ಶ್ರೀ ಕಟಗೇರಿ ದಾಸರ ಸಿರಿ ಕಂಠದಿಂದ ಹೊರಹೊಮ್ಮಿದ ಹಾಡುಗಳು ಕೇಳಲು ಕರ್ಣಾನಂದವಾಗುತ್ತದೆ
Gurugale parama hitakaru nodu...smarisu gurugala. Katageri Dasarige namo namah. listen herebelow
FB 28 oct 2018 ಹರಿದಾಸ ಕೀರ್ತನಾ ಶಿರೋಮಣಿ.. ಸಂಗೀತ ಆಚಾರ್ಯ ಮಾನ್ಯ ಶ್ರೀ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು..
ದಾಸ ಸಾಹಿತ್ಯ ಹಾಗೂ ಗಮಕ ಹಗಲು ರಾತ್ರಿ ಎನ್ನದೇ ಹಾಡುವಷ್ಟು ಸಾಮರ್ಥ್ಯ! ದಾಸರ ಪದ ಹಾಡುವುದು ಮಾತ್ರವಲ್ಲ ಅದರ ಅರ್ಥ, ಸಂದರ್ಭ, ಔಚಿತ್ಯ ಮತ್ತು ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ಸಹ ವಿವರಿಸಬಲ್ಲ ಆಳ ಜ್ಞಾನ..
ಸೈಕಲ್ ಏರಿ, ಮನೆ ಮನೆಗೆ ಹೋಗಿ ದಾಸರ ಪದ ಮಕ್ಕಳಿಗೆ ಕಲಿಸುತ್ತ, ನೀಡಿದಷ್ಟು ಪಡೆಯುತ್ತ ಬಂದ ಮಹಾನುಭಾವರು ಕಟಗೇರಿ ದಾಸರು..
೮೯ ವರ್ಷದ ಜ್ಞಾನವೃದ್ಧ ಮತ್ತು ವಯೋವೃದ್ಧ ದಾಸರು ಸುಮಾರು ೧೯ ಪ್ರಕಾರಗಳ ದಾಸ ಸಾಹಿತ್ಯದ, ೪ ಸಾವಿರಕ್ಕೂ ಮಿಕ್ಕಿದ ದಾಸರ ಪದಗಳ 💕 ಈಭಂಡಾರ!
ವಯೋ ಸಹಜ ಮರೆವು ಅವರಿಗಾಗಿದ್ದರೆ, ನಮ್ಮ ಸಮಾಜ ಮರೆವಿನಲ್ಲೇ ಅಮೃತತ್ವವಿದೆ ಎಂದು ನಂಬಿರುವಂಥದ್ದು! ಹಾಗಾಗಿ, ದಾಸರು ಆಳುವ ಸರ್ಕಾರಗಳಿಗೆ ಸಾಂಸ್ಕೃತಿಕ ರಾಯಭಾರಿ, ನಮ್ಮ ನಾಡನ್ನು ಶ್ರೀಮಂತಗೊಳಿಸಿದ ಮಹಾನುಭಾವ ಎನಿಸಿಲ್ಲ.
ಸಾವಿರಾರು ಜನ ಸಂಗೀತಾಸಕ್ತರಿಗೆ ತಮ್ಮ ಜ್ಞಾನ ಪರಂಪರೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಧಾರೆ ಎರೆದವರು. ತೊಲಗಾಚೆ ಕೀರ್ತಿ ಶನಿ ಎಂಬಂತೆ ನಿರ್ಲಿಪ್ತ ಜೀವನ.. ತುಂಬು ಬಡತನದಲ್ಲೇ ದಾಸರು ಇಂದಿಗೂ ಧಾರವಾಡದ ಮಾಳಮಡ್ಡಿಯ ಕಟಗೇರಿ ಕಂಪೌಂಡ್ ನಲ್ಲಿ ತಮ್ಮ ಧರ್ಮ ಪತ್ನಿಯೊಂದಿಗೆ ಕಳೆಯುತ್ತಿದ್ದಾರೆ. ವೃದ್ಧಾಪ್ಯದ ಪಿಂಚಣಿಯೊಂದೇ ಮಾನ್ಯರಿಗೆ ಜೀವನಾಧಾರ!
ಇನಿತೂ ಜೀವನ ಪ್ರೀತಿ ಕುಂದಿಲ್ಲ. ಕಂಠ ಇಂದಿಗೂ ಕಂಚಿನ ಕಂಠ. ಸ್ವರಗಳ ಮೇಲಿನ ಹಿಡಿತ ಅತ್ಯಂತ ಕರಾರುವಾಕ್! ಸದಾ ನಗುಮೊಗ. ಮನೆ ತುಂಬ ಸನ್ಮಾನ, ಬಿನ್ನವತ್ತಳೆ, ಪುರಸ್ಕಾರಗಳು..
ಕಟಗೇರಿ ದಾಸರ ಜ್ಞಾನಪರಂಪರೆ ದಾಖಲಿಸುವ, ಸಾಹಿತ್ಯದ ಸಮಗ್ರ ಸಂಪುಟ ಸಂಪಾದಿಸುವ, ಅವರ ವ್ಯಕ್ತಿತ್ವ- ಕೃತಿತ್ವ ದಾಖಲಿಸುವ ಜವಾಬ್ದಾರಿ ಯಾರದ್ದು?
ಮತ್ತೆ ಕನ್ನಡ ರಾಜ್ಯೋತ್ಸವದ ಹೊಸ್ತಿಲ್ಲಿದ್ದೇವೆ. ಮಾನ್ಯೆ ಜಯಮಾಲಾ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ. ದಾಸರ ಪರವಾಗಿ ಅವರ ಅಭಿಮಾನಿಗಳು ಅರ್ಜಿಯೂ ಸಲ್ಲಿಸಿದ್ದಾರೆ..
ಯೋಗ್ಯತೆಗೆ, ಅರ್ಹತೆಗೆ ಮಣೆ ಹಾಕಬಹುದು ನಮ್ಮ ರಾಜ್ಯ ಸರ್ಕಾರ ಎಂಬ ವಿವೇಕದಿಂದ ಇಲ್ಲಿ ದಾಸರ ಬಗ್ಗೆ ದಾಖಲಿಸುತ್ತಿದ್ದೇನೆ. ಕನಿಷ್ಟ ಈ ಬಾರಿ ಪುರಸ್ಕಾರ ಧಾರವಾಡದ ಈ ಮಹಾನುಭಾವರಿಗೆ ಸಲ್ಲಬಹುದು ಎಂಬ ಅಪೇಕ್ಷೆಯಿಂದ, ಸಾವಿರಾರು ಜನ ಶಿಷ್ಯರ ಪರವಾಗಿ ಇಲ್ಲಿ ಕೋರಿಕೆ ಮಂಡಿಸಿದೆ.
ಅಧಿಕಾರಸ್ಥ ಮಹನೀಯರು ಪರಾಂಬರಿಸಲಿ.. ಪ್ರಜಾಪ್ರಭುತ್ವ!
ದಾಸರ ಸಂಪರ್ಕ: 90361 71582
- ಹರ್ಷವರ್ಧನ ಶೀಲವಂತರ ಫೇಸ್ಬುಕ್ ಬರಹ
***
***
'ಅನಂತ' ಪದ ಸೇರಿದ ಕಟಗೇರಿ ದಾಸರು - 2025✍️
ಕರ್ನಾಟಕದ ಹೆಮ್ಮೆಯ ಕನ್ನಡ ಭಾಷೆಯ ಪ್ರಾಕಾರಗಳಲ್ಲಿ ಒಂದಾದ 'ದಾಸ ಸಾಹಿತ್ಯ' ದ ದೇವರನಾಮಗಳನ್ನು ಇಂಪಾಗಿ ಹಾಡಿ ಅದರ ಕಂಪನ್ನು ಜನ ಮಾನಸಕ್ಕೆ ತಲುಪಿಸುತ್ತಿದ್ದ ಹಳೆ ತಲೆಮಾರಿನ ಕೊನೆಯ ಕೊಂಡಿ ಎನಿಸಿದ್ದ ಕಟಗೇರಿ ದಾಸರೆಂದೇ ಪ್ರಸಿದ್ಧರಾಗಿದ್ದ ಅನಂತಾಚಾರ್ಯ ಕಟಗೇರಿ ತಮ್ಮ 97 ನೆಯ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ವೃದ್ಧಾಪ್ಯದಿಂದ ಮಾಗಿ ಹೋಗಿದ್ದ ಕುಬ್ಜದೇಹಿ, ಕಚ್ಚೆ ಪಂಚೆ , ಉದ್ದನೆ ಕೋಟು, ಹಣೆಯಲ್ಲಿ ಢಾಳಾಗಿ ಹಚ್ಚಿದ ಅಕ್ಷತೆ ಅಂಗಾರ, ಧಾರವಾಡ ಟೊಪ್ಪಿಗೆಯಲ್ಲಿ ಶೋಭಿಸುತ್ತಿದ್ದ ದಾಸರು ಇನ್ನು ನೆನಪು ಮಾತ್ರ!
ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕಿನ ಕುಗ್ರಾಮ ಕಟಗೇರಿ ಇವರ ಮೂಲಸ್ಥಳ. ಇವರ ತಂದೆ ಬಾಳಾಚಾರ್ಯ. ಮೊದಲಿಗೆ ಇವರ ಪೂರ್ವಜರು ಆಂಧ್ರದ ಕಡಪದಲ್ಲಿ ನೆಲೆಸಿದ್ದರು. ಸಂಗೀತ ಇವರ ಮನೆತನಕ್ಕೆ ಒಲಿದು ಬಂದಿತ್ತು. ತಂದೆ ಸಿತಾರ್ ನುಡಿಸುತ್ತಿದ್ದರೆ ತಾಯಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಏಳು ಜನ ಮಕ್ಕಳಲ್ಲಿ ಮೂರನೆಯ ಕಡೆಯ ಗಂಡು ಮಗನಾಗಿದ್ದ ದಾಸರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಅಭಿರುಚಿ. ದಾಸರು ಲೌಕಿಕ ವಿದ್ಯೆಯನ್ನು ಶಾಲೆಯಲ್ಲಿ ಕಲಿತವರಲ್ಲ. ಆಗ ಅವರು ತಮ್ಮ ಎಳೆತನದಲ್ಲಿ ಸೇರಿದ್ದು ಚನ್ನಪಟ್ಟಣ ತಾಲ್ಲೂಕು ಅಬ್ಬೂರು ಶ್ರೀಕುಂದಾಪುರ ವ್ಯಾಸರಾಜ ಮಠವನ್ನು. ದಾಸರ ಅಭಿರುಚಿಗೆ ನೀರೆರೆದವರು ಆಗ ಪೀಠಾಧಿಪತಿಗಳಾಗಿದ್ದ ಶ್ರೀ ಲಕ್ಷ್ಮೀಶ ತೀರ್ಥರು. ಶ್ರೀಗಳು ಸ್ವತಃ ಕರ್ನಾಟಕ ಸಂಗೀತ ಬಲ್ಲವರಾಗಿದ್ದರು.ಮಠದಲ್ಲಿ ಶ್ರೀಗಳ ಸಂಸ್ಥಾನ ಪೂಜಾ ವೇಳೆಯಲ್ಲಿ ದಾಸರಪದಗಳನ್ನು ಹಾಡುವುದು ದಾಸರ ನಿತ್ಯ ಕೈಂಕರ್ಯವಾಗಿತ್ತು. ಹೀಗಾಗಿ ಅನಂತಾಚಾರ್ಯರು ಹಾಡಿಕೆಯಲ್ಲಿ ಪ್ರೌಢಿಮೆ ಗಳಿಸಿದರು. ಸುಮಾರು ನಲವತ್ತು ವರುಷಗಳ ಕಾಲ ಮಠದಲ್ಲಿದ್ದ ಆಚಾರ್ಯರು ನಂತರ ಬಂದಿದ್ದು ಧಾರವಾಡದ ಮಡಿಹಾಳಕ್ಕೆ.
ಶ್ರೀ ಲಕ್ಷ್ಮೀನಾರಾಯಣ ದೇಗುಲದಲ್ಲಿ ಪೂಜೆ ಮಾಡಿಕೊಂಡಿದ್ದ ಆಚಾರ್ಯರು ಆ ಕಾಲದಲ್ಲಿ ಉದ್ಧಾಮ ಸಂಸ್ಕೃತ ವಿದ್ಮಾಂಸರಾಗಿದ್ದ ಹಾಗೂ ಉತ್ತರಾದಿ ಸಂಗೀತ ಬಲ್ಲವರಾಗಿದ್ದ ಪಂಡಿತ ಶ್ರೀ ಜಾಲಿಹಾಳ ಶ್ರೀನಿವಾಸಾಚಾರ್ಯರಲ್ಲಿ ಶಿಷ್ಯವೃತ್ತಿ ಮಾಡಿದರು.
ಶ್ರೀನಿವಾಸಾಚಾರ್ಯರು ಶಿಷ್ಯನಿಗೆ ಉತ್ತರಾದಿ ಪ್ರಾಕಾರದಲ್ಲಿ ದೇವರನಾಮಗಳನ್ನು ಹಾಡುವುದನ್ನು ಕಲಿಸಿದರಲ್ಲದೆ ಸಾಹಿತ್ಯದ ಪ್ರಮೇಯಗಳನ್ನು ದಾಸರಿಗೆ ಪರಿಚಯಿಸಿದರು. ಇದರಿಂದಾಗಿ ಕಟಗೇರಿ ಆಚಾರ್ಯರ ಸಂಗೀತಕ್ಕೆ ಉಜ್ವಲ ಮೆರಗು ಬಂದಿತು. ಜಾಲಿಹಾಳ ಆಚಾರ್ಯರು ಕಾಲವಾದ ನಂತರ ಅನಂತಾಚಾರ್ಯರು ಸಂಗೀತಾಸಕ್ತರಿಗೆ ,ಮನೆ ಮನೆಗೆ ಸೈಕಲ್ ಹೊಡೆದುಕೊಂಡು ಹೋಗಿ ದೇವರನಾಮಗಳನ್ನು ಕಲಿಸುತ್ತಿದ್ದರು. ತಮ್ಮ ವಿದ್ಯೆಯನ್ನು ದುಡ್ಡಿಗಾಗಿ ದಾಸರು ಎಂದೂ ಮಾರಿಕೊಳ್ಳಲಿಲ್ಲ. ದೇವರು ಕೊಟ್ಟದ್ದರಲ್ಲೇ ಹೆಂಡತಿ ಸಿಂಧುಬಾಯಿ ಅವರೊಂದಿಗೆ ಧಾರವಾಡದಲ್ಲಿ ಸಂಸಾರ ಹೂಡಿದರು. ' ಸಾವಧಾನದಿಂದಿರು ಮನವೇ ದೇವರು ಕೊಟ್ಟಾನು ಕೊಟ್ಟಾನು...' ಎನ್ನುವ ದಾಸರ ಪದದಲ್ಲಿ ಅಚಲ ವಿಶ್ವಾಸ. ಬಡತನವಿದ್ದರೂ ಯಾರ ಮುಂದೆಯೂ ಹಣಕ್ಕಾಗಿ ಕೈಚಾಚಲಿಲ್ಲ! ಈಗಾಗಲೇ ತಮ್ಮ ಕಂಠಸಿರಿಯಿಂದ ಕಟಗೇರಿ ದಾಸರೆಂದೇ ಮನೆಮಾತಾದರು. ಇವರ ಬಾಯಿಂದ ದೇವರನಾಮ ಕೇಳಬೇಕೆಂದು ಯಾರಾದರೂ ಅಪೇಕ್ಷಿಸಿದರೆ ಕೂಡಲೇ ಹಾಡಿ ಸಂತೋಷಪಡಿಸುತ್ತಿದ್ದರು. ಇದನ್ನೇ ಸಂಸ್ಕೃತದಲ್ಲಿ ' ಸಂತೋಷಂ ಜನಯೇತ್ ಪ್ರಾಜ್ಞ: ' ಎನ್ನುತ್ತಾರೆ.
ಕೊಲ್ಹಾಪುರ ಮಹಾಲಕ್ಷ್ಮಿ ಸೇವೆಯನ್ನು ಕೆಲಕಾಲ ಮಾಡಿದರು. ಜೀವನದಲ್ಲಿ ಏನೇ ಕಷ್ಟಕೋಟಿಗಳು ಬಂದರೂ ಅದನ್ನು ದಾಸಸಾಹಿತ್ಯ ಅದರಲ್ಲೂ ಶ್ರೀ ವಿಜಯದಾಸರ ದೇವರ ನಾಮದ ಬಲದಿಂದ ನೀಗಿಕೊಳ್ಳುತ್ತಿದ್ದರು. ಕೋವಿಡ್ ಮಹಾ ಮಾರಿ ಇಡೀ ದೇಶವನ್ನೇ ವ್ಯಾಪಿಸಿದ್ದಾಗ 85 ವರ್ಷದ ದಾಸರು ಅದಕ್ಕೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ದಾಸರು ಬದುಕುವುದಿಲ್ಲ ಎಂದೇ ನಿಶ್ಚಿತವಾಗಿತ್ತು. ಅಂತಹ ವಿಷಮ ಸನ್ನಿವೇಶದಲ್ಲೂ ದಾಸರು ದೇವರ ನಾಮವನ್ನು ಗುನುಗುವುದನ್ನು ಬಿಡಲಿಲ್ಲ. ಆ ಸಂದರ್ಭದಲ್ಲಿ ಅವರು ಸ್ಮರಿಸಿಕೊಂಡಿದ್ದು ' ಆವ ರೋಗವೋ ಎನಗೆ ದೇವ ಧನ್ವoತ್ರಿ..', ಮತ್ತೊಂದು ' ವೈದ್ಯ ಬಂದ ನೋಡೆ ವೆಂಕಟನೆಂಬ...' ಕಡೆಗೂ ಯಮನ ಅಂಜಿಕೆಯಿಂದ ಪಾರಾದರು. ಹೀಗೆ ದಾಸ ಸಾಹಿತ್ಯವನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಬೇಕು ಅನ್ನೋದನ್ನು ತೋರಿಸಿಕೊಟ್ಟರು.
ದಾಸರಿಗೆ ಸಂತಾನ ಇಲ್ಲವೆಂದು ಎಂದೂ ಕೊರಗಲಿಲ್ಲ. ತಮ್ಮಲ್ಲಿ ದೇವರ ನಾಮ ಕಲಿಯಲು ಬಂದವರನ್ನೇ ಮಕ್ಕಳೆಂದು ತಿಳಿದು ವಿದ್ಯೆಯನ್ನು ಧಾರೆ ಎರೆದರು. ಕಟಗೇರಿ ದಾಸರಲ್ಲಿ ದಾಸರ ಪದ ಕಲಿತವರಲ್ಲಿ ಕರ್ನಾಟಕದ ಖ್ಯಾತ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿಯವರು ಒಬ್ಬರು. ಸಂಗೀತ ಕಟ್ಟಿಯವರು ತಮ್ಮ 6 ನೆಯ ಎಳೆಯವಯಸ್ಸಿನಲ್ಲಿ ದಾಸರಲ್ಲಿ ಅಭ್ಯಾಸ ಪ್ರಾರಂಭಿಸಿದರು. ದಾಸರು ಬೇರೆಲ್ಲರಿಗೆ ಪಾಠ ಮಾಡಿ ಕಟ್ಟಿಯವರ ಮನೆಗೆ ಬರುವಷ್ಟರಲ್ಲಿ ರಾತ್ರಿ 9 ಆಗಿರುತ್ತಿತ್ತು. ಮಕ್ಕಳು ಮಲಗುವ ಸಮಯ ಅದು. ಇದನ್ನು ಅರಿತ ದಾಸರು ಮೊದಮೊದಲು ಎರಡು ಸಾಲಿನ ಪಾಠವನ್ನಷ್ಟೇ ಮಾಡುತ್ತಿದ್ದರು. ಕಾಲಕ್ರಮೇಣ ಸಂಗೀತದ ಅಭಿರುಚಿ ಕಟ್ಟಿಯವರಲ್ಲಿ ಹೆಮ್ಮರವಾಗಿ ಬೆಳೆಯಿತು. ದಾಸರಲ್ಲಿ ಅಬಾಲ ವೃದ್ಧರಾದಿಯಾಗಿ ಎಲ್ಲರೂ ಕಲಿಯುತ್ತಿದ್ದರು. ಅವರವರ ಗ್ರಹಿಕೆಗೆ ತಕ್ಕಂತೆ ಹೇಳಿಕೊಡುವುದು ದಾಸರ ವೈಶಿಷ್ಟ್ಯವಾಗಿತ್ತು. ಸಂಗೀತಾ ಕಟ್ಟಿಯವರಲ್ಲದೆ ಡಾ ಸೌಭಾಗ್ಯ ಕುಲಕರ್ಣಿ, ಕಾಂಚನಾ ಜೋಶಿ, ಉದಯ ದೇಶಪಾಂಡೆ, ಕೃಷ್ಣಡಬೇರ್, ..ಮುಂತಾದವರೆಲ್ಲ ದಾಸರ ಹೆಮ್ಮೆಯ ಶಿಷ್ಯಾಗ್ರಣಿಗಳಾಗಿದ್ದಾರೆ.
ತನ್ನಲ್ಲಿರುವ ವಿದ್ಯಾಸಂಪತ್ತನ್ನು ಶಿಷ್ಯರಿಗೆ ಮನತುಂಬಿ ಹಂಚುವುದು, ಮುಂದಿನ ಪೀಳಿಗೆಗೆ ಕಾಪಿಟ್ಟುಕೊಳ್ಳುವುದು ಶ್ರೇಷ್ಠ ಗುರುವಿನ ಲಕ್ಷಣ.ಇದನ್ನು ಕಟಗೇರಿದಾಸರು ಮಾಡಿದ್ದಾರೆ. ಅವರು ರಾಗ ಸಂಯೋಜಿಸಿದ ಅನೇಕ ದೇವರನಾಮಗಳು ಉದಾಹರಣೆಗೆ ' ಎನ್ನ ಕಂದ ಹಳ್ಳಿ ಹನುಮ....' ' ನೀ ದಯಾಪರನೋ.....' ' ಆನಂದ ಆನಂದ.....' youtube ನಲ್ಲಿದ್ದು ಬಹಳ ಜನಪ್ರಿಯವಾಗಿವೆ. ಇವರ ದಾಸ ಸಾಹಿತ್ಯದ ಸೇವೆಯನ್ನು ಮನಗಂಡು ಕರ್ನಾಟಕ ಸರ್ಕಾರ 2022 ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ದಾಸರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ತಯಾರು ಮಾಡಿದ ಶಿಷ್ಯರ ಕಂಠದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಶ್ರೀ ಕಟಗೇರಿ ದಾಸರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.
✍️ ಶ್ರೀನಿವಾಸ ರಾಘವೇಂದ್ರ
*****


No comments:
Post a Comment