Sri. Varadesha Vittala Dasaru
Original Name: Swamy Rao
Period: 1885 - 1918
Ankita: Varadesha Vittala
Preceptor: Guru Jagannatha Vittala
Place: Lingasuguru
Aradhana: Ashwija Shukla triteeya
ಹೆಸರು : ಶ್ರೀ ಸ್ವಾಮಿರಾಯರು
ಕಾಲ : ಕ್ರಿ ಶ 1885 - 1918
ಅಂಕಿತ : ಶ್ರೀ ವರದೇಶವಿಠ್ಠಲ
ಉಪದೇಶ ಗುರುಗಳು :
" ಕೋಸಗೀ ಮುತ್ಯಾ " ಯೆಂದು ಪ್ರಸಿದ್ಧರಾದ ಶ್ರೀ ಗುರು ಜಗನ್ನಾಥ ವಿಠ್ಠಲರು.
ಶ್ರೀ ವರದೇಶವಿಠಲ ದಾಸಾರ್ಯರ ಆರಾಧನಾ ಪರ್ವಕಾಲ -
ಶ್ರೀ ತ್ರಿವಿಕ್ರಮಪ್ರಲ್ಹಾದಾಚಾರ್ಯರವರ ಲೇಖನ
ಶ್ರೀ ವರದೇಶವಿಠಲದಾಸಾರ್ಯರ ಆರಾಧನೆ
ಆಶ್ವೀಜ ಶುಕ್ಲ ತೃತೀಯ
ಶ್ರೀವರದೇಶವಿಠ್ಠಲ ದಾಸಾರ್ಯರು
(ಕೇಲೂರು ಸ್ವಾಮಿರಾಯರು, ಲಿಂಗಸುಗೂರು )
(ಕ್ರೀ .ಶ .೧೮೮೫-೧೯೧೮)
ಕೌಶಿಕಾಚಾರ್ಯ ಸಂಪ್ರತಮ್
ಸದ್ವಿದ್ಯಾಸಂಪದಮ್ ಸದಾ ।
ವರದೇಶಾಖ್ಯ ದಾಸಾರ್ಯಂ
ರಾಮಂಗ ದಯಿತಮ್ ।।
ಎಂದು ಶಿಷ್ಯವರ್ಗದಿಂದ ಕೀರ್ತಿಸಲ್ಪಡುವವರು ಮತ್ತು ಶ್ರೀಗುರುಜಗನ್ನಾಥದಾಸಾರ್ಯರಿಗೆ ಪರಮಪ್ರೀತಿಪಾತ್ರರು ಶ್ರೀವರದೇಶ ವಿಠಲದಾಸವರ್ಯರು. ಶ್ರೀಗುರುಜಗನ್ನಾಥ ದಾಸಾರ್ಯರ ಪ್ರಥಮಸಂತಾನವಾದ ರಾಮಚಂದ್ರನೆಂಬ ಬಾಲಕ ಎರಡು ವರ್ಷದ ಸಣ್ಣವಯಸ್ಸಿನಲ್ಲೇ ಇಹಲೋಕ ಯಾತ್ರೆ ಮುಗಿಸಿರುತ್ತಾನೆ. ಆ ಶಿಶುವೇ ಮರುಜನ್ಮದಲ್ಲಿ ವರದೇಶ ವಿಠಲರಾಗಿ ಅವತರಿಸಿ ಶ್ರೀದಾಸಾರ್ಯರಿಂದ ಉಧೃತ ರಾಗಿದ್ದಾರೆಂದು ಹಿರಿಯರ ಮಾತು.
ಹರಿದಾಸರ ಮತ್ತು ದಾಸಸಾಹಿತ್ಯ ತವರೂರಾದ ಲಿಂಗಸುಗೂರು ಗ್ರಾಮಕ್ಕೆ ಐದುಮೈಲು ದೂರದಲ್ಲಿರುವ ಸಂತೇ ಕೇಲೂರು ಗ್ರಾಮ ಶ್ರೀವರದೇಶದಾಸರ ಹುಟ್ಟೂರು. ಇವರ ಪೂರ್ವನಾಮ “ಸ್ವಾಮಿರಾಯ”. ಇವರು ಮಾನವಿ ಜಗನ್ನಾಥದಾಸಾರ್ಯರ ಪ್ರಮುಖ ಶಿಷ್ಯರಾದ ಶ್ರೀಪ್ರಾಣೇಶದಾಸಾರ್ಯರ ಮೊಮ್ಮಗ ವಿಜಯರಾಯರ ಮಗಳ ಮಗ. ವೃತ್ತಿಯಲ್ಲಿ ನ್ಯಾಯಾವಾದಿಗಳಾಗಿದ್ದರು ಪ್ರವೃತ್ತಿಯಲ್ಲಿ ಆಧ್ಯಾತ್ಮಿಕ ಚಿಂತನೆಯಲ್ಲಿ ತಲ್ಲೀನ ರಾಗಿದ್ದರು. ಲಿಂಗಸೂಗೂರಿನ ಗ್ರಾಮಾಧಿದೈವ ಶ್ರೀಕುಪ್ಪಿ ಭೀಮಸೇನ ದೇವರ ಏಕಾಂತಭಕ್ತರಾಗಿದ್ದರು. ಹಾಗೆಯೇ ಶ್ರೀಪ್ರಾಣೇಶದಾಸರಿಗೇ ಒಲಿದುಬಂದ ಶ್ರೀವರದೇಂದ್ರ ತೀರ್ಥಗುರುವರ್ಯರ ದಾಸಾನುದಾಸರಾಗಿದ್ದರು.
ತ್ರಿಕಾಲಜ್ಞರಾದ ಶ್ರೀಗುರುರಾಜರಿಂದ “ಸಪ್ತಮೋ ಮತ್ಸಮೋ ಯೋಗಿ ವರದೇಂದ್ರೊ ಭವಿಷ್ಯತಿ “ ಎಂದು ಶ್ಲ್ಯಾಘಿಸಲ್ಪಟ್ಟ , ಪರಮಕಾರುಣ್ಯ ಮೂರ್ತಿ, ಸ್ವಭಕ್ತಾಭೀಷ್ಟಪ್ರದಾತರಾದ ಶ್ರೀ ವರದೇಂದ್ರ ತೀರ್ಥಗುರುವರ್ಯರು ಸ್ವಾಮಿರಾಯರ ಸ್ವಪ್ನದಲ್ಲಿ ಕಾಣಿಸಿ ಶ್ರೀಗುರುಜಗನ್ನಾಥ ದಾಸಾರ್ಯರೇ ನಿನ್ನ ಆತ್ಮೋದ್ಧಾರಕ ಗುರುಗಳು, ನಿನಗಾಗಿ ಇಲ್ಲಿಗೆ ನಾಳೆಯದಿವಸ ಬರುತ್ತಾರೆಂದು ಸೂಚನಗೈದರು. ಅದೇರೀತಿ ಶ್ರೀಗುರುಜಗನ್ನಾಥ ದಾಸಾರ್ಯರ ಸ್ವಪ್ನದಲ್ಲಿ ಶ್ರೀವರದೇಂದ್ರ ಯತಿಗಳು ದರ್ಶನನೀಡಿ “ನಿನಗೆ ಯೋಗ್ಯ ಶಿಷ್ಯ ನಿನಗಾಗಿ ಲಿಂಗಸುಗೂರಲ್ಲಿ ಕಾದುಕೊಂಡಿದ್ದಾನೆ. ಅವನು ನನ್ನ ಭಕ್ತ, ಅವನನ್ನು ಉದ್ಧರಿಸೆಂದು” ಅಪ್ಪಣೆ ಕೊಟ್ಟರು.ಶ್ರೀದಾಸರಾಯರು ಶ್ರೀವರದೆಂದ್ರಾರ್ಯರ ಆಜ್ಞೆಯನ್ನು ಶಿರಸಾವಹಿಸಿ ಶಿಷ್ಯನಗೋಸುಗ ಗೋವತ್ಸನ್ಯಾಯದಂತೇ ಲಿಂಗಸೂಗೂರಿಗೆ ಧಾವಿಸಿ ಬಂದರು.ತಮ್ಮ ಆರಾಧ್ಯ ಯತಿಶೇಖರರು ಸೂಚನಗೈದಂತೆ ಬರುತ್ತಿರುವ ಶ್ರೀದಾಸಾರ್ಯರ ದೂರದಿಂದ ಕಂಡು, ಶ್ರೀಸ್ವಾಮಿರಾಯರು ಓಡೋಡುತ್ತಾ ಬಂದು ಅವರ ಪಾದಪದ್ಮಗಳಿಗೆ ಸಾಷ್ಟಾಂಗ ವೆರಗಿದರು.ಶ್ರೀವರದೇಂದ್ರರು ಸೂಚಿಸಿ ದಂತೇ ಒಂದು ಶುಭಮುಹೂರ್ತದಿ ಶ್ರೀದಾಸಾರ್ಯರು ಸ್ವಾಮಿರಾಯನಿಗೆ ದಾಸದೀಕ್ಷಾ ಮತ್ತು “ವರದೇಶ ವಿಠಲ" ಎಂಬ ಅಂಕಿತಪ್ರದಾನ ಗೈದರು. ಈ ಘಟನೆ ಕ್ರೀ.ಶ .೧೯೧೬ನಲ್ಲಿ ನಡೆಯಿತು. ಈವಿಷಯವನ್ನೇ ಶ್ರೀಗುರುಜಗನ್ನಾಥ ದಾಸಾರ್ಯರು ತಮ್ಮ ಕೀರ್ತನೆ
“ವರದೆಂದ್ರಾರ್ಯರ ಪಾದ । ಸರಸಿಜಯುಗ ಮನೋ-
ಸರಸಿರುಹದಿ ಭಜಿಪ
ಶರಣನಗೋಸುಗ
ವರದೇಶವಿಠಲೆಂದು
ಅರುಹಿ ಮುದ್ರಿಕೆ ನೀಡೆಂದು ಪೇಳಿದನಂದು …
..ಕನಸಿನೊಳಗೆ ಪೇಳಿದ । ಘನಮಹಿಮರ ವಾಕ್ಯ ।
ಮನದಲ್ಲಿ ಯೋಚಿಸಿ ಗಾಢ ।
ದಿನಗಳಿಯದೆ ತ್ವರ ।ನಿನಗೆ ತಿಳಿಸುಯೆಂದು।
ವಿನಯದಿ ಪಿಡಿದ ಕೈಯ್ಯ । ಮುನಿರಾಯಾ “
ಪುಟ್ಟನಿವನು ಬಲು । ಘಟ್ಟಿಗನಾಗುವ ।
ಇಷ್ಟದಾಸರ ಮತದಿ ।
ಧಿಟ್ಟ ಗುರುಜಗನ್ನಾಥ ವಿಠ್ಠಲ ಒಲಿದೀಗ
ಇಷ್ಟಪೂರೈಸಿ ಕೊಡುವಾ ।ದುರಿತವ ತರಿವಾ ||
ಎಂದು ಅರುಹಿದ್ದಾರೆ . ಇದನ್ನೇ ಅಂಕಿತಾನುಗ್ರಹ ಪಡೆದ ಶ್ರೀಸ್ವಾಮಿರಾಯರು ತಮ್ಮ ಗುರುಕಾರುಣ್ಯವನ್ನು ಮತ್ತು ಶ್ರೀವರದೇಂದ್ರಾರ್ಯರ ಅನುಗ್ರಹವನ್ನು ಹೃದಯಪೂರ್ವಕ ಕೆಳಗಿನ ಕೀರ್ತನೆಯಿಂದ ಹೊಗಳಿದ್ದಾರೆ.
ಗುರುವೇ ನೀನೊಲಿದು ಪಾಮರತರನಾದೆನ್ನ
ಹರುಷದಿ ಕರಪಿಡಿದು ।। ಪ ।।
ಪರಮ ಹರುಷದಿಂದ ಹರಿದಾಸ್ಯತನವಿತ್ತು -
ಧ್ದರಿಸಿದ ಉಪಕಾರ ಮರೆಯಲಾರೆನೋಯೆಂದು ।।ಅ .ಪ ।।
ವರದೆಂದ್ರಾರ್ಯರು ನಮ್ಮ ಶರಣನು ಇವನಿಗೆ
ಕರುಣಿಸೆಂದಾ ಜ್ಞಾಪಿಸೆ
ತರುಳಾನ ಶಿರದಲ್ಲಿ ಕರವಿಟ್ಟು ಕೃಪೆಯಿಂದ
ಗುರುತು ತೋರಿದುದಕ್ಕೆ ನಾ ಪರಮಧನ್ಯನೆಂಬೆ ….
ಮರುತ ಮತಾಬ್ದಿ ಚಂದಿರ ಗುರುರಾಯರ
ವರಬಲದಿ ಮೆರೆವಾ
ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಪೆ ನಾನು
ಹರಿ ಒಲಿಯುವ ತೆರ ಕರುಣಿಸೆನ್ನಯ ನಿಜ ।।೪।।
ಬರಿದೆ ಬಾಹ್ಯಚಾರ ವಿರಚಿಸದಲೇ ಮನದಿ
ಹರಿರೂಪ ಕಾಣೋ ತೆರದಿ
ವರದೇಶ ವಿಠ್ಠಲನ್ನ ಸ್ಥಿರದಾಸ್ಯ ತನವೆಂಬೋ
ಗುರುತು ತೋರುವದಯ್ಯ ಗುರುಜಗನ್ನಾಥಾರ್ಯ ।।೫।।
ಈ ಕೀರ್ತನೆ ಗುರುಶಿಷ್ಯರ ಸಂಬಂಧವನ್ನು, ಆಧ್ಯಾತ್ಮಿಕ ಅನುಬಂಧವನ್ನು ಸ್ಪಷ್ಟ ಮಾಡುತ್ತದೇ . ಶ್ರೀ ವರದೇಶವಿಠ್ಠಲ ದಾಸಾರ್ಯರು ಗುರ್ವನುಗ್ರಹಪಾತ್ರರಾಗಿ, ಹರಿದಾಸದೀಕ್ಷಾಬಧ್ದರಾಗಿ ಅನೇಕ ಕೃತಿಗಳನ್ನು ರಚಿಸಿ ಸಾರ್ಥಕ ಜೀವನ ನಡೆಸಿದವರು.
ಲಿಂಗಸೂಗೂರ ಗ್ರಾಮದ ನಿಕಟ ಸಂಬಂಧವಿದ್ದ ಶ್ರೀಗುರುಜಗನ್ನಾಥ ದಾಸರಾಯರು ಶ್ರೀ ವರದೇಂದ್ರರ ಆರಾಧನೆಗಾಗಿ ಹೋದಾಗ, ಶಿಷ್ಯಜನ ರೊಡಗೂಡಿ ಆಧ್ಯಾತ್ಮಿಕವಿಚಾರ ಚಿಂತನೆ ಮಾಡುವಾಗ “ಶ್ರೀರಾಯರ ಸ್ತೋತ್ರ ಮುಖ್ಯಸ್ಥಾನ ಪಡೆಯಿತು. ಶ್ರೀರಾಯರ ಸ್ತೋತ್ರಮಹಿಮೆ , ರಹಸ್ಯಾರ್ಥಗಳು ಶ್ರೀದಾಸಾರ್ಯರು ಶಿಷ್ಯರಿಗೆ ಮೈಮರೆತು ರಾತ್ರಿ ೮ ಗಂಟಿವರೆಗೆ ಹೇಳಿದರು. ಮರುದಿವಸ ಶ್ರೀವರದೇಂದ್ರರ ಸನ್ನಿಧಿಗೆ ಶ್ರೀವರದೇಶ ವಿಠ್ಠಲರು ಬಂದು ಶ್ರೀಗುರುಜಗನ್ನಾಥ ದಾಸಾರ್ಯರು ಅಲಂಕಾರ ಮಂಟಪದಲ್ಲಿ ಧ್ಯಾನಾಸಕ್ತರಾಗಿ ಕುಳಿತಾಗ “ಸ್ಮರಿಸಿ ಬದುಕಿರೋ ಗುರುರಾಯರ ಪದವ ಕೊಡುವನು ಸಂಪದವ" ಎಂದು ಶ್ರೀದಾಸಾರ್ಯರ ಅವತಾರಗಳ ಬಗ್ಗೆ ಸ್ತೋತ್ರಗೈಯುತ್ತ, ಶ್ರೀರಾಘವೇಂದ್ರ ಸ್ತೋತ್ರ ಪ್ರಣೇತಾರರಾದ ಬಿಚ್ಚಾಲಿ ಅಪ್ಪಣ್ಣಾಚಾರ್ಯರು, ರಚ್ಚುಮರಿ ಬೆನಕಪ್ಪ, ಕರ್ಜಗಿ ಶ್ರೀದವಿಠ್ಠಲರು ತದನಂತರ ಶ್ರೀಗುರುಜಗನ್ನಾಥದಾಸರಾಗಿ ಅವತರಿಸಿ ಇಲ್ಲೇ ಇದ್ದಾರೆಂದು “ಎಲ್ಲಿರುವಿ ಗಿಲ್ಲಿರುವ ವರದೇಶ ವಿಠಲನ ಭೃತ್ಯನೇ ತಿಳಿಯುವನು ಗುರುವಿನ ಮಹಿಮೆಯನು” ಎಂದು ಭಕ್ತಿಯಿಂದ ಹಾಡಿದರು. ಶ್ರೀದಾಸಾರ್ಯರು ಸ್ವಾಮಿರಾಯನನ್ನು (ವರದೇಶವಿಠಲರನ್ನು) ಕರೆದು ಆಶೀರ್ವದಿಸಿ “ಈ ದಿನ ನಾನು ಊರಿಗೆ ಹೋಗುತ್ತೇನೆ , ನೀನು ಸಹ ಅಲ್ಲಿಗೆ ಬಾ “ ಎಂದು ಯಾವ ಪ್ರಶ್ನೆಗಳಿಗೆ ಅವಕಾಶ ಕೊಡದೆ ಕೌತಾಳಕ್ಕೆ ಪ್ರಯಾಣ ಮಾಡಿದರು. ಕೆಲವು ದಿನಗಳಲ್ಲಿ ವರದೇಶದಾಸರಿಗೆ ದೇಹಾಲಸ್ಯ ವಾಗಿ, ಗುರುಗಳ ಮಾತಿನಂತೇ ಕೌತಾಳಕ್ಕೆ ಬಂದರು. ಬಂದ ಶಿಷ್ಯನನ್ನು ಆದರಿಸಿ ಪಿತೃವಾತ್ಸಲ್ಯದಿ ಮೈದಡವಿದರು. ಸಾಯಂಕಾಲ ಭಜೆನೆಯ ವೇಳೆ ಶ್ರೀವರದೇಶವಿಠಲರು ಮಾಡಿದ "ಸ್ಮರಿಸಿ ಬದುಕಿರೋ ಗುರುರಾಯರ ಪದವ “ ಎಂಬ ತಮ್ಮ ಪರವಾದ ಹಾಡನ್ನು ಶ್ರೀರಾಯರ ಪರವಾಗಿ ಅರ್ಥೈಸಿದರು. ತಮ್ಮ ಕುರುಹು ಲೋಕಕ್ಕಾಯಿತೆಂದು ಶ್ರೀಗುರುಜಗನ್ನಾಥ ದಾಸರು “ಸ್ವಾಮಿ ನೀ ಹೊರಡು, ನಾವು ನಿನ್ನ ಹಿಂದೆ ಬರುತ್ತೇವೆ” ಎಂದರು. ಮುಂದೇ ವರದೇಶವಿಠಲರು ಎರಡೇ ದಿನಗಳಿಗೆ ಗುರುಗಳ ಸನ್ನಿಧಿಯಲ್ಲಿ ಗುರ್ವಂತರ್ಯಾಮಿ ಶ್ರೀಹರಿಯನ್ನು ಧ್ಯಾನಿಸುತ್ತಾ ಶಾ .ಶ .೧೮೪೦ ಕಾಲಯುಕ್ತಿ ಅಶ್ವೀಜ ಶುದ್ಧ ತೃತೀಯಾ ಮಂಗಳವಾರ (ಕ್ರೀ .ಶ .೦೩-೧೦-೧೯೧೮) ಲೌಕಿಕಯಾತ್ರೆ ಮುಗಿಸಿದರು. ಶಿಷ್ಯನ ಔರ್ಧಲೌಕಿಕ ಕಾರ್ಯಕ್ರಮಗಳನ್ನು ಮುಗಿಸಿ ಶ್ರೀಗುರುಜಗನ್ನಾಥ ದಾಸರು ಹದಿಮೂರನೆಯ ದಿವಸ ಅಶ್ವಿಜ ಬಹುಳ ಪಾಡ್ಯ ರವಿವಾರ (೨೦-೧೦-೧೯೧೮) ಶಿಷ್ಯರಿಗೆಲ್ಲಾ ತಿಳಿಸಿ ಮದ್ಯಾಹ್ನ ೨ ಗಂಟಿಗೆ ವೈಕುಂಠವಾಸಿಗಳಾದರು .
।।ಶ್ರೀಮದ್ವೆಶ ಕೃಷ್ಣಾರ್ಪಣಮಸ್ತು ।।
✍️ त्रिविक्रम प्रह्लादाचार्यः
***
ಶ್ರೀವರದೇಶವಿಠ್ಠಲದಾಸರು ಶಾ .ಶ .೧೮೪೦ ಕಾಲಯುಕ್ತಿ ಅಶ್ವೀಜ ಶುದ್ಧ ತೃತೀಯಾ ಮಂಗಳವಾರ (ಕ್ರೀ .ಶ .೦೩-೧೦-೧೯೧೮) ಲೌಕಿಕಯಾತ್ರೆ ಮುಗಿಸಿದರು ೦೩-೧೦-೧೯೧೮ ಆಗಿರದೆ ೦೮-೧೦-೧೯೧೮ ಆಗಿರಬೇಕು
ReplyDelete