Monday, 1 July 2019

giriyacharyaru karpara narahari dasaru 1979 koppara ashada bahula trayodashi ಗಿರಿಯಾಚಾರ್ಯರು



Sri Karpara Narahari Vittala Dasaru
Original Name: Sri Koppara Giriyacharyaru
Period: 1896 - 1979
Ankita: Karpara Narahari
Preceptor: Yalameli Vittalacharya
Place: Karpara
Aradhana: Ashada Bahula Trayodashi

ಕೃಷ್ಣಾತಟೇ ನಿವಾಸಂ ತಂ ನೃಸಿಂಹಾರ್ಚನ ತತ್ಪರಂ

ಗಿರಿಯಾಚಾರ್ಯ ಗುರುಂ ವಂದೇ ಭಕ್ತೋದ್ಧಾರಕ ಮನ್ವಹಂ .


ಶ್ರೀ ರಾಯರ ಅಂತರಂಗ ಭಕ್ತರು ಹಾಗೂ ಶ್ರೀ ಅಪ್ಪಾವರ ಕರುಣಾಸುಪಾತ್ರರಾದ  ಶ್ರೀ ಕಾರ್ಪರ ನರಹರಿ ಅಂಕಿತರಾದ ಶ್ರೀ ಗಿರಿಯಾಚಾರ್ಯ ಆರಾಧನೆ.

ಹೆಸರು : ಶ್ರೀ ಗಿರಿಯಾಚಾರ್ಯರು
ತಂದೆ : ಶ್ರೀ ಭೀಮಸೇನಾಚಾರ್ಯರು
ಜನ್ಮಸ್ಥಳ : ಕೊಪ್ಪರ
ಅಂಕಿತ : ಕಾರ್ಪರ ನರಹರಿ
ಆರಾಧನೆ : ಆಷಾಢ ಬಹುಳ ತ್ರಯೋದಶೀ

ಶ್ರೀ ಗಿರಿಯಾಚಾರ್ಯರು ಶ್ರೀ ರಾಯರ ಅಂತರಂಗ ಭಕ್ತರು ಹಾಗೂ  ಅಪರೋಕ್ಷ ಜ್ಞಾನಿಗಳದ ಇಭರಾಮಪುರ ಶ್ರೀ ಅಪ್ಪಾವರ ಪರಮಾನುಗ್ರದಿಂದ ಜನಿಸಿದವರು. ಶ್ರೀ ಗಿರಿಯಾಚಾರ್ಯರು, ದ್ವೈತ ಶಾಸ್ತ್ರ ಸಂಪನ್ನರಾಗಿದ್ದ ಶ್ರೀ ಅರ್ಚಕ ಭೀಮಸೇನಾಚಾರ್ಯರ ಹಿರಿಯ ಪುತ್ರರು.

ಬಾಲ್ಯದಲ್ಲಿ ಶ್ರೀ ಯಳಮೇಲಿ ಶ್ರೀ ವಿಠಲಾಚಾರ್ಯರ ಬಳಿ ವ್ಯಾಕರಣ - ಸಾಹಿತ್ಯ - ಸಮಗ್ರ ದ್ವೈತ ವೇದಾಂತವನ್ನು ವಿಧ್ಯುಕ್ತವಾಗಿ ಅಧ್ಯಯನ ಮಾಡಿ, ವ್ಯಾಸ ವಾಙ್ಞಯದಲ್ಲಿ ಪ್ರಕಾಂಡ ಪಂಡಿತರಾಗಿ, ಕೊಪ್ಪರ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀ ನರಸಿಂಹದೇವರ ಪೂಜಾ ರೂಪವಾದ ತಪಸ್ಸನ್ನು ಆಚರಿಸಿದ ಮಹನೀಯರು.

ಶ್ರೀ ಗಿರಿಯಾಚಾರ್ಯರು ಶ್ರೀ ಕಾರ್ಪರ ನರಹರಿ ಅಂಕಿತದಿಂದ ನೂರಾರು ಸ್ತೋತ್ರಪದಗಳನು ರಚಿಸಿ ದಾಸ ಪರಂಪರೆ ಮುಂದುವರೆಸಿ , ದಾಸ ಸಹಿತ್ಯಾಕೆ ಅಪಾರಕೊಡುಗೆ ನೀಡಿದ್ದಾರೆ.
**

ಕಾರ್ಪರ ನರಹರಿದಾಸರು ರಚಿಸಿದ ಪ್ರಸಿದ್ಧ ಕೃತಿಗಳು

ಇಂದು ಆರುತಿ ತಂದು ಬೆಳಗಿರೆ
 ಸಿಂಧುರಾಜನ ಕುವರಿಗೆ
ಸಿಂಧು ರಾಜನ ಕುವರಿಗೆ 
ಅರವಿಂದ ನಾಭನ ಮಡದಿಗೆ || ಪ ||

ಅಂದು ಸುರಕೃತ ಸಿಂಧು ಮಥನದಿ ಬಂದು
ನೋಡುತ ಕೃಷ್ಣಗೆ
ವಂದಿಸುತ ಪೂಮಾಲೆ ಹಾಕಿದ
ನಂದಗೋಪಕುಮಾರಗೆ || 1 ||

ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ 
ಸುರರೊಳು ಕೃಷ್ಣಗೆ
ಇಲ್ಲ ಸಮರೆಂತೆಂಬುದನು ಜಗಕೆಲ್ಲ 
ತೋರಿದ ದೇವಿಗೆ || 2 ||

ವಾರವಾರದಿ ಚಾರುಪದಯುಗ 
ಸಾರಿಭಜಿಸುವ ಜನರಿಗೆ 
ಆ-ಪಾರ ಸೌಖ್ಯಗಳೀವ 
ಕಾರ್ಪರ ನಾರಸಿಂಹನ ರಾಣಿಗೆ || 3 ||


ಇಂದು ಆರತಿ ತಂದು ಬೆಳಗಿರೆ ಇಂದಿರಾವರಗೆ
ಮಂದರಧರಗಿಂದು  || ಪ || 

ನಂದಸುತನಿಗೊಂದಿಸುತಲಿ ಸಿಂಧು ಶಯನಗೆ
ಕುಂದರದನೆ  || ಅ.ಪ ||

ನಂದಿ ವಾಹನ ವಂದಿತ ದಶ
ಕಂಧರಾಂತಗೆ ಕುಂದರದನೆ
ವಂದಿಸುವರ ಬಂಧ ಬಿಡಿಶ್ಯಾ
ನಂದಗರಿವಗೆ ಮಂದಗಮನೆ  || 1 ||

ಅಂಗನೆಯರು ಶೃಂಗಾರದಲಿ
ಸಂಗೀತ ಪ್ರಿಯಗೆ ಭೃಂಗಾಲಕಿ
ಗಂಗಾಪಿತ ಮಂಗಳಾಂಗ ವಿ-
ಹರಿಗ ವಾಹನಗೇ ತಿಂಗಳಮುಖಿ || 2 ||

ನಾರಿಯಳ ನುದ್ಧಾರ ಮಾಡಿದ
ಚಾರು ಚರಣಗೆ ನಾರಿ ಮಣಿಯೆ
ಸೇರಿದವರ ಪೊರೆವ ಕಾರ್ಪರ
ನಾರಶಿಂಹಗೆ ಭೂರಿಮಹಿಮಗಿಂದು || 3 ||
 **

ವೀರನ ನೋಡಿರೈ ನರಮೃಗಾಕಾರನ ಪಾಡಿರೈ || ಪ ||
ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ
ಭಕುತರ ಪೊರೆವಾ || ಅ.ಪ ||

ಚಾರು ಚರಣಯುಗಳಾರಾಧಿಸುವರ ದುರಿತ ತಿಮಿರಕೆ ಸವಿತ
ವಾರಿಜಭವ ತ್ರಿಪುರಾರಿ ಮುಖಸುರ ವ್ರಾತ ಸೇವಿತ ತ್ವರಿತ
ನಾರಾಯಣ ಮುನಿ ಪೂಜೀತ ಪದ
ಮಧ್ಬಂಧು ಪೊರೆಯೊನೀನೆಂದು
ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ || 1 ||

ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ
ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ-
ಕ್ಷಾಗ್ರದಲಿ ಭಾರ್ಗವಿ ರಮಣನನುಗ್ರಹಿಸಲು ಭಕುತರನ ಪ್ರಕಟನಾಗಿಹನ || 2 ||

ಸ್ಥಿರಚರದೊಳು ತನ್ನಿರುವಿಕೆಯೆನು ಬುಧಜನಕೆ
ತೋರಿಸುವದಕೆ
ಸುರುಚಿರ ಷೋಡಶಕರಗಳಿಂದಾಯುಧ ಧರಿಸಿ
ಅಸುರನ ಮಥಿಸಿ
ತರುಮೂಲದಳೊವತರಿಸಿ ಚಕ್ರಾಂಕಿತಶಿಲದಿ
ನೆಲಸಿಕರುಣದಿ
ಶರಣು ಜನಕೆ ಪರಿಹರಿಸ್ಯಭಯ ನೀಡುವನ
ದಿವಿಜರೊಡೆಯನ || 3 ||

ಕ್ಷೋಣಿಯೋಳಿಸು ಸ್ಥಾನದರ್ಶನದಿ ಮನುಜನ
ಪೋಪುದು ವೃಜಿನ ಸ್ಥಾನದ ಮಹಿಮೆ ಪುರಾಣದಿ ಪೇಳಿರುವದನತಿಳಿವದು ಮುನ್ನ
ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ ಸ್ನಾನ ಜಪಾನುಷ್ಠಾನ ಮಾಳ್ವರಿಗೆ ಒಲಿವ ಹೃದಯದಿ ಪೊಳಿವ || 4 ||

ಚಾರು ಶ್ರೀಕೃಷ್ಣಾತೀರದಿ ಮೆರೆವಾಶ್ವತ್ಥ
ತರುವರ ಸಂಸ್ಥಾನಾರದ ಮುನಿ ಸಂಕೀರ್ತಿತ ಪಾವನ
ಚರಿತ ತ್ರಿಗುಣಾತೀತ
ಕಾರ್ಪರ ನಿಲಯ ಶ್ರೀನಾರಸಿಂಹನ
ಪದಯುಗಲ ಬಿಡದನುಗಾಲ
ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ || 5 ||
***

ಕಾರ್ಪರ ನರಹರಿದಾಸರು ಶ್ರೀ ಅಪ್ಪಾವರ ಮೇಲೆ ರಚಿಸಿದ ಕೃತಿ

ಸ್ಮರಿಸುವ ನರನೇ ಧನ್ಯ ಸನ್ಮಾನ್ಯ || ಪ ||
ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮ
ಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ ||ಅ.ಪ ||

ಭರತ ಭೂಮಿಯೊಳವತರಿಸಿ ದೇವಾಂಶದಿ
ಪುರುಹೂತನಂತೆ ಗಜಾಂತ ವೈಭವದಿಂದ
ಮೆರೆಯುತ ತಮ್ಮಯ ಚರಣಾರಾಧಕರನು-
ದ್ದರಿಸಲೋಸುಗದಿ ಸಂಚರಿಸುತ ಮುದದಿ
ಸಂದರುಶನದಿಂಧಾಘವ ಕಳೆದು ಬಲು
ಕರುಣದಲಿಷ್ಟಾರ್ಥವ ಗರಿದು ಬಹು ಶರಣು ಜ-
ನರ ಪೊರೆವ ಭೂಸುರರೊಳು ಮರುತ ಮತಾಬ್ಧಿ
ಚಂದಿರನೆನಿಸಿದವರ |

ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ
ಶಿರಪರಿಯಂತರ ಗುರುಗಳಾಕೃತಿಯನ್ನು
ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ
ಪರಿಶೋಭಿಸುವ ರತ್ನಾಭರಣದಿಂದೋಪ್ಪುವ
ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ
ಸುಂದರವಾದ ಮುಖದೊಳು ಮಂದಸ್ಮಿರ
ಕಸ್ತೂರಿಯಂತೆ ಪರಿಮಳಾನ್ವಿತ ಶರೀರ
ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ |

ಚಿರಕಾಲ ಶೇವಿಪ ಪರಮ ವಂಧ್ಯರಿಗೆಲ್ಲ
ವರಪುತ್ರ ಸೌಖ್ಯವ ಕರುಣಿಸುವರು ಸತ್ಯ
ಅಪರಿಮಿತ ಮಹಿಮರೆಂದರಿಯದೆ ಇವರನ್ನು
ಜರಿಯಲಾಕ್ಷಣದಲಿ ಅರಿತು ಭೀಕರವಾದ
ಉರಗರೂಪವ ತೋರುತ ತ್ಯಜಿಸಿ ಮತ್ತೆ
ನಿಜರೂಪದಿಂದಿರುತ ನೋಳ್ಪರಿಗತ್ಯಾಶ್ಚರ್ಯ ಸದ್ಗುಣಭರಿತ  ಕಾರ್ಪರ ನರಹರಿಯ ಪರೋಕ್ಷದಿ ನಿರುತ ಸುಖಿಪರಂಘ್ರಿ |
***

ಶ್ರೀ ಗಿರಿಯಾಚಾರ್ಯರಿಗೆ ಹಲವಾರು ಶಿಷ್ಯ ಸಂಪತ್ತು ಅದರಲ್ಲಿ ಪ್ರಮುಖರು ರಾಘವೇಂದ್ರಾಚಾರ್ ಗುಡೇಬಲ್ಲುರು ,ರಂಗನಾಥ ರಾವ್ ಕುರಕುಂದಿ
, ವಸಂತ ರಾವ್ ಶಿಕ್ಷಕರು ,ವಿಪ್ರಶ್ರೀ ಜಯಲಕ್ಷ್ಮಿ ಮಂಗಲಮೂರ್ತಿ (ಗಿರಿಯಾಚಾರ್ಯರ ಮೊಮ್ಮಗಳು).

ಶ್ರೀಗಿರಿಯಾಚಾರ್ಯರು ಬಹುಕಾಲ ಕೊಪ್ಪರ ಕ್ಷೇತ್ರದಲ್ಲಿಯೇ ತಮ್ಮ ಉಪಸ್ಯಮೂರ್ತಿಯಾದ ಕೊಪ್ಪರ ಶ್ರೀ ನರಸಿಂಹ ದೇವರ ನಿತ್ಯ ಪೂಜೆ ಸಲ್ಲಿಸುತ್ತಾ 1980 ಆಷಾಢ ಬಹುಳ ತ್ರಯೋದಶೀ ದಿನದಂದು ಶ್ರೀ ಕಾರ್ಪರೇಶನಲ್ಲಿ ಐಕ್ಯರಾದರು.
ಶ್ರೀ ಇಭರಾಮಪುರಾಧೀಶ
*****

from kannadasiri.com

ಕಾರ್ಪರ ನರಹರಿದಾಸರು ಅನೇಕೆ ಕೀರ್ತನೆಗಳನ್ನು, ಬಯಲಾಟದ ಹಾಡುಗಳನ್ನು ರಚಿಸಿದ್ದಾರೆ. ರಾಯಚೂರಿನ ಕೋಟೆ ಭಜನಾ ಮಂಡಳಿಯವರು ಈಗಾಗಲೇ ಇವರ ಒಂದನೂರಾ ಹದಿನಾಲ್ಕು ಕೀರ್ತನೆÀಗಳನ್ನು 1984ರಲ್ಲಿ ಪ್ರಕಟಿಸಿದ್ದಾರೆ. ಕಾರ್ಪರ ನರಹರಿದಾಸರ ಮಕ್ಕಳಾದ ಶ್ರೀ.ಕೆ ಜಯಾಚಾರ್ಯ ಹಾಗೂ ದಾಸರ ಅಳಿಯಂದಿರಾದ ಶ್ರೀ ಕೆ.ಎನ್.ಆಚಾರ್ಯ ಇವರು ಸಂಗ್ರಹಿಸಿದ ಹಸ್ತ ಪ್ರತಿಗಳನ್ನು ಇಲ್ಲಿ ಆಧಾರವಾಗಿಟ್ಟುಕೊಳ್ಳಲಾಗಿದೆ. ಇವೆರಡೂ ಆಕರಗಳಿಂದ ಶುದ್ಧ ಪಾಠವನ್ನು ಗುರಿತಿಸಿ ಇತ್ತೀಚೆಗೆ ದೊರೆತ ಅವರ ಆರು ಕೀರ್ತನೆಗಳನ್ನು ಇದಕ್ಕೆ ಜೋಡಿಸಿ ಕಾರ್ಪರ ನರಹರಿದಾಸರ ಒಟ್ಟು ನೂರಾಇಪ್ಪತ್ತು ಕೀರ್ತನಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

18-19ನೇ ಶತಮಾನದ ಸಂದರ್ಭದಲ್ಲಿ ಮೂಡಿ ಬಂದ ಈ ಕಲ್ಯಾಣ ಹಾಗೂ ಪರಿಣಯಕ್ಕೆ ಸಂಬಂದಪಟ್ಟ ಕಥಾವಸ್ತು ಹೆಚ್ಚು ಕುತೂಹಲವನ್ನುಂಟು ಮಾಡುತ್ತದೆ. ವೆಂಕಟೇಶ, ಶಿವ, ಧ್ರುವ, ಪ್ರಹ್ಲಾದ, ಈ ಮೊದಲಾದ ಮಹಿಮರನ್ನು ಈ ಕವಿ ಸಾಮಾನ್ಯ ಜನತೆಯಲ್ಲಿರುವ ಭಕ್ತಿಯ ಅನಂತತೆಯಲ್ಲಿ ಕಂಡುಕೊಳ್ಳುತ್ತಾರೆ. ಹೀಗಾಗಿ ಈ ಶಿವ ವೆಂಕಟೇಶರು ನಮ್ಮ ಸುತ್ತು ಮುತ್ತಲಿನ ಮಹತ್ವದ ಸಾಧಕರಂತೆ ಕಾಣಿಸುತ್ತಾರೆ. ಹೀಗೆ ಪುರಾಣವನ್ನು ವಾಸ್ತವದ ಮೂಲಕ ಕಟ್ಟಿಕೊಡುವ ಅನಂತಾದ್ರೀಶರ ಕಥನಕವನಗಳು ದಾಸ ಸಾಹಿತ್ಯ ಪರಂಪರೆಯಲ್ಲಿಯೇ ವಿಶಿಷ್ಟ ರಚನೆಗಳಾಗಿ ಕಾಣಿಸಿಕೊಳ್ಳುತ್ತವೆ. ಇಂತಹುದೇ ಪರಂಪರೆಯನ್ನು ಮುಂದುವರೆಸಿದ ಕಾರ್ಪರ ನರಹರಿ ದಾಸರು ಸಮಗ್ರ ಭಾಗವತ ಪುರಾಣವನ್ನು ಕೇವಲ 18 ನುಡಿಗಳಲ್ಲಿ ಕಟ್ಟಿಕೊಟ್ಟಿರುವುದು ಅವರ ಕಥನಕಲೆಗೆ ಸಾಕ್ಷಿಂiÀiಂತಿದೆ. ಅನಂತಾದ್ರೀಶರು, ಹೆನ್ನೆರಂಗದಾಸರ ಹಾಗೂ ಅಸ್ಕಿಹಾಳ ಗೋವಿಂದದಾಸರ ಕೀರ್ತನೆಗಳಲ್ಲಿ ಈ ಪ್ರದೇಶದ ಭಾಷೆ ಮೈಕೊಡವಿ ನಿಂತಿದೆ. ಅನೇಕ ಲಾವಣಿ, ಬಯಲಾಟಗಳನ್ನು ಬರೆದಿರುವ ಗೋವಿಂದ ದಾಸರು ಜನಪದ ನುಡಿಗಟ್ಟಿನ ಮೂಲಕ ಕೀರ್ತನ ಪರಂಪರೆಯನ್ನು ಬೆಳೆಸಿರುವುದು ಕುತೂಹಲಕಾರಿಯಾದ ಸಂಗತಿಯಾಗಿದೆ.
***



" ಶ್ರೀ ಕಾರ್ಪರ ನರಹರಿ - 1 "
" ದಿನಾಂಕ :18.07.2020 ಶನಿವಾರ ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಶ್ರೀ ಶುಕಾಚಾರ್ಯರ ಅಂಶ ಸಂಭೂತರೂ -  ಕಾರ್ಪರ ನರಹರಿ ಅಂಕಿತರೂ ಆದ ಶ್ರೀ ಗಿರಿಯಾಚಾರ್ಯ ಆರಾಧನೆ "
ಹೆಸರು : ಶ್ರೀ ಗಿರಿಯಾಚಾರ್ಯರು
ತಂದೆ : ಶ್ರೀ ಭೀಮಸೇನಾಚಾರ್ಯರು
ಜನ್ಮಸ್ಥಳ : ಕೊಪ್ಪರ
ಕಾಲ : ಕ್ರಿ ಶ 1896 - 1979
ಅಂಕಿತ : ಕಾರ್ಪರ ನರಹರಿ
ಸಹ ಪಾತಿಗಳು :
ಶ್ರೀ ಅಕ್ಷೋಭ್ಯ ತೀರ್ಥ ಮಠದ 
ಶ್ರೀ ರಾಮಧ್ಯಾನ ತೀರ್ಥರು ( ಪೂರ್ವಾಶ್ರಮದಲ್ಲಿ )
ಶ್ರೀ ಮಣೂರು ಮಧ್ವಾಚಾರ್ಯರು 
ಶ್ರೀ ಕಲ್ಲೂರು ಕೃಷ್ಣಾಚಾರ್ಯರು 
" ಸದ್ಗುಣಗಳ ಸಾಕಾರಮೂರ್ತಿ "
ಶ್ರೀ ಆಚಾರ್ಯರು ಅಪೂರ್ವ ವಿದ್ವತ್ತು ಹೊಂದಿದ್ದರೂ ನಿಗರ್ವಿಗಳು. 
ಸೌಜನ್ಯ - ಕರುಣಾಮಯಿ - ಸಹೃದಯೀ - ಸೌಶೀಲ್ಯವೇ ಮೈವೆತ್ತಂತಿದ್ದ ಮುಗ್ಧ ಮನಸ್ಸಿನವರು. 
ಅವರ ಸನ್ನಡತೆ - ಶುದ್ಧಾಂತಃಕರಣದ ನುಡಿ ಮತ್ತು ನಡೆ - ತಮ್ಮ ಉದಾರ ಉದಾತ್ತ ಸದ್ಗುಣಗಳಿಂದ ಕೂಡಿದ ಮಾನವೀಯ ಮೌಲ್ಯಗಳ ತಪೋನಿಧಿಯಂತೆ ಬಾಳಿದ ಮಹಾ ಮಹಿಮರು. 

ಶ್ರೀ ಆಚಾರ್ಯರು ವೇದ - ವೇದಾಂತ - ವ್ಯಾಕರಣ - ಸಾಹಿತ್ಯ ಶಾಸ್ತ್ರದಲ್ಲಿ ಅತ್ಯದ್ಭುತ ಪ್ರಾವೀಣ್ಯತೆಯನ್ನು ಹೊಂದಿದ್ದರು. 

ಪರಮ ವೇದಾಂತಿಗಳೂ - ಸದ್ವೈಷ್ಣವ ದೀಕ್ಷಾ ಧುರೀಣರೂ - ಸತ್ತತ್ತ್ವ ಪ್ರಸಾರಕರೂ - ಭಾಗವತ ಧರ್ಮಾಚರಣ ಬದ್ಧರೂ - ಆಚಾರ್ಯ ಶ್ರೇಷ್ಠರೆಂದು ಪ್ರಸಿದ್ದರಾದವರು  ಪ್ರಾತಃ ಸ್ಮರಣೀಯ ಪರಮಪೂಜ್ಯ  ಪರಮಪೂಜ್ಯ ಶ್ರೀ ಗಿರಿಯಾಚಾರ್ಯ ಕೊಪ್ಪರ.
ರಾಯಚೂರಿನ ಸುತ್ತಮುತ್ತಲಿನ ಪ್ರಾಂತದವರು ಪರಮಪೂಜ್ಯ ಶ್ರೀ ಗಿರಿಯಾಚಾರ್ಯರನ್ನು " ಕಲಿಯುಗದ ಋಷಿ " ಗಳೆಂದೇ ಆರಾಧಿಸುತ್ತಾರೆ.
ಗೃಹಸ್ಥಾಶ್ರಮಿಗಳು ಆಗಿದ್ದರೂ ಇವರ ಸಾರ್ಥಕ ಜೀವನವು " ಬಿಳಿ ಶ್ಯಾಟಿಯ " ಸ್ವಾಮಿಗಳೆಂದೇ " ಗೌರವಾದರ " ಗಳನ್ನು ಪಡೆದಿದ್ದಾರೆ.  
ತಪೋನಿಧಿಗಳೂ, ಜ್ಞಾನವೃದ್ಧರೂ ಆದ ಶ್ರೀ ಗಿರಿಯಾಚಾರ್ಯರು ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಕೇಸರಿ ಅಂಶ ಸಂಭೂತರಾದ ಇಭ್ರಾಮಪುರ ಅಪ್ಪಾವರ ಪರಮಾನುಗ್ರದಿಂದ ಜನಿಸಿದವರು. 
ಇವರು ಶ್ರೇಷ್ಠ ಪೌರಾಣಿಕರೂ ಆಗಿದ್ದರು. 
ಇವರು ಶ್ರೀ ಕ್ಷೇತ್ರ ಕೊಪ್ಪರ ನರಸಿಂಹದೇವರ ಅರ್ಚಕರು. 
ಶ್ರೀ ನರಸಿಂಹನೇ ಇವರ ಕುಲದೈವ. 
ಆಚಾರ್ಯರ ಪ್ರತಿಯೊಂದು ಕೃತಿಯೂ ಪ್ರಮೇಯಭರಿತವಾಗಿವೆ.
" ವಿದ್ಯಾಭ್ಯಾಸ "
ಶ್ರೀ ಗಿರಿಯಾಚಾರ್ಯರು - ಶ್ರೀ ರಾಯರ - ಶ್ರೀ ಅಪ್ಪಾವರ ಅಂತರಂಗ ಭಕ್ತರೂ - ಕಾರುಣ್ಯಪಾತ್ರರಾದ ಯಳಮೇಲಿ ಶ್ರೀ ವಿಠ್ಠಲಾಚಾರ್ಯರ ಹತ್ತಿರ ವ್ಯಾಕರಣ - ಸಾಹಿತ್ಯ - ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನ ಮಾಡಿ - ಗೀರ್ವಾಣ ಭಾಷ ಕೋವಿದರಾದರು.
" ಸಹಪಾಠಿಗಳು "
ಶ್ರೀಮದಕ್ಷೋಭ್ಯತೀರ್ಥ ಮಠದ ಶ್ರೀ ರಾಮಧ್ಯಾನತೀರ್ಥರು [ ಪೂರ್ವಾಶ್ರಮದಲ್ಲಿ ]
ಶ್ರೀ ಮಣೂರು ಮಧ್ವಾಚಾರ್ಯರು
ಶ್ರೀ ಕಲ್ಲೂರು ಕೃಷ್ಣಾಚಾರ್ಯರು
" ಸಾತ್ವಿಕ ಸೌಶೀಲ್ಯರು "
ಪರಮಪೂಜ್ಯ ಶ್ರೀ ಆಚಾರ್ಯರು ಪಂಡಿತೋತ್ತಮರು ಆಗಿದ್ದರೂ ನಿಗರ್ವಿಗಳು.
ಕರುಣಾಮಯಿಗಳು - ಸೌಜನ್ಯ - ಸಹೃದಯತೆ - ಸೌಶೀಲ್ಯವೇ  ಮೈವೆತ್ತಂತಿದ್ದ ಪರಮಪೂಜ್ಯ  ಶ್ರೀ ಆಚಾರ್ಯರ ಕೀರ್ತಿ - ಪ್ರತಿಭೆ - ಸಾತ್ವಿಕ ನಡೆ ನುಡಿಗಳುಳ್ಳವರೂ - ಮಿತಭಾಷಿಗಳೂ ಮೊದಲಾದ ಸದ್ಗುಣಗಳ ಖಣಿ.
" ಶಿಷ್ಯರು '
ಶ್ರೀ ರಾಮಭದ್ರಾಚಾರ್ಯರು [ ಅಂಕಿತ : ರಂಗನಾಥ ]
ಶ್ರೀ ವಸಂತರಾವ್, ಶಿಕ್ಷಕರು [ ಅಂಕಿತ : ವೆಂಕಟೇಶ ]
" ಸಾಹಿತ್ಯ ವಿಮರ್ಶೆ "
ಸಂಸ್ಕೃತದ ಉದ್ಧಾಮ ಪಂಡಿತರಾಗಿದ್ದರೂ, ತಿರುಳುಗನ್ನಡ ಶೈಲಿಯಲ್ಲಿ ಮನೋಜ್ಞ ಕೀರ್ತನೆಗಳನ್ನು ಕಟ್ಟುವುದು ಶ್ರೀ ಗಿರಿಯಾಚಾರ್ಯರ ವೈಶಿಷ್ಟ್ಯವಾಗಿದೆ.
ದ್ರಾಕ್ಷಾ ಪಾಕದಲ್ಲಿ ಸಂಸ್ಕೃತದ ಪುರಾಣ, ಉಪನಿಷತ್ತುಗಳ ಸಾರವನ್ನೆಲ್ಲಾ ಕನ್ನಡೀಕರಿಸುವ ಹದ ಹವಣಗಳು ಶ್ರೀ ಗಿರಿಯಾಚಾರ್ಯರಲ್ಲಿ ಅನ್ಯಾದೃಶ್ಯವಾಗಿದೆ.
ಶ್ರೀ ಕಾರ್ಪರ ನರಹರಿ ಅವರ ಕೃತಿಗಳಲ್ಲಿ ಸಾಹಿತ್ಯದ ರಸೋತ್ಕಟತೆಯು ವೇದಾಂತದ ಸಮ ತೂಕದಲ್ಲಿ ಬೆರೆತು ಹೊಸ ಪಾಕವನ್ನೇ ನಿರ್ಮಾಣ ಮಾಡಿದೆ.
ಇತ್ತೀಚಿನ ಶಾಸ್ತ್ರ ಸಾಹಿತ್ಯಗಳ ಪ್ರಭುತ್ವದ ಪ್ರೌಢಿಮೆಯಿಂದ ಹರಿದಾಸ ಸಾಹಿತ್ಯವನ್ನು ಬಳಿಸಿ - ಬೆಳಗಿಸಿದ ಧೀರ ಧೀಮಂತ ದಾಸರೆಂದರೆ ' ಶ್ರೀ ಕಾರ್ಪರ ನರಹರಿ ಅಂಕಿತ ಶ್ರೀ ಗಿರಿಯಾಚಾರ್ಯರು!!
ಆರಾಧನೆ : 
ಆಷಾಢ ಬಹುಳ ತ್ರಯೋದಶೀ
" ವಿಶೇಷ ವಿಚಾರ " 
ಶ್ರೀ ಕಾರ್ಪರ ನರಹರಿ ದಾಸರನ್ನು ಶ್ರೀ ಶುಕಾಚಾರ್ಯರ ಅವತಾರರೆಂದು ಬಲ್ಲವರು ಹೇಳುತ್ತಾರೆ. 
ಈ ಕುರಿತು ಚೆಚ್ಚಿನ ಸಂಶೋಧನೆ ಅಗತ್ಯವಿದೆ.
***
" ಶ್ರೀ ಕಾರ್ಪರ ನರಹರಿ - 2 "
ಶ್ರೀ ಆಚಾರ್ಯರ ಕೃತಿಗಳನ್ನು ಸಜ್ಜನರ ಮಾಹಿತಿಗಾಗಿ....
" ಶ್ರೀ ಶೇಷದಾಸರ ಸ್ತುತಿ "
ರಾಗ : ಶಂಕರಾಭರಣ   ತಾಳ : ರೂಪಕ
ದಾಸರಾಯ ಪೋಷಿನೆನ್ನನ್ನು । 
ಪ್ರಾರ್ಥಿಸುವೆ ।
ಶೇಷದಾಸವರ್ಯ 
ಪೋಷಿಸೆನ್ನನು  ।। ಪಲ್ಲವಿ ।।
ಪೋಷಿಸೆನ್ನ ಮನದಿ ಬಹ ।
ದೋಷಗಳನು ತರಿದು । ಇಂದಿ ।
ರೇಶನಂಘ್ರಿ ಧ್ಯಾನವ ಪ್ರತಿ ।
ವಾಸರದಲಿ ಒದಗುವಂತೆ ।। ಅ. ಪ ।।
ದೇಶ ದೇಶಗಳಲಿ ಭಜಿಪ ।
ದಾಸ ಜನರ ಮನದ । ಅಭಿ ।
ಲಾಷೆಗಳನು ಸಲಿಸುತಲಿ । ಸು ।
ರೇಶನಂತೆ ಮೆರೆದ ಶೇಷ  ।। ಚರಣ ।।
ಮಂದನಾದರೂ ನಿಮ್ಮಯ ಪದ ।
ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।
ನೆಂದು ಕರೆಸುವೆನು ಯೆನುತ ನಾ ।
ವಂದಿಸುವೆ ಸುಜ್ಞಾನವಿತ್ತು  ।। ಚರಣ ।।
ಕರುಣ ಶರಧೆ ನಿಮ್ಮ ನಾನು ।
ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।
ಳಿರದೆ ಪೋಪವು ಶರಣು ಜನರ ।
ದುರಿತ ಘನಕೆ ಮರುತರೆನಿಪ  ।। ಚರಣ ।।
ಈ ಮಹಿಯೊಳಗಾದಿ ಶಿಲೆಯ ।
ಸ್ವಾಮಿಯ ಪದದಿನೆ ತ್ರಿಪಥ ।
ಗಾಮಿನಿಯಳ ತೋರಿ ಸ್ವಜನ ।
ಕಾಮಿತವ ಪೂರೈಸಿದಂತೆ  ।। ಚರಣ ।।
ಶೇರಿದ ಪರಿವಾರಕ್ಕೆ ಸುರ ।
ಭೂರುಹವೆಂದೆನಿಸುವಂಥಾ ।
ಪಾರ ಮಹಿಮ ಕಾರ್ಪರ ಸಿರಿ ।
ನರಸಿಂಹನ ನೊಲಿಸಿದಂಥಾ  ।। ಚರಣ ।।
**
" ಶ್ರೀ ರಾಘವೇಂದ್ರ ಸ್ತುತಿ "
ರಾಗ : ಸಾವೇರಿ ತಾಳ : ಆದಿ
ಬಂದರಾ ರಾಘವೇಂದ್ರ-
ರಾಯರು ಮಂತ್ರ ।
ಮಂದಿರವೆಂಬೀ ಸ್ಥಳಕೆ 
ವಿಭವದಿ ।। ಪಲ್ಲವಿ ।।
ಇಂದು ಭಜಕ ದ್ವಿಜ 
ವೃಂದಕೆ । ಪರಮಾ ।
ನಂದ ಗರೆಯಲು 
ಸ್ಯ೦ದಣವೇರಿ ।। ಅ ಪ ।।
ಸ್ಯ೦ದಣವೇರಿ ಧನಂಧಣ 
ವಾದ್ಯದಲಿ । ಪೌರ ಜನ ।
ಸಂದಣಿಸಿತು ಆನಂದದಿ 
ನೋಡುತಲಿ ।
ಪ್ರಾರ್ಥಿಪರು ಮುಗಿಯುತಲಿ 
ಕೈಯ್ಯಾ - ಕವಿಗೇಯಾ ।
ಶುಭಕಾಯಾ ಸುಧೀಂದ್ರ 
ತನಯಾ ।।
ಗುರುವರ ಮಧ್ವ 
ಮುನೀ೦ದ್ರರಾ । ಸುಮ ।
ತಾಂಬುಧಿ ಚಂದಿರ - 
ಅತಿ ಸುಂದರ ।
ವೃಂದಾವನದಲಿ 
ನಿಂದಿಹರೆಂದರಿ ।
ತೊಂದಿಪರಿಗೆ ಭವ 
ಬಂಧವ ಬಿಡಿಸಲು ।। ಚರಣ ।।
ಸಡಗರದಲಿ ಬಿಳಿಗೊಡೆ 
ಚಾಮರ ವ್ಯಜನಾದಿಗಳನು ।
ಪಿಡಿದು ಸೇವಿಸುವ 
ಎಡಬಲದಲಿ ಸುಜನಾ ।
ಸಚ್ಛಾಸ್ತ್ರ ವೇದ 
ಪುರಾಣ ಪ್ರವಚನ ।
ಪಾವನ್ನ ಗುರುಗಳ 
ಗುಣಸ್ತವನ ।।
ಮಾಡುವಾ ವರಗಳ 
ಬೇಡುವಾ । ಕುಣಿಕುಣಿ ।
ದಾಡುವಾ ಪಡುವಾ ।
ಪೊಡವಿನಿರ್ಜರರ 
ಗಡಣವ ವೀಕ್ಷಿಸಿ ।
ಬಿಡದೆ ಪೊರೆವೆನೆಂದು ಕಡು 
ವೈಭವದಲಿ ।। ಚರಣ ।।
ಥಳಿಥಳಿಸುತ ಕಂಗೊಳಿಸುವ 
ಮಣಿಮಕುಟದಿಂದ । ದಿ ।
ಗ್ವಲಯ ಬೆಳಗುತಿಹ 
ಚೆಲುವ ಮುಖದ ಮಾಟಾ ।
ಗಳದಲ್ಲಿ ಮೌಕ್ತಿಕ ಹಾರ 
ಕೇಯೂರ ನೂಪುರ । ಸ ।
ರ್ವಾಲಂಕಾರ ವಿಲಸಿತ ।। ಮಂ ।।
ಗಳ ಗಾತ್ರದಿ ಪೊಳೆಯುತ ಭಜಕರ ।
ಕಲುಷಾಭ್ರಮಕೆ ಮಾರುತರೆನಿಸುತ ।
ಇಳೆಯೊಳು ಪಂಡಿತ 
ಯಲಿಮೇಲಾರ್ಯರಿ ।
ಗೊಲಿದು ಭಕುತ ವತ್ಸಲ-
ರೆಂದೆನಿಸಿಸುತ ।। ಚರಣ ।।
ಮಂಗಳ ತುಂಗ ತರಂಗಿಣಿ 
ತೀರದಲ್ಲಿ ಭಕುತ । ಜನಂ ।
ಗಳಿಗೆ ನಿಖಿಳಾರ್ಥಂಗಳ
ಸಲಿಸುತಲೀ ।
ಪಾಲಿಸುವ ದೇವ ಸ್ವಭಾವ 
ಶರಣರ ಸಂಜೀವಾ । ಕರ ।
ದಲ್ಲಿಗೆ ಬರುವ 
ಎನ್ನುತ ತುತಿಪರ ।।
ದೃಗ್ಬಾಷ್ಯವ ಸುರಿಸುತ 
ಮೈ ಮೆರೆಯುತ ।
ಬಲು ನಿರ್ಮಲಾನಂತರಾಗಿ 
ತವಪದಂ ।
ಗಳ ಸ್ಮರಿಪರ ಸಂಘಕೆ 
ಸತತ ಸುಮಂಗಳವೀಯಲು ।। ಚರಣ ।।
ಪುರದರಸನು ತನ್ನ ಸಿರಿ 
ಪರಿವಾರದಲಿ ಚಲಿಸುತ ।
ಬರುತ ಕಾಣುತಲೇ ಗುರುವರ ।
ಚರಣದಲಿ ಕಾಣಿಕೆಯನಿತ್ತು 
ಶಿರ ಬಾಗಿ ಚೆನ್ನಾಗಿ ।
ಆರುತಿಯ ಬೆಳಗಿ ಬರುತಿರೆ 
ರಥ ಸಾಗಿ ।।
ತೋರುವ ನೋಳ್ಪರ 
ನಯನಕೆ ಪರಮೋತ್ಸವ ।
ಶರಣರ ವಾಂಛಿತಗಳ 
ಗರೆಯುವ ।
ಪೊರೆಯುವ ಧರೆಯೊಳು 
ಮೆರೆಯುವ ಸಿರಿ । ಕಾ ।
ರ್ಪರ ನರಹರಿಯ ನೊಲಿಸಿರುವ 
ಗುರು ಪ್ರಹ್ಲಾದರು ।। ಚರಣ ।।
ರಾಗ : ದಕ್ಷಿಣಾದಿ ಭೈರವಿ ತಾಳ : ಆದಿ
ಗುರು ರಾಘವೇಂದ್ರ ಕರುಣಿಸೋ 
ತವ ಚರಣ ಸ್ಮರಣೆಯ ।। ಪಲ್ಲವಿ ।।
ಶರಣ ಜನಕೆ ಸುರತರು-
ವೆಂದೆನಿಸುತ ।
ವರ ಮಂತ್ರಾಲಯ ಪುರದಿ 
ಮೆರೆವ ಶ್ರೀಮದ್ ।। ಚರಣ ।।
ನಂದತೀರ್ಥರ ಮತ 
ಸಿಂಧುವಿಗೆ ಪೂರ್ಣ ।
ಚಂದ್ರ ನೆನಿಸಿದ ಸುಧೀಂದ್ರ 
ಕರೋದ್ಭವ ।। ಚರಣ ।।
ಧರೆಯೊಳು ಶರಣರ 
ಪೊರೆಯುವ । ಕರ್ಪರ ।
ನರಹರಿಯ ನೊಲಿಸಿದ 
ಪರಿಮಳಾಚಾರ್ಯ ।। ಚರಣ ।।
ರಾಗ : ಪಹಾಡಿ ತಾಳ : ಆದಿ
ಪಾಹಿ ಶ್ರೀ ಗುರು ರಾಘವೇಂದ್ರ ।
ಅಮಿತ ಗುಣಸಾಂದ್ರ 
ಯತೀಂದ್ರ ।। ಪಲ್ಲವಿ ।।
ಶ್ರೀಮೋದತೀರ್ಥರ 
ಮತ । ವಾ ।
ರಿಧಿ ವಿಧು ವಸುಧಾ-
ಸುವಿಬುಧಾ ।। ಚರಣ ।।
ಅಮಿತಮಹಿಮಾಲಂಕೃತಾಂಗ ।
ಕುಮತ ಗಜ ಸಿಂಗ
ಶುಭಾಂಗ ।। ಚರಣ ।।
ಶರಣ ಜನ ಮಂದಾರ ।
ಕರುಣಾ ।
ಶರಧಿ ದುರಿತ ಘನ 
ಸುಪವನಾ ।। ಚರಣ ।।
ಕೋಲ ತನಯಾ-
ಕೂಲಗತ । ಮಂ ।
ತ್ರಾಲಯ ನಿಲಯಾ 
ಸುಕೃಪಯಾ ।। ಚರಣ ।।
ವೀರ ಕಾರ್ಪರ ನರಹರಿಯಾ ।
ಚಾರು ಪದಕಮಲಾ 
ಲೋಲ ।। ಚರಣ ।।
****
"  ಶ್ರೀ ಗಣೇಶ ಸ್ತುತಿ "
ಸಿಂಧೂರ ವದನ ಕೊಡುವರ 
ಸಿಂಧೂರವಾದನ ।। ಪಲ್ಲವಿ ।।
ಇಂದುಧರಾತ್ಮಜ 
ವಂದಿಸುವೆನು ನಾ ।। ಅ ಪ ।।
ಮುದಮುನಿ ಮತಾಂಬುಧಿ ಚಂದಿರ ।
ಬುಧ ಜನ ಪ್ರಸಂಗದಿ 
ಭವಹರ ।ಮಧು ವಿರೋಧಿಯ 
ಕಥಾಮೃತ ಶ್ರವಣದಿ ।
ಒದಗಿಸು ಮಮ ಸುಜ್ಞಾನ 
ಮಾನಸದಿ ।। ಚರಣ ।।
ಭಜಕರ ಮನೋರಥ ಪೂರಕ ।
ಸುಜನರ ಭವಾಂಬುಧಿ ತಾರಕ ।
ವಿಜಯಸಾರಥಿಯ 
ಭಜನೆಯ ಮಾಡಿಸೋ ।
ವೃಜಿನ ವಾರಿಧಿ ಕುಂಭ 
ಸಂಭವ ।। ಚರಣ ।।
ಗಿರಿಜೆಯ ಕುಮಾರ ಕೃಪಾಕರ ।
ಶರಧಿಜೆ ಮನೋಹರ ಕಾರ್ಪರ ।
ನರಮೃಗೇಂದ್ರ ಚರಣಾಂಬುಜ 
ಮಧುಕರ । ಕರುಣಿಸೆನಗೆ 
ಸಿದ್ಧಿಯನು ಕಾರ್ಯದಲಿ ।। ಚರಣ ।।
*** 
" ಶ್ರೀ ಪಾರ್ವತೀ ಸ್ತುತಿ "
ರಾಗ : ಆನಂದಭೈರವಿ ತಾಳ : ರೂಪಕ
ಬಾರೆ ಗೌರಿ ಪೂಜಿಸುವೆನು 
ಸಾರಸಾಂಬಕೀ ।
ಸಾರುವೆ ಸಂಸಾರದಿ 
ಸುಖದೋರೆ ವಿಧುಮುಖಿ ।। ಪಲ್ಲವಿ ।।
ಕುಂದ ಮಲ್ಲಿಗೆ ಜಾಜಿ 
ಕುಸುಮ ಗಂಧ ಪರಿಮಳ ।
ಚಂದದಿ ಸಮರ್ಪಿಸುವೆನು 
ಫಲ ಪುಷ್ಪಗಳ ।। ಚರಣ ।।
ಮಂಗಳೆಯೆಂದು ಪಾಡುತ 
ಬೆಳಗುವೆನು ಆರತಿ ।
ಮಂಗಳಗೌರಿಯೇ ಕೊಡು 
ಸೌಭಾಗ್ಯ ಸಂತತಿ ।। ಚರಣ ।।
ಮಂಗಲಪ್ರದಾತೆ ಗಿರಿ-
ಸಂಭೂತೆ ಸುರನುತೇ ।
ಮಂಗಳಾಂಗಿ ಕುರು ಕರುಣಾಮಯಿ 
ನಮೋಸ್ತುತೇ ।। ಚರಣ ।।
ಪತ್ಯಂತರ್ಗತ ಹರಿಯ 
ಸೇವೆ ನಿತ್ಯ ಮಾಡಿಸೆ ।
ಪುತ್ರ ಪೌತ್ರಾದಿ ಸಂಪದವಿತ್ತು 
ರಕ್ಷಿಸೆ ।। ಚರಣ ।।
ರತಿಯ ಪತಿಯ ಪಿತಗೆ 
ಸದಾ ಪ್ರತಿಮೆಯೆನಿಸುವ ।
ಅಥಿತಿಗಳನು ಸೇವಿಸುವ 
ಸುಮತಿಯ ಕೊಡು ಜವ ।। ಚರಣ ।।
ಸಡಗರದಿ ನಿಮ್ಮಡಿಯ 
ಸೇವೆ ಬಿಡದೆ ಮಾಡುವೆ ।
ಮೃಡನರಾಣಿ ಕೊಡು 
ವರಗಳ ಗಡನೆ ಬೇಡುವೆ ।। ಚರಣ ।।
ಶರಣು ಜನರ ಪೊರೆವ 
ಕಾರ್ಪರ ನಾರಸಿಂಹನ ।
ಚರಣ ಕಮಳಯುಗಳದಿ 
ಭಕುತಿ ಇರಲಿ ಅನುದಿನಾ ।। ಚರಣ ।।
**
" ಶ್ರೀ ಶಿವ ಸ್ತುತಿ "
ರಾಗ : ಆನಂದಭೈರವಿ  ತಾಳ : ಛಾಪು
ಕರುಣಾದಿ ಪೊರೆಯೆನ್ನ 
ಪಾರ್ವತೀ ರಮಣ ।। ಪಲ್ಲವಿ ।।
ಪುರಹರನೆ ಕರುಣಿಪುದೆಮಗೆ 
ಸುಜ್ಞಾನ । ಈ ।
ಧರೆಯೊಳು ಗೂಗಲ್ಲು 
ಕ್ಷೇತ್ರ । ಸುಮಂ ।
ದಿರನೆ ನಿನ್ನ ಸ್ಮರಿಸುವೆನು 
ಅನುದಿನ ।। ಅ ಪ ।।
ನಿರುತ ಸ್ಮರಿಪಾರ ದುರಿತ 
ಗಜ ಪಂಚಾಸ್ಯ ।
ಕರ ಮುಗಿವೆ ನೆರೆನಂಬಿ 
ನಿನ್ನನು ಸೇವಿಸುವ ।
ಶರಣರಿಗೆ ಸುರತರುವೆ 
ಜನಿಸಿರುವರೊಳು ।।
ಸರ್ವರಿಗೆ ಮನದಲಿ ।
ಪ್ರೇರಿಸುವ ಗುರುವೇ 
ಗೂಗಲ್ಲ ಪ್ರಭುವೇ ।। ಚರಣ ।।
ಕ್ಷಿತಿಪವರ ಪರೀಕ್ಷಿತಗೆ ಶ್ರುತಿ 
ಸಮ್ಮತವೆನಿಸಿದಂಥ । ಭಾಗ ।
ವಾತ ಸುಕಥಾಮೃತವನುಣಿಸಿದ 
ಪರಮ । ಪ್ರ ।ಖ್ಯಾತ 
ತಿಳಿಸೆನ್ನ ಮನಕೆ । ತ ।
ರ್ಥಗಳ ವೊಳೆವಂತೆ ಶುಭಚರಿತ 
ಜಿತ ಮನೋಜಾತ ।। ಚರಣ ।।
.... ಶ್ರೀ ಶ್ವೇತಗಿರಿ ಸುಕ್ಷೇತ್ರ 
ಪಂಚಕ್ರೋಶಗನು ನೀನೆ ।
ಸರ್ವೇಶ ಕರ್ಪರವಾಸ 
ಸಿರಿ ನರಕೇಸರಿಗೆ ಪ್ರಿಯನೇ ।
ದುರ್ವಿಷಯದಲಿ ಅಭಿಲಾಷೆ 
ಪುಟ್ಟದಂತೆ ।
ಶಶಿಧರನೇ ಸಿರಿ 
ವ್ಯಾಸಕುವರನೇ ।। ಚರಣ ।।
" ಶ್ರೀಶೇಷದೇವರ ಸ್ತುತಿ "
ರಾಗ : ಆರಭಿ         ತಾಳ : ಆದಿ
ಶೇಷದೇವನೇ 
ಪೋಷಿಸೆನ್ನನು ।। ಪಲ್ಲವಿ ।।
ಶೇಷದೇವ ಕರುಣಾ-
ಸಮುದ್ರ ಭವ ।
ಕ್ಲೇಶವ ಕಳೆಯೋ ಸುರೇಶ 
ಮುಖ ವಿನುತ ।। ಅ ಪ ।।
ವಾಸುದೇವನ ಶಯ್ಯಾಸನ । 
ರೂಪದಿ ಸೇವಿಸುವಿ ಚರಣ ।
ಸಾಸಿರ ವದನದಿ
ಶ್ರೀಶನ ಶುಭಗುಣ ।
ಲೇಶ ವರ್ಣಿಪ ಭಾಸುರ 
ವಪುಷಾ ।। ಚರಣ ।।
ಹೇ ಮಹಾತ್ಮನೇ 
ಭೂಮಿ ಪಾತಾಳ ।
ವ್ಯೋಮ ವ್ಯಾಪ್ತನೇ ।
ರಾಮನ ಸೇವಿಸಿ 
ಪ್ರೇಮವ ಪಡೆದಿಹ ।
ಸೌಮಿತ್ರಿಯ ಶುಭ ನಾಮದಿ 
ಮೆರೆದ ।। ಚರಣ ।।
ವಾರುಣೀವರ ಧಾರುಣಿಯೊಳು ।
ಕೃಷ್ಣಾತೀರ ಕಾರ್ಪರ ।
ನಾರಸಿಂಹನ ಪಾ-
ದಾರವಿಂದ ಯುಗ ।
ಸೇರಿ ಸುಖಿಸುತಿಹ 
ಶೌರಿಯ ಅಗ್ರಜ ।। ಚರಣ ।।
***
" ಭಾರತೀದೇವಿಯರ ಸ್ತೋತ್ರ "
ರಾಗ ; ಆನಂದಭೈರವಿ ತಾಳ : ರೂಪಕ
ವಂದಿಪೆ ವಾಗ್ದೇವಿ ಭಾರತೀ 
ನೀವೆಮಗೆ ಸುಮತಿ ।
ನಂದಸುತನ ಪದದಿ 
ಕೊಡು ರತಿ ।। ಪಲ್ಲವಿ ।।
ವಂದಿಪೆ ವಾಗ್ದೇವಿ ಯೆನ್ನ ।
ಮಂದ ಮತಿಯ ಕಳೆದು ।
 ಮನದಿ ।
ನಿಂದು ವಿದ್ಯೆಯ ನೀಡಿ । 
ಎನಗಾ ।
ನಂದಗರಿಯೆ 
ಬಂದು ಬೇಗ ।। ಅ ಪ ।।
ಇಂದುಮೌಳಿ ಮುಖ್ಯ ಸುರಗುಣ ।
ವಂದಿತಳೆ ಎನ್ನ ನಿಂದು 
ವದನದಲಿ ಅನುದಿನ ।
ನಂದಮುನಿಯ ಶಾಸ್ತ್ರ ವಚನ ।।
ಛಂದದಿಂದ ಪಠಣ । 
ಶ್ರವಣಾ ।ನಂದವಾಗುವ-
ದಂದದಿ ಗುರು ।
ಗಂಧವಾಹನ ರಾಣಿ 
ನಿನಗೆ ।। ಚರಣ ।।
ಪೇಳಲಳವೇ ನಿನ್ನ ಮಹಿಮೆಯ ।
ಕಾಲಾಭಿಮಾನಿ ಕೇಳುವೆ 
ಸುಜ್ಞಾನ ಭಕುತಿಯ ।
ಕಾಲ ಕಾಲಗಳಲ್ಲಿ ಯೆನ್ನ ।।
ನಾಲಿಗೆಯೋಳ್ ನಿಂತು । 
ಲಕ್ಷ್ಮೀಲೋಲನ ಶುಭ । 
ಲೀಲೆ ।ಗಳನು ಪಾಡಿ ಪೊ-
ಗಳುವಂತೆ ಜನನೀ ।। ಚರಣ ।।
ಚಾರು ಕೃಷ್ಣಾತೀರ ಸಂಸ್ಥಿತಾ । ಉ ।
ದಾರ ಚರಿತೆ ನೀರಜಾಸನಾದಿ 
ಸುರನುತಾ ।
ಸೇರಿದ ಭಕುತರಿಗೆ । ತಿದಶ ।।
ಭೂರೂಹವೆಂದೆನಿಸಿದಂಥಾ ।
ಪಾರ ಮಹಿಮಾ ಕಾರ್ಪರ ।
ಸಿರಿ ನರಸಿಂಹನ 
ಸೊಸೆಯೆ ನಿನಗೆ ।। ಚರಣ ।।
**
"  ಸರಸ್ವತೀ ದೇವಿಯರ ಸ್ತೋತ್ರ "
ರಾಗ : ಕಾಪಿ     ತಾಳ : ಏಕ
ನೋಡು ಕರುಣದಿಂದ ಸರಸ್ವತೀ ।
ನೀಡೆನೆಗೆ ಸುಮತೀ ।। ಪಲ್ಲವಿ ।।
ನೋಡು ಕರುಣದಿಂದ ಎನ್ನ ।
ಮೂಢ ಮತಿಯ ಕಳೆದು ಮನದಿ ।
ರೂಢೀಶ ಹರಿಯ ಗುಣಗಳನ್ನು ।
ಪಾಡಿ ಪೊಗಳುವಂತೆ ಎನ್ನ ।। ಅ ಪ ।।
ಮೃಡ ಇಂದ್ರಾದಿಗಳ 
ನಿಯಾಮಕಳೆ । ನಿ ।
ಮ್ಮಡಿಗಳಿಗೆರೆಗುವೆ ಮಾತೆ ।
ಕಡಲ ಶಯನನ ನಡಿಯುಗಳದಿ ।
ದೃಢ ಭಕುತಿಯ ಪಡೆವಂತೆ ।। ಚರಣ ।।
ಚತುರವಾದನನ ಸತಿಯ ಸಕಲ ।
ಶ್ರುತಿಗಳಿಗಭಿಮಾನಿ ನಿಮ್ಮನು ।
ನುತಿಸಿ ಬೇಡುವೆ ರತಿಯ ಪತಿಯ ।
ಪಿತನ ಮಹಿಮೆ ತುತಿಸುವಂತೆ ।। ಚರಣ ।।
ಸರಸಿಜಭವನರಸಿ ನಿಮ್ಮನು ।
ವರುಣಿಸಲೆನ್ನೊಶವೇ ಜನನಿ ।
ಶರಣ ಜನರ ಪೊರೆಯುವ । ಕಾ ।
ರ್ಪರ ನರಹರಿಯ ಸೊಸೆಯೇ ।। ಚರಣ ।।
**
" ಶ್ರೀ ಮುಖ್ಯಪ್ರಾಣದೇವರ ಸ್ತುತಿ "
ರಾಗ : ಸುರಟಿ  ತಾಳ : ಆದಿ
ಚಿಂತ್ರವೇಲಿ ನಿಲಯಾ । 
ಭಾರತೀ ।
ಕಾಂತನೇ ಪಿಡಿ 
ಕೈಯ್ಯಾ ।। ಪಲ್ಲವಿ ।।
ಅಂತರಂಗದಲಿ 
ಚಿಂತಿಪ ರಘುಕುಲ ।
ಧ್ವಾ೦ತ ದಿವಾಕರ 
ಸಂತತ ಸ್ಮರಿಸುವೆ ।। ಅ ಪ ।।
ಲಂಘಿಸಿ ವಾರಿಧಿಯಾ । ಶ್ರೀ ರಾ ।
ಮಾಂಗುಲಿ ಮುದ್ರಿಕೆಯಾ ।
ಅಂಗನೆಗೆ ಕೊಟ್ಟು 
ಮಂಗಳಾಂಗ । ರಘು ।
ಪುಂಗವಗೆ ಕುಶಲ 
ಸಂಗತಿ ತಿಳಿಸಿದ ।। ಚರಣ ।।
ಇಂದುಕುಲದಿ ಜನಿಸೀ । 
ಕುಂತಿಯ ।ಕಂದ ಭೀಮನೆನಿಸಿದಾ ।
ನಿಂದು ರಣದಿ ಕುರು ವೃಂದವ । 
ಮಥಿಶ್ಯಾ ।ನಂದ ಸೂತನೊಲಿಮೆ 
ಛಂದದಿ ಪಡೆದಿಹ ।। ಚರಣ ।।
ಮೇದಿನಿಯೊಳು ಜನಿಸೀ । 
ಬಹು ದು ।
ರ್ವಾದಿಗಳನು ಜಯಿಸೀ ।
ಮೋದಮುನಿ ಯೆನಿಸಿ 
ಭೇಧವ ಬೋಧಿಸಿ ।
ಸಾಧು ಜನಕೆ ಬಲು 
ಮೋದವಗರೆದಿ ।। ಚರಣ ।।
ಶೇಷದಾಸರಿಗೊಲಿದೀ । 
ಅವರಭಿಲಾಷೆಯ ಪೂರ್ತಿಸಿದೀ ।
ಪೋಷಿಸೆನ್ನ ಕರುಣಾ 
ಸಮುದ್ರ ಭವ ।
ಕ್ಲೇಶವ ಕಳೆಯೋ ಗಿ-
ರೀಶ ಮುಖವಿನುತ ।। ಚರಣ ।।
ಭೀತರನು ಪೊರವೀ ಭಜಕರ ।
ಪಾತಕವನು ಕಳಿವೀ ।
ಖ್ಯಾತ ಕಾರ್ಪರ 
ಕ್ಷೇತ್ರದಿ ನರಮೃಗ ।
ನಾಥನ ಪರಮ 
ಪ್ರೀತಿ ಪಡೆದಿಹ ।। ಚರಣ ।।
ಹೀಗೆ ಶ್ರೀ ಕಾರ್ಪರ ನರಹರಿ ದಾಸರು ಶ್ರವಣ ರಮಣೀಯವಾದ ತಮ್ಮ ಪದ ಪದ್ಯಗಳ ಪ್ರಖರತೆ ಹಾಗೂ ನಾದ ಮುಖರತೆಗಳಿಂದ ಸಹೃದಯರ ಮನಃ ಪ್ರೀಣನವನ್ನು ಮಾಡುತ್ತಾರೆ.
ಇವರ ಕೃತಿಗಳನ್ನು ನೋಡಿದರೆ ಶ್ರೀ ಗಿರಿಯಾಚಾರ್ಯರಿಗೆ ಹಳೆಗನ್ನಡ, ಹೊಸಗನ್ನಡ, ಸಂಸ್ಕೃತ, ಶಾಸ್ತ್ರ, ಸಾಹಿತ್ಯ, ಪುರಾಣ, ಮಂತ್ರ - ತಂತ್ರ ಎಲ್ಲಾದರಲ್ಲಿಯೂ ಸರ್ವತೋ ಮುಖ ಪಾಂಡಿತ್ಯವೂ, ನವನವೋನ್ಮೇಷ ಶಾಲಿಯಾದ ಪ್ರತಿಭೆಯೂ ಉಜ್ವಲವಾಗಿದ್ದವೆಂದು ತಿಳಿಯುತ್ತದೆ.
ಶ್ರೀ ಗಿರಿಯಾಚಾರ್ಯರ ಕವಿತೆಗಳಲ್ಲಿ ಭಾವದ ಎತ್ತರಕ್ಕೆ ಭಾಷೆಯೂ, ಶೈಲಿಯೂ ಉನ್ನತಗೊಂಡು ವಾಗಾರ್ಥ ಸಂಪೃಕ್ತಿಯಿಂದ ಸಂಪೂರ್ಣವಾದ ಸಾಹಿತ್ಯ ಶಕ್ತಿಯು ಅಭಿವ್ಯಕ್ತಿಯನ್ನು ಪಡೆಯುವಂತಾಗುತ್ತದೆ.
by ಆಚಾರ್ಯ ನಾಗರಾಜು ಹಾವೇರಿ
    ಗುರು ವಿಜಯ ಪ್ರತಿಷ್ಠಾನ
*****




Karpara Narahari Vittala Dasa1896-1979Koppara Giri AcharyaKarpara Narahari(swapnalabda)Yalameli VittalacharyaKopparaAshada Bahula Trayodashi

********

july 2020

*********


No comments:

Post a Comment