Monday 1 July 2019

tammanna dasaru of kalluru 1830 ತಮ್ಮಣ್ಣ ದಾಸರು

ಶ್ರೀ ರಾಯರ - ಶ್ರೀ ವಿಜಯದಾಸರ ಪರಮ ಭಕ್ತರು ಶ್ರೀ ರಘುಪತಿ ವಿಠ್ಠಲಾ೦ಕಿತ ಶ್ರೀ ರಾಘವೇಂದ್ರಾಚಾರ್ಯರು / ಪರಮ ವೈರಾಗ್ಯಶಾಲಿ ಶ್ರೀ ತಮ್ಮಣ್ಣದಾಸರು 

ಕಲ್ಲೂರು ಪುರವಾಸಸ್ಥ೦ ವ್ಯಾಸ ವಿಠ್ಠಲ ಶಿಷ್ಯಕಂ ।
ರಾಘುಪತ್ಯಾಖ್ಯಾ ದಾಸಾರ್ಯ೦ ವಂದೇ ವೈರಾಗ್ಯ ಶಾಲಿನಂ ।।

ಹೆಸರು : ಶ್ರೀ ರಾಘವೇಂದ್ರಾಚಾರ್ಯರು
ತಂದೆ : ಶ್ರೀ ದೇವರಾಚಾರ್ಯರು ( ಶ್ರೀ ಶ್ರೀಕರ ವಿಠ್ಠಲರು )
ಕಾಲ  : ಕ್ರಿ ಶ 1730 - 1830
ಜನ್ಮ ಸ್ಥಳ : ಕಲ್ಲೂರು

ಕಲ್ಲೂರಿನ ಶ್ರೀ ಲಕ್ಷ್ಮೀಕಾಂತಾಚಾರ್ಯರಿಗೆ ಸ್ವಪ್ನ ಸೂಚನೆ ಮೂಲಕ ಶ್ರೀ ಮಹಾಲಕ್ಷ್ಮೀದೇವಿಯರ ವಿಗ್ರಹ ದೊರೆತ ಬಗ್ಗೆ ಐತಿಹ್ಯವಿದೆ.

ಶ್ರೀ ಲಕ್ಷ್ಮೀಕಾಂತಾಚಾರ್ಯರ ಮಕ್ಕಳಾದ ಶ್ರೀ ದೇವರಾಚಾರ್ಯರಿಗೆ ಸ್ವಪ್ನ ಮೂಲಕ ಮಹಮ್ಮದಪುರ ಗ್ರಾಮದ ಹೊಲದಲ್ಲಿ ಶ್ರೀ ವೇಂಕಟೇಶದೇವರ ವಿಗ್ರಹ ದೊರೆತಿದ್ದು ಇದೆ. ಈ ವಿಗ್ರಹಗಳ ಎದುರಿನ ಬಂಡೆಯ ಮೇಲೆ ಶ್ರೀ ಪ್ರಾಣದೇವರ ಉದ್ಭವ ಮೂರ್ತಿ ಇರೋದು ಮತ್ತೊಂದು ವಿಶೇಷ.

ಭಾಸ್ಕರ ಕ್ಷೇತ್ರವೆಂದೇ ಪ್ರಸಿದ್ಧವಾದ ಕಲ್ಲೂರಿನ ಗುಡ್ಡದ ಮೇಲೆ ಶ್ರೀ ಗರುಡಾಂತರ್ಗತ ಶ್ರೀ ವಾಯುದೇವರು ನೆಲೆ ನಿಂತಿದ್ದಾರೆ.

ವ್ಯವಹಾರ ನಾಮ : ಶ್ರೀ ವೈರಾಗ್ಯಶಾಲಿ ತಮ್ಮಣ್ಣ ದಾಸರು

ಪ್ರೀತಿಯಿಂದ ಎಲ್ಲರೂ ಶ್ರೀ ರಾಘವೇಂದ್ರಾಚಾರ್ಯರನ್ನು " ತಮ್ಮಣ್ಣ - ತಮ್ಮಣ್ಣ " ಎಂದು ಕರೆಯ ತೊಡಗಿದ್ದರಿಂದ " ಶ್ರೀ ರಾಘವೇಂದ್ರಾಚಾರ್ಯ ಹೆಸರು ಮರೆತು ಹೋಗಿ ಶ್ರೀ ತಮ್ಮಣ್ಣದಾಸರೆಂದೇ ಪ್ರಸಿದ್ಧಿಯಾದರು!

ಶ್ರೀ ರಾಘವೇಂದ್ರಾಚಾರ್ಯರು ತಮ್ಮ 22ನೇ ವಯಸ್ಸಿನಲ್ಲಿಯೇ ಶ್ರೀ ವ್ಯಾಸ ವಿಠ್ಠಲರಿಂದ ಪಡೆದು ವೈರಾಗ್ಯಶಾಲಿಗಳಾಗಿ ಪ್ರಕಾಶಸಿದ್ದರಿಂದ " ವೈರಾಗ್ಯಶಾಲಿ ಶ್ರೀ ತಮ್ಮಣ್ಣದಾಸರೆಂದೇ ಮನೆ ಮಾತಾದರು!

ಅಂಕೀತೋಪದೇಶ : ಶ್ರೀ ವ್ಯಾಸ  ವಿಠ್ಠಲರು ( ಶ್ರೀ ಕಲ್ಲೂರು ಸುಬ್ಬಣ್ಣದಾಸರು )

ಅಂಕಿತ : ಶ್ರೀ ರಘುಪತಿ ವಿಠ್ಠಲ

" ಅಂಕಿತ ಪ್ರದಾನ ಪದ "

ರಾಗ : ಕಾಂಭೋಧಿ      ತಾಳ : ಝ೦ಪೆ

ಅತಿ ದಯಾಪರಮೂರ್ತಿ । ಅನಿ ।
ಮಿತ್ತ ಬಂಧು । ರಘು ।
ಪತಿ ವಿಠ್ಠಲ ಸಲಹೋ ಇವನಾ ।। ಪಲ್ಲವಿ ।।

ಪತಿತ ಪಾವನ ನಿನ್ನ ಪರಮ ಮಂಗಳ ನಾಮ ।
ಸತತ ಪೊಗಳುವಂತೆ ಸಾನುಕೂಲನಾಗಿ ।। ಅ ಪ ।।

ಜನನಿ ಗರ್ಭದಲಿಂದ ಜನಿಸಿದ ಮೊದಲು ಮಾಡಿ ।
ಗುಣವಂತ ನೆನೆಸಿದವನೋ ।
ಕನಸಿನೊಳಗಾದರೂ ಧನ ವನಿತೆ ತನು ಭೋಗ ।
ನೆನಸದಿಹ ನಿಪುಣನಿವನೋ ।।
ಕ್ಷಣಕ್ಷಣಕೆ ನಿನ್ನನೇ ಧ್ಯೇನಿಸುತ ಪರಮ ಸುಖ ।
ವನಧಿಯೊಳಗಾಡುವನೋ ।
ಪ್ರಣತ ಜನ ಮಂದಾರ ಪ್ರಾಣನಂತರ್ಯಾಮಿ ।
ನಿನಗೆ ಸಮ್ಮತವಾದ ನಿಜ ದಾಸನ ಮ್ಯಾಲೆ ।। ಚರಣ ।।

ಶೀತೋಷ್ಣ ಸುಖ ದುಃಖ ಮಾನಾಪಮಾನಗಳು ।
ಮಾತು ಮನಸಿಗೆ ತಾರನೋ ।
ಧಾತುಗೆಡದಲೆ ತಿಳಿದು ದಯಾ ಪಯೋನಿಧಿ ನಿನ್ನ ।
ಪ್ರೀತಿಯೆಂದಾಡುವವನೋ ।।
ವಾತಜನ ಮತದವರ ಪ್ರೀತಿಯಲಿ ಸೇವಿಸಿ । ಕೃ ।
ಪಾತಿಶಯ ಪಡದಣುಗನೋ ।
ಈ ತೆರದಿ ಭಕ್ತನ್ನ ರೀತಿ ನೀ ಬಲ್ಲವನೇ ।
ನಾ ತುತಿಸಿ ಪೇಳ್ವ ಪೊಸಮಾತು ಮತ್ತುಂಟೆ ।। ಚರಣ ।।

ನಿನ್ನ ಕರುಣದಳತಿ ಇನ್ನಿವನಮ್ಯಾಲಿರಲು ।
ಚನ್ನಿಗನೆ ನಿನಗೆ ನಾನೂ ।
ಬಿನ್ನೈಸಿದೆನೋ ಸ್ವಾಮಿ ಎನ್ನ ಗುರುಗಳ ಆಜ್ಞ ।
ಚನ್ನಾಗಿ ಶಿರದಿವೊಹಿಸಿ ।।
ಸಣ್ಣವಗೆ ಅಂಕಿತವ ಕೊಟ್ಟನಲ್ಲದೆ ಲೇಶ ।
ಎನ್ನ ಸ್ವತಂತ್ರವಿಲ್ಲ ।
ಚನ್ನಾಗಿ ಕಾಪಾಡಿ ಬೆಳಸಿ ಫಲವನೇ ತೋರೋ ।
ಸನ್ನುತಾಂಗಿಯರಮಣ ವ್ಯಾಸ ವಿಠ್ಠಲವಿಭುವೇ ।। ಚರಣ ।।

ಎಂಬ ಅಂಕಿತದೊಂದಿಗೆ ಶ್ರೀ ರಘುಪತಿ ವಿಠ್ಠಲರು ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.  ಶ್ರೀ ರಘುಪತಿ ವಿಠ್ಠರ ವೈರಾಗ್ಯ ವೈಭವವು ಶ್ರೀ ವ್ಯಾಸವಿಠಲರು ಅಂಕಿತ ಪದದಲ್ಲಿ ವಿವರಿಸಿದ್ದಾರೆ. 

ಶ್ರೀ ರಘುಪತಿ ವಿಠ್ಠಲರು ಶ್ರೀ ರಾಯರ ದರ್ಶನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ಮುಗಿಸಿಕೊಂಡು ಶ್ರೀ ಗುರುಸಾರ್ವಭೌಮರ ಮೂಲ ಬೃಂದಾವನ ಸನ್ನಿಧಾನಕ್ಕೆ ಬಂದು ಶ್ರೀ ಗುರುಸಾರ್ವಭೌಮರನ್ನು ತದೇಕ ಚಿತ್ತದಿಂದ ನೋಡುತ್ತಾ ಎದೆ ತುಂಬಿ....

ರಾಗ : ಹಂಸಾನಂದೀ         ತಾಳ : ಆದಿ

ನೆರೆ ನಂಬಿದೆ ಗುರು ಮನ ಮಂದಿರದೊಳು ।
ಪರಿತೋಷಿಸು ಗುರು ರಾಘವೇಂದ್ರ ।। ಪಲ್ಲವಿ ।।

ವರ ತುಂಗಾ ತೀರದಿ ಮಂತ್ರಾಲಯದಿ ।
ನಿರುತ ನೆಲೆಸಿದ ಮಂಗಳ ಮಹಿಮನೆ ರಾಘವೇಂದ್ರ ।। ಅ ಪ ।।

ಮುದವಾದರು ಬಲು ಖೇದವಾದರೂ ।
ಭೇದವ ಮಾಡದಿರು ರಾಘವೇಂದ್ರ ।
ಮುದಮುನಿ ಶಾಸ್ತ್ರಾರ್ಥ ಸದಮಲ ಹೃದಯದಿ ।
ಭೋಧಿಸುತಿರು ನೀ ರಾಘವೇಂದ್ರ ।। ಚರಣ ।।

ಶರಣೆಂದವರಘ ತ್ವರಿತದಿ ನೀಗುವ ।
ಶರಣರ ಸುರಧೇನು ರಾಘವೇಂದ್ರ ।
ಪರಿಪರಿ ಮೋದವ ಭರದಲಿ ಬೀರುತ ।
ಪರಮ ಕರುಣಿ ಜಯ ರಾಘವೇಂದ್ರ ।। ಚರಣ ।।

ಭವ ರೋಗಂಗಳ ಜವದಲಿ ನೀಗುವ ।
ಭವರೋಗ ವೈದ್ಯನೇ ರಾಘವೇಂದ್ರ ।
ರವಿ ಶತ ತೇಜ ಶ್ರೀ ರಾಮನ ಪೂಜಿಪ ।
ಕವಿಯಗ್ರೇಸರ ರಾಘವೇಂದ್ರ ।। ಚರಣ ।।

ಕುಷ್ಠ ಕುಬ್ಜ ಬದಿರಾದಿ ವ್ಯಾಧಿಗಳ ।
ನಷ್ಟವ ಗೊಳಿಸುವ ರಾಘವೇಂದ್ರ ।
ನಿಷ್ಠೆಯಿಂದ ಅಷ್ಟೋತ್ತರ ಪಠಿಸಲು ।
ಇಷ್ಟವ ಗರೆಯುವ ರಾಘವೇಂದ್ರ ।। ಚರಣ ।।

ವರ ಸುಧಾ ಗ್ರಂಥಕೆ ಪರಿಮಳ ಟೀಕೆಯ ।
ಸರಸದಿ ರಚಿಸಿದ ರಾಘವೇಂದ್ರ ।
ಹರಿಮತ ಶರಧಿಗೆ ಚೆಂದಿರ ನೆನೆಪನೆ ।
ಹರಿ ಗುಣ ನಾಯಕ ರಾಘವೇಂದ್ರ ।। ಚರಣ ।।

ಪ್ರತಿ ಗುರುವಾರದಿ ಅಂದಣವೇರುವ ।
ಯತಿ ಕುಲ ತಿಲಕನೆ ರಾಘವೇಂದ್ರ ।
ಅತಿಶಯ ಭಕುತಿಲಿ ಸ್ತುತಿಸುವ ಜನರಿಗೆ ।
ಮತಿ ಶುಭವೀಯುವ ರಾಘವೇಂದ್ರ ।। ಚರಣ ।।

ಭಕುತರ ಮೊರೆ ಕೇಳಿ ಯುಕುತಿಯಿಂದಲಿ ।
ಮುಕುತಿ ಪಥವ ತೋರೋ ರಾಘವೇಂದ್ರ ।
ಅಕಳಂಕ ಮಹಿಮ  ಶ್ರೀ ರಘುಪತಿ ವಿಠ್ಠನ ।
ಸುಖ ಸಂತಸ ನೀಡೋ ರಾಘವೇಂದ್ರ ।। ಚರಣ ।।

ಎಂದು ತಮ್ಮ ಆರಾಧ್ಯ ಗುರುಗಳನ್ನು ಸ್ತುತಿಸಿದರು. ಅಲ್ಲಿಂದ ಮುಂದೆ ಅವರು ಶ್ರೀ ಭಾವಿಸಮೀರರಾದ ಶ್ರೀ ವಾದಿರಾಜರ ದರ್ಶನಕ್ಕೆ ಬಂದು ಗುರುಗಳನ್ನು....

ರಾಗ : ಸುರಟಿ     ತಾಳ : ಮಟ್ಟ

ವಾದಿರಾಜ ಮದ್ಗುರುರಾಯ ।
ಮಾಧವನಂಘ್ರಿ ಆರಾಧಿಸುವ ಧೀರಾ ।। ಪಲ್ಲವಿ ।।

ಭೇದಾರ್ಥ ಸಿದ್ಧಾಂತ ವಾದಿಗಳಿದಿರಾಗಿ ।
ಸಾಧಿಸಿ ಸುಜನರ ಮೋದ ಪಡಿಸುವಂಥ ।। ಚರಣ ।।

ಮಂಗಳಾಂಗನಂತರಂಗದಿ ನೋಡುತ ।
ಸಂಗೀತದಲಿ ಪಾಡೆ ಭಂಗ ಓಡಿಸುವಂಥ ।। ಚರಣ ।।

ನಂದಿವಾಹನ ಅಮರೇಂದ್ರ ವಂದ್ಯ ನಮ್ಮ ।
ಇಂದಿರಾಪತಿಯೆಂದು ಮಂದರಿಗರುಪುವ ।। ಚರಣ ।।

ಬುಧರ ಮಧ್ಯದಿ ಸುಹೃದಯರೆನಿಸುವಂಥ ।
ಸದಾ ಸುಖನಿಧಿ ಹಯವದನನ್ನ ನಿಜ ದಾಸ ।। ಚರಣ ।।

ಯತಿ ಶಿರೋಮಣಿ ಸುಖವುಳ್ಳ ವಿಜ್ಞಾನಿ ।
ಪತಿತರುದ್ಧರಿಸುವ ಮತಿಮಹ ಖತಿದೂರ ।। ಚರಣ ।।

ನರರಂತೆ ನೀನಲ್ಲ ಸುರರಂತೆ ಹರಿಯಲ್ಲ ।
ಮರಗಳಂತೆ ಕಲ್ಪತರುವಲ್ಲ ಕೇಳಯ್ಯ ।। ಚರಣ ।।

ರಘುಪತಿ ವಿಠ್ಠಲ ಸಮ್ಮೊಗನಾಗಿ ನಿಮಗಿಪ್ಪ ।
ಅಗಣಿತ ಗುಣಧಾಮನ್ನಗಲದ ಮನವುಳ್ಳ ।। ಚರಣ ।।

ಶ್ರೀ ರಘುಪತಿ ವಿಠ್ಠಲರು ತಮ್ಮ ಇಷ್ಟಪ್ರದರಾದ ಶ್ರೀ ವಿಜಯದಾಸರ ಕುರಿತು....

ರಾಗ : ಆರಭಿ        ತಾಳ : ಆದಿ

ವಿಜಯರಾಜಗುರು ರಾಜಾಧಿರಾಜ । ಮಹ ।
ರಾಜ ಶಿರೋರತುನ ।। ಪಲ್ಲವಿ ।।

ತ್ಯಜಿಸದೆ ನಿಮ್ಮ ಪದಾಬ್ಜವ ಬಿಡೆನೆಂಬೋ ।
ಸುಜನರ ಪಾಲಿಸಯ್ಯ ।। ಅನು ಪಲ್ಲವಿ ।।

ಜ್ಞಾನ ಭಕುತಿ ಕೊಡು ಗಾನ ಶೀಲನ ಮಾಡು ।
ಹೀನ ಮನವ ಕೆಡಿಸೋ ।
ಆನೆಂಬೋ ಅಹಂಕಾರವನ್ನೇ ತೊಲಗಿಸೋ ।
ನಿನ್ನವರವ ನೆನಿಸೋ ।।
ಧೇನಿಸುವಂದದಿ ಹರಿಯ ಪಾದಾಂಬುಜ ।
ಮಾನಸದಲಿ ಸರ್ವದ ।
ಕಾಣಿಸಿ ಕೊಡುವನು ಜೀವನು ನಿಜವೆಂಬ ।
ಧ್ಯಾನ ಮನಕೆ ಬರಲಿ ।। ಚರಣ ।।

ಮೌನಿಯಾಗಿರಲಾರು ಹೀನತೆ ನುಡಿಯಲು ।
ಪ್ರಾಣ ಪ್ರೇರಕರಿಂದಲಿ ।
ಆನೇನಾಡುವನಲ್ಲ ಆನೆನೆನಿಪನಲ್ಲ ಆನೆ ಸ್ವತಂತ್ರನಲ್ಲ ।
ದೀನನಾಗೆರಗಿ ಸಜ್ಜನರ ಪಾದಾಬ್ಜಕೆ ।।
ರೇಣುನಾಗಿ ನಡೆದು ।
ನೀನೇವೆ ಗತಿಯೆಂದು ।
ನಿನ್ನನೇ ಮೊರೆ ಹೊಕ್ಕೆ ।
ಕ್ಷೋಣಿಯೊಳಗೆ ಬಳಲಿ ।। ಚರಣ ।।

ನಿಮ್ಮ ಕೊಂಡಾಡುವ ಬುಧರ ನೋಡಲು ಅವ ।
ರೆಮ್ಮಾಪ್ತರೆಂದೆನಲಿ ।
ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ।
ಎಮ್ಮ ರಕ್ಷಕರಾಗಿರಲಿ ।।
ಇಮ್ಮಹೀಯೊಳಗೇಸು ಕಾಲವಾದರು ಪುಣ್ಯ ।
ಸಮ್ಮಂದ ಕೆಡದಿರಲಿ ।
ಸುಮ್ಮನಸರೀಶ ರಘುಪತಿ ವಿಠ್ಠಲನು ।
ನಮ್ಮ ಸ್ವಾಮಿಯಾಗಲಿ ।।

ಎಂದು ಸ್ತುತಿಸುವುದರ ಜೊತೆಗೆ ಶ್ರೀ ವಿಜಯದಾಸರ ಮೇಲೆ....

ವಿಜಯರಾಯರ ಭಾಗ್ಯವಿದು ।
ತ್ಯಜಿಸದೆ ನಮ್ಮನು ಬಿಡದೆ ಪೊರೆವುದು ।।

..... ಅಂದಣ ಕುಂದಣ ಮಂದಿರ ಬಯಸದೆ ।
ನಿಂದಿರದೊಬ್ಬರ ಹಂಗಿನಲಿ ।
ಇಂದಿರಾಪತಿ ರಘುಪತಿ ವಿಠ್ಠಲಗುಣ ।
ವೃಂದ ಪರಿಪೂರ್ಣನೆಂದು ಬಾಳುವದೆಲ್ಲ ।।

ಎಂದು ಶ್ರೀ ವಿಜಯರಾಯರ ವಾತ್ಸಲ್ಯವನ್ನು ಮನತುಂಬಿ ಹಾಡಿ ಹೊಗಳಿದ್ದಾರೆ.

" ಶಿಷ್ಯರು "

ಶ್ರೀ ವಿಜಯ ರಘುಪತಿ ವಿಠ್ಠಲ
ಶ್ರೀ ಭೂವರಾಹ ರಘುಪತಿ ವಿಠ್ಠಲ
ಶ್ರೀ ವರದ ಗುರು ಮುದ್ದುಕೃಷ್ಣ

" ರಚನೆ "

ಆಧ್ಯಾತ್ಮಮಾಲಾ ಮತ್ತು ತತ್ತ್ವಸಾರ ಎಂಬ ಗ್ರಂಥಗಳೂ,  ಮತ್ತು ಸುಳಾದಿಗಳು - ಪದ ಪದ್ಯಗಳು. ೨೫ ಸುಳಾದಿಗಳು ಮುದ್ರಿತವಾಗಿವೆ.

" ಉಪ ಸಂಹಾರ "

ಶ್ರೀ  ರಘುಪತಿ ವಿಠ್ಠಲರು ಅನೇಕ ಶ್ರೀ ಹರಿ ವಾಯು ಗುರುಗಳ ಪರವಾದ ಗೀತ ಗಾಥೆಗಳನ್ನು " ಶ್ರೀ  ರಘುಪತಿ ವಿಠ್ಠಲ " ಎಂಬ ಮುದ್ರಿಕೆಯಿಂದ ಬರೆದು ಪ್ರಚುರ ಪಡಿಸಿದರು.
ಅಂತಃಕರಣದ ಅಂತಸ್ಥಲದಿಂದಲೇ ಭಾವನೆಯ ಉದ್ರೇಕದಿಂದ ಉಕ್ಕಿ ಬರುವ ಇವರ ರಚನೆಗಳಲ್ಲಿ ನವ ವಿಧ ಭಕ್ತಿಯ ದಿವ್ಯ ಧ್ವನಿಯು ಕೇಳಿ ಬರುತ್ತದೆ.

ಸಾಹಿತ್ಯದ ನಿಕಷದಲ್ಲಿಯೂ ಶ್ರೀ  ರಘುಪತಿ ವಿಠ್ಠಲರ ಕೃತಿಗಳು ಅಪ್ಪಟ ಚಿನ್ನದ ಒರೆಗೆ ಇಳಿಯಬಲ್ಲವು.

ಶುದ್ಧ ಸಾತ್ವಿಕ ಹಾಗೂ ತಾತ್ವಿಕ ತಥಾಪಿ ಸರಸ ಸುಂದರ ಪದ್ಯಗಳನ್ನು ಹೊಸೆಯುವಲ್ಲಿ ಶ್ರೀ ವೈರಾಗ್ಯಶಾಲಿ ತಮ್ಮಣ್ಣದಾಸರು ಸಿದ್ಧ ಹಸ್ತರು.

ಶ್ರೀ ರಘುಪತಿ ವಿಠ್ಠಲರ ಕೃತಿಗಳಲ್ಲಿಯ ಅಲಂಕಾರ ಝೇ೦ಕಾರವೂ ಪ್ರಾಸ ವಿಲಾಸವೂ ಅರ್ಥ ಚಮತ್ಕೃತಿಯೂ ಅವರ ವಿದಗ್ಧ ಶಿರಃ ಪಿಂಡದಲ್ಲಿ ಮಂಜುಳ ನಾದದಿಂದ ಹರಿಯುವ ಕವಿತಾ ನಿರ್ಝರಣಿಯ ಕಿಂಕಿಣಿ ನಿನಾದದ ಗುರುತು ತೋರುತ್ತದೆ. 


by - [6:55 AM, 11/24/2018] +91 96524 53874:
ಆಚಾರ್ಯ ನಾಗರಾಜು ಹಾವೇರಿ


ಗುರು ವಿಜಯ ಪ್ರತಿಷ್ಠಾನ
*****

No comments:

Post a Comment