****
ಇಂದಿರೇಶ ಅಂಕಿತಸ್ಥರಾದ ಶ್ರೀ ತಿರುಪತಿ ಪಾಂಡುರಂಗೀ ಹುಚ್ಚಾಚಾರ್ಯ
karteeka bahula panchami
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ರುಕ್ಮಿಣೀ ಜನನೀಯಸ್ಯ/ ಶ್ರೀನಿವಾಸಸ್ತು ಯತ್ಪಿತಾ/
ಯೋ ಪಾಂಡುರಂಗೀ ವಂಶೀಯಃ/ ತಂ ವಂದೇ ಸದ್ಗುರುಂ ಮಮ//
ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದ,
ಶ್ರೀ ಕೃಷ್ಣನನ್ನು ಮಗುವಂತೆ ಪ್ರತೀದಿನ ಕಾಣಿದಂತಹಾ, ಮಹಾಲಕ್ಷ್ಮೀ ದೇವಿಯರನ್ನು ಒಲಿಸಿಕೊಂಡಂತಹಾ, ಶ್ರೀನಿವಾಸದೇವರ ಕಲ್ಯಾಣವನ್ನು ಸದಾ ಬಿಡದೇ ಮಾಡಿದಂತಹಾ, ನರಸಿಂಹ ದೇವರ ಆರಾಧನೆ ಸದಾ ಮಾಡಿದವರಾದ, ಮಾನಸಪೂಜಾವಿಧಾನ,ತತ್ವ ಸಂಖ್ಯಾನದ ಸ್ತೋತ್ರ, ಪಾಪಪುರುಷ ವಿಸರ್ಜನೆ,ಅಧಿಷ್ಟಾನಗತ ಭಗವದ್ರೂಪಗಳ ವರ್ಣನೆ, ಪುರಂದರದಾಸಾರ್ಯರ ಸ್ತುತಿ, ಇತ್ಯಾದಿ ಶ್ರೇಷ್ಠ ಕೃತಿಗಳಿಂದ ದಾಸ ಸಾಹಿತ್ಯ ಸೇವೆಯನ್ನು ಇನ್ನೂ ಅನೇಕ ಅದ್ಭುತ ಪದ ಪದ್ಯಗಳ, ಸ್ತೋತ್ರಗಳನ್ನು ಸಂಸ್ಕೃತ ಭಾಷೆಯಲ್ಲಿ, ಪ್ರಾಕೃತದಲ್ಲಿ ನಮಗೆ ನೀಡಿದಂತಹಾ ನಾರದರಿಂದ, ಸ್ವಪ್ನದಲ್ಲಿ ಅಂಕಿತಪಡೆದ ದಾಸ ಶ್ರೇಷ್ಠರಾದ ಇಂದಿರೇಶ ಅಂಕಿತಸ್ಥರಾದ ಶ್ರೀ ತಿರುಪತಿ ಪಾಂಡುರಂಗೀ ಹುಚ್ಚಾಚಾರ್ಯರ ಆರಾಧನಾ ಮಹೋತ್ಸವ ಇಂದಿನಿಂದ ಮೂರು ದಿನ...
ಶ್ರೀ ದಾಸರಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀ ವೆಂಕಟೇಶನು ನಮ್ಮ ಎಲ್ಲರ ಮೇಲೆ ಅನುಗ್ರಹವನ್ನು ತೋರುವಂತಾಗಲೀ ಅವರ ಸೇವೆಯ ಮಾಡುವ ಮುಖಾಂತರ ಎಂದು ಪ್ರಾರ್ಥನೆ ಮಾಡುತ್ತಾ ....
ಶ್ರೀ ಬೆಟ್ಟದ ಆಚಾರ್ಯರ ಸ್ಮರಣೆ
ತಾಯಿ ಲಕ್ಷ್ಮೀದೇವಿಯರ ಅನುಗ್ರಹ ಬಹಳ ಇದೆ ಶ್ರೀ ದಾಸಾರ್ಯರ ಮೇಲೆ..
ಮತ್ತೊಂದೆರಡು ಸಂದರ್ಭಗಳನ್ನು ಸ್ಮರಿಸುತ್ತಾ..
ಪರಮಾತ್ಮನ ಲೋಚನಗಳ ಚಿಂತನೆಯೊಂದಿಗೆ ಒಳಗಣ್ಣು ತೆರಿಸೆಂದು ಬೇಡುವ ಪರಿ
ಇಂದಿರೇಶ ಅಂಕಿತಸ್ಥರಾದ
ಶ್ರೀ ಪಾಂಡುರಂಗಿ ಹುಚ್ಚಾಚಾರ್ಯರ ಪದ ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬ ಪದದ ಸಂದರ್ಭವೂ ಅದ್ಭುತ..
ಕೃತಿಯ ಸಂದರ್ಭ ಬಹಳ ರೋಚಕವಾಗಿದೆ.. ನಾವೆಲ್ಲಾ ಸಹಾ
ವಯೋವೃದ್ಧರಾದಾಗ ಈ ಪ್ರಾಕೃತ ದೇಹ ಸಂಬಂಧ ಸಮಸ್ಯೆಗಳನ್ನು ಅನುಭವಿಸಲೇ ಬೇಕಲ್ಲವೇ?.
ಸದಾ ಪರಮಾತ್ಮನ ಧ್ಯಾನಾದಿಗಳಲ್ಲಿ ಇರುವವರಿಗೆ ಒಳಗಣ್ಣಿನ ಶಕ್ತಿ ಇದ್ದರೆ ಸಾಕು, ಹೊರಗಣ್ಣಿನ ಚಿಂತೆಯೇ ಬೇರೇ ಇರ್ತದೆ. ಜ್ಞಾನಿಗಳ ಒಳಗಣ್ಣಿನ ಚಿಂತನೆಯೇ ಬೇರೆ ಇರ್ತದೆ...
ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು, ಶ್ರೀ ಕಾಶೀದಾಸರೂ ಕಣ್ಣುಗಳು ಕಾಣದಿದ್ದರೂ ಪರಮಾತ್ಮನನನ್ನು ಕಂಡಂತಹ ಮಹಾನುಭಾವರಲ್ಲವೆ?
ಒಳಗಣ್ಣಿನಿಂದ ಪರಮಾತ್ಮನನ್ನು ಕಾಣುವುದೇ ಮಹಾನುಭಾವರ ಚರ್ಯೆಯಾಗಿದೆ.. ಈ ಮಾತು ನಮ್ಮ ಶ್ರೀ ಹುಚ್ಚಾಚಾರ್ಯರ ವಿಷಯದಲ್ಲಿ ಪರಮಸತ್ಯವೂ ಹೌದು...
ಶ್ರೀ ದಾಸಾರ್ಯರು ಪ್ರತೀದಿನ ಅತಿಥಿ ಅಭ್ಯಾಗತರಿಗೆ ಸೇವೆಯನ್ನು ಮಾಡುತ್ತಿರುವವರು.. ಹೀಗೆ ಒಮ್ಮೆ ಬ್ರಾಹ್ಮಣರಿಗೆ ಅತಿಥಿ ಸತ್ಕಾರ ಮಾಡುವ ಸಂದರ್ಭದಲ್ಲಿ ,ಒಬ್ಬ ಬ್ರಾಹ್ಮಣರಿಗೆ ತೊವ್ವೆ ಬೇಕಾಗಿರ್ತದೆ, ಅವರಿಗೆ ಕೇಳಲು ಮುಜುಗರ, ಯಾರೂ ತೊವ್ವೆ ಬಡಿಸಲು ಅವರಕಡೇ ಬರ್ತಿಲ್ಲ... ಆಗ ಶ್ರೀ ಹುಚ್ಚಾಚಾರ್ಯರಿಗೂ ಕಣ್ಣು ಕಾಣುತ್ತಿರಲಿಲ್ವಂತೆ. ಆದರೆ ಅವರು ತಮ್ಮ ಜ್ಞಾನ ದೃಷ್ಟಿಯಿಂದ ವಿಷಯವನ್ನು ಗ್ರಹಿಸಿ ಆ ಬ್ರಾಹ್ಮಣನಿಗೆ ತೊವ್ವೆ ಬಡಿಸಲು ಹೇಳಿದರಂತೆ.. ಆಗ ಪರಮಾತ್ಮನ ಲೀಲೆಯನ್ನು ನೆನೆಯುತ್ತಾ ಹೊಗಳುತ್ತಾ ಹಾಡಿದ ,ಮಾಡಿದ ಕೃತಿಯೇ
ಹೊಸ ಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ
ಶ್ರೀ ದಾಸಾರ್ಯರ ಒಳಗಣ್ಣಿನ ಜ್ಞಾನ ಅಷ್ಟೇ ಪರಮಾತ್ಮನನ್ನ ನೋಡುವುದಾಗಿತ್ತು ಅನ್ನೋದು ಕೇಳಿದರೇನೇ ಕಣ್ತುಂಬಿ ಬರ್ತವು..
ಮತ್ತೊಂದು ಸಂದರ್ಭ...
ಶ್ರೀ ಹುಚ್ಚಾಚಾರ್ಯರು ಪ್ರತಿವರ್ಷ ವರಮಹಾಲಕ್ಷ್ಮೀದೇವಿಯರ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಒಂದು ಸಲ ಹೀಗೆ ಹಬ್ಬ ಮುಗಿಸಿ ಉದ್ಯಾಪನೆ ಮಾಡುವಾಗ ತಾಯಿ ಲಕ್ಷ್ಮೀದೇವಿಯರ ಮುಖ ಆ ಕಡೆ ತಿರುಗಿಸಿಬಿಟ್ಟಳಂತೆ. ಆಗ ತಾಯಿಯ ಅನುಗ್ರಹವನ್ನು ಗಮನಿಸಿದ ಶ್ರೀ ಹುಚ್ಚಾಚಾರ್ಯರು - ಯಾಕೆ ತಾಯಿ ನಿನಗೆ ಈಗಾಗಲೆ ನಮ್ಮನ್ನು ಬಿಟ್ಟು ಹೋಗುವುದು ಇಷ್ಟವಿಲ್ಲವೆ? ನನ್ನ ಮೇಲೆ ಅದೆಷ್ಟು ಅನುಗ್ರಹ ಕಾರುಣ್ಯ ನಿನಗೆ ಎಂದು ಭಕ್ತಿಯಿಂದ ಪದೇ ಪದೇ ಸ್ತುತಿಸುತ್ತಾ ಇಡೀ ಶ್ರಾವಣಮಾಸ ಲಕ್ಷ್ಮೀದೇವಿಯರ ಪೂಜೆಯನ್ನು ಮಾಡಿದರಂತೆ, ಮುಂದಿನ ವರ್ಷಗಳಲ್ಲಿಯೂ ಅದೇ ಪದ್ಧತಿಯನ್ನು ಅನುಸರಿಸಿದ್ದರಂತೆ..
ಶ್ರೀ ಗುರುಗೋವಿಂದವಿಠಲರು ದಾಖಲಿಸಿದ ಮತ್ತೊಂದು ರೋಮಾಂಚನ ಘಟನೆ
ಶ್ರೀಮತ್ಪುರಂದರದಾಸಾರ್ಯರ ಆರಾಧನೆ ಶ್ರೀ ದಾಸಾರ್ಯರು ಬಹಳ ಭಕ್ತಿಯಿಂದ ಮಾಡುತ್ತಿದ್ದರು. ಹೀಗೊಂದು ಸಲ ಶ್ರೀಮತ್ಪುರಂದರದಾಸಾರ್ಯರ ಆರಾಧನೆಯನ್ನು ಹಂಪೆಯಲ್ಲಿನ ಪುರಂದರಮಂಟಪದಲ್ಲಿ ಶ್ರೀ ವಾಯಿಕರ್ ಕೃಷ್ಣಾಚಾರ್ಯರು ತಮ್ಮ ಆಧ್ವರ್ಯದಲ್ಲಿ ಮಾಡುತ್ತಿದ್ದರು. ಆರಾಧನೆಯ ಹಿಂದಿನ ದಿನ ನಮ್ಮ ವೆಂಕಪ್ಪ ಶ್ರೀ ದಾಸಾರ್ಯರ ಕನಸಿನಲ್ಲಿ ಬಂದು - ನನಗೆ ಹಂಪೆಯಲ್ಲಿ ಆರಾಧನೆಗೆ ಕರೆ ಬಂದದ. ನಾಳೆ ಬೆಳಿಗ್ಗೆ ಹತ್ತು ಗಂಟೆಯ ಒಳಗಡೆ ಪೂಜೆ, ನೈವೇದ್ಯಾದಿಗಳನ್ನು ಮುಗಿಸು ನಾ ಹೋಗುವುದಕ್ಕೆ ಸಿದ್ಧ ಮಾಡು ಅಂದನಂತೆ . ಮರುದಿನ ಶ್ರೀಮತ್ಪುರಂದರದಾಸಾರ್ಯರ ಆರಾಧನೆಯನ್ನು ಬೆಳಿಗ್ಗೆ ಹತ್ತರೊಳಗೆ ಮುಗಿಸಿರುತ್ತಾರೆ ಶ್ರೀ ಹುಚ್ಚಾಚಾರ್ಯರು.
ನಂತರ ದಿನಗಳಲ್ಲಿ ಶ್ರೀ ವಾಯಿ ಕೃಷ್ಣಾಚಾರ್ಯರು ತಿರುಪತಿಗೆ ಬಂದಾಗ ಶ್ರೀ ಹುಚ್ಚಾಚಾರ್ಯರ ಬಳಿ ಬಂದಿರುತ್ತಾರೆ. ಆ ಸಮಯಕ್ಕೆ ಶ್ರೀ ಹುಚ್ಚಾಚಾರ್ಯರಿಗೆ ಕಣ್ಣು ಕಾಣಿಸುತ್ತಿದ್ದಿಲ್ಲ. ಶ್ರೀ ವಾಯಿ ಆಚಾರ್ಯರು ಬಂದ ವಿಷಯ ಶಿಷ್ಯರು ತಿಳಿಸುತ್ತಾರೆ. ಆಗ ಶ್ರೀ ಹುಚ್ಚಾಚಾರ್ಯರಂತಾರೆ- ಏನು ಕೃಷ್ಣಾಚಾರ್ಯರೆ ನಮ್ಮ ವೆಂಕಪ್ಪನನ್ನು ಭೋಜನಕ್ಕೆ ಆಹ್ವಾನ ಮಾಡಿದ ಮಹಾನುಭಾವರು ನೀವು ಎಂದು ನಡೆದದ್ದು ಹೇಳಿದಾಗ ಶ್ರೀ ವಾಯಿ ಆಚಾರ್ಯರಂತಾರೆ- ನನಗೆ ಈ ವಿಷಯ ಗೊತ್ತಿರಲಿಲ್ಲ ಸ್ವಾಮಿ, ನನ್ನ ಭಾಗ್ಯವದು. ನಿಮಗೆ ಸ್ವಾಮಿ ದರ್ಶನ ಕೊಟ್ಟಿದ್ದಾನೆ. ನೀವು ಇನ್ನೆಷ್ಟು ಪುಣ್ಯವಂತರಲ್ಲವೆ ಎಂದು ಹೇಳುತ್ತಾರೆ. ಜ್ಞಾನಿಗಳ ಸಮಾಗಮದಲ್ಲಿ ನಾವು ಭಗವಂತನನ್ನು ಒಲಿಸಿಕೊಳ್ಳಬೇಕಾದರೆ ಇರಬೇಕಾದ ನಿಶ್ಚಲವಾದ ಭಕ್ತಿಯ ಚಿಂತನೆ ಕಾಣುತ್ತದೆ..
ಹೀಗೆ ನೋಡುತ್ತಾ ಹೋದರೆ ಅದೆಷ್ಟು ಸಂದರ್ಭಗಳು. ಎಲ್ಲವೂ ರೋಮಾಂಚನವಾದದ್ದೇ ಸರಿ..
ಇಂಥಹ ಘಟನೆಗಳು ಅದ್ಭುತ..
ಶ್ರೀ ಆಚಾರ್ಯರ ಕೊನೆಯ ದಿನಗಳಲ್ಲಿ ಅವರಿಗೆ ಕಣ್ಣು ಕಾಣುತ್ತಿಲ್ಲವಾದರೂ ಅವರು ಮಾನಸಪೂಜೆಯನ್ನು ಮಾಡುವುದು, ಮತ್ತೆ ಅತಿಥಿ ಅಭ್ಯಾಗತರಿಗೆ ಭೋಜನಾದಿಗಳನ್ನು ನೀಡುವುದನ್ನೂ ನಿಲ್ಲಿಸಿರಲಿಲ್ಲ. ಮತ್ತು ಕಾಲು ಸಹ ಸ್ವಾಧೀನವನ್ನು ತಪ್ಪಿತ್ತು. ಶ್ರೀ ಆಚಾರ್ಯರು ಇನ್ನೇನು ದೇಹವನ್ನು ಬಿಟ್ಟು ಹೋಗುತ್ತಾರೆಂದು ಗೊತ್ತಾದ ೧೫ ದಿನಗಳ ಮುಂಚಿತವಾಗಿಯೇ ಅವರು ಊಟವನ್ನು ಬಿಟ್ಟು ಬರೇ ಒಂದು ಥಾಲಿ ಆಕಳ ಹಾಲಿನ ಸೇವನೆಯಲ್ಲಿಯೇ ದಿನಕಳೆಯುತ್ತಿದ್ದರು.
ಇನ್ನೇನು ಕೊನೆಯ ದಿನ ಬಂತು. ಯಮುನಕ್ಕ ಎಂಬುವರನ್ನು ಕರೆದು ಇಂದು ನಮಗೆ ಊಟಮಾಡಬೇಕೆಂದೆನಿಸಿದೆ . ತಯಾರಿಸಿ ಎಂದು ಹೇಳಿದರು. ಪ್ರತೀದಿವಸಕ್ಕಿಂತಲೂ ಒಂದು ಗಂಟೆಯ ಕಾಲ ಹೆಚ್ಚಾಗಿ ಮಾನಸಪೂಜೆಯನ್ನು ಮಾಡಿದರು. ಶಿಷ್ಯರನ್ನು ಕೂಡಿಸಿಕೊಂಡು ಭಜನೆಯನ್ನು ಬಿಡಬೇಡಿ. ಬಿಡತಕ್ಕದ್ದೂ ಅಲ್ಲ. ಭಜನೆಯೇ ತಾರಮಂತ್ರ ಎಂದು ಉಪದೇಶ ಮಾಡಿದರು. ನಂತರ ಊಟ ಬೇಕೆಂದವರು ಬೇಡ ಹಾಲು ಕುಡಿಯುತ್ತೇನೆ ಸಾಕು ಎಂದು ಹೇಳಿದರು. ಹಾಲು ಕುಡಿಯುವುದರ ಮೊದಲೇ ಗಂಧಾಕ್ಷತೆಯನ್ನು ಅಂಗಾರವನ್ನು ಹಚ್ಚಿ ಮಡಿಯಿಂದಲೇ ಮಲಗಿಸಿದ್ದ , ತಮ್ಮ ಬಳಿ ಅಧ್ಯಯನಕ್ಕಾಗಿ ಬಂದಿದ್ದ ಕೊರ್ಲಹಳ್ಳಿ ರಂಗಾಚಾರ್ಯರನ್ನ ಕರೆದು ಕೈಕಾಲಿಗೆ ಹೋಗಬೇಕಿದೆ ಕರೆದುಕೊಂಡು ಹೋಗೆಂದು ಹೇಳಿದರು.
ಹೋಗಿಬರುವಷ್ಟರಲ್ಲಿ ಬಿಕ್ಕಳಿಕೆ ಬಂತು. ಆಗ ರಂಗಾಚಾರ್ಯರೊಂದಿಗೆ ಸೀನನನ್ನು ಕರಿ ಎಂದು ಹೇಳಿದರು. ಆಗ ಶ್ರೀನಿವಾಸಾಚಾರ್ಯರು(ಶ್ರೀ ದಾಸರ ಪುತ್ರರು) ಬಂದು ದರ್ಭೆ ಹಾಕಿ ಆಸನ ಮಾಡಿದರು ಆ ಹೊತ್ತಿಗೆ ಮತ್ತೊಂದುಸಲ ಬಿಕ್ಕಳಿಕೆ ಬಂತು. ತಮ್ಮ ಸಮಯ ಮುಗಿದಿದೆ ಎಂದು ಅರಿತ ಶ್ರೀ ಹುಚ್ಚಾಚಾರ್ಯರು ಹರಿನಾಮ ಸ್ಮರಣೆ ಮಾಡುತ್ತ ಪ್ರಾಣವನ್ನು ಬಿಟ್ಟರು. ಅದು ಕ್ರೀ. ಶಕ 1939 ಪ್ರಮಾಧಿ ಸಂವತ್ಸರ ಕಾರ್ತೀಕ ಬಹುಳ ಪಂಚಮಿ ಶುಕ್ರವಾರ (ಇದನ್ನು ಶ್ರೀ ಪುಂಡಲೀಕಾಚಾರ್ಯರು ಬರೆದ, ಲೇಖನದ ಮೊದಲಿಗೆ ಉಲ್ಲೇಖಿಸಿದ ಸಾಲಿನಲ್ಲಿ ನೋಡಿ) ಒಳ್ಳೆಯ ಅಭಿಜನ್ ಮುಹೂರ್ತದಲ್ಲಿ ಶ್ರೀ ಹುಚ್ಚಾಚಾರ್ಯರ ಇಹಲೋಕದ ವ್ಯಾಪಾರ ಮುಗಿಯಿತು.
ಶ್ರೀ ದಾಸಾರ್ಯರ ಬಳಿ ನರಸಿಂಹನೆಂಬ ಶೂದ್ರನು ಕೆಲಸಮಾಡಲಿಕ್ಕಾಗಿ ಇದ್ದ. ಅವನಿಗೆ ಪ್ರತಿನಿತ್ಯ ದಾಸರ ಮನೆಯಲ್ಲಿ ಒಂದು ಸೇರು ಅನ್ನವನ್ನು ಮಾಡಿ ಹಾಕುವ ರೂಢಿ. ಆ ಹೊತ್ತು ಅವನು ಊಟಮಾಡಲು ಬರುತ್ತಿದ್ದಂತೆಯೇ - ಮನೆಯ ಹೊರಗಡೆ ಆಕಾಶದಲ್ಲಿ ವಿಮಾನವೊಂದು ಹೋಗುತ್ತಿದ್ದನ್ನು ಕಂಡು ತೇರು ವಚ್ಚಿಂದಿ ಚೂಡಂಡಿ (ರಥ ಬಂದಿದೆ ನೋಡಿ) ಎಂದು ತೆಲುಗಿನಲ್ಲಿ ಗಟ್ಟಿಯಾಗಿ ಒದರಿ ಎಲ್ಲರನ್ನೂ ಕರೆದನು. (ನೋಡಿ ಮಹಾನುಭಾವರ ಮನೆಯಲ್ಲಿ ಮಾಡಿದ ಊಟದ ಪ್ರಭಾವದ ಪಣ್ಯ ಆತನಿಗೆ ಎಷ್ಟಿತ್ತಂತ). ಅವನು ಒದರಿದ್ದು ನೋಡಿ ಎಲ್ಲರೂ ಆಚೆ ಬಂದರು. ಪುಣ್ಯವಂತರಿಗೆ ಕಂಡು ಅವರೂ ಆನಂದಾಶ್ಚರ್ಯಾದಿಗಳಲ್ಲಿ ಮಿಂದೆದ್ದರು.
ಎರಡು ಘಂಟೆಗಳಲ್ಲಿಯೇ ದೇಹವನ್ನು ದಹನ ಮಾಡುವ ಕಾರ್ಯ ಆರಂಭವಾಯಿತು. ಉತ್ತರ ದಿಕ್ಕಿನ ನಾಗತೀರ್ಥದ ಸಮೀಪದಲ್ಲಿ ಚಿತಿಯೂ ಸಿದ್ಧವಾಯಿತು. ಅದಕ್ಕೆ ಬೇಕಾದ ಗಂಧದ ಮತ್ತು ತುಳಸೀಕಾಷ್ಟಗಳೆಲ್ಲ ಸೇರಿತು. ಪುರೋಹಿತರೆಲ್ಲ ಮಂತ್ರೋಚ್ಚಾರಣೆ ಮಾಡುತ್ತಿದ್ದಾಗ ಶ್ರೀ ಆಚಾರ್ಯರ ಪುತ್ರರಾದ ಶ್ರೀನಿವಾಸಾಚಾರ್ಯರಿಂದ ಅಗ್ನಿಸ್ಪರ್ಶಾಕಾರ್ಯವೂ ಮುಗಿಸಿದರು. ನಂತರದಿನಗಳಲ್ಲಿ ಅದೇ ಜಾಗದಲ್ಲಿ ಒಂದು ಅಶ್ವತ್ಥ ವೃಕ್ಷವನ್ನು ನೆಟ್ಟಿದರು. ಮುಂದೆ ಶ್ರೀಕೃಷ್ಣದೇವರಾಯರೇ ಮೊದಲು ವಿಜಯನಗರ ರಾಜ್ಯರು ರಾಜ್ಯವಾಳಿದ ಚಂದ್ರಗಿರಿಯಿಂದ ಕಲ್ಲನ್ನು ತರಿಸಿ ಆ ಬಂಡೆಯನ್ನು ಒಡೆಯಿಸಿ ಮಣ್ಣನ್ನು ತುಂಬಿಸಿ ಕಟ್ಟೆಯನ್ನು ಕಟ್ಟಿಸಿದರು. ವಿಶೇಷವೆಂದರೆ ಅಶ್ವತ್ಥ ವೃಕ್ಷದ ಸಮೀಪವೇ ಒಂದು ಚಂದನದ ಗಿಡವೂ ತಾನಾಗಿಯೇ ಬೆಳೆದುನಿಂತಿತು (ಈ ರೀತಿಯ ಘಟನೆ ನಾವು ಹರಿದಾಸಿ ತಾಯಿ ತುರಡಗಿ ತಿಮ್ಮಮ್ಮನವರ ಜೀವನದಲ್ಲಿಯೂ ಕಾಣುತ್ತೇವೆ. ಇನ್ನೂ ಉದಾಹರಣೆಗಳು ಬಹಳ). ಆ ಗಿಡಕ್ಕೆ 12 ವರ್ಷಗಳ ನಂತರ ಶ್ರೀ ಆಚಾರ್ಯರ ಮೊಮ್ಮಕ್ಕಳಾದ ಶ್ರೀ ನರಸಿಂಹಾಚಾರ್ಯರು ಉಪನಯನ, ವಿವಾಹಾದಿ ಸಂಸ್ಕಾರಗಳನ್ನು ನೆರವೇರಿಸಿದರು. ಈ ಎಲ್ಲ ಕಾರ್ಯಗಳೂ ತಿರುಪತಿಯ ಆಸ್ಥಾನ ಪುರೋಹಿತರಾದ ಲಕ್ಷ್ಮೀನಾರಾಯಣಾಚಾರ್ಯರ ನೇತೃತ್ವದಲ್ಲಿ ನೆರವೇರಿತು. ಶ್ರೀ ಆಚಾರ್ಯರು ದೇಹವನ್ನು ಬಿಟ್ಟಾಗ ಆಗಿನ ತಿರುಪತಿಯ ಮಹಂತನಿಗೆ ಮುಂದಿನ ಎಲ್ಲ ವ್ಯವಸ್ಥೆಗಳನ್ನೆಲ್ಲ ಮಾಡಬೇಕೆಂದು ಸೂಚನೆಯಾಗಿ ಇವೆಲ್ಲ ಕಾರ್ಯಗಳನ್ನೂ ಪರಮಾದ್ಭುತವಾಗಿ ನೆರವೇರಿಸಿದರು. ಈಗೆಯೂ ಸಹ ಶ್ರೀ ಹುಚ್ಚಾಚಾರ್ಯರ ಕಟ್ಟಿಯನ್ನು ದರ್ಶನ ಮಾಡಿದವರಿಗೆ ಶ್ರೀ ಆಚಾರ್ಯರು ಅನುಗ್ರಹ ಮಾಡುತ್ತಿದ್ದದ್ದು ಅನುಭವಕ್ಕೆ ಬರುವಂತದ್ದು. ಆ ಕಾಲದಲ್ಲಿಯೇ ಸಜ್ಜನರಿಗೆ ಆದ ಅನುಭವಗಳನ್ನು ಶ್ರೀ ಗುರುಗೋವಿಂದದಾಸಾರ್ಯರು ದಾಖಲಿಸಿ ಇಟ್ಟಿದ್ದಾರೆ ಅವುಗಳನ್ನೂ ನೋಡುವ ಭಾಗ್ಯನಮ್ಮದಾಗಲಿ, ಶ್ರೀ ಬೆಟ್ಟದ ಆಚಾರ್ಯರ ಹಾದಿಯಲ್ಲಿಯೇ ನಮ್ಮ ಜೀವನವೂ ನಡೆಯಲಿ ಸದಾ ಹರಿನಾಮಸ್ಮರಣೆಯಲ್ಲಿ ಸಾಧನೆಯಾಗಲಿ, ಅಂತ್ಯಕಾಲದಲ್ಲಿಯೂ ಕಿಂಚಿತ್ ಅಧಿಕವಾಗಿ ಆಗಲಿ ಎಂದು ಶ್ರೀ ಹುಚ್ಚಾಚಾರ್ಯರ ಹಾಗೂ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಪ್ಪನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ....
ಶ್ರೀ ಹುಚ್ಚಾಚಾರ್ಯರ ಜ್ಞಾನ ದೃಷ್ಟಿ ಗೆ ನಮೋ ಎನ್ನುತ್ತಾ..
ಪ್ರಾತಃಸ್ಮರಣೀಯರಾದ ಶ್ರೀ ಬೆಟ್ಟದ ಆಚಾರ್ಯರ ಅನುಗ್ರಹ ನಮಗೆ ಸದಾ ಇರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
-Smt. Padma Sirish
ನಾದನೀರಾಜನದಿಂ ದಾಸಸುರಭಿ
.
No comments:
Post a Comment