ಶ್ರೀಂ ಶ್ರೀ ಕಂ ಕಪಿಲಾಯ ನಮಃ
7 Jan 2021 margashira krishna dashami
ಹಾಗೆಯೇ... 19ನೇ ಶತಮಾನದ ದಾಸಶ್ರೇಷ್ಠರು , ಮೈಸೂರು ವಾಸ್ತವ್ಯರು, ಶ್ರೀ ತಂದೆಮುದ್ದುಮೋಹನವಿಠಲರ 1125 ಶಿಷ್ಯರಲ್ಲಿ ಕೊನೆಯವರು, ಶ್ರೀ ಗೊರೆಬಾಳ ಹನುಮಂತರಾಯರಂತೆ ಮನೆ ಮನೆ ತಿರುಗಿ ಹರಿದಾಸರ ಚರಿತ್ರೆಯನ್ನು, ಕೃತಿಗಳನ್ನು ಸಂಗ್ರಹ ಮಾಡಿ ಹರಿಭಕ್ತ ವಿಜಯ ಎನ್ನುವ 5 ಗ್ರಂಥಗಳನು ನೀಡಿದವರಾದ, ರಾಜರ ಋಜುತ್ವೋಪಾಸಕರು, ಸ್ವಪ್ನವೃಂದಾವನಾಖ್ಯಾನ, ಸುಂದರಕಾಂಡ, ಪಂಚೀಕರಣ. ಮನುಸ್ಮೃತಿಯ ಅಂಶಗಳು, ಅಥರ್ವಣೋಪನಿಷತ್ತು ಭಾಮಿನೀ ಷಟ್ಪದಿಯಲ್ಲಿ, ಕಾಠಕೋಪನಿಷತ್ತು, ಛಾಂದೋಗ್ಯೋಪನಿಷತ್ತು ಮೊದಲಾದುವುಗಳನ್ನು ಕನ್ನಡದಲ್ಲಿ ಅನುವದಿಸಿದ ಮಹಾನುಭಾವರು, ಹಾಗೂ ಪ್ರಮೇಯ ಗರ್ಭಿತವಾದ ಅನೇಕ ಪದ, ಪದ್ಯ, ಸುಳಾದಿಗಳನ್ನು ರಚನೆ ಮಾಡಿ ನೀಡಿದವರಾದ ಶ್ರೀ ಗುರುಗೋವಿಂದವಿಠಲರ ಆರಾಧನಾ ಮಹೋತ್ಸವ, ಇಂದಿನಿಂದ ಮೂರು ದಿನ ಶ್ರೀ ವಿಠಲಮಂದಿರದಲ್ಲಿ, ಮೈಸೂರು. ಶ್ರೀ ದಾಸಾರ್ಯರು ನಮ್ಮ ಸಮೂಹದ ತುಂಬಾ ಜನಕ್ಕೆ ಪರಮ ಗುರುಗಳು ಸಹ ಆಗಿರುವುದು ಅತ್ಯಂತ ಸಂತಸದ ವಿಷಯವೂ ಆಗಿದೆ..
ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಎಲ್ಲರಮೇಲಿರಲೆಂದು ಅವರಲ್ಲಿ, ಅವರ ಅಂತರ್ಗತ ವಿಠಲನಲ್ಲಿ ಪ್ರಾರ್ಥನೆ ಮಾಡುತ್ತಾ, ಅವರ ಕುರಿತ, ಅವರಿಂದ ರಚಿತವಾದ ಕೃತಿಗಳು ಹಾಡುವ, ಅರ್ಥಚಿಂತನೆ ಮಾಡುವ ಮೂಲಕ ಸೇವೆಯನ್ನು ಮಾಡೋಣ ಎಂದು ಪ್ರಾರ್ಥನೆ ಮಾಡುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
*ಸಕಲ ಶಾಸ್ತ್ರಾರ್ಥ ಸಾರಜ್ಞಾನ*
*ಚಿತ್ರ ಲೇಖನ ತತ್ಪರಾನ್/*
*ಗುರುಗೋವಿಂದದಾಸಾರ್ಯಾಂ*
*ತಾನ್ ನಮಸ್ಯೇ ಗುರೂನ್ ಮಮ//*
ಪರಮಪ್ರಿಯರಾದ ಶ್ರೀ ತಂದೆಮುದ್ದುಮೋಹನವಿಠಲದಾಸಾರ್ಯರ ಪ್ರೀತಿಯ ಶಿಷ್ಯರು, ಅವರಿಂದ ಉಪದೇಶವನ್ನು ಪಡೆದವರೂ, ಮಹಾನ್ ಚೇತನರೂ ಆದಂತಹ ಶ್ರೀ ಗುರುಗೋವಿಂದವಿಠಲದಾಸಾರ್ಯರು ತಮ್ಮ ಗುರುಗಳ ಹಾದಿಯಲ್ಲಿ ನಡೆದು ಶಿಷ್ಯಸಂಪತ್ತನ್ನು ಬೆಳಸಿದವರಾಗಿದ್ದಾರೆ. 254 ಜನ ಶಿಷ್ಯರಿಗೆ ಅಂಕಿತೋಪದೇಶವನ್ನು ನೀಡಿದವರೂ ಆಗಿದ್ದಾರೆ. ಅವರು ಅಂಕಿತವನ್ನು ನೀಡುವ ವಿಧಾನವೂ ಅಷ್ಟೇ ವಿಶೇಷವಾಗಿಯೂ ಇದ್ದೀತು.
ಹರಿದಾಸ ಕವಿಕುಲತಿಲಕರೆಂದೇ ಬಿರುದನ್ನು ಪಡೆದವರಾದ ಶ್ರೀ ದಾಸರ ಶಿಷ್ಯರಲ್ಲಿ ಅನೇಕಜನ ಸಾಧಕರು ತಮ್ಮ ಜೀವನವನ್ನು ದಾಸ ಸಾಹಿತ್ಯದ ಸೇವೆಗೇನೆ ಮುಡುಪಾಗಿಟ್ಟವರಾಗಿದ್ದಾರೆ. ಅವರ ಶಿಷ್ಯ,ಪ್ರಶಿಷ್ಯ ಸಂಪತ್ತು ಈಗಲೂ ಬೆಳೆಯುತ್ತಲೇ ನಿಂತಿದೆ. ಶ್ರೀ ದಾಸಾರ್ಯರ ಶಿಷ್ಯರಲ್ಲಿ ದಾಸರನ್ನು ತಂದೆತಾಯಿ ಅಂತಲೇ ಭಾವಿಸಿ ಆರಾಧಿಸುತ್ತಿರುವ ಬ್ರಾಹ್ಮಣೇತರ ಶಿಷ್ಯರೂ ಇದ್ದಾರೆ.
ಅವರಲ್ಲಿ *ಆಂಧ್ರಪ್ರದೇಶದಲ್ಲಿನ, ಚಿತ್ತೂರು ಜಿಲ್ಲೆಯ ಕುಪ್ಪಂ* ಊರಿಗೆ ಸೇರಿದ *ಶ್ರೀ ಚೆನ್ನಪ್ಪ ನಾಯುಡು* ಎನ್ನುವವರು ಶ್ರೀ ದಾಸರ ಪರಮ ಭಕ್ತರಾಗಿದ್ದರು ಅವರಿಗೆ ಶ್ವಾಸಕೋಶದ ವ್ಯಾಧಿ ಕಾಡುತ್ತಿತ್ತು. ಬಂದು ಗುರುಗಳಲ್ಲಿ ಬೇಡಿದಾಗ ಶ್ವಾಸಮಾನಿಯೆ ನಿನ್ನ ಎನ್ನುವ ಕೃತಿಯನ್ನು ರಚನೆ ಮಾಡಿ ಕೊಟ್ಟು ಅದನ್ನು ದಿನಾ ಪಾರಾಯಣ ಮಾಡಲು ತಿಳಿಸುತ್ತಾರೆ. ಹಾಗೆ ಪಾರಾಯಣ ಮಾಡಿದಾಗ ಖಾಯಲೆ ನಯವಾಗಿ ಚೆನ್ನಪ್ಪ ನಾಯುಡು ದಾಸರಲ್ಲಿ ಶರಣಾಗುತ್ತಾರೆ. ಆಗ ಅವರಿಗೆ *ವೆಂಕಟಕೃಷ್ಣವಿಠಲ* ಎಂದು ನಾಮಕರಣವನ್ನು ಮಾಡುತ್ತಾರೆ ಶ್ರೀ ದಾಸಾರ್ಯರು.
*ಆ ಕೃತಿಯ ಸಾಹಿತ್ಯ ಹೀಗಿದೆ*
👇🏽👇🏽👇🏽👇🏽👇🏽👇🏽👇🏽
ಶ್ವಾಸಮಾನಿಯೆ ನಿನ್ನ - ಆಶ್ರಯಿಸಿರುವವನ
ಕೋಶದೊಳಿರುವಂಥ - ದೋಷಗಳಳಿಯೋ ...ಪಲ್ಲವಿ...
ಹಂಸೋಪಾಸನೆಯಿಂದ | ಶಂಸಿಸಿ ಹರಿಪದ-
ಪಾಂಸುವ ಧರಿಸುವನೇ ||
ವಿಂಶತ್ಯೇಕವು ಸಾ | ಹಸ್ರದಾರುನೂರು-
ಹಂಸ ಮಂತ್ರ ಗಳ್ಜಾಪಕಾ ......1
ಶ್ವಾಸೋಚ್ಛ್ವಾಸಾಶ್ರಯ | ಕೋಶಗತಗಳಾದ-
ದೋಷಗಳನೆ ಕಳೆದೂ ||
ವಾಸರ್ವಾಸರಕ್ಷಯ | ದೋಷಕಾರಣ ಕ್ರಿಮಿ-
ನಾಶವ ಗೈಯ್ಯುವುದೋ ........ 2
ಜಾಣೆಕೋಮಲೆಭಾವಿ ವಾಣಿಯ
ಪತಿ ನಿನ್ನ ಅಣತಿಯಿಂ ಸುರರೂ ||
ತ್ರಾಣ ಪೊಂದುತ ಜಗತ್ರಾಣರಾಗಿಹರಯ್ಯ
ಪ್ರ್ರಾಣ ಭಕ್ತನ ಪೊರೆಯೋ ........ 3
ಮೊರೆ ಹೊಕ್ಕಿರುವನನ್ನ | ಪೊರೆವಂಥ ಸಂಪನ್ನ
ಮರಳಿ ಅನ್ಯರ ಕಾಣೆನೋ |
ಮರುತ ಪ್ರಾಣಗಳೊಡೆಯ | ನಿರುತಿಹೆನೀನೆಂದು
ಅನು ಮೊರೆಯನಿಡುವೇ ....... 4
ನೊಂದಿಹ ಶರಣನ್ನ | ಚಂದದಿ ಸಲಹಯ್ಯ
ನಂದ ಕಂದನ ದೂತನೋ ||
ಸುಂದರ ಗುರು ಗೋ | ವಿಂದ ವಿಠ್ಠಲ ಭಕ್ತ
ಮಂದಾರ ಸುರತರುವೇ ........ 5
ಹಾಗೆಯೇ - *ತುಮಕೂರಿನ ಬಳಿಯಲ್ಲಿನ ಹರವಿ* ಗ್ರಾಮದ ನಿವಾಸಿಗಳಾದ *ದೊಡ್ಡ ತಿಮ್ಮಯ್ಯ* ಎಂಬ ಬ್ರಾಹ್ಮಣೇತರಿಗೂ *ಸ್ವಾಮಿಗುರುಗೋವಿಂದವಿಠಲ* ಎಂದು ಉಪದೇಶ ಮಾಡುತ್ತಾರೆ. ಮೊದಲಿಗೆ ಬಿಂಬನನ್ನು ಧ್ಯಾನಿಸಿ *ತಂದೆಗುರುಗೋವಿಂದವಿಠಲ* ಎಂದು ಉಪದೇಶ ಮಾಡಬೇಕಾಗಿ ನಿರ್ಧಾರ ಮಾಡಿರುತ್ತಾರೆ. ಆದರೆ ನಂತರ ಮನೆಯ ಹೊರಗಡೆ ಬಾಗಿಲ ಬಳಿ ಯಾರೋ ಬಂದು *ಸ್ವಾಮಿ ಸ್ವಾಮಿ* ಎಂದು ಕರೆದಂತಾಗುತ್ತದೆ. ಆಗ ಶ್ರೀ ದಾಸಾರ್ಯರು ಹೋಗಿ ನೋಡಿದಾಗ ಯಾರೂ ಇರುವುದಿಲ್ಲ. ಆಗ ದಾಸರು ದೇವರ ಅಪ್ಪಣೆ, ಇಚ್ಛೆ ಎಂದು ತಿಳಿದು *ದೊಡ್ಡ ತಿಮ್ಮಯ್ಯನವರಿಗೆ* ತಾವು ನಿರ್ಥರಿಸಿದ *ತಂದೆಗುರುಗೋವಿಂದವಿಠಲ* ಎನ್ನುವ ಅಂಕಿತನಾಮದ ಬದಿಲಾಗಿ *ಸ್ವಾಮಿಗುರುಗೋವಿಂದವಿಠಲ* ಎಂದು ಅಂಕಿತವನ್ನು ನೀಡಲು ನಿರ್ಥಾರವನ್ನು ಮಾಡಿ *ಸೋದೆಯಲ್ಲಿ* ಶ್ರೀ ರಾಜರ ಸನ್ನಿಧಾನದಲ್ಲಿ ಇವರಿಗೆ ಉಪದೇಶವನ್ನು ನೀಡುತ್ತಾರೆ. ಈ ರೀತಿಯ ಸೂಕ್ಷ್ಮವಾದ ವಿಶೇಷಗಳನ್ನು ಸಹ ದಾಸಾರ್ಯರು ಹೇಗೆ ಅನುಸಂಧಾನಪೂರ್ವಕವಾಗಿ ಅನುಸರಿಸುತ್ತಿರುವರು ಎಂದು ಶ್ರೀ ದಾಸರ ಜೀವನಚರಿತ್ರೆಯಲ್ಲಿ ನಾವು ನೋಡುತ್ತೇವೆ. ಹರಿದಾಸ ಸಾಹಿತ್ಯ ಯಾವ ಜಾತಿಗೂ, ಮತಕ್ಕೂ ಸೇರಿದ್ದಲ್ಲ, *ಶ್ರೀಮದಾಚಾರ್ಯರ ತತ್ವಗಳನ್ನು* ಅರಿತು ಉಪಾಸನೆ ಮಾಡುವವರಿಗೆ ಕರಗತವಾಗುವುದು ಎನ್ನುವುದನ್ನು ಯಮಾಂಶ ಸಂಭೂತರಾದ ಶ್ರೀ ಕನಕದಾಸಾರ್ಯರೇ ಮೊದಲಾದವರು ತೋರಿಕೊಟ್ಟದ್ದನ್ನು, ತಮ್ಮ ಶಿಷ್ಯರಿಗೆ ಉಪದೇಶ ಮಾಡುವುದರ ಮುಖಾಂತರ ಮತ್ತೊಮ್ಮೆ ನಿರೂಪಣೆ ಮಾಡಿದಂತಹ *ಶ್ರೀ ಗುರುಗೋವಿಂದವಿಠಲದಾಸಾರ್ಯರ* ಅನುಗ್ರಹ ಸದಾ ನಮಗೆ ಇರಲೀ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..
*ಜೈ ವಿಜಯರಾಯ*
-Smt. Padma Sirish
*ನಾದನೀರಾಜನದಿಂ ದಾಸಸುರಭಿ* 🙏🏽
*******
ಶ್ರೀಅಹೋಬಲಾಚಾರ್ಯರು ಗುರುಗೋವಿಂದದಾಸರಿಗೆ ಮಾಡಿದ ಅನುಗ್ರಹ
ಶ್ರೀ ಇಭರಾಮಪುರ ಅಪ್ಪಾವರ ಏಕ ಮಾತ್ರ ಸುಪುತ್ರರು ಶ್ರೀ ಅಹೋಬಲಾಚಾರ್ಯರು. ತಂದೆಯಂತೆಯೇ ಮಹಾತಪಸ್ವಿಗಳು. ಶ್ರೀಅಹೋಬಲಾಚಾರ್ಯರು ಸಂಚಾರಾನ್ವಯ ಚಿಕ್ಕಮಗಳೂರಿಗೆ ದಯಮಾಡಿದರು. ಆಚಾರ್ಯರು ತಮ್ಮ ಊರಿಗೆ ಬಂದ ವಿಷಯ ತಿಳಿದು ಶ್ರೀ ರಘುನಾಥರಾಯರು ಮತ್ತು ಸಾಧ್ವಿ ಲಕ್ಷ್ಮೀಬಾಯಿ ಶ್ರೀಅಹೋಬಲಾಚಾರ್ಯರಿನ್ನು ಮನೆಗೆ ಬರಮಾಡಿಕೊಂಡರು. ಶ್ರೀ ಆಚಾರ್ಯರು ರಘುನಾಥರಾಯರ ದಂಪತಿಗಳಿಗೆ ವಿಶೇಷ ಅನುಗ್ರಹಿಸಿ ಸಾಧ್ವಿ ಲಕ್ಷ್ಮೀಬಾಯಿಯವರಿಗೆ ಕೀರ್ತಿವಂತನಾದ ಸುಪುತ್ರ ಜನನವಾಗುತ್ತಾನೆ ಎಂದು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಶ್ರೀಅಹೋಬಲಾಚಾರ್ಯರು ನುಡಿದಂತೆ ಶ್ರೀರಘುನಾಥರಾಯರ ದಂಪತಿಗಳಿಗೆ ಸುಪುತ್ರ ಜನನವಾಯಿತು.
ಈ ವಿಷಯವು ಸ್ವತಃ ಶ್ರೀ ಗುರುಗೋವಿಂದದಾಸರೇ ತಾವು ರಚಿಸಿರುವ ಆ ನಮಿಪೆ ಮಾತೆ ಪಿತರರ್ಗೆ ಎಂಬ ಕೃತಿಯಲ್ಲಿ ನಿರೂಪಿಸಿದಾರೆ
ಶಿರಿ ರಂಗನಾಥಾಖ್ಯ | ವರ ಕುವರಗೀಯತ್ತ
ವರಲಗ್ನ ಜರುಗಿಸಿರೆ | ದಾಂಪತ್ಯ ಸುಖದೊಳಗೆ
ಇರುತಿರಲು ಇಭರಾಮ | ಪುರ ಮುನಿಸುತರ ಬರವಾಯ್ತು ಚಿಕ್ಕಮಗಳೂರಿಗೆ |
ವರ ಮುನಿಯನುಗ್ರಹದ | ಲೋರ್ವ ಸುತನುದಾಯವನೆ
ನೆರೆತಿಳುಪಿ ಪೊರಮೂಡಲು | ಸತಿಯ ಲಕ್ಷ್ಮೀ ಬಾಯಿ
ವರಕುವನಂ ಪ್ರಸವಿಸುತ | ಪತಿಯೊಡನೆ ಸಂತಸದಿ ಕಾಲ ಕಳೆಯುತಿರಲು ||
ಶ್ರೀ ಅಹೋಬಲಾಚಾರ್ಯರ ಪರಮಾನುಗ್ರಹದಿಂದ ಶ್ರೀರಘುನಾಥರಾಯರ ದಂಪತಿಗಳಿಗೆ ಜನಿಸಿದ ಸುಪುತ್ರ ಗೋವಿಂದ ರಾಯರು ಮುಂದೆ ತಂದೆ ಮುದ್ದುಮೋಹನ ದಾಸರಲ್ಲಿ ದಾಸ ದೀಕ್ಷೆ ಸ್ವೀಕರಿಸಿ ಶ್ರೀ ಗುರುಗೋವಿಂದದಾಸರೆಂದು ಜಗನ್ಮಾನ್ಯರಾದರು.
ಶ್ರೀ ಗುರುಗೋವಿಂದದಾಸರು ಹಲವು ದೇವರ ನಾಮಗಳು ,ಹರಿಭಕ್ತ ವಿಜಯ,ಶ್ರೀ ವಾದಿರಾಜ ಋಜುತ್ವಪ್ರಕಾಶಿಕಾ,ಪಂಚೀಕರಣ, ಸ್ವಪ್ನ ವೃಂದಾವನಾಖ್ಯಾನ ಕನ್ನಡಾನುವಾದ,ಶ್ರೀ ಸುಂದರಕಾಂಡ ರಾಮಾಯಣ, ಮನುಸ್ಮೃತಿ, ಷೋಡಶೀ - ಚತುರ್ದ , ಶೀ - ಆಧ್ಯಾತ್ಮರಸರಂಜನಿಗೆ ಕನ್ನಡ ಗದ್ಯಾನುವಾದ,ಐತರೇಯ - ಈಶಾವಾಸ್ಯ - ತಲಾವಕಾರ- ತೈತ್ತಿರೀಯ - ಮಾಂಡೂಕ - ಅಥರ್ವಣ - ಷಟ್ಪ್ರಶ್ನ - ಕಾಠಕ - ಛಾ೦ದೋಗ್ಯ - ಬೃಹದಾರಣ್ಯಕ ಎಂದು ಖ್ಯಾತವಾಗಿರುವ ಹತ್ತು ಉಪನಿಷತ್ತುಗಳನ್ನು ಸರಳ ಕನ್ನಡ ಪದ್ಯಾನುವಾದವನ್ನು ಮಾಡಿ ಸಾರಸ್ವತಲೋಕಕೆ ವಿಶೇಷ ಕೊಡುಗೆ ನೀಡಿದ್ದಾರೆ.
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ಯ ಇಭರಾಮಪುರ
*******
" ದಿನಾಂಕ : 10.01.2021ಭಾನುವಾರ ಮಾರ್ಗಶಿರ ಬಹುಳ ದ್ವಾದಶೀಮೈಸೂರಿನಶ್ರೀಗುರುಗೋವಿಂದವಿಠ್ಠಲರಆರಾಧನಾಮಹೋತ್ಸವ.,ಮೈಸೂರು "
" ಶ್ರೀ ವಿಜಯರಾಯರ ಸದ್ವಂಶ ಸಂಜಾತರೂ - ಶ್ರೀರಾಯರ ಅಂತರಂಗ ಭಕ್ತರೂ - ಶ್ರೀವಾದಿರಾಜ ಋಜುತ್ವ ಪ್ರತಿಪಾದಕರೂ ಶ್ರೀಗುರುಗೋವಿಂದವಿಠ್ಠಲರು "
ಶ್ರೀಮದಾಚಾರ್ಯರು.....
ಕುರು ಭುಂಕ್ಷ್ವಚ ಕರ್ಮ ನಿಜಂ ನಿಯತಂ
ಹರಿ ಪಾದ ವಿನಮ್ರಧಿಯಾ ಸತತಂ ।
ಹರಿರೇವ ಪರೋ ಹರಿರೇವ ಗುರೋ
ಹರಿರೇವ ಜಗತ್ ಪಿತೃಮಾತೃ ಗತಿ: ।।
ಶ್ರೀ ಭೃಗು ಮಹರ್ಷಿಗಳ ಅಂಶಸಂಭೂತರಾದ ಶ್ರೀ ವಿಜಯರಾಯರ ಸತ್ಪರಂಪರೆಯಲ್ಲಿಬಂದ ಶ್ರೀ ಗುರುಗೋವಿಂದವಿಠ್ಠಲ ವಂಶಾವಳೀ..
ಶ್ರೀ ವಿಜಯರಾಯರು
( ಶ್ರೀ ದಾಸಪ್ಪ ದಾಸರು - ಕ್ರಿ ಶ 1682 - 1755 )
।
ಶ್ರೀ ವೇಣುಗೋಪಾಲದಾಸರು
( ಶ್ರೀ ಪಂಗನಾಮದ ತಿಮ್ಮಣ್ಣದಾಸರು - ಕ್ರಿ ಶ 1688- 1768 )
।
ಶ್ರೀ ವ್ಯಾಸವಿಠಲರು
( ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು- ಕ್ರಿ ಶ 1710 - 1778 )
।
ಶ್ರೀ ರಘುಪತಿವಿಠಲರು
( ಶ್ರೀ ವೈರಾಗ್ಯಶಾಲಿ ತಿಮ್ಮಣ್ಣದಾಸರು- ಕ್ರಿ ಶ 1730 - 1830 )
।
ಶ್ರೀ ಭೂವರಾಹ ರಘುಪತಿವಿಠಲರು
( ಶ್ರೀಕೆಂಭಾವಿ ದಾಸಾಚಾರ್ಯರು - ಕ್ರಿ ಶ 1780- 1865 )
।
ಶ್ರೀ ಶ್ರೀಪತಿವಿಠಲರು
( ಶ್ರೀ ಗದ್ವಾಲಿ ದಾಸರು- ಕ್ರಿ ಶ 1798 - 1870 )
।
ಶ್ರೀ ತಂದೆ ಶ್ರೀಪತಿ ವಿಠಲರು
( ಶ್ರೀ ವೆಂಕಟ ದಾಸರು - ಕ್ರಿಶ 1800 - 1890 )
।
ಶ್ರೀ ಶ್ರೀನಿಧಿ ವಿಠಲರು
( ಶ್ರೀ ದೀಪದ ಅಣ್ಣಯ್ಯಾಚಾರ್ಯರು- ಕ್ರಿ ಶ 1800 - 1875 )
।
ಶ್ರೀ ಶ್ರೀವರ ವಿಠಲರು
( ಶ್ರೀಸೌದೀ ರಾಮಚಂದ್ರದಾಸರು - ಕ್ರಿ ಶ 1823- 1873 )
।
ಶ್ರೀ ಮುದ್ದುಮೋಹನ ವಿಠಲರು
( ಶ್ರೀ ದೊಡ್ಡಬಳ್ಳಾಪುರದ
ರಾಘವೇಂದ್ರಾಚಾರ್ಯರು- ಕ್ರಿ ಶ 1830 - 1898 )
।
ಶ್ರೀ ತಂದೆ ಮುದ್ದುಮೋಹನ ವಿಠಲರು
( ಶ್ರೀ ಪರಮಪ್ರಿಯ ಸುಬ್ಬರಾಯದಾಸರು - ಕ್ರಿ ಶ 1865- 1940 )
।
ಶ್ರೀ ಗುರುಗೋವಿಂದ ವಿಠಲರು
( ಶ್ರೀ ಎಂ ಆರ್ ಗೋವಿಂದರಾವ್ - ಕ್ರಿ ಶ 1894- 1983 )
" ಶ್ರೀ ಗುರುಗೋವಿಂದ ದಾಸರ ಸಂಕ್ಷಿಪ್ತ ಚರಿತ್ರೆ"
ಹೆಸರು : ಶ್ರೀ ಎಂ ಆರ್ ಗೋವಿಂದರಾವ್
ತಂದೆ : ಶ್ರೀ ರಘುನಾಥರಾವ್
ತಾಯಿ : ಸಾಧ್ವೀ ಲಕ್ಷ್ಮೀಬಾಯಿ
ಧರ್ಮಪತ್ನಿ : ಸಾಧ್ವೀ ತುಳಸಮ್ಮ ( ಕೃಷ್ಣವೇಣಿ)
ಜನ್ಮಸ್ಥಳ : ಚಿಕ್ಕಮಗಳೂರು
ಕಾಲ : ಕ್ರಿ ಶ 1894- 1983
ಉಪದೇಶ ಗುರುಗಳು : ಶ್ರೀ ತಂದೆ ಮುದ್ದುಮೋಹನದಾಸರು
ಅಂಕಿತ : ಗುರುಗೋವಿಂದವಿಠ್ಠಲ
ಶ್ರೀ ಗೋವಿಂದರಾಯರು ಶ್ರೀ ತಂದೆ ಮುದ್ದುಮೋಹನ ದಾಸರಿಗೆ ಸಂಪೂರ್ಣ ಶರಣಾಗಿ ಸಾಷ್ಟಾಂಗ ನಮಸ್ಕಾರ ಮಾಡಿ ಅನುಗ್ರಹಿಸಬೇಕೆಂದು ಅತ್ಯಂತ ವಿನೀತರಾಗಿ ಪ್ರಾರ್ಥಿಸಿದರು.
ಜ್ಞಾನಿಗಳಾದ ಶ್ರೀ ತಂದೆ ಮುದ್ದುಮೋಹನ ದಾಸರು ಪಾದಾಕ್ರಾಂತನಾದ ಶಿಷ್ಯನನ್ನು ಮೈದಡವಿ ಎಬ್ಬಿಸಿದರು.
ಕುಶಲ ಪ್ರಶ್ನೆ ಮಾಡಿ ಅಂತಃಕರಣದಿಂದ ಮಾತನಾಡಿಸಿದರು.
ಎಷ್ಟೋ ದಿನಗಳ ಪರಿಚಯವಿರುವಂತೆ ತೋರುವ ವರ್ತನೆ; ವಾತ್ಸಲ್ಯ ಭರಿತವಾದ ಅವರ ಮಾತುಗಳು ಶ್ರೀ ಗೋವಿಂದರಾಯರನ್ನು ಸೆರೆ ಹಿಡಿದವು.
ಶ್ರೀ ತಂದೆ ಮುದ್ದು ಮೋಹನದಾಸರ ಹೊಳೆಯುವ ಕಣ್ಣುಗಳಲ್ಲಿ ಶ್ರೀ ಗೋವಿಂದರಾಯರು ತಮ್ಮ ಬಾಳಿನ ಗುರಿಯನ್ನು ಕಂಡು ಕೊಂಡರು.
ಶ್ರೀ ಗೋವಿಂದರಾಯರ ಮನೋದಾರ್ಢ್ಯವನ್ನು ಕಂಡು ಶ್ರೀ ತಂದೆ ಮುದ್ದು ಮೋಹನದಾಸರಿಗೆ ಆನಂದವಾಯಿತು.
ಈತ ಸುಜೀವಿ; ಈತನಿಂದಮುಂದೆ ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ಅನುಪಮವಾದ ಸೇವೆ ಸಲ್ಲುವುದೆಂದು ಮನಗಂಡು ಶ್ರೀ ಗೋವಿಂದರಾಯರಿಗೆ ಅಂಕಿತೋಪದೇಶವನ್ನು ನೀಡಿದರು.
ರಾಗ : ಕಾಂಬೋಧಿ ತಾಳ : ಝ೦ಪೆ
ಗುರುಗೋವಿಂದವಿಠಲನೆ ನೀನಿವರ ।
ಕರುಣಾಕಟಾಕ್ಷದಿಂದೀಕ್ಷಿಸುತ
ಕಾಪಾಡೋ ಹರಿಯೇ ।।ಪಲ್ಲವಿ ।।
ಗರುಡಗಮನನೆ ದೇವ
ಗರ್ವಗಳ ಪರಿಹರಿಸಿ।
ಸರ್ವಾಂತರಾತ್ಮಕನೆ
ಕಾಪಾಡೋ ಹರಿಯೇ ।।ಆ.ಪ ।।
ಸೃಷ್ಟ್ಯಾದಿಕರ್ತನೇ
ಸುಗುಣ ದೇವ ।
ಕಷ್ಟಗಳ ಪರಿಹರಿಸಿ
ಕಾಪಾಡೋ ಹರಿಯೇ ।
ಕೃಷ್ಣಮೂರುತಿ ಹೃದಯ
ಅಷ್ಟದಳ ಮಧ್ಯದಲ್ಲಿ।
ದೃಷ್ಟಿ ಗೋಚರನಾಗಿ
ಕಾಪಾಡೋ ಹರಿಯೇ ।।ಚರಣ ।।
ಅಪಾರ ಮಹಿಮನೆ
ಪಾದ್ಬಾಂಧವನಾಗಿ ।
ತಾಪತ್ರಯಗಳ ಕಳೆದು
ಕಾಪಾಡೋ ಹರಿಯೇ।
ಕೋಪ ತಾಪಾದಿ
ದುರ್ಗಗಳನೆ ಪರಿಹರಿಸಿಭವ ।
ಕೂಪದಿಂದೆತ್ತೀ ಕಾಪಾಡೋ
ಹರಿಯೇ ।।ಚರಣ ।।
ಹರಿಯೇ ಸರ್ವೋತ್ತಮ
ಶಿರಿ ವಾಯು ಮೊದಲಾದ।
ಸುರರೆಲ್ಲ ಕಿಂಕರರೆಂಬ ।
ವಾರ ಮಧ್ವ ಶಾಸ್ತ್ರ ।।
ಸಾರವನೆ ತಿಳಿಸಿ
ಕಾಪಾಡೋ ಹರಿಯೇ।
ಪರಮ ಪುರುಷನೇ ತಂದೆ
ಮುದ್ದುಮೋಹನವಿಠಲನೇ ನಿನ್ನ ।
ಪರತರಾತ್ಮಕವಾದ ನಿನ್ನ ರೂಪವನೆ ।
ತೋರಿ ಕಾಪಾಡೋ ಹರಿಯೇ ।।ಚರಣ ।।
ಹೀಗೆ " ಗುರುಗೋವಿಂದವಿಠಲ " ಎಂಬ ಅಂಕಿತವನ್ನು ತಮ್ಮ ಬಿಂಬಮೂರ್ತಿಯನ್ನು ಪ್ರಾರ್ಥಿಸುತ್ತಾ ಅಂಕಿತೋಪದೇಶವನ್ನು ಅನುಗ್ರಹಿಸಿದರು.
ಶ್ರೀ ಗೋವಿಂದರಾಯರು ಗುರೂಪಧಿಷ್ಠಿತರಾದರು.
ಅನಂತಾನಂತ ಜನ್ಮ ಗತಿಸಿದರೂ ಶ್ರೀಹರಿ ವಾಯು ಗುರುಗಳ ಅನುಗ್ರಹವಿದ್ದರೆ ಮಾತ್ರ ಲಭ್ಯವಾಗುವ ನೀತ ಗುರುಗಳಿಂದ ಅಂಕಿತಪಡೆದರು.
ಶ್ರೀ ಪುರಂದರದಾಸರಿಂದ ಪೋಷಿಸಲ್ಪಟ್ಟ; ಶ್ರೀ ವಿಜಯರಾಯರಿಂದ ಮುಂದುವರೆಸಲ್ಪಟ್ಟ; ಶ್ರೀ ವೇಣುಗೋಪಾಲದಾಸರ ದಿವ್ಯ ಸಂತತಿಯಲ್ಲಿ ಸೇರಿ ಶ್ರೀ ಗುರುಗೋವಿಂದವಿಠಲರಾದರು.
ಅಂಕಿತ ನೀಡುವ ಕಾಲಕ್ಕೆ ಗುರುಗಳುತಮ್ಮ ಹಸ್ತವನ್ನು ಮಸ್ತಕದ ಮೇಲಿಟ್ಟಾಗ ರೋಮಾಂಚನವಾಗಿ ಧನ್ಯಭಾವದ ಹಿತ ಸ್ಪಂದನವಾಯಿತು.
ಅಂತರಂಗದ ಕದವು ವಿಸ್ತಾರವಾಗಿ ತೆರೆಯಿತು.
ಗುರು ಕೊಟ್ಟ ಬಿಂಬ ಎದೆ ತುಂಬಿ ಸಾಧನ ಮಾರ್ಗ ಕೈಬೀಸಿ ಕರೆಯಿತು ಶ್ರೀ ಗುರುಗೋವಿಂದವಿಠಲರನ್ನು!!
" ಗ್ರಂಥಗಳು "
1. ಹರಿಭಕ್ತ ವಿಜಯ
2. ಐತರೇಯ - ಈಶಾವಾಸ್ಯ - ತಲಾವಕಾರ- ತೈತ್ತಿರೀಯ - ಮಾಂಡೂಕ - ಅಥರ್ವಣ - ಷಟ್ಪ್ರಶ್ನ - ಕಾಠಕ - ಛಾ೦ದೋಗ್ಯ - ಬೃಹದಾರಣ್ಯಕ ಎಂದು ಖ್ಯಾತವಾಗಿರುವ ಹತ್ತು ಉಪನಿಷತ್ತುಗಳನ್ನು ಸರಳ ಸುಂದರವಾಗಿಯೂ; ಮಧುರವಾಗಿಯೂ; ಲಾಲಿತ್ಯವಾಗಿಯೂ ಮೂಲ ಮತ್ತು ಭಾಷ್ಯ ಸಮೇತ ಪ್ರಕಟಿಸಿ ಕನ್ನಡ ಪದ್ಯಾನುವಾದವನ್ನು ಮಾಡಿದ್ದಾರೆ.
3. ಶ್ರೀ ವಾದಿರಾಜ ಋಜುತ್ವಪ್ರಕಾಶಿಕಾ
4. ಸ್ವಪ್ನ ವೃಂದಾವನಾಖ್ಯಾನ ಕನ್ನಡಾನುವಾದ
5. ಪಂಚೀಕರಣ
6. ಶ್ರೀ ಸುಂದರಕಾಂಡ ರಾಮಾಯಣ
7. ಮನುಸ್ಮೃತಿ ಮೂಲಕ್ಕೆ ಷಟ್ಪದಿಯಲ್ಲಿ ಕನ್ನಡಾನುವಾದ
8. ಷೋಡಶೀ - ಚತುರ್ದಶೀ - ಆಧ್ಯಾತ್ಮರಸರಂಜನಿಗೆ ಕನ್ನಡ ಗದ್ಯಾನುವಾದ
9. ಅನೇಕ ಪದ - ಪದ್ಯಗಳು
" ನಿರ್ಯಾಣ "
ದಿನಾಂಕ : 11.01.1983 ದುಂದುಭಿ ನಾಮ ಸಂವತ್ಸರ ಮಾರ್ಗಶಿರ ಬಹುಳ ದ್ವಾದಶೀ ಶ್ರೀ ಗುರು ಗೋವಿಂದ ದಾಸರು ಪರಮ ಪದವನೈದರು !!
ಶ್ರೀ ರಮಾಕಾಂತದಾಸರು...
ಮರುತ ಶಾಸ್ತ್ರ ನಿಗಮಾ-
ಗಮ ಪ್ರಾಕೃತದಿ।
ವಿರಚಿಸುತಲಿ ಮುದದಿ ।
ಮರೆಯದ ಉನ್ನತ
ಕಾರ್ಯಗಳೆಸಗಿದರೂ ।ಶಿ ।
ಷ್ಯರಿಗರುಹಿದರೂ ।।
ಶರಣರಿಗೊರೆಯುತ
ಪರಮಾರ್ಥದ ನೀತಿ । ಪಡೆ।
ದರು ಸತ್ಕೀರ್ತಿ ।
ಧೊರೆ ರಮಾಕಾಂತವಿಠಲನ
ಪ್ರಸನ್ನತೆಯು । ಸಾಧಿಸಿ।
ದರು ಧ್ಯೇಯಾ ।।
ಹೀಗೆ ಶ್ರಾವಣ ಬಹುಳ ದ್ವಾದಶೀ ಮಂಗಳವಾರದಂದು ಜನಿಸಿದ ಶ್ರೀ ಗುರು ಗೋವಿಂದದಾಸರು - ಮಾರ್ಗಶಿರ ಬಹುಳ ದ್ವಾದಶೀ ಮಂಗಳವಾರದಂದೇ ತಮ್ಮ ಪರಮ ಪವಿತ್ರವಾದ ಜೀವಿತವನ್ನು ಮಂಗಳಕರವಾಗಿ ಮುಗಿಸಿದರು!!
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.....
ಪರಮ ಪ್ರಿಯ ಸುಬ್ಬರಾಯ
ದಾಸರ ಪ್ರೀತಿಯ ಕಂದ ।
ಗುರು ಗೋವಿಂದ
ವಿಠಲರಿಗೆ ನಮೋನಮೋ ।
ಹರಿ ವಾಯು ಗುರುಗಳ
ಸ್ತೋತ್ರಪದ ವಿರಚಿಸಿದ ।।
ಗುರುವರ ವಾದಿರಾಜ
ರಾಘವೇಂದ್ರ ಕರುಣಾಪಾತ್ರ ।
ಗುರು ಗೋವಿಂದವಿಠಲಾಂತರ್ಯಾಮಿ
ವೇಂಕಟನಾಥಗೆ ನಮೋ ನಮೋ ।।
" ವಿಶೇಷ ಸೂಚನೆ "
ಶ್ರೀ ಗುರು ಗೋವಿಂದ ವಿಠಲರು 256 ಸಾತ್ವಿಕ ಶಿಷ್ಯರಿಗೆ ಅಂಕೀತೋಪದೇಶವನ್ನು ದಯ ಪಾಲಿಸಿದ ಪೂತಾತ್ಮರು!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
ಶ್ರೀಅಹೋಬಲಾಚಾರ್ಯರು ಗುರುಗೋವಿಂದದಾಸರಿಗೆ ಮಾಡಿದ ಅನುಗ್ರಹ
ಶ್ರೀ ಇಭರಾಮಪುರ ಅಪ್ಪಾವರ ಏಕ ಮಾತ್ರ ಸುಪುತ್ರರು ಶ್ರೀ ಅಹೋಬಲಾಚಾರ್ಯರು. ತಂದೆಯಂತೆಯೇ ಮಹಾತಪಸ್ವಿಗಳು. ಶ್ರೀಅಹೋಬಲಾಚಾರ್ಯರು ಸಂಚಾರಾನ್ವಯ ಚಿಕ್ಕಮಗಳೂರಿಗೆ ದಯಮಾಡಿದರು. ಆಚಾರ್ಯರು ತಮ್ಮ ಊರಿಗೆ ಬಂದ ವಿಷಯ ತಿಳಿದು ಶ್ರೀ ರಘುನಾಥರಾಯರು ಮತ್ತು ಸಾಧ್ವಿ ಲಕ್ಷ್ಮೀಬಾಯಿ ಶ್ರೀಅಹೋಬಲಾಚಾರ್ಯರಿನ್ನು ಮನೆಗೆ ಬರಮಾಡಿಕೊಂಡರು. ಶ್ರೀ ಆಚಾರ್ಯರು ರಘುನಾಥರಾಯರ ದಂಪತಿಗಳಿಗೆ ವಿಶೇಷ ಅನುಗ್ರಹಿಸಿ ಸಾಧ್ವಿ ಲಕ್ಷ್ಮೀಬಾಯಿಯವರಿಗೆ ಕೀರ್ತಿವಂತನಾದ ಸುಪುತ್ರ ಜನನವಾಗುತ್ತಾನೆ ಎಂದು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಶ್ರೀಅಹೋಬಲಾಚಾರ್ಯರು ನುಡಿದಂತೆ ಶ್ರೀರಘುನಾಥರಾಯರ ದಂಪತಿಗಳಿಗೆ 1894ರಲ್ಲಿ ಸುಪುತ್ರ ಜನನವಾಯಿತು.
ಈ ವಿಷಯವು ಸ್ವತಃ ಶ್ರೀ ಗುರುಗೋವಿಂದದಾಸರೇ ತಾವು ರಚಿಸಿರುವ ಆ ನಮಿಪೆ ಮಾತೆ ಪಿತರರ್ಗೆ ಎಂಬ ಕೃತಿಯಲ್ಲಿ ನಿರೂಪಿಸಿದಾರೆ
ಶಿರಿ ರಂಗನಾಥಾಖ್ಯ | ವರ ಕುವರಗೀಯತ್ತ
ವರಲಗ್ನ ಜರುಗಿಸಿರೆ | ದಾಂಪತ್ಯ ಸುಖದೊಳಗೆ
ಇರುತಿರಲು ಇಭರಾಮ | ಪುರ ಮುನಿಸುತರ ಬರವಾಯ್ತು ಚಿಕ್ಕಮಗಳೂರಿಗೆ |
ವರ ಮುನಿಯನುಗ್ರಹದ | ಲೋರ್ವ ಸುತನುದಾಯವನೆ
ನೆರೆತಿಳುಪಿ ಪೊರಮೂಡಲು | ಸತಿಯ ಲಕ್ಷ್ಮೀ ಬಾಯಿ
ವರಕುವನಂ ಪ್ರಸವಿಸುತ | ಪತಿಯೊಡನೆ ಸಂತಸದಿ ಕಾಲ ಕಳೆಯುತಿರಲು ||
ಶ್ರೀ ಅಹೋಬಲಾಚಾರ್ಯರ ಪರಮಾನುಗ್ರಹದಿಂದ ಶ್ರೀರಘುನಾಥರಾಯರ ದಂಪತಿಗಳಿಗೆ ಜನಿಸಿದ ಸುಪುತ್ರ ಗೋವಿಂದ ರಾಯರು ಮುಂದೆ ತಂದೆ ಮುದ್ದುಮೋಹನ ದಾಸರಲ್ಲಿ ದಾಸ ದೀಕ್ಷೆ ಸ್ವೀಕರಿಸಿ ಶ್ರೀ ಗುರುಗೋವಿಂದದಾಸರೆಂದು ಜಗನ್ಮಾನ್ಯರಾದರು.
ಶ್ರೀ ಗುರುಗೋವಿಂದದಾಸರು ಹಲವು ದೇವರ ನಾಮಗಳು ,ಹರಿಭಕ್ತ ವಿಜಯ,ಶ್ರೀ ವಾದಿರಾಜ ಋಜುತ್ವಪ್ರಕಾಶಿಕಾ,ಪಂಚೀಕರಣ, ಸ್ವಪ್ನ ವೃಂದಾವನಾಖ್ಯಾನ ಕನ್ನಡಾನುವಾದ,ಶ್ರೀ ಸುಂದರಕಾಂಡ ರಾಮಾಯಣ, ಮನುಸ್ಮೃತಿ, ಷೋಡಶೀ - ಚತುರ್ದ , ಶೀ - ಆಧ್ಯಾತ್ಮರಸರಂಜನಿಗೆ ಕನ್ನಡ ಗದ್ಯಾನುವಾದ,ಐತರೇಯ - ಈಶಾವಾಸ್ಯ - ತಲಾವಕಾರ- ತೈತ್ತಿರೀಯ - ಮಾಂಡೂಕ - ಅಥರ್ವಣ - ಷಟ್ಪ್ರಶ್ನ - ಕಾಠಕ - ಛಾ೦ದೋಗ್ಯ - ಬೃಹದಾರಣ್ಯಕ ಎಂದು ಖ್ಯಾತವಾಗಿರುವ ಹತ್ತು ಉಪನಿಷತ್ತುಗಳನ್ನು ಸರಳ ಕನ್ನಡ ಪದ್ಯಾನುವಾದವನ್ನು ಮಾಡಿ ಸಾರಸ್ವತಲೋಕಕೆ ವಿಶೇಷ ಕೊಡುಗೆ ನೀಡಿದ್ದಾರೆ.
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ಯ ಇಭರಾಮಪುರ
**
Very succinct and useful information about dasaru. It would be nice if you can add all his works as well as a summary of those works
ReplyDelete