Monday 1 July 2019

ಅರಳುಮಲ್ಲಿಗೆ ಪಾರ್ಥಸಾರಥಿ dr aralumallige parthasarathi


Recent Poets
ಶ್ರೀರಾಯರ ಅಂತರಂಗ ಭಕ್ತರೂ, ಕಾರುಣ್ಯಪಾತ್ರರೂ ಆದ ಶ್ರೀ ಪಾರ್ಥಸಾರಥಿ ವಿಠ್ಠಲಾಂಕಿತ ಡಾ।। ಅರಳುಮಲ್ಲಿಗೆ ಪಾರ್ಥಸಾರಥಿ ಅವರು. ಆ ವಿದ್ಯಾ ವಾಚಸ್ಪತಿಯ ಪರಿಚಯಾತ್ಮಕ ಲೇಖನ "
ಆಚಾರ್ಯ ನಾಗರಾಜು ಹಾವೇರಿ...
ನಗುಮೊಗದ ಪಾರ್ಥಸಾರಥಿವಿಠ್ಠಲರ ನೋಡಿರೋ ।

ಯೋಗಿ ವಿಜ್ಞಾನನಿಧಿತೀರ್ಥರ ಕಾರುಣ್ಯ ಪಾತ್ರರಾ ।

ಆಗಮಜ್ಞ ವಿಜಯದಾಸರ ಕಣ್ಣಾರೆ ಕಂಡವರ ।

ಅಗಮ್ಯ ಮಹಿಮ ರಾಘವೇಂದ್ರ ವ್ಯಾಸ ಶ್ರೀಪಾದರಾಜ ಪ್ರಿಯರಾ ।।

" ಸಂಕ್ಷಿಪ್ತ ಮಾಹಿತಿ "
ಹೆಸರು : ಡಾ ।। ಪಾರ್ಥಸಾರಥಿ
ತಂದೆ : ಶ್ರೀ ದೇಶಪಾಂಡೆ ಕೃಷ್ಣಮೂರ್ತಿರಾಯರು
ತಾಯಿ : ಸಾಧ್ವೀ ರಂಗಮ್ಮಾ
ಜನನ : 22.03.1948
ಜನ್ಮಸ್ಥಳ : ಅರಳುಮಲ್ಲಿಗೆ
ಹಿನ್ನೆಲೆ :
ಶ್ರೀ ರಾಘವೇಂದ್ರತೀರ್ಥರ ಗುರುಗಳಾದ ಶ್ರೀ ಸುಧೀಂದ್ರತೀರ್ಥರು ಸಂಚಾರ ಕ್ರಮದಲ್ಲಿ " ಪಾಳ್ಯ " ಎಂಬ ಗ್ರಾಮಕ್ಕೆ ಬಂದು ಶ್ರೀ ವ್ಯಾಸರಾಜ ಪ್ರತಿಷ್ಠಿತ ಶ್ರೀ ಹನುಮಂತದೇವರ ಗುಡಿಯಲ್ಲಿ ಮುಕ್ಕಾ೦ ಹೂಡಿದರು. ಅಂದು ರಾತ್ರಿ ಪೂಜಾ ಸಮಯದಲ್ಲಿ ಶ್ರೀ ಮುಖ್ಯಪ್ರಾಣದೇವರಿಗೂ ಮತ್ತು ಶ್ರೀ ಕೃಷ್ಣ ಪರಮಾತ್ಮನ ಅತ್ಯಂತ ಸಡಗರದದಿಂದ ಪೂಜಿಸಿ ಶ್ರೀ ಕೃಷ್ಣದೇವರಿಗೆ ಬೆಳ್ಳಿಯ ಮಲ್ಲಿಗೆ ಮೊಗ್ಗನ್ನು ಸಮರ್ಪಿಸಿ ಅಂದು ರಾತ್ರಿ ಅಲ್ಲಿಯೇ ಉಳಿದರು. ಮಾರನೇಯ ದಿನ ಪ್ರಾತಃ ಕಾಲದಲ್ಲಿ ಎದ್ದು ಸ್ನಾನಾಹ್ನೀಕ ಮುಗಿಸಿ ಶ್ರೀ ಸುಧೀಂದ್ರತೀರ್ಥರು ಶ್ರೀ ಹನುಮಂತದೇವರ ಸನ್ನಿಧಿಗೆ ಬಂದಾಗ ಅವರಿಗೆ ಅಚ್ಛರಿಯೇ ಕಾದಿತ್ತು. ಹಿಂದಿನ ದಿನ ರಾತ್ರಿ ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸಿದ ಬೆಳ್ಳಿಯ ಮಲ್ಲಿಗೆ ಮೊಗ್ಗು " ಅರಳಿತ್ತು ". ಅದನ್ನು ಕಂಡ ಶ್ರೀ ಶ್ರೀಗಳವರು ಆ ಊರಿನ ಜನರನ್ನು ಕರೆಸಿ ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸಿದ ಬೆಳ್ಳಿಯ ಮಲ್ಲಿಗೆ ಮೊಗ್ಗು ಅರಳಿದೆ. ಆದ್ದರಿಂದ ಈ ಊರು ಇಂದಿನಿಂದ " ಅರಳು ಮಲ್ಲಿಗೆ " ಎಂದು ಕರೆಯಲ್ಪಡುತ್ತದೆ ಎಂದು ಹೇಳಿದ್ದು, ಅಂದಿನಿಂದ ಈ ಊರಿಗೆ " ಅರಳು ಮಲ್ಲಿಗೆ " ಎಂದು ಹೆಸರಾಯಿತು!!
" ವಂಶ "
ಡಾ ।। ಅರಳುಮಲ್ಲಿಗೆ ಪಾರ್ಥಸಾರಥಿಯವರದ್ದು ಹರಿದಾಸರ ವಂಶ. ದೊಡ್ಡಬಳ್ಳಾಪುರದ ಶ್ರೀ ಮುದ್ದುಮೊಹನದಾಸರು, ಸಾರಸ್ವತ ಪರಿಣಯದ ಕವಿ ರಾಘವೇಂದ್ರಪ್ಪ, ಶ್ರೀ ಜಗನ್ನಾಥದಾಸರ ಶಿಷ್ಯರಾಗಿದ್ದ ಶ್ರೀ ದೇಶಪಾಂಡೆ ಕೃಷ್ಣರಾಯರು ಮತ್ತು ಅವರ ಪುತ್ರ ಶ್ರೀ ಯಾದವರಾಯರು, ಇತ್ತೀಚಿನ ದಿನಗಳಲ್ಲಿ ಹರಿದಾಸ ಕ್ಷೇತ್ರದಲ್ಲಿ ಧ್ರುವತಾರೆಗಳೆನಿಸಿದ್ದ ಶ್ರೀ ವೆಂಕಣ್ಣದಾಸರು, ಶ್ರೀ ವೇಣುಗೋಪಾಲದಾಸರ ಪರಂಪರೆಯಲ್ಲಿ ಬಂದಿರುವ ಡಾ ।। ಅರಳುಮಲ್ಲಿಗೆ ಪಾರ್ಥಸಾರಥಯವರಿಗೆ ಹರಿದಾಸ ಸಾಹಿತ್ಯ ಸಂಸ್ಕಾರ ಜನ್ಮತಃ ಬಂದಿದೆ.
ವಿದ್ಯೆ : ಎಂ ಎ. ಎಂ ಬಿ ಎ., ಪಿ. ಹೆಚ್ ಡಿ.
ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿಯವರು " ಶ್ರೀಮದ್ಭಗವದ್ಗೀತೆ " ಯ ಮೇಲೆ ಪಿ ಹೆಚ್ ಡಿ ಮಾಡಿದ ಪ್ರಪ್ರಥಮ ಸಂಶೋಧಕರು.
ಉಪದೇಶ ಗುರುಗಳು : ಶ್ರೀ ವಿಜ್ಞಾನನಿಧಿತೀರ್ಥರು
ಅಂಕಿತ : ಶ್ರೀ ಪಾರ್ಥಸಾರಥಿವಿಠ್ಠಲ
ದಿನಾಂಕ : 24.06.2010 ರಂದು ಶ್ರೀ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜ ಮಠಾಧೀಶರಾದ ವಿಜ್ಞಾನನಿಧಿತೀರ್ಥರು ಪ್ರಾತಃ ಕಾಲದಲ್ಲಿ ಡಾ ।। ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ " ಸುದರ್ಶನ ಹೋಮ " ಮಾಡಿಸಿ, ಮುದ್ರಾಧಾರಣ ಮಾಡಿ, ಶ್ರೀ ಗೋಪಿನಾಥದೇವರು ಮತ್ತು ಶ್ರೀ ಶ್ರೀಪಾದರಾಜರ ಮೂಲ ಬೃಂದಾವನದ ಪರಮ ಪವಿತ್ರವಾದ ಸನ್ನಿಧಾನದಲ್ಲಿ " ಪಾರ್ಥಸಾರಥಿವಿಠ್ಠಲ" ಎಂಬ ಅಂಕಿತವನ್ನು ಕೊಟ್ಟು ಮಂತ್ರೋಪದೇಶ ಮಾಡಿ...
" ದಾಸ ಸಾಹಿತ್ಯ ರಚನೆ ಹರಿಯುವ ನೀರಾಗಬೇಕು. ನಿಮಗೆ ಶ್ರೀ ರಂಗವಿಠಲದೇವರು ಬರೆಯುವ ಶಕ್ತಿ ನೀಡಿದ್ದಾನೆ. ಶ್ರೀ ಶ್ರೀಪಾದರಾಜರು ಮತ್ತು ನಮ್ಮ ಗುರುಗಳ ಪ್ರೇರಣೆಯಂತೆ ನಾವು, ನಿಮಗೆ ಹರಿದಾಸ ದೀಕ್ಷೆಯನ್ನು ನೀಡಿದ್ದೇವೆ. ದೇವರ ಸೇವೆ ಮಾಡಿ ಕೃತಕೃತ್ಯರಾಗಿ ಜನ್ಮ ಸಾರ್ಥಕವಾಗಲಿ ಎಂದು ಫಲ ಮಂತ್ರಾಕ್ಷತೆ ಕೊಟ್ಟು ಪರಮಾನುಗ್ರಹ ಮಾಡಿದರು!
ಶ್ರೀ ಪಾರ್ಥಸಾರಥಿವಿಠ್ಠಲರು ಗುರುಗಳಾದ ಶ್ರೀ ವಿಜ್ಞಾನನಿಧಿತೀರ್ಥರನ್ನು....
ಗುರುಗಳ ನೋಡಿರೈ । ಜ್ಞಾನಿಗ ।

ಳರಸ ವಿಜ್ಞಾನನಿಧಿಗಳ ಪಾಡಿರೈ ।। ಪಲ್ಲವಿ ।।

ಕ್ಲೇಶ ದೋಷ ರೋಷ ವಿಕಾರ ।

ಗಳನೆಲ್ಲ ಎದ್ದು ಗೆದ್ದಿದ್ದ ಧೀರ ।

ಜಪ ತಪ ಅನುಷ್ಠಾನದ ಸಾರ ।

ಜ್ಞಾನ ಭಕ್ತಿ ವೈರಾಗ್ಯದ ಸದ್ವಿಚಾರ ।। ಚರಣ ।।

ಮುಳಬಾಗಿಲಿನ ದಿವ್ಯ ಅತಿಶಯದ ಜಾಗದಿ ।

ಬೃಹತೀ ಸಹಸ್ರ ವಿಷ್ಣು ಮಹಾಯಾಗದಿ ।

ಕಲಿಯುಗದಲ್ಲಿ ಕೃತ ಯುಗ ಧರ್ಮದ ।

ಸಂಸ್ಥಾಪಿಸಿದ ಯತಿಕುಲ ತಿಲಕ ।। ಚರಣ ।।

ಎಲ್ಲೆಲ್ಲೂ ಸಂಚರಿಸಿ ಉಪದೇಶ ನೀಡುತ ।

ಬಳಿಗೆ ಬಂದವರ ಭವ ನಾಶ ಮಾಡುತ ।

ಮತಿವಂತರಿಗೆ ಸತ್ಪಂಥ ತೋರಿಸಿ ।

ವರ ವಿಜ್ಞಾನ ಸಂಸ್ಥೆಯ ಸ್ಥಾಪಿಸುತ ।। ಚರಣ ।।

ಪಾರ್ಥಸಾರಥಿವಿಠ್ಠಲನ ಕೀರ್ತಿ ಎಲ್ಲೆಡೆ ಪಸರಿಸಿ ।

ವಸುಧೆ ಸುರರಿಗೆಲ್ಲ ಭೂರಿ ಭೂರಿ ದಾನವನಿತ್ತ ।। ಚರಣ ।।

" ಶ್ರೀ ರಾಯರ ಕಾರುಣ್ಯ ಪಾತ್ರರು "
ಮಂಚಾಲೆ ಶ್ರೀ ರಾಯರನ್ನು ಕಂಡರೆ ಸಜ್ಜನರಿಗೆಲ್ಲಾ ಹಬ್ಬವೇ ಸರಿ! ಶ್ರೀ ರಾಯರ ತೋರುವ ಮಾತೃವಾತ್ಸಲ್ಯ - ಅಂತಃಕರಣ, ಪ್ರೀತಿ, ಆಪ್ಯಾಯತಯನ್ನು ಯಾವ ತಾಯಿಯು ತೋರುವುದಿಲ್ಲ ಎಂದರೆ ಅತಿಶಯೋಕ್ತಿ ಅಲ್ಲ! ಅಂಥಾ ವೈಭವದ ಪರಿಪೂರ್ಣ ಶುದ್ಧಾತ್ಮರು ನಮ್ಮ ಶ್ರೀರಾಯರು.
ಶ್ರೀ ರಾಯರ ಮತ್ತು ಶ್ರೀ ಪಾರ್ಥಸಾರಥಿವಿಠ್ಠಲರದ್ದು ಹಸು - ಕರುವಿನ ಸಂಬಂಧ.
ಶ್ರೀ ದಾಸಾರ್ಯರು ಶ್ರೀ ರಾಯರ ದರ್ಶನಾಕಾಂಕ್ಷಿಗಳಾಗಿ ಮಂತ್ರಾಲಯಕ್ಕೆ ಬಂದು ಶ್ರೀ ಗುರುಗಳ ವೃಂದಾವನದ ಮುಂದೆ ನಿಂತು, ಆನಂದ ಬಾಷ್ಪ ಸುರಿಸುತ್ತಾ ಹೃದಯ ತುಂಬಿ...
ರಾಗ : ಮಧ್ಯಮಾವತಿ ತಾಳ : ಆದಿ
ಅಂತಃಕರಣದ ಧೊರೆಯೇ ।

ಮಂತ್ರಾಲಯದ ಗುರುವೇ ।। ಪಲ್ಲವಿ ।।

ಸಂತ ಜನರ ಹೃದಯ ನಿವಾಸಿ ।

ಧೀಮಂತ ಜನರ ಮನದಲಿ ವಾಸಿ ।

ಅಂತರಂಗದಿ ಸೇವಿಪ ಜನರಿಗೆ ತಾವು ।

ಒಲಿದು ಇಷ್ಟಾರ್ಥಗಳನೆ ನೀಡುವಂಥ ।। ಚರಣ ।।

ಆತ್ಮ ಜನರ ಆಧ್ಯಾತ್ಮ ಸಿದ್ಧಿ ।

ಭಕ್ತಿ ಸಾಧನೆಗೆ ಲೋಕ ಪ್ರಸಿದ್ಧಿ ।

ನಂಬಿದ ಜನರಿಗೆ ಬಹು ಸಮೃದ್ಧಿ ।। ಚರಣ ।।

ನಾದ ತರಂಗದ ಅನನ್ಯ ವೈಣಿಕ ।

ಶಾಸ್ತ್ರ ಸಾರಗಳ ಅದ್ಭುತ ವೈದಿಕ ।

ಪಾರ್ಥಸಾರಥಿವಿಠ್ಠಲನ ಪ್ರೀತಿಯ ।

ಸುಂದರ ಮಂತ್ರಾಲಯ ಪ್ರಭುವೇ ನೀ ।। ಚರಣ ।।

" ಕೃತಿಗಳು "
ಶ್ರೀ ಶ್ರೀಪಾದರಾಜ - ಶ್ರೀ ವ್ಯಾಸರಾಜ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರ ಸಂಪುಟವೇ ಮೊದಲಾದ 54 ಮೊದಲಾದ ರಸವತ್ಕಾವ್ಯಗಳನ್ನು, ಗ್ರಂಥಗಳೂ, ಶ್ರೀ ಪಾರ್ಥಸಾರಥಿವಿಠ್ಠಲ ಎಂಬ ಮುದ್ರಿಕೆಯಲ್ಲಿ ಅನೇಕ ಪದ, ಪದ್ಯ, ಉಗಾಭೋಗ, ಸುಳಾದಿಗಳನ್ನೂ ಬರೆದಿದ್ದಾರೆ.
" ಉಪ ಸಂಹಾರ "
ಶ್ರೀ ಪಾರ್ಥಸಾರಥಿವಿಠ್ಠಲ ದಾಸರ ಲಲಿತ ಬಂಧುರವಾದ ಸುಂದರ ಕೃತಿಗಳಲ್ಲಿ ಭಗವದಾಭಿ ಮುಖ್ಯವು ಮುಖ್ಯವಾಗಿದೆ.
ಸರ್ವಾರ್ಪಣ ಸಿದ್ಧಿಯಿಂದ ಶ್ರೀ ದಾಸಾರ್ಯರ ಸಾಹಿತ್ಯವು ಕೃತಕೃತ್ಯವಾಗಿದೆ. ಆದರೂ ಜನ ಜೀವನದೆಡೆಗೆ ಶ್ರೀ ದಾಸರ ಕವಿ ವಾಣಿಯು ಉನ್ಮುಖವಾಗಿ ಚತುರ್ಮುಖ ಚಾತುರ್ಯದಿಂದ ಬದುಕನ್ನು ತಿದ್ದುವಲ್ಲಿಯೂ ಸಾಫಲ್ಯವನ್ನು ಕಂಡಿದೆ.
ವಿಷಯಕ್ಕೆ ಅನುಗುಣವಾದ ಅಭಿವ್ಯಕ್ತಿಯ ರೂಪವನ್ನು ಆಯ್ದುಕೊಂಡು ಸ್ವಯಂ ಪೂರ್ಣವಾದ ರಸೋಲ್ಲಾಸದಿಂದ ಅವರ ದೇವರ ನಾಮಗಳೆಲ್ಲವೂ ದಿವ್ಯ ಭವ್ಯ ಗೀತದ ಸೊಬಗನಾಂತು ಸೊಗಯಿಸುತ್ತದೆ.
ಶ್ರೀ ಪಾರ್ಥಸಾರಥಿವಿಠ್ಠಲ ದಾಸರ ಸಾಹಿತ್ಯದಲ್ಲಿ ಬುದ್ಧಿ ಭಾವಗಳು ವಿದ್ಯುದಾಲಿಂಗನೆಯಾಗಿ ಹೊಸದಾಗ ಒಂದು ರಸ ರಂಗವೇ ಏರ್ಪಡುವುದು.
ಶ್ರೀ ಪಾರ್ಥಸಾರಥಿವಿಠ್ಠಲ ದಾಸರು ಶ್ರವಣ ರಮಣೀಯವಾದ ತಮ್ಮ ಪದ ಪದ್ಯಗಳ ಪ್ರಖರತೆ ಹಾಗೂ ನಾದ ಮುಖರತೆಗಳಿಂದ ಸಹೃದಯರ ಮನಃ ಪ್ರೀಣನವನ್ನು ಮಾಡುತ್ತಾರೆ.
ಶ್ರೀ ಪಾರ್ಥಸಾರಥಿವಿಠ್ಠಲರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ.
ಸುಮಾರು 1000 ಕ್ಕೂ ಅಧಿಕ ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ 22 Feb 2019
***** **


ಹರಿದಾಸರ 10000 ಹಾಡುಗಳು

ನಮ್ಮ ನಾಡಿನ ಸಹಸ್ರಾ
ರು ವರ್ಷಗಳ ಇತಿಹಾಸದಲ್ಲಿ ದಾಸ ಸಾಹಿತ್ಯ ಅತ್ಯಂತ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ದಾಸ ಸಾಹಿತ್ಯ ಎನ್ನುವ ಅದ್ಬುತ ಲೋಕದ ಒಳಗೊಮ್ಮೆ ಪಯಣ ಮಾಡಿ ಬಂದರೆ ಗುರುವಿನ ದರುಶನವಾಗುತ್ತದೆ, ಜ್ಞಾನಿಗಳ ಅನುಗ್ರಹವಾಗುತ್ತದೆ, ನೈಜ ಜೀವನ ತತ್ವಗಳ ಪರಿಚಯವಾಗುತ್ತದೆ, ಪರಮಾತ್ಮನನ್ನು ಭಕ್ತಿಯಿಂದ ಒಲಿಸಿಕೊಳ್ಳುವ ಅದ್ಭುತ ಶಕ್ತಿಯ ಸಂಚಲನವಾಗುತ್ತದೆ. 

ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ದಾಸ ಸಾಹಿತ್ಯದಲ್ಲಿ ನಾಲ್ಕೈದು ದಶಕಗಳ ಕಾಲ ಅಧ್ಬುತ ಕೃಷಿ ಮಾಡಿರುವ ಮಹನೀಯರು. ಹರಿದಾಸರ ಎಲ್ಲ ಹಾಡುಗಳು ಒಂದು ಕಡೆ ದೊರಯಬೇಕು ಎನ್ನುವ ಸದುದ್ದೇಶದಿಂದ ಅವರು ಇತ್ತೀಚೆಗೆ ಸಂಗ್ರಹಿಸಿದ ಅಭೂತಪೂರ್ವ ಗ್ರಂಥ – ಹರಿದಾಸರ 10,000 ಹಾಡುಗಳು. ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನಾಲ್ಕು ದಶಕಗಳ ಸಂಶೋಧನೆಯ ಫಲವೇ ಈ ಕೃತಿ. ಎರಡು ಸಾವಿರಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಜ್ಞಾನದ ಗಣಿ ಇದು. 

ಈ ಗ್ರಂಥ ಈಗಾಗಲೇ ಸಾಹಿತ್ಯ ಹಾಗೂ ಸಂಗೀತ ವಲಯದಲ್ಲಿ ಶತಮಾನದ ಗ್ರಂಥ ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ. ಇದು ಪೀಳಿಗೆಯಿಂದ ಪೀಳಿಗೆಗೆ ಸ್ಥಿರಾಸ್ತಿಯ ತರಹ ಉಳಿದುಹೋಗುವಂತಹ ಗ್ರಂಥ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸಂತರು ಜಗದ್ಗುರುಗಳು ಇದೊಂದು ದೈವೀಕವಾದ ಗ್ರಂಥ ಎನ್ನುವ ಪ್ರಶಂಸೆ ಕೊಟ್ಟಿರುವ ಕಾರಣ, ಇದು ಪ್ರತಿಯೊಬ್ಬರ ಮನೆಯ ದೇವರ ಕೋಣೆಯಲ್ಲಿ ಪೂಜೆಗೆ ಅರ್ಹವಾದ ಗ್ರಂಥ. ಈ ಪುಸ್ತಕವನ್ನು ತಮ್ಮದಾಗಿಸಿಕೊಂಡವರಿಗೆ ಎಲ್ಲ ದಾಸರ ಸನ್ನಿದಾನ ಒಂದೇ ಪುಸ್ತಕದಲ್ಲಿ ದೊರೆಯುತ್ತದೆ. 

ಈ ಪುಸ್ತಕ ಮನೆಮನೆಯಲ್ಲೂ ಸಂಗ್ರಹಿಸಲು ಯೋಗ್ಯವಾದ ಮೂಲ ಆಕರ ಗ್ರಂಥ. ಸಂಗೀತ ವಿದ್ಯಾರ್ಥಿಗಳು, ಸಂಗೀತ ವಿದ್ವಾಂಸರು, ಸಂಗೀತಾಸಕ್ತರು, ಅದ್ಯಾಪಕರು, ಸಂಶೋಧನಾಕಾರರು, ವಿಷ್ಣು ಸಹಸ್ರನಾಮ ಮಂಡಳಿ, ಲಲಿತಾ ಸಹಸ್ರನಾಮ ಮಂಡಳಿ ಮುಂತಾದ ಸತ್ಸಂಗಗಳ ಸದಸ್ಯರು, ಹಿರಿಯ ನಾಗರೀಕರು, ತಮ್ಮ ಮನೆಯಲ್ಲಿ ಅವಶ್ಯ ಸಂಗ್ರಹಿಸಿಟ್ಟುಕೊಳ್ಳಬೇಕಾದ ಅತ್ಯಮೂಲ್ಯ ಗ್ರಂಥ ಇದು.

2020 ರ ಸಪ್ಟೆಂಬರ್ 18 ರಿಂದ ಅಧಿಕಮಾಸ ಬರುತ್ತಿದೆ. ಈ ಅಧಿಕಮಾಸದಲ್ಲಿ ದಾನ ಹಾಗೂ ದೇವರಿಗೆ ಸಮರ್ಪಣೆ ಮಾಡುವುದು ಅತ್ಯಂತ ಪುಣ್ಯದ ಕೆಲಸ. ಇದು 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸವಾದ್ದರಿಂದ, 33 ಎನ್ನುವುದು ಅಧಿಕ ಮಾಸಕ್ಕೆ ಮಹತ್ವದ ಸಂಖ್ಯೆ. ಅಧಿಕ ಮಾಸದಲ್ಲಿ ಒಂದು ರೂಪಾಯಿ ದಾನ ಮಾಡಿದರೆ 33 ರೂಪಾಯಿ ದಾನ ಮಾಡಿದ ಫಲ ಸಿಗುತ್ತದೆ. 33 ರೂಪಾಯಿ ದಾನ ಮಾಡಿದರೆ ಅನಂತ ಫಲ ಸಿಗುತ್ತದೆ. 

ದಾನಗಳಲ್ಲಿ ಜ್ಞಾನ ದಾನ, ಆಧ್ಯಾತ್ಮ ದಾನ ಹಾಗೂ ನಾಮ ಸಂಕೀರ್ತನೆಯ ದಾನ ಬಹಳ ಶ್ರೇಷ್ಠ. ಇವೆಲ್ಲದರ ಸಮ್ಮಿಲನವೇ ಹರಿದಾಸರ ಹತ್ತುಸಾವಿರ ಹಾಡುಗಳು ಗ್ರಂಥ. ಆದ್ದರಿಂದ ತಾವು ಈ ಅಧಿಕಮಾಸದಲ್ಲಿ ಒಂದು ಪುಸ್ತಕವನ್ನು ದಾನ ಮಾಡಿದರೆ 33 ಪುಸ್ತಕ ದಾನ ಮಾಡಿದ ಫಲ ಸಿಗುವುದು. ಸಶಕ್ತರು, 33 ಪುಸ್ತಕ ದಾನ ಮಾಡಿದರೆ ಅದು ಮುಕ್ತಿಗೆ ದಾರಿ ಮಾಡಿಕೊಡುವುದು. 

ಗ್ರಂಥ ದಾನ ಮಾಡಲು ತಾವು ಅಧಿಕ ಮಾಸ ಬರುವವರೆಗೆ ಕಾಯಬೇಕಾಗಿಲ್ಲ. ಈಗಲೇ ಅಧಿಕ ಮಾಸದ ಸಂಕಲ್ಪ ಮಾಡಿ ದಾನ ನೀಡಬಹುದು. ಹಾಗೆ ಮಾಡಿದರೆ ದಾನ ಪಡೆದವರು ಅಧಿಕ ಮಾಸ ಬರುವುದರ ಒಳಗಾಗಿ ಈ ಪುಸ್ತಕದಲ್ಲಿರುವ 33 ದೇವರ ನಾಮಗಳನ್ನು ಕಲಿತು, ಅಧಿಕ ಮಾಸದಲ್ಲಿ ದೇವರಿಗೆ ಸಮರ್ಪಣೆ ಮಾಡಿದರೆ ಅದರ ಫಲ ಅವರಿಗಷ್ಟೇ ಅಲ್ಲ, ದಾನ ಕೊಟ್ಟ ತಮಗೂ ಸಿಗುವುದು.

ಒಬ್ಬರಿಗೇ ದಾನ ಮಾಡಲು ಸಾಧ್ಯವಾಗದಿದ್ದರೆ ಅಧಿಕಮಾಸ ಬಳಗವೊಂದನ್ನು ಕಟ್ಟಿಕೊಂಡು, ಎಲ್ಲರೂ ಸೇರಿ ದಾನ ಮಾಡಿದರೂ ಸಹ ಸ್ರೇಯಸ್ಸು ಲಭಿಸುವುದು. 

ಈ ಗ್ರಂಥ ದಾನದಿಂದ ಆಯಸ್ಸು, ಆರೋಗ್ಯ, ಸಂತೋಷ, ಸಂಭ್ರಮ, ನೆಮ್ಮದಿ, ಮನಃಶಾಂತಿ, ಸಾಧನೆ, ಈ ಎಲ್ಲ ಫಲಗಳು ತಮ್ಮದಾಗುವವು. 
*ಪುಸ್ತಕ ಪ್ರತಿಗಳಿಗಾಗಿ ಸಂಪರ್ಕಿಸಿ:
ಆಲಂಪಲ್ಲಿ ಪ್ರತಿಷ್ಠಾನ ಸಾವಿತ್ರಿ ಕಾಲೋನಿ ರಾಯಚೂರು

Mob :8073213185*
********



*********
note from suresh hulikunti : Dr. Aralumallige Parthasarathi was my lecturer  in MES College Bangalore during 1976-77 and was teaching Secretarial Practice subject to us.  In the same year he had started with associating himself in kannada film industry, mainly as script writer.  
I am very happy to know his obtaining doctorate in Bhagavad Gita and heartfelt thanks to his wonderful contribution to madhwa community all over the world.





*****

No comments:

Post a Comment