ಶ್ರೀ ಅಪ್ಪಾವರು - 2 "
" ಅಪ್ರತಿಮ ಪ್ರತಿಭಾ ಸಂಪನ್ನರು "
ಲೌಕಿಕ ವಿದ್ಯೆಯೊಂದಿಗೆ ಶ್ರುತಿ - ಸ್ಮೃತಿ - ಪುರಾಣ - ಇತಿಹಾಸಗಳಲ್ಲಿ ಶ್ರೀ ಅಪ್ಪಾವರಿಗೆ ಅಪೂರ್ವವಾದ ಪ್ರತಿಭೆಯಿತ್ತು.
ಶ್ರೀಮದಾನಂದತೀರ್ಥರ ಸಿದ್ಧಾಂತವನ್ನು ಮಂಡಿಸುತ್ತಿದ್ದ ರೀತಿಯೇ ಒಂದು ಸೊಬಗು.
ಗಂಗಾ ಪ್ರವಾಹದಂತೆ ಸಜ್ಜನರ ಮನಸ್ಸನ್ನು ನಿರ್ಮಲಗೊಳಿಸುತ್ತಿದ್ದ ಅವರ ಮಾತುಗಳನ್ನು ಕೇಳುವುದೇ ಆನಂದ.
ಅವರ ಬೋಧೆ ಸರಳ ಸುಂದರವಾದ ನುಡಿಕಟ್ಟುಗಳಿಂದ ಕೂಡಿರುತ್ತಿತ್ತಲ್ಲದೇ ಶ್ರೀ ಪರಮಾತ್ಮನಲ್ಲಿ ಮಹಾತ್ಮ್ಯಾ ಜ್ಞಾನ ಪೂರ್ವಕವಾದ ಸದೃಢ ಭಕ್ತಿಯನ್ನು ಉದ್ದೀಪನಗೊಳಿಸುತ್ತಿತ್ತು.
ಪರವಾದಿಗಳು ಎಂಥಹಾ ಪಂಡಿತರೇ ಆಗಿರಲಿ ಅವರನ್ನು ಕ್ಷಣ ಮಾತ್ರದಲ್ಲಿ ನಿರುತ್ತರಗೊಳಿಸುವ ಅಪೂರ್ವವಾದ ವಾಕ್ಚಾತುರ್ಯ ಶ್ರೀ ಅಪ್ಪಾವರಿಗೆ ಸಿದ್ಧಿಸಿತ್ತು!
ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥರು
" ಶ್ರೀ ರಾಯರೊಂದಿಗೆ ಶ್ರೀ ಅಪ್ಪಾವರ ಬಾಂಧವ್ಯ "
ಶ್ರೀ ಅಪ್ಪಾವರಿಗೆ ಶ್ರೀ ಮಂತ್ರಾಲಯ ಪ್ರಭುಗಳನ್ನು ಕಂಡರೆ ಅಪರಿಮಿತವಾದ ಭಕ್ತಿ, ಗೌರವ.
ಶ್ರೀ ರಾಯರೂಶ್ರೀ ಅಪ್ಪಾವರನ್ನು ಕಂಡರೆ ಅತ್ಯಂತ ಅಂತಃಕರಣ - ಪ್ರೀತಿ - ಮಾತೃವಾತ್ಸಲ್ಯ ತೋರುತ್ತಿದ್ದರು.
ಇವರಿಬ್ಬರ ಸಂಬಂಧ ಹಸು - ಕರುವಿನ ಸಂಬಂಧ.
ಶ್ರೀ ರಾಯರೂ ಶ್ರೀ ಅಪ್ಪಾವರ ವಿಷಯದಲ್ಲಿ ಅತ್ಯಂತ ಪ್ರಸನ್ನರಾಗಿದ್ದರು.
ಶ್ರೀ ಅಪ್ಪಾವರು ಪ್ರತಿದಿನ ಇಭರಾಮಪುರದಿಂದ ಮಂತ್ರಾಲಯಕ್ಕೆ ಶ್ರೀ ರಾಯರ ದರ್ಶನಕ್ಕೆ ಬಂದು ಹೋಗುತ್ತಿದ್ದರು.
ಕಾಲಾಂತರದಲ್ಲಿ ಶ್ರೀ ರಾಯರ ದರ್ಶನಕ್ಕಾಗಿ ಮಂತ್ರಾಲಯದಲ್ಲೇ ನೆಲೆಸಿದರು.
ಇವರಿಬ್ಬರ ಸಂಬಂಧ ಹೇಗಿತ್ತೆಂದರೆ..
ಶ್ರೀ ರಾಯರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾರವರಿಗೆ ಮೊದಲೇ ತಿಳಿದಿರುತ್ತಿತ್ತು.
ಶ್ರೀ ರಾಘವೇಂದ್ರ ಚಿತ್ತಜ್ಞ೦
ಸಾರಮಾತ್ರ ವದಾವದಂ ।
ದೂರೀಕೃತ ದುರಾಚಾರಂ
ಕೃಷ್ಣಾಚಾರ್ಯ ಗುರು೦ಭಜೇ ।।
ಅಗಮ್ಯ ಮಹಿಮರೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ " ಶ್ರೀ ರಾಘವೇಂದ್ರ ಚಿತ್ತಜ್ಞ೦ " ಎಂದು ಹೆಸರು ಪಡೆದ ಶ್ರೀ ಅಪ್ಪಾವರು ಋಜುಗಳೆಂದು ಸ್ಪಷ್ಟವಾಗುತ್ತದೆ.
" ಭವಿಷ್ಯವಾಣಿ "
ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿರುವ ವಿದ್ವಾನ್ ಶ್ರೀ ಗಣೇಶಾಚಾರ್ಯರಿಗೂ ಶ್ರೀ ಅಪ್ಪಾವರಿಗೂ ಒಳ್ಳೆಯ ಸ್ನೇಹ ಸಂಬಂಧ.
ಶ್ರೀ ಗಣೇಶಾಚಾರ್ಯರು ಪ್ರಕಾಂಡ ಪಂಡಿತರೂ - ವಾಗ್ಮಿಗಳೂ - ಸದ್ಗುಣ ಸಂಪನ್ನರೂ - ವಿದ್ಯೆಗೆ ತಕ್ಕ ವಿನಯ.
ಇವರಿಗೆ ಶ್ರೀ ಅಪ್ಪಾವರ ಮೇಲೆ ಅತ್ಯಂತ ಗೌರವ. ಅವರನ್ನು ನೋಡಿದಾಗಲೆಲ್ಲಾ ದೀರ್ಘದಂಡಪ್ರಣಾಮಗಳನ್ನರ್ಪಿಸುತ್ತಿದ್ದರು.
ಶ್ರೀ ಸುಜ್ಞಾನೇಂದ್ರತೀರ್ಥರು ಶ್ರೀ ರಾಯರ ಮಠದ ಪೀಠಾಧಿಪತಿಗಳು.
ಪೀಠಕ್ಕೆ ಉತ್ತರಾಧಿಕಾರಿಗಳನ್ನು ಆರಿಸುವ ವಿಚಾರ ನಂಜನಗೂಡಿನಲ್ಲಿ ನಡೆದಿತ್ತು.
ಅದೇ ಸಂದರ್ಭದಲ್ಲಿ ಶ್ರೀ ಅಪ್ಪಾವರು ಮಂತ್ರಾಲಯಕ್ಕೆ ಬಂದರು.
ಶ್ರೀ ಗಣೇಶಾಚಾರ್ಯರು ಕೂಡಲೇ ಗೌರವಾದರಗಳಿಂದ ಶ್ರೀ ಅಪ್ಪಾವರಿಗೆ ದೀರ್ಘ ದಂಡಪ್ರಣಾಮಗಳನ್ನು ಮಾಡಿದರು.
ಆಗ ಅಪ್ಪಾವರು ನಗುತ್ತಾ...
" ಗಣೇಶಾಚಾರ್ಯರೇ ಇಂದು ನೀವು ನಮಗೆ ನಮಸ್ಕಾರ ಮಾಡುತ್ತಿರುವಿರಿ.
ಆದರೆ ನಾಳೆಯಿಂದ ನಾವು ನಿಮಗೆ ನಮಸ್ಕಾರ ಮಾಡಬೇಕಾಗುವುದು " ಎಂದು ನುಡಿದರು.
ಶ್ರೀ ಗಣೇಶಾಚಾರ್ಯರಿಗೆ ಶ್ರೀ ಅಪ್ಪಾವರ ಮಾತುಗಳು ಕೂಡಲೇ ಅರ್ಥವಾಗಲಿಲ್ಲ.
ಏನೋ ದೊದ್ದವರು ಆಶೀರ್ವದಿಸುತ್ತಿದ್ದಾರೆಂದು ಅವರು ಅವರು ಸುಮ್ಮನಾದರು.
ಸ್ವಲ್ಪ ಸಮಯದ ನಂತರ ಶ್ರೀ ಗಣೇಶಾಚಾರ್ಯರಿಗೆ ಶ್ರೀ ಅಪ್ಪಾವರ ಮಾತಿನ ಸತ್ಯ ಅರ್ಥವಾಯಿತು.
ಕೂಡಲೇ ನಂಜನಗೂಡಿಗೆ ಹೊರಟು ಬರುವಂತೆ ಶ್ರೀ ಗಣೇಶಾಚಾರ್ಯರಿಗೆ ಶ್ರೀ ಸುಜ್ಞಾನೇಂದ್ರತೀರ್ಥರಿಂದ ಆದೇಶ ಬಂದಿತು.
ಶ್ರೀ ಸುಜ್ಞಾನೇಂದ್ರತೀರ್ಥರು ಶ್ರೀ ಗಣೇಶಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಗಳಾಗಿ ಆರಿಸಿದ್ದರು.
ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರಿಗೆ ದೀರ್ಘ ದಂಡ ಪ್ರಣಾಮ ಮಾಡುತ್ತಿದ್ದ ಶ್ರೀ ಗಣೇಶಾಚಾರ್ಯರು ಶ್ರೀ ರಾಯರ ಮಠದ ಪೀಠಾಧಿಪತಿಗಳಾಗಿ " ಶ್ರೀ ಸುಧರ್ಮೇಂದ್ರತೀರ್ಥ " ರೆಂಬ ಅಭಿದಾನದಿಂದ ಪ್ರಖ್ಯಾತರಾದರು.
ಪೀಠಾಧಿಪತಿಗಳಾದ ನಂತರವೂ ಶ್ರೀ ಸುಧರ್ಮೇಂದ್ರತೀರ್ಥರು ಶ್ರೀ ಅಪ್ಪಾವರನ್ನು ಪ್ರೀತಿ ವಿಶ್ವಾಸಗಳಿಂದ ಕಾಣುತ್ತಿದ್ದರು.
ಉತ್ತಮ ಸಾಧನೆಯನ್ನು ಮಾಡಿ ಸತ್ಕೀರ್ತಿಯನ್ನು ಪಡೆದ ಶ್ರೀ ಸುಧರ್ಮೇಂದ್ರತೀರ್ಥರ ಮೂಲ ಬೃಂದಾವನವು ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ಗುರುಸಾರ್ವಭೌಮರ ಪರಮ ಪವಿತ್ರವಾದ ಸನ್ನಿಧಾನದಲ್ಲಿದೆ.
ಶ್ರೀ ಸುಧರ್ಮೇಂದ್ರತೀರ್ಥರ ವಿದ್ಯಾ - ಪಂಡಿತ ಪೋಷಣೆ - ಶಿಷ್ಯ ಜನೋದ್ಧಾರ ಇತ್ಯಾದಿ ಮಹಿಮಾ ವೈಭವವನ್ನು ಶ್ರೀ ರಾಯರ ಅಂತರಂಗ ಭಕ್ತರೂ - ಉತ್ತರಾದಿ ಮಠದ ಶಿಷ್ಯರೂ ಆದ ಶ್ರೀ ಕೃಷ್ಣಾವಧೂತರು " ಶ್ರೀ ಸುಧರ್ಮೇಂದ್ರ ಮಹೋದಯಃ "ಎಂಬ ಕೃತಿಯಲ್ಲಿ ಅತಿ ಮನೋಜ್ಞವಾಗಿ ವರ್ಣಿಸಿದ್ದಾರೆ.
" ಶ್ರೀ ಅಪ್ಪರವರಿಂದ ಅನುಗೃಹೀತರು "
1. ಶ್ರೀ ಗಂಧರ್ವಾ೦ಶ ಸುರಪುರದ ಆನಂದದಾಸರು
2. ಶ್ರೀ ಆಹ್ಲಾದಾಂಶ ಗುರು ಜಗನ್ನಾಥದಾಸರು
3. ವಿದ್ವಾನ್ ಶ್ರೀ ಯಲಿಮೇಲಿ ಹಯಗ್ರೀವಾಚಾರ್ಯರು
4. ವಿದ್ವಾನ್ ಶ್ರೀ ಯಲಿಮೇಲಿ ವಿಠಲಾಚಾರ್ಯರು
5. ಶ್ರೀ ವಿಜಯರಾಮಚಂದ್ರದಾಸರು
6. ಶ್ರೀ ಜಯೇಶವಿಠಲರು ( ಅಟಾಚಿ ಶ್ರೀ ವೆಂಕೋಬರಾಯರು )
7. ಶ್ರೀ ಕಾರ್ಪರ ನರಹರಿ ದಾಸರು
8. ಶ್ರೀ ಮುದ್ದು ಭೀಮಾಚಾರ್ಯರು
" ಮಹಿಮೆಗಳು "
1. ಶ್ರೀ ವಿಜಯರಾಮಚಂದ್ರದಾಸರಿಗೆ ಪರಮಾನುಗ್ರಹ ಮಾಡಿದ್ದು.
2. ಮೈಸೂರಿನ ಮಹಾರಾಜರ ಪ್ರಾರ್ಥನೆಯಂತೆ ಅರಮನೆಗೆ ಬಂದಾಗ ಅರಮನೆಯ ಈಶಾನ್ಯ ಮೂಳೆಯ ಸ್ಥಳವನ್ನು ತೋರಿಸಿ ಆಗಿಸಲು ಆದೇಶ ಕೊಟ್ಟರು.
ಅದರಂತೆ ಆ ಸ್ಥಳದಲ್ಲಿ ಅಗೆಯಲು ಆ ಸ್ಥಳದಲ್ಲಿ ಪಾಂಡವರಿಂದ ಪೂಜಿತ ಸುಂದರವಾದ ಶ್ರೀ ಪಂಚಮುಖಿ ಪ್ರಾಣದೇವರ ಪ್ರತಿಮೆ ಲಭ್ಯವಾಯಿತು.
3. ಗದುಗಿನ ಯೋಗಿ ನಾರಾಯಣಾಚಾರ್ಯರಿಗೆ ಅನುಗ್ರಹಿಸಿದ್ದು.
4. ತಮಿಳುನಾಡಿನ ಭವಾನಿಯಲ್ಲಿ " ಮದು ಮಗನಿಗೆ ಪ್ರಾಣದಾನ "
5. ಶ್ರೀ ಅಪ್ಪಾವರು ಮುಂಡರಗಿ ಜೋಯಿಸ್ ಅವರ ಮನೆಗೆ ಬಂದಾಗ ಅವರು ತಮ್ಮ ಪಾದುಕೆಗಳನ್ನು ಅಲ್ಲಿಯೇ ಬಿಟ್ಟು ಹೋದರು.
ಜೋಯಿಸರು ನಿತ್ಯವೂ ಆ ಪಾದುಕೆಗಳನ್ನು ಪೂಜೆ ಮಾಡುತ್ತಿದ್ದ ಅವರು ತಮ್ಮ ಸಕಲ ಇಷ್ಟಾರ್ಥಗಳನ್ನೂ ಹೊಂದಿದ್ದರು!!
" ಸುಜ್ಞಾನ ಬೆಳಕಿನ ಕಣ್ಮರೆ "
ಶ್ರೀ ಅಪ್ಪಾವರು ಶ್ರೀ ಪಂಚಮುಖಿ ಪ್ರಾಣದೇವರನ್ನು ಪ್ರತಿನಿತ್ಯ ಪೂಜಿಸುತ್ತಾ - ಪಂಚಮುಖನ ಪಂಚ ರೂಪಗಳನ್ನು ತಮ್ಮ ಮನೋ ಪಂಕಜದಲ್ಲಿ ಸದಾ ಧ್ಯಾನಿಸುತ್ತಾ ಅಪೂರ್ವವಾದ ಆನಂದವನ್ನು ಸೂರೆಗೊಂಡ ಶ್ರೀ ಅಪ್ಪಾವರು ತಮ್ಮ ಕೊನೆಯ ದಿನಗಳಲ್ಲಿ " ಗಾಣಧಾಳದ ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿ " ಗೆ ತೆರಳಿ ಆ ಪ್ರಶಾಂತವಾದ ಪರಿಸರದಲ್ಲಿ ಒಂದೆರಡು ದಿನ ಧ್ಯಾನಾಸಕ್ತರಾದರು.
ಅಗಮ್ಯ ಮಹಿಮನಾದ ವಾಯುವಾಹನ ತಮ್ಮ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು.
ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು.
ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರಿಗೆ ಪಾದಾರವಿಂದಗಳಲ್ಲಿ ಸಲ್ಲಿಸಿ " ಶ್ರಾವಣ ಶುದ್ಧ ತೃತೀಯಾ " ಶ್ರೀ ಕೃಷ್ಣ ಪಾದಾರವಿಂದವನ್ನು ಸೇರಿದರು!!
ಗದುಗಿನ ಶ್ರೀ ಯೋಗಿ ನಾರಾಯಣಾಚಾರ್ಯರು...
ಭಾರತೀಶ ಪದದ್ವಂದ್ವ೦ -
ಸಾರಸ ಭ್ರಮರಾಯಿತಮ್ ।
ಸುರವತ್ಕಾಂತಿ ಸಂಪನ್ನಂ -
ಕೃಷ್ಣಾಚಾರ್ಯ ಗುರು೦ಭಜೇ ।।
ಭಾರತೀ ಪತಿಯಾದ ಶ್ರೀ ಮುಖ್ಯಪ್ರಾಣನ ಪಾದ ಕಮಲದಲ್ಲಿ ದುಂಬಿಯಂತಿರುವ - ದೇವತೆಗಳಂತೆ ಪ್ರಕಾಶಮಾನರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ!!
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.....
ಅಪ್ಪನೇ ಅಪ್ಪಾರ ಮಹಿಮನೇ । ತಿ ।
ಮ್ಮಪ್ಪನ ಕರುಣೆಯ ಕಂದ ರಾಯರ ಪ್ರಿಯನೇ ।
ಕಪಿ ಕುಂಜರ ಪಿತ ವೇಂಕಟನಾಥನ ದೂತಾ ।
ಕಪರ್ದಿ ಮುನಿ ಬಿಂಬನೇ ಇಭರಾಮ ಪುರಾಧೀಶ ಸಲಹೋ ।।
No comments:
Post a Comment