Tuesday, 1 January 2019

ರಾಯರು 09 ಮಹಿಮೆ ರಾಘವೇಂದ್ರ ಸ್ವಾಮಿ rayaru 09 mahime raghavendra swamy


ರೋಗಹರ ಶ್ರೀ ರಾಘವೇಂದ್ರ
(ರಾಯರ ಮಹಿಮೆ).

ವೇಗವಾಗಿ ನುಗ್ಗುತ್ತಿರುವ ರೈಲಿನ ಕಿಟಕಿಯಿಂದ ಹೊರಗಡೆ ನೋಡುತ್ತಿದ್ದಾರೆ ಆತ. ಹೊರಗಿನ ಹಸಿರು ಹೊಲ ಗದ್ದೆಗಳು, ಗಿಡಮರಗಳು, ಇದಾವುದೂ ಆತನ ಮುಖದಲ್ಲಿ ದಟ್ಟವಾಗಿ ಮೂಡಿರುವ ಚಿಂತೆಯ ಗೆರೆಗಳನ್ನು ಆಳಿಸುತ್ತಿಲ್ಲ. ಇಳಿ ವಯಸ್ಸಿನ ಆತನ ಪತ್ನಿಯು ವಿಚಿತ್ರ ಖಾಯಿಲೆಯಿಂದ ನರಳುತ್ತಾ ಹಾಸಿಗೆ ಹಿಡಿದಿದ್ದಾರೆ. ಬೆಂಗಳೂರಿನ ಯಾವ ವೈದ್ಯರು ನೀಡಿದ ಔಷಧಿಯೂ ಪರಿಣಾಮ ಬೀರುತ್ತಿಲ್ಲ. ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಹೈದರಾಬಾದಿನ ವೈದ್ಯರೊಬ್ಬರನ್ನು ಭೇಟಿಮಾಡಿ, ರೈಲಿನಲ್ಲಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ ಆತ. ಪತ್ನಿಯ ಆರೈಕೆಗೆ ಸಹಾಯಕರೊಬ್ಬರನ್ನು ನೇಮಿಸಿ ಬಂದಿದ್ದಾರೆ. ಆದಷ್ಟು ಬೇಗ ಮನೆಗೆ ತೆರಳುವ ತವಕ.

ತುಂಗಭದ್ರಾ ನಿಲ್ದಾಣವನ್ನು ಸಮೀಪಿಸುತ್ತಿದೆ ರೈಲು. ಸಹ ಪ್ರಯಾಣಿಕರಲ್ಲಿ ಹಬ್ಬದ ಸಡಗರ. "
ರಾಘವೇಂದ್ರ ರಾಘವೇಂದ್ರ" ಎಂಬ ನಾಮ ಘೋಷ ರೈಲಿನ ತುಂಬೆಲ್ಲಾ ಮೊಳಗುತ್ತಿದೆ. ರಾಘವೇಂದ್ರ ಸ್ವಾಮಿಗಳ ಹೆಸರೇ ಕೇಳಿರದ ಆತ ಕುತೂಹಲದಿಂದ ಸಹ ಪ್ರಯಾಣಿಕರೊಬ್ಬರನ್ನು ವಿಚಾರಿಸಿದರು
"ಯಾಕಿಷ್ಟು ಸಡಗರ? ಯಾರೀ ರಾಘವೇಂದ್ರ?". ಆ ಸಹ ಪ್ರಯಾಣಿಕ ಮುಗುಳ್ನಕ್ಕು ಭವದ ರೋಗಗಳೆಲ್ಲವನ್ನೂ ನಾಶ ಮಾಡುವ ವೈದ್ಯ ಆ ರಾಘವೇಂದ್ರ. ಅವರ ದರುಶನಕ್ಕಾಗಿ ನಾವೆಲ್ಲಾ ಹೊರಟಿದ್ದೇವೆ. ತುಂಗಭದ್ರಾ ತಟದಲ್ಲಿರುವ ಮಂತ್ರಾಲಯ ಎಂಬಲ್ಲಿ ಅವರ ವಾಸ್ತವ್ಯ." ಎಂದರು. ಪತ್ನಿಯ ಖಾಯಿಲೆಯಿಂದ ಚಿಂತಾಕ್ರಾಂತರಾಗಿದ್ದ ಆತನಿಗೆ ಆ ಮಾತುಗಳು ಹೊಸ ಚೈತನ್ಯವನ್ನು ಮೂಡಿಸಿದವು.  ಎಂತಹ ಖಾಯಿಲೆಗಾದರೂ ಔಷಧ ಕೊಡುತ್ತಾರೆಯೇ ಅವರು?" ಎಂದು ಆಸೆಯಿಂದ  ಕೇಳಿದರು. ಸಹಪ್ರಯಾಣಿಕರು ನಗುತ್ತಾ ರಾಘವೇಂದ್ರ ರಾಯರು ವಾಸಿ ಮಾಡದ ಖಾಯಿಲೆಯೇ ಇಲ್ಲ. ಅವರ ದರುಶನಕ್ಕಾಗಿ ಹೊರಟಿರುವ ಈ ಸಹಸ್ರಾರು ಪ್ರಯಾಣಿಕರನ್ನು ನೋಡಿ. ಅಂತಹ ಪ್ರಸಿದ್ಧ ವೈದ್ಯರು ನಮ್ಮ ಗುರುರಾಜರು. " ಎಂದರು.  ಗುರುರಾಜರನ್ನೊಮ್ಮೆ ಭೇಟಿ ಮಾಡಿ ಪತ್ನಿಯ ಖಾಯಿಲೆಗೆ ಔಷಧವನ್ನು ತೆಗೆದು ಕೊಂಡು ಹೋಗೋಣವೆಂದು ಆತನೂ ರೈಲಿಂದ ಇಳಿದು, ಸಹಸ್ರಾರು ಭಕ್ತರ ಜೊತೆಗೂಡಿ ತಾವೂ ಮಂತ್ರಾಲಯಕ್ಕೆ ಆಗಮಿಸಿದರು.

ತುಂಗಭದ್ರೆಯಲ್ಲಿ ಸ್ನಾನ ಆಹ್ನೀಕಗಳಾದವು. ಎಲ್ಲಿರುತ್ತಾರೆ ಗುರುರಾಜರು??" ಎಂದು ಅಲ್ಲಿದ್ದವರನ್ನು ಕೇಳಿದಾಗ ಇಲ್ಲೇ ಮಠದಲ್ಲಿದ್ದಾರೆ ಬನ್ನಿ" ಎಂದು ಕರೆದೊಯ್ದು"
ಅದರೊಳಗಿದ್ದಾರೆ ನಮ್ಮ ಗುರುರಾಜರು. ಭಕ್ತಿಯಿಂದ ಕೈ ಮುಗಿದು ಕೇಳಿದವರಿಗೆ ಇಷ್ಟಾರ್ಥಗಳನ್ನು ಕರುಣಿಸುತ್ತಾರೆ" ಎಂದು  ಬೃಂದಾವನವನ್ನು ತೋರಿಸಿದರು.
ಯಾವುದೋ ಹಿರಿಯ ವೈದ್ಯರನ್ನು ಕಾಣುವೆನೆಂದು ಆಸೆಯಿಂದ ಬಂದಿದ್ದ ಆತನಿಗೆ ಆ ಕಲ್ಲು ಬೃಂದಾವನವನ್ನು ನೋಡಿ ನಿರಾಸೆಯಾಯಿತು. ನಾಸ್ತಿಕರಾದ ಆತನಿಗೆ ದೇವರು ಗುರುಗಳ ಬಗ್ಗೆ ನಂಬಿಕೆ ಕಡಿಮೆ. ಊಟವನ್ನು ಮುಗಿಸಿ,  ವಿಶ್ರಾಂತಿ ತೆಗೆದುಕೊಂಡು, ಊಟದ ಕಾಣಿಕೆಯಾಗಿ ಹುಂಡಿಗೆ ನಾಲ್ಕಾಣಿ (ಇಪ್ಪತೈದು ಪೈಸೆ) ಹಾಕಿ, ರಾತ್ರಿಯ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಬೆಳಗಿನ ಜಾವ ಬೆಂಗಳೂರು ತಲುಪಿ ಮನೆಯ ಬಾಗಿಲನ್ನು ತಟ್ಟಿದರು. ಬಾಗಿಲು ತೆರೆಯಿತು. ಏನಾಶ್ಚರ್ಯ! ಆತನ ಪತ್ನಿಯೇ ಬಂದು ಬಾಗಿಲು ತೆರೆದಿದ್ದಾರೆ!!
ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿರುವ ಪತ್ನಿ ತಾನೇ ನಡೆಯುತ್ತಿದ್ದಾಳೆ.
ಅವರಿಗೆ ತಮ್ಮ ಕಣ್ಣುಗಳನ್ನು ನಂಬಲಾಗಲಿಲ್ಲ. ಹಾಸಿಗೆಯಿಂದ ಕದಲಲಾಗದ ನೀನು ನಡೆಯುತ್ತಿರುವೆಯಲ್ಲಾ, ಹೇಗೆ?" ಎಂದು ಪ್ರಶ್ನಿಸಿದರು. ಗಂಡನ ಪ್ರಶ್ನೆಯಿಂದ ಆಶ್ಚರ್ಯಗೊಂಡ ಆಕೆ "
ನಿನ್ನೆ ಸಂಜೆ ಮನೆಗೆ *ಗುರುರಾಜರಾವ್
ಎಂಬ ವೈದ್ಯರು ಬಂದಿದ್ದರು. ನೀವೇ ಮನೆ ವಿಳಾಸವನ್ನು ಕೊಟ್ಟು ಕಳುಹಿಸಿದ್ದಿರಂತೆ. ಇಂಜೆಕ್ಷನ್ ಒಂದನ್ನು ನೀಡಿದರು. ತಕ್ಷಣವೇ ನಾನು ಮೊದಲಿನಂತಾದೆ. ಅವರ ಶುಲ್ಕ (ಫೀಸ್) ಒಂದು ರೂಪಾಯಿಯಂತೆ. ನೀವು ನಿನ್ನೆಯೇ ನಾಲ್ಕಾಣಿ (ಇಪ್ಪತೈದು ಪೈಸೆಗಳು) ಮುಂಗಡವಾಗಿ ಪಾವತಿಸಿದ್ದೀರಂತೆ. ಉಳಿದ ಹನ್ನೆರಡಾಣಿ (ಎಪ್ಪತ್ತೈದು ಪೈಸೆಗಳು) ನನಗೆ ತಲುಪಿಸುವಂತೆ ನಿನ್ನ ಗಂಡನಿಗೆ ಹೇಳು ಎಂದರು". ಹೆಂಡತಿಯ ಮಾತುಗಳನ್ನು ಕೇಳಿ ಸ್ತಂಭೀಭೂತರಾಗಿ ಬಾಗಿಲಲ್ಲೇ ನಿಂತುಬಿಟ್ಟರು ಆತ. ಆಗ ಪತ್ನಿಯು ಆತನ ಕೈ ಹಿಡಿದು ಮನೆಯೊಳಗೆ ಕರೆದೊಯ್ದು ವೈದ್ಯರು ನನಗೆ ಇಂಜೆಕ್ಷನ್ ನೀಡಿದ ನಂತರ ಸಿರಿಂಜನ್ನು ಇಲ್ಲೇ ಮರೆತು ಹೋಗಿದ್ದಾರೆ. ನೀವು ಅವರಿಗೆ ಉಳಿದ ಶುಲ್ಕವನ್ನು ಕೊಡುವಾಗ ಸಿರಿಂಜನ್ನು ಅವರಿಗೇ ತಲುಪಿಸಿ ಬಿಡಿ" ಎಂದರು. ಕೂಡಲೇ ಆತ ಸಿರಿಂಜನ್ನು ಕಣ್ಣಿಗೊತ್ತಿಕೊಂಡು, ತಲೆಯ ಮೇಲಿಟ್ಟುಕೊಂಡು ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ ಅಲ್ಲಿಯೇ ಕುಳಿತುಬಿಟ್ಟರು. ಗಂಡನ ವಿಚಿತ್ರ ವರ್ತನೆಯನ್ನು ನೋಡಿ ಗಾಬರಿಗೊಂಡು ಬಿಟ್ಟರು ಆಕೆ. ಸ್ವಲ್ಪ ಸಮಯದ ನಂತರ ಆತ ಯಥಾಸ್ಥಿತಿಗೆ ಬಂದು
ತಾವು ಯಾವುದೋ ದೊಡ್ಡ ವೈದ್ಯರಿರಬಹುದೆಂಬ ಆಸೆಯಿಂದ  ಮಂತ್ರಾಲಯಕ್ಕೆ ತೆರೆಳಿದ್ದು,  ಅಲ್ಲಿ ರಾಯರ ಬೃಂದಾವನವನ್ನು ನೋಡಿದ್ದು, ಊಟದ ಕಾಣಿಕೆಯಾಗಿ ನಾಲ್ಕಾಣಿಯನ್ನು (ಇಪ್ಪತೈದು ಪೈಸೆಗಳು) ಹುಂಡಿಗೆ ಹಾಕಿ ಬೆಂಗಳೂರಿಗೆ ಮರಳಿದ್ದು, ಹೀಗೆ ಎಲ್ಲ ಘಟನೆಗಳನ್ನೂ ವಿವರಿಸಿದರು. ಮಂತ್ರಾಲಯದ ಆ ಗುರುರಾಜರೇ ನಿನ್ನೆ ಸಂಜೆ "ಡಾಕ್ಟರ್ ಗುರುರಾಜ ರಾವ್" ಆಗಿ ಬಂದು ಇಂಜೆಕ್ಷನ್ ನೀಡಿದ್ದು" ಎಂದರು.
ಗಂಡನ ಮಾತುಗಳನ್ನು ಕೇಳಿದ ಆಕೆಗೆ " ನಿನ್ನೆ ಮನೆಗೆ ಬಂದು,  ಔಷಧವಿತ್ತು ತನ್ನನ್ನು ಗುಣಮಾಡಿದ್ದು ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳೇ" ಎಂದು ಅರಿವಾಯಿತು.

ತಡಮಾಡದೇ  ದಂಪತಿಗಳಿಬ್ಬರೂ ಅಂದೇ  ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದರು. ಗುರುರಾಜರ ಬೃಂದಾವನದ ಮುಂದೆ ಭಕ್ತಿಯಿಂದ ಕೈ ಮುಗಿದು ನಿಂತು, ತಮ್ಮನ್ನನುಗ್ರಹಿಸಿದ ರಾಯರನ್ನು ಸ್ತುತಿಸುತ್ತಾ ನಿಂತು ಬಿಟ್ಟರು. ಸಮಯದ ಪರಿವೆಯೇ ಇಲ್ಲ ಅವರಿಗೆ. ಗುರುರಾಜರ ಬೃಂದಾವನವನ್ನು ಎಷ್ಟು ನೋಡಿದರೂ ತೃಪ್ತಿಯಾಗುತ್ತಿಲ್ಲ. ಅವರನ್ನು ಎಷ್ಟು ಸ್ತುತಿಸಿದರೂ ಸಾಕಾಗುತ್ತಿಲ್ಲ ಆ ದಂಪತಿಗಳಿಗೆ.

ಹಸಿವು ನೀರಡಿಕೆಗಳ ಪರಿವೆಗಳಿಲ್ಲದೆ ಬೆಳಗಿನಿಂದ ಬೃಂದಾವನದ ಮುಂದೆ ಕಣ್ಣೀರು ಸುರಿಸುತ್ತಾ ನಿಂತಿರುವ ತಮ್ಮನ್ನು ಕುತೂಹಲದಿಂದ ವಿಚಾರಿಸಿದ ಹಿರಿಯರೊಬ್ಬರಿಗೆ, ಗುರುರಾಜರು ವೈದ್ಯರಾಗಿ ಬಂದು ತಮ್ಮ ಮೇಲೆ ಮಾಡಿದ ಅನುಗ್ರಹವನ್ನು ಭಕ್ತಿಯಿಂದ ವಿವರಿಸಿದರು.

ರಾಯರ ಆ ಮಹಿಮೆಯನ್ನು ಕೇಳಿ ಭಕ್ತಿಪುಳುಕಿತರಾದ ಆ ಹಿರಿಯರು, ರೋಗಹರರಾದ ಆ ರಾಘವೇಂದ್ರರನ್ನು ರೋಗಹರನೇ ಕೃಪಾಸಾಗರ ಶ್ರೀ ಗುರುರಾಘವೇಂದ್ರ ಪರಿಪಾಲಿಸೋ" ಎಂದು ಸ್ತುತಿಸ ತೊಡಗಿದರು.

✍  ಕೃಪೆ..ಕಟ್ಟೆ ಸುಧೀಂದ್ರ

**********


 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ವ್ರತಾಯ ಚ ಭಜತಾಂ ಕಲ್ಪವೃಕ್ಷಾಯಾ ನಮತಾಂ ಕಾಮಧೇನುವೇ 🌷🌷🕉✡
ಶ್ರೀ ಗುರುರಾಘವೇಂದ್ರಾಯ ನಮಃ
ರಾಯರು ಇನ್ನೂ ಬದುಕಿದ್ದಾರೆ ಎನ್ನುವುದಕ್ಕೆ ಸಾಕ್ಷಿಗಳನ್ನು ನೀಡುತ್ತೇನೆ ಓದುತ್ತಾ ಸಾಗಿರಿ.

ಗುರುರಾಯರು ಪ್ರತಿಯೊಬ್ಬ ಭಕ್ತರ ಮನದಲ್ಲಿ ಇಂದಿಗೂ ಬದುಕಿದ್ದಾರೆ.
ಪ್ರಹ್ಲಾದರಾಗಿ – ವ್ಯಾಸರಾಜರಾಗಿ ನಂತರ ರಾಘವೇಂದ್ರ ಯತಿರಾಜರಾದ
ಕಲಿಯುಗದ ಕಾಮಧೇನು ಶ್ರೀಗುರುರಾಯರು…

ಮಂತ್ರಾಲಯದ ಗುರುರಾಘವೇಂದ್ರರಾಯರೇ ನರಸಿಂಹಾವತಾರಕ್ಕೆ ಸಹಕಾರಿಯಾದ ಪ್ರಹ್ಲಾದರು.ಪೂರ್ವದಲ್ಲಿ ಸೃಷ್ಟಿಕರ್ತ ಬ್ರಹ್ಮದೇವನ ದೇವಗಣಗಳಲ್ಲಿ ಶಂಕುಕರ್ಣರಾಗಿದ್ದ ರಾಯರು ಬ್ರಹ್ಮದೇವನ ಶಾಪದಿಂದ ಭಕ್ತಪ್ರಹ್ಲಾದರಾಗಿ ಭೂಲೋಕದಲ್ಲಿ ಹುಟ್ಟಿ, ಲೋಕಕಲ್ಯಾಣದ ಬಳಿಕ ತಮ್ಮ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಜನಿಸಿದರು. ವ್ಯಾಸರ ಅವತಾರದ ಬಳಿಕ ಶ್ರೀ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸಿ, ತಮ್ಮ ಬಳಿಗೆ ಬರುವ ಭಕ್ತಕೋಟಿಯ ಸಂಕಷ್ಟ ಪರಿಹರಿಸುತಿಹರು. ಅದಕ್ಕೆ ಭಕ್ತರು ರಾಯರನ್ನು ಪ್ರಹ್ಲಾದ – ವ್ಯಾಸಮುನಿಯೇ – ರಾಘವೇಂದ್ರ ಯತಿಯೇ ಎಂದು…

********
ಬಿಚ್ಚಾಲೆ ಗ್ರಾಮದ ಗುರು ರಾಯರ ವೃಂದಾವನ ಮಹಿಮೆ  :
ಶ್ರೀ ಅಪ್ಪಣ್ಣಾಚಾರ್ಯರು ಗುರುರಾಯರ ಅಂತರಂಗ ಭಕ್ತರು ಮತ್ತು ಶಿಷ್ಯರು.

ಬಿಕ್ಷಾಲಯ ( ಈಗಿರುವ ಬಿಚ್ಚಾಲೆ ಗ್ರಾಮ )  ಅಪ್ಪಣಾಚಾರ್ಯರು ರಾಯರೊಂದಿಗೆ ಅನೇಕ ಶಾಸ್ತ್ರಾರ್ಥ ವಿಷಯ ಮಂಥನ ಮಾಡಿ ತಮ್ಮ ಜ್ಞಾನದ ಹಸಿವನ್ನು ಹಿಂಗಿಸಿಕೊಳ್ಳುತ್ತಿದ್ದರು.

ರಾಯರಿಗೆ ಬಿಕ್ಷಾಲಯ ಅತಿ ಪ್ರೀಯವಾದ ಸ್ಥಳ  ಪ್ರಶಾಂತವಾದ ತಂಪಾದ ತುಂಗಾನದಿಯ ತೀರ - ಅರಳಿ ಕಟ್ಟೆಯ ವೃಕ್ಷ ( ಶ್ರೀ ಲಕ್ಷ್ಮೀ - ಹರಿಯ ವಿಶೇಷ ಸಾನಿಧ್ಯ )
ಗುರುರಾಯರು ತಮ್ಮ ಎರಡನೆಯ ಅವತಾರದಲ್ಲಿ  ಶ್ರೀ ವ್ಯಾಸರಾಜರಾಗಿ ಪ್ರತಿಷ್ಠಾಪಿಸಿದ ವಾಯುದೇವರ ವಿಗ್ರಹ - ಶ್ರೀ ವ್ಯಾಸರಾಜರ ಸ್ವರೂಪೋಧಾರಕ ಗುರುಗಳು ಶ್ರೀ ಶ್ರೀಪಾದರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ನರಸಿಂಹ ದೇವರು. 
ಇದೇ ಸ್ಥಳದಲ್ಲಿ ರಾಯರು - ತಮ್ಮ ಪ್ರಿಯ ಶಿಷ್ಯ ಅಪ್ಪಣ್ಣಾಚಾರ್ಯರಿಗೆ ಘನ ಮಧ್ವ ತತ್ವ ಬೋಧಿಸುತ್ತಿದ್ದರು..

ಕಾಲಾನಂತರದಲ್ಲಿ ಶ್ರೀ ಅಪ್ಪಣ್ಣಾಚಾರ್ಯರು ಯಾತ್ರೆಗೆ ಹೋಗಿ ಸ್ವಗ್ರಾಮ ಭಿಕ್ಷಾಲೆಗೆ ಮರಳುವ ಸಂದರ್ಭದಲ್ಲಿ - ತುಂಗಾ ನದಿ ದಡದ ಆಚೆ ಮಂತ್ರಾಲಯ ಗ್ರಾಮದಲ್ಲಿ ಗುರುರಾಯರು ಸಜೀವ ವೃಂದಾವನ ಪ್ರವೇಶ ವಾರ್ತೆ ಕೇಳಿ ಅಪ್ಪಣ್ಣಾಚಾರ್ಯರಿಗೆ ತಮ್ಮ ನೆಚ್ಚಿನ ಗುರು ರಾಯರ ಒಡನಾಟ ಇಲ್ಲದಂತಾಗುವದಲ್ಲ ...
ದುಃಖದಲಿ ಪ್ರವಾಹದಿಂದ  ಉಕ್ಕಿ ಹರಿಯುತ್ತಿದ್ದ ತುಂಗೆಯ ಆರ್ಭಟವನ್ನೂ ಲೆಕ್ಕಿಸದೆ ರಾಯರನ್ನು ನೆನೆಯುತ್ತ - ರಾಯರ ದರುಶನಾಕಾಂಕ್ಷಿಯಾಗಿ ಉಕ್ಕಿ ಹರಿಯುವ ತುಂಗೆ ಯಲಿ ಧುಮಿಕಿ ಪ್ರವಾಹದ ವಿರುದ್ಧ ಈಜುತ್ತಲಿದ್ದರು ..ಅಪ್ಪಣ್ಣಾಚಾರ್ಯರ ಮುಖದಿಂದ ಗುರುರಾಯರ ಸ್ತೋತ್ರ ಗಂಗೆಯಂತೆ ಅಸ್ಖಲಿತವಾಗಿ ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾ..... ಹೊರ ಹೊಮ್ಮುತ್ತಿತ್ತು 

.
ಗುರುರಾಯರ ಅಂತರಂಗ ಭಕುತನ ಭಕ್ತಿಗೆ ಮಾತೃಮಯಿ ತುಂಗೆ ಉಕ್ಕಿ ಹರಿಯುವ ಅಲ್ಲೆಗಳ ಮಧ್ಯದಲ್ಲಿಯೂ ದಾರಿ ಮಾಡಿ ಕೊಟ್ಟು ಮಾಧ್ವ ಯತಿ ರಾಯರ ಸ್ತೋತ್ರಕ್ಕೆ ವಿಶೇಷ ಮನ್ನಣೆಯನ್ನಿತ್ತಳು .. 
( ಇದುವೇ ಗುರು - ಶಿಷ್ಯರ ಬಾಂಧವ್ಯಕ್ಕಿರುವ ಅಲೌಕಿಕ ಶಕ್ತಿ!! )

ಅಪ್ಪಣ್ಣಾಚಾರ್ಯರು ಭಕ್ತಿ ಪರವಶರಾಗಿ ತುಂಗೆಯ ಪ್ರವಾಹದಲ್ಲಿ ಮಿಂದು - ಮಡಿಯಲ್ಲಿ ಮಂತ್ರಾಲಯ ತಲುಪಲು ಗುರುರಾಯರು ವೃಂದಾವನದಲ್ಲಿ ಸನ್ನಿಹಿತರಾಗಿದ್ದರು...ದುಃಖದಲಿ ಶ್ರೀ ಅಪ್ಪಣ್ಣಾಚಾರ್ಯರ ಕಂಠ ಬಿಗಿದು ಗದ್ಗದಿತರಾಗಿ - ವೃಂದಾವನದ ಮುಂದೆ ಕುಸಿದು ಕಣ್ಣೀರಧಾರೆಯಲಿ ..ಗುರುಸ್ತೋತ್ರದ ಕಡೆಯಶ್ಲೋಕ 
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ...
ದುಃಖದಲ್ಲಿ ಕಂಠಬಿಗಿದು ಶ್ಲೋಕದ ಪದಾಕ್ಷರ "ವಿಭೂತಿರತುಲಾ" ..ಉಚ್ಚರಿಸಿ ನಿಲ್ಲಿಸಲು ಧಾರಾಕಾರ ಅಶ್ರುಗಳಿಂದೊಡಗೂಡಿದ ಅಪ್ಪಣ್ಣಾಚಾರ್ಯರ ಕಣ್ಣುಗಳು ರಾಯರ ವೃಂದಾವನ ತದೇಕಚಿತ್ತದಿ ನೋಡುತ್ತಿರಲು ...

ಪವಾಡ ಸದೃಶವೋ ಎನ್ನುವಂತ ವೃಂದಾವನದೊಳಗಿಂದ ರಾಯರ ದೈವಿಕ ವಾಣಿ  “ಸಾಕ್ಷೀ ಹಯಾಸ್ಯೂಽತ್ರ ಹಿ”  
( ಈ ಗುರು ಸ್ತೋತ್ರಕ್ಕೆ ಶ್ರೀ ಹಯಗ್ರೀವ ದೇವರೇ ಸಾಕ್ಷ್ಗಿ)  ಎನ್ನುವ ಗುರು ಮುದ್ರಿಕೆ ಒತ್ತಿ - ಶಿಷ್ಯನ ಗುರುಸ್ತೋತ್ರಕ್ಕೆ ಜಗನ್ಮಾನ್ಯ ಮಾಡಿದ ರಾಯರ ಕಾರುಣ್ಯ ಕಂಡ ಶ್ರೀ ಅಪ್ಪಣ್ಣಾಚಾರ್ಯರ ದುಃಖದ ಅಶ್ರು ~ ಆನಂದಾಶ್ರುಗಳಾಗಿ ಕ್ಷಣಾರ್ಧದಲ್ಲಿ ಬದಲಾಗಿತ್ತು -  ಶಿಷ್ಯನ ದೇಹ -ಬುದ್ಧಿ - ಮನಸ್ಸು ರಾಯರಿಗೆ ಶರಣಾಗಿತ್ತು !!
ನೆರೆದ ಭಕ್ತಸಮೂಹ ರಾಯರು (ಅ)ಪರೋಕ್ಷವಾಗಿಯೂ ನಮ್ಮ ರಕ್ಷಣೆ ಮಾಡಿಯೇ ಮಾಡುತ್ತಾರೆ ಎಂಬ ವಿಶ್ವಾಸಕ್ಕೆ ಸಾಕ್ಷಿಯಾಗಿಸುವಂತೆ - ಭಕ್ತಿ ಭಾವದಲಿ ಭಕುತರ ಮೈ ಮನದಲಿ ದೈವಿಕ ರೋಮಾಂಚನವನ್ನುಂಟು ಮಾಡಿತ್ತು.

ಮುಂದೆ ಶ್ರೀ ಅಪ್ಪಣ್ಣಾಚಾರ್ಯರು ಭಿಕ್ಷಾಲಯ ( ಈಗಿನ  ಬಿಚ್ಚಾಲೆ ಗ್ರಾಮ ) ಗ್ರಾಮದಲ್ಲಿ - ರಾಯರಿಗೆ ಪ್ರೀತ್ಯಾಸ್ಪದವಾದ ಸ್ಥಳದಲ್ಲಿ ವಿರಳಾತಿ ವಿರಳ ರಾಯರ ಏಕಶಿಲಾ ಮೃತ್ತಿಕೆ ವೃಂದಾವನ ಸ್ಥಾಪನೆಮಾಡಿ ಆರಾಧಿಸುತ್ತಿದ್ದರು..

ಇಂದಿಗೂ ಪ್ರತಿನಿತ್ಯವೂ ರಾಯರು ಬ್ರಾಹ್ಮೀ ಮುಹೂರ್ತದಲ್ಲಿ ಆಕಾಶ ಮಾರ್ಗವಾಗಿ ಜ್ಯೋತಿರೂಪದಿಂದ ಮಂತ್ರಾಲಯ ಮೂಲವೃಂದಾವನದಿಂದ - ಬಿಕ್ಷಾಲಯ ಏಕಶಿಲಾ ವೃಂದಾವನದಲ್ಲಿ  ಬಂದು ಸನ್ನಿಹಿತರಾಗುತ್ತಾರೆ ಎಂದು ಪ್ರತ್ಯಕ್ಷವಾಗಿ ಕಂಡ ಗುರುರಾಯರ ಅಂತರಂಗ ಭಕುತರು ಹೇಳುತ್ತಾರೆ.

ಶ್ರೀ ಅಪ್ಪಣ್ಣಾಚಾರ್ಯರು ಇದೇ ಸ್ಥಳದಲ್ಲಿ ತಮ್ಮ ಶಿಷ್ಯರಿಗೆ 
ಗುರುರಾಯರ ಮುಖೋದ್ಗತ ಪಡೆದ ಘನ ಮಧ್ವ ಜ್ಞಾನದ ತತ್ವಗಳನ್ನು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದರು..
ಶಿಷ್ಯರು ಗ್ರಾಮದಲ್ಲಿ ಭಿಕ್ಷೆ ಬೇಡಿ ತಂದ ಅಕ್ಕಿಯನ್ನು - ಶ್ರೀ ಅಪ್ಪಣ್ಣಾಚಾರ್ಯರು  ಒಂದು ಬಟ್ಟೆಯ ಗಂಟಿನಲ್ಲಿ ಕಟ್ಟಿ  - ತುಂಗಾನದಿಯಲ್ಲಿ ನೆನೆಸಿ - ಅರಳಿ ವೃಕ್ಷದ ಟೊಂಗೆಗೆ ಕಟ್ಟಿ ಪ್ರತ್ಯಕ್ಷ ಅಗ್ನಿಸ್ಪರ್ಶವಿಲ್ಲದೆ - ಮಂತ್ರದಬಲದಿಂದಲೇ  ಹರಿ ವಾಯು - ಗುರುರಾಯರನ್ನು ಸ್ಮರಿಸಿ ಮಂತ್ರಪೂತವಾದ ಜಲ ಪ್ರೋಕ್ಷಿಸಿ ಶುದ್ಧವಾದ ಮಡಿಯಲ್ಲಿ ಬಿಸಿ ಬಿಸಿ ಅನ್ನವನ್ನು ಬೇಯಿಸಿ -ತಾರತಮ್ಯದಿ ಪ್ರಪ್ರಥಮವಾಗಿ ಸರ್ವೋತ್ತಮ  ಶ್ರೀ ವಿಷ್ಣುಗರ್ಪಿಸಿ -ಶ್ರೀ ಲಕ್ಷೀ - ವಾಯು ದೇವರು.....ಕಡೆಗೆ - ರಾಯರ ಹಸ್ತೋದಕಮಾಡಿ -ತಾವು ಮತ್ತು ಶಿಷ್ಯರು ಭುಂಜಿಸುತ್ತಿದ್ದರು..
🙏🙏🙏🙏



*****

 ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀಗುರುರಾಜೋ ವಿಜಯತೇ ||

॥ ಮ್ರತ್ತಿಕಾ ಮಹತ್ವ ॥

ನಾವು ಪ್ರತಿನಿತ್ಯ ದೇವರ ತೀರ್ಥವನ್ನು ಮತ್ತುಪಾದೋದಕವನ್ನು ಹೇಗೆ ಪ್ರಾಶನ ಮಾಡುತ್ತೆವೆಯೋ , ಅದರಂತೆ ಮ್ರತ್ತಿಕಾ ತೀರ್ಥ ಪ್ರಾಶನ ಮಾಡುವುದು ಶಿಷ್ಟ 
ಸಮ್ಮತವಾಗಿದೆ. ಯತಿಗಳ ಬ್ರಂದಾವನಗತ ಮ್ರತ್ತಿಕೆಯು ಉತ್ತಮವಾದ ದಿವ್ಯೌಷಧವಿದ್ದಂತೆ "ಸಕಲ ರೋಗ ನಿವಾರಕವೂ ,ಪಾಪ ಪರಿಹಾರಕವೂ , ಮನೋರೋಗ ನಿವಾರಕವು , ಉತ್ತಮಲೋಕ ಪ್ರಾಪ್ತಿ ಸಾಧಕವೂ ,ಸಕಲಇಷ್
ಪ್ರದವೂ , ತಾಪತ್ರಯ ನಿವಾರಕವು , ಭೂತಪ್ರೇತಪಿಶಾಚಾದಿಗಳನ್ನು ಉಚ್ಛಾಟನೆ ಮಾಡುವ ಶಕ್ತಿಯುಳ್ಳದ್ದಾಗಿದೆ ಪರಂಪರೆಯಿಂದ ಮೋಕ್ಷಾದಿ ಪುರುಷಾರ್ಥಪ್ರದವು ಆಗಿದೆ . ಇಂತಹ ಮ್ರತ್ತಿಕೆಯನ್ನು ಪ್ರತಿನಿತ್ಯ ನಮ್ಮ ದೇಹಕ್ಕೆ ಲೇಪಿಸಿಕೊಂಡರೆ 
ಉತ್ತಮವಾದ ಕಾಂತಿ ಉಂಟಾಗುತ್ತದೆ .

ಪ್ರತಿನಿತ್ಯ ಯತಿಗಳ ಬ್ರಂದಾವನಗತ ಮ್ರತ್ತಿಕೆ ತೀರ್ಥ ಪ್ರಾಶನ , ಹಣೆಯಲ್ಲಿ ಮ್ರತ್ತಿಕೆ ಧಾರಣೆ ಮತ್ತು ದೇಹಕ್ಕೆ ಲೇಪಿಸಿಕೊಳ್ಳುವುದು ಪ್ರಾಚೀನ ಕಾಲದಿಂದಲೂ (ಪ್ರಾಜ್ಞ )
"ಜ್ಞಾನಿಸಮ್ಮತ" ವಾಗಿರುವದಲ್ಲದೆ , ಇವತ್ತಿಗೂ ಮಾಧ್ವ ಜನಾಂಗದಲ್ಲಿ ಪೂಜ್ಯನಿಯ ಆಚರಣೆ ಕಂಡುಬರುತ್ತದೆ .ಅದರಲ್ಲೂ "ಭಾವಿಸಮೀರ ಶ್ರೀ ವಾದಿರಾಜರ ಮ್ರತ್ತಿಕೆ " ಹಾಗೂ "ಮಂತ್ರಾಲಯ ಪರಿಮಳಾಚಾರ್ಯರ ಮ್ರತ್ತಿಕೆ "ನಂಬಿದ ಭಕ್ತರಿಗೆ ಪರಮಾನಂದ ವಿಷಯವಾಗಿದೆ .

"ವೃಂದಾವನಗತ ಮ್ರತ್ತಿಕೆಯ ಮಹತ್ವ 

1) " ಶ್ರೀ ರಾಘವೇಂದ್ರ ಗುರುಪಾದಜಲಂ ಕಷಾಯಂ
ಮಾತ್ರೋತ್ತಮಾಂ ಗುರುಶಿರೋಗತಮ್ರತ್ತಿಕಾಂ ಚ ।
ಸೇವೆ ಸದಾ ಸಕಲರೋಗ ನಿವ್ರತ್ತಿಹೇತುಂ
ತಂ ಪ್ರಾಪ್ಯ ಸದ್ಗುಣಗಣಂ ಗುರು ರಾಘವೇಂದ್ರಂ " ॥

ಅರ್ಥ : ಶ್ರೀ ರಾಯರ ಪಾದೋದಕವು ಕಷಾಯವಿದ್ದಂತೆ. 
ಸಕಲ ರೋಗಗಳನ್ನು ನಿವ್ರತ್ತಿಗೊಳಿಸುತ್ತದೆ . ಶ್ರೀರಾಯರ ಶಿರೋಗತವಾದ ಮ್ರತ್ತಿಕೆಯು ಉತ್ತಮವಾದ ಮಾತ್ರೆಯಿದ್ದಂತೆ , ಇಂತಹ ಶ್ರೀ ರಾಯರ ಪಾದೋದಕವನ್ನು ಮತ್ತು ಮ್ರತ್ತಿಕಾ ತೀರ್ಥವನ್ನು ಸೇವಿಸುತ್ತೇನೆ ಎಂಬ ಶುದ್
ಸಾತ್ವಿಕ ಭಾವನೆಯಿಂದ ಪ್ರತಿನಿತ್ಯ ಸೇವಿಸಬೇಕು .

2) ಕ್ರಷ್ಣಾವಧೂತರು ಶ್ರೀ ರಾಘವೇಂದ್ರತಂತ್ರದಲ್ಲಿ -

"ಮ್ರತ್ತಿಕಾ ಸೇವನೇನೈವ ಸರ್ವರೋಗನಿವಾರಣ :।
ಮೇಧಾವೀ ಮೇಹರೋಗಘ್ನ :ಮೇಧ್ಯರೂಪಶ್ಚ ಮೇಧುರ":॥

ಅರ್ಥ -ಮ್ರತ್ತಿಕೆಯನ್ನು ಸೇವಿಸುವುದರಿಂದ ಶ್ರೀರಾಘವೇಂದ್ರ
ಸ್ವಾಮಿಗಳು ಸರ್ವರೋಗಗಳನ್ನು ನಿವಾರಿಸುತ್ತಾರೆ .

ಶ್ರೀಮದಪ್ಪಣಾಚಾರ್ಯರು ಹೀಗೆ ಹೇಳುತ್ತಾರೆ -
"ಯದ್ವ್ರಂದಾವನಸಪ್ರದಕ್ಷಿಣನಮಸ್ಕಾರಭಿಷೇಕ ಸ್ತುತಿ
ಧ್ಯಾನಾರಾಧನ ಮ್ರದ್ವಿಲೇಪನಮುಖಾನೇಕೋಪಚಾರಾನ್ಸದಾ
ಕಾರಂಕಾರಮಭಿಪ್ರಯಾಂತಿ ಚತುರೋ ಲೋಕಾ: ಪುಮರ್ಥಾನ್ಸದಾ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾಧ್ರುವಂ
ಮಂಗಲಂ ॥
ಅರ್ಥ -ಶ್ರೀರಾಯರ ಬ್ರಂದಾವನಕ್ಕೆ ಪ್ರದಕ್ಷಿಣೆ ಸಹಿತ ನಮಸ್ಕಾರ ಮಾಡುವುದು , ಪಂಚಾಮ್ರತ ಅಭಿಷೇಕ , ಸ್ತೋತ್ರ,ಧ್ಯಾನ , ಪೂಜೆ ,ಮ್ರತ್ತಿಕ ಲೇಪನ ಮಾಡುವ ಜನರು ಸರ್ವದಾ ಸಕಲ ಪುರುಷಾರ್ಥಗಳನ್ನು ಹೊಂದುತ್ತಾರೆ .

ಅದೇ ರೀತಿಯಲ್ಲಿ " ವಾದಿರಾಜ ಕವಚ "ದಲ್ಲಿ
"ಕುಷ್ಟಾಪಸ್ಮಾರಲೂತಾನ್ ತಾನ್ ಬಾಲಸ್ಪೋಟಾದಿಕಾನ್ ಬಹೂನ್ ।
ಮ್ರತ್ತಿಕಾ ನಾಶಯತ್ಯೇವ ವೃಂದಾಗತಾ ಮುನೆ: ॥

ಅರ್ಥ - ಕುಷ್ಠ ,ಅಪಸ್ಮಾರ ,ಲೂತಿ , ಬಾಲಗ್ರಹ ಮುಂತಾದ 
ಬಹುತರವಾದ ರೋಗಗಳನ್ನು ಶ್ರೀ ಗುರುವಾದಿರಾಜರ ಬ್ರಂದಾವನದ ಮ್ರತ್ತಿಕೆಯು ಶಮನ ಮಾಡುವುದು .

ಹೀಗೆ ಮ್ರತ್ತಿಕೆಗೆ ವಿಶೇಷ ಮಹತ್ವವನ್ನು ನೀಡಿ , ಭಕ್ತರು ತಾವು ಇರುವಲ್ಲಿಯೇ ಸೇವಾದಿಗಳಿಗೆ ಮ್ರತ್ತಿಕೆಗೆ ಸನ್ನಿಧಾನವಿತ್ತು ಬಹು ಉಪಕಾರ ಮತ್ತು ಅನುಗ್ರಹ ಮಾಡಿದವರು ಸೋದೆ ಪ್ರಭುಗಳು ,ಮತ್ತು ಮಂತ್ರಾಲಯ ಪ್ರಭುಗಳು .
"ನಿರ್ದೋಷರಾದ ಶ್ರೀವಾದಿರಾಜರ" ಮತ್ತು "ದೋಷರಹಿತರಾದ ಮಂತ್ರಾಲಯ ಪ್ರಭುಗಳ " ಮ್ರತ್ತಿಕೆ ತೀರ್ಥ ಪ್ರಾಶನ ಲೇಪನ ಮಾಡಿಕೋಳ್ಳೊಣ 
ಹರಿ ವಾಯುರ್ವಾದಿರಾಜರ ಮತ್ತು ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗೋಣ.

|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಗುರ್ವಂತರ್ಗತ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಸೀತಾಪತಿ ಶ್ರೀಮೂಲರಾಮಚಂದ್ರ ಕುಲದೈವಃ ಅಶ್ವಥ್ಥ ಶ್ರೀಲಕ್ಷ್ಮೀನರಸಿಂಹಾರ್ಪಣಮಸ್ತು ||


********
 ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀಗುರುರಾಜೋ ವಿಜಯತೇ ||

 ಪರಿಮಳ ಏಕೆ?

ಶ್ರಿವಾದಿಂದ್ರರೆಂದರು *"ಪಾಠಪ್ರವಚನಗಳನ್ನು ಮಾಡುತ್ತಿದ್ದ ಶ್ರೀರಾಘವೇಂದ್ರ ಗುರುಗಳ ರಸನಾರಂಗಸ್ಥಳದಲ್ಲಿ ವಾಗ್ಚೇವಿಯ ನರ್ತನ ನಡೆದಿದೆ.ಆಗ ದೇವಿಯ ಕೇಶವಿನ್ಯಾಸದ ಮಲ್ಲಿಗೆ ಬಿಡಿಯಾಗಿ ಉದುರಿದೆ.ಅವೆಲ್ಲ ಒಟ್ಟಿಗೆ ಸೇರಿಸಿದಾಗ ದಿವ್ಯ ಪರಿಮಳ ಬಂದಿದೆ.ಅದು"ಶ್ರೀಮನ್ನಾಯಸುಧಾಪರಿಮಳ"ಅಂದರೆ  ಶ್ರೀಗುರುಗಳಲ್ಲಿ ತಮ್ಮ ಸುಧಾ ಅಧ್ಯಯನ ಕಾಲದಲ್ಲಿ ಅಲ್ಲಲ್ಲಿ ಅಡಿಟಿಪ್ಪಣೆಗಳನ್ನು ಮಾಡಿಕೊಂಡಿದ್ದರು.ಅನಂತರ ಅವನ್ನೆಲ್ಲಾ ಒಟ್ತುಗೂಡಿಸಿ ಸಂಪಾದಿಸಿದ ಈ ಗ್ರಂಥ ’ಪರಿಮಳ’ ಅದ್ದರಿಂದಲೇ ಅಧ್ಯೇತ್ಯನಿಗೂ ಅಧ್ಯಾಪಕನಿಗೂ ಬಹಳ ಉಪಯುಕ್ತ.

ರಾಯರು ಪರಿಮಳ ಟಿಪ್ಪಣೆಯನ್ನು ಕಮಲಾಲಯನಿಗೆ ಅರ್ಪಿಸಿದ ಮೇಲೆ ಗ್ರಂಥ್ಯಾಂತ್ಯದಲ್ಲಿ ಹೀಗೆನ್ನುತ್ತಾರೆ -

ಯೇ ತು ನ್ಯಾಯಸುಧಾಪಾನಕಾಮುಕಾ ರಸಿಕಾ ಬುಧಾಃ |
ಆಘ್ರೇಯೇಮಂ ಪರಿಮಲಂ ಸೇವಂತಾಂ ತೇ  ಸುಧಾಮಿಮಾಮ್ ||

ತಾತ್ಪರ್ಯ - "ಈ ನ್ಯಾಯಸುಧೆಯೆಂಬ ಅಮೃತವನ್ನು ಕುಡಿಯ ಬಯಸಿದ ಓ ರಸಜ್ಞ ಜ್ಞಾನಿಗಳೆ !ಈ ಪರಿಮಳವನ್ನು ಆಘ್ರಾಣಿಸಿ ಆಘ್ರಾಣಮಾತ್ರದಿಂದ  ಹೃಷ್ಟರಾಗಿ ಉತ್ಸಾಹಹೊಂಡು ಸುಧೆಯನ್ನು ಕುಡಿಯಿರಿ. ರುಚಿಕರವಾದ ತಿಂಡಿಯೂ ಪರಿಮಳದ ಕಾರಣದಿಂದ ಹೆಚ್ಚು ರುಚಿಸುವುದಿಲ್ಲವೇ? ನಾರೀ ಕೇಲ ಪಾಕಕ್ಕೆ ಏಲಕ್ಕಿ ಸೇರಿಸಿದಂತೆ"*

|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಗುರ್ವಂತರ್ಗತ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಸೀತಾಪತಿ ಶ್ರೀಮೂಲರಾಮಚಂದ್ರ ಕುಲದೈವಃ ಅಶ್ವಥ್ಥ ಶ್ರೀಲಕ್ಷ್ಮೀನರಸಿಂಹಾರ್ಪಣಮಸ್ತು ||

***
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ|
ಹಲವು ದಶಕಗಳ ಹಿಂದೆ ನಡೆದ ಸತ್ಯಘಟನೆ 
ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ಶ್ರೀ ಮಠದ ಹಳೆಯ ಎಲೆಕ್ಟ್ರಿಕ್ ವೈರಿಂಗ್ ಬದಲಿಸಿ,ಹೊಸ ವೈರಿಂಗ್ ಜೋಡಣೆ ಮತ್ತು ಇತರೆ ಎಲೆಕ್ಟ್ರಿಕಲ್ ರಿಪೇರಿ ಕೆಲಸಕ್ಕೆ ..
ಚೆನ್ನೈ ಮೂಲದ ಒಂದು ಎಲೆಕ್ಟ್ರಿಕಲ್  ಸರ್ವಿಸ್ ಚಿಕ್ಕ ಕಂಪನಿಗೆ ವಹಿಸಿತ್ತು.  
ಎಲೆಕ್ಟ್ರಿಕ್ ಸರ್ವಿಸ್ ಚಿಕ್ಕ ಕಂಪನಿಯಲ್ಲಿ ದಿನಗೂಲಿಗೆ ಕೆಲಸಮಾಡುತ್ತಿದ್ದ  ಒಬ್ಬ 45 ವರುಷದ ನಂಬಿಗಸ್ಥ ಕುಶಲ ಕಾರ್ಮಿಕನಾದ ಎಲೆಕ್ಟ್ರಿಷಿಯನ್ ಗೆ ಮಂತ್ರಾಲಯ ಗುತ್ತಿಗೆಯ ಕೆಲಸ ವಹಿಸಿಕೊಡಲಾಗಿತ್ತು.
ಈ ಎಲೆಕ್ಟ್ರಿಷಿಯನ್ ಗುರುರಾಯರ ಅಂತರಂಗ ಭಕ್ತ. ಮನೆಯಲ್ಲಿಯೇ ಗುರುಗಳ ಫೋಟೋ ಇಟ್ಟುಕೊಂಡು ದಿನಾಲು ಭಕ್ತಿಯಿಂದ ಪೂಜೆಮಾಡುತ್ತಿದ್ದ.. ಪುಟ್ಟ ಕುಟುಂಬ ಹೊಂದಿದ್ದ.
ಕಷ್ಟಪಟ್ಟು ದುಡಿದು ಸಂಸಾರದ ಭಾರ ಸರಿದೂಗಿಸುತ್ತಿದ್ದ..
ಶ್ರೀ ಮಠ ಮಂತ್ರಾಲಯದಲ್ಲಿ ಗುತ್ತಿಗೆ  ಕೆಲಸ ಕೇಳಿದೊಡನೆ ಎಲೆಕ್ಟ್ರಿಷಿಯನ್ ಆನಂದಕ್ಕೆ ಪಾರವೇ ಇರಲಿಲ್ಲ ..ತಾನು ದಿನನಿತ್ಯ ಫೋಟೋದಲ್ಲಿ ನೋಡುತ್ತಿದ್ದ ಗುರುಗಳ ಮೂಲಬೃಂದಾವನ ನೋಡುವ ಸೌಭಾಗ್ಯ!! ( ಪುಟ್ಟ ಸಂಸಾರ ಕಷ್ಟಪಟ್ಟು ನಿಭಾಯಿಸುತ್ತಿದ್ದರಿಂದ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ  ಹೋಗಿ ರಾಯರ ದರುಶನ ಪಡೆಯಲು - ವೆಚ್ಚ ಪೇರಿಸಲು ಪರದಾಡುತ್ತಿದ್ದ ..
ತಾನು ಕೆಲಸಮಾಡುತ್ತಿದ್ದ ಚಿಕ್ಕ ಕಂಪನಿ ಇವನಿಗೆ ಬಸ್ಸಿನ ಖರ್ಚಿಗಾಗುವಷ್ಟು ಹಣಕೊಟ್ಟು - ಊಟಕ್ಕೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿ,ಕಾರ್ಯ ನಿಮಿತ್ತ ಮಂತ್ರಾಲಯದತ್ತ ಹೊರಡಲು ತಿಳಿಸಿದರು..
ಸಂತೋಷದಿಂದ ಮನೆಗೆಬಂದು ಪುಟ್ಟ ಮಗ ಮತ್ತು ಹೆಂಡತಿಗೆ ವಿಷಯ ತಿಳಿಸಿದ.
ಫೋಟೋದಲ್ಲಿರುವ ಗುರು ರಾಯರ ಸಾನಿಧ್ಯದಲ್ಲಿ ಒಂದು ದಿನದ  ಕೆಲಸವೆಂದು ಹೆಮ್ಮೆಯಿಂದಿ ಹೇಳಿ!!.. ತನ್ನ ಎರಡು  ಜೊತೆ ಬಟ್ಟೆ ಬ್ಯಾಗಿನಲ್ಲಿರಿಸಿ 3 ದಿನದಿಂದ 4 ದಿನದ ಪ್ರಯಾಣವೆಂದು ತಿಳಿಸಿ  ಮಂತ್ರಾಲಯಕ್ಕೆ ಹೊರಟು ನಿಂತ ..
ಹೆಚ್ಚಿನ ಗಂಟೆಗಳ ಪ್ರಯಾಣವಾದ್ದರಿಂದ (ರಾತ್ರಿ ಪ್ರಯಾಣ ಸಹಿತ ) ಬೆಳಗಿನ ಜಾವ ಮಂತ್ರಾಲಯ ತಲುಪುವಂತೆ ವ್ಯವಸ್ಥಿತವಾಗಿ  ಮುಂಜಾಗುರೂಕತೆ ವಹಿಸಿದ್ದ. ಬಸ್ಸು ಸಮಯಕ್ಕೆ ಸರಿಯಾಗಿ ಬೆಳಗಿನ ಜಾವ  ಮಂತ್ರಾಲಯ ತಲುಪಿತು..
ಎಲೆಕ್ಟ್ರಿಷಿಯನ್ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ತನ್ನ ಮನತೃಪ್ತಿಯಾಗುವತನಕ  ಗುರುರಾಯರ ಬೃಂದಾವನದ ಮುಂದೆ ನಿಂತು ದರುಶನಮಾಡಿ - ಭಕ್ತಿಯಿಂದ ಶಿರಸಾಸ್ಟಾಂಗ ನಮಸ್ಕಾರ ಹಾಕಿದ.ಇನ್ನು ಈ ಜೀವ ಧನ್ಯವೆಂದು ತನ್ನನು ತಾನೇ ಮನದಲ್ಲಿ ಭಕ್ತಿಯಿಂದ ಹೇಳಿಕೊಳ್ಳುತ್ತಾನೆ.
ಶ್ರೀ ಮಠದ ಆಡಳಿತವರ್ಗ ಆಫಿಸಿನಲ್ಲಿ ಬಂದ ವಿಷಯ ತಿಳಿಸಿ ಕಾರ್ಯ ಸೂಚಿ ಪಡೆದು ..ಎಲೆಕ್ಟ್ರಿಕ್ ಕೆಲಸಕ್ಕೆ ನುರಿತ ಕುಶಲ ಕಾರ್ಮಿಕನಾದ್ದರಿಂದ ..ಮೇಲಾಗಿ ಗುರು ಸಾನಿಧ್ಯದ ಕಾರ್ಯವೆಂದರಿತು ಭಕ್ತಿಯಿಂದ ನಿತ್ಯದಲ್ಲಿ ಪಟದಲ್ಲಿದ್ದ ರಾಯರ ಸ್ಮರಿಸಿ ಕೆಲಸ ಪ್ರಾರಂಭಿಸುವಂತೆ ...ವೈರಿಂಗ್ ರಿಪ್ಲೇಸ್ಮೆಂಟ್ ಕೆಲಸ ಪ್ರಾರಂಭಿಸಿದ...
ಎಲೆಕ್ಟ್ರಿಷಿಯನ್ ತನ್ನ ಕಾರ್ಯದಲ್ಲಿ ಎಷ್ಟೊಂದು ತಲ್ಲೀನನಾಗಿದ್ದನೆಂದರೆ ..ಊಟ -ತಿಂಡಿಗಳ ಪರಿವೆಯೇ ಇರಲಿಲ್ಲ ..
ಮಧ್ಯಾಹ್ನವಾದ್ದರಿಂದ ಶ್ರೀ ರಾಮದೇವರ ಪೂಜೆ ನೈವೇದ್ಯ - ರಾಯರ ಹಸ್ತೋದಕ ಭಕ್ತರು ಪ್ರಸಾದಪಡೆಯಲು ಪಂಕ್ತಿಗಳಲ್ಲಿ ತೆರಳುತ್ತಿದ್ದರು ..
ಇವನ ಕಾರ್ಯ ತತ್ಪರತೆ ನೋಡುತ್ತಿದ್ದ ಅರ್ಚಕರು ಎಲೆಕ್ಟ್ರಿಷಿಯನ್ ಗೆ ಸಂಜೆ ಹೊತ್ತಾಗುತ್ತಿದ್ದರಿಂದ ..ಕಡೆಯ ಪಂಕ್ತಿಯ ಪ್ರಸಾದದ ಸಮಯ - ಹೋಗಿ ಪ್ರಸಾದ ಸ್ವೀಕರಿಸಿ - ಕೆಲಸ ಪುನಃ ಪ್ರಾರಂಭಿಸಲು ಹೇಳಿದರು...
ಎಲೆಕ್ಟ್ರಿಷಿಯನ್ ತನ್ನ ಕಾರ್ಯ ತತ್ಪರತೆಯಲ್ಲಿ ಎಷ್ಟು ಮುಳುಗಿದ್ದನೆಂದರೆ ..ಗುರು ಸಾನಿಧ್ಯ ಕಾರ್ಯ ಅರ್ಧ ಬಿಟ್ಟು ಊಟಮಾಡುವದಕ್ಕೆ ಮನಸ್ಸಿಲ್ಲ. - ಹಸಿದ ಹೊಟ್ಟೆ - ಪುನಃ ರಾತ್ರಿ ಪ್ರಯಾಣ - ತೆಗೆದುಕೊಂಡ ಕಾರ್ಯ ತಡವಾದರೆ - ಹೆಚ್ಚಿನ ದಿನದ ವಾಸ್ತವ್ಯಕ್ಕೆ - ಊಟಕ್ಕೆ ಅವನ ಬಳಿ ಹಣವಿಲ್ಲ ..
ಈ ದ್ವಂದದಲಿ ಎಲೆಕ್ಟ್ರಿಷಿಯನ್ ಊಟದ ಕಡೆ ಗಮನ ಕೊಡದೆ - ಗುರು ಸಾನಿಧ್ಯದ ಕಾರ್ಯದಲ್ಲಿ  ಸೇವಾ ನಿಷ್ಠೆಯಿಂದ ತತ್ಪರನಾಗಿ
ವಹಿಸಿದ ಕೆಲಸ ಅಚ್ಚುಕಟ್ಟಾಗಿ ಮುಗಿಸಿದ.  ಪಾಕಶಾಲೆ ಕಡೆ ಹೋದಾಗ ರಾತ್ರಿ ಸಮಯವಾದ್ದರಿಂದ - ಪಾಕಶಾಲೆಯಲ್ಲಿ ದಿನದ ಹಲವು ಸುತ್ತಿನ ಪಂಕ್ತಿ ಪ್ರಸಾದ ವಿತರಿಸಿ  - ಪರಿಕರಗಳನ್ನು  ಶುಚಿಗೊಳಿಸುತ್ತಿದ್ದರು.
ಹಸಿದ ಹೊಟ್ಟೆಯಿಂದಲೇ ರಾಯರಿಗೆ ನಮಸ್ಕರಿಸಿ ಶ್ರೀ ಮಠದ ಆಫಿಸಿನಲ್ಲಿ ದಿನದ ಕೆಲಸದ ಮಾಹಿತಿ ಒಪ್ಪಿಸಿದ ...
ಬಸ್ ಸ್ಟ್ಯಾಂಡಿನತ್ತ ಭಾರವಾದ ಹೆಜ್ಜೆಗಳನ್ನು ಹಾಕುತ್ತ ನಡೆದ..
ರಾತ್ರಿ ಎಂಟುವರೆ ಆದ್ದರಿಂದ ಚೆನ್ನೈ ಲಾಸ್ಟ್ ಬಸ್ ಹತ್ತಲು ಕಾಯುತ್ತಲಿದ್ದ ..
ವಿಚಾರಿಸಲು ಕಡೆಯ ಬಸ್ ವಿಳಂಬವಾಗಿ ಬಿಟ್ಟಿದ್ದರಿಂದ  ತಡರಾತ್ರಿಗೆ ಬಂದರೆ ಬಂದು ಸೇರಬಹುದು ಎಂಬುದಾಗಿ ಕಂಟ್ರೋಲ್ ರೂಮ್ನಲ್ಲಿದ್ದ ವ್ಯಕ್ತಿ ಹೇಳಿದ..
ಎಲೆಕ್ಟ್ರಿಷಿಯನ್ ಹಸಿದ ಹೊಟ್ಟೆಯಲ್ಲಿಯೇ ರಾಯರ ಸ್ಮರಣೆ ಮಾಡುತ್ತಾ ..ಅಲ್ಲಿಯೇ ಇದ್ದ ಸಿಮೆಂಟ್ ಬೆಂಚೊoದರ  ಮೇಲೆ ಮಲಗಿದ..
ಹಸಿದ ಹೊಟ್ಟೆ ದೇಹಕ್ಕೆ ದಣಿವರಿಯದ ದಿನದ ಕಷ್ಟ ಕಾರ್ಯವಾದ್ದರಿಂದ ಮಂಪರು ಹತ್ತಿ ಕಣ್ಣು ಮುಚ್ಚಿತ್ತಲಿದ್ದವು ..
ಸರಿಯಾಗಿ 9:45 ರಾತ್ರಿಸಮಯದಲ್ಲಿ ಕಟ್ಟಿಗೆ ಪಾದುಕೆ ಧರಿಸಿದ - ಕೊರಳಲ್ಲಿ ತುಳಸೀಮಾಲೆ ಧರಿಸಿದ ದಿವ್ಯಮಯವಾದ ದೇಹ - ಮಹಾ ತೇಜಸ್ಸುಳ್ಳ ಮುಖಕಾಂತಿ ಹೊಂದಿದ ಯತಿಗಳೊಬ್ಬರು ತನ್ನ ಕಡೆಗೆ ಬರುತ್ತಿರುವ ಕಟ್ಟಿಗೆ ಪಾದುಕೆಗಳ ಸ್ಪಷ್ಟವಾದ ಧ್ವನಿ ಎಲೆಕ್ಟ್ರಿಷಿಯನ್ ಕಿವಿಗಳಿಗೆ ಕೇಳಿಸುತ್ತಿತ್ತು.. ಅರೆನಿದ್ರಾವಸ್ಥೆಯಲ್ಲಿದ್ದ ಎಲೆಕ್ಟ್ರಿಷಿಯನ್ ಗೆ
ಯಾರೋ ಪ್ರೀತಿಯಿಂದ
ಮೈ ದಡವಿಎಬ್ಬಿಸಿದಂತಾಗಿ ನೋಡಲು ಅರೆ ನಿದ್ರಾವಸ್ಥೆಯಲ್ಲಿ ಕಂಡ ಸನ್ಯಾಸಿಗಳು..

ಬಂದ ಯತಿಗಳು 
"ನಿನಗೆ ಹಸಿವೆಯಾಗಿದೆಯಲ್ಲವೇ ?
ಶ್ರೀ ಕ್ಷೇತ್ರಕ್ಕೆ ಬಂದ ಭಕ್ತರಾರೂ ಹಸಿವೆಯಿಂದ ಇರಬಾರದು ..ಅದಕ್ಕೆ ನಾವು ಬಂದದ್ದು ಎಂದು ತಮ್ಮ ಅಂಗೈಯಲ್ಲಿ ಶುದ್ಧ ತುಪ್ಪ ಮಿಶ್ರಿತ ಘಮ ಘಮ ಅನ್ನ - ಹುಳಿ ( ಸಾಂಬಾರ್ ) ತುತ್ತನ್ನು ಎಲೆಕ್ಟ್ರಿಷಿಯನ್ ಗೆ ಕೊಟ್ಟರು.. ..
ಎರಡು ತುತ್ತಿಗೆ ಎಲೆಕ್ಟ್ರಿಷಿಯನ್ ಹೊಟ್ಟೆತುಂಬ ಮೃಷ್ಟಾನ್ನ ಭೋಜನ ಉಂಡ ಅನುಭವವಾಗಿ ಸಂತೃಪ್ತಿಪಡಲು ಕುಡಿಯಲು ಕಮಂಡಲುವಿನಿಂದ ಶುದ್ಧವಾದ ನೀರು ಕೊಟ್ಟು ತೃಷೆ ತಣಿಸಿ ..ಇನ್ನೇನು ಅರ್ಧ ಗಂಟೆಯಲ್ಲಿ ನಿನ್ನ ಊರಿನಬಸ್ಸು ಬರುವುದಾಗಿ ತಿಳಿಸಿ ಅದೃಶ್ಯರಾದರು..

ಎಲೆಕ್ಟ್ರಿಷಿಯನ್ ಗೆ ಮೈ ರೋಮಾಂಚನವಾಗಿ ..ಅಲ್ಲಿದ್ದ ಪ್ರಯಾಣಿಕರಿಗೆ ಆ ಸಂತರು ಎಲ್ಲಿ ಹೋದರು ..ಎಂದು ಕೇಳಲು ಕೆಲವರು ಇವನು ನಿದ್ರೆಯಲ್ಲಿ ಕನಸುಕಂಡಿರಬಹುದು / ಅಥವಾ ಹುಚ್ಚನಿರಬಹದು ಎಂದರು ..ಅಲ್ಲಿದ್ದವರಾರಿಗೂ ಎಲೆಕ್ಟ್ರಿಷಿಯನ್  ಹೇಳಿದಂತ ಸಂತರು ಕಾಣಲಿಲ್ಲ.

ಎಲೆಕ್ಟೀಷಿಯನ್ ಮಾತ್ರ ನಡೆದ ವೃತ್ತಾಂತವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಹೇಳಿ,ಆ ಸಂತರು ಎಲ್ಲಿಹೋದರು ಎಂದು ಹಲಬುತ್ತಿರಲು ..ಎಲ್ಲವನ್ನು ಸಮಾಧಾನ ಚಿತ್ತದಿಂದ ಕೇಳುತ್ತಿದ್ದ ವಯೋವೃದ್ಧರೊಬ್ಬರು (ಪಂಡಿತರು ) 
ಎಲೆಕ್ಟ್ರಿಷಿಯನ್ ಬಲಗೈ ಅಂಗೈ (ಸಂತರು ತುತ್ತು ಇರಿಸಿದ ಅಂಗೈ ) ನೋಡಿ ಪರೀಕ್ಷಿಸಲು - ಅಂಗೈ ಶುದ್ಧ ತುಪ್ಪ ಮಿಶ್ರಿತ ಅನ್ನ - ಹುಳಿ ( ಸಾಂಬಾರ್) ಘಮ ಘಮ ಪರಿಮಳ ಸುವಾಸನೆ ಇನ್ನೂ ಹಾಗೆ ಇತ್ತು ..
ಪಂಡಿತರು ಹೇಳಿದರು ..
ನೀನು ಪುಣ್ಯವಂತನಪ್ಪ!!
ಬಂದವರು ಮಾತೃ ಹೃದಯೀ - ಭಕ್ತ ವತ್ಸಲ ಗುರುರಾಯರು ..ಪರಿಮಳಾದಿ ಸದ್ಗ್ರಂಥ ರಚಿಸಿದ ಕೈಯಿಂದಲೇ  ನಿನಗೆ ತುತ್ತು ಕೊಟ್ಟವರು. 
ಮಂತ್ರಾಲಯ ಬೃಂದಾವನದಲ್ಲಿರುವ ಗುರು ಸಾರ್ವಭೌಮರು ..ಎಂದು ಎಲೆಕ್ಟ್ರಿಷಿಯನ್ ಕೈಗಳನ್ನು  ಪಂಡಿತ ವಯೋವೃದ್ಧರು ತಮ್ಮ ಕಣ್ಣುಗಳಿಗೆ ಒತ್ತಿಕೊಂಡರು. ನೆರೆದ ಪ್ರಯಾಣಿಕರೆಲ್ಲರೂ ರಾಯರ ಮಹಿಮೆವೆಂದರಿತು 
ಗದ್ಗತಿತರಾಗಿ - ಭಕ್ತಿಯಿಂದ ರಾಯರಿಗೆ ಮನದಲ್ಲಿಯೇ ನಮಸ್ಕಾರಗಳನ್ನು ಮಾಡಿದರು ..
ಚೆನ್ನೈ ಬಸ್ಸು ಬಂದು ಎಲೆಕ್ಟ್ರಿಷಿಯನ್ ಬಸ್ಸು  ಹತ್ತಿಕುಳಿತು - ರಾಯರ ಕಾರುಣ್ಯ ನೆನೆಯುತ್ತ ಊರು ಸೇರಲು - ಶ್ರೀ ಮಠ ಆಡಳಿತ ವರ್ಗ ಅಚ್ಚು ಕಟ್ಟಾಗಿ ನಿರ್ವಹಿಸಿದ ಎಲೆಕ್ಟ್ರಿಕ್ ಕೆಲಸಕ್ಕೆ ಗುತ್ತಿಗೆ ನೀಡಿದ -  ಹಣ ಅತಿಶೀಘ್ರದಲ್ಲಿ  ಪಾವತಿಸಿತ್ತು - ಕಂಪನಿಯು ನಿಷ್ಠಾವಂತನಾದ - ಕುಶಲ ಕಾರ್ಮಿಕನಾದ ಎಲೆಕ್ಟ್ರಿಷಿಯನ್ ಕೆಲಸಕ್ಕೆ ಮೆಚ್ಚಿ ವೇತನ ವೃದ್ಧಿಮಾಡಿ - ಕಾಯಂ ಕೆಲಸಗಾರನಾಗಿ ನೇಮಕ ಮಾಡಿಕೊಂಡರು..
ರಾಯರು ನಂಬಿ ಬಂದ ಭಕ್ತರ ಕೈ ಎಂದಿಗೂ ಬಿಡುವುದಿಲ್ಲ!!
🙏ಶ್ರೀ ರಾಘವೇಂದ್ರಾಯ ನಮಃ
*********


ಮೋಕ್ಷವನ್ನು ಕರುಣಿಸಿದ ಮಹಾಮುನಿ :
ಶ್ರೀ ಗುರುರಾಯರ ಜೊತೆಯಲ್ಲಿ ವೆಂಕಣ್ಣನೆಂಬ ಸೇವಕನಿದ್ದ. ಆತನ ಕೆಲಸ ಶ್ರಿಮಠದಲ್ಲಿ ನೀರು ತುಂಬುವ ಕೆಲಸ. ವೆಂಕಣ್ಣನು ಯಾರ ತಂಟೆಗೂ ಹೋಗದೇ, ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡಿರುತ್ತಿದ್ದನು. ಯಾವಾಗಲಾದರೊಮ್ಮೆ ಶ್ರೀ ಗುರುರಾಯರು, " ವೆಂಕಣ್ಣಾ, ನಿನಗೇನು ಬೇಕೋ? " ಎಂದು ಕೇಳಿದರೆ, " ಗುರುಗಳೇ, ಕೊಡುವದಾದರೆ ನನಗೆ ಮೋಕ್ಷ ಕೊಡಿಸಿ ಸ್ವಾಮಿ! " ಎಂದು ಹೇಳುತ್ತಿದ್ದನು. ಶ್ರಿಮಠದ ಕೆಲವು ತುಂಟಜನರು " ವೆಂಕಣ್ಣ, ಮೋಕ್ಷಕ್ಕೆ ಹೋಗುವದು ಯಾವಾಗಲೋ?" ಎಂದು ಪರಿಹಾಸ ಮಾಡಿದರೆ, " ಶ್ರಿಗುರುಗಳು ಕಳಿಸಿದಾಗ! " ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದನು.
ಶ್ರೀ ಗುರುರಾಯರು ಸಂಚಾರಕ್ರಮದಲ್ಲೊಮ್ಮೆ ಚಿತ್ರದುರ್ಗದಲ್ಲಿ ಕೋಟೆ ಬೀದಿಯಲ್ಲಿರುವ ಶ್ರೀ ಪ್ರಾಣದೇವರ ಸನ್ನಿಧಿಯಲ್ಲಿ ಬಿಡಾರ ಮಾಡುತ್ತಾರೆ. ಆ ಸಂದರ್ಭದಲ್ಲಿ, ವೆಂಕಣ್ಣನು ಮುಕ್ತಿಯೋಗ್ಯನಾಗಿರುವದನ್ನರಿತ ಶ್ರೀ ಗುರುರಾಯರು ಎಂದಿನಂತೆ ವೆಂಕಣ್ಣನನ್ನು " ನಿನಗೇನು ಬೇಕು? " ಎಂದು ಪ್ರಶ್ನಿಸಿದಾಗ, ವೆಂಕಣ್ಣನೂ ಎಂದಿನಂತೆ " ಮಹಾಸ್ವಾಮಿ, ನನಗೆ ಯಾವದೇ ಐಹಿಕ ಇಚ್ಛೆ ಇಲ್ಲ, ಕೊಡುವದಾದರೆ ದಯೆಯಿಟ್ಟು ನನಗೆ ಮೋಕ್ಷ ಕೊಡಿಸಿ ಗುರುಗಳೇ! " ಎಂದು ಪ್ರಾರ್ಥಿಸುತ್ತಾನೆ. ಶ್ರೀ ಗುರುರಾಯರು ಮುಗುಳ್ನಗುತ್ತಾ " ವೆಂಕಣ್ಣ, ಮೋಕ್ಷವೆಂದರೆ ಸಾಮಾನ್ಯ ವಿಚಾರವಲ್ಲ, ಅದಕ್ಕೆ ಪೂರ್ವತಯಾರಿ ಮುಖ್ಯ. ಅದರಿಂದ ಪ್ರಾಣಹಾನಿ ಆದರೂ ಆಗಬಹುದು. ನಾವು ಹೇಳಿದಂತೆ ಮಾಡಲು ಸಿದ್ಧನಾಗಿರುವೆಯೋ? " ಎಂದು ಪ್ರಶ್ನಿಸಿದಾಗ ವೆಂಕಣ್ಣನು " ತಮ್ಮ ಆಜ್ಞೆ ನನಗೆ ಶಿರೋಧಾರ್ಯ! " ಎಂದನು. ಆಗ ಶ್ರೀ ಗುರುರಾಯರು " ಹಾಗಿದ್ದರೆ, ನಾಳೆ ನಿನಗೆ ಮೋಕ್ಷ ಕೊಡಿಸುತ್ತೇವೆ, ಸಿದ್ಧನಾಗಿರು." ಎಂದರು.
ಮರುದಿನ, ವೆಂಕಣ್ಣನಿಗೆ ಮೋಕ್ಷ ಕೊಡಿಸುವ ವಿಚಾರ ಚಿತ್ರದುರ್ಗದಲ್ಲೆಲ್ಲಾ ಹರಡಿ, ಹತ್ತಾರು ಸಾವಿರ ಜನ ಶ್ರಿಮಠದ ಮುಂದೆ ಜಮಾಯಿಸಿದರು. ಎಂದಿನಂತೆ, ಶ್ರೀ ಗುರುರಾಯರು ತಮ್ಮ ಪ್ರಾತರಾಹ್ನಿಕ, ಅನುಷ್ಟಾನವನ್ನೆಲ್ಲಾ ಮುಗಿಸಿ, ವೆಂಕಣ್ಣನ ಸ್ನಾನ, ಸಂಧ್ಯಾವಂದನೆಗಳೆಲ್ಲ ಮುಗಿದ ಮೇಲೆ, ಆತನಿಂದ ಹೋಮ ಮಾಡಿಸಿ, ಆ ಹೋಮಾಗ್ನಿಯಿಂದಲೇ ಮಗದೊಂದು ಅಗ್ನಿಕುಂಡದಲ್ಲಿ ಅಗ್ನಿಯನ್ನು ಪ್ರಜ್ವಲಿಸಿ, ವೆಂಕಣ್ಣನಿಗೆ ತೀರ್ಥವನ್ನು ಕೊಟ್ಟು, ಕಿವಿಯಲ್ಲಿ ಬೀಜಾಕ್ಷರ ಮಂತ್ರವನ್ನು ಉಪದೇಶಿಸಿ ಉರಿಯುತ್ತಿರುವ ಅಗ್ನಿಕುಂಡದಲ್ಲಿ ಹಾರುವಂತೆ ಆಜ್ಞಾಪಿಸುತ್ತಾರೆ. ವೆಂಕಣ್ಣನು, ಭಕ್ತಿಯಿಂದ ಕೈಜೋಡಿಸಿ, ಶ್ರೀ ಗುರುರಾಯರು ಉಪದೇಶಿಸಿದ ಮಂತ್ರವನ್ನು ಜಪಿಸುತ್ತಾ, ಆನಂದಭಾಷ್ಪಸಿಕ್ತನಯನದಿಂದ ಶ್ರೀ ಗುರುರಾಯರನ್ನು ಮೂರುಸಲ ಪ್ರದಕ್ಷಿಣೆ ಬಂದು, ತದೇಕದೃಷ್ಟಿಯಿಂದ ಶ್ರೀ ಗುರುರಾಯರನ್ನೇ ವೀಕ್ಷಿಸುತ್ತಾ, ಅವರನ್ನೇ ಮೈಮನವನ್ನೆಲ್ಲ ತುಂಬಿಕೊಂಡು " ಶ್ರೀ ರಾಘವೇಂದ್ರ ಗುರುಸಾರ್ವಭೌಮ ಗೋವಿಂದಾ.......ಗೋವಿಂದ......." ಎನ್ನುತ್ತಾ ಅಗ್ನಿಕುಂಡಕ್ಕೆ ಹಾರಿದನು! ನೆರೆದ ಜನಸ್ತೋಮವೆಲ್ಲ " ಅಯ್ಯೋ, ಈ ಸ್ವಾಮಿಗಳು ನಂಬಿದ ಭಕ್ತನ ಪ್ರಾಣ ತೆಗೆದುಬಿಟ್ಟರಲ್ಲಾ, ಹಾಯ್, ಹಾಯ್, ಎಂತಹ ಅನಾಹುತ! " ಎಂದು ಚೀತ್ಕರಿಸುತ್ತಿರಲು, ಶ್ರೀ ಗುರುರಾಯರು ಮುಗುಳ್ನಗುತ್ತಾ, " ಪ್ರಾಣತೆಗೆದೆವೋ, ಮೋಕ್ಷ ಕೊಡಿಸಿದೆವೋ, ಇನ್ನು ಸ್ವಲ್ಪ ಹೊತ್ತಿನಲ್ಲೇ ತಿಳಿಯುವದು! " ಎಂದು ಆಕಾಶದ ಕಡೆ ಮುಖಮಾಡಿದರು. ಅಂತೆಯೇ, ಎಲ್ಲರೂ ಆಕಾಶದ ಕಡೆ ಮುಖ ಮಾಡಲು, ಎಲ್ಲರೂ ಆಶ್ಚರ್ಯಪಡುತ್ತಿರಲು, ದೈವಘಂಟಾನಿನಾದವು ಕೇಳಿಸಿತು ಹಾಗೂ ದಿವ್ಯದೇಹಧಾರಿಯಾಗಿ ದೈವವಿಮಾನದಲ್ಲಿ ಶ್ರೀ ವಿಷ್ಣುದೂತರಿಂದೊಡಗೂಡಿ ಶ್ರೀ ಗುರುರಾಯರನ್ನೇ ನೋಡುತ್ತಾ ಭಕ್ತಿಯಿಂದ ಕೈಜೋಡಿಸಿಕೊಂಡಿರುವ ವೆಂಕಣ್ಣನು ಕ್ಷಣಕಾಲ ಗೋಚರಿಸಿದನು! ನೆರೆದ ಜನರೆಲ್ಲಾ " ನಮ್ಮಿಂದ ಅಪರಾಧವಾಯಿತು, ಕೃಪೆಯಿಟ್ಟು ಕ್ಷಮಿಸಬೇಕು. ಶ್ರೀ ಗುರುರಾಘವೇಂದ್ರ ಗುರುಸಾರ್ವಭೌಮ ಜಯ! ಜಯ! " ಎಂದು ಶ್ರೀ ಗುರುರಾಯರ ಪಾದಕ್ಕೆರಗಿದರು.
ಶ್ರೀ ಗುರುರಾಯರು ಬಿಡಾರ ಮಾಡಿದ ಶ್ರೀ ಪ್ರಾಣದೇವರ ಸನ್ನಿಧಾನದಲ್ಲಿ ಈಗ ಶ್ರೀ ಗುರುರಾಯರ ಮಠವಿದೆ ಹಾಗೂ ಅದರ ಸನಿಹದಲ್ಲೇ ವೆಂಕಣ್ಣನಿಗೆ ಮೋಕ್ಷ ಕೊಡಿಸಿದ ಜಾಗವೂ ಇದೆ. 
ಒಂದು ವಿವೇಚನೆ :
೧. ಸಾಮಾನ್ಯ ಮನುಷ್ಯರಿಗೆ ದೈವ ವಿಮಾನವನ್ನು ನೋಡುವ ಶಕ್ತಿಯಾಗಲೀ, ದೈವ ಘಂಟಾ ನಿನಾದವನ್ನು ಆಲಿಸುವ ಶಕ್ತಿಯಾಗಲೀ ಇರುವದಿಲ್ಲ. ಭಗವಂತನ ಹಿರಿಮೆಯನ್ನು ಮೆರೆಯುವದಕ್ಕೋಸ್ಕರ, ಒಂದು ಕ್ಷಣ ಕಾಲ ಹತ್ತಾರು ಸಾವಿರ ಜನರಿಗೆ ಆ ಶಕ್ತಿಯನ್ನು ಕರುಣಿಸಬೇಕಾದರೆ, ಶ್ರೀ ಗುರುರಾಯರ ಮಹಿಮೆಯನ್ನು ವಾಚಕರು ಇಲ್ಲಿ ಗಮನಿಸಬೇಕು!

೨. ವೆಂಕಣ್ಣನಿಗೆ ಶ್ರೀ ಗುರುರಾಯರ ಹೊರತಾಗಿ ಇನ್ನೇನೂ ಗೊತ್ತಿರಲಿಲ್ಲ. ಶ್ರೀ ಗುರುರಾಯರ ಅನೇಕ ಪವಾಡ ಸದೃಶ ಮಹಿಮೆಗಳನ್ನು ಕಣ್ಣಾರೆ ಕಂಡಿದ್ದ ವೆಂಕಣ್ಣನಿಗೆ, ತನ್ನ ಮನದಿಚ್ಚೆಯನ್ನು ಈಡೇರಿಸುವ ಶಕ್ತಿ ಹಾಗೂ ಗುಣ ಶ್ರೀ ಗುರುರಾಯರಲ್ಲಿದೆ ಎಂದು ಅಚಲವಾದ ವಿಶ್ವಾಸ ಹಾಗೂ ನಂಬಿಕೆಯಿತ್ತು. ಇಲ್ಲಿ, ಗೆದ್ದಿದ್ದು ವೆಂಕಣ್ಣನಿಗೆ ಶ್ರೀ ಗುರುರಾಯರಲ್ಲಿರುವ ಅಚಲವಾದ ವಿಶ್ವಾಸ ಹಾಗೂ ನಂಬಿಕೆ! ಆದ್ದರಿಂದ, ಕೊಡುವ ಶಕ್ತಿ ಭಗವಂತ ಹಾಗೂ ಗುರುಗಳಲ್ಲಿ ಇದ್ದರೂ, ನಮಗೆ ಅವರಲ್ಲಿರುವ ಏಕನಿಷ್ಠೆ, ಶೃದ್ಧೆ ಹಾಗೂ ನಂಬಿಕೆಗಳು ಅತಿಮುಖ್ಯ!
॥ ಓಂ ಶ್ರೀ ರಾಘವೇಂದ್ರಾಯ ನಮಃ ॥
॥ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ॥

॥ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ॥
********

No comments:

Post a Comment