಆಗಲುವಿಕೆಯ ಪ್ರಸಂಗದಲ್ಲಿ ಮಾಧ್ಯಮಗಳು ಅವರ ನಿಕಟ ವರ್ತಿಗಳನೇಕರ ಹಾರ್ದವನು ಸಮಾಜಕೆ ಪಸರಿಸಿದವು. ಆದರೆ ಯಾರೂ ಕೇಳದ ಶ್ರೀಪಾದರ ಅತ್ಯಂತ ನಿಕಟವರ್ತಿಗಳ ಭಾವವನ್ನು ನಿಮ್ಮ ಮುಂದೆ ಬಿಚ್ಚಿಡುವ ಸಣ್ಣ ಪ್ರಯತ್ನ ಇಲ್ಲಿದೆ. ಪಂಚಮ ಪರ್ಯಾಯವನ್ನು ಮುಗಿಸಿದ ಶ್ರೀಪಾದರ ಹತ್ತಿರದ ಐವರ ವಿಚಾರ ಧಾರೆಯನ್ನು ಅರಿಯೋಣ.
ಶಾಟಿಯ ಮಾತಿನ ಚಾಟಿ
ನಾನು ಅವರುಡುವ ಶಾಟಿ. ಅರಿತಿರುವೆ ಅವರ ಮಾತಿನ ಧಾಟಿ. ನನ್ನ ಬಣ್ಣ ವೈರಾಗ್ಯದ ಸಂಕೇತ. ಅವರು ಹೊತ್ತ ಮೇಲೆ ಸಾರ್ಥಕವಾಯಿತೇ ಈ ಅಂಕಿತ. ಈ ಸಂತನ ಸಂಚಾರಕ್ಕೆ ನಾ ಸರಿದರೂ ಸರಿಮಾಡಿಕೊಂಡು ಬಿಗಿದು ಕರೆದೊಯ್ಯುತ್ತಿದ್ದರು ನನ್ನನ್ನು. ಎಂತಂತಹ ಸಭೆಗಳಿಗೆಲ್ಲ ಅವರು ಹೋಗಿದ್ದಾರೆ. ದೇಶದ ಅನೇಕ ಪ್ರಧಾನ ಕಚೇರಿಗಳಿಗೆ ಪ್ರಧಾನಿ ಕಚೇರಿಗೆ ಹೊಂಟರೂ ಭಾರಿ ಬೆಲೆ ಬಾಳುವ  ರೇಶಿಮೆಯ ಅಂಚು ಅಂಚಿನ ನನ್ನದೇ ಬಣ್ಣದ ವಸ್ತ್ರಗಳು ಇಣುಕಿ ಇವರ ಮೈ ಮುಚ್ಚಿ ನನ್ನನ್ನು ಅಣುಕಿಸುವ ತವಕಾದಲ್ಲಿದ್ದವು. ಆದರೂ ಬೇಸರಿಸದೇ ಹಳೆಯದಾದ ಕಳೆ ಕಳೆದುಕೊಂಡ ನನ್ನನ್ನೇ ತಮ್ಮ ಪುಟ್ಟ ದೇಹ ಮುಚ್ಚಲು ಮೆಚ್ಚುತ್ತಿದ್ದರು. ಅವರ ಜಪ ತಪಗಳ ಕಾಲದಲ್ಲಿ ಅವರ ತಲೆಯ ಮೇಲೆ ನನ್ನನ್ನು ಹೊದ್ದು ಧ್ಯಾನಾಸಕ್ತರಾದರೆ ಅವರ ಮತಿಯಲಿ ಸ್ತುತಿಸುವ ತರಂಗಗಳು ನನ್ನ ಅಂಗಗಳನ್ನು ರೋಮಾಂಚನಗೊಳಿಸುತ್ತಿದ್ದವು.

ಪಾದುಕೆಗೊಂದು ವೇದಿಕೆ
ನಾನು ಪೇಜಾವರರ ಪುಟ್ಟ ಪಾದದ ದಿಟ್ಟ ಪಾದುಕೆ. ಅವರ ಬದುಕಿನ ಪ್ರತೀ ಹೆಜ್ಜೆಗಳನ್ನೂ ಎಲ್ಲರಿಗಿಂತಲೂ ಹೆಚ್ಚಾಗಿ ಅರಿತವನು. ಅವರಿಡುವ ಒಂದೊಂದು ಹೆಜ್ಜೆಗಳನ್ನೂ ಪ್ರಶ್ನಿಸಿದವರಿದ್ದಾರೆ. ಅವರು ನನ್ನನ್ನು ಧರಿಸಿ ಧರೆಯಲಿ ಅನೇಕ ಧಾರ್ಮಿಕರ, ಸಂತರೊಟ್ಟಿಗೆ ನಡೆದರು. ವಿವಾದದ ಅಯೋಧ್ಯೆಗೂ ನಡೆದರು. ಅನೇಕ ಪ್ರತಿಭಟನೆಗೂ ನಡೆದರು. ಇವರಿಡುವ ಹೆಜ್ಜೆಗಳಿಗೆ ಬುದ್ಧಿ ಜೀವಿಗಳು ವಿರೋಧಿಸಲು ಬದ್ಧರಾದರು. ಅವರೆಲ್ಲ ಬುದ್ಧಿಜೀವಿಗಳಾಗಲು ಇವರು ಸುದ್ದಿ ಜೀವಿಗಳಾದರು. ನಾನು ಬದಲಾದರೂ ಅವರು ಬದಲಾಗಲಿಲ್ಲ. ನಾನು ಸವೇದರೂ ಅವರ ಸವೆಯಲಿಲ್ಲ. ಯಾರು ಏನೇ ಅಂದರೂ ಅವರ ಪ್ರತೀಹೆಜ್ಜೆಯೂ ದಿಟವಾಗಿತ್ತು. ಆಳುಕಲಿಲ್ಲ. ಅವರ ಪಾದಗಳು ಅಂಜಲಿಲ್ಲ. ಅವರ ಪಾದಗಳ ಸ್ವಾದ ಆಸ್ವಾದಿಸುವ ಸೌಭಾಗ್ಯ ನನ್ನಿಂದ ದೂರ ಸರಿಯಿತೆ... ದೊರೆಯೇ ನಿಮ್ಮನ್ನು ಹೊತ್ತ ನನ್ನನ್ನು ಎಲ್ಲರೂ ಹೊತ್ತರು. ಇನ್ನಾರು ಗತಿ...
ಬೆಂಡಾಗದ ಶ್ರೀಪಾದರ ದಂಡ ನಾನು
ಏಳರ ಎಳೆಯ ಕಳೆ ಮುಖದ ಹೊಂಬಣ್ಣದ ಮೈಕಾಂತಿಯ ವೆಂಕಟರಮಣನು ಯಂತ್ರೋದ್ಧಾರಕ ಪ್ರಾಣನ ತಾಣದಲ್ಲಿ ವಿಶ್ವೇಶರಾಗುವಾಗ ಜೊತೆಯಾದವನು ನಾನು. ತುಂಗಭದ್ರೆಯ ಕಾನನದ ಆನನದಲ್ಲಿ ಬಾಡಿ ಯಾರಿಗೂ ಬೇಡಾದ ನನ್ನನ್ನು ಹಿಡಿದವರು ಇವರು. ಯಾರಿಗೂ ಬೇಡಾಗಿದ್ದ ನಾನು 82 ವರುಷ ಇವರೊಟ್ಟಿಗೆ ಇದ್ದದ್ದಕ್ಕೆ ಬೇಡಿಕೆಯ ವಸ್ತುವಾದೆ. ಅದೆಷ್ಟು ಬಾರಿ ನನ್ನನ್ನು ಪವಿತ್ರ ಮಧ್ವ ಸರೋವರದಲ್ಲಿ ಮಿಂದೇಳಿಸಿದ್ದಾರೆ. ಗಂಗೆ, ತುಂಗೆ, ಅಲಕನಂದೆ, ಭದ್ರೆ, ಕೃಷ್ಣೆ, ಗೋದಾವರಿ ಹೀಗೆ ನಾಡಿನುದ್ದಕ್ಕೂ ಮಿಡಿಯುವ ಪವಿತ್ರ ತೀರ್ಥಗಳಲ್ಲೂ ಮಿಂದೆಬ್ಬಿಸಿದ್ದಾರೆ. ಒಣಕಟ್ಟಿಗೆ ಎಂದು ಕೆಟ್ಟದಾಗಿ ಬೀಗಿದವರೆಲ್ಲ ಇಂದು ಶ್ರೀಪಾದರು ಕಟ್ಟಿದ ಜನಿವಾರ ಕೃಷ್ಣಾಜಿನದಿಂದ ನನ್ನ ಕಂಡು ಬಾಗಿದ್ದಾರೆ. ಕೃಷ್ಣನ ಗರ್ಭಗುಡಿಯ ಸೌಭಾಗ್ಯ ದೊರಕಿದೆ. ಇನ್ನೇನು ಬೇಕು ಬದುಕಿನಲ್ಲಿ.... ಇವರೊಟ್ಟಿಗೆ ನಾನೂ ದಿಟವಾಗಿ ವೃಂದಾವನದಲ್ಲಿ ಒಂದಾಗಿ ಬಿಡುವೆ.
ತುಳಸಿಮಣಿಯಾಯಿತು ಗಿಣಿ.
ನಾನು ವಿಶ್ವೇಶತೀರ್ಥರ ಕೊರಳಿಗೆ ಸರಳವಾಗಿ ಸುತ್ತಿಕೊಂಡ ತುಳಸೀಮಾಲೆ. ಅವರು ಓಡುವ ವೇಗಕ್ಕೆ ನಾನು ಅತ್ತಿತ್ತ ಹೊಯ್ದಾಡುತ್ತಿದ್ದೆ.  ಅವರ ಸುತ್ತಲಿದ್ದ ನಾವೆಲ್ಲ ಅತ್ತಿತ್ತ ಹೊಯ್ದಡುತ್ತಿದ್ದರೂ ಅವರು ಮಾತ್ರ ಸ್ಥಿರವಾಗಿದ್ದರು. ನಿಶ್ಚಲವಾಗಿದ್ದರು. ಇಟ್ಟ ಹೆಜ್ಜೆಯನ್ನು ಹಿಂತೆಗೆಯುತ್ತಿರಲಿಲ್ಲ. ಅವರ ಅವಸರಕ್ಕೆ ನನಗೆ ತೂಗಾಡಲು ನಾಚಿಕೆಯಾಗುತ್ತಿಲಿತ್ತು. ತೆಳು ದೇಹದ ಲಘು ಆಹಾರದ ಮಗು ಮನಸ್ಸಿನ ಇವರ ಕೊರಳಲ್ಲಿ ವಿಹಾರ ಮಾಡುವಾಗ ಭಾರವಾಗಿ ಬಿಟ್ಟೆನಾ ಎಂಬ ಕೀಳರಿಮೆ ಕೊನೆಯವರೆಗೂ ಕಾಡಿತು. ಅವರು ನಡೆದಾಡುವಾಗ ನಾನು ಹೊಯ್ದಾಡುತ್ತಿದ್ದೆ. ಅವರು ಕುಳಿತರೆ ಕೈಯಲ್ಲಿ ಕುಳಿತ ಮಣಿಗಳು ನಲಿಯುತ್ತಿದ್ದವು. ಕೈಯಲ್ಲಿ ಮಣಿ ಮುನ್ನಡೆಯುತ್ತಿದ್ದರೆ ಮನದಲ್ಲಿನ ವಿಠಲ ಒಲಿದು ಬರುತ್ತಿದ್ದ.  ಆ ಜಪಮಣಿಯೋ ಚಳಿಗಾಳಿಗಳಿರುವ ಊರಿಗೆ ನಡೆದಾಗ ಬೆಚ್ಚಗೆ ಪೆಟ್ಟಿಗೆಯೊಳಗೆ ಅವಿತು ಕುಳಿತರೆ ನಡುಗುವ ಕೈಗಳಿಂದಲೂ ಹುಡುಕಿ ಗಂಟೆ ಗಂಟೆಗಳವರೆಗೂ ಮಣಿಸುತ್ತಾ ಕುಣಿಸಿಬಿಡುವರು. ಅವರ ಜಪದ ಆಸಕ್ತಿಗೆ, ಆ ಶಕ್ತಿಗೆ ಜಗವೇ ಬಾಗಿದೆ. ಒಂದು ವಾರ ಅವರು ಮಲಗಿದಾಗ ಅಲುಗಾಡದೆ ಕುಳಿತ ನಾನು ಕೊರಗಿದಷ್ಟು  ಮರಗಿದಷ್ಟು ಯಾರೂ ಮರುಗಲಿಕ್ಕಿಲ್ಲ. ನಿರಂತರ ನಿಮ್ಮ ನಡಿಗೆಯಲ್ಲಿ ಹೊಯ್ದಾಡಿದ ನನಗೆ ಆಯಾಸವಾಯಿತೆಂದು ಭಾವಿಸಿ ನಿಮ್ಮ ನಡಿಗೆಯನ್ನೇ ನಿಲ್ಲುಸಿಬಿಟ್ಟಿರಾ??
ಮರೆಯಾದವರಿಂದಾದ ಕಣ್ಣೀರ ಕಳೆಯಲಿ ಕೃಷ್ಣ.
ನಾನು ಕಡಗೋಲು ಕೃಷ್ಣ. ಕಡಲ ತಡಿಯಿಂದ ಮಧ್ವರ ಕರೆಗೆ ಕರಗಿ ಎರಗಿದವರ ಕೊರಗನ್ನು ಸೊರಗಿಸಲು ಉಡುಪಿಗೆ ಕಡಗೋಲ ಉಡುಪಿನಲ್ಲಿ ಬಂದವನು. ನಿತ್ಯ ನಿರಂತರ ಅಷ್ಟ ಮಠದ ಯತಿಗಳಿಂದ ಅಂದಿನಿಂದಲೂ ಇಂದು ಮುಂದೆಯೂ ಪೂಜೆಗೊಳ್ಳುವವನು. ಸೋದೆಯ ವಾದಿರಾಜರು ನಾಲ್ಕು ಪರ್ಯಾಯಗಳಲ್ಲಿ ನನ್ನನ್ನು ಅರ್ಚಿಸಿದರು. ವಿಶ್ವೇಶರು ಐದು ಪರ್ಯಾಯಗಳಿಂದ ನನ್ನನ್ನು ಮೋದಿಸಿದರು. ಇಳಿ ವಯಸ್ಸಿನಲ್ಲೂ ಈ ಇಳೆಯಲ್ಲಿ ಇಷ್ಟು ಭಕ್ತಿಯಿಂದ ಬಾಗಿದ ಮೈಯಿಂದ ಬಗ್ಗಿ ನನ್ನನ್ನು ಹಿಗ್ಗಿಸಿರುವರು. ವಿಶ್ವೇಶ್ವರರ ವಿಶ್ವತೋಮುಖ ಸೇವೆಗೆ ಪ್ರಸನ್ನನಾಗಿರುವೆ. ಅರ್ಜುನನಿಗೆ ನಾನು ಅರುಹಿದ್ದನ್ನು ಚಾಚೂ ತಪ್ಪದೇ ಆಚರಿಸಿದವರು ನೀವು. ವೇದ ವೇದಾಂತಗಳ ಆಳದಲ್ಲಿ ನೆಲಸಿದ ನನ್ನನ್ನು ಸೂತ್ರದಿಂದ ಬಿಗಿದು ಅನೇಕ ವಿದ್ಯಾರ್ಥಿಗಳ, ವಿದ್ವನ್ಮಣಿಗಳ ತಲೆಯಲ್ಲಿ ಬಲೆ ಹಾಕಿ ನೆಲೆ ನಿಲ್ಲಿಸಿದ ಕಲೆಗಾರ ನೀವು. ಈರನಿಗೆ ನಿರಂತರ ನೀವು ಮಾಡುವ ಪುರಶ್ಚರಣೆ ನಿಮ್ಮ ಗುರುಭಕ್ತಿಯ ಆಸಕ್ತಿಗೆ ಸೂಕ್ತ ಕೈಗನ್ನಡಿಯಾಗಿದೆ. ಈರನ ಅಪಾರ ಪ್ರೇಮಸಾಗರದಲ್ಲಿ ಸೂರೆಗೊಂಡ ನೀವು ನೇರ ನನ್ನ ಪೂಜೆಗೆ ಅರ್ಹರೆಂದು ಬರಮಾಡಿಕೊಂಡೆ. ಸಜ್ಜನರ ಹೃದಯೋದರವು ಬರಿದಾಗದಿರಲು ನಿಮ್ಮನ್ನು ಅಲ್ಲಿಯೂ ನೆಲೆ ನಿಲ್ಲಿಸಿರುವೆ. 


ಕೇಳಿದಿರಾ... ವಿಶ್ವೇಶ್ವರರ ನಂಟನ್ನು ಅಂಟಿಸಿಕೊಂಡವರ ಮನದಾಳದ ಮಾತುಗಳನ್ನು. ಜಗದ ನಂಟನ್ನು ಬಿಟ್ಟು ಭಗವಂತನ ಅಂತೇವಾಸಿಗಳಾಗಿ ಲೋಕವನ್ನೇ ಏಕಾಂತ ಮಾಡಿದ ಶರಣರ ಚರಣಗಳಿಗೆ ಋಣಿಯಾಗಿ ಇರುವೆ.
***********

ನಮ್ಮೆಲ್ಲ ಪ್ರೀತಿಯ, ಪರಮಪೂಜ್ಯ ಶ್ರೀವಿಶ್ವೇಶತೀರ್ಥ ಗುರುಗಳು.

 ಗುರುಗಳ ಚರಣಕಮಲಗಳಲ್ಲಿ ಅರ್ಪಿಸುವ ಅಂತಃಕರಣ, ಭಕ್ತಿಭಾವದ ಎರಡಕ್ಷಗಳ ಕುಸುಮಗಳು. 

ಮುದ್ದು ಮುಖದ ಮುನಿಯೇ
ಮಧ್ವರ ತತ್ವಸುಧೆಯ ಖನಿಯೇ    ಪ.

ಲೋಕದ ಜನರಿಗೆ ಮಮತೆಯ ತೋರಿದ ೨ಸಲ
ಪರಾಕು ನಿಮಗೆ ಗುರು ಶ್ರೀವಿಶ್ವೇಶತೀರ್ಥರೇ   ಅ.ಪ.

ಬಾಲಯತಿಗಳಾಗಿ,  ಬಂದರು 
ಸೂರ್ಯಪ್ರಭೆಯ ಯೋಗಿ
ಶ್ರೀವಿಶ್ವಮಾನ್ಯರಲಿ ಸನ್ಯಾಸ ಪಡೆಯುತ  ೨ಸಲ
ವೇ..ದಾಂತ ಸಾಮ್ರಾಜ್ಯವ ಬೆಳಗಿದ ಯತಿಯೇ ೧

ದೀನದಲಿತರಲ್ಲಿ, ನೊಂದು..ಬೆಂದುಬಂದವರಲಿ
ಮರುಗುತ ಅವರಿಗೆ ಅಭಯವ ನೀಡುತ  ೨ಸಲ
ಮು..ಕ್ಕೋಟಿ ದೇವರಿಗೂ ಮಿಗಿಲು ಎನಿಸಿದ ೨

ವಿಶ್ವವಂದ್ಯರೆನಿಸಿ, ಭಕುತರಿಗೆ ಅನಾಥಬಂಧುವೆನಿಸಿ
ವಿದ್ಯಾಮಾನ್ಯರಲಿ ವಿದ್ಯೆಯ ಕಲಿಯುತಾ ೨ಸಲ
ರಾಷ್ಟ್ರಪ್ರೇಮವನು ಸಾರಿದ ಯತಿಯೇ   ೩

ಅನ್ನದಾತರಾಗಿ, ವೇದಾಂತ ವಿದ್ಯೆಯ ಪೋಷಿಸುತಾ
ವಿದ್ಯಾರ್ಥಿ ವೃಂದಕೆ ಅಜ್ಜನಂದದಲಿ ೨ಸಲ
ಮಮತೆಯ ಮಜ್ಜನಗೈಸಿದ ಯತಿಯೇ   ೪

ರಾಮಮಂದಿರವನು, ಕಟ್ಟುವಪಣತೊಟ್ಟ
ದಿಟ್ಟ ಯತಿಯೇ
ವಾಮನ ಮೂರುತಿ ನಿಮ್ಮಯ ಕೀರುತಿ ೨ಸಲ
ಅಷ್ಟಮಠದ ಶ್ರೇಷ್ಠ ಯತಿಗಳೇ    ೫

ಜಪತಪಾನುಷ್ಠಾನ ನಿರುತದಿ 
ಸಕಲಶಾಸ್ತ್ರಪಾನ
ಲೋಕಸಂಚಾರವ ಮಾಡುತ ಬಿಡದೆಲೆ  ೨ಸಲ 
ವಾಯುದೇವರಂತೆ ಸಮಾಜ ಸೇವೆಯಗೈದಿರಿ ೬

ಮಧ್ವಮುನಿಗಳಂತೆ, 
ನೀವು ಶುದ್ಧ ಸ್ಪಟಿಕದಂತೆ
ಬದ್ಧರೆನಿಸುತಲಿ ಮಧ್ವಸಿದ್ಧಾಂತಕೆ  ೨ ಸಲ
ಸಿದ್ಧಪ್ರಸಿದ್ದರು ಜಗದಲಿ ನೀವು    ೬

ವಿದ್ಯಾಮಾನ್ಯಕೃಷ್ಣ .. 
ನನ್ನು ಮುಟ್ಟಿ ಪೂಜಿಸುತಲಿ
ಪಂಚಮಪರ್ಯಾಯ ವೈಭವದಿಂದಲಿ...೨ಸಲ
ವಾದಿರಾಜರಂತೆ ಮುಗಿಸಿದ ಧೀರರು ೭

ಹಸುಕಂದನಂತೆ ನಿಮಗೆ ಶ್ರೀವಿಶ್ವ..ಪ್ರಸನ್ನತೀರ್ಥರಿರಲು
ಅವರ ನಗುವಲೇ ನಿಮ್ಮನು ಕಾಣುತ ೨ಸಲ
ಕಾಲವ ಕಳೆವೆವು ನಿಮ್ಮ ಸ್ಮರಣೆಯಲಿ   ೮


ರಚನೆ: ವಿದ್ಯಾಶ್ರೀ ಕಟ್ಟಿ
*****

Nov.1 2021
ಸಾಮಾಜಿಕ-ಧಾರ್ಮಿಕ ಸಮತೂಕದ ಸಂತ ಪೇಜಾವರಶ್ರೀ 
ಧಾರ್ಮಿಕ – ಸಾಮಾಜಿಕ ಸಮತೋಲನದ ಸಂತ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ನಿರ್ಯಾಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಮತ್ತು ಅಕ್ಷರ ಸಂತ ಮಂಗಳೂರಿನ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಾಧಕರ ಸಾಧನೆಯ ಮೆಲುಕು.
ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಯನ್ನು ಜತೆಜತೆಯಾಗಿ ಅಳವಡಿಸಿಕೊಂಡ ಅಪರೂಪದ ಸಂತ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು.
ಶ್ರೀಪಾದರು 39ನೆಯ ತಂಡದ ವಿದ್ಯಾರ್ಥಿಗಳಿಗೆ ಹೇಳಿದ ಶಾಸ್ತ್ರಪಾಠದ ಮಂಗಲೋತ್ಸವವನ್ನು ಕೋಲಾರ ಜಿಲ್ಲೆಯ ಮುಳುಬಾಗಿಲು ಶ್ರೀಪಾದರ ರಾಜರ ಸನ್ನಿಧಿಯಲ್ಲಿ ನಡೆಸಲು ಯೋಜಿಸಿದ್ದರು. ಅವರೇ ಯೋಜಿಸಿದ ಕೊನೆಯ ಕಾರ್ಯಕ್ರಮವಿದು. ಅವರ ಅನುಪಸ್ಥಿತಿಯಲ್ಲಿ ಉದ್ಘಾಟನ ಸಭೆ ನಡೆಯುವಾಗ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಯಿತು. ವ್ಯಾಪಕ ಪ್ರವಾಸದ ನಡುವೆಯೂ ಎಂದೂ ವಿದ್ಯಾರ್ಥಿಗಳಿಗೆ ಶಾಸ್ತ್ರ ಪಾಠ ಹೇಳುವುದನ್ನು, ಸನ್ಯಾಸಧರ್ಮದ ಶಿಸ್ತನ್ನು ಬಿಟ್ಟಿರಲಿಲ್ಲ. ಹೀಗಾಗಿಯೇ ನಾಲಗೆಯಲ್ಲಿ ಶಾಸ್ತ್ರವಿದ್ಯೆ ಸದಾ ನಲಿದಾಡುತ್ತಿತ್ತು. “ದೇಶದಲ್ಲಿಯೇ ಇವರಿಗಿಂತ ಪ್ರತಿಭಾಸಂಪನ್ನ ಸಂಸ್ಕೃತ ವಿದ್ವಾಂಸರು ಈಗಿಲ್ಲ’ ಎಂದು ಘಂಟಾಘೋಷವಾಗಿ ಹೇಳಿದವರು “ಉದಯವಾಣಿ’ಯಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯರು. ಕಾಶಿಯಲ್ಲಿ 1966ರಲ್ಲಿ ನಡೆದ ಒಂದು ಶಾಸ್ತ್ರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪಂ|ರಾಜರಾಜೇಶ್ವರ ಶಾಸ್ತ್ರಿಗಳು “ಇಂದು ನ್ಯಾಯಶಾಸ್ತ್ರದಲ್ಲಿ ಪಾಠಪ್ರವಚನ, ವಾಕ್ಯಾರ್ಥ ಮಾಡಬಲ್ಲ ವಿರಳಾತಿವಿರಳ ಸಮರ್ಥ ಪಂಡಿತ ಪರಿವ್ರಾಜಕರಲ್ಲಿ ಪೇಜಾವರ ಶ್ರೀಗಳು ಒಬ್ಬರು’ ಎಂದು ಹೇಳಿದ್ದರು.
ಆಚಾರನಿಷ್ಠೆ-ವೈಚಾರಿಕತೆ
ಜ್ವರವಿದ್ದರೂ ಸತತ ಎರಡು ದಿನ ಏಕಾದಶಿ ಬಂದರೂ ನಿರ್ಜಲ ಉಪವಾಸವನ್ನು ಜೀವನದ ಕೊನೆವರೆಗೂ ಬಿಟ್ಟಿರಲಿಲ್ಲ. ವೈಚಾರಿಕತೆಯನ್ನೂ ಬಿಟ್ಟವರಲ್ಲ. ಇದಕ್ಕೆ ಉದಾಹರಣೆ ಅವರು ರೇಷ್ಮೆ ಬಟ್ಟೆಯನ್ನು ಜೀವಿತದ ಕೊನೆಯ ಅವಧಿಯಲ್ಲಿ ತ್ಯಜಿಸಿದ್ದರು. ಕಾರಣವೆಂದರೆ ರೇಷ್ಮೆ ಹುಳುವಿನ ಸಾವು. ಐದನೆಯ ಪರ್ಯಾಯ ಅವಧಿಯಲ್ಲಿ ಬಾಳೆನಾರಿನ ಬಟ್ಟೆ (ನಾರು ಮಡಿ) ಧರಿಸಲು ನಿರ್ಧರಿಸಿದರು. ಇಷ್ಟು ಅವಧಿ ಏಕೆಂದರೆ ವಿಚಾರ ವಿಮರ್ಶೆ ನಡೆಸಲು. ವಿಮರ್ಶೆ ನಡೆಸಿ ಕೃಷ್ಣಮೃಗದ ಚರ್ಮದ ಮೇಲೆ ಕುಳಿತುಕೊಳ್ಳುವುದನ್ನು ಬಿಟ್ಟು ಹತ್ತಿ ಬಟ್ಟೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಹಿಂಸಾಸ್ಪರ್ಶ ಎಲ್ಲಿ ಕಂಡರೂ ಅಹಿಂಸೆಗೆ ಮೊದಲ ಆದ್ಯತೆ ಇವರ ನೀತಿ.
ವಿಧವಾ ಕಾಳಜಿ
ವಿಧವೆಯರನ್ನು ಅಪಮಾನಕರವಾಗಿ ನೋಡಬಾರದು, ಗೌರವದಿಂದ ಕಾಣಬೇಕು ಎನ್ನುತ್ತಿದ್ದ ಶ್ರೀಪಾದರು ಪುರುಷರ ಮುಂದಿಟ್ಟ ವಾದ ವೈಚಾರಿಕ: ಪುರುಷರು ಶಿಖೆ ಧಾರಣೆ (ಜುಟ್ಟು) ಮೊದಲಾದ ಧರ್ಮಶಾಸ್ತ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೂ ಧಾರ್ಮಿಕ, ಸಾಮಾಜಿಕ ವ್ಯವಹಾರಗಳಲ್ಲಿ ರಿಯಾಯಿತಿ ಪಡೆಯುವುದಿಲ್ಲವೆ? ವಿಧವೆಯರ ವಿಷಯದಲ್ಲಿ ಕೆಲವು ರಿಯಾಯಿತಿಗಳನ್ನು ಏಕೆ ನೀಡಬಾರದು?
ಪ್ರಾಕೃತಿಕ ವಿಕೋಪ, ಸಾಮರಸ್ಯ
ಅತಿವೃಷ್ಟಿ, ಅನಾವೃಷ್ಟಿ ಎಲ್ಲೇ ಸಂಭವಿಸಿದರೂ ಅಲ್ಲಿಗೆ ಧಾವಿಸಿ ಮನೆ, ಕೆರೆ ನಿರ್ಮಾಣ, ಗಂಜಿಕೇಂದ್ರಗಳ ಸ್ಥಾಪನೆ ಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸಾಮರಸ್ಯಕ್ಕೆ ಎಲ್ಲೇ ಧಕ್ಕೆಯಾದರೂ ಅಲ್ಲಿರುತ್ತಿದ್ದರು. ಮೀನಾಕ್ಷಿಪುರಂನಲ್ಲಿ ಮತಾಂತರವೇ ಇರಲಿ, ದ.ಕ. ಜಿಲ್ಲೆಯ ಎಸ್‌ಇಝಡ್‌ನಿಂದ ಕ್ರೈಸ್ತ ಸಮುದಾಯದವರಿಗೆ ತೊಂದರೆಯೇ ಆಗಿರಲಿ ಅಲ್ಲಿಗೆ ಧಾವಿಸಿದ್ದರು. “ನಾನು ಚಾಲಕನಾಗಿದ್ದಾಗ ದೂರದ ಪ್ರವಾಸದಲ್ಲಿ ನಮಾಜ್‌ಗೆ ಸ್ವಾಮೀಜಿಯವರೇ ಕಳುಹಿಸಿಕೊಡುತ್ತಿದ್ದರು’ ಎಂಬುದನ್ನು ಮೊಹಮ್ಮದ್‌ ಆರಿಫ್ ಹೇಳುತ್ತಾರೆ. ಇವರ ಅಣ್ಣ ಮೊಹಮ್ಮದ್‌ ಮನ್ಸೂರ್‌ ಕೂಡ ಶ್ರೀಗಳ ವಾಹನ ಚಾಲಕರಾಗಿದ್ದರು. ಆರಿಫ್ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆಯ ಶೇ. 80ರಷ್ಟು ಮುಸ್ಲಿಮರಿರುವ 370 ಸದಸ್ಯರ ಪೇಜಾವರ ಬ್ಲಿಡ್‌ ಡೊನೇಟ್‌ ಟೀಂ ಕಾರ್ಯನಿರ್ವಹಿಸುತ್ತಿದೆ. ಆದಿವಾಸಿಗಳ ನಾಡಿಗೂ ತೆರಳಿ ನೆರವಾಗಿದ್ದರು.
ಸ್ತ್ರೀಯರಿಗೂ ಸನ್ಯಾಸ
ಮಹಿಳೆಯರು, ಹಿಂದುಳಿದವರಿಗೂ ಸನ್ಯಾಸವನ್ನು ನೀಡಿದರು. “ಯಾರು ನಿಸರ್ಗದಿಂದ ಅತೀ ಕಡಿಮೆ ಪಡೆದು, ಸಮಾಜಕ್ಕೆ ಹೆಚ್ಚು ತ್ಯಾಗ ಮಾಡುತ್ತಾರೋ ಅವರೇ ಸಂತ’ ಎಂದು ಗುರುಗಳು ಹೇಳಿದ್ದರು ಎಂಬುದನ್ನು ಶಿಷ್ಯೆ ಉಮಾಭಾರತಿ 2016ರ ಜ. 18ರ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಉಲ್ಲೇಖಿಸಿದ್ದರು. 1970ರಲ್ಲಿ ಉಡುಪಿ ಪಂದುಬೆಟ್ಟಿನ ವಾರಿಜಾಕ್ಷಿ ಶೆಟ್ಟಿಯವರಿಗೆ ಸನ್ಯಾಸ ದೀಕ್ಷೆ ನೀಡಿದರು. ಬಳಿಕ ಸುಭದ್ರಾಮಾತಾ ಎಂಬ ಹೆಸರಿನಲ್ಲಿ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧರಾಗಿ ಇತ್ತೀಚೆಗೆ ನಿರ್ಯಾಣರಾದರು.
ನ್ಯಾಯಾಲಯದ ಪುರಸ್ಕಾರ
1980ರ ದಶಕದಿಂದ ಅಯೋಧ್ಯೆ ವಿಷಯದ ಎಲ್ಲ ಹೋರಾಟಗಳಿಗೆ ನೇತೃತ್ವ ಕೊಡುತ್ತಿದ್ದರು. ಇವರ ವಿಚಾರಕ್ಕೆ ಪೂರಕವಾಗಿ ಸರ್ವೋಚ್ಚ ನ್ಯಾಯಾಲಯ 2019ರ ನ. 9ರಂದು ತೀರ್ಪು ನೀಡಿತು. ಸುಬ್ರಹ್ಮಣ್ಯದಲ್ಲಿ ಮಡೆ ಸ್ನಾನದ ವಿಚಾರದಲ್ಲಿ ಶ್ರೀಗಳು ಕೊಟ್ಟ ಎಡೆ ಸ್ನಾನದ ಸಲಹೆಯನ್ನು ಉಚ್ಚ ನ್ಯಾಯಾಲಯ ಅಂಗೀಕರಿಸಿತು.
ಅಸ್ಪೃಶ್ಯತೆ ವಿರುದ್ಧ ಹೋರಾಟ
ಸಮಾಜದ ಮೇಲುಕೀಳು ಎಂಬ ಕೆಟ್ಟ ಭಾವನೆ ವಿರುದ್ಧ ಅವರ ಮನಸ್ಸು ಚಿಕ್ಕಂದಿನಿಂದಲೂ ತುಡಿಯುತ್ತಿತ್ತು. ಸ್ವಾಮೀಜಿಯಾದ ಬಳಿಕ 1930-40ರ ದಶಕದಲ್ಲಿ ಪೇಜಾವರ ಮಠದಲ್ಲಿ ಕೆಲವು ಜಾತಿಯವರು ಮಠದ ಒಳಗೆ ಬಾರದೆ ಇರುವುದನ್ನು ಗಮನಿಸಿ ಅವರನ್ನೂ ಒಳಗೆ ಕರೆದು ಪ್ರಸಾದವನ್ನು ನೀಡುವ ಕ್ರಮ ಆರಂಭಿಸಿದರು. 1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಮೊದಲ ಪ್ರಾಂತ ಸಮ್ಮೇಳನದ ಮೂಲಕ ಶ್ರೀಗಳು ವಿಶೇಷವಾಗಿ ದಲಿತರ ಕುರಿತಾಗಿ ದಾಪುಗಾಲು ಇರಿಸಿದರು. 1970ರಲ್ಲಿ ದಲಿತರ ಕಾಲನಿಗೆ ಪಾದಯಾತ್ರೆ ನಡೆಸಿದಾಗ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿತು. ಅವರ ಮಾನವೀಯ ಕಾಳಜಿ ವಿರೋಧವನ್ನು ಮಣಿಸಿತು. ಈ ನೀತಿ ಕೊನೆವರೆಗೂ ಇತ್ತು. 1969ರಲ್ಲಿ ಉಡುಪಿ ಪುರಸಭೆಗೆ ತಲೆಮೇಲೆ ಮಲ ಹೊರುವ ಕೆಟ್ಟ ಪದ್ಧತಿಯನ್ನು ನಿಷೇಧಿಸಿದ ದೇಶದ ಮೊದಲ ಪುರಸಭೆ ಎಂಬ ಕೀರ್ತಿ ಇದೆ. “ಈ ನಿರ್ಣಯ ಸ್ವೀಕರಿಸುವಲ್ಲಿ ಶ್ರೀಗಳ ಪ್ರಭಾವ, ಪ್ರೇರಣೆ ಇತ್ತು’ ಎಂಬುದನ್ನು ಪುರಸಭಾಧ್ಯಕ್ಷರಾಗಿದ್ದ ಡಾ| ವಿ.ಎಸ್‌. ಆಚಾರ್ಯ ನೆನಪಿಸಿಕೊಳ್ಳುತ್ತಿದ್ದರು.
ಸ್ಥಳೀಯಾಧ್ಯಕ್ಷರಿಂದ ರಾಷ್ಟ್ರಾಧ್ಯಕ್ಷರವರೆಗೆ 1997ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ ವಾಯಿತು. 1997ರ ಬಳಿಕ ಇಬ್ಬರು ದಲಿತ ಸಮುದಾ ಯದವರು ಉಡುಪಿ ನಗರಸಭಾಧ್ಯಕ್ಷರಾಗಿದ್ದಾರೆ.

ಶ್ರೀಗಳ 4, 5ನೆಯ ಪರ್ಯಾಯದಲ್ಲಿ ಪೌರಸಮ್ಮಾನ ನಡೆಸಿದವರು ಆನಂದಿ ಮತ್ತು ಪಿ.ಯುವರಾಜ್‌. ಆನಂದಿ ಬಳಿಕ ಡಾ|ವನಜಾಕ್ಷಿ, 5ನೇ ಪರ್ಯಾಯದಲ್ಲಿ ದಿನಕರ ಬಾಬು ಜಿ.ಪಂ. ಅಧ್ಯಕ್ಷರಾದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ದಲಿತರಿಗೆ ಸಿಗಲಿಲ್ಲ. ಇದರ ಬಳಿಕದ ಗೃಹ ಸಚಿವ ಸ್ಥಾನದಲ್ಲಿ 3, 4, 5ನೆಯ ಪರ್ಯಾಯದಲ್ಲಿ ಕ್ರಮವಾಗಿ ಇದ್ದವರು ಬಿ. ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ| ಜಿ. ಪರಮೇಶ್ವರ್‌. 2013ರ ಮೇ 13ರಂದು ಸಿದ್ದರಾಮಯ್ಯನವರ ಸರಕಾರ ಬಂದರೂ ಡಾ| ಜಿ. ಪರಮೇಶ್ವರ್‌ ಗೃಹ ಸಚಿವರಾದುದು ಬಹಳ ದಿನಗಳ ಬಳಿಕ, ಕೆಲವೇ ತಿಂಗಳು. ಅವರು 2016ರ ಜ. 17ರ ರಾತ್ರಿ ಶ್ರೀಗಳವರನ್ನು ಗೃಹ ಸಚಿವರಾಗಿ ಸರಕಾರದ ವತಿಯಿಂದ ಅಭಿನಂದಿಸಿದ್ದರು. 4ನೆಯ ಪರ್ಯಾಯದಲ್ಲಿ ಕೆ.ನಾರಾಯಣನ್‌ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. 5ನೆಯ ಪರ್ಯಾಯದಲ್ಲಿ ರಾಮನಾಥ ಕೋವಿಂದ್‌ ರಾಷ್ಟ್ರಪತಿಯಾದರು, 2018ರ ಡಿ. 27ರಂದು ಉಡುಪಿಯಲ್ಲಿ ಶ್ರೀಗಳವರನ್ನು ಗೌರವಿಸಿದರು. ಅಯೋಧ್ಯೆ ಕುರಿತಂತೆ ನ್ಯಾಯಾಲಯ ತೀರ್ಪು ನೀಡಿದಾಗ ವಿವಾದಿತ ಭೂಮಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲು ಮತ್ತು ಮಸೀದಿ ನಿರ್ಮಾಣಕ್ಕೆ ಜಮೀನು ನೀಡುವ ಎರಡನ್ನೂ ಶ್ರೀಗಳು ಸಮಾನವಾಗಿ ಸ್ವಾಗತಿಸಿದ್ದು 2019ರ ನ. 9ರಂದು. ಈಗ ಕೋವಿಂದರಿಂದ ಪ್ರಶಸ್ತಿ ಪ್ರದಾನ ಆಗುವುದು ನ. 8ರಂದು.
ಸತ್ಯವಾನ್‌ ಸತ್ಯಸಂಕಲ್ಪಃ
ಘಟನಾವಳಿಗಳು ಕಾಕತಾಳೀಯ, ಆದರೆ ಕುತೂಹಲಕಾರಿ. ಶ್ರೀಕೃಷ್ಣಾಷ್ಟೋತ್ತರದಲ್ಲಿ “ಸತ್ಯವಾನ್‌ ಸತ್ಯಸಂಕಲ್ಪಃ’ ಎಂದಿದೆ. ಒಬ್ಬ ಭಕ್ತ ನಿಷ್ಕಾಮ, ನಿಸ್ವಾರ್ಥ ಸಂಕಲ್ಪವನ್ನು ಮಾಡಿದರೆ, ಅದಕ್ಕೆ ಎಷ್ಟೋ ಪಟ್ಟು ಜಾರಿಗೊಳಿಸುವುದು ನಿಸರ್ಗದ (ಸತ್ಯಸಂಕಲ್ಪನ) ನಿಯಮವೆ? ಅತೀ ಸುಲಭದಲ್ಲಿ ಸ್ವಸ್ಥ ಸಮಾಜ ರೂಪಿಸಲು ಇದೊಂದು ಸರಳ ಮಾರ್ಗ.

ವಿದ್ಯಾಸಂಸ್ಥೆ, ಛತ್ರ, ಸಮಾವೇಶ
ನಾಡಿನ ಹಲವೆಡೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಛತ್ರಗಳ ನಿರ್ಮಾಣ, ಸಾವಿರಾರು ಸಂತರು ಪಾಲ್ಗೊಂಡ ಎರಡು ಧರ್ಮಸಂಸದ್‌, ಸಂಸ್ಕೃತ ಮಾತನಾಡುವ ಸಾವಿರಾರು ಜನರು ಒಂದೆಡೆ ಕಾಣಬಹುದಾದ ಸಂಸ್ಕೃತ ಭಾರತೀ ರಾಷ್ಟ್ರೀಯ ಸಮ್ಮೇಳನ (ಶತಾಯುಷಿ ಹಿರಿಯಡಕದ ಗುರುವ ಕೊರಗ ಸಂಸ್ಕೃತ ಸಂಭಾಷಣ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಇತಿಹಾಸ ಇದೇ ಸಮ್ಮೇಳನದಲ್ಲಿ), ರಾಷ್ಟ್ರೀಯ ಸ್ತರದ ಕನಕದಾಸ ಜಯಂತ್ಯುತ್ಸವ ಇತ್ಯಾದಿಗಳು ಉಲ್ಲೇಖನೀಯ.
*********




No comments:

Post a Comment