Monday 1 July 2019

muddu mohana dasaru doddaballapur 1898 karteeka bahula chaturdashi ಮುದ್ದು ಮೋಹನ ದಾಸರು



Sri. Muddu Mohana Dasaru
Original Name: Sri. Raghavendra Dasa
Period: 1830 - 1898
Ankita: muddu mohana vittala
Preceptor: SriVara Vittalaru
Place: Doddaballapur
Aradhana: Karthika Bahula Chaturdashi
ದಾಸರ ಹೆಸರು: ಮುದ್ದುಮೋಹನವಿಠಲದಾಸರು
ಜನ್ಮ ಸ್ಥಳ: ದೊಡ್ಡಬೆಳ್ಳಾಪುರ
ಕಾಲ : 1830 -
ಅಂಕಿತನಾಮ: ಮುದ್ದುಮೋಹನ ವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ : 10
ಗುರುವಿನ ಹೆಸರು: ಶ್ರೀವರವಿಠಲದಾಸರು (ಸೌದಿ ರಾಮಚಂದ್ರಪ್ಪ)
ರೂಪ: ರಾಘವೇಂದ್ರ ಸ್ವಾಮಿಗಳ ಅಂಶದವರೆಂಬ ನಂಬಿಕೆ
ಪೂರ್ವಾಶ್ರಮದ ಹೆಸರು: ರಾಘವೇಂದ್ರಪ್ಪ
ಪತಿ: ಪತ್ನಿಯ ಹೆಸರು: ಅಕ್ಕಣ್ಣಮ್ಮ (ಹುಟ್ಟು ಕುರುಡಿ)
ಒಡಹುಟ್ಟಿದವರು: ವೆಂಕಟರಾಯ (ತಮ್ಮ)
ವೃತ್ತಿ : ದಾಸವೃತ್ತಿ
ಕಾಲವಾದ ಸ್ಥಳ ಮತ್ತು ದಿನ: ದೊಡ್ಡಬಳ್ಳಾಪುರ - 1898 (ಕಾರ್ತಿಕ ಬಹುಳ ಚತುರ್ದಶಿ)
ಕೃತಿಯ ವೈಶಿಷ್ಟ್ಯ: ಶೈಲಿಯು ಸರಳವಾಗಿದ್ದು ಕೃತಿಗಳು ಸುಲಭವಾಗಿ ಅರ್ಥವಗುವಂತಿವೆ.
ಇತರೆ: ದಾಸರಿಗೆ 11 ಮಂದಿ ಶಿಷ್ಯರಿದ್ದು ಇವರ ಮೂಲಕ ಹರಿದಾಸ ಸಾಹಿತ್ಯದ ಪ್ರಸಾರ ಮತ್ತು ಪ್ರಚಾರವನ್ನು ವ್ಯಾಪಕವಾಗಿ ನಿರ್ವಹಿಸಿದರು.
***

ಮುದ್ದುಮೋಹನವಿಠಲದಾಸರು

(ದೊಡ್ಡಬಳ್ಳಾಪುರ ಶ್ರೀ ರಾಘವೇಂದ್ರದಾಸರು)

ಮುದ್ದುಮೋಹನದಾಸರು ಅನೇಕರಿಂದ ಪಂಗನಾಮ ತಿಮ್ಮಣ್ಣದಾಸರ (ವೇಣು ಗೋಪಾಲವಿಠಲದಾಸರ) ಪರಂಪರೆಗೆ ಸೇರಿದವರೆಂಬುದಾಗಿ ಪರಿಗಣಿಸಲ್ಪಟ್ಟಿದ್ದಾರೆ. ಆದರೆ ಇವರು ಮೋಹನದಾಸರ ಪರಂಪರೆಯವರೆಂದೂ ಒಂದು ಪಕ್ಷವಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇದೇ ಸಂಪುಟದ ಶ್ರೀ ಬಾಗೇಪಲ್ಲಿ ಶೇಷದಾಸರ ಭಾಗದಲ್ಲಿ ಕಾಣಬಹುದು.

ಅಂಕಿತ ಪದಗಳನ್ನು ಬಿಟ್ಟು ಉಪಲಬ್ಧವಿರುವುದು ದಾಸರ ಏಳು ಕೃತಿಗಳು ಮಾತ್ರ ಅವುಗಳಲ್ಲಿ ಕೇವಲ ನಾಲ್ಕು ಮಾತ್ರ ಶ್ರೀಹರಿ ಸಂಕೀರ್ತನೆಗೆ ಸಂಬಂಧಪಟ್ಟಿದು.್ದ ಮಿಕ್ಕ ಮೂರರಲ್ಲಿ ಒಂದೊಂದು ಲಕ್ಷ್ಮೀ, ರುದ್ರ ಮತ್ತು ಶ್ರಿ ಶ್ರೀಪಾದರಾಜÀರ (ಯತಿ ಕಕ್ಷೆ) ಪರವಾಗಿವೆ. ಶ್ರೀಹರಿ ಪರವಾಗಿ ಎರಡು ಉಗಾಭೋಗಗಳು, ಒಂದು ಕೀರ್ತನೆ ಮತ್ತು ಒಂದು ಸುಳಾದಿಯಿದ್ದು ದಾಸರಿಗೆ ಈ ಎಲ್ಲ ಪ್ರಕಾರದ ಕಾವ್ಯ ರಚನೆಯಲ್ಲೂ ಪರಿಶ್ರಮವಿತ್ತೆಂದು ಊಹಿಸಬಹುದಾಗಿದೆ. ಹಾಗೆಯೇ ಲಕ್ಷ್ಮೀ-ರುದ್ರರನ್ನು ಒಳಗೊಂಡು ಇತರ ದೇವತೆಗಳ ಪರವಾಗಿಯೂ ಶ್ರೀ ಶ್ರೀಪಾದರಾಜರನ್ನೊಳಗೊಂಡು ಇತರ ಯತಿ_ದಾಸರುಗಳ ಪರವಾಗಿಯೂ ಇನ್ನೂ ಅನೇಕ ಸ್ತೋತ್ರ ಪದಗಳನ್ನು ರಚಿಸಿದ್ದು ಅವುಗಳು ಉಪಲಬ್ಧವಿಲ್ಲ. ದಾಸರ ಶೈಲಿಯು ಸರಳವಾಗಿದ್ದು ಕೃತಿಗಳು ಸುಲಭವಾಗಿ ಅರ್ಥವಾಗುವಂತಿವೆ.

ಶ್ರೀ ಮುದ್ದುಮೋಹನದಾಸರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಅಂಶದವರೆಂದು ಕೆಲವರಲ್ಲಿ ನಂಬಿಕೆಯಿದೆ.

ಇತ್ತೀಚೆಗೆ ದೇವರಾಯನದುರ್ಗದ ದಾಸಕೂಟ ಸಭಾ ಶತಮಾನೋತ್ಸವ ಸಮಿತಿಯವರು ಸಮರ್ಪಿಸಿರುವ ಶ್ರೀದಾಸರ ಸ್ಮಾರಕಶಿಲಾ ಪ್ರತೀಕವನ್ನು ದೊಡ್ಡಬಳ್ಳಾಪುರದ ಶ್ರೀ ವಿಜಯವಿಠ್ಠಲನ ಗುಡಿಯಲ್ಲಿ ಸ್ಥಾಪಿಸಲಾಗಿದೆ.

ಶ್ರೀ ಗುರುಗೋವಿಂದ ವಿಠಲ ದಾಸರು ಬರೆದು ಪ್ರಕಾಶಿಸಿರುವ 'ದೊಡ್ಡಬಳ್ಳಾಪುರದ ಶ್ರೀ ಮುದ್ದು ಮೋಹನ ದಾಸರು' (1965) ಎಂಬ ಪುಸ್ತಕದ ನೆರವು ಪಡೆಯಲಾಗಿದೆ. 

***

 
" ಶ್ರೀ ಮುದ್ದು ಮೋಹನ - 1 "
" ದಿನಾಂಕ : 13.12.2020 ಭಾನುವಾರ " ಕಾರ್ತೀಕ ಬಹುಳ ಚತುರ್ದಶೀ  - ಶ್ರೀ ರಾಯರ ಮತ್ತು ಶ್ರೀ ವಿಜಯರಾಯರ ಕಾರುಣ್ಯ ಪಾತ್ರರಾದ " ಶ್ರೀ ಮುದ್ದು ಮೋಹನ ದಾಸರ " ಆರಾಧನಾ ಮಹೋತ್ಸವ. "
ಮುದದಿ ಪಾಲಿಸೋ | 
ಮುದ್ದು ಮೋಹನರಾಯಾ ।
 ಮದ್ಗುರುವರ ಪ್ರಿಯ ।
ಮಧ್ವೇಶನ ಪದ ।
ಪದುಮ ಪೂಜಿಪ ।
ಮಧುಪಾ ಪರಿಹರಿಸೆಲೋ ತಾಪ ।। 
ಶ್ರೀ ವಿಜಯರಾಯರ ಪ್ರೀತಿಯ ಶಿಷ್ಯರಾದ ಶ್ರೀ ವೇಣುಗೋಪಾಲದಾಸರ ( ಶ್ರೀ ಪಂಗನಾಮದ ತಿಮ್ಮಣ್ಣದಾಸರು ) ಶಿಷ್ಯರಾದ ಶ್ರೀ ವ್ಯಾಸವಿಠ್ಠಲರ ಶಿಷ್ಯ ಪರಂಪರೆಗೆ ಸೇರಿದ್ದಾರೆ. 
ಬೆಳಗಾವಿ ಜಿಲ್ಲೆಯ " ಸವದಿ " ಗ್ರಾಮದ ಶ್ರೀ ರಾಮಚಂದ್ರದಾಸರೆಂದು ಖ್ಯಾತರಾದ " ಶ್ರೀ ಶ್ರೀವರವಿಠ್ಠಲ " ರಿಂದ ಅಂಕಿತವನ್ನು ಪಡೆದವರೇ ಇಂದಿನ ನಮ್ಮ ಕಥಾನಾಯಕರಾದ ದೊಡ್ಡಬಳ್ಳಾಪುರದ ಶ್ರೀ ರಾಘವೇಂದ್ರಾಚಾರ್ಯರು - ಶ್ರೀ ಮುದ್ದುಮೋಹನವಿಠ್ಠಲ ಅಂಕಿತದಲ್ಲಿ ಅನೇಕ ಪದ - ಪದ್ಯಗಳನ್ನು ರಚಿಸಿದ್ದಾರೆ. 
" ಶ್ರೀ ಮುದ್ದು ಮೋಹನ ದಾಸರ ಸಂಕ್ಷಿಪ್ತ ಮಾಹಿತಿ " 
ಹೆಸರು : ಶ್ರೀ ರಾಘವೇಂದ್ರಾಚಾರ್ಯ
ಜನ್ಮ ಸ್ಥಳ : ದೊಡ್ಡಬಳ್ಳಾಪುರ 
ಕಾಲ : ಕ್ರಿ. ಶ. 1830 - 1896 
ಅಂಕಿತೋಪದೇಶ : ಶ್ರೀ ಶ್ರೀವರವಿಠ್ಠಲರು 
ಅಂಕಿತ : ಮುದ್ದು ಮೋಹನ ವಿಠ್ಠಲ 
ಆರಾಧನೆ : ಕಾರ್ತೀಕ ಬಹುಳ ಚತುರ್ದಶೀ 
ಆರಾಧನೆ ಸ್ಥಳ : ದೊಡ್ಡಬಳ್ಳಾಪುರ 
" ಅವಧೂತ ಚರ್ಯೆ " 
ಕನ್ಯಾ ಸೆರೆಯನ್ನು ಬಿಡಿಸಬೇಕೆಂಬ ಏಕಮಾತ್ರ ಉದ್ಧೇಶದಿಂದ ಹುಟ್ಟು ಕುರುಡಿಯಾಗಿದ್ದ ಹುಡುಗಿಯನ್ನು ವಿವಾಹವಾಗಿ; ಗೃಹಸ್ಥಾಶ್ರಮಿಗಳಾದರೂ ಬ್ರಹ್ಮಚಾರಿಗಳೂ; ಊಟ ಮಾಡಿದರೂ ನಿತ್ಯೋಪವಾಸಿಗಳೂ; ಪ್ರಪಂಚದಲ್ಲಿದ್ದರೂ ಪಾರಮಾರ್ಥಿಕ ಜೀವಿಗಳೂ; ಜ್ಞಾನ ಭಕ್ತಿ ವೈರಾಗ್ಯಗಳು ಕರ್ಣನ ಕವಚ ಕುಂಡಲಗಳಂತೆ ಇವರ ದೇಹಕ್ಕೆ ಹತ್ತಿದ್ದವು. 
ಅವಧೂತರಾಗಿಯೇ ಸಂಪೂರ್ಣವಾಗಿ ಜೀವನ ಸಾಗಿಸಿದರು. 
" ಋಷಿ ರೂಪ ಶೋಭಿತರು " 
ಮಧ್ವ ಶಾಸ್ತ್ರ ಸಂಪನ್ನರಾಗಿ; ವೈರಾಗ್ಯಾದಿ ಸದ್ಗುಣಗಳಿಂದ ಕಂಗೊಳಿಸುತ್ತಿದ್ದ ಶ್ರೀ ರಾಘವೇಂದ್ರಾಚಾರ್ಯರು..
ಕೃಷ್ಣಾಜಿನದ ಕಸೆ ಅಂಗಿ ಕುಲಾವಿಗಳನ್ನು ಧರಿಸಿ ವಿಲಕ್ಷಣ ವೇಷಧಾರಿಗಳಾಗಿ ಪರಪಾಕ ನೇಮದಿಂದ ಗ್ರಾಮೈಕ ರಾತ್ರಿ ಪರ್ಯಟನೆ ಮಾಡುತ್ತಾ ಶುದ್ಧ ವೈಷ್ಣವ ಚಿಹ್ನೆಗಳಿಂದ ಭೂಷಿತರಾಗಿ " ಋಷಿ ಸದೃಶ ರೂಪ " ದಿಂದ ಶೋಭಿಸುತ್ತಿದ್ದರು. 
" ಅಂಕಿತ ಪ್ರದಾನ " 
ಶ್ರೀ ರಾಘವೇಂದ್ರಾಚಾರ್ಯರು ಒಮ್ಮೆ ಶ್ರೀ ವಿಜಯರಾಯರ ಆರಾಧನೆಗೆ ಚಿಪ್ಪಗಿರಿಗೆ ಹೋಗಿದ್ದಾಗ ಶ್ರೀ ಶ್ರೀವರವಿಠ್ಠಲರನ್ನು ಭೇಟಿಯಾಗಿ ಅವರಿಂದ ಶ್ರೀ ವಿಜಯರಾಯರ ಮುಂಭಾಗದಲ್ಲಿಯೇ " ಮುದ್ದು ಮೋಹನ ವಿಠ್ಠಲ " ಎಂಬ ಅಂಕಿತವನ್ನು ಪಡೆದ ಸುಜೀವಿಗಳು.
" ಅಂಕಿತ ಪದ "..... 
ಮುದ್ದು ಮೋಹನ ವಿಠ್ಠಲ 
ಸಲಹೋ ಇವನಾ ।। ಪಲ್ಲವಿ ।। 
ಸಿರಿ ಮನೋಹರ ನಿನ್ನ 
ಪ್ರಾರ್ಥಿಸುವೆ ನಿರುತಾ ।। ಅ. ಪ ।।
ಶಿರಿ ಬೊಮ್ಮ ಮೊದಲಾದ 
ಸುರರಿಂದ ಸೇವಿತನೆ ।
ಪರಮ ಕರುಣಾಳು 
ಹರಿ ಕರಿವರದನೆ ।
ನಿರುತದಲಿ ನಿನ್ನ ನಾಮ
ಸ್ಮರಣೆಯನ್ನಿತ್ತು ।
ಕರುಣದಲಿ ರಕ್ಷಿಸೋ 
ಪರಮ ಪಾವನನೆ ।। ಚರಣ ।। 
ಗುರು ಹಿರಿಯರಲಿ ಭಕುತಿ 
ವಿಷಯದಲಿ ವಿರಕುತಿ ।
ಪಿರಿದಾದ ಪಂಚ 
ಭೇದವನ್ನು ಅರುಹೀ ।
ಕರಿವರದನೆ ನಿನ್ನ 
ನಾಮಾಮೃತಸಾರ ಉಣಿಸಿ ।
ದುರಿತಗಳ ಪರಿಹರಿಸೋ 
ಪರಮ ಪಾವನನೆ ।। ಚರಣ ।।
ನಾನು ನನ್ನದುಯೆಂಬ 
ದುರಾಭಿಮಾನವನು ಬಿಡಿಸೀ ।
ಸಾನುರಾಗದಲಿ 
ತಾರತಮ್ಯವನ್ನು ತಿಳಿಸೋ ।
ಮಾನನಿಧಿ ನೀನೇ 
ಸರ್ವೋತ್ತಮನೆಂಬಂಥ ।
ಜ್ಞಾನದಾಯಕನಾಗೋ 
ಶ್ರೀವರವಿಠ್ಠಲಾ ।। ಚರಣ ।।
***
" ಶ್ರೀ ಮುದ್ದು ಮೋಹನ - 2 "
 " ತೀರ್ಥ ಯಾತ್ರೆ " 
ಶ್ರೀ ಮುದ್ದುಮೋಹನದಾಸರು ಪ್ರತಿವರ್ಷವೂ ಈ ಕೆಳಕಂಡ ಮಹಿತಾತ್ಮರ ಆರಾಧನೆಗೆ ದಿಗ್ವಿಜಯ ಮಾಡುತ್ತಿದ್ದರು. 
ಶ್ರೀ ಜಯತೀರ್ಥರ ಆರಾಧನೆಗೆ " ನವ ವೃಂದಾವನ ಕ್ಷೇತ್ರಕ್ಕೆ "
ಶ್ರೀ ಶ್ರೀಪಾದರಾಜರ ಆರಾಧನೆಗೆ " ಮುಳಬಾಗಿಲು ಕ್ಷೇತ್ರಕ್ಕೆ "
ಶ್ರೀ ವ್ಯಾಸರಾಜರ ಆರಾಧನೆಗೆ " ಹುಲಿಕಲ್ಲು ಕ್ಷೇತ್ರಕ್ಕೆ "
ಶ್ರೀ ರಾಯರ ಆರಾಧನೆಗೆ " ಮಂತ್ರಾಲಯ ಕ್ಷೇತ್ರಕ್ಕೆ "
ಪ್ರತಿವರ್ಷವೂ ಶ್ರೀ ಶ್ರೀನಿವಾಸನ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡು ಶ್ರೀ ಶ್ರೀನಿವಾಸನ ಮನಸಾರೆ ಸ್ತೋತ್ರ ಮಾಡುತ್ತಿದ್ದರು. 
ಉಡುಪಿಯ ಶ್ರೀ ಕೃಷ್ಣನ ದರ್ಶನಕ್ಕೆ ಹೋಗುತ್ತಿದ್ದರು. 
ಅದರಲ್ಲಿಯೂ ವಿಶೇಷವಾಗಿ ಶ್ರೀ ಕೃಷ್ಣನ ಚರಣ ಕಮಲಗಳನ್ನು ಕಣ್ಣಿನಲ್ಲಿ ತುಂಬಿಕೊಳ್ಳುವುದಕ್ಕೋಸ್ಕರ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದರು. 
ಶ್ರೀನಿವಾಸನೆ ನೀನು ಬ್ಯಾಗನೆ ಬಂದು ।
ಸಾನುರಾಗದಿ ಸಂಸಾರ ಬಿಡಿಸೋ ।
ಭಾನುಕೋಟಿ ಪ್ರಕಾಶ ಭಾಗ್ಯನಿಧಿಯೆನ್ನ ।
ಮಾನವ ಕಾಯ್ವುದು ಮಂಗಳಾಂಗನೆ ।
ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ।।
ನಾನು ನನ್ನದು ಎಂದು ಮಮತೆಯನು ಕೊಟ್ಟು ।
ಅನ್ಯಾಯದಿಂದ ಎನ್ನ ದಣಿಸುವುದು ।
ದಾನವಾಂತಕ ರಂಗ ಮುದ್ದುಮೋಹನವಿಠ್ಠಲ ।
ನೀನೇ ಗತಿಯೆಂದವನಿಗೆ ನಿರ್ಭಯವೋ ಹರಿಯೇ ।। 
ಪುಣ್ಯ ಜೀವಿಗಳಿಗೆ ಮಾತ್ರ ಗೋಚರಿಸತಕ್ಕ ಪೂತಾತ್ಮರು. 
ವಿಚಿತ್ರ ಚರ್ಯೆಯನ್ನು ಹೊಂದಿರುವ ಶ್ರೀ ದಾಸರನ್ನು ಸಾಮಾನ್ಯರು ಎಂದಿಗೂ ಗ್ರಹಿಸಲಾರರು. 
ದುರ್ಜನರಿಗೆ ಮಲಿನರಂದದಿ ತೋರುವ ಶ್ರೀ ಮುದ್ದು ಮೋಹನ ದಾಸರು ಸಾತ್ವಿಕರಿಗೆ ಅತ್ಯಂತ ಪ್ರಿಯರಾದವರು. 
ಶ್ರೀ ಮುದ್ದು ಮೋಹನದಾಸರು ಯಾವ ಸ್ಥಳದಲ್ಲಿಯೂ ಹೆಚ್ಚು ಕಾಲ ನಿಲ್ಲದೇ ಸದಾ ಸಂಚಾರದಲ್ಲಿದ್ದ ಇವರು ಸತತ ನಾಲ್ಕು ಬಾರಿ ಪಾದಚಾರಿಗಳಾಗಿಯೇ ಕಾಶೀ ಯಾತ್ರೆ ಕೈಗೊಂಡಿದ್ದರು. 
" ಶ್ರೀ ವಿಜಯವಿಠ್ಠಲನೊಂದಿಗೆ ಶ್ರೀ ಮುಖ್ಯಪ್ರಾಣ ಮತ್ತು ಕಾಶೀ ವಿಶ್ವನಾಥನ ಪ್ರತಿಷ್ಠೆ " 
ಶ್ರೀ ದಾಸರು ಕಾಶೀ ಯಾತ್ರೆಗೆ ಹೋದಾಗ ಅಲ್ಲಿಂದ ಒಂದು ಶಿವ ಲಿಂಗವನ್ನು ತಂದಿದ್ದರು. 
ಮುಂದೆ ಮಹರುದ್ರದೇವರ ಸೂಚನೆಯಂತೆ ದೊಡ್ಡಬಳ್ಳಾಪುರದಲ್ಲಿ ತಮ್ಮ ಆರಾಧ್ಯ ದೈವನಾದ ಶ್ರೀ ವಿಜಯವಿಠ್ಠಲದೇವರನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಕಾಶೀಯಿಂದ ತಂದ ಶಿವ ಲಿಂಗವನ್ನೂ ಪ್ರತಿಷ್ಠಾಪಿಸಿ ಪರಮ ವೈಷ್ಣವೋತ್ತಮನಾದ ಶ್ರೀ ಮಹಾರುದ್ರಾಂತರ್ಗತ ಶ್ರೀ ವಿಜಯ ವಿಠ್ಠಲನ ಪರಮಾನುಗ್ರಹಕ್ಕೆ ಪಾತ್ರರಾದರು. 
ವಿಠ್ಠಲಾ ಎನ್ನಿರೋ 
ಸುಜನರೆಲ್ಲಾ ।
ವಿಠ್ಠಲ ಎಂದಾರೆ ಸುಟ್ಟು 
ಹೋಗೋದು ಪಾಪ ।। ಪಲ್ಲವಿ ।। 
... ಮಧ್ವಾಂತರ್ಯಾಮಿಯಾಗಿ 
ಉಡುಪಿಯಲ್ಲಿ ನಿಂತ ।
ಮುದ್ದುಮೋಹನವಿಠ್ಠಲನೆ 
ಜಗಕೆ ಕರ್ತು ।
ವಿಠ್ಠಲಾ ಎಂದಾರೆ ಸುಟ್ಟು 
ಹೋಗೋದು ಪಾಪ ।। ಚರಣ ।। 
" ಶ್ರೀ ಮುಖ್ಯಪ್ರಾಣದೇವರು - ಉಗಾಭೋಗ " 
ಭಾರತೀ ಪತಿ ಎನ್ನ ಭಾರವ ಪರಿಹರಿಸಿ ।
ಸಾರಿ ಸಾರಿಗೆ ಹರಿಪಾದ ಸ್ಮರಣೆಯನ್ನು ।
ಆರಾಧಕನಿಗೆ ಮಾತ್ರ ದಯ ತೋರಿಸಿ ನೀನು ।
ಸಂಸಾರಾಂಬುಧಿಯೆಂಬಾ ವಾರಿಧಿ ದಾಟಿಸಿ ।
ಪೂರೈಸು ಮನೋಭೀಷ್ಟಾ ಪೂರ್ಣಪ್ರಜ್ಞನೆ ।
ಈರೇಳು ಲೋಕದಲಿ ಸರ್ವ ಜೀವರೊಳು ನಿಂತು ।
ಮೂರೇಳು ಸಾವಿರದಾರುನೂರು ಜಪ ।
ಬ್ಯಾರೆ ಬ್ಯಾರೆ ಮಾಡುವಿ ಶ್ರೀ ಹರಿ ಆಜ್ಞದಿ ।
ಆರು ಮೂರು ಭಕುತಿ ವಾರ ವಾರಕೆ ಕೊಟ್ಟು ।
ಆರು ಮಾರ್ಗವ ಬಿಡಿಸೋ ಅಸುರ ಮರ್ದನನೆ ।
ಕಾರಣ ಕರ್ತ ಮುದ್ದುಮೋಹನ್ನವಿಠ್ಠಲನ್ನ ।
ಹೃದ್ಧಾಮದೊಳು ತೋರೋ 
ಗುರು ಮಧ್ವ ಮುನಿರಾಯ ।। 
" ಶ್ರೀ ರುದ್ರದೇವರು " 
ಪಾರ್ವತೀ ಪತಿಯೇ ಎನ್ನ 
ಪಾಲಿಸುವುದು ।। ಪಲ್ಲವಿ ।। 
ದೂರು ನೋಡದೇ ಗುರುವ 
ಸಾರುವುದು ಸತತಾ ।। ಅ. ಪ ।। 
ಭಜಕರ ಸರ್ವಕಾವನ 
ನಿಜ ದಾಸರೊಳ್ಳೂಡಿಸಿ ।
ಭಜನೆಯ ಮಾಡಿಸೋ ಬೇಗ 
ಭುಜಗಭೂಷಣನೆನೀಸು ।। ಚರಣ ।। 
ನಂದಿವಾಹನನೆ ಎನ್ನಾ 
ಮಂದಮತಿಗಳ ಹರಿಸಿ ।
ಕಂದುಗೊರಳನೆ ನೀನು ಆ-
ನಂದದಿಂದಲಿ ಕಾಯೋ ।। ಚರಣ ।। 
ದೂರ್ವಾಸ ಮುನಿಯೇ 
ಇಂದು ಗರ್ವವ ಬಿಡಿಸಿ ।
ಕಾರಣಕರ್ತ ಹರಿಯ
ಶ್ರೀ ರಮಣನ ತೋರೋ ।। ಚರಣ ।। 
ಭೂತನಾಥನೆ ನೀನು 
ಮಾತನು ಲಾಲಿಸುವುದು ।
ದಾತಾನೆ ಸಲಹೋ ಎನ್ನಾ 
ಪಾತಕವನು ಹರಿಸಿ ।। ಚರಣ ।। 
ಶುದ್ಧ ಭಕುತಿಯನು ಕೊಟ್ಟು 
ಸದ್ವೈಷ್ಣವರ ಪ್ರೀಯನೆ ।
ಮಧ್ವಾಂತರ್ಗತ ಮುದ್ದು-
ಮೋಹನವಿಠ್ಠಲನ್ನ ತೋರೋ ।। ಚರಣ ।। 
" ಶಿಷ್ಯ ಸಂಪತ್ತು " 
" ಶ್ರೀ ತಂದೆ ಮುದ್ದುಮೋಹನ ವಿಠ್ಠಲ " 
" ಶ್ರೀ ಮುದ್ದುಮೋಹನವಿಠ್ಠಲರು ತಮ್ಮ ಪಟ್ಟದ ಶಿಷ್ಯರಾದ ಶ್ರೀ ಸುಬ್ಬರಾಯದಾಸರಿಗೆ ನೀಡಿದ ಅಂಕಿತ ನಾಮ" 
ರಾಗ : ಕಾಂಬೋಧಿ ತಾಳ : ಝಂಪೆ 
ತಂದೆ ಮುದ್ದುಮೋಹನವಿಠ್ಠಲ 
ಸಲಹಬೇಕಿವನ ।। ಪಲ್ಲವಿ ।। 
ಕಂದುಗೊರಳ ಪ್ರಿಯನೆ 
ಅಭಿವಂದಿಪೆನು ಸತತ ।। ಅ. ಪ ।। 
ಶೋಕನಾಶನ ವಿಗತ 
ಶೋಕನಯ್ಯ ನೀ ವೇಗ ।
ವಾಕ್ಕು ಮೊದಲಾದ 
ಸರ್ವೇಂದ್ರಿಯಗಳಲ್ಲಿ ನಿಂತು ।
ಲೋಕದೊಳಗೇ ಇವಗೆ 
ಬೇಕಾದ ವರಗಳನಿತ್ತು ।
ಲೌಕಿಕ ಮಾರ್ಗವ ಬಿಡಿಸೊ 
ನಾಕಜಪಿತನೇ ।। ಚರಣ ।। 
ಜ್ಞಾನ ಭಕುತಿ ವೈರಾಗ್ಯ-
ಗಳೆಲ್ಲವೂ ಇತ್ತು ।
ಜ್ಞಾನಿಗಳ ಸಹವಾಸದೊಳಗೆ 
ರತಿಯನೇ ಕೊಟ್ಟು ।
ಹಾನಿ ವೃದ್ಧಿಗಳು 
ಏನೇನು ಬಂದರೂ ।
ಆನಂದವನೇ ಕೊಟ್ಟು 
ರಕ್ಷಿಸೋ ನರಹರೇ ।। ಚರಣ ।। 
ಕಾಮ ಕ್ರೋಧ ಮದ-
ಮತ್ಸರಗಳ ಕಡಿದು ।
ನಾಮೋಚ್ಛಾರಣೆಯೆಂಬ 
ವಜ್ರ ಕವಚವನೆ ತೊಡಿಸಿ ।
ತಾಮರಸ ವಂದ್ಯ ಶಿರಿ 
ಮುದ್ದುಮೋಹನವಿಠ್ಠಲ ।
ಕಾಮಿತಾರ್ಥವ ಕೊಡೋ 
ಹೃತ್ಪದ್ಮದೊಳಗೆ ಪೊಳೆದು ।। ಚರಣ ।। 
" ಶ್ರೀ ಹಯಗ್ರೀವ ವಿಠ್ಠಲ " 
" ಶ್ರೀ ಮುದ್ದುಮೋಹನವಿಠ್ಠಲರು ಶ್ರೀ ತಿಪ್ಪಾದಾಸರು ( ಶ್ರೀ ಕೃಷ್ಣದಾಸರಿಗೆ ) ನೀಡಿದ ಅಂಕಿತ ನಾಮ" 
ರಾಗ : ಕಾಂಬೋಧಿ ತಾಳ : ಝಂಪೆ 
ಹಯಗ್ರೀವ ವಿಠ್ಠಲ ನಿನ್ನವನೆಂದು 
ಕಾಯಬೇಕಿವನ ।। ಪಲ್ಲವಿ ।। 
ಮಾಯಪತಿಯೇ ನಿನಗೆ 
ಸತತ ಅಭಿವಂದಿಪೆನು ।। ಅ . ಪ ।। 
ಬಾದರಾಯಣ ಇವಗೆ 
ಬಂದ ಬಾಧೆಗಳ ಪರಿಹರಿಸಿ ।
ಮೇದಿನಿಯೊಳಗೆ ಬಹು 
ಕೀರ್ತಿವಂತನ ಮಾಡಿ ।
ಬೋಧತೀರ್ಥರ ಮತದಿ
 ಪೂರ್ಣ ಭಕುತಿಯ ಕೊಟ್ಟು ।
ಆದರದಿ ಕಾಯ್ದುದೋ 
ಅಮರೇಶವಂದ್ಯಾ ।। ಚರಣ ।।
ನಿನ್ನವನು ಇವನೆಂದು 
ಚೆನ್ನಾಗಿ ಪ್ರಾರ್ಥಿಸಿದೆ ।
ಸಣ್ಣವನಲಿ ಇದ್ದ 
ಅಜ್ಞಾನವ ಬಿಡಿಸಿ ।
ಘನ್ನ ಸುಜ್ಞಾನ ವಿರಾಗಿ 
ಮಾರ್ಗವ ತೋರಿ ।
ಚೆನ್ನಾಗಿ ಪಾಲಿಸುವುದೋ 
ಘನ್ನ ಮಹಿಮಾ ।। ಚರಣ ।। 
ಪಂಚ ರೂಪಾತ್ಮಕನೆ 
ದ್ವಿಪಂಚಕರಣದೊಳಿದ್ದು ।
ಪಂಚಭೇದ ತಾರ-
ತಮ್ಯವನ್ನು ತಿಳಿಸಿ ।
ಪಂಚಮುಖನೈಯ್ಯ ಶಿರಿ 
ಮುದ್ದುಮೋಹನವಿಠ್ಠಲ ।
ಸಂಚಿತಾಗಮಿಗಳ ಪರಿಹರಿಸೋ 
ಧೊರೆಯೇ ।। ಚರಣ ।। 
" ಶ್ರೀ ವಾಸುಕೀಶಯನವಿಠ್ಠಲ " 
" ಶ್ರೀ ಮುದ್ದುಮೋಹನವಿಠ್ಠಲರು ಶ್ರೀ ಗುಂಡೂರಾವ್ ಅವರಿಗೆ ನೀಡಿದ ಅಂಕಿತ ನಾಮ" 
ರಾಗ : ಕಾಂಬೋಧಿ ತಾಳ : ಝಂಪೆ 
ವಾಸುಕೀಶಯನವಿಠ್ಥಲ 
ಸಲಹೋ ।। ಪಲ್ಲವಿ ।। 
ದೋಷರಾಶಿಯ ಕಳೆದು 
ಪೋಷಿಸುವುದು ನಿರುತ ।। ಅ. ಪ ।। 
ಪರಮಮಂಗಳ ನಿನ್ನ 
ಚರಿತೆಯನು ತೋರಿಸಿ ।
ಕರಕರೆಯ ಬಿಡಿಸುವುದು 
ಕರುಣಾನಿಧೆ ।
ಸರಿಗಾಣೆನೋ ನಿನ್ನ 
ಸ್ಮರಣೆ ಮಾತ್ರವ ಕೊಟ್ಟು ।
ಕರ ಪಿಡಿದು ಕಾಯುವುದು 
ಸುರಮುನಿ ವಂದ್ಯ ।। ಚರಣ ।। 
ಪ್ರಾಣಪತಿಯೇ ಇವನ 
ಸ್ಥಾಣು ಮಾರ್ಗವ ಬಿಡಿಸಿ ।
ಕಾಣಿಸೂವಂತೆ 
ನೀನು ಕರುಣಿಸುವುದೂ ।
ವಾಣಿ ಅರಸನ ಪಿತನೆ 
ಗೇಣುದರ ಚಿಂತೆಯ ।
ಜಾಣತನದಲಿ ಬಿಡಿಸೋ 
ಪೂರ್ಣಪ್ರಜ್ಞಾತ್ಮ ।। ಚರಣ ।। 
ತಾರತಮ್ಯ ಜ್ಞಾನ ಬಾರಿ 
ಬಾರಿಗೂ ತಿಳಿಸಿ । ಉ ।
ದ್ಧಾರ ಮಾಡುವುದು ನೀನು 
ವಾರಿಜಾಕ್ಷ ।
ದೂರ ನೋಡದೆ ಇವರ
ಪಾರುಗಾಣಿಸಿ ನೀನು ।
ಭೂರಮಣ ಮುದ್ದು-
ಮೋಹನವಿಠ್ಠಲ ಸಲಹೋ ।। ಚರಣ ।। 
ಜೊತೆಗೆ ಈ ಕೆಳಕಂಡ ಶಿಷ್ಯರಿಗೆ ಅಂಕಿತವನ್ನು ಶ್ರೀ ಮುದ್ದುಮೋಹನದಾಸರು ಅಂಕಿತೋಪದೇಶ ನೀಡಿದ್ದಾರೆ. 
ಶ್ರೀ ಅಚಿಂತ್ಯವಿಠ್ಥಲ ( ಶ್ರೀ ಸುಬ್ಬರಾಯದಾಸರು )
ಶ್ರೀ ಬಾಲಕೃಷ್ಣವಿಠ್ಠಲ ( ಶ್ರೀ ಬಾಲಕೃಷ್ಣರಾಯರು )
ಶ್ರೀ ಕರುಣಾಕರ ವಿಠ್ಠಲ ( ಶ್ರೀ ರಾಘವೇಂದ್ರದಾಸರು )
ಶ್ರೀ ವಿಜಯಮೋಹನ ವಿಠ್ಠಲ 
ಶ್ರೀ ಗರುಡವಾಮನ ವಿಠ್ಠಲ 
ಶ್ರೀ ವಾಮನ ವಿಠ್ಠಲ 
ಶ್ರೀ ಗೋಪಿನಾಥ ವಿಠ್ಠಲ 
ಶ್ರೀ ವಿಜಯಸಾರಥಿ ವಿಠ್ಠಲ 
ಶ್ರೀ ರಮಣ ವಿಠ್ಠಲ 
ಶ್ರೀ ಒಡೆಯ ಮೋಹನ ವಿಠ್ಠಲ 
ಶ್ರೀ ಕರಿವರದವಿಠ್ಠಲ ( ಶ್ರೀ ರಾಮದಾಸರು )
ಶ್ರೀ ವರದ ಜಯವಿಠ್ಠಲ ( ಶ್ರೀ ಶೇಷದಾಸರು ) 
ಶ್ರೀ ಜ್ಞಾನದಾಯಕವಿಠ್ಥಲ ( ಶ್ರೀ ವೇಂಕಟರಾಯರು )
ಶ್ರೀ ಪರಮಪಾವನವಿಠ್ಠಲ ( ಶ್ರೀ ಸುಬ್ಬಣ್ಣ )
ಶ್ರೀ ವಾಗೀಶವಿಠ್ಥಲ ( ಶ್ರೀ ಬಾಳಾಜಿ ) 
ಮೇಲ್ಕಂಡವರಿಗೆ ಪರಮಾತ್ಮನ ದಿವ್ಯ ಅಂಕಿತವನ್ನಿತ್ತು, ಪರತತ್ತ್ವ ಮಾರ್ಗ ತೋರಿ ದಾಸ ದೀಕ್ಷೆ ನೀಡಿ ಭಕ್ತಿ ಪಂಥವನ್ನು ಮುಂದುವರೆಸಿದರು. 
ಸುಮಾರು ಶ್ರೀ ಮುದ್ದುಮೋಹನವಿಠ್ಠಲರು 19 ಜನರಿಗೆ ಅಂಕಿತ ಕೊಟ್ಟಿದ್ದು ಅದರಲ್ಲಿ 10 ಮಾತ್ರ ಸಿಕ್ಕಿವೆ. 
ಅದರಲ್ಲಿ 3 ಅಂಕಿತ ಪದಗಳನ್ನು ಶ್ರೀ ಮುದ್ದುಮೋಹನವಿಠ್ಥಲರ ಆರಾಧನಾ ಸಂದರ್ಭದಲ್ಲಿ ಸಜ್ಜನರ ಮಾಹಿತಿಗಾಗಿ ಕೊಟ್ಟಿದ್ದೇನೆ. 
" ನಿರ್ಯಾಣ " 
ಶ್ರೀ ಮುದ್ದುಮೋಹನದಾಸರು ತಮ್ಮ ಅಂತ್ಯ ಕಾಲದಲ್ಲಿ ಶ್ರೀ ವಿಜಯ ವಿಠ್ಠಲನ ದೇವಾಲಯದಲ್ಲಿ ಸ್ಥಾಪಿಸಿದ್ದ ದ್ವಾದಶ ಕಮಲದ ಮೇಲೆ ಕುಳಿತು ಧ್ಯಾನಸಕ್ತರಾಗಿ ದೇಹ ತ್ಯಾಗ ಮಾಫಿದ ವಿಷಯ ಅವರ ಅಪೂರ್ವ ಯೋಗ ಸಿದ್ಧಿ ಮತ್ತು ಅಪರೋಕ್ಷ ಜ್ಞಾನ ಬಿಂಬಿಸುತ್ತಲ್ಲದೆ ದೈವಾಂಶರೆಂದು ದೃಢ ಪಡಿಸುತ್ತದೆ. 
ಶ್ರೀ ಮುದ್ದುಮೋಹನದಾಸರು ಕಾರ್ತೀಕ ಬಹುಳ ಚತುರ್ದಶೀ ದಿನದಂದು ದೊಡ್ಡಬಳ್ಳಾಪುರದ ಶ್ರೀ ವಿಜಯವಿಠ್ಠಲ ಸನ್ನಿಧಾನದಿಂದ ಶ್ರೀ ವಿಜಯವಿಠ್ಠಲನ ನಿಜ ಮಂದಿರವಾದ ವೈಕುಂಠಕ್ಕೆ ತೆರಳಿದರು. 
" ಮೈಸೂರಿನ ಶ್ರೀ ಗುರುಗೋವಿಂದದಾಸರ ವಾಣಿಯಲ್ಲಿ "....... 
ಮುದ್ದು ಮೋಹನರಾಯಾ 
ಅಸ್ಮದ್ಗುರೋರ್ಗುರು ।
ಶುದ್ಧ ಜನ ಸಂಪ್ರಿಯ 
ನಿಮಗೊಂದಿಸುವೆ ಭವ ।
ಬುಧ ಪರಿಹರಿಸಯ್ಯಾ 
ಬುಧರಿಂದ ಗೇಯಾ ।। ಪಲ್ಲವಿ ।। 
ಶ್ರೀಧರಾ ಹರಿ 
ಪಾದ ಪಂಕಜ ।
ಹೃದಯ ಸದನದಿ 
ನೋಡಿ ಸುಖಿಸುವ ।
ಮೋದ ಪಾಲಿಸೋ 
ಸಾಧುವರ್ಯನೇ ।
ಹೇ ದಯಾಂಬುಧೇ 
ಪಾದ ನಂಬಿದೆ ।। ಅ. ಪ ।।
 ... ಗುರುವಿಣಾತಿಯನ್ನಾ 
ಪೊಂದುತಲಿ ಸ್ವಪ್ನದಿ ।
ಸಿರಿ ವಿಜಯವಿಠ್ಠಲನ್ನಾ 
ನಿಜ ಪುರದಿ ನಿಲ್ಲಿಸಿ ।
ನಿರುತ ಅರ್ಚನೆಯೆನ್ನಾ 
ಸ್ಥಿರ ಪಡಿಸಿ ಮುನ್ನ ।
ಅರಿತು ಮನದಲಿ ನಿನ್ನಾ 
ಉತ್ಕ್ರಮಣವನ್ನ ।
ಶೌರಿ ದಾಮೋದರನ 
ಮಾಸದಿ ।
ವರ ಚತುರ್ದಶೀ 
ಅಸಿತ ಪಕ್ಷದಿ ।
ಸಿರಿ ಗುರು 
ಗೋವಿಂದವಿಠ್ಠಲನ ।
ಚರಣ ಸರಸಿಜ 
ಸೇರಿ ಮೆರೆದೆ ।। 
" ಉಪ ಸಂಹಾರ " 
ಹರಿ ದಾಸ ಧರ್ಮ ಜೀವಂತವಾಗಿರುವ ವರೆಗೂ ಶ್ರೀ ಮುದ್ದುಮೋಹನದಾಸರ ಹೆಸರೂ; ಅವರು ಮಾಡಿದ ಸಾಧನೆ ಮತ್ತು ಗಳಿಸಿದ ಕೀರ್ತಿ ಜೀವಂತವಾಗಿರುತ್ತದೆ. 
ಶ್ರೀ ಮುದ್ದು ಮೋಹನದಾಸರು ತೋರಿದ ಆದರ್ಶ ನಾಳಿನ ಬಾಳಿಗೆ ಸ್ಫೂರ್ತಿಯ ಸೆಲೆಯಾಗಿ ಬದಕನ್ನು ಉದ್ಧೀಪನಗೊಳಿಸಲಿ!! 
ಹರಿದಾಸರ ಸಂಗದಿಂದ ।
ಹರಿ ನಿನ್ನ ಸಂಗವಾಯಿತೋ ಯೆನಗೆ ।
ತಂದೆ ಮುದ್ದು ಮೋಹನ ವಿಠ್ಠಲಾ ।।
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
*****



Sri Muddu Mohana Dasaru1830-1898Raghavendra DasaMuddu Mohana VittalaSri Vara VittalaruDodda BallapurKarthika Bahula Chaturdashi



No comments:

Post a Comment