Tuesday, 1 January 2019

ಅಪ್ಪಾವರು ಮಹಿಮೆ 02 ಇಭರಾಮಪುರ appavaru mahime 02


following is 17 oct 2018 article

ಶ್ರೀಮದ್ ಅಪ್ಪಾವರ 229ವರುಷದ ಅವತಾರದ ಸುದಿನ
श्रीरामचरणद्वन्द्ववर्धिचंद्रो दयोपमः | (birth date)
श्रीकृष्णपूजानिरतः कृष्णोमाम्सर्वदावतु ||
ಮಂತ್ರಾಲಯ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥದ ಪಾರಾಯಣ ದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ಸುವಾಸನೆ ತೋರಿದ , ಜ್ಞಾನಿಶ್ರೇಷ್ಠರೆನಿಸಿದ ಎಲೆಮೇಲಿ ಹಯಗ್ರೀವಾಚಾರ್ಯ , ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು) ಶ್ರೀ ಯೋಗಿ ನಾರಾಯಣಾಚಾರ್ಯ, ಮುಂತಾದ ಜ್ಞಾನಿ ಸಮೂಹಕ್ಕೆ ಗುರುಗಳೆನಿಸಿದ , ವಿಜಯ ರಾಮಚಂದ್ರವಿಠಲ ದಾಸರು , ಜಯೇಶ ವಿಠಲ ದಾಸರು, ಸುರಪುರ ಆನಂದ ದಾಸರು ,ಗುರು ಜಗನ್ನಾಥ ದಾಸರಂತಹ ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ , ಶ್ರೀ ಇಭರಾಮಪುರ ಅಪ್ಪಾವರು ಅವತಾರ ಮಾಡಿದ ಇಂದಿನ ವಿಜಯ ದಶಮಿಗೆ 229 ವರ್ಷ.
ಶ್ರೀ ಅಪ್ಪಾವರ ಸಂಕ್ಷಿಪ್ತ ಮಾಹಿತಿ :
ಜನನ : 1789 ವಿಜಯ ದಶಮಿ
ತಂದೆ : ಶ್ರೀ ಅಹೋಬಲಾಚಾರ್ಯ
ತಾಯಿ : ಕೃಷ್ಣ ಬಾಯಿ
ಜನ್ಮ ಸ್ಥಳ : ಇಭರಾಮಪುರ ( ಜಿಲ್ಲೆ : ಕರ್ನೂಲು, ಆಂಧ್ರಪ್ರದೇಶ್ )
ಉಪದೇಶಿತ ಗುರು : ಅಶ್ವತ್ಥಾಮಾಚಾರ್ಯರು
ಕುಲ ಗುರುಗಳು : ಶ್ರೀರಾಘವೇಂದ್ರ ಗುರುಸಾರ್ವಭೌಮರು
ಸಮಕಾಲೀನ ಅಪರೋಕ್ಷ ಜ್ಞಾನಿಗಳು :
ಸುರಪುರದ ಆನಂದ ದಾಸರು , ಯೋಗಿ ನಾರಾಯಣ ಆಚಾರ್ಯ , ಮೊದಲಕಲ್ಲು ಶೇಷ ದಾಸರು , ವಿಜಯರಾಮಚಂದ್ರ ವಿಠಲರು , ಗಣೇಶಾಚಾರ್ಯರು (ಸುಧರ್ಮೇಂದ್ರ ತೀರ್ಥರು) , ಎಲಮೇಲಿ ಹಯಗ್ರೀವಾಚಾರ್ಯರು , ಹುಲಗಿ ನರಸಪ್ಪಾಚಾರ್ಯರು ಗುರು ಜಗನ್ನಾಥ ದಾಸರು.
ಶ್ರೀ ಅಪ್ಪಾವರಿಗೆ ಶ್ರೀ ಮಂತ್ರಾಲಯ ಪ್ರಭುಗಳನ್ನು ಕಂಡರೆ ಅಪರಿಮಿತವಾದ ಭಕ್ತಿ, ಗೌರವ. ಶ್ರೀ ರಾಯರಿಗೆ ಸಹ ಶ್ರೀ ಅಪ್ಪಾವರನ್ನು ಕಂಡರೆ ಅತ್ಯಂತ ಅಂತಃಕರಣ - ಪ್ರೀತಿ - ಮಾತೃವಾತ್ಸಲ್ಯ ತೋರುತ್ತಿದ್ದರು. ಇವರಿಬ್ಬರ ಸಂಬಂಧ ಹಸು - ಕರುವಿನ ಸಂಬಂಧ.
ಶ್ರೀ ರಾಯರೂ ಶ್ರೀ ಅಪ್ಪಾವರ ವಿಷಯದಲ್ಲಿ ಅತ್ಯಂತ ಪ್ರಸನ್ನರಾಗಿದ್ದರು.
ಶ್ರೀ ರಾಯರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾರವರಿಗೆ ಮೊದಲೇ ತಿಳಿದಿರುತ್ತಿತ್ತು.
ಶ್ರೀ ರಾಘವೇಂದ್ರ ಚಿತ್ತಜ್ಞ೦ ಸಾರಮಾತ್ರ ವದಾವದಂ ।
ದೂರೀಕೃತ ದುರಾಚಾರಂ ಕೃಷ್ಣಾಚಾರ್ಯ ಗುರು೦ಭಜೇ ।।
ಅಗಮ್ಯ ಮಹಿಮರೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ " ಶ್ರೀ ರಾಘವೇಂದ್ರ ಚಿತ್ತಜ್ಞ೦ " ಎಂದು ಹೆಸರು ಪಡೆದರು.
" ಶ್ರೀ ಅಪ್ಪಾವರಿಂದ ಅನುಗ್ರಹೀತರು "
೧. ಶ್ರೀ ಗಂಧರ್ವಾಂಶ ಸಂಭೂತರಾದ ಸುರಪುರದ ಆನಂದದಾಸರು
೨. ಶ್ರೀ ಆಹ್ಲಾದಾಂಶ ಸಂಭೂತರಾದ ಗುರು ಜಗನ್ನಾಥದಾಸರು
೩. ವಿದ್ವಾನ್ ಶ್ರೀ ಯಲಮೇಲಿ ಹಯಗ್ರೀವಾಚಾರ್ಯರು
೪. ವಿದ್ವಾನ್ ಶ್ರೀ ಯಲಮೇಲಿ ವಿಠಲಾಚಾರ್ಯರು
೫. ಶ್ರೀ ವಿಜಯರಾಮಚಂದ್ರದಾಸರು
೬. ಶ್ರೀ ಜಯೇಶವಿಠಲರು ( ಅಟಾಚಿ ಶ್ರೀ ವೆಂಕೋಬರಾಯರು )
೭. ಶ್ರೀ ಕಾರ್ಪರ ನರಹರಿ ದಾಸರು
೮. ಶ್ರೀ ಮುದ್ದು ಭೀಮಾಚಾರ್ಯರು
ಶ್ರೀ ಯೋಗಿ ನಾರಾಯಣಾಚಾರ್ಯರಿಂದ ರಚಿತವಾದ " ಶ್ರೀ ಇಭರಾಮಪುರದ ಕೃಷ್ಣಾಚಾರ್ಯ ಸ್ತೋತ್ರ " ದಲ್ಲಿ ಶ್ರೀ ಅಪ್ಪಾವರ ಮಹಿಮೆಗಳು ಶ್ರುತಿ - ಸ್ಮೃತಿ - ಪುರಾಣೋಕ್ತಿಗಳಿಗೆ ಸಮ್ಮತವೆಂದೂ; ಭಾಗವತ - ಭಾರತ - ಛಾ೦ಡೋಗ್ಯಾದಿ ಉಪನಿಷತ್ತುಗಳಲ್ಲಿ ವರ್ಣಿಸಲ್ಪಟ್ಟಿವೆಂದು ಎಂದು ಸ್ಪಷ್ಟ ಪಡಿಸಿದ್ದಾರೆ
ಮಹಿಮೆಗಳು :
- ಕೊಪ್ಪರ ಅರ್ಚಕರಿಗೆ ಸಂತಾನ ಅನುಗ್ರಹ
- ಶ್ರೀ ರಾಘವೇಂದ್ರ ಚಿತ್ತಘ್ನ
- ದೇಹದಿಂದ ಘಮ ಘಮಸಿವ ಪರಿಮಳ,
ಶ್ರೀರಂಗ ಪಟ್ಟಣದಲ್ಲಿ ಪರೀಕ್ಷೆ ಮಾಡಲು ಬಂದ ಮೂರ್ಖರಿಗೆ ಕಾವೇರಿ ನದಿಯಲ್ಲಿ ಸಂಪೂರ್ಣ ಘಮಘಮಿಸುವ ಪರಿಮಳ ತೋರಿಸಿದು
- ಇಭರಾಮಪುರದಲ್ಲೇ ಇದ್ದು ಹಂಪಿ ಜಾತ್ರೆ ತೋರಿಸಿದು
- ಗುರು ಜಗನ್ನಾಥ ದಾಸರಿಗೆ ಅನುಗ್ರಹ
- ಮೈಸೂರು ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರಿಗೆ ಅವರ ಪೂರ್ವ ಜನ್ಮದ ವೃತಾಂತ ತಿಳಿಸಿ ರಾಜರಿಗೆ ಅನುಗ್ರಹ
- ಮೈಸೂರು ಅರಮನೆಯಲ್ಲಿ ಪಾಂಡವ ಪೂಜಿತ ಅರ್ಜುನ ಕರಾರ್ಚಿತ ಪಂಚಮುಖಿ ಪ್ರಾಣ ದೇವರು ಪ್ರಾಪ್ತಿ
- ಮೈಸೂರು ಶ್ರೀ ವಿಜಯರಾಮಚಂದ್ರ ದಾಸರಿಗೆ ಅನುಗ್ರಹ
- ಗದಗ ದರ್ಶನ ವೀರ ನಾರಾಯಣನಜೊತೆ ಸಂದರ್ಶನ
- ಗದಗಿನವರಾದ ತಮ್ಮ ಯೋಗ ಶಕ್ತಿಯಿಂದ ವೀರನಾರಾಯಣನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದ ಶ್ರೀ ಯೋಗಿ ನಾರಾಯಣಾಚಾರ್ಯರನು ತಮ್ಮ ಶಿಷ್ಯರಾಗಿ ಸ್ವೀಕಾರ.
- ನಂದವಾರ ದೇಸಾಯಿ ವಂಶಸ್ಥರಿಗೆ ಸಂತಾನ ಅನುಗ್ರಹ
- ಸ್ವಪ್ನದಲ್ಲಿ ಸಕಲ ತೀರ್ಥ ಯಾತ್ರೆ
- ಭವಾನಿ ಭುಜಂಗರಾಯರ ಪುತ್ರರಿಗೆ ಪ್ರಾಣ ದಾನ
- ಬೇಲೂರು ಕೇಶವ ದಾಸರ ತಂದೆಗೆ ಸಂತಾನದ ಅನುಗ್ರಹ
- ಭವಿಷ್ಯವಾಣಿ - ರಿತ್ತಿ ಗಣೇಶಾಚಾರ್ಯರಿಗೆ ರಾಯರ ಪೀಠದಲ್ಲಿ ವಿರಾಜಮಾನರಾಗುತ್ತಾರೆ ,ಅವರೇ ಮುಂದೆ ಹಂಸ ನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ತ್ರೈಲೋಕ ಜಗತಗುರು ಶ್ರೀಮಾನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಸುಧರ್ಮೇಂದ್ರ ತೀರ್ಥರು ಎಂದು ಜಗನ್ಮಾನ್ಯರಾದರು.
- ಮಂತ್ರಾಕ್ಷತೆಯಿಂದ ಕುಷ್ಠಾಧಿ ರೋಗ ಪರಿಹಾರ.
- ಮಂತ್ರಾಕ್ಷತೆಯ ಬಲದಿಂದ ಮೈಸೂರು ಅರಮನೆಯಲ್ಲಿ ಬ್ರಹ್ಮ ಪಿಶಾಚಿ ನಿವಾರಣೆ
- ಲಕ್ಷ ವಿಪ್ರ ಬ್ರಾಹ್ಮಣ ಭೋಜನದ
- ಕುಂಪಿಣಿಪುರಂ ಗ್ರಾಮದಲ್ಲಿ ಸ್ವಯಂ ಉದ್ಭವ ಮುಖ್ಯ ಪ್ರಾಣದೇವರ ಪ್ರತಿಸ್ಥಾಪನೆ
- ಗದ್ವಾಲ್ ಸಂಸ್ಥಾನದಲ್ಲಿ ಉಂಟಾದ ಕ್ಷಾಮ ನಿವಾರಣೆ
- ಗದ್ವಾಲ್ ಅಗ್ರಹಾರದಲ್ಲಿ ಅಡಗಿಕೊಂಡಿದ ಪ್ರಾಣದೇವರ ಅಪ್ಪಾವರ ಅವರ ಪ್ರಾರ್ಥನೆಮೇರೆಗೆ , ಗದ್ವಾಲ್ ಇಂದ ಇಭರಾಮಪುರಕೆ ಬಂದು ಪ್ರಾಣದೇವರು ನೆಲೆಸಿದ್ದು.
- ಸರ್ವವಿದ್ಯಾ ಪಾರಂಗತರಾದ ಅಪ್ಪಾವರನು ಪರೀಕ್ಷಿಸಲು ಬಂದ ರಾಮಚಾರ್ಯ ಎಂಬ ಪಂಡಿತರಿಗೆ ತಮ್ಮ ಮನೆಯಲ್ಲಿ ನೀರು ತರುವವನ ಹತ್ತಿರ ,ಶ್ರೀ ಅಪ್ಪಾವರು ತಮ್ಮ ಕೈ ಇಂದ ಬೆನ್ನು ತಟ್ಟಿ ಅಶಕ್ತನಾದವನ ಕಡೆಯಿಂದ ಆ ಪಂಡಿತನಿಗೆ ಶ್ರೀಮನ್ ನ್ಯಾಯಸುಧಾ ಪರಿಮಳ ಗೊತ್ತಿಲ್ಲದ ಪ್ರಮೇಯ ವಿಷಯಗಳನು ಮನದಟ್ಟು ಮಾಡಿಕೊಟ್ಟ ಆ ಪಂಡಿತನಿಗೆ ಅಪ್ಪಾವರು ತಮ್ಮ ಸಾಮರ್ಥ್ಯವನ್ನು ತೋರಿಸಿ ಪಾಂಡಿತ್ಯದ ಗರ್ವಭಂಗ ಮಾಡಿ ಅನುಗ್ರಹಿಸಿದ್ದು.
- ಹುಲಿ ಮರಡಿಯ ಬೆಟ್ಟದಲ್ಲಿ ತಾವೇ ಹುಲಿ ಯಾಗಿ ಅಲ್ಲಿಯ ವ್ಯಗ್ರ ಭಾದೆ ತಪ್ಪಿಸಿ ಅಲ್ಲಿ ಜನರಿಗೆ ಅನುಗ್ರಹ
- ಸುರಪುರದ ಆನಂದ ದಾಸರಿಗೆ ತಮ್ಮ ಸ್ವರೂಪ ತಿಳಿಸಿಕೊಟ್ಟು ತಮ್ಮ ಶಿಷ್ಯರಾಗಿ ಸ್ವೀಕಾರ.
- ಸಮಕಾಲೀನ ಎಲ್ಲಾ ಹರಿದಾಸರಿಗೆ , ಅಪರೋಕ್ಷ ಜ್ಞಾನಿಗಳಿಗೆ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರ ಎಂದುದು ಬಿರುದು.
ಹೀಗೆ ಭಾಗವತೊತ್ತಮರಾದ ಶ್ರೀ ಅಪ್ಪಾವರು ತಮ್ಮಲ್ಲಿ ಶರಣು ಬಂದ ಭಕ್ತರಿಗೆ ಈಗಲೂ ನಿರಂತರ ಅನುಗ್ರಹ ಮಾಡುತ್ತಾ ಇದ್ದಾರೆ.
ಶ್ರೀ ಇಭರಾಮಪುರೋಪಾಖ್ಯಾ ಕೃಷ್ಣಾರ್ಯ ಮಹಿಮಾಂ ಭುದೇಃ |
ಏಕಸ್ಯಾಲ್ಪ ತರಂಗಸ್ಯ ವರ್ಣನಂ ಸಮುದೀರಿತಮ್||
ಅಪ್ಪಾವರ ಕಟ್ಟೆ:
ಶ್ರೀ ಅಪ್ಪಾವರು ನಿತ್ಯವೂ ಪಂಚಮುಖಿ ಮುಖ್ಯಪ್ರಾಣ ದೇವರ ಪೂಜೆ , ನಿತ್ಯ ಅನುಷ್ಟಾನ ಹಾಗೂ ಸುಧಾ ಪರಿಮಳಾದಿ ಗ್ರಂಥಗಳು ಪಾರಾಯಣ ಮಾಡಿದ ಸ್ಥಳ. ಶ್ರೀ ಅಪ್ಪಾವರ ತರುವಾಯ ಬಂದ ಭಕ್ತಾದಿಗಳ ಅನುಗ್ರಹಕಾಗಿ ಅಪ್ಪಾವರ ಶಿಷ್ಯರಾದ ಶ್ರೀ ಯೋಗಿ ನಾರಾಯಣಾಚಾರ್ಯರರು ಶಾಲಿಗ್ರಾಮ ಶಿಲೆಯಲ್ಲಿ ಶ್ರೀ ಅಪ್ಪಾವರ ಉಪಾಸ್ಯಮೂರ್ತಿಯಾದ ಚತುರ್ಭುಜ ವೇಣುಗೋಪಾಲ ಕೃಷ್ಣ ದೇವರು ಹಾಗೂ ಅಪ್ಪಾವರ ಮೂರ್ತಿಯನ್ನು ಪ್ರತಿ ಷ್ಟಾಪನೆ ಮಾಡಿದ ಸ್ಥಳವೇ ಅಪ್ಪಾವರ ಕಟ್ಟೆ.
ಶ್ರೀ ಅಪ್ಪಾವರ ಕಟ್ಟೆಯು ಶ್ರೀ ಮಂತ್ರಾಲಯ ಗುರುಸೌರ್ವಭೌಮರ ಸನ್ನಿಧಾನದಿಂದ ಕೇವಲ 7kms ದೂರದಲ್ಲಿದೆ.
ಈ ಸುದಿನದಂದು ಶ್ರೀ ಅಪ್ಪಾವರನ್ನು ಸ್ಮರಿಸಿ , ನಮ್ಮಲ್ಲಿ ಜ್ಞಾನ , ಧೃಡ ಭಕ್ತಿ , ವೈರಾಗ್ಯ ಆರೋಗ್ಯಾದಿಗಳು ಮತ್ತೆ ಶ್ರೀಮದ್ವಾಚಾರ್ಯರ ಶ್ರೀ ರಾಯರ ಅಪ್ಪಾವರ ಸ್ಮರಣೆ ಮಾಡಿಸುವ ಸದ್ವೈಷ್ಣವ ಜನ್ಮ ಬರಲಿ ಅಂತ ಪ್ರಾರ್ಥನೆ ಮಾಡೋಣ.
" ಶ್ರೀ ಕಾರ್ಪರ ನರಹರಿದಾಸರು "
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ||
ಸ್ಮರಿಸುವರಿಗೆ ಸುರತರುಕಲ್ಪ । ವಿ ।
ಭರಾಮಪುರದಿ ಶ್ರೀಹರಿ । ಧ್ಯಾನ ।
ಪರ ಶ್ರೀ ಕೃಷ್ಣಾಚಾರ್ಯರ ||ಅ.ಪ |
ಶ್ರೀ ಬಾದರಾಯಣವಿಠಲರು...
ಘನ್ನ ಭಕ್ತಿ ವಿರಕ್ತಿ ನೀಡುವುದರಲಿ ।
ಇನ್ನು ನಿನಗೆಣೆಗಾಣೆ ಪುಣ್ಯ ಪುರುಷ ।
ಪುನೀತ ಪೂರ್ಣ ಕಾರುಣ್ಯ ನಿರ್ದೋಷ ವೇಷಾ ।।
ಇಭರಾಮಪುರದರಸೆ ಈಪ್ಸಿತ ಫಲಪ್ರದ ।
ತ್ರಿಭುವನ ವ್ಯಾಪ್ತಿ ಸಿರಿ ವಿಷ್ಣುದರ್ಶಿ ।।
ಶ್ರೀ ಜಯೇಶವಿಠಲರು....
ಈ ಧರಣಿಯಲಿ ಕಲಿಯು ಬಾಧಿಸಲು ಸುಜ್ಞಾನ ।
ಮೇದಿನಿ ಸುರರೆಲ್ಲ ಮೊರೆಯಿಡಲು ಶ್ರೀ ರಮಣ ।
ಭೇದ ಸತ್ಯವ ತೋರೆ ಕೃಷ್ಣಾರ್ಯ ಪ್ರಭುವರನ ।
ಆದರದಿ ಕಳುಹಿದನು ನಿನ್ನ ಸಹಿತಾ ।।
ಶ್ರೀ ವಿಜಯರಾಮಚಂದ್ರದಾಸರ ಶಿಷ್ಯರಾದ ಶ್ರೀ ಬಾಲಕೃಷ್ಣದಾಸರು...
ನಮ್ಮ ಸ್ವಾಮಿ ಕೃಷ್ಣಾರ್ಯವರ್ಯ । ಪರ ।
ಬೊಮ್ಮನ ಅರ್ಚಿಸಿ ಮುಂದೆ ।
ಬ್ರಹ್ಮ ಪದವಿ ಪಡೆವಾ ।।
ಜೀವದಲ್ಲಿ ಇಂದ್ರಿಯದಲ್ಲಿ ದೇವದಲ್ಲಿ ಮನಸ್ಸಿನಲ್ಲಿ ।
ಭುವಿಯಲ್ಲಿ ಮೊದಲಾದ ಅಖಿಳ ಲೋಕದಲ್ಲಿ ನಿಂದು ಪೊರೆವಾ ।।
*****


|ಶ್ರೀ ಇಭರಾಮಪುರ ಅಪ್ಪಾವರ ಮಹಿಮೆ|

✍ಉಡುಪಿ ಯಾತ್ರೆಯನ್ನು ಮುಗಿಸಿ ಕೊಂಡು ಶ್ರೀಅಪ್ಪಾವರು ಮುಂದೆ ಕೊಪ್ಪರ ನರಸಿಂಹ ಕ್ಷೇತ್ರ ಕ್ಕೆ ಆಗಮಿಸಿದರು.
ಕೊಪ್ಪರದಲ್ಲಿ ನರಸಿಂಹದೇವರ ಸನ್ನಿಧಿಯಲ್ಲಿ ತಮ್ಮ ತಪಸ್ಸು ಮಾಡುವದು ಅಂತ ತಿಳಿದುಕೊಂಡು ಅಪ್ಪಾವರು ಅಲ್ಲಿ ಇದ್ದ ಒಂದು ಮಂಟಪದಲ್ಲಿ ವಾಸ ಮಾಡುತ್ತಾರೆ.ಅವಾಗ ಅವರ ಕಾಲದಲ್ಲಿ ಇಷ್ಟು ಅಭಿವೃದ್ಧಿ ಹೊಂದಿದ್ದಿಲ್ಲ.
ಆ ಮಂಟಪದಲ್ಲಿ ಬರಿ ಒಂದು ನಂದಿಯ ವಿಗ್ರಹ ವಿದೆ.ಈಗಲು ಅಲ್ಲಿ ಹೋದಾಗ ನೋಡಬಹುದು.
ಆ ನಂದಿ ಬಾಗಿಲ ಕಡೆ ಬೆನ್ನು ಮಾಡಿಕೊಂಡು ಕುಳಿತಿದೆ.ಮತ್ತು ಆ ಮಂಟಪದಲ್ಲಿ ಯಾವುದೇ ಈಶ್ವರ ಲಿಂಗವಾಗಲಿ ಇದ್ದಂತೆ ಕಾಣುವುದಿಲ್ಲ.
ಇಂತಹ ಮಂಟಪದಲ್ಲಿ ಶ್ರೀ ಅಪ್ಪಾವರು ತಮ್ಮ ತಪಸ್ಸು ಮಾಡಲು ಕೂಡುವದೆಂದು ನಿಶ್ಚಯಿಸಿದರು..
ಮತ್ತು ಆ ವೃಷಭವು ಶ್ರೀ ಜಯತೀರ್ಥರ ಪೂರ್ವಾವತಾರವೆಂದು ತಿಳಿದು ಅಲ್ಲಿಯೆ ತಮ್ಮ ಜಪ ತಪ ಮಾಡುತ್ತಾ ಇದ್ದರು...
ಅವಾಗ ಅಲ್ಲಿ ನರಸಿಂಹ ದೇವರ ಅರ್ಚಕ ರಿಗೆ ಕುಂ||ನರಸಮ್ಮ ಅನ್ನುವ ಮಗಳು ಇದ್ದಳು.ಮಗಳಿಗೆ ವಿವಾಹ ಮಾಡಿ ಅಳಿಯನ ಜೊತೆಗೆ ತಮ್ಮ ಮನೆಯಲ್ಲಿ ಇಟ್ಟು ಕೊಂಡರು.
ಯುಕ್ತ ಕಾಲ ಬಂದರು ನರಸಮ್ಮನವರಿಗೆ ಸಂತಾನವಾಗದೇ ಇದ್ದಾಗ ನರಸಿಂಹ ದೇವರ ಸೇವೆಯನ್ನು ಅವರು ಮಾಡುತ್ತಾರೆ.
ಸೇವೆ ಮುಗಿಸಿದ ನಂತರ ಕಟ್ಟಿ ಇಂದ ಇಳಿದು ಬಂದು ಮಂಟಪದಲ್ಲಿ ಕುಳಿತ ಅಪ್ಪಾವರನ್ನು ನೋಡಿ ಯಾರೋ ದೊಡ್ಡವರು,ಜ್ಞಾನಿಗಳು ಇರಬೇಕು  ಅಂತ ಹೊರಗಡೆ ಇಂದ ಪ್ರದಕ್ಷಿಣ ನಮಸ್ಕಾರ ಅಪ್ಪಾವರಿಗೆ ಹಾಕಿಕೊಂಡು ಮನೆಗೆ ಬರುತ್ತಾ ಇದ್ದರು.
ಇದು ಅವರ ತಂದೆಯವರಿಗೆ ತಿಳಿಯಿತು.
ಇದನ್ನು ಪ್ರತ್ಯಕ್ಷವಾಗಿ ಕಂಡ ಅವರು ಮಗಳನ್ನು ಕರೆದು
ನರಸು!!ದೇವರ ಸೇವೆ ಮಾಡಿದರಾಯಿತು.ಇತರರನ್ನು ಸೇವಿಸುವದು ನನಗೆ ಸಮ್ಮತಿ ಇಲ್ಲ .ಅಲ್ಲದೇ ಇವರನ್ನು ನೋಡಿದರೆ ಯಾರೋ ಹಳ್ಳಿಯ ಜೋಯಿಸರ ತರಹ ಕಾಣುತ್ತಾರೆ. ನಮ್ಮ ಮಗಳಾಗಿ ಇಂತಹವರಿಗೆ ನಮಸ್ಕಾರ ಮಾಡುವದು ತಪ್ಪು. ಸ್ತ್ರೀ ಯರಿಗೆ ಇದೊಂದು ಭ್ರಾಂತಿ. ಅಂತ ತಮ್ಮ ಮನೆಯಲ್ಲಿ  ಮಗಳಿಗೆ ಸಿಟ್ಟು ಮಾಡಿಕೊಂಡು ಹೇಳುತ್ತಾರೆ.
ಅವಾಗ ಆ ತಾಯಿಯು
ಅಪ್ಪಾ!!ನಮ್ಮ ಮೊರೆ ದೇವರಿಗೆ ಮುಟ್ಟಲಿಲ್ಲ.. ಅವಾಗ ನಾವು ಆತನ ಭಕ್ತರಿಗೆ ಶರಣುಹೋದರೆ ಅವರು ನಮ್ಮ ಪರವಾಗಿ ಸ್ವಾಮಿಗೆ ವಿಜ್ಞಾಪನೆ ಮಾಡಿಕೊಳ್ಲುವರು..
ಭಕ್ತರಾಧೀನ ಆ ಸ್ವಾಮಿ ತನ್ನ ಭಕ್ತರು ಹೇಳಿದ ಕೇಳಿದ ಮಾತು ಬಿಡ.
ಇವರನ್ನು ನೋಡಿದರೆ ಹರಿಭಕ್ತರ ತರಹ ಕಾಣುತ್ತಾರೆ ಹಾಗಾಗಿ ಇವರಿಗೆ ಸೇವೆ ಮಾಡುತ್ತಾ ಇದ್ದೀನಿ.ನಿಮಗೆ ಆಸಮ್ಮತವಾದರೆ ಬಿಟ್ಟು ಬಿಡುವೆ ಅಂತ ಹೇಳುತ್ತಾರೆ..
ಅದೇ ದಿನ ರಾತ್ರಿ ಆಚಾರ್ಯ ರಿಗೆ ಸ್ವಪ್ನದಲ್ಲಿ ಏನು ಸೂಚನೆ ಆಯಿತೊ ಗೊತ್ತಿಲ್ಲ!!
ಬೆಳಿಗ್ಗೆ ಬೇಗ ಎದ್ದು ತಮ್ಮಸ್ನಾನ ಆಹ್ನೀಕ ಮುಗಿಸಿಕೊಂಡು ಮಗಳನ್ನು ಕರೆದುಕೊಂಡು ಅಪ್ಪಾವರು ಬಳಿ ಬರುತ್ತಾರೆ.
ಬಂದು ಅವರಿಗೆ ಕೈ ಮುಗಿದು ನಮ್ಮ ಮಗಳು ಸಂತಾನ ಅಪೇಕ್ಷಿತ ಇಂದ ಸೇವೆ ಮಾಡುತ್ತಾ ಇದ್ದಾಳೆ.ದಯವಿಟ್ಟು ಅವಳ ಮೇಲೆ ನರಸಿಂಹ ದೇವರ ಅನುಗ್ರಹ ವಾಗುವಂತೆ ಅನುಗ್ರಹ ಮಾಡಿ ಅಂತ ಪ್ರಾರ್ಥನೆ ಮಾಡುತ್ತಾರೆ.
ಅವಾಗ ಅಪ್ಪಾವರು ನಮ್ಮ ಹತ್ತಿರ ಏನಿದೇ ಆಚಾರ್ಯ. ನಾನೊಬ್ಬ ಹಳ್ಳಿ ಜೊಯಿಸ ಅಂತ ಹೇಳಿದಾಗ,ಆಚಾರ್ಯರು ನಡುಗಿದರು.
ಮನೆಯಲ್ಲಿ ಆಡಿದ ಮಾತು ಇವರಿಗೆ ತಿಳಿದು ಬಂದಿದ್ದು ಕಂಡು ಸಾಮಾನ್ಯರಲ್ಲ ಇವರು ಅಂತ ತಿಳಿದು
ತಮ್ಮನ್ನು ಆ ರೀತಿಯಾಗಿ ನೋಡಿದ ನನ್ನ ಅಜ್ಞಾನ ವನ್ನು ಕ್ಷಮಿಸಿ ಅಂತ ಪ್ರಾರ್ಥನೆ ಮಾಡಿಕೊಳ್ಳುವ ರು.
ಪದ್ಮಾಸನದಲ್ಲಿ ಕುಳಿತ ಅಪ್ಪಾವರು ತಕ್ಷಣ ತಮ್ಮ ಎರಡು ಕೈಗಳನ್ನು ಜೋರಾಗಿ ನೆಲಕ್ಕೆ ಅಪ್ಪಳಿಸಿ ಆಚಾರ್ಯರ ಕಡೆ ನೋಡಿದರು..
ತಕ್ಷಣ ಆ ಕ್ಷಣದಲ್ಲಿ ಅಪ್ಪಾವರ ಬದಲಿಗೆ ಒಂದು ಘಟಸರ್ಪ ಹೆಡೆ ಅಲ್ಲಾಡಿಸುತ್ತಾ ಕುಳಿತಿದೆ.
ಭಯ ಚಕಿತರಾಗಿ ಅವರಿಬ್ಬರೂ ಹಾಗೆ ನಿಂತು ಬಿಟ್ಟರು.
ಮತ್ತೊಂದು ಕ್ಷಣದಲ್ಲಿ ನಿಜ ರೂಪದಿಂದ ಅಪ್ಪಾವರು ಮುಗುಳು ನಗುತ್ತ  ಆ ಹೆಣ್ಣು ಮಗಳಿಗೆ ಎರಡು ಕಾಯಿಯನ್ನು ಕೊಡುತ್ತೇವೆ ಉಡಿಯನ್ನು ಹಿಡಿ ಅಂತ ಹೇಳಿದಾಗ,ಪ್ರತ್ಯಕ್ಷ ವಾಗಿ ಸರ್ಪವನ್ನು ನೋಡಿದ ಆ ಹೆಣ್ಣು ಮಗಳು ನಡುಗುತ್ತಾ ಉಡಿಯನ್ನು ಹಿಡಿಯುತ್ತಾರೆ.ಆದರೆ ಮೊದಲು ಹಾಕಿದ ಫಲವು ಕೆಳಗಡೆ ಬೀಳುತ್ತದೆ. ಎರಡನೆಯ ದು ಅವರ ಉಡಿಯಲ್ಲಿ ನಿಲ್ಲುತ್ತದೆ.
ಅವಾಗ ಅಪ್ಪಾವರು
ತಾಯಿ!! ನಿನಗೆ ಎರಡು ಸಂತಾನವಾಗುವದು.ಮೊದಲನೆಯದು ಉಪಯೋಗವಿಲ್ಲ.ದ್ವೀತಿಯ ಕುಮಾರನಿಂದಲೇ ನಿಮ್ಮ ಸಂತತಿ ಬೆಳೆಯುವದು.ಮುಂದೆ ನರಸಿಂಹ ದೇವರ ಪೂಜೆ ನಿಮ್ಮ ಸಂತತಿಗೆ ಬರುವದು. ಅಂತ ಹೇಳಿ ಆಶೀರ್ವಾದ ಮಾಡುತ್ತಾರೆ. ಅದರಂತೆ ಕೊಪ್ಪರ ನರಸಿಂಹ ದೇವರ ಅರ್ಚಕ ಸಂತತಿಯು ಶ್ರೀಅಪ್ಪಾವರ ಅನುಗ್ರಹದಿಂದ ಬೆಳೆದಿದೆ.
ಇದನ್ನು ಕೊಪ್ಪರ ಗಿರಿಆಚಾರ್ಯರು ತಮ್ಮ ಕೃತಿಯಲ್ಲಿ ಉಲ್ಲೇಖ ಮಾಡುತ್ತಾರೆ.

ಚಿರಕಾಲ ಸೇವಿಪ ಪರಮ ವಂದ್ಯರಿಗೆಲ್ಲ ವರ ಪುತ್ರ ಸೌಖ್ಯ ವ ಕರುಣಿಸುವರು ಸತ್ಯ|
ಅಪರಿಮಿತ ಮಹಿಮ ರೆಂದರಿಯದೇ ಇವರನ್ನು| ಜರಿಯಲಾಕ್ಷಣದಲ್ಲಿ| ಅರಿತು ಭೀಕರವಾದ ಉರಗ ರೂಪವ ತೋರುತ|
ತ್ಯಜಿಸಿ ಮತ್ತೆ ನಿಜರೂಪದಿಂದಿರುತ| ನೋಳ್ಪರಿಗತ್ಯಾಶ್ಚರ್ಯ ಸದ್ಗುಣ ಭರಿತ|
ಕಾರ್ಪರ ನರಹರಿಯ ಪರೋಕ್ಷದಿ ನಿರುತ| ಸುಖಿಪರಂಘ್ರಿ||

ಸ್ಮರಿಸುವ ನರನೇ ಧನ್ಯ|ಸನ್ಮಾನ್ಯ|*
ಶ್ರೀ ಕೃಷ್ಣಾರ್ಪಣ ಮಸ್ತು

**************
ಶ್ರೀ ಅಪ್ಪಾವರ ಮಹಿಮೆ
ಸಪ್ತಜನ್ಮದ ವೃತಾಂತ

ಶ್ರೀ ಅಪ್ಪಾವರು ಸಂಚಾರ ನಿಮಿತ್ತವಾಗಿ ಮೈಸೂರಿಗೆ ಬಂದಿದ್ದರು. ಅಪ್ಪಾವರ ಆಗಮನದ ಸುದ್ದಿ ಕೇಳಿದ ಅವಾಗ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರು ಶ್ರೀ ಅಪ್ಪಾವರನ್ನು ಭೇಟಿಯಾಗಲು ಮಾರು ವೇಷದಲ್ಲಿ ಹೋಗಲು ನಿರ್ಧರಿಸುತ್ತಾರೆ. 
ಅಪರೋಕ್ಷ ಜ್ಞಾನಿಗಳಾದ ಅಪ್ಪಾವರಿಗೆ ರಾಜರು ತಮ್ಮ ಸಂದರ್ಶನಗೆ ಬರುತ್ತಾರೆ ಎಂದು ಗೋಚರವಾಗುತ್ತದೆ. ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರಿಗೆ ರಾಜರು ಬರುವ ವಿಷಯ ತಿಳಿಸುತ್ತಾರೆ. ಅಪ್ಪಾವರ ಆಜ್ಞೆಯಂತೆ  ಯೋಗಿ ನಾರಾಯಣಾಚಾರ್ಯರು ರಾಜರನ್ನು ಗೌರವದಿಂದ ಬರಮಾಡಿಕೊಳ್ಳುವರು..

ನಂತರ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ಪಾವರಿಗೆ ನಮಸ್ಕರಿಸಿ , ಗುರುವಂದನೆಯನ್ನು ಸಮರ್ಪಿಸುತ್ತಾರೆ.ಅಪ್ಪಾವರ ಸಂದರ್ಶನದಿಂದ ಪುಲಕಿತರಾದ ಒಡೆಯರು ತಮಗೆ ಹಲವುದಿನದಿಂದ ಕಾಡುತ್ತಿರುವ ಒಂದು ಪ್ರಶ್ನೆಯನ್ನು ಅಪ್ಪಾವರಲ್ಲಿ ಕೇಳುತ್ತಾರೆ.

ಒಡೆಯರು : ಸ್ವಾಮಿ ನನಗೆ ಬಹಳ ದಿನದಿಂದ ಒಂದು ಪ್ರಶ್ನೆ ಕಾಡುತ್ತಿದೆ. ನಾನು ಈ ಜನ್ಮದಲ್ಲಿ ರಾಜನಾಗಬೇಕಾದರೆ ನನಗೆ ಯಾವ ಜನ್ಮದ ಪುಣ್ಯದಿಂದ ಈ ರಾಜಯೋಗ ಬಂದಿದೆ ಎಂದು ತಿಳಿಸಿ ಕೊಡಿರೆಂದು ಅಪ್ಪಾವರಲ್ಲಿ ಪ್ರಾರ್ಥನೆಮಾಡುತ್ತಾರೆ.

ಶ್ರೀ ಅಪ್ಪಾವರು : ಒಡೆಯರೇ ನೀವು ಹಿಂದಿನ ಜನ್ಮದಲ್ಲಿ ತಿರುಪತಿ ಶ್ರೀನಿವಾಸನ ಸೇವಕರಾಗಿದ್ದೀರಿ. ಶ್ರೀನಿವಾಸನಿಗೆ ಪ್ರತಿನಿತ್ಯ ಅರ್ಚನೆಗಾಗಿ ತುಳಸಿತಂದು ಕೊಡೋದು, ಹಾಗೆಯೇ ನಿರ್ಮಾಲ್ಯ ವಿಸರ್ಜನೆ ಮಾಡೋದು ನಿಮ್ಮ ಕೆಲಸವಾಗಿತ್ತು. ಒಂದುದಿನ ನಿರ್ಮಾಲ್ಯ ವಿಸರ್ಜನೆಯ ಸಂದರ್ಭದಲ್ಲಿ ಶ್ರೀನಿವಾಸನ ರಾಜ ಮುದ್ರಿಕೆ (ಉಂಗುರ) ಬಂದಿರುತ್ತದೆ.ಉಂಗುರದ ತೇಜಸ್ಸನು ನೋಡಿ 
ಆ ಕ್ಷಣದಲ್ಲಿ  ಧರಿಸಿ ನಂತರದಲ್ಲಿ ಮತ್ತೆ ಶ್ರೀನಿವಾಸನ ಅರ್ಚಕರಿಗೆ ವಿಷಯತಿಳಿಸಿ ಆ ಉಂಗುರವನ್ನು ಒಪ್ಪಿಸಿರುತ್ತೀರಿ. 
ಆ ಕ್ಷಣದಲ್ಲಿ ನೀವು ಧರಿಸಿದ ಆ ಉಂಗುರದಿಂದ ನಿಮಗೆ ಈ ಜನ್ಮದಲ್ಲಿ ರಾಜ ರಾಗಿದ್ದೀರಿ ಎಂದು ಅಪ್ಪಾವರು ಅರಸರಿಗೆ ಅವರ ಪೂರ್ವ ಜನ್ಮದ ವೃತಾಂತ್ತವನ್ನು ಹೇಳುತ್ತಾರೆ.

ಯ ಸಪ್ತಜನ್ಮತಃ ಕರ್ಮವಿಪಾಕಮಖಿಳಂ ಕಿಲ |
ಸ್ಪಷ್ಟದೃಷ್ಟ ವಿಹಪ್ರಾಹ ಮಹತಾಮಿಹ ಶೃಣ್ವತಾಮ್ ||

ಶ್ರೀ ಯೋಗಿ ನಾರಾಯಣಾಚಾರ್ಯರು ರಚಿಸಿರುವ ಶ್ರೀ ಅಪ್ಪಾವರ ಮಹಿಮೆಗಳನ್ನು ಸಾರುವ ಮೇಲಿನ ಸ್ತೋತ್ರಹೇಳುವಂತೆ, ಅಪ್ಪಾವರು ಸಪ್ತಜನ್ಮದ ವೃತಾಂತವನ್ನ ತಿಳಿಸುತ್ತಾ ಇದ್ದರು.

ಸ್ಮರಿಸುವ ನರನೆ ಧನ್ಯ
ಶ್ರೀ ಇಭರಾಮಪುರಾಧೀಶ
****

|| ಶ್ರೀ ಇಭರಾಮಪುರಾಧೀಶಾಯ ನಮಃ || 
 

 ಪರಿಮಳ ಶರೀರ 

ನದಿಪ್ರದೇಶೇ ಪರಿತೋಪಿ ಸ್ನಾನೇನ ಸುಗಂಧಿಮನ್ |
ಸ್ಮೃತಿಮಾತ್ರಾಚ್ಚ ಕೇಷಾಂಚಿತ್ ಯತ್ರಕುತ್ರಾಪಿ ವಾಸಿನಾಮ್ ||

ಒಂದು ಬಾರಿ ಶ್ರೀ ಅಪ್ಪಾವರು ದಕ್ಷಿಣ ಭಾರತದ ಯಾತ್ರೆಯ ಸಮಯದಲ್ಲಿ ಕಾವೇರಿ ಸ್ನಾನಕ್ಕೆಂದು ಶ್ರೀರಂಗಪಟ್ಟಣ ನಗರಕ್ಕೆ ಬಂದಾಗ ಅಲ್ಲಿ ಕೆಲ ಕುಹಕಿಗಳು ಶ್ರೀ ಅಪ್ಪಾವರು ಯಾವುದೋ ದ್ರವ್ಯ ಧಾರಣೆ ಮಾಡಿಕೊಂಡು ಜನರಿಗೆ ತಪ್ಪು ಗ್ರಹಿಕೆ ಮಾಡುತ್ತಿದ್ದಾರೆಯೆಂದು ಅವರ ಪರೀಕ್ಷೆ ಮಾಡುಲು ಮುಂದಾಗುತ್ತಾರೆ.

"ನೀವು ಸ್ನಾನ ಮಾಡಿದಾಗ  ಪರಿಮಳದ‌ ಸುವಾಸನೆ ಬರುವುದೆಂದು  ಕೇಳಿದ್ದೇವೆ , ಅದನ್ನು ನೀವು ಈಗ ಕಾವೇರಿ ನದಿಯಲ್ಲಿ ಸ್ನಾನಮಾಡಿ ತೋರಿಸಿ" ಎನ್ನುತ್ತಾರೆ. ಶ್ರೀ ಅಪ್ಪಾವರು ಸ್ನಾನ ಮಾಡಿದಾಗ ಕಾವೇರಿ ನದಿಯಲ್ಲಿ  ಮತ್ತು ಸುತ್ತ- ಮುತ್ತಲಿನ ಗ್ರಾಮದಲ್ಲಿ ಪರಿಮಳದ ಸುವಾಸನೆ ಹರಡಿತು.

ಇನ್ನೊಂದು ಸನ್ನಿವೇಶದಲ್ಲಿ  ಶ್ರೀ ಅಪ್ಪಾವರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವಾಗ ಪರೀಕ್ಷೆಗೆಬಂದ ಕುಹಕಿಗಳು. ಅಪ್ಪಾವರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದಾಗ ಅವರ ದೇಹದಿಂದ ಹೊರಡುವ ಸುವಾಸನೆಯು  ನಿವೃತ್ತಿ ಸಂಗಮದವಗೆ ಹರಡಿತು.

ಅಪ್ಪಾವರಿಗೆ ಪರೀಕ್ಷೆ ಮಾಡಲು ಬಂದ ಆ ಕುಹಕಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಪ್ಪಾವರ ಬಳಿ ಶರಣಾಗುತ್ತಾರೆ. ಕರುಣಾ ಸಾಗರರಾದ ಅಪ್ಪಾವರು ಪರೀಕ್ಷೆ ಮಾಡಲು ಬಂದ‌ ಆ  ಜನರನ್ನು  ಕ್ಷಮಿಸಿ ಅನುಗ್ರಹಿಸುತ್ತಾರೆ.

ಶ್ರೀ ಅಪ್ಪಾವರು ಬರೆದ ಪತ್ರಗಳು, ಧರಿಸಿದ ವಸ್ತ್ರಗಳು ,ಅವರು ನದಿಯಲ್ಲಿ ಸ್ನಾನ ಮಾಡಿದಾಗ, ಅವರ ಕೈನಿಂದ ಬಂದ ವಸ್ತುಗಳಲ್ಲಿ ಪರಿಮಳದ ಸುವಾಸನೆ ಬರುತ್ತಿದ್ದ ಕಾರಣ ಶ್ರೀ ಅಪ್ಪಾವರು ಶ್ರೀ ಪರಿಮಳಾಚಾರ್ಯರು ಎಂದು ಪ್ರಸಿದ್ಧಿಯಾಗಿದ್ದರು.

ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದ ಶ್ರವಣ, ಮನನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಉಪಾಸನೆ ,ನಿತ್ಯನುಷ್ಠಾನ  ಹಾಗೂ  ಶ್ರೀ ರಾಯರ ಮತ್ತು  ವಾಯುದೇವರ ವಿಶೇಷ ಕಾರುಣ್ಯದಿಂದ ಶೃತಿ- ಸ್ಮೃತಿ ಸಮ್ಮತವಾದ ಈ ಮಹಿಮೆಗಳು ಗೋಚರವಾಗುತ್ತಿತು ಎಂದು ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾರಾಯಣಾಚಾರ್ಯರು  ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ  . 

ಈಗಲೂ ಶರಣುಬಂದ ಭಕ್ತಜನರಿಗೆ ತಮ್ಮ ಬಹಿರ್ಮುಖತ್ವವನು ಪರಿಮಳದ ಸುವಾಸನೆ ಮೂಲಕ ಅನುಗ್ರಹಿಸುತ್ತಿದ್ದಾರೆ.

 ಶ್ರೀ ಇಂದಿರೇಶ ದಾಸರು ಹೇಳುವಂತೆ : 

 ಅವ ಯೋಗಿಗಳವತಾರ | ಎಂದು 
 ನಾ ವರ್ಣಿಸಲು ಪರಿಮಳ ಶರೀರ |
ಸೇವಿಪ ಸುಜನರ ಮಂದಾರ | ತರು
ಪಾವನಾತ್ಮಕ ಪುಣ್ಯ ಪುರುಷ ಉದಾರ |
ಈ ವಿಧದಿ ಮಹಿಮೆಗಳು ಮಾತ್ತಾವ ನರರಿಗೆ ದೊರಕುವುದು | ಶ್ರೀದೇವಿರಮಣ ಸಹಾಯದಿಂದ  ಧರಾವಲಯದಿ ದಿಗ್ವಿಜಯ ಗೈಸಿದ || 

 ಕಾರ್ಪರ ನರಹರಿ ದಾಸರು: 

ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ
ಶಿರಪರಿಯಂತರ ಗುರುಗಳಾಕೃತಿಯನ್ನು
ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ
ಪರಿಶೋಭಿಸುವ ರತ್ನಾಭರಣದಿಂದೋಪ್ಪುವ
ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ
ಸುಂದರವಾದ ಮುಖದೊಳು ಮಂದಸ್ಮಿರ
 ಕಸ್ತೂರಿಯಂತೆ ಪರಿಮಳಾನ್ವಿತ ಶರೀರ 
ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ 

 ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಚಾರ್ಯ ಇಭರಾಮಪುರ
***
ಶ್ರೀಶ ಲಕ್ಷ್ಮೀಗೆ ಬ್ರಹ್ಮ ಜೀವೇಶರಾ ನಮಿಸಿ|..
ಅಪ್ಪಾವರ ದಿವ್ಯ ಭಾಸುರ ಚರಿತೆ ನಾ ಲೇಶಮತಿ ಪೇಳ್ವೆ||
✍ಶ್ರೀ ಇಭರಾಮಪುರ ಅಪ್ಪಾವರು ಪ್ರತಿ ವರುಷವು ಸುರಪುರಕ್ಕೆ ಶ್ರೀ ನರಸಿಂಹ ದೇವರ ಸಂದರ್ಶನ ಮಾಡಲು ಶ್ರೀ ನರಸಿಂಹ ಜಯಂತಿ ಉತ್ಸವಕ್ಕೆ ಆಗಮಿಸುತ್ತಾ ಇದ್ದರು.ಮಾರ್ಗದಲ್ಲಿ ಇರುವ ಮಾನ್ವಿ ಕ್ಷೇತ್ರಕ್ಕೆ ಬಂದಾಗ ಪುಷ್ಯಮಾಸವಾಗಿತ್ತು.
ಅವಾಗ ಶ್ರೀಅಪ್ಪಾವರು ಉಳಿದುಕೊಂಡ ಮನೆಯವರಾದ ಮಾನ್ವಿಯ ಕುಲಕರ್ಣಿ ಮನೆತನದವರು ಶ್ರೀ ಅಪ್ಪಾವರಿಗೆ ಸಾಷ್ಟಾಂಗ ನಮಸ್ಕರಿಸಿ, ಈ ಸಲ ಮಧ್ವ ನವಮಿಯ ಮಹೋತ್ಸವಕ್ಕೆ ದಯಮಾಡಿ ಮಾನ್ವಿಗೆ ಆಗಮಿಸಿ ನಮನ್ನು ಉದ್ದಾರ ಮಾಡಬೇಕೆಂದು ಭಕ್ತಿ,ಇಂದ ಕೇಳಿಕೊಂಡರು.
ಅವಾಗ್ಗೆ ಅಪ್ಪಾವರು 
ಕುಲಕರ್ಣಿ ಆಗಲಿ!!
ನಾವು ಕೆಲಸದ ನಿಮಿತ್ತ ವಾಗಿ ಸೊಲ್ಲಾಪುರ ಹೋಗಬೇಕಾಗಿದೆ.ನೀವು ಇತ್ತ ಮಧ್ವ ನವಮಿಯ ಮಹೋತ್ಸವ ನೆರವೇರಿಸಿ..
ನಾವು ಶ್ರೀ ಮಧ್ವ ನವಮಿಯ ದಿನ ಎಲ್ಲಿ ಇದ್ದರು ಸಹ ಸರಿಯಾಗಿ  ಮಧ್ಯಾನ್ಹ ೧೨ಗಂಟೆಗೆ ನಿಮ್ಮ ಮನೆಗೆ ಬರುತ್ತೇವೆ ಎಂದು ಹೇಳಿ ಎಲ್ಲಾ ಭಕ್ತರಿಗೆ ಆಶೀರ್ವಾದ ಮಾಡಿ ಮುಂದೆ ಸಂಚಾರ ಹೊರಟರು.ಮಾಘ ಮಾಸ ಬಂತು.ಈ ಸಾರಿ ಮಾನ್ವಿ ಯಲ್ಲಿ ಬಹಳ ವಿಶೇಷ. ಇಭರಾಮಪುರ ಅಪ್ಪಾವರು ಬರುತ್ತಾರೆ ಅನ್ನುವ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿ ಅಸಂಖ್ಯಾತ ಭಕ್ತರು ಒಂದೆರಡು ದಿನ ಮುಂಚಿತವಾಗಿ ಕುಲಕರ್ಣಿಯ ಮನೆಗೆ ಆಗಮಿಸುತ್ತಾರೆ.ಉತ್ಸವದ ದಿನ ಆರಂಭವಾಗಿದೆ.ರಥಸಪ್ತಮಿ,
ಮರುದಿನ ಭೀಷ್ಮ ಅಷ್ಟಮಿ ಶ್ರೀಅಪ್ಪಾವರ ಆಗಮನವಿಲ್ಲ.
ಇದೇನಿದು!! ಅಪ್ಪಾವರು ಬರುತ್ತೇನೆ ಅಂತ ಹೇಳಿದ್ದಾರೆ .ಇನ್ನೂ ಬರಲಿಲ್ಲ ವಲ್ಲ ಅಂತ ಕುಲಕರ್ಣಿ ಯವರಿಗೆ ಸ್ವಲ್ಪ ನಿರಾಶೆ ಆಯಿತು.
ಮರುದಿನ ಮಧ್ವ ನವಮಿ.
ಶ್ರೀಅಪ್ಪಾವರ ಆಗಮನವಿಲ್ಲ!!
ಅವಾಗ್ಗೆ ಕುಲಕರ್ಣಿ ಯವರು ಶ್ರೀ ಇಭರಾಮಪುರ ಅಪ್ಪಾವರು ಎಂದಿಗು, ಯಾವ ಭಕ್ತರಿಗು, ಯಾರಿಗೂ ನಿರಾಶೆ ಮಾಡಿಲ್ಲ. ಎಲ್ಲರಿಗೂ ಅನುಗ್ರಹ ಮಾಡಿದ್ದಾರೆ...
ಇಂದು ಏಕೆ ಹೀಗೆಆಯಿತೋ??ಏನೋ!!
ಮುಖ್ಯ ನನಗೆ ಅವರಿಗೆ ಸೇವೆ ಮಾಡುವ ಭಾಗ್ಯ ಲಭ್ಯ ಇಲ್ಲವೆಂದು ಚಿಂತಾ ಮಗ್ನರಾಗಿದ್ದರು... 
ಆದರೂ ಕಾರ್ಯಕ್ರಮ ನಿಲ್ಲುವಂತಿಲ್ಲ.
ಬೆಳಿಗ್ಗೆ ಇಂದ ಪಾರಾಯಣ ಪಠಣಾದಿಗಳು ನಡೆಯತ್ತಾ ಇದ್ದವು.ಅಡಿಗೆ ಯಾಯಿತು
ನೈವೇದ್ಯ ಸಹ ಆಗಿದೆ.
ಇನ್ನೂ ಅಪ್ಪಾವರ ಆಗಮನವಿಲ್ಲ...
ಸಮಯ ಸರಿಯಾಗಿ ಮಧ್ಯಾಹ್ನ ೧೧:೩೦ ಆಗಿದೆ
ಬ್ರಾಹ್ಮಣ ಸುವಾಸಿನಿಯರಿಗೆ ಭೋಜನಕ್ಕೆ ಎಲೆಗಳನ್ನು ಸಹ ಹಾಕಿದ್ದಾರೆ.
ಕುಳಿತವರಿಗೆಲ್ಲ ಸಾಲಾಗಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿದ್ದಾರೆ.
ಅವಾಗ ಕುಲಕರ್ಣಿ ಯವರು ಬಂದು 
"ಕೃಷ್ಣಾರ್ಪಣಮಸ್ತು" ಅಂತ ಯಾರು ಹೇಳಬೇಡಿ. ಸರಿಯಾಗಿ ೧೨:೦೦ಗಂಟೆಗೆ ಅಪ್ಪಾವರು ಬರುತ್ತೇನೆ ಅಂತ ಸ್ಪಷ್ಟವಾಗಿ ಕಾಲ ನಿರ್ದೇಶನ ಮಾಡಿ ಹೇಳಿದ್ದಾರೆ.ಇನ್ನೂ ಕೆಲ ಸಮಯ ಕಾಯುವದು ಅಗತ್ಯ ವೆಂದು ಬಂದಂತಹ ಭಕ್ತರ ಬಳಿ ವಿಜ್ಞಾಪನೆ ಮಾಡಿಕೊಳ್ಳಲು
ಎಲ್ಲಾ ರು ಆಗಬಹುದು ಅಂತ ಹೇಳುತ್ತಾರೆ.
ತಕ್ಷಣ ದಲ್ಲಿ ದೇವರ ಮನೆಯಿಂದ ಪುನುಗು ಕಸ್ತೂರಿ ಜಾಜಿ ಮುಂತಾದ ದೇವಲೋಕದ ಪರಿಮಳವು ವಾಸನೆ ಆ ಸ್ಥಳದಲ್ಲಿ ಬಂತು...
ಕಲೆತ ಜನರೆಲ್ಲ ತಕ್ಷಣ  ಇದೇನು!! ಘಮಘಮಿಸುವ ಸುವಾಸನೆ ನಿಮ್ಮ ದೇವರ ಮನೆಯಿಂದ ಎಂದು ಕುಲಕರ್ಣಿ ಅವರನ್ನು ಕೇಳುತ್ತಿದ್ದರು.
ದೇವರ ಮನೆಯ ಒಳಗಡೆ ಹೋಗಿ ನೋಡುವ ಧೈರ್ಯ ಯಾರಿಗು ಇಲ್ಲ.
ಕುಲಕರ್ಣಿ ದಂಪತಿಗಳು ಅಪ್ಪಾವರ ಸ್ಮರಣೆ ಮಾಡುತ್ತಾ ದೇವರ ಮನೆಗೆ ಹೋಗುವ ಧೈರ್ಯ ಮಾಡಿದರು.
ದೇವರ ಕಟ್ಟಿಯ ಮೇಲೆ ದೊಡ್ಡದಾದ ಘಟಸರ್ಪವು ಹೆಡೆಆಡಿಸುತ್ತಾ ಕುಳಿತಿತ್ತು..
ಅದನ್ನು ದಿಟ್ಟಿಸಿ ನೋಡಲು ಶ್ರೀ ಇಭರಾಮಪುರ ಅಪ್ಪಾವರ ಆಕೃತಿ ಅವರ ಕಣ್ಣಿಗೆ ಕಾಣಿಸಿದೊಡನೆ,ಇತರ ಜನರೆಲ್ಲ ಒಳಗಡೆ ನುಗ್ಗಿ ದರುಶನ ಪಡೆದರು.
"ಸರ್ಪವು ಅದೃಶ್ಯ ವಾಯಿತು".
ಎಲ್ಲರು ರೋಮಾಂಚಿತರಾಗಿ, ಭಕ್ತಿ ಇಂದ ಅಪ್ಪಾವರು ದರುಶನ ಕೊಟ್ಟ ದೇವರ ಜಗುಲಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.
ದೇವರ ಮನೆಯಲ್ಲಿ ಒಂದು ಎಲೆಯಲ್ಲಿ ಇದು ಶ್ರೀ ಅಪ್ಪಾವರ ಎಲೆ ಎಂದು ಹೇಳಿ ಎಲ್ಲಾ ಅಡಿಗೆ ಪದಾರ್ಥಗಳನ್ನು ಬಡಿಸಿ ಇತರ ಬ್ರಾಹ್ಮಣ ಸುವಾಸಿನಿಯರಿಗೆ ಕೃಷ್ಣಾರ್ಪಣಮಸ್ತು ಅಂತ ಹೇಳಿ ಭೋಜನಕ್ಕೆ ಕೂಡಿಸುವರು.
ಕುಲಕರ್ಣಿ ಯವರ ಆನಂದ ಹೇಳತೀರದು.
ಶ್ರೀ ಮಧ್ವ ನವಮಿ ಗೆ ಸರಿಯಾಗಿ ಮಧ್ಯಾಹ್ನ ಸಮಯದಲ್ಲಿ ಬರುತ್ತೇವೆ ಅಂತ ಹೇಳಿದ ಶ್ರೀಅಪ್ಪಾವರು "ಒಂದಂಶದಿಂದ ಶೇಷರೂಪದಿಂದ ದರುಶನ ಕೊಟ್ಟು ಅದೃಶ್ಯ ರಾದ" ಸಂಗತಿಯನ್ನು ನೆನೆದು ಬಹಳ ಸಂತೋಷ ಭರಿತರಾದರು.
ಭೌತಿಕ ದೇಹದಿಂದ ಇರುವ ಸಮಯದಲ್ಲಿ ಸಹ ಬೇರೆ ಕಡೆಗೆ ಒಂದು ಅಂಶದಿಂದ ಬಂದು ಭಕ್ತರ ಉದ್ದಾರ ಮಾಡುವದು ಮತ್ತುಸುಮನೋಹರ ಪರಿಮಳವನ್ನು ಬೀರುವದು ,ಹೀಗೆ ಮೊದಲಾದ ಅಪೂರ್ವ ಮಹಿಮೆಯನ್ನು,ಅಂದಿಗು ಮತ್ತುಇಂದಿಗು ಸಹ ತೋರುತ್ತಾ,ಭಕ್ತರು ಬೇಡಿದ ಇಷ್ಟಾರ್ಥ ಗಳನ್ನು ನೆರವೇರಿಸಿ,ಇಭರಾಮಪುರದಲ್ಲಿ ನೆಲೆಸಿರುವ ಅಪ್ಪಾವರ ಕಾರುಣ್ಯ ಬಹಳ ದೊಡ್ಡದು...
ಭಗವಂತನ ಕೃಪೆ ಇಂದ ಇಂತಹ ಅಪರೋಕ್ಷ ಜ್ಞಾನಿಗಳ ಮಹಿಮೆ ವ್ಯಾಪ್ತವಾದುದು. .
🙏ಶ್ರೀ ಕೃಷ್ಣಾರ್ಪಣಮಸ್ತು🙏
ಸಾನುರಾಗದಿ ಇವರ ಮಹಿಮೆಯ|
ಗಾನ ಮಾಡುತ ಕುಣಿದು ಹಿಗ್ಗಲು|
ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು||
🙏ಶ್ರೀ ಕೃಷ್ಣಾಚಾರ್ಯ ಗುರುಂ ಭಜೇ🙏
*




No comments:

Post a Comment