Wednesday, 31 July 2019

suvidyendra teertharu matha rayara mutt bidi sanyasi ಸುವಿದ್ಯೇಂದ್ರತೀರ್ಥರು

near Vidyapeetha, Bengaluru


year 2017



-Sri Suvidyendra Teertharu had taken over the peetha (pontiff) of Rayara Mutt from Sri. Sushameendra Teertharu in the year 2009. But very soon he relinquished the peetha of Rayara Mutt. Now (as of the year 2021) living in Bangalore at Bhuvanagiri, Rayara Sannidhana, Near Vidyapeetha, Bengaluru.

-ಶ್ರೀಸುವಿದ್ಯೇಂದ್ರತೀರ್ಥರು.

ಅನುಪಮವಾದಂತಹ ಪಾಂಡಿತ್ಯ-ಅಹಂಕಾರದ ಲವಲೇಶವೂ ಸುಳಿದಿಲ್ಲ, ವಿಷಾದದ ಸುಳಿವಿಲ್ಲ. ನಿರಂತರವಾದ ಭಾಗವತಾದಿ ಗ್ರಂಥಗಳ, ಶಾಸ್ತ್ರಗ್ರಂಥಗಳ ಪಾಠ,ಪ್ರವಚನ, ಅವಿರತವಾದ ಅನುಷ್ಠಾನ, ಗ್ರಂಥ ರಚನೆ, ಅನುವಾದ ಇವುಗಳಲ್ಲಿ ತಮ್ಮ ಜೀವಿತಕ್ಕೊಂದು ಸಾರ್ಥಕ್ಯವನ್ನು ಕಂಡುಕೊಳ್ಳುತ್ತಿರುವ, ಯತ್ಯಾಶ್ರಮಕ್ಕೆ ಒಂದು ಘನತೆಯನ್ನು ತಂದು ಕೊಟ್ಟಿರುವ ಯತಿಶ್ರೇಷ್ಠರು ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರು. ರಾಯಚೂರಿನಲ್ಲಿ ಶ್ರೀರಾಮಾಚಾರ್ಯರು ಹಾಗೂ ಶ್ರೀಮತಿ ತುಂಗಾಬಾಯಿಯವರ ಪುತ್ರರಾಗಿ ಜನಿಸಿದ ಶ್ರೀಸುವಿದ್ಯೇಂದ್ರತೀರ್ಥರ ಪೂರ್ವಾಶ್ರಮದ ನಾಮಧೇಯ ಗುರುವೇಂಕಟಾಚಾರ್ಯರು. 
ಶ್ರೀವಿಜಯದಾಸರ ಜನ್ಮಭೂಮಿ ಚೀಕಲಪರವಿಯಲ್ಲಿ ಪ್ರಾತ:ಸ್ಮರಣೀಯರಾದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರು ಮಾಧ್ವರಾದ್ಧಾಂತ ಸಭೆಯನ್ನು ಪೂರ್ಣಗೊಳಿಸಿ, ಉಡುಪಿಗೆ ಮರಳುವಂತಹ ಸಂದರ್ಭದಲ್ಲಿ 'ಶಾಸ್ತ್ರಾಭ್ಯಾಸಮಾಡುವ ಆಸಕ್ತಿಯಿದೆಯೆ?'ಎಂದು ಬಾಲಕ ಗುರುವೇಂಕಟಾಚಾರ್ಯರನ್ನು ಕೇಳಿದಾಗ, ಇಚ್ಛೆಯಿದೆ ಎಂದು ತಮ್ಮ ಸಮ್ಮತಿಯನ್ನು ಗುರುಗಳಿಗೆ ತಿಳಿಸಿದ ಗುರುವೇಂಕಟಾಚಾರ್ಯರನ್ನು ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರು ತಮ್ಮೊಡನೆ ಉಡುಪಿಗೆ ಕರೆದೊಯ್ದರು. ನಂತರ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರಿಂದ ಸ್ಥಾಪಿತವಾದ ಬೆಂಗಳೂರಿನ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡರು. ನಂತರ ಹನ್ನೆರಡು ವರ್ಷಗಳ ಕಾಲ ಪೂಜ್ಯ ಶ್ರೀಪೇಜಾವರ ಶ್ರೀಗಳ ಆಶ್ರಯದಲ್ಲಿಯೇ ತಮ್ಮ ಅಧ್ಯಯನವನ್ನು ನಡೆಸಿ ಶ್ರೀಗಳಲ್ಲಿಯೆ ಮಾಧ್ವ ವಾಙ್ಮಯದ ಮೇರು ಕೃತಿ 'ಶ್ರೀಮನ್ನ್ಯಾಯಸುಧಾ' ಗ್ರಂಥದ ಅಧ್ಯಯನವನ್ನೂ ಪೂರ್ಣಗೊಳಿಸಿದರು. ಸಂಸ್ಕೃತಭಾಷೆಯಲ್ಲಿ ಸ್ನಾತಕೋತ್ತರ ಪದವಿ, ನ್ಯಾಯ,ವೇದಾಂತಶಾಸ್ತ್ರದಲ್ಲಿ ವಿದ್ವತ್ ಪದವಿಯನ್ನೂ ಪಡೆದರು. ಜತೆಯಲ್ಲಿಯೇ ಅಲಂಕಾರ ಶಾಸ್ತ್ರದ ಅಸಾಧಾರಣ ಪಾಂಡಿತ್ಯವನ್ನೂ ಗಳಿಸಿದರು. ವಿದ್ಯಾಭ್ಯಾಸದ ನಂತರ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿಯೇ ಅಧ್ಯಾಪನ ವೃತ್ತಿಗೆ ಸೇರಿದ ಶ್ರೀಗುರುವೇಂಕಟಾಚಾರ್ಯರು ಗೃಹಸ್ಥರಿಗಾಗಿ ಉಪನಿಷತ್ತುಗಳ ಹಾಗೂ ಶ್ರೀಮನ್ನ್ಯಾಯಸುಧಾ ಪಾಠ ನಡೆಸಿದರು. ಬೆಂಗಳೂರು ಮಹಾನಗರದ ಬಹುತೇಕ ಶ್ರೀರಾಘವೇಂದ್ರಮಠಗಳಲ್ಲಿ, ಮಾಧ್ವ ಸಂಘಗಳಲ್ಲಿ ರಾಮಾಯಣ, ಮಹಾಭಾರತ, ಭಾಗವತ, ಹರಿವಂಶ ಮೊದಲಾದ ಗ್ರಂಥಗಳ ಪ್ರವಚನಗಳನ್ನು ನಿರಂತರವಾಗಿ ನಡೆಸುತ್ತಾ ಬೆಂಗಳೂರಿನ ಜನತೆಗೆ ಈ ಉದ್ಗ್ರಂಥಗಳ ಸಾರವನ್ನು ತಲುಪಿಸಿದ ಕೀರ್ತಿ ಶ್ರೀಆಚಾರ್ಯರದು. ಸಹಸ್ರಾಧಿಕ ಸಂಖ್ಯೆಯಲ್ಲಿ ಭಾಗವತ ಸಪ್ತಾಹಗಳನ್ನು ನಡೆಸಿದ, ನಡೆಸುತ್ತಿರುವ ಕೀರ್ತಿಗೆ ಮತ್ತು ಅಷ್ಟು ಸಂಖ್ಯೆಯಲ್ಲಿ  ಭಾಗವತಾನುಸಂಧಾನ ನಡೆಸಲು ಭಗವಂತನ ವಿಶೇಷ ಅನುಗ್ರಹಕ್ಕೆ ಭಾಜನರಾದವರು. ಅತ್ಯಂತ ಸರಳವಾಗಿಯೂ ಅಷ್ಟೇ  ಶಾಸ್ತ್ರಬದ್ಧವಾಗಿಯೂ, ಕೇಳುಗರನ್ನು ತನ್ಮಯಗೊಳಿಸುವ ಅವರ ಪ್ರವಚನಗಳೆಂದರೆ ಕೇಳುಗರಿಗೆ  ಶಾಸ್ತ್ರಾನುಸಂಧಾನದ ಅಪೂರ್ವ ರಸಾನುಭವ. ಶ್ರೀಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಪ್ರಥಮ ಪರ್ಯಾಯಕಾಲದಲ್ಲಿ, ಉಡುಪಿಯ ಶ್ರೀಕೃಷ್ಣ,ಮುಖ್ಯಪ್ರಾಣರ ಸನ್ನಿಧಿಯಲ್ಲಿ ಶ್ರೀಮಂತ್ರಾಲಯ ಶ್ರೀರಾಘವೇಂದ್ರಮಠಾಧೀಶರಾಗಿದ್ದ ಪ್ರಾತ:ಸ್ಮರಣೀಯ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ಇಂತಹ ವಿದ್ವಾಂಸರು ತಮ್ಮ ಉತ್ತರಾಧಿಕಾರಿಗಳಾಗಬೇಕೆಂಬ ಇಚ್ಛೆಯಿಂದ  ಶ್ರೀಗುರುವೇಂಕಟಾಚಾರ್ಯರಿಗೆ ತುರೀಯಾಶ್ರಮನೀಡಿ ಶ್ರೀಸುವಿದ್ಯೇಂದ್ರತೀರ್ಥರೆಂಬ ಆಶ್ರಮನಾಮವನ್ನು ಅನುಗ್ರಹಿಸಿದರು. ರಸ್ತೆ ಅಪಘಾತವೊಂದರ ಕಾರಣದಿಂದಾಗಿ ಮಹಾಸಂಸ್ಥಾನದ ಪೀಠಾಧಿಪತಿಯಾಗಿ ಮುಂದುವರೆಯಲು ಇಚ್ಛಿಸದ ಶ್ರೀಸುವಿದ್ಯೇಂದ್ರರು ಸ್ವಲ್ಪಕಾಲವಾದರೂ ಶ್ರೀಮೂಲರಾಮ,ದಿಗ್ವಿಜಯರಾಮ,ಜಯರಾಮ,ಸಂತಾನಗೋಪಾಲಕೃಷ್ಣರನ್ನು ಪೂಜಿಸಿದ್ದು ತಮ್ಮ ಜೀವನದ ಸಾರ್ಥಕ ಕ್ಷಣಗಳು,ಪೂರ್ವ ಜನ್ಮದ ಸುಕೃತ ಫಲಿತವೆಂಬ ವಿನೀತಭಾವದಿಂದ ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರ ಕರಾರ್ಚಿತ ಹಾಗೂ ಶ್ರೀವ್ಯಾಸತತ್ತ್ವಜ್ಞರ ಕರಾರ್ಚಿತ ಪ್ರತಿಮೆಗಳ ನಿರಂತರ ಪೂಜೆಯೊಂದಿಗೆ ಪರಿವ್ರಾಜಕಾಶ್ರಮದಲ್ಲಿ ಮುಂದುವರೆದಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಸುಧಾಪಾಠನ್ನೂ ಮಾಡಿರುವ, ಮಾಡುತ್ತಿರುವ ಶ್ರೀಗಳು ತಮ್ಮ ಪ್ರವಚನಗಳಮೂಲಕ ನಿರಂತರವಾಙ್ಮಯಸೇವೆಯನ್ನು ನಡೆಸುತ್ತಾ ಬಂದಿದ್ದಾರೆ. ಸಮಗ್ರ ಹರಿಕಥಾಮೃತಸಾರದ ಬಗ್ಗೆ ಶ್ರೀಗಳು ಪ್ರವಚನವನ್ನು ನೀಡಿದ್ದು, ಸಿ.ಡಿ.ಯ ರೂಪದಲ್ಲಿ ಉಪಲಬ್ಧವಿದೆ.
 ಗ್ರಂಥರಚನೆಯಲ್ಲಿಯೂ ಅಸಾಧಾರಣವಾಗಿ ಶ್ರೀವೇದವ್ಯಾಸ-ಮಧ್ವರ ಸೇವೆಯನ್ನು ಮಾಡಿರುವ ಮಹಾನುಭಾವರು ಶ್ರೀಸುವಿದ್ಯೇಂದ್ರರು. ಶ್ರೀಪೇಜಾವರ ಶ್ರೀಗಳ ಮಹತ್ವಾಕಾಂಕ್ಷೆಯ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತ ಸರ್ವಮೂಲಗ್ರಂಥಗಳ ಕನ್ನಡ ಅನುವಾದ ಕಾರ್ಯದಲ್ಲಿ ಶ್ರೀಸುವಿದ್ಯೇಂದ್ರರು ಮಹತ್ತ್ವದ ಕೊಡುಗೆಯನ್ನು ನೀಡಿದ್ದು, ಶ್ರೀ ಛಾಂದೋಗ್ಯೋಪನಿಷತ್ ಹಾಗೂ ಶ್ರೀಮಧ್ವ ಭಗವತ್ಪಾದರ ಛಾಂದೋಗ್ಯೋಪನಿಷತ್ ಭಾಷ್ಯವನ್ನು ಕನ್ನಡದಲ್ಲಿ, ದಿವಂಗತ ಶ್ರೀಅನಂತ ತಂತ್ರಿಯವರೊಂದಿಗೆ ಅನುವಾದಿಸಿದ್ದಾರೆ. ಶ್ರೀಸುವಿದ್ಯೇಂದ್ರರ ಮತ್ತೊಂದು ಮಹತ್ತ್ವದ ಕೃತಿಯೆಂದರೆ ಶ್ರೀಪರಿಮಳಾಚಾರ್ಯರೆಂದೇ ಪ್ರಖ್ಯಾತರಾಗಿರುವ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ವಿಶ್ವವಿಖ್ಯಾತ ಕೃತಿ 'ಶ್ರೀಮನ್ನ್ಯಾಯಸುಧಾ ಪರಿಮಳ'ಕೃತಿಯ ಸಾರಸಂಗ್ರಹ ರಚನೆ. ಶ್ರೀವೀರನಾರಾಯಣ ಪಾಂಡುರಂಗಿಯವರು ಈ ಕೃತಿಯ ಅನುವಾದದಲ್ಲಿ ಶ್ರೀಗಳಿಗೆ ಸಹಕರಿಸಿದ್ದಾರೆ.  ಶ್ರೀಗುರುಸಾರ್ವಭೌಮರ ಮತ್ತೊಂದು ಕೃತಿ' ಹಿರಣ್ಯಗರ್ಭಸೂಕ್ತ'ದ ವ್ಯಾಖ್ಯಾನವನ್ನು ಕನ್ನಡಕ್ಕೆ ತಂದ ಕೀರ್ತಿಯೂ ಶ್ರೀಸುವಿದ್ಯೇಂದ್ರರದು. ಶ್ರೀರಾಘವೇಂದ್ರರ ಪುರುಷಸೂಕ್ತ ವ್ಯಾಖ್ಯಾನದ ಕನ್ನಡ ಅನುವಾದವನ್ನೂ ಶ್ರೀಗಳು ಮಾಡಿದ್ದಾರೆ.  ದ್ವೈತವೇದಾಂತ ಮತ್ತು ಸಂಶೋಧನಾ ಸಂಸ್ಥೆಗಾಗಿ 'ನಾರಾಯಣೋಪನಿಷತ್ತಿನ ಸಂಪಾದನೆ, ಶ್ರೀಮಹಾಭಾರತ ಸಾರಸಂಗ್ರಹದ ರಚನೆ, ಶ್ರೀಗುರುಗುಣಸ್ತವನದ ಕನ್ನಡ ಅನುವಾದ ಹೀಗೆ ನಿರಂತರವಾಗಿ ಶ್ರೀವಾಸಿಷ್ಠಕೃಷ್ಣರ ಸೇವೆಯಲ್ಲಿ ರತದಾದ ಯತಿಗಳು ಶ್ರೀಸುವಿದ್ಯೇಂದ್ರತೀರ್ಥರು. ಅಪೂರ್ವಜ್ಞಾನನಿಧಿ, ವಿದ್ಯೆಯೊಂದಿಗೆ ವಿನಯದ ಪ್ರತಿಮೂರ್ತಿಯಾಗಿರುವ ಶ್ರೀಗಳ ವಾಙ್ಮಯಸೇವೆ ನಿರಂತರವಾಗಿ ನಡೆಯುವಂತೆ ಶ್ರೀಹರಿ,ವಾಯುಗಳು ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತೇನೆ. ಶ್ರೀಕೃಷ್ಣ,ಮಧ್ವರು ಪ್ರೀತರಾಗಲಿ. (ಶ್ರೀಗಳ ಬಗ್ಗೆ ಕೆಲವೊಂದು ಅಪೂರ್ವಮಾಹಿತಿಯನ್ನು ನೀಡಿದ ಶ್ರೀಹರಿಭಕ್ತರಿಗೆ ಕೃತಜ್ಞತೆಗಳು)-ವೇಣುಗೋಪಾಲ ಬಿ.ಎನ್.
*******


ಶ್ರೀಸುಶಮಿಂದ್ರತೀರ್ಥರು ಶ್ರೀಮಠದ ಉತ್ತಮ ವಿದ್ವಾಂಸರಾದ, ಭಾಗವತಪ್ರವಚನಚತುರರಾದ, ಶ್ರೀಪೂರ್ಣಪ್ರಜ್ಞವಿದ್ಯಾಪೀಠದ ಅಧ್ಯಾಪಕರಾಗಿದ್ದ ವಿದ್ವಾನ್ ಗುರುವೇಂಕಾಟಾಚಾರ್ಯರಿಗೆ ಸನ್ಯಾಸಾಶ್ರಮವನ್ನು ಪ್ರದಾನ ಮಾಡಿ ಶ್ರೀಸುವಿದ್ಯೇಂದ್ರತೀರ್ಥರೆಂದು ನಾಮಕರಣ ಮಾಡಿದರು. ಶ್ರೀಸುವಿದ್ಯೇಂದ್ರತೀರ್ಥರು ತಮ್ಮ ಗುರುಗಳ ಸೇವೆಯನ್ನು ಮಾಡುತ್ತಾ, ಮಧ್ವಮತದ ಪ್ರಚಾರವನ್ನು ಮಾಡುತ್ತಾ, ಶ್ರೀಭಾಗವತ ಪ್ರವಚನವನ್ನು ಮಾಡುತ್ತಿರುವುದು ಒಂದು ದೊಡ್ಡ ದಾಖಲೆಯೇ ಸರಿ.
***

August 24, 2023 at Bhuvanagiri, Rayara Sannidhana, Near Vidyapeetha, Bangalore 





No comments:

Post a Comment