Sri. Hasigyalu Govinda Dasaru
Original Name: Govinda
Period: 1873 - 1915
Ankita: Govinda Vittala
Preceptor: Sri. Dinni Raghappa
Place: Hasigyalu
Aradhana: Bhadrapada Shudda Panchami
ಗೋವಿಂದಾಂಘ್ರಿಯುಗಾಸಕ್ತಂ ಗೋಸುರಾಳಿ ಸುಸನ್ನುತಂ/
ಗೋಜಾತಾರಿ ಸುತಾಂಶಂ ಗೋವಿಂದದಾಸಂ ಭಜೇನಿಶಂ//
****
info from dvaita.org--->
Sri Asigyala Govinda Dasaru (1873-1915)
The Village Asigyala of Raichur district is the birth place of Sri Hasigyala Govindadasa, who belonged to the latter part of the 19th century.
Sri Raghavendradasa of Mahaboobnagar had blessed him with Ankita of Sri Govinda Vittala.
He had composed number of songs and plays of Kanakangi Kalyana and Dasa Prabandha.
His Kaliyuga lavane is acclaimed by all.
He left this world at a very young age.
****
||ಅಸ್ಕಿಹಾಳ ಶ್ರೀಗೋವಿಂದದಾಸರು||
ಇಂದು ಅವರ ಆರಾಧನಾ ದಿನ.
ಕರ್ನಾಟಕದ ಸುರಪುರವೆಂಬ ಪಟ್ಟಣದಲ್ಲಿ ಸದಾಚಾರ ಸಂಪನ್ನರೂ ಹಾಗು ಕೌಶಿಕಗೋತ್ರೋತ್ಪನ್ನರಾದ ಗಿರಿದಾಸರು ಮತ್ತು ಶೆಷಮ್ಮವೆಂಬ ದಂಪತಿಗಳಿಗೆ ರಾಘವೇಂದ್ರದಾಸರು, ಸೀತಾರಾಮದಾಸರು ಮತ್ತು ಗೋವಿಂದದಾಸರೆಂಬ ಮೂವರು ಗಂಡುಮಕ್ಕಳು ಮತ್ತು ಗಿರೆಮ್ಮವೆಂಬ ಹೆಣ್ಣುಮಗಳ ಜನನವಾಯಿತು. ಅವರಲ್ಲಿ ಗೋವಿಂದದಾಸರೇ ನಮ್ಮ ಇಂದಿನ ಕಥಾನಾಯಕರು. ಚಿಕ್ಕತನದಿಂದಲೇ ಹರಿನಾಮದಕಡೆಗೆ ಒಲವಿದ್ದ ಗೋವಿಂದದಾಸರು, ಧಾರ್ಮಿಕಚಿಂತನದಲ್ಲೇ ಸದಾ ಮಗ್ನರಾಗುತ್ತಿದ್ದರು. ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡ ಇವರನ್ನು ಚಿಕ್ಕಪ್ಪ ಶ್ರೀವೆಂಕಟದಾಸರೇ ಪೋಷಿಸಿದರು.
ಶ್ರೀಮನ್ಮಂತ್ರಾಲಯ ಪ್ರಭುಗಳ ದರ್ಶನಾರ್ಥ ಎಲ್ಲರೂ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಹೋಗಿದ್ದರು. ಉತ್ಸವಾಂತ್ಯದಲ್ಲಿ ಚಿಕ್ಕ ಮಗುವಾಗಿರುವ ಇಂದಿನ ಕಥಾನಾಯಕರನ್ನು ಶ್ರೀರಾಯರ ದರ್ಶನದಿಂದ ಆನಂದಭರಿತರಾದ ಕುಟುಂಬೀಕರೆಲ್ಲರೂ ಶ್ರೀರಾಯರ ಸನ್ನಿಧಾನದಲ್ಲೇ ಬಿಟ್ಟು ಬರಲು, ಈವಿಷಯವನ್ನರಿಯದ ಅರ್ಚಕರು ಮಠದ ಬಾಗಿಲನ್ನು ಮುಚ್ಚಿಬಿಟ್ಟರು. ಮರುದಿನ ಪುಟ್ಟ ಗೋವಿಂದದಾಸರನ್ನು ಪ್ರಶ್ನಿಸಲಾಗಿ, "ಕರಿತಾತ ಕರೆದು ತಂದ" ಎಂದು ಹೇಳಿದ ಮಾತುಗಳೆಲ್ಲವೂ ಶ್ರೀಮನ್ಮಂತಾಲಯ ಪ್ರಭುಗಳನ್ನು ಹೋಲುವಂತಿತ್ತು. ಸುರಪುರದ ಯಳಮೇಲಿ ಶ್ರೀವಿಠಲಾಚಾರ್ಯರಿಂದ ಇವರ ಉಪನಯನವಾಗಿತು. ಸತತ ಶ್ರೀಹರಿಗಾನಾಮೃತದಲ್ಲೇ ಕಾಲಕಳೆದ ಇವರು ದೇವದುರ್ಗ ತಾಲೂಕಿನ ಮದರಕಲ್ ಗ್ರಾಮವಾಸಿಗಳಾದ ವೆಂಕೋಬರಾಯರ ಮಗಳಾದ ತುಳಸಾಬಾಯಿಜೊತೆ ಲಗ್ನವಾದರು. ಆನಂದಸಾಗರಲ್ಲಿ ಮಗ್ನವಾದ ಈ ದಂಪತಿಗಳಿಗೆ ಲಕ್ಷ್ಮೀನಾರಾಯಣನೆಂಬ ಮಗುವಿನ ಜನನವೂ ಆಗಿತು. ಎರಡನೇ ತಿಂಗಳಿನಲ್ಲಿ ಆ ಮಗುವು ನಂದಿಹೋಗಿತು. ಇದಕ್ಕೆ ಬೇಸರ ಪಡದೇ ಇಂದಿನ ಕಥಾನಾಯಕರು, "ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ" ಎಂದು ಹೇಳಿದರು.
ಶ್ರೀನೇಮಕಲ್ ರಾಯರ ಮಾರ್ಗದರ್ಶನದಲ್ಲಿ ಬೆಳೆದ 22-23 ವರ್ಷಗಳಿರುವ ಶ್ರೀಗೋವಿಂದದಾಸರನ್ನು ಉದ್ಧಾರ ಮಾಡಲು, ಸ್ವಪ್ನಸೂಚನದಂತೆ "ಯಜಮಾನರಾಯರೆಂದೇ" ಖ್ಯಾತರಾದ "ದಿನ್ನಿ ರಾಘಪ್ಪ"ನವರು ಇವರಿಗೆ ಉಪದೇಶಮಾಡಿದ್ದಲ್ಲದೇ ಶಿಷ್ಯನ ಕಕಲಾತಿಯಮೇರೆ ಕೆಲಕಾಲ ಅಸ್ಕಿಹಾಳದಲ್ಲಿಯೇ ವಾಸಮಾಡುವರಾದರು. ಗುರುಗಳ ಮಾರ್ಗದರ್ಶನದಲ್ಲಿ ಇಂದಿನ ಕಥನಾಯಕರ ಜೀವನದಲ್ಲಿ ಹೊಸದೊಂದು ಆಯಾಮ ಪ್ರಾರಂಭವಾಗುವದಲ್ಲದೇ ಅಸ್ಕಿಹಾಳಗ್ರಾಮದ ಮುಖಚಿತ್ರವೇ ಬದಲಾಗಿತು. ಗುರುಗಳಾದ ಯಜಮಾನರಾಯರ ಅಮೃತಸಿಂಚನದಿಂದ ಗೋವಿಂದದಾಸರ ಸಹಚರರೆಲ್ಲರೂ ದಾಸಪಂಥಹಿಡಿದರು. ಗುರು ಶಿಷ್ಯರ ಸಮಾಗಮದ ಸತ್ರಕ್ಕೆ "ಶ್ರೀರಘುವೀರ ಮಂದಿರ"ವೆಂಬ ಹೆಸರಿಟ್ಟು ಪ್ರತೀನಿತ್ಯವೂ ಹರಿಭಜನೆಯಲ್ಲಿ ಬ್ರಾಹ್ಮಣೇತರರ ಜೊತೆ ತಾವೂ ಭಾಗವಹಿಸುತ್ತಿದ್ದರು.
ಯಜಮಾನರಾಯರು ಮತ್ತು ಕೋಸಿಗಿ ಶ್ರೀಸ್ವಾಮಿರಾಯಾಚಾರ್ಯರಜೊತೆ ಕಲ್ಲೂರಿನ ಬೆಟ್ಟದಮೇಲಿನ ಶ್ರೀಪ್ರಾಣದೇವರ ಸನ್ನಿಧಿಯಲ್ಲಿ ರಾತ್ರಿ ತಂಗಿರಲು, ಇಂದಿನ ಕಥನಾಯಕರಿಗೆ ಶ್ರೀವಾಯುದೇವರ ಅನುಗ್ರಹ ವಾಗಲು, ಎರಡು ಬೆರಳುಗಳ ಸಂಕೇತದಿಂದ ಪೂಜ್ಯ ಕೋಸಿಗಿ ಸ್ವಾಮಿರಾಯಾಚಾರ್ಯರು ಗೋವಿಂದದಾಸರನ್ನು ಸಂಬೋಧಿಸುತ್ತಾ, ಇನ್ನೆಷ್ಟುದಿನ ಮುಚ್ಚಿಡುವೆ ತೆಗೆ ಅವುಗಳನ್ನು" ಎಂದರ. ಕಥಾನಾಯಕರಿಗೆ ಗುರುಗಳಿಂದ, "ಸಿರಿ ಗೋವಿಂದವಿಠಲ"ವೆಂಬ ಅಂಕಿತ ಪಡೆದನಂತರ ನಿತ್ಯ ಭಜನೆಗಾಗಿ ಸ್ವಂತ ದೇವರ ನಾಮಗಳನ್ನು ರಚಿಸಿದರು...
ಇವರ ಕೀರ್ತಿ ಪ್ರವರ್ಧವಾಗುತ್ತಿರಲು, ಸಹಿಸಲಾಗದವರು ಇವರ ಮೇಲೆ ಇಲ್ಲಸಲ್ಲದ್ದನ್ನು ಹೇಳಿ ಅಂದಿನ ಉತ್ತರಾದಿಮಠಾಧೀಶರಾದ ಶ್ರೀಸತ್ಯಧ್ಯಾನತೀರ್ಥರಿಂದ ಬಹಿಷ್ಕಾರ ತರಿಸಿದರು.
ಖಿನ್ನರಾದ ಗೋವಿಂದದಾಸರು, ಸ್ವಾಮಿಗಳ ಆಜ್ಞಾಪತ್ರದಂತೆ ರಾಯಚೂರಿನ ಪೂಜಾರ ಶ್ರೀಭೀಮಚಾರ್ಯರ ಮನೆಯಲ್ಲಿ ಶ್ರೀರಾಮದೇವರ ಪೂಜಾದಲ್ಲಿ ಮಗ್ನರಾದಾಗ, " ಏನೇನು ಭಯವಿಲ್ಲ ನಮಗೆ | ಪವಮಾನ ಸೇವಕ ಗುರು ರಘುಪತಿ ದಯವಿರೆ" ವೆಂಬ ಕೀರ್ತನೆಯನ್ನು ಭಾವೋದ್ರೇಕದಿಂದ ಉರಿಬಿಸಿಲಿನಲ್ಲೇ ನಿಂತು ಹಾಡುತ್ತಿರಲು,
ಪೂಜಾ ಮುಗಿಸಿ, ಭಿಕ್ಷಾ ಸ್ವೀಕಾರ ಮಾಡಿ ಹೊರಗೆ ಬಂದ ಸ್ವಾಮಿಗಳು, ಗೋವಿಂದದಾಸರ ಜೊತೆ,
ಏನೋ ದಾಸನಾಗಿರುವದಲ್ಲದೇ ಇತರರಿಗೂ ದಾಸದೀಕ್ಷೆ ಕೊಡುವಷ್ಟು ಮುಂದುವರೆದಯಾ? ಎಂದು ಪ್ರಶ್ನಿಸಲು, "
ಇದೇ ಪೇಳಿ ಪೋದರು ವಿಧು ವದನೆ ನಮ್ಮ | ಬುಧನುತ ಪದದ ನಾರದರು ಈ ಜಗದಿ ಬಂದು | ವೆಂಬ ಪದವನ್ನೇ ಆಲಾಪಿಸಲು, ಇವರ ಶಬ್ದ ಲಾಲಿತ್ಯಕ್ಕೆ ಮನೆ ಸೋತ ಸ್ವಾಮಿಗಳು ತಮ್ಮ ಗುರುಗಳಾದ ಶ್ರೀಸತ್ಯಜ್ಞಾನತೀರ್ಥರ ಮೇಲೆ ಒಂದು ಕೀರ್ತನೆಯನ್ನು ಹಾಡೆಂದು ಹೇಳಲು, ಹಾಗೇ ಮಾಡಿದ ಗೋವಿಂದದಾಸರಿಗೆ ತಾವೇ ಅಕ್ಷತೆಯನ್ನು ಹಚ್ಚಿ, ತೀರ್ಥಪ್ರಸಾದಕ್ಕೆ ಅನುಕೂಲ ಮಾಡಿಕೊಡುವುದಲ್ಲದೇ ಮರುದಿವಸವೂ ಬರಲು ಹೇಳಿದರು. ಅದರಂತೇ ಪೂಜಾವೇಳೆಗೆ ಬಂದ ಗೋವಿಂದದಾಸರು, " ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು " ಎಂದು ಎರಡುಸಲ ಹಾಡಲು, "
ಬಹಿಷ್ಕಾರ ತೆಗೆದು ಹಾಕಿದೆಂದು ಈ ರೀತಿ ಪ್ರಾರಂಭಿಸಿದೆಯಲ್ಲೋ" ಎಂದು ಪೂಜ ಮಾಡುತ್ತಿದ್ದ ಶ್ರೀಸತ್ಯಧ್ಯಾನರು ಗುಡುಗಿದರೊಳಗೆ
ದಾಸರು ಸಮಾಧಾನದಿಂದ ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು | ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು | ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು | ನಿತ್ಯ ದಿತಿಜರು ಕಲಿಗೆ ದೂರುತಿಹರು || ಎಂದು ಹೇಳುತ್ತಾ ಪದವನ್ನು ಮುಂದುವರಿಸಲು ಸ್ವಾಮಿಗಳು ಶಾಂತಚಿತ್ತದಿಂದ ಶ್ರೀರಾಮದೇವರ ಪೂಜ ಮಾಡಿ ದಾಸರನ್ನು ಅನುಗ್ರಹಿಸಿದರು.
ತಮ್ಮ ಅಪ್ಪಣೆ ಇಲ್ಲದೇ ತಮ್ಮ ದರ್ಶನಕ್ಕೆ ಬರಬಾರದೆಂದ ಗುರುಗಳ ಮಾತಿಗೆ ಬೆಲೆಕೊಟ್ಟು, ಅರಣ್ಯ ಇಲಾಖೆಯಲ್ಲಿ ರೇಂಜ ಆಫೀಸರಾಗಿ ಮಹಬೂಬನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಗುರುಗಳಾದ ಯಜಮಾನರಾಯರನ್ನು ನೋಡದೇ ಒಂದು ವರ್ಷ ಕಳೆಯಲು ಪೂಜ್ಯದಾಸರಿಗೆ ಅದು ಒಂದು ಯುಗದಂತಿತ್ತು...
ಗುರುಗಳ ದರ್ಶನಾಕಾಂಕ್ಷಿಗಳಾಗಿ, ಗುರುಗಳ ಕಟ್ಟಾಜ್ಞೆಯನ್ನು ಮೀರಿ, ಗುರುಗಳ ಅಗಲಿಕೆ ಅಸಹನೀಯವಾಗಿ, ದು:ಖವು ಉಕ್ಕುಕ್ಕಿ ಬರುತಿರಲು,
ಅಸ್ಕಿಹಾಳದಿಂದ ದೇವರಕದ್ರ ವರೆಗೆ ಪಾದಚಾರಗಳಾಗಿಯೇ ಹೊರಟರು.
12 ಮೈಲು ದೂರದಲ್ಲಿರುವ ಗುರುಗಳ ದರ್ಶನಕ್ಕೆ ಕಾತುರರಾಗಿದ್ದ ದಾಸರು ರೈಲ್ ನಲ್ಲಿ ಮಹಬೂಬನಗರಕ್ಕೆ ತೆರಳಿದರು.
ಅದೇ ಸಮಯಕ್ಕೆ, ಮಂಗಳಸ್ನಾನತುರರಾಗಿ ಯಜಮಾನರಾಯರು ತೈಲವನ್ನು ಲೇಪಿಸಿಕೊಳ್ಳುತ್ತಿರಲು,
ತಮಗೆ ಮಕ್ಕಳಾಗಲಿಲ್ಲವಲ್ಲಾ ಎಂಬ ಕೊರಗನ್ನು ಪತ್ನಿಯು ತೋಡಿಕೊಳ್ಳಲು, ಕೂಡಲೇ ಯಜಮಾನರಾಯರು, "ನಮಗೆ ಗೋವಿಂದದಾಸನೇ ಮಗನು. ನಮಗೆ ಮಕ್ಕಳಿಲ್ಲವೆಂದು ಯಾಕೆ ಹೇಳುತ್ತಿ?" ಎಂದು ಹೇಳುತ್ತಿರಲು ಇವರ ಮನೆಯ ತಲಬಾಗಿಲು ಸಪ್ಪಳವಾಗಿತು. ಕೂಡಲೇ ಯಜಮಾನರಾಯರು ಇವರನ್ನು ನೋಡಿ, "ಬೇಡವೆಂದರೂ ಬಂದು ಬಿಟ್ಟೆಯಾ!" ಎಂದು ಉದ್ಗರಿಸಲು,
ದಾಸರಿಗೆ ಗುರುಗಳಬಗ್ಗೆ ಇರುವ ಭಕ್ತಿಯ ಪ್ರವಾಹವು ಭೋರ್ಗರೆದು ಹರಿಯತೊಡಗಲು, ಕಂಠವು ಗದ್ಗದವಾಗಿ, ಹೃದಯಾಂತರಾಳದಿಂದ ನುಡಿವೊಂದು ಹೊರಹೊಮ್ಮಿತು.
ಇಷ್ಟು ಮಾಡಿ ಕೈಬಿಟ್ಟು ಕೂಡುವುದು ಶಿಷ್ಯರ ನಡತಲ್ಲೋ ಗುರುವೆ | ಬಲು ಕಷ್ಟದೊಳಗೆ ನಾ ಮುಳುಗಿರುವೆ |
ನೀ ಕೊಟ್ಟ ಅಭಯದಿಂ ಬದುಕಿರುವೆ | ಸಿಟ್ಟು ಮಾತ್ರ ನೀನಾಗಬೇಡ ಪೊರೆ | ಜಿಷ್ಣುಸಾರಥಿಯ ಪ್ರಿಯ ಮಗುವೆ ಬಾ ಬಾ ಗುರುವೆ | ....................
ಕಡೆ ನುಡಿಯನ್ನದು ಭಿಡೆಯ ಇಡದೆ | ನಾನುಡಿವೆ ಎನ್ನ ಮರೆತರೆ ಮಂಗನು ನೀ ನಿಜವೆ | ಎಂದು ಹೇಳುತ್ತಾ ತಮ್ಮ ಗುರುಗಳಾದ ಯ...ಜ...ಮಾ...ನ...ರಾ...ಯ...ರ...ಚ...ರ...ಣ...ಕ...ಮ...ಲ...ಗ...ಳ...ಮೇ...ಲೆ...ತ...ಲೆ...ಇ...ಟ್ಟ...ರು... ಪುನ: ಏಳಲೇ ಇಲ್ಲ....
ಪೂಜ್ಯ ಗುರ್ವಂತರ್ಯಾಮಿ ಭಾರತೀರಮಣ ಶ್ರೀಮುಖ್ಯಪ್ರಾಣಾಂತರ್ಗತ ಸಿರಿಗೋವಿಂದನ ಪಾದಾರವಿಂದಗಳಲ್ಲಿ ರಮಿಸುತ್ತಾ, ಆನಂದಮಕರಂದವನ್ನು ದುಂಬಿಯಂತೆ ಹೀರುತ್ತಾ, ಇಂದಿನ ಕಥಾನಾಯಕರ ಮರಣದಲ್ಲಿಯೂ ಚರಿತ್ರೆಯನ್ನು ಮೀರಿಸಲಾಗಲಿಲ್ಲ....
ಅರ್ಜುನನು ತನ್ನ ಮಗ ಅಭಿಮನ್ಯುವಿನ ವೀರಸ್ವರ್ಗವನ್ನು ಕಂಡಂತೆ, ಗುರುಗಳ ಸನ್ನಿಧಿಯಲ್ಲಿ ಪ್ರಿಯ ಶಿಷ್ಯನಾದ ಗೋವಿಂದದಾಸರೂ ಸಹ ಗೋವಿಂದನ ಪಾದಾರವಿಂದಗಳನ್ನು ಸೇರಿಕೊಂಡರು...
ನೀ ಮಾಡುವ ಕಾರ್ಯ ನಾ ಮಾಡಬೇಕಾಯಿತೇ ಎಂದು ಮರುಗುತ್ತಾ, ಗುರುಗಳಾದ ಶ್ರೀಯಜಮಾನರಾಯರ ಕಣ್ಣಲ್ಲಿ ಧಾರಾಕಾರದಂತೆ ನೀರು ಹರಿಯುತ್ತಿರಲು", ಶಿಷ್ಯೋತ್ತಮನಾದ ಗೋವಿಂದದಾಸರ ಸಂಸ್ಕಾರವು ಗುರುಗಳಿಂದೇ ನಡೆದು ಹೋಯಿತು...
ತಮ್ಮ ಗುರುಗಳ ನಿರ್ಯಾಣಾನಂತರ 22 ಮಂದಿ ಶಿಷ್ಯರಲ್ಲಿ ಒಬ್ಬರಾದ ಬಾದರಿ ಶ್ರೀಕೃಷ್ಣಾಚಾರ್ಯರು, ಆದವಾನಿಯ ಮುತ್ತಿಗಿ ಶ್ರೀನಿವಾಸಾಚಾರ್ಯರಲ್ಲಿ ಶರಣಾಗತರಾದರು. ಮುತ್ತಿಗಿ ಆಚಾರ್ಯರ ಭವ್ಯವ್ಯಕ್ತಿತ್ವವನ್ನು ತಮ್ಮ ಶಿಷ್ಯನಾದ ಇಟಿಗಿ ಶ್ರೀಅನಂತಾಚಾರ್ಯರಲ್ಲಿ ಹೇಳಲು ಅವರೂ ಸಹ ಕೂಡಲಿ ಆರ್ಯ ಅಕ್ಷೋಭ್ಯಮಠಾಧೀಶರಾದ ಶ್ರೀಶ್ರೀಶ್ರೀ 1008 ಶ್ರೀರಘುಪ್ರೇಮತೀರ್ಥರಲ್ಲಿ (ಮುತ್ತಿಗಿ ಶ್ರೀಶ್ರೀನಿವಾಸಾಚಾರ್ಯರು) ಶರಣಾಗತರಾಗಿ ತಮ್ಮ ಸಾಧನೆಯನ್ನು ಮುಂದುವರೆಸಿದರು.
🙏ಶ್ರೀ ಕೃಷ್ಣಾರ್ಪಣಮಸ್ತು🙏
*
info from Kannadasiri.in
By ಡಾ. ಬಸವರಾಜ ಸಬರದ
ಡಾ. ಜಯಲಕ್ಷ್ಮಿ ಮಂಗಳಮೂತಿ
ಸಮಗ್ರ ದಾಸವಾಙ್ಮಯವು ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ಪ್ರಾರಂಭದ ಘಟ್ಟದಲ್ಲಿ ಶ್ರೀಪಾದರಾಯರಿಂದ ಹಿಡಿದು ಇಂದಿನ ಆಧುನಿಕ ಸಂದರ್ಭದ ಕಾರ್ಪರ ನರಹರಿದಾಸರವರೆಗೆ ಇದರ ಬೆಳವಣಿಗೆಯನ್ನು ಗಮನಿಸಬಹುದಾಗಿದೆ. ಹೀಗಾಗಿ ಅಧ್ಯಯನದ ದೃಷ್ಟಿಯಿಂದ ಸಮಗ್ರ ದಾಸ ವಾಙ್ಮಯವನ್ನು ಎರಡು ರೀತಿಯ ಶಿಸ್ತನ್ನಳವಡಿಸಿಕೊಂಡು ಗಮನಿಸಬೇಕೆನಿಸುತ್ತದೆ.
ಶ್ರೀಪಾದರಾಜರಿಂದ ವಿಜಯದಾಸರವರೆಗೆ ರಚನೆಗೊಂಡ ದಾಸ ವಾಙ್ಮಯವು ಶಿಷ್ಟ ಪರಂಪರೆಯಿಂದ ಬೆಳೆದು ಮಾಧ್ವ ಸಿದ್ಧಾಂತವನ್ನು ಅನುಸರಿಸಿ ರಚನೆಯಾಗಿದೆ. ಸಂಸ್ಕøತ ಸಾಹಿತ್ಯದ ಶಾಸ್ತ್ರಗ್ರಂಥಗಳ ಅಧ್ಯಯನದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ರಚನೆಗೊಂಡದ್ದಾಗಿದೆ. ಎರಡನೇ ಹಂತದಲ್ಲಿ ಬೆಳೆದು ಬಂದ ದಾಸ ವಾಙ್ಮಯವು ಜನಪದರಿಂದ ರಚನೆಯಾದುದಾಗಿದೆ. ಮಾಧ್ವಮತದÀ ಸಿದ್ಧಾಂತ ಹಾಗೂ ಮೊದಲನೇ ಘಟ್ಟದ ದಾಸವರೇಣ್ಯರ ಪ್ರಭಾವ ಸಹಜವಾಗಿಯೇ ಈ ಜನಪದ ಮೂಲದಿಂದ ಬಂದ ಹರಿದಾಸರ ಮೇಲೆ ಪ್ರಭಾವವನ್ನುಂಟು ಮಾಡಿದೆ. ಎರಡನೇ ಹಂತದಲ್ಲಿ ಬೆಳೆದು ನಿಂತಿರುವ ಈ ಜನಪದ ಹರಿದಾಸರು ಮೂಲ ಸಿದ್ಧಾಂತಕ್ಕನುಗುಣವಾಗಿಯೇ ಕೀರ್ತನೆಗಳನ್ನು ರಚಿಸಿದರೂ ಕೂಡಾ ಈ ಕೀರ್ತನೆಗಳಲ್ಲಿ ಜನಪದ ಸಂಸ್ಕøತಿಯ ಅನೇಕ ಸಂರಚನೆಗಳು ಕೂಡಿಕೊಂಡಿವೆ. ಹೀಗಾಗಿ ಈ ಎರಡನೇ ಹಂತದ ಹರಿದಾಸರ ಕೀರ್ತನೆಗಳನ್ನು ಜಾನಪದದ ನೆಲೆಯಿಂದ ನೋಡುವುದು ಕೂಡ ಇಂದಿನ ಅಗತ್ಯವಾಗಿದೆ.
ಈ ಸಂಪುಟದಲ್ಲಿ ಅಂತಹ ಜನಪದ ಪರಂಪರೆಯಿಂದ ಬಂದಂತಹ ನಾಲ್ಕು ಜನ ಹರಿದಾಸರ ಸಂಕೀರ್ತನೆಗಳನ್ನು ಸಂಪಾದಿಸಿಕೊಂಡಲಾಗಿದೆ. 18-19ನೇ ಶತಮಾನದಲ್ಲಿದ್ದ ಹರಿದಾಸರ ರಚನೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಆಧ್ಯಾತ್ಮವೆಂಬುದು ಕೇವಲ ಯತಿಗಳ ಹಾಗೂ ಪಂಡಿತರ ಸೊತ್ತಾಗಿರುವಂಥ ಸಂದರ್ಭದಲ್ಲಿ ಸಾಮಾನ್ಯ ಜನವರ್ಗದಿಂದ ಬಂದ ಈ ಹರಿದಾಸರು ಸಂಸಾರದಲ್ಲಿದ್ದುಕೊಂಡೇ ಮಹತ್ತರವಾದುದನ್ನು ಸಾಧಿಸಿದರು. ತಮ್ಮ ದಿನನಿತ್ಯದ ದುಡಿಮೆಯ ಪ್ರತೀಕಗಳ ಮೂಲಕವೇ ಆಧ್ಯಾತ್ಮದ ಅನನ್ಯತೆಯನ್ನು ಕಟ್ಟಿ ನಿಲ್ಲಿಸಿದರು. ಸಂಸಾರದ ಜಂಜಾಟದಲ್ಲಿದ್ದುಕೊಂಡೇ ಭಕ್ತಿಯ ಮಹತ್ವವನ್ನು ಸಾರಿ ಹೇಳಿದರು. ಹೀಗಾಗಿ ಇವರಿಗೆ ಸಂಸಾರವೆಂಬುದು ಆಧ್ಯಾತ್ಮ ಸಾಧನೆಗೆ ತೊಡಕಾಗಿ ಕಾಣಲಿಲ್ಲ. ಈ ಸಾಮಾನ್ಯ ವರ್ಗದಿಂದ ಬಂದ ಹರಿದಾಸರ ವಿಶಿಷ್ಟತೆಯೇನೆಂದರೆ ಇವರು ಕೇವಲ ಕೀರ್ತನಗೆಳನ್ನು ಮಾತ್ರ ರಚಿಸಲಿಲ್ಲ. ಕೀರ್ತನೆ ಕಥನ ಕವನಗಳೊಂದಿಗೆ, ಲಾವಣಿ, ಗೀಗೀ ಪದ, ಬಯಲಾಟದಂತಹ ಜನಪದ ಪ್ರಕಾರಗಳಲ್ಲಿಯೂ ಕಾವ್ಯ ರಚಿಸಿದರು.
ಈ ಸಂಪುಟದಲ್ಲಿ ಬರುವ ನಾಲ್ಕು ಜನ ಹರಿದಾಸರಲ್ಲಿ ಇಬ್ಬರು ಹರಿದಾಸರು ಸುಶಿಕ್ಷಿತ ಮನೆತನದಿಂದ ಬಂದರೆ ಇನ್ನಿಬ್ಬರು ಹರಿದಾಸರು ಸಾಮಾನ್ಯ ವರ್ಗದಿಂದ ಬಂದವರಾಗಿದ್ದಾರೆ. ಇವರು ಹುಟ್ಟಿ ಬಂದ ಪರಿಸರದಲ್ಲಿ ವ್ಯತ್ಯಾಸವಿದ್ದರೂ ಹರಿದಾಸ ಮತದ ತತ್ತ್ವಗಳ ಪಾಲನೆಯಲ್ಲಿ ಒಮ್ಮತವಿರುವುದನ್ನು ಕಾಣಬಹುದಾಗಿದೆ.
ಕನ್ನಡ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಆದರೆ ಕುತೂಹಲದ ಸಂಗತಿಯೆಂದರೆ ಈ ಎರಡು ಶತಮಾನಗಳ ಅವಧಿಯಲ್ಲಿ ಅಸಂಖ್ಯಾತ ತತ್ವಪದಕಾರರು, ಕೀರ್ತನಕಾರರು ಹುಟ್ಟಿಬೆಳೆದಿರುವುದು ಗಮನಾರ್ಹ ಸಂಗತಿಯೆನಿಸುತ್ತದೆ. ಹದಿನೈದು ಹದಿನಾರನೇ ಶತಮಾನದಲ್ಲಿದ್ದ ಶಿಷ್ಟ ಪರಂಪರೆ ಈ ಸಮುದಾಯದ ಮೇಲೆ ಪ್ರಭಾವ ಬೀರಿದ್ದರೂ ಸಾಮಾನ್ಯವರ್ಗದಿಂದ ಬಂದ ಈ ಹರಿದಾಸರು ರಚಿಸಿದ ರಚನೆಗಳು ಭಾಷೆ, ವಸ್ತು, ಅಭಿವ್ಯಕ್ತಿ ನಲೆಯಲ್ಲಿ ವಿಶಿಷ್ಟವಾಗಿಯೇ ನಿಲ್ಲುತ್ತಾರೆ.
ಈ ಸಂಪುಟದಲ್ಲಿ ಬೆಳಗಾಂವ ಜಿಲ್ಲೆಯ ಗೋಕಾಕದ ಅನಾಂತಾದ್ರೀಶರ ಕಥನ ಕವನಗಳು, ಗುಲ್ಬರ್ಗ ಜಿಲ್ಲೆಯ ಮುದನೂರಿನ ಹೆನ್ನೆರಂಗದಾಸರ ಕೀರ್ತನೆಗಳು, ರಾಯಚೂರು ಜಿಲ್ಲೆಯ ಅಸ್ಕಿಹಾಳ ಗೋವಿಂದದಾಸರ ರಚನೆಗಳು ಮತ್ತು ರಾಯಚೂರು ಜಿಲ್ಲೆಯ ಕೊಪ್ಪರ ಗ್ರಾಮದ ಕಾರ್ಪರ ನರಹರಿದಾಸರ ಕೀರ್ತನೆಗಳು ಸೇರಿಕೊಂಡಿವೆ.
ಶ್ರೀಗೋವಿಂದ ದಾಸರ ಜನ್ಮಸ್ಥಳ ರಾಯಚೂರು ಜಿಲ್ಲೆಯ ಅಸ್ಕಿಹಾಳ ಗ್ರಾಮ. ಕ್ರಿ.ಶ 1891ರಲ್ಲಿ ದಾಸರ ಜನನವೆಂದು ತಿಳಿದು ಬರುತ್ತದೆ. ತಂದೆ ಶ್ರೀಗಿರಿದಾಸರು. ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡರು. ದಾಸರ ಬಾಲ್ಯವೆಲ್ಲ ಬಡತನದಲ್ಲಿಯೇ ಕಳೆಯಿತು. ದಾಸರು ತುಳಸಮ್ಮ ಎನ್ನವವರೊಡನೆ ವಿವಾಹವಾಗಿದ್ದು, ಹುಟ್ಟಿದ ಒಂದು ಗಂಡುಮಗುವು ಅಸುನೀಗಿದಾಗ ದಾಸರು ಸಹಜವಾಗಿ ಆಧ್ಯಾತ್ಮದತ್ತ ಒಲಿದರು.
ಗೋವಿಂದದಾಸರದು ಅತ್ಯಂತ ಜನಪ್ರಿಯ ವ್ಯಕ್ತಿತ್ವವಾಗಿದೆ. ಜನಸಾಮಾನ್ಯ-ರೊಡನೆ ಒಂದಾಗಿ ಬಾಳಿದ ದಾಸರು, ಆಧ್ಯಾತ್ಮದ ಸಾಧನೆಯ ಪಥಕ್ಕೆ ಜನಮನವನ್ನು ಅಣಿಗೊಳಿಸಿದರು. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಮಂದಿಸುತ್ತ, ಸಾಮಾಜಿಕ ತಿಳಿವನ್ನು ನೀಡುತ್ತ, ಸತ್ಸಂಗ, ನಿರಂತರ ಚರ್ಚೆ, ಭಜನೆ ಮುಂತಾದ ಸಾಮೂಹಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಮಾಜದ ಎಲ್ಲ ವರ್ಗದವರನ್ನೂ ತೊಡಗಿಸಿದರು. ಇಂದು ಗೋವಿಂದದಾಸರ ಶಿಷ್ಯವರ್ಗದಲ್ಲಿ ಕ್ಷೌರಿಕರು, ವೀರಶೈವರು, ಹರಿಜನ ಮುಂತಾದವರು ಕಂಡು ಬರುತ್ತಾರೆ. ದಾಸರು ಅಸ್ಕಿಹಾಳಿನ ಗೌಡರ ಸಂಗಪ್ಪನಿಗೆ ನೀಡಿದ ರತ್ನಗರ್ಭ ಸಾಲಿಗ್ರಾಮವನ್ನು ಇಂದಿಗೂ ನೋಡಬಹುದಾಗಿದೆ. ಇವರೆಲ್ಲರೂ ಪ್ರತಿನಿತ್ಯ ಸೇರುವ ಸ್ಥಳವನ್ನು 'ರಘುವೀರಮಂದಿರ'ವೆಂದು ದಾಸರು ಕರೆದಿದ್ದಾರೆ. ಸಂಪ್ರದಾಯದ, ಮಧ್ವಸಿದ್ಧಾಂತಗಳ ಚೌಕಟ್ಟಿನಲ್ಲಿದ್ದೇ ತಮ್ಮ ಉದಾತ್ತವಾದ ಕ್ರಾಂತಿಕಾರಕ ನಿಲುವನ್ನು ತಳೆದ ದಾಸರು ಇತರ ಮತದ ಶಿಷ್ಯರಿಗೂ ದೀಕ್ಷೆಯನ್ನು ನೀಡಿದ್ದಾರೆ. ಈ ಕಾರ್ಯಕ್ಕಾಗಿ ತಮ್ಮ ಮಠದ ಗುರುಗಳಿಂದ ಬಹಿಷ್ಕಾರವನ್ನೂ ಎದುರಿಸಿದರು. ದಾಸರ ಸಾಮಾಜಿಕ ಕಳಕಳಿಯನ್ನು ಅರಿತ ಗುರುಗಳು ತಾವೇ ಕರೆಯಿಸಿ ಸಂತೈಸಿದ ವಿಷಯ ತಿಳಿದುಬರುತ್ತದೆ. ದಾಸರು ತಮ್ಮ ಶಿಷ್ಯರೊಡನೆ ಭಜನೆ ಮಾಡುವಾಗ ಮಧ್ವದಲ್ಲಿ ಕರ್ಪೂರದ ಆರತಿಯನ್ನು ಉರಿಸುತ್ತಿದ್ದು, ಇಂದಿಗೂ ಇವರ ಶಿಷ್ಯರು ಇದೇ ಭಜನಾಕ್ರಮವನ್ನು ಅನುಸರಿಸುತ್ತಿದ್ದಾರೆ. ಅವರ ಈ ಸಾಮಾಜಿಕ ಕಾರ್ಯಕ್ಷೇತ್ರದಂತೆ ಸಾಹಿತ್ಯಕ ಕ್ಷೇತ್ರವೂ ಹೊಸತನದಿಂದ ಕೂಡಿದುದಾಗಿದೆ. ಇಲ್ಲಿಯವರೆಗೆ ಕೀರ್ತನೆÀ, ಸುಳಾದಿ, ಉಗಾಭೋಗ ಮುಂತಾದ ಪ್ರಕಾರಗಳಲ್ಲಿ ಕಂಡುಬರುತ್ತಿದ್ದ ಹರಿದಾಸಸಾಹಿತ್ಯ ದಾಸರ ಉದಾತ್ತ ಮನೋಭೂಮಿಕೆಯಿಂದಾಗಿ ಲಾವಣಿ, ಗೀಗಿ, ಬಯಲಾಟದಂತಹ ಜನಪದ ಮಾಧ್ಯಮಗಳಲ್ಲೂ ಪ್ರವಹಿಸಿತು. ಗೋವಿಂದದಾಸರು ಈ ಎಲ್ಲ ಮಾಧ್ಯಮಗಳಲ್ಲೂ ಸಾಹಿತ್ಯರಚನೆಗೈದಿದ್ದಾರೆ. ಅವರು ರಚಿಸಿದ `ಕಲಿಯುಗ ಲಾವಣಿ’ ಪತನಗೊಂಡ ಸಾಮಾಜಿಕ ಮೌಲ್ಯಗಳನ್ನು ಚಿತ್ರಿಸುತ್ತದೆ. 'ಕನಕಾಂಗಿ ಕಲ್ಯಾಣ' ಬಯಲಾಟವು ಇಂದಿಗೂ ಪ್ರದರ್ಶನವನ್ನು ಕಾಣುತ್ತಿದ್ದು ಮಾನವಪ್ರೇಮ, ಬಂಧುತ್ವ, ಅಂತ:ಕರಣ, ಮುಂತಾದ ಮಾನವೀಯ ಮೌಲ್ಯಗಳನ್ನು ಸಾರುತ್ತದೆ. ದಾಸರು ರಚಿಸಿದ ಕೀರ್ತನಗಳಲ್ಲಿ ಕೇವಲ ಮೂವತ್ತು ಮಾತ್ರ ಉಪಲಬ್ಧವಾಗಿವೆ. ರಾಯಚೂರಿನಲ್ಲಿ ದಾಸರ ಸಂಬಂಧಿಗಳು ವಾಸವಾಗಿದ್ದು ಅವರ ಮನೆಯಲ್ಲಿ ದಾಸರು ಉಪಯೋಗಿಸುತ್ತಿದ್ದ ಹಾರ್ಮೋನಿಯಮ್, ತಂಬೂರಿ, ವೀಣೆ, ತಾಳ ಚಿಟಿಕೆ ಮುಂತಾದ ಸಂಗೀತ ಉಪಕರಣಗಳಿವೆ. ದಾಸರು ಕೇವಲ ಮೂವತ್ತನೆಯ ವರ್ಷದಲ್ಲಿಯೇ (ಕ್ರಿ.ಶ 1919 ರಲ್ಲಿಯೇ ) ಕಣ್ಮರೆಯಾದರು.
ಸಂಗ್ರಹ-ಸಂಸ್ಕರಣ-ಸಂಪಾದನೆ
ಈ ಸಂಪುಟದಲ್ಲಿ ಬರುವ ನಾಲ್ಕು ಜನ ಹರಿದಾಸರ ಕೀರ್ತನೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಅನೇಕ ಆಕರಗಳನ್ನು ಬಳಸಿಕೊಳ್ಳಲಾಗಿದೆ. ಇಲ್ಲಿಯ ಕೀರ್ತನೆಗಳನ್ನು ಮುಖ್ಯವಾಗಿ ಎರಡು ರೀತಿಯ ಆಕರ ಗಳಿನ್ನಿಟ್ಟುಕೊಂಡು ಜೋಡಿಸಲಾಗಿದೆ. ಇಲ್ಲಿಯ ಕೆಲವು ದಾಸರ ಕೀರ್ತನಗಳು ಈಗಾಗಲೆ ಪ್ರಕಟವಾಗಿವೆ. ಇನ್ನು ಕೆಲವು ದಾಸರ ಕೀರ್ತನಗಳು, ಈ ಸಂಪುಟದ ಮೂಲಕ ಮೊದಲಬಾರಿಗೆ ಪ್ರಕಟಗೊಳ್ಳುತ್ತಲಿವೆ. ಇವುಗಳಿಗೆ ಸಂಬಂಧಿಸಿದ ವಿವರಗಳನ್ನು ಗಮನಿಸಬಹುದಾಗಿದೆ.
ಶ್ರೀಗೋಕಾವಿ ಅನಂತಾದ್ರೀಶರ ರಚನೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟವಾಗಿರುವ ಮೂರು ಪಠ್ಯಗಳನ್ನು ಆಕರವಾಗಿಟ್ಟುಕೊಳ್ಳಲಾಗಿದೆ. ಅನಂತಾದ್ರೀಶದಾಸರು ವೆಂಕಟೇಶ ಪಾರಿಜಾತ, ಶಿವಪಾರಿಜಾತ, ಧ್ರುವಚರಿತ್ರೆ ಹಾಗೂ ಪ್ರಹ್ಲಾದ ಚರಿತ್ರೆ ಮುಂತಾದ ಕಥನಕಾವ್ಯಗಳನ್ನು ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ವೆಂಕಟೇಶ ಪಾರಿಜಾತ ಕಥನಕಾವ್ಯವನ್ನು ಗದಗಿನ ಹೊಂಬಾಳಿ ಬಂಧುಗಳು ಪ್ರಕಾಶನದವರು ಕ್ರಿ.ಶ 1960 ರಲ್ಲಿ ಪ್ರಕಟಿಸಿದ್ದಾರೆ.'ಶ್ರೀ ಕೃಷ್ಣಚರಿತ್ರೆ'ಯನ್ನು 1935 ರಲ್ಲಿ ದಿ|| ಬಿಂದಾಚಾರ್ಯಜಯತೀರ್ಥಾಚಾರ್ಯ ಗೋಕಾಕ ಇವರು ಪ್ರಕಟಿಸಿದ್ದರು. 'ಪ್ರಹ್ಲಾದ ಚರಿತ್ರೆ' ಕಥನಕಾವ್ಯವು ಇದೇ ಪ್ರಕಾಶನದಿಂದ ಕ್ರಿ.ಶ 1980ರಲ್ಲಿ ಪ್ರಕಟವಾಗಿದೆ. ಇವೆರಡೂ ಪ್ರಕಟಿತ ಕೃತಿಗಳಲ್ಲಿರುವ ಹಾಡುಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಈ ಪ್ರಕಟಿತ ಹಾಡುಗಳಲ್ಲಿ ಅನೇಕ ಅಶುದ್ಧ ಪಾಠಗಳಿದ್ದು ಅವುಗಳನ್ನು ಪರಿಷ್ಕರಿಸಿ ಶುದ್ಧ ಪಾಠಗಳನ್ನು ಮಾತ್ರ ಇಲ್ಲಿ ಸಂಪಾದಿಸಲಾಗಿದೆ. 'ಶಿವಪಾರಿಜಾತ' ಕಥನ ಕಾವ್ಯವು ಜೀರ್ಣಾವಸ್ಥೆಯಲ್ಲಿರುವ ಮುದ್ರಿತ ಕೃತಿಯಾಗಿದ್ದು ಈ ಕೃತಿಯ ಸಂಪಾದಕರ ಪ್ರಕಾಶಕರ ವಿವರಗಳು ತಿಳಿದುಬಂದಿಲ್ಲ. ನಾವು ಕ್ಷೇತ್ರಕಾರ್ಯ ಮಾಡಿದಾಗ ಧ್ವನಿ ಮುದ್ರಿಸಿಕೊಂಡ ವಕ್ತøಗಳ ಹಾಡುಗಳನ್ನು ಈ ಜೀರ್ಣಗೊಂಡ ಕೃತಿಯೊಂದಿಗೆ ತುಲನೆ ಮಾಡಿನೋಡಿ ಶುದ್ಧ ಪಾಠಗಳನ್ನು ಸಿದ್ಧಪಡಿಸಿ ಈ ಕಾವ್ಯವನ್ನು ಸಂಪಾದಿಸಿಕೊಡಲಾಗಿದೆ. 'ಧ್ರುವಚರಿತ್ರೆ' ಕಥನ ಕಾವ್ಯವು ಇದುವರೆಗೆ ಎಲ್ಲಿಯೂ ಪ್ರಕಟವಾಗಿರುವುದಿಲ್ಲ. ಇದರ ಮೂಲ ಪ್ರತಿಯನ್ನು ನಾವು ಶ್ರೀ ಜಯತೀರ್ಥ ಅಷ್ಟಪುತ್ರೆ, ಗೋಕಾಕ, ಇವರಿಂದÀ ಪಡೆದುಕೊಂಡಿದ್ದೇವೆ. ಈ ಹಸ್ತಪ್ರತಿ ದೇವನಾಗರಿ ಲಿಪಿಯಲ್ಲಿದೆ. ಈ ಹಸ್ತಪ್ರತಿಯನ್ನು ಪರಿಷ್ಕರಿಸಿ ದೇವನಾಗರಿ ಲಿಪಿಯಿಂದ ಕನ್ನಡ ಲಿಪಿಗೆ ಬದಲಾಯಿಸಿ ಅದರ ಶುದ್ಧ ಪಾಠವನ್ನು ಇಲ್ಲಿಕೊಡಲಾಗಿದೆ. ಶ್ರೀತುಳಜಾಮಹಾತ್ಮೆ ಹಸ್ತಪ್ರತಿಯನ್ನು ಉದಯ ಆಚಾರ ಗೋಕಾಕರಿಂದ ಸಂಗ್ರಹಿಸಲಾಗಿದ್ದು ಪ್ರಥಮ ಬಾರಿ ಪ್ರಕಟಗೊಳ್ಳುತ್ತಲಿದೆ. ಅನಂತಾದ್ರೀಶರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆಂಬುದು ಈಗಾಗಲೇ ಸ್ವಷ್ಟವಾಗಿದೆ. ನಾವು ಕೈಕೊಂಡ ಕ್ಷೇತ್ರಕಾರ್ಯದಲ್ಲಿ ಇವರ ಕೀರ್ತನೆಗಳು ಅಧಿಕ ಸಂಖ್ಯೆಯಲ್ಲಿ ನಮಗೆ ದೊರೆಯಲಿಲ್ಲ. ಈಗ ಸಧ್ಯಕ್ಕೆ ಏಳು ಕೀರ್ತನೆಗಳನ್ನು ಇದರೊಂದಿಗೆ ಸಂಗ್ರಹಿಸಿಕೊಟ್ಟಿದ್ದೇವೆ. ಈ ಕೀರ್ತನೆಗಳನ್ನು ಶ್ರೀಮತಿ ಲಲಿತಾಬಾಯಿ ಕೊಪ್ಪರ, ಶ್ರೀಮತಿ ಗೋದಾವರಿ ಕಲ್ಲೂರಕರ್, ಡಾ||ಶೈಲಜಾ ಕೊಪ್ಪರ್, ಶ್ರೀಮತಿ ಶಾಲಿನಿ ಕೊಪ್ಪರ ವಕ್ತøಗಳಿಂದ ಪಡೆದುಕೊಳ್ಳಲಾಗಿದೆ. ಹಾಗೆ ಪಡೆದು ಕೊಂಡ ಕೀರ್ತನೆಗಳನ್ನು ಪರಿಷ್ಕರಿಸಿ ತೆಗೆದುಕೊಳ್ಳಲಾಗಿದೆ.
ಹೆನ್ನರಂಗವಿಠಲರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಕ್ರಿ.ಶ 1939ರಲ್ಲಿ ಕನಕಗಿರಿಯ ರಾಜಗೋಪಾಲಾಚಾರ್ಯರು ಹೆನ್ನರಂಗ ವಿಠಲರ 63 ಕೀರ್ತನಗಳನ್ನು ಪ್ರಕಟಿಸಿದ್ದಾರೆ ಹೀಗೆ ಹೆನ್ನರಂಗವಿಠಲರ ಕೀರ್ತನೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಇದೊಂದೇ ಕೃತಿ ಪ್ರಕಟವಾಗಿದೆ. ಇದು ಕೂಡಾ ಅಪೂರ್ಣವಾಗಿದೆ. ಗುಲಬರ್ಗಾ ಜಿಲ್ಲೆಯ ಸುರಪುರದಲ್ಲಿ ವಾಸಿಸುತ್ತಿರುವ ಶ್ರೀ ಶ್ರೀಹರಿರಾವ್ ಆದವಾನಿಯವರು ಆಸಕ್ತಿಯಿಂದ ಕೆಲವು ದಾಸರ ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ. ಅವರ ಸಂಗ್ರಹದಿಂದ ಹೆನ್ನೆರಂಗವಿಠಲ ರಚನೆಗಳನ್ನು ಆಯ್ದುಕೊಂಡು, ಪರಿಷ್ಕರಿಸಿ ಇಲ್ಲಿಕೊಡಲಾಗಿದೆ. ಪರಿವಿಡಿಯಲ್ಲಿ ಎರಡುನೂರು ಕೀರ್ತನೆಗಳ ಪ್ರಸ್ತಾಪವಿದ್ದರೂ ಅದರಲ್ಲಿ ಕೆಲಕೀರ್ತನೆಗಳು ಅಳಿಸಿ ಹೋಗಿವೆ. ಹೀಗಾಗಿ ಒಂದು ನೂರಾ ಎಂಬತ್ತೈದು ಕೀರ್ತನಗಳನ್ನು ಮಾತ್ರ ನಮಗೆ ಸಂಪಾದಿಸಿಕೊಡಲು ಸಾಧ್ಯವಾಗಿದೆ. ಶ್ರೀ ಶ್ರೀಹರಿರಾವರ್ ಆದವಾನಿಯವರಿಂದ ನಮಗೆ ದೊರೆತಿರುವ ಈ ಹಸ್ತಪ್ರತಿ ತೆಲುಗು ಲಿಪಿಯಲ್ಲಿದೆ. ಇದನ್ನು ಕನ್ನಡ ಲಿಪಿಗೆ ಅಳವಡಿಸಿ, ಪಾಠಾಂತರಗಳನ್ನು ಪರಿಷ್ಕರಿಸಿ ಭಾವಾರ್ಥವನ್ನು ಜೋಡಿಸಿ ಸಂಪಾದಿಸಿ ಕೊಡಲಾಗಿದೆ. ಹೆನ್ನೆರಂಗ ವಿಠಲರು, ಶತಕಗಳನ್ನು ಹಾಗೂ ಸೀಸಪದ್ಯಗಳನ್ನು ರಚಿಸಿರುವುದು ತಿಳಿದು ಬರುತ್ತದೆ. ಕನಕಗಿರಿಯ ರಾಜಗೋಪಾಲಚಾರ್ಯರು ಸಂಪಾದಿಸಿ ಪ್ರಕಟಿಸಿರುವ ಕೃತಿಯಲ್ಲಿ ಶತಕ ಹಾಗು ಸೀಸಪದ್ಯಗಳನ್ನು ನೋಡಬಹುದಾಗಿದೆ. ಈ ಸಂಪುಟವು ಕೀರ್ತನೆಗಳ ಪ್ರಕಟಣೆಗೆ ಮಾತ್ರ ಸೀಮಿತವಾಗಿರುವುದರಿಂದ ನಾವಿಲ್ಲಿ ಅವರ ಕೀರ್ತನಗಳನ್ನು ಮಾತ್ರ ಸಂಪಾದಿಸಿ ಕೊಟ್ಟಿದ್ದೇವೆ.
ಅಸ್ಕಿಹಾಳ ಗೋವಿಂದದಾಸರು ಕೀರ್ತನೆಗಳನ್ನು ರಚಿಸಿರುವುದಲ್ಲದೆ ಬಯಲಾಟ, ಗೀಗಿಪದ, ಲಾವಣಿಗಳನ್ನು ಕೂಡಾ ರಚಿಸಿದ್ದಾರೆ. ಮೂವತ್ತು ಕೀರ್ತನಗಳನ್ನೊಳಗೊಂಡ ಕೃತಿಯೊಂದು 1978ರಲ್ಲಿ ರಾಯಚೂರಿನ 'ಶ್ರೀಕೋಟೆ ಗುರುರಾಜ ಭಜನಾಮಂಡಳಿಯವರಿಂದ ಪ್ರಕಟಗೊಂಡಿದೆ' ಗೋವಿಂದದಾಸರ ಮನೆತನದವರು ಈಗ ರಾಯಚೂರಿನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಭೇಟಿಯಾಗಿ ನಾವು ಅವರಿಂದ ಗೋವಿಂದ ದಾಸರ ಕೀರ್ತನೆಗಳÀÀ ಹಸ್ತ ಪ್ರತಿಯನ್ನು ಪಡೆದುಕೊಂಡಿದ್ದೇವೆ. ಈ ಹಸ್ತಪ್ರತಿ ಹಾಗೂ ಈಗಾಗಲೇ ಪ್ರಕಟಿತವಾಗಿರುವ ಕೀರ್ತನಗಳ ಸಂಕಲನ ಇವರೆಡನ್ನೂ ಇಲ್ಲಿ ಆಕರವಾಗಿಟ್ಟುಕೊಳ್ಳಲಾಗಿದೆ. ಎರಡೂ ಆಕರಗಳ ಮೂಲಕ ಪರಿಷ್ಕರಣೆಯನ್ನು ಮಾಡಿ ಅಂತಿಮವಾಗಿ ಮೂವತ್ತು ಕೀರ್ತನೆಗಳನ್ನು ಇಲ್ಲಿ ಸಂಪಾದಿಸಿಕೊಡಲಾಗಿದೆ.
ಕಾರ್ಪರ ನರಹರಿದಾಸರು ಅನೇಕೆ ಕೀರ್ತನೆಗಳನ್ನು, ಬಯಲಾಟದ ಹಾಡುಗಳನ್ನು ರಚಿಸಿದ್ದಾರೆ. ರಾಯಚೂರಿನ ಕೋಟೆ ಭಜನಾ ಮಂಡಳಿಯವರು ಈಗಾಗಲೇ ಇವರ ಒಂದನೂರಾ ಹದಿನಾಲ್ಕು ಕೀರ್ತನೆÀಗಳನ್ನು 1984ರಲ್ಲಿ ಪ್ರಕಟಿಸಿದ್ದಾರೆ. ಕಾರ್ಪರ ನರಹರಿದಾಸರ ಮಕ್ಕಳಾದ ಶ್ರೀ.ಕೆ ಜಯಾಚಾರ್ಯ ಹಾಗೂ ದಾಸರ ಅಳಿಯಂದಿರಾದ ಶ್ರೀ ಕೆ.ಎನ್.ಆಚಾರ್ಯ ಇವರು ಸಂಗ್ರಹಿಸಿದ ಹಸ್ತ ಪ್ರತಿಗಳನ್ನು ಇಲ್ಲಿ ಆಧಾರವಾಗಿಟ್ಟುಕೊಳ್ಳಲಾಗಿದೆ. ಇವೆರಡೂ ಆಕರಗಳಿಂದ ಶುದ್ಧ ಪಾಠವನ್ನು ಗುರಿತಿಸಿ ಇತ್ತೀಚೆಗೆ ದೊರೆತ ಅವರ ಆರು ಕೀರ್ತನೆಗಳನ್ನು ಇದಕ್ಕೆ ಜೋಡಿಸಿ ಕಾರ್ಪರ ನರಹರಿದಾಸರ ಒಟ್ಟು ನೂರಾಇಪ್ಪತ್ತು ಕೀರ್ತನಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಈ ಸಂಪುಟದಲ್ಲಿ ಬರುವ ನಾಲ್ಕುಜನ ಹರಿದಾಸರ ರಚನೆಗಳನ್ನು ಇತರ ದಾಸರ ರಚನೆಗಳೊಂದಿಗೆ, ಹೋಲಿಸಿ ನೋಡಿದಾಗ ಕೆಲವು ವಿಶಿಷ್ಟ ಸಂಗತಿ ಬೆಳಕಿಗೆ ಬರುತ್ತವೆ. ದಾಸ ಸಾಹಿತ್ಯದ ಮೊದಲಿನ ಘಟ್ಟಗಳಿಗೆ ಭಿನ್ನವಾಗಿ ನಿಲ್ಲುವ ಈ ದಾಸರ ಸಾಹಿತ್ಯ ರಚನೆಗಳಲ್ಲಿ ಜಾನಪದ ಪ್ರಭಾವವನ್ನು ಕಾಣಬಹುದಾಗಿಗೆ. ದ್ವೈತಸಿದ್ಧಾಂತವು ಜನಪದ ರೂಪಗಳ ಮುಖಾಂತರ ಇಲ್ಲಿ ಕಾಣಿಸಿಕೊಂಡಿದೆ. ಶಿಷ್ಟ ಪರಂಪರೆಯ ಪುರಾಣ ಶತಕ, ಕೀರ್ತನೆಗಳಿರುವಂತೆ ಜನಪದ ಪರಂಪರೆಯ ಪಾರಿಜಾತ, ಲಾವಣಿ ಬಯಲಾಟದಂತಹ ಜನಪದ ರೂಪಗಳೂ ಈ ಹರಿದಾಸರಲ್ಲಿ ಬಳಕೆಯಾಗಿವೆ.
18-19ನೇ ಶತಮಾನ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯಲ್ಲಿ ಅಂತಹ ಮಹತ್ವದ ಕಾಲವಾಗಿರದಿದ್ದರೂ ತತ್ವಪದ ಸಾಹಿತ್ಯ, ಕೀರ್ತನ ಸಾಹಿತ್ಯದಂತಹ ಕ್ಷೇತ್ರಗಳಲ್ಲಿ ಬಹಳ ಮಹತ್ವ, ಬೆಳವಣಿಗೆಯನ್ನು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ದೇಶದಾದ್ಯಂತ ಪಾಶ್ಚಾತ್ಯರ ರೋಮ್ಯಾಂಟಿಕ ಪ್ರಭಾವ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಪ್ರದೇಶದ ಕವಿಗಳು, ಕೀರ್ತನಕಾರರು ದೇಶೀಯ ರೂಪಕಗಳೊಂದಿಗೆ, ಬದುಕಿನ ಹುಡುಕಾಟವನ್ನು ಪ್ರಾರಂಭಿಸಿದ್ದು ತುಂಬ ಗಮನಾರ್ಹವಾದ ಸಂಗತಿಯಾಗಿದೆ.
ದಕ್ಷಿಣ ಕರ್ನಾಟಕದ ಹಾಗೂ ಮುಂಬಯಿ ಕರ್ನಾಟಕ ಕಡೆ ಪಾಶ್ಚಾತ್ಯ ಸಾಹಿತ್ಯ ತುಂಬ ಪ್ರಭಾವಭೀರಿದ ಸಂದರ್ಭದಲ್ಲಿ ಈ ಹೈದ್ರಾಬಾದ ಕರ್ನಾಟಕದ ಪ್ರದೇಶದಲ್ಲಿ ಕೀರ್ತನಕಾರರು, ತತ್ವಪದಕಾರರು, ತಮ್ಮ ದೇಶೀಯರೂಪಗಳ ಮೂಲಕವೇ ಹೊಸ ಚಿಂತನೆಯನ್ನು ಪ್ರಾರಂಭಿಸಿದ್ದು ಹಾಗೂ ಇವರ ರಚನೆಗಳು ಜನಸಮುದಾಯದ ನಾಲಿಗೆಯ ಮೇಲೆ ನರ್ತಿಸಿದ್ದು ಇವತ್ತಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ.
ಭಕ್ತಿ ಆಧ್ಯಾತ್ಮದಂತಹ ವಿಷಯಗಳಲಿ ಇಲ್ಲಿಯ ಜನ ಸಮುದಾಯದಲ್ಲಿ ಸಹಿಷ್ಣುತೆ, ಭಾವೈಕ್ಯತೆಯನ್ನು ಮೂಡಿಸಿದ್ದು ಮಹತ್ವದ ಸಂಗತಿಯಾಗಿದೆ. ದಾಸ ಸಾಹಿತ್ಯದ ಪರಂಪರೆಯಲ್ಲಿ ಅನೇಕ ಕೀರ್ತನಕಾರರು ಬೇರೆ ಬೇರೆ ಜಾತಿ-ಮತಗಳಿಂದ ಹುಟ್ಟಿಬಂದಿರುವುದು ಗಮನಿಸುವ ವಿಷಯವಾಗಿದೆ. ದಾಸ ಸಾಹಿತ್ಯದ ಮೊದಲನೇ ಘಟ್ಟದಲ್ಲಿ ಕುರುಬ ಜನಾಂಗದಿಂದ ಕನಕದಾಸ ಮಹತ್ವದ ಕೀರ್ತನಕಾರನಾದರೆ 19ನೆ ಶತಮಾನದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಪಿಂಜಾರ ಜನಾಂಗದಿಂದ ಬಂದ ರಾಮದಾಸನÀು ದ್ವೈತಮತದ ವಿಶಾಲತೆಗೆ ಸಾಕ್ಷಿಯಾಗಿದ್ದಾನೆ. ವೈಷ್ಣವ ಮನೆತನದಲ್ಲಿ ಜನಿಸಿದ ಅನಂತಾದ್ರೀಶರು ಶಿವಪಾರಿಜಾತದಂತಹ ಕಥನಕಾವ್ಯವನ್ನು ರಚಿಸಿರುವುದು ಮಹತ್ವದ ಸಂಗತಿಯಾಗುತ್ತದೆ. ಜನಪದ ಮೌಲ್ಯಗಳಿಂದ ಬಂದ ಇಂತಹ ಕೀರ್ತನಕಾರರು ತಮ್ಮ ಕೀರ್ತನೆಗಳ ಮೂಲಕ ಜನಸಮುದಾಯಕ್ಕೆ ಹತ್ತಿರವಾಗಿದ್ದಾರೆ. ಹರಿ-ಹರ ಎಂಬ ಭೇದವನ್ನು ಬಿಟ್ಟು ಜಾತಿ-ಮತಗಳ ಹಂಗನ್ನು ತೊರೆದು ಮಾನವೀಯತೆಗೆ ಪ್ರಾಮುಖ್ಯತೆ ನೀಡಿದ್ದು, ಆಧ್ಯಾತ್ಮದ ಎತ್ತರವನ್ನೇರಿದ್ದು ಗುರುತಿಸುವಂಥ ವಿಷಯವಾಗಿದೆ.
ಈ ಸಂಪುಟದ ಹರಿದಾಸರು ವಸ್ತು, ಅಭಿವ್ಯಕ್ತಿ, ಭಾಷೆ ಆಶಯ ಇವುಗಳಲ್ಲಿ ತಮ್ಮದೇ ಆದ ವಿಶಿಷ್ಟತೆಯನ್ನು ಮೆರೆದಿದ್ದಾರೆ. ಅನಂತಾದ್ರೀಶರು ರಚಿಸಿರುವ ನಾಲ್ಕು ಸುದೀರ್ಘ ಕಥನಕಾವ್ಯಗಳಲ್ಲಿ ಪುರಾಣದ ಮೂಲಕ ಭಕ್ತಿ ಪರಂಪರೆಯನ್ನು ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. 18-19ನೇ ಶತಮಾನದ ಸಂದರ್ಭದಲ್ಲಿ ಮೂಡಿ ಬಂದ ಈ ಕಲ್ಯಾಣ ಹಾಗೂ ಪರಿಣಯಕ್ಕೆ ಸಂಬಂದಪಟ್ಟ ಕಥಾವಸ್ತು ಹೆಚ್ಚು ಕುತೂಹಲವನ್ನುಂಟು ಮಾಡುತ್ತದೆ. ವೆಂಕಟೇಶ, ಶಿವ, ಧ್ರುವ, ಪ್ರಹ್ಲಾದ, ಈ ಮೊದಲಾದ ಮಹಿಮರನ್ನು ಈ ಕವಿ ಸಾಮಾನ್ಯ ಜನತೆಯಲ್ಲಿರುವ ಭಕ್ತಿಯ ಅನಂತತೆಯಲ್ಲಿ ಕಂಡುಕೊಳ್ಳುತ್ತಾರೆ. ಹೀಗಾಗಿ ಈ ಶಿವ ವೆಂಕಟೇಶರು ನಮ್ಮ ಸುತ್ತು ಮುತ್ತಲಿನ ಮಹತ್ವದ ಸಾಧಕರಂತೆ ಕಾಣಿಸುತ್ತಾರೆ. ಹೀಗೆ ಪುರಾಣವನ್ನು ವಾಸ್ತವದ ಮೂಲಕ ಕಟ್ಟಿಕೊಡುವ ಅನಂತಾದ್ರೀಶರ ಕಥನಕವನಗಳು ದಾಸ ಸಾಹಿತ್ಯ ಪರಂಪರೆಯಲ್ಲಿಯೇ ವಿಶಿಷ್ಟ ರಚನೆಗಳಾಗಿ ಕಾಣಿಸಿಕೊಳ್ಳುತ್ತವೆ. ಇಂತಹುದೇ ಪರಂಪರೆಯನ್ನು ಮುಂದುವರೆಸಿದ ಕಾರ್ಪರ ನರಹರಿ ದಾಸರು ಸಮಗ್ರ ಭಾಗವತ ಪುರಾಣವನ್ನು ಕೇವಲ 18 ನುಡಿಗಳಲ್ಲಿ ಕಟ್ಟಿಕೊಟ್ಟಿರುವುದು ಅವರ ಕಥನಕಲೆಗೆ ಸಾಕ್ಷಿಂiÀiಂತಿದೆ. ಹೆನ್ನೆರಂಗದಾಸರ ಹಾಗೂ ಅಸ್ಕಿಹಾಳ ಗೋವಿಂದದಾಸರ ಕೀರ್ತನೆಗಳಲ್ಲಿ ಈ ಪ್ರದೇಶದ ಭಾಷೆ ಮೈಕೊಡವಿ ನಿಂತಿದೆ. ಅನೇಕ ಲಾವಣಿ, ಬಯಲಾಟಗಳನ್ನು ಬರೆದಿರುವ ಗೋವಿಂದ ದಾಸರು ಜನಪದ ನುಡಿಗಟ್ಟಿನ ಮೂಲಕ ಕೀರ್ತನ ಪರಂಪರೆಯನ್ನು ಬೆಳೆಸಿರುವುದು ಕುತೂಹಲಕಾರಿಯಾದ ಸಂಗತಿಯಾಗಿದೆ.
ಈ ಸಂಪುಟದ ಹರಿದಾಸರ ರಚನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ ನಡೆದಿರುವದಿಲ್ಲ. ಇವರ ರಚನೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದಾಗ ಇನ್ನೂ ಹೊಸ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ, ನಡೆ ನುಡಿ ಒಂದಾಗಿ ಸರಳ ಜೀವನ ನಡೆಸಿ ತಮ್ಮ ಅನುಭಾವದ ಅಂತ:ಸತ್ವವನ್ನು ಧಾರೆಯೆರೆದು ಕೊಟ್ಟಿರುವ ಇಲ್ಲಿಯ ದಾಸರು ಅಧ್ಯಯನ ಯೋಗ್ಯರಾಗಿದ್ದಾರೆ. e್ಞÁನ, ಭಕ್ತಿ, ಸಾಧನೆಗೆ ಇಂತಹ ದಾಸರ ರಚನೆಗಳು ಸ್ಥೂರ್ತಿದಾಯಕವಾಗಿದೆ.
ಕೃತಜ್ಞತೆಗಳು
ಈ ಸಂಪುಟದ ಹರಿದಾಸರ ಕೀರ್ತನೆಗಳನ್ನು ಸಂಪಾದಿಸಿಕೊಡಲು ನಮಗೆ ತಿಳಿಸಿದ ಕಾರ್ಯನಿರ್ವಾಹಕÀ ಸಂಪಾದಕರಾದ ಡಾ||ಶ್ರೀನಿವಾಸ ಹಾವನೂರು ಅವರಿಗೆ ಇಂತಹ ಮಹತ್ವದ ಯೋಜನೆಯನ್ನು ಕೈಗೊಂಡು ಈ ಯೋಜನೆಯಲ್ಲಿ ಭಾಗವಹಿಸುವ ಅವಕಾಶವನ್ನಿತ್ತ ಕನ್ನಡ ಸಂಸ್ಕøತಿ ಇಲಾಖೆಯ ನಿರ್ದೇಶಕರಿಗೆ ಅನಂತ ಕೃತಜ್ಞತೆಗಳು ಸಲ್ಲುತ್ತವೆ. ಸಮಗ್ರ ದಾಸವಾಙ್ಮಯ ಯೋಜನೆಯ ಸಮಿತಿಯ ಎಲ್ಲ ಸದಸ್ಯರುಗಳಿಗೂ ನಾವು ಋಣಿಯಾಗಿದ್ದೇವೆ.
ಈ ಸಂಪುಟದ ಹರಿದಾಸರ ರಚನೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಅನೇಕರು ಸಹಾಯ ಸಹಕಾರ ನೀಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಸುರಪುರದ ಶ್ರೀಹರಿ ಕುಲಕರ್ಣಿ, ಗೋಕಾಕದ ಶ್ರೀಜಯತೀರ್ಥ ಅಷ್ಟಮಿತ್ರೆ. ರಾಯಚೂರಿನ ಭೀಮದಾಸ, ಕೊಪ್ಪರದ ಶ್ರೀ ಕೆ. ಜಯಾಚಾರ್ಯರು ಇವರ ಸಹಾಯ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ.
ಶ್ರೀ ಹೆನ್ನೆರಂಗದಾಸರ ಎರಡುನೂರು ಕೀರ್ತನೆಗಳು ಪ್ರಪ್ರಥಮವಾಗಿ ಈ ಸಂಪುಟದ ಮೂಲಕ ಬೆಳಕು ಕಾಣುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಅದರಂತೆ ಅನಂತಾದ್ರೀಶರ 'ಧ್ರುವಚರಿತ್ರೆ' ಕಥನಕಾವ್ಯವು ಇದೇ ಮೊದಲಬಾರಿಗೆ ಈ ಸಂಪುಟದ ಮೂಲಕ ಪ್ರಕಟವಾಗುತ್ತಿದೆ. ನಾವು ಎಷ್ಟೋಶ್ರಮವಹಿಸಿದ್ದರೂ ಈ ದಾಸರ ಚರಿತ್ರೆಯನ್ನು ಇಡಿಯಾಗಿ ಕಟ್ಟಿಕೊಡಲಿಕ್ಕೆ ಆಗಲಿಲ್ಲ. ಪಾಠ ಪರಿಷ್ಕರಣೆಯಲ್ಲಿ ಕೆಲವು ದೋಷಗಳು ಉಳಿದುಕೊಂಡಿರಬಹುದಾಗಿದೆ. ಓದುಗರು, ವಿಮರ್ಶಕರು, ದಯವಿಟ್ಟು ತಮ್ಮ ರಚಾನಾತ್ಮಕ ಸಲಹೆಗಳನ್ನು ನೀಡಬೇಕೆಂದು ಕೋರುತ್ತೇವೆ. ಈ ಸಂಪುಟವನ್ನು ಸಿದ್ಧಪಡಿಸುವಲ್ಲಿ ಸಹಕರಿಸಿದ ಎಲ್ಲರಿಗೂ ನಮ್ಮ ಅನಂತ ಕೃತಜ್ಞತೆಗಳು.
ಸಂಪಾದಕರು
ಡಾ. ಬಸವರಾಜ ಸಬರದ
ಡಾ. ಜಯಲಕ್ಷ್ಮಿ ಮಂಗಳಮೂತಿ
****
ಇಂದು ಶ್ರೀ ಅಸ್ಕಿಹಾಳ್ ಶ್ರೀ ಗೋವಿಂದದಾಸರ ಆರಾಧನಾಪ್ರಯುಕ್ತ.
ಲೇಖನ
✍️ಶ್ರೀ ಗೋವಿಂದ ದಾಸರಿಗೆ ಅಸ್ಕಿಹಾಳ ದಲ್ಲಿ ಅನೇಕ ಜನ ಶಿಷ್ಯರು.ಅದರಲ್ಲಿ ಒಬ್ಬ ಸಂಗಪ್ಪ ಎಂಬುವರು. ಯಾವಾಗಲೂ ಅವರ ಜೊತೆಯಲ್ಲಿ ಇರುತ್ತಾ ಇದ್ದರು.ಅಲ್ಲಿ ನಿತ್ಯ ದಾಸರು ರಘುವೀರ ಮಂದಿರದಲ್ಲಿ ಗ್ರಾಮಸ್ಥರಿಗೆ ಅಧ್ಯಾತ್ಮದ ಬಗ್ಗೆ ಚಿಂತನೆ,ಚರ್ಚೆ ಭಜನೆ ಯನ್ನು ನಡೆಸುತ್ತಾ ಇದ್ದರು. ಪ್ರತಿನಿತ್ಯವೂ ದಾಸರು ಭಜನೆ ಆದ ಮೇಲೆ ಅಲ್ಲಿ ಮಲಗುವದು ರೂಢಿ. ಅವರ ಶಿಷ್ಯನಾದ ಸಂಗಪ್ಪ ಸಹ ಅಲ್ಲಿಯೇ ಸ್ವಲ್ಪ ದೂರದಲ್ಲಿ ಮಲಗುತ್ತಿದ್ದ.ಒಂದು ದಿನ ನಡುರಾತ್ರಿಯಲ್ಲಿ ಸಂಗಪ್ಪನಿಗೆ ಎಚ್ಚರವಾಗಿದೆ.
ಎದ್ದು ನೋಡಿದಾಗ ದಾಸರ ಪಕ್ಕದಲ್ಲಿ ಒಬ್ಬರು ಸ್ವಾಮಿ ಗಳು ಕುಳಿತಿರುವದನ್ನು ಕಂಡುಬಂತು..
ಇದೇ ರೀತಿಯಲ್ಲಿ ಎರಡು ಮೂರು ದಿವಸದವರೆಗು ಹಾಗೇ ಅವನಿಗೆ ಕಾಣಿಸುತ್ತದೆ. ಒಂದು ದಿನ ದಾಸರ ಬಳಿ ಕೇಳುತ್ತಾನೆ.
ಸ್ವಾಮಿ! ಪ್ರತಿನಿತ್ಯವೂ ರಾತ್ರಿ ನೀವು ಮಲಗಿದ್ದಾಗ ನಿಮ್ಮ ಪಕ್ಕದಲ್ಲಿ ಬಂದು ಕೂಡುವ ಸ್ವಾಮಿ ಗಳು ಯಾರು?? ಎಂದು.
ದಾಸರು ಹೇಳುತ್ತಾರೆ.
"ನಿನಗೆ ಸ್ವಾಮಿಗಳು ಕಂಡಾಗ ತಕ್ಷಣವೇ ನನ್ನ ಎಬ್ಬಿಸು. ಎಂದು ಹೇಳುತ್ತಾರೆ. ಅದೇ ದಿನ ರಾತ್ರಿ ಸಮಯದಲ್ಲಿ ಸ್ವಾಮಿ ಗಳು ಬಂದು ದಾಸರ ಬಳಿ ಕುಳಿತಿದ್ದು ಕಾಣಿಸುತ್ತದೆ. ತಕ್ಷಣವೇ ದಾಸರನ್ನು ಎಬ್ಬಿಸಲು ದಾಸರು ನೋಡಿದ ತಕ್ಷಣವೇ ಅಪ್ರತಿಮ ಕಾಂತಿ ಒಂದು ಮಿಂಚಿ ಮರೆಯಾಯಿತು.
ದಾಸರು ಪುಳಕಿತರಾಗಿ ಆ ದಿವ್ಯ ತೇಜಸ್ಸಿಗೆ ನಮಸ್ಕಾರ🙏 ಮಾಡುತ್ತಾರೆ.
ಅವನ ಭಕ್ತಿಭಾವಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ದಾಸರು ರತ್ನಗರ್ಭ ಶಾಲಗ್ರಾಮ ವನ್ನು ಅವನಿಗೆ ಕೊಡುತ್ತಾರೆ.
🙏🙏
ಇನ್ನೊಂದು ಪ್ರಸಂಗ..
ತಿರುಪತಿ ಯಲ್ಲಿ ಬ್ರಹ್ಮೋತ್ಸವ ನೋಡಬೇಕೆಂಬ ಆಸೆ ದಾಸರ ಶಿಷ್ಯನಾದ ಸಂಗಪ್ಪನಿಗೆ.ದಾಸರಲ್ಲಿ ಅರಿಕೆ ಮಾಡಿಕೊಂಡ.
ವಿಚಿತ್ರ ಎಂದರೆ ಅದೇ ದಿನವೇ ಬ್ರಹ್ಮೋತ್ಸವ ಅಲ್ಲಿ.ಅಲ್ಪ ಸಮಯ ದಲ್ಲಿ ಹೋಗಲು ಸಾಧ್ಯವಾಗದ ಮಾತು. ಸಾತ್ವಿಕನಾದ ಆ ಜೀವಿಗೆ ತನ್ನ ದರುಶನ ಮಾಡಿಸಬೇಕು ಎಂದು ಭಗವಂತನ ಸಂಕಲ್ಪ ಇರಬೇಕು.
ದಾಸರು ಜಗದೊಡೆಯನಾದ ಆ ಶ್ರೀನಿವಾಸ ದೇವರನ್ನು ಸ್ಮರಿಸುತ್ತಾ ಅವನಿಗೆ ಕಣ್ಣು ಮುಚ್ಚಲು ಹೇಳಿದರು. ಅವನ ಅಂತರಂಗದ ಕಣ್ಣು ತೆರೆಯಿತು.ಅಸ್ಕಿಹಾಳ ದಲ್ಲಿ ದಾಸರ ದಾಸನಾದ ಸಂಗಪ್ಪನಿಗೆ ಶ್ರೀನಿವಾಸದೇವನು ತನ್ನ ಪತ್ನಿಯರೊಡಗೂಡಿ ಅವನಿಗೆ ಬ್ರಹ್ಮೋತ್ದವದ ದರ್ಶನ ಮಾಡಿಸಿದ.
ಪರಮಾತ್ಮ ಇವರಲ್ಲಿ ನಿಂತು ಮಾಡಿಸಿದ ಈ ಕಾರ್ಯವನ್ನು ಕಂಡು ಸಂಗಪ್ಪ ದಾಸರಿಗೆ ನಮಸ್ಕರಿಸಿದ.🙏🙏
ಆರಾಧನ ಪರ್ವಕಾಲದ ಸಮಯದಲ್ಲಿ ನಮ್ಮ ಪ್ರಾರ್ಥನೆ.
ದಾಸರು ತಮ್ಮ ಕರುಣಾ ದೃಷ್ಟಿಯನ್ನು ನಮ್ಮ ಮೇಲೆ ಬೀರಿ ನಮಗೆ ಸಹ ಒಳಗಿನ ಕಣ್ಣಿಗೆ ಶ್ರೀನಿವಾಸ ದೇವರ ದರ್ಶನ ವಾಗುವಂತೆ ಅನುಗ್ರಹಿಸಲಿ ಎಂದು ಅವರಲ್ಲಿ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಅರಿಕೆ ಮಾಡಿಕೊಳ್ಳುತ್ತಾ
ಹಿರಿಯರಿಂದ ಕೇಳಿದ್ದು ಇಲ್ಲಿ ಬರೆದು ಹಾಕುವ ಪ್ರಯತ್ನ.
(received in WhatsApp)
***
Sri Hasigyalu Govindadasa | 1873-1915 | Govinda | Govinda Vittala | Sri Dinni Raghappa | Hasigyalu | Bhadrapada Shudda Panchami |
No comments:
Post a Comment