Monday 1 July 2019

srida vittala dasaru karjagi dasappa karjagi 1820 ashada shukla ekadashi ಶ್ರೀದ ವಿಠ್ಠಲ ದಾಸರು

.

Sri. Srida Vittala Dasaru (Karjagi Dasappa)
Original Name: Dasappa
Period: 1741 - 1820
Ankita: Srida Vittala
Preceptor:  Sri Jagannatha Dasa
Place: Karjagi

Aradhana: Ashada Shukla Prathama Ekadashi

He got his ankita from shri jagannAtha dAsaru.

He was a great devotee of rAyaru and he has to his credit several compositions on rAyaru and his mahimegaLu. One of his popular compositions on Raghavendra SwamigaLu is "Raghavendra Guru Rayara sevisiro, soukyadi jIvisiro..."

He has written the phala stuti for shri jagannAtha dAsara "hari kathAmbrutha sAra".

His tambUri, which was given by shri jagannAtha dAsaru, is in the possession of Sri Poornaprajna Tatvajnana Prachara Sabha in Bangalore.

One of the excellent books on srIdA viTTala dAsaru is “Srida vittala dasara Krutigalu” first published in 1997 by TTD and written by K. Appanacharya.

shri srIda viTTala dAsa varada gOvindA gOvindA...

shri krishNArpaNamastu

******

ಹರೇ ಶ್ರೀನಿವಾಸ.
ಇಂದು ಆಷಾಢ ಶುಕ್ಲ ಏಕಾದಶಿ ಶ್ರೀದವಿಟ್ಠಲ ದಾಸರ ಆರಾಧನೆ

ಫಲಸ್ತುತಿ ಪ್ರವಕ್ತಾರಂ ಜಗನ್ನಾಥಾರ್ಯ ಸೇವಕಂ|
ಶ್ರೀ ಕೃಷ್ಣ ಪದ ಸದ್ಭಕ್ತಂ ವಂದೆ ಶ್ರೀ ಶ್ರೀದವಿಟ್ಠಲಂ||

 ಮಾನವಿ ಜಗನ್ನಾಥ ದಾಸರಿಗೆ ಪ್ರಾಣೇಶದಾಸರು ಹಾಗೂ ಶ್ರೀದ ವಿಟ್ಠಲದಾಸರು ಎಡಗೈ ಬಲಗೈ ಇದ್ದಂತೆ.
ಜಗನ್ನಾಥದಾಸರು ಹರಿಕಥಮೃತಸಾರ ಬರೆದು ಮುಗಿಸಿದ ನಂತರ ಪ್ರಾಣೇಶದಾಸರು ಕೇಳಿದರಂತೆ- ಇದಕ್ಕೆ ಯಾರು ಫಲಸ್ತುತಿ ಬರೆಯುವರು?
ಅವರ ಮನಸ್ಸಿನಲ್ಲಿ ನನಗೇ ಬರೆಯಲು ಹೇಳುತ್ತಾರೆ ಎಂದು ಯೋಚಿಸುತ್ತಿದ್ದರಂತೆ. ಅದಕ್ಕೆ ಉತ್ತರವಾಗಿ ' ಬೇರೆ ಇದ್ದಾರೆ' ಎಂದು ಹೇಳಿ ಸುಮ್ಮನಾದರಂತೆ.
ಪ್ರಾಣೇಶದಾಸರು ಹಾಗೂ ಮತ್ತಿತರ ಶಿಷ್ಯರೊಂದಿಗೆ ಜಗನ್ನಾಥದಾಸರು ಕರ್ಜಗಿಗೆ ಹೋದರಂತೆ. ಆ ಊರಿನ ಮುಖ್ಯಸ್ಥರೆಲ್ಲಾ ಸೇರಿ ಹರಿಕಥೆ ಹೇಳಲು ಜಗನ್ನಾಥದಾಸರನ್ನು ಕರೆಸಿದ್ದರು‌. ಆ ಊರಿನಲ್ಲಿ ಗಲ್ಲಿ ಮೀಸೆ ದಾಸಪ್ಪ ದೊಡ್ಡ ಕುಳ. ಅರಮನೆಯಂತಹ ಮನೆ. ಊರಿಗೆ ಪಂಡಿತರು, ವಿದ್ವಾಂಸರು , ಯತಿಗಳು ಯಾರಾದರೂ  ಬಂದರೆ ಅವರು ದಾಸಪ್ಪನ ಮನೆಯಲ್ಲೇ ಇರುತ್ತಿದ್ದರು.  ದಾಸಪ್ಪನ ಪತ್ನಿ ಸಾಧ್ವಿ ಗುಂಡಮ್ಮನವರು ಬಂದವರಿಗೆ ಆದರಾತಿಥ್ಯ ಮಾಡುತ್ತಿದ್ದರು. ದಾಸಪ್ಪ ಮನೆಯಲ್ಲಿ ಇದ್ದರೆ ಇರುತ್ತಿದ್ದರು ಇಲ್ಲವಾದರೆ ಹೊರಗೆ ಹೋಗಿ ಬಿಡುತ್ತಿದ್ದರು. ದಾಸಪ್ಪ ಒಳ್ಳೆಯ ಶೋಕಿ ಮನುಷ್ಯ. ಇಸ್ತ್ರಿ ಮಾಡಿದ ಗರಿ ಗರಿ ಬಿಳಿ ಪಂಚೆ., ಷರಟು ಹಾಕಿ , ಪೇಟ ಸುತ್ತಿಕೊಂಡು, ಕೈಗಳಲ್ಲಿ ಬಂಗಾರದ ಕಡಗ, ಕಿವಿಗಳಲ್ಲಿ ಬಂಗಾರದ ಹತ್ತ ಖಡಕು ಹಾಕಿಕೊಂಡು, ಅತ್ತರ್ ಪೂಸಿಕೊಂಡು  ಜರದ ವೀಳ್ಯ ಬಾಯಲ್ಲಿ ಹಾಕಿಕೊಂಡು ಜಗಿಯುತ್ತ ಮೀಸೆ ತಿರುವುತ್ತಾ ಬೀದಿಗಿಳಿಯುತ್ತಿದ್ದರು.  ಆತನಿಗೆ ಒಂದು ಹೆಂಗಸಿನ ಸಹವಾಸ ಅಂಟಿ ಕೊಂಡಿತ್ತು. ಆಕೆಯ ಮನೆಯಲ್ಲೇ ಸದಾಕಾಲವೂ ಇರುತ್ತಿದ್ದರು. ಮನೆಯಲ್ಲಿನ ಧನ, ನಗ,.ನಾಣ್ಯ ಇತ್ಯಾದಿ ಎಲ್ಲವೂ ಆ ಹೆಂಗಸಿಗೆ ಸೇರುತ್ತಿದ್ದವು. ಗುಂಡಮ್ಮನ ಬಳಿ ಎರಡು ಬಂಗಾರದ ಕೈಗಡಗಗಳಿದ್ದವು. ಅವನ್ನು ಆ ಹೆಂಗಸಿಗೆ ಕೊಡಬೇಕೆಂದು ದಾಸಪ್ಪನಿಗೆ ಬಹಳ ಆಸೆ.‌ ಆದರೆ ಅದು ತನ್ನ ತವರು ಮನೆಯದ್ದೆಂದು ಹೇಳಿ ಕೊಡುತ್ತಿರಲಿಲ್ಲ. ಈ ವಿಷಯವಾಗಿ ಪತಿ- ಪತ್ನಿಯರು ಅನೇಕ ಬಾರಿ ಜಗಳವಾಡಿದ್ದರು.

ಜಗನ್ನಾಥದಾಸರು ಈಗ ತಮ್ಮ ಮನೆಗೆ ಬರುತ್ತಿದ್ದಾರೆಂಬ ಸುದ್ಧಿ ಕೇಳಿ ಗುಂಡಮ್ಮನಿಗೆ ಬಹಳ ಸಂತೋಷವಾಯಿತು. 'ದೊಡ್ಡವರು ಬರುತ್ತಿದ್ದಾರೆ. ಇವತ್ತು ಒಂದು ದಿವಸವಾದರೂ ಮನೆಯಲ್ಲಿ ಇರಿ' ಎಂದು ಗುಂಡಮ್ಮ ತಮ್ಮ ಪತಿಯನ್ನು ಕೇಳಿ ಕೊಂಡಳು. ಅಂಗಲಾಚಿ ಬೇಡಿಕೊಂಡಳು. ಇಷ್ಟು ದಿನ ಕೇಳುತ್ತಿದ್ದ ಕಡಗ ಕೊಡುತ್ತೇನೆಂದು ಹೇಳಿದಳು.  ಆದರೆ ದಾಸಪ್ಪ ಇದ್ಯಾವುದನ್ನೂ ಕಿವಿಯ ಮೇಲೆ ಹಾಕಿ ಕೊಳ್ಳದೆ‌ ಹೊರಟೇ ಬಿಟ್ಟರು.

ಗುಂಡಮ್ಮನ ಪುಣ್ಯ. ಯಾವಾಗಲೂ ರಾತ್ರಿಯಾದ‌ ಮೇಲೆ, ಇಲ್ಲವೇ ನಡುರಾತ್ರಿಯಲ್ಲಿ ಮನೆಗೆ ಬರುತ್ತಿದ್ದ ಯಜಮಾನರು ಮಧ್ಯಾಹ್ನವೇ  ಬಂದರು. ಜಗನ್ನಾಥದಾಸರ ಪೂಜೆ ನಡೆಯುತ್ತಿತ್ತು. ಗುಂಡಮ್ಮನವರಿಗೆ ಸಂಭ್ರಮವೋ ಸಂಭ್ರಮ. ದಾಸಪ್ಪ ಮಡಿ ಉಟ್ಟುಕೊಂಡು ಬಂದರು . ಪೂಜೆ ನೈವೇದ್ಯ ಎಲ್ಲಾ ಆಯಿತು. ದಾಸರೊಂದಿಗೆ ಸಹ ಪಂಕ್ತಿ ಭೋಜನವೂ ಆಯಿತು.

ಸಂಜೆ ದೇವಸ್ಥಾನದಲ್ಲಿ ಜಗನ್ನಾಥದಾಸರ ಹರಿಕಥೆ. ಕಿಕ್ಕಿರಿದು ಜನ ಸೇರಿದ್ದರು.
ದಾಸಪ್ಪ ಸಹ ಠಾಕುಠೀಕಾಗಿ  ಬಂದು ಪತ್ನಿ ಜೊತೆಯಲ್ಲಿ ಮುಂದೆ ಆಸೀನರಾಗಿದ್ದರು. ಜಗನ್ನಾಥದಾಸರು ಹರಿಕಥೆ ಪ್ರಾರಂಭಿಸುವುದಕ್ಕೆ ಮುಂಚೆ ಪ್ರಾಣೇಶದಾಸರಿಗೆ ಪೀಠಿಕೆ ಹಾಡಲು ಹೇಳಿದರು.

ಗಣೇಶನ ಸ್ತುತಿ ಗೀತೆಯನ್ನು ಹಾಡಬಹುದು ಎಂದು ಜಗನ್ನಾಥದಾಸರು ಯೋಚಿಸಿದ್ದರು. ಆದರೆ ಪ್ರಾಣೇಶದಾಸರು ದಾಸಪ್ಪನ ಮುಖವನ್ನೇ ನೋಡುತ್ತಾ ಒಂದು ಹಾಡು ಹೇಳಲಾರಂಭಿಸಿದರು-

ಆದದ್ದಾಯಿತು ಇನ್ನಾದರು ಒಳ್ಳೆ ಹಾದಿ ಹಿಡಿಯೊ ಪ್ರಾಣಿ|
ಈ ದುರ್ನಡತಿಂದ್ಹೋದರೆ ಇಹ ಪರದಿ ಮೋದವೆಂದಿಗೂ ಕಾಣೆ ಪ್ರಾಣಿ||ಪ||

ನೆಲಾ ಸತಿ ಧನದೊಳಾನವರತ ಹುಳಾಗಿ ಇರುವ್ಯೆಲ್ಲೋ|
ಹಲಾ ಪಿಡಿದು ವಿಧಿ ಕುಲಾಚರಣೆ ಬಿಡೆ ಪಲಾ ತರುವರ್ಯಲ್ಲೋ||
ಸ್ಥಳಾಸ್ಥಳರಿಯದೆ ಕಲಾಪಮಾಡೆಘಕೊಳಾಗುವುದು ಸಲ್ಲೋ|
ಎಲಾ ಕೇಳುವಂತಿಲಾ ಮಾತ್ರ ನೀ ಗೆಲಾಹ ಬಗೆ ಇಲ್ಲೋ ಪ್ರಾಣಿ||೧||

ಶಿಲಾದಿ ವಿಗ್ರಹ ಥಳಾಸೆ ಹರಿ ಯೆಂಬೆಲಾ ಕೇವಲ ಸುಳ್ಳೋ|
ಚಲಾ ಪ್ರತಿಮೆ ಪದಗಳಾ ರ್ಚಿಸದಲೆ ಮಲಾ ತಿನುತಿಹ್ಯಲ್ಲೋ||
ಕಳಾ ಬಿಡದಿರೆ ಅನಿಳಾನ ಹರಿ ಮನಿಮೊಳಾಗಿಹುದಲ್ಯೋ|
ನಳಾ ಭರತ ಮುಖ ಇಳಾಣ್ಮರಂದದಿ ಭಲಾ ಎನಿಸಲಿಲ್ಯೋ ಪ್ರಾಣಿ||೩||

ಬಿಲಾ ಸೇರಿ ತಲಿ ಕೆಳಾಗೆ ತಪಿಸಲು ಫಲಾ ಲೇಸಿತಿಲ್ಯೋ|
ಖಳಾರಿ ದಿನ ಬಿಂದ್ಜಲಾ ಕೊಳ್ಳನೆಂ ಛಲಾ ಮಾಡಲಿಲ್ಯೋ||
ಬಲಾದರದಲಿಂ ತುಲಾದಿ ಸ್ನಾನ ಮೊದಲಾದ ವ್ರತವಲ್ಲೋ|
ಬಲಾರಿನುತ ಪ್ರಾಣೇಶವಿಟ್ಠಲನ ಬಲಾಗಳಿಸಿಕೊಳ್ಳೋ ಪ್ರಾಣಿ||೩||

ಈ ಹಾಡು ಕೇಳುತ್ತಿದ್ದ ಹಾಗೆ ದಾಸಪ್ಪನ ಮನ ಪರಿವರ್ತನೆ ಆಯಿತು. ಕೊನೆಯಲ್ಲಿ ದಾಸಪ್ಪ ಹೊಗಿ ಜಗನ್ನಾಥದಾಸರ‌ ಪಾದ ಗಟ್ಟಿಯಾಗಿ ಹಿಡಿದು ಕೊಂಡು ಕಣ್ಣೀರಿನ ಅಭಿಷೇಕ ಮಾಡಿದ. ತನ್ನನ್ನೂ ದಾಸನನ್ನಾಗಿ ಮಾಡಿ ಕೊಳ್ಳಲು ಅಂಗಲಾಚಿ ಬೇಡಿಕೊಂಡ.
ಮಾರನೇ ದಿನ ತನ್ನ  ಮೀಸೆ ಯನ್ನು  , ಕೂದಲನ್ನು ತೆಗೆಸಿ   ಶಿಖೆ ಬಿಟ್ಟು ಸಾಂಪ್ರದಾಯಿಕ ಉಡುಪು ಧರಿಸಿ ದಾಸರ ಮುಂದೆ ಹಾಜರಾದರು. ಜಗನ್ನಾಥದಾಸರಿಂದ ದಾಸ ದೀಕ್ಷೆ, ಅಂಕಿತ ಹಾಗೂ ಉಪದೇಶ ಪಡೆದು ಶ್ರೀದ ವಿಟ್ಠಲದಾಸರೆನಿಸಿದರು.

ಶ್ರೀದವಿಟ್ಠಲದಾಸರು ಸಾಕಷ್ಟು ದೇವರನಾಮಗಳನ್ನ ರಚಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀ ಹರಿಕಥಾಮೃತ ಸಾರಕ್ಕೆ ಫಲಸ್ತುತಿ ರಚಿಸಿದ್ದಾರೆ.

ಶ್ರೀ ಕೃಷ್ಣಾರ್ಪಣಮಸ್ತು

***********

ಕುರುಡ ಕಂಗಳ ಪಡೆವ|
ಬಧಿರನಿಗೆರಡು ಕಿವಿ ಕೇಳ್ಬಹವು|
ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ|
ಬರಡು ಹೈನಾಗುವದು ಕೇಳ್ದರೆ|
ಕೊರಡು ಪಲ್ಲವಿಸುವದು ಪ್ರತಿದಿನ|
ಹುರುಡಿಲಾದರು ಹರಿಕಥಾಮೃತ ಸಾರವನು ಪಠಿಸೆ||
🙏
ಶ್ರೀ ಕರ್ಜಗಿ ದಾಸರು ಶ್ರೀ ಹರಿಕಥಾಮೃತ ಸಾರವನ್ನು ನಿತ್ಯ,ಶ್ರವಣ ಪಠಣ ಮಾಡುವದರಿಂದ ಆಗುವ ಫಲವನ್ನು ಫಲಶೃತಿ ಸಂಧಿ ಯಲ್ಲಿ ಮೇಲಿನ ನುಡಿ ಹೇಳಿದ್ದಾರೆ.

"ಕುರುಡ" ಅಂದರೆ ನೇತ್ರ ಹೀನನು.
ವಸ್ತುಗಳ ರೂಪ ದರುಶನ ಯಾರಿಗೆ ಮಾಡಲು ಸಾಧ್ಯವಿಲ್ಲ ವೊ ಅವರು ಕುರುಡರೆಂದು ಹೆಸರು.
ಅಂತಹ 
ಕುರುಡರು ಸಹ ಇದನ್ನು ಶ್ರವಣ ಮಾಡಿದರೆ ನೇತ್ರವನ್ನು ಪಡೆಯುವನು ಅಂತ ಹೇಳುತ್ತಾರೆ.
ಇನ್ನೊಂದು ರೀತಿಯಲ್ಲಿ  ಹೇಳುವುದಾದರೆ "ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೋ"
ಎನ್ನುವ ಶ್ರೀವ್ಯಾಸರಾಯ ಗುರುಗಳ ಮಾತಿನಂತೆ
ಭಗವಂತನ ಬಗ್ಗೆ ನಮ್ಮ ಅಂತರಂಗದಲ್ಲಿ ಜ್ಞಾನ ದೃಷ್ಟಿ ಪುಟ್ಟಿ ಅವನನ್ನು ಕಾಣುವ ಭಾಗ್ಯ ಸಿಗುವದು.

ಬಧಿರನಿಗೆ ಕಿವಿ ಕೇಳ್ಬಹವು

ಅಂದರೆ ಶ್ರವಣ ದೋಷ ಇದ್ದವರಿಗೆ ಕಿವುಡ ಅಥವಾ ಬಧಿರ ಅಂತ ಹೇಳುತ್ತಾರೆ. ಅಂತಹವರು ನಿತ್ಯ ಇದನ್ನು ಪಠಣ ಮಾಡಿದರೆ ಅವರ ದೋಷ ನಾಶವಾಗುತ್ತದೆ.
ಇನ್ನೊಂದು ರೀತಿಯಲ್ಲಿ ಹೇಳುವದಾದರೆ 
"ಆವರೋಗವು ಎನಗೆ ದೇವ ಧನ್ವಂತರಿ"
ಇದರಲ್ಲಿ ಹರಿ ಮೂರ್ತಿ ಎನಗೆ ಕಾಣಿಸದು,ಹರಿ ಚರಿತೆ ಕೇಳದು ಅಂತ ದಾಸರು ಹೇಳಿದ್ದಾರೆ.
ಭಗವಂತನ ಚರಿತ್ರೆ ಕೇಳದ ಕಿವಿ ಇದ್ದರು ಅದು ಉಪಯೋಗ ವಿಲ್ಲ.
ಲೌಕಿಕ ವಿಷಯಗಳ ಬಗ್ಗೆ ಆಸಕ್ತಿ ಯಿಂದ ಕೇಳುವ ನಾವು ಶ್ರೀ ಹರಿಯ ಮತ್ತು ಅವನ ಭಕ್ತರು ಚರಿತೆ ಕೇಳಲು ಆಸಕ್ತಿಯನ್ನು ತೋರಿಸುವುದಿಲ್ಲ.

ಹರಿಯ ಚರಿತೆ ಕೇಳದವನು ಕಿವುಡನು...
ಅಂತಹವರು ಇದನ್ನು ಪಠಣ ಮಾಡಿದರೆ ಅವರ ಕಿವಿಗಳು ಭಗವಂತನ ಚರಿತ್ರೆ ಕೇಳುವಲ್ಲಿ ಆಸಕ್ತಿಯನ್ನು ಪಡೆಯುತ್ತಾರೆ ಅಂತ ಹೇಳಿದ್ದಾರೆ.

"ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ"

ಮುರುಡ ಅಂದರೆ ಕುಳ್ಳಗೆ ಇರುವದು,ಮತ್ತು ಕೈ ಕಾಲುಗಳು ಸೊಟ್ಟ ಇರುವವರು,ಅಂದರೆ ಸರಿಯಾಗಿ ಅಂಗಗಳು ಬೆಳೆಯದೇ ಇರುವವರು.. ಅಂತಹವರು ಸಹ ಇದನ್ನು ಕೇಳಿದರೆ ಅವರು ಸಹ ಬಹಿರಂಗದಲ್ಲಿ ಅಂಗ ಹೀನದ ದೋಷವನ್ನು ಕಳೆದುಕೊಂಡು ಚೆನ್ನಾಗಿ ಆಗುತ್ತಾರೆ ಅಂತ ಹೇಳುತ್ತಾರೆ.
ಇನ್ನೂ ಅಂತರಂಗದಲ್ಲಿ ಹೇಳಬೇಕು ಅಂದರೆ 
ನಮ್ಮ ಮನಸ್ಸು ಸಹ ಮುರುಡು ಅಂದರೆ ಬಹಳ ಸಣ್ಣದು.ಕೆಟ್ಟ ಬುದ್ದಿಗಳಿಂದ,ವಿಷಯಗಳಿಂದ ಅದು ಸಹ ಗಿಡ್ಡದಾಗಿದೆ.ಮತ್ತು ವಕ್ರವಾಗಿದೆ...
ನಿತ್ಯ ಶ್ರೀ ಮದ್ ಹರಿಕಥಾಮೃತ ಸಾರವನ್ನು ಕೇಳುವದರಿಂದ ನಮ್ಮ ಮನಸ್ಸು ಸುಂದರವಾಗಿ ಎಲ್ಲಾ ದೋಷ ಗಳನ್ನು ಕಳೆದುಕೊಳ್ಳುತ್ತೇವೆ...
ಇದು ಶ್ರೀ ಹರಿಕಥಾಮೃತ ಸಾರವನ್ನು ಕೇಳಿದಾಗ ಆಗುವ ಅಂತರಂಗ ಬಹಿರಂಗದ ಫಲ.

"ಬರಡು ಹೈನಾಗುವದು" *ಅಂದರೆ 
ಹಾಲನ್ನು ಕೊಡದ ಆಕಳು ಇದನ್ನು ಕೇಳಿದರೆ ಹಾಲು ಕೊಡುವದು...
ಮತ್ತು ಬರಡು 
ಅಂದರೆ ಸಂತಾನ ಯಾರಿಗೆ ಇಲ್ಲ ಅವರು ನಿತ್ಯ ದಲಿ ಇದನ್ನು ಪಠಿಸಿದರೆ ಅವರಿಗೆ ಸಂತಾನವಾಗಿ ಅವರ ಜೀವನ ಚೆನ್ನಾಗಿ ಇರುವದು..

"ಕೊರಡು ಪಲ್ಲವಿಸುವದು".
ಅಂದರೆ 
ಒಣಗಿದ ಕಟ್ಟಿಗೆ ಯನ್ನು ಭೂಮಿಯ ಒಳಗಡೆ ಹೂಳಿದಾಗ ಅದು ಚಿಗುರುವದು...
ಅದರಂತೆ ನಮ್ಮ ಒಣಗಿದ,ಜಡ ಮತಿಯಾದ ಮನಸ್ಸು ನಿತ್ಯ ಇದನ್ನು ಕೇಳಿದಾಗ ಅದು ಸಹ ಭಗವಂತನ ಚರಿತೆ ಕೇಳಿ ದಿವ್ಯ ಜ್ಞಾನವನ್ನು ಪಡೆಯುತ್ತದೆ.

"ಹುರುಡಿಲಾದರು" 
ಅಂದರೆ
ಉದ್ದೇಶ ಪೂರ್ವಕವಾಗಿ ಅಥವಾ ಆಡಂಬರಗೋಸ್ಕರವಾಗಿ ಇದನ್ನು ಹೇಳಿದರೆ ಇಷ್ಟು  ಸಕಲ ಶುಭಫಲ ಉಂಟು ಅಂತ ದಾಸರು ಹೇಳಿದ್ದಾರೆ.
ಆಡಂಬರತನ ದಿಂದವಾಗಲಿ,ಉದ್ದೇಶಿತ ವಾಗಲಿ ಹೇಳಿದರೆ ಇಷ್ಟು ಫಲ ಉಂಟು ಅಂದರೆ ಗುರುಗಳ ಮುಖೇನ ಕೇಳಿ ಅರ್ಥ ಅನುಸಂಧಾನವಾಗಿ ಭಕ್ತಿ ಶ್ರದ್ಧೆ ಯಿಂದ ಪಠಣ ಮಾಡಿದರೆ ಇನ್ನೂ ಎಷ್ಟು ಫಲ ಬರಬಹುದು...
ಹಾಗಾಗಿ ನಿತ್ಯ ಶ್ರೀ ಹರಿಕಥಾಮೃತ ಸಾರವನ್ನು ಪಾರಾಯಣ ಮಾಡುವ.
ಭಗವಂತನ ಅನುಗ್ರಹ ಪಡೆಯಲು ಪ್ರಯತ್ನ ಮಾಡೋಣ..
ನನ್ನ ಅಲ್ಪಮತಿಗೆ ಬಂದಷ್ಟು ವಿವರಣೆ..
🙏ಶ್ರೀ ಕೃಷ್ಣಾರ್ಪಣಮಸ್ತು🙏
🙏🙏
ರೋಗ ಭಯವೆಂದೆಂದು ಬಾರದು|
ಆಗದಪಜಯ ಧುರದಿ ಬಯಸಿದ|
ಭೋಗ ಶುಭ ಕಲ್ಯಾಣವಪ್ಪದು ಸರ್ವ ಕಾಲದಲಿ|
ಶ್ರೀಗಿರಿಯ ಮಂದಿರನ ಕತೆ ಲೇಸಾಗಿ ಕೇಳಲು ದಿನದಿನದಿ|
ಶತಯಾಗ ಫಲ| ಬಹುದಾಯುರಾರೋಗ್ಯದಿ ಸಿರಿ ಬಹುದು
✍ಶ್ರೀ ಮನೋಹರ ವಿಠ್ಠಲ ದಾಸರು

🙏ಅ.ವಿಜಯವಿಠ್ಠಲ🙏
**************
ಶ್ರೀದ ವಿಠ್ಠಲ ದಾಸರ ಬಗ್ಗೆ
ಹರಿದಾಸರ ವಾಣಿಯಲ್ಲಿ..
🙏🙏🙏🙏🙏🙏🙏
ದಾಸರ ನೋಡಿರೈ|
ಗುರು ಜಗನ್ನಾಥ ದಾಸರ ಪಾಡಿರೈ||
ಎನ್ನುವ ಕೃತಿ ಯಲ್ಲಿ 
ಶ್ರೀ ವರದ ವಿಠ್ಠಲ 
 ಎಂದು ಕರೆಯಲ್ಪಡುವ 
ಶ್ರೀ ಕೌತಾಳಂ ಹನುಮಂತ ರಾಯರು (ವರದ ವಿಠ್ಠಲ ಅಂಕಿತ) 
ಶ್ರೀ ಗುರು ಜಗನ್ನಾಥ ದಾಸರ ಮೂರನೇ ಅವತಾರವಾದ ಶ್ರೀದ ವಿಠ್ಠಲ ದಾಸರ ಬಗ್ಗೆ ಹೇಳುತ್ತಾರೆ.
👇👇
ಭರದಲಿ ಧರೆಯೊಳು ಜನಿಸಿದ ಭೂಸುರರಲ್ಲಿ|
ಕರಜಗಿಯಲ್ಲಿ|

ಪರಿಚಾರಕ ನಾಮದಿ ತಾ ನಾಡೊಳು ಮೆರೆದಾ|
ಬಂದುದ ಮರೆದಾ|

ಗುರುಗಳು ಕರುಣಿಪ| ಶುಭದಿನವಾಗ ಇರಲು|
ದಾಸರು ಬರಲು|

ಜಗದೊಡೆಯ, ಪ್ರಾಣೇಶದಾಸರು ಅಂದು| ಇವರಲ್ಲಿಗೆ ಬಂದು..

...ಹೀಗೆ ಮುಂದೆ ಹೇಳುತ್ತಾ ಹೋಗುತ್ತಾರೆ.

ಪರಿಚಾರಕ ನಾಮದಿ..
ದಾಸಪ್ಪ ಎನ್ನುವ ಹೆಸರಿನಲ್ಲಿ.

ಜಗದೊಡೆಯ.. ಜಗನ್ನಾಥ.
🙏🙏🙏🙇‍♂🙇‍♂🙇‍♂

ಶ್ರೀ ವರದೇಶ ವಿಠ್ಠಲ ದಾಸರು ತಮ್ಮ ಒಂದು ಕೃತಿ ಯಲ್ಲಿ 
ಶ್ರೀ ಕೋಸಗಿ ಮುತ್ಯಾರೆಂದು ಪ್ರಸಿದ್ದರಾದ ಶ್ರೀ ಗುರು ಜಗನ್ನಾಥ ದಾಸರನ್ನು ಕುರಿತು ಹೇಳಿದ್ದಾರೆ.
👇👇👇👇
ಸ್ಮರಿಸಿ ಬದುಕಿರೊ| ಗುರುರಾಯರ ಪದವಾ|
ಕೊಡುವನು ಸಂಪದವ|
....
ಪರಿಚಾರಕ ನಾಮದಿ| ಕರಸ್ನೇಹದಲಿ ಜನಿಸಿದ ಪೂರ್ವದಲಿ|

ಪರಿಚಾರಕ ಎಂದರೆ ದಾಸ ..
ಕರಸ್ನೇಹದಲಿ ಎಂದರೆ ಕರ್ಜಗಿ ಎಂದು ಬಲ್ಲವರು ಹೇಳುತ್ತಾರೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏'
******

ಮೇದಿನಿ ಮೇಲುಳ್ಳ ಗಂಗಾದಿ
ತೀರ್ಥ ಸತಿಗಳಿವರ|
ಕಾದುಕೊಂಡಿಹರು ಬಿಡದೆ..|
...
ಸಂಗ ಸುಖವ ಬಯಸಿ ಬದುಕಿರೋ|
 ರಂಗ ಒಲಿದ ಭಾಗವತರ|
✍ಶ್ರೀದ ವಿಠ್ಠಲ ದಾಸರು
ಮಾನವಿ ಪ್ರಭುಗಳು ಮತ್ತು ತಮ್ಮ ಗುರುಗಳಾದ ಶ್ರೀ ಜಗನ್ನಾಥ ದಾಸರೊಂದಿಗೆ ಶ್ರೀದವಿಠ್ಠಲ ದಾಸರು ಮಾನವಿಯಲ್ಲಿ ,ಕೆಲವು ದಿನಗಳ ವರೆಗೆ ಅವರ ಮನೆಯಲ್ಲಿ (ಇವಾಗ ಇರುವ ದಾಸರಾಯರ ಗುಡಿ) ವಾಸಿಸುತ್ತಿರುವಾಗ ,ಅವರಿಗೆ ಕಾಶಿಯಾತ್ರೆ ಮಾಡಿ ಗಂಗಾ ಸ್ನಾನ ಮಾಡಬೇಕೆಂಬ ಬಯಕೆಮೂಡಿತು.. ಆದರೆ ಕಾರಣಾಂತರಗಳಿಂದ 
ಶ್ರೀ ಜಗನ್ನಾಥ ದಾಸರು ಅವರ ಈ ಆಸೆಯನ್ನು ಈಡೇರಿಸದಿದ್ದಾಗ.. 
 ಶ್ರೀದವಿಠ್ಠಲರು ಯೋಚಿಸಿ
 ಗುರುಗಳಿಗೆ ಹೇಳದೇ, ಹೊರಟುಬಿಡಲು ತೀರ್ಮಾನಿಸಿ ,ಎಲ್ಲಾ ಸಿದ್ಧತೆ ಗಳನ್ನು ಮಾಡಿಕೊಂಡು  ಪ್ರಾತಃಕಾಲದಲ್ಲಿ ಎದ್ದು , ತಮ್ಮ ಗಂಟು ಮೂಟೆ ಗಳನ್ನು ಹೆಗಲಿಗೇರಿಸಿ , ದಾಸರ ಮನೆಯಿಂದ ಹೊರಬರುತ್ತಲೇ ಅತ್ಯಾಶ್ಚರ್ಯ ಕರವಾದ ದೃಶ್ಯ ವನ್ನು ಕಂಡರು..

"ಸ್ಫುರದ್ರೂಪಿಗಳಾದ , ಸರ್ವಾಂಗಾಭರಣ ಭೂಷಿತರಾದ , ಸುಗಂಧ ಪರಿಮಳವನ್ನು ಸೂಸುತ್ತಿರುವ ಹಲವಾರು ದೇವತಾಸ್ತ್ರೀಯರು ಶ್ರೀ ಜಗನ್ನಾಥದಾಸರ ಮನೆಯ ಅಂಗಳವನ್ನು ಸಾರಿಸುತ್ತಾ , ರಂಗೋಲಿಗಳನ್ನು ಹಾಕುತ್ತಾ , ತುಳಸೀಕಟ್ಟೆಗೆ ನೀರು ಹಾಕುತ್ತಾ , ಮಂಜುಳ ಧ್ವನಿಯಿಂದ ಶ್ರೀ ಹರಿಯ ಕೀರ್ತನೆ ಯನ್ನು ಹಾಡುತ್ತಿದ್ದರು!!"
ಆಶ್ಚರ್ಯ ಭರಿತರಾದ ಕರ್ಜಗಿ ದಾಸಪ್ಪನವರು , 
ಭಕ್ತಿ ವಿನಯಗಳಿಂದ ಯುಕ್ತ ರಾದ ಆ ಸ್ತ್ರೀಯರ ಬಳಿಸಾರಿ , 
ಅಮ್ಮಾ!! , ತಾಯಂದಿರಾ!! , ನೀವ್ಯಾರು ?ಈ ಹೊತ್ತಿನಲ್ಲಿ ಎಲ್ಲಿಂದ ಬಂದಿರಿ ? ನಿಮ್ಮ ವೃತ್ತಾಂತವೇನು?" ಎಂದು ಕೇಳಲು , ಆ ದೇವತಾಸ್ತ್ರೀಯರು , "ದಾಸರೇ!! ,ನಾವು ತೀರ್ಥಾಭಿಮಾನಿ ದೇವತೆಗಳು. ನಾನು ಗಂಗೆ ,ಈಕೆ ಗೌತಮಿ , ಇವಳು ತುಂಗಭದ್ರಾ ,ಈಕೆಯೇ ಕಾವೇರಿ , ಪಕ್ಕದಲ್ಲಿ ಇರುವವಳು ಕಪಿಲಾ ,ಅಲ್ಲಿ ಇರುವವರು ಕೃಷ್ಣಾ , ಗೋದಾವರಿ ಯರು" ಎಂದು ತಮ್ಮನ್ನು ಪರಿಚಯಿಸಿಕೊಂಡು ,    "ನಾವು ಪ್ರತಿನಿತ್ಯವೂ ಒಂದಂಶದಿಂದ ಈ ಜಗನ್ನಾಥ ದಾಸರಲ್ಲಿಗೆ ಬಂದು ಸೇವೆಯನ್ನು ಮಾಡುತ್ತಾ ,ಕೃತಾರ್ಥ ರಾಗುತ್ತಿದ್ದೇವೆ.."

"ತೀರ್ಥಂಕುರ್ವಂತಿ ತೀರ್ಥಾನಿ" 
ಎಂಬಂತೆ ನಮಗೆ ಇವರೇ ಗತಿಯು . ನಾವು ನಿಮ್ಮ ಕಣ್ಣಿಗೆ ಗೋಚರಿಸಬೇಕಾದರೆ ಅದು ಶ್ರೀ ಜಗನ್ನಾಥದಾಸರು ನಿಮಗೆ ಮಾಡಿದ ಅನುಗ್ರಹ. ಆ ದಾಸರ ದಾಸರಾದ ನಿಮ್ಮನ್ನು ಕಂಡು ಧನ್ಯರಾದೆವು !", ಎನ್ನುತ್ತಾ
ಶ್ರೀದವಿಠ್ಠಲರ ಚರಣಕ್ಕೆರಗಿ ,ಅದೃಶ್ಯ ರಾದರು. 
ಆ ಕ್ಷಣದಲ್ಲೇ ಶ್ರೀದವಿಠ್ಠಲ ದಾಸರು ತಮ್ಮ ತೀರ್ಥಯಾತ್ರೆಯ ಆಸೆಯನ್ನು  ಬಿಟ್ಟು , 
"ಯಾವ ನಮ್ಮ ಗುರುಗಳ ಸನ್ನಿಧಾನ ದಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳು ನಿತ್ಯವೂ ಬಂದು ಸೇವೆಗೈಯುತ್ತಿರುವರೋ .., ಅಂಥಾ ಗುರುಗಳನ್ನು ಬಿಟ್ಟು ದೇಹಾಯಾಸದಿಂದ ಬೇರಾವ ಕ್ಷೇತ್ರಕ್ಕೆ ಹೋಗಲಿ???
 ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬರಿದ್ದರೆ , ಇಲ್ಲಿ ಎಲ್ಲರೂ ಒಟ್ಟಾಗಿ ಸೇರುತ್ತಾರೆ..!
ಇದನ್ನರಿಯದವ ನಾನಾದರೂ , ನನ್ನ ಮೇಲೆ ಗುರುಗಳು ಅದೆಷ್ಟು ಅಂತಃಕರಣ ವನ್ನಿಟ್ಟಿದ್ದಾರೆ ?.. 
ಇವರ ಸ್ಮರಣೆ ಯಿಂದಲೇ ಸಮಸ್ತ ತೀರ್ಥಾವಗಾಹನದ ಫಲವು ಬರುವದರಲ್ಲಿ ಸಂದೇಹವಿಲ್ಲ.." 
ಎಂದು ಯೋಚಿಸುತ್ತಾ  ಗುರುಗಳ ಬಳಿಗೆ ಬಂದು  ಸಾಷ್ಟಾಂಗ ನಮಸ್ಕಾರ ಮಾಡಿ ನಡೆದ ವೃತ್ತಾಂತವನ್ನು ಅರುಹಿ ಕ್ಷಮಿಸಬೇಕೆಂದು ಕೇಳಿಕೊಂಡರು. 
ಭಗವಂತ ತನ್ನ ಭಕ್ತರಾದ ಶ್ರೀ ಜಗನ್ನಾಥ ದಾಸರ ಮಹಿಮೆ ಯನ್ನು ಜಗತ್ತಿನ ಜನರಿಗೆ ತೋರಿಸಲೋಸುಗ ಮಾಡಿದ ಲೀಲೆ.
ಮಾನವಿ ಪ್ರಭುಗಳು ಶ್ರೀದ ವಿಠ್ಠಲದಾಸರನ್ನು ತುಂಬುಹೃದಯದಿಂದ ಹರಿಸಿದ್ದೂ ಅಲ್ಲದೇ ಕಾಲಾಂತರದಲ್ಲಿ ಕಾಶೀಯಾತ್ರೆಯನ್ನೂ ಮಾಡಿಸಿದರು..
ಈ ಸಂಗತಿಯನ್ನು ಸಜ್ಜನರಿಗೆ ಶ್ರೀದ ವಿಠ್ಠಲ ದಾಸರು ತಮ್ಮ ಕೃತಿ ಯಲ್ಲಿ ತಿಳಿಸುತ್ತಾ ...

ಸಂಗಸುಖವ ಬಯಸಿ ಬದುಕಿರೋ| ರಂಗ ಒಲಿದ ಭಾಗವತರ| ಸಂಗ ಸುಖವ ಬಯಸಿ ಬದುಕಿರೋ||ಪ||

ಸಂಗ ಸುಖವ ಬಯಸಿ ಬದುಕಿ| ಭಂಗ ಬಡಿಪ ಭವವ ನೂಕಿ| ಹಿಂಗದೇ ನರಸಿಂಗನಂಘ್ರಿ| ಕಂಗಳಿಂದ ಕಾಣುತಿಹರ||ಅ ಪ||
ಎಂದು ಮೂರು ನುಡಿಗಳ ಕೃತಿ ಯನ್ನು ರಚಿಸಿದ್ದಾರೆ!!
ಪ್ರಾತಃ ಕಾಲ ಇಂತಹ ಭಗವಂತನ ಭಕ್ತರ ಸ್ಮರಣೆ ನಮ್ಮ ಪಾಪ ನಾಶನ ಮತ್ತು ಜೀವನ ಧನ್ಯ..ಮತ್ತು ಉದ್ದಾರ.
🙏ಶ್ರೀ ಕೃಷ್ಣಾರ್ಪಣಮಸ್ತು.🙏
ಪರಮ ಭಾಗವತರನು| ಕೊಂಡಾಡುವದು ಪ್ರತಿದಿನವು|

🙏ಶ್ರೀ ಜಗನ್ನಾಥ ದಾಸ ಗುರುಭ್ಯೋ ನಮಃ🙏
*******

ಶ್ರೀದವಿಠಲರು

 ಹದಿನೆಂಟನೆಯ ಶತಮಾನದಲ್ಲಿ ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮವು ಪಂಡಿತ ಮನೆತನಗಳಿಂದ, ಶಾಸ್ತ್ರವೇತ್ತರಿಂದ, ಅಗ್ನಿಹೋತ್ರಿಗಳಿಂದ ಕೂಡಿದ್ದಿತು.  ವರದಾ ನದಿಯ ತೀರದಲ್ಲಿರುವ ಈ ಊರಲ್ಲಿ ಒಂದು ವಿಠಲನ  ಗುಡಿಯಿದೆ. ನಿಸರ್ಗ ಸುಂದರವಾದ ಈ ಊರಿನಲ್ಲಿ ದಾಸಪ್ಪನ ಜನನವಾಯಿತು.   ಇವರ ಹುಟ್ಟಿದ ವರ್ಷ ಸರಿಯಾಗಿ ತಿಳಿಯದಿದ್ದರೂ, ಕ್ರಿಸ್ತಶಕ 1740 ಒಳಗೆ ಜನಿಸಿದರೆಂದು    ಸ್ಥೂಲವಾಗಿ ಹೇಳಬಹುದು.ಮನೆಯಲ್ಲಿ ಧಾರ್ಮಿಕ ವಾತಾವರಣವಿದ್ದು ಸ್ವಂತಕ್ಕೆ ಸಂಸ್ಕೃತ ಮೂಲಕವಾದ ಶಾಸ್ತ್ರಾಭ್ಯಾಸ ತುಸುಮಟ್ಟಿಗೆ  ಆಗಿದ್ದರೂ ತರುಣ ದಾಸಪ್ಪನ ಗಮನವೆಲ್ಲ     ಲೌಕಿಕ  ಸುಖದ ಕಡೆಗೆ ಇದ್ದಿತು.  ಹತ್ತಿರದಲ್ಲೇ ಇದ್ದ ವಿಠಲನ ಗುಡಿಗೆ ಹೋಗುವ ಒಲವನ್ನು ಕೂಡ ಈತ ತೋರಿಸುತ್ತಿರಲಿಲ್ಲ.   ಈತನಿಗೆ ಗುಂಡಮ್ಮ ಎಂಬ ಸಾಧ್ವಿಯೊಂದಿಗೆ ವಿವಾಹವಾಯಿತು.  ಆದರೂ ವೇಶ್ಯಾಗಮನದತ್ತ  ವಾಲಿದ್ದ ದಾಸಪ್ಪ.   ಸದಾಚಾರಿಯಾದ ಗೃಹಿಣಿ ಗುಂಡಮ್ಮ ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡಳು.  ಒಮ್ಮೆ ಶ್ರೀ ಜಗನ್ನಾಥದಾಸರು ಅವರ ಶಿಷ್ಯ ಪ್ರಾಣೇಶದಾಸರ ಜೊತೆಯಲ್ಲಿ  ಕರ್ಜಗಿಗೆ ಆಗಮಿಸಿದರು. ದಾಸಪ್ಪನ ಮನೆಯಲ್ಲಿಯೇ
ಅವರಿಗೆ ಬಿಡಾರವಾಯಿತು. ಔಪಚಾರಿಕವಾಗಿ ದಾಸರಿಗೆ   ಆತಿಥ್ಯ ಸಂದ ಮೇಲೆ ಅವನು ಸಂಜೆಯ ಹೊತ್ತಿಗೆ   ವೇಶ್ಯೆಯ ಮನೆಗೆ ಹೋದ.  ಗುಂಡಮ್ಮ ಖಿನ್ನಳಾಗಿ ಬಂದವರ ಆದರ ಸತ್ಕಾರದಲ್ಲೂ, ಕ್ಷೇಮ ಚಿಂತನೆಯಲ್ಲೂ ಶ್ರದ್ಧಾಪೂರ್ವಕವಾಗಿ ನಿರತಳಾಗಿದ್ದಳು ರಾತ್ರಿ ದಾಸರ ಪೂಜಾ ಭಜನೆಗೆ ಸಿದ್ಧತೆಗಳಾದವು. ಆ ಕಾಲಕ್ಕೆ ಸರಿಯಾಗಿ ದಾಸಪ್ಪ ತಾಂಬೂಲ ಜಗಿಯುತ್ತಾ ತಂಬಾಕನ್ನು ಸೇವಿಸುತ್ತಾ ಮನೆಗೆ ಬಂದನು. ಮನೆಗೆ ಬಂದ ಪತಿಯೊಡನೆ ಗುಂಡಮ್ಮ ಇದೊಂದು ದಿನವಾದರೂ ಮನೆಯಲ್ಲಿ ಇರಬಾರದೆ ಎಂದು ಕಂಬನಿಗರೆಯುತ್ತಾ ಬೇಡಿಕೊಂಡಳು. ಯಾವ ಪುಣ್ಯ ವಿಶೇಷವೋ ದಾಸಪ್ಪ ದೊಡ್ಡವರು ಮನೆಗೆ ಬಂದಿರುವಾಗ ಮನೆಯಲ್ಲಿ ಇರುತ್ತೇನೆ ಎಂದು ನಿರ್ಧರಿಸಿ ಸ್ನಾನ ಮಾಡಿ ಭಜನೆಗೆ ಕೂತನು. ಗುರುಗಳಾದ ಜಗನ್ನಾಥದಾಸರ ಅಪ್ಪಣೆ ಪಡೆದು ಪ್ರಾಣೇಶದಾಸರು ಭಜನೆಯನ್ನು ಪ್ರಾರಂಭಿಸಿದರು. ಪದ್ಧತಿಯಂತೆ ಯಾವ ಪದವನ್ನೂ ಹಾಡದೆ,  ಗಣಪನ ಸ್ತುತಿಯನ್ನೂ  ಮಾಡದೆ
 llಆದದ್ದಾಯಿತು ಇನ್ನಾದರೂ ಒಳ್ಳೆ lಹಾದಿ ಹಿಡಿಯೋ ಪ್ರಾಣಿll llಈ ದುರ್ನಡತಿಂದ್ಹೋದರಿಹಪರದಿ  ಮೋದೆಂದಿಗು  ಕಾಣಿ ಪ್ರಾಣಿll ಎಂಬ ಕೀರ್ತನೆಯನ್ನು ಹಾಡಿದರು. ಈ ಹಾಡನ್ನು ಕೇಳುತ್ತಾ ದಾಸಪ್ಪನ ಮನಸ್ಸು ಪರಿವರ್ತನೆಯಾಯಿತು.  ತಾನು ಮಾಡಿದ ದುರಾಚಾರಗಳೆಲ್ಲವೂ ನೆನಪಾದವು. ಆ ದಿನ ರಾತ್ರಿ ಹೆಂಡತಿಯನ್ನು ಕುರಿತು ನಾನು ಹರಿದಾಸರಾಗಿ ಬಿಡುವೆನು ಎಂದನು. ನೀನೆ ನನಗೆ ಗುರುವಾದೆ 
ಅಲ್ಲವೇ, ನಿನ್ನ ನೋಟವೆ ನನಗೆ ಮಾಟವಾಯಿತು ಅಲ್ಲವೇ ಪುಣ್ಯಾತ್ಮಳು  ನೀನು. ನಾನು ದ್ರೋಹಿಯು ನಿನ್ನಿಂದ ನನ್ನ ಮನೆಗೆ ಕೀರ್ತಿ ಬಂದಿತು ಎಂದು  ಹೇಳಿದನು. ನಂತರ ಜಗನ್ನಾಥದಾಸರ ಪಾದಗಳನ್ನು ಹಿಡಿದು ತನ್ನನ್ನು ಶಿಷ್ಯನಾಗಿ ಸ್ವೀಕರಿಸಲು ಕೇಳಿಕೊಂಡನು.  ಆತನಲ್ಲಾದ ಪರಿವರ್ತನೆಯನ್ನು ಕಂಡು ಜಗನ್ನಾಥದಾಸರು ಆತನಿಗೆ 'ಶ್ರೀದವಿಠಲ'  ಅಂಕಿತವಿತ್ತು ಅನುಗ್ರಹಿಸಿದರು ಜಗನ್ನಾಥದಾಸರ ಮೇರು ಕಾವ್ಯ ಹರಿಕಥಾಮೃತಸಾರವನ್ನು ಮನನ ಮಾಡಿ ಅದರ ವಿಚಾರಗಳನ್ನು ಅರಗಿಸಿಕೊಂಡವರಲ್ಲಿ ಶ್ರೀದವಿಠಲರು   ಆದ್ಯರೆನ್ನಬಹುದು. ಹರಿಕಥಾಮೃತಸಾರಕ್ಕೆ ಫಲಶ್ರುತಿಯನ್ನು ಬರೆದರು. ಕರ್ಜಗಿ ದಾಸರೆಂದು ಪ್ರಸಿದ್ಧರಾದರು. ಶ್ರೀದವಿಠಲರು   ನಂತರದ ತಮ್ಮ ಬದುಕನ್ನು ಭಗವಂತನ ಚಿಂತನೆಯಲ್ಲಿ, ದಾಸ ಪರಿಚರ್ಯೆಯಲ್ಲಿ ಕಳೆದರು. ಇವರ ಸುಮಾರು 64  ಕೀರ್ತನೆಗಳು ಮಾತ್ರ ದೊರೆತಿವೆ.
   ಡಾ ವಾಣಿಶ್ರೀ ಗಿರೀಶ್ 
ಸಂಚಾಲಕರು ದಾಸ ಸಾಹಿತ್ಯ ವಿಭಾಗ VMWA
******

year 2021
by Nagaraju Haveri
" ಶ್ರೀ ಶ್ರೀದ  ವಿಠ್ಠಲರು - 1 "
" ದಿನಾಂಕ : 21.07.2021 ಬುಧವಾರ - ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯಣ ಆಷಾಢ ಶುದ್ಧ ದ್ವಾದಶೀ - ಶ್ರೀ ಶ್ರೀದ ವಿಠ್ಠಲರ ಆರಾಧನಾ ಮಹೋತ್ಸವ, ಕರ್ಜಗಿ "
ಮಕ್ಕಳಾಡಿಸುವಾಗ ಮಡದಿಯೊ । ಳಕ್ಕರದಿ ನಲಿವಾಗ ಹಯ । ಪ । ಲ್ಲಕ್ಕಿ ಗಜ ಮೊದಲಾದ ವಾಹನಗಳೇರಿ ಮೆರೆವಾಗ । ಬಿಕ್ಕುವಾಗಾಕಳಿಸುತಲಿ । ದೇ । ವಕ್ಕಿತನಯನ ಸ್ಮರಿಸುತಿಹ । ನರ । ಸಿಕ್ಕನೆಮದೂತರಿಗೆ ಆವಾವಲ್ಲಿ ನೋಡಿದರು ।।
ಶ್ರೀ ಶ್ರೀದ ವಿಠ್ಠಲರ ಚರಿತ್ರೆ ನೋಡುವ ಪೂರ್ವದಲ್ಲಿ ಶ್ರೀ ರಾಯರಿಗೂ - ಶ್ರೀ ಜಗನ್ನಾಥದಾಸರಿಗೂ ಮತ್ತು ಶ್ರೀ ಶ್ರೀದ ವಿಠ್ಠಲರಿಗೆ ಇರುವ ಬಾಂಧವ್ಯ ಮತ್ತು ಅವತಾರಗಳ ಕುರಿತು ಸಂಕ್ಷಿಪ್ತ ಮಾಹಿತಿ!!
" ಶ್ರೀ ರಾಯರ ಅವತಾರಗಳು :
 ಮೂಲ ರೂಪ :  ಶ್ರೀ ಶಂಖುಕರ್ಣರು 
1. ಶ್ರೀ ಪ್ರಹ್ಲಾದರಾಜರು - [ ಕೃತ ಯುಗ ]
2. ಶ್ರೀ ಬಾಹ್ಲೀಕರಾಜರು - [ ದ್ವಾಪರಯುಗ ]
3. ಶ್ರೀ ವ್ಯಾಸರಾಜ ಗುರುಸಾರ್ವಭೌಮರು - [ ಕಲಿಯುಗ ]
4. ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು - [ ಕಲಿಯುಗ ]
" ಶ್ರೀ ಜಗನ್ನಾಥದಾಸರ " ಅವತಾರಗಳು :
ಮೂಲ ರೂಪ : ಶ್ರೀ ಬೃಹಸ್ಪತ್ಯಾಚಾರ್ಯರು
1. ಶ್ರೀ ಸಹ್ಲಾದರಾಜರು - [ ಕೃತ ಯುಗ ]
2. ಶಲ್ಯ ಮಹಾರಾಜರು - [ ದ್ವಾಪರಯುಗ ]
3.ಕೊಂಡಪ್ಪ -[ ಕಲಿಯುಗ ]
4. ಶ್ರೀ ಪುರಂದರದಾಸರ ಮಕ್ಕಳು - [ ಕಲಿಯುಗ ]
5 ಶ್ರೀ ಜಗನ್ನಾಥದಾಸರು - [ ಕಲಿಯುಗ ]
6. ಶ್ರೀ ಸುಶೀಲೇಂದ್ರತೀರ್ಥರು 
( ಈ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ) - [ ಕಲಿಯುಗ ]
7. ಶ್ರೀ ಪ್ರಸನ್ನ ಶ್ರೀನಿವಾಸದಾಸರು 
( ಈ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ) - [ ಕಲಿಯುಗ ]
" ಶ್ರೀ ಶ್ರೀದ ವಿಠ್ಠಲರ " ಅವತಾರಗಳು :
ಮೂಲ ರೂಪ : ಶ್ರೀ ಗಣಪತಿ / ಶ್ರೀ ವಿಘ್ನೇಶ್ವರ
1. ಶ್ರೀ ಆಹ್ಲಾದರಾಜರು - [ ಕೃತ ಯುಗ ]
2. ಶ್ರೀ ಅಪ್ಪಣ್ಣಾಚಾರ್ಯರು - [ ಕಲಿಯುಗ ]
3. ಶ್ರೀ ಕರ್ಜನಿ ದಾಸಪ್ಪನವರು ( ಶ್ರೀ ಶ್ರೀದವಿಠಲರು ) - [ ಕಲಿಯುಗ ]
ಮುಂದೆ..
4. ಕೋಸಿಗಿಮುತ್ಯಾ ಎಂದು ಪ್ರಸಿದ್ಧರಾದ ಶ್ರೀ ಸ್ವಾಮಿರಾಯರು ( ಶ್ರೀ ಗುರು ಜಗನ್ನಾಥವಿಠಲರು ) - [ ಕಲಿಯುಗ ]
" ಶ್ರೀ ಆಧುನಿಕ ಹರಿದಾಸರ ಪ್ರೇರಕ ಶಕ್ತಿ, ಸ್ಫೂರ್ತಿ ಶ್ರೀ ಮಂತ್ರಾಲಯ ಪ್ರಭುಗಳು"
ಶ್ರೀ ವಿಜಯರಾಯರು, ಶಿಷ್ಯ ಪ್ರಶಿಷ್ಯ ಪರಂಪರೆಗೆ ಶ್ರೀ ರಾಯರನ್ನು ಕಂಡರೆ......
" ತಾಯಿ ಮಗುವನ್ನು ಕಂಡಾಗ ಆ ಮಗುವಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ! 
ಅಂತೆಯೇ.....
ಶ್ರೀ ರಾಯರೂ ಶ್ರೀ ಹರಿದಾಸರ ಮೇಲೆ ತೋರುವ ಮಾತೃವಾತ್ಸಲ್ಯ - ಅಂತಃಕರಣ - ಆಪ್ಯಾಯತೆ - ಕಾರುಣ್ಯವನ್ನು ವರ್ಣಿಸಲು ಯಾರಿಂದಲೂ ಸಾಧ್ಯವಿಲ್ಲ! 
ಆದ್ದರಿಂದಲೇ ತಾಯಿಯನ್ನು ( ಶ್ರೀ ರಾಯರನ್ನು ) ಮಕ್ಕಳಾದ ಹರಿದಾಸರು ಬಹು ವಿಧವಾಗಿ ಸ್ತುತಿಸಿ ಆನಂದ ಪಟ್ಟಿದ್ದಾರೆ!!
ಶ್ರೀ ಜಗನ್ನಾಥದಾಸರಾಯರ ಶಿಷ್ಯ ವರ್ಗದಲ್ಲಿ ಶ್ರೀ ಮರುದಂಶ ಪ್ರಾಣೇಶದಾಸರ ನಂತರದಲ್ಲಿ ಶ್ರೀ ಶ್ರೀದ  ವಿಠ್ಠಲರಿಗೆ ವಿಶಿಷ್ಟ ಸ್ಥಾನವಿದೆ. 
ಈ ಕುರಿತು ಅವರ ಅನುಗ್ರಹದಿಂದ ತಿಳಿಸುವ ಪ್ರಯತ್ನ ಮಾಡುತ್ತೇನೆ.
" ಶ್ರೀ ಶ್ರೀದ ವಿಠ್ಠಲರ ಸಂಕ್ಷಿಪ್ತ ಮಾಹಿತಿ "
ಹೆಸರು : ಕರ್ಜಗಿ ಶ್ರೀ ದಾಸಪ್ಪ
ತಂದೆ : ಶ್ರೀ ಸತ್ಯಪಾರಾಯಣರಾಯರು
ತಾಯಿ : ಸಾಧ್ವೀ ಸುಭದ್ರಮ್ಮ
ಜನ್ಮಸ್ಥಳ : ಶಿರಹಟ್ಟಿ
ಕಾಲ : ಕ್ರಿ ಶ 1740 - 1820
ಧರ್ಮಪತ್ನಿ : ಸಾಧ್ವೀ ಗುಂಡಮ್ಮ ( ನರಸಮ್ಮ )
ಹಾವೇರಿ ಜಿಲ್ಲೆಯ ವರದಾ ನದೀ ದಂಡೆಯಲ್ಲಿರುವ " ಕರ್ಜಗಿ " ಗ್ರಾಮವೇ ಶ್ರೀ ಶ್ರೀದ ವಿಠ್ಠಲರ ಜನ್ಮ ಸ್ಥಳ. 
ಇವರ ಮೊದಲಿನ ಹೆಸರು " ಶ್ರೀ ದಾಸಪ್ಪ ". 
ಅವರು ವೇದ ವೇದಾಂತದಲ್ಲಿ ಪಂಡಿತರೂ - ಶಾಸ್ತ್ರಗಳೆಲ್ಲವೂ ಶ್ರೀ ದಾಸಪ್ಪನವರಿಗೆ ಸುವಿದಿತ. 
ಆದರೆ ಆಚಾರ ಮಾತ್ರ ಅಷ್ಟಕಷ್ಟೇ - ವಿಲಾಸೀ ಜೀವನ - ಒಂದು ಅರ್ಥದಲ್ಲಿ ರಸಿಕರೂ ಹೌದು.
" ಶ್ರೀ ರಾಯರು ಪ್ರೀತಿಯ ತಮ್ಮನ ( ದಾಸಪ್ಪನ ) ಮೇಲೆ ಇನ್ನೊಬ್ಬ ತಮ್ಮನಾದ ಶ್ರೀ ಜಗನ್ನಾಥದಾಸರನ್ನು ಮಾಧ್ಯಮವನ್ನಾಗಿಟ್ಟುಕೊಂಡು ಶ್ರೀ ದಾಸಪ್ಪನವರ ಮೇಲೆ ತೋರಿದ ಮಾತೃ ವಾತ್ಸಲ್ಯ "
ಶ್ರೀ ಜಗನ್ನಾಥದಾಸರು ತಮ್ಮ ಗ್ರಂಥಕ್ಕೆ ಫಲಶೃತಿಯ ಬಗ್ಗೆ ಚಿಂತಿಸುತ್ತಾ  ಸದಾಕಾಲ ಶ್ರೀ ಹರಿಧ್ಯಾನ ಮಾಡುತ್ತಿರುವಾಗ ಒಂದುದಿನ ಶ್ರೀ ಲಕ್ಷ್ಮೀನರಸಿಂಹನು ಸ್ವಪ್ನದಲ್ಲಿ ಕಾಣಿಸಿಕೊಂಡು ಶ್ರೀ ಹರಿಕಥಾಮೃತಸಾರಕ್ಕೆ ಯಾರು ಸರಿಯಾಗಿ ಅರ್ಥವನ್ನು ಹೇಳುತ್ತಾರೋ ಅವರೇ ಆ ಗ್ರಂಥಕ್ಕೆ ಫಲಶ್ರುತಿಯನ್ನು ಬರೆಯುತ್ತಾರೆ ಎಂದು ತಿಳಿಸಿದನು.
ಶ್ರೀ ಹರಿಯ ಆಜ್ಞೆಯಂತೆ ಶ್ರೀ ಜಗನ್ನಾಥದಾಸಾರ್ಯರು ಸಂಚಾರ ಮಾಡುತ್ತಾ ಹಲವು ಕಡೆಯಲ್ಲಿ ಪ್ರಶ್ನೆ ಹಾಕುತ್ತಿದ್ದರು. 
ಆದರೆ ಕೇಳಿದ ಪ್ರಮೇಯಗಳಿಗೆ ಸರಿಯಾದ ಉತ್ತರ ಬರುತ್ತಿರಲಿಲ್ಲ.
" ಶ್ರೀ ಗುರುರಾಜರ ಸ್ವಪ್ನ ಸೂಚನೆ "
ಮುಂದೆ ಶ್ರೀ ಜಗನ್ನಾಥದಾಸರು ಶ್ರೀ ರಾಯರ ಸೇವೆಗಾಗಿ ಮಂತ್ರಾಲಯಕ್ಕೆ ಬಂದು ಅನೇಕ ದಿನಗಳು ಸೇವೆ ಮಾಡಿದರು. 
ಆಗ ಶ್ರೀ ಗುರುರಾಜ ಗುರುಸಾರ್ವಭೌಮರು ಶ್ರೀ ದಾಸರ ಸ್ವಪ್ನದಲ್ಲಿ ದರ್ಶನವಿತ್ತು.....
ತಮ್ಮಾ! 
ನನ್ನ ಸೇವೆಯನ್ನು ನೀನು ಮಾಡುವ ಬಗೆ ಹೀಗೆಯೇ? 
ಕರ್ಜಗಿಗೆ ಹೋಗು ಅಲ್ಲಿ ನಮ್ಮ ಪ್ರೀತಿಯ ತಮ್ಮನನ್ನು ಉದ್ಧರಿಸು. 
ಅದೇ ನನ್ನ ಸೇವೆ. 
ನಿನ್ನ ಸೇವೆಗೆ ಫಲ ಅಲ್ಲೇ ಸಿಗುತ್ತದೆ. 
ಇದು ಶ್ರೀ ಹರಿ ಇಚ್ಛೆಯೆಂದು ಸೂಚಿಸಿದರು!!
" ಶ್ರೀ ಜಗನ್ನಾಥದಾಸರು ಕರ್ಜಿಗಿಗೆ ದಿಗ್ವಿಜಯ "
ಶ್ರೀ ಗುರುರಾಜ ಗುರುಸಾರ್ವಭೌಮರ ಆಜ್ಞೆಯಂತೆ ಶ್ರೀ ಜಗನ್ನಾಥದಾಸರು ತಮ್ಮ ಮುದ್ದಿನ ಶಿಷ್ಯರಾದ ಶ್ರೀ ಮರುದಂಶ ಪ್ರಾಣೇಶದಾಸರೊಂದಿಗೆ ಸಂಚಾರ ಕ್ರಮದಿಂದ ಕರ್ಜಿಗಿಗೆ ಪ್ರಯಾಣ ಬೆಳಿಸಿ ಕರ್ಜಗಿಗೆ ತಲುಪಿದರು. 
ಅಲ್ಲಿ ಶ್ರೀ ಜಗನ್ನಾಥದಾಸರ ಆಹ್ನೀಕ ಮತ್ತು ದೇವರ ಪೂಜೆಗೆ ಅನುಕೂಲವಾದ ಮನೆಯೆಂದರೆ - ಅದು ದಾಸಪ್ಪನವರ ಮನೆಯೇ! 
ಶ್ರೀ ದಾಸದ್ವಯರು ನೇರವಾಗಿ ಅಲ್ಲಿಗೆ ಬಂದರು. 
ಆದಿನ ಶ್ರೀ ಜಗನ್ನಾಥದಾಸರ ದೇವರಪೂಜೆ ಅವರ ಮನೆಯಲ್ಲೇ ನೆರವೇರಿತು!
ಕರ್ಜಗಿ ಎಂದಿನಿಂದಲೂ ವಿದ್ವಜ್ಜನರ ತವರು ಮನೆ. 
ಶ್ರೀ ಜಗನ್ನಾಥದಾಸರು ಕರ್ಜಗಿಯಲ್ಲಿ ಒಂದು ದೊಡ್ಡ ಪಂಡಿತ ಪರಿಷತ್ತನ್ನು ಕರೆದು ನೆರೆದ ವಿದ್ವನ್ಮಂಡಳಿ ಎದುರು16 ಪ್ರಶ್ನೆಗಳನ್ನು ಇರಿಸಿದರು.
ಶ್ರೀ ದಾಸರಾಯರಂಥಾ ವಿದ್ವನ್ಮಣಿಗಳ ಮಾರ್ಮಿಕ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಯಾರಿಗೂ ಆಗದೆ ಪಂಡಿತರೆಲ್ಲರೂ ಮೂಕ ಮಂಥರರಾದರು. 
ಆಗ ಶ್ರೀ ದಾಸಪ್ಪನವರು ನಾನು ಉತ್ತರ ಹೇಳುತ್ತೇನೆಂದು ಎಂದು ನಿಂತರು. 
16 ಪಶ್ನೆಗಳಿಗೂ ಸರಿಯಾದ ಉತ್ತರವಿತ್ತರು. 
ಶ್ರೀ ಜಗನ್ನಾಥದಾಸರಿಗೆ ಪರಮಾನಂದವಾಯಿತು.
ವಿಲಾಸೀ ವೇಷದಲ್ಲಿ ಅವಿತುಕೊಂಡ ಆ ವಿದ್ವತ್ ಚೇತನದ ಸ್ವರೂಪ ಯೋಗ್ಯತೆಯನ್ನು ಶ್ರೀ ಜಗನ್ನಾಥದಾಸರು ಚೆನ್ನಾಗಿ ಅರಿತು ಗುರುತಿಸಿದರು.
" ದಾಸಪ್ಪಾ! 
ಈ ನಿನ್ನ ಜ್ಞಾನಕ್ಕೂ - ಆಚಾರಕ್ಕೂ ತಾಳಮೇಳವಿಲ್ಲ. 
ಮೊದಲು ತಾಳ ಹಿಡಿ. 
ನಂತರ ನಿನ್ನ ಅಂತರಂಗ - ಬಹಿರಂಗಳಿಗೆ ಮೇಳ ಮಾಡು " ಎಂದು ಹೇಳಿದರು. 
ದೊಡ್ಡವರ ಮಾತು. 
ಶ್ರೀ ದಾಸಪ್ಪನವರ ಹೃದಯದಲ್ಲಿ ವಿಲಕ್ಷಣ ಪರಿಣಾಮ ಮಾಡಿತು. 
ಕೂಡಲೇ ಅವರು ಮನೆಗೆ ಹೋಗಿ ವೇಷ ಕಳಿಚಿದರು.
" ಕರುಣಾಮಯಿ ಶ್ರೀ ಜಗನ್ನಾಥದಾಸರು ದಾಸಪ್ಪನ ಮೇಲೆ ತೋರಿದ ಕಾರುಣ್ಯ "
ಶ್ರೀ ಜಗನ್ನಾಥದಾಸರ ಕೃಪಾ ದೃಷ್ಟಿ ದಾಸಪ್ಪನ ಮೇಲೆ ಬಿದ್ದಿತು. 
ಶ್ರೀ ದಾಸರು ಶ್ರೀ ಪ್ರಾಣೇಶದಾಸರ ಕಡೆಗೆ ನೋಡಿ ಮುಗುಳ್ನಕ್ಕರು. 
ಶ್ರೀ ದಾಸರ ಇಂಗಿತವನ್ನರಿತ ಶ್ರೀ ಪ್ರಾಣೇಶದಾಸರು ದಾಸಪ್ಪನಿಗೆ ಸ್ನಾನವನ್ನು ಮಾಡಿಕೊಂಡು ಬರಬೇಕೆಂದು ಸೂಚನೆಯನ್ನಿತ್ತರು. 
ದಾಸಪ್ಪನು ಮರು ಮಾತಾಡದೇ ಸ್ನಾನವನ್ನು ಮಾಡಿಕೊಂಡು ಮಡಿಯನ್ನುಟ್ಟುಕೊಂಡು ಬಂದು ಕುಳಿತನು.
*
" ಶ್ರೀ ಶ್ರೀದ  ವಿಠ್ಠಲರು - 2 "
ಶ್ರೀ ಜಗನ್ನಾಥದಾಸರು ಪೂಜೆಯು ಮುಗಿದ ನಂತರ ದೇವರ ದರ್ಶನ ಮಾಡಿಸಿದರು. 
ದಾಸಪ್ಪನ ಕಣ್ಣಿಗೆ ಶ್ರೀ ಪ್ರಾಣದೇವರು ಕಾಣಿಸಲಾಗಿ " ಆಶ್ಚರ್ಯ " ಎಂದು ದೀರ್ಘ ದಂಡಪ್ರಣಾಮವನ್ನು ಮಾಡಿ ಕಣ್ಣು ಮುಚ್ಚಿ ಚಪ್ಪಾಳೆ ತಟ್ಟುತ್ತಾ ಮಾತನಾಡದೇ ನಗುತ್ತಾ ಕುಣಿದಾಡಿದ. 
ಈ ವಿಷಯವು ದಾಸರೀರ್ವರಿಗೂ ಗೊತ್ತಿತ್ತು. 
ಆದರೆ ಗುಂಡಮ್ಮನಿಗೆ ಮಾತ್ರ ಇದು ಏನೂ ಅರ್ಥವಾಗಲಿಲ್ಲ!!
ಶ್ರೀ ಜಗನ್ನಾಥದಾಸರು ತಾವು ತೀರ್ಥವನ್ನು ತೆಗೆದುಕೊಂಡು ಶ್ರೀ ಪ್ರಾಣೇಶದಾಸರಿಗಿತ್ತರು. 
ನಂತರ ದಾಸಪ್ಪನಿಗೆ ತಾವೇ ಶಂಖೋದಕವನ್ನು ಪ್ರೋಕ್ಷಿಸಿ...
" ಪ್ರಥಮಂ ಕಾಯ ಶುದ್ಧ್ಯರ್ಥಂ "
ಎಂದು ಹೇಳಿ ತೀರ್ಥವನ್ನು ಕೈಗಿತ್ತರು. 
ಆ ಮೊದಲ ಒಂದು ಉದ್ಧರಣೆಯ ತೀರ್ಥ ಪ್ರಾಶನ ಮಾತ್ರದಿಂದಲೇ ದಾಸಪ್ಪನ ಸಮಸ್ತ ಪಾಪಗಳೂ ಭಸ್ಮವಾಯಿತು.
" ದ್ವಿತೀಯಂ ಧರ್ಮ ಸಾಧನಂ "
ಎಂದು ಹೇಳುತ್ತಾ ಆತನ ಕೈಗೆ ಹಾಕಿದರು. 
ಅದನ್ನು ಪ್ರಾಶನ ಮಾಡಿದ ದಾಸಪ್ಪನಿಗೆ ರೋಮಾಂಚನವಾಯಿತು. 
ಜನ್ಮಾಂತರದ ಜ್ಞಾನೋದಯವಾಯಿತು.
ನಾನ್ಯಾರು?
ನನ್ನ ಕಕ್ಷೆಯಾವುದು?
ಶ್ರೀ ಜಗನ್ನಾಥದಾಸರು ನಮ್ಮ ಮನೆಗೆ ಬಂದ ಕಾರಣವೇನು?
ಎಂದು ವಿಚಾರ ಮಾಡುತ್ತಿರುವಾಗ ತನ್ನ ಹಿಂದಿನ ಜನ್ಮದ ಸ್ಮರಣೆಗೆ ಬಂತು.
ಶ್ರೀ ಜಗನ್ನಾಥದಾಸರು ಸಾಕ್ಷಾತ್ ನಮ್ಮಣ್ಣ. ಒಡ ಹುಟ್ಟಿದ ಸಹ್ಲಾದರಾಜ. 
ನನ್ನ ಹಿರಿಯಣ್ಣನಾದ ಶ್ರೀ ರಾಯರ ಆಜ್ಞೆಯಂತೆ ಇಲ್ಲಿಗೆ ಬಂದ. 
ನನ್ನಲ್ಲಿದ್ದ ಪಾಪ ಪ್ರಾರಬ್ಧ ಶೇಷವು ಇದುವರೆಗೂ ಭೋಗಿಸಲ್ಪಟ್ಟಿತು.
ಅಣ್ಣಾ! 
ನಿನ್ನ ತಮ್ಮನಾದ ಆಹ್ಲಾದನು ಕೆಡಬಾರದೆಂದು ಇಲ್ಲಿಯ ವರೆಗೂ ದಯ ಮಾಡಿಸಿದೆಯೋ ಪ್ರಭು ಎಂದು ಧಾರಾಕಾರವಾಗಿ ಕಣ್ಣೀರನ್ನು ಸುರಿಸಿದನು.
ಶ್ರೀ ಜಗನ್ನಾಥದಾಸರು....
" ತೃತೀಯಂ ಮೋಕ್ಷಮಾಪ್ನೋತಿ "
" ಏವಂ ತೀರ್ಥಂ ತ್ರಿಧಾ ಪಿಬೇತ್ "
ಎಂದು ಮೂರನೇ ಸಲ ತೀರ್ಥವನ್ನು ಕೊಟ್ಟರು.
ಅದನ್ನು ಪ್ರಾಶನ ಮಾಡಿದ ದಾಸಪ್ಪನಿಗೆ ಸರ್ವ ಮೂಲ ಗ್ರಂಥಗಳೇ ಮೊದಲಾದ ಶಾಸ್ತ್ರಾಪರೋಕ್ಷ ಜ್ಞಾನವಾಯಿತು. 
ಸ್ವಯಂ ಶ್ರೀ ರಾಘವೇಂದ್ರತೀರ್ಥ ಗುರುರಾಜ ಗುರುಸಾರ್ವಭೌಮರಲ್ಲಿ ಅಧ್ಯಯನ ಮಾಡಿದ್ದ ಸರ್ವಜ್ಞ ಶಾಸ್ತ್ರಗಳು ನಿಸ್ಸಂದಿಗ್ಧವಾಗಿ ಗೋಚರಿಸಲಾರಂಭಿಸಿತು. 
ನಂತರ ದಾಸಪ್ಪ ಶ್ರೀ ಜಗನ್ನಾಥದಾಸರ ಪಾದಗಳ ಮೇಲೆ ಬಿದ್ದು ಉದ್ಧರಿಸಬೇಕೆಂದು ಪ್ರಾರ್ಥಿಸಿಕೊಂಡನು.
ಅಂದು ಸಂಜೆ ಶ್ರೀ ಜಗನ್ನಾಥದಾಸರ ಆಜ್ಞೆಯಂತೆ ಕರ್ಜಗಿಯಲ್ಲಿ ಶ್ರೀ ಪ್ರಾಣೇಶದಾಸರಿಂದ ಹರಿಕಥೆ ಪ್ರಾರಂಭವಾಯಿತು. 
ಶ್ರೀ ಪ್ರಾಣೇಶದಾಸರು ದಾಸಪ್ಪನನ್ನು ಉದ್ಧೇಶಿಸಿಯೇ...
ಆದದ್ದಾಯ್ತಿನ್ನಾದರೂ ಒಳ್ಳೆ ।
ಹಾದಿ ಹಿಡಿಯೋ ಪ್ರಾಣೀ ।। ಪಲ್ಲವಿ ।।
ಈ ದುರ್ನಡೆತಿಂದು ।
ಹೋದರಿಹಪರದಿ ।
ಮೋದವೆಂದಿಗೂ ಕಾಣೀ ಪ್ರಾಣೀ ।। ಆ. ಪ ।।
... ಬಿಲಾ ಸೇರಿ ತಲೆ ಕೆಳಗಾಗಿ ತಪಿಸಲು ।
ಫಲಾ ಲೇಸಿತಿಲ್ಲೋ ಖಳಾರಿ ದಿನ । ಬಿಂ ।
ಜಲಾ ಕುಳ್ಳೆನೆಂಛಲ ಮಾಡಲಿಲ್ಲೋ ।।
ಬಲಾದರದಲಿಂತುಲಾದಿ ಸ್ನಾನ । ಮೊದ ।
ಲಾದ ವೃತವಲ್ಲೋ ಬಲಾರಿನುತ ।
ಪ್ರಾಣೇಶವಿಠಲನ್ನ ಬಲಾ ಘಳಿಸಿ ಕೊಳ್ಳೋ ।।
ಎಂಬ ಪದವನ್ನು ರಚಿಸಿ ಅನುವಾದ ಮಾಡಿದರು.
ನಂತರ ಶ್ರೀ ಜಗನ್ನಾಥದಾಸರು ಕೇಳಿದ ಪ್ರತಿಯೊಂದು ಪ್ರಮೇಯಗಳಿಗೂ ದಾಸಪ್ಪ ಸರಿಯಾದ ಉತ್ತರವನ್ನು ಕೊಟ್ಟಿದ್ದಾನೆ. 
ಆಗ ಶ್ರೀ ದಾಸಾರ್ಯರು...
ಏನು ದಾಸಪ್ಪ ದೇವರು ನಿನಗೆ ಎಂಥಾ ಜ್ಞಾನವನ್ನು ಕೊಟ್ಟಿದ್ದಾನೆ?
ಅಂಥಾ ಜ್ಞಾನಕ್ಕೆ ಇಂಥಾ ವೇಷ ಭೂಷಣಗಳೇ?
ಎಂದು ಕೇಳಿದಾಗ....
ತಮ್ಮ ಆಜ್ಞಾನುಸಾರ ನಾನು ಎಲ್ಲವನ್ನೂ ಬಿಡುತ್ತಿದ್ದೇನೆ. 
ದಯಮಾಡಿ ವೈಷ್ಣವ ದೀಕ್ಷೆಯನ್ನು ಪ್ರಸಾದಿಸಬೇಕೆಂದು ಪ್ರಾರ್ಥಿಸಿದನು.
" ಅಂಕಿತ ಪ್ರದಾನ "
ಶ್ರೀ ಜಗನ್ನಾಥದಾಸರು ದಾಸಪ್ಪನಿಗೆ ವೈಷ್ಣವ ದೀಕ್ಷೆಯನ್ನು ನೀಡಿ " ಸುರಸ್ಕೃತ " ಎಂಬ ಭಂಗೀ ವೀಣೆಯನ್ನು ಕೈಗಿತ್ತು ಮಂತ್ರೋಪದೇಶವನ್ನು...
ರಾಗ : ಕಾಂಬೋಧಿ ತಾಳ : ಝ೦ಪೆ
ಶ್ರೀದವಿಠ್ಠಲ ಸರ್ವಾಂತರಾತ್ಮ ।
ನೀ ದಯಡಿ ಒಲಿದು । ನಿ ।
ತ್ಯದಲಿ ಕಾಪಾಡುವುದು ।। ಪಲ್ಲವಿ ।।
ಚಿಕ್ಕ ತನದಲಿ ತಂದೆ ತಾಯಿಗಳು ಒಲಿದು । ಪೆಸ ।
ರಿಕ್ಕಿ ಕರೆದರು ನಿನ್ನ ದಾಸನೆಂದೂ ।
ಅಕ್ಕರದಿ ಒಲಿದು ಭವ ದುಃಖಗಳ ಪರಿಹರಿಸಿ ।
ಮಕ್ಕಳನು ತಾಯಿ ಸಲಹುವ ತೆರದಿ ಸಂತೈಸು ।। ಚರಣ ।।
ಶುಕನಯ್ಯ ನಿನ್ನ ಪಾದ ಭಕುತಿ ತತ್ಕಥಾ ಶಾಸ್ತ್ರ ।
ಯುಕುತಿವಂತರ ಸಂಗ ಸುಖವನಿತ್ತು ।
ಸಕಲ ಕರ್ಮಗಳ ವೈದಿಕವೆನಿಸು ಒಲಿದು । ದೇ ।
ವಕಿ ತನಯ ನಿನ್ನವರ ಮುಖದಿಂದ ಪ್ರತಿದಿನದಿ ।। ಚರಣ ।।
ಮಾತರಿಶ್ವಪ್ರಿಯ ಸುರೇತರಾಂತಕನೇ । ಪುರು ।
ಹೂತ ನಂದನ ಸುಖ ನಿರಾತಂಕದಿ ।
ನೀ ತೋರು ಮನದಿ ಸಂಪ್ರೀತಿಯಿಂದಲಿ ಒಲಿದು ।
ಹೋತಾಹ್ವಗುರು ಜಗನ್ನಾಥವಿಠ್ಠಲ ಬಂಧು ।। ಚರಣ ।।
" ಶ್ರೀದ ವಿಠ್ಠಲ " ಎಂಬ ಅಂಕಿತವನ್ನು ನೀಡಿ ಹರಿದಾಸ ಪಂಥದಲ್ಲಿ ಸೇರಿಸಿಕೊಂಡರು.
ಇಷ್ಟು ದಿನ ಬರೀ ಹೆಸರಿನಿಂದ ದಾಸಪ್ಪನಾದ ಕರ್ಜಿಗಿಯ ಈ ಷೋಕೀ ಬ್ರಾಹ್ಮಣನು ನಿಜವಾದ ದಾಸಪ್ಪನಾಗಿ - ವಿರಕ್ತನಾಗಿ ವೈರಾಗ್ಯ ಭಾವವನ್ನು ಪಡೆದು " ಶ್ರೀ ಶ್ರೀದ ವಿಠಲ " ದಾಸರೆಂದು ಪ್ರಸಿದ್ಧಿ ಪಡೆದರು.
" ಶ್ರೀ ಹರಿಕಥಾಮೃತಸಾರಕ್ಕೆ ಫಲಶ್ರುತಿ ರಚನೆ "
ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಆಜ್ಞೆಯಂತೆ ಶ್ರೀ ಶ್ರೀದ ವಿಠ್ಠಲರು ಶ್ರೀ ಹರಿಕಥಾಮೃತಸಾರವನ್ನು ಪಾರಾಯಣ ಮಾಡಿ ಸಿದ್ಧಿಸಿಕೊಂಡರು.
ಶ್ರೀ ಹರಿಕಥಾಮೃತಸಾರವನ್ನು ಉಂಡರಗಿಸಿಕೊಂಡ ಶ್ರೀ ಶ್ರೀದವಿಠಲರು ತಮಗದರಿಂದಾವ ಫಲ ಪ್ರಾಪ್ತವಾಯಿತೋ - ಅದನ್ನು ಫಲಶ್ರುತಿಯಲ್ಲಿ ಕೇಶವ ನಾಮ ಸಂಖ್ಯೆಯಲ್ಲಿ ಭಾಮಿನೀ ಷಟ್ಪದಿ ರೂಪದಲ್ಲೇ ರಚನೆ ಮಾಡಿದರು. 
ಇದರಿಂದಲೇ ಈ ಗ್ರಂಥಕ್ಕೆ ಫಲಶ್ರುತಿಯಾಗಬೇಕಾದದ್ದು ಶ್ರೀ ಹರಿಯ ಸಂಕಲ್ಪ!!
" ಶ್ರೀ ಹರಿಕಥಾಮೃತ ಫಲಶ್ರುತಿ "
ಆದಿ :
ಹರಿಕಥಾಮೃತಸಾರ । ಶ್ರೀಮ ।
ದ್ಗುರುವಾರ ಜಗನ್ನಾಥದಾಸರ ।
ಕರತಲಾಮಲಕವನೆ ಪೇಳಿದ ಸಕಲ ಸಂಧಿಗಳ ।।
ಪರಮ ಪಂಡಿತಮಾನಿಗಳು । ಮ ।
ತ್ಸರಿಸಲೆಗಿಚ್ಚಾಗಿ ತೋರುವು ।
ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ ।।
ಶ್ರೇಷ್ಠ ಗುರುವರ್ಯರಾದ ಶ್ರೀ ಜಗನ್ನಾಥದಾಸರು ಶ್ರೀ ಹರಿಕಥಾಮೃತಸರದ ಸಕಲ ಸಂಧಿಗಳನ್ನು ತಮ್ಮ ಕರತಲಾಮಲಕವೆಂಬಂತೆ ಹೇಳಿದರು. 
ಪರಮ ಪಂಡಿತಾಭಿಮಾನಿಗಳು ಇದರ ಬಗ್ಗೆ ಮಾತ್ಸರ್ಯ ಪಡುವರು. 
ಅವರಿಗೆ ಇದು ಹೃದಯಕ್ಕೆ ಬೆಂಕಿಯಂತೆ ತೋರುವುದು. 
ಭೂಮಿಯೊಳಗೆ ಇದನ್ನು ಅರಸಿಕರಾದವರಿಗೆ ಹೇಳತಕ್ಕದ್ದಲ್ಲ!!
ಅಂತ್ಯ :
ದುಷ್ಟರೆನ್ನದೆ ದುರ್ವಿಷಯದಿಂ ।
ಪುಷ್ಟರನ್ನದೆ ಪೂತಕರ್ಮ ।
ಭ್ರಷ್ಟರೆನ್ನದೆ ಶ್ರೀದ ವಿಠ್ಠಲ ವೇಣುಗೋಪಾಲ ।।
ಕೃಷ್ಣ ಕೈಪಿಡಿಯುವನು ಸತ್ಯ । ವಿ ।
ಶಿಷ್ಟ ದಾಸತ್ವವನು ಪಾಲಿಸಿ ।
ನಿಷ್ಠೆಯಿಂದಲಿ ಹರಿಕಥಾಮೃತ ಪಠಿಸುವರು ।।
ಈ ಶ್ರೀ ಹರಿಕಥಾಮೃತಸಾರವನ್ನು ನಿಷ್ಠೆಯಿಂದ ಪಠಿಸುವ ಜನರನ್ನು ಶ್ರೀ ವೇಣುಗೋಪಾಲನಾದ ಶ್ರೀದವಿಠಲ ಹರಿಯು ದುಷ್ಟರೆನ್ನದೆ ಕೆಟ್ಟ ವಿಷಯಗಳನ್ನು ಸೇವಿಸಿದವರು ಎಂದು ನುಡಿಯದೇ - ಪವಿತ್ರ ಕರ್ಮಗಳನ್ನು ತೊರೆದವರೆನ್ನದೆ ಕೈ ಹಿಡಿಯುವನು. ಇದು ಅತ್ಯಂತ ಸತ್ಯ!
ಆ ಶ್ರೀ ಕೃಷ್ಣನು ತನ್ನ ವಿಶಿಷ್ಟ ದಾಸತ್ವವನ್ನೂ ಸಹಾ ನೀಡುವನು!!
" ಕೃತಿಗಳು "
ಪದಗಳು - 114
ಸುಳಾದಿ - 02
" ನಿರ್ಯಾಣ "
ಶ್ರೀ ಶ್ರೀದ ವಿಠ್ಠಲರು ಕ್ರಿ ಶ 1820ನೇ ಆಷಾಢ ಶುದ್ಧ ಏಕಾದಶೀ ಕಾಲನಾಮಕ ಶ್ರೀ ಹರಿಯ ಕರೆಗೆ ಓಗೊಟ್ಟು ವೈಕುಂಠ ಪಥದಲ್ಲಿ ನಡೆದು ಶ್ರೀ ಹರಿಯ ಪಾದಾರವಿಂದವನ್ನು ಸೇರಿದರು.
ಆದ್ದರಿಂದ ಶ್ರೀ ಶ್ರೀದ ವಿಠ್ಠಲರ ಆರಾಧನೆಯನ್ನು ಆಷಾಢ ಶದ್ಧ ದ್ವಾದಶೀಯಂದು ಶ್ರೀ ಶ್ರೀದ  ವಿಠ್ಠಲರ ಆರಾಧನೆ ನೆರವೇರುವುದು.
" ಉಪ ಸಂಹಾರ "
ಶ್ರೀ ಶ್ರೀದ  ವಿಠ್ಠಲರು ಅನೇಕ ಶ್ರೀ ಹರಿ ವಾಯು ಗುರುಗಳ ಪರವಾದ ಗೀತ ಗಾಥೆಗಳನ್ನು " ಶ್ರೀ ಶ್ರೀದ  ವಿಠ್ಠಲ " ಎಂಬ ಮುದ್ರಿಕೆಯಿಂದ ಬರೆದು ಪ್ರಚುರ ಪಡಿಸಿದರು.
ಶ್ರೀ ರಾಘವೇಂದ್ರತೀರ್ಥರ ಮೇಲಿನ ಇವರ ಪದಗಳು ಸಜ್ಜನರ ಬಾಯಲ್ಲಿ ಗಂಗಾ ಪ್ರವಾಹದಂತೆ ನಲಿದಾಡುತ್ತಿದೆ.
ಅಂತಃಕರಣದ ಅಂತಸ್ಥಲದಿಂದಲೇ ಭಾವನೆಯ ಉದ್ರೇಕದಿಂದ ಉಕ್ಕಿ ಬರುವ ಇವರ ರಚನೆಗಳಲ್ಲಿ ನವ ವಿಧ ಭಕ್ತಿಯ ದಿವ್ಯ ಧ್ವನಿಯು ಕೇಳಿ ಬರುತ್ತದೆ.
ಸಾಹಿತ್ಯದ ನಿಕಷದಲ್ಲಿಯೂ ಶ್ರೀ ಶ್ರೀದ ವಿಠ್ಠಲರ ಕೃತಿಗಳು ಅಪ್ಪಟ ಚಿನ್ನದ ಒರೆಗೆ ಇಳಿಯಬಲ್ಲವು.
ಶುದ್ಧ ಸಾತ್ವಿಕ ಹಾಗೂ ತಾತ್ವಿಕ ತಥಾಪಿ ಸರಸ ಸುಂದರ ಪದ್ಯಗಳನ್ನು ಹೊಸೆಯುವಲ್ಲಿ ಕರ್ಜಗಿಯ ದಾಸರು ಸಿದ್ಧ ಹಸ್ತರು.
ವರದೆಯ ಪ್ರವಾಹ - ಮಂಜುಳ ಗೀತ ಗುಂಜಾರವ - ಸ್ಫಟಿಕ ನಿರ್ಮಲತೆ - ಸಹಜ ಸುಂದರತೆ - ರಸಸ್ಯ೦ದಿತೆ ಮುಂತಾದ ಗುಣಗಳು ವರದಾ ನದೀ ತೀರದಲ್ಲಿದ್ದು ವರದೀ ವಿದ್ಯೆಯನ್ನು ಪಡೆದ ದಾಸರ ಪದ್ಯಗಳಲ್ಲಿ ಮೇಳವಿಳಿಸಿದ್ದನ್ನು ನಾವು ಹೇರಳವಾಗಿ ಕಾಣಬಹುದು!!
ಆಚಾರ್ಯ ನಾಗರಾಜು ಹಾವೇರಿ....
ವರದಾ ನದೀ ತೀರದಿ ಶೋಭಿಪ -
ಕರ್ಜಗಿಯ ವಾಸಾ ।
ಗುರುರಾಜರ ಕರುಣೆಯ -
ಕಂದಾ ದಾಸಪ್ಪಾ ಸಲಹೋ ।।
ಗುರು ಕರುಣದಿ ನೀ -
ಮಾನವಿ ಮುನಿಪುಂಗವರಿಂದ ।
ಸರ್ವಾಂತರ್ಯಾಮಿ -
ಶ್ರೀದವಿಠಲಾಂಕಿತ ಪಡೆದ ಧೊರೆ ।।
ಆಷಾಢ ಶುದ್ಧ ಏಕಾದಶೀ ದಿನ । ಉ ।
ಕೃಷ್ಟವಾದ ವೇಂಕಟನಾಥನ -
ಪುರಕೆ ಪೊರಟ ಪ್ರಭೋ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****


Srida Vittala Dasa1741-1820DasappaSrida VittalaSri Jagannatha DasaKarjagiAshada Shukla Prathama Ekadashi

******



No comments:

Post a Comment